ಯಾಪಾಟಿ ಮಳೆ ಹೊಯ್ದವೊ

ಯಾಪಾಟಿ ಮಳೆ ಹುಯ್ದವೊ, ನೆನೆದಾರೆ
ಜೀವತಲ್ಲಣಿಸುತದೊ
ಹನಿಗೋಳು ಹೊಳೆಯಾದುವೊ, ಶಿವಶಿವಾ
ಜೀವತಲ್ಲಣಿಸುತದೊ

ಬಿಸಿಲಾಗ ಹುರುಪಳಿಸಿದಾ, ಧರೆಮ್ಯಾಗ
ಮುತ್ತಾಗಿಉದುರಿದಾವೊ
ಬಿರುಕೊಡೆದು ಹುಡಿಹಾರಿದಾ, ಮಣ್ಣಿನಾ
ಒಡಲಾಗ ಮಾಯವಾದೊ

ಕಟಿಗ್ಯಾದಗಿಡಮರವಾ, ಒಣಗೊಣಗಿ
ನಾರಾದ ಹೂಬಳ್ಳಿಯಾ
ಮಾಸೀದ ಹಸಿರುಡುಗೆಯಾ, ತೊಳೆತೊಳೆದು
ಮೈ ಕಾವು ತಣಿಸಿದಾವೊ

ಒಣಗೀದಕೆರೆಬಾವಿಯಾ, ಹಳ್ಳೆದ್ದು
ದಾರ್ಯಾದ ಹೊಳೆ ಹಳ್ಳವಾ
ಬರಿದಾದ ಭೂಮಾತೆಯಾ, ಮೊಲೆಗಳಾ
ಭರಭರನೆತುಂಬಿದಾವೊ

ಮುದುರೀದ ಬಾನಾಡಿಯಾ, ಎಲುವೀನ
ಹಂದ್ರಾದದನಕರಾವ
ಬಸವಳಿದು ಎದೆಗುಂದಿದಾ, ಮನದಾಗ
ಹೊಸಆಸೆ ಬಿತ್ತಿದಾವೊ

ಅಷ್ಟಾಕ ನಿಲಲಿಲ್ಲವೊ, ಕರಿಮೋಡ
ಹರಕೊಂಡು ಬಿದ್ದಿದಾವೊ
ಮೂರೊರ್ಸಕೂಡಿಟ್ಟುದಾ, ಸುರಿದು
ಮನದಾಸೆ ಹಿಚುಕಿದಾವೊ

ಓಣೆಲ್ಲ ನದಿಯಾದವೊ, ಕೆನ್ನೀರು
ರಭಸದಲಿ ಸಾಗಿದಾವೊ
ಆಚೀಚೆ ಮೈಚಾಚುತಾ, ಸುಳಿನಾಲ್ಗೆ
ಸಿಕ್ಕಿದ್ದ ನುಂಗಿದಾವೊ

ವರುಣನಿಗೆಜೊತೆಗೂಡುತಾ, ಜಲದೇವಿ
ಪ್ರಳಯ್ರೂಪ ತಾಳಿದಾಳೊ
ಮೈದುಂಬಿ ಹಾರಾಡುತಾ, ಹಿರಿರುದ್ರ
ನರ್ತನವ ಮಾಡಿದಾಳೊ

ಗೋಡೆಗಳ ಹೊತ್ತೊಯ್ದಳೊ, ಛಾವಣಿಯ
ಮೈಮೇಲೆ ಇಳಿಸಿದಾಳೊ
ಇಷ್ಟೊರಸಕೂಡಿಟ್ಟುದಾ, ಬಳಕೊಂಡು
ಬೆತ್ತಲೆ ಮಾಡಿದಾಳೊ

ತಲೆಮೇಲೆ ಆಕಾಶವೊ, ಕಾಲಾಗ
ಬರಿನೀರ ಹರಿದಾಟವೊ
ಸುಳಿಗಾಳಿ ಬಿರುಓಟವೊ, ಮಯ್ಯಾಗ
ತುಂಬೀದ ನಡುಗಾಟವೊ


ಹೊಟ್ಟೀಗೆ ಹಿಟ್ಟಿಲ್ಲವೊ, ತಣ್ಣೀರ
ಬಟ್ಟೆಯೆಗತಿಯಾದವೊ
ಕಣ್ಣೀರುಕೆರೆಯಾದವೊ, ಕುಡಿಲಾಕ
ಮಳೆಹನಿಯೆ ನೀರಾದವೊ

ಮಕ್ಕಳು ಮರಿ ಕಳೆದವೊ, ತನ್ನವರ
ಹುಡುಕುವುದುಯಾವಲ್ಲಿಯೊ
ಹೊಳೆಯಾಗೆ ಹರಿದೋದರೊ, ಕುಸಿದಾ
ಮನೆ ಕೆಳಗೆ ಹೂತೋದರೊ

ಸತ್ತವರ ಹೆಣರಾಶಿಯೊ, ಶಿವಶಿವಾ
ಊರೆಲ್ಲ ಸುಡುಗಾಡವೊ
ಗಾಯಾಳು ನರಳಾಟವೊ, ಬಿದ್ದವರ
ನೋವಿನಾ ಚೀರಾಟವೊ

ಉಳಿದವರ ಬಾಳೆಂಥದೊ, ಬೇರನ್ನೆ
ಕೋದಂತ ಮರವಾದರೊ
ಬದುಕುವುದು ಅನಿವಾರ್ಯವೊ, ಜೀವಿಸಲು
ಯಾವೆಳೆಯ ಹಿಡಿಕೊಳುವುದೊ
*

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಯಾಪಾಟಿ ಮಳೆ ಹೊಯ್ದವೊ”

  1. Raghavendra Mangalore

    ಚಂದದ ಕವಿತೆ. ಗ್ರಾಮೀಣ ಸೊಡಗಿನ ಭಾಷೆ ಚೆನ್ನಾಗಿ ಬಳಕೆಯಾಗಿದೆ. ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter