ಪದ ಕುಸಿಯೆ ನೆಲವಿಹುದು

ಯಾಕೋ ಸಪ್ಪಗಿದೆ ಪುಟ್ಟಿ. ಮುಖದಲ್ಲಿ ಯಾವತ್ತಿನ ಕಳೆಯಿಲ್ಲ. ನಡತೆಯಲ್ಲಿ ಚಿಮ್ಮುತ್ತಿದ್ದ ಚಟುವಟಿಕೆ ಇಲ್ಲ. ಯಾವುದೋ ಮಂಕು ಕವಿದಂತೆ ಪೆಚ್ಚುಗಟ್ಟಿದೆ ಕಂದ. ಪುರುಸೊತ್ತಾಗಿ ವಿಚಾರಿಸಬೇಕು. ಹೀಗೆಂದುಕೊಂಡಿದ್ದನ್ನು ವೀಕೆಂಡಿನಲ್ಲಿ ಕಾರ್ಯರೂಪಕ್ಕೆ ತಂದಳು ಸುಮಿತ್ರಾ,

“ಏನಾಗಿದ್ಯೇ ಪುಟ್ಟಿ? ಹುಷಾರಿದೀಯಾ ತಾನೇ? ಹೊಟ್ಟೆ ಗಿಟ್ಟೆ ನೋಯುತ್ತಾ? ನನ್ಹತ್ರ ಏನೂ ಮುಚ್ಚಿಡ್ಬಾರ್ದು ಕಂದಾ. ಅಮ್ಮ ಅಲ್ವಾ ನಾನು?”

ಪುಟ್ಟಿಯ ಮುಖದಲ್ಲಿ ಪೇಲವ ನಗು. ಇತ್ತೀಚೆಗೆ ತೂಕ ಕೂಡಾ ಇಳಿದಂತೆ ಕಾಣುತ್ತಿದೆ. ‘ಏ ಸುಮ್ನಿರೇ. ಇಲ್ದಿದ್ದ ಕತೆ ಕಟ್ಬೇಡ. ಪುಟ್ಟಿ ಉದ್ದ ಆಗ್ತಿದಾಳೆ. ಅದಕ್ಕೇ ತೆಳ್ಳಗೆ ಕಾಣ್ತಿದಾಳೆ ಅಷ್ಟೇ..’ ಶೇಖರ ಹೇಳಿದ್ದ.

ಉಫ್, ಅಷ್ಟೇನಾ? ಶೇಖರ ಹೀಗೆ ಖಡಕ್ಕಾಗಿ ಏನಾದರೊಂದು ಕಾರಣ ಹೇಳಿದರೆ ಸುಮಿತ್ರನ ಮನಸ್ಸಿಗೆ ಒಂದಲ್ಪ ಸಮಾಧಾನ. ‘ಹೌದೇನೋ..’ ಎನ್ನುವ ಭಾವ. ದೊಡ್ಡವಳಾಗುವ ವಯಸ್ಸಿನವಳಲ್ಲ ಪುಟ್ಟಿ. ಮುಂದಿನ ಡಿಸೆಂಬರಿಗೆ ಒಂಭತ್ತು ತುಂಬಿ ಹತ್ತಕ್ಕೆ ಬೀಳುತ್ತದೆ. ಆದರೂ ಎದೆಯಲ್ಲಿ ಢವ ಢವ ಸದ್ದು, ಅವಳ ಕಿವಿಗೇ ಬೀಳುವಂತೆ. ಈಗೆಲ್ಲಾ ಹುಡುಗಿಯರು ಬಹುಬೇಗ ದೊಡ್ಡವರಾಗುತ್ತಿದ್ದಾರಂತೆ. ಕುಡಿಯುವ ಹಾಲು, ತಿನ್ನುವ ಮೊಸರಿನಲ್ಲಿರುವ ಹಾರ್ಮೋನ್ ಇದಕ್ಕೆ ಕಾರಣವಂತೆ. ಜಾನುವಾರುಗಳು ಬೇಗ ಕರು ಹಾಕಲಿ, ಜಾಸ್ತಿ ಹಾಲು ಕೊಡಲಿ ಎನ್ನುವ ಉದ್ದೇಶದಿಂದ ಹಾರ್ಮೋನ್ ಇಂಜಕ್ಷನ್ನು ಕೊಡಿಸುತ್ತಾರಂತೆ. ಅವು ಕೊಡುವ ಹಾಲನ್ನು ಅಮೃತ ಎಂದು ಕುಡಿಯುವ ಮನೋಧರ್ಮ ತಮ್ಮದು. ಹಾಲಿನಲ್ಲಿ ಬೆರೆತಿರುವ ಹಾರ್ಮೋನ್ ಅಂಶ ಕುಡಿಯುವ ದೇಹಕ್ಕೆ ಸೇರಿ ವಿಪರೀತದ ಪರಿಣಾಮ ಆಗದಿರಲು ಸಾಧ್ಯವೇ? ವಯಸ್ಸಿಗೆ ಮುನ್ನವೇ ಋತುಮತಿಯಾಗುವ ಹುಡುಗಿಯರು. ಪುಟ್ಟಿಗೆ ಹಾಲು ಕುಡಿಸಿದ್ದು ಜಾಸ್ತಿಯಾಯ್ತಾ? ಬೆಳಿಗ್ಗೆ ಸ್ಕೂಲಿಗೆ ಹೊರಡುವ ಅವಸರದಲ್ಲಿ ಹೊಟ್ಟೆ ತುಂಬಾ ಅವಳು ತಿಂಡಿ ತಿನ್ನುವುದಿಲ್ಲ ಎನ್ನುವ ಕಾಳಜಿಯಿಂದ ಲೋಟ ಭರ್ತಿ ಹಾಲು. ಸಂಜೆ ತಿಂಡಿ ತಿಂದ ನಂತರ ಮತ್ತೆ ಅದೇ ಉಪಚಾರ. ಎಲ್ಲಾ ಓದಿರುತ್ತೇವೆ. ಎಲ್ಲಾ ತಿಳಿದುಕೊಂಡಿರುತ್ತೇವೆ. ಬುದ್ಧಿವಂತರು ಅಂದುಕೊಂಡಿರುತ್ತೇವೆ. ಆದರೆ ಅದರ ಬಗ್ಗೆ ಒಂದು ದಿವ್ಯ ನಿರ್ಲಿಪ್ತಿಯನ್ನೂ ರೂಢಿಸಿಕೊಂಡುಬಿಟ್ಟಿರುತ್ತೇವೆ. ‘ನಾವು ಮಾತ್ರವಾ? ಕೋಟಿಗಟ್ಟಲೆ ಜನ ಇದನ್ನ ಉಪಯೋಗಿಸಲ್ವಾ? ಎಲ್ಲೋ ಕೆಲವು ಉದಾಹರಣೆ ಕಂಡು ಬಂದರೆ ಅದೇ ಅಂತಿಮ ಸತ್ಯ ಅಂದುಕೊಳ್ಳಬೇಕಾ?’ ಸಮರ್ಥನೆಗೆ ನಾನಾ ಕಾರಣಗಳು. ‘ವಿಷದ ಅಂಶ ಇಲ್ಲ’ ಎನ್ನುವ ವಸ್ತು ದುರ್ಬೀನಿನಲ್ಲಿ ಹುಡುಕಿದರೂ ಕಾಣಿಸಲಾರದೇನೋ. ತಿನ್ನುವ ತರಕಾರಿ, ಹಣ್ಣುಗಳಿಂದ ತೊಡಗಿ ಉಣ್ಣುವ ಅನ್ನದವರೆಗೆ ಎಲ್ಲವೂ ಕೀಟನಾಶಕ ಸಿಂಪಡಿಸಿಯೇ ಬೆಳೆದದ್ದು. ಇತಿಹಾಸದ ವಿಷಕನ್ಯೆಯರಂತೆ ಹೀಗೆ ದಿನದಿನವೂ ಅಲ್ಪ ಪ್ರಮಾಣದ ವಿಷ ಸೇವಿಸಿ ದೇಹ ಅದಕ್ಕೆ ಹೊಂದಿಕೊಂಡುಬಿಟ್ಟಿರುತ್ತದೆಯೇನೋ. ಹಾಗಾದರೆ ಎಷ್ಟೋ ಒಳ್ಳೆಯದು. ತಮ್ಮ ಎಚ್ಚರಿಕೆಯಲ್ಲಿ ತಾವಿರಬೇಕು ಎನ್ನುವ ಮುಂಜಾಗ್ರತೆಯಲ್ಲಿ ಆಹಾರಕ್ರಮದಲ್ಲಿ ರೂಢಿಸಿಕೊಂಡಿರುವ ಬದಲಾವಣೆಗಳು ಬೇಕಾದಷ್ಟು. ‘ಸಾವಯವ ಕೃಷಿಯಲ್ಲಿ ಬೆಳೆದಿದ್ದು’ ಎಂಬ ಹಣೆಪಟ್ಟಿ ಹಚ್ಚಿಕೊಂಡ ಧಾನ್ಯಗಳನ್ನು, ತರಕಾರಿಗಳನ್ನು ಖರೀದಿಸಿ, ಗಾಣದ ಎಣ್ಣೆಯನ್ನೇ ಅಡುಗೆಗೆ ಬಳಸಿ, ದುಪ್ಪಟ್ಟು ಬೆಲೆ ಹೌದು. ಆದರೆ ಆರೋಗ್ಯಕ್ಕಿಂತಾ ಮುಖ್ಯವಾ? ಮನೆಯಲ್ಲೇ ಹಸು ಕಟ್ಟಿಕೊಂಡು ಮಾರುವವರಿಂದ ಖರೀದಿ. ನಂಬಿಕೆ ಮುಖ್ಯ. ‘ಇವರು ಮೋಸ ಮಾಡುವುದಿಲ್ಲ’ ಎನ್ನುವುದೂ ಕೂಡಾ ಒಂದು ನಂಬಿಕೆ. ಕಾಂಚಾಣ ಅನ್ನುವುದು ಯಾರ್ಯಾರಿಂದ ಏನೇನು ಮಾಡಿಸುತ್ತದೆಯೋ ಯಾರು ಬಲ್ಲರು? ಪುಟ್ಟಿಯ ಮುಖದ ಒಂದು ಗೆರೆ ಬದಲಾದರೂ ಗೊತ್ತಾಗಿ ಬಿಡುತ್ತದೆ ತನಗೆ. ಅದ್ಯಾವುದೋ ರಾಕ್ಷಸನ ಜೀವ ಏಳು ಸಮುದ್ರದಾಚೆ ಕೀಳುಸಮುದ್ರದ ನಡುವಿರುವ ಒಂದು ದ್ವೀಪದಲ್ಲಿ, ಅಲ್ಲಿದ್ದ ಒಂದು ಮರದ ಪೊಟರೆಯಲ್ಲಿ ವಾಸವಾಗಿದ್ದ ಗಿಣಿಯಲ್ಲಿ ಅಸ್ತಿತ್ವ ಕಂಡುಕೊಂಡಿತ್ತು ಅನ್ನುವುದು ಜನಪದ ಕತೆ. ತನ್ನ ಜೀವ ಕೂಡಾ ಪುಟ್ಟಿಯಲ್ಲಿ ಸೇರಿಕೊಂಡಿದೆ ಅಂದುಕೊಳ್ಳುತ್ತಾಳೆ ಸುಮಿತ್ರಾ. ಅವಳ ಕೂದಲು ಕೊಂಕಿದರೆ ಗೊತ್ತಾಗಿ ಬಿಡುತ್ತದೆ ತನಗೆ. ಅವಳನ್ನು ಬಿಟ್ಟರೆ ತಮಗಾದರೂ ಕತ್ತ್ಯಾರಿದ್ದಾರೆ? ಶೇಖರ ತನ್ನಷ್ಟು ಭಾವಜೀವಿಯಲ್ಲ, ವಾಸ್ತವವಾದಿ. ಸಣ್ಣಪುಟ್ಟದಕ್ಕೂ ಗುಡ್ಡ ಜರಿದು ತಲೆಯ ಮೇಲೆ ಬಿದ್ದಂತೆ ತಾನು ಕುಸಿದು ಹೋದರೆ ಶೇಖರ ಬೈದು, ಭಂಗಿಸಿ ಬುದ್ಧಿ ಹೇಳುವ ಪೈಕಿ. ‘ಅತೀ ಆಡ್ಬೇಡ..’ ಎಂದು ಅವನ ಹತ್ತಿರ ಬೈಸಿಕೊಂಡಿದ್ದು ಅದೆಷ್ಟು ಸಲವೋ. ಏನೇ ಅನ್ನಲಿ, ಅವನು ತನ್ನ ಪುಕ್ಕಲುತನವನ್ನು ಕಟು ಮಾತುಗಳಿಂದ ಖಂಡಿಸಿದರೆ ಸುಮಿತ್ರನಿಗೆ ವಿಚಿತ್ರ ಸಮಾಧಾನ. ಅವನ ಹತ್ತಿರ ಹೊಟ್ಟೆಯೊಳಗಿರುವುದನ್ನೆಲ್ಲಾ ಕಕ್ಕಿಕೊಳ್ಳದಿದ್ದರೆ ತನಗೆ ತಿಂದನ್ನ ಅರಗುವುದಿಲ್ಲ. ಕಣ್ಣಿಗೆ ನಿದ್ದೆ ಹತ್ತುವುದಿಲ್ಲ.

“ನಂಗೆ ಅನುಮಾನ ಕಣೋ, ಪುಟ್ಟಿ ದೊಡ್ಡವಳಾಗ್ತಾಳಾ ಅಂತ?”

“ದೊಡ್ಡವಳಾಗ್ದೆ ಇರೋ ಹಾಗೇ ಇರೋಕಾಗುತ್ತಾ? ಪ್ರಕೃತಿನಿಯಮದ ಹಾಗೆ ಎಲ್ಲಾ ನಡೀಬೇಕು..” ತಣ್ಣಗೆ ಹೇಳಿದ ಗೃಹಸ್ಥ.

“ನೀನೊಂದು ವಿಚಿತ್ರ. ನಿಂಗೆ ಆತಂಕಾನೇ ಆಗಲ್ವಾ?”

“ಯಾಕೆ?”

“ನಮ್ಮ ಪುಟ್ಟಿ ಇನ್ನೂ ಸಣ್ಣದು ಕಣೋ. ಆಟ ಆಡ್ಕೊಂಡಿರೋ ವಯಸ್ಸು. ಇಷ್ಟು ಬೇಗ ಮೈನೆರೆದು ಕೂತ್ಗೊಂಡ್ರೆ ಅದಕ್ಕೆ ಏನು ಗೊತ್ತಾಗುತ್ತೆ?”

“ಹುಚ್ಚಿ ನೀನು. ಕಡ್ಡೀನ ಗುಡ್ಡ ಮಾಡ್ತಿ. ಆಹಾರಕ್ರಮದಲ್ಲಿ ಏನೋ ವ್ಯತ್ಯಾಸ ಆಗಿರ್ಬೋದು. ಸ್ವಲ್ಪ ಸಪ್ಪಗಿದಾಳೆ ಅಂದ್ರೆ ಅದೊಂದು ದೊಡ್ಡ ವಿಷಯಾನಾ? ನಮ್ಮಮ್ಮನಿಗೆ ನಾವು ಎಂಟು ಜನ ಮಕ್ಕಳಿದ್ವಿ ಗೊತ್ತಲ್ಲ? ಯಾರು ಹೇಗಿದಾರೆ ಅಂತ ಗಮನ ಕೊಡೋಕೆ ಪುರುಸೊತ್ತೆಲ್ಲಿರ್ತಿತ್ತು? ನಾವೆಲ್ಲಾ ಬೆಳೀಲಿಲ್ವಾ? ದೊಡ್ಡವರಾಗ್ಲಿಲ್ವಾ?”

“ಶುರು ಮಾಡ್ಕೊಂಬಿಟ್ಟಿ ಹಳೇ ಪುರಾಣ. ನೀವು ಎಂಟು ಜನ ಇದ್ದಿದ್ದು ಹೌದು. ನೀನು ಎಂಟನೆಯವನೂ ಹೌದು. ನಮಗಿರೋದು ಪುಟ್ಟಿ ಒಂದೇ ಅಂತ ಗೊತ್ತಲ್ವಾ ನಿಂಗೆ?”

“ಅದಕ್ಕೇ ನೀನು ಅತಿರೇಕವಾಗಿ ಆಡ್ತಿರೋದು. ಏನಾದ್ರೂ ಅನುಮಾನ ಇದ್ರೆ ಡಾಕ್ಟ್ರ ಹತ್ರ ಹೋಗ್ಬರೋಣ..”

“ಏನೂಂತ ಹೋಗೋದು? ಜ್ವರ ಇಲ್ಲ, ನೆಗಡಿ ಇಲ್ಲ, ಸಪ್ಪಗಿದಾಳೆ ಅಂತ ಕಾರಣ ಹೇಳ್ಕೊಂಡು ಹೋಗೋದಾ? ಬೈದು ಕಳಿಸ್ತಾರೇನೋ..”

“ನನ್ನ ಕೇಳಿದ್ರೆ ಏನೂ ಆಗಿರಲ್ಲಪ್ಪಾ. ನೀನು ಹೇಳೋ ಹಾಗೆ ದೊಡ್ಡವಳಾಗೋ ಮುನ್ಸೂಚನೆ ಆಗಿದ್ರೆ ನಾವು ತಡೆಯೋಕಾಗುತ್ತಾ? ಎರಡು ವರ್ಷದ ನಂತರ ಆಗೋದು ಮೊದಲೇ ಆಗುತ್ತೆ”

“ನಾನು ದೊಡ್ಡೋಳಾದಾಗ ನಂಗೆ ಹದಿಮೂರು ಆಗ್ಹೋಗಿತ್ತು, ಗೊತ್ತಾ?”

“ಈಗ ನನ್ನ ಏನು ಮಾಡ್ಬೇಕು ಅಂತಿ? ನಿಂಗೆ ಅಷ್ಟು ಆತಂಕ ಇದ್ರೆ ಡಾಕ್ಟ್ರ ಹತ್ರ ಹೋಗೋದೊಂದೇ ದಾರಿ. ಒಂದು ಜನರಲ್ ಚೆಕಪ್ ಮಾಡ್ಸಿಬಿಡೋಣ. ವೃಥಾ ಚಿಂತೆ ಮಾಡೋದಾದ್ರೂ ತಪ್ಪುತ್ತೆ..”

“ನಾಳೆ?”

“ಏಳು ತಿಂಗಳಿಗೆ ಹುಟ್ಟಿದೋರ ಹಾಗೆ ಆಡ್ತೀಯಲ್ಲೇ. ವೀಕೆಂಡಿಗೆ ಎಲ್ಲಾ ಪ್ರೋಗ್ರ್ಯಾಂ ಇಟ್ಕೊಳ್ಳೋಣ”

ಶೇಖರ ಇಷ್ಟು ಹೇಳಿದ ಮೇಲೆ ಸಮಾಧಾನ ಹಚ್ಚಿಕೊಂಡಳು ಸುಮಿತ್ರಾ. ಆದರೂ ಮನಸ್ಸಲ್ಲೊಂದು ಅಪರಾಧೀ ಭಾವ. ಪ್ರಾಜೆಕ್ಟು, ಡೆಡ್‍ಲೈನು, ಕಾನ್‍ಫರೆನ್ಸ್‍ಕಾಲ್‍ಗಳು, ಆನ್‍ಲೈನ್ ಮೀಟಿಂಗುಗಳು, ಕಸ್ಟಮರ್ಸ್‍ಗಳ ಓಲೈಕೆಯಲ್ಲಿ ಹಗಲು, ರಾತ್ರಿಗಳ ವ್ಯತ್ಯಾಸವಿಲ್ಲದ ದುಡಿತ. ಇಲ್ಲಿ ರಾತ್ರಿಯಾದರೆ ಅಲ್ಲೆಲ್ಲೋ ಹಗಲು. ಏನಾದರೇನು? ಇಬ್ಬರಿಗೂ ಕೈ ತುಂಬಿ ಚೆಲ್ಲುವಷ್ಟು ದುಡಿಮೆ. ಕೆರಿಯರ್ ಮೇಲೆ ಕಣ್ಣಿಟ್ಟು ಮುನ್ನುಗ್ಗುವ ಧಾವಂತ. ಒಂದು ಮಗುವಾಗುವುದಕ್ಕೆ ಮದುವೆಯಾಗಿ ಒಂಭತ್ತು ವರ್ಷ ಕಾಯಬೇಕಾಯ್ತು. ‘ಈಗಲ್ಲ, ಈ ವರ್ಷ ಅಲ್ಲ’ ಎನ್ನುತ್ತಾ ಮುಂದೂಡಿಕೆ. ಒಂದೆರಡು ವರ್ಷ ಫಾರಿನ್‍ನಲ್ಲಿ ಇದ್ದು ಬರುವ ಅವಕಾಶ ಕಲ್ಪಿಸಿಕೊಳ್ಳದೆ ಆಗಲೇ ಸಂಸಾರದ ನೊಗಕ್ಕೆ ಹೆಗಲು ಕೊಡಲು ಇಬ್ಬರೂ ತಯಾರಿಲ್ಲ. ‘ಇನ್ನು ಇವಳಿಗೆ ಮಕ್ಕಳಾಗುವುದಿಲ್ಲ’ ಎನ್ನುವ ನಿರಾಶೆಯ ಪರಮಾವಧಿ ತಲುಪಿದ್ದ ಅಮ್ಮ. ಅದೆಷ್ಟು ದೇವರಿಗೆ ಹರಕೆ ಕಟ್ಟಿಕೊಂಡಿದ್ದಳೋ ಲೆಕ್ಕ ಅವಳಿಗೇ ಗೊತ್ತು. ಸುಮಿತ್ರನಿಗೆ ನಗೆ. ‘ನಾವು ಬೇಡ ಅಂದ್ಕೊಂಡಿದ್ರೆ ದೇವರು ಏನು ಮಾಡೋಕಾಗುತ್ತಮ್ಮಾ? ಹುಚ್ಚು ನಿಂಗೆ..’ ಚುಡಾವಣೆ.

‘ನಿಂಗೆ ಇಂಜಿನಿಯರಿಂಗ್ ಓದ್ಸಿದ್ದೇ ದೊಡ್ಡ ತಪ್ಪಾಯ್ತು. ಪುಣ್ಯಾತ್ಗಿತ್ತಿ, ಕೈ ಮುಗೀತೀನಿ ಕಣೇ. ಮನೆ ಬೆಳಗೋಕೆ ಒಂದು ಮಗು ಇಲ್ಲ ಅಂತಾದ್ಮೇಲೆ ಯಾರಿಗಾಗಿ ಇಷ್ಟೆಲ್ಲಾ ದುಡಿದು ಗಂಟು ಕಟ್ತಿದೀರಿ? ಯಾರಾದ್ರೂ ಸರಿಯಾದ ಡಾಕ್ಟ್ರನ್ನ ನೋಡಿ ಅಂತ ಸಾವಿರ ಸಲ ಹೇಳಿದೀನಿ..’

‘ಹೇಳಿದ್ನಲ್ಲಮ್ಮಾ, ನಾವು ಮನಸ್ಸು ಮಾಡ್ಬೇಕು. ಡಾಕ್ಟ್ರ ಅಗತ್ಯ ಬಿದ್ರೆ ಹೋಗೇ ಹೋಗ್ತೀವಿ. ಅದನ್ನ ನೀನು ಹೇಳ್ಬೇಕಾ? ನಾವೇನು ಬೆರಳು ಚೀಪೋ ಮಕ್ಕಳು ಅಂದ್ಕೊಂಡಿದೀಯಾ?”

‘ಮೂವತ್ತೆರಡು ಆಗ್ಹೋಯ್ತಲ್ಲೇ, ಇನ್ನ್ಯಾವಾಗ ಮಕ್ಕಳಾಗೋದು? ಪ್ರಾಯದ ಸೊಕ್ಕಲ್ಲಿ ನಿಮಗೆ ಏನೂ ಗೊತ್ತಾಗಲ್ಲ. ನಾಳೆ ಮುದುಕರಾದ್ಮೇಲೆ ಬರುತ್ತೆ ಬುದ್ಧಿ..’

‘ಅಯ್ಯೋ ನೀನೊಬ್ಳು. ಮಕ್ಕಳಿರೋದೇ ಕೊನೆಗಾಲದಲ್ಲಿ ಅಪ್ಪ, ಅಮ್ಮನ್ನ ನೋಡ್ಕಳ್ಳೋಕೆ ಅಂದ್ಕೊಂಡಿದೀಯಲ್ಲ, ಯಾವ ರಾಯನ ಕಾಲದಲ್ಲಿದ್ದಿ ನೀನು? ಹಾಗಾದ್ರೆ ಇಷ್ಟೊಂದು ವೃದ್ಧಾಶ್ರಮಗಳಾದ್ರೂ ಯಾಕಿರ್ಬೇಕಿತ್ತು?”

‘ವಾದ ಮಾಡ್ಬೇಡ ನೀನು..’ ಅಮ್ಮ ಕಣ್ಣೊರೆಸಿಕೊಳ್ಳುತ್ತಿದ್ದಳು. ಈ ಪರಿ ಕೊರಗು ಹಚ್ಚಿಕೊಂಡು ಸವೆಯುತ್ತಿರುವ ಅಮ್ಮನಿಗೋಸ್ಕರವಾದರೂ ಒಂದು ಮಗು ಹೆತ್ತು ಅವಳ ಮುಖ ಬೆಳಗುವುದನ್ನು ನೋಡಬೇಕು ಎಂದು ಸುಮಿತ್ರಾ ಅಂದುಕೊಂಡರೆ ಇತ್ತ ಶೇಖರನ ಮನೆಯಲ್ಲೂ ಇಂತದೇ ಮಾತುಕತೆಗಳ ಪುನರಾವರ್ತನೆ. ಪರಿಣಾಮಸ್ವರೂಪವೆಂಬಂತೆ ಜನಿಸಿದವಳು ಪುಟ್ಟಿ. ಎರಡು ಮನೆಗಳಲ್ಲೂ ಸಮಾಧಾನದ ನಿಟ್ಟುಸಿರಿಗೆ ಕಾರಣಳಾದವಳು. ಕಣ್ಣಗೊಂಬೆಯಾದವಳು.

                                        ****** 

ಏನೀ ಮೋಹ? ಎಂತಾ ಮಾಯೆ? ತಮ್ಮ ಉದ್ಯೋಗದ ಅಭ್ಯುದಯಕ್ಕೆ ತೊಡರುಗಾಲಾಗುತ್ತದೆಯೆಂದು ಮುಂದೂಡುತ್ತಾ ಬಂದಿದ್ದ ಮಗುವಿನ ಹುಟ್ಟು ದಂಪತಿಯ ಬದುಕಿನಲ್ಲಿ ಸಂಭವಿಸಿದ್ದೊಂದೇ ತಡ, ಇಬ್ಬರ ಗಮನದ ಕೇಂದ್ರಬಿಂದುವಾಗಿ, ಜೀವದ ಜೀವವಾಗಿ, ನಲಿವಿನ ಬುಗ್ಗೆಯಾಗಿ, ಪದಗಳಲ್ಲಿ ಹಿಡಿದಿಡಲಾಗದ ಏನೇನೋ ಆಗಿ ಪುಟ್ಟಿ ಆ ಮನೆಯ ಸರ್ವಸ್ವವಾದಳು. ಸಣ್ಣಕ್ಕಿದ್ದಾಗ ನಾಲ್ಕುವರ್ಷಗಳ ಕಾಲ ಆ ಮನೆಯ ಅಜ್ಜಿ, ಈ ಮನೆಯ ಅಜ್ಜಿ ಒತ್ತಾಸೆಗೆ ನಿಂತು ಮಗುವನ್ನು ಸಾಕಿಕೊಟ್ಟರು. ಸುಮಿತ್ರಾ ನಿಶ್ಚಿಂತಳಾಗಿ ತನ್ನ ಉದ್ಯೋಗಕ್ಷೇತ್ರದಲ್ಲಿ ಕಳೆದುಹೋದಳೇ? ಅಲ್ಲಲ್ಲ, ಮನೆಯಲ್ಲಿದ್ದ ಮಗು ಅವಳು ಎಲ್ಲಿದ್ದರೂ, ಏನು ಮಾಡುತ್ತಿದ್ದರೂ ಅಯಸ್ಕಾಂತದ ಚುಂಬಕಶಕ್ತಿಯಂತೆ ಅವಳನ್ನು ಸೆಳೆಯುತ್ತಿರುತ್ತಿತ್ತು. ಯಾವಾಗ ಒಮ್ಮೆ ಮನೆಗೆ ಬರುವೆನೋ, ತನ್ನ ಕಂದಮ್ಮನನ್ನು ಎದೆಗಪ್ಪಿಕೊಂಡು ಮನಸಾರೆ ಮುದ್ದಿಸುವೆನೋ ಎಂದು ಜೀವ ಹಾತೊರೆಯುತ್ತಿತ್ತು. ಇವಳ ಸಡಗರ ಕಂಡು ಅಮ್ಮ ಕೀಟಲೆ ಮಾತಾಡುತ್ತಿದ್ದರು,

“ಮಗು ಬೇಡ ಅಂತ ಯಾರೋ ಅಂತಿದ್ರಲ್ಲ, ಈಗ್ಯಾಕಪ್ಪಾ ಮನೆಗೆ ಬರೋಕೆ ಇಷ್ಟೊಂದು ಅವಸರ? ಧಾವಂತ? ನಿಂಗೆ ಸಾಕೋಕೆ ಕಷ್ಟ ಆದ್ರೆ ಹೇಳು, ನಾನು ಊರಿಗೆ ಕರ್ಕೊಂಡ್ಹೋಗ್ತೀನಿ..”

ಅಂಗೈಲಿಟ್ಟುಕೊಂಡು, ಮುಂಗೈಲಿ ಮುಚ್ಚಿ ಅರಗಿಣಿಯಂತೆ ಸಾಕಿಕೊಂಡ ಮಗಳು. ಅವಳ ಸುತ್ತಲೇ ಬದುಕು ಪರಿಭ್ರಮಿಸುತ್ತಿರುವ ಭ್ರಮೆ. ಮೂಗಲ್ಲಿ ನೀರಿಳಿಯುವಂತಿಲ್ಲ, ಮೈ ಬೆಚ್ಚಗಾಗುವಂತಿಲ್ಲ, ಹೊಟ್ಟೆ ಕೆಡುವಂತಿಲ್ಲ, ಕೆಮ್ಮು ಬರುವಂತಿಲ್ಲ, ಮಗಳನ್ನು ಎದೆಗಪ್ಪಿಕೊಂಡು ಡಾಕ್ಟರ ಬಳಿ ಧಾವಿಸುವ ಅವಸರ.

“ಖಾಯಿಲೆ ಬೀಳ್ದೆ ಮಕ್ಕಳು ದೊಡ್ಡ ಆಗ್ತಾರೇನೇ? ಬೆಳೀತಾ ಬಂದ ಹಾಗೆ ಎಲ್ಲಾ ಸರಿಯಾಗುತ್ತೆ. ಸುಮ್ನೆ ಗಾಬರಿ ಮಾಡ್ಕೋಬೇಡ..” ಕಿವಿ ತಿರುಪಿ ಬುದ್ಧಿ ಹೇಳುತ್ತಿದ್ದ ಅಮ್ಮ ಈಗಿಲ್ಲ. ಅವಳಿದ್ದಾಗ ಮಗಳಲ್ಲಿ ಸಣ್ಣದೊಂದು ವ್ಯತ್ಯಾಸ ಕಂಡರೂ ಫೋನು ಹಚ್ಚಿ ಸಾಂತ್ವನ ಬಯಸುತ್ತಿದ್ದುದಿತ್ತು ಸುಮಿತ್ರಾ. ಎಲ್ಲವನ್ನೂ ಸಾವಧಾನದಿಂದ ಕೇಳಿ, ‘ಸುಮ್ನಿರು, ಏನಾಗಲ್ಲ..’ ಎನ್ನುವ ಎರಡು ಪದಗಳಲ್ಲಿ ಮಗಳ ಉದ್ವೇಗವನ್ನು ತಹಬಂದಿಗೆ ತರುತ್ತಿದ್ದಳು ಅಮ್ಮ, ತನ್ನಮ್ಮ..

                                        ******

ಕೂಲಂಕಷವಾದ ಒಂದು ತಪಾಸಣೆ ನಡೆಯಿತು. ‘ಚಿಂತೆಗೆ ಯಾವ ಕಾರಣವೂ ಇಲ್ಲ’ ಎಂದು ಡಾಕ್ಟರು ಹೇಳಿಬಿಟ್ಟರೆ ನಿಶ್ಚಿಂತೆ. ಪುಟ್ಟಿಗೆ ಕೊಡಬೇಕಾದಷ್ಟು ಗಮನ ತಾವು ಕೊಡುತ್ತಿಲ್ಲವೇ? ‘ಇನ್ನೇನು ದೊಡ್ಡವಳಾದ ಲೆಕ್ಕ’ ಎಂದು ಕೊಂಚ ನಿರ್ಲಕ್ಷ್ಯ ತೋರಿಸಿದೆವೇ? ‘ಮಗು ಗೆಲುವಾಗಿಲ್ಲ, ಮುಖ ಬಾಡಿದೆ’ ಎಂದು ಗಮನಕ್ಕೆ ಬಂದಿದ್ದೂ ತೀರಾ ಇತ್ತೀಚೆಗೆ. ಈ ಬದಲಾವಣೆ ನಿಖರವಾಗಿ ಆರಂಭವಾಗಿದ್ದು ಯಾವಾಗಿನಿಂದ? ಗಟ್ಟಿಸಿ ಕೇಳಿದರೆ ಉತ್ತರ ಗೊತ್ತಾಗುತ್ತಿಲ್ಲ. ಮನೆಯಲ್ಲಿ ಅಡುಗೆಗೊಂದು ಜನ, ಸುತ್ತುಕೆಲಸಗಳಿಗೊಂದು ಜನ, ಕಾರಿಗೊಬ್ಬ ಡ್ರೈವರು. ತಾವು ಮನೆಗೆ ಬರುವವರೆಗೆ ಮಗಳ ದೇಖರೇಖಿಯ ಹೊಣೆ ಅಡುಗೆಯವರ ಕೈಲಿ. ಬೇರೆಲ್ಲೂ ಕೆಲಸಕ್ಕೆ ಹೋಗಬೇಡಿರೆಂದು ಅವರ ನಿರೀಕ್ಷೆಗೂ ಮೀರಿದ ಸಂಬಳ ಕೊಟ್ಟು ಖಾಯಮ್ಮಾಗಿ ಮನೆಯಲ್ಲಿಟ್ಟುಕೊಂಡಿದ್ದವರು. ‘ಸರಿಯಾಗಿ ಊಟ ಮಾಡ್ತಾಳಾ? ತಿಂಡಿ ತಿಂತಾಳಾ? ಹಾಲು ಕುಡೀತಾಳಾ?’ ಉತ್ತರಕ್ಕಾಗಿ ಆಕೆಯ ಮುಖ ನೋಡಬೇಕಾದ ಪರಿಸ್ಥಿತಿ. ತಾನು ಮನೆಯಲ್ಲಿಲ್ಲದಿದ್ದರೆ ಅವರದೇ ಅವಲಂಬನೆ. ಸುಮಿತ್ರಾ ಮನೆಯಲ್ಲಿದ್ದಷ್ಟು ಹೊತ್ತು ಮಗಳ ಊಟೋಪಚಾರಗಳ ಕುರಿತು ಸ್ವತಹಾ ಕಣ್ಣಿಟ್ಟಿರುತ್ತಿದ್ದಳು. ಆದರೂ ಹೆಚ್ಚಾಗಿ ಅಡುಗೆಯವರ ಮೇಲ್ವಿಚಾರಣೆಯಲ್ಲೇ ಬೆಳೆದಿತ್ತು ಮಗು, ಬೆಳೆಯುತ್ತಿತ್ತು ಮಗು. ಯಾವುದೇ ಲೋಪ ಇದುವರೆಗೆ ಕಂಡು ಬಂದಿದ್ದಿಲ್ಲ. ವರ್ಷಾನುಗಟ್ಟಲೆಯ ಒಡನಾಟದಿಂದ ಅಡುಗೆಯವರು ಮನೆಯವರೇ ಆಗಿದ್ದಾರೆ. ಹಾಗೇನಾದರೂ ವ್ಯತ್ಯಾಸ ಕಂಡುಬಂದಿದ್ದರೆ ಹೇಳುತ್ತಿರಲಿಲ್ಲವೇ ತನಗೆ? ವೃಥಾ ಚಿಂತಿಸುತ್ತಿದ್ದೇನೆಯೇ?

ಡಾಕ್ಟರ ಎದುರು ಕೂತ ದಂಪತಿ ಮುಳ್ಳ ಮೇಲೆ ಕೂತವರಂತೆ ಚಡಪಡಿಸುತ್ತಿದ್ದರು. ಅವರ ಬಾಯಿಂದ ಬರುವ ಒಂದು ಮಾತು ತಮಗೆ ಜೀವದಾನ ನೀಡುತ್ತದೆಯೆಂಬಷ್ಟು ಉದ್ವೇಗಗೊಂಡಿದ್ದರು. ಶೇಖರ ಹೆಂಡತಿಯಷ್ಟು ಆತಂಕಗೊಂಡಿಲ್ಲ ಎಂದು ಮೇಲ್ನೋಟಕ್ಕೆ ಅನಿಸುತ್ತಿದ್ದರೂ ಒಳಗೊಳಗೆ ಅವನೂ ಉದ್ವೇಗಗೊಂಡಿದ್ದ. ನೇರವಾಗಿ ಲ್ಯಾಬಿನಿಂದ ಬಂದ ರಿಪೋರ್ಟುಗಳನ್ನು ಎದುರಿಗಿಟ್ಟುಕೊಂಡು ಪರಿಶೀಲಿಸುತ್ತಿದ್ದ ಡಾಕ್ಟರ ಎದುರು ಹೆತ್ತವರು ತಮ್ಮ ಕಣ್ಣ ತುಂಬಾ ಕಾತರತೆ ತುಂಬಕೊಂಡು ನಿರೀಕ್ಷೆಯ ನೋಟ ನೆಟ್ಟು ಕುಳಿತಿದ್ದರು. ಯಾಕೆ ಬಾಯ್ಬಿಡಲು ತಡಮಾಡುತ್ತಿದ್ದಾರೆ ಡಾಕ್ಟರು? ಅಷ್ಟೆಲ್ಲಾ ಪರಿಶೀಲನೆ ಮಾಡುವಂತಹುದು ಏನಾಗಿದೆ? ಅಥವಾ ಏನೂ ಆಗಿಲ್ಲದೆ ಹೀಗೆನಿಸುತ್ತಿರುವುದೂ ಕೂಡಾ ತಮ್ಮ ಹಳವಂಡವೇ? ಕೊನೆಗೂ ಮಾತಾಡಿದ್ದರು ಡಾಕ್ಟರು,

“ಶುಗರ್ ಲೆವೆಲ್ ಏಳು ನೂರಕ್ಕೆ ಹೋಗಿದೆ. ತಡ ಮಾಡಿದ್ರೆ ಮಗು ಕೋಮಾಕ್ಕೆ ಹೋಗ್ತಿತ್ತೇನೋ. ಸರಿಯಾದ ಸಮಯಕ್ಕೆ ಕರ್ಕೊಂಡ್ಬಂದಿದೀರಿ..”

ಕಣ್ಣ ಮುಂದೆ ಕತ್ತಲು ಆವರಿಸಿದಂತಾಗಿ ಕುಸಿಯುತ್ತಿದ್ದವಳನ್ನು ಬಳಸಿ ಹಿಡಿದ ಶೇಖರನ ಕೈಗಳು ಗದಗುಟ್ಟಿ ನಡುಗುತ್ತಿತ್ತು. ಮುಖದಲ್ಲಿ ಬೆವರು ಬಸಿಯುತ್ತಿತ್ತು.

                                           *******

ಒಂದು ವಾರದ ಆಸ್ಪತ್ರೆ ವಾಸ. ಏರಿದ ಸಕ್ಕರೆಯ ಮಟ್ಟವನ್ನು ಹತೋಟಿಗೆ ತರಲು ಇಂಜೆಕ್ಷನ್ನುಗಳು. ಕಟ್ಟೆಚ್ಚರದ ನಿಗಾ. ಸುಮಿತ್ರಾ ಜೀವಂತ ಶವದಂತೆ, ಈ ಲೋಕದಲ್ಲಿ ಇದ್ದೂ ಇಲ್ಲದವಳಂತೆ, ಮಗಳ ಪಕ್ಕದಲ್ಲಿ ಸ್ಥಾಪನೆಯಾಗಿದ್ದರೆ ಎದೆ ಒಡೆಯುವಂತಾ ಸುದ್ದಿಯನ್ನು ಜೀರ್ಣಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿ ಶೇಖರ ಕಂಗಾಲಾಗಿದ್ದ. ಇಂತಾದ್ದೊಂದು ಸಂಭವವನ್ನು ಊಹಿಸಿಯೂ ಇರದಿದ್ದವರಿಗೆ ಆಕಾಶ ಕಳಚಿ ತಲೆಯ ಮೇಲೆ ಬಿದ್ದ ಅನುಭವ. ಹೀಗೂ ಆಗುತ್ತದೆದೆಯಾ? ವಿಧಿ ಅನ್ನುವುದು ಏಕಾಏಕಿ ತಮ್ಮನ್ನು ಮೇಲೇಳಲಾಗದ ಕಂದಕಕ್ಕೆ ತಳ್ಳಿಬಿಟ್ಟಿತೇ? ತಮ್ಮಿಬ್ಬರಲ್ಲಿ ಯಾರಿಗೆ ಇಂತಾ ಪರಿಸ್ಥಿತಿ ಬಂದಿದ್ದರೂ ಎದೆ ಗಟ್ಟಿ ಮಾಡಿಕೊಂಡು ನಿಭಾಯಿಸಬಹುದಿತ್ತು. ಆದರೆ ಇನ್ನೂ ಈಗ ಪ್ರಪಂಚದ ಕಡೆ ಕಣ್ಣು ಬಿಟ್ಟು ನೋಡುತ್ತಿದೆ ಎನ್ನುವಂತಿರುವ ತನ್ನ ಕರುಳ ಕುಡಿಗೇಕೆ ಈ ಶಿಕ್ಷೆ? ಜೀವಮಾನವಿಡೀ ಇಂಜಕ್ಷನ್ನು ಚುಚ್ಚಿಸಿಕೊಳ್ಳುತ್ತಾ, ನಾಲಿಗೆ ರುಚಿಗೆ ಕಡಿವಾಣ ಹಾಕಿಕೊಂಡು ಬದುಕು ಮಾಡಬೇಕಾ ತನ್ನ ಮಗಳು? ರಾಜಕುಮಾರಿಯಂತೆ ಸಾಕಿದವಳಿಗೆ ಇದೆಂತಾ ಅಗ್ನಿಪರೀಕ್ಷೆ?

                                             ********

ಆಪ್ತ ಸಮಾಲೋಚನೆ ನಿಧಾನವಾಗಿಯಾದರೂ ಪರಿಣಾಮಕಾರಿಯಾಗಿ ಕೆಲಸ ಆರಂಭಿಸಿತು. ಮೊದಲಿಗೆ ಇದೊಂದು ಖಾಯಿಲೆಯಲ್ಲ, ದೇಹದ ಹಾರ್ಮೋನಿನ ಅಭಾವದಿಂದುಂಟಾಗುವ ಏರುಪೇರು ಎಂದು ಮನದಟ್ಟು ಮಾಡಿಸಿದರು ಮನೋವೈದ್ಯರು. ಈ ಸಂದರ್ಭಕ್ಕೆ ಮಾನಸಿಕವಾಗಿ ಮೊದಲು ಸಿದ್ಧರಾಗಬೇಕಾದವರು ಪೋಷಕರು. ಎಂತಾ ಪರಿಸ್ಥಿತಿಗೂ ಒಗ್ಗಿಕೊಳ್ಳಬಲ್ಲರು ಮಕ್ಕಳು. ಸಿಹಿ ಹೊರತುಪಡಿಸಿ ಅವರ ದೈನಂದಿನ ಜೀವನಕ್ರಮದಲ್ಲಿ ದೊಡ್ಡಮಟ್ಟದ ಯಾವ ಬದಲಾವಣೆಯೂ ಆಗುವುದಿಲ್ಲ. ಇಂಜಕ್ಷನ್ನು ಜೀವನದ ಅವಿಭಾಜ್ಯ ಅಂಗವಾದರೂ, ಕಾಲಕಾಲಕ್ಕೆ ಸೂಕ್ತ ತಪಾಸಣೆಯ ಅಗತ್ಯವಿದ್ದರೂ, ಅವರ ಆಟಪಾಠ, ಓದು ಇತ್ಯಾದಿಗಳಿಗೆ ಇದೊಂದು ಅಡ್ಡಗಾಲು ಆಗುವುದಿಲ್ಲ. ಅದೆಷ್ಟೋ ಮಕ್ಕಳು ಇವನ್ನೆಲ್ಲಾ ನಿಭಾಯಿಸಿಕೊಂಡು ಬೆಳೆದಿದ್ದಾರೆ. ಇದಕ್ಕಿಂತಾ ಹೆಚ್ಚಿನ ಆರೋಗ್ಯ ಸಮಸ್ಯೆ ಎದುರಿಸುವ ಮಕ್ಕಳೂ ಕೂಡಾ ಕ್ರಮೇಣ ತಮ್ಮ ದೇಹಸ್ಥಿತಿಗೆ ಒಗ್ಗಿಕೊಂಡು, ಕೆಲವರು ಬುದ್ಧಿ ಬೆಳೆಯುತ್ತಿದ್ದಂತೆ ಅದನ್ನೊಂದು ಸವಾಲಾಗಿ ಸ್ವೀಕರಿಸಿ, ಉನ್ನತ ಸಾಧನೆ ಮಾಡಿದ ಉದಾಹರಣೆಗಳು ಬೇಕಾದಷ್ಟಿವೆ. ಹಾಗಿರುವಾಗ ಜೀವನ್ಮರಣದ ಪ್ರಶ್ನೆ ಎಂಬಂತೆ ಇದಕ್ಕೆ ಅಂಜಿಕೊಳ್ಳಬೇಕಾದ ಆವಶ್ಯಕತೆಯೇ ಇಲ್ಲ. ಚುಚ್ಚುಮದ್ದನ್ನು ತಾವೇ ತೆಗೆದುಕೊಳ್ಳುವುದನ್ನೂ ಕೂಡಾ ಅಭ್ಯಾಸ ಮಾಡಿಕೊಂಡುಬಿಡುತ್ತಾರೆ ಮಕ್ಕಳು. ಸಕ್ಕರೆ ಖಾಯಿಲೆಯನ್ನು ಶಿಸ್ತುಬದ್ಧವಾಗಿ ನಿರ್ವಹಿಸುತ್ತಾ ತೊಂಭತ್ತು, ತೊಂಭತ್ತೈದು ವರ್ಷ ಬದುಕಿದವರ ಉದಾಹರಣೆಗಳೂ ಬೇಕಾದಷ್ಟಿವೆ. ಸುಮಿತ್ರನ ಮನಸ್ಸನ್ನು ವಿಪರೀತ ಘಾಸಿಗೊಳಿಸುತ್ತಿದ್ದ ಪ್ರಶ್ನೆಗೂ ಉತ್ತರ ಸಿಕ್ಕಿತು. ಇದರಿಂದ ವೈವಾಹಿಕ ಜೀವನಕ್ಕಾಗಲೀ, ಮಕ್ಕಳನ್ನು ಪಡೆಯುವುದಕ್ಕಾಗಲೀ ಯಾವುದೇ ಅಡ್ಡಿ ಇಲ್ಲ. ಮಖ್ಯವಾಗಿ ಬೇಕಾಗಿದ್ದೊಂದೇ, ಬಂದಿದ್ದೆಲ್ಲವನ್ನೂ ಎದುರಿಸುತ್ತೇನೆಂಬ ಮನೋಬಲ. ‘ಒಂದೊಮ್ಮೆ ಸಕಾಲದಲ್ಲಿ ನಿಮ್ಮ ಗಮನಕ್ಕೆ ಬರದೆ ಮಗಳು ಕೈಬಿಟ್ಟು ಹೋಗುವಂತಾ ಪರಿಸ್ಥಿತಿ ಬಂದಿದ್ದರೆ ಏನಾಗಬಹುದಿತ್ತು, ನೀವೇ ಯೋಚಿಸಿ’ ಎನ್ನುವ ಡಾಕ್ಟರ ಮಾತು ದಂಪತಿಯ ಎದೆ ಹೊಕ್ಕು ಭದ್ರವಾಗಿ ಕೂತುಬಿಟ್ಟಿತ್ತು. ಹೇಗೋ ಕಾಪಾಡಿದ್ದಾನೆ ದೇವರು ಅಥವಾ ಹಾಗೆಂದುಕೊಳ್ಳುವ ಯಾವುದೋ ಅಗೋಚರ ಶಕ್ತಿ. ಮುಂದೆಯೂ ಕಾಪಾಡುತ್ತಾನೆ. ಮಗಳಿಗೆ ಏನಾಗಿದೆ ಎನ್ನುವ ಕುರಿತು, ಅದಕ್ಕೆ ತೆಗೆದುಕೊಳ್ಳಬೇಕಾದ ಕಾಳಜಿಯ ಕುರಿತು, ಅವಳಿಗೆ ಮನದಟ್ಟು ಮಾಡಿಕೊಡುವ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸತೊಡಗಿದಳು ಸುಮಿತ್ರಾ. ಮಗಳ ಆಹಾರ ನಿಯಮಗಳ ಪರಿಪಾಲನೆಯನ್ನು ಕಾಲಕಾಲಕ್ಕೆ ನಿರ್ವಹಿಸಲು ಅವಳು ಕೆಲಸ ಬಿಡುವ ತೀರ್ಮಾನ ಮಾಡಿದ್ದು ಶೇಖರನಿಗೂ ಸಮಾಧಾನ ತಂದುಕೊಟ್ಟಿತ್ತು.

                                        *******

ಎಲ್ಲಾ ಸುಸೂತ್ರವಾಗಿ ನಡೆಯುತ್ತಿದೆ. ಪುಟ್ಟಿ ಬದಲಾವಣೆಗೆ ಒಗ್ಗಿಕೊಳ್ಳತೊಡಗಿದ್ದಾಳೆ. ವಿದೇಶದಲ್ಲಿರುವ ಇಷ್ಟಮಿತ್ರರಿಗೆ ಹೇಳಿಟ್ಟಿದ್ದಾರೆ ದಂಪತಿ,

‘ಯಾವುದಾದ್ರೂ ಹೊಸ ಔಷಧಿ ಕಂಡು ಹಿಡಿದಿದ್ದಾರೆ ಅಂತ ಗೊತ್ತಾದ್ರೆ ತಪ್ಪದೆ ತಿಳಿಸಿ. ಎಷ್ಟೇ ಖರ್ಚಾದ್ರೂ ಪರವಾಗಿಲ್ಲ, ಅವಳಿಗೆ ಟ್ರೀಟ್‍ಮೆಂಟ್ ಕೊಡಿಸ್ತೀವಿ..’

ಮಗಳಿಗೋಸ್ಕರ ಮನೆಯಲ್ಲಿ ಸಿಹಿ ಅನ್ನುವುದಕ್ಕೆ ಬಹಿಷ್ಕಾರ ಹಾಕಲಾಗಿದೆ. ಕಾಫಿ, ಚಹಾಕ್ಕೆ ಕೂಡಾ ಸಕ್ಕರೆ ಸೇರಿಸಿಕೊಳ್ಳುವುದಿಲ್ಲ ದಂಪತಿ. ಪರಿಸ್ಥಿತಿ ನೆನೆದು ಕಣ್ಣೀರ್ಗರೆಯುವುದು ನಿಂತಿದೆಯಾದರೂ ಕೆಲವೊಮ್ಮೆ ಪುಟ್ಟಿಯ ಅಬೋಧ ಮಾತುಗಳು ಚೂರಿಯಂತೆ ಮನಸ್ಸನ್ನು ಗೀರುತ್ತವೆ. ಹುಟ್ಟುಹಬ್ಬದ ದಿನ ಗೆಳೆಯ ಗೆಳತಿಯರನ್ನು ಆಹ್ವಾನಿಸಿ ಕೇಕ್ ಕಟ್ ಮಾಡಿ ಸಂಭ್ರಮಿಸುತ್ತಿದ್ದ ಪುಟ್ಟಿ ಈ ಸಲ ತಾನೇ ಮುಂದಾಗಿ ಹೇಳಿದ್ದಾಳೆ,

“ಕೇಕ್ ತಿನ್ಬಾರ್ದು ಅಲ್ವಾ ಅಮ್ಮ? ನಂಗೆ ಕೇಕ್ ಅಂದ್ರೆ ಇಷ್ಟ ಇಲ್ಲ. ಹಾಗೇ ಬರ್ತ್‍ಡೇ ಮಾಡ್ಕೋತೀನಿ..”

ಕೇಕು, ಚಾಕೊಲೇಟು, ಐಸ್‍ಕ್ರೀಂ ಅಂದರೆ ಮೂಗು ಕುಯ್ಯಿಸಿಕೊಳ್ಳುತ್ತಿದ್ದ ಕಂದನ ಬಾಯಲ್ಲಿ ಇಂತಾ ಮಾತೇ? ಹೆತ್ತವರನ್ನು ಖುಷಿಪಡಿಸಲು ಮಗು ವೈರಾಗ್ಯದ ಮಾತಾಡುತ್ತಿದೆಯೇ? ಉಮ್ಮಳಿಸಿ ಬಂದ ದುಃಖ ತಡೆಯಲು ಶತಪ್ರಯತ್ನ ಮಾಡಬೇಕಾಯ್ತು ಸುಮಿತ್ರಾ.

                                       *******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಪದ ಕುಸಿಯೆ ನೆಲವಿಹುದು”

  1. ಬಹಳ ಚೆನ್ನಾಗಿದೆ ವಸುಮತಿಯವರೆ. ಈ ಬಗ್ಗೆ ಇತ್ತೀಚೆಗಿನ ಸುಧಾದಲ್ಲಿ ಮಾಹಿತಿಪೂರ್ಣ ಲೇಖನವೂ ಬಂದಿದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter