ಗುಂಡಣ್ಣ ಶಿವಮೊಗ್ಗದಿಂದ ಬಸ್ ಸ್ಟೇಂಡಿಗೆ ಬಂದಾಗ ಹತ್ತು ಗಂಟೆಯಾಗಿತ್ತು. ಭಾನುವಾರವಾದ್ದರಿಂದ ಬಸ್ಸುಗಳೆಲ್ಲ ಭರ್ತಿಯಾಗಿದ್ದುವು. ಗುಂಡಣ್ಣ ಸೀಟು ಕಾದಿರಿಸಿರಲಿಲ್ಲ. ಹಾಗೆಂದು ಅವರು ಆಗಾಗ ಬೆಂಗಳೂರಿಗೆ ಓಡಾಡುವವರೇ. ಅನುಭವ ಕಡಿಮೆ ಇದ್ದವರೇನಲ್ಲ. ಅವರಿಗೆ ಅಂತಹ ಅಭ್ಯಾಸವೂ ಇರಲಿಲ್ಲ. ಹಿಂದಿನ ಸಲಗಳಲ್ಲಿ ಹಾಗೆ ಬಂದಿದ್ದಾಗ ಸಾಕಷ್ಟು ಸೀಟುಗಳು ಖಾಲಿಯಿದ್ದುವು. ಆದ್ದರಿಂದ ಅವರಿಗೊಂದು ಸದರ. ಆದರೆ ಈ ಬಾರಿ ಅದು ಅವರಿಗೆ ಕೈಕೊಟ್ಟಿತ್ತು. ಕೊನೆಗೊಂದು ಬಸ್ಸಿನಲ್ಲಿ ಏಕಮಾತ್ರ ಸೀಟಿತ್ತು. ಕಂಡಕ್ಟರ್ ಹೆಂಗಸರ ಸೀಟು; ಬರುವುದಾದರೆ ಹತ್ತಿ ಎಂದರು. ತನ್ನ ಬೆನ್ನಿನ ಚೀಲವನ್ನು ಕೈಗೆತ್ತಿಕೊಂಡು ‘ಅದಾದರೆ ಅದು’ ಇಲ್ಲಿ ಚಳಿಗೆ ರಾತ್ತಿ ಕಳೆಯುವುದು ತಪ್ಪುತ್ತದಲ್ಲ ಎಂದು ಹತ್ತಿಯೇ ಬಿಟ್ಟರು. ಡ್ರೈವರ್ ಸೀಟಿನ ಹಿಂದುಗಡೆಯ ಎರಡನೇ ಸೀಟು ಅದಾಗಿತ್ತು. . ಕಾಲು ಚಾಚಿ ಕುಳಿತುಕೊಳ್ಳುವಂತಿತ್ತು. ಪಕ್ಕದ ಸೀಟಿನಲ್ಲಿ ಆಗಲೇ ಸ್ಪಲ್ಪ ದಡೂತಿ ಮಧ್ಯವಯಸ್ಸಿನ ಹೆಂಗಸು ಬಂದು ತನ್ನ ಸಾಮಾನನ್ನೆಲ್ಲಾ ಚೋಡಿಸಿ ಆರಾಮದಲ್ಲಿ ಕುಳಿತು ಯಾರಿಗೋ ಫೋನ್ ಮಾಡುತ್ತಿದ್ದರು.
ಕಂಡೆಕ್ಟರು ಬಂದು ಸೀಟು ತೋರಿಸಿ ಹೋದ. ಆದರೂ ತನ್ನ ಸಾಮಾನಿರುವ ಬ್ಯಾಗಿನಿಂದ ನೀರಿನ ಬಾಟಲಿ ಹೊರಗಿಟ್ಟು ಶಿಷ್ಟಾಚಾರವೆಂಬಂತೆ ಒಂದು ಕ್ಷಣ ಸೀಟಿನ ಹತ್ತಿರ ನಿಂತರು. ಕುಳಿತಿದ್ದ ಹೆಂಗಸು ಫೋನ್ ಮುಗಿಸಿ, ಸಂಶಯಿಸುತ್ತಾ ನಿಂತ ಗಂಡಸನ್ನು ನೋಡಿ, ‘ಕುಳಿತುಕೊಳ್ಳಿ ಇವರೆ’ ಎಂದು ಗುಂಡಣ್ಣನ ಶಿಷ್ಟಾಚಾರವನ್ನು ಗೌರವಿಸಿದರು. ಗುಂಡಣ್ಣ ಸ್ವಲ್ಪ ಅಳುಕಿನಿಂದಲೇ ಸೀಟಿನ ಮೇಲೆ ಕುಳಿತರು.
ಗುಂಡಣ್ಣ ಸೆಣಕಲು ಸೆಣಕಲಾಗಿದ್ದರು. ತೊಟ್ಟಿದ್ದ ಅರೆತೋಳಿನ ಶರ್ಟು ದೊಗಲೆಯಾಗಿತ್ತು. ಕಪ್ಪು ಪ್ಯಾಂಟು ಕೂಡ ಹಾಗೆಯೇ ಇತ್ತು. ಪ್ರಯಾಣಕ್ಕೆ ಅನುಕೂಲವಾಗಿರುತ್ತದೆ ಎಂದು ಒಂದು ಶಾಲು ಹೆಗಲಿನಲ್ಲಿತ್ತು; ಹೊದಿಯಲು ಅನುಕೂಲವಾಗುವಂತೆ.
ಸ್ವಲ್ಪ ಮುಜುಗರದಿಂದ ಪಕ್ಕದ ಹೆಂಗಸನ್ನು ಗಮನಿಸಿದರು. ಸಂಪ್ರದಾಯಸ್ಥ ರೇಷ್ಮೆ ಸೀರೆ. ಅವರ ಸ್ವಲ್ಪ ಗುಂಡಗಿನ ದೇಹಕ್ಕೆ ಒಪ್ಪತ್ತಿತ್ತು. ನಲುವತ್ತಿರಬಹುದೆಂದು ಅಂದಾಜಿಸಿದರು. ಶ್ರೀಮಂತ ಕಳೆಯಿತ್ತು ಮುಖದಲ್ಲಿ. ನಡೆಯಲ್ಲಿಯೂ ಗಾಂಭೀರ್ಯತೆ ಇತ್ತು. ಸ್ವಲ್ಪ ಹೊತ್ತು ಕುಳಿತಾಗ ನಿರಾಳತೆ ಮೂಡಿತು. ಪ್ರಯಾಣಿಕರೆಲ್ಲ ಬಂದು ಆಗಲೇ ಸೆಟ್ಟಲ್ ಆಗಿದ್ದರು; ವಿಧಿವಿಧಾನಗಳೆಲ್ಲ ಮುಗಿಸಿ ಬಸ್ಸು ನಿಧಾನವಾಗಿ ಹೊರಟಿತು.
ಇಷ್ಟು ಬೇಗ ಮಲಗಿ ಅಭ್ಯಾಸವಿಲ್ಲದ ಗುಂಡಣ್ಣ ಮೊಬೈಲ್ ತೆಗೆದು ಇಯರ್ ಪೋನನ್ನು ಕಿವಿಗೆ ಸಿಕ್ಕಿಸಿ ಯಾವುದೋ ಭಾವಗೀತೆಗಳನ್ನು ಕೇಳ ತೋಡಗಿದರು, ಅದರ ಲಹರಿಯಲ್ಲಿ ಒಂದಷ್ಟು ಹೊತ್ತು ಕಳೆಯಿತು. ಭದ್ರಾವತಿ ಬಂದಿರಬೇಕು. ಒಂದಷ್ಟು ಜನರು ಹತ್ತಿಕೊಂಡರು.
ಹೊರಗಿನಿಂದ ಶಿಶಿರದ ತಂಪು ಗಾಳಿ ಬೀಸುತ್ತಿತ್ತು. ಪಕ್ಕದ ಹೆಂಗಸು ಬೀಸುವ ಗಾಳಿಯನ್ನು ತಪ್ಪಿಸಲು ಗಾಜನ್ನು ಅಳವಡಿಸಲು ಪ್ರಯತ್ನಿಸಿದರು. ಕಂಡೆಕ್ಟರರಿಗೆ ಹೇಳೋಣವೆಂದು ಅತ್ತಿತ್ತ ನೋಡಿದರು. ಅವರು ಏನೋ ಕೆಲಸದಲ್ಲಿದ್ದರು.
“ಸ್ವಲ್ಪ ಗಾಜು ಗಡುಸಾಗಿದೆ…. ಮುಚ್ಚುತ್ತೀರಾ” ಎಂದು ಪಕ್ಕದಲ್ಲಿ ಕುಳಿತಿದ್ದ ಗುಂಡಣ್ಣನನ್ನು ಕೇಳಿದರು.
“ನೋಡೋಣ” ಎನ್ನುತ್ತಾ ಎದ್ದು ಗಾಜನ್ನು ಹಿಡಿದು ಜಗ್ಗಿದರು. ಕಿರ್ ಎನ್ನುತ್ತಾ ಅದು ಜರಗಿತು.
ಶಿಷ್ಟಾಚಾರಕ್ಕೆ ‘ಕೃತಜ್ಞತಾ’ ಭಾವದಿಂದ ನಕ್ಕರು.
ಪಕ್ಕದ ಹೆಂಗಸು ಶಾಲು ಹೊದ್ದುಕೊಂಡು ಬೆಚ್ಚಗೆ ಕುಳಿತರು. ಯಾವುದೋ ಪೌರಾಣಿಕ ಚಿತ್ರವನ್ನು ಮೊಬೈಲಿನ ಚಿಕ್ಕ ಸ್ಕ್ರೀನಿನಲ್ಲಿ ನೋಡುತ್ತಿದ್ದರು.
“ಯಾವೂರು ನಿಮ್ಮದು” ಹೆಂಗಸು ಶಿಷ್ಟಾಚಾರಕ್ಕೆ ಮಾತು ತೆಗೆದರು. ಮನುಷ್ಯ ಮನುಷ್ಯರಿಗೆ ಪರಿಚಯವಾಗುವುದೂ ಸಂಬಂಧಗಳು ಬೆಳೆಯುವುದೂ ಮಾತಿನಿಂದಲೇ ಅಲ್ಲವೇ.
“ನನ್ನದು ತೀರ್ಥಹಳ್ಳಿ” ಗುಂಡಣ್ಣ ಹೇಳಿದರು.
“ಬೆಂಗಳೂರಿನಲ್ಲಿ ಏನು ಮಾಡುತ್ತೀರಿ” ಹೆಂಗಸಿನ ಶಿಷ್ಟಾಚಾರದ ಪ್ರಶ್ನೆ.
“ನನ್ನದು ಅಡಿಗೆ ಮಾಡುವ ಕೆಲಸ…. ಪರಿಚಯದವರದ್ದು ಕೇಟರಿಂಗ್ ಇದೆ… ಈಗ ಸೀಸನ್ ಅಲ್ಲವೇ…. ಹಾಗೆ ಕರೆದಿದ್ದಾರೆ. ಎಲ್ಲ ವ್ಯವಸ್ಥೆ ಅವರದೇ ಇದೆ… ಕೆಲಸವಿಲ್ಲದಿದ್ದಾಗ ವಾಪಸು ಬಂದುಬಿಡುತ್ತೇನೆ…. ರಾತ್ರಿ ಶಿವಮೊಗ್ಗ ಲೋಕಲ್ ಇದೆಯಲ್ಲ” ಎಂದು ಸ್ವಲ್ಪ ಸವಿವರವಾಗಿ ಉತ್ತರಿಸಿದರು.
” ಹೋ…” ಅವರು ಸ್ವಲ್ಪ ಆಸಕ್ತಿಯಿಂದಲೇ ಹೇಳಿದರು.
“ನಿಮ್ಮ ಪರಿಚಯ… ” ಗುಂಡಣ್ಣ ಸಂಕೋಚದಿಂದಲೇ ಕೇಳಿದೆ.
“ನಾನು ಬೆಂಗಳೂರಿನಲ್ಲಿದ್ದೇನೆ…. ಊರು ಶಿವಮೊಗ್ಗವೇ… ಮಗಳನ್ನು ಇಲ್ಲೇ ಮದುವೆ ಮಾಡಿಕೊಟ್ಟಿದ್ದೇನೆ… ಬಂದು ಹೋಗಿ ಮಾಡುತ್ತೇನೆ. … ಒಂದು ಹುಡುಗಿಯರ ಹೊಸ್ಟೆಲ್ ನಡೆಸುತ್ತೇನೆ… ಬಾಡಿಗೆ ಬರುತ್ತದೆ… ಅವರಿದ್ದಾಗ ಸಣ್ಣ ಅಂಗಡಿ ಕೂಡ ನಡೆಸುತ್ತಿದ್ದರು” ಮಾತು ಆತ್ಮೀಯವಾಗಿತ್ತು.
ಏನು ಹೇಳಬೇಕೆಂದು ತೋಚದೆ “ನೀವು ನಮ್ಮ ಊರಿನವರೇ” ಎಂದರು.
“ಅಂದ ಹಾಗೆ ನಾನು ಒಬ್ಬ ನಂಬಿಗಸ್ಥ ಅಡಿಗೆಯÀವರನ್ನು ಹುಡುಕುತ್ತಾ ಇದ್ದೇನೆ. ಕೆಲವರು ಮೆಡಿಕಲ್ ಹುಡುಗಿಯರಿಗೆ ಅಡಿಗೆ ಮಾಡಿ ಬಡಿಸಬೇಕು. ಒಂದು ತಿಂಗಳಿಂದ ನಾನೇ ಮಾಡುತ್ತಿದ್ದೆ… ಈಗ ಒಂದು ಕೈಕಾಲು ನೋವು… ನಿಮಗೆ ಪೂರ್ಣಾವಧಿ ಕೆಲಸವಿಲ್ಲ ಅಂದಿರಿ… ನೀವಾಗಲೀ, ನಿಮ್ಮ ಪರಿಚಯದವರಾಗಲೀ ಇದ್ದರೆ ತಿಳಿಸಿ. ಒಬ್ಬ ಮಹಾರಾಷ್ಟ್ರದವ ಅಡಿಗೆ ಮಾಡುತ್ತಿದ್ದ. ಎರಡು ತಿಂಗಳಿಂದ ಊರಿಗೆ ಹೋದವ ಮತ್ತೆ ವಾಪಸಾಗÀಲಿಲ್ಲ” ಹೆಂಗಸು ವ್ಯವಹಾರದ ಮಾತಿಗಿಳಿದರು.
“ಸಸ್ಯಹಾರ ಅಡಿಗೆಯಾದರೆ ಸೈ… ನಾನೇ ಮಾಡುವೆ. ನನ್ನದು ಒಂಟಿ ಜೀವ … ಹೇಳುವವರಿಲ್ಲ… ಕೇಳುವವರಿಲ್ಲ.. ಕೇಟಂರಿಗ್‌ನದ್ದು ಇದ್ದರೆ ಉಂಟು…. ಇಲ್ಲದಿದ್ದರೆ ಇಲ್ಲ. ಓಡಾಟವೇ ಹೆಚ್ಚು” ಎಂದು ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದರು.
ಹೆಂಗಸು ಈಗ ವ್ಯಾವಹಾರಿಕ ಆಸಕ್ತಿಯಿಂದ ಪಕ್ಕ ಕುಳಿತ ಗಂಡಸನ್ನು ಗಮನಿಸಿದರು. “ಪರವಾಗಿಲ್ಲ ಸಣಕಲಾದರೂ ಗಟ್ಟಿ ಮುಟ್ಟಾಗಿದ್ದಾರೆ…. ಹಿತಮಿತವಾದ ಬಟ್ಟೆಬರೆ…. ಭರವಸೆ ಮೂಡಿಸುವಂತಿದ್ದಾರೆ… ಅಂತಹ ಪ್ರಾಯವೂ ಆಗಿಲ್ಲ…. ನಮ್ಮ ಕೆಲಸಕ್ಕೆ ಆಗುವ ದೇಹ ಪ್ರಕೃತ್ತಿ ಎಂದು ಮನಸ್ಸಿನಲ್ಲಿ ಲೆಕ್ಕ ಹಾಕಿಕೊಂಡರು ವ್ಯವಹಾರಸ್ಥ ಹೆಂಗಸು.
“ನೀವು ಊರಿನವರೇ ಇದ್ದೀರಿ… ಈ ಕೆಲಸ ನಿಮಗೂ ಇಷ್ಟವಾಗ¨ಹುದು… ನೀವು ಏನನ್ನುತ್ತೀರಿ” ಅವರು ನಿರ್ಧರಿಸಿದಂತೆ ಹೇಳಿದರು.
“ದುಡಿಯುವವರಿಗೆ ಎಲ್ಲಾದರೇನು….. ನನಗೂ ಆಗಬಹುದು ಎನಿಸುತ್ತದೆ…. ನಿಮ್ಮ ವಿಳಾಸ ಕೊಡಿ… ನಾನು ನಾಳೆ ಸಂಜೆ ಬರುತ್ತೇನೆ, ಮಾತನಾಡೋಣ” ಎಂದು ಅವರ ಮುಖ ನೋಡಿದರು. ಒಳ್ಳೆ ಲಕ್ಷಿ್ಮಯಂತಹ ಲಕ್ಷಣದ ಹೆಂಗಸು ಎಂದಿತು ಮನಸು.
ಹೆಂಗಸು ತನ್ನ ಮೊಬೈಲಿನಿಂದ ತನ್ನ ಬಿಸಿನೆಸ್ಸ್ ಕಾರ್ಡನ್ನು ರವಾನಿಸಿದರು. ಕ್ಷಣಾರ್ಧದಲ್ಲಿ ಗುಂಡಣ್ಣ ತನ್ನ ಮೊಬೈಲಿನಲ್ಲಿ ಬಂದ ಸಂದೇಶ ತೆರೆದು ನೋಡಿದರು. ಫೋಟೋ ಸಹಿತ ಪೂರ್ಣ ವಿಳಾಸವಿತ್ತು. ಅರೆ ಕತ್ತಲೆಯಲ್ಲಿ ನೋಡಿದ ಮುಖಕ್ಕಿಂತ ಗಂಭೀರವಾಗಿಯೇ ಇತ್ತು ಈಗ ರವಾನೆಯಾಗಿ ಬಂದ ಚಿತ್ರ.
ತನ್ನ ಮೊಬೈಲಿನಿಂದ ಅದೇ ವೇಗದಲ್ಲಿ ತನ್ನ ನಂಬರನ್ನು ರವಾನಿಸಿದರು ಗುಂಡಣ್ಣ. ಜೊತೆಗೆ ತನ್ನ ಆಧಾರ್ ಕಾರ್ಡು ಮತ್ತು ಫೊಟೋವನ್ನು ರವಾನಿಸಿದರು ಜಾನಕಮ್ಮನ ಮೊಬೈಲ್ ನಂಬರಿಗೆ. ಅವರೂ ತೆರೆದು ನೋಡಿದರು. ಗುಂಡಣ್ಣನ ವೃತ್ತಿಪರತೆಯನ್ನು ಕಂಡು ‘ಜನ ಆಗಬಹುದು’ ಅಂದುಕೊಂಡರು ಮನಸ್ಸಿನಲ್ಲಿಯೇ. ಆಗಲೇ ತರಿಕೆರೆ ದಾಟಿತ್ತು. ಹನ್ನೆರಡು ಗಂಟೆಯ ಸಮಯವಿರಬಹುದು. ಬಸ್ಸಿನಲ್ಲಿದ್ದವರು ನಿದ್ದೆಯ ಬೇರೆ ಬೇರೆ ಸ್ಥಿಯಲ್ಲಿದ್ದರು. ಯಾವುದೇ ಸಾಧ್ಯತೆಯ ಸಂಬಂಧವೊಂದು ನೇಯ್ದುಕೊಂಡಿತ್ತು. ಮೆಲ್ಲಗೆ ನಿದ್ದೆ ಇಬ್ಬರನ್ನೂ ಆವರಿಸಿ ಆರಿವಿಲ್ಲದ ಬೇರೆಯೇ ಜಗತ್ತಿಗೆ ಜಾರಿದರು.
ಬೆಳಗ್ಗೆ ಮೆಜಸ್ಟಿಕ್‌ನಲ್ಲಿ ಇಳಿಯುವಾಗ ಪರಸ್ಪರ ಒಬ್ಬರನ್ನೊಬ್ಬರು ಹಗಲಿನ ಬೆಳಕಿನಲ್ಲಿ ನೋಡುವಂತಾಯಿತು. ನಿನ್ನೆ ಅರೆ ಮಬ್ಬಿನಲ್ಲಿ, ಆ ಮೇಲೆ ಮೊಬೈಲಿನ ಪರದೆಯಲ್ಲಿ ಚಿಕ್ಕ ವ್ಯಕ್ತಿ ಚಿತ್ರಕ್ಕಿಂತ ವ್ಯತಿರಿಕ್ತವಾದ ವಾಸ್ತವ ಚಿತ್ರ ಮುಂಜಾನೆಯ ಬೆಳಕಿನಲ್ಲಿ ನಿಚ್ಚಳವಾಗಿ ಇಬ್ಬರೂ ನೋಡಿಕೊಂಡು ತಮ್ಮ ಹಾದಿ ಹಿಡಿದರು. ಜಾನಕಮ್ಮ ಬಸವನಗುಡಿಯ ಕಡೆಗೆ ಹೊರಟರೆ ಗುಂಡಣ್ಣ ಆನಂದ ರಾವ್ ಸರ್ಕಲ್ ಬಳಿಯಿದ್ದ ಛತ್ರದ ಕಡೆಗೆ ಅವಸರದಿಂದ ನಡೆದರು.
ಸಂಜೆ ನಾಲ್ಕು ಗಂಟೆಗೆ ಅಂದಿನ ಕೆಲಸ ಮುಗಿದಿತ್ತು. ನಾಳೆಯ ಕೆಲಸ ಇಂದಿನ ರಾತ್ರಿ ಹತ್ತು ಗಂಟೆಯ ಮೇಲೆ ಪ್ರಾರಂಭವಾಗುತ್ತದೆ. ನೇಶನಲ್ ಕಾಲೇಜು ಹಿಂದುಗಡೆಯ ಛತ್ರಕ್ಕೆ ಎಂಟು ಗಂಟೆಯ ಮೊದಲು ತಲಪಿದರಾಯಿತು ಎಂದು ನಿನ್ನೆ ರಾತ್ರಿ ಭೇಟಿಯಾದ ಜಾನಕಮ್ಮನ ವಿಳಾಸ ಹುಡುಕಿ ನಡೆದರು.
ಬಸವನಗುಡಿ ವೃತ್ತದ ಬಳಿಯಲ್ಲೇ ಇತ್ತು ಜಾನಕಮ್ಮನ ಮನೆ. ಒಂದು ವಿಸ್ತಾರವಾದ ಹಳೆಯ ಕಟ್ಟಡಕ್ಕೆ ಅವರೇ ಒಡೆಯರು. ಕೆಳ ಅಂತಸ್ಥಿನ ಮುಖ್ಯ ಭಾಗವನ್ನು ಅವರೇ ಉಳಿಸಿಕೊಂಡಿದ್ದರು. ಬದಿಯ ರೂಮುಗಳು ಮತ್ತು ಮಾಳಿಗೆ ಮೇಲಿನ ರೂಮುಗಳನ್ನು ಬಾಡಿಗೆಗೆ ಕೊಟ್ಟಿದ್ದರು. ಮನೆಯ ಹಿಂದುಗಡೆ ಇರುವ ವಿಶಾಲವಾದ ಶೀಟು ಮುಚ್ಚಿದ ದೊಡ್ಡ ರೂಮನ್ನು ಮೆಸ್ ಆಗಿ ಪರಿವರ್ತಿಸಿದ್ದರು, ಎಲ್ಲಾ ಶುಚಿಯಾಗಿತ್ತು. ಅದಕ್ಕೆ ಬೇರೆ ಹೆಣ್ಣಾಳು ಇಟ್ಟಿದ್ದರು. ಗುಂಡಣ್ಣನಿಗೆ ವ್ಯವಸ್ಥೆಯನ್ನು ತೋರಿಸಿದರು. ಅಡಿಗೆ ಮನೆ, ಕೆಲಸದ ವಿವರಗಳನ್ನೆಲ್ಲಾ ತಿಳಿಸಿದರು. ಅವರ ವಾಸಕ್ಕೆ ಒಂದು ಔಟ್ ಹೌಸ್ ವ್ಯವಸ್ಥೆಯಿತ್ತು. ಗುಂಡಣ್ಣನಿಗೆ ಕೆಲಸವೂ ವ್ಯವಸ್ಥೆಯೂ ಇಷ್ಟವಾಯಿತು. ಈಗ ರಜೆ ಇರುವುದರಿಂದ ಬಾಡಿಗೆಗಿದ್ದ ಹುಡುಗಿಯರೆಲ್ಲಾ ರಜೆಗೆ ಊರಿಗೆ ಹೋಗಿರುವುದರಿಂದ ಮುಂದಿನ ಭಾನುವಾರವೇ ಕೆಲಸಕ್ಕೆ ಸೇರಲು ಹೇಳಿದರು. “ಹೂಂ” ಎಂದು ಗುಂಡಣ್ಣ ಹೊರಟರು.
ಮುಂದಿನ ವಾರ ಹೀಗೆ ಬಂದು ಜಾನಕಮ್ಮನ ಮನೆಗೆ ಸೇರಿದ ಗುಂಡಣ್ಣನಿಗೆ ಒಡತಿಯೊಡನೆ ಒಂದು ಗೌರವ ಭಾವ. ತಮ್ಮಲ್ಲಿ ಕೆಲಸಕ್ಕಿದ್ದರೂ ಜಾನಕಮ್ಮನಿಗೂ ಗುಂಡಣ್ಣನ ಮೇಲೆ ಒಂದು ವಿಶ್ವಾಸ.
ಕಾರ್ ಶೆಡ್ಡು ಮೆಸ್ಸಿನ ಸಾಮಾನು ಸಂಗ್ರಹಾಲಯವಾಗಿತ್ತು. ಕೆಲಸಕ್ಕೆ ಸೇರಿ ಎರಡು ತಿಂಗಳುಗಳೇ ಕಳೆದಿದ್ದುವು. ಹೀಗಿರುವ ಒಂದು ದಿನ ಸಾಮಾನುಗಳನ್ನೆಲ್ಲ ಗುಂಡಣ್ಣ ಕ್ರಮವಾಗಿ ಜೋಡಿಸುತ್ತಿದ್ದರು. ಏನು ನಡೆಯುತ್ತದೆ ಎಂದು ಜಾನಕಮ್ಮನವರು ಅಲ್ಲಿಗೆ ಬಂದು ಕೆಲಸಾವಳಿಗಳನ್ನು ನೋಡುತ್ತಾ ಸಲಹೆ ಸೂಚನೆ ಕೊಡುತ್ತಿದ್ದರು. ಗುಂಡಣ್ಣನ ಅಡಿಗೆಯ ಬಗ್ಗೆ ಹೊಸ್ಟೆಲಿನ ಹುಡುಗಿಯರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾದುದರಿಂದ ಅವರ ಒಂದು ಚಿಂತೆ ಕಡಿಮೆಯಾಗಿತ್ತು. ಗುಂಡಣ್ಣನ ಕಾರ್ಯ ವೈಖರಿಯನ್ನು ನೋಡುವಾಗ ಅವರ ವೃತ್ತಿಪರತೆ, ಕೆಲಸದ ತನ್ಮಯತೆ ಕಂಡು ಇನ್ನೂ ಹೆಚ್ಚಿನ ಸಮಾಧಾನವಾಯಿತು.
ಹಿಂದೆ ಅಡಿಗೆ ಮಾಡುತ್ತಿದ್ದ ಗಣಪತ್ ಬಗ್ಗೆ ಜಾನಕಮ್ಮ ಮಾತು ತೆಗೆದರು. ಅವನು ಮುಂಬೈಯ ವಿರಾರ್ ಎಂಬ ಊರಿನವನೆಂದೂ ನಾಲ್ಕೈದು ತಿಂಗಳು ಕೆಲಸ ಮಾಡಿದನೆಂದೂ ಪ್ರವರ ಪ್ರಾರಂಭಿಸಿದರು. ಕೆಲಸ ಮಾಡುತ್ತಾ ಗುಂಡಣ್ಣ ಕೇಳಿಸಿಕೊಳ್ಳುತ್ತಿದ್ದರು. “ಆದರೆ ಒಂದು ದಿನ…………” ಎಂದು ಮಾತು ಅರ್ಧಕ್ಕೆಂಬಂತೆ ನಿಂತಿತು. ಎರಡು ವಾಕ್ಯಕ್ಕೆ ನಿಲ್ಲಬೇಕಾದ ಮಾತು ಬಂದ ರಭಸಕ್ಕೆ ಸ್ವಲ್ಪ ಮುಂದೆ ಹೋದಂತಿತ್ತು ಮಾತಿನ ವರಸೆ.
ಅದೇನು ಅಂತಹ ಗಹನವಾದ ವಿಚಾರ ಎಂದು ಗುಂಡಣ್ಣರಿಗೆ ಕುತೂಹಲ. ಇನ್ನೂ ಏನೋ ಹೇಳುವುದು ಬಾಕಿ ಇದೆ ಎಂಬಂತೆ ಒಡತಿಯ ಮುಖ ನೋಡಿದರು.
“ಗುಂಡಣ್ಣ…. ಆ ಗಣಪತ್ ಎಂಥ ಮಾಡಿದ ಗೊತ್ತಾ…. ಚಿನ್ನದ ಸರ ತೆಗೆದುಕೊಂಡು ಪರಾರಿಯಾದ. ನಾಲ್ಕೈದು ತೊಲ ಚಿನ್ನವಿತ್ತು. ಹತ್ತಿರ ಕರೆದು ತನ್ನ ಮೊಬೈಲಿನಲ್ಲಿ ಸರದ ಚಿತ್ರ ತೋರಿದರು. ದೊಡ್ಡ ಪೆಂಡೆಂಟ್ ಇತ್ತು. ಉದ್ದನೆಯ ಹಳೆ ಸರ ಅದಾಗಿತ್ತು.
“ತ್ತು …… ತ್ತು..” ಗುಂಡಣ್ಣನ ಬಾಯಿಯಿಂದ ಅಯಾಚಿತವಾಗಿ ಮಾತು ಹೊರಟಿತು. ಒಂದು ಅನುಕಂಪದ ಛಾಯೆಯಿತ್ತು ಅದರಲ್ಲಿ. “ಯಾರಿಗೂ ಹೇಳಿಲ್ಲ ವಿಚಾರ…. ಎದುರುಗಡೆಯ ಪೋಲೀಸ್ ಸ್ಟೇಷನಿನಲ್ಲಿ ದೂರು ಕೊಟ್ಟೆ. ಆದರೆ ಅವನನ್ನು ಹುಡುಕಿಕೊಂಡು ಹೋಗಬೇಕಾದರೆ ಒಂದಷ್ಟು ದುಡ್ಡು ಕೇಳಿದರು…. ಏನು ಗೇರೆಂಟಿ ಕಳೆದ ಮಾಲು ವಾಪಸು ಬರುವುದೆಂದು…. ಮದುವೆಯ ಚಿನ್ನ ಅದು ಎಂದು ಒಂದು ಭಾವನಾತ್ಮಕ ಸಂಬಂಧ ಅಷ್ಟೇ. ಅವರೇ ತೀರಿಕೊಂಡ ಮೇಲೆ ಇನ್ನೇನು ಎಂದು ಸುಮ್ಮನಾದೆ… ಆ ಗಣಪತ್ ಊರಿಗೆ ಹೋದವನು ವಾಪಸು ಬರಲಿಲ್ಲ…. ಯಾಕೆ ಬರುತ್ತಾನೆ ಹೆಂಡತಿ ಮಕ್ಕಳನ್ನು ಬಿಟ್ಟು… ಅದೂ ಲಕ್ಷದ ಮಾಲು ಸಿಕ್ಕಿದ ಮೇಲೆ….. ನಿಮಗೆ ಹೇಳಿ ಬಿಡುವ ಅನ್ನಿಸಿತು ಹಾಗೆ ಹೇಳಿದೆ. ಅವನು ಕೊಟ್ಟ ವಿಳಾಸ ಸರಿಯೋ ತಪ್ಪೋ ಯಾರಿಗೆ ಗೊತ್ತು?” ಎಂದರು. ಗುಂಡಣ್ಣನಿಗೆ ಒಂದು ರೀತಿಯ ಸಹತಾಪ ಜಾನಕಮ್ಮನ ಬಗ್ಗೆ. ಏನೂ ಹೇಳಲಿಲ್ಲ.
ಜಾನಕಮ್ಮನಿಗೆ ಸುಖ ದು:ಖ ಹೇಳಿಕೊಳ್ಳಲು ಒಂದು ನಂಬಿಕೆಯ ಜೀವ ಸಿಕ್ಕಿದ ಸಮಾಧಾನ. ಗುಂಡಣ್ಣನ ಕೈಯ ಅಡಿಗೆ ಅವರಿಗೂ ಮೆಚ್ಚಿಗೆಯಾದುದರಿಂದ ಕೆಲವೊಮ್ಮೆ ಅವರೂ ಮೆಸ್ಸಿನಲ್ಲೇ ಊಟ ಮಾಡುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಬರುವ ಬಂದುಗಳನ್ನು ಬಿಟ್ಟರೆ ಬೇರೆ ಆ ಮನೆಗೆ ಸುಳಿಯುವವರು ಅಪರೂಪವೇ. ಜಾನಕಮ್ಮ ಶಿವಮೊಗ್ಗಕ್ಕೆ ಹೋಗಬೇಕೆನಿಸಿದಾಗ ಯಾವುದೇ ಆತಂಕವಿಲ್ಲದೆ ಗುಂಡಣ್ಣನ ಜವಾಬ್ದಾರಿಗೆ ಬಿಟ್ಟು ಹೋಗಿ ಬರುವಂತಾಯಿತು.
ಗುಂಡಣ್ಣ ಬಂದು ಆರೇಳು ತಿಂಗಳುಗಳೇ ಕಳೆದಿದ್ದುವು. ಒಂದು ಬಾರಿ ಊರಿಗೆ ಹೋಗಿ ಬರಬೇಕೆನಿಸಿತು. ಮುಂಬೈಯಲ್ಲಿರುವ ಅಣ್ಣ ಸುಧಾಕರನ ಮಗಳ ಮದುವೆಗೂ ಹೋಗಬೇಕಿತ್ತು. ಹೇಗೂ ಮೆಸ್ಸಿನ ಮಕ್ಕಳಿಗೆ ಮೇ ತಿಂಗಳಿನಲ್ಲಿ ವರ್ಷಾವಧಿಯ ರಜೆ ಇತ್ತು. ಅದಕ್ಕೆ ಹೊಂದಿಸಿ ರಜೆಹಾಕಿ ಮುಂಬೈಗೆ ಹೊರಡುವ ವಿಚಾರ ಮಾಡಿದರು. ಜಾನಕಮ್ಮನಲ್ಲಿ ವಿಚಾರಿಸಿದಾಗ ಅವರು “ಹೂಂ”ಎಂದರು.
ಗುಂಡಣ್ಣನೇ ಹೇಳಿದರು. “ನೀವು ಕೆಲವು ತಿಂಗಳ ಹಿಂದೆ ಗಣಪತ್ ವಿಚಾರ ಹೇಳಿದ್ದೀರಿ. ನಾನು ಹೇಗೂ ಮುಂಬೈಗೆ ಹೋಗುತ್ತಿದ್ದೇನೆ. ಎರಡು ಮೂರು ದಿನ ಅಲ್ಲಿರುತ್ತೇನೆ. ಬೇಕಾದರೆ ಅಲ್ಲಿ ವಿಚಾರಿಸಿ ಮಾಡಿ ಬರುತ್ತೇನೆ. ಕಡಿಮೆ ಮೊತ್ತದ ಮಾಲಲ್ಲ ಕಳೆದುಕೊಂಡದ್ದು….” ಎಂದು ಜಾನಕಮ್ಮನೊಡನೆ.
“ಎಲಾ ಇವನಾ” ಎಂದು ಜಾನಕಮ್ಮನಿಗೆ ಅಚ್ಚರಿ ಎನಿಸಿತು. ಅವರಾಗಿಯೇ ನೆನಪು ಮಾಡಿದ್ದಾರೆ. “ನೋಡೋಣ” ಎಂದ ಅವರ ಬಳಿ ಇರುವ ಎಲ್ಲಾ ಮಾಹಿತಿ, ಚಿತ್ರಗಳು ಅವನ ಆಧಾರ್ ಕಾರ್ಡಿನ ಪ್ರತಿ, ಬ್ಯಾಂಕ್ ಅಕೌಂಟು ಮಾಹಿತಿ ಎಲ್ಲವನ್ನೂ ಕೊಟ್ಟರು.
“ನೀವು ರಿಸ್ಕ್ ತೆಗೆದುಕೊಳ್ಳಬೇಡಿ…….. ಹೀಗೆ ಮಾಡಿದವ ಎಂಥಹ ಮನುಷ್ಯನೋ ಯಾರಿಗೆ ಗೊತ್ತು” ಎಂದು ತಮ್ಮ ಜಾಗೃತೆಯನ್ನು ಹೇಳಿ ಬಿಟ್ಟರು.
“ನೀವೇನೂ ಯೋಚಿಸಬೇಡಿ ಜಾನಕಮ್ಮ… ನನ್ನ ಅಣ್ಣ ಇರುವುದು ಮುಂಬೈ ಪೋಲೀಸ್ ಇಲಾಖೆಯಲ್ಲಿ…” ಎಂದಾಗ ಜಾನಕಮ್ಮನಿಗೆ ಸ್ವಲ್ಪ ನಿರಾಳತೆ ಮೂಡಿತು.
ಹಾಗೆ ಹೋದ ಗುಂಡಣ್ಣ ವಸಾಯಿಯಲ್ಲಿರುವ ಅಣ್ಣನ ಮನೆಗೆ ಹೋದರು. ಮದುವೆ ಮುಗಿಸಿ ನಿರಾಳವಾದ ದಿನ ಅಣ್ಣನೊಡನೆ ಹೇಳಿ ವಿರಾರಿಗೆ ಹೊರಟರು. ಅವರ ಬಳಿ ಇದ್ದ ಗಣಪತ್‌ನ ವಿಳಾಸದಲ್ಲಿ ಹೋಗಿ ವಿಚಾರಿಸಿದರೆ “ಅವರು ಇಲ್ಲಿಂದ ಫಾಲ್ಗರ್‌ಗೆ ಮನೆ ಬದಲಿಸಿದ್ದಾರೆ. ಅಲ್ಲಿ ಏನೋ ಸರಕಾರಿ ಕೆಲಸ ಸಿಕ್ಕಿದಂತೆ. ಅಲ್ಲಿ ಅವರ ಹೆಂಡತಿಯ ಅಣ್ಣನ ಮನೆಯೂ ಇದೆಯಂತೆ. ಸ್ಟೇಷನ್ ಪಕ್ಕದಲ್ಲಿಯೇ ಇದೆ ” ಎಂದು ಅಕ್ಕ ಪಕ್ಕದ ಮನೆಯವರು ತಿಳಿಸಿದರು.
ಹೇಗಾದರೂ ಇರಲಿ ಎಂದು ಬ್ಯಾಂಕಿನ ಪಾಸ್ಬುಕ್ಕಿನ ಪ್ರತಿ ತೆಗೆದುಕೊಂಡು ಶಾಖೆಗೆ ಹೋದರು. ಅಷ್ಟೇನೂ ಜನಸಂದಣಿ ಇರಲಿಲ್ಲ. ತಾನು ಅವರ ಸಂಬಂಧಿಯೆಂದೂ, ಸ್ವಲ್ಪ ಹಣಕಾಸಿನ ವ್ಯವಹಾರ ಮುಗಿಸಬೇಕೆಂದೂ ಗಣಪತ್ನ ಈಗಿನ ವಿಳಾಸ ಕೊಡಲು ವಿನಂತಿಸಿದರು.
ಕಂಪೂಟರ್ ನೋಡಿ “ಇತ್ತೀಚೆಗೆ ವಿಳಾಸ ಬದಲಿಸಿದ್ದಾರೆ” ಎಂದು ತಮ್ಮಷ್ಟಕ್ಕೇ ಗೊಣಗಿಕೊಂಡು ಹೊಸ ವಿಳಾಸ ಕೊಟ್ಟರು. ಜೊತೆಗೆ ಮೊಬೈಲ್ ನಂಬರನ್ನು ಕೊಟ್ಟರು. “ಕೃತಜ್ಞತೆ” ಹೇಳಿ ಹೊರಬಿದ್ದ ಗುಂಡಣ್ಣನ ತಲೆ ಕೆಲಸ ಮಾಡತೊಡಗಿತು. ಅಣ್ಣನ ಸಹಾಯ ಪಡೆದು ನಾಳೆ ಪಾಲ್ಗರಿಗೆ ಹೋಗಿ ಬರಲು ನಿರ್ಧರಿಸಿದರು.
ಸುಧಾಕರ ವಸೈ ಪೋಲೀಸ್ ಸ್ಟೇಷನಿನಲ್ಲಿ ಎಎಸೈ ಆಗಿದ್ದರು. ಫಾಲ್ಗರ್ ಸ್ಟೇಷನಿಗೆ ಫೋನ್ ಮಾಡಿ ವಿಚಾರ ತಿಳಿಸಿ ಮರುದಿನ ಬರುವ ಗುಂಡಣ್ಣ ಎನ್ನುವವರಿಗೆ ಬೇಕಾದ ಸಹಾಯ ಕೊಡಬೇಕೆಂದು ವಿನಂತಿಸಿಕೊಂಡರು. ಗುಂಡಣ್ಣನಿಗೆ ಅಷ್ಟೇ ಸಾಕಾಯಿತು. ಮರು ದಿನ ಬೆಳಿಗ್ಗೆ ಎಲ್ಲಾ ಮಾಹಿತಿಗಳೊಂದಿಗೆ ಫಾಲ್ಗರ್ ಪೋಲೀಸ್ ಸ್ಟೇಷನಿಗೆ ಹೋಗಿ ಸುಧಾಕರ ಪೋನ್ ಮಾಡಿದ್ದವರನ್ನು ಭೇಟಿಯಾದರು. ಅವರು ನಿರಂಜನ್ ಮೋರೆ ಎಂಬ ಪೋಲೀಸನ್ನು ಕರೆದು ಕಾರ್ಯಾಚರಣೆಯ ರೂಪರೇಖೆಯನ್ನು ತಿಳಿಸಿ ಇನ್ನೂ ಇಬ್ಬರು ಪೋಲೀಸರನ್ನು ಜೊತೆಗೆ ಕಳುಹಿಸಿದರು. ಗುಂಡಣ್ಣ ಕೂಡ ಅವರ ಜೊತೆ ಜೀಪು ಹತ್ತಿದರು.
ಪಾಲ್ಗರ್ ಅಷ್ಟೇನೂ ಬೆಳವಣಿಗೆಯಾಗದ ವಿರಾರಿನಿಂದ ಇಪ್ಪತೈದು ಕಿ ಮೀ ದೂರವಿರುವ ಆದಿವಾಸಿಗಳ ಬಾಹುಳ್ಯವಿರುವ ಸ್ಥಳ. ಪೋಲೀಸ್ ಜೀಪು ಒಂದು ಹಳೆಯ ಬಿಲ್ಡಿಂಗ್‌ನ ಮುಂದೆ ನಿಂತಾಗ ಇದ್ದ ನಾಲ್ಕೈದು ಮನೆಗಳ ಮಂದಿ ಹೊರ ಬಂದರು. ಯಾವುದೋ ಭಯದಿಂದ ಅಷ್ಟೇ ಬೇಗ ಮತ್ತೆ ತಮ್ಮ ಮನೆಗಳೊಳಗೆ ಹೋಗಿ ಬಾಗಿಲು ಮುಚ್ಚಿಕೊಂಡರು. ಅಷ್ಟು ಹೊತ್ತಿಗೆ ಪೋಲೀಸರು ಮೊದಲ ಮಹಡಿಯ ಗಣಪತ್ ನ ಮನೆಯ ಬಾಗಿಲು ತಟ್ಟಿದರು. ಹೊರಗಡೆ ಗಣಪತ್, ಹೆಡ್ ಕುಕ್, ಟ್ರೈಬಲ್ ವೆಲ್ಪೆರ್ ಡಿಪಾಟ್ಮೆಂಟ್ ಎಂಬ ಫಲಕ ನೇಲುತ್ತಿತ್ತು. ಮನೆಯಿಂದ ಹೊರಗೆ ಬಂದವನು ಬಂದವರನ್ನು ನೋಡಿ ಒಂದು ನಿಮಿಷ ದಂಗಾದ. ಬಂದವರನ್ನು ಮನೆಯೊಳಗೆ ಬರಲು ಹೇಳಿದ. ಅವರ ಪೋಷಾಕಿನಲ್ಲಿ ಅವರ ಬಗ್ಗೆ ಜನರಿಗೆ ಗೊತ್ತಾಗುತ್ತದೆ. ಅಂಥವರು ಹೊರಗಿದ್ದರೆ ಜನ ಕುತೂಹಲದಿಂದ ಒಟ್ಟಾದರೆ ತನ್ನ ಮರ್ಯಾದೆ ಮೂರು ಕಾಸಾಗುವುದು ಅವನಿಗೆ ಬೇಡವಾಗಿತ್ತು.
“ಗಣಪತ್ ಯಾರು” ಎಂದು ಮೋರೆ ಕೇಳಿದಾಗ ಗಂಡಸು ತಾನೇ ಎಂದು ಹೇಳಿದ. ಗಣಪತ್ ಬಾಗಿಲು ಮುಚ್ಚಿಕೊಂಡ. ಅಷ್ಟು ಹೊತ್ತಿಗೆ ಯಾವುದೋ ಸಮಾರಂಭಕ್ಕೆ ಹೊರಟ ಮನೆಯ ಹೆಂಗಸು ಹೊರ ಕೋಣೆಗೆ ಬಂದವರನ್ನು ನೋಡಲು ಇಣುಕಿದರು. ಅವರ ಕುತ್ತಿಗೆಯಲ್ಲಿ ಘನವಾದ ಚಿನ್ನದ ಆಭರಣ ನೇಲುತ್ತಿತ್ತು. ಮೋರೆ ಇಣುಕಿದವಳ ಪೋಟೋ ಹೊಡೆದ. ಆಗಲೇ ಗುಂಡಣ್ಣ ಆಭರಣವನ್ನು ಗುರುತಿಸಿದ್ದರು. ಇಬ್ಬರೂ ಪರಸ್ಪರ ಮುಖ ನೋಡಿಕೊಂಡರು.
“ಏನು ಸಮಾಚಾರ…. ಇಲ್ಲಿಗೆ ಬಂದಿರಿ. ಹೇಳಿಕಳಿಸಿದ್ದರೆ ನಾನೇ ಬರುತ್ತಿದ್ದೆನಲ್ಲ ನಿಮ್ಮ ಆಪೀಸಿಗೆ” ಗಣಪತ್ ಭಯದಿಂದ ತಗ್ಗಿದ ಸ್ವರದಲ್ಲಿ ಕೇಳಿದ.
“ಆ ಹೆಂಗಸು ಯಾರು” ಮೋರೆ ಕೇಳಿದರು.
“ಬಾಯ್ಕೊ(ಹೆಂಡತಿ)”ಗಣಪತ್ ಉತ್ತರಿಸಿದ. ಅವನ ಗಂಟಲು ಒಣಗಿತ್ತು.
ತನ್ನ ಮೊಬೈಲನ್ನು ತೆರೆದು ಕಳೆದು ಹೋದ ಆಭರಣದ ಚಿತ್ರವನ್ನು ತೋರಿದರು. ಗಣಪತ್ ತಬ್ಬಿಬ್ಬಾದ. ಸಾದಾ ವಸ್ತ್ರದಲ್ಲಿದ್ದ ಗುಂಡಣ್ಣನನ್ನು ನೋಡಿದ.
” ಒ..ಓ…” ಗಣಪತ್ ಬಾಯಿಯಿಂದ ಶಬ್ದವೇ ಹೊರಡಲಿಲ್ಲ. ಅವನ ಮುಖ ವಿವರ್ಣವಾಯಿತು.
” ಆ ಆಭರಣ ತಂದು ಇಲ್ಲಿ ಮಡಗು… ಮತ್ತೆ ಮಾತನಾಡುವ….. ಹೆಚ್ಚು ಜಾಣತನ ತೋರಿದರೆ ನೀನು ಕೆಲಸ ಮಾಡುವ ಇಲಾಖೆಗೆ ತಿಳಿಸಿ ಬಿಡುತ್ತೇವೆ” ಎಂದ ಮೋರೆ.
” ಅದೊಂದು ಕೆಲಸ ಮಾತ್ರ ಮಾಡಬೇಡಿ… ನಮ್ಮ ಹೊಟ್ಟೆ ಮೇಲೆ ಹೊಡೆಯಬೇಡಿ” ಎನ್ನುತ್ತಾ ಗಣಪತ್ ಒಳಗೆ ಹೋಗಿ ಹೆಂಡತಿಯನ್ನು ಕರೆದುಕೊಂಡು ಹೊರಗೆ ಬಂದ.
” ಹೂಂ” ಮೋರೆಯ ಕಣ್ಣಗಳು ಕೆಂಪಗಾಗಿ ತೆರೆದುಕೊಂಡುವು. ಇದೆಲ್ಲಾ ಇಲಾಖೆಯ ಕಲಿಕೆಗಳೆಂದು ಗುಂಡಣ್ಣ ಅಂದುಕೊಂಡ.
ಅವಳು ತನ್ನ ಕುತ್ತಿಗೆಯಲ್ಲಿದ್ದ ಸರವನ್ನು ಟೀಪೊಯಿ ಮೇಲೆ ತೆಗೆದಿಟ್ಟಳು.
“ಗಣಪತ್, ಅಭಿ ಬೋಲೋ ಕಹಾನಿ” ಮೋರೆ ಪುನ: ಹೇಳಿದಾಗ ಅವನು ಪೂರ್ಣ ಬೆವರಿದ್ದ.
ವೃತ್ತಾಂತವನ್ನು ಗಣಪತ್ ಬಿಚ್ಚಿಟ್ಟ. ತಪ್ಪೊಪ್ಪಿಕೊಂಡ. ಮೋರೆ ಒಂದು ತಪ್ಪೊಪ್ಪಿಗೆಯ ಪತ್ರ ಬರೆಸಿಕೊಂಡರು.
“ಆಫೀಸ್ಮೆ ಮತ್ ಬತಾನಾ ಸಾಬ್, ಕಾಮ್ ಚಲಾ ಜಾಯೆಗಾ ” ಎಂದು ಗೊಗರೆದ. ಅವನು ಸಣ್ಣಗೆ ನಡಗುತ್ತಿದ್ದ. ತಾನು ಬಂದ ಕೆಲಸ ಆಗಿದೆ. ಇನ್ನು ಅವನಿಗೆ ತೊಂದರೆ ಕೊಡುವುದು ಬೇಡ ಎಂದು ಗುಂಡಣ್ಣನ ಮನಸು ಹೇಳಿತು. ಹಾಗೇ ಮೋರೆಗೆ ಕಿವಿಯಲ್ಲಿ ತಿಳಿಸಿದರು.
ಆಭರಣವನ್ನು ಕೈಗೆತ್ತಿಕೊಂಡು ಗುಂಡಣ್ಣನ ಕೈಗೆ ಕೊಟ್ಟು ಪರೀಕ್ಷಿಸಲು ಹೇಳಿದರು. ಅವರು ಪೆಂಡೆಂಟ್ ಸೂಕ್ಷ್ಮವಾಗಿ ಪರೀಕ್ಷಿಸಿದರು. ಜಾನಕಿ ಎಂಬ ಹೆಸರು ಪೆಂಡೆಂಟಿನ ಹಿಂದುಗಡೆ ಬರೆದಿತ್ತು. ಇನ್ನು ಹೆಚ್ಚಿನ ಪರೀಕ್ಷೆ ಬೇಕಿರಲಿಲ್ಲ.
“ಇದು ನಮ್ಮದೇ ಮಾಲು”
ಗಣಪತ್ ದೊಡ್ಡ ಗಂಡಾಂತರ ಇಲ್ಲಿಗೇ ಮುಗಿಯಿತಲ್ಲ ಎಂದು ಯೋಚಿಸುತ್ತಿದ್ದ.
ಒಂದು ತೀಕ್ಷ್ಣ ನೋಟ ನೋಡಿ ಪೋಲೀಸರು ಹೊರಟರು. ಗಣಪತ್‌ನ ಮನೆಯ ಬಾಗಿಲು ಮುಚ್ಚಿಕೊಂಡಿತು.
ಅವನ ಹೆಂಡತಿ ಗಣಪತನನ್ನು ತರಾಟೆಗೆ ತೆಗೆದುಕೊಂಡದ್ದು ಮೆಟ್ಟಲಿಳಿಯುವಾಗ ಗುಂಡಣ್ಣರಿಗೆ ಕೇಳಿಸಿತು. “ನಿಮ್ಮ ಕೆಲಸ ಹೋದರೆ ಏನು ಗತಿ” ಎಂದು ಅಳುವ ಸ್ವರ ಕೇಳಿದಾಗ ಗುಂಡಣ್ಣನಿಗೆ ಕನಿಕರವೆನಿಸಿತು.
ಗುಂಡಣ್ಣ ಆಭರಣವನ್ನೂ ತಪ್ಪೊಪ್ಪಿಗೆ ಪತ್ರವನ್ನೂ ತನ್ನ ಬ್ಯಾಗಿಗೆ ಇಳಿಸಿ ಅವರೊಡನೆ ಜೀಪಿಗೇರಿ ಹೋದರು.
ಪೋಲೀಸ್ ಸ್ಟೇಷನಿನಲ್ಲಿ ಎಲ್ಲರಿಗೂ ಕೃತಜ್ಞತೆ ಹೇಳಿ ಹೊರಡುವಾಗ ” ಪಾಪ, ಏನೋ ಆಸೆ ಬಿದ್ದು ಕದ್ದಿರಬೇಕು……. ಕಳ್ಳ ಪ್ರವೃತ್ತಿಯವನಲ್ಲ…… ಅವನಿಗೆ ತೊಂದರೆಯಾಗುವುದು ಬೇಡ” ಎಂದು ಗುಂಡಣ್ಣ ಹೇಳುವಾಗ ಮೋರೆ ನಕ್ಕರು. ಕಳ್ಳರನ್ನು ಹಿಡಿಯಬೇಕಾದರೆ ಹೀಗೆಲ್ಲಾ ನಾಟಕ ಮಾಡಬೇಕಾಗುತ್ತದೆ. ಈ ದಿನ ಮಾಡಿದ್ದು ನಮ್ಮ ರೆಕಾರ್ಡಿಗೆ ಬಂದಿಲ್ಲ….:” ಎಂದು ಸಮಾಧಾನ ಹೇಳಿ ಕಳಿಸಿದರು.
ರಜೆ ಮುಗಿಸಿ ಬೆಂಗಳೂರಿಗೆ ತಲಪಿದಾಗ ಗುಂಡಣ್ಣನಿಗೆ ಒಂದು ಸಾಧನೆಯ ಹೆಮ್ಮೆ. ಗುಂಡಣ್ಣ ಹೇಳಿದಂತೆ ಹದಿನೈದು ದಿನಕ್ಕೆ ಸರಿಯಾಗಿ ವಾಪಸ್ಸು ಬಂದದ್ದು ನೋಡಿ ಜಾನಕಮ್ಮನಿಗೂ ನಿರಾಳವಾಯಿತು.
ಸಂಜೆ ಹೊತ್ತು ಮುಂಬೈಯಿಂದ ತಂದ ಮಾಲನ್ನು ಮತ್ತು ತಪ್ಪೊಪ್ಪಿಗೆ ಪತ್ರವನ್ನು ತಂದು ಜಾನಕಮ್ಮನ ಕೈಗಿತ್ತರು ಗುಂಡಣ್ಣ. ತನ್ನ ಸಾಹಸದ ಕತೆಯನ್ನು ಬಿಚ್ಚಿಟ್ಟರು. ಒಂದು ಬಾರಿ ಮರಳಿ ಪಡೆದ ಆಭರಣವನ್ನು ಕುತ್ತಿಗೆಗೆ ಹಾಕಿಕೊಂಡರು. ಕನ್ನಡಿಯಲ್ಲಿ ನೋಡಿಕೊಂಡರು. ಒಂದು ಸಮಾಧಾನದ ಮಂದಹಾಸ ಮೂಡಿತು ಮುಖದಲ್ಲಿ. ಸಂತಸದಲ್ಲಿ ಹತ್ತಿರಬಂದು ಗುಂಡಣ್ಣನ ಕೈಹಿಡಿದು ಕೃತಜ್ಞತೆ ಹೇಳಿದರು. ಕಳೆದುಹೋದ ಮಗನನ್ನು ಕಳೆದ ತಾಯಿಯ ಮನಸ್ಸಿನಂತಿತ್ತು ಅವರ ಸಡಗರ.
ಒಬ್ಬ ಗಂಡಸಿನ ಮುಂದೆ ಆಭರಣ ಧರಿಸಿ ಕನ್ನಡಿ ನೋಡಿಕೊಂಡುದರ ಬಗ್ಗೆ ಅವರಿಗೆ ನಾಚಿಕೆಯೆನಿಸಿತು. “ಇದನ್ನು ಇನ್ನು ಬ್ಯಾಂಕಿನಲ್ಲಿ ಇಟ್ಟುಬಿಡುತ್ತೇನೆ. ವಾಪಸು ಸಿಕ್ಕಿತಲ್ಲ” ಎಂದು ನಿಟ್ಟುಸಿರು ಬಿಟ್ಟರು. ಇಂತಹ ಪ್ರಸಂಗಗಳಲ್ಲಿ ಮೂಡುವ ಕ್ಷಣಿಕ ಪ್ರತಿಕ್ರಿಯಯಂತಿತ್ತು ಮಾತು.
“ನಾನಿನ್ನು ಹೊರಟೆ… ರಾತ್ರಿಯ ಅಡಿಗೆಗೆ ತರಕಾರಿ ತರಬೇಕಲ್ಲಾ?” ಎಂದು ಗುಂಡಣ್ಣ ಹೆಜ್ಚೆ ತೆಗೆದರು.
“ವ್ಯವಹಾರ ಮುಗಿಯಲಿಲ್ಲ….. ಲಕ್ಷದ ಮಾಲು ವಾಪಸು ತಂದಿದ್ದೀರಿ….. ಇದರ ಅರ್ಧವಾದರೂ ನೀವು ಉಡುಗೊರೆಯಾಗಿ ತೆಗೆದುಕೊಳ್ಳಬೇಕು” ಎಂದರು ಜಾನಕಮ್ಮ..
“ನನಗೆ ಒಂದು ನೆಮ್ಮದಿಯ ಕೆಲಸ ಕೊಟ್ಟಿದ್ದೀರಿ. ನಾನು ದುಡಿದದ್ದಕ್ಕೆ ನೀವು ನಿರೀಕ್ಷೆಗಿಂತ ಹೆಚ್ಚೇ ಕೊಡುತ್ತಿದ್ದೀರಿ. ಇಲ್ಲಿನ ಹುಡುಗಿಯರೆಲ್ಲಾ ಖುಷಿಯಲ್ಲಿದ್ದಾರೆ. ಇದಕ್ಕೆ ಅವಕಾಶ ಕೊಟ್ಟ ನೀವು ನನಗೆ ತಂಗಿಯೋ ಅಕ್ಕನೋ ಇದ್ದ ಹಾಗೆ. ನಿಮಗೆ ನಾನು ಮಾಡಿದ್ದು ಒಂದು ತಂಗಿಗೆ ಕೊಟ್ಟ ಕೊಡುಗೆ ಎಂದು ತಿಳಿದುಕೊಳ್ಳಿ. ಇದರಲ್ಲಿ ವ್ಯವಹಾರ ಬೇಡ ಎಂದರು. ಜಾನಕಮ್ಮ ಹತ್ತಿರ ಬಂದು ಎದುರು ನಿಂತವರನ್ನು ಒಂದು ಆತ್ಮೀಯ ಬಂಧುವಿನಂತೆ ಆಲಂಗಿಸಿದರು. ಮನಸಾರೆ ಬಂದ ಆ ನಿಮಿಷದ ಭಾವವಾಗಿತ್ತದು. “ಗುಂಡಣ್ಣ, ನಿಮ್ಮ ಹೆಸರಿನಲ್ಲಿರುವ ಅಣ್ಣನ ಅಂಶವನ್ನು ನೀವು ಅನ್ವರ್ಥ ಮಾಡಿದರಿ” ಎಂದರು. ಇಬ್ಬರ ಕಣ್ಣುಗಳೂ ಮಂಜಾದುವು ರೂಪುಗೊಂಡ ಅಲಿಖಿತ ಸಂಬಂದಕ್ಕೆ.
*****
1 thought on “ಅಲಿಖಿತ”
ಸರಾಗವಾಗಿ ಓದಿಸಿಕೊಂಡು ಹೋಗುವ ಸುಂದರ ಕಥೆ.
ಅಚ್ಚರಿ ಮೂಡಿಸಿ ಸುಖಾಂತವಾದ ಕಥಾವಸ್ತು.