ಒಂದು ಕಪ್ ಚಹಾ ಕುಡಿಯೋಣ ಎಂದು ಹಾಲಿಗೆ ಸಕ್ಕರೆ ಸೇರಿಸಿ ಪಾತ್ರೆ ಗ್ಯಾಸ್ ಮೇಲಿಟ್ಟೆ. ಟೀಪುಡಿ ಹಾಕುವಷ್ಟರಲ್ಲಿ ಸಿಲೆಂಡರ್ ಖಾಲಿಯಾಗಿ ಬರ್ನರ್ ಉಸಿರು ನಿಲ್ಲಿಸಿಬಿಟ್ಟಿತು. ಇನ್ನೊಂದು ಸಿಲೆಂಡರಿಗೆ ಕನೆಕ್ಟ ಮಾಡಲು ಬಗ್ಗಿ ನೋಡಿದರೆ ಅದು ಬಾಯ್ದೆರೆದಿತ್ತು. ಗ್ಯಾಸ್ ಬುಕ್ ಮಾಡಲು ಮರೆತಿದ್ದಕ್ಕೆ ನನ್ನನ್ನೇ ಹಳಿದು ಕೊಂಡೆ .ಅಗ್ನಿದೇವನ ಕೃಪೆ ಇರದೇ, ಅಡುಗೆ ಮಾಡದೇ ದಿನ ಕಳೆಯುವುದೆಂತು? ತಲೆಬಿಸಿಯಾಯ್ತು. (ಆದರೆ ಅದರಲ್ಲಿ ಚಹಾ ಕುದಿಸಲಾದೀತೆ?) ‘ಒಲೆ ಊದದಿಲ್ಲೆ, ಬೆಂಕಿ ಒಲೆಯಲ್ಲಿ ಬೇಯದಿಲ್ಲೆ, ಬೂದಿ ತೆಗಿಯದಿಲ್ಲೆ, ಸಗಣಿ ಬಾಚದಿಲ್ಲೆಯನ್ನ ಮಗಳಿಗೆ ಪೇಟೆಮನೆಯಲ್ಲಿ ಸುಖವೋ ಸುಖ’ಎಂದು ಅಮ್ಮ ಹೆಮ್ಮೆ ಪಡುತ್ತಿದ್ದುದರಲ್ಲಿ ಸತ್ಯವೆಷ್ಟಿದೆ? ನಗರದ ಈ ಮನೆಯಲ್ಲಿ ಒಲೆ ಹಚ್ಚಲಾಗುವುದೂ ಇಲ್ಲ ಎಂದುಕೊಳ್ಳುತ್ತಾ ಅಂಗಳಕ್ಕಿಳಿದೆ.
ಕೊಳೆಗೇರಿಯ ಐದಾರು ಹೆಂಗಸರು ಚಳಿಗಾಲದಲ್ಲಿ ಹೇರಳವಾಗಿ ಸಿಗುತ್ತಿದ್ದ ಮಾರುದ್ದದ ಕಟ್ಟಿಗೆಗಳನ್ನು ಹೊರೆಕಟ್ಟಿ ತಲೆಯ ಸಿಂಬೆಯ ಮೇಲಿರಿಸಿ ಹರಟೆಯಲ್ಲಿ ಆಯಾಸ ಮರೆಯಲೆತ್ನಿಸುತ್ತ ಸಾಗುತ್ತಿದ್ದುದು ಕಂಡಿತು. ಮಧ್ಯಾಹ್ನ ನೆಡುತೋಪಿನೆಡೆ ಸಾಗುತ್ತಿದ್ದ ಇದೇ ಹೆಂಗಸರನ್ನುತಡೆದು ಕೇಳಿದ್ದೆ. ‘ಯಾಕ ರೇಷನ್ನಿನಾಗ ನಿಮಗೆ ಚಿಮಣಿಎಣ್ಣಿ ಸಿಗಂಗಿಲ್ಲೇನು’ಎಂದು. “ಅಕ್ಕಾರ ರೇಷನ್‍ನ್ನಿನ್ಯಾಗಕೊಡೋ ಎಣ್ಣಿಚಿಮುಣಿ ಬುಡ್ಡಿಗೆ ಸಾಲಂಗಿಲ್ರೀ. ಕರೆಂಟ್ ಒಲಿ, ಗ್ಯಾಸ್ ಒಲಿ ಎಲ್ಲಾದಕ್ಕೂ ರೊಕ್ಕಾ ಹಾಕಾಕ ಎಲ್ಲಿ ನಮಗಾಕ್ಕೇತ್ರೀ? ಎಲ್ಲಾರ ಗಂಡಂದಿರು ಕುಡುಕರ್ರ. ನಮ್ಮದುಡಿಕಿ ಮ್ಯಾಲ ಸಂಸಾರ ನಡಿಬೇಕು ಕಟ್ಟಗಿ ಕೂಡಿಸಿ ಉರಿಯೊಲೆ ಹಚ್ಚಿದ್ರ ನಮ್ಮದು ಮಕ್ಕಳದು ಹೊಟ್ಟಿತುಂಬತತ್ರಿ. ಹಂಗಂತ ಒಬ್ಬೊಬ್ಬರೇ ಈಗ ಕಾಡಿಗೆ ಹೋಗಾಕೂ ಭಯಾರೀ ಅತ್ಯಾಚಾರ ಮಾಡವ್ರು ಭಾಳ ಆಗ್ಯಾರಲ್ರೀ ಈಗೀಗ.. ಅದಕ್ಕ ಗುಂಪು ಗೂಡಿಕೊಂಡು ಹೋಗ್ತೇವ್ರೀ” ಎಂದು ತಮ್ಮ ಕಷ್ಟದ ಬಗ್ಗೆ ಮಾತಾಡಿ ನೀರು ಕುಡಿದು ಹೋಗಿದ್ದರು. ಮಧ್ಯಾಹ್ನ ಕಡುಕಷ್ಟವಾಗಿ ಕಂಡಿತ್ತು ಅವರ ಬದುಕು. ಈಗ ಬೆಂಕಿ ಹಚ್ಚಿ ಅಡುಗೆ ಮಾಡುವ ಅವರ ಅದೃಷ್ಟ ತೀರಾಕಷ್ಟದ್ದೇನಲ್ಲ. (ಕನಿಷ್ಟವಾದದ್ದೇನಲ್ಲ) ಎನಿಸಲಾರಂಭಿಸಿತ್ತು!
‘ಬೆಂಕಿಯನ್ನು ಕಂಡು ಹಿಡಿಯದಿದ್ದರೆ ನಾವಿಂದಿಗೂ ಗಡ್ಡೆ ಗೆಣಸುಗಳನ್ನು ಭುಂಜಿಸುತ್ತ ನಿರಗ್ನಿ ಆಹಾರವನ್ನು ಸೇವಿಸುತ್ತ ಪ್ರಾಣಿ ಪಕ್ಷಿಗಳಂತೆ ಬದುಕಬೇಕಾಗಿತ್ತು’ ಎಂದೊಮ್ಮೆ ಅಜ್ಜಮಾತಿನ ಮಧ್ಯೆ ಹೇಳಿದ್ದ. ‘ಹಾಂಗೇ ಆಗಿದ್ದರೆ ಎಷ್ಟೋ ಚೊಲೋ ಆಗ್ತಿತ್ತು. ಹೆಂಗಸರಿಗೂ ಕಾಡುಮೇಡು, ಪೇಟೆ ಪಟ್ಟಣಾ ತಿರುಗಲ್ಲಾಗ್ತಿತ್ತು. ಈಗಿನ ಹಾಂಗೆ ಮೂರ್ಹೊತ್ತೂ ಕೂಳು ಕುಚ್ಚದಿರ್ತಿತ್ತಿಲ್ಲೆ’ ಎಂದು ಅಜ್ಜಿ ಪ್ರತ್ಯುತ್ತರ ನೀಡಿದಾಗ ಅಜ್ಜಗಪ್‍ಚುಪ್.ಅಜ್ಜಿ ಹೇಳಿದ ಮಾತಿಗೂ ಕಾರಣವಿಲ್ಲದೇ ಇರಲಿಲ್ಲ.
ಅವಳಿದ್ದ ಮಲೆನಾಡಿನಲ್ಲಿ ಎಲ್ಲರ ಮನೆಯಲ್ಲಿನ ಹೆಂಗಸರೂ ಒಲೆಗೆ ಬೆಂಕಿ ಹೊತ್ತಿಸುವುದಕ್ಕೆ ಹಲವಾರು ಸಲಕರಣೆಗಳನ್ನು ಅಡಿಕೆ ಹಾಳೆಗಳನ್ನು ಅಡುಗೆ ಮನೆಯೊಲೆಗೆ ಉರಿಸಲು ಬೇಕಾಗುವಂತೆ ಚಿಕ್ಕ ಚೂರುಗಳನ್ನಾಗಿಸಿ ಬಿಸಿಲಿನಲ್ಲಿ ಒಣಗಿಸಿಡುತ್ತಿದ್ದರು. ಒಣ ಮರ(ಕುಂಟೆ)ವನ್ನು ಕೊಡಲಿ ಸಹಾಯದಿಂದ ಗಂಡಸರು ಚಕ್ಕೆ ಮಾಡಿಕೊಂಡರೆ ಅದರ ಚೂರುಗಳನ್ನು ಬಿಸಿಲಿಗೆ ಹರಗಿ ಒಪ್ಪವಾಗಿ ಸರಿದಿಡುವ ಕಾಯಕ ಹೆಂಗಸರದ್ದಾಗಿತ್ತು. ತೆಂಗಿನಗರಿ, ಮಡ್ಲು, ಚಾಲಿಸಿಪ್ಪೆ, ಬತ್ತದ ಹೊಟ್ಟು, ದಬ್ಬೆ, ಕಟ್ಟಿಗೆ, ಸಣ್ಣಕುಂಟೆ,ದೊಡ್ಡ ಕುಂಟೆ .. ಉರುವಲಿನ ವೈವಿಧ್ಯಗಳು. ಅವುಗಳನ್ನು ಚೆಂದವಾಗಿ ಇಡಲೆಂದೇ ಒಂದು ಸೋಗೆ ಮಾಡಿನ ಕಟ್ಟಿಗೆಯ ಮನೆ!
ಇನ್ನು ಬೆಂಕಿ ಉರಿಸುವುದೂ ಒಂದು ಕಲೆಯೇ ತೆಂಗಿನ ಚಿಪ್ಪಿನೊಳಗೆ ಕೊಂಚ ಬೂದಿಯನ್ನು ತುಂಬಿ ಒಂದೆರೆಡು ಚಮಚದಷ್ಟು ಸೀಮೆಎಣ್ಣೆಯನ್ನು ಹಾಕಿ ಕಡ್ಡಿಗೀರಿ ಉರಿ ಹಚ್ಚಿ ಅದನ್ನು ಒಲೆಯ ಮಧ್ಯೆಇಡುತ್ತಿದ್ದರು. ಬೇಗ ಬೆಂಕಿ ಹಿಡಿಯುವ ಕಟ್ಟಿಗೆಯ ತುದಿಗಳನ್ನು ಚಿಪ್ಪಿನ ಮೇಲಿಟ್ಟು ಮಧ್ಯೆ ಅಡಿಕೆ ಹಾಳೆಯ ತುಂಡುಗಳನ್ನಿಟ್ಟು ಬೆಂಕಿ ಬೆನ್ನಾಗಿ ಹೊತ್ತಿಕೊಳ್ಳಲಾರಂಭಿಸಿದೊಡನೆ ಊದುಗೊಳವೆಯಿಂದ ಪುಸ್ಸ್‍ಪುಸ್ಸೆಂದು ಊದಿ ಚಹಾ ಮಾಡಲು ನೀರಿನ ಪಾತ್ರೆಯನ್ನು ಒಲೆಯೇರಿಸಿದಾಗಲೇ ಹಳ್ಳಿ ಮನೆಗಳಲ್ಲಿ ನಿಜಾರ್ಥದ ಬೆಳಗು ಆರಂಭವಾಗುತ್ತಿತ್ತು. ಸಣ್ಣ ಬೆಂಕಿ ಹದಾಬೆಂಕಿ, ದೊಡ್ಡ ಬೆಂಕಿ, ಕೆಂಡದ ಶೆಕೆ, ಬಬ್ಬೂದಿ ಬೆಂಕಿ ..ಹೀಗೆಲ್ಲ ಬೇಯಿಸುವ ಪದಾರ್ಥಗಳನ್ನವಲಂಭಿಸಿ ಬೆಂಕಿಯನ್ನುಉರಿಸುವ ಹೆಂಗಸರ ಕಷ್ಣಕ್ಕೆ ಎಣೆಯುಂಟೆ?
ಒಮ್ಮೆ ಹಿಡಿಸಿದ ಬೆಂಕಿ ಆರಿದರೆ ಮತ್ತೆ ಉರಿಸುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಅದನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಉರುವಲು ಬದಲಾಯಿಸುತ್ತ ಒಲೆ ಉರಿಸುತ್ತ ಅಡುಗೆಯೊಂದಿಗೆ ಹೆಂಗಸರು ತಾವೂ ಒಲೆ ಶಾಖಕ್ಕೆ ಬೇಯುತ್ತಿದ್ದರು. ಬೆಂಕಿಯೊಲೆಯಲ್ಲಿ ಬೇಯಿಸಿದ ಅಡುಗೆ ರುಚಿಯಾಗಿರುತ್ತಿತ್ತು. ಆದರೆ ಪಾತ್ರೆಗಳು ಮಸಿ ಮಸಿಯಾಗಿರುತ್ತಿತ್ತು.ಅದೇ ಒಲೆ ಬೂದಿಯಿಂದ ಪಾತ್ರೆ ಉಜ್ಜುತ್ತ‘ಮಸಿ ಪಾತ್ರೆ ತಿಕ್ಕಿತಿಕ್ಕಿ ಅಂಗೈ ಭಾಗ್ಯರೇಖೆಗಳೆಲ್ಲ ಮಾಯಾಜು’ಎಂದು ಹೆಂಗಸರು ಅಲವತ್ತುಕೊಳ್ಳುತ್ತಿದ್ದರು. ಕಡಿಮೆ ಮಸಿ ಹಿಡಿಯುವಂತೆ ಒಲೆ ನಿರ್ಮಿಸುವುದಕ್ಕೆ ಹೆಂಗಸರು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದರು, ಮೂರು ಕಲ್ಲಿನೊಲೆ, ಇಟ್ಟಂಗಿ ಒಲೆ ಮಣ್ಣೊಲೆ, ಕೆಂಡದೊಲೆ, ಅಸ್ತ್ರದೊಲೆ. ಡಬ್ಬಿಯೊಲೆ, ಮೂರುಕಟ್ಟಿಗೆಯೊಲೆ, ಹಂಚಿನೊಲೆ, ಕಬ್ಬಿಣದೊಲೆ, ತೊಗರೊಲೆ, ನೀರೊಲೆ ಹೀಗೆ ಹತ್ತುಹಲವು ವೈವಿಧ್ಯಗಳಿರುತ್ತಿದ್ದವು. ಪ್ರತಿ ಒಲೆಯೂ ಆಕಾರದಲ್ಲಿ, ಗಾತ್ರದಲ್ಲಿ,ಉಪಯುಕ್ತತೆಯಲ್ಲಿ ವಿಭಿನ್ನವಾಗಿಯೇ ಇರುತ್ತಿದ್ದವು.
ಒಲೆಗಳಿಗೆ ಹೊಂದುವಂತೆ ಅಡುಗೆ ಮಾಡುವವರ ಆರ್ಥಿಕ ಅನುಕೂಲತೆಗೆ ಹೊಂದಿ ಗಡಿಗೆಗಳು, ಹಿತ್ತಾಳೆ ತಾಮ್ರ, ಕಂಚು, ಅಲ್ಯೂಮಿನಿಯಂ, ಸ್ಟೀಲಿನ ಪಾತ್ರೆಗಳು ಬಳಕೆಯಾಗುತ್ತಿದ್ದವು.ಗುಂಡಗಿನ ತಳದ ಗಡಿಗೆಯನ್ನು ಒಲೆಯ ಮೇಲೆ ತಲೆ ಕೆಳಗಾಗಿಸಿ ಇಟ್ಟು‘ತೊಡೆದೇವು’ಎನ್ನುವ ಅಕ್ಕಿಯಿಂದ ತಯಾರಿಸುವ ಖಾದ್ಯವನ್ನು ಬೇಯಿಸುತ್ತಿದ್ದರು. ಒಲೆಯ ಮೇಲಿನ ಕಸರತ್ತಿನಲ್ಲೂ ಹಲವು ಬಗೆ. ಬೇಯಿಸುವುದು, ಕೈ ಆಡಿಸುವುದು, (ತೊಳೆಸುವುದು) ಹುರಿಯುವುದು,ಕರಿಯುದು, ಮಗುಚುವುದು.. ಹಾಲು ಉಕ್ಕಿಸುವುದು ಮಾತ್ರ ಸಾಂಧರ್ಭಿಕ ಹಾಗೂ ಬಹುತೇಕ ಸಲ ಆಕಸ್ಮಿಕ!ನೀರೊಲೆಯ ಮೇಲಿನ ಹಂಡೆಯಲ್ಲಿ ಕಾದ ನೀರನ್ನು ಮೀಯುವುದರಲ್ಲಿ ಸಿಗುವ ಸುಖದ ಮುಂದೆ ಸ್ವರ್ಗವನ್ನೂ ನಿವಾಳಿಸಿ ಒಗೆಯಬೇಕು.ಮಳೆಗಾಲದಲ್ಲಿ ಬಾಣಂತನ ಮಾಡಿಸಿಕೊಳ್ಳುವುದರಲ್ಲಿ ಬೆಂಕಿ ಕಾಯಿಸುವ ಭಾಗ್ಯವೇ ದೊಡ್ಡದು.ತೊಗರೊಲೆಯ ಮೇಲೆ ಹಂಡೆಯಲ್ಲಿ ಅಡಕೆ ಬೇಯುತ್ತಿರುವಾಗ ಅಂಗಳದ ಚಳಿಯಲ್ಲಿ ಒಲೆಯ ಮುಂದೆ ಕುಳಿತು ಮೈ ಕಾಯಿಸಿಕೊಳ್ಳುತ್ತಾ ಕೇಳುವ ಕತೆಗಳು, ಹಾಡುವ ಹಾಡುಗಳೆಲ್ಲ ಬೆಚ್ಚನೆಯ ನೆನಪುಗಳು.
ಮೂರು ದಶಕದ ಹಿಂದೆಹಳ್ಳಿಗಳಲ್ಲಿ ಬಹುತೇಕ ಮನೆಗಳಲ್ಲಿ ಸಗಣಿಗ್ಯಾಸ್ ಪ್ಲಾಂಟ್ ಕಟ್ಟಿಸಿ ಗ್ಯಾಸ್ ಒಲೆ ಮಾಡಿಸಿದರು.ಆಗ ಒಲೆ ವೈವಿಧ್ಯಗಳು ಗಣನೀಯವಾಗಿ ಕಡಿಮೆಯಾದವು .ಒಲೆ ಬದಲಾದಂತೆ ಉರಿಯೂ ಬದಲಾಗಿ ಪಾತ್ರೆಗಳು ಬದಲಾದರೂ ಹೆಂಗಸರ ಕೆಲಸಗಳೇನೂ ಕಡಿಮಾದೆಂತೆನಿಸುತ್ತಿಲ್ಲ. ಪೇಟೆ ಪಟ್ಟಣಗಳಲ್ಲಿ ಕೆಲಕಾಲ ಬತ್ತಿ ಸ್ಟೌವ್, ಪಂಪ್ ಸ್ಟೌವ್ ಅಡುಗೆ ಮನೆಯಲ್ಲಿ ಪ್ರಮುಖ ಪಾತ್ರವಹಿಸಿದವು.ರೇಷನ್‍ಅಂಗಡಿಯಲ್ಲಿ ಪಾಳಿ ಹಚ್ಚಿ ಸೀಮೆಎಣ್ಣೆ ತಂದು ತುಂಬುವುದು, ಬತ್ತಿಯ ತುದಿಗಳು ಕರುಕಲಾಗದಂತೆ ಕತ್ತರಿಸಿ ಸರಿಪಡಿಸಿ ಸ್ಟೌವ್‍ಉರಿಸುವುದು ತಾಳ್ಮೆಯ ಪರೀಕ್ಷೆಯಾಗಿತ್ತು . ಪಂಪ್ ಸ್ಟವ್‍ಅಂತೂಒಮ್ಮೊಮ್ಮೆತಟ್ಟನೆ ಹೊತ್ತಿಉರಿದು ಬೇಗ ಅಡುಗೆ ಮಾಡಬಹುದಾಗಿತ್ತು. ಕೆಲವೊಮ್ಮೆ ಮುಷ್ಕರ ಹೂಡಿಬಿಡುತ್ತಿತ್ತು.ಏನು ಮಾಡಿದರೂಉರಿಯುತ್ತಿರಲಿಲ್ಲ. ಸಹನೆ ಕಳೆದುಕೊಂಡು ಸಟಸಟನೆ ಪಂಪ್ ಹೊಡೆದುಅದು ಸ್ಪೋಟಗೊಂಡು ಒಲೆ ಉರಿಸಲೆತ್ನಿಸಿದವರನ್ನೇ ಉರಿಸಿ ಮೃತ್ಯುಕೂಪಕ್ಕೆ ತಳ್ಳಿದ್ದೂ ಉಂಟು.ಸಿಲೆಂಡರ್ ಗ್ಯಾಸಜನಪ್ರಿಯವಾದಂತೆ ಉಳಿದ ಒಲೆಗಳು ನೇಪಥ್ಯಕ್ಕೆ ಸರಿದವು.
ಒಮ್ಮೆ ಕುಂದಗೋಳ ಸಮೀಪದ ಹಳ್ಳಿಗಳಿಗೆ ಹೋಗಿದ್ದೆ. ಹಳ್ಳಿಯ ಪ್ರತಿ ಮನೆಯ ಗೋಡೆಗಳೂ ಸಗಣಿಯ ಕುಳ್ಳಿನಿಂದ ಅಲಂಕೃತವಾಗಿದ್ದವು. ‘ಕುಳ್ಳೇ ಪ್ರಮುಖಉರುವಲಾ ನೋಡ್ರೀ ಮೇಡಮ್ಮಾರ ನಮ್ಮೂರಲ್ಲಿ’ ಎಂದರು ಹೆಂಗಸರು.ಹಸು ಸಾಕದವರು ಉರುವಲ ಸಿಗದೇ ಪಡುವ ಪಾಡುದೇವರಿಗೇ ಪ್ರೀತಿ.ಅವರು ಮುಳ್ಳು ಜಾಲಿಯಕಟ್ಟಿಗೆಯನ್ನೇ ಸೀಗಿದು ಮೈ ಕೈ ತರಚಿಕೊಳ್ಳುತ್ತಲೇ ಒಲೆ ಉರಿಸಿ ಅಡುಗೆ ಮಾಡುತ್ತಾರೆ,ದಾರಿಯಲ್ಲಿ ಬಿದ್ದ ಸಗಣಿಯನ್ನು ಕಂಡರೆ ಬಂಗಾರ ಸಿಕ್ಕಂತೆ ಸಂಭ್ರಮಿಸುತ್ತಾರೆ. ಒಬ್ಬ ವಿದೇಶಿ ಪ್ರವಾಸಿಗನೊಬ್ಬ ಒಮ್ಮೆ ಆ ಊರಿಗೆ ಬಂದಾಗ ಇದೇನು ಎಂದು ಕುಳ್ಳನ್ನು ಕಂಡು ಕೇಳಿದನಂತೆ.ಅದು ಮಳೆಗಾಲದಲ್ಲಿ ಅಡುಗೆ ಮಾಡಲಿಕ್ಕೆ ಬೇಕಾಗುತ್ತದೆ ಎಂದು ಹರಕು ಮುರುಕು ಇಂಗ್ಲೀಷಿನಲ್ಲಿ ಹಳ್ಳಿಗನೊಬ್ಬ ಹೇಳಿದ್ದನ್ನು ಅಪಾರ್ಥ ಮಾಡಿಕೊಂಡ ಪ್ರವಾಸಿಗ ಬಯಲುಸೀಮೆಯ ಎಷ್ಟೋ ಹಳ್ಳಿಗಳಲ್ಲಿ ತುಂಬಾ ಬಡತನವಿದೆ, ಮಳೆಗಾಲದಲ್ಲಿ ಒಣಗಿಸಿದ ಸಗಣಿರೊಟ್ಟಿಗಳನ್ನು ತಿನ್ನುತ್ತಾರೆ ಎಂದು ಬರೆದನಂತೆ!
ಉರುವಲದ ಸಮಸ್ಯೆಯ ಜೊತೆಗೇ ನಿತ್ಯ ಏಗುವ ಅನಿವಾರ್ಯತೆ ಉತ್ತರ ಕರ್ನಾಟಕದ ಹಳ್ಳಿಯ ಹೆಂಗಸರಿಗೆ.. ಬೆಂಕಿ ಇಲ್ಲದೇ ಅಡುಗೆ ಮಾಡಬಲ್ಲ ಕೌಶಲವಿರುವ ನಳ ಮಹಾರಾಜ ಹೆಂಡತಿ ದಮಯಂತಿಗಾದರೂ ಆ ವಿದ್ಯೆಯನ್ನು ಕಲಿಸಿದ್ದರೆ ತಲೆಮಾರಿನಿಂದ ತಲೆಮಾರಿಗೆ ಆ ಜ್ಞಾನ ಹರಿದು ಬಂದು ಹೆಂಗಸರು ಇಷ್ಟು ಪಾಡು ಪಡಬೇಕಾಗಿರಲಿಲ್ಲ ಎನಿಸುತ್ತದೆ.
ಬೆಂಕಿ ಕಾಣದಂತೆ ಉರಿವ ಕರೆಂಟ್‍ಒಲೆಯಲ್ಲಿ, ಕರೆಂಟ್‍ಕುಕ್ಕರಿನಲ್ಲಿ, ಸೋಲಾರ್‍ಕುಕ್ಕರಿನಲ್ಲಿ, ಓವನ್ನಿನಲ್ಲಿ ಒಂದಿಷ್ಟು ಬೇಯಿಸುವ ಅಡುಗೆ ಮಾಡುವುದು ಸುಲಭವೇ ಆದರೂ ಭಾರತೀಯರ ಅಡುಗೆಗಳನ್ನೆಲ್ಲವನ್ನೂ ಅವುಗಳಲ್ಲಿ ಮಾಡಲಾಗದು. ಟಿವಿಯಲ್ಲೊ ಮೊಬೈಲಿನಲ್ಲೋ ಜಾಹಿರಾತು ನೋಡಿ ಮರುಳಾಗಿ ಅವನ್ನೆಲ್ಲ ಖರೀದಿಸಿದರೂ ಒಗ್ಗರಣೆ ಹಾಕಲು, ಹುರಿಯಲು ಕರಿಯಲು ಬಾರದ ಒಲೆಗಳೆಂದು ಅವುಗಳನ್ನು ಮೂಲೆಗೆ ಸೇರಿಸುವವರೇ ಹೆಚ್ಚು.
ಅಕ್ಕಿ ಅನ್ನವಾಗುವಲ್ಲಿ, ಹಾಲು ಮೊಸರಾಗಿ ಮಜ್ಜಿಗೆಯಾಗಿ, ಬೆಣ್ಣೆಯಾಗಿ ತುಪ್ಪವಾಗುವಲ್ಲಿ, ಹಿಟ್ಟು ರೊಟ್ಟಿಯಾಗುವಲ್ಲಿ, ಬೇಳೆ ಸಾರಾಗುವಲ್ಲಿ, ತರಕಾರಿ ಪಲ್ಯವಾಗುವಲ್ಲಿ… ಬಹುಮುಖ್ಯ ಪಾತ್ರವಹಿಸುವುದು ಒಲೆಯೇ .ಸ್ವಲ್ಪ ಎಚ್ಚರ ತಪ್ಪಿದರೂ ಅಡುಗೆ ಮಾಡುವ ಅವಸರದಲ್ಲಿ ಕೈಸುಟ್ಟು ಕೊಳ್ಳುವುದು ಸಾಮಾನ್ಯ ಸಂಗತಿ. ಸೆರಗಿಗೆ ಹತ್ತಿದ ಬೆಂಕಿ ಮೈಯನ್ನೆಲ್ಲ ಆವರಿಸಿ ಸುಟ್ಟು ಸತ್ತ ಹೆಂಗಸರೆಷ್ಟೋ ಜನ. ಅಗ್ನಿ ಪ್ರವೇಶ ಮಾಡಿ ತನ್ನ ಪಾವಿತ್ರ್ಯವನ್ನು ಸಾಬೀತು ಪಡಿಸ ಬೇಕಾದ ಸೀತೆಯ ನೋವನ್ನು ಅಕ್ಷರಗಳಲ್ಲಿ ಹೇಳಲಾಗದು. ಯುದ್ದದ ಸಂದರ್ಭದಲ್ಲಿ ವೈರಿಗಳ ಕೈಗೆ ಸಿಗಬಾರದೆಂದು ಅಗ್ನಿ ಪ್ರವೇಶ ಮಾಡಿದ ರಜಪೂತರಾಣಿಯರ ಮಾನಸಿಕ ಸ್ಥೈರ್ಯ ಎಂಥದ್ದಿರ ಬಹುದು ಊಹಿಸಲಾಗದು. ತಿಳಿದು ಉರಿಸುವ ಒಲೆಯಲ್ಲಿ ರುಚಿಯಾದ ಅಡುಗೆಯಾಗುತ್ತದೆ. ಅರಿಯದೇ ಉರಿಸಿದ ಬೆಂಕಿ ನಿರ್ದಯಿಯಾಗಿ ಎಲ್ಲವನ್ನೂ ಸುಟ್ಟು ಭಸ್ಮ ಮಾಡುವಷ್ಟು ನಿರ್ದಯಿಯೂ ಆಗುತ್ತದೆ.‘ನನ್ನದೇಹದ ಬೂದಿ ಗಾಳಿಯಲಿ ತೂರಿ ಬಿಡಿ ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ…..ಎಂದು ದಿನಕರ ದೇಸಾಯಿಯವರು ಬರೆದ ಕವಿತೆಯ ಸಾಲೊಂದು ನೆನಪಾಗುತ್ತಿದೆ. ಬೂದಿಯಲ್ಲಿಯೂ ಹೊಸ ಹುಟ್ಟಿಗೆ ಹಾತೊರೆವ ಬೀಜಕ್ಕೆ ಸತ್ವವಾಗಬಲ್ಲ ಗುಣವಿರುವುದೇ ಸೋಜಿಗ!
*ಮಾಲತಿ ಹೆಗಡೆ
4 thoughts on “ಉರಿಸಿ ಉರಿಯುವ ಪಾಡು ಹಾಡಾಗುವುದೆಂದಿಗೋ…..”
ಉರಿಯ ವೈವಿಧ್ಯಗಳನ್ನು, ಅವುಗಳೊಂದಿನ ಕಷ್ಟಸುಖಗಳನ್ನು ಒಪ್ಪವಾಗಿ ಜೋಡಿಸುತ್ತ ಸಾಗಿದ ಲಘುಬರಹ ಸೊಗಸಾಗಿದೆ.
ಅತ್ಯಂತ ಸೊಗಸಾಗಿ ಒಲೆಗಳ ವಿವರಣೆ, ಬೆರಣಿಯ ಬಳಕೆ, ವಿವಿಧ ರೀತಿಯ ಬೆಂಕಿ ಒಂದೇ ಎರಡೆ ಸುಂದರ ಲಹರಿಯ ಸೊಗಸಾದ ಬರೆಹ.
ಸೊಗಸಾದ ಬರಹ
ಬಹಳ ಛಂದದ ಲೇಖನ..ಈ ಒಡಲ ಸುಡುವಗ್ನಿಯನು ತಣಿಪ ಆಹಾರವನು ಬೇಯಿಸುವ ಬೆಂಕಿಯ ನಂಟನೇನು ಬಲ್ಲನಾ ಕಾಮಾಕ್ಷಿಯ ಪುರುಷ! ಅಡಿಗೆ ಮನೆಯಲಿ ಬೇಯದಿರೆ ಬೆಂಕಿ ಇವಗೆಲ್ಲಿಯುಂಟು ಬಾನ!