ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೆ ಪಾತ್ರರಾದ ಮುಂಬಯಿ ಕನ್ನಡದ ಹಿರಿಯಕ್ಕ ಡಾ. ಸುನೀತಾಶೆಟ್ಟಿಯವರಿಗೆ ಅಭಿನಂದನೆಗಳೊಂದಿಗೆ ….
ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ತ್ರೀ.
ಡಾ ಸುನೀತಾ ಶೆಟ್ಟಿ ಯವರ ಮಹಾಪ್ರಬಂಧ : ಒಂದು ಅವಲೋಕನ.
ಬಹುಮುಖಿ ಪ್ರತಿಭೆಯ ಶಿವರಾಮ ಕಾರಂತರ ಕೃತಿಗಳಾದ ಕಾದಂಬರಿಗಳಲ್ಲಿನ ವಿಭಿನ್ನ ಆಯಾಮಗಳನ್ನು ವ್ಯವಸ್ಥಿತವಾಗಿ ವರ್ಗೀಕರಿಸಿ ಅಧ್ಯಯನ ಮಾಡಿ, ಸಮಕಾಲೀನ ಭಾರತೀಯ ಮತ್ತು ಪಾಶ್ಚಾತ್ಯ ಕಾದಂಬರಿಕಾರರ ಕಾದಂಬರಿಗಳ ಸಂದರ್ಭದಲ್ಲಿಟ್ಟು ಅವರ ಸ್ಥಾನ ನಿರ್ದೇಶನ ಮಾಡುವ ಮಹತ್ವದ ಕಾರ್ಯವನ್ನು ತಮ್ಮ ಸಂಶೋಧನಾ ಗ್ರಂಥದಲ್ಲಿ ಡಾ.ಸುನೀತಾ ಶೆಟ್ಟಿಯವರು ಯಶಸ್ವಿಯಾಗಿ ಮಾಡಿದ್ದಾರೆ.
ಮೊದಲ ಭಾಗದಲ್ಲಿ ಅಧ್ಯಯನದ ಉದ್ದೇಶ ಮತ್ತು ವ್ಯಾಪ್ತಿ ಹಾಗೂ ಮಿತಿಗಳನ್ನು ಗುರುತಿಸಿ ಕೊಂಡಿದ್ದಾರೆ. ಸ್ತ್ರೀಪಾತ್ರಗಳ ವಿಶ್ಲೇೀಷಣೆಗೆ ಹಿನ್ನೆಲೆಯಾಗಿ ಭಾರತೀಯ ನಾರಿ ನಡೆದು ಬಂದ ದಾರಿಯನ್ನು ಸೂಕ್ತವಾದ ನಿದÀರ್ಶನಗಳ ಮೂಲಕ ಸಮೀಕ್ಷೆಗೆ ಒಳಪಡಿಸಿದ್ದಾರೆ.
ವೇದ ಮತ್ತು ಉಪನಿಷತ್ತುಗಳ ಕಾಲದಲ್ಲಿ ಉಚ್ಚ ಸ್ಥಾನದಲ್ಲಿದ್ದ ಭಾರತೀಯ ನಾರಿಯರ ಸ್ಥಾನವು ಪುರಾಣ ಮತ್ತು ಇತಿಹಾಸಗಳ ಕಾಲಕ್ಕೆ ಅವನತ ಮುಖಿಯಾದದ್ದನ್ನು ವಿಷಾದಿಂದ ದಾಖಲಿಸಿದ್ದಾರೆ.
ಹೆಣ್ಣನ್ನು ಶಕ್ತಿಯೆಂದು ಆರಾಧಿಸುವವರೇ ಅವಳನ್ನು ಗೃಹಿಣೀ ಗೃಹ ಮುಚ್ಯತೇಯಾಗಿಸಿದ್ದರ ಹಿಂದಿನ ಪೂರ್ವಗ್ರಹವನ್ನು ಬಯಲಿಗಿಟ್ಟಿದ್ದಾರೆ. ಮಾತೃಪ್ರಧಾನ ಹಿನ್ನೆಲೆಯಿಂದ ಬಂದಿರುವ ಅವರು ಅದರ ಇತಿಮಿತಿಗಳನ್ನು ಗಮನಕ್ಕೆ ತಂದುಕೊಂಡು ಕಾರಂತರ ಕಾದಂಬರಿಗಳ ಸ್ತ್ರೀಯರ ಶಕ್ತಿ ದೌರ್ಬಲ್ಯಗಳನ್ನು ಗ್ರಹಿಸಲು ತಕ್ಕ ವೇದಿಕೆಯನ್ನು ಸಿದ್ಧಪಡಿಸಬಹುದಿತ್ತು. ಮೇಲಿನ ಅವರ ಅಧ್ಯಯನವು ಶಿಷ್ಟ ಸಾಹಿತ್ಯಕ್ಕೆ ಮತ್ತು ಇತಿಹಾಸಕ್ಕೆ ಮಾತ್ರ ಸೀಮಿತವಾಗಿದೆ.
ಎರಡನೆಯ ಭಾಗದಲ್ಲಿ ಸ್ತ್ರೀ ಮತ್ತು ನಿಸರ್ಗದ ಸಂಬಂಧಾಂತರಗಳ ವಿವೇಚನೆ ಇದೆ. ಸ್ತ್ರೀಯರ ಮನೋಲೋಕದ ಏರಿಳಿತಗಳಿಗೆ ತಕ್ಕಂತೆ ಪ್ರಕೃತಿಯಲ್ಲಿಯೂ ಉಂಟಾಗುವ ಏರಿಳಿತಗಳ ಬಗೆಯನ್ನು ಸಮರ್ಥವಾದ ಉದಾಹರಣೆಗಳ ಮೂಲಕ ಸಿದ್ಧಪಡಿಸಿದ್ದಾರೆ. ಚೋಮನ ದುಡಿಯ ಬೆಳ್ಳಿಯ ಪ್ರಸಂಗ ಇದಕ್ಕೆ ಒಂದು ನಿದರ್ಶನವಾಗಿದೆ. ಅದೇ ರೀತಿ ‘ಮರಳಿ ಮಣ್ಣಿಗೆಯಲ್ಲಿ ಬರುವ ಸರಸ್ವತಿ ಪಾರ್ವತಿಯರ ಮನೋಭಾವಕ್ಕೆ ಹೊರಗಿನ ಪ್ರಕೃತಿ ವ್ಯಾಪರಗಳಿಗೂ ಇರುವ ಸಾಮ್ಯವನ್ನು ಎತ್ತಿಹಿಡಿದಿದ್ದಾರೆ. “ಸರಸ್ವತಿ ಹೊರಟು ಹೋದ ಮೇಲೆ ಪಾರ್ವತಿಯ ಮನಸ್ಥಿತಿಯ ಸೂಚಕವಾಗಿ ‘ಚಂದ್ರ ಕಂತಿದ’ ಎಂಬ ಮಾತಿನ ಮೂಲಕವೇ ಬಿಂಬಿಸಿದ್ದಾರೆ. ಕುಡಿಯರ ಕೂಸಿನ ಹೆಣ್ಣುಗಳ ಸಾಹಸೀ ನೈಸರ್ಗಿಕ ಪ್ರವೃತ್ತಿಗೆ ಹಿನ್ನೆಲೆಯಾಗಿ ಅಲ್ಲಿನ ಬೆಟ್ಟ ಗುಡ್ಡಗಳು ಮೂಡಿ ಬಂದಿರುವುದನ್ನು ತೋರಿಸಿ ಕೊಟ್ಟಿದ್ದಾರೆ. ಹೀಗೆ ಕಾರಂತರ ಕಾದಂಬರಿಗಳಲ್ಲಿ ಬರುವ ನಿಸರ್ಗ ವರ್ಣನೆ ಅಲ್ಲಿನ ಸ್ತ್ರೀ ಪಾತ್ರಗಳ ವಿವಿಧ ಮನೋಧರ್ಮಗಳಿಗೆ ಕನ್ನಡಿ ಹಿಡಿಯುತ್ತದೆ.
ಮೂರನೆಯ ಅಧ್ಯಾಯದಲ್ಲಿ ಕುಟುಂಬ ಮತ್ತು ಸ್ತ್ರೀಯರ ಪಾತ್ರಗಳನ್ನು ವಿವೇಚನೆಗೆ ಒಳಪಡಿಸಲಾಗಿದೆ. ಸ್ತ್ರೀಯರು ಹೇಗೆ ಇಡೀ ಕುಟುಂಬದ ಆಧಾರ ಸ್ಥಂಭವಾÀಗಿದ್ದಾರೆ ಎಂಬುದನ್ನು ಅವರು ತಕ್ಕ ನಿದರ್ಶನಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಬೇಜವಾಬ್ದಾರಿ ಗಂಡಸರನ್ನು ಕುಡುಕರನ್ನು ಕಟ್ಟಿಕೊಂಡು ಅವರು ಪಡುವ ಪಾಡು ಅನಾವರಣಗೊಂಡಿದೆ. ಆದರೂ ಅವರು ಧೃತಿಯನ್ನು ಕಳೆದುಕೊಳ್ಳದೇ ಕುಟುಂಬವನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊತ್ತುಕೊಂಡು ನಿಭಾಯಿಸುವುದು ಕಾರಂತರ ಮೆಚ್ಚುಗೆಗೆ ಪಾತ್ರವಾಗಿರುವುದನ್ನು ಲೇಖಕಿ ಅನಾವರಣ ಮಾಡಿದ್ದಾರೆ. ಚೋಮನ ದುಡಿಯಲ್ಲಿನ ಬೆಳ್ಳಿ ತಂದೆ ಮತ್ತು ಮಕ್ಕಳನ್ನು ಕಾಪಾಡುವ ಹೆಣ್ಣಾಗಿ ಕುಟುಂಬದ ಕೇಂದ್ರವಾಗಿದ್ದಾಳೆ. ಅವಳು ಮಕ್ಕಳನ್ನು ಅಪ್ಪನ ಕೋಪದಿಂದ ಬಿಡಿಸುವುದಲ್ಲದೇ ಚೋಮನನ್ನು ಎದುರಿಸಬಲ್ಲ ಛಾತಿಯನ್ನು ಹೊಂದಿದ್ಷಾಳೆ. ಅಲ್ಲಿ ಅವಳು ಚೋಮನಿಗಿಂತ ಹೆಚ್ಚು ವಾಸ್ತವವಾದಿ. ಆದರೆ ಅದೇ ಚೋಮನ ದುಡಿಯಲ್ಲಿ ಬರುವ ಸಂಕಪ್ಪನ ತಾಯಿ ಅವಳ ವಾಸ್ತವವಾದಕ್ಕೆ ಹಿಡಿದ ಕನ್ನಡಿಯಾಗಿದ್ದಾಳೆ.
ಸರಸ್ವತಿ ಮನೆಯಲ್ಲಿ ಮದುವೆಯ ಪ್ರಸ್ತಾಪವನ್ನು ಮಾಡದೇ, ಐತಾಳರು ಎರಡನೆಯ ಮದುವೆಗೆ ಸಿದ್ಧರಾದಾಗ, ಕೋಪಗೊಂಡು ಅವಳು ತನ್ನ ಗಂಡನ ಮನೆಗೆ ಹೋಗಿಬಿಡುತ್ತಾಳೆ. ಆಗ ಐತಾಳರೇ ಹೋಗಿ ಅವಳನ್ನು ಸಂತೈಸಿ ಕರೆತರಬೇಕಾಗುತ್ತದೆ. ಇದು ಅವಳ ಸ್ವಾಭಿಮಾನದ ಪ್ರತೀಕವಾಗಿದೆ. ಆದರೆ ಪಾರ್ವತಿ ಮಾತ್ರ ತನ್ನ ಒಡಲ ಬೇಗೆಯನ್ನು ತಾಳಿಕೊಂಡು ಮದುವೆಯಲ್ಲಿ ಪಾಲೊಳ್ಳÀಬೇಕಾಗುತ್ತದೆ. ನಾಗವೇಣಿ ಬೇಜವಾಬ್ದಾರಿ ಗಂಡನನ್ನು ನಂಬಿದರೆ ಉಳಿಗಾವಿಲ್ಲವೆಂದು ಬದುಕಿನ ಹೋರಾಟಕ್ಕೆ ಸನ್ನದ್ಧಳಾಗುತ್ತಾಳೆ.
ಮೂಕಜ್ಜಿಯ ಕನಸುಗಳಲ್ಲಿ ಬರುವ ಮೂಕಜ್ಜಿ ಕುಟುಂಬದ ಕೇಂದ್ರ್ರ ಮಾತ್ರವಲ್ಲದೇ ಬಿರುಕು ಬಿಟ್ಟ ಸಂಬಂಧಗಳನ್ನು ಬೆಸೆಯಬಲ್ಲ ಸಂಜೀವಿನಿಯೂ ಆಗಿದ್ದಾಳೆ.
ನಾಲ್ಕನೆಯ ಅಧ್ಯಾಯದಲ್ಲಿ ಸ್ತ್ರೀ ಮತ್ತು ಲೈಂಗಿಕತೆ ಕಾರಂತರ ಕಾದಂಬರಿಗಳಲ್ಲಿ ಅನಾವರಣಗೊಂಡಿರುವ ಬಗೆಯನ್ನು ಶೋಧನೆಗೆ ಒಳಪಡಿಸಲಾಗಿದೆ. ಕಾರಂತರು ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಹೆಣ್ಣುಗಳ ಅಂತರಂಗವನ್ನು ಹೊಕ್ಕು ಬಯಲಾಗಿಸುವ ಬಗೆಯನ್ನು ನಿದರ್ಶನಗಳೊಂದಿಗೆ ನಿರೂಪಿಸಿದ್ದಾರೆ. ನಾವು ರೂಪಿಸಿಕೊಂಡಿರುವ ಗರತಿ ಗಿS ಸೂಳೆ, ಒಳ್ಳೆಯವಳು ಗಿS ಕೆಟ್ಟವಳು, ನೀತಿ ಗಿS ಅನೀತಿ ಇತ್ಯಾದಿ ಕೃತಕ ಮಾನದಂಡಗಳನ್ನು ನಿರಾಕರಿಸಿ ಅವಳು ಹೇಗೆ ಮನೋದೇಹಿಯಾಗಿದ್ದಾಳೆ ಎಂಬುದನ್ನು ಸಿದ್ಧಪಡಿಸಿದ್ದಾರೆ. ಅದಕ್ಕೆ ‘ಸರಸಮ್ಮನ ಸಮಾಧಿ’ ಯಲ್ಲಿ ಬರುವ ಸುನಾಲಿನಿ, ‘ಮೈಮನಗಳ ಸುಳಿಯಲ್ಲಿ’ ಬರುವ ಮಂಜುಳೆ ‘ಜಾರುವ ದಾರಿಯಲ್ಲಿ’ ಬರುವ ಗುಲಾಗಿ ಇತ್ಯಾದಿ ವಿಭಿನ್ನ ಪಾತ್ರಗಳನ್ನು ನಿದರ್ಶನವಾಗಿ ನೋಡಬಹುದು. ಇಲ್ಲಿ ಅವರು ಎದುರಿಸುವ ಮನೋ ದೈಹಿಕ ತೊಡಕುಗಳನ್ನು ಅನನ್ಯವಾಗಿ ಬಿಡಿಸಿ ಬಿಟ್ಟಿರುವುದು ಅವರ ಸಹನುಭೂತಿಗೆ ನಿದರ್ಶನವಾಗಿದೆ. ಮೈಮನಗಳ ಸುಳಿಯಲ್ಲಿ ಹೇಗೆ ದೇಹ ಮತ್ತು ಮನಸ್ಸುಗಳು ಒಟ್ಟಿಗೆ ಇರಲಾರವು ಎಂಬುದರ ಅನ್ವೇಷಣೆಗೆ ತೊಡಗಿ ಕಡೆಗೆ ಮಂಜುಳೆ ಲಕ್ಷಣ ತೀರ್ಥರಲ್ಲಿ ಎರಡನ್ನೂ ಒಟ್ಟಿಗೆ ಪಡೆಯುವ ಸಾರ್ಥಕ ಕ್ಷಣಗಳನ್ನು ಚಿತ್ರಿಸಿದ್ದಾರೆ. ಅಲ್ಲಿ ಅವರು ಬಳಸಿರುವ ವೀಣೆಯ ಪ್ರತಿಮೆ ಅನನ್ಯವಾಗಿದೆ.
ಡಿ.ಎಚ್. ಲಾರೆನ್ಸನ ಕೃತಿಗಳ ಸನ್ನಿವೇಶಗಳೊಂದಿಗೆ ಇವನ್ನು ಇಟ್ಟು ನೋಡಿರುವುದು ಅವರ ವಿಸ್ತøತ ಅಧ್ಯಯನಕ್ಕೆ ಸಾಕ್ಷಿಯಾಗಿದೆ.
ಐದನೆಯ ಅಧ್ಯಾಯದಲ್ಲಿ ಕಾರಂತರ ಕಾದಂಬರಿಗಳಲ್ಲಿ ಮುದುಕಿಯರ ಪಾತ್ರಗಳನ್ನು ಅಧ್ಯನಕ್ಕೆ ಒಳಪಡಿಸಿದ್ದಾರೆ. ಅವರು ಹೇಗೆ ತಮ್ಮ ಶ್ರದ್ಧೆ, ನಿಷ್ಠೆ, ದುಡಿಮೆಗಳಿಂದಾಗಿ ಕಾರಂತರ ಪ್ರೀತಿ ಮತ್ತು ಮೆಚ್ಚುಗೆಗೆ ಪಾತ್ರವಾಗಿರುವುದನ್ನು ಚಿತ್ರಿಸಿದ್ದಾರೆ. ಅವರ ನಂಬಿಕೆಗಳು ತಮ್ಮವಲ್ಲವೆಂದು ಆದರೆ ಅವರು ನಂಬಿ ನಡೆದ ಬದುಕು ತಮ್ಮನ್ನು ಆಕರ್ಷಿಸುತ್ತದೆಂದು ಹೇಳಿಕೊಳ್ಳುತ್ತಾರೆ. ಹಾಗೆ ನೋಡಿದರೆ ಮೂಕಜ್ಜಿ ಮಾತ್ರ ಕಾರಂತರ ನಿಲುವುಗಳ ಪ್ರತೀಕವಾಗಿ ಮೂಡಿ ಬಂದಿದ್ದರೆ ಉಳಿದೆಲ್ಲ ಪಾತ್ರಗಳು ಅವರ ನಿಲುವುಗಳಿಗೆ ವಿರುದ್ಧವಾದುವೇ. ಆದರೆ ಇದು ಅವರ ಶ್ರದ್ಧೆಯನ್ನು ಮೆಚ್ಚಿಕೊಳ್ಳಲು ಕಾರಂತರಿಗೆ ಅಡ್ಡಿ ಬರುವುದಿಲ್ಲ. ಇದು ಅವರ ಉದಾತ್ತ ಮನೋಧರ್ಮದ ದ್ಯೋತಕವಾಗಿದೆ. ಅವರೆಲ್ಲ ತಮ್ಮ ಬದುಕನ್ನು ಕಟ್ಟಿಕೊಂಡ ಬಗೆ ಮತ್ತು ಅದರಲ್ಲಿ ಇರುವ ಚೆಲುವನ್ನು ಕಾಣಲು ಸಾಧ್ಯವಾಗುತ್ತದೆ.
ಸರಸೋತಿಗೆ ತನ್ನ ಬದುಕೆನ್ನುವುದೇ ಇಲ್ಲ. ಅವಳು ಅಣ್ಣನ ಸಂಸಾರದಲ್ಲಿ ತನ್ನ ಬದುಕಿನ ಸಾರ್ಥಕತೆÉಯನ್ನು ಕಂಡುಕೊಳ್ಳುತ್ತಾಳೆ. ‘ಅಳಿದ ಮೇಲೆ’ ಕಾದಂಬರಿಯಲ್ಲಿ ಬರುವ ಯಶವಂತನ ಅಜ್ಜಿಯರಿಗೂ ಅವನ ಅಭ್ಯುದಯದಲ್ಲಿಯೇ ಅವರು ತಮ್ಮ ಬದುಕನ್ನು ಕಂಡುಕೊಳ್ಳುತ್ತಾರೆ. ಅವನು ಕಳುಹಿಸಿಕೊಡುವ ಐದು ರೂಗಳಲ್ಲೇ ಸಂತೃಪ್ತಿಯನ್ನು ಕಾಣುತ್ತಾರೆ. ವಿಜಯಾ ದಬ್ಬೆಯವರು “ಕಾರಂತರ ಈ ಮುದುಕಿಯರ ತಾಳುವಿಕೆಯ ಶಕ್ತಿಯನ್ನು ವೈಭವೀಕರಿಸುತ್ತಾರೆ” ಎನ್ನುವುದರ ಮೂಲಕ ಆ ಪಾತ್ರಗಳ ಸೃಷ್ಟಿಯ ಮಿತಿಯನ್ನು ಗುರುತಿಸುತ್ತಾರೆ.
ಆರನೆಯ ಅಧ್ಯಾಯದಲ್ಲಿ ಕಾರಂತರ ಪಾತ್ರಗಳಲ್ಲಿ ವೈಚಾರಿಕತೆಯನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ, ವೈಚಾರಿಕತೆ ಎನ್ನುವುದು ಪ್ರತ್ಯೇಕವಾಗಿ ಬರದೆ ಪಾತ್ರಗಳ ಅನುಭವದ ಮೂಸೆಯಲ್ಲಿ ಸಹಜವಾಗಿ ಅರಳಿದಂತೆ ತೋರಿಸುತ್ತಾರೆ. ಅನಂತ ಮೂರ್ತಿಯವರು “ಕಾರಂತರು ವಿಸ್ತಾರಕ್ಕೆ ಹೋಗುತ್ತಾರೆ. ಆದರೆ ಆಳವಾದ ಪ್ರಶ್ನೆಗಳನ್ನು ಎತ್ತುವುದಿಲ್ಲ” ಎಂಬುದು ಕಾರಂತರ ಕಾದಂಬರಿಗಳಲ್ಲಿ ಪ್ರಕಟವಾಗುವ ವೈಚಾರಿಕತೆಯ ಸ್ವರೂಪವನ್ನು ಮತ್ತು ಅದರ ಮಿತಿಯನ್ನೂ ಏಕಕಾಲಕ್ಕೆ ವ್ಯಾಖ್ಯಾನಿಸುತ್ತದೆ.
ತನ್ನ ಅಂತರಂಗದ ಅನ್ವೇಷಣೆಯಲ್ಲಿ ತೊಡಗುವ ಮೈಮನಗಳ ಸುಳಿಯಲ್ಲಿನ ಮಂಜುಳೆಯ ಪಾತ್ರದಲ್ಲಿ ಇದು ಪ್ರಧಾನವಾಗಿ ಕಂಡು ಬರುತ್ತದೆ. “ವೇಶ್ಯೆ ಮೈಮಾರಿಕೊಳ್ಳುತ್ತಾಳೆ ವಿನಾ ಮನಸ್ಸನ್ನಲ್ಲ” ಎನ್ನುವ ಪಾರಂಪಾರಿಕ ದೃಷ್ಟಿಕೋನವನ್ನು ಅಲ್ಲಗಳೆಯುವ ಗರತಿಯ ಪಾತ್ರದ ಮಿತಿಯನ್ನು ಎತ್ತಿತೋರಿಸುತ್ತಾಳಲ್ಲದೆ ತನ್ನ ತೊಳಲಾಟದ ಮೂಲಕವೇ ಅವಳು ಕಂಡು ಕೊಳ್ಳುವ ಮೈಮನಗಳ ಏಕಾತ್ಮಕತೆಯಲ್ಲಿ ಅವಳ ವೈಚಾರಿಕತೆ ಅರಳಿಕೊಳ್ಳುತ್ತದೆ.
“ನೀನು ನಾಲ್ಕು ಜನರನ್ನು ಕರೆದು ತಂದರೆ ನಾನೂ ನಾಲ್ಕು ಜನರನ್ನು ಕರೆದು ತರಬಲ್ಲೆ” ಎಂದು ಸರಸಮ್ಮನ ಸಮಾಧಿಯ ಸುನಾಲಿನಿ ಸವಾಲು ಹಾಕಲು ಹಿಂಜರಿಯುವುದಿಲ್ಲ. ಇಲ್ಲಿಯೂ ಕೂಡ ಅವಳ ವೈಚಾರಿಕತೆಯನ್ನು ಕಾಣಬಹುದಾಗಿದೆ.
ಕೊನೆಯ ಅಧ್ಯಾಯದಲ್ಲಿ ಕಾರಂತರ ಶೈಲಿಯ ವೈವಿಧ್ಯತೆಯನ್ನು ಅವರು ಬಳಸುವ ವಿಭಿನ್ನ ಭಾಷಾ ಸಾಧನಗಳ ಮೂಲಕವೇ ತೋರಿಸಿಕೊಡುತ್ತಾರೆ. ಅವರು ಬಳಸುವ ಗಾದೆಗಳು, ನುಡಿಗಟ್ಟುಗಳು ಸನ್ನಿವೇಶ ನಿರ್ಮಾಣ ಇತ್ಯಾದಿಗಳು ಅವರ ಕಾದಂಬರಿಗಳ ಸೊಗಸಿಗೆ ಕಾರಣವಾಗಿರುವುದನ್ನು ಸೂಕ್ತವಾದ ಉದಾಹರಣೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ.
ಡಾ. ಸುನೀತಾ ಶೆಟ್ಟಿಯವರ ಈ ಮಹಾ ಪ್ರಬಂಧದಲ್ಲಿ ಹೆಜ್ಜೆ ಹೆಜ್ಜೆಗೂ ಅವರ ಬಹು ಭಾಷಾ ಪರಿಣತಿಯನ್ನು, ಸ್ತ್ರೀಯರ ಅಂತರಂಗದ ಅನ್ಯಾನ್ಯ ಮುಖಗಳನ್ನು ಪ್ರವೇಶಿಸಿ ಬಯಲಾಗಿಸುವ ಕಾರಂತರ ಅನನ್ಯ ಶಕ್ತಿಯನ್ನು ಸಾರ್ಥಕವಾದ ನಿದರ್ಶನಗಳ ಮೂಲಕ ಸಾಬೀತು ಪಡಿಸಿದ್ದಾರೆ. ಬಹುಶಃ ಭಾರತೀಯ ಭಾಷಾ ಕಾದಂಬರಿಗಳ ಸಂದರ್ಭದಲ್ಲಿ ಕಾರಂತರ ಕಾದಂಬರಿಗಳನ್ನು ಅಧ್ಯಯನ ಮಾಡಬೇಕೆನ್ನುವವರಿಗೆ ಇದೊಂದು ಆಕರ ಗ್ರಂಥವಾಗಿ ಪರಿಣಮಿಸಿದೆ. ಆದ್ದರಿಂದ ಅವರು ಅಭಿನಂಧನಾರ್ಹರು. ಮಾರ್ಗದರ್ಶಿಗಳಾದ ಡಾ. ತಾಳ್ತಜೆ ವಸಂತ ಕುಮಾರ್ ಅವರಿಗೂ ಅಭಿನಂದನೆಗಳು.
*****