ಬಹು ಸಂಸ್ಕೃತಿಯ ಆಡುಂಬೊಲಕ್ಕೆ- ‘ಓದಿನ ದಾರಿ’

(ಕೃತಿ ;  ಓದಿನ‌ ದಾರಿ ,    ಲೇಖಕ: ಡಾ. ಬಿ.ಜನಾರ್ದನ ಭಟ್)

ಎ.ಕೆ.ರಾಮಾನುಜನ್ ಅವರು ಮಹಾಪರಂಪರೆ‌ ಮತ್ತು ಕಿರುಪರಂಪರೆಗಳನ್ನು ಸಂಸ್ಕೃತ ಮತ್ತು ಉಳಿದ ಭಾರತೀಯ ‌ಭಾಷಾ‌ಸಾಹಿತ್ಯಕ್ಕೆ ಅನ್ವಹಿಸಿ ಬಳಸಿದರು. ಅದಕ್ಕೆ ಸಾಕ್ಷಿ ಎಂಬಂತೆ ‌‌ಈ ಕೃತಿ ಇದೆ.   ಅವುಗಳ‌ ನಡುವೆ‌ ನಡೆದ ಸಂವಾದವೆನ್ನುವಂತೆ ಇಲ್ಲಿನ‌ ಬಹುತೇಕ ‌ಬರಹಗಳು‌ ಮೈಪಡೆದಿವೆ. ಅದನ್ನು ಅಭ್ಯಾಸದ‌ ಅನುಕೂಲಕ್ಕೆ ಸಂಸ್ಕೃತ- ಕನ್ನಡ, ಕನ್ನಡ- ತುಳು, ಕನ್ನಡ- ಮಲಯಾಳಂ, ಕನ್ನಡ- ಇಂಗ್ಲಿಷ್ ‌, ಕನ್ನಡ- ಮರಾಠಿ, ಇತ್ಯಾದಿ ವರ್ಗೀಕರಿಸಬಹುದು.

ಸಂಸ್ಕೃತ- ಕನ್ನಡ : ೧: (ಅ)ಇದರಲ್ಲಿ ಭಗವದ್ಗೀತೆ ಕನ್ನಡದಲ್ಲಿ  ಎಚ್.ಎಸ್.ವಿ ಅವರಿಂದ ಆಪ್ತಗೀತೆಯಾಗಿ ಮೂಡಿಬಂದಿದೆ. ಇದನ್ನು ಬನ್ನಂಜೆ, ಇಸ್ಕಾನ್ ಅವರ ಕನ್ನಡ ಅನುವಾದಗಳನ್ನು  ಮೂಲದೊಂದಿಗೆ‌ ನೀಡಲಾಗಿದೆ. ಯಾವುದೇ ವ್ಯಾಖ್ಯಾನಗಳಿಲ್ಲದೆ. ಇದರಿಂದ ಕನ್ನಡ ಭಗವದ್ಗೀತೆಯನ್ನು ‌ಒಳಗೊಂಡ ಬಗೆಯನ್ನು ಅರಿಯಲು‌ ಸಹಾಯಕವಾಗಿದೆ ‌.                            

 (ಬ).  ಡಾ.ಎಚ್.ಆರ್.ವಿಶ್ವಾಸ ಅವರು ಮೂಲ ಸಂಸ್ಕೃತ ದಲ್ಲಿ ಬರೆದ ಕತೆಗಳನ್ನು ‌ಅವರೆ ಕನ್ನಡಕ್ಕೆ ತಂದಿರುವ ಸಂಕಲನವನ್ನು,  ಇಲ್ಲಿ ಸಮೀಕ್ಷೆಗೆ ಒಳಪಡಿಸಿ ಅದರ ಸಾಧನೆ ಮತ್ತು ಮಿತಿಯನ್ನು ಗುರುತಿಸಿದ್ದಾರೆ

೨.  ಕನ್ನಡ- ತುಳು: ತುಳುವಿನಲ್ಲಿ ಪ್ರಸಿದ್ಧವಾದ ಸಿರಿ ಮಹಾಕಾವ್ಯದ‌ ವಿವಿಧ ಪಠ್ಯಗಳನ್ನು ಆಧಾರಿತ ಸಂಶೋಧನೆ ನಡೆಸಿ ಪ್ರಕಟಿಸಿದ ಎರಡು ಕೃತಿಗಳ ವಿವೇಚನೆ ಇಲ್ಲಿದೆ. ಇದರಿಂದ ಕನ್ನಡ ಜನಪದ ಮಹಾಕಾವ್ಯಗಳ ಜತೆಗಿಟ್ಟು  ಅವುಗಳ ಅಭ್ಯಾಸ ಮಾಡುವ ಸಾಧ್ಯತೆ ಒಂದು ತಾನಾಗಿಯೇ ತೆರೆದುಕೊಳ್ಳುತ್ತದೆ. ಇದಲ್ಲದೆ ತುಳು ರಂಗಭೂಮಿ ಕುರಿತು ಮುದ್ದು ಮೂಡು ಬೆಳ್ಳೆಯವರು ಬರೆದ ಅಧಿಕೃತ ಗ್ರಂಥದ ಮಹತ್ವವನ್ನು ‌ಇಲ್ಲಿ ಮನಗಾಣಿಸಲಾಗಿದೆ. ಕನ್ನಡ ರಂಗಭೂಮಿಯ ವಿಕಾಸದೊಂದಿಗೆ ಅದನ್ನು ತೌಲನಿಕ ಅಧ್ಯಯನ ಮಾಡಲು ಸಾಧ್ಯ.

೩: ಕನ್ನಡ- ಮಲಯಾಳಂ: ಮಲಯಾಳಂ‌‌ನಿಂದ ಅನುವಾದಿತ ‌ಕತೆಗಳ ಎರಡು ಸಂಕಲನಗಳ‌ ಸಮೀಕ್ಷೆಯನ್ನು ಇದು ಒಳಗೊಂಡಿದೆ. ಶ್ರೀದೇವಿ ಮಲಯಾಳಂ ಮಹಿಳಾ ಕತೆಗಳನ್ನು ಸಂಪಾದಿಸಿದರು. ಅದನ್ನು     ಕನ್ನಡಕ್ಕೆ ತರಲಾಗಿದೆ. ಇದರಿಂದ ಕನ್ನಡದ ಮಹಿಳಾ ‌ಕತೆಗಳ‌ ಜತೆಗೆ ತೌಲನಿಕ ಅಧ್ಯಯನ ಸಾಧ್ಯ. ‌ಅಶೋಕ ಕುಮಾರ್ ಅವರ ವಿಶಿಷ್ಠವಾದ ಕತೆಗಳನ್ನು ಕೂಡ ‌ಕನ್ನಡಕ್ಕೆ ತರಲಾಗಿದೆ. ಅದರಲ್ಲಿ ಒಂದು ‌ಕತೆಯ ಹೆಸರು ಘಟಶ್ರಾದ್ದ . ಇದು ಅನಂತಮೂರ್ತಿಯವರ ಅದೆ ಹೆಸರಿನ ಕತೆಯನ್ನು ‌ನೆನಪಿಗೆ ತರುತ್ತದೆ.

೪: ಕನ್ನಡ-ಇಂಗ್ಲಿಷ್:

ಅ). ವರ್ಡ್ಸ್ ವರ್ತ್ ನ ಪ್ರಸಿದ್ಧವಾದ ಸಾಲಿಟರಿ ರೀಪರ್ ಎನ್ನುವ ‌ಕವಿತೆಯ ಎರಡು ಅನುವಾದಗಳ ಕುರಿತು‌ ಬರೆಯಲಾಗಿದೆ. ಅವು: ಮಚ್ಚಿನ ಶಂಕರ್ ನಾರಾಯಣ ರಾವ್ ಅವರು ಮಾಡಿದ ರೂಪಾಂತರ( ತುಳು ನಾಡ ಹುಡುಗಿ):. ಮತ್ತು ಎಚ್.ಆರ್.ರಮೇಶ್ ಅವರು ಮಾಡಿದ ಯಥಾವತ್ತಾದ ಅನುವಾದ. ಮೂಲ ಕವಿತೆಯನ್ನು ಇಡಿಯಾಗಿ ಕೊಟ್ಟಿರುವುದಲ್ಲದೆ, ಅವರಿಬ್ಬರ ಅನುವಾದದಲ್ಲಿ ರೂಪಾಂತರದ ಕಡೆಗೆ ಲೇಖಕರ ಒಲವರವನ್ನು ಕಾಣಬಹುದು. ಇದಕ್ಕೆ ‌ಕಾರಣವೆಂದರೆ ಮೂಲದಲ್ಲಿ ಇಲ್ಲದ  ಹೊಸ ಆಯಾಮವೊಂದನ್ನು ಅದರಲ್ಲಿ ಕಾಣುವುದು. ಕನ್ನಡದಲ್ಲಿ ಈ ಬಗೆಯ ಅನುವಾದಕ್ಕೆ ಶತಮಾನಕ್ಕೂ ಮಿಕ್ಕ ಇತಿಹಾಸವಿದೆ. ೧೯೧೮ ರಲ್ಲಿ ಹಟ್ಟಿಯಂಗಡಿ ನಾರಾಯಣ ರಾವ್ ಅವರ ‘ ಆಂಗ್ಲ ಕವಿತಾವಳಿ’ ಯ ಪ್ರಕಟಣೆಯಿಂದಲೆ ಇದು ಆರಂಭವಾಯಿತು. ಅವರ ಕುರಿತು ಪ್ರತ್ಯೇಕ ಪುಸ್ತಕವನ್ನು ಇದೇ ಲೇಖಕರು ಬರೆದಿದ್ದಾರೆ.

ಬ. ಜಾರ್ಜ್ ಬರ್ನಾರ್ಡ್ ಷಾ ಪಿಗ್ಮೇಲಿಯನ್  ಮತ್ತು ಅದನ್ನು ಆಧರಿಸಿದ ಲರ್ನರ್ ನ‌ ” ಮೈ ಫೇರ್ ಲೇಡಿ ” ಅವರ ಮೂಲ ನಾಟಕವನ್ನು ಜಯಂತ ಕಾಯ್ಕಿಣಿ ಅವರು ‘ಸೇವಂತಿ ಪ್ರಸಂಗ’ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಅದನ್ನು ಕುರಿತು ಬರೆಯುವಾಗ ಲೇಖಕರ ಸ್ವೋಪಜ್ಞತೆ ಹೇಗೆ ಎದ್ದು ಕಾಣುತ್ತದೆ ಎಂದು ವಿವರಿಸಿದ್ದಾರೆ. ‌

೫: ಕನ್ನಡ – ಮರಾಠಿ.

ಅ) ಡಾ.ಗಣೇಶ್ ಉಪಾಧ್ಯ ಅವರು ತಮ್ಮ ‘ಮಹಾರಾಷ್ಟ್ರದಲ್ಲಿ ಕನ್ನಡ ಸ್ಥಳ ನಾಮಗಳು’ ಕೃತಿಯಲ್ಲಿ ಅಲ್ಲಿ ದೊರೆತ ಶಾಸನಗಳನ್ನು ಆಧರಿಸಿ  ಕನ್ನಡ-  ಮರಾಠಿ ಅನ್ಯಾನ್ಯ ಸಂಬಂಧಗಳ ಅನಾವರಣ ಮಾಡಿರುವುದನ್ನು  ವಿಶೇಷವಾಗಿ ವಿವರಿಸಿದ್ದಾರೆ.

ಬ) ಡಾ.ಜಿ.ಎನ್ .ದೇವಿಯವರು ಗುಜರಾತಿನ ಆದಿವಾಸಿಗಳ ಕುರಿತು ಬರೆದ ‘ವಾನಪ್ರಸ್ತ: ಇದೊಂದು ಆತ್ಮಾನುಭೂತಿ’ ಎನ್ನುವ ಮರಾಠಿ ಕೃತಿಯನ್ನು ಕನ್ನಡಕ್ಕೆ ತರಲಾಗಿದೆ. ಇದರಲ್ಲಿ ‌ಅವರು ಸರ್ಕಾರದ ‌ಜತೆಯಲ್ಲಿ ಆದಿವಾಸಿಗಳ ಪರವಾಗಿ ನಡೆಸಿದ ಹೋರಾಟ ಮತ್ತು ಅವರ ಜೀವನ ಕ್ರಮವನ್ನು ದಾಖಲಿಸಿದ್ದಾರೆ

೬: ಸಂಶೋಧನೆ:

ಅ) ಕನ್ನಡ ಕ್ಕೆ ಮಿಷನರಿಗಳ  ಕೊಡುಗೆ:  ಕಿಟೆಲ್ ಅವರ ಕುರಿತು ಡಾ.ಶ್ರೀನಿವಾಸ ಹಾವನೂರರ ಸಂಶೋಧನೆಯನ್ನು ಮುಂದುವರಿಸಿದ ಎ.ವಿ.ನಾವಡ ಅವರ ಸಂಪಾದಿತ ಕೃತಿಗಳ ಮಹತ್ವವನ್ನು‌ ವಿವರಿಸಿದ್ದಾರೆ. ಅವರು ವಿದ್ವಾಂಸರ ಪಟ್ಟಿಯಲ್ಲಿ ಐಮಾ ಮುತ್ತಣ ಅವರ ಹೆಸರನ್ನು ಸೇರಿಸಿರುವುದು ಅಷ್ಟು ಸರಿಯಲ್ಲ. ಅವರು ತಮ್ಮ ಪುಸ್ತಕದಲ್ಲಿ  ಮಾಡಿದ ಎಡವಟ್ಟುಗಳನ್ನು ಕುರಿತು ಡಾ.ಶ್ರೀನಿವಾಸ ಹಾವನೂರರು ಲೇಖನ ಬರೆದು ಎಚ್ಚರಿಸಿದ್ದಾರೆ.

ಬ) ಇಹದ ಪರಿಮಳದ ಹಾದಿ: ನರಹಳ್ಳಿ ಬಾಲಸುಬ್ರಮಣ್ಯ ಅವರ ಸಂಶೋಧನಾ ಕೃತಿ. ಇದರಲ್ಲಿ ಕೆ.ಎಸ್.ನ ಅವರ ಕಾವ್ಯ ವಿಕಾಸದ ಮಜಲುಗಳನ್ನು ಗಂಭೀರ ಅನ್ವೇಷಣೆಗೆ  ಒಳಪಡಿಸಿದ ಬಗೆಯ ಮೇಲೆ  ಬೆಳಕು ಚೆಲ್ಲಿದ್ದಾರೆ.

೭: ಕಥಾಲೋಕ: ಇದರಲ್ಲಿ ಬಿಡಿ ಕತೆಗಳು ಮತ್ತು ಕಥಾಸಂಕಲನಗಳ ಪರಿಚಯ ಇದೆ. ಬಿಡಿ ಕತೆಗಳಲ್ಲಿ  

ಅ) ಸೇಡಿಯಾಪು ಕೃಷ್ಣಭಟ್ಟರ ‘ ನಾಗರ ಬೆತ್ತ” ಐತಿಹ್ಯದ ಆಧಾರದ ಮೇಲೆ ಬರೆಯಲ್ಪಟ್ಟ ಕತೆ. ಇದನ್ನು ವಸಹಾತು ಶಾಹಿ ವಿರುದ್ಧ ಬರೆದ ಕತೆಯೆಂದು ವ್ಯಾಖ್ಯಾನವನ್ನು ಮಾಡಲಾಗಿದೆ.                     

ಬ) ಸಾರಾ ಅಬೂಬಕರ್ ಅವರ ‘ ಚಪ್ಪಲಿಗಳು’ ಕತೆಯಲ್ಲಿ ಮದುವೆ ಆದ ಮೇಲೂ ತವರು ಮನೆಯಲ್ಲಿ ಇದ್ದು ಅಮ್ಮನ ಬಾಣಂತನ ಮಾಡಬೇಕಾಗಿ ಬಂದ ಹೆಣ್ಣು ಮನೋರೋಗಿಯಾಗಿ ಬಿಡುವ , ಅವಳ ಸ್ಥಿತಿಗೆ ಕಾರಣ ತಿಳಿದ ಗಂಡ, ಅದರ ಬಿಡುಗಡೆಗೆ ಯತ್ನಿಸಿದ ಬಗೆಯನ್ನು ನಿರೂಪಿಸಲಾಗಿದೆ. ಇದರಲ್ಲಿ ತಲೆಮಾರಿನ ಅಂತರ, ಮೌಲ್ಯ ಪಲ್ಲಟಗಳನ್ನು ಗುರುತಿಸಬಹುದು.

ಕ) ಕಥಾಸಂಕಲನ: ಜಯಶ್ರೀ ಕಾಸರವಳ್ಳಿ ಅವರ ‘ಚಿತ್ರಗುಪ್ತನ ಸನ್ನಿಧಿಯಲ್ಲಿ ‘ ಅವರು ಸಂಕೀರ್ಣತೆಯನ್ನು ತರಲು ಭ್ರಾಮಕತೆಯನ್ನು ಹೇಗೆ ಬಳಸಿದ್ದಾರೆ  ಎಂದು ವಿವರಿಸಲು ಬ್ರಾಮಕತೆಯ ಪರಿಕಲ್ಪನೆಯನ್ನು ವಿವರಿಸಿರುವುದು ಕತೆಗಳನ್ನು ಗ್ರಹಿಸಲು ಸಹಾಯಕವಾಗುತ್ತದೆ . ಅದರಂತೆ  ಅದರ  ಸ್ತ್ರೀವಾದಿ ನೆಲೆಗಳನ್ನು ಗುರುತಿಸಲಾಗಿದೆ. ಇಲ್ಲಿ ಪಾಶ್ಚಾತ್ಯ ಸಾಹಿತ್ಯದ ಪರಿಕಲ್ಪನೆಯ ಗಾಢ ಗ್ರಹಿಕೆ ವ್ಯಕ್ತವಾಗುತ್ತದೆ.

೮: ಕಾದಂಬರಿ ಲೋಕ: ಇಲ್ಲಿ ಹಲವಾರು ಕಾದಂಬರಿ ಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅದರಲ್ಲಿ ಜೋಗಿ ಯವರ ‘ಎಲ್’ ಕಾದಂಬರಿಯ ಶೀರ್ಷಿಕೆಯ ಸಾರ್ಥಕತೆಯನ್ನು ಯಶಸ್ವಿಯಾಗಿ ನಿರೂಪಿಸಲಾಗಿದೆ. ಅದರಂತೆ ಕನ್ನಡ ಕಾದಂಬರಿಯ ಗಡಿಯನ್ನು ವಿಸ್ತರಿಸುವ ಇನ್ನೆರಡು ಕಾದಂಬರಿಗಳು: 

ಗುರುಪ್ರಸಾದ ಕಾಗಿನೆಲೆಯವರ ಹಿಜಾಬ್- ಮೊದಲ ಬಾರಿಗೆ ಅಮೆರಿಕಾದಲ್ಲಿ  ಸೊಮಾಲಿಯಾದ ಹೆಣ್ಣುಗಳು ಎದುರಿಸುವ ಸವಾಲು, ಸಂಕಷ್ಟಗಳ ಅನುಭೂತಿಯ ಸಂಕೀರ್ಣ ಚಿತ್ರಣವನ್ನು ಒಳಗೊಂಡಿದೆ. 

ನಾ.ಡಿಸೋಜ ಅವರ ‘ದ್ವೀಪ’ ಕಾದಂಬರಿ ಮುಳುಗಡೆ ಉಂಟುಮಾಡುವ ಅಲ್ಲೋಲಕಲ್ಲೋಲಗಳನ್ನು, ಆ  ಜನರ ಮೇಲೆ ಅದು ಬೀರುವ ಪರಿಣಾಮವನ್ನು ಅನನ್ಯವಾಗಿ ಚಿತ್ರಿಸುತ್ತದೆ.( ಮುಳುಗಡೆ ಚತುಷ್ಕ).

೯.ಅಂಕಣ ಲೋಕ: ಜಯಂತ ಕಾಯ್ಕಿಣಿಯವರ ಅಂಕಣಗಳ ವೈಶಿಷ್ಟ್ಯಗಳನ್ನು ಅವುಗಳ ಹಿಂದಿನ ‌ಅವರ‌ ಸೂಕ್ಷ್ಮ ಗ್ರಹಿಕೆಯನ್ನು ವಿವರಿಸುತ್ತಾರೆ. ಡಾ.ಚಂದ್ರ ಶೇಖರ ದಾಮ್ಲೆ ಅವರ ವೈಚಾರಿಕ ಅಂಕಣ ಬರಹಗಳ – ಯಾಕೆ ಹೀಗೆ – ಕುರಿತು ಬರೆದ ”  ಅವರ ಬರಹಗಳ  ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ ಗಮನಿಸದೆ ಇರಲು ಸಾಧ್ಯವಿಲ್ಲ ” ಎಂಬ ಮಾತುಗಳು ಈ ಕೃತಿಗೂ ಅನ್ವಯಿಸುತ್ತದೆ.

‌ಲೇಖಕರ ವಿಪುಲವಾದ ಓದು ಮತ್ತು ಸೂಕ್ಷ್ಮ ನಿರೀಕ್ಷಣೆಗೆ ಮೇಲಿನ ‌ಅವರ ಬರಹಗಳು ( ಪುಸ್ತಕ ಸಮೀಕ್ಷೆಯ ಮಿತಿಯಲ್ಲೂ) ನಿದರ್ಶನವಾಗಿದೆ. ಇಲ್ಲಿಯವರೆಗೆ ಅವರ ಕೆಲವು ಕತೆಗಳನ್ನು ಓದಿದ ನನಗೆ , ಅವರ ಪುಸ್ತಕಗಳನ್ನು ಓದುವ ‌ಭಾಗ್ಯ ಒದಗಿಸಿದ ಅವರಿಗೆ ಕೃತಜ್ಞತೆ. ಇಂಗ್ಲೀಷ್ ಪ್ರಾಧ್ಯಾಪಕರಿಂದಲೆ ಪ್ರಾರಂಭವಾದ ಕನ್ನಡ ವಿಮರ್ಶಾ ಪರಂಪರೆಯ ವಾರಸುದಾರರಾಗಿ( ಅದರಲ್ಲೂ ಅವರ ಗುರುಗಳಾದ ಅನಂತಮೂರ್ತಿಯವರ )  ಅದನ್ನು ಸಮರ್ಥವಾಗಿ ಮುಂದುವರಿಸುತ್ತಿರುವ ಶ್ರೇಯಸ್ಸು ಜನಾರ್ದನ ಭಟ್ಟರಿಗೆ ಸಲ್ಲುತ್ತದೆ. ಅಭಿನಂದನೆ.

******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಬಹು ಸಂಸ್ಕೃತಿಯ ಆಡುಂಬೊಲಕ್ಕೆ- ‘ಓದಿನ ದಾರಿ’”

  1. ಅನಿತಾ ಪಿ ತಾಕೊಡೆ

    ಚಂದದ ವಿಮರ್ಶೆ. ಡಾ. ರಘುನಾಥ್ ಸರ್ ಹಾಗೂ ಡಾ. ಜನಾರ್ದನ ಭಟ್ ಅವರಿಗೆ ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter