ಕಾದಂಬರಿ ಸಾರ್ವಭೌಮರೆಂದೇ ಖ್ಯಾತರಾದ ಅ.ನ.ಕೃಷ್ಣರಾಯರು ನೂರಕ್ಕೂ ಅಧಿಕ ಕಾದಂಬರಿಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಪ್ರಗತಿಶೀಲ ಚಳುವಳಿಯ ಮೂಲಕ ಸಾಮಾನ್ಯ ಜನರ ಬಳಿಗೆ ಸಾಹಿತ್ಯವನ್ನು ಕೊಂಡೊಯ್ದ ಶ್ರೇಯಸ್ಸು ಅ.ನ.ಕೃ. ಅವರಿಗೆ ಸಲ್ಲುತ್ತದೆ. ಅ.ನ.ಕೃ. ಅವರ ನೂರಾರು ಜನಪ್ರಿಯ ಕಾದಂಬರಿಗಳು ಕನ್ನಡದಲ್ಲಿ ಹೊಸ ಓದುಗ ವರ್ಗವನ್ನೇ ಹುಟ್ಟು ಹಾಕಿ ಕನ್ನಡಿಗರಲ್ಲಿ ಓದುವ ಅಭಿರುಚಿಯನ್ನು ಬೆಳೆಸಿದ್ದು ಈಗ ಇತಿಹಾಸ.
ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಬಗ್ಗೆ ಅಪಾರ ಪ್ರೀತ್ಯಾದರ ಹೊಂದಿದ್ದ ಅ.ನ.ಕೃ. ಹಗಲಿರುಳು ಕನ್ನಡದ ಏಳಿಗೆಗಾಗಿ ದುಡಿದಿದ್ದಾರೆ. ಕನ್ನಡದ ಅತ್ಯುತ್ತಮ ಲೇಖಕರಾದ ಅ.ನ.ಕೃ. ಅದ್ಭುತ ವಾಗ್ಮಿಯೂ ಆಗಿದ್ದರು. ಅವರು ನಮ್ಮ ನಾಡಿನ ಭಾಷೆ, ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ಸಾಹಿತ್ಯದ ಕುರಿತು ಕೇಳುಗರ ಮನಮುಟ್ಟುವಂತೆ ನಿರರ್ಗಳವಾಗಿ ಗಂಟೆಗಟ್ಟಲೇ ಮಾತನಾಡಬಲ್ಲವರಾಗಿದ್ದರು. ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ತಮ್ಮ ಪ್ರಭಾವಶಾಲಿ ಬರಹ ಮತ್ತು ಭಾಷಣಗಳಿಂದ ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದರು. ಬೆಂಗಳೂರಲ್ಲಿ ತಮಿಳು, ತೆಲುಗರ ಹಾವಳಿಯಿಂದ ಸೊರಗಿ ಹೋಗುತ್ತಿದ್ದ ಕನ್ನಡಕ್ಕೆ ಹೊಸ ಕಾಯಕಲ್ಪ ನೀಡಿ ಕನ್ನಡಕ್ಕೊಂದು ಭದ್ರವಾದ ನೆಲೆ ಸಿಗುವಂತೆ ಮಾಡುವಲ್ಲಿ ಅ.ನ.ಕೃ. ಅವರ ಅಪಾರ ಕೊಡುಗೆಯಿದೆ. ಇಂದು ಕನ್ನಡ ಮತ್ತು ಕರ್ನಾಟಕ ಏನಾಗಿದೆಯೋ ಅದರ ಹಿಂದೆ ಅ.ನ.ಕೃ. ಅವರಂತಹ ಕೆಚ್ಚೆದೆಯ ಕನ್ನಡಿಗರ ಶ್ರಮವಿದೆ.
ಕನ್ನಡ ಕಥನ ಸಾಹಿತ್ಯದ ದಿಗ್ಗಜರಾದ ಅ.ನ.ಕೃ. ಅವರು ಎಪ್ಪತ್ತಕ್ಕೂ ಅಧಿಕ ಕಥೆಗಳನ್ನು ಬರೆದಿದ್ದಾರೆ. “ಮಿಂಚು”, “ಕಿಡಿ”, “ಪಾಪ ಪುಣ್ಯ”, “ಕಣ್ಣುಮುಚ್ಚಾಲೆ”, “ಕಾಮನ ಸೋಲು”, “ಅಗ್ನಿಕನ್ಯೆ”, “ಶಿಲ್ಪಿ” ಮತ್ತು “ಸಮರ ಸುಂದರಿ” ಅವರ ಪ್ರಮುಖ ಕಥಾಸಂಕಲನಗಳು. ಅ.ನ.ಕೃ. ಅವರು ಇಷ್ಟೆಲ್ಲ ವೈವಿಧ್ಯಮಯ ಮತ್ತು ಪ್ರಯೋಗಶೀಲ ಕಥೆಗಳನ್ನು ಬರೆದಿದ್ದರೂ ಸಹ ಸಾಹಿತ್ಯ ವಲಯದಲ್ಲಿ ಅವರ ಕಾದಂಬರಿಗಳ ಕುರಿತು ನಡೆದಷ್ಟು ಚರ್ಚೆ ಅವರ ಕಥೆಗಳ ಕುರಿತು ನಡೆದಿಲ್ಲ.
1947ರಲ್ಲಿ ಪ್ರಥಮ ಮುದ್ರಣ ಕಂಡ “ಅಗ್ನಿಕನ್ಯೆ”* ಕಥಾಸಂಕಲನ ಅ.ನ.ಕೃ. ಅವರ ಪ್ರಾತಿನಿಧಿಕ ಕಥೆಗಳು ಎನ್ನಬಹುದಾದ “ಅನ್ನದ ಕೂಗು”, “ಅಗ್ನಿಕನ್ಯೆ”, “ಗಿರಿಜವ್ವನ ರೊಟ್ಟಿ”, “ಮೃತ್ಯುಶಾಂತಿ” ಮತ್ತು “ಮಧುರ ಸ್ವಪ್ನ” ಸೇರಿದಂತೆ ಒಟ್ಟು ಒಂಬತ್ತು ಕಥೆಗಳನ್ನು ಒಳಗೊಂಡಿದೆ.
ಅ.ನ.ಕೃ. ಅವರು ತಮ್ಮ ಕಥೆ – ಕಾದಂಬರಿಗಳ ಆರಂಭದಲ್ಲೇ ಮುನ್ನುಡಿಯ ರೂಪದಲ್ಲಿ ಕೃತಿಯ ಉದ್ದೇಶವನ್ನು ಹೇಳಿಕೊಳ್ಳುವ ರೂಢಿಯನ್ನಿರಿಸಿಕೊಂಡದ್ದರು. “ಅಗ್ನಿಕನ್ಯೆ”ಗೆ ಬರೆದ ಮುನ್ನುಡಿಯಲ್ಲೂ ಅ.ನ.ಕೃ. ಅವರು ತಮ್ಮ ಕಥೆಗಳಿಂದ ಸಾಧಿತವಾಗಬಹುದಾದ ಉದ್ದೇಶವನ್ನು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ.
“ಸತ್ಯ ಒಣ ಉಪಚಾರ, ಉಪಶಮನಗಳಿಗೆ ದಕ್ಕುವ ವಸ್ತುವಲ್ಲ. ಅದು ವಜ್ರದಂತೆ ಕಠಿಣ. ಬೆಂಕಿಯಂತೆ ಉಗ್ರ. ನನ್ನ ಕಥೆಗಳಿಂದ ಓದುಗರಿಗೆ ವಿಲಾಸ, ವಿಹಾರಗಳು ದೊರೆಯುತ್ತವೆಂದು ಹೇಳುವಷ್ಟು ಮೂರ್ಖನಲ್ಲ ನಾನು. ಆದರೆ ವಿಕಾಸವೇ ವಿಹಾರವೆಂದು ಭಾವಿಸುವವರಿಗೆ ನನ್ನ ಕಥೆಗಳಿಂದ ನಿರಾಶೆಯಾಗುವುದಿಲ್ಲ. ಓದುಗರಲ್ಲಿ ಸಹನೆ, ಸೌಹಾರ್ದಗಳಿದ್ದರೆ ನನ್ನ ಕಥೆಗಳ ಮರ್ಮ ಅವರಿಗೆ ಅರ್ಥವಾಗದೆ ಇರುವುದಿಲ್ಲ”.
(ಪುಟ vi)
ಈ ಸಂಕಲನದ ಮೊದಲ ಕಥೆಯಾದ “ಅನ್ನದ ಕೂಗು” ಬಂಗಾಲದ ಭೀಕರ ಬರಗಾಲದಿಂದ ತತ್ತರಿಸಿ ಅನ್ನಾನ್ನ ನಿರ್ಗತಿಕರಾಗಿ ಆಶ್ರಯವನ್ನರಸಿ ಹೊರಡುವ ತಾಯಿ ಮಕ್ಕಳ ದುರಂತ ಕಥೆ. ಕಾಯಸ್ಥ ಜನಾಂಗದ ಕುಲೀನ ಮನೆತನದ ಸ್ತ್ರೀಯರಾದ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಪರಿಸ್ಥಿತಿಯ ಒತ್ತಡಕ್ಕೊಳಗಾಗಿ ಅನೇಕ ಕಷ್ಟಗಳನ್ನೆದುರಿಸಿ ಬೆಂಗಳೂರಿಗೆ ಬಂದು ತಲುಪುತ್ತಾರೆ. ತಿನ್ನಲು ಆಹಾರವಿಲ್ಲದೆ, ಉಡಲು ಬಟ್ಟೆಯಿಲ್ಲದೆ ಅಪಾಪೋಲಿಗಳಿಂದ ಉಪದ್ರವಕ್ಕೊಳಗಾಗುವ ಇವರಿಗೆ ಮಿಲ್ಟ್ರಿಯಲ್ಲಿ ಕೆಲಸ ಮಾಡುವ ಸೋಮು ಅನ್ನ, ಆಶ್ರಯ ನೀಡಿ ಕಾಪಾಡುತ್ತಾನೆ. ಒಂದು ರಾತ್ರಿ ಆ ನಿರ್ಗತಿಕ ತಾಯಿಯ ಹರೆಯದ ಮಗಳು ಸುಷಮಾ ತನ್ನನ್ನು ತಾನು ಸೋಮುವಿಗೆ ಅರ್ಪಿಸಿಕೊಳ್ಳಲು ಮುಂದಾದಾಗ ಆತ ಆಘಾತಗೊಳ್ಳುತ್ತಾನೆ. ಸುಷಮಾಳ ತಾಯಿ ತಮಗೆ ಅಭಯ ನೀಡಿದ ಸೋಮುವಿನ ಋಣ ತೀರಿಸಲು ಬೇರಾವ ದಾರಿ ಕಾಣದೆ ಈ ರೀತಿ ಮಾಡಬೇಕಾಯಿತೆಂದು ಹೇಳಿದಾಗ ವ್ಯಥೆ ಪಡುವ ಸೋಮು ಇನ್ನೂ ಮಾನವೀಯತೆ ಸತ್ತಿಲ್ಲವೆಂದು ಹೇಳಿ ಆ ತಾಯಿ ಮಕ್ಕಳನ್ನು ಸಮಾಧಾನ ಪಡಿಸುತ್ತಾನೆ. ಕಥೆಯ ಕೊನೆಗೆ ಸೋಮು ಸುಷಮಾಳನ್ನು ಮದುವೆಯಾಗಲು ನಿರ್ಧರಿಸುತ್ತಾನೆ.
“ಅನ್ನದ ಕೂಗು” ಕಥೆ ಜೀವನದಲ್ಲಿ ಬರುವ ದಾರುಣ ಸನ್ನಿವೇಶಗಳು ಮನುಷ್ಯನಿಗೆ ಎಂತೆಂತಹ ಕಷ್ಟಗಳನ್ನು ತಂದೊಡ್ಡುತ್ತವೆ ಮತ್ತು ಅದರಿಂದ ಪಾರಾಗಲು ಮನುಷ್ಯ ಯಾವ ರೀತಿಯೆಲ್ಲಾ ಕಷ್ಟಗಳನ್ನನುಭವಿಸಿ ಪರದಾಡಬೇಕಾಗುತ್ತದೆಂಬುದನ್ನು ಚೆನ್ನಾಗಿ ನಿರೂಪಿಸಿದೆ. ತಮಗೆ ಆಶ್ರಯ ನೀಡಿದ ಸೋಮುವಿನ ಋಣ ತೀರಿಸಲು ತನ್ನನ್ನೇ ಅರ್ಪಿಸಿಕೊಳ್ಳಲು ಮುಂದಾದ ಸುಷಮಾ ಮತ್ತು ಅವರ ದಾರುಣ ಸ್ಥಿತಿಗೆ ಮರುಗಿ ಸುಷಮಾಳನ್ನು ಮದುವೆಯಾಗಲು ನಿರ್ಧರಿಸುವ ಸೋಮುವಿನ ಪಾತ್ರಗಳು ಓದುಗರ ಮನಮುಟ್ಟುವಂತಿವೆ.
“ಪ್ರತಿರೂಪ” ಕಥೆ ಎರಡನೆಯ ಮಹಾಯುದ್ಧದ ಕಾಲದಲ್ಲಿ ದಿಢೀರ್ ಶ್ರೀಮಂತನಾದ ಕಾಂಟ್ರ್ಯಾಕ್ಟರ್ ಪಾಪಣ್ಣನ ಮಗಳು ಲಕ್ಷ್ಮಮ್ಮನ ಹದಗೆಟ್ಟ ಬಾಳು ವೈದ್ಯ ಗುಂಡೂ ಪಂಡಿತರ ಬುದ್ಧಿವಂತಿಕೆಯಿಂದ ಸರಿಯಾದ ಕಥೆ. ಹತ್ತೊಂಬತ್ತು ವರ್ಷ ವಯಸ್ಸಾದರೂ ಋತುಮತಿಯಾಗದ ಲಕ್ಷ್ಮಮ್ಮನದು ಮಾನಸಿಕ ಖಾಯಿಲೆಯೆಂದು ಪತ್ತೆ ಹಚ್ಚುವ ಗುಂಡೂ ಪಂಡಿತರು ಸ್ವಲ್ಪ ವಿಚಿತ್ರವೆನ್ನಬಹುದಾದ ಚಿಕಿತ್ಸಾ ಪದ್ಧತಿ ಅನುಸರಿಸುತ್ತಾರೆ.
ಪಂಡಿತರ ಚಿಕಿತ್ಸೆಯಿಂದ ಋತುಮತಿಯಾದ ಲಕ್ಷ್ಮಮ್ಮನಿಗೆ ಮುಂದೆ ರಾಮಯ್ಯನೊಂದಿಗೆ ಮದುವೆಯಾಗಿ ಮಗುವಾದಾಗ ಅದು ತಂದೆ – ತಾಯಿಗಳಂತಿಲ್ಲವೆಂದು ಆಕೆಯನ್ನು ಹೊರಗಟ್ಟುತ್ತಾರೆ. ಮತ್ತೊಮ್ಮೆ ವೈದ್ಯ ಗುಂಡೂ ಪಂಡಿತರು ಇದರಲ್ಲಿ ಮಧ್ಯ ಪ್ರವೇಶ ಮಾಡಿ ತಮ್ಮ ಬುದ್ಧಿಮತ್ತೆ ಬಳಸಿ ರಾಮಯ್ಯನ ತಪ್ಪು ಕಲ್ಪನೆ ದೂರ ಮಾಡಿ ಲಕ್ಷ್ಮಮ್ಮನ ಬಾಳನ್ನು ಸರಿ ಮಾಡುತ್ತಾರೆ. ಇಲ್ಲಿ ಲಕ್ಷ್ಮಮ್ಮನ ಬಾಳು ಸರಿಪಡಿಸಲು ಬಳಸುವ ತಂತ್ರಗಳು ಅಸಹಜವಾಗಿ ಕಂಡರೂ ಪರಿಣಾಮದ ದೃಷ್ಟಿಯಿಂದ ನೋಡಿದಾಗ ಅದು ಸಮರ್ಥನೀಯವೆನಿಸುತ್ತದೆ.
“ಮಣ್ಣಿನ ಮಗ” ಗಂಗನೆಂಬ ರೈತನ ದುರಂತ ಕಥೆ. ಗಂಗ ತನ್ನ ಪಾಡಿಗೆ ತಾನು ಬೇಸಾಯ ಮಾಡಿಕೊಂಡು ಹೆಂಡತಿ ಮತ್ತು ತಾಯಿಯೊಂದಿಗೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದ. ಗಂಗನ ಗೆಳೆಯ ಸಿದ್ದ ಮನೆಬಿಟ್ಟು ಹೋಗಿ ಮಿಲ್ಟ್ರಿ ಸೇರಿ ಸಾಕಷ್ಟು ದುಡ್ಡು ಮಾಡಿದ್ದ. ಸಿದ್ದ ರಜೆಯಲ್ಲಿ ಊರಿಗೆ ಬಂದಾಗ ಗಂಗನಿಗೆ ಮಿಲ್ಟ್ರಿ ಸೇರಿದರೆ ಸಿಗಬಹುದಾದ ಸವಲತ್ತುಗಳ ಕುರಿತು ಉತ್ಪ್ರೇಕ್ಷೆ ಮಾಡಿ ಹೇಳುತ್ತಾನೆ. ಮಿಲ್ಟ್ರಿ ಸೇರಿದ ಸಿದ್ದನ ಐಷಾರಾಮಿ ಜೀವನ ಕಂಡು ತಾನೂ ಅವನಂತಾಗಬೇಕು, ಅವನ ಹಾಗೆ ಶೋಕಿ ಜೀವನ ಮಾಡಬೇಕು ಮತ್ತು ಹಣ ಗಳಿಸಬೇಕೆಂಬ ದುರಾಸೆಯಿಂದ ಗಂಗ ಹೇಳದೆ ಕೇಳದೆ ಊರು ಬಿಟ್ಟು ಮಿಲ್ಟ್ರಿ ಸೇರುತ್ತಾನೆ. ಮೊದಮೊದಲು ಎಲ್ಲ ಅಂದುಕೊಂಡ ಹಾಗೆ ನಡೆದು ಗಂಗನ ಆಸೆ ಪೂರೈಸಿದರೂ ಇದ್ದಕ್ಕಿದ್ದಂತೆ ಯುದ್ಧ ನಿಂತು ಕೆಲಸ ಕಳೆದುಕೊಂಡ ಗಂಗ ಹಳ್ಳಿಗೆ ಹಿಂದಿರುಗಿ ಬರಬೇಕಾಗುತ್ತದೆ.
ಹಳ್ಳಿಯಲ್ಲಿ ಬೇಸಾಯ ಮಾಡಲು ಅವನಿಗೀಗ ಭೂಮಿಯೇ ಇಲ್ಲ. ಜೀವನೋಪಾಯಕ್ಕೆ ಕೂಲಿ ಕೆಲಸ ಮಾಡುವ ಗಂಗ ಹೇಗೋ ಹೊಟ್ಟೆ ತುಂಬಿಸಿಕೊಳ್ಳಬೇಕಾಗುತ್ತದೆ. ಒಂದು ದಿನ ಈರಪ್ಪನೆಂಬ ರೈತ ಸೊಂಪಾಗಿ ಬೆಳೆದ ರಾಗಿಮೆದೆಯನ್ನು ತೋರಿಸಿ ಸಂತೃಪ್ತಿ ವ್ಯಕ್ತಪಡಿಸಿದಾಗ ಗಂಗನಿಗೆ ತಾನು ಕಳೆದುಕೊಂಡ ಭೂಮಿಯ ನೆನಪಾಗಿ ಕೋಪಗೊಂಡು ಈರಪ್ಪನನ್ನು ಕೊಂದು ಹಾಕುತ್ತಾನೆ. ತನ್ನದ್ದಲ್ಲದನ್ನು ಬಯಸಿ ಇದ್ದದ್ದನ್ನು ಸಹ ಕಳೆದುಕೊಳ್ಳುವ ಗಂಗ ಕೊನೆಗೆ ಕೊಲೆಗಾರನಾಗಿ ತನ್ನ ಬದುಕನ್ನು ತಾನೇ ಹಾಳು ಮಾಡಿಕೊಳ್ಳುತ್ತಾನೆ. ಐಷಾರಾಮಿ ಜೀವನದ ದುರಾಸೆಗೆ ಬಲಿಯಾಗಿ ಬಾಳನ್ನು ಗೋಳು ಮಾಡಿಕೊಂಡ ರೈತ ಗಂಗನ ಚಿತ್ರಣ ಮನ ಮುಟ್ಟುವಂತಿದೆ.
ಸಮಾಜದಲ್ಲಿರುವ ಎಲ್ಲ ಒಳಿತು ಕೆಡುಕುಗಳನ್ನು ಇದ್ದಂತೆಯೇ ಚಿತ್ರಿಸಬೇಕೆಂಬುದು ಅ.ನ.ಕೃ. ಅವರ ನಿಲುವು. ತಮ್ಮ ಅನೇಕ ಕಥೆ – ಕಾದಂಬರಿಗಳಲ್ಲಿ ಅವರು ನಿರ್ಭಿಡೆಯಿಂದ ಲೈಂಗಿಕತೆಯನ್ನು ಚಿತ್ರಿಸಿದ್ದಾರೆ. ಲೈಂಗಿಕತೆಯ ಬಗ್ಗೆ ಮುಚ್ಚುಮರೆ ಸಲ್ಲದು ಎಂಬುದು ಅವರ ಖಚಿತ ಅಭಿಪ್ರಾಯ. ಅ.ನ.ಕೃ ಅವರು ಲೈಂಗಿಕತೆಯ ಬಗೆಗೆ ತಮ್ಮ ನಿಲುವನ್ನು ಮುನ್ನುಡಿಯಲ್ಲಿ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ.
“ಲೈಂಗಿಕ ವಿಷಯಗಳ ಬಗ್ಗೆ ಮುಚ್ಚುಮರೆ ತೋರಿಸಿ ಜನರ ಅಜ್ಞಾನದ ದುರುಪಯೋಗ ಪಡಿಸಿಕೊಳ್ಳುವುದು ದೌರ್ಜನ್ಯವೆಂದು ನನ್ನ ಮತ. ನನ್ನ ಹಿಂದಿನ ಸಂಗ್ರಹಗಳಲ್ಲಿ ಬಂದಿರುವ ಕೆಲವು ಕಥೆಗಳಲ್ಲಿ ಲೈಂಗಿಕ ಮನೋಭಾವವನ್ನು ಪೃಥಕ್ಕರಿಸಿದಂತೆ, ಈ ಸಂಗ್ರಹದ ಒಂದೆರಡು ಕಥೆಗಳಲ್ಲಿ ವಿಕೃತಕಾಮವನ್ನು ಪೃಥಕ್ಕರಿಸಿದ್ದೇನೆ. ರೋಗ ನಿವಾರಣೆಗೆ ರಾಜಮಾರ್ಗ ದಕ್ಷ ರೋಗ ನಿಧಾನವೂ ಆಗಿದೆ. ವಿಕೃತಕಾಮ ಲೈಂಗಿಕ ಅನಾಚಾರ ನಮ್ಮಲ್ಲಿಲ್ಲವೆಂದು ಕಣ್ಣುಮುಚ್ಚಿ ಕೂರುವುದಕ್ಕಿಂತ ಅವುಗಳ ಇರುವಿಕೆಯನ್ನು ಗೊತ್ತು ಹಚ್ಚಿ ಶುದ್ಧೀಕರಿಸುವುದು ಒಳ್ಳೆಯದು”.
(ಪುಟ vi)
“ಮಧುರ ಸ್ವಪ್ನ” ಕನ್ನಡದಲ್ಲಿ ಸಲಿಂಗ ಕಾಮಿಗಳ ಕುರಿತು ಬಂದ ಮೊಟ್ಟ ಮೊದಲ ಕಥೆ. ಈಗ ಸಲಿಂಗಕಾಮವನ್ನು ವಿಕೃತಕಾಮವೆಂದು ಪರಿಗಣಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಲಿಂಗಕಾಮಿಗಳನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಲಾಗುತ್ತದೆ. ಸಲಿಂಗ ಕಾಮಿಗಳು ಈಗ ದೇಶದಾದ್ಯಂತ ವ್ಯವಸ್ಥಿತ ರೀತಿಯಲ್ಲಿ ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಈಗಲೂ ನಮ್ಮ ಸಮಾಜದಲ್ಲಿ ಸಲಿಂಗಕಾಮಿಗಳನ್ನು ನೋಡುವ ದೃಷ್ಟಿ ಬೇರೆಯೇ ಆಗಿದೆ. ಈಗಲೇ ಇಂತಹ ಸ್ಥಿತಿಯಿರುವಾಗ ಸುಮಾರು 75 ವರ್ಷಗಳ ಹಿಂದೆ ಅ.ನ.ಕೃ. ಅವರು ಸಲಿಂಗಕಾಮದ ಕುರಿತು ಕಥೆ ಬರೆದರೆಂಬುದೇ ಕುತೂಹಲಕರವಾಗಿದೆ.
ಕಾಲೇಜಿನ ನಾಟಕಗಳಲ್ಲಿ ಹೆಣ್ಣು ಪಾತ್ರ ಮಾಡುವ ವಿದ್ಯಾರ್ಥಿ ಜಾನಕೀರಾಮ ಮತ್ತು ಅದೇ ಕಾಲೇಜಿನಲ್ಲಿ ಉಪನ್ಯಾಸಕನಾದ ಗುರುಮೂರ್ತಿಯ ನಡುವಿನ ಅಸಹಜ ಸಂಬಂಧವನ್ನು ಕಥೆ ಸೂಚ್ಯವಾಗಿ ನಿರೂಪಿಸುತ್ತಾ ಸಾಗುತ್ತದೆ. ಹೆಂಡತಿ ಹೆರಿಗೆಗೆ ತವರು ಮನೆಗೆ ಹೋದ ನಂತರ ಹಾಸ್ಟೆಲಿನ ಕೋಣೆಗೆ ಬರುವ ಗುರುಮೂರ್ತಿಗೆ ಜಾನಕೀರಾಮನ ಜೊತೆ ಸಿಗುತ್ತದೆ. ಬಯಸಿ ಬಯಸಿ ಹೆಣ್ಣು ಪಾತ್ರ ಮಾಡುವ ಜಾನಕೀರಾಮ ಮತ್ತು ಒಳ್ಳೆಯ ಕ್ರಿಕೆಟ್ ಆಟಗಾರನಾದ ಉಪನ್ಯಾಸಕ ಗುರುಮೂರ್ತಿಯ ಮಧ್ಯದ ಸ್ನೇಹ ಗುರು – ಶಿಷ್ಯರ ಸಂಬಂಧವನ್ನೂ ಮೀರಿ ಹೋಗುತ್ತದೆ. ಜಾನಕೀರಾಮನ ಮದುವೆಗೆ ಬರುವ ಗುರುಮೂರ್ತಿಗೆ ಆತನ ಗುರುವೆಂದು ಹೆಚ್ಚಿನ ಉಪಚಾರ ದೊರೆಯುತ್ತದೆ. ಮದುವೆಯ ಮರುದಿನ ಜಾನಕೀರಾಮನ ಹೆಂಡತಿ ಕುಮ್ಮಿ ಕಾಫಿ ಕೊಡಲು ಆತನ ಕೋಣೆಗೆ ಹೋದಾಗ ಜಾನಕೀರಾಮ ಮತ್ತು ಗುರುಮೂರ್ತಿ ಸಲಿಂಗಕಾಮಿಗಳು ಎಂದು ತಿಳಿದು ಬರುತ್ತದೆ. ವಿಷಯ ಎಲ್ಲರಿಗೂ ತಿಳಿಯುವ ವೇಳೆಗೆ ಜಾನಕೀರಾಮ ಮತ್ತು ಗುರುಮೂರ್ತಿ ಊರು ಬಿಟ್ಟು ಹೋಗುವಲ್ಲಿಗೆ ಕಥೆ ಮುಕ್ತಾಯವಾಗುತ್ತದೆ.
ಅ.ನ.ಕೃ. ಅವರು ಎಲ್ಲೂ ಕಥೆಯಲ್ಲಿ ಅನವಶ್ಯಕ ವಿವರಣೆ ನೀಡಲು ಹೋಗಿಲ್ಲ. ಸಲಿಂಗಕಾಮಿಗಳ ಅಸಹಜ ಸಂಬಂಧವನ್ನು ಕಥೆಯಲ್ಲಿ ಸೂಚ್ಯವಾಗಿ ಹೇಳಿದ್ದಾರೆ. ಇಲ್ಲೆಲ್ಲೂ ಅ.ನ.ಕೃ. ಸಲಿಂಗಕಾಮಿಗಳ ಪರ ಅಥವಾ ವಿರೋಧವಾಗಿ ಮಾತನಾಡುವುದಿಲ್ಲ. ಅ.ನ.ಕೃ. ಅವರು ಸಮಾಜದಲ್ಲಿ ಇಂತಹುದೂ ಇದೆಯೆಂದು ತುಂಬ ನಿರ್ಲಿಪ್ತ ಮತ್ತು ಸಹಜವಾಗಿ ತಮ್ಮ ಕಥೆಯಲ್ಲಿ ಸಲಿಂಗಕಾಮದ ಕುರಿತು ಬರೆದಿದ್ದಾರೆ. ಅಂದಿನ ದಿನಗಳಲ್ಲಿ ಇಂತಹ ಕಥಾವಸ್ತುವನ್ನು ಆಯ್ದುಕೊಂಡು ಬರೆದದ್ದು ಸಾಮಾನ್ಯ ಸಂಗತಿಯಲ್ಲ.
ಹಿಂದೂ – ಮುಸ್ಲಿಮರ ನಡುವಿನ ದ್ವೇಷ ಇಂದು ನಿನ್ನೆಯದಲ್ಲ ಅದಕ್ಕೆ ಶತಮಾನಗಳ ಇತಿಹಾಸವಿದೆ. ಹಿಂದೂ – ಮುಸ್ಲಿಮರು ಪರಸ್ಪರ ಅನ್ಯೋನ್ಯವಾಗಿ ಬಾಳಲು ಯತ್ನಿಸಿದರೂ ದುಷ್ಟ ಶಕ್ತಿಗಳು ಅದಕ್ಕೆ ಆಸ್ಪದ ಕೊಡುವುದಿಲ್ಲ. “ಮೃತ್ಯುಶಾಂತಿ” ಕಥೆಯಲ್ಲಿ ಬರುವ ಮೈಳೂರು ತಬಲಜಿ ಉಸ್ಮಾನ್ ಖಾನನಿಂದ ಖ್ಯಾತವಾಗಿದೆ. ತಬಲಾ ವಾದನ ಮತ್ತು ತಬಲಾಗಳ ತಯಾರಿಕೆಯಲ್ಲಿ ನಿಷ್ಣಾತನಾದ ಉಸ್ಮಾನ್ ಖಾನ ಅಥವಾ ಖಾನಪ್ಪ ಊರವರಿಗೆಲ್ಲ ಬೇಕಾದ ವ್ಯಕ್ತಿ. ಲಾಗಾಯ್ತಿನಿಂದ ಮೈಳೂರಿನ ಹಿಂದೂ – ಮುಸ್ಲಿಮರು ಅಣ್ಣತಮ್ಮಂದಿರಂತೆ ಬದುಕುತ್ತಾ ಬಂದಿದ್ದಾರೆ. ಹೋಳಿ ಹಬ್ಬ ಮತ್ತು ಮೊಹರಂನ್ನು ಹಿಂದೂ – ಮುಸ್ಲಿಮರಿಬ್ಬರೂ ಸೇರಿ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ. ಮಸೀದಿಯ ಪೀರಸಾಹೇಬನ ಮರಣದಿಂದ ತೆರವಾದ ಸ್ಥಾನಕ್ಕೆ ಸ್ಥಳೀಯ ವ್ಯಕ್ತಿಯನ್ನೇ ಆಯ್ಕೆ ಮಾಡಬೇಕೆಂದು ಖಾನಪ್ಪ ಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ.
ಊರ ಮಸೀದಿಗೆ ಹೊಸದಾಗಿ ಬಂದ ಪೀರಸಾಹೇಬ ಮತಾಂಧ, ಹಿಂದೂ ದ್ವೇಷಿ. ಆತ ಊರ ಮುಸ್ಲಿಮರ ತಲೆಯಲ್ಲಿ ಹಿಂದೂಗಳೆಂದರೆ ಕಾಫೀರರು ಎಂದು ದ್ವೇಷದ ಭಾವನೆ ತುಂಬಿ ಜಾತೀಯತೆಯ ವಿಷಬೀಜ ಬಿತ್ತುತ್ತಾನೆ. ಇದನ್ನು ವಿರೋಧಿಸಲು ಯತ್ನಿಸುವ ಖಾನಪ್ಪನಿಗೆ ಮಗ ಬಾದಶಾಹನೇ ಎದುರು ನಿಲ್ಲುತ್ತಾನೆ. ಹಿಂದೂ – ಮುಸ್ಲಿಮರು ಹೋಳಿ ಮತ್ತು ಮೊಹರಂ ಹಬ್ಬವನ್ನು ಬಹಿಷ್ಕರಿಸುವುದರೊಂದಿಗೆ ದ್ವೇಷದ ಅಧ್ಯಾಯ ಆರಂಭವಾಗುತ್ತದೆ. ಇದಕ್ಕೆಲ್ಲ ಅಸಹಾಯಕ ವೃದ್ಧನಾದ ಖಾನಪ್ಪ ಮೂಕ ಸಾಕ್ಷಿಯಾಗಬೇಕಾಗುತ್ತದೆ. ತನ್ನೆಲ್ಲ ನೋವನ್ನು ಆತ ಪ್ರೀತಿಯ ಪತ್ನಿ ಅಮೀನಳ ಸಮಾಧಿಯೆದುರು ತೋಡಿಕೊಳ್ಳುತ್ತಾನೆ. ಮಗ ಸಹ ಕೆಟ್ಟ ದಾರಿ ಹಿಡಿದದ್ದು ಆತನನ್ನು ಇನ್ನಷ್ಟು ನೋಯುವಂತೆ ಮಾಡುತ್ತದೆ.
ಗೋಪಾಲಕೃಷ್ಣ ದೇಗುಲದಲ್ಲಿ ಹಸುವನ್ನು ಕಡಿದು ಚೆಲ್ಲಿದ ಘಟನೆಯಿಂದ ಊರು ರಣಾಂಗಣವಾಗುತ್ತದೆ. ಹಿಂದೂ – ಮುಸ್ಲಿಮರ ಕಡೆಯವರಿಬ್ಬರೂ ಕೋಮುಗಲಭೆಯಲ್ಲಿ ಸಾವಿಗೀಡಾಗುತ್ತಾರೆ. ಮುಂದೆ ಮೈಳೂರಿನ ಮುಸ್ಲಿಮರು ಬಂಗಾಳದ ಇಸ್ಲಾಂಪುರಕ್ಕೆ ಹೋಗಿ ಪಡಬಾರದ ಪಾಡು ಪಡುತ್ತಾರೆ. ಮೈಳೂರಿನ ಮುಸ್ಲಿಮರಿಗೆ ತಾವೇ ಬಯಸಿ ಬಂದ ಇಸ್ಲಾಂಪುರ ನರಕವಾಗುತ್ತದೆ. ವೃದ್ಧ ಉಸ್ಮಾನ್ ಖಾನ ಅಥವಾ ಖಾನಪ್ಪ ಕೊನೆಗೂ ಮೈಳೂರಿಗೆ ಹಿಂತಿರುಗಿ ತನ್ನ ಹಿಂದೂ ಮಿತ್ರರನ್ನು ಕಂಡು ರಾಜಿಯಾಗಿ, ಹೆಂಡತಿ ಅಮೀನಳ ಸಮಾಧಿಯೆದುರು ನೆಮ್ಮದಿಯಿಂದ ಪ್ರಾಣ ಬಿಡುವಲ್ಲಿಗೆ ಕಥೆ ಅಂತ್ಯವಾಗುತ್ತದೆ.
“ಮೃತ್ಯುಶಾಂತಿ” ಕಥೆಯ ವಸ್ತು ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ ಈಗಲೂ ಪ್ರಸ್ತುತವಾಗುವಂತಿದೆ. ಇಂದು ಭಾರತದ ಅನೇಕ ಹಳ್ಳಿಗಳಲ್ಲಿ ಮೈಳೂರಿನಲ್ಲಿ ನಡೆದ ಘಟನೆಗಳು ಪುನರಾವರ್ತನೆಯಾಗುತ್ತಲಿವೆ. ಹೊರಗಿನಿಂದ ಬರುವ ಮತಾಂಧರು ಹಳ್ಳಿಗಳ ವಾತಾವರಣ ಕೆಡಿಸಿ, ಮುಗ್ಧ ಜನರ ಮನಸ್ಸಿನಲ್ಲಿ ಜಾತೀಯತೆಯ ವಿಷಬೀಜ ಬಿತ್ತುತ್ತಾ ಕೋಮುಸೌಹಾರ್ದತೆಯನ್ನು ಹಾಳು ಮಾಡುತ್ತಿದ್ದಾರೆ. ಸಮಾಧಾನದ ಸಂಗತಿಯೆಂದರೆ ಪೀರಸಾಹೇಬನಂತಹ ದುಷ್ಟರಿರುವಂತೆಯೇ ಉಸ್ಮಾನ್ ಖಾನ ಅಥವಾ ಖಾನಪ್ಪನಂತಹ ಮಾನವೀಯತೆಯ ಪ್ರತಿನಿಧಿಗಳಂತಿರುವ ಒಳ್ಳೆಯ ವ್ಯಕ್ತಿಗಳೂ ಇದ್ದಾರೆ. “ಮೃತ್ಯುಶಾಂತಿ” ಕಥೆ ಕೋಮುದ್ವೇಷದ ದುಷ್ಪರಿಣಾಮ ಯಾವ ರೀತಿ ಹಳ್ಳಿಗಳ ಸಾಮರಸ್ಯವನ್ನು ಕೆಡಿಸಿದೆಯೆಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದೆ.
“ಪೂರ್ವ-ಪಶ್ಚಿಮ” ಕಥೆ ಪೌರ್ವಾತ್ಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ಮುಖಾಮುಖಿಯ ಕುರಿತ ಕಥೆ. ಚಂದ್ರನೆಂಬ ಭಾರತೀಯ ಯುವಕ ಉನ್ನತ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ತೆರಳಿ ಅಲ್ಲಿ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಪಸರಿಸಿ ಎಲ್ಲರ ಮೆಚ್ಚುಗೆ ಗಳಿಸಿಕೊಳ್ಳುತ್ತಾನೆ. ತನಗೆ ಸಮಾನ ಅಭಿರುಚಿ ಹೊಂದಿರುವ ಐರಿಷ್ ಹೆಣ್ಣು ಫ್ಲೋರಾಳನ್ನು ಪ್ರೀತಿಸಿ ಮದುವೆಯಾಗುವ ಚಂದ್ರ ತನ್ನ ಶ್ರಮ ಮತ್ತು ಪ್ರತಿಭೆಯಿಂದ ಖ್ಯಾತ ಲೇಖಕನಾಗಿ ಬೆಳೆಯುತ್ತಾನೆ. ಹೆಂಡತಿ ಫ್ಲೋರಾಳೊಂದಿಗೆ ಸೇರಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವ ಚಂದ್ರ ಲಂಡನ್ನಿನ ಬಡವರ ಕೇರಿ ಸೋಹೋದ ಜನರ ಏಳಿಗೆಗಾಗಿ ದುಡಿಯುತ್ತಾನೆ. ಇಂಗ್ಲೆಂಡಿನಲ್ಲಿ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಸ್ಥಾಪಿಸಲು ಯತ್ನಿಸುವ ಈ ಜನಪ್ರಿಯ ಶೈಲಿಯ ಕಥೆ ಹಲವೆಡೆಗಳಲ್ಲಿ ಸಾಕಷ್ಟು ಭಾವುಕವಾಗುತ್ತದೆ.
“ಗಿರಿಜವ್ವನ ರೊಟ್ಟಿ” 1942ರ ಸ್ವಾತಂತ್ರ್ಯ ಚಳವಳಿಯ ಕುರಿತ ಕಥೆ. ಬ್ರಿಟಿಷರಿಂದಲೇ ದೇಶಕ್ಕೆ ಹಿತ ಎಂದು ನಂಬಿರುವ ಇನ್ಸ್ಪೆಕ್ಟರ್ ಗುರುಬಸಪ್ಪ ನಿರ್ದಯವಾಗಿ ಸ್ವಾತಂತ್ರ್ಯ ಯೋಧರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದಾನೆ. ಗುರುಬಸಪ್ಪನ ಹೆಂಡತಿ ಗಿರಿಜವ್ವನಿಗೆ ಗಂಡನ ಕೆಲಸದ ಬಗೆಗೆ ಸಮಾಧಾನವಿಲ್ಲ. ತನಗೆ ಮಕ್ಕಳಾಗದ್ದಕ್ಕೆ ಗಂಡ ಗಾಂಧಿಜನರನ್ನು ನಿರ್ದಯವಾಗಿ ಕೊಲ್ಲುತ್ತಿರುವುದೇ ಕಾರಣವೆಂದು ಅವಳು ಬಲವಾಗಿ ನಂಬಿದ್ದಾಳೆ. ಒಂದು ದಿನ ದುಗ್ಗಪ್ಪನೆಂಬ ಸ್ವಾತಂತ್ರ್ಯ ಹೋರಾಟಗಾರ ಆಶ್ರಯ ಬೇಡಿ ಬಂದಾಗ ಗಿರಿಜವ್ವ ರೊಟ್ಟಿ ನೀಡಿ, ಆತನ ಗಾಯಕ್ಕೆ ಪಟ್ಟಿ ಕಟ್ಟಿ ಆತನ ಜೀವವುಳಿಸುತ್ತಾಳೆ. ಇದನ್ನು ತಿಳಿದ ಗುರುಬಸಪ್ಪ ಕೆಂಡಾಮಂಡಲವಾಗಿ ದುಗ್ಗಪ್ಪನ ಬಲಿ ಹಾಕಲೇಬೇಕೆಂದು ಶಪಥ ಮಾಡುತ್ತಾನೆ.
ಸರ್ಕಾರಿ ಖಜಾನೆ ಲೂಟಿ ಮಾಡಲು ಬಂದ ದುಗ್ಗಪ್ಪ ಗುರುಬಸಪ್ಪನ ಗುಂಡಿಗೆ ಬಲಿಯಾಗುತ್ತಾನೆ. ತನ್ನ ಜೀವ ಹೋಗುವುದನ್ನೂ ಲೆಕ್ಕಿಸದೆ ದುಗ್ಗಪ್ಪ ಹಿಂದೆ ಗುರುಬಸಪ್ಪನಿಂದ ಕಸಿದುಕೊಂಡು ಹೋದ ಪಿಸ್ತೂಲನ್ನು ಮರಳಿ ನೀಡುತ್ತಾನೆ. ಆಪತ್ಕಾಲದಲ್ಲಿ ತನಗೆ ಅನ್ನ, ಆಶ್ರಯ ನೀಡಿ ಪ್ರಾಣ ಕಾಪಾಡಿದ ಗಿರಿಜವ್ವನಿಗೆ ಕೃತಜ್ಞತೆ ತಿಳಿಸಿ ಪ್ರಾಣ ಬಿಡುತ್ತಾನೆ. ದುಗ್ಗಪ್ಪನ ಸಾವಿನಿಂದ ತೀವ್ರವಾಗಿ ನೊಂದ ಗುರುಬಸಪ್ಪ ತನ್ನ ಕೆಲಸಕ್ಕೆ ರಾಜೀನಾಮೆ ಕೊಡುತ್ತಾನೆ.
“ಗಿರಿಜವ್ವನ ರೊಟ್ಟಿ” ಕಥೆ 1942ರಲ್ಲಿ ನಡೆದ ‘ಭಾರತ ಬಿಟ್ಟು ತೊಲಗಿ’ ಚಳುವಳಿಯಲ್ಲಿ ದುಗ್ಗಪ್ಪನಂತಹ ಸಾಮಾನ್ಯ ಜನರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದದ್ದನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ. ಕಷ್ಟ ಕಾಲದಲ್ಲಿ ತನಗೆ ಅನ್ನ, ಆಶ್ರಯ ನೀಡಿ ಪ್ರಾಣ ಕಾಪಾಡಿದ ಗಿರಿಜವ್ವನಿಗೆ ಪ್ರಾಣೋತ್ಕ್ರಮಣ ಸ್ಥಿತಿಯಲ್ಲೂ ಕೃತಜ್ಞತೆ ಸಲ್ಲಿಸುವುದನ್ನು ದುಗ್ಗಪ್ಪ ಮರೆಯುವುದಿಲ್ಲ. ತಾವು ನಂಬಿದ ತತ್ವ ಸಿದ್ಧಾಂತಗಳಿಗೆ ಬದ್ಧರಾದ ದೇಶಭಕ್ತರು ಮೌಲ್ಯಗಳಿಗೆ ಬಹಳ ಬೆಲೆ ಕೊಡುತ್ತಾರೆ. ಋಣ ಸಂದಾಯ ಅಂತಹ ಹಿರಿದಾದ ಮೌಲ್ಯಗಳಲ್ಲೊಂದು. ದೇಶಕ್ಕಾಗಿ ಪ್ರಾಣತೆತ್ತ ಅಸಂಖ್ಯ ಸಾಮಾನ್ಯ ಜನರ ಪ್ರತಿನಿಧಿಯಂತಿರುವ ದುಗ್ಗಪ್ಪನ ಪಾತ್ರ ಕಳೆದುಹೋದ ಕಾಲಘಟ್ಟವೊಂದರ ಹಿರಿದಾದ ಮೌಲ್ಯಗಳನ್ನು ಪ್ರತಿನಿಧಿಸುವಂತೆ ಚಿತ್ರಿತವಾಗಿದೆ.
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ದೇಶ ವಿಭಜನೆಯಾಯಿತು. ನಮ್ಮ ಹಿರಿಯರು ಕಂಡ ಅಖಂಡ ಭಾರತದ ಕನಸು ನುಚ್ಚುನೂರಾಗಿ ಪಾಕಿಸ್ತಾನದ ಉದಯವಾಯಿತು. ಅದೇ ಪಾಕಿಸ್ತಾನ ಇಂದು ಭಾರತದ ಪರಮ ಶತ್ರುವಾಗಿ ಇನ್ನಿಲ್ಲದಂತೆ ಕಾಡುತ್ತಿದೆ. ದೇಶ ವಿಭಜನೆಯ ಸಂದರ್ಭದಲ್ಲಿ ದೇಶದೊಂದಿಗೆ ನೂರಾರು ವರ್ಷಗಳಿಂದ ಅಣ್ಣತಮ್ಮಂದಿರಂತೆ ಬದುಕುತ್ತಾ ಬಂದಿದ್ದ ಹಿಂದೂ – ಮುಸ್ಲಿಮರ ಮನಸ್ಸುಗಳು ಸಹ ಒಡೆದವು. ದೇಶ ವಿಭಜನೆಯ ದುರಂತದ ಕುರಿತು ಭಾರತದ ಎಲ್ಲ ಭಾಷೆಗಳಲ್ಲಿ ಸಾಕಷ್ಟು ಒಳ್ಳೆಯ ಕಥೆಗಳು ಬಂದಿವೆ. ನಮ್ಮ ಕನ್ನಡದಲ್ಲೂ ದೇಶ ವಿಭಜನೆಯ ಬಗ್ಗೆ ಹಲವು ಲೇಖಕರು ಬರೆದಿದ್ದಾರೆ. ಪ್ರಗತಿಶೀಲ ಸಾಹಿತಿಗಳು ಅತಿಹೆಚ್ಚು ಸಂಖ್ಯೆಯಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ, ದೇಶ ವಿಭಜನೆ ಮತ್ತು ಹಿಂದೂ – ಮುಸ್ಲಿಂ ಸಾಮರಸ್ಯದ ಪ್ರಾಮುಖ್ಯತೆಯ ಬಗೆಗೆ ಬರೆದದ್ದು ಗಮನಾರ್ಹ.
ಈ ಕಥಾಸಂಕಲನದ ಶೀರ್ಷಿಕೆಯೂ ಆಗಿರುವ “ಅಗ್ನಿಕನ್ಯೆ” ದೇಶ ವಿಭಜನೆಯ ದುರಂತದ ಕುರಿತ ಕಥೆಯಾಗಿದೆ. ಅನಿಲಬಾಬು ಮತ್ತು ಹಮೀದ್ ಜೀವದ ಗೆಳೆಯರು. ಅನಿಲಬಾಬು ಹೆಂಡತಿ ಬೀಣಾ, ಮಗಳು ಶುಭಾ ಮತ್ತು ತಾಯಿಯೊಂದಿಗೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದ. ಹಮೀದ್ ಸಹ ತನ್ನ ಹೆಂಡತಿ ನೂರುನ್ನೀಸಳೊಂದಿಗೆ ನೆಮ್ಮದಿಯಿಂದಿದ್ದ. ಈ ಗೆಳೆಯರಿಬ್ಬರೂ ಸೇರಿ ಪಾಲುದಾರಿಕೆಯಲ್ಲಿ ಬೀಡಿ ಕಾರ್ಖಾನೆ ಆರಂಭಿಸಿ ಸಾಕಷ್ಟು ಲಾಭ ಗಳಿಸತೊಡಗುತ್ತಾರೆ. ಎರಡೂ ಕುಟುಂಬಗಳ ನಡುವೆ ಸಾಕಷ್ಟು ಅನ್ಯೋನತೆಯಿದ್ದು ಹಮೀದನಿಗೆ ಪುಟ್ಟ ಶುಭಾ ಎಂದರೆ ಅಪಾರ ಪ್ರೀತಿ.
ದೇಶಕ್ಕೆ ಸ್ವಾತಂತ್ರ್ಯ ಸಿಗುವುದು ಖಚಿತವಾಗುತ್ತಿದ್ದಂತೆಯೇ ಮುಸ್ಲಿಂ ಲೀಗಿನವರು ಪ್ರತ್ಯೇಕ ದೇಶ ಪಾಕಿಸ್ತಾನಕ್ಕಾಗಿ ಹೋರಾಟ ಮಾಡಲಾರಂಭಿಸುತ್ತಾರೆ. ಹಿಂದೂ – ಮುಸ್ಲಿಮರ ನಡುವೆ ದ್ವೇಷದ ಗಾಳಿ ಬೀಸಲಾರಂಭಿಸುತ್ತದೆ. ಮೊದಲು ಅಣ್ಣತಮ್ಮಂದಿರಂತೆ ಅನ್ಯೋನ್ಯವಾಗಿದ್ದ ಅನಿಲಬಾಬು ಮತ್ತು ಹಮೀದ್ ಚೆನ್ನಾಗಿ ನಡೆಯುತ್ತಿದ್ದ ಬೀಡಿ ಕಾರ್ಖಾನೆಯ ಪಾಲುಗಾರಿಕೆ ಮುರಿದುಕೊಂಡು ಬೇರೆಯಾಗುತ್ತಾರೆ. ಹಿಂದೂ ಮುಸ್ಲಿಮರು ಪರಸ್ಪರರನ್ನು ಅನುಮಾನದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿ ಎರಡೂ ಕೋಮಿನವರ ನಡುವೆ ದ್ವೇಷ ಭುಗಿಲೇಳುತ್ತದೆ.
ಹಿಂದೂ ದ್ವೇಷಿಗಳಾದ ಮುಸ್ಲಿಂ ಲೀಗಿನವರ ಬೆಂಬಲದಿಂದ ರಾಕ್ಷಸನಾಗುವ ಹಮೀದ್ ಮಾಡಬಾರದ ಪಾಶವೀ ಕೃತ್ಯಗಳನ್ನು ಮಾಡತೊಡಗುತ್ತಾನೆ. ತನ್ನ ಮತಾಂಧ ಬೆಂಬಲಿಗರೊಂದಿಗೆ ಬಂದು ಪುಟ್ಟ ಶುಭಾಳನ್ನು ಕತ್ತರಿಸಿ ಹಾಕಿ, ಅನಿಲಬಾಬುವಿನ ವೃದ್ಧ ತಾಯಿಯ ಮೇಲೆ ಅತ್ಯಾಚಾರ ನಡೆಸಿ, ಅನಿಲಬಾಬುವನ್ನು ಸುಟ್ಟು ಕೊಲ್ಲುತ್ತಾನೆ. ಹಿಂದೆ ಸೋದರಿಯೆಂದು ಕರೆದ ಅನಿಲಬಾಬುವಿನ ಹೆಂಡತಿ ಬೀಣಾಳನ್ನು ಬಲವಂತವಾಗಿ ಮದುವೆಯಾಗಿ ಅಪಹರಿಸಿಕೊಂಡು ಹೋಗುತ್ತಾನೆ. ನೂರಳಿಂದ ಬೀಣಾಳ ಶೀಲಭಂಗವಾಗುವುದು ತಾತ್ಕಾಲಿಕವಾಗಿ ತಪ್ಪುತ್ತದೆ. ನೂರಳ ಆರೈಕೆಯಲ್ಲಿದ್ದ ಬೀಣಾಳಿಗೆ ಮಧ್ಯರಾತ್ರಿ ಪ್ರಜ್ಞೆ ಬಂದಾಗ ಅವಳು ಎಚ್ಚೆತ್ತು ಅಗ್ನಿಕನ್ಯೆಯಾಗಿ ಬದಲಾಗಿ ತನ್ನ ಕುಟುಂಬವನ್ನು ಸರ್ವನಾಶ ಮಾಡಿದ ಹಮೀದನ ಮನೆಗೆ ಬೆಂಕಿಯಿಕ್ಕಿ, ಅವನನ್ನು ಮಚ್ಚಿನಿಂದ ಕೊಚ್ಚಿ ಕೊಂದು ಹಾಕುತ್ತಾಳೆ. ಅಗ್ನಿಕನ್ಯೆಯಾದ ಬೀಣಾ ಭಾವಾವೇಶದಿಂದ ‘ವಂದೇ ಮಾತರಂ’ ಎಂದು ಕೂಗುವಲ್ಲಿಗೆ ಕಥೆ ಅಂತ್ಯಗೊಳ್ಳುತ್ತದೆ.
“ಅಗ್ನಿಕನ್ಯೆ” ಕಥೆ ಕಪೋಲಕಲ್ಪಿತವಲ್ಲ ಅದೊಂದು ಕೆಟ್ಟ ಕನಸಿನಂತೆ ನಡೆದು ಹೋದ ಚರಿತ್ರೆ. ಸತ್ಯಘಟನೆಗಳ ಆಧಾರದ ಮೇಲೆ ಅ.ನ.ಕೃ. ಅವರು ಇಂತಹುದೊಂದು ವಿಶಿಷ್ಟ ಕಥೆ ಬರೆದಿದ್ದಾರೆ. ಹಿಂದೂ – ಮುಸ್ಲಿಮರ ನಡುವೆ ಪ್ರೀತಿಯಿರುವಂತೆ ದ್ವೇಷವೂ ಇದೆ. ಕೆಲವು ಜನ ಸ್ವಾರ್ಥಿಗಳ ಹಿತಾಸಕ್ತಿಗಾಗಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆಯಾಯಿತು. ಇದಕ್ಕೆ ಸಾಮಾನ್ಯ ಜನ ತೆತ್ತ ಬೆಲೆ ಮಾತ್ರ ಅಪಾರ. ಅನೇಕ ಅಮಾಯಕ ಸ್ತ್ರೀಯರ ಮಾನಭಂಗ, ಸಾಮಾನ್ಯ ಜನರ ಕೊಲೆಯಾದರೆ, ಲಕ್ಷಾಂತರ ಜನ ಆಸ್ತಿಪಾಸ್ತಿ ಕಳೆದುಕೊಂಡು ನಿರಾಶ್ರಿತರಾದರು. ದೇಶ ವಿಭಜನೆಯ ದುಷ್ಪರಿಣಾಮ ಯಾವ ರೀತಿ ಸಾಮಾನ್ಯ ಜನರ ಜೀವನವನ್ನು ನರಕ ಮಾಡಿದೆಯೆಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ “ಅಗ್ನಿಕನ್ಯೆ” ಕಥೆ ಅ.ನ.ಕೃ. ಅವರ ಮಾತ್ರವಲ್ಲ ಕನ್ನಡದ ಅತ್ಯುತ್ತಮ ಕಥೆಗಳಲ್ಲೊಂದು.
ಬಂಗಾಲದ ಭೀಕರ ಬರಗಾಲದ ಹೃದಯವಿದ್ರಾವಕ ಚಿತ್ರಣವಿರುವ “ಅನ್ನದ ಕೂಗು”, ಸಲಿಂಗ ಕಾಮಿಗಳ ಬಗ್ಗೆ ಕನ್ನಡದಲ್ಲಿ ಬಂದ ಮೊಟ್ಟಮೊದಲ ಕಥೆ “ಮಧುರ ಸ್ವಪ್ನ”, ಕೋಮುಸಾಮರಸ್ಯದ ಕುರಿತು ಬರೆದ ಕಥೆ “ಮೃತ್ಯುಶಾಂತಿ”, ಸ್ವಾತಂತ್ರ್ಯ ಹೋರಾಟದ ಬಗೆಗಿನ ಕಥೆ “ಗಿರಿಜವ್ವನ ರೊಟ್ಟಿ” ಮತ್ತು ದೇಶ ವಿಭಜನೆಯ ದುರಂತದ ಬಗ್ಗೆ ಬಂದ ಕಥೆ “ಅಗ್ನಿಕನ್ಯೆ” ಈ ಕಥಾಸಂಕಲನದ ಮಹತ್ವದ ಕಥೆಗಳು.
ಕಾದಂಬರಿ ಸಾರ್ವಭೌಮರೆಂದೇ ಖ್ಯಾತರಾದ ಅ.ನ.ಕೃ. ಅವರು ಕನ್ನಡದ ಅತ್ಯಂತ ಜನಪ್ರಿಯ ಲೇಖಕರು. ಭಿನ್ನ ಬಗೆಯ ಕಥಾವಸ್ತುವನ್ನೆತ್ತಿಕೊಂಡು ಸಾಕಷ್ಟು ವೈವಿಧ್ಯಮಯವಾದ ಕಥೆಗಳನ್ನು ಅ.ನ.ಕೃ. ಬರೆದಿದ್ದಾರೆ. ಅ.ನ.ಕೃ. ಅವರ ಕಥೆಗಳನ್ನು ಓದಬೇಕಾಗಿಲ್ಲ, ಕಥೆಗಳೇ ಓದಿಸಿಕೊಂಡು ಹೋಗುತ್ತವೆ. ಒಂದು ಬಾರಿ ಪುಸ್ತಕವನ್ನು ಓದಲು ಕೈಗೆತ್ತಿಕೊಂಡರೆ ಕೆಳಗಿಡದಂತೆ ಓದಿಸಿಕೊಂಡು ಹೋಗುವ ಗುಣ ಅ.ನ.ಕೃ. ಅವರ ಕಥೆಗಳಿಗಿದೆ. ಇಂತಹ ಸಶಕ್ತ ಕಥನಕಲೆಯೇ ಅ.ನ.ಕೃ. ಅವರನ್ನು ಕನ್ನಡದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಲೇಖಕರನ್ನಾಗಿ ಮಾಡಿತು.
ಪ್ರಗತಿಶೀಲ ಸಾಹಿತ್ಯ ಚಳುವಳಿಯ ನೇತಾರರಾದ ಅ.ನ.ಕೃ. ಅವರ ಕೃತಿಗಳಿಗೆ ಸೂಕ್ತ ವಿಮರ್ಶೆ ಸಂದಿಲ್ಲ. ನಮ್ಮ ವಿಮರ್ಶಕ ಮಹಾಶಯರು ಅ.ನ.ಕೃ. ಅವರನ್ನು ಜನಪ್ರಿಯ ಲೇಖಕರೆಂದು ಕರೆದು ಅಲಕ್ಷಿಸಿದ್ದಾರೆ. ಈ ಮಾತು ಬಹುತೇಕ ಎಲ್ಲ ಮಹತ್ವದ ಪ್ರಗತಿಶೀಲ ಲೇಖಕರಿಗೂ ಅನ್ವಯಿಸುತ್ತದೆ. ಎಪ್ಪತ್ತಕ್ಕೂ ಅಧಿಕ ವೈವಿಧ್ಯಮಯ ಕಥೆಗಳನ್ನು ಬರೆದ ಅ.ನ.ಕೃ. ಅವರ ಕಥೆಗಳು ಕನ್ನಡದ ಅನೇಕ ಪ್ರಾತಿನಿಧಿಕ ಕಥಾಸಂಕಲನಗಳಲ್ಲಿ ಸೇರಿಲ್ಲ. ಅ.ನ.ಕೃ. ಅವರ ಕಥೆಗಳ ಕುರಿತು ಅಧ್ಯಯನಪೂರ್ಣ ವಿಮರ್ಶಾ ಲೇಖನಗಳೂ ಲಭ್ಯವಿಲ್ಲ. ಇನ್ನಾದರೂ ಕನ್ನಡದ ಬಹುದೊಡ್ಡ ಲೇಖಕರಾದ ಅ.ನ.ಕೃ. ಅವರ ಕಥೆಗಳ ಮಹತ್ವವನ್ನು ಮರು ಓದಿನ ಮೂಲಕ ಮನಗಾಣಬೇಕಾದ ಅಗತ್ಯವಿದೆ. ಕನ್ನಡದ ಶ್ರೇಷ್ಠ ಲೇಖಕರಾದ ಅ.ನ.ಕೃ. ಅವರ ಕಥೆಗಳು ಮರು ಓದಿನ ಮೂಲಕ ಮತ್ತೆ ಚರ್ಚೆಗೊಳಗಾಗಲಿ ಎಂದು ಹೃತ್ಪೂರ್ವಕ ಆಶಿಸುತ್ತೇನೆ.
ಅಡಿ ಟಿಪ್ಪಣಿಗಳು
* ಅ.ನ.ಕೃಷ್ಣರಾಯರು ಒಟ್ಟು ಎಪ್ಪತ್ತೆರಡು ಕಥೆಗಳನ್ನು ಬರೆದಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಪ್ರಕಟಿಸಿದ “ಅ.ನ.ಕೃ. ಸಮಗ್ರ ಕಥಾ ಸಂಗ್ರಹ”ದಲ್ಲಿ ಒಟ್ಟು ಅರವತ್ತೊಂಬತ್ತು ಕಥೆಗಳಿವೆ. ಇನ್ನುಳಿದ ಮೂರು ಕಥೆಗಳು ಲಭ್ಯವಾಗಿಲ್ಲ.