ಮಾರ್ಗಾನ್ವೇಷಣೆ
ಡಾ. ನಿತ್ಯಾನಂದ ಶೆಟ್ಟಿ
ಬೆಸುಗೆ ಪ್ರಕಾಶನ, ತುಮಕೂರು,
ಬೆಲೆ : 350,
ಪುಟಗಳು : 304, 2021 ಮೊ.: 8970162207
ಸಂಶೋಧನೆ ಒಂದು ನಿರಂತರವಾದ ಪ್ರಕ್ರಿಯೆ ಎಂಬ ಮಾತನ್ನು ಎಲ್ಲರೂ ಹೇಳುತ್ತಾ ಬಂದಿದ್ದಾರೆ. ನಮ್ಮ ಬದುಕು ಸಹ್ಯವಾದುದು ಈ ಎಡೆಬಿಡದೆ ನಡೆದ ಸಂಶೋಧನೆಯಿಂದಲೇ. ಸಂಶೋಧನೆ ಒಂದು ಶಿಸ್ತಿನ, ಶ್ರಮದ ಕೆಲಸ. ನಮ್ಮ ಸಾಂಪ್ರತ ಜ್ಞಾನಕ್ಷೇತ್ರ ವಿಸ್ತಾರಗೊಂಡುದು ಈ ಶೋಧ ಪ್ರವೃತ್ತಿಯಿಂದಲೇ. ಹೊಸ ಹೊಸ ಸಂಗತಿಗಳನ್ನು ಲೋಕಮುಖಕ್ಕೆ ಪರಿಚಯಿಸುವುದು ಸಂಶೋಧನೆ. ಹೀಗಾಗಿ `ಸತ್ಯದ ಹುಡುಕಾಟವೇ ಸಂಶೋಧನೆ’ ಎಂಬ ಮಾತು ಜನಜನಿತವಾಗಿದೆ. ಒಂದು ನಿರ್ದಿಷ್ಟವಾದ ಉದ್ದೇಶವನ್ನಿಟ್ಟುಕೊಂಡು ವಿಷಯದ ಗುಣಾವಗುಣಗಳನ್ನು ಸೈದ್ಧಾಂತಿಕವಾಗಿ ವಿಶ್ಲೇಷಣೆಗೆ ಒಳಪಡಿಸುವುದು ತೀರಾ ಅಗತ್ಯ. ವಿಜ್ಞಾನ ಕ್ಷೇತ್ರದ ಸಂಶೋಧನೆಗಿಂತ ತೀರ ಭಿನ್ನವಾದುದು ಸಾಹಿತ್ಯ ಸಂಶೋಧನೆ. ಅಜ್ಞಾತವನ್ನು ಜ್ಞಾತಗೊಳಿಸುವುದು, ಕಳೆದುಹೋದ, ಬೆಳಕಿಗೆ ಬಾರದ, ಕಾಲಗರ್ಭದಲ್ಲಿ ಹೂತುಹೋದ ಸಂಗತಿಗಳನ್ನು ವಿಭಿನ್ನ ನೆಲೆಗಳಲ್ಲಿ ವಿವೇಚಿಸಿ ಲೋಕದ ಮುಂದಿಡುವುದು ಸಾಹಿತ್ಯ ಸಂಶೋಧನೆಯಲ್ಲಿ ಬಹಳ ಮುಖ್ಯ. ಸಮಸ್ಯೆಗೆ, ಸಂದೇಹಕ್ಕೆ ಪರಿಹಾರ ಕಂಡುಕೊಳ್ಳುವುದೂ ಸಂಶೋಧನೆಯಾಗಬಲ್ಲದು.
ಕನ್ನಡ ಸಂಶೋಧನೆಗೆ ಹತ್ತಿರ ಹತ್ತಿರ ನೂರೈವತ್ತು ವರ್ಷಗಳ ಇತಿಹಾಸವಿದ್ದು ಮೊದಲು ಪಾಶ್ಚಾತ್ಯ ವಿದ್ವಾಂಸರು ಈ ಕ್ಷೇತ್ರದಲ್ಲಿ ದುಡಿದರೆ ಆ ಬಳಿಕ ದೇಶಿ ವಿದ್ವಾಂಸರು ಈ ನಿಟ್ಟಿನಲ್ಲಿ ಗೈದ ಪರಿಚಾರಿಕೆ ದೊಡ್ಡದು. ಕನ್ನಡ ಜಗತ್ತು ಇಷ್ಟು ವಿಸ್ತಾರಗೊಳ್ಳಲು ಸಂಶೋಧನ ಕ್ಷೇತ್ರದ ಕೊಡುಗೆಯೂ ಪೂರಕವಾಗಿದೆ. ಆದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಶಿಕ್ಷಣ ನೌಕರಿಯ ಬೆನ್ನುಹತ್ತಿ ಸಂಶೋಧನೆ ಬಡವಾಗುತ್ತಾ ಬಂದಿತು. ಈಗ ಸಂಶೋಧನೆ ಕ್ಷೇತ್ರ ಗೊಂದಲದ ಗೂಡಾಗಿದ್ದು ಡಿಗ್ರಿಗಾಗಿ ಕಾಟಾಚಾರದ ಸಂಶೋಧನೆ ನಡೆಯುತ್ತಿದ್ದು ಅದು ತನ್ನೆಲ್ಲ ಮೂಲಸ್ವರೂಪ, ಉದ್ದೇಶಗಳನ್ನು ಮರೆತಂತಿದೆ. ಪಿಎಚ್.ಡಿ.ಯ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಜನಸಾಮಾನ್ಯರು ಗುಮಾನಿಯಿಂದ ನೋಡುವಂತಾಗಿದೆ. ನಮ್ಮ ಸಂಶೋಧನ ಪದ್ಧತಿ, ವಿಧಿ ವಿಧಾನವನ್ನು ವಿವರಿಸುವ ಕೃತಿಗಳೂ ಹಳೆಯದಾಗುತ್ತಿವೆ. ಹೊಸ ಶತಮಾನದಲ್ಲಿ ಸಂಶೋಧನ ದಾರಿ ಸಾಗಬೇಕಾದ ಪರಿಯನ್ನು ತಿಳಿಸಿಕೊಡುವ ನಿಟ್ಟಿನಿಂದ ಇತ್ತೀಚೆಗೆ ಡಾ. ನಿತ್ಯಾನಂದ ಶೆಟ್ಟಿ ಅವರು ರಚಿಸಿರುವ `ಮಾರ್ಗಾನ್ವೇಷಣೆ’ ಕೃತಿ ಅನೇಕ ದೃಷ್ಟಿಯಿಂದ ನಮಗೆ ಮುಖ್ಯವಾಗುತ್ತದೆ. ಸಾಹಿತ್ಯ ಸಂಶೋಧನೆಯ ರೀತಿನೀತಿಯನ್ನು ಸ್ಪಷ್ಟವಾಗಿ ಖಚಿತವಾಗಿ ಭಿನ್ನ ಬಗೆಯಲ್ಲಿ ಹೇಳಿರುವುದು ಈ ಕೃತಿಯ ಧನಾತ್ಮಕ ಅಂಶ. ತುಮಕೂರಿನ ಬೆಸುಗೆ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು ಸಂಶೋಧನೆಯಲ್ಲಿ ಅನುಸರಿಸಬೇಕಾದ ವಿಧಾನ ಮತ್ತು ವಿಧಾನ ಕ್ರಮಗಳ ಕುರಿತು ಇಲ್ಲಿ ಲೇಖಕರು ವಿಶೇಷವಾದ ಕಾಳಜಿ ವಹಿಸಿರುವುದು ಗಮನೀಯ ಅಂಶ. ಒಂದು ವಿಶಿಷ್ಟ ಬಗೆಯ ಸಂವಾದದಲ್ಲೇ ಈ ಕೃತಿ ರೂಪಿತವಾಗಿದ್ದು ವಿದ್ವತ್‍ಪೂರ್ಣ ಚರ್ಚೆ, ವಿಚಾರ ವಿಮರ್ಶೆಗಳೆಲ್ಲ ಇಲ್ಲಿ ನೆಲೆ ಪಡೆದಿರುವುದು ಅವಲೋಕನೀಯವಾಗಿದೆ.
ನಮ್ಮ ಸಂಶೋಧನ ಸಂಸ್ಕøತಿಯನ್ನು ಇನ್ನಾದರೂ ಸರಿಯಾಗಿ ಅರ್ಥೈಸಿಕೊಂಡು ಮುನ್ನಡೆಯಬೇಕು ಎಂಬ ಒತ್ತಾಸೆಯಾಗಿ ಈ ಕೃತಿ ಪಡಿಮೂಡಿದೆ. `ಕನ್ನಡ ಸಾಹಿತ್ಯ ಅಧ್ಯಯನ ವಿಭಾಗಗಳಲ್ಲಿ ಪಿಎಚ್. ಡಿ. ಸಂಶೋಧನೆಗೆ ತೊಡಗಿಕೊಳ್ಳುವ ಅಥವಾ ವಿಶ್ವವಿದ್ಯಾಲಯಗಳ ಮಾನವಿಕ ವಿಭಾಗಗಳಲ್ಲಿ ಸಂಶೋಧನೆಗೆ ತೊಡಗುವ ಸಂಶೋಧನಾರ್ಥಿಗೆ ಸಂಶೋಧನೆ ಎಂದರೇನು? ಅದನ್ನು ಯಾಕೆ ಮಾಡಬೇಕು ಮತ್ತು ಹೇಗೆ ಮಾಡಬೇಕು, ಮಾನವಿಕ ಸಂಶೋಧನೆ ಸಮಾಜ ವಿಜ್ಞಾನಗಳ ಸಂಶೋಧನೆಗಿಂತ ಹೇಗೆ ಭಿನ್ನ, ಸಾಹಿತ್ಯ ಸಂಶೋಧನೆಯ ಅಸಲು ಸತ್ಯ ಏನು ಮತ್ತು ಎಲ್ಲಿರುತ್ತದೆ’ ಇತ್ಯಾದಿ ಮೂಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಈ ಕೃತಿ ನಮ್ಮ ನೆರವಿಗೆ ಬರುತ್ತದೆ. ನಮ್ಮ ಸಂಶೋಧನ ಮೀಮಾಂಸೆಯ ವಾಗ್ವಾದವನ್ನು ಒಂದು ಸ್ಪಷ್ಟವಾದ ರೂಪದಲ್ಲಿ ಹಿಡಿದಿಟ್ಟಿರುವುದು ಈ ಕೃತಿಯ ಅತಿಶಯತೆ. ಸಂಶೋಧನೆಯ ವೈಧಾನಿಕತೆಯ ಕುರಿತು ಚಿ.ಮೂ, ಕಲಬುರ್ಗಿ, ಸವದತ್ತಿಮಠ, ತಾಳ್ತಜೆ, ಶಿರೂರ ಮೊದಲಾದವರು ಕೃತಿಗಳನ್ನು ಹೊರತಂದರೂ ಈ ಒಟ್ಟು ವಾಙ್ಮಯದಲ್ಲಿ ಸಾಹಿತ್ಯ ಅಧ್ಯಯನವನ್ನು ನಡೆಸುವ ಬಗೆ ಹೇಗೆ ಎಂಬುದರ ಬಗೆಗೆ ಸ್ಪಷ್ಟವಾದ ಮಾರ್ಗದರ್ಶನ ಇಲ್ಲ. ಸಂಶೋಧನೆಯ ಸಂದರ್ಭದಲ್ಲಿ ಸಂಶೋಧನಾರ್ಥಿಯಾದವರು ಮಾಡಲೇಬೇಕಾದ ಫಿಲಾಸಫಿಕಲ್ ಗ್ರೌಂಡ್ ವರ್ಕ್‍ನ ಬಗೆಗೆ ನಮ್ಮಲ್ಲಿ ಚರ್ಚೆಯೇ ನಡೆದಿಲ್ಲ ಎಂಬುದನ್ನು ಮನಗಂಡು ವರ್ತಮಾನದಲ್ಲಿ ಜರೂರಾದ ಕೆಲವು ರೀತಿನೀತಿಯ ದಿಕ್ಸೂಚಿಯನ್ನು ಡಾ. ನಿತ್ಯಾನಂದ ಶೆಟ್ಟಿ ಅವರು ಈ ಕೃತಿಯಲ್ಲಿ ಅಳವಡಿಸಿರುವುದು ಮೆಚ್ಚತಕ್ಕ ಸಂಗತಿ. ಪರಿಕಲ್ಪನಾತ್ಮಕವಾದ ಒಂದು ವಿಷಯವನ್ನು ಮನಂಬುಗುವಂತೆ ಸಂಭಾಷಣೆಯ ರೂಪದಲ್ಲಿ ನಿರೂಪಿಸಿದ್ದಲ್ಲದೆ ಮಾರ್ಗದರ್ಶಕ ಮತ್ತು ಸಂಶೋಧನಾಸಕ್ತ ಎಂಬೆರಡು ಪಾತ್ರಗಳ ಮೂಲಕ ಕನ್ನಡ ಸಂಶೋಧನ ಲೋಕದ ಏಳುಬೀಳುಗಳ ವಿಚಾರ ವಿಮರ್ಶೆಯನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. ಸಾಹಿತ್ಯ ಸಂಶೋಧನೆ ಎಂಬ ಪ್ರತ್ಯೇಕವಾದ ಅಧ್ಯಯನ ಶಿಸ್ತು ಇಂದು ಬಹಳ ಕ್ಷೀಣವಾಗಿದೆ. ಇವತ್ತು ನಾವು ಸಾಹಿತ್ಯ ವಿಭಾಗದಲ್ಲಿದ್ದರೂ ಒಂದು ರೀತಿಯ ಸಮಾಜ ವಿಜ್ಞಾನ ಮಾದರಿಯ ಸಂಶೋಧನೆ ನಮ್ಮಲ್ಲಿ ನಡೆಯುತ್ತಿದೆ. ನಮ್ಮ ಸಂಶೋಧನ ಲೋಕ ಎದುರಿಸುತ್ತಿರುವ ಸಮಸ್ಯೆ, ಸಂದೇಹಗಳಿಗೆ ಉತ್ತರವನ್ನು ಕಂಡುಕೊಳ್ಳುವ ಪರಿ ಇಲ್ಲಿ ಎದ್ದು ಕಾಣುತ್ತದೆ.
ಇವತ್ತು ಸಂಶೋಧನೆಯಲ್ಲಿ ಶ್ರದ್ಧೆ, ಶಿಸ್ತು, ಶ್ರಮ ಕಡಿಮೆಯಾಗಿ ಅಪ್ರಾಮಾಣಿಕತೆ ಒಡೆದು ಕಾಣುತ್ತಿದೆ. ಇಲ್ಲಿನ ನೈತಿಕ ಅಂಶಗಳ ಚರ್ಚೆ ಬಹಳ ಮಹತ್ವದ್ದಾಗಿದೆ.
ಕೃತಿಚೌರ್ಯ ಅನೈತಿಕ ಮಾತ್ರ ಅಲ್ಲ, ಅದರಿಂದ ಬಹಳ ದೊಡ್ಡ ಅಪಾಯವೂ ಇದೆ. ಭಾರತೀಯ ಸಂಶೋಧನಾ ರಂಗಕ್ಕೆ ಬಡಿದಿರುವ ಬಹಳ ದೊಡ್ಡ ರೋಗ ಇದು. ಕೃತಿಚೌರ್ಯವನ್ನು ಇಂಗ್ಲಿಷ್‍ನಲ್ಲಿ ಪ್ಲೇಜಿಯರಿಸಮ್ ಎಂದು ಕರೆಯುತ್ತಾರೆ. ಕೃತಿಚೌರ್ಯಕ್ಕೆ ಎರಡು ಮುಖ ಇದೆ. ಮೊದಲನೆಯದು ಉದ್ದೇಶಪೂರ್ವಕವಾಗಿ ಮಾಡುವ ಕೃತಿಚೌರ್ಯ. ಎರಡನೆಯದು ಉದ್ದೇಶ ಪೂರ್ವಕವಲ್ಲದ ಕೃತಿಚೌರ್ಯ. ಮೊದಲನೆಯದು ಅಪರಾಧ, ಎರಡೆಯದು ಪ್ರಮಾದ. ಪ್ರಮಾದ ಯಾಕೆಂದರೆ ಅದು ತಪ್ಪು ಎಂಬುದು ಸಂಶೋಧಕನಿಗೆ ಗೊತ್ತಿಲ್ಲ ಮತ್ತು ಅದು ತಪ್ಪು ಎಂದು ಸಂಶೋಧಕನಿಗೆ ಮಾರ್ಗದರ್ಶಕ ತಿಳಿಸಿಕೊಟ್ಟಿಲ್ಲ. ಜೊತೆಗೆ ಕೃತಿಚೌರ್ಯದ ಕುರಿತು ಸಂಶೋಧಕ ನಿರಾಳವಾಗಿರುವುದು ಸಂಶೋಧನೆಯ ಸೂಕ್ತ ತರಬೇತಿ ಇಲ್ಲದೆಯೂ ಬಂದಿರುವಂಥದ್ದು.
ನಮ್ಮ ಸಂಶೋಧನಾರ್ಥಿಗಳಿಗೆ ಉಲ್ಲೇಖ ಮಾಡುವುದು ಹೇಗೆ, ಉದ್ಧೃತವನ್ನು ಮಂಡಿಸುವ ಬಗೆ ಹೇಗೆ, ಗ್ರಂಥ/ಲೇಖನ ರೂಪದಲ್ಲಿ ಇಲ್ಲದ ಆದರೆ ಮೌಖಿಕವಾಗಿರುವ ವಿಷಯವನ್ನು ನಮೂದಿಸುವುದು ಹೇಗೆ, ಅಲ್ಪವಿರಾಮ, ವಿವರಣ ವಿರಾಮ, ಕೂಡುಗೆರೆ (ಹೈಫನ್) ರೆಫರೆನ್ಸ್, ಸೈಟೇಶನ್‍ಗಳ ವ್ಯತ್ಯಾಸ ಏನು, ಅಡಿ ಟಿಪ್ಪಣಿ, ಕೊನೆಟಿಪ್ಪಣಿಗಳನ್ನು ಕೊಡುವುದು, ಅನುಬಂಧ ಕೊಡುವುದು, ಪರಾಮರ್ಶನ ಮಾಡಿದ ಕೃತಿಗಳ ಪಟ್ಟಿಯನ್ನು ಅಕಾರಾದಿಯಾಗಿ ಕೊಡುವುದು ಹೇಗೆ ಇತ್ಯಾದಿಗಳು ಗೊತ್ತಿರದಿದ್ದರೆ ಇದು ನಿಸ್ಸಂಶಯವಾಗಿಯೂ ತರಬೇತಿಯ ಕೊರತೆ. ಆದರೆ ತಮ್ಮ ಸಂತೋಷಕ್ಕಾಗಿ, ಕುತೂಹಲಕ್ಕಾಗಿ, ಅಧ್ಯಯನಾಪೇಕ್ಷೆಯಿಂದ ಬರೆಯುವ ಸ್ವತಂತ್ರ ಸಂಶೋಧಕರು ಯಾರೂ ಕೃತಿಚೌರ್ಯ ಮಾಡುವುದಿಲ್ಲ. ಅವರಿಗೆ ಅದರ ಅಗತ್ಯವಿರುವುದಿಲ್ಲ. ಆದರೆ ವಿಶ್ವವಿದ್ಯಾಲಯದಲ್ಲಿರುವವರು, ಮೂರು ನಾಲ್ಕು ವರ್ಷಗಳ ಅವಧಿಯಲ್ಲಿ ಕೆಲಸ ಮಾಡಿ ಮುಗಿಸಬೇಕಾದ ಒತ್ತಡಗಳ ನಡುವೆ ಕೆಲಸ ಮಾಡುವವರು ಒತ್ತಡಗಳಿಂದ ತಪ್ಪಿಸುವ ಸುಲಭದ ದಾರಿ ಎಂದು ಕೃತಿಚೌರ್ಯ ಮಾಡುತ್ತಾರೆ. ಎಲ್ಲರೂ ಮಾಡುತ್ತಾರೆ ಎಂಬುದು ನನ್ನ ಮಾತಿನ ಅರ್ಥವಲ್ಲ. ಆದರೆ ಇಂಥದ್ದು ನಮ್ಮಲ್ಲಿ ನಡೆಯುತ್ತಿರುತ್ತದೆ. ಇದು ತಪ್ಪು ನಡೆ. ವಿಶ್ವವಿದ್ಯಾಲಯದಲ್ಲಿರುವ ಪ್ರಾಧ್ಯಾಪಕರು, ಸಂಶೋಧಕರು ಹೊರಗಿನ ಸ್ವತಂತ್ರ ಸಂಶೋಧಕರ ಬರವಣಿಗೆಗಳ, ಮಾಹಿತಿಗಳ ಕಳ್ಳತನಕ್ಕೆ ಇಳಿದರೆ!!
ಸಂಶೋಧನೆಗೂ ವಿಶ್ವವಿದ್ಯಾಲಯಕ್ಕೂ ಅಂಟಿದ ನಂಟು ಹಳೆಯದು. ಇಂದು ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಸಂಶೋಧನೆ ನಡೆಯುತ್ತಿಲ್ಲ ಎಂಬ ಕೂಗು ಒಂದು ಕಡೆಯಲ್ಲಾದರೆ ಮತ್ತೊಂದು ಕಡೆ ಉದ್ಯೋಗ ಸೃಷ್ಟಿಸುವುದು, ಅದನ್ನು ಒದಗಿಸುವುದು ವಿವಿಗಳ ಕೆಲಸ ಎಂಬಂತೆ ಬಿಂಬಿಸಲಾಗುತ್ತಿದೆ. ಇದಕ್ಕೆ ಡಾ. ನಿತ್ಯಾನಂದ ಶೆಟ್ಟಿ ಅವರು ನೀಡಿರುವ ಉತ್ತರ ಬಲು ಮಾರ್ಮಿಕವಾಗಿದೆ.
ಈ ಎಲ್ಲ ಆಕ್ಷೇಪಗಳ ಬಗ್ಗೆ ಕೊನೆಯದಾಗಿ ಇಷ್ಟು ಹೇಳಬಹುದು. ಉನ್ನತ ಶಿಕ್ಷಣ ವಲಯ ಅಂದರೆ ಅದು ಬಹಳ ಸ್ಪಷ್ಟವಾಗಿ ಉನ್ನತಜ್ಞಾನಕ್ಕೆ ಸಂಬಂಧಿಸಿದ ವಲಯ. ಉನ್ನತ ಜ್ಞಾನ ಎಂಬ ನಿರ್ದಿಷ್ಟ ಧ್ಯೇಯದ ಸಾಧನೆ ಮತ್ತು ಸಾಕ್ಷಾತ್ಕಾರದಲ್ಲಿ ತೊಡಗಿರುವ ಬಹಳ ದೊಡ್ಡ ಪ್ರಕ್ರಿಯೆಯಲ್ಲಿ ಉದ್ಯೋಗವನ್ನೂ ಪಡೆಯಬಹುದಾದಂತಹ ಶೈಕ್ಷಣಿಕ ಅರ್ಹತೆಯೂ ಬರುತ್ತದೆ. ಈ ಶೈಕ್ಷಣಿಕ ಅರ್ಹತೆಯನ್ನು ಒದಗಿಸುವುದಷ್ಟೇ ವಿಶ್ವವಿದ್ಯಾಲಯದ ಧ್ಯೇಯವೂ ಅಲ್ಲ, ಕಾರ್ಯವೂ ಅಲ್ಲ. ಶೈಕ್ಷಣಿಕ ಅರ್ಹತೆ ವಿಶ್ವವಿದ್ಯಾಲಯ ತೊಡಗಿರುವ ಜ್ಞಾನ ಶೋಧನೆಯ ಪ್ರಕ್ರಿಯೆಯ ಭಾಗವಾಗಿ ಬರುವುದರಿಂದ ನಿಜವಾದ ಅರ್ಥದಲ್ಲಿ ಶೈಕ್ಷಣಿಕ ಅರ್ಹತೆ ಒಂದು ಉಪ -ಉತ್ಪನ್ನ (ಬೈ ಪ್ರೊಡಕ್ಟ್).
ನೆನಪಿಡಿ. ಮತ್ತೆ ಮತ್ತೆ ಹೇಳುತ್ತೇನೆ. ಜ್ಞಾನ ಸೃಷ್ಟಿಯ ಪ್ರಕ್ರಿಯೆಯಲ್ಲಿ ತೊಡಗುವುದಷ್ಟೇ ವಿಶ್ವವಿದ್ಯಾಲಯಗಳ ಕೆಲಸ. ಆದರೆ ಭಾರತೀಯ ವಿಶ್ವವಿದ್ಯಾಲಯಗಳಿಗೆ ಸಾಮಾಜಿಕ ಚಲನೆಯನ್ನು ತ್ವರಿತಗೊಳಿಸುವಂತಹ ಸವಾಲೂ ಒದಗಿರುವುದರಿಂದ ನಮ್ಮಲ್ಲಿ ಜ್ಞಾನಸೃಷ್ಟಿಯ ಪ್ರಕ್ರಿಯೆ ಕುಂಟುತ್ತ, ತೆವಳುತ್ತ ಸಾಗಿರುವುದೂ ಹೌದು. ಇದನ್ನು ವಿಶ್ವವಿದ್ಯಾಲಯಗಳ ಹೊರಗಿರುವವರು ಅರ್ಥ ಮಾಡಿಕೊಂಡರೆ ಅವರು ನಾಳೆಯಿಂದ ವಿಶ್ವವಿದ್ಯಾಲಯಗಳಿಗೆ ಆಳವಾದ, ಗಹನವಾದ ಹೊಚ್ಚ ಹೊಸ ಪ್ರಶ್ನೆಗಳನ್ನು ಕೇಳುತ್ತಾರೆ. ಇದನ್ನು ವಿಶ್ವವಿದ್ಯಾಲಯಗಳ ಒಳಗಿರುವ ಅಧ್ಯಾಪಕರು, ಸಂಶೋಧಕರು ಅರ್ಥ ಮಾಡಿಕೊಂಡರೆ ಅವರಿಗೆ ತಾವು ಮಾಡಬೇಕಾದ, ತೊಡಗಿಸಿಕೊಳ್ಳಬೇಕಾದ ಜ್ಞಾನ ನಿರ್ಮಾಣದ ಕೆಲಸ ಎಷ್ಟು ಉನ್ನತವಾದುದು ಎಂಬುದು ಮನವರಿಕೆಯಾಗುತ್ತದೆ. ಈ ಎರಡೂ ಪ್ರಕ್ರಿಯೆಗಳು ಏಕಕಾಲದಲ್ಲಿ ಸಂಭವಿಸಿದಾಗ ವಿಶ್ವವಿದ್ಯಾಲಯಗಳು ನಿಜವಾದ ಅರ್ಥದಲ್ಲಿ `ಉನ್ನತ ಶಿಕ್ಷಣ ಸಂಸ್ಥೆಯಾಗಿ’ ರೂಪುಗೊಳ್ಳುತ್ತವೆ.
ಆರು ಪ್ರಮುಖ ಅಧ್ಯಾಯ ಹಾಗೂ ಅನೇಕ ಉಪ ಅಧ್ಯಾಯಗಳಲ್ಲಿ ನೂರಾರು ಪ್ರಶ್ನೆ ಉತ್ತರಗಳ ಮೂಲಕ ಸಂಶೋಧನ ಜಗತ್ತಿನ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳಲು ಈ ಕೃತಿ ಒಂದು ಕೈಪಿಡಿಯಂತಿದೆ. ಜ್ಞಾನದ ಮಹತ್ವ, ಅದರ ಅನ್ವೇಷಣೆ, ಲಿಬರಲ್ ಎಜುಕೇಶನ್ ಮನುಷ್ಯನನ್ನು ಹೇಗೆ ಬಿಡುಗಡೆ ಮಾಡಬಲ್ಲದು ಎಂಬುದನ್ನು ಖಚಿತವಾಗಿ ಹೇಳುತ್ತಲೇ ಪಿಎಚ್.ಡಿ. ಪದವಿಯ ಇತಿಹಾಸ, ಅಲ್ಲಿನ ಪರಿಭಾಷೆ, ಪರಿಕಲ್ಪನೆ, ಕನ್ನಡಕ್ಕೆ ಈ ಶಿಸ್ತು ಬಂದ ಪರಿ, ನಮ್ಮಲ್ಲಿ ಸಂಶೋಧನ ಸಂಸ್ಕøತಿ ಬೆಳೆಯದಿರಲು ಕಾರಣ ಹೀಗೆ ಸಂಶೋಧನ ಪ್ರಕ್ರಿಯೆ ಪರಿಕ್ರಮಣದ ಮಥನ ಮಂಥನ ಕಥನ ಕುತೂಹಲಕರವಾಗಿ ಇಲ್ಲಿ ಚಿತ್ರಣಗೊಂಡಿದೆ.
ಸ್ವತಂತ್ರ ಚಿಂತನೆ, ಆಳವಾದ ಅಭ್ಯಾಸ ಹಾಗೂ ಯೋಚನೆಗಳಿಂದ ಕೂಡಿರುವ ಈ ಕೃತಿ ಕನ್ನಡ ಸಾರಸ್ವತ ಲೋಕಕ್ಕೆ ಒಳ್ಳೆಯ ಸೇರ್ಪಡೆ. ಸಾಂಪ್ರತ ಕನ್ನಡ ಮಾನವಿಕ ಸಂಶೋಧನ ಕ್ಷೇತ್ರ ಸಾಗಬೇಕಾದ ಹಾದಿಯನ್ನು, ರೀತಿ ನೀತಿಯನ್ನು ಇಲ್ಲಿ ಡಾ. ನಿತ್ಯಾನಂದ ಶೆಟ್ಟಿ ಅವರು ಮಂಡಿಸಿದ ಪರಿ ಅನನ್ಯವಾಗಿದೆ. ಸಂಶೋಧನ ಕ್ಷೇತ್ರದಲ್ಲಿ ಕಾಲಿಡುವವರಿಗೆ, ಯುವ ಪೀಳಿಗೆಯ ವಿದ್ವಾಂಸರಿಗೆ, ಸಾಹಿತ್ಯಾಸಕ್ತರಿಗೆ ಈ ಕೃತಿ ಪಥ ನಿರ್ದೇಶನ ಮಾಡಬಲ್ಲದು. ನಮ್ಮ ಸಾಹಿತ್ಯ ಸಂಶೋಧನೆಯ ಕ್ಷೇತ್ರವು ಎದುರಿಸುತ್ತಿರುವ ಬಿಕ್ಕಟ್ಟು, ಅದಕ್ಕೆ ಪರಿಹಾರವನ್ನು ಸಹ ಲೇಖಕರು ಸೂಚಿಸಿರುವ ಪರಿ ಅವಲೋಕನೀಯವಾಗಿದೆ. ಬಹುಕಾಲ ನಿಲ್ಲಬಲ್ಲ ನಮ್ಮ ದೃಷ್ಟಿಯನ್ನು ತಿದ್ದಬಲ್ಲ ತಾಕತ್ತು ಈ ಕೃತಿಗೆ ಇದೆ ಎಂದರೆ ಅದು ಅತ್ಯುಕ್ತಿಯಾಗದು. ಈ ಮೌಲಿಕ ಕೃತಿಗಾಗಿ ಡಾ. ನಿತ್ಯಾನಂದ ಶೆಟ್ಟಿ ಅವರಿಗೆ ಹಾರ್ದಿಕ ಅಭಿನಂದನೆಗಳು.
*ಡಾ.ಜಿ. ಎನ್. ಉಪಾಧ್ಯ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ
ವಿದ್ಯಾನಗರಿ, ಕಲೀನಾ, ಮುಂಬಯಿ – 400098
3 thoughts on “ಒಂದು ದಿಕ್ಸೂಚಿ ಕೃತಿ ‘ಮಾರ್ಗಾನ್ವೇಷಣೆ’”
ಸಂಶೋಧನಾರ್ಥಿಗಳಿಗೆ ತುಂಬ ಉಪಯುಕ್ತ ಲೇಖನ ಸರ್. ಅಭಿನಂದನೆಗಳು ಮತ್ತು ಧನ್ಯವಾದಗಳು.
ಸಂಶೋಧಕರು ಈ ಪುಸ್ತಕವನ್ನು ಓದುವ ಮೂಲಕ ಮೊದಲ ಮೆಟ್ಟಲು ಹತ್ತಿ ಮುಂದಕ್ಕೆ ಸಾಗಬೇಕು. ಆದಿ ಹೆಚ್ಚಳ ಮತ್ತು ಸುಲಭವಾದೀತು
ಸಂಶೋಧನಾ ಅಧ್ಯಯನಕ್ಕೆ ವಿಶೇಷವಾಗಿರುವ ಕೃತಿಯಿದು ಎನ್ನುವುದನ್ನು ಡಾ. ಜಿ. ಏನ್ ಉಪಾಧ್ಯ ಸರ್ ಅನೇಕ ಮಾಹಿತಿಗಳೊಂದಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.