ಕಣ್ಣಾ ಮುಚ್ಚೆ ಕಾಡೇಗೂಡೆ

ಮಧ್ಯಾಹ್ನ ಮೂರು ಗಂಟೆಯಗಿತ್ತು..ಹುಬ್ಬಳ್ಳಿ ಧೂಳು ರಸ್ತೆಯಲ್ಲಿ ರಣ ಬಿಸಿಲಿನ್ನೂ ಲೆಕ್ಕಿಸದೇ ಹೆಜ್ಜೆ ಹಾಕುತ್ತಿದ್ದೆ.  ಸಂಸ್ಥೆಗೆ ಅವಳು ಇಂದು ಬಂದೇ ಬರುತ್ತಾಳೆ ಎಂದು ನೀಲಮ್ಮ ಹೇಳಿದ್ದರಿಂದ ಅಲ್ಲವೇ  ತುರ್ತಾಗಿ ಮಾಡುವ ಕೆಲಸಗಳನ್ನೆಲ್ಲ ಬದಿಗೊತ್ತಿ ಬಂದಿದ್ದು. ಅವರು ಅತಿಥಿಯಾಗಿ ಕರೆದಿದ್ದು ಎಷ್ಟು ಒಳ್ಳೆಯದಾಯಿತು, ಫೋನಿನಲ್ಲಿ ಕರೆದೊಡನೆಯೇ ಒಪ್ಪಿಕೊಂಡು ಬಿಟ್ಟಿದ್ದೆ.ಅವಳು ಸಿಕ್ಕರೆ ಸಾಕು… ಎಂದುಕೊಳ್ಳುತ್ತ ಚೈತನ್ಯ ಸಂಸ್ಥೆಯನ್ನು ಅರಸಿದೆ.ಒಂದು ಕಟ್ಟಡದ ಎರಡನೆಯ ಅತಂಸ್ತಿನಲ್ಲಿ ನಾ ಹುಡುಕುತ್ತಿದ್ದ ಸಂಸ್ಥೆಯ ಬೋರ್ಡ  ಕಂಡಿತು.

ಮೆಟ್ಟಿಲೇರಿ ಮೇಲೆ ನಡೆದೆ.ಸಂಸ್ಥೆಯ ಮೇಲಧಿಕಾರಿ  ನೀಲಮ್ಮ‘ಬನ್ನಿ ಬನ್ನಿ ವನಜಾ ಮೇಡಂ. ಮೊಬೈಲ್ ಡಿ.ಪಿ ಯಲ್ಲಿ ನಿಮ್ಮ ಫೋಟೋ ನೋಡಿದ್ದರಿಂದ ನಿಮ್ಮ  ಗುರ್ತು ಸಿಕ್ಕಿತು’ ಎಂದು ಸಮೀಪ ಬಂದು ಕೈ ಕುಲುಕಿದರು.ಸಂಸ್ಥೆಯ ಆ ಪುಟ್ಟ ಹಾಲ್‍ನಲ್ಲಿ  ಎಲ್ಲ ವಯಸ್ಸಿನ ಸುಮಾರು ಎಪ್ಪತ್ತು ಎಪ್ಪತ್ತೈದು ಹೆಂಗಸರು ಕುಳಿತಿದ್ದರು. ಕೆಲವರು ಹಳ್ಳಿ ಹೆಂಗಸರಂತೆಯೂ ಕೆಲವರು ನಗರದವರಂತೆಯೂ ವೇಷ ತೊಟ್ಟ ಸಾಮಾನ್ಯ ಗೃಹಿಣಿಯರಂತಿದ್ದರು.ಕೆಲವರೊಂದಿಗೆ ಪುಟ್ಟ ಮಕ್ಕಳೂ ಇದ್ದರು.

ಮಹಿಳಾ ಸಬಲೀಕರಣದ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅತಿಥಿ ಆಗಿ ನಾನಲ್ಲಿಗೆ ಹೋಗಿದ್ದೆ.ಕಾರ್ಯಕ್ರಮ ಮುಗಿದ ಮೇಲೆ ನೀವು ರೂಪಾನ ಸಂದರ್ಶನ ಮಾಡಬಹುದು ಎಂದು ನನ್ನ ಕಿವಿಯಲ್ಲಿ ಗುಸುಗುಟ್ಟಿದರು.ಇಷ್ಟೆಲ್ಲ ಜನರಿದ್ದಾರೆಯೇ ಏಡ್ಸ ಪೀಡಿತರು? ದೃಷ್ಟಿ ಬದಲಿಸುತ್ತಾ  ಮತ್ತೆ ಮತ್ತೆ ಎಲ್ಲರನ್ನೂ ನೋಡುತ್ತಿದ್ದಂತೆಯೇ ವ್ಯಥೆ, ಕರುಣೆ ಮನಸ್ಸನ್ನು ತುಂಬಿತು.ಬದುಕಿನ ಕಷ್ಟಗಳಿಗೆ ಕುಗ್ಗದೇ ಸ್ವಾವಲಂಬಿ ಬದುಕು ಕಟ್ಟಿಕೊಂಡ ಹಲವರ ಉದಾಹರಣೆ ಕೊಡುತ್ತಾ ಭಾಷಣ ಮಾಡಿದೆ.ಕಾರ್ಯಕ್ರಮ ಒಂದು ತಾಸಿನೊಳಗೆ ಮುಗಿಯಿತು.

‘ರೂಪಾ, ಇವರು ವನಜಾ ಮೇಡಂ ಅಂತಾ. ಒಬ್ಬ ಪರ್ತಕರ್ತೆ.ನಿಮ್ಮಂಥವರ ಕಷ್ಟವೇನು ಎಂದು ಪತ್ರಿಕೆಯಲ್ಲಿ ಬರಿತಾರಂತೆ.ರೂಪಾ ನಿನ್ನ ಜೀವನದ ವಿಷಯವನ್ನೆಲ್ಲ ಇವ್ರೀಗೆ ಹೇಳು, ನಿಮ್ಮ ಹೆಸರು ಬದಲಿಸಿ ವಿಷಯಾ ಅಷ್ಟೇ ಬರಿತರೆ ಹೆದರಬೇಕಾಗಿಲ್ಲ,ಹಾಗೆ ಬರಿಯೋದ್ರಿಂದ  ನಮ್ಮ ಸಂಸ್ಥೆಗೂ ಸಹಾಯವಾಗಬಹುದು’ ಎಂದು ನೀಲಮ್ಮ ನನ್ನನ್ನು ಒಬ್ಬ ಹೆಂಗಸಿನ ಮುಂದೆ ಕೂರಿಸಿ ಹೇಳಿದರು. ಎಣ್ಣೆ ಹಾಕಿ ಬಾಚಿದ ತಲೆ, ಸ್ನೇಹಪೂರ್ಣ ಕಣ್ಣುಗಳ, ಸೋತ ಮುಖಭಾವದ ಹಿಂದೊಮ್ಮೆ ಸುಂದರಿಯಿದ್ದಳೇನೋ ಎಂಬ ಕುರುಹುಳ್ಳ ಸುಮಾರು ನಲವತ್ತು ವರ್ಷದ  ಹೆಂಗಸು ನನ್ನನ್ನು ನೋಡುತ್ತಾ ಕ್ಷೀಣವಾಗಿ ನಕ್ಕು ನನ್ನ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಹೇಳಿದಳು.

ಯಾವಾಗಲೂ ಸಂದರ್ಶನ ಮಾಡುವಾಗ ಸಲೀಸಾಗಿ ಹುಟ್ಟುತ್ತಿದ್ದ ಪ್ರಶ್ನೆಗಳೆಲ್ಲ ಅಂದೇಕೋ ಮರೆತಂತೆ ಭಾಸವಾಗುತ್ತಿತ್ತು. ಯಾಕೋ ಸ್ವಲ್ಪ ಭಯವೂ ಬೆರೆತು ಎದೆಬಡಿತ ವೇಗವಾಯಿತು, ಅವಳೇನಾದರೂ ಇರಲಿ..ಮನುಷ್ಯಳಲ್ಲವಾ ಎಂದು ಕುಸಿವ ನನ್ನ ಮನಸ್ಸನ್ನು ತಹಬಂದಿಗೆ ತಂದುಕೊಂಡೆ.

‘ಯಾವೂರಿನವರು ನೀವು ರೂಪಾ?’ ಪ್ರಶ್ನಿಸಲಾರಂಭಿಸಿದೆ.ಪೆನ್ನು ನೋಟ್ ಬುಕ್  ಹಿಡಿದು ಬರೆದುಕೊಳ್ಳಲು ಸಿದ್ಧಳಾದೆ.

“ನಾನು ಕೊಲ್ಹಾಪುರದ ಸಮೀಪದ ಹಳ್ಳಿಯವಳು ಮೇಡಂ. .ನಿಮಗೆ ನನ್ನ ಕಥಿನೇ ಹೇಳಬೇಕೇನ್ರೀ? ಅಥ್ವಾ.. ಇನ್ಯಾರದ್ದಾದರೂ ನನ್ನಂಥಾವ್ರ ಕಥೆ ಹೇಳಿದ್ರೆ ಆಕ್ಕೇತೋ? ..ಓ ಆ ಕಿಡಕಿ ಆ ಕಡೀಕ ಕುಂತಾಳಲ್ರೀ ಆಕಿ ಹೆಸರು ರೇಣವ್ವ..ಮೂವತ್ತು ವರ್ಷದಿಂದ  ಧಂಧೆ ಮಾಡಿ ಮಕ್ಕಳನ್ನು ಬೆಳ್ಸಿದ್ದಾಳ್ರೀ.ಈಗ ಎಚ್, ಐ, ವಿ ಬಂದತ್ರಿ.ಕಂಗಾಲಾಗ್ಯಾಳ್ರೀ, ಇನ್ನು ಹೊಲಸು ಕೆಲ್ಸಾ ಮಾಡಾಂಗಿಲ್ಲ  ಅಂತ ತರಕಾರಿ ಮಾರಾಕೆ ಹೋಗ್ತಾ ಇದ್ದಾಳ್ರೀ. ಅವಳ ಪಕ್ಕದಾಗೆ ಕುಂತಾಕಿ ಹೆಸ್ರು ಅವಳ ಹೆಸ್ರು ಸುಂದ್ರಿ.. ಅವ್ಳ ಗಂಡ ಭಾರಿ ಕುಡ್ಕಾ..ತನ್ನ ಹೆಂಡ್ತಿನ ಬ್ಯಾರೇವ್ರ ಮಗ್ಗುಲಿಗೆ ಕಳ್ಸಿ ಬಂದ ಹಣಾನೆಲ್ಲ ಕಿತ್ತೊಂಡು ಕುಡಿತಾನ್ರೀ. ಗಂಡಾ ಹೆಂಡ್ತಿ ಇಬ್ರಿಗೂ ಎಚ್.ಐ.ವಿ ಬಂದತ್ರಿ”..

ರೂಪಾ ಭಯಾನಕವಾದ ಕಥೆಗಳ ಕಡತವನ್ನೇ ಕೈಯಲ್ಲಿ ಹಿಡಿದಂತೆ ಸಲೀಸಾಗಿ ನನಗೆ ಹೇಳುತ್ತ ಹೋದಂತೆ ನಾನು ಗಾಬರಿಬಿದ್ದೆ..

‘ರೂಪಾ ನನಗೆ ಅವರ ಕತೆಗಳು ಬೇಡ ..ನೀನು ನಿನ್ನ ಜೀವನದ ಕಥೆಯನ್ನೇ ನನಗೆ ಹೇಳು. ಯಾಕೆ ಈ ಕತ್ತಲ ಲೋಕಕ್ಕೆ ಬಂದೆ ಎನ್ನುವುದನ್ನೆಲ್ಲ ಹೇಳು ಮೆಲ್ಲನೇ ಅವಳ ಕೈ ಹಿಡಿದೆ..

‘ನಾನು ಇಲ್ಲಿಗೆ ಬಂದಿಲ್ರೀ ಮೇಡಂ. ನನಗೇ ಗೊತ್ತಿಲ್ಲದಂಗೆ ನಾ ಮಾರಾಟದ ಸರಕಾಗಿ ಇಲ್ಲಿಗೆ  ಬಂದೀನ್ರೀ’ಎಂದಳು ರೂಪಾ.

‘ಏನಂದಿ ನಿನಗೂ ಗೊತ್ತಾಗಲಾರದ ಹಾಂಗ! ಯಾರು ಮಾರಿದ್ರು?ಯಾರಿಗೆ ಮಾರಿದ್ರು?ಖರೇನೆ ಹೇಳ್ತಾ ಇದ್ದೀಯೇನು?’ಸಾಲು ಪ್ರಶ್ನೆಗಳು ನನ್ನಿಂದ ಹೊರಬಿದ್ದವು.

ನಿಮ್ಮಾಣೆ ಖರೇನೆ! ಎಂದು ನಿಟ್ಟುಸಿರಿಟ್ಟಳು ಅವಳು.

                     ***********

ರೂಪಾ ಅವಳ ಕಥೆ ಹೇಳಲಾರಂಭಿಸಿದಳು…..

ನಮ್ಮಪ್ಪಾ ಕುಡಿದು ಬಂದು ನಮ್ಮ ತಾಯಿಗ ಸಿಕ್ಕಪಟ್ಟೆ ಹೊಡಿತಿದ್ದಾ.ಜಡ್ಡಿಗೆ ಬಿದ್ದ ನಮ್ಮವ್ವಾ ಒಂದಿನಾ ಸತ್ತು ನನ್ನನ್ನಾ ಪರದೇಶಿ ಮಾಡಿದಳು. ನನಗ ಆಗ ಹದಿಮೂರು ವರುಷಾ. ಏಳನೇತ್ತಾ ಓದತಿದ್ದೆ. ಅಕ್ಕಂಗೆ ಮದವಿ ಆಗಿತ್ತು.. ಒಬ್ಬ ತಮ್ಮಾ ಇದ್ದ..ನಮ್ಮವ್ವಾ ಸತ್ತ ಹದಿನೈದು ದಿನದಾಗ ನಮ್ಮಪ್ಪಾ ಮತ್ತೊಂದು ಮದ್ವಿ ಮಾಡಿಕೊಂಡ ಬಂದ..ಆಕಿ ನನಗಿಂತ ಬರೀ ಐದು ವರುಷಾ ದೊಡ್ಡಾಕಿ.. ಮಲತಾಯಿ ಬ್ಯಾರೆ.. ಕೆಟ್ಟ ಕಾಡಾಕ ಹತ್ತಿದ್ದಳು..ಅವ್ರ ಸುಖಕ್ಕ ನಾ ಅಡ್ಡಿ ಅನ್ನಿಸ್ತಿತ್ತೇನೊ.ನಮ್ಮಪ್ಪ ಒಬ್ಬ ಕುಡುಕನ್ನ ಹುಡುಕಿ ಮದವಿ ಮಾಡ್ತೀನಿ ಅಂದಾ.ಇಲ್ಲಾ ಸಾಲಿ ಕಲೀತೀನಿ ಅಂತಾ ರಗಡ ಹಠಾ ಮಾಡಿದೆ.ಕೇಳಲಿಲ್ಲಾ ಮೂರ ತಿಂಗಳಿನ್ಯಾಗ ನನ್ನ ಮದ್ವಿ ಮಾಡಿ ಗಂಡನ ಮನಿಗೆ ಕಳಿಸಿಕೊಟ್ಟ.

ಆಗ ಜೀವದಾಗ ಭಾಳಾ ಸಣ್ಣಕ್ಕಿದ್ದೆ. ‘ಎಂತಾ ಹೆಣ್ಣ ನೀ..ಏನೇನಿಲ್ಲ ನಿನ್ನ ಹಂತ್ಯಾಕ.ನಿನಗ ಹಿಂದಕ್ಕೂ ಇಲ್ಲಾ ಮುಂದಕ್ಕೂ ಇಲ್ಲಾ’ ಅಂದಕೊಂತ ಚಿತ್ರಹಿಂಸೆ ಕೊಡತಿದ್ದ ನನ ಗಂಡ.ಹಾಂಗೂ ಹೀಂಗೂ ಅಂವಾ ಸುಧಾರಿಸಬಹುದು ಅನಕೊಂತ ಎರಡ ವರ್ಷಾ ಕಳೆದೆ.‘ಇನ್ನೂ ಬಸರಾಗಿಲ್ಲ ನೀನು ಬಂಜೆ, ನೀನು ಗಂಡಸಲ್ಲ ಅಂತ ಊರವ್ರಲ್ಲ ನನಗೆ ಅಣಕಿಸ್ತಾರ’ ಅಂತಾ ಹೊಸ ವರಸೆ ತೆಗೆದ, ಕಾಡೂದು ಮತ್ತೂ ಹೆಚ್ಚ ಮಾಡಿದ. ಅಂಥಾ ಗಂಡನ ಸಾವಾಸಾನೇ ಬ್ಯಾಡ ಅಂತ  ಒಂದಿನಾ ತವರಮನಿಗೆ ತಿರುಗಿ ಬಂದಿಟ್ಟೆ. ಮಲತಾಯಿಗೆ ಭಲೆ ಸಿಟ್ಟ ಬಂದು ‘ಮದವಿ ಮಾಡಿಕೊಂಡವನ ಕೂಡ ಬಾಳವೆ ಮಾಡಲಾರದವಳು ನೀನೆಂಥಾ ಹೆಣ್ಣು’ ಅನಕೊಂತ ಸಿಟ್ಟಿಲೆ ಮೂತಿಗೆ ತಿವಿದಳು ಮನೆಗೆಲಸ ಎಲ್ಲಾ ಹಚ್ಚಿದಳು..ಸರಿತ್ನಾಗಿ ತಿನ್ನಾಕ ಏನೂ ಕೊಡತಿದ್ದಿಲ್ಲಾ. ಹಸಿವಿನಿಂದ ಸಾಯಬೇಕನಸ್ತಿತ್ತು..

ಇವೆಲ್ಲ ಒಂದಿನಾ ಅಪ್ಪಗ ಗೊತ್ತಾತು.ಆದ್ರೆ ಹೆಂಡ್ತಿಗೆ ಏನೂ ಹೇಳೋ ಹಾಂಗಿರಲೇ ಇಲ್ಲ. ಅವನೂ ಆಕಿಗೆ ಹೆದರತಿದ್ದ.ಸ್ವಲ್ಪ ದಿನಾ ಅಕ್ಕನ ಮನಿಯಾಗಿರು ಅಂತಾ ಅಕ್ಕನ ಮನಿಯಾಗ ಬಿಟ್ಟು ಹೋದಾ.ಅಕ್ಕ ಭಾವ ದಿನಗೂಲಿ ಮಾಡಿ ಜೀವ್ನಾ ಮಾಡತಿದ್ರು.ನಾ ಮನೆಗೆಲಸಾ ಮಾಡಿಕೊಂಡ ಅಕ್ಕನ ಮಗುವನ್ನ ನೋಡತಿದ್ದೆ.ದೂರದ ಬೋರ್ವೆಲ್‍ನಿಂದ ಮನೆ ಬಳಕೆಗೆ ಬೇಕು ಅಂತಾ ದಿನಾ ನೀರ ಹೊತಗೊಂಡ ಬರತಿದ್ದೆ.

ಆಗ ಪಕ್ಕದ ಮನಿ ಸಾತವ್ವನ ದೋಸ್ತಿ ಆತು. ನಾ ಹಿಂಗಿಂಗ..ಹೀಂಗ ಅಂತ ಒಂದಿನಾ  ನನ್ನ ಕತಿ ಎಲ್ಲಾ ಆಕಿ ಕಡೆ ಹೇಳಿಕೊಂಡು ಕಣ್ಣೀರ ಹಾಕಿ ಮನಸ್ಸು ಹಗೂರ ಮಾಡಿಕೊಂಡೆ. ‘ಅಕ್ಕನ ಮನಿಯಾಗ ಎಷ್ಟ ದಿನಾ ಬಿಟ್ಟಿ ಕೂಳು ತಿನ್ನೋದು.ನಿನಗೆ ಗೊತ್ತಿದ್ದ ಕಡೆನನಗ ಎಲ್ಲಾದ್ರೂ ಕೆಲ್ಸಾ ಹಚ್ಚಿ ಕೊಡವ್ವಾ’ಅಂತ ಅಂದೆ.

‘ನನಗ ಹುಬ್ಬಳ್ಳಿ ಮೂರ ಸಾವಿರ ಮಠದಾಗ  ಪರಿಚಯದಾರು ಅದಾರು.  ನಾ ಅಲ್ಲಿ ಅಡಗಿ ಕೆಲಸಕ್ಕ ಹೋಗಿ ಸೇರಿಕೋಂತೀನಿ.ನಿನಗೂ ಕೆಲ್ಸ ಕೊಡ್ರೀ ಅಂತ ಕೇಳ್ತೀನಿ.ಬರತೀಯೇನು?ನೀನು ಬರೂ ಹಂಗಿದ್ರೆ ಬಾ. ಆದ್ರ ನಿಮ್ಮನಿ  ಒಳಗ ಹೇಳೋ ಹಾಂಗಿಲ್ಲ ಮತ್ತ’ಅಂತ ಸಾತವ್ವ ತಾಕೀತು ಮಾಡಿದ್ಲು.

‘ಆತು ನೀ ಹೇಳಿದ ಹಾಂಗ ವಿಷಯಾ ಗುಟ್ಟಾಗಿಡತೇನಿ’ ಎಂದೆ.‘ಕೆಲ್ಸಾ ಹುಡುಕಿಕೊಂಡು ಹೊಂಟೇನಿ ನನ್ನ ಹುಡುಕಬ್ಯಾಡ್ರೀ’ ಅಂತ ಅಕ್ಕಗ ಚೀಟಿ ಬರದಿಟ್ಟು ಅಕ್ಕನ ಮಗೂನ ಪಕ್ಕದವರ ಮನ್ಯಾಗ ಬಿಟ್ಟು ಸಾತವ್ವನ ಕೂಡ ಹುಬ್ಬಳ್ಳಿಗೆ ಹೊಂಟೆ.

ಧಾರವಾಡ  ಬಸ್‍ಸ್ಟಾಂಡಿನ್ಯಾಗ  ಇಳಿದಸಾತವ್ವ ‘ಒಂದಕ್ಕ ಹೋಗಿ ಬರ್ತೇನಿ’ ಅಂತ ಬಸ್ಸಿಳಿದು ಹ್ವಾಗಿದ್ದಳು.ಬರೂ ಮುಂದ ಒಬ್ಬ ಗಣಸ ಮಗನ್ನ ಕರಕೊಂಡು ಬಂದಳು.‘ನನ್ನ ತೌರು ಮನಿಪಕ್ಕದ ಮನಿಯವರು ಸಿಕ್ಕಿದ್ರು.ನಮ್ಮ ತಾಯಿ ಜಡ್ಡಿಗೆ ಬಿದ್ದಾಳಂತ.ನಾ ಅಲ್ಲಿಗೆ ಹೋಗಿ ಅವ್ವಾನ್ನ ಮಾತಾಡಿಸಿಕೊಂಡು ನಾಳೆ ಮಠಕ್ಕ ಬರತೇನಿ.ಈಗ ನೀ ಇವ್ರ ಜೋಡಿ ಹುಬ್ಬಳ್ಳಿಗೆ ಹೋಗ,ಇವ್ರೇ ನಿನಗ ಮಠದಾಗ ಕೆಲ್ಸಾ ಹಚ್ಚಿ ಕೊಡ್ತಾರ’ ಅಂದ್ಲು.

ನಾ ಆಕಿ ಮಾತ ಪೂರಾ ನೆಂಬಿದ್ದೆ.ಆತು ಅಂದಾಕಿ ಗಣಸ ಮಗನ್ನ ಜೋಡಿ ಹುಬ್ಬಳ್ಳಿಗೆ ಹ್ವಾದೆ.ಮಠಕ್ಕ ಕರಕೊಂಡು ಹೋಗ್ತೇನಿ ಅಂತ ಅಂವಾ ಒಂದು ಲಾಡ್ಜಿಗೆ ಕರಕೊಂಡು ಹೋದ.‘ಇಲ್ಲಿದ್ದು ಜಳಕಾ ಮಾಡು, ಊಟ ತರಸ್ತೇನಿ, ಊಟ ಮಾಡು ಸಂಜಿ ಮುಂದ ನಿನ್ನ ಮಠಕ್ಕ ಕರಕೊಂಡು ಹೋಗ್ತೇನಿ.ಸಾತವ್ವ ಹೇಳ್ಯಾಳ ನಿನ್ನ ಭಾಳ ಚುಲೋ ನೋಡಿಕೋ ಬೇಕಂತೆ’ ಎಂದು ಕೆಟ್ಟದಾಗಿ ನಕ್ಕ.

ನನಗ ಯಾಕೋ ಒಂಥರಾ ಭಯಾ ಅನ್ನಿಸಾಕ ಹತ್ತಿತು.‘ನಾ ಇಲ್ಲಿರಾಕ ಒಲ್ಲೆ.ಬಸ್ ಸ್ಟಾಂಡಿನ್ಯಾಗ ಇರ್ತೇನಿ.ಸಂಜೀಕ ನನ್ನ ಮಠದ ಕೆಲ್ಸಕ್ಕ ಸೇರಿಸಿಬಿಡ್ರೀ’ ಎಂದೆ.

‘ಮೂವತ್ತು ಸಾವಿರಾ ಕೊಟ್ಟು ಖರೀದಿ ಮಾಡೀನಿ ನಿನ್ನಾ.ಇನ್ನ ನಿನ್ನ ಮರ್ಜಿ ಕೇಳವ್ರು ಯಾರು? ನಾ ಹೇಳಿದ್ದು ಕೇಳಿಕೊಂಡು ಇಲ್ಲಿ ಬಿದ್ದಿರಬೇಕು ತಿಳಿತಾ..ಎಂದು  ಹತ್ತಿರ ಬಂದು ಸೊಂಟಕ್ಕೊಮ್ಮೆ ಝಾಡಿಸಿ ಒದ್ದು ರೂಮನ್ನು ಲಾಕ್ ಮಾಡಿಕೊಂಡು ಹೋದ.

ನನ್ನ ಕಿವ್ಯಾಗ ಬಾಂಬು ಹಾಕಿದ ಹಾಂಗಾತು.ಅತ್ತೆ, ಚೀರಿದೆ, ತಪ್ಪಿಸಿಕೊಳ್ಳಾಕ ಆಕ್ಕೇತೋ ನೋಡಿದೆ.ಯಾವ್ದೂ ಸಾಧ್ಯಾ ಆಗಲಿಲ್ಲ. ಅಕ್ಕನ ಹಂಗ ಇದ್ದಾಕಿ ಅಂತ ನಂಬಿದ ಸಾತವ್ವ ನನ್ನನ್ನ ಮಾರಿ ಬಿಟ್ಟಿದ್ಲು.ನಾನು ಪ್ರಪಾತದಾಗ ಬಿದ್ದಿದ್ದೆ. ಬದುಕು ನರಕಾ ಆಗಿ ಹೋತು.ಆ ಲಾಡ್ಜಿನ್ಯಾಗ ನನ್ನನ್ನ ಬಂಧಿಸಿ ಇಟ್ಟಿದ್ರು.ನನ್ನನ್ನ ಖರೀದಿ ಮಾಡಿದವನ ಹೆಸರು ಮುರುಗ.ಆದ್ರೆ ಅಂವಾ ಮನಷಾ ಆಗಿರ್ಲಿಲ್ಲ ಮೃಗಾ ಆಗಿದ್ದಾ.ರೇಲ್ವೇಸ್ಟೇಷನ್ನು, ಬಸ್‍ಸ್ಟಾಂಡಿನ್ಯಾಗ ನನ್ನ ಪೋಟೋ ತೋರಿಸಿ ಯಾವ್ಯಾವುದೋ ಗಿರಾಕಿಗಳನ್ನ ಹಿಡಿದುಕೊಂಡು ಬರತಿದ್ದ. ಅದೆಷ್ಟು ಜನರು ನನ್ನ ಮಗ್ಗುಲಿಗೆ ಬಂದು ಬಿದ್ದ ಹೋದರೋ..ಅದೆಷ್ಟು ಹಗಲೂ ರಾತ್ರಿ ಕಳೀತೋ ಲೆಕ್ಕ ಇಟ್ಟೋರ್ಯಾರು. ಬಂದೋರು ಕೊಟ್ಟ ರೊಕ್ಕಾ ಎಲ್ಲಾ  ಆ ಮೃಗಾನೆ ಇಸ್ಕೋತಿತ್ತು. ನನಗ ಊಟಾ, ಬಟ್ಟೆ ಅಷ್ಟೇ ಕೊಡತಿತ್ತು.

                ***********

ನನ್ನ ಜೊತೆಗೆ ಯಾರಾರ ಇದ್ದಾಗ ನಕ್ಕೋಂತ ಇರಲೇ ಬೇಕಾಗಿತ್ತು.ಇಲ್ಲಾ ಒದೆ ತಿನ್ನಬೇಕಾಗಿತ್ತು. ಯಾರು ಇಲ್ಲದಾಗ ಒಟ್ಟೂ ಕಣ್ಣೀರು ತಡಿಯಾಕ ಆಗತಿದ್ದಿಲ್ಲ. ಯಾವಾಗ್ಲೂ ಅಳ್ತಾನೆ ಇರತಿದ್ದೆ..ನಾ ಇವೆಲ್ಲಾ ಮಾಡಂಗಿಲ್ಲ ಇಲ್ಲಿಂದ ಕಳಸ್ರೀ ಅಂತಾ ಆ ಮೃಗದ ಕಾಲಿಗೆ ಬೀಳತಿದ್ದೆ.ಅಂವಾ ಕರಳಿಲ್ಲದ ಮನಷಾ… ನನ ಕಷ್ಟಕ್ಕ ಎಂದೂ ಕರಗಲಿಲ್ಲಾ.

 ನಾ ಇರೋ ರೂಮಿಗೆ ಊಟಾ ತಿಂಡಿ ಕೊಡಾಕ ಒಬ್ಬ ವಾರ್ಡಬಾಯ್ ಬರತಿದ್ದಾ. ಅವನ ಹೆಸರು ಅಶೋಕಾ.ಅಂವಾ ಬಳ್ಳಾರಿ ಹುಡುಗಾ.ನಾ ಮುಳು ಮುಳು ಅಳೂದ ನೋಡಿ ಮರಗತಿದ್ದಾ.ನಾಲ್ಕ ಒಳ್ಳೇ ಮಾತಾಡಿ ‘ಮೇಡಂ ಉಣ್ರೀ, ಇಲ್ಲಾ ಅಂದ್ರ ಸತ್ತೇ ಹೋಕ್ಕೀರಿ’ ಅನತಿದ್ದಾ.

‘ಇದ್ದು ಸಾಧಿಸೋದಾರ ಏನೈತಿ..ನನ್ನ ಮನಿ ಜನರೂ ಯಾರೂ ನನ್ನ ಹುಡುಕಿಲ್ಲಾ ಅನ್ನಿಸ್ತತಿ.ಎಲ್ಲಾರಿಗೂ ಬ್ಯಾಡಾಗೀನಿ ನಾ. ಹಿಂಗ ದಿನಾ ಸತ್ತು ಸತ್ತು ಬಾಳೂದಕ್ಕಿಂತ ಒಮ್ಮೆ ಸತ್ತೇ ಹೋಗಬಿಡಬೇಕು. ಉರಳ ಹಾಕಿಕೋಬೇಕು’  ಅಂತಾ ವಿಚಾರ ಮಾಡಿ ಒಂದಿನಾ ಸೀರಿನ ಫ್ಯಾನಿಗೆ ಹಾಕಿ ಕುಣಿಕೆ ಮಾಡಿಕೊಂತಿದ್ದೆ.

ಅದೇ ಹೊತ್ತಿನ್ಯಾಗ ಅಶೋಕಾ ಕಿಟಕೀಲಿಂದ ಅದನ್ನ ನೋಡಿಕೊಂಡು ಗಾಭರ್ಯಾಗಿ ರೂಮಿನೊಳಗ ಬಂದ. ‘ಇವತ್ತ ರಾತ್ರಿ ನಾ ಇಲ್ಲಿಂದ ನಿಮ್ಮನ್ನ ಪಾರ ಮಾಡತೇನಿ.ನಿಮ್ಮನ್ನ ಮದವಿ ಮಾಡಿಕೊತೀನ್ರೀ. ಜೀವಾ ತೆಕ್ಕೊಳಂಗಿಲ್ಲ ಅಂತ ನನಗ ಮಾತು ಕೊಡ್ರಿ ಅಂ’ ನನಗೆ ಮಾತೇ ಹೊರಡಲಿಲ್ಲ. ನಾ ಅವನ ಕಾಲಿಗೆ ಬಿದ್ದೆ.

ಬೆಳಗಿನ ಝಾವ ನಾಲ್ಕ ಗಂಟೆಕ ಎಲ್ಲಾರೂ ಮಕ್ಕೊಂಡ ಹೊತ್ತಿನ್ಯಾಗ ನಾವಿಬ್ರೂ ಅಲ್ಲಿಂದ ಪಾರಾದಿವಿ.ಬಸ್‍ಸ್ಟಾಂಡಿಗೆ ಬಂದು ಸಿಕ್ಕಿದ ಬಸ್ ಹತ್ತಿದ್ವಿ. ಅದು ಕುಮಟಾ ಬಸ್ ಆಗಿತ್ತು. ಉಟ್ಟ ಅರಬಿ ಮ್ಯಾಲ ಹೊರಗೆ ಬಂದ ನಮ್ಮ ಕೈಲಿ ರೊಕ್ಕಾನೂ ಜಾಸ್ತಿ ಇರಲಿಲ್ಲ.…ಇರಾಕ ನೆಲೆ ಇರಲಿಲ್ಲ. ಎಲ್ಲ ಊರು ನಮ್ಮ ಪಾಲಿಗೆ ಒಂದೇ ಆಗಿತ್ತು.

ಕುಮಟಾದಲ್ಲಿ ಅರ್ಧ ಆದ ಕಟ್ಟಡ ಇರೋವಲ್ಲಿ ಹೋಗಿ ಕೆಲಸ ಹುಡುಕಿದ್ವಿ. ಒಂದ ಕಡೆ ಅಶೋಕಂಗೆ ವಾಚ್ಮನ್ ಕೆಲಸ ಸಿಕ್ಕಿತು.‘ನಮ್ಮೂರಿನ್ಯಾಗ ಬರಾ ಬಂದತಿ.ಕೆಲ್ಸಾ ಹುಡುಕಿಕೊಂಡ ಬಂದಿವಿ’ ಅಂತ ಎಲ್ಲಾರ ಕೂಡ ಸುಳ್ಳ ಹೇಳಿದ್ವಿ.

ಶೆಡ್ಡಿನ್ಯಾಗ ಉಳಕೊಂಡು ಕೆಲಸಾ ಶುರು ಮಾಡಿದ್ವಿ. ಅಶೋಕ ದ್ವಾವ್ರಂಥಾ ಮನಶ್ಯಾ.ಕೊಟ್ಟ ಮಾತಿಗೆ ತಪ್ಪಲಿಲ್ರೀ. ಮಾರಮ್ಮನ ಗುಡ್ಯಾಗೆ ನನ್ನ ಮದವಿನೂ ಮಾಡಿಕೊಂಡ..ಸಾವಕಾರ್ರು ವಾರಕ್ಕ ಮುನ್ನೂರು ರೂಪಾಯಿ ಸಂಬಳಾ ಕೊಡತಿದ್ರು ಅದ್ರಾಗ ಚೆಂದಗಿ ನಮ್ಮ ಜೀವ್ನಾ ನಡೀತಿತ್ತು.ಭಾಳ ಪ್ರೀತೀಲಿ ನನ್ನ ನೋಡಿಕೊಂತಿದ್ದ.  ಅನುಕೂಲ ಇದ್ದಾಗ ಸಿನೆಮಾಕ್ಕ, ಸಮುದ್ರ ತೀರಕ್ಕ, ಗುಡಿಗ .. ಹಿಂಗ ಎಲ್ಲಾ ಕಡೇಗ ಸುತ್ತಸತಿದ್ದ.…ಹಿಂಗ ಎರಡ ವರಸಾ ಕಳೀತು.ನಮಗೊಂದು ಮಗಳು ಹುಟ್ಟಿದಳು.ಬಾಣೆತನಾನೂ ಅಶೋಕಾನೇ ಮಾಡಿದಾ.ಮಗಳಿಗೆ ರಶ್ಮಿ ಅಂತಾ ಹೆಸರಿಟ್ಟು ಮುದ್ದಿಲೇ ಸಾಕಾಕ ಹತ್ತಿದ್ವಿ.

  ಅಶೋಕ ಹಳೆ ನೆನಪ ಯಾವ್ದು  ಕೆದಕತಿರಲಿಲ್ಲ. ನಾನೂ ಗಂಡಾ  ಹಾಗೂ ಮಗಳ ಪ್ರೀತಿಲಿ ಎಲ್ಲಾ ಮರೆತ ಭಾಳ ಖುಷಿಲಿದ್ದೆ. ಆದ್ರ ವಿಧಿಯಾಟಕ್ಕ ಏನ ಹೇಳಲಿ.ಒಂದ ದಿನಾ ಸಂತಿಗೆ ಹೋಗಾಕಂತ ಬಸ್ಸಿಗೆ ಕಾಯಕೊಂತ ನಿಂತಿದ್ದವಿ.ನಾ ಸ್ವಲ್ಪ ದೂರ ನೆರಳಾಗ ಮಗಳನ್ನ ತುಗೊಂದು ನಿಂತಿದ್ದೆ.ಅಶೋಕ ರಸ್ತೆ ಪಕ್ಕ ನಿಂತಿದ್ದೆ.ಸ್ಪೀಡಾಗಿ ಬಂದ ಲಾರಿ ಅಶೋಕಗ ಗುದ್ದಿ ಹೋಗಿ ಬಿಟ್ಟಿತು.ಓಡಿ ಹೋಗಿ ನೋಡತೀನಿ..ಲಾರಿ ಹೊಡೆದ ಹೊಡತಕ್ಕೆ ಅಶೋಕನ ಕಳ್ಳು- ಮಿದುಳು ಎಲ್ಲಾ ಹೊರಗ ಬಂದಿತ್ತು. ಜೀವಾನೇ ಹೋಗಿ ಬಿಟ್ಟಿತ್ತು..ಮುಗಿಲೇ ಹರಕೊಂಡ ತೆಲಿ ಮ್ಯಾಲ ಬಿದ್ದ ಹಂಗಾತ್ರೀ ನನಗ..ದೇವರು ನನಗೆ ಕೊಟ್ಟ ಪ್ರಸಾದ ಅಂದಕೊಂಡ ನನ ಗಂಡ ಒಂದೇ ನಿಮಿಷದಾಗ ನಡನೀರಿನ್ಯಾಗ ಕೈಬಿಟ್ಟ ಹ್ವಾದ. ..ಅಂದಕೊಂಡ ಗಂಡ ಮಾತಾಡುತ್ತಿದ್ದ ರೂಪಾನ ಗಂಟಲು ಕಟ್ಟಿತ್ತು.ಕಣ್ಣಿಂದ ತಟ ತಟನೇ ಹನಿಗಳುದುರಿದವು.ಕೇಳುತ್ತಿದ್ದ ನನ್ನ ಕಣ್ಣಿಂದ ಸಹಾ. ಅವಳ ಮಾಯ್ದ ಗಾಯವನ್ನ ಗೀರಿ ಹಸಿ ಮಾಡಿದಂತಾಗಿತ್ತು….

ಒಂದೆರಡು ನಿಮಿಷಗಳ ನಂತರ ರೂಪಾ ತನ್ನನ್ನು ತಾನು ಸಾವರಿಸಿಕೊಂಡಳು… ಕುಮಟಾದಾಗ ಎಲ್ಲಾರ ಬಾಯಲ್ಲೂ ಆ ಭಯಾನಕ ಆಕ್ಸಿಡೆಂಟ್ ಸುದ್ದಿನೇ ಸುದ್ದಿ. ..ಜೊತಿಗೆ ಕೆಲ್ಸಾ ಮಾಡೋವ್ರು ಭಾಳ ಮರಗಿದ್ರು. ‘ತೌರು ಮನೆಗೆ ಹೋಗಿಬಿಡು’ ಎಂದರು. ಪಾಪ ಯಾರಿಗೂ ಗೊತ್ತೇ ಇರಲಿಲ್ಲ..ನನಗೆ ಮನೆ, ತೌರುಮನೆ ಯಾವುದೂ ಇಲ್ಲ ಎನ್ನೋದು. ಸಾವುಕಾರ್ರು ‘ಬೇರೆ ವಾಚ್ಮನ್ನ ತಂದಿಡತೇನಿ.. ಒಂಟಿ ಹೆಣ್ಣ ಮಗಳು ಈ ಕೆಲಸಕ್ಕೆ ಸರಿ ಹೋಗಂಗಿಲ್ಲ’ ಅಂದ್ರು. ಶೆಡ್ ಖಾಲಿ ಮಾಡಬೇಕಾತು.‘ಬಡವ್ರೀಗೆ ಅಳಾಕೂ ಪುರುಸೊತ್ತು ಕೊಡಂಗಿಲ್ಲ. ಹಾಂಗ ಮಾಡ್ರಿ,ನಾನು ನಮ್ಮೂರಿಗೆ ಹೋಕ್ಕೇನಿ’ ಅಂತಂದು ಹುಬ್ಬಳ್ಳಿ ಬಸ್ ಹತ್ತಿದೆ.

             ************

 ಮನಸಿನ ತುಂಬಾ ದುಃಖ, ಮಡಿಲಿನಲ್ಲಿ ಅಶೋಕನ ಪ್ರೀತಿಯ ಫಲವಾದ ಎರಡುವರ್ಷದ ಕೂಸು ರಶ್ಮಿ.. ಸಾವುಕಾರ್ರು ಕೊಟ್ಟ ಎರಡು  ಸಾವಿರ ರೂಪಾಯಿ.. ಒಂದೀಸು ಪಾತ್ರೆ, ಪಗಡಿ, ಅರಬಿ ತುಗೊಂಡು ಹುಬ್ಬಳ್ಳಿಗೆಬಂದಿಳಿದೆ.ಎಲ್ಲಿರೋದು ಏನು ಮಾಡೋದು ಒಂದೂ ತಿಳಿಲಾರದೇ ಬಸ್‍ಸ್ಟಾಂಡಿನ್ಯಾಗ ಸುಮ್ಮಕ ಕುಂತೆ.ಪರಿಚಯದಾರು ಯಾರರ ನಮ್ಮನ್ನ ಕಂಡರೆ ಎನ್ನುವ ಭಯ ಒಂದ ಕಡೆ.ಸೀರಿ ಸೆರಗಲೆ ಮುಖಾ ಸರೀತ್ನಾಗಿ ಕಾಣಲಾರದ ಹಂಗ ಮುಚ್ಚಿಕೊಂಡು ಅಂಗಡಿಯಿಂದ ಬನ್ ತಂದು ಮಗುವಿಗೂ ತಿನ್ನಿಸಿ ನಾನು ಒಂದಿಷ್ಟುತಿಂದು ಬೆಂಚಿನಲ್ಲಿ ಮುದುಡಿ ಕುಂತೆ.ಅಲ್ಲೇ ಸುತ್ತಾಡುತ್ತಿದ್ದ ಪೋಲೀಸಪ್ಪ ಕೆಕ್ಕರಿಸಿ ನೋಡಿಕೊಂಡು ಚಾ ಕುಡಿಯಾಕ ಹೋದಾ.ಸಂಜೆಯಾಗ್ತಾ ಬಂದಿತ್ತು.ಪಕ್ಕದಾಗೆ ಒಬ್ಬ ವಯಸ್ಸಾದ ದಪ್ಪನೆಯ ಹೆಂಗಸು ಬಂದು ಕುಂತಳು.

‘ಯಾವೂರಿಗೆ ಹೋಗಬೇಕಾಗೇತವ್ವಾ? ಅಂದಳು. ರಶ್ಮಿಯ ಕೆನ್ನೆ ಸವರಿ ‘ಮಗಳಾ?’ಎಂದು ಕೇಳಿದಳು.

ಜನಸಾಗರದಲ್ಲಿ ಪರದೇಶಿಗಳಂತೆ ಕುಳಿತ ನಮ್ಮನ್ನ ಒಬ್ಬಾಕಿಯಾದರೂ ಮಾತಾಡಿಸಿದಳಲ್ಲಾ ಎಂದು ದುಃಖ ಬಂದು ‘ಯಾವೂರಿಗೂ ಇಲ್ಲ’ ಎಂದೆ.

ಆಕಿ ಮೆಲ್ಲಗೆ ಅತ್ತಿತ್ತ ನೋಡಿ ‘ಯಾಕ ಮನಿ ಬಿಟ್ಟ ಬಂದೀಯೇನು?’ ಕೇಳಿದಳು.

ಸುಮ್ಮನೇ ಹೌದೆನ್ನುವಂತೆ ತಲೆ ಹಾಕಿದೆ.ಅವಳು ಲೊಚಗುಟ್ಟಿದಳು.‘ಸಂಜಿ ಆಗಾಕ ಹತ್ತೇತಿ.ಕೂಸು ಬ್ಯಾರೆ ಬಗಲಾಗೈತಿ. ಇಲ್ಲೇ ನಮ್ಮನಿ ಐತಿ. ನಡಿರಿ ನನ್ನ ಜೋಡಿ.. ರಾತ್ರಿ ಇಲ್ಲೇ ಕುಂತ್ರ ಪೋಲೀಸರು ಹಿಡಕೊಂಡ ಹೋಗಿ ಜೈಲಿಗೆ ಹಾಕತಾರ’.. ಎಂದಳು.

 ಪುಟ್ಟ ಮಗಳನ್ನು ಜೈಲುಪಾಲು ಮಾಡುವುದಕ್ಕಿಂತ ಈ ಹೆಂಗಸಿನ ಜೊತೆ ಹೋಗಿಬಿಡಬೇಕು..ಎಂದು ತೀರ್ಮಾನ ಮಾಡಿ ಆಕಿ ಜೋಡಿ ಹೊರಟೆ. ಆಕಿ ಹೆಸರು ಅಲಮೇಲಮ್ಮ..ಆಕಿ ನನ್ನ ಒಂದ ರಿಕ್ಷಾ ಹತ್ತಿಸಿ ಎಲ್ಲೆಲ್ಲಿಯೋ ಸುತ್ತಿಸಿ ಒಂದು ಸ್ಲಂ ಏರಿಯಾಕ್ಕೆ ಕರಕೊಂಡು ಹ್ವಾದ್ಲು.ಮೂರು ರೂಮಿನ ಒಂದು ಶೆಡ್ ಅದು. ‘ಕೂಲಿ ನಾಲಿ ಮಾಡೋ ಬಡವರೆಲ್ಲಾ ಇರೂ ಜಾಗ ಇದು’ ಎಂದಳು..ಹೊಟ್ಟೆಯ ಹಸಿವಿಗೆ ಯಾವ ದುಃಖಾನೂ ತಿಳಿಯಂಗಿಲ್ಲೇನೋ. ಅಶೋಕ ಸತ್ತಾಗಿಂದ ಅಂದರೆ ನಾಲ್ಕ ದಿನದಿಂದ ಸರೀತ್ನಾಗಿ ಊಟಾನೇ ಮಾಡಿರ್ಲಿಲ್ಲ. ಆವತ್ತು ನನಗೂ ಮಗಳಿಗೂ ಇಬ್ಬರಿಗೂ ಭಯಂಕರ ಹಸಿವಾಗಿತ್ತು.ಅಲಮೇಲಮ್ಮ ನಮ್ಮ ಮುಂದಿಟ್ಟ ಊಟಾ ಜೀವನದಾಗ ಎಂದೂ ಉಂಡಿಲ್ಲದಷ್ಟು ರುಚಿ ಅನ್ನಿಸಿತ್ತು.ಉಂಡ ಮೇಲೆ ಒಂದು ಥರ ಲಜ್ಜೆನೂ ಕಾಡಿತು. ಯಾವುದೊ ಗುರುತು ಪರಿಚಯ ಇಲ್ಲದಿರೋರ ಮನಿಗೆ ಬಂದು ಇಂಥಾ ಪರಿ ಉಂಡೆವಲ್ಲಾ ಅಂತ..ಮೂರು ದಿನಾ ಅಲಮೇಲಮ್ಮ ನನಗೇನೂ ಕೇಳಲಿಲ್ಲ. ಬೆಳಿಗ್ಗೆ ಹೂವು ಮಾರುವ ಕೆಲಸಕ್ಕೆ  ಹೋಗತಿದ್ಲು. ಹನ್ನೊಂದು ಗಂಟೆಗೆ ಹೊಳ್ಳಿ ಬಂದು ಅಡುಗೆ ಮಾಡಿ ನಮಗಿಬ್ಬರಿಗೂ ಹೊಟ್ಟೆ ತುಂಬುವಷ್ಟು ಊಟಾ ಹಾಕತಿದ್ಲು. ನಾನು ಸಾಧ್ಯವಾದಷ್ಟು ಅವಳ ಋಣ ತೀರಿಸಿಬಿಡಬೇಕು ಅನಕೊಂತ ಅವರ ಮನೆಯಾಗಿನ, ಬಟ್ಟೆ ತೊಳೆಯುವುದು ಬಾಂಡಿ ತೊಳೆಯುವುದು, ಕಸ ಗುಡಿಸಿ, ಪರಶಿ ಒರೆಸೋದು . .. ಹೀಂಗೆ ಎಲ್ಲಾ ಕೆಲಸ ಮಾಡತಿದ್ದೆ.ನಾಲ್ಕನೇ ದಿನಾ ನನ್ನ ಕತೆ ಎಲ್ಲಾ ಅಲಮೇಲಮ್ಮನಿಗೆ ಹೇಳಿಕೊಂಡು ಕಣ್ಣೀರು ಹಾಕಿದೆ.ನನಗೂ ಯಾವುದರ ಕೆಲಸಾ ಹಚ್ಚಿಕೊಡು ಎಂದೆ.

 ‘ನಿನ್ನದೇ ವಯಸ್ಸಿನ್ಯಾಗೆ ನನ್ನ ಗಂಡ ಸಾಲಾಗಿ ಮೂರು ಹೆಣ್ಣ ಮಕ್ಕಳನ್ನೆ ಹಡೆದೆ ಅಂತ  ನನ್ನನ್ನಾ ಹೊಡೆದು ಹೊರಗ ಹಾಕಿದಾ. ನಾ ನನ್ನ ಹೆಣ್ಣತನಾನೇ ಬಂಡವಾಳ ಮಾಡಿಕೊಂಡು ಧಂಧೆ ಮಾಡ್ತಾ ಇಷ್ಟ ವರ್ಷಾ ಜೀವ್ನಾ ಮಾಡಿದೆ..ನೀನೂ ಅದನ್ನೇ ಮಾಡ್ತೀನಿ ಅಂದ್ರೆ ಹೇಳು ಗಿರಾಕಿ ಹೊಂದಿಸಿಕೊಡತೀನಿ’…ಅಂತಾ ತಣ್ಣಗೆ ಹೇಳಿದಳು ಅಲಮೇಲಮ್ಮ.

ನಾನು ಗಾಭರಿಯಿಂದ ‘ನೀವು ಹೂ ಮಾರಿ ಜೀವನ ಮಾಡತಾ ಇಲ್ವ?’ಎಂದು ಕೇಳಿದೆ.

“ಮೊದಲು ಹೂ ಮಾರ್ತಾ ಮಾರ್ತಾ  ಗಿರಾಕಿಗಳನ್ನಾ ಹುಡುಕಿಕೊಂಡಬಿಡತಿದ್ದೆ. ಈಗ ಮುದಕಿ ಆಗೀನಿ.ಪ್ರಾಯ ಮುಗಿದ ಮ್ಯಾಲೆ ನಮ್ಮ ತಾವ ಬರಾವ್ರು ಯಾರು?ಮೊದಲು ದುಡಿದಿದ್ದು ಸಣ್ಣ ಗಂಟ ಕಟ್ಟಿ ಬ್ಯಾಂಕಿನ್ಯಾಗ ಇಟ್ಟಕೊಂಡೇನಿ.ಈಗ ಬರೀ ಹೂವು ಮಾರತೀನಿ’.ಎಂದಳು ಅಲಮೇಲಮ್ಮ.

ನಿನಗ ಧಂದೆ ಏನ ಹೊಸದಲ್ಲ. ಒಂದಷ್ಟ ದಿನ ಇದನ್ನ ಮಾಡಿದಾಕಿನೆ ಇದ್ದಿ.ನೋಡಾಕು ಚೆಂದ ಅದಿ.ಹರಯಾ ಇದ್ದಾಗ ದುಡಿದು ನಾಲ್ಕ ಕಾಸು ಸಂಪಾದನೆ ಮಾಡು.ಮಗಳನ್ನ ಚೊಲೋತ್ನಗಿ ಬೆಳೆಸಿ, ಕಲಿಸಿ,ಮದವಿ ಮಾಡು.ನಂದು ಒಂಟಿ ಜೀವ ನಿನ್ನ ಮಗಳ ಸಮಕ್ಕ, ರಶ್ಮಿನ ಮೊಮ್ಮಗಳ ಸಮಕ್ಕ ನೋಡತೀನಿ.ಸಾಯು ಮುಂದ ನಾಲ್ಕ ಗುಟಕ ನೀರು ನನ್ನ ಬಾಯಿಗೆ ಹಾಕಿದ್ರೆ ಸಾಕು. ಇವೆಲ್ಲಾ ಬ್ಯಾಡ, ಇನ್ನೇನೋ ಮಾಡತೀನಿ ಅಂದ್ರ ನಿನ್ನ ದಾರಿ ನೀ ನೋಡಿಕೋ..ಸಣ್ಣ ವಯಸ್ಸಿನ ಒಂಟಿ ಹೆಂಗಸು. ಎಲ್ಲಿ ದುಡಿಯಾಕ ಹೋದ್ರೂ ದುರುಪಯೋಗ ಮಾಡಿಕೊಳ್ಳೋ ಗಂಡಸರೇ ಸಿಗತಾರ.. ಇಚಾರ ಮಾಡು ನಾ ನಿನಗ ಒತ್ತಾಯ ಮಾಡಂಗಿಲ್ಲ” ಅಂದ್ಲು..

ಅಶೋಕ ನನಗೆ ಕೊಟ್ಟ ಆಸ್ತಿ ರಶ್ಮಿನ ತಬ್ಬಿ ಹಿಡಿದೆ.ಈಕೀಗಾಗಿ ನಾ ಯಾವ ತ್ಯಾಗ ಮಾಡಾಕೂ ಸಿದ್ಧ’ ಎಂದೆ.ತಪ್ಪು ಎನ್ನೋದು ಗೊತ್ತಿದ್ದರೂ ಅಲಮೇಲಮ್ಮ ತೋರಸಿದ್ದ ಗಿರಾಕಿಗಳ ಜೋಡಿ ಮತ್ತದೇ ಕತ್ತಲ ಲೋಕಕ್ಕೆ ಹೋದೆ. ಸಾಕಷ್ಟು ಗಳಿಸಿದೆ.ನಾ ದುಡದಿದ್ದ ರೊಕ್ಕಾ ಕೊಡು ಅಂತ ಅಲಮೇಲಮ್ಮ ಎಂದೂ ಕೇಳಲಿಲ್ಲ. ಬ್ಯಾಂಕ್‍ನಲ್ಲಿ ಖಾತೆ ತೆಗೆಸಿ ರೊಕ್ಕಾ ಇಟ್ಟುಕೊಟ್ಟಳು.ಎರಡು ಸಲಾ ಪೋಲೀಸ್ ರೈಡಿನಲ್ಲಿ ಗಿರಾಕಿಗಳ ಜೊತೆ ಸಿಕ್ಕಿ ಬಿದ್ದಾಗಲೂ ನನ್ನ ಬಿಡಿಸಿಕೊಂಡು ಬಂದಳು…  ನನ್ನ ಮಗಳಿಗೆ ಪ್ರೀತಿ ತೋರ್ಸೊ ಅಜ್ಜಿನೇ ಆಗಿದ್ಲು. ಆಕಿನ್ನಾ  ಶಾಲೆಗೆ  ಸೇರಿಸಿದಳು. ಹತ್ತು ವರಷಾ ನನ್ನ ತಾಯಿ ಹಂಗ ನಮ್ಮ ಜೋಡಿ ಬದಕಿದ್ಲು..

“ನನ್ನ ಈ ಯವಾರ ಯಾವ್ದೂ ನನ್ನ ಮಗಳಿಗೆ ಗೊತ್ತಾಗದ ಹಾಂಗ ನಡಕೊಂಡು ಹೋಗತಿತ್ತು. ಅವ್ವಾ ಯಾರ್ದೋ ಮನೆಯಾಗ  ಅಡುಗೆ ಮಾಡಲಿಕ್ಕೆ ಹೋಗತಾಳ ಅಂತ ಅಲಮೇಲಮ್ಮ ನೆಂಬಿಸಿದ್ಲು. ಮೊದಲು ನಾ ಹೊರಗಡೆ ಹೋದಾಗ ಅಲಮೇಲಮ್ಮನೇ ಮಗಳನ್ನ ನೊಡಿಕೊಳತಿದ್ಲು. ಆಕಿ ಸತ್ತ ಮ್ಯಾಲೆ  ಮಗಳನ್ನ ಧಾರವಾಡದ ಹಾಸ್ಟೆಲ್ಲಿನಲ್ಲಿ ಬಿಟ್ಟು ಓದಿಸಾಕ ಹತ್ತೇನ್ರೀ..ಈಗ ಕಾಲೇಜಿಗೆ ರಜಾ ಬಂದತ್ರೀ.. ಆದ್ರೂ ಆಕಿನ್ನ ಅಲ್ಲೇ ಇಟ್ಟು ಕಂಪ್ಯೂಟರ್ ಕ್ಲಾಸಿಗೆ  ಸೇರಿಸ್ರೀ ಅಂತ ಅಲ್ಲಿಯ ವಾರ್ಡನ್ ಮೇಡಂಗೆ ಹೇಳೀನ್ರೀ.ನನ್ನ ಜೋಡಿ ಆಕಿ ಯಾವುದೇ ಗಿರಾಕಿ ಕಣ್ಣಿಗೆ ಬೀಳಬಾರ್ದು.ಇಂಥವಳ ಮಗಳಂದ್ರೆ ಇವಳೂ ಅವಳೇ ಅಂದ್ಕೊಂಡ ಬಿಡ್ತಾರ್ರೀ. ಅದಕ್ಕೇ ಹುಬ್ಬಳ್ಳಿಯಾಗ ನಾ ಆಕೀನ್ನ ಎಲ್ಲಿಯೂ ಕರಕೊಂಡು ಹೋಗಂಗಿಲ್ಲ. ನೀವೂ ನನ್ನ ಬಗ್ಗೆ ಬರೆದ್ರೂ ನನ್ನ ಹೆಸರ ಮಾತ್ರ ಹಾಕಬ್ಯಾಡ್ರೀ ಮೇಡಂ” ಎನ್ನುತ್ತ ಕೈ ಮುಗಿದಳು..

ನೋಡ್ರೀ ಈಕಿ ನನ್ನ ಮಗಳು..ಜರ್ನಲಿಸಂ ಓದತಾ ಇದ್ದಾಳ’ ಎಂದು ಮೊಬೈಲಿನಲ್ಲಿ ಸೇವ್ ಮಾಡಿದ ಫೋಟೋ ತೋರಿಸಿದಳು.ಗೋಧಿವರ್ಣದ, ನೀಳಕಾಯದ, ಬಟ್ಟಲು ಕಣ್ಣಿನ ಚೆಲುವೆ ರಶ್ಮಿಯನ್ನು ನೋಡಿ ಮನಸ್ಸು ತುಂಬಿ ಬಂತು.‘ಇವಳಿಗೊಂದು ಕೆಲಸಾ ಸಿಕ್ಕು ಮಾಡಿ ಒಳ್ಳೇ ಕಡೆ ಸೇರಿಸಿದ್ರ ನನ್ನ ಜಬಾದಾರಿ ಮುಗಿತತ್ರಿ. ಹೊಟ್ಟೆಪಾಡಿಗಾಗಿ, ಮಗಳ ಸಲುವಾಗಿ ಜೀವಾ ಇತ್ತೆ ಇಟ್ಟು ಇಷ್ಟ ವರಷಾ ದುಡಿದೇನ್ರೀ. ಈಗ ಎರಡ ವರಸಾ ಆತು ಅದರಿಂದ ಹೊರಗ ಬಂದೆನ್ರೀ’ ಎಂದು ತುಂಬಿ ಬಂದ ಕಣ್ಣೀರನ್ನು ಒರೆಸಿಕೊಂಡಳು.

‘ಭಾಳ ಚೆಂದ ಅದಾಳ ನಿನ್ನ ಮಗಳು. ಈಗ ಸಾಯೋ ಮಾತ್ಯಾಕೆ..ಮಗಳ ಬಾಣೆತನಾ ಯಾರ ಮಾಡಬೇಕು?’ಎಂದು ನಾನು ನಕ್ಕೆ.ಅವಳೂ ಜೋರಾಗಿ ನಕ್ಕಳು..

‘ನೀವು  ಸಂಸ್ಥೆಯ ಆಸ್ತಿ ಅಂತಾ ನೀಲಮ್ಮ ಭಾಳ ಹೊಗಳಿದ್ರು. ಅಂಥಾದ್ದೇನು ಏನುಕೆಲ್ಸಾ ಮಾಡೀರಿ ರೂಪಾ?’ಎಂದು ಕೇಳಿದೆ.

‘ಅಂಥಾದ್ದೇನು ಮಾಡಿಲ್ಲರೀ.ಅವ್ರು ಹಾಂಗ ಸ್ವಲ್ಪ ಕೆಲಸ ಮಾಡಿದ್ರೂ ಭಾಳ ಹೊಗಳತಾರ.ಅವ್ರು ಭಾಳ ಒಳ್ಳೇವ್ರು’

ಅಲ್ಲೇ ಕುಳಿತು ಕಾಗದ ಪತ್ರ ಪರಿಶೀಲಿಸುತ್ತಿದ್ದ ನೀಲಮ್ಮ ಲೆಡ್ಜರ್ ಮಡಚಿಟ್ಟರು..“ನಾಲ್ಕ ವರಷದ ಹಿಂದೆ ‘ಚೈತನ್ಯಾ’ ಸಂಸ್ಥೆ ಶುರು ಮಾಡಿದಗ ಸರಕಾರದ ಅನುದಾನ ತಗೋಳ್ಳಾಕ ನೂರು ಜನಾ ಏಡ್ಸ ಪೀಡಿತರನ್ನು ಐಡೆಂಟಿಫೈ ಮಾಡಬೇಕಿತ್ತು..ನಾವು ಹುಬ್ಬಳ್ಳಿಯ ಗಲ್ಲಿ ಗಲ್ಲಿ ತಿರುಗಿದ್ರ. ಒಂದು ತಿಂಗಳಿನಲ್ಲಿ ನಾಲ್ಕ ಮಂದಿ ಅಷ್ಟ ಸಿಕ್ಕರು..ಆಗ ಈ ರೂಪಾನ ಪರಿಚಯಾ ಆತು.ಇವಳಿಗೆ ಏಡ್ಸ ಇಲ್ಲ. ಆದರೆ ಏಡ್ಸಪೀಡಿತರು ಯಾರು ಅನ್ನೋದು ಗೊತ್ತಿತ್ತು.ನನಗೆ ಬದುಕಲಿಕ್ಕೆ ಸಾಕಗುವಷ್ಟು ಕನಿಷ್ಠ ಸಂಬಳಾ ಕೊಡ್ರಿ.  ನಾ ಮಾಡೋ ಕೆಲ್ಸಾ ಬಿಟ್ಟು ಏಡ್ಸ ಪೀಡಿತರನ್ನ ಹುಡುಕಿ ಕರಕೊಂಡುಬರತೀನಿ ಅಂದಳು..ನಾವು ಒಪ್ಪಿದವಿ.ಈಗ ಕಾರ್ಯಕ್ರಮಕ್ಕೆ ಬಂದವರಲ್ಲಿ ಭಾಳ ಮಂದಿನ ಈಕಿನೇ ಕರಕೊಂಡು ಬಂದಾಳ್ರೀ.ಎಚ್.ಐ. ವಿ.ರೋಗ ಬಂದ್ರೂ ಮುಚ್ಚಿಟ್ಟುಕೊಂಡ ಕುಂತ ಬಿಡ್ತಾರ್ರೀ.. ಅವ್ರೀಗೆ ಒಂಥರಾ ಪಾಪ ಪ್ರಜ್ಞೆ ಕಾಡತದ.ರೋಗಿಗಳುಯಾರಾರ ಸಾಯಾಕ ಬಿದ್ದರೆ, ಆಸ್ಪತ್ರೆಗೆ ಸೇರಿಸಿ ಈಕಿನೇದಾದಿ ಹಾಂಗ ಸೇವೆ ಮಾಡ್ತಾಳ..ಭಾಳ ಅಪರೂಪದ ಸೇವಾ ಮನೋಭಾವದ ಹೆಂಗಸು ಈಕಿ…ಎಂದು ಮತ್ತೆ ಹೊಗಳಿದರು.ಜೀವನದಲ್ಲಿ ತಾನು ನೊಂದರೂ ಬೇರೆಯವರ ನೋವಿಗೆ ಮಿಡಿವ ರೂಪಾಳ ಬಗ್ಗೆ ಅಭಿಮಾನ ಮೂಡಿ ಕೈ ಮುಗಿದೆ. ‘ಹೋಗತೀನ್ರೀ ಹೊತ್ತಾತು’ ಎಂದು ರೂಪಾ ಗಡಿಬಿಡಿಯಿಂದ ಹೊರ ನಡೆದಳು.

                     *********

‘ನಮ್ಮಮ್ಮಾ ನನ್ನನ್ನ ಭಾಳ ಪ್ರೀತಿ ಮಾಡ್ತಾರ್ರೀ.ಬೇಕಾದದ್ದನ್ನೆಲ್ಲ ಕೊಡಿಸ್ತಾರ ಆದ್ರ ರಜಾ ಇದ್ದಾಗಲೂ ನನ್ನನ್ನ ತನ್ನ ಹಂತೇಕ ಇಟ್ಟಕೊಳ್ಳಂಗಿಲ್ಲರೀ.ಆಕಿ ‘ಚೈತನ್ಯಾ’ ಅಂತ ಒಂದ ಸಂಸ್ಥೆಯಾಗ ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡತಾಳ್ರೀ.ನೀವು ಅವಳನ್ನ ಭೆಟ್ಟಿ ಮಾಡಿ ಯಾಕ ಹಂಗ ಮಾಡ್ತಾರ ತಿಳಕೊಂಡ ಬರ್ರೀ ಮೇಡಂ’ ಎಂದ ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದ ನನ್ನ ವಿದ್ಯಾರ್ಥಿನಿ ರಶ್ಮಿಯ ಸಲುವಾಗಿಯೆ ನಾನಿಲ್ಲಿಗೆ ಬಂದಿದ್ದುಎಂಬ ಸತ್ಯವನ್ನು ರೂಪಾಳಿಂದ ಮರೆಮಾಚಿದೆ.ಅವಳ ಅಮ್ಮನ ಕಷ್ಟ ಏನು ಎಂಬುದೇನೋ ಅರಿವಾಗಿತ್ತು.ಅರಿತ ಸತ್ಯವನ್ನುರಶ್ಮಿಯಿಂದಲೂ ಮರೆಮಾಚಲೇಬೇಕು.ರಜಾ ದಿನಗಳು ಬಂದಾಗ ಅವಳನ್ನು ನಮ್ಮ ಮನೆಯಲ್ಲಿಟ್ಟುಕೊಂಡು … ಮಗಳಂತೆ  ಆದರಿಸಬೇಕು ಎಂದು ನಿರ್ಧರಿಸಿ ಅಲ್ಲಿಂದ ಹೊರಬಂದೆ….

****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ಕಣ್ಣಾ ಮುಚ್ಚೆ ಕಾಡೇಗೂಡೆ”

  1. ಬಹಳ ಛಂದದ ಕಥೆ. ಕರುಳು ಮಿಡಿಯಿತು… ಹೀಗೆಯೇ ಮೋಸ ಹೋದವರು, ಅನಿವಾರ್ಯ ವಾಗಿ ಈ ಧಂದೆಗೆ ಇಳಿದು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡವರು ಅದೆಷ್ಟು ಹೆಣ್ಣುಗಳೋ… ಹೆಣ್ಣೆಂದರೆ ಮಾರಾಟದ ಸರಕಾಗಿಯೇ ಯಾಕೆ ಕಾಣುತ್ತಾರೋ ಅರಿಯದು…

    1. ನಿಜಕ್ಕೂ ಇದೇ ವ್ಯಥೆಯ ಸಂಗತಿ . ಧನ್ಯವಾದಗಳು ಮೇಡಂ

  2. ಶ್ವೇತಾ ನರಗುಂದ

    ಚಂದದ ಕಥೆ. ಸುಂದರ ನಿರೂಪಣೆ, ಬಿಗಿಯಾದ ಹೆಣಿಗೆ. ಹಣ್ಣಿಗೆ ಅವಳ ದೇಹವೇ ಶತ್ರು ಆಗುವುದು ವಿಪರ್ಯಾಸ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter