ಎನ್.ಬಿ.ಟಿ.ಯ ಸ್ವಾತಂತ್ರ್ಯದ ಹೋರಾಟ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಇಪ್ಪತ್ತೈದು ವರ್ಷಗಳು ತುಂಬಿದ ಸಂದರ್ಭದಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದ  “Freedom Struggle”  ಎಂಬ ಪುಸ್ತಕದ ಕನ್ನಡಾನುವಾದವೇ “ಸ್ವಾತಂತ್ರ್ಯದ ಹೋರಾಟ”. ಒಟ್ಟು ಆರು ಅಧ್ಯಾಯಗಳಿರುವ ಈ ಪುಸ್ತಕದಲ್ಲಿ ಖ್ಯಾತ ಇತಿಹಾಸಕಾರರಾದ ಬಿಪಿನ್ ಚಂದ್ರ, ಆಮಲೇಶ ತ್ರಿಪಾಠಿ ಮತ್ತು ಬರುನ್ ಡೇ ತಲಾ ಎರಡು ಅಧ್ಯಾಯಗಳನ್ನು ಬರೆದಿದ್ದಾರೆ.

‘ಬ್ರಿಟಿಷ್ ಆಳ್ವಿಕೆಯ ಸಂಘಟನೆ’, ‘ಮೊದಲನೆ ಹಂತ’, ‘ಹೋರಾಟ ಸ್ವರೂಪದ ರಾಷ್ಟ್ರೀಯತೆಯ ಯುಗ’, ‘ಸ್ವರಾಜ್ಯಕ್ಕಾಗಿ ಹೋರಾಟ’, ‘ಸ್ವಾತಂತ್ರ್ಯದ ಸೂಚನೆಗಳು’ ಮತ್ತು ‘ಸ್ವಾತಂತ್ರ್ಯದ ಸಾಧನೆ’ಯೆಂಬ ಆರು ಅಧ್ಯಾಯಗಳಲ್ಲಿ ಪ್ಲಾಸಿ ಕದನದಲ್ಲಿ ಬಂಗಾಳದ ನವಾಬ ಸಿರಾಜುದ್ದೌಲನ ಸೋಲಿನೊಂದಿಗೆ ಆರಂಭವಾಗುವ ಈ ಪುಸ್ತಕ ಜವಾಹರಲಾಲ್ ನೆಹರು ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿಯಾಗುವಲ್ಲಿಗೆ ಮುಗಿಯುತ್ತದೆ.

ಕೇವಲ ವ್ಯಾಪಾರ ಮಾಡುವ ಉದ್ದೇಶದಿಂದ ಭಾರತಕ್ಕೆ ಬಂದ ಬ್ರಿಟಿಷರು ನಿಧಾನವಾಗಿ ದೇಶಾದ್ಯಂತ ತಮ್ಮ ವ್ಯವಹಾರವನ್ನು ವಿಸ್ತರಿಸಿಕೊಳ್ಳುತ್ತಾ, ಸ್ಥಳೀಯ ರಾಜಕೀಯದಲ್ಲಿ ಮೂಗು ತೂರಿಸಿ ಹೇಗೆ ಪ್ರಬಲರಾಗುತ್ತಾ ಬಂದರು. ಮುಂದೆ ಹಂತ ಹಂತವಾಗಿ ಪರಸ್ಪರ ತಮ್ಮತಮ್ಮಲೇ ಕಚ್ಚಾಡುತ್ತಿದ್ದ ಭಾರತದ ಸಣ್ಣ ಪುಟ್ಟ ರಾಜ್ಯಗಳನ್ನು ಆಕ್ರಮಿಸಿಕೊಳ್ಳುತ್ತಾ ವಿಶಾಲ ಭಾರತವನ್ನು ಹೇಗೆ ತಮ್ಮ ವಸಾಹತನ್ನಾಗಿ ಮಾಡಿಕೊಂಡರು ಎಂಬುದರ ಕುರಿತು ಬರೆಯುತ್ತ ಬ್ರಿಟಿಷರ ಕುತಂತ್ರ ಬುದ್ಧಿ ಮತ್ತು ಚಾಣಾಕ್ಷತನವನ್ನು ಬಿಪಿನ್ ಚಂದ್ರ ಚೆನ್ನಾಗಿ ವಿವರಿಸಿದ್ದಾರೆ.

ಸಾಮಾನ್ಯ ಜನತೆಯ ಮೇಲೆ ಬ್ರಿಟಿಷ ಆಡಳಿತ ಮಾಡಿದ ಪರಿಣಾಮಗಳು, ಭಾರತದ ಆರ್ಥಿಕತೆಯ ಕುಸಿತ ಮತ್ತು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆದ ಬ್ರಿಟಿಷ್ ವಿರೋಧಿ ಹೋರಾಟಗಳ ಬಗೆಗೆ ಬಿಪಿನ್ ಚಂದ್ರ ಪ್ರಸ್ತಾಪಿಸಿದ್ದಾರೆ. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಸ್ವಾತಂತ್ರ್ಯ ಚಳುವಳಿಯ ಆರಂಭಿಕ ಹಂತದ ಹೋರಾಟ ಮತ್ತು ಅದರ ನಾಯಕರಾದ ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್, ಲಾಲಾ ಲಜಪತರಾಯ್, ಬಿಪಿನ್ ಚಂದ್ರಪಾಲ್ ಮತ್ತು ಸುರೇಂದ್ರನಾಥ್ ಬ್ಯಾನರ್ಜಿಯವರಂತಹ ಹೋರಾಟದ ಮಹತ್ವ ಗುರುತಿಸಿದ್ದಾರೆ.

ಅಮಲೇಶ ತ್ರಿಪಾಠಿ ಬರೆದ ‘ಹೋರಾಟ ಸ್ವರೂಪದ ರಾಷ್ಟ್ರೀಯತೆಯ ಯುಗ’ ಮತ್ತು ‘ಸ್ವರಾಜ್ಯಕ್ಕಾಗಿ ಹೋರಾಟ’ ಅಧ್ಯಾಯಗಳಲ್ಲಿ ಕಾಂಗ್ರೆಸ್ ಪಕ್ಷದ ಉದಯ, ಗಾಂಧೀಜಿಯವರ ಆಗಮನ ಮತ್ತು ಬ್ರಿಟಿಷರ ವಿರುದ್ಧ ಅವರ ಸಕ್ರಿಯ ಹೋರಾಟ, ಬ್ರಿಟಿಷರ ದಮನಕಾರಿ ನೀತಿ, ಕ್ರಾಂತಿಕಾರಿಗಳ ಹೋರಾಟ ಮತ್ತು ಬಂಗಾಳ ವಿಭಜನೆಯ ಕುರಿತು ವಿವರಿಸಿದ್ದಾರೆ. ತ್ರಿಪಾಠಿ ತೀರ ಪೂರ್ವಗ್ರಹ ಪೀಡಿತ ವಿಚಾರ ಸರಣಿಯವರಾಗಿದ್ದು ಕ್ರಾಂತಿಕಾರಿಗಳನ್ನು ಪದೇ ಪದೇ ಭಯೋತ್ಪಾದಕರೆಂದು ಸಂಭೋದಿಸುತ್ತಾರಲ್ಲದೇ ಅವರ ಕ್ರಾಂತಿ ವಿಫಲವಾಯಿತೆಂಬಂತೆ ಬರೆಯುವುದು ಅವರ ರೋಗಗ್ರಸ್ತ ಮನಸ್ಥಿತಿಯನ್ನು ತೋರಿಸುತ್ತದೆ.

ಮೂಲತಃ ಜವಾಹರಲಾಲ್ ನೆಹರು ಅವರ ಪ್ರಶಂಸಕರಾದ ತ್ರಿಪಾಠಿಯವರಿಗೆ ಉಳಿದ ಹೋರಾಟಗಾರರೆಲ್ಲ ಗೌಣವಾಗಿ ಕಂಡಿದ್ದಾರೆ. ಹಿಂದೂ ಮತೀಯತೆಯ ಕುರಿತ ತ್ರಿಪಾಠಿಯವರ ಅಭಿಪ್ರಾಯಗಳು ಚರ್ಚಾಸ್ಪದವಾಗಿವೆ. ಬಾಲಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಭಾರತೀಯರಲ್ಲಿ ಉಂಟು ಮಾಡಿದ ಐಕ್ಯತೆಯ ಮಹತ್ವವನ್ನು ತಿಳಿಯದೇ ಅದು ಹಿಂದೂತ್ವವನ್ನು ಪ್ರತಿಪಾದಿಸುತ್ತದೆಂದು ಬರೆಯುವುದು ತ್ರಿಪಾಠಿಯವರ ಕ್ಷುಲ್ಲಕ ಮನಸತ್ವಃವನ್ನು ತೋರಿಸುತ್ತದೆ. ತಮ್ಮ ಬರವಣಿಗೆಯ ಕೆಲವೆಡೆ ಇಂತಹ ವಿವಾದಿತ ಅಂಶಗಳ ಕುರಿತು ತುಂಬ ಉತ್ಸಾಹದಿಂದ ಚರ್ಚಿಸುವ ತ್ರಿಪಾಠಿಯವರು ಮುಖ್ಯ ಉದ್ದೇಶವನ್ನೇ ಮರೆತು ವಿಷಯಾಂತರ ಮಾಡುತ್ತಾರೆ.

“ತಿಲಕರು ವ್ಯವಸ್ಥೆಗೊಳಿಸುತ್ತಿದ್ದ ಶಿವಾಜಿ ಮತ್ತು ಗಣಪತಿ ಉತ್ಸವಗಳು, ಅರವಿಂದರು ಅರೆ – ಅನುಭಾವಿಕ, ಅರೆ – ಆಧ್ಯಾತ್ಮಿಕ ರೂಪದಲ್ಲಿ ಭಾರತವನ್ನು ತಾಯಿ ಎಂದೂ, ರಾಷ್ಟ್ರೀಯತೆಯನ್ನು ಧರ್ಮ ಎಂದೂ ಪರಿಗಣಿಸಿದ್ದು, ಭಯೋತ್ಪಾದಕರು ಭಗವತಿ ಕಾಳಿಯೆದುರಿಗೆ ಕೈಗೊಳ್ಳುತ್ತಿದ್ದ ಭೀಕರ ಪ್ರತಿಜ್ಞೆಗಳು, ವಿಭಜನ – ವಿರೋಧಿ ಚಳುವಳಿಯ ಉದ್ಘಾಟನೆಗಾಗಿ ಗಂಗೆಯಲ್ಲಿ ನಡೆಸಿದ ಶುದ್ಧೀಕರಣ ಸ್ನಾನ – ಇವೆಲ್ಲವೂ ಎಲ್ಲ ಕಡೆಯೂ ಇದ್ದ ಭಾರತೀಯರಿಗೆ ಇಷ್ಟವಾಗುವುದು ಸಾಧ್ಯವಿರಲಿಲ್ಲ.”

(ಪುಟ 104)

ಈ ಎರಡು ಅಧ್ಯಾಯಗಳಲ್ಲಿ ತ್ರಿಪಾಠಿಯವರು ಸಾಕಷ್ಟು ವಿಷಯ ಕಲೆ ಹಾಕಿದ್ದಾರಾದರೂ ತಮ್ಮ ಪಕ್ಷಪಾತ ಧೋರಣೆಯಿಂದಾಗಿ ಸಣ್ಣತನ ತೋರಿದ್ದಾರೆ. ಕ್ರಾಂತಿಕಾರಿಗಳನ್ನು ಭಯೋತ್ಪಾದಕರೆಂದು ಕರೆದಿರುವುದು ದೇಶಕ್ಕಾಗಿ ಪ್ರಾಣತೆತ್ತ ಹೋರಾಟಗಾರರಿಗೆ ಅವಮಾನ ಮಾಡಿದಂತೆಯೇ ಸರಿ. ಇಂತಹ ಮಹಾಶಯರಿಂದ ಲೇಖನ ಬರೆಸಿದ ನ್ಯಾಷನಲ್ ಬುಕ್ ಟ್ರಸ್ಟ್ ಕನಿಷ್ಠ ಕ್ರಾಂತಿಕಾರಿಗಳನ್ನು ಭಯೋತ್ಪಾದಕರೆಂದು ಕರೆದದ್ದನ್ನಾದರೂ ಎಡಿಟ್ ಮಾಡಬೇಕಿತ್ತು.

ಕೊನೆಯವೆರಡು ಅಧ್ಯಾಯ ಬರೆದ ಬರುನ್ ಡೇ ಸಾಕಷ್ಟು ವಿಷಯ ಸಂಗ್ರಹಣೆ ಮಾಡಿ ವಸ್ತುನಿಷ್ಠವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ನಡೆದ ಕೊನೆಯ ಹಂತದ ತೀವ್ರ ಹೋರಾಟ, ನೇತಾಜಿ ಸುಭಾಷಚಂದ್ರ ಬೋಸರ ಆಜಾದ್ ಹಿಂದ್ ಫೌಜಿನ ತೀವ್ರ ಪ್ರತಿರೋಧ, ಕ್ವಿಟ್ ಇಂಡಿಯಾ ಚಳುವಳಿಗೆ ಸಾಮಾನ್ಯ ಜನತೆ ತೀವ್ರವಾಗಿ ಸ್ಪಂದಸಿ ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಜಲಿಯನ್ ವಾಲಿಬಾಗ್ ಹತ್ಯಾಕಾಂಡ, ದೇಶವಿಭಜನೆಯ ಕರಾಳ ಅಧ್ಯಾಯ ಮತ್ತು ಸತತ ಪ್ರಯತ್ನದಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆತದ್ದನ್ನು ಅಡಕವಾಗಿಯಾದರೂ ಚೆನ್ನಾಗಿ ನಿರೂಪಿಸಿದ್ದಾರೆ. ಈ ಪುಸ್ತಕದಲ್ಲಿ ಬರುನ್ ಡೇಯವರ ಬರಹ ಬಿಪಿನ್ ಚಂದ್ರ ಮತ್ತು ಆಮಲೇಶ ತ್ರಿಪಾಠಿಯವರ ಬರಹಕ್ಕಿಂತ ಚೆನ್ನಾಗಿದೆ.

ಈ ಪುಸ್ತಕ ಸಾಮಾನ್ಯ ಜನರಿಗೆ ಸ್ವಾತಂತ್ರ್ಯ ಹೋರಾಟದ ಕುರಿತು ಒಂದು ಸ್ಥೂಲ ಪರಿಚಯ ನೀಡುವ ಪ್ರಯತ್ನವಾದರೂ ಸಹ ಅದರಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ದಕ್ಷಿಣ ಭಾರತದ ಕೊಡುಗೆ ಅಪಾರವಾದದ್ದು. ಆದರೆ ಇಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ದಕ್ಷಿಣ ಭಾರತ ವಹಿಸಿದ ಮಹತ್ವದ ಪಾತ್ರವನ್ನು ಕಡೆಗಣಿಸಲಾಗಿದೆ. ಉತ್ತರ ಭಾರತ, ಬಂಗಾಳ ಮತ್ತು ಸ್ವಲ್ಪ ಮಟ್ಟಿಗೆ ಮಹಾರಾಷ್ಟ್ರ ಬಿಟ್ಟರೆ ಭಾರತದ ಉಳಿದ ಭಾಗಗಳನ್ನು ನಿರ್ಲಕ್ಷಿಸಲಾಗಿದೆ. ಅನೇಕ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಕನಿಷ್ಠ ಪಕ್ಷ ಮಹತ್ವದ ಸ್ವಾತಂತ್ರ್ಯ ಹೋರಾಟಗಾರರ ಮತ್ತು ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮರ ಹೆಸರನ್ನಾದರೂ ಪ್ರಸ್ತಾಪಿಸಬಹುದಿತ್ತು.

ಸ್ವಾತಂತ್ರ್ಯಾನಂತರ ನೆಹರು ಮತ್ತು ಅವರ ಕುಟುಂಬವನ್ನು ವೈಭವೀಕರಿಸುತ್ತ ಬರಲಾಗುತ್ತಿದೆ. ಸ್ವಾತಂತ್ರ್ಯಾನಂತರ ಅತಿ ದೀರ್ಘಕಾಲ ಅಧಿಕಾರದಲ್ಲಿದ್ದವರು ನೆಹರು ಮತ್ತು ಅವರ ಕುಟುಂಬದವರು. ನೆಹರು ಕುಟುಂಬದ ಕೃಪಾಪೋಷಿತರಾದ ಅನೇಕ ಜನ ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ಇತಿಹಾಸಕಾರರು ಅವರ ಪ್ರಶಂಸಕರಾಗಿ ಅವರ ಕೊಡುಗೆಯನ್ನು ವೈಭವೀಕರಿಸುತ್ತಾ ಇತರೆ ಹೋರಾಟಗಾರರನ್ನು ಅಲಕ್ಷಿಸುತ್ತಾ ಬಂದಿದ್ದಾರೆ. ಇದು ಯಾವ ಮಟ್ಟಕ್ಕೆ ಹೋಗಿದೆಯೆಂದರೆ ಅನೇಕ ಸಲ ಮಹಾತ್ಮ ಗಾಂಧೀಜಿಯವರು ಸಹ ನೆಹರು ಮತ್ತು ಅವರ ಕುಟುಂಬದ ಎದುರು ಮಂಕಾಗುತ್ತಾರೆ. ಇನ್ನು ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ಬಂದ ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಬುಕ್ ಟ್ರಸ್ಟಿನ ಪ್ರಕಟಣೆಯಾದ ಇಂತಹ ಪುಸ್ತಕಗಳಿಂದ ಪ್ರಾಜ್ಞರಾದವರು ಹೆಚ್ಚಿಗೆ ಏನು ತಾನೇ ನಿರೀಕ್ಷಿಸಲು ಸಾಧ್ಯ?

ಸ್ವಾತಂತ್ರ್ಯೋತ್ಸವದ ಬೆಳ್ಳಿ ಹಬ್ಬದ ಶುಭಾವಸರದಲ್ಲಿ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಪುಸ್ತಕವನ್ನು ಸಿದ್ಧಪಡಿಸಲಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಇನ್ನೂರು ಪುಟಗಳ ಮಿತಿಯಲ್ಲಿ ವಿವರವಾಗಿ ಚಿತ್ರಿಸುವುದು ಅಸಾಧ್ಯ. ವಿಸ್ತಾರವೂ, ವ್ಯಾಪಕವೂ ಆದ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಸಂಕ್ಷಿಪ್ತವಾಗಿ ಹೇಳಲು ಇಲ್ಲಿನ ಲೇಖಕರು ಪ್ರಯತ್ನಿಸಿದ್ದಾರಾದರೂ ಅದರಲ್ಲಿ ಯಶಸ್ವಿಯಾಗಿಲ್ಲ.

“ಸ್ವಾತಂತ್ರ್ಯದ ಹೋರಾಟ” ಕೃತಿ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದ ಇತರೆಲ್ಲ ಪುಸ್ತಕಗಳಂತೆಯೇ ಮೊದಲು ಇಂಗ್ಲಿಷನಲ್ಲಿ ಪ್ರಕಟವಾಗಿ ನಂತರ ಇತರೆ ಭಾರತೀಯ ಭಾಷೆಗಳಲ್ಲಿ ಅನುವಾದಗೊಂಡು ಪ್ರಕಟವಾಗಿದೆ. ಆರ್.ಎಲ್.ಅನಂತರಾಮಯ್ಯನವರು ಚೆನ್ನಾಗಿ ಅನುವಾದಿಸಿದ್ದಾರಾದರೂ ಸಹ ಮುದ್ರಣ ದೋಷಗಳು ಸರಾಗ ಓದಿಗೆ ತೊಡಕನ್ನುಂಟುಮಾಡುತ್ತವೆ. ಕನ್ನಡದಲ್ಲೇ ಹಲವು ಮರುಮುದ್ರಣ ಕಂಡ ಇಂತಹ ಕೃತಿಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಿ ಯಾವುದಾದರೂ ದೋಷಯುಕ್ತ ಮಾಹಿತಿ ಮತ್ತು ಮುದ್ರಣದ ತಪ್ಪುಗಳಿದ್ದಲ್ಲಿ ಸರಿಪಡಿಸಿ ಪ್ರಕಟಿಸುವುದು ನ್ಯಾಷನಲ್ ಬುಕ್ ಟ್ರಸ್ಟಿನ ಜವಾಬ್ದಾರಿ ಆದರೆ ಇದೇನನ್ನೂ ಮಾಡದೇ ನ್ಯಾಷನಲ್ ಬುಕ್ ಟ್ರಸ್ಟ್ ತನ್ನ ಬೇಜವಾಬ್ದಾರಿತನವನ್ನು ಮೆರೆಯುತ್ತಿರುವುದು ಅಕ್ಷಮ್ಯ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಎನ್.ಬಿ.ಟಿ.ಯ ಸ್ವಾತಂತ್ರ್ಯದ ಹೋರಾಟ”

  1. ಮಹೇಶ್ವರಿ ಯು

    ವಸ್ತುನಿಷ್ಠ ವಾಗಿ ಕೃತಿಯ ಅವಲೋಕನ ವನ್ನು ಮಾಡಿದ್ದೀರಿ. ಚೆನ್ನಾಗಿ ದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter