ಮಾನವೀಯತೆ ಮತ್ತು ಕ್ರೌರ್ಯ, ಪ್ರಾರ್ಥನೆ ಇತ್ಯಾದಿ….

‘ಭಯ  ಮತ್ತು ಧೈರ್ಯ’ಈ ಎರಡು ತೀವ್ರ ಭಾವಗಳನ್ನು ನನ್ನ ಹವ್ಯಾಸದುದ್ದಕ್ಕೂ ಅನುಭವಿಸುತ್ತ ಬಂದವನು ನಾನು. ಆದ್ದರಿಂದ ಅವುಗಳಲ್ಲಿ ಒಂದನ್ನು ಎದುರಿಸಲು ಇನ್ನೊಂದನ್ನು ಹೇಗೆ  ಬಳಸಿ ಕೊಳ್ಳಬೇಕು ಎಂಬುದನ್ನು ಆ ಭಾವಗಳೇ ಕಲಿಸಿ ಕೊಟ್ಟಿವೆ. ಆದರೆ ಅಂಥ ಭಾವಗಳು  ಶ್ರೀಸಾಮಾನ್ಯರಲ್ಲಿ  ಉದಿಸಿದಾಗ ಅವರಲ್ಲಿ ಹಲವರ ತಕ್ಷಣದ ಪ್ರತಿಕ್ರಿಯೆ ಹೇಗಿರುತ್ತದೆ ಹಾಗೂ  ಆ ಸ್ವಭಾವಗಳಿಗೆ  ಬಲಿಯಾಗುವ ಕೆಲವರು ಎಂತಹ ಅನಾಹುತವನ್ನು ಸೃಷ್ಟಿಸುತ್ತಾರೆ? ಎಂಬುದನ್ನು ಅನೇಕ ಬಾರಿ ಕಂಡದ್ದುಂಟು. ಅವುಗಳಲ್ಲಿ ಇತ್ತೀಚೆಗೆ ಉಡುಪಿ ಕರಾವಳಿ ತೀರದಲ್ಲಿ ನಡೆದ ಎರಡು ಘಟನೆಗಳು ಅಚ್ಚಳಿಯದೆ  ಉಳಿದಿವೆ.

‘ಮನೆಯಂಗಳಕ್ಕೊಂದು  ನಾಗರಹಾವು  ಬಂದು ಕೂತಿದೆ  ಸಾರ್.  ಸ್ವಲ್ಪ ಬರಬಹುದಾ…?’ ಎಂಬ ಒಬ್ಬಾತನ ಕಳವಳದ ವಿನಂತಿಗೆ ಸ್ಪಂದಿಸಿ ಹೊರಟೆ. ಅದೇ ಹಾವಿನ  ನಿವಾರಣೆಗೆ ಸಂಬಂಧಿಸಿ ಇನ್ನಿಬ್ಬರು ಉಡುಪಿಯ ಪ್ರಭಾವಿ ವ್ಯಕ್ತಿಗಳ ತೋರಿಕೆಯ ಕೋರಿಕೆಯೂ ಕಾರಿನ ವೇಗವನ್ನು ಹೆಚ್ಚಿಸಲು ಕಾರಣವಾಯಿತು. ಸಮುದ್ರ ಕಿನಾರೆಯಿಂದ  ಬರೇ  ನೂರು ಮೀಟರ್‍ಗಳಷ್ಟೇ ದೂರವಿದ್ದು ಸಿ.ಆರ್.ಝಡ್.  ಕಾಯ್ದೆಯನ್ನು ಗಾಳಿಗೆ ತೂರಿ, ಎದೆ ಸೆಟೆಸಿ ನಿಂತಿದ್ದ ಆ  ನಿವಾಸವನ್ನು ನೋಡಿ ಸೋಜಿಗವಾಯಿತು .ಅದನ್ನು,‘ಮನೆ’ಎನ್ನುವುದಕ್ಕಿಂತ ಭ ವ್ಯ ಬಂಗಲೆ ಎಂದರೇ ಸರಿಯಾದೀತು. ಕಿಂಡಿಯಿಂದ ಇಣುಕಿ, ಗೇಟು ತೆರೆದ ವಾಚ್‍ಮನ್‍ ನಮ್ರನಾಗಿ ನಿಂತು ಸೆಲ್ಯೂಟ್ ಹೊಡೆದ. ನಾನು ಬೀಗಿದೆ. ಆದರೆಆತ ಸೆಲ್ಯೂಟ್  ಹೊಡೆದದ್ದು ನನ್ನ ಹಿಂದೆ ನಿಶ್ಯಬ್ದವಾಗಿ ಬಂದುನಿಂತ ಬೆಳ್ಳಿಯ ಬಣ್ಣದ ಇನ್ನೋವಾ ಕಾರಿಗೆ ಎಂದು ತಿಳಿದಾಗ ಪಿಚ್ಚೆನಿಸಿತು. ಅದು ಅವನ ಯಜಮಾನ್ತಿಯ ಕಾರು. ಅವನೊಂದಿಗೆ  ನಾನೂ ಬದಿಗೆ  ಸರಿದು ನಿಂತು, ನಂತರ ಒಳಗೆ ಹೋದೆ.

ಇಬ್ಬರು ನಡುವಯಸ್ಸಿನ  ಮಹಿಳೆಯರು  ಲಘುಬಗೆಯಿಂದ ಕಾರಿನಿಂದಿಳಿದು  ಬಂಗಲೆ ಹೊಕ್ಕರು. ತುಸು ಹೊತ್ತಿನಲ್ಲಿ ತರುಣ ಜವಾನನೊಬ್ಬ ಬಂದು, ‘ಯಜಮಾನ್ತಿಯವರಿಗೆ ಹಾವು ಹಿಡಿಯುವುದನ್ನು ನೋಡಬೇಕಂತೆ. ಅವರು  ಹೊರಗೆ  ಬರುವವರೆಗೆ ಕಾಯಿರಿ!’ ಎಂದವನು  ಒಳಗೆ  ಹೋಗಿ ಸುಂದರ ಕೆತ್ತನೆಯ ಮರದ ಕುರ್ಚಿಯೊಂದನ್ನು ತಂದು ಅಂಗಳದಲ್ಲಿರಿಸಿದ. ಯಜಮಾನ್ತಿ ಮ್ಯಾಕ್ಸಿಧಾರಿಣಿಯಾಗಿ, ಗಜಗಾಂಭೀರ್ಯದಿಂದ ಬಂದು ಆಸೀನರಾದರು. ಗುಡಿಸಿ ಸ್ವಚ್ಛವಾಗಿರಿಸಿದ್ದ ಎದುರಿನ ತೋಟದಲ್ಲಿ, ಬಾವಿಯಷ್ಟಗಲದ ಒಂದು ತೊಟ್ಟಿ. ಅದರೊಳಗೆ  ಸುಮಾರು ಐದು ಸಾವಿರ ಲೀಟರ್ ನೀರು ಹಿಡಿಯುವ  ಪ್ಲಾಸ್ಟಿಕ್  ಟ್ಯಾಂಕ್‍ನ್ನು ಹೂಳಲಾಗಿತ್ತು. ಕ್ಷಣಕ್ಕೊಮ್ಮೆ ಭೀತಿಯಿಂದ ಕತ್ತುವಾಲಿಸಿ ಅತ್ತ ನಿರುಕಿಸುತ್ತಿದ್ದ ಕೆಲಸದಾಳೊಬ್ಬ, ‘ಹಾವು ಅದರೊಳಗಿದೆ ಸಾರ್…!’ ಎಂದ. ಅಷ್ಟೊತ್ತಿಗೆ ಇನ್ನಿಬ್ಬರು ಸಮವಸ್ತ್ರದ  ಆಳುಗಳು ಬಂದರು. ಸಂಪ್‍ನ  ಬಾಯಿಗೆ ಮುಚ್ಚಿದ್ದ ಚಪ್ಪಡಿಯ ತುಂಡೊಂದನ್ನು ನಾಲ್ವರೂ  ಸೇರಿ ಕಷ್ಟಪಟ್ಟು ಸರಿಸಿದೆವು. ಒಳಕ್ಕಿಳಿಯಲು  ಅಂತರವಿರಲಿಲ್ಲ.  ಬೋರಲು ಮಲಗಿ  ಅರ್ಧದೇಹವನ್ನು ಒಳಕ್ಕಿಳಿಯ ಬಿಟ್ಟು ಟಾರ್ಚ್  ಬೆಳಕಿನಿಂದ  ಹುಡುಕಿದೆ.  ಊಂಹ್ಞೂಂ, ಹಾವು ಕಾಣಿಸಲಿಲ್ಲ. ಉಳಿದ ಮುಕ್ಕಾಲು ಚಪ್ಪಡಿಯೆಡೆಯಲ್ಲೆಲ್ಲೋ ಅವಿತಿರಬೇಕು. ಅದನ್ನು ಸರಿಸಲು ಜೆಸಿಬಿ ಯಂತ್ರವೇ ಬೇಕಿತ್ತು!  ಹಾಗಾಗಿ ನಮ್ಮ ನಾಲ್ವರ ಅರ್ಧಘಂಟೆಯ  ಶ್ರಮ ವ್ಯರ್ಥವಾಯಿತು. ನಿರಾಶೆಯಿಂದ ಮಹಿಳೆಯತ್ತ  ದಿಟ್ಟಿಸಿದೆ. ಅವಳು ನಿರ್ಭಾವುಕಳಾಗಿ ಕಾರ್ಯಚರಣೆ ವೀಕ್ಷಿಸುತ್ತಿದ್ದವಳು, ನನ್ನತ್ತ ನೋಡಿ ಅಸಡ್ಡೆಯಿಂದ ಮುಖ ತಿರುವಿದಳು. ‘ಹಾವು  ಮತ್ತೆ  ಕಾಣಿಸಿ ಕೊಂಡರೆ  ಕರೆ ಮಾಡಿ!’ ಎಂದು ಕರೆದಾತನಿಗೆ ಹೇಳಿ ಹೊರಡಲನುವಾದೆ. ಆದರೆ ಅವನಿಂದಲಾಗಲೀ, ಅವನ  ಯಜಮಾನ್ತಿಯಿಂದಾಗಲೀ ಸೌಜನ್ಯಕ್ಕಾದರೂ ಒಂದು ಥ್ಯಾಂಕ್ಸ್‍ಎಂಬ ಪದ  ಹೊರಡಲಿಲ್ಲ.

ಅಂಗಳ ದಾಟುತ್ತಲೇ, ಬಣ್ಣಬಣ್ಣದ ಹೂವುಗಳ ಚಿತ್ತಾರವಿದ್ದ ಮೊಣಗಂಟುದ್ದದ ನಿಲುವಂಗಿ  ತೊಟ್ಟ ಇನ್ನೊಬ್ಬಳು ಹೆಂಗಸು ಎದುರಾದವಳು, ‘ನಮ್ಮೆಜಮಾನ್ರು ಊರಲಿಲ್ಲ ಇವ್ರೇ. ಇದ್ದಿದ್ದರೆ ಇಷ್ಟೊತ್ತಿಗೆ  ಆ ಹಾವಿನ ಕಥೆನೇ ಮುಗಿಯುತ್ತಿತ್ತು. ಶೂಟ್ ಮಾಡಿ ಸುಟ್ಟು ಬಿಸಾಕುತ್ತಿದ್ದರು. ಈ  ಹಿಂದೆ ಇಂಥ ಹಲವು ಹಾವುಗಳನ್ನು ಹಾಗೆಯೇ ಹೊಡೆದು ಕೊಂದಿದ್ದೇವೆ.  ನಮ್ಮ ಜಾತೀಲಿ ನಿಮ್ಮ ನಾಗ, ಗೀಗನ ಬಗ್ಗೆಯೆಲ್ಲ ನಂಬಿಕೆ ಇಲ್ಲ ನೋಡಿ!’ ಎಂದು ಅಣಕಿಸುವ ಧ್ವನಿಯಲ್ಲಿ  ಅಂದಳು.‘ಯಾಕಮ್ಮಾ ಕೊಂದಿದ್ದು? ಅವು ನಿಮ್ಮಲ್ಲಿ ಯಾರನ್ನಾದರೂ ಕಚ್ಚಿದವೇ?’ ಎಂದೆ ಬೇಸರದಿಂದ.

‘ಇಲ್ಲ ಇಲ್ಲಾ .ಕಚ್ಚಿಲ್ಲಾ…ಆದರೂ ವಿಷದ  ಹಾವುಗಳು ಮನೆಯ ಸುತ್ತಮುತ್ತ ಇರೋದು ಅಪಾಯವಲ್ವೇ. ಅದಕ್ಕೇ ಕೊಲ್ಲೋದು!’ ಎಂದಳು. ನಮ್ಮೊಳಗಿನ  ಅಜ್ಞಾನ ಮತ್ತು ಅಸಹಜ  ಭಯಗಳು ಇನ್ನೊಂದು ಜೀವಿಯನ್ನು ಎಷ್ಟೊಂದು ನಿಷ್ಕರುಣೆಯಿಂದ ನಾಶಮಾಡುತ್ತಾವಲ್ಲ…? ಎಂದೆನಿಸಿತು.

‘ಅಲ್ಲಮ್ಮಾ,  ನೀವು ಮುದ್ದಿನಿಂದ ಸಾಕಿ  ಬೆಳೆಸಿದಪ್ರಾಣಿ ಪಕ್ಷಿಗಳನ್ನೂ ಯಾರಾದರೂ ಹೊಡೆದು ಕೊಂದರೆ ನಿಮಗೇನನ್ನಿಸಬಹುದು..?’ ಎಂದೆ.ಅಷ್ಟಕ್ಕೆ ಆಕೆಯ ದುಂಡಗಿನ ಮುಖ  ಕಳೆಗುಂದಿ, ಹುಬ್ಬುಗಳು  ಗಂಟಿಕ್ಕಿದವು. ನನ್ನನ್ನು ದುರುಗುಟ್ಟಿ ನೋಡಿದವಳಲ್ಲಿ, ‘ಅರೇ…ಇವನು ನನಗೇ ಎದುರು ವಾದಿಸುತ್ತಿದ್ದಾನಲ್ಲ…! ’ಎಂಬ ತಿರಸ್ಕಾರ ಎದ್ದು  ಕಾಣಿಸಿತು.

‘ನೋಡಿ,  ಇಷ್ಟು ಕೇಳಿಯೇ ನಿಮಗೆ  ಕೋಪ  ಬಂತಲ್ಲವೇ? ಹಾಗಾದರೆ ಅಂಥ ಮೂಕ ಜೀವರಾಶಿಗಳನ್ನು ಸೃಷ್ಟಿಸಿದ‘ದೇವರು’ ಎಂಬ ಆ ಮಹಾನ್‍ಶಕ್ತಿಗೂ ನಿಮ್ಮಕೆಟ್ಟ ಕೆಲಸದಿಂದ ಖೇದವಾಗಿರಲಿಕ್ಕಿಲ್ಲವೇ…?  ನಾಗರಹಾವು ದೇವರ ಸ್ವರೂಪ, ಹಾಗಾಗಿ ಕೊಲ್ಲಬಾರದು! ಎಂಬುದು ಅವರವರ ನಂಬಿಕೆಗಳಿಗೆ ಸಂಬಂಧಿಸಿದ ವಿಚಾರ. ಆದರೆ ನಮ್ಮೆಲ್ಲರ  ನಂಬಿಕೆ, ಅಪನಂಬಿಕೆಗಳನ್ನು ಮೀರಿದಂಥ ನಿಸರ್ಗ  ನಿಯಮವೊಂದೂ ಇದೆಯಲ್ಲವೇ.ಅದನ್ನು ನಿರ್ವಹಿಸುವ ಆ ಶಕ್ತಿಗೂಇಂಥ ಮುಗ್ಧಜೀವಿಗಳ ಸೃಷ್ಟಿಯ ಹಿಂದೆ ಏನಾದರೊಂದು ಘನವಾದ ಉದ್ದೇಶವಿರದಿದ್ದೀತೇ  ಹೇಳಿ…?’ ಎಂದೆ. ಹೆಂಗಸು ಮತ್ತಷ್ಟು  ಸಿಡಿಮಿಡಿಗೊಂಡವಳು ರಪ್ಪನೆ ಮುಖ ಸಿಂಡರಿಸಿಕೊಂಡು ಒಳಗೆ ನಡೆದಳು. ನಾನೂ ಹಿಂದಿರುಗಿದೆ.

ಆದರೆ ಆ  ಹಾವಿನ ಅದೃಷ್ಟಕ್ಕೋ  ಏನೋ, ಅದು ಮರುದಿನ ಮತ್ತೆ ಕಾಣಿಸಿ ಕೊಂಡಿತು. ಈಗ ಅವರ ಸಂಸ್ಥೆಯ ಮ್ಯಾನೇಜರ್‍ ಕರೆ ಮಾಡಿದವನು,  ಹಿಂದಿನ  ದಿನ ಹೆಂಗಸು ನನ್ನೊಡನೆ ಆಡಿದ್ದ ಮಾತಿಗೆ ಬಹಳವೇ ನೊಂದಂತೆ ಕ್ಷಮೆಯಾಚಿಸಿದ  ಹಾಗೂ ಹಾವನ್ನು ಹಿಡಿದು ಕೊಂಡೊಯ್ಯಲು  ವಿನಂತಿಸಿದ. ಕೂಡಲೇ  ಹೋಗಿ ಹಾವನ್ನು ಹಿಡಿದೆ. ಇನ್ನೇನು ಒಂದೆರಡು ವಾರಗಳಲ್ಲಿ ಸಂತಾನೋತ್ಪತ್ತಿ ಕ್ರಿಯೆಗೆ ತಯಾರಾಗುತ್ತಿದ್ದ ಆ ದಷ್ಟಪುಷ್ಟವಾದ ಗಂಡು ಹಾವನ್ನುಅಂದೇ ಊರಿಗೆ ಮರಳಲಿದ್ದ ಬಂಗಲೆಯಯಜಮಾನನ ಕೋವಿಯ ಹೊಡೆತದಿಂದ ಪಾರುಮಾಡಿದೆ ಎಂಬ ನೆಮ್ಮದಿ ನನಗಾಯಿತು.

ಅಚ್ಚರಿಯೆಂದರೆ,  ಅಂದು ಸಂಜೆ ಅದೇ ಊರಿನಲ್ಲಿ ಇನ್ನೊಂದು ಘಟನೆ  ನಡೆಯಿತು. ಹಳೆಯ ಹೆಂಚಿನ ಉಪ್ಪರಿಗೆ ಮನೆಯ ಕ್ರೈಸ್ತ ವೃದ್ಧೆಯೊಬ್ಬರು ಕರೆ ಮಾಡಿ ,‘ಕನ್ನಡಿ ಹಾವೊಂದು (ವಿಷಕಾರಿಕೊಳಕು ಮಂಡಲ ಹಾವು) ನಮ್ಮಬಾವಿಗೆ ಬಿದ್ದಿದೆ. ನೀರು ಬಳಸಲಾಗುತ್ತಿಲ್ಲ.  ದಯವಿಟ್ಟು ಬಂದು ತೆಗೆದುಕೊಂಡೊಯ್ಯಿರಿ!’ ಎಂದು ಕೇಳಿಕೊಂಡರು. ತಕ್ಷಣ ಹೋದೆ. ಅಲ್ಲಿ ನೋಡಿದರೆ, ಅದೊಂದು ವಿಷರಹಿತವಾದ ನೀರುಹಾವು. (checkered keel back water snake)  ಪಕ್ಕದ ಮನೆಯವರು ಯಾರೋ ಅದನ್ನು ಕನ್ನಡಿ ಹಾವೆಂದು ಹೇಳಿ ಇವರನ್ನು ಹೆದರಿಸಿದ್ದರು! ‘ನೀರಿನಲ್ಲಿ  ವಂಶಾಭಿವೃದ್ಧಿ  ಮಾಡುವಂತಹ  ಸೊಳ್ಳೆ, ಕ್ರಿಮಿಕೀಟ, ಕಪ್ಪೆ ಮತ್ತವುಗಳ ಮೊಟ್ಟೆಮರಿಗಳನ್ನು ಈ ಹಾವುಗಳು ತಿಂದು ಬದುಕುವ ಮೂಲಕ ಬಾವಿಯ ನೀರನ್ನು ಶುದ್ಧವಾಗಿರಿಸುತ್ತವೆ!’ ಎಂದು ವಿವರಿಸಿದೆ .ಆದರೆ ಆ  ವೃದ್ಧದಂಪತಿ,  ‘ಅಯ್ಯೋ…!ಅದೇನೇ ಇರಲಿ ಇವ್ರೇ, ಈಗ ನೀವದನ್ನು ಹೇಗಾದರೂ  ಮಾಡಿ ಮೇಲೆತ್ತಲೇ ಬೇಕು .ನಾವು ಮುದುಕರಿಬ್ಬರೇ ಇರೋದು  ಮನೆಯಲ್ಲಿ, ಪ್ಲೀಸ್…!’ ಎಂದರು .ನಾನು ಪೇಚಾಟಕ್ಕೆ ಸಿಲುಕಿಕೊಂಡೆ. ಏಕೆಂದರೆ ಸದಾ  ನೀರಿನಲ್ಲೇ ಜೀವಿಸುವ  ನೀರೊಳ್ಳೆಹಾವುಗಳನ್ನು  ತುಂಬಿದ  ಬಾವಿಯಿಂದ ಮೇಲೆತ್ತುವುದು  ಹೇಗೆ?  ಸಾಧ್ಯವೇ ಇಲ್ಲ!  ಈ ಹಿಂದೆ ಬಾವಿಯಲ್ಲಿರುತ್ತಿದ್ದ ನೀರುಹಾವುಗಳನ್ನು ಹಿಡಿಯಲು ಅನೇಕ  ಬಾರಿ ಪ್ರಯತ್ನಿಸಿ  ಸೋತು ಸುಣ್ಣವಾಗಿದ್ದೆ. ಬಾವಿಯ ಅಂಕಣಕ್ಕೆ ಗಂಟಲನ್ನಾನಿಸಿಕೊಂಡು ನಿರುಮ್ಮಳವಾಗಿ ತೇಲುವ ಅವುಗಳು ನಾನು ಬಾವಿಗಿಳಿಯುತ್ತಲೇ  ಪುಳಕ್ಕನೆ ಮುಳುಗಿ, ಗಂಟೆಯಾದರೂ ಹೊರಗೆ ಬರುವುದಿಲ್ಲ. ಹಠಹಿಡಿದು ಹತ್ತು ಬಾರಿ ಪ್ರಯತ್ನಿಸಿದರೂ ಸೋಲೇ  ಗತಿ! ಆದರೆ ಈ  ಹಿರಿಯರಿಗೆ ಅದು ಅರ್ಥವಾಗಲೊಲ್ಲದು. ಹಾಗಾಗಿ  ಅವರ ಕಣ್ಣೆದುರು ಮತ್ತೊಮ್ಮೆ ಸೋಲಲನುವಾದೆ.

ದೋಟಿಯೊಂದಕ್ಕೆ ಕೊಕ್ಕೆಯನ್ನು ಕಟ್ಟಿ ,ಹಾವನ್ನು ಅದಕ್ಕೆ ಸಿಲುಕಿಸಿ ತುಸುವೇ ಮೇಲೆತ್ತಿದೆನಷ್ಟೆ. ಒಂದೇ ನೆಗೆತಕ್ಕೆ ಹಾವು ಗುಳುಂ ಎಂದಿತು.‘ಹೋ…, ಜೀಸೆಸ್…!’ಎಂದು ತಲೆಗೆ ಕೈ ಹೊತ್ತ ವೃದ್ಧೆಗೆ, ‘ಇಲ್ಲಮ್ಮಾ, ಇನ್ನದು ಒಂದು ಘಂಟೆಯಾದರೂ  ಮೇಲೆ ಬರುವುದಿಲ್ಲ. ಅಷ್ಟು ಹೊತ್ತು ಕಾಯಲು  ನನಗೆ ಸಮಯವಿಲ್ಲ. ಮತ್ತೆ ಪ್ರಯತ್ನಿಸುವುದು ವ್ಯರ್ಥ!’ ಎಂದೆ.

‘ಅಯ್ಯಯ್ಯೋ! ಬಿಟ್ಟು ಹೋಗಬೇಡಿ  ಪ್ಲೀಸ್. ಸ್ವಲ್ಪಕಾಯಿರಿ. ಈಗ ಬರುತ್ತೆ ನೋಡಿ. ಜೀಸೆಸ್‍ಕೈ ಬಿಡೋದಿಲ್ಲ .ಪ್ಲೀಸ್, ಪ್ಲೀಸ್…!’ ಎಂದವರೇ ಗಂಡ, ಹೆಂಡತಿ ಇಬ್ಬರೂ ಯಾವುದೋ ಮಂತ್ರ ಪಠಿಸುತ್ತ ಪ್ರಾರ್ಥನೆಗೆ ಶುರುವಿಟ್ಟುಕೊಂಡರು. ನನಗೆ ಮೈಯೆಲ್ಲ ಪರಚಿಕೊಳ್ಳುವಂತಾಯಿತು. ಆದರೆ ಮಾಡುವುದೇನು? ಸುಮ್ಮನೆ ಅವರನ್ನು ನೋಡುತ್ತ  ನಿಂತೆ.

ಹಿರಿಯರ ಪ್ರಾರ್ಥನೆ  ನಾಲ್ಕು ಸಾಲು ಮುಗಿದಿತ್ತೊ ಇಲ್ಲವೋ,ಹಾವು ಪುಸಕ್ಕನೆ ನೀರಿನಿಂದ ತಲೆ ಹೊರಗೆ ಹಾಕಬೇಕೇ! ನಾನು ಮತ್ತೊಮ್ಮೆ ದೋಟಿ ಎತ್ತಿದ್ದನ್ನು ಕಂಡ ವೃದ್ಧೆ, ‘ನಾನು  ಹೇಳಲಿಲ್ವೇ, ಅದು ಕೂಡ್ಲೇ ಬರುತ್ತೆ ಅಂತ!’ಎಂದವರೇ ಮತ್ತೆ ಆಗಸದತ್ತ ದೃಷ್ಟಿ ನೆಟ್ಟು ಪ್ರಾರ್ಥಿಸಲಾರಂಭಿಸಿದರು. ನಾನೂ ದೋಟಿಯನ್ನಿಳಿಸಿದೆ. ಹಾವು  ಸಿಲುಕಿಕೊಂಡಿತು. ಈ  ಸಲ ದಂಪತಿಗಳ ಯಾಚನೆಯ ಧ್ವನಿಗಳು ತಾರಕ್ಕೇರಲು ಇನ್ನೇನು  ಕೆಲವೇ  ಕ್ಷಣವಿತ್ತು .ದೋಟಿಗೆ ಸುರುಳಿ ಸುತ್ತಿ ಕುಳಿತಿದ್ದ ಹಾವು ಉತ್ಸವಮೂರ್ತಿಯಂತೆ ಮೇಲೆ ಬರುತ್ತಿತ್ತು. ನಾನೂ ಉಸಿರು ಬಿಗಿಹಿಡಿದು ಮೇಲೆತ್ತುತ್ತಿದ್ದೆ. ಸಂಪೂರ್ಣ ಬಂತು, ಇನ್ನೇನು ಕೈಗೆ ಸಿಕ್ಕೇ ಬಿಟ್ಟಿತು ಎಂಬಷ್ಟರಲ್ಲಿ ಮತ್ತೆ ಗುಳುಂ! ಸಳಸಳ ಬಳುಕುವ ಸಪೂರದ ದೋಟಿಯನ್ನೆತ್ತಿಯಾಡಿಸಿ ಎರಡೂ ರಟ್ಟೆಗಳು ನೋಯ ತೊಡಗಿದವು. ಆದ್ದರಿಂದ, ‘ಇಲ್ಲಮ್ಮ, ಇನ್ನು ಆ ಹಾವು ಬೇಗನೆ ಬರುವುದಿಲ್ಲ. ನಾನಿನ್ನು ಹೊರಡುತ್ತೇನೆ!’ಎಂದು ಬೇಸರದಿಂದ ಹೇಳಿ ಆಯಾಸ ಪರಿಹರಿಸಿಕೊಳ್ಳಲು ಅಲ್ಲೇ ಜಗುಲಿಯಲ್ಲಿ ಕುಳಿತೆ.

‘ಅಯ್ಯೋ ಜೀಸೆಸ್, ಹಾಗನ್ನ ಬೇಡಿ ಸಾರ್. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ.ಅಷ್ಟರಲ್ಲಿ ಬಂದೇ ಬರುತ್ತೆ!’ಎಂದು ಅಂಗಲಾಚಿದರು. ವಿಧಿಯಿಲ್ಲದೆ ದೂರದ ಆಸೆಯಿಟ್ಟುಕೊಂಡು, ‘ಆಯ್ತಮ್ಮಇನ್ನೊಮ್ಮೆ,ಕೊನೆಯ ಬಾರಿ ಪ್ರಯತ್ನಿಸುತ್ತೇನೆ. ಬಂದರೆ ಬಚಾವ್! ಇಲ್ಲದಿದ್ದರೆ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ!’ ಎಂದು ಬೇಡಿಕೊಂಡೆ.

‘ಆಯ್ತು, ಆಯ್ತು ಸಾರ್ ಹಾಗೆಯೇ ಆಗಲಿ…!’ ಎನ್ನುತ್ತ ವೃದ್ಧೆ ಮತ್ತೆ ಬಾವಿಯನ್ನು ಇಣುಕಿದವರು, ‘ಅಗೋ ಅಗೋ, ಬಂದೇ ಬಿಟ್ಟಿತು. ನೋಡಿ ನೋಡಿ…!  ಹೇ ಜೀಸೆಸ್…!’ ಎಂದು ಆನಂದದಿಂದ ಕಿರುಚಿದರು. ಅತ್ತ ಮಂಡಿ ನೋವಿನಿಂದಲೋ, ಇನ್ನೇನೊ ಸಮಸ್ಯೆಯಿಂದಲೋ ಅಲೂಮೀನಿಯಂ ಚೌಕವೊಂದರ ಆಸರೆ ಪಡೆದು ಎದ್ದು ನಿಂತ ವೃದ್ಧರು ಪತ್ನಿಯೊಡನೆ ಸೇರಿ ಈ ಬಾರಿ ತಾವೂ ಸಮಾನೆತ್ತಿಯ ನೇರಕ್ಕೆ ಕತ್ತೆತ್ತಿ ದಿಗಂತವನ್ನು ದಿಟ್ಟಿಸುತ್ತ ಆದ್ರ್ರರಾಗಿಪ್ರೇಯರ್‍ಗೆ ತೊಡಗಿದರು. ಪಾಪ! ವೃದ್ಧೆಯ ಕಣ್ಣುಗಳಿಂದ ನೀರು ಜಿನುಗುತ್ತಿತ್ತು. ವೃದ್ಧರ ಭಾವಾವೇಶವೂ  ತಾಳತಪ್ಪಿತ್ತು .ಇಬ್ಬರೂ ತರತರ ಕಂಪಿಸುತ್ತ ಬೇಡಿಕೊಳ್ಳುತ್ತಿದ್ದರು.

ಅವರ ಸ್ಥಿತಿಯನ್ನು ಕಂಡ ನನಗೂ ಛಲವೆದ್ದಿತು. ಅಷ್ಟರಲ್ಲಿ ಹಾವು ಕೂಡಾ ಮರಳಿಬಾವಿಯಅಂಚನ್ನು ಹತ್ತಿತು. ಇದ್ದಬದ್ಧ ಶಕ್ತಿ, ಯುಕ್ತಿಯನ್ನೆಲ್ಲ  ಕೂಡಿಸಿ ಹಾವನ್ನು ಕೊಕ್ಕೆಗೆ ಸಿಲುಕಿಸಿ,ದೋಟಿಯನ್ನು ಒಂದೇ ಉಸಿರಿಗೆ ಅರ್ಧದಷ್ಟುಮೇಲಕ್ಕೆಳೆದು ಅದೇ ವೇಗದಲ್ಲಿ ಬೀಸಿ ದೂರಕ್ಕೆಸೆದು ಬಿಟ್ಟೆ! ಆಕಾಶದೆತ್ತರಕ್ಕೆ ಚಿಮ್ಮಿದ  ಹಾವು ಸುರುಳಿ ಸುರುಳಿಯಾಗಿ ತೇಲಿ,ನುಲಿಯುತ್ತ ಸಮೀಪದ ಮಲ್ಲಿಗೆಯ ಪೊದೆಗೆ ಹೋಗಿ ಬಿತ್ತು. ಧಾವಿಸಿ ಹೋಗಿ  ಹಿಡಿದೆ. ದೋಟಿ ಎಗರಿದ ಸಟಸಟಸದ್ದಿಗೆ ಕಣ್ತೆರೆದ ದಂಪತಿ ನನ್ನಕೈಯಲ್ಲಿ ಕೊಸರಾಡುತ್ತಿದ್ದ ಹಾವನ್ನು ಕಂಡು ಬೆಚ್ಚಿಬಿದ್ದರು. ವೃದ್ಧೆ ಒಮ್ಮೆಲೇ, ‘ಯಾ ಮಾಯೀ…!’ಎಂದರಚುತ್ತ, ಚೌಕದಾಸರೆಯಲ್ಲಿ ನಿಂತು ಕಂಪಿಸುತ್ತಿದ್ದ ಗಂಡನನ್ನು ಬಾಚಿತಬ್ಬಿಕೊಂಡರು. ಮಡದಿಯ ಅಪ್ಪುಗೆಯಲ್ಲಿ ವೃದ್ಧರ ನಡುಕ ತುಸು ಹತೋಟಿಗೆ ಬಂತು. ಅದನ್ನು ಕಂಡ ನಾನೂ ಖುಷಿಯಿಂದ  ಪುಳಕಗೊಂಡೆ.

ನೋಡಿಯಮ್ಮಾ ಇದು ವಿಷರಹಿತ ಹಾವು. ಭಯ ಪಡಬೇಡಿ.ಇದನ್ನು ದೂರವೆಲ್ಲಾದರೂ ಬಿಡುವುದಕ್ಕಿಂತ ಇಲ್ಲೇ ಬಿಟ್ಟರಾಗದೇ…? ಎಂದೆ. ಅಷ್ಟರಲ್ಲಿ ಸ್ಥಿಮಿತಕ್ಕೆ ಬಂದಿದ್ದ ಆ ತಾಯಿ,‘ಅಯ್ಯೋ ಪಾಪ!ದೂರವೆಲ್ಲೂ ಬಿಡುವುದು ಬೇಡ.ಇಲ್ಲೇ ಬಿಟ್ಟುಬಿಡಿಅದನ್ನು!’ಎಂದುಕರುಣೆಯಿಂದ ಅಂದಾಗ ಅಚ್ಚರಿಯಾಯಿತು.

‘ಅಲ್ಲಮ್ಮಾ, ನಿಮ್ಮಲ್ಲಿ ಅನೇಕರು ಹಾವನ್ನು ಕಂಡಲ್ಲಿ ಹೊಡೆದು ಕೊಲ್ಲುತ್ತಾರೆ ಅಥವಾ ಹಿಡಿಸಿ ಕೊಂಡೊಯ್ಯಲು ಹೇಳುತ್ತಾರೆ. ಅಂಥದ್ದರಲ್ಲಿ ನೀವು ಇಲ್ಲೇ ಬಿಟ್ಟುಬಿಡಿ ಅನ್ನುತ್ತಿದ್ದೀರಿ, ಗೊಂದಲವಾಗುತ್ತಿದೆ ನನಗೆ!’ಎಂದೆ.

ಅವರಿಗೆ ನನ್ನ ಮಾತಿನ ಅರ್ಥವಾಗಿರಬೇಕು, ‘ಹೌದು. ಕೊಲ್ಲುವವರು ಬುದ್ಧಿಯಿಲ್ಲದೆ ಕೊಲ್ಲುತ್ತಾರೆ. ನಾವು ಹಾಗೆಲ್ಲ ಮಾಡುವುದಿಲ್ಲ. ಆ ಮೂಕಜೀವಿಗಳು ನಮ್ಮಂತೆಯೇ ಜೀಸೆಸ್‍ನ ಸೃಷ್ಟಿಯಲ್ಲವೇ! ಅವುಗಳನ್ನು ಸಾಯಿಸುವ ಹಕ್ಕು ನಮಗ್ಯಾರೀಗೂ ಇಲ್ಲ. ಹಾಗೆಯೇ ಇಂದಿನ ನಿಮ್ಮಉಪಕಾರವನ್ನು ಮರೆಯೋದಿಲ್ಲ!’ಎಂದು ಆ ಹಿರಿಯ ಜೀವಗಳು ಪ್ರೀತಿಯಿಂದ ಕೈಮುಗಿದಾಗ ಬಾನಿನ ತುಂಬ ಹರಡಿದ್ದ  ಸಂಜೆಯೋಕುಳಿಯ ರಂಗಿನೆಡೆಯಲ್ಲೆಲ್ಲೋ ಜೀಸೆಸ್  ಮೆಲುವಾಗಿ ನಕ್ಕಂತಾಯಿತು. ಹಿರಿಯರಿಗೆ ಪ್ರತಿವಂದಿಸಿದವನು, ‘ಹಾವನ್ನು ಇಲ್ಲೇ ಬಿಟ್ಟರೆ ಮತ್ತೆ ಬಾವಿಗಿಳಿಯುತ್ತದೆ. ತುಸು ದೂರದ ಗದ್ದೆಗೆ ಕೊಂಡೊಯ್ದು ಬಿಡುತ್ತೇನೆ!’ ಎಂದು ತಿಳಿಸಿ ಗೆಲುವಿನಿಂದ ಹಿಂದಿರುಗಿದೆ.

*ಗುರುರಾಜ ಸನಿಲ್, ಉಡುಪಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

11 thoughts on “ಮಾನವೀಯತೆ ಮತ್ತು ಕ್ರೌರ್ಯ, ಪ್ರಾರ್ಥನೆ ಇತ್ಯಾದಿ….”

  1. ಯಾವೊತ್ತೂ ಗುರುರಾಜರ ಉರಗಗಾಥೆ ಓದುವುದು ಕೇಳುವುದು ಚೇತೋಹಾರಿಯಾದುದು.. ಧನ್ಯವಾದಗಳು

    1. ಅನಿತಾ ಪಿ ತಾಕೊಡೆ

      ತಮಗಾದಂಥ ಅನುಭವವನ್ನೇ ಲೇಖನ ರೂಪಕ್ಕಿಳಿಸುವ…. ಹಾಗೂ ಓದುಗನಲ್ಲಿ ಕುತೂಹಲ ಕೆರಳಿಸುವ ನಿಮ್ಮ ನಿರೂಪಣೆ ಶೈಲಿ ನನಗಿಷ್ಟ. ಅಭಿನಂದನೆ ಸರ್

  2. Rajendra B Shetty

    ಹಾವುಗಳ ಬಗ್ಗೆ ಕಳಕಳಿ ವ್ಯಕ್ತಪಡಿಸುತ್ತಾ, ಮನುಷ್ಯರ ವಿವಿಧ ಮುಖಗಳ ಪರಿಚಯ ಮಾಡಿಸಿದಿರಿ.
    ಲೇಖನ ಆಸಕ್ತಿದಾಯಕವಾಗಿಯೂ ಇತ್ತು.

  3. ತುಂಬಾ ಆಯಸಕ್ತಿದಾಯಕ ಲೆಖನ ಸರ್, ನಿಮ್ಮ ಲೇಖನಗಳಿಂದ ಹಾವುಗಳ ಪಾತ್ರ ನಿಸರ್ಗದಲ್ಲಿ ಎಷ್ಟು ಮುಖ್ಯ ಎಂಬ ಅರಿವಾಓಸ್ಪೂರ್ತಿದದಾಯಕ. ತುಂಬಾ ಧನ್ಯವಾದಗಳು ಸರ್ 🙏

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter