ನಮಗೂ ಜೀವಜಲಕ್ಕೂ ಯಾವ ಬಂಧ!

ಹಿಮಾಲಯವೆಂಬ ಅಧ್ಯಾತ್ಮ ಭೂಮಿಯನ್ನು ನೋಡಬೇಕೆಂಬ ಒಂದೂವರೆ ದಶಕದ ಬಲವಾದ ಹಂಬಲವೊಂದು ಇತ್ತೀಚೆಗೆ (13,25-09-2021) ನೆರವೇರಿತು. ಋಷಿಕೇಶದ, ಉತ್ತರ ಕಾಶಿಯ ಗಂಗೋತ್ರಿಯಿಂದ ಹತ್ತು ಸಾವಿರ ಅಡಿಗಳಷ್ಟು ಎತ್ತರದ ಪರ್ವತಗಳ ಮೇಲೆಚಾರಣ ಹೊರಟು ಸುಮಾರು ಇಪ್ಪತ್ತೈದು ಕಿಲೋಮೀಟರ್‍ ದೂರದ ಚೀರ್‍ವಾಸ, ಭೋಜ್‍ವಾಸ ಮತ್ತು ಗೋಮುಖವನ್ನು ಕಂಡು ಪುನೀತತೆ ಮೂಡಿತು.ಅಲ್ಲಿಂದ ಹದಿನಾಲ್ಕು ಸಾವಿರ ಅಡಿಗಳಷ್ಟು ಎತ್ತರದ ಗಿರಿ ಶಿಖರಗಳ ನಡುವೆ ಸನಾತನ ಋಷಿ, ಮಹರ್ಷಿಗಳ ತಪಃಶಕ್ತಿಯ ಭವ್ಯ ತರಂಗಗಳನ್ನು ಹೊಮ್ಮಿಸುತ್ತ  ಮೈಚೆಲ್ಲಿರುವ ಹಾಗೂ ಅದೊಂದು ದಿವ್ಯ ಗ್ರಹವೇ ಎಂಬಂತೆ ಭಾಸವಾಗುವ, ‘ತಪೋವನ’ವೆಂಬ ಪುಣ್ಯಭೂಮಿಯನ್ನು ಸ್ಪರ್ಶಿಸಿ, ಜನ್ಮ ಸಾರ್ಥಕ ಭಾವದಿಂದ ಹಿಂದಿರುಗಿದೆ. ಅದೇ ತನ್ಮಯತೆಯಲ್ಲಿ ಒಂದುವಾರವನ್ನು ಮನೆಯೊಳಗೆಯೇ ಕಳೆದ ಮೇಲೂ ಮನಸ್ಸು ಮರಳಿ ಜವಾಬ್ದಾರಿಗಳನ್ನು ಹೊರಲೊಪ್ಪದೆ ಮುಷ್ಕರ ಹೂಡಿದಂತಿತ್ತು. ಮಾತ್ರವಲ್ಲ ಲೌಕಿಕದ ಸರ್ವ ಹೊರೆಗಳನ್ನು ಕೆಡಹಿ ಮತ್ತೆ ಹಿಮಾಲಯಕ್ಕೆ ಹೊರಟು ಬಿಡಲೇ…? ಎಂಬ ಒಲವು ಕಾಡತೊಡಗಿತು.ಆದ್ದರಿಂದ ಅಂದು ಬೆಳಿಗ್ಗೆ ಮತ್ತೆ ಸಣ್ಣದೊಂದು ಪ್ರಯಾಣಕ್ಕೆ ಹೊರಡುವುದು ಅನಿವಾರ್ಯವಾಯಿತು.

ಆದರೆ ಆ ಹೊತ್ತಿನ ಉಡುಪಿಯ ರಾಷ್ಟ್ರೀಯ ಹೆದ್ದಾರಿಯ ವಾಹನ ದಟ್ಟಣೆ ಮತ್ತು ಜನಜಂಗುಳಿಯ ಧಾವಂತ ಹೇಗಿತ್ತೆಂದರೆ, ‘ಅಯ್ಯೋ, ದೇವರೇ…!ಯಾವ ಕ್ಷಣದಲ್ಲಾದರೂ ಪ್ರಪಂಚವೇ ಮುಳುಗಿ ಹೋದೀತು.ಅಷ್ಟರೊಳಗೆ ತಂತಮ್ಮ ಇಷ್ಟಾರ್ಥಗಳನ್ನೆಲ್ಲ ಸಿದ್ಧಿಸಿ ಕೊಳ್ಳಬೇಕು ಎಂಬಂತಿತ್ತು.ಆ ಗದ್ದಲದಿಂದ ಆದಷ್ಟು ದೂರದ ಏಕಾಂತದತ್ತ ಹೋಗ ಬೇಕೆನಿಸಿದಾಗ ಸೆಳೆದುದು ಸಹ್ಯಾದ್ರಿಯ ಮಡಿಲು. ತಾಳ್ಮೆಯಿಂದ ದಾರಿ ಮಾಡಿಕೊಂಡು ಹಾಲಾಡಿಯವರೆಗೆ ಗರಿಷ್ಠ ವೇಗದಲ್ಲಿ ಕಾರು ಓಡಿಸಿದೆ.ಶಂಕರನಾರಾಯಣದ ರಸ್ತೆಯನ್ನು ಹಿಡಿದ ಮೇಲೆ ತುಸು ನಿರಾಳವೆನಿಸಿತು.ಅಲ್ಲಿಂದ ಬಲಕ್ಕೆ ತಿರುಗಿ ಸಿದ್ಧಾಪುರವನ್ನು ಹಿಂದಿಕ್ಕಿ ಹೊಸಂಗಡಿ ಘಾಟಿಯಿಂದ ಸಂಚರಿಸ ತೊಡಗಿದಾಗ ಘಟ್ಟದ ಸಮೃದ್ಧ ಹಸಿರು ರಾಶಿಯ ಮನೋಹರ ದೃಶ್ಯವು ಕಲ್ಲೆಸೆದ ಕೊಳದಂತಾಗಿದ್ದ  ಮನಸ್ಸನ್ನು ಮೃದುವಾಗಿ ತಿಳಿಗೊಳಿಸಿತು.

ಬೆಟ್ಟಗುಡ್ಡಗಳ ರಸ್ತೆಗಳಲ್ಲಿ ಸಾಗುವಾಗ ನನ್ನ ವಾಹನದ ವೇಗವು ಅರಿವಿಲ್ಲದೇ ಮಂದ ಗತಿಗಿಳಿಯುತ್ತದೆ. ಕಾರಣ ಮೈಮನಸ್ಸುಗಳಲ್ಲಿ ಖುಷಿಯ ಹೊನಲನ್ನು ಹರಿಸುವ ಬೃಹತ್ ವೃಕ್ಷರಾಶಿಗಳು ಹಾಗೂ ಚೆಂದದ ನಿಸರ್ಗ ದೃಶ್ಯಾವಳಿಗಳು! ಈ ಘಾಟಿಯಿಂದ ಸುಮಾರು ಒಂಬತ್ತು ಕಿಲೋಮೀಟರ್ ಸಾಗಿದರೆ ಒಂದು ಕಡೆ,ಎಡಭಾಗದ ಬೆಟ್ಟದಿಂದ ನೊರೆ ಹಾಲಿನಂಥ ಮನೋಹರ ಜಲಪಾತವೊಂದು ಮಳೆಗಾಲದ ಅಂತ್ಯದವರೆಗೂ ಧುಮ್ಮಿಕ್ಕುತ್ತದೆ. ಈ ರಸ್ತೆಯಲ್ಲಿ ಸಂಚರಿಸುವವರಿಗೆಇದು ಚಿರಪರಿಚಿತ ಹಾಗು ಸುಲಭವಾಗಿ ಕಾಣಲು ಸಿಗುವ ಅಬ್ಬಿ. ಕಾಡಿನೊಳಗೆ ಹುಟ್ಟುವ ಇಂಥ ತಡಸಲುಗಳು ತಮ್ಮ ಬೀದಿಯುದ್ದಕ್ಕೂ ಎದುರಾಗುವ ಗಿಡಮರ,ಬಳ್ಳಿಗಳನ್ನೂ ಅವುಗಳ ನಾರು ಬೇರು, ತೊಗಟೆ, ಹೂವು,ಕಾಯಿ, ಹಣ್ಣುಗಳನ್ನೂ ಸವರಿ ಆಯುರ್ವೇದೀಯ ಸಾರಸತ್ವವನ್ನು ಹೀರಿ ಹರಿಯುತ್ತ ಅಸಂಖ್ಯಾತ ವನ್ಯ ಜೀವರಾಶಿಗೆ ಆಸರೆಯಾಗಿ,ಜನಜೀವನವನ್ನು ಪ್ರವೇಶಿಸಿ ಸಮೃದ್ಧಗೊಳಿಸುತ್ತ ಸಾಗರ ಸೇರಿ ಉಪ್ಪು ನೀರಿನ ಜೀವಿಗಳಿಗೆ ಜೀವನಾಡಿಯಾಗಿ, ಆವಿಯಾಗಿ, ಮೋಡಗಳಾಗಿ ಗುಡುಗು ಮಿಂಚುಗಳ ಸಮ್ಮಿಲನದಲ್ಲಿ ಬಸುರಾಗಿ, ತಂಪಾದ ಕರುಣಾ ಬಿಂದುಗಳಾಗಿ ಮರಳಿ ಭುವಿಗಿಳಿದು ಜಗತ್ತನ್ನು ಪೊರೆಯುವ,‘ಪ್ರಾಣಜಲ’ವೆಂಬ ಈ ಉದಕದ ಮಹತ್ವವನ್ನೂ,ಅದಕ್ಕೂ ತಮಗೂ ಇರುವಂಥ ಅಗೋಚರ ಬಂಧವನ್ನೂ ತಿಳಿದವರೆಷ್ಟು ಮಂದಿ!

ಹೌದು, ನಮ್ಮಲ್ಲಿ ಬಹುತೇಕರು ಅಗಾಧವಾದ ಜಲರಾಶಿಯನ್ನೂ ಅದರ ಹರಹು, ಪ್ರವಾಹವನ್ನು ಕಂಡ ಕೂಡಲೇ ಸಮ್ಮೋಹನಗೊಳ್ಳುತ್ತೇವೆ ಏಕೆ? ನಮಗೂ ಆ ಜಲರಾಶಿಗೂ,ಅದರ ಬಳಕೆಯೊಂದನ್ನು ಬಿಟ್ಟರೆ ಬೇರಾವ ಸಂಬಂಧವಿದೆ? ಆ ಜಲರಾಶಿಯೊಂದಿಗಿರುವಷ್ಟು ಹೊತ್ತು ನಮ್ಮನ್ನಾಳುವ  ‘ನಾನು’ವಿನಿಂದ ತುಸು ಬಿಡುಗಡೆ ಹೊಂದಿಮರ, ಗಿಡ, ಬಳ್ಳಿ, ಪಶು, ಪಕ್ಷಿ, ಕ್ರಿಮಿ ಕೀಟಳಂತೆಯೇ ನಾವು ಪ್ರಕೃತಿಯೊಳಗೊಂದಾಗಿ ಆನಂದದಿಂದ ಮೈಮರೆಯಲು ಕಾರಣವೇನು? ಅಂಥದ್ದೇನಿದೆ ಈ ಜಲವೆಂಬ ದ್ರಾವಣದಲ್ಲಿ!-ಎಂದುಕೊಳ್ಳುತ್ತ ಆ ಜಲಪಾತವನ್ನು ದಾಟಿ ಮುಂದೆ ಸಾಗಿದೆ. ಆಗ ಕೆಲವು ವಿಚಾರಗಳು ಮುನ್ನೆಲೆಗೆ ಬಂದವು.

‘ಆದಿಯಲ್ಲಿ ಎಲ್ಲವೂ ಜಲದಿಂದಲೇ ಉಗಮವಾಯಿತು.ಜೀವಾತ್ಮರು ಮಳೆ ನೀರಿನ ಮೂಲಕ ಧರೆಗಿಳಿದು ಸಸ್ಯಗಳಲ್ಲಿ ಸೇರಿ ಜೀವರಾಶಿಗಳ ಆಹಾರವಾಗಿ, ವೀರ್ಯಾಣುಗಳಾಗಿ ಗರ್ಭಗಳಲ್ಲಿ ಹುಟ್ಟು ಪಡೆಯುತ್ತಾರೆ!’ಎಂಬ ವೇದದ ಓದು ನೆನಪಾದರೆ, ವಿದ್ವಾಂಸರೊಬ್ಬರು ತಮ್ಮ, ‘ಹಿಪ್ನಾಟಿಸಮ್’ಕಲೆಯ ಪ್ರಯೋಗಕ್ಕೆ ಬಾಲಕನೊಬ್ಬನನ್ನು ಒಳಪಡಿಸಿ ಅವನ ಹುಟ್ಟಿನ ಮೂಲವನ್ನು ತಿಳಿಯಲೆತ್ನಿಸಿದಾಗ, ‘ತಾನು ತಾಯಿಯ ಹೊಟ್ಟೆಯನ್ನು ಸೇರುವ ಮುನ್ನ ಮೋಡದೊಳಗಿದ್ದೆ. ಕಾಲ ಕೂಡಿ ಮಳೆಯೊಂದಿಗೆ ಭುವಿಗೆ ಬಿದ್ದು ಗರ್ಭವನ್ನು ಸೇರಿದೆ!’ಎಂದಿದ್ದನಂತೆ. ವಿಜ್ಞಾನದ ಪ್ರಕಾರವುಮನುಷ್ಯನ ದೇಹದಲ್ಲಿ ಶೇಖಡ 70ಕ್ಕಿಂತಲೂ ಅಧಿಕ ಭಾಗ ನೀರೇ ಇದೆಯಲ್ಲವೇ! ಅಂದರೆ ನಮ್ಮ ಹುಟ್ಟಿಗೂ, ಜೀವನಕ್ಕೂ ಹಾಗೂ ಗತಿಸಿ ಸೇರುವಲ್ಲಿಯ ಅವ್ಯಕ್ತ ತಾಣಕ್ಕೂ ನಿಮಿತ್ತವಾದ ಕಾರಣಕ್ಕಾಗಿಯೇ ನಾವು ವಿಶಾಲ ಜಲರಾಶಿಯನ್ನು ಕಂಡಾಗಲೆಲ್ಲ ಸಮ್ಮೋಹನ ಗೊಳ್ಳುತ್ತೇವೆಯೇ!?ಎಂದುಕೊಂಡು ವಿಸ್ಮಯ ಪಡುತ್ತ ಘಾಟಿಯಲ್ಲಿ ಸಂಚರಿಸುತ್ತಿದ್ದೆ.

ತುಸು ಮುಂದೆ ಸಾಗುವಷ್ಟರಲ್ಲಿ ರಸ್ತೆಯ ಎಡೆಬದಿಯಲ್ಲಿ ತಟ್ಟನೆ ಕಾಟಿರಾಯ(ಕಾಡುಕೋಣ)ನೊಬ್ಬನ ದರ್ಶನವಾಗಿ ಮೈಜುಮ್ಮೆಂದಿತು. ಆ ನಿರ್ಜನ ಪ್ರದೇಶದಲ್ಲಿ ಆ ದೈತ್ಯ ಅರಣ್ಯ ಜೀವಿಯಂತೆ ನಾನೂ ಒಬ್ಬಂಟಿಯೇ! ಭಯವೋ, ಆನಂದವೋ ತಿಳಿಯದೆ ಪುಲಕಗೊಂಡೆನಾದರೂ ಅವನ ಸಮೀಪ ಹೋಗಲು ಆಸೆಯಾಗಿ ಕಾರಿನಿಂದಿಳಿದು ಸುಮಾರು ಇಪ್ಪತ್ತು ಅಡಿಗಳಷ್ಟು ಹತ್ತಿರ ಹೋಗಿ ಫೋಟೋಕ್ಲಿಕ್ಕಿಸ ತೊಡಗಿದೆ. ಆತ ನನ್ನನ್ನೊಮ್ಮೆ ತಲೆಯೆತ್ತಿ ಗಂಭೀರವಾಗಿ ದಿಟ್ಟಿಸಿದವನು ಜೋರಾಗಿ ಉಸಿರು ದಬ್ಬಿಮತ್ತೆ ಮೇಯುವುದರಲ್ಲಿ  ಮಗ್ನನಾದ. ಆ ಸೂಚನೆಯನ್ನು ತಿಳಿದು ಅವನಿಗೆ ತೊಂದರೆ ಮಾಡದೆ ಕಾರು ಹತ್ತಿ ಘಾಟಿಯನ್ನುಹಿಂದಿಕ್ಕಿ ಹುಲಿಕಲ್‍ ದಾಟಿ ಮಾಸ್ತಿಕಟ್ಟೆಗೆ ತಲುಪಿ, ಬಲಕ್ಕೆ ತಿರುಗಿ ತೀರ್ಥಹಳ್ಳಿಯ ಕವಲೇದುರ್ಗದತ್ತ  ಸಾಗಿದೆ.

ಸುಮಾರು ಹತ್ತು ಕಿ. ಮೀ. ಹೋದಾಗ ಅಲ್ಲೊಂದು ಕಡೆ ರಸ್ತೆಯ ಇಕ್ಕೆಲಗಳಲ್ಲಿ ಮರಳಿ ಜಲಾವೃತ್ತ ಪ್ರದೇಶವೊಂದು ಎದುರಾಯಿತು.ಅದೊಂದು ರಮ್ಯ ಪರಿಸರ! ಕಾರಿಗೆ ರಪ್ಪನೆ ಬ್ರೇಕ್ ಬಿತ್ತು. ಇಳಿದು ಸುತ್ತಲೂ ನೋಟ ಹರಿಸಿದೆ.ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಹರಿಯುವ ವಾರಾಹಿ ನದಿಯನ್ನು ಜಲವಿದ್ಯುತ್‍ ಯೋಜನೆಗಾಗಿ ಬಳಸಿಕೊಂಡು ಆಣೆಕಟ್ಟು ನಿರ್ಮಿಸಿದ ಕಾರಣ ಮುಳುಗಿ ನಾಮಾವಶೇಷವಾಗಿದ್ದ  ಕೆಲವು ಹಳ್ಳಿಗಳಲ್ಲಿ ಆ ಪ್ರದೇಶವು ಒಂದು ಎಂಬುದನ್ನುಅಲ್ಲಿನ ಅಪಾರ ಜಲರಾಶಿ ಮತ್ತು ಸುತ್ತಲಿನ ಪ್ರದೇಶವು ಸೂಚಿಸಿತು.ನಮ್ಮ ಬಹುತೇಕ ಮಾನವಾಭಿವೃದ್ಧಿ ಯೋಜನೆಗಳೆಲ್ಲ ಸಾಕಷ್ಟು ಜನಜೀವನವನ್ನು,ಅದರ ಸಂಸ್ಕøತಿ ಮತ್ತು ಭರವಸೆಯನ್ನು ಹಾಗೂ ಆಮ್ಲಜನಕದ ಭಂಡಾರವೇ ಆದಂಥ ಸಮೃದ್ಧ ಹಸಿರನ್ನೂ ಆಪೋಷನ ಗೈದನಂತರವೇ ಸಾಕಾರಗೊಳ್ಳುತ್ತವೆ ಎಂಬುದಕ್ಕೆಇಲ್ಲಿನ ತೋಟಗಳು,ಹೊಲಗದ್ದೆಗಳು, ಅರೆ ಮುಳುಗಿ ತೇಲಾಡುವಂತೆ ಕಾಣುವ ಮಣ್ಣಿನ, ಡಾಂಬರು ರಸ್ತೆಗಳೆಲ್ಲ ಸಾಕ್ಷಿಗಳಾಗಿ ಮನ ಕಲಕುತ್ತವೆ.ಜೊತೆಗೆ ಮಾನವ ಬದುಕಿನ ನಶ್ವರತೆಯ ವಿರಾಟರೂಪವನ್ನು ಪ್ರದರ್ಶನಕ್ಕಿಟ್ಟ ಹಾಗೆ ಭಾಸವಾಗುತ್ತದೆ.

ಕ್ಯಾಮರಾವನ್ನೆತ್ತಿಕೊಂಡು ಸುಮಾರು ಅರ್ಧಕಿ.ಮೀ. ದೂರದ ಜಲಾಶಯದತ್ತ ನಡೆದೆ.ಆ ಪ್ರದೇಶದಲ್ಲಿ ಅಳಿದುಳಿದ ಒಂದಷ್ಟುಹೊಲಗದ್ದೆಗಳಲ್ಲಿ ಕಾಲಿಟ್ಟರೆ ಪುಸಕ್ಕನೆ ಸಿಲುಕಿ ಬಿಡುವಷ್ಟು ಭೂಮಿಯು ಮೃದುವಾಗಿ ಕೃಷಿಗೆ ಅಯೋಗ್ಯವಾಗಿತ್ತು. ಆ ಜಲಾನಯನದ ಬಲ ಪಾಶ್ವದಲ್ಲಿ ದಟ್ಟ ಕಾಡೊಂದುನಿತ್ಯ ಹರಿದ್ವರ್ಣದಂತೆ ಶೋಭಿಸುತ್ತಿತ್ತು. ಕೊಕ್ಕರೆಗಳು,ವಿವಿಧಪಕ್ಷಿಗಳು ಸ್ವಚ್ಛಂದವಾಗಿ ಆಹಾರಾನ್ವೇಷ್ವಣೆಯಲ್ಲಿದ್ದವು. ನಾಟಿದನ, ಜಾನುವಾರುಗಳು ಸುತ್ತಲಿನ ಹುಲ್ಲುಗಾವಲಲ್ಲಿ ಸಮರಸದಿಂದ ಮೇಯುತ್ತಿದ್ದವು. ಹಾಗೆಯೇ ಮುಂದುವರೆದು ಸರೋವರದ ದಂಡೆಗೆ ಬಂದವನು ಮತ್ತೊಮ್ಮೆ ಸುತ್ತಲೂ ಕಣ್ಣು ಹಾಯಿಸಿದೆ. ನನ್ನ ಸೀಮಿತ ದೃಷ್ಟಿಯ ದಿಗಂತದವರೆಗೆ ಅಗಾಧವಾದ ನೀರೇ ನೀರು!

ಈಚೀಚೆಗೆ ಆಧುನಿಕರೆನಿಸಿದ ನಮ್ಮಲ್ಲಿ ಬಹುತೇಕರು ಅಭಿವೃದ್ಧಿಯ ಪಥದಲ್ಲಿ,ಗಳಿಕೆಯ ಹುಮ್ಮಸ್ಸಿನಲ್ಲಿ ಪೈಪೋಟಿಗೆ ಬಿದ್ದಂತೆ ಬದುಕುತ್ತ, ಮನುಷ್ಯ ಜೀವನದ ನೈಜ ಗುರಿ ಏನು?ಎಂದು ತಿಳಿಯದೆಯೋ ಅಥವಾ ತಿಳಿದರೂ ಲೆಕ್ಕಿಸದೆಯೋ ಸುಖಭೋಗಗಳತ್ತಲೇ ಹಾತೊರೆಯುತ್ತ ಅಗ್ನಿಯನ್ನೇ ಆಹಾರವೆಂದು ಭ್ರಮಿಸುತ್ತ ಸುಟ್ಟುಕೊಳ್ಳುತ್ತಿರುತ್ತಾರೆ. ಜೊತೆಗೆ ಸೃಷ್ಟಿಯ ಉದ್ದೇಶವನ್ನು ವ್ಯರ್ಥಗೊಳಿಸುತ್ತ ಹೈರಾಣಾಗಿ,ಕೊನೆಯಲ್ಲಿ ಒಂದಿಷ್ಟು ನೆಮ್ಮದಿಯನ್ನು ಅರಸತೊಡಗುತ್ತಾರೆ. ಅಂಥವರನ್ನೇ ಗುರಿಯಾಗಿಸಿ ಕೊಂಡುಈಗ ಕೆಲವು ಬಗೆಯ‘ಧ್ಯಾನ’ಕೋರ್ಸ್‍ಗಳು ಹುಟ್ಟಿಕೊಂಡಿವೆ.ಅವು ತಮ್ಮಹವಾನಿಯಂತ್ರಿತ ಕೊಠಡಿಗಳಲ್ಲಿ ಅಂಥವರನ್ನು ಕೂಡಿ ಹಾಕಿ,ಕಲ್ಪಿತ ವಸ್ತು, ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಒತ್ತಡಿಸುತ್ತವೆ. ಕೊನೆಯಲ್ಲಿ ಏನು ಸಂಭವಿಸಿತೋ,ಇಲ್ಲವೋ, ‘ನೀವೀಗ ಧ್ಯಾನವನ್ನು ಕಲಿತಿರುವಿರಿ! ಇನ್ನುಮನೆಯಲ್ಲಿಯೇ ಕುಳಿತು ಸಾಧನೆ ಮಾಡುತ್ತ ದಿವ್ಯಾನಂದವನ್ನುಪಡೆಯಿರಿ!’ಎಂದು ಪ್ರಮಾಣ ಪತ್ರವನ್ನೂ ಕೈಗಿತ್ತು ಕಳುಹಿಸುತ್ತವೆ. ಆಗ ಸಿಗುವ ಒಂದಿಷ್ಟು ಸಂತೋಷದಿಂದ ಮರಳಿ ಬಂದು ಮತ್ತೆ ಯಾಂತ್ರಿಕ ಬದುಕಿನಲ್ಲಿ ಮುಳುಗಿ ನರಳುವಂಥವರು ನಿಸರ್ಗದತ್ತ  ದೈವೀ ಶಕ್ತಿಗಳಿಂದ ತುಂಬಿದ ಇಂತಹ ತಾಣಗಳಿಗೆ ಭೇಟಿ ನೀಡಲು, ಆಸ್ವಾಧಿಸಲು ಅಭ್ಯಾಸಗೊಂಡರೆಂದರೆ ಇಲ್ಲಿ ಮೊಳೆತು ಬೆಳೆದು ಅರಳಿ ನಿಂತು ಸೂರ್ಯರಶ್ಮಿಗೆ ಹೊಳೆವ ಪುಟ್ಟ ಪುಟ್ಟ ಕಾಡು ಹೂವುಗಳಲ್ಲಿ,ಮಕರಂದ ಹೀರುವ ದುಂಬಿಗಳಲ್ಲಿ,ಅವುಗಳನ್ನು ಕಬಳಿಸಲು ಸುಳಿದಾಡುವ ಪಕ್ಷಿಗಳಲ್ಲಿ, ಮೂತಿಗಳನ್ನು ತಿವಿ ತಿವಿದು ಮೇಯುವ ದನಕರುಗಳಲ್ಲಿ, ಅವುಗಳ ಬಾಯ್ಗಳಿಗೆ ಸಿಲುಕಿ ಹರಿದು ನಲುಗುವ ತುಂಡು ಹುಲ್ಲುಗಳ ಹೊಳಪಿನಲ್ಲಿ, ಅಗಾಧ ಜಲರಾಶಿಯ ಮೇಲೆ ಬಿದ್ದು ವಿವಿಧ ಬಣ್ಣಗಳ ಕಾಮನ ಬಿಲ್ಲು ಮೂಡಿಸುವ ನೇಸರನ ಕಾಂತಿಯಲ್ಲಿ, ಹದವಾಗಿ ಬೀಸುವ ಮಂದ ಮಾರುತದಲ್ಲಿ-ಹೀಗೆ ಎಲ್ಲೆಲ್ಲೂ ಅಪೂರ್ವ‘ಧ್ಯಾನ’ವೇ ಮುಸುಕೆಳೆದು ಕುಳಿತು ತನ್ನನ್ನು ಅರಸುವ ಮನಸ್ಸುಗಳ  ನಿರೀಕ್ಷೆಯಲ್ಲಿರುತ್ತದೆ.

ಒಮ್ಮೆ ಇಂತಹ ಚೈತನ್ಯಗಳ ಮೇಲೆ ನಮ್ಮ ಹೊರಗಣ್ಣುಗಳನ್ನು ನೆಡಲಿಚ್ಛಿಸಿದರೆ ಸಾಕು, ಒಳಗಣ್ಣಿಗೆ ಅಪೂರ್ವ ಧ್ಯಾನದ ದರ್ಶನವಾಗುವುದು ಖಚಿತ! ಆದರೆ ಬಿಡುವು ದೊರೆತರೆ ಸಾಕು ಮಾಲು, ಮಹಲುಗಳೆಂಬ ಐಷಾರಾಮದತ್ತ ಧಾವಿಸುವ ಅಬ್ಬೇಪಾರಿ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲಾಗದ ಬುದ್ಧಿಗೆ ಅದರಿಂದಲೇ ಸಂಕಷ್ಟ ಪಡಬೇಕೆಂಬ ಅವಸ್ಥೆಯಿದ್ದರೆ ದೇವರು ಕೂಡಾ ಬಿಡುಗಡೆ ನೀಡಲಾರನೇನೋ!- ಎಂದು ಯೋಚಿಸುತ್ತ ಆ ಜಲರಾಶಿಯ ಎಡ ಮಗ್ಗುಲಿನ ಮೈದಾನ ಮತ್ತು ಕುರುಚಲು ಹಾಡಿಯತ್ತ ಕಣ್ಣು ಹಾಯಿಸಿದೆ. ಅಲ್ಲೊಂದು ಮರದ ಬುಡದಲ್ಲಿ ಮಹಿಳೆಯೊಬ್ಬರು ಕುಳಿತಿರುವುದು ಕಾಣಿಸಿತು. ಒಂದು ಕ್ಷಣ ಮನಸ್ಸು ವಿಚಲಿಸಿತು. ತಕ್ಷಣ ದೃಷ್ಟಿಯನ್ನು ಕಿತ್ತು  ಸರೋವರದತ್ತ ನೆಟ್ಟೆ. ಎಷ್ಟು ಹೊತ್ತು ಹಾಗೆನಿಂತಿದ್ದೆನೋ,‘ಎಲ್ಲಿಂದ ಬಂದಿರಿ…?’ಹಿಂದಿನಿಂದ ಕೇಳಿಸಿದ ಧ್ವನಿಗೆ ಬೆಚ್ಚಿ ಹಿಂದಿರುಗಿದೆ. ಆ ಮಹಿಳೆ ನನ್ನ ಹಿಂದೆಯೇ ನಿಂತಿದ್ದರು.

‘ಉಡುಪಿಯಿಂದ ಬಂದೆನಮ್ಮ. ನಿಮ್ಮೂರಿನ ಪ್ರಕೃತಿಯ ಚಂದ ಸೆಳೆಯಿತು.ಫೋಟೋಗ್ರಫಿ ಮಾಡೋಣವೆಂದು ಬಂದೆ’ಎಂದೆ.

‘ಓಹೋ ಹೌದಾ…?’ ಎಂದಾಕೆ ನಕ್ಕಾಗ ಕ್ಯಾಮರಾವನ್ನು ಅವರತ್ತ ತಿರುಗಿಸಿ, ‘ನಿಮ್ಮದೊಂದು ಫೋಟೋ ತೆಗೆಯಲೇ?’ಎಂದೆ ನಗುತ್ತ.

‘ಅಯ್ಯಯ್ಯೋ…ನನ್ನ ಪಟವೆಲ್ಲ ಯಾಕೆ ಮಾರಾಯ್ರೇ…!’ಎಂದು ಆಕೆ ಮುಗ್ಧವಾಗಿ ನಗುತ್ತಪಟಕ್ಕೂ ತೆರೆದು ಕೊಂಡಾಗ ನಗು ಬಂದು, ರಪ್ಪನೆ ಕ್ಲಿಕ್ಕಿಸಿ ತೋರಿಸಿದೆ.‘ಓ ದೇವರೇ…,ತೆಗೆದೇ ಬಿಟ್ಟಿರಲ್ಲ…!’ಅನ್ನುತ್ತ ಆಕೆ ಮತ್ತಷ್ಟು ನಾಚಿದರು.ಬಳಿಕ ಅವರೊಂದಿಗೆ ಮಾತಿಗಿಳಿದೆ.ಆಕೆ, ಸರಕಾರದ ಯೋಜನೆಯಿಂದ ತಮ್ಮತೋಟ, ಹೊಲಗದ್ದೆಗಳೆಲ್ಲ ಮುಳುಗಡೆಯಾದ ಕಥೆಯನ್ನು ಬಿಚ್ಚಿಟ್ಟವರು, ನಾನು ಕುತೂಹಲದಿಂದ ಬಂದಿದ್ದ ಜಲಾವ್ರತ ಪ್ರದೇಶದತ್ತ ಬೊಟ್ಟು ಮಾಡಿ, ‘ಇದೇ ನೋಡಿ ನಮ್ಮತೋಟ ಮತ್ತು ಕೃಷಿ ಭೂಮಿ ಇದ್ದ ಜಾಗ!’ಎಂದಾಗ ವಿಷಾದವಾಯಿತು.ಅಷ್ಟು ಹೇಳಿದ ಆಕೆ ಕೆಲ ಕ್ಷಣ ಅನ್ಯ ಮನಸ್ಕರಾಗಿ ಸರೋವರವನ್ನು ದಿಟ್ಟಿಸಿದವರು,‘ನಮ್ಮ ಭೂಮಿಯೆಲ್ಲ ಮುಳುಗಡೆಯಾದ ನಂತರ ನನ್ನಯಜಮಾನರೂ ತೀರಿಕೊಂಡರು.ಬಳಿಕ ನನ್ನನ್ನೊಂದು ಸಮಸ್ಯೆಯು ಭಾದಿಸತೊಡಗಿತು!’ಎಂದು ಮೌನವಾದರು.ನನಗೆ ಕುತೂಹಲವಾಗಿ,‘ಏನಮ್ಮಸಮಸ್ಯೆ?’ಎಂದೆ.

‘ಈ ಜಮೀನು ನೀರು ಪಾಲಾದ ನಂತರವೋ ಅಥವಾ ಗಂಡ ಹೋದ ಬಳಿಕವೋ ಸರಿಯಾಗಿ ಅಂದಾಜಿಲ್ಲ.ಒಟ್ಟಾರೆ ಆವತ್ತಿನಿಂದ ನನಗೆ ದಿನ ನಿತ್ಯ ಒಂದು ರೀತಿಯ ನಿತ್ರಾಣವು ಕಾಡಲಾರಂಭಿಸಿದೆ.ಹತ್ತು ಹೆಜ್ಜೆ ನಡೆದರೆ ಸಾಕು, ಬಿದ್ದೇ ಬಿಡುತ್ತೇನೇನೋ ಎಂಬಷ್ಟು ದಿಗಿಲಾಗುತ್ತದೆ. ಮಗ, ಮಗಳು ಸಾಕಷ್ಟು ಔಷಧೋಪಚಾರ ಮಾಡಿಸುತ್ತಿದ್ದಾರೆ.ಆದರೂ ಹಾಳಾದ ಆಯಾಸವೊಂದು ಬಿಟ್ಟು ಹೋಗುತ್ತಿಲ್ಲ.ಓ,ಅಲ್ಲೊಂದು ಎತ್ತರದ ಜಾಗ ಕಾಣುತ್ತಿದೆಯಲ್ಲ ಅಲ್ಲಿಯೇ ನಮ್ಮ ಮನೆಯಿರುವುದು.ಇವತ್ತು ದನಗಳನ್ನು ಮೇಯಿಸಲು ಅಟ್ಟಿಕೊಂಡು ಬಂದವಳಿಗೆ ಸುಸ್ತಾಗಿಬಿಟ್ಟಿತು.ಆ ಮರದಡಿಯಲ್ಲಿ ಸುಧಾರಿಸಿಕೊಳ್ಳುತ್ತಿದ್ದೆ. ಆಗ ನೀವು ಬರುವುದು ಕಂಡಿತು.ಯಾರಪ್ಪ, ನೋಡುವಾಂತ ಬಂದೆ!’ಎಂದು ಹಗುರವಾಗಿ ನಕ್ಕರು.

‘ನಿಮ್ಮನ್ನೇನೋ ಚಿಂತೆ ಕಾಡುತ್ತಿರಬಹುದಮ್ಮ.ಅದರಿಂದಲೂ ದೈಹಿಕ ತೊಂದರೆಗಳು ಕಾಣಿಸಿ ಕೊಳ್ಳಬಹುದು’ಎಂದು ತೋಚಿದ್ದನ್ನು ಹೇಳಿದೆ.

‘ಅಯ್ಯೋ, ಚಿಂತೆ ಏನಿಲ್ಲ ಇವರೇ…!’ಅಂದವರು ಮತ್ತೆ ಜಲರಾಶಿಯತ್ತ ದೃಷ್ಟಿ ನೆಟ್ಟು ಲೀನವಾದರು.

‘ಅಲ್ಲೇನಿದೆಯಮ್ಮಾ…?’ಎಂದು ಎಚ್ಚರಿಸಿದೆ.

‘ಹ್ಞಾಂ! ಅಲ್ಲಿ ನಮ್ಮದೊಂದು ದೈವದ ಕೊಟ್ಟಿಗೆಯಿತ್ತು ಇವರೇ. ನನ್ನ ಅಜ್ಜ, ಪಿಜ್ಜನ ಕಾಲದಷ್ಟು ಪುರಾತನವಾದ,ಕಾರಣಿಕದ ದೈವವಂತೆ ಅದು! ನಾನದಕ್ಕೆ ದಿನಾಲೂ ಹೂ, ನೀರನ್ನಿಡುತ್ತ ಇದ್ದೆ.ಆದರೆ ಈ ವಾರಾಹಿಯಿಂದಾಗಿ ಅದು ಮುಳುಗಿ ಹೋಯಿತು. ನನ್ನ ಗಂಡ ಅದನ್ನುಮನೆಗೆ ತಂದು ಸ್ಥಾಪಿಸಿದರು.ಆದರೆ ಅಲ್ಲಿದ್ದಾಗ ಇದ್ದಂಥ ಆ ದೈವದ ಕಳೆ, ಶಕ್ತಿ ಇಲ್ಲಿ ನನಗೊಂಚೂರೂ ಕಾಣಿಸಲಿಲ್ಲ. ಬಹುಶಃ ನನ್ನನ್ನು ಹಿಡಿದಿರುವ ಈ ನಿತ್ರಾಣದ ರೋಗಕ್ಕೆಅದರದ್ದೇ ದೋಷವಿರಬೇಕು ಅಲ್ವೇ…?’ಎಂದಾಗ ನಾನು ಅಡಕತ್ತರಿಗೆ ಸಿಲುಕಿದ್ದೆ.ಆದರೂ ಮನಸ್ಸುಇನ್ನೊಂದರ ನೋವನ್ನು ಹೋಗಲಾಡಿಸಲು ಇಚ್ಛಿಸಿತು.

‘ಇಲ್ಲಮ್ಮ ಹಾಗಿರಲಾರದು.ನಾವು ಭಕ್ತಿಯಿಂದ ಪೂಜಿಸುವ ದೈವಶಕ್ತಿಗಳು ಕೂಡಾ ನಮ್ಮನ್ನು ಅಷ್ಟೇ ಪ್ರೀತಿಯಿಂದ ಸೇವಿಸುತ್ತವೆ. ಹಾಗಾಗಿ ಅವು ನಮಗೆಂದೂ ಕೇಡು ಬಗೆಯುವುದಿಲ್ಲ.ನಕಾರಾತ್ಮಕ ವಿಚಾರಗಳನ್ನುಮನಸ್ಸಿಗೆ ಹಚ್ಚಿಕೊಂಡರೆ ಅವುಗಳ ದುಷ್ಪರಿಣಾಮ ದೇಹದ ಮೇಲೆಯೇ ಆಗುವುದಲ್ಲವೇ! ಕಳೆದು ಹೋದುದನ್ನು ಮನಸ್ಸಿನಿಂದ ಹೊರದೂಡಿ ಇರುವ ಜೀವನವನ್ನು ಅನುಭವಿಸುತ್ತ ಸಾಗುವುದು ಎಲ್ಲ ಸಮಸ್ಯೆಗಳಿಗೂ ಪರಿಹಾರವೆನ್ನಿಸುತ್ತದೆ!’ಎಂದೆ. ಆಕೆ ಕೆಲವು ಕ್ಷಣನನ್ನನ್ನು ದಿಟ್ಟಿಸಿದವರು ಸಪ್ಪೆ ನಗೆ ಬೀರಿದರು.

ಅಷ್ಟರಲ್ಲಿ ಸರೋವರದ ನಡುವೆ ಯಾವುದೋ ಜೀವಿಯೊಂದು ನಮ್ಮತ್ತಲೇ ತೇಲುತ್ತ ಬರುವುದು ಕಂಡಿತು.ಕ್ಯಾಮರಾವನ್ನು ಅದರತ್ತ ಗುರಿಯಿಟ್ಟೆ. ಅದೊಂದು ನೀರು ನಾಯಿ!ಆನಂದವಾಯಿತು.ಜೊತೆಗೆ ಬಂದ ಕಾರ್ಯವು ಸಾಫಲ್ಯವೆನಿಸಿತು. ಅದರ ಜಲಕ್ರೀಡೆಯನ್ನು ಸೆರೆ ಹಿಡಿಯುತ್ತ ನಿಂತವನಿಗೆ, ಪ್ರಕೃತಿಯ ಮಡಿಲಲ್ಲಿ ಏನೇನು,ಎಷ್ಟೆಷ್ಟು ಕಾಲವಿರಬೇಕು ಮತ್ತು ಯಾವ ಯಾವ ರೀತಿಯಲ್ಲಿ ಅದು ಬದಲಾವಣೆ ಹೊಂದುತ್ತ ಇತರ ಜೀವ ವ್ಯವಸ್ಥೆಗೆ ಅನುವು ಮಾಡಿ ಕೊಡಬೇಕು ಎಂಬುದನ್ನುಆ ಜಲಶ್ವಾನವು ತನ್ನ ತೋರ್ಪಡಿಕೆಯ ಮೂಲಕ ಸಾರಿದಂತೆನಿಸಿತು.ಆ ಉಭಯ ವಾಸಿಯು ಸುಮಾರು ನಮ್ಮ ಹತ್ತಿರದವರೆಗೆ ಬಂದುದು,ತಲೆಯೆತ್ತಿ ದಿಟ್ಟಿಸಿ ಪುಳಕ್ಕನೆ ಮುಳುಗಿ ಬಲ ಭಾಗದ ಕಾಡಿನತ್ತ ಈಜುತ್ತ ಕಣ್ಮರೆಯಾಯಿತು.ನಾನು ಹೊರಡಲನುವಾದೆ. ಆಗ ಆ ತಾಯಿ, ‘ಮನೆಗೆ ಬಂದು ಸ್ವಲ್ಪ ಬಾಯಾರಿಕೆ ತೆಗೆದು ಕೊಂಡು ಹೋಗಿಯಲ್ಲವಾ…?’ಎಂದರು.ಆದರೆ ನಾನು ನನ್ನದೇ ಗುಂಗಿನಲ್ಲಿದ್ದುದರಿಂದ ನಯವಾಗಿ ನಿರಾಕರಿಸಿ ನಡೆದೆ.ಆ ಪ್ರದೇಶವನ್ನು ದಾಟಿ ಕಾರಿನತ್ತ ಬಂದು ಹಿಂದಿರುಗಿ ನೋಡುವವರೆಗೂ ಅವರು ನನ್ನತ್ತಲೇ ನೋಡುತ್ತಿದ್ದರು.ಪ್ರೀತಿಯಿಂದ ಕೈಬೀಸಿದೆ.ಪ್ರತಿಯಾಗಿ ಅವರು ಕೈಯಾಡಿಸಿದಾಗ,ಯಾವ ಜನ್ಮದ -ಆತ್ಮ ಬಂಧುವೋ…! ಎಂದೆನ್ನಿಸಿ ಕಾರು ಹತ್ತಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

6 thoughts on “ನಮಗೂ ಜೀವಜಲಕ್ಕೂ ಯಾವ ಬಂಧ!”

  1. ಅನಿತಾ ಪಿ ತಾಕೊಡೆ

    ನವಿರಾಗಿ ಮನಸ್ಸಿಗೆ ಹಿತ ನೀಡುವ ನಿರೂಪಣಾ ಶೈಲಿ, ನಿಜವಾದ ಆಧ್ಯಾತ್ಮದ ಒಳತಿರುಳನ್ನು ಬಿಡಿಸಿಟ್ಟ ಪರಿ, ಪ್ರಕೃತಿಯ ಅದಮ್ಯ ಚೆಲುವಿನ ವರ್ಣನೆಗಳಿಗೆ ಪೂರಕವಾಗಿ ಬರುವ ಮಹಿಳೆಯ ಜೀವನ ವೃತ್ತಾಂತ… ಒಟ್ಟಿನಲ್ಲಿ ಲೇಖನವು ಬಲು ಸೊಗಸಾಗಿ ಮೂಡಿ ಬಂದಿದೆ ಸರ್. ಅಭಿನಂದನೆ 🙏

  2. Gururaj sanil, udupi

    ನಿಮ್ಮ ಗ್ರಹಿಕೆಯ ಆಳ, ಪ್ರೋತ್ಸಾಹದ ಚಂದಕ್ಕೆ ಧನ್ಯವಾದ ಅನಿತಾ ಮೇಡಮ್…

  3. ಸತೀಶ ಎನ್

    ನಿಮ್ಮಿಂದ ಇಂತಹ ಇನ್ನಷ್ಟು ಲೇಖನಗಳು ಮೂಡಿ ಬರಲಿ ಎಂದು ಹಾರೈಸುವೆ. ವಂದನೆಗಳು 🙏🏼

  4. ಸುಷಮಾ ಆರೂರ

    ನಿಮ್ಮಲ್ಲಿ ಜಾಗೃತ ವಾಗಿರುವ ನಿಸರ್ಗ ಪ್ರೀತಿ ನಿಮ್ಮ ಲೇಖನಗಳಲ್ಲಿ ಅದಮ್ಯ ವಾಗಿ ಕಂಡು ಬರುತ್ತದೆ. ಹಿಮಾಲಯ, ಸಹ್ಯಾದ್ರಿ ಯ ಸೊಬಗನ್ನು ನಿಮ್ಮ ಬರವಣಿಗೆಯಿಂದ ಕಣ್ಮುಂದೆ ತಂದಿಟ್ಟಿದಿರಿ. ನಿಮ್ಮೂರಿನ ಚಂದದ ಜೊತೆಗೆ, ಪ್ರಕೃತಿಯ ವಿನಾಶದ ಕಾರಣದಿಂದಾದ ಓರ್ವ ಹೆಣ್ಣಿನ ಹೃದಯ ವಿದ್ರಾವಕ ಕತೆ ಯಿಂದ ಕಟು ಸತ್ಯದ ಪರಿಚಯ ಮಾಡಿಸಿದಿರಿ ಅಭಿನಂದನೆಗಳು ಮತ್ತು ಧನ್ಯವಾದಗಳು. ನಿಮ್ಮಿಂದ ಇನ್ನೂ ಹೆಚ್ಚು ಇಂತಹ ಸೃಜನಶೀಲ ಬರವಣಿಗೆ ಬರುತ್ತಿರಲಿ ಎಂದು ಹಾರೈಸುವೆ.

  5. Gururaj sanil, udupi

    ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದ ಮೇಡಮ್. ನನ್ನಾನುಭಾವಕ್ಕೆ ಸಿಗುವ ಇನ್ನಷ್ಟು ವಿಚಾರಗಳ ಬಗ್ಗೆ ಖಂಡಿತಾ ಬರೆಯುತ್ತೇನೆ. ನಮಸ್ಕಾರ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter