ರಾಜೇಶ್ ಖನ್ನಾ ಭಾರತದ ಅತ್ಯಂತ ಜನಪ್ರಿಯ ನಟರಲ್ಲೊಬ್ಬರು. ಅಕ್ಷರಶಃ ‘ಸೂಪರ್ ಸ್ಟಾರ್’ ಆಗಿ ಮೆರೆದ ನಟ. ಹಿಂದಿ ಚಿತ್ರರಂಗದಲ್ಲಿ ಅವರಷ್ಟು ಖ್ಯಾತಿ, ಜನಪ್ರಿಯತೆ ಮತ್ತು ಅಭಿಮಾನಿ ಬಳಗ ಪಡೆದವರಿಲ್ಲ. ಎಪ್ಪತ್ತರ ದಶಕದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ರಾಜೇಶ್ ಖನ್ನಾ ತಮ್ಮ ವೃತ್ತಿ ಜೀವನದಲ್ಲಿ ಎಲ್ಲ ಬಗೆಯ ಏರಿಳಿತಗಳನ್ನು ಕಂಡರು. ಜತಿನ್ ಖನ್ನಾ ಎಂಬ ಪಂಜಾಬಿನ ಯುವಕ ರಾಜೇಶ್ ಖನ್ನಾ ಎಂಬ ಹೆಸರಿನಲ್ಲಿ ಹಿಂದಿ ಚಿತ್ರರಂಗದ ‘ಸೂಪರ್ ಸ್ಟಾರ್’ ಆಗಿ ಮೆರೆದ ಕಥೆ ಅತ್ಯಂತ ರೋಚಕವಾಗಿದೆ.
ಅರವತ್ತರ ದಶಕದಲ್ಲಿ ಹಿಂದಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ರಾಜೇಶ್ ಖನ್ನಾಗೆ ಹೆಸರು ತಂದುಕೊಟ್ಟದ್ದು “ಅಂಧಾಯುಗ್” ಎಂಬ ನಾಟಕ. ಅಂಗವಿಕಲ ಯೋಧನ ಪಾತ್ರದಲ್ಲಿ ಅವರ ಮನೋಜ್ಞ ನಟನೆ ಸಿನಿಮಾ ಪ್ರವೇಶಕ್ಕೆ ರಹದಾರಿಯಾಯಿತು. 1965ರಲ್ಲಿ ‘United Producers’ ಮತ್ತು ‘Filmfare’ ಜಂಟಿಯಾಗಿ ನಡೆಸಿದ ‘All India Talent Contest’ನಲ್ಲಿ ದೇಶದ ಎಲ್ಲ ಭಾಗಗಳಿಂದ 10,000 ಸ್ಪರ್ಧಿಗಳು ಭಾಗಿಯಾಗಿದ್ದರು. ಈ ಸ್ಪರ್ಧೆಯಲ್ಲಿ ಬರೋಬ್ಬರಿ 10,000 ಸ್ಪರ್ಧಿಗಳನ್ನು ಸೋಲಿಸಿ ಆಯ್ಕೆಯಾಗುವುದರೊಂದಿಗೆ ಅವರ ಯಶಸ್ಸಿನ ಪಯಣ ಆರಂಭವಾಯಿತು.
ಅವರ ಮೊದಲ ಚಿತ್ರ “ಆಖ್ರಿ ಖತ್” 1966ರಲ್ಲಿ ತೆರೆಕಂಡು ಸಾಧಾರಣ ಯಶಸ್ಸು ಪಡೆಯಿತು. ಅನಂತರ ಬಂದ “ದೋ ರಾಸ್ತೆ” ಅವರನ್ನು ನಟನಾಗಿ ಗುರುತಿಸುವಂತೆ ಮಾಡಿತು. “ಆರಾಧನಾ” ಚಿತ್ರದ ಮೂಲಕ ರಾಜೇಶ್ ಖನ್ನಾ ಭಾರತದಾದ್ಯಂತ ಜನಪ್ರಿಯರಾದರು. 1969ರಿಂದ 1971ರ ಅವಧಿಯಲ್ಲಿ ಸತತವಾಗಿ ಹದಿನೈದು ಸೂಪರ್ ಹಿಟ್ ಚಿತ್ರ ನೀಡಿದ್ದು ಇಂದಿಗೂ ಸಹ ಹಿಂದಿ ಚಿತ್ರರಂಗದಲ್ಲಿ ಅಳಿಸಲಾಗದ ದಾಖಲೆಯಾಗಿ ಉಳಿದಿದೆ.
“ರಾಝ್”, “ಡೋಲಿ”, “ಬಂಧನ್”, “ಕಟಿ ಪತಂಗ್”, “ಆನ್ ಮಿಲೊ ಸಜನಾ”, “ಸಚ್ಚಾ ಜೂಟಾ”, “ಹಾಥಿ ಮೇರೆ ಸಾಥಿ”, “ಹಮ್ ಶಕಲ್”, “ಅಮರ್ ಪ್ರೇಮ್”, “ಪ್ರೇಮ್ ನಗರ್”, “ರೋಟಿ”, “ಆಪ್ ಕಿ ಕಸಮ್” “ಅಪ್ನಾ ದೇಶ್”, “ದಾಗ್”, “ಮೆಹಬೂಬಾ”, “ಬಾವಾರ್ಚಿ”, “ಝೋರೂಂ ಕಾ ಗುಲಾಮ್”, “ರಾಜಾ ರಾಣಿ”, “ಅಪ್ನಾ ದೇಶ್”, “ದಿಲ್ ದೌಲತ್ ದುನಿಯಾ”, “ದುಷ್ಮನ್”, “ಖಾಮೋಶಿ”, “ಸಫರ್”, “ಇತ್ತೇಫಾಕ್”, “ಅಜ್ನಬಿ” “ನಮಕ್ ಹರಾಮ್”, “ಆನಂದ್”, “ಆವಿಷ್ಕಾರ್”, “ಮೆಹಬೂಬ್ ಕೀ ಮೆಹಂದಿ”, “ಅನುರೋಧ್”, “ಮೇರೇ ಜೀವನ್ ಸಾಥಿ” ಮತ್ತು “ಕರಮ್” ಸೇರಿದಂತೆ ಅನೇಕ ಚಿತ್ರಗಳು ರಾಜೇಶ್ ಖನ್ನಾ ಅವರು ಜಪ್ರಿಯತೆಯ ಶಿಖರದಲ್ಲಿದ್ದಾಗ ತೆರೆಕಂಡ ಗಮನಾರ್ಹ ಚಿತ್ರಗಳು.
ರಾಜೇಶ್ ಖನ್ನಾ ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಇಪ್ಪತ್ತೈದರಿಂದ ಮೂವತ್ತು ಲಕ್ಷದವರೆಗೂ ಸಂಭಾವನೆ ಪಡೆಯುತ್ತಿದ್ದರು. ಈ ದಿನಗಳಲ್ಲೇ ಅವರು ಹಿರಿಯ ನಟ ರಾಜೇಂದ್ರ ಕುಮಾರ್ ಅವರಿಂದ “ಡಿಂಪಲ್” ಎಂಬ ಬಂಗಲೆಯನ್ನು ಮೂವತ್ತೊಂದು ಲಕ್ಷಕ್ಕೆ ಖರೀದಿಸಿ ಅದಕ್ಕೆ “ಆಶೀರ್ವಾದ್” ಎಂದು ಮರು ನಾಮಕರಣ ಮಾಡಿದರು.
ಕೈತುಂಬ ಚಿತ್ರಗಳು, ಅದ್ಭುತ ಯಶಸ್ಸು ಮತ್ತು ಅಪಾರ ಅಭಿಮಾನಿ ಬಳಗ ರಾಜೇಶ್ ಖನ್ನಾ ಹಿಂದಿ ಚಿತ್ರರಂಗವನ್ನು ಅಕ್ಷರಶಃ ಆಳುವಂತೆ ಮಾಡಿತು. ಆ ಕಾಲದಲ್ಲಿ ಅವರ ಬಂಗಲೆಯ ಮುಂದೆ ಎರಡು ಕಿಲೋಮೀಟರ್ ದೂರದವರೆಗೂ ನಿರ್ಮಾಪಕ, ನಿರ್ದೇಶಕರ ಕಾರುಗಳು ನಿಲ್ಲುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಿಂದಿ ಸಿನಿಮಾದ ಖ್ಯಾತ ಸಲೀಂ – ಜಾವೇದ್ ಜೋಡಿಗೆ ಮೊದಲು ಅವಕಾಶ ನೀಡಿದ್ದು ರಾಜೇಶ್ ಖನ್ನಾ. ಕೇವಲ ಸ್ಟಂಟ್ ಸಿನಿಮಾ ಮಾಡುತ್ತಿದ್ದ ನಟಿ ಮಮ್ತಾಜ್ ರಾಜೇಶ್ ಖನ್ನಾ ಜೊತೆ ಅಭಿನಯಿಸಿದ್ದರಿಂದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾದರು. ಅದಾಗಲೇ ಚಿತ್ರರಂಗದಲ್ಲಿ ಹೆಸರು ಮಾಡಿದ್ದರೂ ಸಹ ಶರ್ಮಿಳಾ ಟ್ಯಾಗೋರ್ ರಾಜೇಶ್ ಖನ್ನಾ ಜೊತೆ ಅಭಿನಯಿಸಿದ್ದರಿಂದಲೇ ಹಿಂದಿಯ ಅಗ್ರಗಣ್ಯ ನಟಿಯಾಗಲು ಸಾಧ್ಯವಾದದ್ದು. “ಆರಾಧನಾ” ದೊಂದಿಗೆ ಶುರುವಾದ ಈ ಅದ್ಭುತ ಯಶಸ್ಸು ಸತತವಾಗಿ ಮುಂದುವರಿಯಿತು. ರಾಜೇಶ್ ಖನ್ನಾ – ಶರ್ಮಿಳಾ ಟ್ಯಾಗೋರ್ ಜೋಡಿ ಮುಂದೆ ಅನೇಕ ಯಶಸ್ವಿ ಚಿತ್ರಗಳನ್ನು ನೀಡಿತು. ರಾಜೇಶ್ ಖನ್ನಾ – ಮಮ್ತಾಜ್ ಜೋಡಿಯ ಚಿತ್ರಗಳು ಸಹ ಗಲ್ಲಾಪಟ್ಟಿಗೆಯಲ್ಲಿ ಸಾಕಷ್ಟು ಯಶಸ್ಸು ಗಳಿಸಿದವು.
ರಾಜೇಶ್ ಖನ್ನಾ ಅವರ ಶಾರೀರವೆಂದೇ ಖ್ಯಾತರಾದ ಕಿಶೋರ್ ಕುಮಾರರ ಸುಮಧುರ ಗೀತೆಗಳು ರಾಜೇಶ್ ಖನ್ನಾರ ಚಿತ್ರಗಳು ಯಶಸ್ವಿಯಾಗಲು ಸಾಕಷ್ಟು ಕೊಡುಗೆ ನೀಡಿವೆ. ರಾಜೇಶ್ ಖನ್ನಾ – ಕಿಶೋರ್ ಕುಮಾರ್ ಜೋಡಿ ಎಪ್ಪತ್ತು – ಎಂಬತ್ತರ ದಶಕದಲ್ಲಿ ಅಕ್ಷರಶಃ ಮೋಡಿ ಮಾಡಿತ್ತು. ಈ ಜೋಡಿಯ ಗೀತೆಗಳು ಇಂದಿಗೂ ಸಹ ತಮ್ಮ ಮಾಧುರ್ಯದಿಂದ ಸಾಕಷ್ಟು ಜನಪ್ರಿಯತೆ ಪಡೆದಿವೆ.
ರಾಜೇಶ್ ಖನ್ನಾ 1971ರಲ್ಲಿ “ಸಚ್ಚಾ ಜೂಟ್”, 1972ರಲ್ಲಿ “ಆನಂದ್” ಮತ್ತು 1974ರಲ್ಲಿ “ಆವಿಷ್ಕಾರ” ಚಿತ್ರಗಳಲ್ಲಿನ ಮನೋಜ್ಞ ಅಭಿನಯಕ್ಕಾಗಿ ಮೂರು ಬಾರಿ “ಫಿಲಂಫೇರ್ ಅತ್ಯುತ್ತಮ ನಟ” ಪ್ರಶಸ್ತಿ ಪಡೆದಿದ್ದಾರೆ. 1991ರಲ್ಲಿ ಹಿಂದಿ ಚಿತ್ರರಂಗದಲ್ಲಿ ಇಪ್ಪತ್ತೈದು ವರ್ಷ ಪೂರೈಸಿದ್ದಕ್ಕಾಗಿ ಅವರಿಗೆ “ಫಿಲಂಫೇರ್ ವಿಶೇಷ ಪುರಸ್ಕಾರ” ದೊರೆತಿದೆ. 2013ರಲ್ಲಿ ಭಾರತ ಸರ್ಕಾರ ಮರಣೋತ್ತರ “ಪದ್ಮಭೂಷಣ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
1973ರಲ್ಲಿ BBCಯವರು ರಾಜೇಶ್ ಖನ್ನಾ ಕುರಿತು “Man Alive” ಸರಣಿಯಲ್ಲಿ “The Bombay Superstar” ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಃಃಅಯವರು ಸಂದರ್ಶನ ಮಾಡುವುದೇ ಭಾಗ್ಯ ಎಂಬಂತಹ ದಿನಗಳಲ್ಲಿ ತನ್ನ ಕುರಿತು ಸಾಕ್ಷ್ಯಚಿತ್ರ ಮಾಡಲು ಬಂದ ಃಃಅಯವರಿಗೆ ಭೇಟಿಯಾಗಲು ಐದು ದಿನಗಳ ಕಾಲ ಕಾಯಿಸಿದ್ದು ಆ ಕಾಲದಲ್ಲಿ ದೊಡ್ಡ ಸುದ್ದಿಯಾಗಿತ್ತು.
ಅತ್ಯಂತ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ರಾಜೇಶ್ ಖನ್ನಾ ಅನೇಕ ರೋಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸಿದರು. ಪ್ರೇಕ್ಷಕರ ಮನಸೂರೆಗೊಳ್ಳುವಂತೆ ಅಭಿನಯಸುವುದರಲ್ಲಿ ಸಿದ್ಧಹಸ್ತರಾದ ಅವರು ದೇಶಾದ್ಯಂತ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. ಅದರಲ್ಲೂ ವಿಶೇಷವಾಗಿ ಅವರ ಮಹಿಳಾ ಅಭಿಮಾನಿಗಳಿಗೆ ಅವರ ಬಗ್ಗೆ ಇದ್ದ ಹುಚ್ಚು ಅಭಿಮಾನ ದಂಗು ಬಡಿಸುವಂತಹದು. ರಾಜೇಶ್ ಖನ್ನಾ ಅವರ “ಆಶೀರ್ವಾದ್” ಬಂಗಲೆಯ ಮುಂದೆ ನೆರೆದಿರುತ್ತಿದ್ದ ಅಭಿಮಾನಿಗಳನ್ನು ನಿಯಂತ್ರಿಸುವುದಕ್ಕಾಗಿಯೇ ಅವರ ಬಂಗಲೆಯ ಹಿಂದೆ ಹೊಸ ಪೊಲೀಸ್ ಸ್ಟೇಷನ್ ತೆರೆಯಲಾಯಿತು. ಅವರ ಮಹಿಳಾ ಅಭಿಮಾನಿಗಳ ನಿಯಂತ್ರಣಕ್ಕಾಗಿಯೇ ಮಹಿಳಾ ಪೊಲೀಸರನ್ನು ನಿಯೋಜಿಸಿದ್ದು ಆಶ್ಚರ್ಯವಾದರೂ ಸತ್ಯ.
ಹೀಗೆ ರಾಜೇಶ್ ಖನ್ನಾರ ದರ್ಶನಕ್ಕೆ ಕಾದು ನಿಲ್ಲುತ್ತಿದ್ದ ಅವರ ಅಸಂಖ್ಯ ಅಭಿಮಾನಿಗಳಲ್ಲಿ ಒಬ್ಬರಾದ ನಟಿ ರೀನಾ ರಾಯ್ ಮುಂದೆ ಅವರ ಜೊತೆ ನಟಿಸುವಂತಾಗಿದ್ದು ಯೋಗಾಯೋಗ. ರಾಜೇಶ್ ಖನ್ನಾ ಮದ್ರಾಸಿಗೆ ಬರುವುದು ಗೊತ್ತಾದರೆ ಮಧ್ಯರಾತ್ರಿಯ ವೇಳೆಯಲ್ಲೂ ನೂರಾರು ಯುವತಿಯರು ಅವರಿಗಾಗಿ ಕಾದು ನಿಲ್ಲುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಉತ್ತರ ಭಾರತದ ಅನೇಕ ಕಡೆ ಯುವತಿಯರು ಅವರ ಭಾವಚಿತ್ರದೊಂದಿಗೆ ಮದುವೆಯಾದ ಪ್ರಸಂಗ ರಾಜೇಶ್ ಖನ್ನಾ ಅವರ ಕುರಿತು ಅಂದಿನ ಯುವತಿಯರಿಗೆ ಇದ್ದ ಹುಚ್ಚು ಅಭಿಮಾನಕ್ಕೆ ಸಾಕ್ಷಿ. ರಾಜೇಶ್ ಖನ್ನಾ ಹೋದಲ್ಲೆಲ್ಲಾ ಅಪಾರ ಜನಸ್ತೋಮ, ಶುಭಾಶಯ, ಉಡುಗೊರೆಗಳ ಸುರಿಮಳೆ. ಅವರ ಹುಟ್ಟು ಹಬ್ಬದ ದಿನದಂದು ಲಾರಿಗಟ್ಟಲೇ ಬರುತ್ತಿದ್ದ ಹೂಗುಚ್ಛಗಳಿಂದ ಬಂಗಲೆ ತುಂಬಿ ಹೋಗುತ್ತಿತ್ತು.
70-80ರ ದಶಕದಲ್ಲಿ ಶರ್ಮಿಳಾ ಟ್ಯಾಗೋರ್, ಮಮ್ತಾಜ್, ಆಶಾ ಪಾರೇಖ್, ಹೇಮಾ ಮಾಲಿನಿ, ವಹಿದಾ ರೆಹಮಾನ್, ತನುಜಾ, ಬಬಿತಾ, ನಂದಾ, ಮೌಸಮಿ ಚಟರ್ಜಿ, ಫರೀದಾ ಜಲಾಲ್, ಟೀನಾ ಮುನಿಮ್, ಶಬಾನಾ ಅಜ್ಮಿ, ಸ್ಮೀತಾ ಪಾಟೀಲ್, ಜೀನತ್ ಅಮಾನ್, ಪರ್ವಿನ್ ಬಾಬಿ, ರೇಖಾ, ಶ್ರೀದೇವಿ, ಜಯಪ್ರದ, ರೀನಾ ರಾಯ್, ಸಿಂಪಲ್ ಕಪಾಡಿಯ, ಪದ್ಮಿನಿ ಕೋಲ್ಹಾಪುರಿ ಮತ್ತು ಪೂನಂ ದಿಲ್ಲೋನ್ ಸೇರಿದಂತೆ ಆ ಕಾಲದ ಅನೇಕ ಮುಂಚೂಣಿ ನಟಿಯರು ಅವರ ಜೊತೆ ನಾಯಕಿಯಾಗಿ ನಟಿಸಿದರು.
1978ರವರೆಗೂ ರಾಜೇಶ್ ಖನ್ನಾಗೆ ಸ್ಪರ್ಧೆ ಒಡ್ಡುವ ಎದುರಾಳಿಗಳೇ ಬಾಲಿವುಡ್ಡಿನಲ್ಲಿ ಇರಲಿಲ್ಲ. ಆದರೆ ಎಪ್ಪತ್ತರ ದಶಕದ ಅಂತ್ಯದಲ್ಲಿ ಮೊದಲು ಅಷ್ಟೇನೂ ಯಶಸ್ಸು ಕಾಣದ ಅಮಿತಾಬ್ ಬಚ್ಚನ್ “ಜಂಜೀರ್” ಚಿತ್ರದ ಮೂಲಕ ‘Angry Youngman’ ರೂಪದಲ್ಲಿ ಹೊಸಹುಟ್ಟು ಪಡೆದರು. ಮುಂದೆ ಎಂಬತ್ತರ ದಶಕದಲ್ಲಿ ಅಮಿತಾಬ್ ಬಚ್ಚನ್ ಅವರು ರಾಜೇಶ್ ಖನ್ನಾಗೆ ಪ್ರಬಲ ಸ್ಪರ್ಧೆ ನೀಡಿದರು.
‘ಸೂಪರ್ ಸ್ಟಾರ್’ ಎಂಬ ಕಿರೀಟ ಮತ್ತು ಅಪಾರ ಯಶಸ್ಸು ರಾಜೇಶ್ ಖನ್ನಾರಲ್ಲಿ ಸಣ್ಣ ಪ್ರಮಾಣದ ಅಹಂನ್ನು ಸಹ ಬೆಳೆಯುವಂತೆ ಮಾಡಿತು. ಹಿಂದಿ ಚಿತ್ರರಂಗದ ಯಾವುದೇ ಸಭೆ – ಸಮಾರಂಭವಿದ್ದರೂ ರಾಜೇಶ್ ಖನ್ನಾ ಅದರ ಕೇಂದ್ರ ಬಿಂದುವಾಗಿರುತ್ತಿದ್ದರು. ಶೂಟಿಂಗ್ ಮತ್ತು ಸಿನಿಮಾ ಕಾರ್ಯಕ್ರಮಗಳಿಗೆ ತಡವಾಗಿ ಆಗಮಿಸುವುದು ಅವರ ರೂಢಿ. ಅವರ ಆಗಮನಕ್ಕಾಗಿ ರಾಜ್ ಕಪೂರ್, ದಿಲೀಪ್ ಕುಮಾರ್, ಮನೋಜ್ ಕುಮಾರ್, ರಾಜೇಂದ್ರ ಕುಮಾರ್, ಅಮಿತಾಬ್ ಬಚ್ಚನ್, ಧರ್ಮೇಂದ್ರ, ಜಿತೇಂದ್ರ, ಮಿಥುನ್ ಚಕ್ರವರ್ತಿ ಮತ್ತು ಶತ್ರುಘ್ನ ಸಿಂಹರಂತಹ ಆ ಕಾಲದ ಖ್ಯಾತನಾಮರೆಲ್ಲ ಕಾಯುವಂತಹ ಸ್ಥಿತಿಯಿತ್ತು.
ಈ ನಡುವೆ ತಾವೇ ಮೆಚ್ಚಿ ವರಿಸಿದ ಡಿಂಪಲ್ ಕಪಾಡಿಯಾರವರೊಂದಿಗೆ ಸಾಮರಸ್ಯ ಕಡಿಮೆಯಾಗಿ ಸಂಸಾರದಲ್ಲಿ ವೈಮನಸ್ಯ ಪ್ರಾರಂಭವಾಯಿತು. ಗೃಹಕಲಹ ಅವರ ನೆಮ್ಮದಿ ಕೆಡಿಸುವುದರೊಂದಿಗೆ ವೃತ್ತಿ ಜೀವನದ ಮೇಲೂ ಸಾಕಷ್ಟು ಪರಿಣಾಮ ಬೀರಿತು. ಅಂಜು ಮಹೇಂದ್ರು ಮತ್ತು ಟೀನಾ ಮುನಿಮರ ಜೊತೆಗಿನ ಸ್ನೇಹವೂ ಸಹ ಹೆಚ್ಚು ಕಾಲ ಬಾಳಲಿಲ್ಲ.
ರಾಜೇಶ್ ಖನ್ನಾ ತಮ್ಮ ರೋಮ್ಯಾಂಟಿಕ್ ಚಿತ್ರಗಳಿಂದ ಪ್ರಸಿದ್ಧರು. ಮೊದಲಿನಿಂದಲೂ ಆ್ಯಕ್ಷನ್ ಚಿತ್ರಗಳಿಂದ ಸ್ವಲ್ಪ ದೂರವೇ ಉಳಿದಿದ್ದರು. ಆದರೆ ಎಂಬತ್ತರ ದಶಕ ಆ್ಯಕ್ಷನ್ ಯುಗ. ಅಮಿತಾಬ್ ಬಚ್ಚನ್ ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಬೆಳೆದರು. ಇಷ್ಟೆಲ್ಲ ಆದರೂ ರಾಜೇಶ್ ಖನ್ನಾ ತಮ್ಮ ರೋಮ್ಯಾಂಟಿಕ್ ಮತ್ತು ಕೌಟುಂಬಿಕ ಚಿತ್ರಗಳ ಯಶಸ್ಸಿನಿಂದ 1979ರವರೆಗೂ ಹಿಂದಿ ಚಿತ್ರರಂಗದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು. ಅವರ ಚಿತ್ರಗಳೂ ಚೆನ್ನಾಗಿ ಓಡುತ್ತಿದ್ದವು, ಗಲ್ಲಾಪಟ್ಟಿಗೆಯಲ್ಲಿ ಸಾಕಷ್ಟು ಹಣ ಮಾಡುತ್ತಿದ್ದವು. 1979ರಿಂದ 1987ರವರೆಗೆ ರಾಜೇಶ್ ಖನ್ನಾ ಮತ್ತು ಅಮಿತಾಬ್ ಬಚ್ಚನ್ ಜಂಟಿಯಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು.
ಎಂಬತ್ತರ ದಶಕದಲ್ಲಿ ರಾಜೇಶ್ ಖನ್ನಾ “ಕುದ್ರತ್”, “ಬಂದಿಶ್”, “ರೆಡ್ ರೋಸ್”, “ಮಕ್ಸದ್”, “ಆಶಾಜ್ಯೋತಿ”, “ಸೌತನ್”, “ಮಾಸ್ಟರ್ ಜೀ”, “ಧನ್ ವಾನ್”, “ಆಜ್ ಕಾ ಎಂ.ಎಲ್.ಎ ರಾಮ ಅವತಾರ್”, “ಇನ್ಸಾಫ್ ಮೈ ಕರೂಂಗಾ”, “ಅಧಿಕಾರ್”, “ಆಖಿರ್ ಕ್ಯೂಂ?”, “ಅನೋಖಾ ರಿಶ್ತಾ”, “ಹಮ್ ದೋನೋ”, “ಅಲಗ್ ಅಲಗ್”, “ಬೇವಫಾಯಿ”, “ಧರಮ್ ಕಾಂತಾ”, “ನಿಶಾನ್”, “ಸ್ವರ್ಗ್”, “ಆವಾಜ್”, “ಅಮೃತ್” ಮತ್ತು “ಅವತಾರ್” ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ಆದರೆ ಚಿತ್ರರಂಗ ಮತ್ತು ಮಾಧ್ಯಮಗಳು ಅವರ ಚಿತ್ರಗಳು ಚೆನ್ನಾಗಿ ಗಳಿಕೆ ಮಾಡಿದರೂ ಸಹ ಅದನ್ನು ಗಮನಿಸದೇ ಅವರ ಉತ್ತುಂಗದ ದಿನಗಳೊಂದಿಗೆ ಹೋಲಿಕೆ ಮಾಡುತ್ತಾ ಹೋದರು. ಬದಲಾದ ಪರಿಸ್ಥಿತಿ ಮತ್ತು ಹೆಚ್ಚಿದ ಸ್ಪರ್ಧೆಯನ್ನು ಗಮನಿಸಲೇ ಇಲ್ಲ. ದಾಂಪತ್ಯದ ವಿರಸ ಅವರನ್ನು ಕಾಡುತ್ತಿದ್ದ ಹೊತ್ತಲ್ಲೇ ಗಾಯಕ ಕಿಶೋರ್ ಕುಮಾರ್ ಅವರು ನಿಧನರಾದದ್ದು ರಾಜೇಶ್ ಖನ್ನಾಗೆ ಬಹುದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು.
ರಾಜೇಶ್ ಖನ್ನಾ ಅವರು ಬದಲಾವಣೆಗೆ ಹೊಂದಿಕೊಳ್ಳಲಿಲ್ಲ. ಬರೀ ರೋಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ಅವರು ಆ್ಯಕ್ಷನ್ ಸಿನಿಮಾಗಳಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ಪೈಪೋಟಿ ಕೊಡುವಲ್ಲಿ ಸೋತರು. ಹಿಂದೆ ವರವಾಗಿದ್ದ ‘ಸೂಪರ್ ಸ್ಟಾರ್’ ಪಟ್ಟ ಬದಲಾದ ದಿನಗಳಲ್ಲಿ ಶಾಪವಾಗಿ ಕಾಡಿದ್ದು ಸುಳ್ಳಲ್ಲ. ಜೊತೆಗೆ ಒಳಹೊರಗಿನ ಹಿತಶತ್ರುಗಳ ಕಾಟ, ಕೌಟುಂಬಿಕ ಕಲಹ ಮತ್ತು ಹಿಂದಿ ಚಿತ್ರರಂಗದ ರಾಜಕೀಯ ಅವರ ವೃತ್ತಿ ಜೀವನದ ಮೇಲೆ ತುಂಬ ಕೆಟ್ಟ ಪರಿಣಾಮ ಬೀರಿತು. ಹೀಗೆ ಕ್ರಮೇಣ ರಾಜೇಶ್ ಖನ್ನಾ ಹಿಂದಿ ಚಿತ್ರರಂಗದಲ್ಲಿ ತೆರೆಯ ಮರೆಗೆ ಸರಿಯುವಂತಾಯಿತು.
ರಾಜೇಶ್ ಖನ್ನಾ ಏನೇ ಆದರೂ ಸುಲಭವಾಗಿ ಸೋಲುಪ್ಪಿಕೊಳ್ಳುವ ವ್ಯಕ್ತಿಯಲ್ಲ. ಸಿನೆಮಾದಲ್ಲಿ ಹಿನ್ನಡೆಯಾದಾಗ ಧೃತಿಗೆಡದೆ ರಾಜಕೀಯದಲ್ಲಿ ತಮ್ಮ ಅದೃಷ್ಟದ ಪರೀಕ್ಷೆಗಿಳಿದು 1992ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನವದೆಹಲಿಯಿಂದ ಸಂಸತ್ ಪ್ರವೇಶಿಸಿದರು. ಆದರೆ ನಟರಾದ ಅವರಿಗೆ ರಾಜಕೀಯದಲ್ಲೂ ಸಹ ಹೆಚ್ಚು ದಿನ ಇರಲಾಗಲಿಲ್ಲ. ನಂತರದ ದಿನಗಳಲ್ಲಿ ಕೌಟುಂಬಿಕ ಕಲಹ, ಸೂಕ್ತ ಅವಕಾಶಗಳ ಕೊರತೆ ಮತ್ತು ಆರ್ಥಿಕ ಸಂಕಷ್ಟದಿಂದ ಅವರು ಮಾನಸಿಕವಾಗಿ ಕುಗ್ಗಿ ಹೋದರು. ಒಂದು ಕಾಲದಲ್ಲಿ ಅಕ್ಷರಶಃ ಮಹಾರಾಜನಂತೆ ಬಾಳಿದ ಈ ಮಹಾನಟ ಕೊನೆಯ ದಿನಗಳಲ್ಲಿ ತಮ್ಮ ಪ್ರೀತಿಯ “ಆಶೀರ್ವಾದ್”ನಲ್ಲಿ ಒಂಟಿಯಾಗಿ ಕಳೆದರು. ಆಗ ಅವರ ಜೊತೆಯಲ್ಲಿದ್ದದ್ದು ಸೋಲು, ಒಂಟಿತನ ಮತ್ತು ದುಃಖ ಮಾತ್ರ.
ಮಹಾನ್ ಸ್ವಾಭಿಮಾನಿಯಾಗಿದ್ದ ರಾಜೇಶ್ ಖನ್ನಾ ಯಾರ ಮುಂದೆಯೂ ಕೈಯೊಡ್ಡಿ ಬೇಡಿದವರಲ್ಲ. Income Tax ತೊಂದರೆಯಿಂದ ಒಂದೂವರೆ ಕೋಟಿ ರೂಪಾಯಿ ಕಟ್ಟಲಾಗದೆ ಅವರನ್ನು “ಆಶೀರ್ವಾದ್”ನಿಂದ ಹೊರಹಾಕಿ ಬಂಗಲೆ ಸೀಲ್ ಮಾಡಲಾಯಿತು. ಏಳು ವರ್ಷಗಳ ನಂತರ ರಾಜೇಶ್ ಖನ್ನಾ ಅದನ್ನು ಮತ್ತೆ ತಮ್ಮ ಸುಪರ್ದಿಗೆ ತೆಗೆದುಕೊಂಡರು. ಇದಕ್ಕಾಗಿ ಅವರು ಕೆಲವು ಸಾಧಾರಣ ಚಿತ್ರಗಳಲ್ಲಿ ನಟಿಸಿ ಸಾಕಷ್ಟು ಟೀಕೆಗೊಳಗಾದರು.
ಸಾಕಷ್ಟು ವೈಯಕ್ತಿಕ ಸಮಸ್ಯೆಗಳಿಂದ ನೊಂದಿದ್ದ ರಾಜೇಶ್ ಖನ್ನಾ ತಮ್ಮ ದುಃಖ ಮರೆಯಲು ಕುಡಿತದ ಮೊರೆ ಹೋದರು. ಈ ಸತತ ಮದ್ಯಪಾನ ಮತ್ತು ಧೂಮಪಾನ ಅವರ ಅನಾರೋಗ್ಯಕ್ಕೆ ಕಾರಣವಾಯಿತು. ಕೊನೆಯ ದಿನಗಳಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನಲ್ಲಿ ನಿಧನರಾದರು.
ಹಿಂದಿ ಚಿತ್ರರಂಗದ ಮೊದಲ ‘ಸೂಪರ್ ಸ್ಟಾರ್’ ಎಂಬ ಹೆಗ್ಗಳಿಕೆಗೆ ಪಾತ್ರರಾದ ರಾಜೇಶ್ ಖನ್ನಾ ನಿಜಜೀವನದಲ್ಲೂ ಒಬ್ಬ ‘ಸೂಪರ್ ಸ್ಟಾರ್’ನಂತೆಯೇ ಬಾಳಿ ಬದುಕಿದರು. ಅವರ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಏನೇ ಏರಿಳಿತಗಳಿದ್ದರೂ ಅವರೆಂದೂ ಕಲಾವಿದನಾಗಿ ಸೋತವರಲ್ಲ. ಭಾರತೀಯ ಸಿನಿಮಾ ಚರಿತ್ರೆಯಲ್ಲಿ ರಾಜೇಶ್ ಖನ್ನಾ ಅವರಿಗೆ ವಿಶೇಷ ಸ್ಥಾನವಿದೆ. ಕಲೆಗೆ ಮತ್ತು ಕಲಾವಿದನಿಗೆ ಸಾವಿಲ್ಲ. ರಾಜೇಶ್ ಖನ್ನಾ ತಮ್ಮ ರೋಮ್ಯಾಂಟಿಕ್ ಚಿತ್ರಗಳು ಮತ್ತು ಸುಮಧುರ ಹಾಡುಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳ ಮನದಲ್ಲಿ ನೆಲೆಸಿದ್ದಾರೆ.