ವಾಸನೆ

{ಕಿರು ಕಥೆ]

ಪೇಪರ್ ಓದುವುದು, ಹೊಟ್ಟೆ ತುಂಬಿಸುವುದು, ಮಲಗುವುದು. ಯಾರಾದರೂ ಮಾತನಾಡಲು ಸಿಕ್ಕಿದರೆ ,’ಕೆಟ್ಟ ಕಾಲ. ನೈತಿಕತೆ ಎಂಬುದೇ ಇಲ್ಲ…” ಬೇರೆ ಬೇರೆ ಶಬ್ದಗಳಲ್ಲಿ ಹೇಳುವ ಮಾತುಗಳು.

ಮಧ್ಯಾಹ್ನ. ಮನೆಯಲ್ಲಿ ಒಬ್ಬನೇ. ಮಲಗಿದ್ದೇನೆ. ಬೆಳಿಗ್ಗೆ, ಊಟದ ಮೊದಲೂ ಮಲಗಿದ್ದೆ. ನಿದ್ದೆ ಬರುತ್ತಿಲ್ಲ. ಹಿಂದಿನ ದಿನಗಳತ್ತ ಮನಸ್ಸು ಓಡುತ್ತದೆ.

ಹೌದಲ್ಲವೇ, ಆದರ್ಶವಾದಿ ಎಂಬ ಹೆಸರು ಗಳಿಸಿದ್ದೆ. ಓದಿದ್ದೆ. ಬರೆದಿದ್ದೆ. ಭಾಷಣ ಮಾಡುವಾಗ ಜನರು ಮಂತ್ರಮುಗ್ದರಾಗಿ ನನ್ನ ಮಾತು ಕೇಳುತ್ತಿದ್ದರು. ನನ್ನ ಆದರ್ಶಗಳನ್ನು ಮೆಚ್ಚುತ್ತಿದ್ದರು.

ಬಚ್ಚಲು ಮನೆಯಲ್ಲಿ ನೀರು ಬೀಳುವ ಸದ್ದು ಕೇಳಿಸುತ್ತಿದೆ. ಚಂಗನೆ ಎದ್ದು ಬಚ್ಚಲು ಮನೆಗೆ ಹೋದೆ. ಅಲ್ಲಿಯ ತೆರೆದಿದ್ದ ಕಿಟಕಿಯಿಂದ ಹೊರಗೆ  ಇಣುಕಿದೆ.  ಪಕ್ಕದ ಮನೆಯವರೂ ಸಹ ತಮ್ಮ ಬಚ್ಚಲಿನ ಕಿಟಕಿಯ ಬಾಗಿಲು ಮುಚ್ಚಿರುವುದಿಲ್ಲ. ಮಧ್ಯಾಹ್ನ ಯಾರೂ ಇರುವುದಿಲ್ಲ. ಪಕ್ಕದ ಮನೆಯಲ್ಲಿ ಈ ಹೊತ್ತು ಇರುವುದು ಒಬ್ಬ ಮುದುಕ. ಸಾಹಿತಿ, ಆದರ್ಶವಾದಿ ಹೆಸರುಗಳಿಸಿದವ ಮಾತ್ರ. ಪ್ರಾಯಶಃ ಆ ಧೈರ್ಯದಿಂದ ಬಾಗಿಲು ಮುಚ್ಚಿರುವುದಿಲ್ಲ.

ಕೆಟ್ಟ ವಾಸನೆ ಬರುತ್ತಿದೆ. ಬಚ್ಚಲು ಕೋಣೆಯ ಮೂಲೆಗಳನ್ನು ನೋಡಿದೆ. ವಾಷ್ ಬೇಸಿನಿನ ಕೆಳಗೆ ಬಗ್ಗಿ ನೋಡಿದೆ. ಏನೂ ಕಾಣುವುದಿಲ್ಲ. ದೀಪ ಹಚ್ಚಿ ಪುನಃ ಹುಡುಕಾಡಿದೆ. ಪಕ್ಕದ ಮನೆಯ ಕಿಟಕಿಯ ಬಾಗಿಲು ಮುಚ್ಚಿದ ಸದ್ದು. ದೀಪ ಹಚ್ಚಬಾರದಿತ್ತು.

ಹಿಂದೆ ಬಂದು ಪುನಹ ಮಂಚದ ಮೇಲೆ ಬಿದ್ದುಕೊಳ್ಳುತ್ತೇನೆ. ತುಂಬಾ ದಿನಗಳ ನಂತರ ಆಕೆ ಬಂದಳು. ಕಾಲೇಜು ದಿನಗಳಲ್ಲಿ ಆಕೆಯ ಜೊತೆಗೆ ನಡೆಸಿದ್ದ ಚೆಲ್ಲಾಟಗಳು ನೆನಪಾಗುತ್ತವೆ. ತನ್ನ ದೇಹವನ್ನು ನನಗೆ ಕೊಡದಿದ್ದರೂ ಆಕೆ ನನ್ನ ಚೆಲ್ಲಾಟಗಳಿಗೆ ಸ್ಪಂದಿಸಿದ್ದಳು. ಅವುಗಳ ನೆನಪು. ಮೈ ಪುಳಕಿತವಾಗುತ್ತದೆ. ನಾನಾಕೆಯನ್ನು ಮದುವೆ ಆಗುತ್ತೇನೆಂದು ನಂಬಿದ್ದಳು ಆಕೆ.

ಕಾಲೇಜಿನ ಸ್ಪರ್ಧೆಯೊಂದರಲ್ಲಿ ವರದಕ್ಷಿಣೆಯ ವಿರೋಧದ ನನ್ನ ಭಾಷಣವನ್ನು ಆಕೆ ನಿಜವೆಂದೇ ನಂಬಿದ್ದಳು, ಹುಚ್ಚು ಹುಡುಗಿ. ಅಳುತ್ತಾ ದೂರ ಸರಿದಿದ್ದವಳು ಇಂದು ಕನಸಿನಲ್ಲಿ ಬಂದಳಾಕೆ.

ಅನೇಕ ವೇದಿಕಗಳಲ್ಲಿ ಅಂತರ್ ಜಾತೀಯ ವಿವಾಹ ಪ್ರೋತ್ಸಾಹಿಸಿ ಮಾತನಾಡಿದ್ದೆ. ಜಾತಿ ಪದ್ದತಿ ಸಂಪೂರ್ಣ ನಿರ್ನಾಮ ಆಗಬೇಕೆಂದು  ಬಯಸಿದ್ದೆ. ಆದರೆ, ಮಗ ಬೇರೆ ಜಾತಿಯ ಹುಡುಗಿಯನ್ನು ಮದುವೆ ಆಗುತ್ತೇನೆಂದಾಗ ವಿರೋಧಿಸಿದೆ. ತಪ್ಪಿ ಹೋಗುವ ವರದಕ್ಷಿಣೆಯ ವ್ಯಾಮೋಹ ನನ್ನ ಸಿಟ್ಟನ್ನು ಹೆಚ್ಚಿಸಿತ್ತು.

ಪುನಃ ಮೂಗಿಗೆ ಕೆಟ್ಟ ನಾತ.  ಮಲಗುವ ಮಂಚದ ಕೆಳಗೆ ನೋಡಿದೆ. ಮರದ ಬೀರುವಿನ ಕೆಳಗಡೆ ನೋಡಿದೆ. ಬೀರು ತೆರೆದು ನೋಡಿದೆ. ಉಹ್ಞೂಂ…, ಏನೂ ಇಲ್ಲ.  ಈ ವಾಸನೆಯಲ್ಲಿ ನಿದ್ದೆ ಬಾರದು.

ಮಲಗುವ ಕೋಣೆಯಿಂದ ಹೊರ ಬಂದು ಟೀ ವಿ ಹಾಕಿದೆ.  ಕಪ್ಪು ಹಣ ಶೇಖರಿಸಿದ್ದಾನೆಂದು ರಾಜಕಾರಿಣಿಯನ್ನು ಸೆರೆ ಹಿಡಿದರು ಎಂದು ಪ್ರಸಾರ ಆಗುತ್ತಿದೆ. ಖುಷಿಯಾಯಿತು. ನಮ್ಮ ದೇಶವನ್ನು ಲೂಟಿ ಮಾಡುವವರು ಈ ರಾಜಕಾರಿಣಿಗಳು. ದೇಶಭಕ್ತರ ನಾಟಕ ಮಾಡುವ ಕುತಂತ್ರಿಗಳು. ದೊಡ್ಡ ದೊಡ್ಡ ಉದ್ಯಮಿಗಳೂ ಕರ ಕಟ್ಟದೆ ದೇಶಕ್ಕೆ ಮೋಸ ಮಾಡುತ್ತಿದ್ದಾರೆ. ನಾವು ಮಧ್ಯಮ ವರ್ಗದವರು ಮಾತ್ರ ಪ್ರಾಮಾಣಿಕವಾಗಿ ತೆರಿಗೆ ಕಟುವುದು.

‘ಹೌದೇ?’ ಎಂದು ಕೇಳಿತು ಸುಪ್ತ ಪ್ರಜ್ಞೆ. ಹೊಸ ಕೆಲಸಕ್ಕೆ ಸೇರುವಾಗ ಎಷ್ಟೊಂದು ಹಣವನ್ನು ‘ಓಚರ್’ ಮೂಲಕ ಕೊಡಲು ಹೇಳಿದ್ದೆ. ಸರಕಾರಕ್ಕೆ ತೆರಿಗೆ ಕಟ್ಟುವುದನ್ನು ಕಡಿಮೆ ಮಾಡಲು ನಾನು ಈ ರೀತಿ ಮಾಡಿದ್ದೆನಲ್ಲವೇ?

ಮನೆಯ ಮುಖ್ಯ ಬಾಗಿಲು ತೆರೆದೆ. ಕಿಟಕಿಯ ಎಲ್ಲಾ ಬಾಗಿಲು ಸಹ ತೆರೆಯುತ್ತೇನೆ. ಕೆಟ್ಟ ವಾಸನೆ ಕಡಿಮೆ ಆಗುವುದಿಲ್ಲ. ಬಚ್ಚಲು ಕೋಣೆಗೆ ಹೋಗಿ, ಕೊಮೋಡಿಗೆ ಫಿನಾಯಿಲ್ ಹಾಕಿದೆ. ಎಲ್ಲಾ ಕೋಣೆಗಳಲ್ಲೂ ರೂಂ ಫ್ರೆಶ್ನರ್ ಸಿಂಪಡಿಸಿದೆ. ಈಗ ಮೊದಲಿನಷ್ಟು ಕೆಟ್ಟ ವಾಸನೆ ಗೊತ್ತಾಗುತ್ತಿಲ್ಲ.

ಟಿ ವಿ ನೋಡುತ್ತಿದ್ದವನಿಗೆ ಅಲ್ಲಿಯೇ ಮಂಪರು.

ಯಾರೋ ಕರೆ ಘಂಟೆ ಒತ್ತಿದ ಸದ್ದು. ಸುತ್ತ ಕತ್ತಲು. ಬರೇ ಟೀವಿಯ ಬೆಳಕು. ಬಾಗಿಲು ತೆರೆದೆ. ಮಗಳು ನಿಂತಿದ್ದಾಳೆ. “ಪಪ್ಪಾ ಯಾಕೆ ಲೈಟು ಹಾಕಿಲ್ಲ?” ದೀಪದ ಗುಂಡಿ ಒತ್ತಿದಳು. ಈಗ ಮನೆಯಲ್ಲಿ ಬೆಳಕು .

“ಪಪ್ಪಾ, ಕಿಟಕಿಯ ಬಾಗಿಲು ತೆರೆದಿದ್ದೀರಿ. ನುಸಿಗಳು ಒಳ ಬರುತ್ತವೆ.” ಅನ್ನುತ್ತಾ ಒಂದೊಂದೇ ಕಿಟಕಿಯ ಬಾಗಿಲು ಮುಚ್ಚತೊಡಗಿದಳು. ನಾನೂ ಅಕೆಯ ಜೊತೆ ಕೈ ಜೋಡಿಸಿದೆ.

“ಏನು, ಟೀ ವಿ ನೋಡುತ್ತಾ ನಿದ್ದೆ ಮಡಿದಿರಾ?”

“—“

ಆಕೆ, “ಚಹಾ ಬೇಕೇ?” ಅನ್ನುತ್ತಾ ಅಡುಗೆ ಮನೆಗೆ ಹೋದಳು.

ಪುನಃ ಕರೆಘಂಟೆಯ ಸದ್ದು. ಬಾಗಿಲು ತೆರೆದೆ. ಹೆಂಡತಿಯ ಬರೋಣ.

“ಏನ್ರೀ…? ಪರಿಮಳ ಬರುತ್ತಿದೆ. ರೂಂ ಫ್ರೆಶ್ನರ್ ಹಾಕಿದಿರಾ?”

“ಏನೋ ಕೆಟ್ಟ ವಾಸನೆ ಬರುತ್ತಿದೆ. ಹಾಗಾಗಿ. ಎಲ್ಲಿಂದ ವಾಸನೆ ಬರುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಕಸದ ಡಬ್ಬಿಯಲ್ಲಿ ಏನಾದರೂ…?”
“ಯಾವಾಗಲೂ ನಿಮಗೆ ಬೇರೆಯವರದೇ ತಪ್ಪು ಕಾಣುವುದು… ನೀವೇ ಎಲ್ಲಾದರೂ ಗಾಳಿ ಬಿಟ್ಟಿರ ಬೇಕು. ಸಿಕ್ಕಿದ್ದನ್ನೆಲ್ಲಾ ತಿನ್ನುತ್ತೀರಾ. ವಯಸ್ಸಾಯಿತು, ಜೀರ್ಣ ಆಗಬೇಕಲ್ಲ…”

ಚಹಾ ತರುತ್ತಾ ಮಗಳು, “ಪಪ್ಪಾ, ಮಮ್ಮಿ ಹೇಳಿದ್ದು ಸರಿ. ನಿಮಗೆ ಬೇರೆಯವರ ತಪ್ಪೇ ಕಾಣುವುದು. ನಿಮ್ಮನ್ನು ನೀವು ನೋಡುವುದಿಲ್ಲ. ಸುಮ್ಮನೆ ಇಲ್ಲದ ಸಂಶಯ.

“ಮನೆಯಲ್ಲಿ ಇಲಿ ಇಲ್ಲ. ಜಿರಳೆಗಳಿಲ್ಲ. ಅವು ಸತ್ತು ಬೀಳುವ ಪ್ರಸಂಗವೇ ಇಲ್ಲ. ಬೆಳಿಗ್ಗೆ ಕಸದ ಬುಟ್ಟಿ  ನೀವೇ ಹೊರಗೆ ಇಟ್ಟದ್ದು.  ಹಾಗಾದರೆ ಕೆಟ್ಟ ವಾಸನೆ ಎಲ್ಲಿಂದ ಬಂತು? ಬೇರೆಯವರ ಬಗೆಗೆ ಸಂಶಯ ಪಡುವುದಕ್ಕಿಂತ ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ.”

ಮಗಳು ಸಹ ದೊಡ್ದವಳಾದಳು. ನನಗೇ ಉಪದೇಶ ಕೊಡಲು ಶುರು ಮಾಡಿದ್ದಾಳೆ. ಇನ್ನು ಬೇಗನೆ ಆಕೆಗೆ ಮದುವೆ ಮಾಡಬೇಕು.  

“ನನಗೆ ನಿನ್ನ ಉಪದೇಶ ಬೇಡ. ನಿನಗೊಂದು ಮದುವೆ ಮಾಡಿದರೆ…”

“ಅಣ್ಣ ವರದಕ್ಷಿಣೆ ತರಲಿಲ್ಲವೆಂದು ಆತನ ಮೇಲೆ ಸಿಟ್ಟು. ನನ್ನ ಮದುವೆ ವರದಕ್ಷಿಣೆ ಇಲ್ಲದೆ ಮಾಡಬೇಕು ಅನ್ನುತ್ತೀರಿ. ಡಬ್ಬಲ್ ಸ್ಟ್ಯಾಂಡರ್ಡ್.” ನಗುತ್ತಾ ಹೇಳಿದ ಮಗಳ ಮಾತು.

ಮಗಳು ಹೇಳಿದಂತೆ, ನನ್ನನ್ನು ನಾನೇ ಪರೀಕ್ಷೆಮಾಡಿಕೊಳ್ಲಬೇಕು.

ಶ್ಶೀ…, ಸಹಿಸಲಾಗದಷ್ಟು ಕೆಟ್ಟ ವಾಸನೆ.  ಹೆಂಡತಿ ಹೇಳಿದಂತೆ ನನ್ನ ಮೂಗನ್ನೇ ಕತ್ತರಿಸಬೇಕು.

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ವಾಸನೆ”

  1. ನಾ.ದಾಮೋದರ ಶೆಟ್ಟಿ

    ಸಾಂಕೇತಿಕತೆಯನ್ನು ವಾಸ್ತವದ ಬದುಕಿಗೆ ಪೋಣಿಸಿ ಹೇಳುವ ಪರಿ ಚೆನ್ನ.

  2. ತುಂಬಾ ಚೆನ್ನಾಗಿದೆ ಕುತೂಹಲಕಾರಿ ಆತ್ಮ ಸಂಶೋಧನೆ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter