ಮೂಡಣದ ಕೆಂಪು ಕರಗಿ ಬಿಸಿಲು ತನ್ನ ಕೈ ಚಳಕ ತೋರಲಾರಂಭಿಸಿತ್ತು. ಹೆದ್ದಾರಿ ಸೋಮಾರಿ ಹೆಬ್ಬಾವಿನಂತೆ ಬಿದ್ದುಕೊಂಡು ಹೊಳೆಯಲಾರಂಭಿಸಿತ್ತು. ಉದ್ದನೆಯ ಬಡಿಗೆಯನ್ನು ಹಿಡಿದುಕೊಂಡ ಅಲೆಮಾರಿ ಕುರುಬರ ದ್ವಾವಪ್ಪ ಕುರಿ ಮಂದೆಯನ್ನು ರಸ್ತೆಯ ಒಂದೇ ಪಕ್ಕದಲ್ಲಿ ನಡೆಸಿಕೊಂಡು ಹೋಗಲು ಹರಸಾಹಸ ಪಡುತ್ತಲೇ ಕೊಂಚ ಹಿಂತಿರುಗಿ ಹೆಂಡತಿಯತ್ತ ನೋಡಿದ.
‘ಹಿಂಗ ಮೆಲ್ಲಕ ಹ್ವಾದ್ರ ಮಡ್ಡಿ ಮುಟ್ಟಾಕ ಇನ್ನೂ ಮೂರತಾಸಾಕ್ಕೇತಿ’ ಎಂದು ಹೇಳಿದ ಗಂಡನ ಮಾತಿಗೆ ಪಡಿನುಡಿಯಾಡದೇ ಹೆಜ್ಜೆಯ ವೇಗ ಹೆಚ್ಚಿಸಿದಳು ಪಾರು. ‘ಮೂರತಾಸಾರ ಆಗ್ಲಿ ಮೂವತ್ತ ತಾಸಾರ ಆಗ್ಲಿ ನಡಕೊಂಡು ಹೋಗೂದೇ ಹೋಗೂದು’ ಎಂಬ ಮನಸಿನ ಮಾತನ್ನು ತುಟಿಯಾಚೆ ಬಾರದಂತೆ ನುಂಗಿ ಸೀರೆಯ ಸೆರಗನ್ನು ನೆತ್ತಿ ಮುಚ್ಚುವಂತೆ ಎಳೆದು ಕೊಂಡಳು.
‘ಹೇ ತಥ್ ತಥ್’ ಎಂದು ಕೈಯಲ್ಲಿದ್ದ ಛಡಿಯಿಂದ ತನ್ನೆದುರಿನ ಕುದುರೆಗೊಂದು ಸಣ್ಣ ಪೆಟ್ಟು ಕೊಟ್ಟಳು. ಕುದುರೆ ಕೆನೆಯುತ್ತ ಬೇಗ ಬೇಗ ನಡೆಯ ತೊಡಗಿತು. ಕುದುರೆಯ ಮೇಲೆ ಕುಳಿತಿದ್ದ ಪಾರೂನ ನಾಲ್ಕು ವರ್ಷದ ಮಗಳು ಸಾವಂತ್ರಿ ‘ಅವ್ವಾ’ ಎಂದು ರಾಗ ತೆಗೆಯಲಾರಂಭಿಸಿತು. ‘ಹಸಿವಾತೋ ಏನೋ’ ಎಂದು ಕರುಳು ಚುರುಗುಟ್ಟಿದರೂ ಸಧ್ಯೇಕ್ಕ ಊಟಾ ಉಣಿಸು ಕೊಡಾಕ ಆಗವಲ್ಲದು ಎನ್ನುವ ಸತ್ಯದ ಅರಿವಿದ್ದಿದ್ದರಿಂದ ‘ಏ ನಿನ ನಿನ್ನಾ.. ಬಾಯ್ ಮಾಡಬ್ಯಾಡ ಸುಮ್ಮಾಕ ಕುಂದ್ರ’..ಎಂದೊಮ್ಮೆ ಗದರಿದಳು.ಆರು ತಿಂಗಳ ತನ್ನ ಬಸಿರು ಹೊಟ್ಟೆಯ ಮೇಲೊಮ್ಮೆ ಕೈ ಆಡಿಸಿದಳು.ತಾಯಿಯ ಹಸ್ತ ಸ್ಪರ್ಶಕ್ಕೆ ಹೊಟ್ಟೆಯೊಳಗಿನ ಮಗುವೂ ಮಿಸುಕಾಡಿತು.ಇದೇನ ಗಂಡಾಕ್ಕೇತೊ ಹೆಣ್ಣಾಕ್ಕೇತೋ? ಎಂದು ನಿಟ್ಟುಸಿರಿಟ್ಟಳು..ದೇವರ ಹುಬ್ಬಳ್ಳಿ ಗೌಡಶ್ಯಾನಿ ‘ಪಾರೂ ನಿನ್ನ ಲಕ್ಷಣಾ ನೋಡಿದ್ರ ಗಂಡೇ ಆಕ್ಕೇತಿತಗೋ. ಆ ಮಗಾನೂ ದೊಡ್ಡಾಂವ ಆಗಿ ನಿಮ್ಮ ಜೋಡಿ ಕುರಿ ಕುಣಿಸಾಕ ನಮ್ಮ ಹೊಲಕ್ಕ ಬರತಾನೇಳು’ ಎಂದು ನಗುತ್ತಾ ಹೇಳಿದ್ದು ಖರೇ ಆಕ್ಕೇತೋ ಏನೋ… ಎನ್ನುತಾಟ್ಪಾರು ಮನದಲ್ಲೇ ನಕ್ಕಳು.
‘ಮತ್ತ ಮೆಲ್ಲಗಾತು ನಿನ್ನ ನಡಿಗಿ’ ಎಂದ ದ್ಯಾವಪ್ಪನ ಮಾತಿಗೆ ಕೊಂಚ ಸಿಟ್ಟಿಗೆದ್ದ ಪಾರೂ ‘ಹೆಂಡ್ತಿ ಹೊಟ್ಯಾಗ ಅದಾಳು ಅನ್ನಾದು ನಿಮಗೆ ನೆನಪರೆ ಐತೇನು?’ಎಂದಳು ಖಾರವಾಗಿ. ಹೆಂಡತಿಯ ಮಾತಿಗೆ ಮೌನ ತಾಳಿದ ದ್ವಾವಪ್ಪ ಸುಮ್ಮನೇ ಕುರಿ ಮಂದೆಯತ್ತ ಕಣ್ಣು ಹಾಯಿಸಿ ತಾನೇ ಮೆಲ್ಲಗೆ ಹೆಜ್ಜೆ ಹಾಕಿದ.
ಅವರ ಪಕ್ಕದಲ್ಲಿಯೇ ಜನರಿಂದ ತುಂಬಿ ತುಳುಕಾಡುವ ಬಸ್ಸೊಂದು ಕರ್ಕಶವಾಗಿ ಹಾರ್ನ ಹಾಕುತ್ತಾ ಸಾಗಿತು.‘ಅವ್ವಾ ನಾವು ಅದರ ಮ್ಯಾಲೆ ಹೋಗೋಣೇನು?’ಆಸೆಯಿಂದ ಕೇಳಿದಳು ಸಾವಂತ್ರಿ.
‘ಏ ಇವತ್ತ ಆಗಂಗಿಲ್ಲವಾ ಸಾವಿ, ಊರಿಗೆ ಹೋಗೂ ಮುಂದಕರಕೊಂಡು ಹೋಗ್ತಿನೇಳು’ ಎಂದಳು. ಆ ಪುಟ್ಟ ಹುಡುಗಿಗೇನು ತಿಳಿಯಿತೋ ಇಲ್ಲವೋ ಹಟ ಮಾಡದೆ ಹೋಗಿ ಬರುವ ವಾಹನಗಳನ್ನು ನೋಡಿ ಚಪ್ಪಾಳೆ ಹೊಡೆಯುತ್ತ ಕೇಕೆ ಹಾಕುತ್ತ ಕುಳಿತಿತು…
ಏನೋ ವಿಚಾರ ಮಾಡುತ್ತಿದ್ದ ಪಾರೂ ದಾರಿಯ ಮೇಲಿನ ಗುಂಡನೆಯ ಕಲ್ಲಿಗೆ ಎಡವಿದಳು.
‘ಅವ್ವಾ’ ಸಣ್ಣಗೆ ಚೀರಿದಳು.
‘ಯಾಕ ಏನಾತು ಪಾರು?’ ದ್ಯಾವಪ್ಪ ಹಿಂತಿರುಗಿ ಕೇಳಿದ.
‘ಏನಿಲ್ಲೇಳ್ರೀ ಕಾಲೆಡವಿತು’ ಎಂದಳು ಪಾರು.
‘ಮಾರಿ ಮ್ಯಾಲಿರೋದು ಕಣ್ಣೋ ಕೌಳಿ ಹಣ್ಣೋ? ಇಷ್ಟ ಸರಿದಾರಿ ಒಳಗ ಚೆಂದಾಗಿ ನಡಿಯಾಕ ಬರಂಗಿಲ್ಲ ನಿನಗ’ ಎಂದು ಗೇಲಿ ಮಾಡಿದ ದ್ಯಾವಪ್ಪ.
‘ನಡಿಯೋರು ಎಡವಲಾರದೇ ಕುಂತವ್ರು ಎಡವತಾರೇನು? ಪಾಪ ಪೆಟ್ಟಾತೇನು ಅಂತ ಕೇಳೂದು ಬಿಟ್ಟು ಏನಾರ ಒಂದ ಹೇಳತೀರಿ.ಆ ದ್ಯಾವ್ರು ಗಂಡಸೂರಿಗೆ ಕರುಳಿಡಾದೇ ಮರತಾನ ಅನ್ನಿಸ್ತತಿ ನನಗ’ ಎಂದಳು ಪಾರು.
‘ಒಂದಿಸು ನಗಿ ಚಾಟಕಿ ಮಾತ ಹೇಳಿದ್ರು ಉರಿದು ಬೀಳತೀದಿ ಮಾರಾಯಳ’ ಎನ್ನುತ್ತಾ ನಡು ರಸ್ತೆಯವರೆಗೆ ಹೋದ ಕುರಿಗಳನ್ನು ಮತ್ತೆ ರಸ್ತೆಯ ಎಡಭಾಗಕ್ಕೆ ಕಳಿಸಲಾರಂಭಿಸಿದ ದ್ಯಾವಪ್ಪ. ಎದುರುಗಡೆಯಿಂದ ಒಂದು ಬೈಕ್ ಬಂತು.
ಬೈಕಿಗಡ್ಡಲಾಗಿ ಕುರಿಗಳು ಬಂದರೆ ಎಂಬ ಹೆದರಿಕೆಯಿಂದಲೇನೋ ಮೆಲ್ಲಗೆ ಸವಾರಿ ಮಾಡುತ್ತಿದ್ದ ಆ ಸವಾರ.ಬೈಕ್ನಲ್ಲಿ ಹಿಂದುಗಡೆ ಕುಳಿತ ನಡು ಹರಯದ ಹೆಂಗಸು ಹಸಿರು ಬಣ್ಣದ ರೇಶಿಮೆ ಸೀರೆಯುಟ್ಟು, ಮಲ್ಲಿಗೆ ಮಾಲೆ ಮುಡಿದು, ಮೈ ತುಂಬಾ ಒಡವೆ ಧರಿಸಿದ್ದಳು. ..
ಮೊದಲ ಬಾರಿ ತಾಯಿಯಾಗುವಾಗ ಸೀಮಂತದಲ್ಲಿ ತನಗೆ ತಂದ ಸೀರೆಯೂ ಇದೇ ಬಣ್ಣದ್ದಲ್ಲವೇ? ಹಳೆಯ ನೆನಪಿಗಿಳಿದಳು ಪಾರು.…
ಮೈ ನೆರೆದಾಗ ತಂದಿದ್ದು ಹಸಿರು ಬಣ್ಣದ್ದೇ ಸೀರೆ! ಅದನ್ನು ಉಟ್ಟಾಗ ‘ಎಷ್ಟ ಲಕ್ಷಣ ಅದಾಳು ನಿಮ್ಮ ಹುಡುಗಿ.ನಮ್ಮ ದ್ಯಾವಪ್ಪಗ ಕೊಟ್ಟ ಮದವಿ ಮಾಡ್ರೀ’ ಎಂದು ಗಂಟು ಬಿದ್ದಿದ್ದಳು ದೂರದ ಸಂಬಂಧಿಯಾದ ಲಕ್ಷ್ಮವ್ವ.
‘ಹುಡುಗಾ ಇನ್ನೂರು ಕುರಿ ಮಾಲಕ ಅದಾನಂತ, ನಮ್ಮ ಹುಡುಗೀಗೂ ಅಡ್ಡಾಡಿ ಜೀವ್ನಾ ಮಾಡೂದು ಗೊತ್ತದ’ ಎಂದು ಲೆಕ್ಕಾಚಾರ ಹಾಕಿ ಆರೇ ತಿಂಗಳಿನಲ್ಲಿ ದ್ಯಾವಪ್ಪನೊಂದಿಗೆ ಪಾರ್ವತಿಯ ಮದುವೆ ಮಾಡಿದರು.ಐವತ್ತು ಕುರಿಗಳನ್ನು ವರದಕ್ಷಿಣೆಯ ರೂಪದಲ್ಲಿ ಅಳಿಯನಿಗೆ ಕೊಟ್ಟಿದ್ದರು.ಇನ್ನೈವತ್ತು ಕುರಿಗಳನ್ನು ಮಾರಿ ಒಂದಿಷ್ಟು ಒಡವೆಗಳನ್ನು ಮಾಡಿಸಿ ಮದುವೆಯಲ್ಲಿ ಪಾರ್ವತಿಗೆ ಕೊಟ್ಟ ಹೆತ್ತವರು ನಿಶ್ಚಿಂತರಾಗಿದ್ದರು.
**************
ಮದುವೆಯಾಗಿ ತಿಂಗಳು ಕಳೆಯುವುದರೊಳಗೆ ಬೆಳಗಾವಿ ತುರುವಿನಾಳದ ಗೌಡರು ‘ನಮ್ಮ ಹೊಲಕ್ಕ ಕುರಿ ತರುಬಾಕ ಬರ್ರೀ’ ಎಂದು ದ್ಯಾವಪ್ಪನಿಗೆ ಫೋನ್ ಮಾಡಿದ್ದರು.
‘ಇನ್ನು ಕುರಿ ಕುಣಿಸಾಕ ಹೋಗ ಬೇಕಾಗ್ತತಿ. ನಿಂದ ಒಳ್ಳೊಳ್ಳೆ ಅರಬಿ, ದಾಗೀನ(ಒಡವೆ) ಎಲ್ಲಾ ನಮ್ಮವ್ವನ ಕಡೆ ಕೊಡು. ಒಂದೀಸು ಹಳೆವು ಅರಬಿ, ಹಾಸಗಿ, ಅಡಗಿ ಮಾಡೂಜ್ವಾಡ್ನಿ ಜೋಡ ಮಾಡಿಡು.ನಾಳೆ ನಾನೂ ಸಂತಿಲಿಂದ ಒಂದಿಷ್ಟ ಕಾಳು ಕಡ್ಡಿ, ಅಕ್ಕಿ, ಜ್ವಾಳಾ ತರತೀನಿ.ನಾಡದು ಹೊರಡಾಕ ಬೇಕು’ ಎಂದ ದ್ಯಾವಪ್ಪ.
‘ಬಯಲಲ್ಲೇ ಬದುಕುವ ನಮ್ಮಂಥವರಿಗೆ ಎಷ್ಟು ಬಂಗಾರವಿದ್ದರೂ ಒಂದೇ’..ಎಂದುಕೊಳ್ಳುತ್ತ ಮನಸ್ಸಿಲ್ಲದ ಮನಸ್ಸಿನಿಂದ ಅತ್ತೆಗೆ ದಾಗೀನಗಳೆಲ್ಲವನ್ನೂ ಕೊಟ್ಟಿದ್ದಳು ಪಾರೂ.ವರ್ಷಕ್ಕೊಮ್ಮೆಊರಿಗೆ ಹೋದಾಗ ಪೆಟ್ಟಿಗೆಯೊಳಗಿಟ್ಟ ಸೀರೆಗಳನ್ನೆಲ್ಲ ಒಮ್ಮೆ ಝಾಡಿಸಿ ಎಳೆ ಬಿಸಿಲಿಗೆ ಒಣಗಿಸಿ ನುಸಿಗುಳಿಗೆ ಹಾಕಿಟ್ಟು ಬರುತ್ತಿದ್ದಳು.ಇದ್ದ ಒಡವೆಗಳನ್ನು ಒಮ್ಮೆ ಧರಿಸಿ ಮಸುಕಾದ ಅಂಗೈ ಅಗಲದ ಕನ್ನಡಿಯಲ್ಲಿ ಒಮ್ಮೆ ನೋಡಿಕೊಂಡು ಸಮಾಧಾನ ಪಡುತ್ತಿದ್ದಳು. ‘ತತ್ತಾ ಇಲ್ಲೆ ಮತ್ತೇಲ್ಲಾದರೂ ಕಳೆದು ಹೋದೀತು ಎನ್ನುವ ಅತ್ತೆಯ ಕೈಗೆ ಒಡವೆಗಳನ್ನು ಕೊಟ್ಟು ಬರಬೇಕಾದ ತನ್ನ ಬದುಕಿನ ಅವಸ್ಥೆಗಳನ್ನು ನೆನೆಯುತ್ತ ಪಾರು ಹೆಜ್ಜೆ ಹಾಕಿದಳು..
‘ನೂಲಿನ ಹಾಂಗ ಸೀರಿ ತಾಯಿ ಹಾಂಗ ಮಗಳು.ನಿಮ್ಮಅವ್ವನ ಹಂಗ ಬಾಳೇವು ಮಾಡಬೇಕು ತೀಳಿತೇನಿಲ್ಲೋ, ಕುರಿಗೋಳ ಹಿಂಬಾಲಕ್ಕ ತಿರಗಾಡೂದೇ ಇನ್ನ ನಿಮ್ಮಧರ್ಮ’ ಎಂದು ಗಟ್ಟಿಯಾಗಿ ಅತ್ತೆ ಹೇಳಿದ ಮಾತು ಸದಾ ಪಾರೂನ ಕಿವಿಯಲ್ಲಿ ಗುಂಯ್ಗುಡುತ್ತಿತ್ತು.
ದ್ಯಾವಪ್ಪ ಮುಂಚಾನೆ ಕುರಿ ಮೇಯಿಸಲು ಹೊರಟರೆ ಕುರಿ ಮರಿಗಳನ್ನು ಜ್ವಾಪಾನ ಮಾಡುವ ಕೆಲಸ ಪಾರೂನದು. ಮೇಯಲು ಬಾರದ ಮರಿಗಳಿಗೆ ಹಾಲು ಕುಡಿಸುವುದು, ಔಷಧ ಹಾಕುವುದು, ಕುರಿ ಹಾಲು, ಗೊಬ್ಬರ ಕೇಳಿಕೊಂಡು ಬಂದವರಿಗೆ ಮಾರುವುದು, ಅಡುಗೆ ಮಾಡುವುದು..ಥೇಟ್ ಅವಳವ್ವನ ಹಾಗೆಯೇ ಪಾರೂನ ಜೀವನವೂ ಸಾಗುತ್ತಿತ್ತು.
ದ್ಯಾವಪ್ಪ ಪಾರೂನಂತೆಯೇ ಅದೇ ಊರಿನ ನಾಲ್ಕಾರು ಕುಟುಂಬದವರು ಕುರಿಗಳೊಂದಿಗೆ ಇವರಂತೆಯೇ ಊರೂರು ತಿರುಗುತ್ತಾ ಜೊತೆಯಾಗುತ್ತಿದ್ದರು. ಹಗಲಿಡೀ ಬಿಸಿಲು ಮಳೆಯ ಹಂಗಿಲ್ಲದೆ ಕುರಿಗಳ ಹಿಂದೆ ತಿರುಗುತ್ತಿದ್ದ ಕೆಲವು ಗಂಡಸರು ಸಂಜೆಯಾದೊಡನೆ ಕುಡಿದುಕೊಂಡು ಬಂದು ಹೆಂಡತಿ ಮಕ್ಕಳಿಗೆ ಹೊಡೆಯುತ್ತಿದ್ದರು. ಆದರೆ ದ್ಯಾವಪ್ಪ ಚಟದಾರನಾಗಿರಲಿಲ್ಲ.
‘ನೀ ಭಾಳ ಪುಣ್ಯೆ ಮಾಡೀದಿ, ನಿನ ಗಂಡಾ ಒಳ್ಳೆ ಮನಷಾ ಅದಾನು’ ಎಂದು ತನ್ನ ಓರಿಗೆಯವರೇ ಆದ ಕಲ್ಲವ್ವ, ಮಲ್ಲವ್ವ ಹೇಳಿದಾಗ ಪಾರೂ ಹಿಗ್ಗಿ ಹೂವಾಗುತ್ತಿದ್ದಳು. ‘ಹೂನವ್ವಾ ನನ ಮ್ಯಾಲೂಜೀಂವಅದಾನ’ ಎಂದು ನಾಚುತ್ತಲೇ ಅಭಿಮಾನದಿಂದ ಹೇಳುತ್ತಿದ್ದಳು.
**********
‘ಯವ್ವಾ ಹೊಟ್ಟಿ ಹಸದತಿ’ ಎಂದು ಮಗಳು ಕೂಗಿದಾಗ ಹಳೆಯ ನೆನಪುಗಳನ್ನೆಲ್ಲ ಕೊಡವಿದ ಪಾರೂ ಕುದುರೆಯ ಬೆನ್ನಿಗೆ ಇಳಿಬಿಟ್ಟಿದ್ದ ಚೀಲದಲ್ಲಿದ್ದ ಜೋಳದ ಬಕ್ಕರಿಯನ್ನು, ಇನ್ನೊಂದು ಚೀಲದಲ್ಲಿ ಲಡಕಾಸಿ ಬಾಟಲಿಯಲ್ಲಿ ತುಂಬಿದ ನೀರನ್ನುಕುಡಿಯಲು ಕೊಟ್ಟಳು.’‘ನಿಮಗೂ ಹೊಟ್ಟಿ ಹಸದತೇನು?’ ಜೋರಾಗಿ ಮಾದಪ್ಪನಿಗೆ ಕೇಳುವಂತೆ ಕೂಗಿದಳು. ‘ಎಲ್ಲಾರ ಬಯಲು ಸಿಕ್ಕರೆ ಕುರಿಗೋಳ ಒಟ್ಟತೇನಿ ಆಮ್ಯಾಲ ತಿನ್ನತೇನಿ’ ಎಂದದ್ಯಾವಪ್ಪ.
ಬಿಸಿಲ ಬೇಗೆಗೆ ಪಾರೂಗೆ ಗಂಟಲೊಣಗಿತ್ತು. ‘ಇನ್ನೊಂದರ್ದ ಬಾಟಲಿ ಅಷ್ಟೇ ನೀರಐತಿ, ಭಕ್ಕರಿತಿನ್ನಾದಾರ ಹೆಂಗ..ಯಾರದಾರ ಮನಿ ಕಂಡರೆ ನೀರ ಕೇಳಬೇಕು’ ಎಂದು ಒಂದೇ ಗುಟುಕು ನೀರು ಕುಡಿದು ಉಳಿದಿದ್ದನ್ನು ಮತ್ತೆ ಚೀಲಕ್ಕೆ ಸೇರಿಸಿದಳು.
‘‘ಕುರಿಗಾರ ಮಂದಿಗೆ ತಿನ್ನಾಕ ಉಣ್ಣಾಕ ಏನೂ ಕಡಿಮಿ ಆಗಂಗಿಲ್ಲ, ನೀರಿಂದೇ ಫಜೀತಿ ಒಮ್ಮೊಮ್ಮೆ ಅಡಗಿ ಮಾಡಕ ನೀರು ಹುಡಕಾಡಿಕೊಂತ ಮೈಲಿಗಟ್ಟಲೆ ಕೊಡಾ ಹೊತ್ತು ತಿರಗಾಡ ಬೇಕಾಗತೈತಿ. ಏನ ಜನ್ಮಾ ನಮ್ಮದು, ಯಾರಾರ ನೀರ ಕೊಟ್ರೆ ಅವ್ರು ಸಾಕ್ಷಾತ್ ದೇವ್ರೆ ಪ್ರತ್ಯಕ್ಷ ಆಗಿ ವರಾಕೊಟ್ಟ ಹಾಂಗ ಅನ್ನಿಸ್ತೈತಿ ’ಎನ್ನುವ ತನ್ನ ತಾಯಿಯ ಮಾತು ನೆನಪು ಮಾಡಿಕೊಳ್ಳುತ್ತ ಎಲ್ಲಾರ ಕೆರೆ ಬಾವಿ ಐತೇನು ಎಂದು ಕಣ್ಣು ಹಾಯಿಸುತ್ತ ನಡೆಯುತ್ತಿದ್ದಳು….
ಒಮ್ಮೊಮ್ಮೆ ಅಂತೂ ಕೊಳಕ ನೀರೆ ಸಿಗಾದು, ಹುಳಾ ಹುಪ್ಪಡಿ ಬಿದ್ದಾವ ಅಂದ್ರೂ ಅದನ್ನೇ ಸೋಸಿ ಕುಡಿ ಬೇಕಾಕ್ಕೇತಿ. ಹತ್ತೇರಕಿ….. ಎಲ್ಲಾದರೂ ಕೆರೆ, ಹೊಳೆ, ಹಳ್ಳದ ಬಳಿ ಬಿಡಾರ ಹೂಡುವ ಸಂದರ್ಭಗಳಲ್ಲಿ ಮಾತ್ರ ದಿನಾ ಜಳಕಾ ಮಾಡಾಕ್ಕಾಕ್ಕೇತಿ.ಇಲ್ಲಾ ಅಂದ್ರ ಶುಕ್ರವಾರ ಮಂಗಳವಾರ ಎರಡೇ ದಿನ ಜಳಕ.. ಎನ್ನುತ್ತಾ ಧೂಳಡರಿದ ಕೈ ಕಾಲುಗಳತ್ತ ತಾನುಟ್ಟ ಮಾಸಿದ ನೀಲಿ ಸೀರೆಯತ್ತ ಒಮ್ಮೊಮ್ಮೆ ನೋಡಿಕೊಳ್ಳುತ್ತ ತನ್ನಷ್ಟಕ್ಕೆ ತಾನೇ ಮಾತಾಡಿ ಕೊಳ್ಳುತ್ತಿದ್ದ ಪಾರುವಿನ ಮೂಗಿಗಡರಿತ್ತು ಘಮ್ಮೆನ್ನುವ ಸಂಪಿಗೆಯ ಪರಿಮಳ! ದಾರಿಯಂಚಿಗಿದ್ದ ಎತ್ತರವಾದ ಸಂಪಿಗೆಯ ಮರದ ತುದಿಯಲ್ಲಿ ಒಂದಿಷ್ಟು ಹೂವುಗಳಿದ್ದವು.
‘ಹೂವಾ ಕಿತ್ತು ಕೊಡ್ತೀರೇನು?’ ಜೋರಾಗಿ ಕೇಳಿದಳು.ದ್ಯಾವಪ್ಪ ಕೊಂಚ ತಿರುಗಿ ನೋಡಿ ಹೇಳಿದ..
‘ಅಷ್ಟಕೊಂದ ಮ್ಯಾಲೈತಿ ಹೂವಾ, ಕೊಯ್ಯಾಕ್ಕಾಕ್ಕೇತೇನು?ದಾರಿ ನೋಡಿಕೊಂತ ನಡಿ ಮಾರಾಯಳ ನನಗ ಸಾಕಾಗೇತಿ, ಮಡ್ಡಿಯಾಗೆಲ್ಲರೆ ಸಂಪಗಿ ಮರಾಇದ್ರ ನಾಳೆ ಕೊಯ್ದಕೊಂಡ ಬರತೇನಿ’……..
ಪಾರೂ ನಿರಾಸೆಯಿಂದ ಮರವನ್ನು ಒಮ್ಮೆ ನೋಡಿ ಕೆಳಗೆ ಉದುರಿದ ಸಂಪಿಗೆ ಹೂವಿನ ಪಕಳೆಯನ್ನು ಆರಿಸಿಕೊಂಡು ಮೂಸಿದಳು. ಹೋಗುವ ದಾರಿಯಂಚಿಗೆ ಯಾರದ್ದಾದರೂ ಅಂಗಳದ ತುದಿಗೋ, ಕಾಂಪೌಂಡ ಹೊರಗೋ ಹೊರಚಾಚಿದ ಟೊಂಗೆಯಲ್ಲರಳಿದ ಹೂವುಗಳನ್ನು ನಿರ್ದಯವಾಗಿಕಿತ್ತು ಮುಡಿಗೇರಿಸುವುದು ಪಾರೂನ ಪ್ರಿಯವಾದ ಕೆಲಸವಾಗಿತ್ತು. ‘ಹಿಂಗ ಕಂಡೋರ ಮನಿ ಹೂವು ಹರಿಯಾಕ ನಾಚ್ಕಿ ಆಗಂಗಿಲ್ಲೇನು?’ಎಂದು ಕೆಲವರು ಬೈದರೂ ಬೇಸರಿಸಿಕೊಳ್ಳದೇ ‘ಏನ ಮಾಡಾದ್ರೀ ಹೂವಾ ಮುಡಿಬೇಕನ್ನಿಸ್ತತಿ.ನಾವು ಬಡೋರು ರೊಕ್ಕಾಕೊಟ್ಟ ಹೂವಾ ಕೊಳ್ಳಾಕ ಆಕ್ಕೇತೇನ್ರೀ?’ಎಂದು ವಿನಯದಿಂದಲೇ ತಿರುಗಿ ಪ್ರಶ್ನಿಸಿ ಬಿಡುತ್ತಿದ್ದಳು!
ಇಂತಿಪ್ಪ ಪಾರುವಿಗೆ ಅಂದೇಕೋ ನಡೆದೂ ನಡೆದೂ ಕಾಲು ಸೋಲಲಾರಂಭಿಸಿತ್ತು.ಅವಳು ಧರಿಸಿದ್ದ ಕೊಲ್ಲಾಪುರ ಚಪ್ಪಲಿಯೂ ಬೆವೆತು ಜಾರಲಾರಂಭಿಸಿತ್ತು.ಅವಳಿಗೆ ವಿಪರೀತ ನೀರಡಿಕೆಯೂ ಆಗಿತ್ತು.ಟಾರ್ ರಸ್ತೆ ಮುಗಿದು ಮಣ್ಣಿನ ರಸ್ತೆಗೆ ತಿರುಗಿದ್ದರು. ಯಾವುದೋ ರೈತರ ಹೊಲದಂಚಿಗೆ ತೋಡಿದ ಕೃಷಿಹೊಂಡದಲ್ಲಿ ತುಂಬಿದ ನೀರು ಕಂಡು ನಿಧಿ ಸಿಕ್ಕಂತೆನಿಸಿತು. ‘ಅಲ್ಲಿ ನೀರೈತಿ ನೋಡು’..ಎಂದ ದ್ಯಾವಪ್ಪನ ಮಾತು ಮುಗಿಯುವುದರೊಳಗೆ ಕುದುರೆಗೆ ಕಟ್ಟಿದ್ದ ಕೊಡ ಹಿಡಿದು ನೀರು ತರಲು ಧಾವಿಸಿದಳು ಪಾರೂ.. ಹಸಿವು ನೀರಡಿಕೆಯಿಂದ ಬಳಲಿದ್ದ ಅವಳು ಹೊಂಡದೆಡೆ ಬಾಗಿದವಳು ಜಾರಿ ಅದರೊಳಗೇ ಬಿದ್ದಳು.ಸಾಕು ಸಾಕೆನ್ನುವಷ್ಟು ನೀರು ಕುಡಿಯುತ್ತ ಕೆಸರಿನಲ್ಲಿ ಕಂತುತ್ತಿದ್ದ ಪಾರುವಿಗೆ ಮಗಳ ಅವ್ವಾ ಎಂಬ ಕೂಗೂ ಕೇಳಿಸಲೇ ಇಲ್ಲ……….
*****
5 thoughts on “ಪಯಣ”
ಕಥೆ ಇನ್ನೂ ಓದಬೇಕು ಎನ್ನಿಸುತ್ತಿರುವಾಗಲೇ ಮುಗಿದು ಹೋಯ್ತಲ್ಲ…
ಹೌದಾ? ಧನ್ಯವಾದಗಳು
Chandada marmika kathe
Halli munde hogi alliya balvenna swanta kandantaitu, hondakke biddu kantuttiruva Paro na avvaa yemba koogu hridaya dravakavagide…..
ಕಥೆ ಕಥನ ಸೊಗಸಾಗಿದೆ ಆದರೆ ಹೇಳಬೇಕಾದ ಕಥಾಸಾರ ಹಾಗೆ ಉಳಿದಿದೆ. ರಸಬಾಳೆ ಹಣ್ಣಾಗುವ ಮೊದಲೆ ಕಡಿದಂತಾಗಿದೆ. ಲೇಖಕಿಯ ನಿರೂಪಣ ಶೈಲಿ ಅಸದಳ.
ಧನ್ಯವಾದಗಳು ಸರ್. ಅಲೆಮಾರಿ ಕುರುಬರ ಪರಿಸ್ಥಿತಿ ಹಾಗೆಯೇ ಇದೆ.