ಜಯಂತ ಕಾಯ್ಕಿಣಿ ಅವರ ಆಯ್ದ ಕಥೆಗಳು

ಜಯಂತ ಕಾಯ್ಕಿಣಿ ಕನ್ನಡದ ಮಹತ್ವದ ಕಥೆಗಾರರಲ್ಲೊಬ್ಬರು. ತುಂಬ ಚಿಕ್ಕ ವಯಸ್ಸಿನಲ್ಲೇ ಬರವಣಿಗೆ ಆರಂಭಿಸಿದ ಜಯಂತರು ಇದುವರೆಗೆ ಸುಮಾರು ಎಪ್ಪತ್ತಕ್ಕೂ ಅಧಿಕ ಕಥೆಗಳನ್ನು ಬರೆದಿದ್ದಾರೆ. ಜಯಂತರ ಸಮೃದ್ಧ ಕಥನ ಸಾಹಿತ್ಯದಲ್ಲಿ ಅನೇಕ ಉತ್ತಮ ಕಥೆಗಳಿವೆ. ಅದೇ ರೀತಿ ವಿವಿಧ ಪತ್ರಿಕೆ ಮತ್ತು ವಿಶೇಷಾಂಕಗಳಿಗಾಗಿ ಬರೆದ ಸಾಧಾರಣ ಕಥೆಗಳೂ ಇವೆ.

“ತೆರೆದಷ್ಟೇ ಬಾಗಿಲು”, “ಗಾಳ”, “ದಗಡೂ ಪರಬನ ಅಶ್ವಮೇಧ”, “ಅಮೃತಬಳ್ಳಿ ಕಷಾಯ”, “ಬಣ್ಣದ ಕಾಲು”, “ತೂಫಾನ್ ಮೇಲ್”, “ಚಾರ್ ಮಿನಾರ್” ಮತ್ತು “ಅನಾರ್ಕಲಿಯ ಸೇಫ್ಟಿ ಪಿನ್ನು” ಜಯಂತರ ಪ್ರಕಟಿತ ಕಥಾಸಂಕಲನಗಳು.

ಜಯಂತ ಕಾಯ್ಕಿಣಿಯವರು ಮುಂಬಯಿ ಕಥೆಗಾರರೆಂದೇ ಪ್ರಸಿದ್ಧರು. ಜಯಂತರು ಮುಂಬಯಿಯನ್ನು ಬಿಟ್ಟರೂ ಮುಂಬಯಿ ಅವರನ್ನು ಬಿಟ್ಟಿಲ್ಲ. ಮುಂಬಯಿ ಒಂದು ರೂಪಕವಾಗಿ ಮತ್ತೆ ಮತ್ತೆ ಅವರ ಕಥೆಗಳಲ್ಲಿ ಕಾಣಿಸಿಕೊಂಡಿದೆ. ಇತ್ತೀಚೆಗೆ ಇಂಗ್ಲಿಷಿನಲ್ಲಿ ಪ್ರಕಟವಾದ ಜಯಂತರ ಆಯ್ದ ಮುಂಬೈ ಕಥೆಗಳ ಸಂಕಲನ “No Presents Please…”  ಕೃತಿಗೆ ಪ್ರತಿಷ್ಠಿತ The DSC Prize for South Asian Literature ಲಭಿಸಿದೆ.*

ಪ್ರಸ್ತುತ “ಜಯಂತ ಕಾಯ್ಕಿಣಿ ಅವರ ಆಯ್ದ ಕಥೆಗಳು” ಪುಸ್ತಕ ಅವರ ಆಯ್ದ ಹನ್ನೊಂದು ಕಥೆಗಳನ್ನು ಹೊಂದಿದೆ. “ಕೆ.ವಿ.ಸುಬ್ಬಣ್ಣ ನೆನಪಿನ ಮೊದಲ ಓದು ಪುಸ್ತಕ ಮಾಲೆ”ಯಲ್ಲಿ ಈ ಪುಸ್ತಕವನ್ನು ಅಕ್ಷರ ಪ್ರಕಾಶನದವರು ತುಂಬ ಅಂದವಾಗಿ ಪ್ರಕಟಿಸಿದ್ದಾರೆ. ಇಂತಹ ಪ್ರಕಟಣೆಗಳಿಗಿರುವ ಸೀಮಿತ ಉದ್ದೇಶ ಮತ್ತು ಪುಟಮಿತಿಯ ಕಾರಣದಿಂದ ಜಯಂತರ ಅನೇಕ ಒಳ್ಳೆಯ ಕಥೆಗಳು ಈ ಸಂಕಲನದಲ್ಲಿ ಸೇರಿಲ್ಲ.**

ಈ ಸಂಕಲನದಲ್ಲಿ “ದಗಡೂ ಪರಬನ ಅಶ್ವಮೇಧ”, “ಅಮೃತಬಳ್ಳಿ ಕಷಾಯ”, “ಸೇವಂತಿ ಹೂವಿನ ಟ್ರಕ್ಕು”, “ಟಿಕ್ ಟಿಕ್ ಗೆಳೆಯ”, “ನೋ ಪ್ರೆಸೆಂಟ್ಸ್ ಪ್ಲೀಸ್…” ಮತ್ತು “ಕಣ್ಮರೆಯ ಕಾಡು” ಸೇರಿದಂತೆ ಹನ್ನೊಂದು ಕಥೆಗಳಿವೆ. ಪ್ರಸ್ತುತ ಲೇಖನದಲ್ಲಿ ಈ ಸಂಕಲನದಲ್ಲಿರುವ ಕೆಲವು ಉತ್ತಮ ಕಥೆಗಳ ಕುರಿತು ಚರ್ಚಿಸಿದ್ದೇನೆ.

“ದಗಡೂ ಪರಬನ ಅಶ್ವಮೇಧ” ವಿಚಿತ್ರ ರೀತಿಯಲ್ಲಿ ನಡೆಯುವ ದಗಡೂ ಪರಬನ ಮದುವೆಯ ಕಥೆ. ದಗಡೂ ಪರಬನ ಮದುವೆಯ ಸಲುವಾಗಿ ಭಾಡಿಗೆಗೆ ತಂದ ಕುದುರೆ ಮದುಮಗನ ಸಹಿತ ಪರಾರಿಯಾಗುತ್ತದೆ. ಕುದುರೆಯ ಹುಚ್ಚು ಓಟ ದಗಡೂನ ಜೀವನದ ದಿಕ್ಕನ್ನೇ ಬದಲಿಸಿ ದಗಡೂ ಕುದುರೆಯ ಮಾಲೀಕನ ಮಗಳು ಭಾನುಮತಿಯನ್ನು ಮದುವೆಯಾಗುವಂತಾಗುತ್ತದೆ.

ಈ ಕಥೆಯನ್ನು ಓದುವಾಗ ಕನ್ನಡದ ಖ್ಯಾತ ಲೇಖಕರಾದ ಪೂರ್ಣಚಂದ್ರ ತೇಜಸ್ವಿಯವರ “ಕೃಷ್ಣೇಗೌಡನ ಆನೆ” ಕಥೆಯ ನೆನಪಾಗುತ್ತದೆ. ಈ ಕಥೆಯಲ್ಲಿ ನಡೆಯುವ ಘಟನೆಗಳು ಮೇಲ್ನೋಟಕ್ಕೆ ತುಂಬ ವಿಚಿತ್ರ ಮತ್ತು ಕೃತಕವೆನ್ನಿಸಿದರೂ ಸಹ ಜೀವನದಲ್ಲಿ ಹೀಗೂ ನಡೆಯಬಹುದು ಎಂದು ಓದುಗರು ಒಪ್ಪುವಂತೆ ಮಾಡುವಲ್ಲಿ ಜಯಂತರು ಯಶಸ್ವಿಯಾಗಿದ್ದಾರೆ. ಭಿನ್ನ ಬಗೆಯ ಕಥಾವಸ್ತು ಮತ್ತು ಲವಲವಿಕೆಯ ನಿರೂಪಣೆಯಿಂದ “ದಗಡೂ ಪರಬನ ಅಶ್ವಮೇಧ” ಕಥೆ ಗಮನ ಸೆಳೆಯುತ್ತದೆ. ಜಯಂತರಿಗೆ ಸಾಕಷ್ಟು ಹೆಸರು ತಂದುಕೊಟ್ಟ ಕಥೆಯಿದು.***

“ಅಮೃತಬಳ್ಳಿ ಕಷಾಯ” ಕಥೆ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬ ಸಂದೇಶ ನೀಡುತ್ತದೆ. ಗಂಗಾಧರ ಮತ್ತು ಆತನ ತಾಯಿ ಮಾಯಿ ಈ ಕಥೆಯ ಕೇಂದ್ರ ಪಾತ್ರಗಳು. ಚಾಳಿನ ಎಲ್ಲ ಜನರಿಗೂ ಬೇಕಾದವಳಾದ ಮಾಯಿ ಪರೋಪಕಾರಿ. ಯಾರಿಗೇ ತೊಂದರೆಯಾದರೂ ತನ್ನ ಕೈಲಾದ ಸಹಾಯ ಮಾಡಬಯಸುವ ಮಾಯಿಯ “ಅಮೃತಬಳ್ಳಿ ಕಷಾಯ” ಚಾಳಿಗೆಲ್ಲ ಪ್ರಸಿದ್ಧ. ಮಾಯಿಯಂತೆಯೇ ಒಳ್ಳೆಯವನಾದ ಗಂಗಾಧರ ಲಾವಾರಿಸ್ ಫೋಟೋಗಳನ್ನೇ ತನ್ನ ತಂದೆ – ತಾಯಿ ಫೋಟೋಗಳೆಂದು ನಂಬಿಸಿ ಮದುವೆಯಾಗಬಯಸುವ ಅನಾಥ ಹುಡುಗನೊಬ್ಬನಿಗೆ ತನ್ನ ಅಪ್ಪನ ಫೋಟೋವನ್ನೇ ನೀಡುತ್ತಾನೆ. ಕಥೆಯ ಅಂತ್ಯ ತುಂಬ ಚೆನ್ನಾಗಿ ಮೂಡಿಬಂದಿದ್ದು ಈ ಕಥೆಗೆ ಹೊಸ ಅರ್ಥ ನೀಡಿದೆ.

“ನೋ ಪ್ರಸೆಂಟ್ಸ್ ಪ್ಲೀಸ್…” ಕಥೆ ಅಸಾವರಿ ಮತ್ತು ಪೋಪಟ್ ಎಂಬ ಪ್ರೇಮಿಗಳ ಕಥೆ. ಮುಂಬೈ ಮಹಾನಗರದಲ್ಲಿ ಜನಸಾಗರದ ಮಧ್ಯೆ ಬದುಕುತ್ತಿದ್ದರೂ ಅನಾಥರಾದ ಅಸಾವರಿ ಮತ್ತು ಪೋಪಟರ ಹಲವು ವರ್ಷಗಳ ಪ್ರೇಮ ವಿವಾಹದಲ್ಲಿ ಪರ್ಯವಸಾನಗೊಳ್ಳಲಿದೆ. ಲಗ್ನಪತ್ರಿಕೆ ಛಾಪಿಸಿ ತಮಗೆ ಪರಿಚಿತರಾದ ತ್ರಿಪಾಠಿಯಂತಹ ಕೆಲವೇ ಜನರ ಸಮ್ಮುಖದಲ್ಲಿ ವಿವಾಹಿತರಾಗಬಯಸುವ ಪ್ರೇಮಿಗಳ ಸಡಗರ, ಸಂಭ್ರಮ ಮತ್ತು ವಿಚಿತ್ರ ಬಗೆಯ ತಳಮಳವನ್ನು ಈ ಕಥೆಯಲ್ಲಿ ಕಾಣಬಹುದು. ಅಸಾವರಿ ಮತ್ತು ಪೋಪಟರ ಪಾತ್ರಗಳು ಮುಂಬೈನಂತಹ ಮಹಾನಗರದಲ್ಲಿರುವ ಅಸಂಖ್ಯಾತ ಪ್ರೇಮಿಗಳ ನೋವು – ನಲಿವುಗಳನ್ನು ಪ್ರತಿನಿಧಿಸುವಂತೆ ಭಾಸವಾಗುತ್ತದೆ.

“ಟಿಕ್ ಟಿಕ್ ಗೆಳೆಯ” ಕಥೆ ಮಧುಬನಿ ಎಂಬ ಸೂಕ್ಷ್ಮ ಸಂವೇದನೆಯ ಹುಡುಗಿಯ ಮೇಲೆ ಭೋಪಾಲ ಅನಿಲ ದುರಂತ ಉಂಟು ಮಾಡಿದ ಪರಿಣಾಮವನ್ನು ತುಂಬ ಚೆನ್ನಾಗಿ ಚಿತ್ರಿಸಿದೆ. ಟಿ.ವಿ.ಯಲ್ಲಿ ಬರುವ ಕ್ವಿಝ್ ಸ್ಪರ್ಧೆಯಲ್ಲಿ ಭಾಗವಹಿಸಿದ ಭೋಪಾಲದ ಮಧುಬನಿಗೆ ಕ್ವಿಝ್ ಮಾಸ್ಟರ್ ಭೋಪಾಲ ದುರಂತದ ಕುರಿತು ಪ್ರಶ್ನೆ ಕೇಳಿದಾಗ ಭೋಪಾಲ್ ಅನಿಲ ದುರಂತಕ್ಕೆ ಪ್ರತ್ಯಕ್ಷದರ್ಶಿಯಾಗಿದ್ದ ಮಧುಬನಿ ಬವಳಿ ಬಂದಂತಾಗಿ ಕುಸಿದು ಬೀಳುತ್ತಾಳೆ.

ಭೋಪಾಲ ಅನಿಲ ದುರಂತ ಕ್ವಿಝ್ ಮಾಸ್ಟರನಿಗೆ ಕೇವಲ ಒಂದು ಪ್ರಶ್ನೆಯಷ್ಟೇ ಆದರೆ ಅದು ಮಧುಬನಿಗೆ ಕೇವಲ ಪ್ರಶ್ನೆಯಲ್ಲ, ಆ ಪ್ರಶ್ನೆಯೊಂದಿಗೆ ಮಧುಬನಿಗೆ ಎಂದೂ ಮರೆಯಲಾಗದ ಆ ಘೋರ ದುರಂತದ ಕುರಿತ ರುದ್ರಭೀಕರ ನೆನಪುಗಳಿವೆ. ಭೋಪಾಲ ಅನಿಲ ದುರಂತದ ಕರಾಳತೆಯನ್ನು ಕಥೆಯ ಮೂಲಕ ಓದುಗರಿಗೆ ತಲುಪಿಸುವಲ್ಲಿ “ಟಿಕ್ ಟಿಕ್ ಗೆಳೆಯ” ಕಥೆ ಯಶಸ್ವಿಯಾಗಿದೆ.

“ಕಣ್ಮರೆಯ ಕಾಡು” ಒಂದು ಸಣ್ಣ ಜಗಳದ ಕಾರಣದಿಂದ ಎಂದೋ ಮನೆ ಬಿಟ್ಟು ಹೋದ ಛೋಟೂ ಎಂಬ ಪ್ರೀತಿಯ ತಮ್ಮನಿಗಾಗಿ ಅವನ ಅಕ್ಕ ಕುಸುಮ ನಡೆಸುವ ಹುಡುಕಾಟದ ಕಥೆ. ಇಂದಲ್ಲ ನಾಳೆ ಆತ ಬಂದೇ ಬರುವನೆಂಬ ಭರವಸೆಯಿಂದ ಕುಸುಮ ಆತನಿಗಾಗಿ ಇನ್ನಿಲ್ಲದ ಹುಡುಕಾಟ ನಡೆಸುತ್ತಾಳೆ. ಒಂದೆಡೆಯಲ್ಲಿ ಛೋಟೂನ ಬಗೆಗೆ ಒಂದು ಸಣ್ಣ ಸುಳಿವು ಸಿಕ್ಕರೂ ಸಾಕು ಮತ್ತೆ ಛೋಟೂ ಸಿಗಬಹುದೆಂಬ ಆಸೆಯಿಂದ ಹುಡುಕಲು ಹೊರಡುವ ಕುಸುಮಳಿದ್ದರೆ, ಇನ್ನೊಂದೆಡೆ ಛೋಟೂ ಇನ್ನೆಂದೂ ಮರಳಿ ಮನೆಗೆ ಬರದಿರಲೆಂದು ಮನಸಾರೆ ಬಯಸುವ ಸ್ವಾರ್ಥಿಯಾದ ಆತನ ಇನ್ನೊಬ್ಬ ಅಕ್ಕ ಪೂರ್ವಿ ಮತ್ತು ಅವಳ ಗಂಡ ಇದ್ದಾರೆ. ಒಂದೇ ಕುಟುಂಬದಲ್ಲಿ ವಾಸಿಸುವ ಹಲವು ಜನರ ವಿಭಿನ್ನ ಬಗೆಯ ಮನಸ್ಥಿತಿಯನ್ನು ಜಯಂತರು ತುಂಬ ಚೆನ್ನಾಗಿ ಚಿತ್ರಿಸಿದ್ದಾರೆ. ಸಣ್ಣ ಸಣ್ಣ ವಿವರಗಳನ್ನು ಸಹ ಜಯಂತರು ಎಷ್ಟು ಸೂಕ್ಷ್ಮವಾಗಿ ಗಮನಿಸಿ ಕಥೆಯಲ್ಲಿ ತರುತ್ತಾರೆಂಬುದಕ್ಕೆ ಕಥೆಯಲ್ಲಿ ಬರುವ ಕೆಳಗಿನ ಸಾಲುಗಳನ್ನು ಗಮನಿಸಬಹುದು.

“ಕುಸುಮಾಳೊಬ್ಬಳೇ ಬಾಗಿಲಲ್ಲಿ ನಿಂತು, ಕೊನೆಯ ಬೀದಿ ದೀಪದ ಅಡಿಗೆ ಅವನು ಕುಂಟುತ್ತಾ ದೂರವಾಗುತ್ತ ಮರೆಯಾಗುವವರೆಗೆ ನೋಡಿದಳು. ಆಗಷ್ಟೆ ತಂತಿಯಿಂದ ಜಗ್ಗಿ ಹಾಕಿಕೊಂಡಿದ್ದ ಅವನ ಇಸ್ತ್ರಿಯಿಲ್ಲದ ತಿಳಿಹಳದಿ ಟೀ ಶರ್ಟಿನ ಬೆನ್ನಿನ ಮೇಲಿನ ತಂತಿಯ ಕುರುಹಿನ ನೆರಿಗೆಯ ಗೆರೆ ಬೀದಿ ದೀಪದಲ್ಲೂ ಸ್ಪಷ್ಟವಾಗಿ ಕಾಣುತ್ತಿತ್ತು…”

(ಪುಟ 76)

“ಸೇವಂತಿ ಹೂವಿನ ಟ್ರಕ್ಕು” ದುರ್ಗಿಯ ದುರಂತ ಕಥೆಯನ್ನು ಹೇಳುತ್ತದೆ. ಮುಂಬೈ ಎಂಬ ಜನಾರಣ್ಯದ ಮುನ್ಸಿಪಲ್ ಚಾಳಿನ ವಾಸಿಯಾದ ಸುಧೀರ ಮಹಾಜನ ಕೆಳ ಮಧ್ಯಮವರ್ಗದ ವ್ಯಕ್ತಿ. ಕಾರ್ಖಾನೆಯೊಂದರಲ್ಲಿ ಸಾಧಾರಣ ಉದ್ಯೋಗಿಯಾದ ಸುಧೀರ ಮಹಾಜನ ಹೆಂಡತಿ ಜ್ಯೋತಿ ಮತ್ತು ಮಕ್ಕಳಾದ ರಷ್ಮಿ ಹಾಗೂ ವರ್ಷಾರೊಂದಿಗೆ ಹಲವು ವರ್ಷಗಳಿಂದ ಆ ಸಾಧಾರಣ ಚಾಳಿನಲ್ಲಿ ವಾಸಿಸುತ್ತಿದ್ದಾನೆ. ಇವನ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಮನೆಗೆಲಸ ಮಾಡಲು ಬಂದು ತನ್ನ ಜೀವವನ್ನೇ ಈ ಕುಟುಂಬಕ್ಕಾಗಿ ತೇಯ್ದ ಅರವತ್ತರ ಹರೆಯದ ದುರ್ಗಿ ಈಗ ತೀವ್ರ ಅನಾರೋಗ್ಯದಿಂದಾಗಿ ಅನ್ನ, ನೀರು ಬಿಟ್ಟು ಸಾವಿಗಾಗಿ ಕಾಯುತ್ತಾ ಮಲಗಿದ್ದಾಳೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ದುರ್ಗಿಯ ದಯನೀಯ ಸ್ಥಿತಿಯನ್ನು ಜಯಂತರು ತುಂಬ ಚೆನ್ನಾಗಿ ಅಕ್ಷರಗಳಲ್ಲಿ ಹಿಡಿದಿಟ್ಟಿದ್ದಾರೆ.

“ಅಂಥ ನಿತ್ರಾಣದಲ್ಲೂ ಹೊಟ್ಟೆ ಹೊಸೆದುಕೊಂಡು ದುರ್ಗಿ ಈ ಕಿಟಕಿಗೆ ಬರುತ್ತಾಳೆ. ಹೊಸ ದಿನವೊಂದು ಬೀದಿಯಲ್ಲಿ ಹರಿದಾಡುವುದನ್ನು ಕಂಡಿದ್ದೇ ಋಣದ ಹೂವೊಂದು ಅರಳಿದಂತೆ ಕಣ್ಣರಳಿಸುತ್ತಾಳೆ”.

(ಪುಟ 45)

ಒಂದು ಕಾಲದಲ್ಲಿ ಮಹಾಜನ ಕುಟುಂಬದ ಆಧಾರವಾಗಿದ್ದ ದುರ್ಗಿ ಈಗ ಆ ಕುಟುಂಬಕ್ಕೆ ಭಾರವಾಗಿದ್ದಾಳೆ. ಅವಳಿಗೆ ಚಿಕಿತ್ಸೆ ಕೊಡಿಸುವ ಶಕ್ತಿಯಿಲ್ಲದೆ ಅವಳನ್ನು ನಿವಾರಿಸಿಕೊಳ್ಳಲು ಮಹಾಜನ ಕುಟುಂಬ ಪಡುವ ಪಾಡು ಮತ್ತು ದುರ್ಗಿಯ ಕುರಿತ ಅವರ ಬದಲಾದ ಮನೋಭಾವ ಮನ ಕಲಕುವಂತೆ ಮಾಡುತ್ತದೆ. ದುರ್ಗಿಯ ದಯನೀಯ ಸ್ಥಿತಿ ನೋಡಿದಾಗ ಸಾವು ಸಹ ದುರ್ಗಿಯ ವಿಷಯದಲ್ಲಿ ನಿಷ್ಕರುಣಿಯಾದಂತೆ ತೋರುತ್ತದೆ. ಅರೆಜೀವವಾದ ದುರ್ಗಿಗೀಗ ತೆರೆದ ಕಿಟಕಿಯಿಂದ ಕಾಣುವ ಸೇವಂತಿ ಹೂವಿನ ಟ್ರಕ್ಕು ಹಳೆಯ ದಿನಗಳ ನೆನಪು ಮಾಡಿಕೊಡುತ್ತದೆ.

“ಆದರೆ ಮೂಲೆಯಲ್ಲಿದ್ದ ಸೇವಂತಿ ಹೂಗಳ ಟ್ರಕ್ಕು ಹಾಗೇ ನಿಂತುಕೊಂಡಿದೆ. ಕಣ್ಣು ಬಾಡುವ ತನಕ ನೋಡಿ ಮತ್ತೆ ತನ್ನ ಹಾಸಿಗೆಗೆ ಹೊಟ್ಟೆ ಹೊಸೆದುಕೊಂಡು ವಾಪಸಾದಳು. ಒರಗಿದ ಅವಳ ಕಣ್ಣಲ್ಲಿ ಸೇವಂತಿ ಹೂವು ತುಂಬಿದ ಟ್ರಕ್ಕು ಖಾಲಿಯಾಗದೆ ಹಾಗೇ ನಿಂತುಕೊಂಡಿತ್ತು”.

(ಪುಟ 49)

ಮಹಾಜನ ಕುಟುಂಬಕ್ಕೆ ದುರ್ಗಿಗೆ ಚಿಕಿತ್ಸೆ ಕೊಡಿಸುವಷ್ಟು ಶಕ್ತಿಯಿಲ್ಲ. ಉಳಿಸಿದ ಅಲ್ಪಸ್ವಲ್ಪ ಹಣದಲ್ಲಿ ಅಷ್ಟೇನೂ ಹೇಳಿಕೊಳ್ಳುವ ಹಾಗಿರದ ಬೆಳೆದು ನಿಂತ ಹೆಣ್ಣು ಮಕ್ಕಳ ಮದುವೆ ಮಾಡಬೇಕಿದೆ. ಆ ಪುಟ್ಟ ಕುಟುಂಬಕ್ಕೆ ಬೇರೆ ಆಯ್ಕೆಗಳೇ ಇಲ್ಲದಂತಾದಾಗ ಕೊನೆಯ ಆಯ್ಕೆಯೆಂಬಂತೆ ದುರ್ಗಿಯನ್ನು ನಿವಾರಿಸಿಕೊಳ್ಳಲು ಅವಳಿಗೆ ನಿದ್ರೆ ಮಾತ್ರೆ ನೀಡಲು ನಿರ್ಧರಿಸುತ್ತಾರೆ. ಇದೆಲ್ಲದರ ಅರಿವಿರುವ ದುರ್ಗಿಯೂ ಸಹ ಇದಕ್ಕೊಪ್ಪುತ್ತಾಳೆ. ಮಹಾಜನ ದಂಪತಿ ನೀಡುವ ಗುಳಿಗೆಗಳನ್ನು “ನಾಳೆ ತಗೋತನೆ” ಎಂದು ಹೇಳಿ ದುರ್ಗಿ ತನ್ನ ಸಾವನ್ನು ಒಂದು ದಿನದ ಮಟ್ಟಿಗೆ ಮುಂದೂಡವುದರೊಂದಿಗೆ ಕಥೆ ಮುಕ್ತಾಯವಾಗುತ್ತದೆ. ಇಂತಹ ಹೃದಯವಿದ್ರಾವಕ ಸನ್ನಿವೇಶವನ್ನು ಜಯಂತರು ತುಂಬ ಸಂಯಮದಿಂದ ನಿರೂಪಿಸುತ್ತಾರೆ. ಕಥೆಯ ಅಂತ್ಯ ಹೃದಯ ಕಲಕುವಂತಿದ್ದು ಓದುಗರ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

“ಇನ್ನೇನು ಯಾರೋ ಬಂದು ಈ ಟ್ರಕ್ಕಿನ ಬಾಗಿಲು ತೆಗೆದು ಹಳದಿ ಹೂವಿನ ರಾಶಿಯಲ್ಲಿ ನಿಂತು ಸಲಿಕೆಯಿಂದ ಗೋರಿ ಗೋರಿ ರಸ್ತೆಗೆ ಹೂವು ಸುರಿಯಲಿರುವವರು. ಈ ಯುಗದಲ್ಲಿಯೇ ಅತ್ಯಂತ ಉದ್ದವಾದ ಈ ರಾತ್ರಿ ತನ್ನೆಲ್ಲ ಶಕ್ತಿಯಿಂದ ನಾಳೆಯನ್ನು ನೂಕಿ ನಿಂತಿರುವುದು”.

(ಪುಟ 50)

ಮಹಾಜನ ಕುಟುಂಬದ ಕಾರ್ಯ ತೀರ ಅಮಾನವೀಯವೆನ್ನಿಸಿದರೂ ಅವರಿಗೆ ಬೇರೆ ಆಯ್ಕೆಗಳಿಲ್ಲ. ಕೆಲವು ಸಂದರ್ಭಗಳಲ್ಲಿ ಮನುಷ್ಯ ತೀರ ಕ್ರೂರವಾಗಿ ವರ್ತಿಸುವ ಅನಿವಾರ್ಯತೆ ಉಂಟಾಗುತ್ತದೆ. ಸಮಯ, ಸಂದರ್ಭ ಮನುಷ್ಯ ಕೆಲವೊಮ್ಮೆ ಪಾಶವೀ ಕೃತ್ಯ ಎಸಗುವಂತೆ ಮಾಡುತ್ತವೆ. ಕಥೆಗಾರ ಇಲ್ಲಿ ಯಾರನ್ನೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಿಲ್ಲ. ಜಯಂತರು ಸಂಪೂರ್ಣ ಹೊರಗಿದ್ದುಕೊಂಡು ತುಂಬ ಸಂಯಮದಿಂದ ಕಥೆಯನ್ನು ನಿರುದ್ವಿಗ್ನವಾಗಿ ನಿರೂಪಿಸುತ್ತಾ (ತೃತೀಯ ಪುರುಷ ನಿರೂಪಣೆ) ಹೋಗುತ್ತಾರೆ. ಸಾಧಾರಣ ಲೇಖಕರ ಕೈಯಲ್ಲಿ ಗೋಳಿನ ಕಥೆಯಾಗಬಹುದಾಗಿದ್ದ ಇಂತಹ ಕಥಾವಸ್ತು ಜಯಂತರ ಕೈಯಲ್ಲಿ ಒಂದು ಅತ್ಯುತ್ತಮ ಕಥೆಯಾಗಿ ರೂಪುಗೊಂಡಿದೆ. ಕಥೆಯ ಶೀರ್ಷಿಕೆಯಾದ “ಸೇವಂತಿ ಹೂವಿನ ಟ್ರಕ್ಕು” ದುರ್ಗಿಯ ಹಳೆಯ ನೆನಪುಗಳೊಂದಿಗೆ ಬೆಸೆದುಕೊಂಡಿದ್ದು ಸಾರ್ಥಕವಾಗಿ ಬಳಕೆಯಾಗಿದೆ. ಇದು ಈ ಸಂಕಲನದ ಶ್ರೇಷ್ಠ ಕಥೆ.

ಜಯಂತರು ತೀರ ಕ್ಷುಲ್ಲಕ ಎನ್ನಿಸುವಂತಹ, ದೈನಂದಿನ ಘಟನೆಗಳನ್ನು ಸಹ ಒಳ್ಳೆಯ ಕಥೆಗಳನ್ನಾಗಿ ಪರಿವರ್ತಿಸಬಲ್ಲ ಪ್ರತಿಭಾವಂತ ಲೇಖಕರು. ಮೊದಲಿನಿಂದಲೂ ತಮ್ಮ ಅನೇಕ ಕಥೆಗಳಲ್ಲಿ ಸಾಮಾನ್ಯ ಜನರ ಒಳ್ಳೆಯತನವನ್ನು ತುಂಬ ಸಡಗರದಿಂದ ಚಿತ್ರಿಸಿದ್ದಾರೆ. ಮುಂಬೈ ಮಹಾನಗರದ ಬಡ ಮತ್ತು ಕೆಳಮಧ್ಯಮ ವರ್ಗದ ಸಾಮಾನ್ಯರ ಬಗೆಗೆ ಕಥೆಗಳನ್ನು ಬರೆದಾಗಲೆಲ್ಲ ಜಯಂತರು ಯಶಸ್ಸು ಗಳಿಸಿದ್ದಾರೆ.

ಮೂಲತಃ ಕವಿಯಾದ ಜಯಂತರು ಕಾವ್ಯ, ಕಥನ ಅಥವಾ ಪ್ರಬಂಧ ಏನೇ ಬರೆಯಲಿ ಅದರಲ್ಲಿ ಕಾವ್ಯಮಯತೆ ಕಂಡು ಬರುವುದು ಸಹಜ. “ಸೇವಂತಿ ಹೂವಿನ ಟ್ರಕ್ಕು” ಸೇರಿದಂತೆ ಜಯಂತರ ಕೆಲವು ಒಳ್ಳೆಯ ಕಥೆಗಳಲ್ಲಿ ಬಳಸಿದ ಭಾಷೆ ಅವರ ಕವಿತೆಗಳಿಗಿಂತ ಹೆಚ್ಚು ಕಾವ್ಯಮಯವಾಗಿದೆ. ಒಟ್ಟಿನಲ್ಲಿ ಕೆಲವು ಮಿತಿಗಳ ನಡುವೆಯೂ “ಜಯಂತ ಕಾಯ್ಕಿಣಿ ಅವರ ಆಯ್ದ ಕಥೆಗಳು” ಪುಸ್ತಕ ಮೊದಲ ಬಾರಿಗೆ ಜಯಂತ ಕಾಯ್ಕಿಣಿಯವರ ಕಥೆಗಳನ್ನೋದುವವರಿಗೆ ಅವರ ಸಾಹಿತ್ಯದ ಕುರಿತು ಆಸಕ್ತಿಯನ್ನುಂಟುಮಾಡುವಲ್ಲಿ ಯಶಸ್ವಿಯಾಗಿದೆ.

ಅಡಿಟಿಪ್ಪಣಿಗಳು

* “No Presents Please…”  ಕೃತಿಯಲ್ಲಿ ಒಟ್ಟು ಹದಿನಾರು ಮುಂಬೈ ಕಥೆಗಳಿದ್ದು ಕನ್ನಡದ ಖ್ಯಾತ ಕಾದಂಬರಿಕಾರರಾದ ದಿ. ನಿರಂಜನರ ಮಗಳು ತೇಜಸ್ವಿ ನಿರಂಜನ ಅವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

** ತುಂಬ ಕಡಿಮೆ ಕಥೆಗಳನ್ನು ಬರೆದಿರುವ ರಾಘವೇಂದ್ರ ಖಾಸನೀಸ, ಶ್ರೀನಿವಾಸ ವೈದ್ಯ ಮತ್ತು ದೇವನೂರ ಮಹಾದೇವರಂತಹ ಲೇಖಕರ ಕಥೆಗಳ ಆಯ್ಕೆ ಸುಲಭದ ಕೆಲಸ. ಆದರೆ ಸಾಕಷ್ಟು ಸಂಖ್ಯೆಯಲ್ಲಿ ಕಥೆಗಳನ್ನು ಬರೆದಿರುವ ಯಶವಂತ ಚಿತ್ತಾಲ, ಯು.ಆರ್.ಅನಂತಮೂರ್ತಿ, ಶಾಂತಿನಾಥ ದೇಸಾಯಿ, ಪಿ.ಲಂಕೇಶ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಬೆಸಗರಹಳ್ಳಿ ರಾಮಣ್ಣ, ರಾಘವೇಂದ್ರ ಪಾಟೀಲ, ವೈದೇಹಿ, ಜಯಂತ ಕಾಯ್ಕಿಣಿ ಮತ್ತು ಕುಂವೀಯಂತಹ ಲೇಖಕರ ಕಥೆಗಳನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸ.

*** ಯಶವಂತ ಚಿತ್ತಾಲರ “ಸೆರೆ”, ಯು.ಆರ್.ಅನಂತಮೂರ್ತಿಯವರ “ಪ್ರಕೃತಿ”, ರಾಘವೇಂದ್ರ ಪಾಟೀಲರ “ಕಾಡಜ್ಜ” ಮತ್ತು ಜಯಂತ ಕಾಯ್ಕಿಣಿಯವರ “ದಗಡೂ ಪರಬನ ಅಶ್ವಮೇಧ” ಕಥೆಗಳನ್ನು ಕನ್ನಡದ ಬಹುತೇಕ ಪ್ರಾತಿನಿಧಿಕ ಆ್ಯಂಥಾಲಜಿಗಳಲ್ಲಿ ಮತ್ತೆ ಮತ್ತೆ ಸೇರಿಸಲಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಜಯಂತ ಕಾಯ್ಕಿಣಿ ಅವರ ಆಯ್ದ ಕಥೆಗಳು”

  1. ಮಹೇಶ್ವರಿ ಯು

    ಜಯಂತರು ಕನ್ನಡದ ಒಬ್ಬ ಉತ್ತಮ ಕತೆಗಾರ. ಅವರ ಅತ್ಯುತ್ತಮ ಕತೆಗಳನ್ನು ಗುರುತಿಸಿ ಮಾಡಿದ ಅವಲೋಕನ ಚೆನ್ನಾಗಿದೆ. ಹೊಸ ತಲೆಮಾರಿನವರು ಖಂಡಿತವಾಗಿ ಅವರ ಕತೆ ಗಳನ್ನು ಓದುವ ಅಗತ್ಯವಿದೆ.ಆ ನಿಟ್ಟಿನಲ್ಲಿ ಈ ಬರಹ ಒಂದು ಪ್ರೇರಣೆಯನ್ನು ನೀಡಲಿ.

  2. Raghavendra Mangalore

    ಹೊಸ ತಲೆಮಾರಿನವರು ಅತ್ಯಗತ್ಯವಾಗಿ ಓದಬೇಕು ಜಯಂತ್ ಕಾಯ್ಕಿಣಿ ಅವರ ಕಥೆಗಳನ್ನು. ಓದುವ ಆ ಅನುಭವವೇ ಬೇರೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter