ಹೀಗೊಂದು ಸನ್ಮಾನದ ಬವಣೆ….

“ಪ್ರಮುಖ  ಸಾಹಿತಿ ಗುಂಡಣ್ಣ ಅವರ  ಮನೆ  ಇದೇನಾ…” ಎಂದು ಅಪರಿಚಿತರೊಬ್ಬರು  ರಸ್ತೆಯಲ್ಲಿ ನಿಂತು ಕೇಳಿದರು.

ಅದಕ್ಕೆ ಉತ್ತರ ಬರುವ ಮೊದಲೇ ” ನಾನು  ಸೀನಪ್ಪ,   ತಾಯಿ ಭುವನೇಶ್ವರಿ ಸನ್ಮಾನ ಸಮಿತಿಯ ಖಾಯಂ ಅಧ್ಯಕ್ಷ… ನೂರಾರು ಸನ್ಮಾನ ಸಮಾರಂಭಗಳನ್ನು  ಈಗಾಗಲೇ ಯಶಸ್ವಿಗೊಳಿಸಿ ಜನಪ್ರಿಯನಾಗಿದ್ದಕ್ಕೆ ನನ್ನನ್ನು ಸನ್ಮಾನ ಸೀನಪ್ಪ  ಅಂತ ಸಾಹಿತಿಗಳು ಪ್ರೀತಿಯಿಂದ ಕರೆಯುತ್ತಾರೆ. ಇವರು ಪ್ರ. ಕಾ (ಪ್ರಧಾನ ಕಾರ್ಯದರ್ಶಿ)  ಬಸವರಾಜ  ಉರ್ಫ್ ಬಸ್ಯ” ಎಂದ ಆರಡಿ  ಎತ್ತರದ  ಅಜಾನುಭಾವಿ  ವ್ಯಕ್ತಿಯನ್ನು ಪರಿಚಯಸುತ್ತಾ..

ಅವರಿಬ್ಬರನ್ನು  ಆಶ್ಚರ್ಯದಿಂದ ನೋಡುತ್ತಾ…” ಹೌದು  ನಾನೇ ಗುಂಡಣ್ಣ… ಅದಿರಲಿ  ನಾನು  ಸಾಹಿತಿ ” ಅಂತ ಯಾರು ಹೇಳಿದರು  ಎಂದ  ಸಾಹಿತಿ ಎಂದು ಸಂಭೋಧಿಸಿದ್ದಕ್ಕೆ ಮನದಲ್ಲೇ  ಖುಷಿ ಪಡುತ್ತಾ…

“ಮಲ್ಲಿಗೆ ಹೂವಿನ ಪರಿಮಳದ ಬಗ್ಗೆ ಯಾರನ್ನಾದರೂ ಕೇಳಬೇಕೆ?…ನಿಮ್ಮನ್ನು ನೋಡಿದಕೊಡಲೇ  ಗೊತ್ತಾಗುತ್ತೆ ತಾವು ಸರಸ್ವತಿ ಪುತ್ರರು ಅಂತ…ಆದರೂ  ನೀವು ಕೇಳಿದಿರಿ ಅಂತ ಹೇಳುತ್ತೇನೆ ಅಷ್ಟೇ…ವಾಪಾಸು ಬರುವ ನಿಮ್ಮ ಸಾಹಿತ್ಯವನ್ನು ಹೊತ್ತು ತರುವ  ಪೋಸ್ಟ್ ಮ್ಯಾನ್ ಪರಶುರಾಮಪ್ಪ ನಿಮ್ಮ ಬಗ್ಗೆ ಎಲ್ಲಾ ತಿಳಿಸಿದ್ದಾರೆ ”  ಎಂದ ಸನ್ಮಾನ ಸೀನಪ್ಪ.

ಗುಂಡಣ್ಣನ ತಲೆಯಲ್ಲಿ ಇದ್ದಕ್ಕಿದ್ದಂತೆ ಜ್ಞಾನದ ದೀಪ  ಬೆಳಗಿತು. ಇವರು ಯಾರೋ ನನ್ನನ್ನೇ ಮುದ್ದಾಂ ಆಗಿ ಹುಡುಕಿಕೊಂಡು ಬಂದಿದ್ದಾರೆ…ಅಂದರೆ…”ಸನ್ಮಾನ ಏನಾದರೂ ಮಾಡುತ್ತಾರೋ ಹೇಗೆ..” ಎಂದುಕೊಂಡ ಮನಸಿನಲ್ಲೇ  ಮಂಡಿಗೆ  ತಿನ್ನುತ್ತಾ….ಆದರೆ  ಹೊರಗೆ  ಮಾತ್ರ  ಮಲ್ಲಿಕಾರ್ಜುನ ಖರ್ಗೆಯಂತೆ ಮುಖವನ್ನು  ಗಂಭೀರವಾಗಿಟ್ಟುಕೊಂಡ.

ಗುಂಡಣ್ಣನ ನಿರೀಕ್ಷೆಯನ್ನು ನಿಜವಾಗಿಸುವಂತೆ  ಸನ್ಮಾನ ಸೀನಪ್ಪ ” ನಮ್ಮ ಸನ್ಮಾನ ಸಮಿತಿಯಿಂದ ನಿಮ್ಮನ್ನು ಗೌರವಿಸಿ ಸನ್ಮಾನಿಸಬೇಕೆಂದು ಎಲ್ಲ ಸದಸ್ಯರು  ಒಟ್ಟಾಗಿ ನಿರ್ಣಯ ಕೈಗೊಂಡಿದ್ದೇವೆ. ದಯವಿಟ್ಟು ತಾವು ನಮ್ಮನ್ನು ನಿರಾಶೆಗೊಳಿಸಬಾರದು ” ಎಂದು ಗುಂಡಣ್ಣನ ಕೈಗಳನ್ನು  ಹಿಡಿದುಕೊಂಡು  ಅತಿ ವಿನಯದಿಂದ ಮನವಿ  ಮಾಡಿದ.

ಗುಂಡಣ್ಣನಿಗೆ ಅರೆ ಕ್ಷಣ ಸ್ವರ್ಗದಲ್ಲಿ ತೇಲಾಡಿದ ಹಿತ  ಅನುಭವವಾಯ್ತು…ಆದರೂ  ಆ ಆನಂದದಿಂದ ಬೇಗ ಹೊರ  ಬಂದು ” ಏನೋ.. ಕೆಲವು  ಕವನಗಳು ಕಥೆಗಳನ್ನು ಬರೆದದ್ದು ನಿಜ.. ಆದರೆ  ಯಾವ ಪತ್ರಿಕೆಯಲ್ಲೂ ಪ್ರಕಟವಾಗುವ  ಮುಂಚೆ ಸನ್ಮಾನ ಮಾಡಿಸಿಕೊಂಡರೆ  ಅಷ್ಟು ಚೆನ್ನಾಗಿರೋದಿಲ್ಲವೇನೋ…” ಎಂದ  ಮೃದು  ಮಧುರ  ಸ್ವರದಲ್ಲಿ ಜೋರಾಗಿ ಹೇಳಿದರೆ  ಆ ಸುವರ್ಣಾವಕಾಶ  ಎಲ್ಲಿ ತಪ್ಪುತ್ತದೋ ಎಂಬ ಭಯದಿಂದ..

ಸನ್ಮಾನ ಸೀನಪ್ಪ  ಹುಸಿ ಕೋಪ ತೋರಿಸುತ್ತಾ ” ಹಾಗಂದ್ರೆ ನಾನು ಒಪ್ಪಿಕೊಳ್ಳುವದಿಲ್ಲ ಸಾರ್.. ಪತ್ರಿಕೆಗಳಲ್ಲಿ  ನಿಮ್ಮ ಕಥೆಗಳು ಪ್ರಕಟವಾದರೆ  ಮಾತ್ರ ನಿಮ್ಮನ್ನು ಸಾಹಿತಿ ಎನ್ನಬೇಕೆ?… ಈಗಾಗಲೇ ನೀವು ಬರೆದ  ನಾಲ್ಕು ಕಥೆಗಳು – ನಲವತ್ತು  ಕವನಗಳು ವಾಟ್ಸಪ್ಪ್ ಫೇಸ್ಬುಕ್ ನಲ್ಲಿ ಶೇರ್  ಆಗಿ ಆಗಲೇ ರೈಸಿಂಗ್ ಸ್ಟಾರ್ ರೈಟರ್ ಅಂತ ನಿಮಗೆ ಸ್ಟೇಟಸ್  ತಂದು  ಕೊಟ್ಟದ್ದು ಸುಳ್ಳೇನು…” ಎಂದ  ಕೊಂಚ  ಗಂಭೀರ ಸ್ವರದಲ್ಲಿ.

ಆ ಹೊಗಳಿಕೆ ಕೇಳಿದ  ಗುಂಡಣ್ಣನ  ಮುಖ  ಹಿಗ್ಗಿ ಹಿರೇಕಾಯಿಯಂತಾಯಿತು…

ಕರೆದು  ಹುಡುಗಿಯನ್ನು ಮದುವೆ ಮಾಡಿ ಕೊಡ್ತೀವಿ ಎಂದಾಗ ‘ನೋ’ ಎನ್ನುವದು,  ಸನ್ಮಾನ ಮಾಡುತ್ತೇವೆ ಎಂದು ಮುಂದೆ ಬಂದಾಗ  ‘ಬೇಡ’  ಎನ್ನುವುದು ಎರಡೂ  ಒಂದೇ ಎಂದು  ಅರ್ಥವಾಯಿತು  ಗುಂಡಣ್ಣನಿಗೆ. ಈಗ ಬೇಡವೆಂದರೆ  ಜೀವನದಲ್ಲಿ ದೊಡ್ಡ ಅಪರಾಧ  ಮಾಡಿದ ಪಾಪ ಪ್ರಜ್ಞೆ ಸಾಯುವವರೆಗೆ  ಕಾಡುತ್ತದೆ ಎಂದು ಭಯವಾಯ್ತು. ಇಬ್ಬರೂ ಸಾಹಿತ್ಯ ಪ್ರೇಮಿಗಳನ್ನು  ಒಳಗೆ ಕರೆದು ಟಿಫನ್ – ಕಾಫಿ ವ್ಯವಸ್ಥೆ ಮಾಡಿದ. ಅವರು ತಿಂಡಿ ತಿಂದ  ಬಳಿಕ ತನ್ನ ಕಾವ್ಯ ಸಂಗ್ರಹಗಳಲ್ಲಿರುವ ತನಗಿಷ್ಟವಾದ ಒಂದೆರಡು ಕವಿತೆಗಳನ್ನು ಕವಿ  ಗೋಷ್ಠಿಗಳಲ್ಲಿ  ವಾಚಿಸುವಂತೆ  ಗಟ್ಟಿ ಧ್ವನಿಯಲ್ಲಿ   ಓದಲು ಶುರು ಮಾಡಿದ  ಗುಂಡಣ್ಣ.  ಆ ಅನಿರ್ಗಳ ಕವಿತಾ ವಾಚನ ಮತ್ತು ಅವುಗಳ  ಸೃಷ್ಟಿಕರ್ತನಿಗೆ ಬೆದರಿದ ಸನ್ಮಾನ ಸೀನಪ್ಪ  ಕೈ  ಮುಗಿದು “ಸಾರ್.. ಇನ್ನೊಂದು ಸಲ  ಯಾವಾಗಲಾದರೂ ಬಂದು  ನಿಧಾನವಾಗಿ  ಕವಿತೆ ಕೇಳುತ್ತೇವೆ.. ಈಗ ತಮಗೆ  ಯಾವ ಪ್ಯಾಕ್ ಬೇಕೋ  ಮೊದಲು ತಿಳಿಸಿ ಸಾರ್ ಸಾಕು…” ಎಂದು ಬೇಡಿಕೊಂಡ.

ಸನ್ಮಾನಕ್ಕೂ ಪ್ಯಾಕ್ ಗೂ ಸಂಬಂಧವೇನೆಂದು ಅರ್ಥವಾಗಲಿಲ್ಲ ಗುಂಡಣ್ಣನಿಗೆ. ತನ್ನ ಬಕ್ಕ ಶರೀರವನ್ನು  ನೋಡಿಕೊಳ್ಳುತ್ತಾ ಹೇಳಿದ ” ಸಿಕ್ಸ್ ಪ್ಯಾಕ್ ಸಲುವಾಗಿ ಬಹಳ  ಪ್ರಯತ್ನ ಮಾಡಿದೆ ಸಾರ್…  ಯಾಕೋ ನನ್ನ ಬಾಡಿ ಅದಕ್ಕೆ ಒಗ್ಗಲಿಲ್ಲ… ” ಎಂದ  ಬೇಸರದಿಂದ ಗುಂಡಣ್ಣ.

ಸನ್ಮಾನ ಸೀನಪ್ಪನಿಗೆ ಅದನ್ನು ಕೇಳಿ ಕೋಪ ಬಂತು.  ಆದರೂ ಸಹನೆಯಿಂದ
” ನಾನು ಹೇಳಿದ್ದು ನಿಮ್ಮ ಬಾಡಿ ಪ್ಯಾಕ್ ಬಗ್ಗೆ ಅಲ್ಲ ಸಾರ್….ನಾವು ಮಾಡುವ  ಸನ್ಮಾನದಲ್ಲಿ ನಿಮಗೆ ಯಾವ ಪ್ಯಾಕ್ ಬೇಕು ಅಂತ..ನಮ್ಮಲ್ಲಿ  ಎಕನಾಮಿ  ಪ್ಯಾಕ್, ಸಿಲ್ವರ್ ಪ್ಯಾಕ್, ಗೋಲ್ಡ್ ಪ್ಯಾಕ್ ಮತ್ತು ಡೈಮಂಡ್ ಪ್ಯಾಕ್ ಅಂತ ಇವೆ ” ಎಂದು ವಿವರಿಸಿದ.

ಗುಂಡಣ್ಣನಿಗೆ ಅರ್ಥವಾಗದೆ  ತಲೆ  ಕೆರೆದುಕೊಂಡ. ಆತನ  ಸಮಸ್ಯೆ ಅರ್ಥಮಾಡಿಕೊಂಡ ಪ್ರ. ಕಾ.ಬಸ್ಯ ಪ್ಯಾಕ್ ಗಳ  ಬಗ್ಗೆ ವಿವರವಾಗಿ ತಿಳಿಸಿದ
“ಎಕನಾಮಿ  ಪ್ಯಾಕ್ ಎಂದರೆ  ಗುಂಪಿನಲ್ಲಿ ಗೋವಿಂದ ಟೈಪ್.
ಇನ್ನೂರು  ಸನ್ಮಾನಿತರನ್ನು  ವೇದಿಕೆ ಮೇಲೆ ಒಬ್ಬೊಬ್ಬರನ್ನಾಗಿ ಕರೆದು  ಬೊಕೆ ಕೊಟ್ಟು ಶಲ್ಯ  ಹಾಕಿ ಸನ್ಮಾನ ಮಾಡುವದು. ಪ್ರಶಸ್ತಿ ಪತ್ರವನ್ನು ವಾಟ್ಸಪ್ಪ್ ಮುಖಾಂತರ ಕಳಿಸಲಾಗುವದು. ಈ ಪ್ಯಾಕ್ ದರ  ಕೇವಲ ಮೂರು ಸಾವಿರ ರೂಪಾಯಿಗಳು  ಮಾತ್ರ..”

ಸನ್ಮಾನ ಸೀನಪ್ಪ  ಕೂಡಲೇ ಆಡ್ಡ ಬಾಯಿ ಹಾಕಿ ನುಡಿದ ” ಗುಂಡಣ್ಣನಂತಹ  ಮಹಾ  ಸಾಹಿತಿಗೆ ಎಕಾನಮಿ  ಪ್ಯಾಕ್ ಅಂದರೆ  ಅವರಿಗೆ ಅವಮಾನ ಮಾಡಿದಂತಾಗುತ್ತದೆ..ಗೋಲ್ಡ್ ಅಥವಾ ಡೈಮಂಡ್ ಪ್ಯಾಕ್ ಆದರೆ  ಅವರ  ಘನತೆಗೆ ಸರಿ ಹೋಗುತ್ತದೆ. ” ಎಂದು ಮಾತು ನಿಲ್ಲಿಸಿ ಜುಬ್ಬಾದ ಜೇಬಿನಿಂದ ಒಂದು ಜರ್ದಾ ಪಾನ್  ತೆಗೆದು ಬಾಯಲ್ಲಿ ಇರಿಸಿಕೊಂಡು ಮಾತು ಮುಂದುವರೆಸಿದ.

” ಸಿಲ್ವರ್ ಪ್ಯಾಕಿನಲ್ಲಿ ಬೊಕೆ, ಶಾಲು  ಮತ್ತು  ವುಡ್ ನಲ್ಲಿ ಡಿಸೈನ್ ಮಾಡಿದ  ಶೀಲ್ಡ್ ಇರುತ್ತದೆ. ಇದರ  ದರ  ಐದು  ಸಾವಿರ ರೂಪಾಯಿಗಳು. ಇದು ಕೇವಲ ನೂರು ಜನಕ್ಕೆ ಮಾತ್ರ ಸೀಮಿತ. ಇನ್ನು ಗೋಲ್ಡ್ ಪ್ಯಾಕಿನಲ್ಲಿ  ಮಲ್ಲಿಗೆ ಹೂವಿನ ಹಾರ, ರೇಷ್ಮೆ ಶಾಲು ಮತ್ತು ಮೆಟಲ್ ಶೀಲ್ಡ್ ಒಳಗೊಂಡಿರುತ್ತವೆ.  ಇದರ  ರೇಟ್ ಏಳು ಸಾವಿರ ಮಾತ್ರ. ಇದು ಐವತ್ತು ಜನಗಳಿಗೆ  ಸೀಮಿತ. ಇನ್ನು ಕೊನೆಯದಾಗಿ  ಡೈಮಂಡ್ ಪ್ಯಾಕಿನಲ್ಲಿ ಒಂದು ಗುಲಾಬಿ ಹೂವಿನ ಹಾರ, ರೇಷ್ಮೆ ಶಾಲು  ಅಲ್ಲದೆ ಮೆಟಲ್ ಶೀಲ್ಡ್ ಗೆ ಬೆಳ್ಳಿ ಕೋಟಿಂಗ್ ಇರುತ್ತದೆ.  ಇದರ  ಬೆಲೆ ಹತ್ತು ಸಾವಿರ ರೂಪಾಯಿಗಳು  ಮಾತ್ರ. ಈ ಟಾಪ್ ರೇಟೆಡ್ ಸನ್ಮಾನ  ಕೇವಲ ಇಪ್ಪತ್ತೈದು ಜನಗಳಿಗೆ  ಮಾತ್ರ. ಈ ಗೋಲ್ಡ್ ಮತ್ತು ಡೈಮಂಡ್
ಫಲಾನುಭವಿಗಳಿಗೆ  ಸೆಲೆಬ್ರಿಟಿಗಳೊಂದಿಗೆ ಫೋಟೋ ಪ್ರೋಗ್ರಾಮ್ ಮತ್ತು ಅವರಿಂದ ಪ್ರತ್ಯೇಕ ಪ್ರಶಸ್ತಿ ಪತ್ರಗಳ ವಿತರಣೆ ಇರುತ್ತದೆ. ಈ ದರಗಳಲ್ಲಿ ಜಿ ಎಸ್ ಟಿ  ಕೂಡ ಸೇರಿರುತ್ತದೆ ”  ಎಂದು ಸನ್ಮಾನ ಸೀನಪ್ಪ  ಸಮಗ್ರವಾಗಿ ವಿವರಣೆ ನೀಡಿದ.

ಎಲ್ಲವನ್ನೂ ಶಾಂತವಾಗಿ ಆಲಿಸಿದ  ಗುಂಡಣ್ಣ ಕೊಂಚ ವ್ಯಂಗ್ಯವಾಗಿ ಪ್ರಶ್ನಿಸಿದ ” ಇಷ್ಟೇನಾ… ಇನ್ನು ಏನಾದರೂ  ಸ್ಪೆಷಲ್ ಇವೆಯಾ? “.

” ಯಾಕಿಲ್ಲ ಸಾರ್…. ಕೊನೆಯದಾಗಿ
ವಿ ಐ  ಪಿ ಸನ್ಮಾನ ಅಂತ ಇದೆ. ಇದು ಸ್ವಲ್ಪ ಕಾಸ್ಟ್ಲಿ ಅಷ್ಟೇ.. ಇಪ್ಪತ್ತೈದು ಸಾವಿರ  ಕೊಟ್ರೆ ನಿಮಗಾಗಿ  ಒಂದು ವಿಶೇಷ  ಸನ್ಮಾನ ಸಭೆ ಏರ್ಪಡಿಸುತ್ತೇವೆ. ದರ  ಸ್ವಲ್ಪ ಹೆಚ್ಚು ಅನಿಸಬಹುದು ಆದರೆ ಅದಕ್ಕೆ ತಕ್ಕಂತೆ ಸಮಾರಂಭ ಕೂಡ  ಅದ್ದೂರಿಯಾಗೇ ಇರುತ್ತದೆ. ನೀವು ದೊಡ್ಡ ಮನಸು  ಮಾಡಿ ಇನ್ನೊಂದಿಪ್ಪತ್ತೈದು ಸಾವಿರ ಕೊಟ್ಟರೆ ನಿಮಗೆ ರಾಜ್ಯ ಮಟ್ಟದ  ಬಿರುದು ದಯಪಾಲಿಸಿ  ವಿಜೃಂಭಣೆಯಿಂದ ಸನ್ಮಾನಿಸುತ್ತೇವೆ ” ಎಂದ  ಪ್ರ. ಕಾ. ಬಸ್ಯ ಹೆಮ್ಮೆಯಿಂದ.

ಗುಂಡಣ್ಣನ ಕಣ್ಣ ಮುಂದೆ ತನ್ನನ್ನು ಸನ್ಮಾನಿಸುವ ಭವ್ಯ ದೃಶ್ಯ ಅರೆಕ್ಷಣ ಮೆರವಣಿಗೆ ಮಾಡಿತು. ” ತಮ್ಮ ಸನ್ಮಾನದ ರೇಟ್ ಗಳು  ತುಂಬಾ ಜಾಸ್ತಿ ಇವೆ.  ಸಾಹಿತಿಯಾದ  ಬಳಿಕ  ನನಗೆ  ಇದು ಮೊದಲನೇ ಸನ್ಮಾನ ಭಾಗ್ಯ.. ಏನಾದರೂ  ಡಿಸ್ಕೌಂಟ್ ಕೊಟ್ಟರೆ ಚೆನ್ನಾಗಿರುತ್ತದೆ ” ಎಂದ ಗುಂಡಣ್ಣ.

” ಈಗ ಇರೋದೇ ಕರೋನದ ಕೆಟ್ಟ ದಿನಗಳು ಸಾರ್… ಪೆಟ್ರೋಲ್,  ಡೀಸೆಲ್ ಅಲ್ಲದೇ ಮತ್ತಿತರ  ಆಹಾರ  ಪದಾರ್ಥಗಳ ದರಗಳು ಆಕಾಶವನ್ನು ಮುತ್ತಿಕ್ಕಲು ಈಗಾಗಲೇ  ಪೈಪೋಟಿ ನಡೆಸಿವೆ….ನೀವು ಮೊದಲ ಸನ್ಮಾನ ಅಂತ ಹೇಳುತ್ತಿದ್ದಿರಿ ಅದಕ್ಕೆ ಹತ್ತು ಪರ್ಸೆಂಟ್ ಫ್ಲಾಟ್ ಡಿಸ್ಕೌಂಟ್ ನೀಡುತ್ತೇವೆ. ನೀವು ನಿಮ್ಮಂತಹ  ಹತ್ತು ಸನ್ಮಾನಿತರನ್ನು ಜೊತೆಗೂಡಿಸಿದರೆ ಎಪ್ಪತೈದು  ಪರ್ಸೆಂಟ್ ಡಿಸ್ಕೌಂಟ್ ನೀಡಲು  ನಾವು ಸಿದ್ಧರಿದ್ದೇವೆ.” ಎಂದು ಹುರಿದುಂಬಿಸಿದ ಸನ್ಮಾನ ಸೀನಪ್ಪ.

ಚೌಕಾಸಿ ವ್ಯಾಪಾರ ಮಾಡುವದರಲ್ಲಿ  ತನಗಿಂತ  ಮೊದಲು  ಯಾರೂ ಇಲ್ಲ ಎಂದು ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಂಡು ಹೇಳಿದ  ಗುಂಡಣ್ಣ ” ಇದು ನನಗೆ ಮೊದಲ ಸನ್ಮಾನ… ಆದ್ದರಿಂದ ಈ ಸಾರಿ
ಎಕಾನಮಿ ಸಾಕು.. ಮುಂದೆ ಬೇಕಾದರೆ  ನೋಡೋಣ ” ಎಂದ.

ಹಣ   ಪಡೆದು ರಸೀದಿಯನ್ನು  ಕೊಡುತ್ತಾ ಹೇಳಿದ ಪ್ರ. ಕಾ. ಬಸ್ಯ
” ನೀವು ಸನ್ಮಾನಕ್ಕೆ ಬರುವಾಗ  ಮೂರು ಪಾಸ್ಪೋರ್ಟ್ ಸೈಜ್ ಫೋಟೋಗಳು  ಮತ್ತು ಜೆರಾಕ್ಸ್ ಜೊತೆ ಒರಿಜಿನಲ್ ಆಧಾರ್ ಕಾರ್ಡ್ ತಪ್ಪದೆ  ತರಬೇಕು..ಇಲ್ಲ ಅಂದರೆ  ಆ ಗಲಾಟೆಯಲ್ಲಿ  ನಿಮ್ಮ ಬದಲಿಗೆ ಬೇರೆ ಯಾರೋ ಸನ್ಮಾನಕ್ಕೆ ಕೊರಳೊಡ್ಡೋ ಸಂಭವ  ಇರುತ್ತದೆ. ಸನ್ಮಾನ ಸಭೆಯಲ್ಲಿ ಮಾಸ್ಕ್ ಧರಿಸುವದು – ಸಾಮಾಜಿಕ ಅಂತರ  ಕಾಪಾಡುವದು ಕಡ್ಡಾಯ” ಎಂದು ಎಚ್ಚರಿಕೆ ನೀಡಿದ.

         *****

ನಗರದ  ಒಂದು ಫಂಕ್ಷನ್  ಹಾಲ್ ಮುಂದೆ ‘ಕವಿ  ಮತ್ತು ಸಾಹಿತಿ ಮನಸುಗಳಿಗೆ ಹಾರ್ಧಿಕ ಸುಸ್ವಾಗತ’ ಎನ್ನುವ ದೊಡ್ಡ ಬ್ಯಾನರ್ ನೋಡಿ ಒಳಗೆ ಹೋದ  ಗುಂಡಣ್ಣ.  ಆಡಿಟೋರಿಯಂನಲ್ಲಿ ಆಗಲೇ  ಸುಮಾರು ಐದು  ನೂರಕ್ಕಿಂತ  ತುಸು ಹೆಚ್ಚು  ಎನಿಸುವಷ್ಟು ಜನರು  ಸೇರಿದ್ದರು. ತನ್ನ ಸನ್ಮಾನದ ಸಮಾರಂಭಕ್ಕೆ ಇಷ್ಟು ಜನ  ಹಾಜರಿದ್ದುದು ತುಸು ಗರ್ವ ತಂದಿತು ಗುಂಡಣ್ಣನಿಗೆ.

ಸಮಾರಂಭ ಆಗಲೇ  ಶುರುವಾಗಿತ್ತು. ಆಯೋಜಕರು ಮಾತನಾಡುತ್ತಿದ್ದರು. ಆದರೆ  ಯಾರೂ ಶೃದ್ಧೆಯಿಂದ ಕೇಳುತ್ತಿರಲಿಲ್ಲ. ಸನ್ಮಾನ ಸೀನಪ್ಪ ವೇದಿಕೆಯ ಮೇಲೆ ಆಸೀನರಾದವರ  ಜೊತೆ  ಗುಸು ಗುಸು ಮಾತನಾಡುತ್ತಿದ್ದರೆ
ಪ್ರ. ಕಾ. ಬಸ್ಯ ಬೊಕೆಗಳು, ಶಾಲುಗಳು, ಪ್ರಶಸ್ತಿ  ಪತ್ರಗಳನ್ನು
ಎಣಿಸುವದರಲ್ಲಿ ಬ್ಯುಸಿ ಆಗಿದ್ದ. ಕರೋನದ ಕರಿ  ನೆರಳು ಇನ್ನೂ  ಇದ್ದರೂ ಯಾರೂ ಅದಕ್ಕೆ ಕೇರ್ ಮಾಡುತ್ತಿಲ್ಲ ಅಂತ ಅನಿಸುತ್ತಿದೆ ಏಕೆಂದರೆ  ಸುಮಾರು ಮುಕ್ಕಾಲು ಭಾಗ ಜನರು ಮಾಸ್ಕ್ ಧರಿಸಿಯೇ ಇರಲಿಲ್ಲ. ಎಲ್ಲರೂ ತಮಗಿಷ್ಟ  ಬಂದಂತೆ ಎಲ್ಲೆಂದರಲ್ಲಿ ಓಡಾಡುತ್ತಿದ್ದರು.

ಉಪನ್ಯಾಸದ ಘಟ್ಟ  ಮುಗಿಯಿತು. ಅತಿಥಿಗಳೆಲ್ಲ  ವೇದಿಕೆಯಿಂದ ಕೆಳಗಿಳಿದ  ಬಳಿಕ  ಸನ್ಮಾನ ಸೀನಪ್ಪ  ಪೋಡಿಯಂ ಮುಂದೆ ನಿಂತು ಮನವಿ  ಮಾಡಿದ “ದಯವಿಟ್ಟು ಎಲ್ಲ ಮಹನೀಯರು ಶಾಂತವಾಗಿರಬೇಕು. ನಾವು ನಮ್ಮ ಲಿಸ್ಟ್ ಪ್ರಕಾರ ಯಾರ  ಹೆಸರನ್ನು  ಕರೆಯುತ್ತೇವೆಯೋ ಅವರೊಬ್ಬರೇ  ವೇದಿಕೆ ಮೇಲೆ ಬಂದು  ಸನ್ಮಾನ ಸ್ವೀಕರಿಸಬೇಕು.”

ವೇದಿಕೆಯ ಮೆಟ್ಟಿಲುಗಳ  ಹತ್ತಿರ ಗುಂಪು ಸೇರಿ ಗಲಾಟೆ  ಮಾಡುತ್ತಿದ್ದವರನ್ನು ಸಮಾಧಾನ ಮಾಡಲು ವಿಫಲಗೊಂಡು ಜೋರಾಗಿ ಕಿರುಚಿದ ಪ್ರ. ಕಾ. ಬಸ್ಯ ” ಮಾನ್ಯ ಸಾಹಿತಿ ಬಂಧುಗಳೇ, ದಯಮಾಡಿ ಗಲಾಟೆ ಮಾಡಬೇಡಿ.. ಯಾವ ಪ್ಯಾಕೇ ಇರಲಿ  ಹಣ ಸಲ್ಲಿಸಿ ರಸೀದಿ  ಪಡೆದವರೆಲ್ಲರಿಗೆ ಖಂಡಿತ ಸನ್ಮಾನಿಸುತ್ತೇವೆ.. ಸಭೆಯಲ್ಲಿ ಶಾಂತಿ ಕಾಪಾಡಿ.”

ಮತ್ತೊಂದು ಸಲ  ಪೋಡಿಯಂ ಮುಂದೆ ಬಂದ  ಸನ್ಮಾನ ಸೀನಪ್ಪ  ಕವಿ  ಪುಂಗವರು ಮತ್ತು ಸಾಹಿತಿಗಳನ್ನು  ಉದ್ದೇಶಿಸಿ “ಮುಂಚೆ ಹೆಸರು
ನೊಂದಾಯಿಸದವರಿಗೆ  ಮತ್ತೊಮ್ಮೆ ಅವಕಾಶ ನೀಡುತ್ತಿದ್ದೇವೆ. ಈಗ ಹಾಲಿನ ಬಲ  ಭಾಗದಲ್ಲಿ  ಸ್ಪಾಟ್ ಕೌಂಟರ್ ಬುಕಿಂಗ್ ಏರ್ಪಾಟು ಮಾಡಿರುವೆವು.
ಅಲ್ಲಿ ರಿಜಿಸ್ಟರ್ ಮಾಡಿಸಿ ರಸೀತಿ  ಪಡೆದರೆ  ಇವೊತ್ತೇ ಸನ್ಮಾನ ಮಾಡುತ್ತೇವೆ. ಅಲ್ಲದೇ ಈಗಾಗಲೇ ಒಂದು ಪ್ಯಾಕ್ ಗೆ ಬುಕ್ ಮಾಡಿದ್ದರೆ ಅವರು ಹೆಚ್ಚಿನ ಹಣವನ್ನು ಕೊಟ್ಟು ತಮ್ಮ ಪ್ಯಾಕ್ ನ್ನು ಅಪ್ ಗ್ರೇಡ್ ಮಾಡಿಕೊಳ್ಳುವ ಸುವರ್ಣವಕಾಶ ಕೂಡ ಲಭ್ಯವಿರುತ್ತದೆ.  ಕೂಡಲೇ ಕಾರ್ಯಪ್ರವೃತ್ತರಾಗಿ…” ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ.

ಅಲ್ಲಿ  ನೆರೆದ ಜನಸ್ತೋಮ ಪ್ರೇಕ್ಷಕರಲ್ಲ ಬದಲಿಗೆ  ಎಲ್ಲರೂ ತನ್ನಂತೆ ಸನ್ಮಾನ ಮಾಡಿಸಿಕೊಳ್ಳಲು ಬಂದವರೇ  ಎಂದು ಗುಂಡಣ್ಣನ ತಲೆಯಲ್ಲಿನ  ಟ್ಯೂಬ್ ಲೈಟ್  ಈಗ ಹತ್ತಿ ಬೆಳಕು  ನೀಡಿತು. ಆ ಗದ್ದಲ ನೋಡುತ್ತಿದ್ದರೆ ಆಹಾರದ  ಪಾಕೆಟ್ ಗಳಿಗಾಗಿ ಬಡಿದಾಡುವ  ಕೋವಿಡ್ ನಿರಾಶ್ರಿತರಂತೆ ಕಂಡರು. ತೋಳುಗಳನ್ನು ಮೇಲೇರಿಸಿ ಆ ಗುಂಪಿನ ಮಧ್ಯ  ತೂರಿ  ವೇದಿಕೆ ಹತ್ತಬೇಕೆಂದು ಮೂರು ನಾಲ್ಕುಸಲ ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಕಾರಣ
ವೇದಿಕೆ ಮೆಟ್ಟಿಲುಗಳ  ಮೇಲಿದ್ದ ಪಹಿಲ್ವಾನ್ ನಂತಹ ಸಾಹಿತಿಗಳು ಗುಂಡಣ್ಣನನ್ನು ಕುಸ್ತಿಯಾಟದಲ್ಲಿ ಎದುರಾಳಿಯನ್ನು ನೆಲಕ್ಕೆ ಒಗೆಯುವಂತೆ ಒಗೆದು  ಕೆಳಗೆ ದೂಡುತ್ತಿದ್ದರು. ಇದೆಲ್ಲವನ್ನು  ಸ್ವಯಂ ಅನುಭವಿಸಿದ ಬಳಿಕ ಭಯಭೀತನಾಗಿ ಛೇರಿನಲ್ಲಿ  ಸುಮ್ಮನೆ ಕೂತ ಗುಂಡ  ತಡ  ಮಾಡಿದರೆ  ಆ ಛೇರನ್ನು ಕೂಡ ಯಾರಾದರೂ ಅಕ್ರಮಿಸಿಕೊಳ್ಳುತ್ತಾರೆ ಎಂಬ ಭಯದಿಂದ….

ಕೆಲ ಸಧೃಡ ಸಾಹಿತಿಗಳು ವೇದಿಕೆ  ಹತ್ತುವಾಗ ಅವರಿವರನ್ನು  ತುಳಿಯುತ್ತ ಮೇಲೆ ಹತ್ತಿ ಸನ್ಮಾನಿಸಿಕೊಂಡು ಬಲಗೈನ ಎರಡು ಬೆರಳುಗಳಿಂದ  ‘ವಿ’ (ವಿಕ್ಟರಿ) ಸಂಕೇತವನ್ನು ತೋರಿಸುತ್ತಾ ಕೆಳಗೆ ಇಳಿಯುತ್ತಿದ್ದ ಅಪರೂಪದ ದೃಶ್ಯಗಳನ್ನು  ನೋಡಿ ನನ್ನ ಸರತಿ  ಯಾವಾಗ ಬರುತ್ತದೋ  ಎಂದು ಕಾದು ಕುಳಿತ ಗುಂಡಣ್ಣ.

ಗುಂಡಣ್ಣನಿಗೆ ಸನ್ಮಾನ ಭಾಗ್ಯ ಬಂದಾಗ  ರಾತ್ರಿ ಒಂದು ಘಂಟೆ ಆಗಿತ್ತು.

ವೇದಿಕೆ ಏರಿದ ಗುಂಡಣ್ಣನ ಕೈಗಳಿಗೆ ಒಣಗಿದ  ಬೊಕೆ ಕೊಟ್ಟು  ಕಲರ್ ಹೋದ ಶಲ್ಯ  ಹೆಗಲ  ಮೇಲೆ ಹಾಕಿ ” ವಾಟ್ಸಪ್ ನಲ್ಲಿ ನಾಳೆ ಪ್ರಶಸ್ತಿ ಪತ್ರ ಹಾಕ್ತೇವೆ.. ಈಗ ರಾತ್ರಿ ಬಹಳ ಹೊತ್ತಾಗಿದೆ.. ಇನ್ನು ಸನ್ಮಾನ ಆಗದವರು  ಬಹಳ ಇದ್ದಾರೆ.. ಬೇಗ ಬೇಗ ನಡೀರಿ  ಸಾರ್ ”  ಗುಂಡಣ್ಣನ ಮುಖವನ್ನು ನೋಡಿಯೂ ನೋಡದಂತೆ ನಟಿಸಿ ಹೆಚ್ಚು ಕಡಿಮೆ ಗುಂಡಣ್ಣನನ್ನು  ದೂಡಿದ ಪ್ರ. ಕಾ. ಬಸ್ಯ.

ವೇದಿಕೆಯಿಂದ ಜನಗಳ  ಮಧ್ಯೆ  ನುಗ್ಗಿ ಕೆಳಗೆ ಬರೋದೊರೊಳಗೆ  ಸಾಕು ಸಾಕಾಗಿ ಹೋಯಿತು ಗುಂಡಣ್ಣನಿಗೆ. ಸರಿಯಾಗಿ ನಿದ್ದೆಯಿಲ್ಲದೆ ಕಣ್ಣುಗಳು ಬಾತು ಕೆಂಪಾಗಿದ್ದವು…ಸಂಜೆ ಹಾಕಿಕೊಂಡ  ಗರಿಗರಿ ಖಾದಿ  ಜುಬ್ಬಾ ಪೈಜಾಮಗಳು  ಈಗ ಮುದ್ದೆಯಾಗಿ ಕೆಲಸಕ್ಕೆ ಬರಲಾರದಂತಾದವು.  ಹಿಂದೆ ಮೂಲೆಯ ಯಾವುದೋ ಛೇರಿನಲ್ಲಿ ದಣಿವಾರಿಸಿಕೊಳ್ಳಲು ಕೂತ  ಗುಂಡಣ್ಣ ಅಂತಹ  ಎ. ಸಿ ಹಾಲಿನಲ್ಲೂ  ಬೆವರಿ ಬಸವಳಿದ ಗುಂಡಣ್ಣ.

ಅರೆಕ್ಷಣ ಕಣ್ಣು ಮುಚ್ಚಿ ಮನಸಿನಲ್ಲಿ  ಅಂದುಕೊಂಡ ಗುಂಡಣ್ಣ ತಾನು ಸಾಹಿತಿ ಎಂಬ ಆಪಾದನೆಗೆ  ಸಿಲುಕಿದ್ದು ಮೊದಲನೇ ತಪ್ಪು ಇನ್ನು ಸನ್ಮಾನಕ್ಕೆ ಒಪ್ಪಿಕೊಂಡಿದ್ದು ಎರಡನೇ ಮಹಾ  ತಪ್ಪು . ಇನ್ನು ಯಾವತ್ತೂ ಜೀವನದಲ್ಲಿ  ಇಂತಹ ಅಪರಾಧ  ಮಾಡದೇ ಶ್ರೀ ಸಾಮಾನ್ಯ ನಾಗಿ ಬದುಕುತ್ತೇನೆ ಎಂದು ಮನಸಿನಲ್ಲಿ  ಪ್ರತಿಜ್ಞೆ ಮಾಡಿದ  ಮೇಲೆ ತುಸು ಸಮಾಧಾನವಾಯಿತು ಮನಸಿಗೆ.  ಫಂಕ್ಷನ್  ಹಾಲ್ ನಿಂದ ಮೆಲ್ಲನೆ ಹೊರ ಬರುವಾಗ ಇನ್ನೂ ಸನ್ಮಾನಕ್ಕಾಗಿ ಕಾಯುತ್ತಿರುವ ಸಾಹಿತಿ ಸೋದರರನ್ನು  ಕರುಣೆಯಿಂದ  ಒಮ್ಮೆ ಕಣ್ತುಂಬ ನೋಡಿ ಹೊರ  ಬಂದು ಮತ್ತೊಮ್ಮೆ ಬ್ಯಾನರ್ ನತ್ತ  ದೃಷ್ಟಿ ಹಾಯಿಸಿ ದೊಡ್ಡದಾಗಿ ನಿಟ್ಟುಸಿರು ಹಾಕಿ ಸ್ಕೂಟರ್ ಹತ್ತಿ ಗುಂಡಣ್ಣ ಗಪ್ ಚುಪ್ ಆಗಿ ಮನೆ  ದಾರಿ ಹಿಡಿದ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಹೀಗೊಂದು ಸನ್ಮಾನದ ಬವಣೆ….”

  1. Dr Madhavi S Bhandary

    ಭಲಿರೆ!!!ಆಧುನಿಕ ಸನ್ಮಾನಗಳು!! ಮೊನಾಚಾಗಿರುವುದರಿಂದ ಹಲವರಿಗೆ ತಿವಿಯಬಲ್ಲದು!

  2. ಧರ್ಮಾನಂದ ಶಿರ್ವ

    ಸನ್ಮಾನವನ್ನು ಮಾಡಿಸಿಕೊಳ್ಳಬೇಕೆನ್ನುವ ಹಪಹಪಿಯ ಅರೆಬರೆ ಸಾಹಿತಿಗಳಿಗೆ ಸೂಕ್ಷ್ಮವಾಗಿ ತಿವಿಯುವಂತೆ ಮೊನಚಾಗಿ ಬರೆದ ಲಘುಬರಹ ಚೆನ್ನಾಗಿದೆ.
    ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter