ಸಂಗೀತ ಗಾರುಡಿಗ ‘ಲುಡ್ವಿಗ್ ವಾನ್ ಬೀತೊವನ್’

(Ludwig van Beethoven) ಕಿವುಡರಾಗಿ ಹೀಗೆ ಪ್ರಸಿದ್ಧಿಯ ಉತ್ತುಂಗಕ್ಕೇರಿದ ಸಂಗೀತ ಸಂಯೋಜಕರಂತೂ ಇಲ್ಲವೇ ಇಲ್ಲ

ಸಂಗೀತವೆನ್ನುವುದು ಪ್ರಪಂಚದಾದ್ಯಂತ ಇರುವ ಒಂದು ಪ್ರಬಲ ಕಲಾಮಾಧ್ಯಮ. ಸಂಗೀತಕ್ಕೆ ಮನಸ್ಸುಗಳನ್ನು ಅರಳಿಸುವ, ಬದುಕಿನಲ್ಲಿ ಸಂತೋಷವನ್ನು ತುಂಬುವ, ದುಃಖಗಳನ್ನು ಶಮನಗೊಳಿಸುವ, ಬದುಕನ್ನು ಹಸನುಗೊಳಸುವ ಚಿಕಿತ್ಸಕ ಗುಣಗಳಿವೆ. ಭಾವೋದ್ವೇಗಗಳನ್ನು ಬಿಂಬಿಸುವ ಸ್ವರಗಳ ಮೂಲಕಕೇಳುಗರನ್ನು ಭಾವನಾಲೋಕದಲ್ಲಿ ವಿಹರಿಸುವಂತೆ ಮಾಡಬಲ್ಲ, ಹರ್ಷೋತ್ಸಾಹವನ್ನು ಮಿಡಿಸಬಲ್ಲ, ವಿರಹದ ಬೇಗುದಿಗೆ ತಂಗಾಳಿಯಾಗಿ ಬೀಸಬಲ್ಲ,ಪ್ರೀತಯ ನವೋಲ್ಲಾಸಗಳನ್ನು ಹಂಚಬಲ್ಲ, ನಿವೇದಸಬಲ್ಲ, ಆವೇಶದ ಉತ್ಕರ್ಷಗಳನ್ನು ಅರಳಿಸಬಲ್ಲ, ಮನಸ್ಸಿನ ಎಲ್ಲೆಗಳನ್ನು ಹಿಗ್ಗಿಸಬಲ್ಲ ಶಕ್ತಿಯಿದೆ.

(ಬೀತೂವನ್ ನ ಪೇಂಟಿಂಗ್)

ಮನರಂಜನೆಯೊಂದೇ ಅಲ್ಲದೆ ಬದುಕಿನ ಎಲ್ಲೆಗಳನ್ನೇ ಅಲೆ ಅಲೆಯಾಗಿ ಮೀಟಬಲ್ಲ ಸಂಗೀತಕ್ಕೆ ಸಾವಿರಾರು ವರ್ಷಗಳ ಸಂಸ್ಕಾರವಿದೆ. ಹೀಗಿದ್ದೂ ಹೊಸ,ಹೊಸ ಆಯಾಮಗಳಲ್ಲಿ ಸಂಗೀತ  ಅರಳುತ್ತಲೇ ಇರುತ್ತದೆ. ಇಂತಹ ಅದ್ಭುತ ಸಂಗೀತವನ್ನು ಕಟ್ಟಬಲ್ಲ,ಹೊಸರೀತಿಯಲ್ಲಿ ಧೀಮಂತವಾಗಿ ಸಂಯೋಜಿಸಬಲ್ಲ ಸಂಗೀತಕಾರರುಆಗಾಗ ಪ್ರಪಂಚದಲ್ಲಿ ಹುಟ್ಟಿ ಸಂಗೀತಪ್ರೇಮಿಗಳನ್ನು ಅವಾಕ್ಕಾಗಿಸಿದ್ದಾರೆ. ಅಂಥವರಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಪ್ರಸಿದ್ದ ಸಂಯೋಜಕರಲ್ಲಿ ಒಬ್ಬನಾದ ಲುಡ್ವಿಗ್ ವಾನ್ ಬೀತೊವನ್ ನ ಹೆಸರು ಅಜರಾಮರವಾದದ್ದು.

ಪ್ರಪಂಚದಲ್ಲಿ ಹಲವು ಪ್ರಸಿದ್ದ ಸಂಗೀತ ಸಂಯೋಜಕರಿದ್ದಾರೆ.ಆದರೆ ಇವನಂತೆ ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿ ಪಡೆದ ಸಂಗೀತ ಸಂಯೋಜಕರು ಬಹಳ ವಿರಳ. ಇನ್ನುಕಿವುಡರಾಗಿ ಹೀಗೆ ಪ್ರಸಿದ್ಧಿಯ ಉತ್ತುಂಗಕ್ಕೇರಿದ ಸಂಗೀತ ಸಂಯೋಜಕರಂತೂ ಇಲ್ಲವೇ ಇಲ್ಲ.

ಸಂಗೀತ ಸಾಧನೆಯಲ್ಲಿ ತೊಡಗಿಕೊಂಡಿದ್ದ ಬೀತೊವನ್ ನ ಇಪ್ಪತ್ತನೆಯ ಎಳೆಯ ವಯಸ್ಸಿಗೇ ಈತನಲ್ಲಿ ಕಿವುಡುತನ ಶುರುವಾಗಿಬಿಡುತ್ತದೆ. ಆದರೆ ಆ ನಂತರವೂ ಈತ ಒಬ್ಬ ಪ್ರಖ್ಯಾತ ಸಂಗೀತಗಾರನಾಗಿ ರೂಪುಗೊಂಡು ಜಗತ್ತಿನ ಇತರೆ ಸಂಗೀತ ದಿಗ್ಗಜರು ಮೂಗಿನ ಮೇಲೆ ಬೆರಳಿಡುವಂತಕ ರಚನೆಗಳನ್ನು ಮಾಡಿದ್ದು ಒಂದು ರೀತಿಯ ಪವಾಡ ಎನ್ನಿಸಿದರು ಅದರ ಹಿಂದಿನ ಸತ್ಯಗಳನ್ನು ಆತನ ಬಗೆಗಿನ ಪ್ರವಾಸೀ ಸ್ಥಳಗಳು ನಿಚ್ಚಳವಾಗಿ ತಿಳಿಸುತ್ತವೆ.ಸಣ್ಣ ಪುಟ್ಟ ಕಾರಣಗಳಿಗೆ ಹತಾಶರಾಗುವ ಮನಸ್ಸುಗಳನ್ನು ಅರಳಿಸಬಲ್ಲಂತ ಈತನ ಬದುಕು ಸಂಗೀತದಂತೆಯೇ ಪ್ರೇರಣೆ ನೀಡಬಲ್ಲ ಸ್ಪರ್ಶಮಣಿಯಾಗುತ್ತದೆ.

ಕಷ್ಟದ ಬಾಲ್ಯ, ಮಧ್ಯ ವ್ಯಸನಿ ತಂದೆ, ಈ ಕಾರಣ ನಲುಗಿದ್ದ ಕುಟುಂಬಕ್ಕೆ ಆರ್ಥಿಕ ನೆರವನ್ನು ಬಹುಕಾಲ ನೀಡಬೇಕಾದ ಅಗತ್ಯವನ್ನು ಹೊಂದಿದ ಬೀತೊವನ್ ಹರೆಯಕ್ಕೆ ಕಾಲಿಟ್ಟ ದಿನಗಳಿಂದಲೇ ಕಿವುಡುತನದಿಂದ ಬಳಲಿದ. ಸಾಮಾಜಿಕವಾಗಿ ಜನರ ಜೊತೆ ಬೆರೆಯಲಾಗದೆ ಒಳಗೊಳಗೇ ಕುಸಿದ. ತನ್ನ ರೂಪಿನ ಬಗ್ಗೆಯೂ ಇವನಲ್ಲಿ ಕೀಳಿರಿಮೆಗಳಿದ್ದವು.ಈತನ ಸೋದರ ಸಂಭಂದಿಯೊಬ್ಬನು ಬೀತೊವನ್ ನ ಮೇಲೆ ಬದುಕು ಪೂರ ದ್ವೇಷ ಸಾಧಿಸಿದ.ಒಬ್ಬ ಪ್ರತಿಭಾವಂತ ಯುವಕನ ಬದುಕು ಈ ಎಲ್ಲ ದುರಂತಗಳಲ್ಲಿ ಕೊಚ್ಚಿ ಹೋಗಬಹುದಾಗಿದ್ದರೂ ಎಲ್ಲದರಿಂದ ಬಿಡುಗಡೆಯೆಂಬಂತೆ ಬೀತೋವನ್ ಸಂಗೀತವನ್ನು ಸೃಷ್ಟಿಸಿದ.ಸಂಗೀತದ ಶಕ್ತಿಯೊಂದಿಗೆ ಎಲ್ಲಕ್ಕೂ ಎದುರಾಗಿ ಈಜಿ ಗೆದ್ದ.

ಹಾಗೆಂದು ಬೀತೋವನ್ ನ ಸಂಗೀತದಲ್ಲಿ ಆಕ್ರೋಶ ತುಂಬಿಲ್ಲ.ಬದಲು ರಮ್ಯತೆಯಿದೆ, ಪ್ರೀತಿಯಿದೆ, ವರ್ಣಿಸಲಾಗದ ಭಾವೋದ್ವೇಗಗಳಿವೆ,ತಂಗಾಳಿ-ಬಿರುಗಾಳಿಗಳಿವೆ.ಮೃದು  ಮತ್ತು ಬಲವಾದ ಪ್ರಹಾರಗಳ ಪ್ರಭಾವದ ಶಬ್ದಗಳಿವೆ. ಜಗತ್ತಿನ ಸಂಗೀತವನ್ನೇ ಅಲ್ಲೋಲ ಕಲ್ಲೋಲಗೊಳಿಸಿದ ಮಾಂತ್ರಿಕತೆಯಿದೆ. ಇವನ ಸಂಗೀತದ ರೋಮಾಂಚಕಾರೀ ಅಲೆಗಳು ಶ್ರೋತೃಗಳನ್ನು ಒಂದು ಮಾನಸಿಕ ಯಾನಕ್ಕೆ ಕರದೊಯ್ದುಬಿಡುತ್ತವೆ. 17-18 ನೆಯ ಶತಮಾನದ ಈತನ ಸಾಧನೆಗಳು ಸಂಗೀತ ಜಗತ್ತಿನ ಗಡಿರೇಖೆಯನ್ನು ಎಲ್ಲ ದಿಕ್ಕುಗಳಲ್ಲಿ ವಿಸ್ತರಿಸಿತು. ತಂದೆ-ತಾಯಿಯರ, ಅವನ ಸಂಗೀತ ಗುರುಗಳ ಅಪೇಕ್ಷೆಗಳನ್ನು ಮೀರಿ ಬೀತೊವನ್ ವಿಶ್ವ ವಿಖ್ಯಾತನಾದ.

(ಆತ ಬದುಕಿದ್ದಾಗಲೇ ರಚಿತಗೊಂಡ ಆತನ ಪ್ರತಿಕೃತಿ)

ಬೀತೊವನ್,ಒಬ್ಬಪ್ರಸಿದ್ದ ಸಂಗೀತ ಸಂಯೋಜಕ. ಸ್ವರಮೇಳಗಳನ್ನು, ಸಂಗೀತ ಕಛೇರಿಗಳ ರೂಪು ರೇಷೆಗಳನ್ನು, ಪಿಯಾನೊ, ವೈಯೊಲಿನ್, ಒಪೆರಾ ಸಂಯೋಜನೆಗಳನ್ನು, ಸಂಯುಕ್ತ ಸಿಂಫೊನಿಗಳನ್ನು ಸಮೃದ್ಧವಾಗಿ ರಚಿಸಿದವನು.ಸಂಗೀತ ಪ್ರಪಂಚದ ಹರವನ್ನು ಸವಿಸ್ತಾರಗೊಳಿಸಿದವನು.

ಅಂತಹ ಮಹತ್ವದ ಸಂಯೋಜಕನಾದ ಬೀತೊವನ್ ಆತನ ಕಾಲದವರೆಗೆ ಇದ್ದಂತಹ  ಸಮ ಸ್ಥಾಯಿತ್ವದ ಸಮತೋಲಿತ ಸಾಂಪ್ರದಾಯಿಕವಾದ ಸಂಗೀತದ ಎಲ್ಲ ಕಟ್ಟಳೆಗಳನ್ನು ಮುರಿದು ಭಾವನಾತ್ಮಕತೆಯ ತಾರಕವನ್ನು ಮುಟ್ಟುವ ಮತ್ತು ತಟ್ಟುವಂತ ರಮ್ಯ ಶೈಲಿಯ ಸಂಗೀತವನ್ನು ಸೃಷ್ಠಿಸಿದ.ಇದು ಸಂಗೀತ ಪ್ರಪಂಚದ ಸಾಧ್ಯತೆಗಳನ್ನು ಪ್ರಪಂಚದಾದ್ಯಂತ ಹಿಗ್ಗಲಿಸಿಬಿಟ್ಟಿತು. ನವ ನವೀನ ಸಂಗೀತವೆನಿಸಿತು. ಕಲಾವಿದನೊಬ್ಬನ ಅಂತರ್ಗತ ಹರಿವು ಆತನ ಹಲವು ಕೃತಿಗಳಲ್ಲಿ ಕಾಣುವಂತೆ ಬೀತೋವನ್ ನ ಸಂಗೀತದ ಲಹರಿಗಳು ಮನುಷ್ಯನ ಭಾವನೆಗಳೊಡನೆ ಸ್ಪಂದಿಸುತ್ತ ಹೊಸ ಅನುಭವವನ್ನು ಶ್ರೋತೃಗಳಿಗೆ ನೀಡಿದವು. ಅತ್ಯಂತ ಜನಪ್ರಿಯವಾದವು.

ಅವುಗಳ ಲಾಭ ನಮ್ಮ  ಭಾರತೀಯ ಸಂಗೀತ ಕ್ಷೇತ್ರ, ಸಿನಿಮಾ ಮತ್ತು ಸ್ವರ ವಾದ್ಯಗಳ ಬೆಳವಣಿಗೆಯ ಜೊತೆಯೂ ಬೆಸೆದುಕೊಂಡಿದೆ.

ಸಂಗೀತಗಾರರ  ಕನಸೆಂಬಂತೆ ಅಂದಿನ ಕಾಲದ ಅತ್ಯಂತ ಶ್ರೀಮಂತ ಶ್ರೋತೃಗಳಿಗೆ ಕೆಲಸಮಾಡಿದ ಬೀತೊವನ್ ಸಮಾಜದ ಸಾಧಾರಣ ಸಂಗೀತ ಪ್ರಿಯರಿಗೂ ಸಂಗೀತ ಕಛೇರಿಗಳನ್ನು ನಡೆಸಿ ಪ್ರಸಿದ್ದಿಯ ಉತ್ತುಂಗಕ್ಕೇರಿದ. ಒಟ್ಟು 9 ಸ್ವರಮೇಳಗಳನ್ನು, 32  ಪಿಯಾನೊ ಸೊನಟಗಳನ್ನು  , 1 ಒಪೆರ,  5 ಪಿಯಾನೊ ಸಂಗೀತ ಕಛೇರಿಗಳನ್ನು ಮತ್ತು ಹಲವಾರು ಪ್ರಪಂಚ ಕಂಡರಿಯದ ರೀತಿಯಲ್ಲಿ  ತಂತಿಯಲ್ಲಿ ನುಡಿಸಬಹುದಾದ ಚತುಷ್ಕಗಳನ್ನು (string quartets)ಈತ ತನ್ನ ಕಾಲದಲ್ಲಿ ರಚಿಸಿದ. ಇಂದಿನ ಎಲ್ಲ ಆಧುನಿಕ ಸಂಗೀತ ಸಂಯೋಜನಕಾರರು ಆರಾಧಿಸುವ ಮಟ್ಟದಲ್ಲಿಯೇ ಇಂದಿಗೂ ಬೀತೊವನ್ ನ ಸಂಗೀತ ಉಳಿದಿದೆ.

ಇಂತಹ ಜಗತ್ತಿನ ಮೇರು ಸಂಗೀತ ಸಾಮ್ರಾಟನ ಮನೆಯನ್ನು ನೋಡುವ ಅವಕಾಶ ಆಸ್ಟ್ರಿಯಾ ದೇಶದ ರಾಜಧಾನಿ ವಿಯೆನ್ನಗೆ ಹೋದಾಗ ನಮಗೆ ಒದಗಿಬಂತು.ಆತನ ಬದುಕಿನ ಬಗ್ಗೆಯೂ ಹೆಚ್ಚು ತಿಳಿದು ತಲೆಬಾಗಿ ವಂದಿಸುವಂತಾಯ್ತು.

(ಆತನ ಮುಖದ ಅಚ್ಚು)

ಬೀತೊವನ್ಜರ್ಮನಿಯ ಬಾನ್ ಎನ್ನುವ ನಗರದಲ್ಲಿ1770 ರಲ್ಲಿ ಹುಟ್ಟಿದ. ಏಳು ಜನ ಮಕ್ಕಳಲ್ಲಿ ಬೀತೊವನ್ ಎರಡನೆಯವನು.ಆದರೆ ಬಾಲ್ಯ ಕಳೆದು ಬದುಕುಳಿಯುವವರು ಇವನು ಮತ್ತು ಇನ್ನಿಬ್ಬರು ಗಂಡು ಮಕ್ಕಳು ಮಾತ್ರ. ಮಿಕ್ಕವರು ಹಲವು ಖಾಯಿಲೆಗಳಲ್ಲಿ ತೀರಿಹೋಗುತ್ತಾರೆ. ಈ ಸಂಸಾರದಲ್ಲಿ ಬಹಳಷ್ಟು ಬಿರುಕುಗಳು, ಬಡತನ ಮತ್ತು ಸಾವು-ನೋವುಗಳಿದ್ದ ಕಾರಣ ಸುಖವಿರುವುದಿಲ್ಲ.

ಬೀತೊವನ್ ನ ಮನೆಯವರು ಸಂಗೀತದಲ್ಲಿ ತೊಡಗಿಸಿಕೊಂಡಿದ್ದವರು.ಬೀತೋವನ್ ನ ತಂದೆಯೇ ಆತನ ಮೊದಲ ಸಂಗೀತ ಗುರು. ಅವನ ಸಂಗೀತ ಪಾಠಗಳು ಬೀತೊವನ್ ಕೇವಲ ಐದು ವರ್ಷಗಳಿರುವಾಗಲೇ ಶುರುವಾದವು. ಕಠಿಣ ಶಿಸ್ತಿನ ತಂದೆಯೊಡನೆ ಬೀತೊವನ್ ನ ಬಾಲ್ಯ ಕಳೆದ ನಂತರ, ಜರ್ಮನಿಯಲ್ಲೇ ಒಬ್ಬಿಬ್ಬರು ಗುರುಗಳೊಡನೆ ಅಭ್ಯಾಸ ನಡೆಯಿತು.ಆದರೆ, ಮನೆಯವರೂ ಸೇರಿದಂತೆ ಬೀತೊವನ್ ನ ಸಂಗೀತದ  ಪ್ರತಿಭೆಯ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಹೀಗಾಗಿ  1792 ರಲ್ಲಿ ಶ್ರೀಮಂತ  ಸಾಂಸ್ಕೃತಿಕ ಕೇಂದ್ರವಾಗಿದ್ದ ವಿಯೆನ್ನಾಗೆ ಅವನನ್ನು ಕಳಿಸಲಾಯಿತು. ಆ ಕಾಲದಲ್ಲಿ ಇಡೀ ಯೂರೋಪಿನಲ್ಲೇ ಅತ್ಯಂತ ಪ್ರಸಿದ್ದನಾದ  ಜೋಸೆಫ್ ಹೇಡಿನ್ ಎಂಬ ಸಂಗೀತ ಗುರುವಿನೊಂದಿಗೆ  ಬೀತೋವನ್ ನ  ಸಂಗೀತಾಧ್ಯಯನ ಶುರುವಾಯಿತು.

ಇಲ್ಲಿಂದ ಮುಂದಕ್ಕೆ ವಿಯೆನ್ನ ಆತನ ಕರ್ಮ ಭೂಮಿಯೆನಿಸಿತು. ಅತ್ಯಂತ ಪ್ರಖರ ಪ್ರತಿಭೆಯ ಬೀತೊವನ್ ಗೆ ಅತಿ ಬೇಗನೆ ವಿಯೆನ್ನದಲ್ಲಿ ಉತ್ತಮ ಸಂಗೀತ ಜೀವನವನ್ನು ಹೊಂದಲು ಸಾಧ್ಯವಾಯ್ತು. ಬೀತೋವನ್ ಕ್ರಮೇಣ ತನ್ನ ಗುರುವಿಗಿಂತಲು ಹೆಚ್ಚಿನ ಪ್ರಸಿದ್ಧಿಯನ್ನು ಗಳಿಸಿದ.ಆದರೆ ವಿಧಿಯ ಬರಹದಲ್ಲಿ ಮತ್ತೂ ಕೆಲವು ಮಹತ್ತರ ಅಡಚಣೆಗಳಿದ್ದವು.ಕೇವಲ ಇಪ್ಪತ್ತರ ಹರೆಯದಲ್ಲಿದ್ದಾಗಲೇ (1798 ರ ವೇಳೆಗೆ) ಆತನಿಗೆ ಕಿವುಡುತನ ಶುರುವಾಯಿತು.

ಕಿವಿಗೆ ಸ್ವರಗಳು ಕೇಳಿಸದಿದ್ದರೂ, ಮನಸ್ಸಿನಲ್ಲೇ ಅವುಗಳನ್ನು ಕೇಳುತ್ತ ಹೊಸ ಹೊಸ ಸಂಯೋಜನೆಗಳನ್ನು ಮಾಡುತ್ತಿದ್ದ ಬಿತೋವನ್ ಸಂಗೀತದ ಕೆಲಸವನ್ನು ಮುಂದುವರೆಸಿದರೂ  ಸಾಮಾಜಿಕವಾಗಿ ಜನರೊಡನೆ ಬೆರೆಯುವುದುಕಿವುಡುತನದ ಕಾರಣ ಕಷ್ಟವಾಗುತ್ತ ಹೋಯಿತು.ಆತನ ಒಂಭತ್ತನೆಯ ಸಾರ್ವಜನಿಕ  ಸ್ವರ ಮೇಳದ ಸಂಗೀತ ಕಚೇರಿ ಮುಗಿದಾಗ ಜನರ ಘಡಚಿಕ್ಕುವ ಚಪ್ಪಾಳೆ ಶ್ರೋತೃಗಳಿಗೆ ಬೆನ್ನು ಹಾಕಿ  ನಿಂತು ಸಂಗೀತ ನಿರ್ವಹಣೆ ಮಾಡುತ್ತಿದ್ದ  ಬೀತೊವನ್ ಗೆ ಕೇಳಲೇ ಇಲ್ಲವೆಂದು ಹೇಳಲಾಗಿದೆ. ಅವನನ್ನು ದೈಹಿಕವಾಗಿ ತಿರುಗಿಸಿ ನಿಲ್ಲಿಸಿ, ಎದ್ದು ನಿಂತು ಚಪ್ಪಾಳೆಯ ಸುರಿಮಳೆ ಗೈಯುತ್ತಿದ್ದ ಜನರ ಪ್ರತಿಕ್ರಿಯೆಯನ್ನು ತೋರಿಸಲಾಯ್ತಂತೆ! ಈ ಕಾರಣ  ಆತ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು 1814 ರ ವರೆಗೆ ಮಾತ್ರ.ಅದರೊಂದಿಗೆಬದುಕು ಆತನಲ್ಲಿ ಬತ್ತದ ಅಸಮಾಧಾನವನ್ನು ಸೃಷ್ಟಿಸಿಬಿಟ್ಟಿತು.ಮುಂದೆ ಅವನ ಜೊತೆ ಮಾತಾಡುವವರೆಲ್ಲ ಕಾಗದದ ಮೇಲೆ ಬರೆದು ತೋರಿಸಬೇಕಿತ್ತು.ಆತ ಹೆಚ್ಚು ,ಹೆಚ್ಚು ಒಂಟಿಯಾಗತೊಡಗಿದ.

ಆದರೆ ಕಿವುಡನಾದ ನಂತರ ಆತ ರಚಿಸಿದ ಅವನ ಸಂಗೀತ ರಚನೆಗಳು ಅವನನ್ನು ಮತ್ತೂ ಪ್ರಸಿದ್ಧಗೊಳಿಸಿದವು. ಅತ್ಯಂತ ಶ್ರೀಮಂತರು, ವಿಚಾರವಂತರು, ಪ್ರಸಿದ್ದರು ಇವನು ಸಂಯೋಜಿಸಿದ ಸಂಗೀತವನ್ನು ಇನ್ನಿಲ್ಲದಂತೆ ಆಸ್ವಾದಿಸಿದರು. ಬದುಕಿರುವಾಗಲೇ ಆತ ಅತ್ಯಂತ ಪ್ರಸಿದ್ಧನಾದ.ಆ ಕಾಲದ ಚಕ್ರವರ್ತಿಣಿಯನ್ನು ಕೂಡ ಶೋತೃವನ್ನಾಗಿ ಪಡೆದಿದ್ದ.ಹಲವು ಗೌರವಗಳಿಗೆ ಭಾಜನನಾದ. ಹಲವು ಪ್ರತಿಷ್ಠಿತ ಗೆಳೆಯರನ್ನು ಸಂಪಾದಿಸಿದ. ಇವರಲ್ಲಿ ’ ಬ್ಯಾರನ್ ’ ಎಂಬ ಗೌರವ ಗಳಿಸಿದ್ದ  ಜೋಸೆಪ್ ಬೆನೆಡಿಕ್ಟ್ ವಾನ್ ಪಾಸ್ಕ್ವಲಾಟಿ ಎಂಬ ವೈದ್ಯನೂ ಇದ್ದ.

ಬೀತೊವನ್ ಮನೆಗಳನ್ನು ಬಹುಬಾರಿ ಬದಲಿಸುತ್ತಿದ್ದ. ಆದರೆ ವಿಯೆನ್ನ ನಗರದಲ್ಲಿ  ಅವನ ಗೆಳೆಯನೇ ಆದ ಈ ವೈದ್ಯನ ಮನೆಯನ್ನು ಬೀತೋವನ್ ಬಾಡಿಗೆ ಹಿಡಿದು ಬದುಕಿದ್ದ. ವಿಯೆನ್ನದಲ್ಲಿ ಬೀತೋವನ್ ಬದುಕಿದ್ದ ಮನೆಯನ್ನು ಇಂದಿಗೂ ’ ಪಾಸ್ಕ್ವಲಾಟಿ ಹೌಸ್ ’ ಎಂದೇ ಕರೆಯುತ್ತಾರೆ. ಈ ವೈದ್ಯ ಮತ್ತವನ ಸಂಸಾರ, ಬೀತೊವನ್ ಬೇರೆಡೆ ತಿರುಗುವಾಗ ಮತ್ತು ಕೆಲವರ್ಷ ಬೇರೆಡೆ ಸ್ಥಳಾಂತರಗೊಂಡಾಗ ಬಾಡಿಗ ಇಲ್ಲದಿದ್ದರುಈ ಮನೆಯನ್ನು ಅವನಿಗಾಗಿಯೇ ಕಾದಿರಿಸುತ್ತಿದ್ದರಂತೆ.

(ಪಾಸ್ಕ್ವಲಾಟಿ ಮನೆ)

 ವಿಯೆನ್ನಾ ನಗರದ ಮುಖ್ಯ ರಸ್ತೆಗೆ ಹತ್ತಿರದಲ್ಲೇ ಇರುವ ಒಂದು ಸಣ್ಣ ಓಣಿಯಲ್ಲಿ ಈ ಮನೆಯಿದೆ. ಇದಕ್ಕೆ ಪ್ರವೇಶ ಶುಲ್ಕವೂ ಇದೆ. ನಾಲ್ಕನೆಯ ಅಂತಸ್ತಿನವರೆಗೆ ಕಿರಿದಾದ ಮತ್ತು ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಹೋಗಿ ಮನೆಯನ್ನು ಪ್ರವೇಶಿಸಬೇಕಾಗುತ್ತದೆ. ಕುಳ್ಳಗಿನ ದ್ವಾರಗಳ ಈ ಮನೆ ಒಳಗಡೆ ಆಶ್ಚರ್ಯಕರವಾಗಿ ದೊಡ್ಡದಾಗಿದೆ.

ಪ್ರಪಂಚದಲ್ಲೇ ಪ್ರಸಿದ್ಧನಾಗಿದ್ದ ಅದ್ಭುತ ಪ್ರತಿಭೆಯ ಬೀತೋವನ್ ಇಲ್ಲಿ ಬದುಕಿದ್ದ ಎಂದು ನೆನೆದು ಗೌರವಿಸುತ್ತ ಅವನು ಓಡಾಡಿದ ಅದೇ ನೆಲದ ಮೇಲೆ ಹೆಜ್ಜೆಯಿಟ್ಟು ಕೋಣೆಗಳನ್ನು ನಿಶ್ಯಬ್ದವಾಗಿ ಸುತ್ತುವಾಗ ಮೈ ಮೇಲಿನ ಕೂದಲುಗಳು ನಿಮಿರುತ್ತವೆ. ಇಂತಹ ಅದ್ಭುತ ಪ್ರತಿಭಾವಂತನ ಜೀವನದಲ್ಲಿ ಇದ್ದ ಕೆಲವು ಸಾಮಾನ್ಯ ಕೊರತೆಗಳು, ಇಪ್ಪತ್ತು ವರ್ಷಗಳ ನಂತರ ಬರುವ ಶಾಶ್ವತ ಕಿವುಡುತನ, ನೋಡಲುಅಷ್ಟೇನೂ ಚೆನ್ನಾಗಿಲ್ಲದ ಕಾರಣ ದೊರೆಯದೇ ಹೋದ ಪ್ರೀತಿ ಈ ಪ್ರತಿಭಾವಂತನ  ಮನಸ್ಸಿನಲ್ಲಿ ಉಳಿಸಿಬಿಡುವ ವೇದನೆಗಳನ್ನು ಓದುತ್ತ ಹೋದಂತೆ ಮನಸ್ಸು ಕದಡಿಹೋಗುತ್ತದೆ.

ಬೀತೊವನ್ ಗಂಟು ಮುಖದವನಾಗಿದ್ದನಂತೆ. ಬರೇ ಐದಡಿ ನಾಲ್ಕಿಂಚು ಎತ್ತರದ, ದೊಡ್ಡ ಬಲಿಷ್ಠ ಕೆಳದವಡೆಯ, ಚಪ್ಪಟೆ ಮೂಗಿನ, ಪೊದೆಯಂತ ಹುಬ್ಬಿನ, ದೊಡ್ಡ ಹಣೆಯ, ದಟ್ಟ ಕೂದಲಿನ ಈ ಹುಡುಗನ ತುಟಿಯ ಕೊನೆಗಳು ಸದಾ ಕೆಳಗೆ ಬಾಗಿದ್ದು, ಅದು ಅವನಿಗೆ ಸಪ್ಪೆ ರೂಪಿನ ಮುಖವನ್ನು ನೀಡಿತ್ತೆನ್ನಲಾಗಿದೆ. ಆ ಬಗ್ಗೆ ಆತನಲ್ಲಿ ಕೀಳಿರಿಮೆಯಿದ್ದರೂ ಅದು ಆತನ ಸಾಧನೆಗಳಿಗೆ ಅಡ್ಡಿಯಾಗಲಿಲ್ಲ ಎನ್ನುವುದು ಆತನ ಸಂಗೀತದ ಬಗೆಗಿನ ನಿಷ್ಠ ನಿಲುವನ್ನು ಬಿಂಬಿಸುತ್ತದೆ.

ಬೀತೊವನ್ ನ ಅಗಾಧ ಪ್ರಸಿದ್ಧಿಯನ್ನು ಗಮನಿಸಿದ ಪಿಯಾನೊಗಳನ್ನು ತಯಾರಿಸುತ್ತಿದ್ದ ಜೊಹಾನ್ ಆಂಡ್ರಿಯಸ್ ಸ್ಟ್ರೀಕರ್ ಎನ್ನುವಾತ 1812 ರಲ್ಲಿ ಈತನ  ಎದೆಯವರೆಗಿನ ಪುತ್ಥಳಿಯೊಂದನ್ನು ನಿರ್ಮಿಸಲು ಮುಂದಾದ.ಬೀತೊವನ್ ಗೆ 42 ವರ್ಷ ವಯಸ್ಸಾಗಿದ್ದಾಗ ಈ ಕಾರ್ಯ ಶುರುವಾಯಿತು.ಮೊದಲಿಗೆ ಅವನ ಮುಖದ ಕರಾರುವಕ್ಕಾದ ಒಂದು ಪ್ರಿಂಟ್ ಬೇಕಿತ್ತು. ಅದನ್ನು ಬಳಸಿ ಜೀವಂತವಾಗಿ  ಕಾಣುವ ಲೋಹದ ಪುತ್ಥಳಿಯನ್ನು ನಿರ್ಮಿಸುವ ಯೋಜನೆಯದು.

ಫ್ರಾನ್ಸ್ ಕ್ಲೇಯ್ನ್  ಎನ್ನುವ ವ್ಯಕ್ತಿಯನ್ನು ಇದಕ್ಕೆಂದು ನಿಯಮಿಸಲಾಯಿತು. ಆತ ಬೀತೊವನ್ ನ ಮೂಗಿನ ಹೊರಳೆಗಳಿಗೆ ಪೈಪುಗಳನ್ನು ಇಟ್ಟು ಉಸಿರಾಡಲು ಅವಕಾಶ ನೀಡಿ ಅವನ ಮುಖದ ಮೇಲೆ ಪ್ಲಾಸ್ಟರ್ ಆಫ್ ಪ್ಯಾರಿಸ್ಸಿನ್ನು ಬಳಸಿ ಒಂದು ಮುದ್ರೆಯನ್ನು ತೆಗೆಯಲು ಪ್ರಯತ್ನಿಸಿದ. ಮೊದಲ ಪ್ರಯತ್ನದಲ್ಲಿ ಅವನು ಉಸಿರಾಡಲು ತೊಂದರೆಯಾಗಿ ಆ ಕಾರ್ಯವನ್ನು ನಿಲ್ಲಿಸಬೇಕಾಯಿತು. ಆದರೆ ಮತ್ತೆ ಮತ್ತೆ ಪ್ರಯತ್ನಿಸಿ ಕೊನೆಗೆ ಯಶಸ್ವಿಯಾದರಂತೆ.ಆ ರೀತಿ ತಯಾರಾದ ಮಾಸ್ಕ್ ನ್ನು ಪ್ರದರ್ಶನದಲ್ಲಿಟ್ಟಿದ್ದಾರೆ. ಇದರ ಆಧಾರದ ಮೇಲೆ ಆಂಟಾನ್ ಡೀಟ್ರಿಕ್ ಮತ್ತು ಕ್ಯಾಸ್ಪರ್ ವಾನ್ ಝೂಂಬುಶ್ ಎನ್ನುವ ಶಿಲ್ಪಿಗಳುನಿರ್ಮಿಸಿದ ಲೋಹದ ಪುತ್ಥಳಿಯನ್ನೂ ಪ್ರದರ್ಶನಕ್ಕಿಟ್ಟಿದ್ದಾರೆ.

ಆತನ ಜೀವನವನ್ನು ಅರಿಯಲು ಬೇಕಾದ ವಿವಿಧ ಮಾಹಿತಿಗಳು, ಸಾಕ್ಷಿ- ಆಧಾರಗಳು, ಆತನ ಚಿತ್ರಗಳು , ಅವನ ಮ್ಯೂಸಿಕ್ ಬರೆದ ಹಾಳೆಗಳು, ಕೆಲವು ವಾದ್ಯಗಳು ಎಲ್ಲವನ್ನೂ ಇಲ್ಲಿ ಅಚ್ಚು ಕಟ್ಟಾಗಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಬೀತೊವನ್ ಮಾತನಾಡುತ್ತಿದ್ದುದು ಅತಿ ಕಡಿಮೆ. ತನ್ನ ಕಿವುಡುತನದ ಬಗ್ಗೆ ತನ್ನ ಸಹೋದರನಿಗೆ ಬರೆದ ಎರಡು ಪತ್ರಗಳು (ಹೆಗೆನ್ ಸ್ಟಡ್ ಟೆಸ್ಟಮೆಂಟ್  -1802) ಮತ್ತುದಕ್ಕದ ಅಮರ ಪ್ರೇಯಸಿಗೆ ಬರೆದ ಆದರೆ ಅಂಚೆಗೆ ಹಾಕದೆ ತನ್ನಲ್ಲೇ ಇಟ್ಟುಕೊಂಡ ಹತ್ತು ಪುಟಗಳ ಪ್ರೇಮ ಪತ್ರ ‘ (ಇಮ್ಮಾರ್ಟಲ್ ಲವ್ 1812) ದೊರಕಿದ್ದು ಅವುಗಳನ್ನು ರಕ್ಷಿಸಿಡಲಾಗಿದೆ. ಅವನ್ನು ಆತನ ಕರಾರುವಕ್ಕಾದ ಭಾವನೆಗಳನ್ನು ಬಿಂಬಿಸಲು ಪ್ರದರ್ಶನಕ್ಕಿಡಲಾಗಿದೆ. ಎರಡರಲ್ಲೂ ಅವನ ಬದುಕಿನ ಹಲವು ಅಸಾಮಾಧಾನಗಳನ್ನು, ನೋವುಗಳನ್ನು ಮನಮುಟ್ಟುವಂತೆ ಬೀತೊವನ್ ಹಂಚಿಕೊಂಡಿದ್ದಾನೆ.

(ಆತ ಬಳಸುತ್ತಿದ್ದ ಸಂಗೀತದ ಸ್ಟಾಂಡ್)

ಈತನ ಬದುಕಿನ ಪ್ರೇಮವೂ ಒಂದು ದುರಂತ ಕಾವ್ಯ.ಇವನನ್ನು ಇಷ್ಟ ಪಡುತ್ತಿದ್ದ ಜೋಸೆಫಿನ್ ಡೀಮ್ ಎನ್ನುವವಳನ್ನು ಬೀತೊವನ್ ಗಾಢವಾಗಿ ಪ್ರೀತಿಸಿದ. ಆದರೆ ಅವಳುಹಂಗೇರಿಯನ್ ರಾಜಮನೆತನದವಳು.ಅವಳಿಗೆ ಪಿಯಾನೋ ಕಲಿಸಲು ಪ್ರಖ್ಯಾತನಾಗಿದ್ದ ಬೀತೋವನ್ ನನ್ನೇ ನೇಮಿಸಿಕೊಳ್ಳವಷ್ಟು ಅವಳ ಮನೆತನದವರು ಸಿರಿವಂತರು. ಹಾಗಾಗಿ ಸಾಮಾನ್ಯನಾಗಿದ್ದ ಬೀತೊವನ್ ನನ್ನು ಮದುವೆಯಾಗದೆ ಆಕೆತನ್ನಂತದೇ ಪ್ರತಿಷ್ಠಿತ ಮನೆತನದ ಕೌಂಟನನ್ನೇ ಮದುವೆಯಾಗಬೇಕಾಗುತ್ತದೆ.

ಅವಳಿಗೆ ಮದುವೆಯಾಗಿ ನಾಲ್ಕು ಮಕ್ಕಳಾದ ನಂತರ ಜೋಸೆಫಿನ್ ಳ ಗಂಡ ಯಾವುದೋ ಕಾರಣಕ್ಕೆ ತಟ್ಟನೆ ಸಾಯುತ್ತಾನೆ. ನಂತರ ಇವರಿಬ್ಬರ ಹಳೆಯ ಪ್ರೀತಿ ಮತ್ತೂ ಗಾಢವಾಗುತ್ತದೆ. ಆದರೆ ಅವಳಿಗಾಗಲೇ ಮಕ್ಕಳಿದ್ದ ಕಾರಣವನ್ನು ಮುಂದೊಡ್ಡಿ ಬೀತೊವನ್ ನನ್ನು ಮದುವೆಯಾಗಲು ಆಕೆ ನಿರಾಕರಿಸುತ್ತಾಳೆ.ಆದರೆ ಸ್ವಲ್ಪ ಸಮಯದ ನಂತರ ಮತ್ತೊಬ್ಬ ರಾಜಮನೆತನದ, ’ ಬ್ಯಾರನ್ ’ ಎಂಬ ಗೌರವ ಹೊತ್ತ  ಕ್ರಿಸ್ಟಾಫ್ ವಾನ್ ಸ್ಟ್ಯಾಕ್ಬರ್ಗ್  ಎಂಬ ವ್ಯಕ್ತಿಯನ್ನು 1810 ರಲ್ಲಿ ಮದುವೆಯಾಗುತ್ತಾಳೆ.

 ಬೀತೊವನ್ ನ ಪ್ರಸಿದ್ಧ ಪ್ರೇಮ ಪತ್ರದಲ್ಲಿ ’ ಜೆ ’ ಎಂದು ಅವನು ಸಂಭೋದಿಸಿರುವ ಹೆಣ್ಣು ಇವಳೇ ಎಂದು ಅಧ್ಯಯನಕಾರರು ನಂಬುತ್ತಾರೆ. ಬೀತೊವನ್ ನ ಪ್ರೇಮ ಸಾಮ್ರಾಜ್ಯದಲ್ಲಿ ಆತ ಸಾಯುವ ತನಕ ಈಕೆಯೊಬ್ಬಳೇ ಕಂಡುಬರುತ್ತಾಳೆ.

ಬೀತೊವನ್ ತನ್ನ ಸಂಗೀತವನ್ನು ಬರೆದು, ಒಡೆದುಹಾಕಿ, ಸರಿಪಡಿಸಿ, ತಿದ್ದಿ-ತೀಡಿದ್ದ ಪುಸ್ತಕದ ಹಲವು ಹಾಳೆಗಳು ಬೀತೊವನ್ ಮನೆಯಲ್ಲಿ ಪ್ರದರ್ಶನಕ್ಕಿವೆ.  ಅವನ ಮರಣದ ನಂತರ ಆತನ ಇಂತಹ ಪುಸ್ತಕಗಳನ್ನು ಹರಾಜಿನಲ್ಲಿ ಕೂಗಿ ಮಾರಾಟ ಮಾಡಲಾಯಿತು. ಈತನಜನ್ಮಭೂಮಿ ಜರ್ಮನಿಯ ಬಾನ್ ಎನ್ನುವ ನಗರದಲ್ಲಿ ಕೂಡ ಈತನ ಹುಟ್ಟು ಮನೆಯನ್ನು ಬೀತೊವನ್ ಸ್ಮರಣಾರ್ಥ ಮ್ಯೂಸಿಯಂ ಮಾಡಲಾಗಿದೆ.

(ಆತನ ಕೈ ಬರಹದ ಪ್ರೇಮಪತ್ರ)

ಆ ಕಾಲದಲ್ಲಿ ವಿಯೆನ್ನಾದ ಶ್ರೀಮಂತ ರಾಜಮನೆತನದ ಪ್ರಭಾವ ಎಲ್ಲ ವಿಚಾರಗಳಲ್ಲಿ ಗಾಢವಾಗಿತ್ತು.  1808 ರಲ್ಲಿ ಬೊನಪಾಟ್ರ ನೆಪೋಲಿಯನ್ ನ ಸಹೋದರ ಜೊರೊಮಿ ಬೊನಪಾಟ್ರ ಬೀತೊವನ್ ನನ್ನು ನೆಪೋಲಿಯನ್ ಸಾಮ್ರಾಜ್ಯದಲ್ಲಿ ಆಸ್ಥಾನ ಸಂಗೀತನಾಗಲು ಕರೆನೀಡಿದ. ಆದರೆ 1809 ರಲ್ಲಿ ವಿಯೆನ್ನದ ಲಾಬ್ಕೊವಿಟ್, ಕ್ಲಿನ್ಸ್ಕಿ ಎಂಬ ಇಬ್ಬರು ರಾಜರು ಇದನ್ನು ತಡೆದು ವರ್ಷಕ್ಕೆ 4000 ಗಿಲ್ಡರ್ಸ್ ಸಂಬಳವನ್ನು ತಾವೇ ನೀಡುವುದಾಗಿ ಅವನನ್ನು ಒಪ್ಪಿಸಿ ವಿಯೆನ್ನದಲ್ಲೇ ಉಳಿಸಿಕೊಂಡರಂತೆ. ಜರ್ಮನಿಯ ಬಾನ್ ನಗರದಲ್ಲಿ ಹುಟ್ಟಿ, ಪ್ರಪಂಚದ ಹಲವೆಡೆ ಸುತ್ತಿ ಕಾರ್ಯಕ್ರಮಗಳಿಗೆ ರೂಪು ರೇಷೆ ರಚಿಸಿದರೂ ಸಾಯುವವರೆಗೆ ಅಂದರೆ 36 ವರ್ಷಗಳ ಕಾಲಆತ ಆಸ್ಟ್ರಿಯಾ ದೇಶದ  ವಿಯೆನ್ನ ನಗರದಲ್ಲಿಯೇ ಉಳಿದ.56 ವರ್ಷದವನಿರುವಾಗ ಅಂದರೆ1827 ರಲ್ಲಿ ಈತ ಖಾಯಿಲೆ ಬಿದ್ದು ಅಲ್ಲಿಯೇ ಮರಣಹೊಂದಿದ. ಈ ಕಾರಣಬೀತೋವನ್ ನನ್ನು ಆಸ್ಟ್ರಿಯಾ ದೇಶ ತನ್ನ ಆಸ್ತಿಯನ್ನಾಗಿಯೇ ನೋಡುತ್ತದೆ.ಆತನ ಸಮಾಧಿಯೂ ವಿಯೆನ್ನದಲ್ಲಿಯೇ ಇದೆ.

ಸಾಹಿತ್ಯಕ್ಕಷ್ಟೆ ಭಾಷೆಯ ಅಗತ್ಯವಿದೆ. ಸಂಗೀತಕ್ಕೆ ಭಾಷೆಯಿಲ್ಲ. ಸ್ವರಗಳ ಏರಿಳಿತಗಳು ಮನಸ್ಸಿನ ಜೋಕಾಲಿಯನ್ನು ತೂಗುವ ಮೂಲಕ ತಲುಪಬಲ್ಲ ಸಂವೇದನೆಯಾದ ಕಾರಣ ಈತನ ಸಂಗೀತ ಇಡೀ ಪ್ರಪಂಚದ ಸಂಗೀತ ನಕ್ಷೆಯನ್ನು ಬದಲಾಯಿಸಿತು.ಇಂದು ನಾವು ಕೇಳುವ ಹಲವು ಬಗೆಯ ಜನಪ್ರಿಯ ಸಂಗೀತದಲ್ಲಿ ಬಳಸುವ ಹಲವುಬಗೆಯ ಪಾಶ್ಚಾತ್ಯ ಸಂಗೀತ ಸ್ವರ ಸಂಯೋಜನೆಗಳಲ್ಲಿ ಮತ್ತು ಸ್ವರಮೇಳಗಳಲ್ಲಿ ಇವನ ಛಾಪಿದೆ.

ವಿಯೆನ್ನಾ ಪ್ರವಾಸದಲ್ಲಿ ಇದನ್ನೆಲ್ಲ ಅರಿತ ನಂತರ, ಈತನ ವ್ಯಕ್ತಿತ್ವ ಮತ್ತು ಬದುಕಿನ ಜಲಕುಗಳು ಮನಸ್ಸಿನಲ್ಲಿ ಗಾಢವಾಗಿ ಉಳಿದುಬಿಟ್ಟಿವೆ.

———————————ಡಾ.ಪ್ರೇಮಲತ ಬಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter