ಪುರಸೊತ್ತೆಲ್ಲಿದೆ ನಮಗೆ ?
ಪುರಸೊತ್ತೆಲ್ಲಿದೆ ನಮಗೆ? ಭವಿಷ್ಯದತ್ತ ಚಿಂತಿಸಲು?
ಯಂತ್ರಗಳ ಗಡಗಡಾಟ
ಸ್ವಿಚ್ಚುಗಳ ಪಟಪಟಾಟ
ವಾಹನಗಳ ಗುಡುಗಾಟಗಳಲಿ
ಗೇಣುದ್ದ ಹೊಟ್ಟೆಯ ತಳವಿಲ್ಲದ ಚೀಲವ
ತುಂಬುವ ಹಪಹಪದಲಿ
ಬೆಳಕಿನಿಂದಿರುಳನಕ
ದುಡಿಯುವ ನಮಗೆ ಪುರಸೊತ್ತೆಲ್ಲಿದೆ?
ಬಸ್ಸು ರೇಶನ್ ಸೀಮೆಯೆಣ್ಣೆ ಸಿನೆಮಾಗಳ ಕ್ಯೂನಲ್ಲಿ
ಜಾಗ ಗಿಟ್ಟಿಸಲು
ಪ್ರತಿದಿನವೂ ಪ್ರತಿ ಕ್ಷಣವೂ
ಹೊಡೆದಾಡುವ ನಮಗೆ ಪುರಸೊತ್ತೆಲ್ಲಿದೆ
ಪರರ ಹುಳುಕನಾರಿಸಿ ಶುದ್ಧ ಗೈಯುವ
ನಿರಂತರ ಕಾಯಕವ ಕೈಕೊಂಡ
ನಮಗೆ, ಶ್ರಮಜೀವಿಗೆ
ನಮ್ಮ ಭವಿಷ್ಯವ ಕುರಿತು ಚಿಂತಿಸಲು ಪುರುಸೊತ್ತೆಲ್ಲಿದೆ?
ಇಂದಿನ ಈ ಹೊತ್ತಿನ ಚಿಂತೆಯಲೇ
ತಲೆ ತುರಿಸಿಕೊಳ್ಳಲೂ ಆಗದೆ
ತಲೆ ನರೆಸಿಕೊಳ್ಳುವ ನಮಗೆ
ನಾಳಿನ ಚಿಂತೆಗೆ ಪುರಸೊತ್ತೆಲ್ಲಿ?
ಡಾ ಸತ್ಯವತಿ ಮೂರ್ತಿ