ಎರಡು ಕಿರು ಕಥೆಗಳು

ಮೂಲ ಹಿಂದಿ :  ಘನಶ್ಯಾಮ ಅಗ್ರವಾಲ್ ಕನ್ನಡಕ್ಕೆ: ಮಾಧವಿ ಭಂಡಾರಿ

ಸಾಕ್ಷಿ

ಒಬ್ಬ ವ್ಯಕ್ತಿಯ ಕೊಲೆಯ ಮೊಕದ್ದಮೆ ನಡೆಯುತ್ತಿತ್ತು. ಅವನ ವಿರುದ್ಧ ಇಬ್ಬರು ಸಾಕ್ಷಿ ಹೇಳುವವರಿದ್ದರು. ಆರೋಪಿ ಕಟಕಟೆಯಲ್ಲಿ ನಿಂತಿದ್ದಾನೆ. ಮೊದಲನೆಯ ಸಾಕ್ಷೀದಾರನನ್ನು ಕರೆಯಲಾಯಿತು.ಅವನು ಹೇಳಿದ, “ನಾನು ಎರಡು ತಿಂಗಳಿಂದ ಸರಕಾರಿ ಆಸ್ಪತ್ರೆಯಲ್ಲಿ ಎಡ್ಮಿಟ್ ಆಗಿದ್ದೆ.ಮೊದಮೊದಲಂತೂ ಈ ಆರೋಪಿ ಮತ್ತು ಆ ಮೃತವ್ಯಕ್ತಿ ಗಳಸ್ಯ-ಕಂಠಸ್ಯ ಆಗಿದ್ದರು. ಇವರಿಬ್ಬರ ನಡುವೆ ವೈಮನಸ್ಸು ಅದ್ಹೇಗೆ ಬಂತು ಎಂಬುದು ತಿಳಿಯಲಿಲ್ಲ. ಘಟನೆ ಇಷ್ಟೊಂದು ವಿಪರೀತಕ್ಕೆ ಹೋದುದಾದರೂ ಹೇಗೆ ಎಂಬುದು ನನಗೆ ಗೊತ್ತಿಲ್ಲ.ಘಟನೆ ನಡೆದ ಒಂದು ದಿನ ಹಿಂದಷ್ಟೇ ನಾನು ಆಸ್ಪತ್ರೆಯಿಂದ ಮನೆಗೆಬಂದಿದ್ದೆ.  ಆ ದಿನ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ, ಈ ಆರೋಪಿ ಕೊಲೆ ಬೆದರಿಕೆ ಹಾಕುತ್ತಿದ್ದ. ಅದನ್ನು ನಾನು ನನ್ನ ಕಿವಿಯಾರೆ ಕೇಳಿದ್ದೇನೆ.”

ಅವನ ಹೇಳಿಕೆ ಮುಗಿದ ಬಳಿಕ ಎರಡನೆಯ ಸಾಕ್ಷೀದಾರನನ್ನು ಕರೆಯಲಾಯಿತು.ಅವನು ಹೇಳಿದ, “ಕೊಲೆ ನಡೆದ ದಿನದ ಸಂಗತಿಯನ್ನು ಹೇಳುವುದಾದರೆ, ಅಂದು ನಾನು ರೇಶನ್ ತರೋದಕ್ಕೆ ಹೋಗ್ತಾ ಇದ್ದೆ. ಆಗ ಈ ಆರೋಪಿ ಮತ್ತು ಮೃತ ವ್ಯಕ್ತಿಯ ನಡುವೆ ಜೋರಾಗಿ ಜಗಳ ಆಗ್ತಾ ಇತ್ತು. ಅರ್ಧ ಗಂಟೆಯ ನಂತರ ನಾನು ರೇಶನ್ ತೆಗೆದು ಕೊಂಡು ಅದೇ ದಾರಿಯಲ್ಲಿ ವಾಪಸ್ ಬರ್ತಾಇರುವಾಗ ನಡೆದ ಘಟನೆ ನೋಡಿ ನನಗೆ ನನ್ನ ಕಣ್ಣುಗಳನ್ನೇ ನಂಬಲಿಕ್ಕಾಗಲಿಲ್ಲ.  ಈ ಆರೋಪಿ ಮೃತ ವ್ಯಕ್ತಿಯ ಮೇಲೆ ಎರಗಿ ಬಿದ್ದಿದ್ದ. ಇವನ ಕೈಯಲ್ಲಿ ಚಾಕು ಇತ್ತು. ನನ್ನ ಎರಡೂ ಕೈಗಳಲ್ಲೂ ರೇಶನ್ ಅಂಗಡಿಯಿಂದ ತಂದ ದಿನಸಿಗಳು ತುಂಬಿದ್ದ ಚೀಲಗಳಿದ್ದವು.ನಾನು ನನ್ನರಡೂ ಕೈ ಗಳಲ್ಲಿರುವ ಚೀಲಗಳನ್ನು ಕೆಳಗಿಟ್ಟು ಅಲ್ಲಿಗೆ ಹೋಗಿ ಇವರಿಬ್ಬರನ್ನು ಬಿಡಿಸಬೇಕು ಎನ್ನುವಷ್ಟರಲ್ಲಿ ಈ ಆರೋಪಿ ಮೃತ ವ್ಯಕ್ತಿಯ ಎದೆಗೆ ಚಾಕುವಿನಿಂದ ಇರಿದು ಬಿಟ್ಟಿದ್ದ.

ಆರೋಪಿಯ ಪರ ವಕೀಲ ಬಹಳ ಸುಲಭದಲ್ಲಿ ತನ್ನ ಕಕ್ಷೀದಾರನನ್ನು ಬಚಾವ್ ಮಾಡಿದ.

ಬೇತಾಳವು ವಿಕ್ರಮಾದಿತ್ಯನಿಗೆ ಈ ಘಟನೆಯನ್ನುಹೇಳಿ ತನ್ನ ಪ್ರಶ್ನೆಯನ್ನು ಮುಂದಿಟ್ಟಿತು, “ಈಗ ಹೇಳು, ಆರೋಪಿಯ ಪರ ವಕೀಲ ತನ್ನ ಕಕ್ಷೀದಾರನನ್ನು ಹೇಗೆ ಬಿಡಿಸಿದ? ಒಂದು ವೇಳೆ ಇದರ ಉತ್ತರವನ್ನು ಗೊತ್ತಿದ್ದೂ ಹೇಳದೇ ಇದ್ದರೆ, ನೆನಪಿಡು, ನಿನ್ನ ರೇಶನ್ ಕಾರ್ಡ್ ಅನೂರ್ಜಿತವಾಗಿ ಬಿಡುತ್ತದೆ.”

ವಿಕ್ರಮಾದಿತ್ಯ ಹೇಳಿದ, “ಆರೋಪಿಯ ಪರ ವಕೀಲರು ಎರಡೂ ಸಾಕ್ಷೀದಾರರ ಹೇಳಿಕೆಗಳನ್ನು ಆಲಿಸಿ ಅವರಿಬ್ಬರೂ ಸುಳ್ಳು ಹೇಳುತ್ತಿದ್ದಾರೆಂಬುದನ್ನು ಸಾಬೀತು ಪಡಿಸಿದರು.”

“ಅದು ಹೇಗೆ?”

“ಮೊದಲನೆಯ ಸಾಕ್ಷಿದಾರ ಹೇಳಿದ್ದು, ತಾನು ಎರಡು ತಿಂಗಳು ಸರಕಾರಿ ಆಸ್ಪತ್ರೆಯಲ್ಲಿ ಎಡ್ಮಿಟ್ ಆಗಿದ್ದೆ… ಆ ಮೇಲೆ ಕೊಲೆ ಬೆದರಿಕೆಯ ಮಾತುಗಳನ್ನು ಕಿವಿಯಾರೆ ಕೇಳಿದ್ದೇನೆ ಎಂದಿದ್ದು. ಈ ಹೇಳಿಕೆ ಸುಳ್ಳು.”

“ಯಾಕೆ?”

“ಯಾಕೆಂದರೆ, ಯಾವುದೇ ವ್ಯಕ್ತಿ ಎರಡು ತಿಂಗಳುಗಳ ಕಾಲ ಸರಕಾರಿ ಆಸ್ಪತ್ರೆಯಲ್ಲಿದ್ದು ಬದುಕಿ ಬರೋದು ಸಾಧ್ಯವಿಲ್ಲ.”

“ಇನ್ನು ಎರಡನೆಯ ಸಾಕ್ಷಿಯ ಕುರಿತಾಗಿ ಹೇಳುವುದಾದರೆ, ಈ ಘಟನೆ ಭಾರತದ್ದು, ಈ ಭಾರತದಲ್ಲಿ ತಾಯಿಗೆ ತಕ್ಕ ಯಾವನೇ ಮಗ ರೇಶನ್ ಅಂಗಡಿಗೆ ಹೋಗಿ, ಅರ್ಧ ಗಂಟೆಯಲ್ಲಿ ರೇಶನ್ ತರೋದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಎರಡನೆಯ ಸಾಕ್ಷಿಯೂ ಸುಳ್ಳು.”                            

***

ಪ್ರಾಮಾಣಿಕನ ಹುಡುಕಾಟ

ಅವನೊಬ್ಬ ಪ್ರಾಮಾಣಿಕನ ಹುಡುಕಾಟದಲ್ಲಿದ್ದ. ಸಾಕಷ್ಟುಸುತ್ತಾಡಿದ ಮೇಲೆ ಗೊತ್ತಾಯ್ತು, ಹೀಗೊಂದು ಕಛೇರಿಯಲ್ಲಿ ಒಬ್ಬ ಪ್ರಾಮಾಣಿಕ ಅಧಿಕಾರಿ ಇದ್ದಾನೆ, ಅವನೆಂದೂ ಕೆಟ್ಟ ಕೆಲಸ ಮಾಡಿದವನಲ್ಲ, ಅಡ್ಡದಾರಿ ಹಿಡಿದವನಲ್ಲ.

ಅವನು ಕಛೇರಿಗೆ ಹೋಗಿ ಹೊರಗಡೆ ಇರುವ ಜವಾನನಲ್ಲಿ ಅಧಿಕಾರಿಯ ಮನೆಯ ವಿಳಾಸ ಕೇಳಿದ. ಅದಕ್ಕವನು ಹೇಳಿದ, “ಅಪ್ರಾಮಾಣಿಕ ಅಧಿಕಾರಗಳು ನನಗೆ ದಿನಾ ಚಹಾ ಕುಡಿಸ್ತಾರೆ ಅಥವಾ ಕುಡಿಸೋ ವ್ಯವಸ್ಥೆ ಮಾಡ್ತಾರೆ. ಹಾಗಾಗಿ ಅವರ ವಿಳಾಸ ಯಾವತ್ತೂ ಮರೆಯೋದಿಲ್ಲ. ಆದರೆ ಪ್ರಾಮಾಣಿಕ ಅಧಿಕಾರಿಯ ವಿಳಾಸ  ನೆನಪಾಗಬೇಕು ಅಂದರೆ ಐದು ರೂಪಾಯಿ ಕೊಡಬೇಕು. ಆಗ ಮೆದುಳಿನ ಯಾವ ಮೂಲೆಯಲ್ಲಿದ್ದರೂ ಎದ್ದು ಬರ್ತದೆ.”

ಅವನು ಕಿಸೆಗೆ ಕೈ ಹಾಕಿ ಐದು ರೂಪಾಯಿಯ ಒಂದು ನಾಣ್ಯವನ್ನು ತೆಗೆದು ಜವಾನನ ಕೈ ಮೇಲಿಟ್ಟ. ಜವಾನನಿಗೆ ವಿಳಾಸ ಆ ಕೂಡಲೇ ನೆನಪಿಗೆ ಬಂತು.

“ನಮಸ್ಕಾರ.”

“ನಮಸ್ಕಾರ. ಹೇಳಿ, ಇಲ್ಲೇನು ಕೆಲಸ?”

“ನಿಜ ಹೇಳ ಬೇಕು ಅಂದ್ರೆ, ನಾನು ನಿಮ್ಮಲ್ಲಿಗೆ ಒಂದು ಕೆಲಸ ಹಿಡಕೊಂಡು ಬಂದಿದ್ದೇನೆ. ಬೇರೆ ಅಧಿಕಾರಿಗಳು ಈ ಕೆಲಸಕ್ಕೆ ಐನೂರು ರೂಪಾಯಿ ಕೇಳ್ತಾರೆ.ನೀವು ಪ್ರಾಮಾಣಿಕ ಅಧಿಕಾರಿ, ಲಂಚ ಕೇಳೋದಿಲ್ಲ ಅಂತ ನಿಮ್ಮ ಬಗ್ಗೆ ಜನರು ಮಾತಾಡೋದನ್ನುಕೇಳಿದ್ದೇನೆ. ಹಾಗಾಗಿ ಯಾರಿಂದಲೂ ಶಿಫಾರಸ್ಸು ತರದೆ ನೇರವಾಗಿ ನಮ್ಮಲ್ಲಿಗೆ ಬಂದಿದ್ದೇನೆ.”

“ಬನ್ನಿ, ಕುಳಿತುಕೊಳ್ಳಿ… ನೀವು ಹೇಳ್ತಾ ಇರೋದು ಸರಿಯಾಗಿದೆ. ಇಂದು ಸುತ್ತೆಲ್ಲ ಭ್ರಷ್ಟಾಚಾರ ತಾಂಡವವಾಡ್ತಾ ಇದೆ. ಜನರ ಮನಸ್ಸಿನಲ್ಲೇ ಲಂಚ ಕೊಡಬೇಕು ಎಂಬಂತಹ ಹುಮ್ಮಸ್ಸು ಬಂದ ಹಾಗಿದೆ. ಹಾಗಾಗಿ ನನ್ನ ಹತ್ತಿರ ಅತ್ಯಂತ ಕಡಿಮೆ ಜನರು ಬರ್ತಾರೆ. ನೀವು ಬಂದಿದ್ದೀರಲ್ವಾ, ನಿಮ್ಮ ಕೆಲಸ ಆಗಿಯೇ ಆಗ್ತದೆ, ಅದೂ ಲಂಚ ಕೊಡುವ ಪ್ರಸಂಗ ಬಾರದೆ.ಆದರೆ ಅದಕ್ಕಾಗಿ ನೀವು ನನ್ನ ಆತ್ಮ-ವ್ಯಥೆಯನ್ನು ಕೇಳಬೇಕು.” ಪ್ರಾಮಾಣಿಕ ಅಧಿಕಾರಿ ಮನವಿ ಮಾಡಿಕೊಂಡ.

“ಆತ್ಮ-ವ್ಯಥೆನಾ? ಹಾಂ…ಹಾಂ… ಅವಶ್ಯವಾಗಿ ಹೇಳಿ.”

“ನೋಡಿ, ನಾನು ಹುಟ್ಟಿದಾಗ ಒಳ್ಳೆಯ ಕಂಪನಿಯ ಹಾಲಿನ ಪುಡಿಯ ವಿಪರೀತ ಅಭಾವ ಇತ್ತಂತೆ. ನಮ್ಮ ತಂದೆ ಕಾಳಸಂತೆಯಲ್ಲಿ ಹಾಲಿನ ಪುಡಿ ಖರೀದಿಸಿ ನನಗೆ ಹಾಲು ಕುಡಿಸಿದ್ದರಂತೆ. ಆ ಮೇಲೆ ಶಾಲೆಗೆ ಸೇರುವಾಗಲೂ ಲಂಚ ಕೊಟ್ಟು ಸೇರ ಬೇಕಾಯ್ತು. ಅದಕ್ಕೆಶಾಲೆಯವರು ಡೊನೇಶನ್ ಅಂತ ಹೆಸರಿಟ್ಟರು. ಇದೇ ಪರಿಸ್ಥಿತಿ ಕಾಲೇಜಿನಲ್ಲೂ ಮುಂದುವರಿಯಿತು. ಡಿಗ್ರಿ ಮುಗಿಸಿದ ಮೇಲೆ ನನಗೆ ಎಲ್ಲಿಯೂ ಕೆಲಸ ಸಿಗಲಿಲ್ಲ. ಯಾಕೆಂದರೆ ಯಾವಾಗಲೂ ಸಂದರ್ಶನದಲ್ಲಿ ನಾನು ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸ್ತೇನೆ, ಎಂದು ಹೇಳ್ತಿದ್ದೆ. ಕಮಿಟಿಯವರು ಹೇಳ್ತಿದ್ದರು, ನೀನು ಪ್ರಾಮಾಣಿಕವಾಗಿ ಕೆಲಸಮಾಡೋದಾದರೆ ನೌಕರಿ ಕೊಡಿಸಿದ್ದಕ್ಕಾಗಿ ನಮಗೆ ಇಪ್ಪತ್ತುಸಾವಿರ ಕೊಡೋದು ನಿನ್ನಿಂದ ಆಗಲಿಕ್ಕಿಲ್ಲ. ಹಾಗಾಗಿ ಇಂಥ ಕಾರಣಗಳಿಂದಾಗಿಯೇ ನಾನು ಸಮರ್ಪಕ ಉತ್ತರ ಕೊಟ್ಟರೂ ಆಯ್ಕೆ ಆಗ್ತಿರಲಿಲ್ಲ. ಅಂತೂ ಕೊನೆಗೆ ನಾನು ಮನೆಯಲ್ಲಿರೋ ಒಡವೆ ಇತ್ಯಾದಿಗಳನ್ನೆಲ್ಲ ಮಾರಿ ಅವರಿಗೆಇಪ್ಪತ್ತು ಸಾವಿರ ಮುಂಗಡವಾಗಿಯೇ ಕೊಟ್ಟು ಈ ಕೆಲಸ ಗಿಟ್ಟಿಸಿಕೊಂಡೆ.

ಕೆಲಸ ಸಿಕ್ಕ ಮೇಲೆ ನಾನು ನಿರ್ಧಾರ ಮಾಡಿದೆ, ಪ್ರಾಮಾಣಿಕವಾಗಿ ಕೆಲಸ ಮಾಡಿ ಒಂದು ಮಾದರಿಯನ್ನು ಸ್ಥಾಪಿಸ ಬೇಕು. ಈಗ ಅದನ್ನೇ ಮಾಡ್ತಾ ಇದ್ದೇನೆ.

ಈಗ ನೀವೇ ವಿಚಾರ ಮಾಡಿ, ಪ್ರಾಮಾಣಿಕ ವ್ಯಕ್ತಿ ಹೊಟ್ಟೆ ತುಂಬ ಊಟ ಮಾಡಬೇಕಲ್ವಾ? ಅವನ ಮಕ್ಕಳು ಉತ್ತಮವಾದ ಶಾಲೆಯಲ್ಲಿ ಕಲಿಯಬೇಕು. ಬಾರಿಗೆ ಹೋಗಿ ಗುಂಡು ಹಾಕೋದು ಅಂತಿರಲಿ, ಆಗಾಗ ಮನೋರಂಜನೆಯ ನೆಪದಲ್ಲಿ ಫಿಲ್ಮನ್ನಾದರೂ ನೋಡ ಬಹುದಲ್ವಾ? … ನಾನು ಹೇಳೋದಿಷ್ಟೆ, ನಾಲ್ಕು ಜನರ ಥರ ಬದುಕೋದಕ್ಕಾದರೂ ಕನಿಷ್ಠ ಪಕ್ಷ ಅನಿವಾರ್ಯ ಅವಶ್ಯಕತೆಗಳನ್ನು ಪೂರೈಸಿ ಕೊಳ್ಳ ಬೇಕಲ್ವಾ? ಇತ್ತೀಚೆಗಂತೂ ಪ್ರತಿಯೊಬ್ಬನೂ ಇದ್ದುದಕ್ಕಿಂತ ಹೆಚ್ಚು ಹಣ ಕೇಳ್ತಾನೆ, ಗ್ಯಾಸ್ನವನು, ಥಿಯೇಟರಿನ ಒಳಗಿರೋ ಅಂಗಡಿಯವರು, ರೇಲ್ವೆಸ್ಟೇಶನ್, ಬಸ್ ಸ್ಟೈಂಡ್ನಲ್ಲಿರೋ ಪಾರ್ಕಿಂಗ್ ಅಲಾಟ್ನವರು, ಸ್ಕೂಲ್ ಕಮಿಟಿಯವರು, ರೇಶನ್ ಅಂಗಡಿಯವರು…ಹೇಳ್ತಾ ಹೋದರೆ ಲಿಸ್ಟ್ ಸಾಕಷ್ಟು ದೊಡ್ಡದಿದೆ.

ನೀವೇ ಹೇಳಿ, ಇಂಥ ವಾತಾವರಣದಲ್ಲಿ ಒಬ್ಬ ಪ್ರಾಮಾಣಿಕ ವ್ಯಕ್ತಿ ತನ್ನ ಪ್ರಾಮಾಣಿಕತೆಯನ್ನು ಹೇಗೆ ನಿಭಾಯಿಸಿ ಕೊಳ್ಳಬಹುದು? ಅದಕ್ಕಿಂತ ಹೆಚ್ಚಾಗಿ ಪ್ರಾಮಾಣಿಕ ವ್ಯಕ್ತಿಗಳ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಅವರನ್ನು ಕೆಲಸದಿಂದ ವಜಾಮಾಡೋದಕ್ಕೆ ಕೆಲವರು ಕಾಯ್ತಾ ಇರ್ತಾರೆ.”

ನನಗನ್ನಿಸಿತು, ಎಲ್ಲಿಯಾದರೂ ಲಂಚ ಕೇಳೋದಕ್ಕೆ ಇದು ಪೂರ್ವ ಪೀಠಿಕೆ ಇದ್ದರೂ ಇರಬಹುದೇನೋ…ಆದರೆ ಈ ವ್ಯಕ್ತಿಯ ಒಂದೊಂದು ಮಾತು ಸತ್ಯದಲ್ಲಿ ಹೊರಳಿಸಿ ಮೇಲಕ್ಕೆ ಎತ್ತಿದಂತಿದೆ. ಅವನು ಕಾಗದವನ್ನು ಎದುರಿಗಿಟ್ಟು ತನ್ನ ಕಿಸೆಯಲ್ಲಿರುವ ನೂರರ ಐದು ನೋಟುಗಳನ್ನು ಹೊರ ತೆಗೆದು ಮೇಜಿನ ಮೇಲೆ ಇಟ್ಟ.

“ನೀವು ಇದೇನು ಮಾಡ್ತಾ ಇದ್ದೀರಿ? ನೀವು ನನಗೆ ಲಂಚ ಕೊಡ್ತಾ ಇದ್ದೀರಾ? ಇಷ್ಟು ಸಣ್ಣ ಕೆಲಸಕ್ಕೆ ಐನೂರು ರೂ. ತೆಗೆದು ಕೊಂಡು ಕೆಲಸ ಮಾಡಿ ಕೊಡುವ ಸಾವಿರಾರು ಜನರು ಈ ದೇಶದಲ್ಲಿದ್ದಾರೆ. ನಾನೊಬ್ಬ ಪ್ರಾಮಾಣಿಕ ಅಧಿಕಾರಿ. ನಿಮ್ಮ ಕೆಲಸ ಖಂಡಿತ ಮಾಡಿ ಕೊಡ್ತೇನೆ.”

ಅವನು ಮೇಜಿನ ಮೇಲಿಟ್ಟ ನೋಟುಗಳನ್ನು ಎತ್ತಿ ಅದರಲ್ಲಿಯ ನಾಲ್ಕು ನೋಟುಗಳನ್ನು ಹಿಂದಿರುಗಿಸುತ್ತ, “ನೋಡಿ, ನನಗೆ ಇಷ್ಟೇಸಾಕು. ಅದೂ, ನಾನು ಲಂಚ ತೆಗೆದುಕೊಳ್ತಾ ಇಲ್ಲ. ಬದಲಾಗಿ ನನ್ನ ಪ್ರಾಮಾಣಿಕತೆಯನ್ನು ಉಳಿಸಿ ಕೊಳ್ಳೋದಕ್ಕಾಗಿ ಈ ನೂರು ರೂಪಾಯಿಗಳನ್ನು ತೆಗೆದುಕೊಳ್ತಾ ಇದ್ದೇನೆ.” ಹೀಗೆ ಹೇಳುತ್ತಿರುವಾಗ ಎರಡು ಹನಿ ಕಣ್ಣೀರು ಅದರ ಮೇಲೆ ಬಿತ್ತು.

ಅವನು ಹೊರಗಡೆ ಬಂದು ಯೋಚಿಸ ತೊಡಗಿದ, ನನಗೆ ಪ್ರಾಮಾಣಿಕತೆಯನ್ನು ಹುಡುಕ ಬೇಕಾಗಿತ್ತು. ಆ ಕೆಲಸ ಮುಗಿಸಿದೆ. ನಮ್ಮದೇಶದಲ್ಲಿ ಈ ವ್ಯಕ್ತಿಗಿಂತ ಅಧಿಕ ಪ್ರಾಮಾಣಿಕರು ಎಲ್ಲಿ ಸಿಗೋದಕ್ಕೆಸಾಧ್ಯ? ಅವನಿಗೆ ಪ್ರಾಮಾಣಿಕತೆಗೊಂದು ಹೊಸ ವ್ಯಾಖ್ಯೆ ಸಿಕ್ಕಿತು. ಯಾರು ಮೋಸ-ವಂಚನೆ ಮಾಡೋದಿಲ್ವೋ ಅವನೇ ಪ್ರಾಮಾಣಿಕ ಎಂಬುದು ಈ ಕಾಲಕ್ಕಂತೂ ಸರಿ ಹೊಂದೋದಿಲ್ಲ; ಯಾರು ಕಡಿಮೆ ಪ್ರಮಾಣದ ಅಪ್ರಾಮಾಣಿಕರಾಗಿರ್ತಾನೋ ಅವನೇ ನಿಜವಾದ ಪ್ರಾಮಾಣಿಕ.

***

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter