ಡುಂಡಿ ರಾಮ್ಸ್ ಲಿಮರಿಕ್ಸ್ (ಪಂಚ್ ಪದಿಗಳು)

(ಡುಂಡಿರಾಮ್ಸ್ ಲಿಮರಿಕ್ಸ್ ಅನ್ನುವ ವಿಶಿಷ್ಟ ಕೃತಿ ಇದೇ ಅಕ್ಟೋಬರ್ 9 ರಂದು ಬಿಡುಗಡೆಯಾಗುತ್ತಿದೆ. ಇದು  ಕವಿಗಳಾದ ಡುಂಡಿರಾಜ್ ಮತ್ತು ಅಣಕವಾಡುಗಳ ಸರದಾರ ಎಂದು ಖ್ಯಾತರಾದ ಎನ್. ರಾಮನಾಥ್ ಜಂಟಿಯಾಗಿ ರಚಿಸಿದ ಚುಟುಕುಗಳ ಸಂಕಲನ. ಇದಕ್ಕೆ ಪ್ರಸಿದ್ಧ ವಿಮರ್ಶಕ ಡಾ. ಬಿ.ಜನಾರ್ದನ ಭಟ್ ಅವರು ಬರೆದ  ಮುನ್ನುಡಿ ಇಲ್ಲಿದೆ . ಲಿಮರಿಕ್ಸ್ ಗಳ ಬಗ್ಗೆ ಇದೊಂದು ಅಪರೂಪದ ಲೇಖನ.)

ಕನ್ನಡದ ಪ್ರಸಿದ್ಧ ಹಾಸ್ಯ ಕವಿಗಳಾದ ಡುಂಡಿರಾಜ್ ಮತ್ತು ರಾಮನಾಥ್ ಅವರ ಜೋಡಿ ಬರೆದ ಈ ಪಂಚಪದಿಗಳ ಅಪೂರ್ವ ಸಂಗ್ರಹಕ್ಕೆ ಮುನ್ನುಡಿಯನ್ನು ಬರೆಯುವ ಸುಯೋಗ ನನ್ನದಾಗಿದೆ. ಹಾಸ್ಯಕ್ಕೆ ವಿವರಣೆ ಬೇಕಾಗಿಲ್ಲ ಎನ್ನುವುದು ಸಾರ್ವಕಾಲಿಕ ಸತ್ಯ. ಅದಕ್ಕಾಗಿ ಇಲ್ಲಿ ನಾನು ಈ ಪಂಚಪದಿ ಅಥವಾ ಇಂಗ್ಲಿಷ್ ಮೂಲದ ಲಿಮರಿಕ್ (limerick)  ಎಂಬ ಹಾಸ್ಯ ಕಾವ್ಯ ಪ್ರಕಾರದ ಬಗ್ಗೆ ನಾಲ್ಕು ಮಾತುಗಳನ್ನು ಬರೆಯುವ ಅವಕಾಶವನ್ನು ಮಾಡಿಕೊಂಡಿದ್ದೇನೆ. ಹೊಸತೇ ಒಂದು ಪ್ರಕಾರದ ರಚನೆಗಳನ್ನು ಓದುವಾಗ ಅಥವಾ ನಮಗೆ ಹೊಸದಾಗಿದ್ದರೂ ವಿದೇಶದಲ್ಲಿ ಒಂದು ಪರಂಪರೆಯಿರುವ ಪ್ರಕಾರದ ರಚನೆಗಳನ್ನು ಓದುವಾಗ ಅದರ ರೀತಿ, ನೀತಿ, ಚೌಕಟ್ಟು, ಚರಿತ್ರೆಗಳನ್ನು ಸಂಕ್ಷಿಪ್ತವಾಗಿಯಾದರೂ ಪರಿಚಯ ಮಾಡಿಕೊಂಡು ಓದಿದರೆ ಅದರಲ್ಲಿ ಸೊಗಸು ಹೆಚ್ಚು.

ಅಲ್ಲದೆ ಹಾಸ್ಯಕ್ಕೆ ವಿವರಣೆ ಬೇಕಾಗುವ ಪ್ರಸಂಗಗಳೂ ಇರುವುದಿಲ್ಲವೆಂದಲ್ಲ. ಕೆಲವರು ಒಂದು ಹಾಸ್ಯಕ್ಕೆ ಮೂರು ಬಾರಿ ನಗುತ್ತಾರೆಂಬ ಮಾತಿದೆ. ಒಮ್ಮೆ ಆ ಹಾಸ್ಯ ಪ್ರಸಂಗವನ್ನು ಕೇಳಿದಾಗ, ಇನ್ನೊಮ್ಮೆ ಅದನ್ನು ಇನ್ನೊಬ್ಬರು ವಿವರಿಸಿ ಅರ್ಥ ಹೇಳಿದಾಗ, ಮೂರನೆಯ ಬಾರಿಗೆ ಸ್ವತಃ ಅವರಿಗೆ ಅದು ಅರ್ಥವಾದಾಗ! ಅಂತಹ ಪ್ರಸಂಗಗಳಿಗೆ ಮುನ್ನುಡಿ ಮದ್ದಾಗಲಾರದಾದರೂ, ಕೆಲವೊಮ್ಮೆ ಹಿನ್ನೆಲೆ ತಿಳಿಯದಿದ್ದರೆ ಬುದ್ಧಿವಂತರಿಗೂ ಅರ್ಥವಾಗದೆ ಹೋಗುವ ಸಂದರ್ಭಗಳಿವೆ. ಕಾಲ, ದೇಶಗಳಿಗೆ ಸೀಮಿತವಾದ ವಸ್ತುಗಳ ಮೇಲೆ ಕಟ್ಟಿದ ಹಾಸ್ಯ ಪ್ರಸಂಗಗಳು ಮತ್ತು ಕವಿತೆಗಳು ಈ ಬಗೆಯವು. ಉದಾಹರಣೆಗೆ, ‘ಆಂಥ್ರಾಕ್ಸ್’ ಎಂಬ ಶಬ್ದವನ್ನು ಹಾಸ್ಯಕ್ಕಾಗಿ ಬಳಸಿದ್ದನ್ನು ನಾನು ನಾಟಕವೊಂದರಲ್ಲಿ ನೋಡಿದೆ. ಅದು ಸದ್ದಾಮ್ ಹುಸೇನ್ ಕಾಲದಲ್ಲಿ ಚಾಲ್ತಿಯಲ್ಲಿದ್ದ ಶಬ್ದ. ಹಾಗೆಯೇ, ‘ಮಾಸ್ಕ್’, ‘ವ್ಯಾಕ್ಸೀನ್’ ಮುಂತಾದವುಗಳನ್ನು ಇಟ್ಟುಕೊಂಡು ಈಗ ಹಾಸ್ಯ ಕವಿತೆಗಳನ್ನು, ವ್ಯಂಗ್ಯಚಿತ್ರಗಳನ್ನು ಬರೆದರೆ ಐವತ್ತು ವರ್ಷದ ನಂತರ ಓದುಗರಿಗೆ ವಿವರಣೆ ಬೇಕಾದೀತೋ ಏನೋ! ‘ಕೊತ್ತಿಮಿರಿ ಸೊಪ್ಪು’ ಎಂದ ಕೂಡಲೆ, ಈ ಕಾಲದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಕನ್ನಡಿಗರಿಗೆ ಏನೋ ನೆನಪಾಗಬಹುದು. ಮುಂದೆ ಅದು ಕನ್ನಡಿಗರಿಗೂ ನೆನಪಿರಲಾರದು. ಕೆಲವು ಶಬ್ದಗಳಿಗೆ, ಸಂಗತಿಗಳಿಗೆ ಶಾಶ್ವತ ಮೌಲ್ಯ ಇರುವುದಿಲ್ಲವಾದರೂ ಇನ್ನು ಕೆಲವು ವಿಚಾರಗಳಿಗೆ ಇರುತ್ತದೆ. ಉದಾಹರಣೆಗೆ, ಸಾಪೇಕ್ಷತಾ ಸಿದ್ಧಾಂತ (ಐನ್‍ಸ್ಟೀನನ ಥಿಯರಿ ಆಫ್ ರಿಲೇಟಿವಿಟಿ). ಆದರೆ ಅದೂ ಅರ್ಥವಾಗಲು ವಿವರಣೆ ಬೇಕಾದೀತು. ಇಲ್ಲಿಯೇ ಕೆಳಗೆ ಕೊಟ್ಟಿರುವ ಸಾಪೇಕ್ಷತಾ ಸಿದ್ಧಾಂತದ ಮೇಲೆ ಕಟ್ಟಿದ ಲಿಮರಿಕ್ ಬಹುಶಃ ಈ ಸಿದ್ಧಾಂತದ ತಿಳಿವಳಿಕೆ ಇಲ್ಲದವರಿಗೆ ಅರ್ಥವಾದೀತೆಂದು ಹೇಳುವ ಹಾಗಿಲ್ಲ. ಆದರೆ ಇಂತಹ ಶಾಶ್ವತ ಮೌಲ್ಯ ಇರುವ ಅಭಿಜಾತ ಹಾಸ್ಯ ರಚನೆಗಳನ್ನು ಸಣ್ಣಪುಟ್ಟ ಟಿಪ್ಪಣಿಗಳನ್ನು ಕೊಟ್ಟು ಉಳಿಸಿಕೊಳ್ಳುವುದು ಕೂಡ ಅಗತ್ಯ.

ಐನ್‍ಸ್ಟೀನ್ ಅವರ ಸಾಪೇಕ್ಷತಾ ಸಿದ್ಧಾಂತ ಮೊದಲ ಬಾರಿಗೆ ವಿಶ್ವಕ್ಕೆ ತಿಳಿದಾಗ ಜಗತ್ತಿಗೆ ಅಚ್ಚರಿಯೂ, ಆಘಾತವೂ ಆಯಿತಷ್ಟೆ. ಆಗ ಅದನ್ನು ಅರ್ಥ ಮಾಡಿಕೊಳ್ಳಲು ಬಹಳ ಪ್ರಯತ್ನಗಳೂ ನಡೆದಿದ್ದವು. ಇನ್ನೊಂದೆಡೆ ಅದನ್ನು ಶುದ್ಧ ಮನಸ್ಸಿನಿಂದ ಹಾಸ್ಯ ಮಾಡಿದ್ದೂ ಇದೆ – ಈಗ ಕೊರೊನಾ, ಮಾಸ್ಕ್, ಸಾಮಾಜಿಕ ಅಂತರ ಇತ್ಯಾದಿಗಳನ್ನು ಹಾಸ್ಯ ಮಾಡಿದ ಹಾಗೆ. ಜಗತ್ತಿನಲ್ಲಿ ಕಾಲ ಕಾಲಕ್ಕೆ ಯಾವುದು ಮುಖ್ಯ ವಿದ್ಯಮಾನವೆಂದು ಎದ್ದುಬರುತ್ತದೋ ಅದನ್ನು ವ್ಯಂಗ್ಯ ಚಿತ್ರಕಾರರು ಎತ್ತಿಕೊಳ್ಳುತ್ತಾರೆ. ಕೊರೊನಾ ಲಸಿಕೆಯ ಬಗ್ಗೆ ವ್ಯಂಗ್ಯ ಚಿತ್ರಗಳನ್ನು ರಚಿಸುವ ಹಾಗೆ.

                ಸಾಪೇಕ್ಷತಾ ಸಿದ್ಧಾಂತದ ಒಂದು ಪ್ರಮೇಯ, ಬೆಳಕಿನ ವೇಗಕ್ಕಿಂತ ವೇಗವಾಗಿ ಹೋದರೆ ಕಾಲವೂ ಸಾಪೇಕ್ಷವಾಗಿರುತ್ತದೆ ಎನ್ನುವುದು. ಉದಾಹರಣೆಗೆ ಯಾರಾದರೂ ಬೆಳಕಿನ ವೇಗಕ್ಕಿಂತ ವೇಗವಾಗಿ ಹೋಗುವ ರಾಕೆಟಿನಲ್ಲಿ ಬಾಹ್ಯಾಕಾಶಕ್ಕೆ ಹೋಗಿ ಹಲವು ವರ್ಷಗಳ ನಂತರ ಭೂಮಿಗೆ ಹಿಂದಿರುಗಿದರೆ ಅವರ ವಯಸ್ಸು ಹೆಚ್ಚೇನೂ ಬದಲಾಗಿರುವುದಿಲ್ಲ; ಆದರೆ ಇಲ್ಲಿನ ಅವರ ಓರಗೆಯವರು ಮುದುಕರಾಗಿರುತ್ತಾರೆ! ಇಂತಹ ಸಿದ್ಧಾಂತ ಬಂದಾಗ ಹುಟ್ಟಿಕೊಂಡ ಲಿಮರಿಕ್ ಒಂದು ಇನ್ನೂ ಜಗತ್ತಿನಾದ್ಯಂತ ಪ್ರಸಿದ್ಧವಾಗಿ ಚಲಾವಣೆಯಲ್ಲಿದೆ!

1923 ರಲ್ಲಿ ಲಂಡನಿನ ಪ್ರಸಿದ್ಧ ಹಾಸ್ಯ ಪತ್ರಿಕೆ – ವ್ಯಂಗ್ಯ ಚಿತ್ರಗಳಿಗೂ ಅದು ಪ್ರಸಿದ್ಧ – ‘ಪಂಚ್’ನಲ್ಲಿ ಅದು ಮೊದಲು ಅನಾಮಧೇಯ ಕವಿಯ ಹೆಸರಿನಲ್ಲಿ ಪ್ರಕಟವಾಯಿತು. ಅದು ಹೀಗಿದೆ:

There was a young lady named Bright

Whose speed was much faster than light.

She set out one day

In a relative way

And returned (on) the previous night.

ಸುಮಾರಾಗಿ ಇದರ ಭಾವಾರ್ಥ ಹೀಗೆ (ಅನುವಾದ ನನ್ನದು; ಲಿಮರಿಕ್‍ನ ಜೀವಾಳವೆನ್ನಬಹುದಾದ ಪ್ರಾಸಗಳನ್ನು ಬಳಸಿಲ್ಲ):

ಬ್ರೈಟ್ ಎಂಬ ಹೆಸರಿನವಳು ಇದ್ದಳೊಬ್ಬಳು

ಬೆಳಕಿಗಿಂತ ವೇಗವಾಗಿ ಚಲಿಸುವವಳು

ಒಂದುದಿನ ಹಗಲು ಸಾ-

ಪೇಕ್ಷ ರೀತಿಯಲ್ಲಿ ಹೊರಟು

ಹಿಂದಿನ ದಿನ ರಾತ್ರಿಯೇ ಹಿಂದಿರುಗಿದಳು.

ಈ ಕವಿತೆಯನ್ನು ಬರೆದವರು ಯಾರು ಎಂದು ಬಹಳ ದೊಡ್ಡ ಚರ್ಚೆ ನಡೆಯಿತು. ಕೆಲವರು ಸ್ವತಃ ಐನ್‍ಸ್ಟೀನ್ ಬರೆದಿರಬೇಕೆಂದು ಊಹಿಸಿದರು. ಬಿಷಪ್ ಆಫ್ ಚೆಲ್ಮ್ಸ್‍ಫರ್ಡ್ ಬರೆದಿರಬೇಕೆಂದು ಕೆಲವರು ಹೇಳುತ್ತಿದ್ದರು. ಕೊನೆಗೆ ರೆಜಿನಾಲ್ಡ್ ಬುಲರ್ ಎಂಬ ಪ್ರೊಫೆಸರ್ 1937 ರಲ್ಲಿ ‘ದ ಅಬ್ಸರ್ವರ್’ ಪತ್ರಿಕೆಗೆ ಪತ್ರ ಬರೆದು, ಆ ಲಿಮರಿಕನ್ನು ಬರೆದವನು ತಾನೆಂದು ಬಹಿರಂಗಪಡಿಸಿದರು. ಅವರು ಮತ್ತು ಅವರ ಜತೆಗಾರ  ಪ್ರೊಫೆಸರ್ ಒಬ್ಬರು ಒಂದು ತೋಟದಲ್ಲಿ ಕುಳಿತುಕೊಂಡು ಸಾಪೇಕ್ಷ ಸಿದ್ಧಾಂತದ ಬಗ್ಗೆ ಚರ್ಚಿಸುತ್ತಿದ್ದಾಗ ಅದರ ಬಗ್ಗೆ ಇಬ್ಬರೂ ಒಂದೊಂದು ಲಿಮರಿಕ್ ಬರೆಯೋಣ ಎಂದು ಹೇಳಿಕೊಂಡು ಬರೆದರಂತೆ. ಬುಲರ್ ಆಮೇಲೆ ತಮ್ಮ ಲಿಮರಿಕ್ಕನ್ನು ಪಂಚ್ ಪತ್ರಿಕೆಗೆ ಕಳುಹಿಸಿದರು. ಅಂತಹ ವೈಜ್ಞಾನಿಕ ಸಿದ್ಧಾಂತವನ್ನು ಹಾಸ್ಯ ಮಾಡುವುದು ಸ್ವತಃ ವಿಜ್ಞಾನದ ಪ್ರೊಫೆಸರ್ ಆದ ತಮಗೆ ಶೋಭಿಸದು ಎಂದು ಅನಾಮಧೇಯರಾಗಿರಲು ಇಚ್ಛಿಸಿದ್ದರು. ಪಂಚ್ ಪತ್ರಿಕೆ ಅದನ್ನು ಪ್ರಕಟಿಸಿದಾಗ ಅವರಿಗೆ ಸಂಭಾವನೆಯನ್ನೂ ನೀಡಿತ್ತು. ಹದಿನಾಲ್ಕು ವರ್ಷಗಳ ನಂತರ ಇದು ಬುಲರ್ ಅವರದೆಂದು ಜಗತ್ತಿಗೆಲ್ಲ ಗೊತ್ತಾಯಿತು.

ಈ  ಲಿಮರಿಕ್ ಅನ್ನು ಕೆಲವರು ಅಲ್ಪಸ್ವಲ್ಪ ಬದಲಾಯಿಸಿಯೂ ಪ್ರಕಟಿಸಿದ್ದಾರೆ. ನಾಯಕಿಯ ಹೆಸರು ಬ್ರೈಟ್ ಇದ್ದಲ್ಲಿ ಲೈಟ್ ಎಂದು ಒಂದು ಆವೃತ್ತಿಯಲ್ಲಿ ಬದಲಾಯಿಸಿದ್ದರು. Much faster than light  ಇದ್ದಲ್ಲಿ far faster than light  ಮಾಡಿದ್ದಾರೆ. ಎರಡನೆಯ ಮತ್ತು ಕೊನೆಯ ವಾಕ್ಯಗಳನ್ನು ಬಹಳಷ್ಟು ಜನ ಬದಲಾಯಿಸಿದ್ದಾರೆ. ಎರಡು ಉದಾಹರಣೆಗಳು -‘Who would travel much faster than light’  ಮತ್ತು ‘And came back the previous night’  – ಇತ್ಯಾದಿ. ನನ್ನ ಪದ್ಯವನ್ನು ದಯವಿಟ್ಟು ತಿರುಚಬೇಡಿ ಎಂದೂ ಆಮೇಲೆ ಬುಲರ್ ಕೇಳಿಕೊಳ್ಳಬೇಕಾಯಿತು. ಅಂತೂ ಇಂದಿಗೂ ಕೇಳಿದವರಿಗೆಲ್ಲ ಖುಷಿ ಕೊಡುವ ಒಂದು ಲಿಮರಿಕ್ ಈ ಸಾಪೇಕ್ಷತಾ ಸಿದ್ಧಾಂತದ ಲಿಮರಿಕ್.

ಬುಲರ್ ಈ ಲಿಮರಿಕ್‍ಗೆ ಜೋಡಿಯಾದ ಇನ್ನೊಂದು ಲಿಮರಿಕನ್ನೂ ಬರೆದಿದ್ದಾರೆ; ಅದರಲ್ಲಿ ಸಾಪೇಕ್ಷ ಸಿದ್ಧಾಂತದ ಇನ್ನೊಂದು ಪ್ರಮೇಯವಿದೆ.

To her friends said the Bright one in chatter,

‘I have learned something new about matter:

My speed was so great,

Much increased was my weight,

Yet I failed to become any fatter!’

(ಅದೇ ಮಹಿಳೆ ಬ್ರೈಟ್ ಆಮೇಲೆ ಹರಟೆ ಹೊಡೆಯುತ್ತ ಹೇಳಿದಳಂತೆ, ‘ನಾನು ದ್ರವ್ಯರಾಶಿಯ ಬಗ್ಗೆಯೂ ಸ್ವಲ್ಪ ಕಲಿಯುವಂತಾಯಿತು. ನನ್ನ ವೇಗ ಎಷ್ಟಿತ್ತೆಂದರೆ ನನ್ನ ಭಾರ ತುಂಬಾನೇ ಹೆಚ್ಚಾಯಿತು. ಆದರೆ ನಾನು ಭಾರವಾದರೂ ತೋರವಾಗಲಿಲ್ಲ!’).

ಇರಲಿ, ಈಗ ಮೊದಲಿಗೆ ಲಿಮರಿಕ್ ಎಂಬ ಹಾಸ್ಯ ಕವಿತೆಯ ಬಗ್ಗೆ ಕೆಲವು ವಿಚಾರಗಳನ್ನು ನೋಡೋಣ.

                                                                                 ***

                ಲಿಮರಿಕ್ ಇಂಗ್ಲಿಷ್ ಮಾತನಾಡುವ ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಐದು ಸಾಲಿನ ಹಾಸ್ಯ ಕವಿತೆ – ಪಂಚಪದಿ. ಇಂಗ್ಲಿಷ್ ಭಾಷೆಯಲ್ಲಿ ಇದು ಹಾಸುಹೊಕ್ಕಾಗಿರುವ ಪದ್ಯಬಗೆ. ಅಸಂಗತ ಲಿಮರಿಕ್‍ಗಳು ಕಲ್ಪನೆಯನ್ನು ವಿಸ್ತರಿಸಿ ಮನಸ್ಸನ್ನು ಮುದಗೊಳಿಸಿ, ಮಗು ಉಕ್ಕಿಸುತ್ತವೆ. ಅವುಗಳಿಗೆ ನಾನ್‍ಸೆನ್ಸ್ ಹಾಸ್ಯ ಪ್ರಕಾರ ಎಂಬ ಹೆಸರಿದೆ. ಕನ್ನಡದಲ್ಲಿ ನಿರರ್ಥ ಪದ್ಯಗಳು ಎನ್ನಬಹುದು. (ಉದಾಹರಣೆಗೆ, ಕೈಲಾಸಂ ಅವರ, “ಕಾಶೀಗೋದ ನಂಭಾವ ಕಬ್ಬಿಣದ್ದೋಣೀಲಿ; ರಾಶಿ ರಾಶಿ ಗಂಗೇನ್ತರೋಕ್ ಸೊಳ್ಳೆಪರದೇಲಿ’- ಎನ್ನುವ ಬಗೆಯ ರಚನೆಗಳು). ಇಂಗ್ಲಿಷಿನವರಿಗೆ ಅವುಗಳಲ್ಲಿ ರುಚಿ ಜಾಸ್ತಿ. ಎಡ್ವರ್ಡ್ ಲಿಯರ್ ಅಂತಹ ಬಹಳಷ್ಟು ನಿರರ್ಥ ಹಾಸ್ಯ ಲಿಮರಿಕ್‍ಗಳನ್ನು ಸೃಷ್ಟಿಸಿ ಪ್ರಸಿದ್ಧನಾಗಿದ್ದಾನೆ. ಅವನ ಒಂದು ಪ್ರಸಿದ್ಧ ಲಿಮರಿಕ್ ಹೀಗಿದೆ:

There was an Old Man with a beard,

Who said, “It is just as I feared –

Two owls and a Hen,

four larks and a Wren,

Have all built their nests in my beard”.

ಕೆಲವು ಲಿಮರಿಕ್‍ಗಳು ಅಕ್ಷರ ವ್ಯಂಗ್ಯಚಿತ್ರಗಳಂತೆ ಕೆಲಸ ಮಾಡುತ್ತವೆ. ಮೇಲಿನ ಲಿಮರಿಕ್ ಅದಕ್ಕೆ ಒಂದು ಉದಾಹರಣೆ. ಈ ಲಿಮರಿಕ್ಕಿಗೆ ಹಲವರು ವ್ಯಂಗ್ಯ ಚಿತ್ರಗಳನ್ನು ಬರೆದಿದ್ದಾರೆ ಕೂಡ. ಅವುಗಳಲ್ಲಿ ಒಂದು ಹೀಗಿದೆ:

ನಾವು ಶ್ಲೋಕಗಳನ್ನು ಬಳಸುವ ಹಾಗೆ ಇಂಗ್ಲಿಷರು ಲಿಮರಿಕ್‍ಗಳನ್ನು ಬಳಸುವುದುಂಟು. ಯಾಕೆಂದರೆ  ಉಪನ್ಯಾಸಗಳಿಗೆ ಮೆರುಗು ಕೊಡುವ ಸೂಕ್ತಿಗಳಂತೆ ಬಳಕೆಯಾಗುವ ರಚನೆಗೆಳೂ ಲಿಮರಿಕ್‍ಗಳಲ್ಲಿವೆ. ಹಾಗಾಗಿ ಇದು ಬರೇ ಮನರಂಜನೆಗೆ ಇರುವ ಹಾಸ್ಯ ಕವಿತೆಯಷ್ಟೇ ಅಲ್ಲ. ಇದು ಲಿಮರಿಕ್‍ನ ಮಹೋನ್ನತ ರೂಪವಾದರೆ, ನಡುವೆ ಇರುವ ಬಹುತೇಕ ಲಿಮರಿಕ್‍ಗಳು ಲೇವಡಿಗೆ, ಸಮಾಜ ವಿಮರ್ಶೆಗೆ ಒದಗಿಬರುವ ಅಕ್ಷರ ವ್ಯಂಗ್ಯ ಚಿತ್ರಗಳೂ ಹೌದು! ಕನ್ನಡದಲ್ಲಿ ಎಚ್. ಎಸ್. ಬಿಳಿಗಿರಿ ಅವರ ‘ನಾಯಿಕೊಡೆ’ ಸಂಕಲನದಲ್ಲಿ ಅವರ ಲಿಮರಿಕ್‍ಗಳಿಗೆ ಖ್ಯಾತ ವ್ಯಂಗ್ಯಚಿತ್ರಕಾರ ರಾಮಮೂರ್ತಿಯವರು ಸುಂದರವಾದ ವ್ಯಂಗ್ಯಚಿತ್ರಗಳನ್ನು ಬರೆದಿದ್ದಾರೆ.

ಇನ್ನು, ಈ ಬಗೆಯ ರಚನೆಗಳ ಮೂಲವೆನ್ನಬಹುದಾದ ಜಾನಪದ ರಚನೆಗಳಲ್ಲಿ ಹೆಚ್ಚಿನವು ಗಂಡಸರು ಬಹಳ ಇಷ್ಟಪಡುವ ರಸಿಕತೆಯ ಪ್ರಸಂಗಗಳಾಗಿರುತ್ತಿದ್ದವು. ಅವುಗಳಲ್ಲಿ ಹಲವು ರಚನೆಗಳು ಹುಡುಗಿಯರ ಕುರಿತಾದ ಅಶ್ಲೀಲ ಹಾಸ್ಯಪದ್ಯಗಳಾಗಿರುತ್ತಿದ್ದವು. ಅಂತಹ ಲಿಮರಿಕ್‍ಗಳು ಬರವಣಿಗೆಗೆ ಬಾರದೆ ಬಾಯಿಯಿಂದ ಬಾಯಿಗೆ ಪ್ರಸಾರವಾಗುತ್ತಿದ್ದದ್ದೇ ಹೆಚ್ಚು. (ಇಲ್ಲಿ ಹಾಸ್ಯಕ್ಕೆ ವಸ್ತುವಾಗುತ್ತಿದ್ದವರು ಹೆಣ್ಣುಮಕ್ಕಳೇ ಎನ್ನುವುದು ಸ್ತ್ರೀವಾದಿಗಳ ಕಣ್ಣು ಕೆಂಪಾಗಿಸುವ ವಿಚಾರ! ಲಿಂಗ ತಾರತಮ್ಯ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಹೊಸದಾಗಿ ಸೃಷ್ಟಿಯಾಗುವುದು ನಿಂತಿರಬಹುದು).

ಪಾಶ್ಚಾತ್ಯರಲ್ಲಿ ಲಿಮರಿಕ್ ಅನ್ನುವುದು ಜಾನಪದ ಅನ್ನುವಂತಾಗಿದೆ. ಜೀವನದಲ್ಲಿ ಒಂದಾದರೂ ಲಿಮರಿಕನ್ನು ಕೇಳದ ಪಾಶ್ಚಾತ್ಯರು ಇರಲಿಕ್ಕಿಲ್ಲ ಎಂದು ಹೇಳುತ್ತಾರೆ. ಅವರು ತಾವು ಸ್ವತಃ ಓದಿರದಿದ್ದರೂ ಬೇರೆಯವರು ಅಲ್ಲಿ ಇಲ್ಲಿ ಉದಾಹರಿಸುವುದನ್ನು ಕೇಳಿ ನೆನಪಿಟ್ಟುಕೊಂಡಿರುತ್ತಾರೆ. ಅಥವಾ ಯಾರಾದರೂ ಭಾಷಣದಲ್ಲಿ ಉಲ್ಲೇಖಿಸುವುದನ್ನು ಕೇಳಿರುತ್ತಾರೆ.

ಹಳ್ಳಿಗರಿಗೆ ಇದು ಹರಟೆ, ಹಾಸ್ಯಗಳ ನಡುನಡುವೆ ನಗೆಯ ಅಲೆ ಸ್ಫೋಟಿಸಲು ಸುಲಭವಾಗಿ ಒದಗಿಬರುತ್ತಿದ್ದ ಚುಟುಕಗಳಾಗಿದ್ದವು.

ಲಿಮರಿಕ್ಕಿನ ಪ್ರಾಸ ಮತ್ತು ಛಂದಸ್ಸುಗಳ ಕಾರಣ ಅವುಗಳನ್ನು ನೆನಪಿಟ್ಟುಕೊಳ್ಳುವುದು ಬಲು ಸುಲಭ. ಕನ್ನಡದ ಸಾವಿರಾರು ಗಾದೆಗಳ ಹಾಗೆ ಪಾಶ್ಚಾತ್ಯರಲ್ಲಿ ಲಿಮರಿಕ್ಕುಗಳು ಜನರ ಮಾತುಕತೆಯ ಭಾಗವಾಗಿ ಹೋಗಿವೆ. ಅಲ್ಲಿ, ಲಿಮರಿಕ್ಕುಗಳೆಂದರೆ ಜಾನಪದವೂ ಹೌದು (ಸಾವಿರಾರು ಅನಾಮಧೇಯ ಕವಿಗಳು ರಚಿಸಿದ ಲಿಮರಿಕ್ಕುಗಳು ಚಲಾವಣೆಯಲ್ಲಿರುವುದರಿಂದ), ಶಿಷ್ಟವೂ ಹೌದು (ಈಗಲೂ ಕವಿಗಳು, ವಿಜ್ಞಾನಿಗಳು, ಪತ್ರಕರ್ತರು, ಧರ್ಮಬೋಧಕರು ಪ್ರಚಲಿತ ವಿದ್ಯಮಾನಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿ ರಚಿಸುತ್ತಲೇ ಇರುವುದರಿಂದ).

ಲಿಮರಿಕ್ಕಿನ ಚರಿತ್ರೆ – ಛಂದಸ್ಸು

ಲಿಮರಿಕ್ ಐದು ಸಾಲಿನ ಕವಿತೆಯಾಗಿ ಬಹಳ ಹಿಂದಿನಿಂದಲೂ ಬಳಕೆಯಲ್ಲಿದ್ದುದನ್ನು ಗುರುತಿಸಲಾಗಿದೆ. ಶೇಕ್ಸ್‍ಪಿಯರಿನ ನಾಟಕಗಳಲ್ಲಿ ಕೂಡ ಹಳ್ಳಿಗರ ಬಾಯಿಯಲ್ಲಿ, ಕುಡುಕರ ಬಾಯಿಯಲ್ಲಿ ಲಿಮರಿಕ್ಕುಗಳು ಉರುಳಿದ್ದವು! ‘ಒಥೆಲೊ’ ನಾಟಕದ ಈ ಲಿಮರಿಕ್ ನೋಡಿ:

And let me the canakin clink, clink;

And let me the canakin clink.

          A soldier’s a man;

          O life’s but a span;

Why then let a soldier drink.

ಇದು ಇಂಗ್ಲೆಂಡಿನಲ್ಲಿ ಹೆಕ್ಕಿದ ಹಾಡು ಎಂದೂ ಆ ನಾಟಕದಲ್ಲಿದೆ!

ಇಂಗ್ಲಿಷಿನಲ್ಲಿ ಈ ಪಂಚಪದಿಗಳಿಗೆ ಬಹುಕಾಲ ಒಂದು ನಿರ್ದಿಷ್ಟ ಹೆಸರಿರಲಿಲ್ಲ. ಲಿಮರಿಕ್ ಎಂಬ ಹೆಸರು ಮೊದಲು ಬಳಕೆಯಾದದ್ದು 1898 ರಲ್ಲಿ. ಲಿಮರಿಕ್ ಎನ್ನುವುದು ಐರ್‍ಲಂಡಿನ ಒಂದು ಊರಿನ ಹೆಸರು (ಈಗ ಅದು ದೊಡ್ಡ ನಗರ). ಈ ಹೆಸರು ಈ ಪದ್ಯ ಪ್ರಕಾರಕ್ಕೆ ಬಂದದ್ದು ಆಕಸ್ಮಿಕವಾಗಿ. 1880 ರಲ್ಲಿ, ‘ಲಿಮರಿಕಿಗೆ ಬರೋಲ್ವೇನೇ!’ (Won’t you come to Limerick?)  ಎಂಬ ಜನಪ್ರಿಯ ಪಾರ್ಟಿ-ಪದ್ಯ. ಪತ್ರಿಕೆಯೊಂದು ಪಂಚಪದಿಗಳನ್ನು ಪ್ರಿಂಟ್ ಮಾಡುವಾಗ ‘ವೋಂಟ್ ಯೂ ಕಮ್ ಟೊ ಲಿಮರಿಕ್’ ಪದ್ಯದ ಧಾಟಿ ಎಂದು ಸೂಚಿಸಿತ್ತು. ಹೀಗೆ-

There was a young rustic named Mallory,

Who drew but a very small salary.

When he went to the show,

His purse made him go

To a seat in the uppermost gallery.

Tune: Won’t you come to Limerick.

ಆಮೇಲೆ ಇದನ್ನು ಲಿಮರಿಕ್ ಎಂದು ಕರೆಯಲು ಪ್ರಾರಂಭಿಸಲಾಯಿತು ಎಂದು ಊಹಿಸಲಾಗಿದೆ. ಅದನ್ನು ಹೆಚ್ಚಿನವರು ಅಂಗೀಕರಿಸಿದ್ದಾರೆ.

ಲಿಮರಿಕ್ ಪ್ರಕಾರದಲ್ಲಿ ಐದು ಸಾಲುಗಳಿದ್ದು ಒಂದು, ಎರಡು ಮತ್ತು ಐದನೆಯ ಸಾಲಿನಲ್ಲಿ ‘ಅ’ ಪ್ರಾಸವುಳ್ಳ ಶಬ್ದಗಳಿದ್ದರೆ, ಮೂರು ಮತ್ತು ನಾಲ್ಕನೆಯ ಸಾಲಿನಲ್ಲಿ ‘ಬ’ ಪ್ರಾಸವಿರಬೇಕು. ಒಂದು, ಎರಡು ಮತ್ತು ಐದನೆಯ ಸಾಲುಗಳು ಮೂರು ಮಾತ್ರೆಯ ಮೂರು ಗಣಗಳುಳ್ಳ ದೊಡ್ಡ ಸಾಲುಗಳಾದರೆ, ಮೂರು – ನಾಲ್ಕನೆಯ ಸಾಲುಗಳು ಮೂರು ಮೂರು ಮಾತ್ರೆಗಳ ಎರಡೇ ಗಣಗಳುಳ್ಳ ಸಣ್ಣ ಸಾಲುಗಳಾಗಿರಬೇಕು. ಗಣವಿನ್ಯಾಸ ಹೀಗೆ:

3-3-3

3-3-3

3-3

3-3

3-3-3

                ಕನ್ನಡದ ನವೋದಯದ ಕವಿಗಳು ಪ್ರಯೋಗಶೀಲರಾಗಿದ್ದರು. ಹಾಗಾಗಿ ಸಾನೆಟ್, ಪ್ರಗಾಥ ಮುಂತಾದ ಇಂಗ್ಲಿಷ್ ಪದ್ಯ ಪ್ರಕಾರಗಳಂತೆ ಲಿಮರಿಕ್ಕನ್ನು ಕೂಡ ಕನ್ನಡಕ್ಕೆ ತಂದಿದ್ದರು. ಜಿ.ಪಿ. ರಾಜರತ್ನಂ, ವಿ.ಜಿ. ಭಟ್ಟ, ಅಕಬರ ಅಲಿ, ಶ್ರೀನಿವಾಸ ತೋಫಖಾನೆ, ಎಚ್.ಎಸ್.ಬಿಳಿಗಿರಿ ಮುಂತಾದವರು ಒಳ್ಳೆಯ ಲಿಮರಿಕ್‍ಗಳನ್ನು ಕನ್ನಡದಲ್ಲಿ ಬರೆದರು.

ಅದರಲ್ಲಿ ಹೆಚ್ಚಿನವರು ಮೂಲ ಛಂದಸ್ಸಿಗೆ ಸರಿಯಾಗಿ ಕನ್ನಡದಲ್ಲಿ ಲಿಮರಿಕ್ ರಚಿಸಿದರು. ಉದಾಹರಣೆಗೆ, ರಾಜರತ್ನಂ 1936 ರಲ್ಲಿಯೇ ‘ಚುಟಕ’ ಎಂಬ ಪುಸ್ತಕದಲ್ಲಿ ಲಿಮರಿಕ್‍ಗಳನ್ನು ಪರಿಚಯಿಸಿದ್ದರು. ಅದರ ಒಂದು ಲಿಮರಿಕ್ ಹೀಗಿದೆ:

ಮೀನಿಗೊಬ್ಬ ಹದಿ

ಹಾಕಿ ಒಂದು ನದಿ

ನೀರನೆಲ್ಲ

ಕೆದಕಲಲ್ಲಿ

ಕೈಯ ತುಂಬ ಬದಿ

ಡುಂಡಿರಾಜ್ ಅವರ ಈ ಸಂಕಲನದಲ್ಲಿಯೂ ಅದೇ ಛಂದಸ್ಸನ್ನು ಸ್ವಲ್ಪ ಮಟ್ಟಿಗೆ (ಗಣಗಳ ಮಟ್ಟಿಗೆ , ಮಾತ್ರೆಯಲ್ಲಲ್ಲ) ಅನುಸರಿಸುವ ಲಿಮರಿಕ್‍ಗೆ ಉದಾಹರಣೆಯನ್ನು ನೋಡಿ:

ಸುಬ್ಬ

ಹಬ್ಬದ | ದಿವಸ | ಸುಬ್ಬ

ಹಾಕ್ಕೊಂಡ್| ಹೊಸಾ| ಜುಬ್ಬ

ಕರೆದರೂ | ಸೀದಾ

ನೋಡದೆ | ಹೋದ

ಅಬ್ಬಾ | ಅಷ್ಟೊಂದು  | ಕೊಬ್ಬಾ?

ವಿ.ಜಿ. ಭಟ್ಟರ ‘ತುಂಟನ ಪದಗಳು’ (1951) ಪುಸ್ತಕದಲ್ಲಿ ಲಿಮರಿಕ್‍ಗಳಿದ್ದವು. ಉದಾಹರಣೆಗೆ –

ಅರಿವೆ ಮಡಿಕೆ ಹಣ

ಕಳೆದು ಭಣ ಭಣ

ಗುಡಿಸಲಾಗಿ

ಅವನು ಯೋಗಿ

ಅದೇ ಅದೇ ದಿನ!

ಎಂ. ಅಕಬರ ಅಲಿ ಮತ್ತು ಶ್ರೀನಿವಾಸ ತೋಫಖಾನೆ ಇಬ್ಬರೂ ಸೇರಿ, ಎಂ.ಟಿ. (ಎಂ ಅಂದರೆ ಎಂ. ಅಕಬರ ಅಲಿ, ಟಿ ಅಂದರೆ ತೋಫಖಾನೆ ಶ್ರೀನಿವಾಸ) ಎಂಬ ಹೆಸರಿನಲ್ಲಿ ‘ಅನ್ನ’ (1952) ಎಂಬ ಲಿಮರಿಕ್‍ಗಳ ಸಂಕಲನವನ್ನೇ ಪ್ರಕಟಿಸಿದ್ದರು. (ಹಾಗಾಗಿ ‘ಡುಂಡಿ-ರಾಮ್ಸ್ ಲಿಮರಿಕ್ಸ್: ಪಂಚ್‍ಪದಿಗಳು’ ಎರಡನೆಯದು). ಅವರ ಮೂರು ಕನ್ನಡ ಲಿಮರಿಕ್‍ಗಳನ್ನು ಓದಿ –

1. ಸಕಲ ಬಯಕೆಗಳನು

ಫಲಿಸಿಕೊಳಲು ನೀನು

ಮಂತ್ರಿ ಅಳಿಯ

ಆಗೊ ಗೆಳೆಯ

ಅದುವೆ ಕಾಮಧೇನು.

2. ಒಂದು ಹರಕು ಚಿಂದಿ

ಇಲ್ಲದಂಥ ಮಂದಿ

ದೇಶವೆಂಬ

ಸೆರೆಯಲಿಂದು

ಆಗಿರುವುದು ಬಂಧಿ.

3. ಅಪ್ಪ ಅವ್ವ ಅಣ್ಣ

ದುಡಿದು ದುಡಿದು ಸಣ್ಣ

ಆದರೂನು

ದೊರೆಯಲಿಲ್ಲ

ಒಂದು ತುತ್ತು ಅನ್ನ

ಕನ್ನಡದಲ್ಲಿ ಇಂಗ್ಲಿಷಿನ ಛಂದಸ್ಸನ್ನು ಬಳಸಿದಾಗ ತುಂಬಾ ಚಿಕ್ಕದಾಗಿರುವಂತೆ ಕಾಣುವುದು ಸಹಜ. ಅದಕ್ಕಾಗಿ ಕೆಲವರು ಸ್ವಲ್ಪ ದೊಡ್ಡ ಸಾಲುಗಳನ್ನು ಮಾಡಿಕೊಳ್ಳಲು ಗಣವನ್ನು ನಾಲ್ಕು ಮತ್ತು ಐದು ಮಾತ್ರೆಗಳಿಗೆ ಹಿಗ್ಗಿಸಿದ ಉದಾಹರಣೆಗಳೂ ಇವೆ. ಅಥವಾ ನಾಲ್ಕು ಅಥವಾ ಹೆಚ್ಚಿನ ಗಣಗಳನ್ನೂ ಮಾಡಿಕೊಂಡ ಉದಾಹರಣೆಗಳಿವೆ. ಎಂ.ಟಿ. ಜೋಡಿಯ ಒಂದು ಲಿಮರಿಕ್ ಹೀಗಿದೆ:

ಭಟ್ಟರ ನಾಸಿಕ ದೊಡ್ಡ ಪಡಿ

ಏರಿಸಿ ಏರಿಸಿ ನಾಸಿ ಪುಡಿ

ಸುಂಬಳ ಕಳೆದರೆ

ಸೀನನು ಸೆಳೆದರೆ

ಳಳಳಿಳಿ ಳುಳುಳೆಳೆ ಅವರ ನುಡಿ! (ಎಂ.ಟಿ. – ಅನ್ನ)

4-4-3-3/ 4-4-3-3 / 4-4 / 4-4 / 4-4-3-3 ಎಂಬ ವಿನ್ಯಾಸವನ್ನು ಇಲ್ಲಿ ಗಮನಿಸಬಹುದು. ನಮ್ಮ ಭಾಷೆಯಲ್ಲಿ ಅರ್ಥಪೂರ್ಣವಾದ ಲಿಮರಿಕ್‍ಗಳನ್ನು ರಚಿಸಲು ಮೂಲ ಅಳತೆಗಿಂತ ವಿಸ್ತಾರವಾದ ಅವಕಾಶ ಬೇಕಾಗುತ್ತದೆ. (ಈ ಸಂಕಲನದ ರಾಮನಾಥ್ ಅವರು ಕೆಲವು ಲಿಮರಿಕ್‍ಗಳನ್ನು ಇನ್ನೂ ದೊಡ್ಡ ಸಾಲುಗಳಾಗಿ ವಿಸ್ತರಿಸಿದ್ದಾರೆ). ಅದಕ್ಕೆ ಕಾರಣ ಬಹಳ ಸರಳ – ಇಂಗ್ಲಿಷಿನ ಶಬ್ದಗಳಿಗೆ ಒಂದು, ಎರಡು ಮಾತ್ರೆ ಆಗುವಲ್ಲಿ ಕನ್ನಡ ಸಮಾನಾರ್ಥಕ ಪದ ಬಳಸುವಾಗ ಎರಡು, ಮೂರು ಮಾತ್ರೆಗಳಷ್ಟು ಆಗಿರುತ್ತದೆ! ‘ವುಡ್ಸ್’ ಎನ್ನುವಲ್ಲಿ ‘ಕಾಡು’ ಎಂದರೆ ಏನಾಗುತ್ತದೆ (ಲಘು – ಗುರು ಮಾತ್ರೆ ಲೆಕ್ಕಾಚಾರದಲ್ಲಿ ಏನು ವ್ಯತ್ಯಾಸವಾಗುತ್ತದೆ) ಎಂದು ಗಮನಿಸಿದರೆ ಇದು ಅರ್ಥವಾಗುತ್ತದೆ. ಅಕ್ಷರ ಛಂದಸ್ಸನ್ನು ಬಳಸಿದರೆ ಸ್ವಲ್ಪ ಹೆಚ್ಚು ಸ್ವಾತಂತ್ರ್ಯ ಸಿಗಬಹುದು. ಅಥವಾ ಹೆಚ್ಚು ಮಾತ್ರಗಳನ್ನು ಬಳಸಿದರೆ, ಹೆಚ್ಚು ಗಣಗಳನ್ನು ಮಾಡಿಕೊಂಡರೆ ತೊಂದರೆಯೇನೂ ಇಲ್ಲ. ಇಲ್ಲಿ ಯಾವುದೇ ತೀರ್ಮಾನವನ್ನು ಹೇಳದೆ, ಲಕ್ಷಣಗಳನ್ನು ಗಮನಿಸುವ ಕೆಲಸವನ್ನಷ್ಟೇ ಮಾಡಲಾಗಿದೆ.   

ಲಿಮರಿಕ್‍ಗಳ ಖಚಿತವಾದ ಪ್ರಾಸ ವಿನ್ಯಾಸ ಮತ್ತು ಛಂದಸ್ಸಿನಿಂದಾಗಿ ಅವುಗಳನ್ನು ನೆನಪಿಟ್ಟುಕೊಳ್ಳುವುದು ಸುಲಭವಾಗುತ್ತದೆ.  

ಕಥಾಸಂವಿಧಾನ ಅಥವಾ ವಸ್ತು ವಿನ್ಯಾಸ: ಲಿಮರಿಕ್‍ಗಳ ವಸ್ತು ವಿನ್ಯಾಸವನ್ನು ಗಮನಿಸಿದರೆ ಅದರ ಜನಪ್ರಿಯತೆಗೆ ಇನ್ನೊಂದು ಕಾರಣ ಗೊತ್ತಾಗುತ್ತದೆ.

ಮೂಲ ಭಾಷೆಯ (ಇಂಗ್ಲಿಷಿನ) ಲಿಮರಿಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಪ್ರಾರಂಭದ ಎರಡು ಸಾಲುಗಳಲ್ಲಿ ಈ ಹಾಸ್ಯ ಚುಟುಕಿನ ನಾಯಕ ಅಥವಾ ನಾಯಕಿ ಯಾವ ಊರಿನವನು / ಳು ಎನ್ನುವುದನ್ನೂ ಅವರ ಹೆಸರನ್ನೂ, ಅವರ ಸಂಕ್ಷ್ಷಿಪ್ತ ಪರಿಚಯವನ್ನೂ (ಗುಣವಿಶೇಷ) ಮಾಡಿಕೊಟ್ಟ ಬಳಿಕ, ಮೂರು ನಾಲ್ಕನೆಯ ಸಣ್ಣ ಸಾಲುಗಳಲ್ಲಿ ಒಂದು ಆಸಕ್ತಿ ಹುಟ್ಟಿಸುವ ಘಟನೆಯನ್ನು ಸ್ವಾರಸ್ಯಕರವಾಗಿ ಹೇಳುತ್ತಾರೆ. ಆಮೇಲೆ ಕೊನೆಯ ಸಾಲಿನಲ್ಲಿ ಅದರ ಪರಿಣಾಮವನ್ನು ಹೇಳಿ ನಗು ಉಕ್ಕುವಂತೆ ಮಾಡುತ್ತಾರೆ. ಮೇಲೆ ಕೊಟ್ಟಿರುವ ಸಾಪೇಕ್ಷತಾ ಸಿದ್ಧಾಂತದ ಲಿಮರಿಕ್ ಅಥವಾ ಗಡ್ಡದಲ್ಲಿ ಹಕ್ಕಿಗೂಡಿನ ಲಿಮರಿಕ್ ಇದಕ್ಕೆ ಒಂದು ಒಳ್ಳೆಯ ಉದಾಹರಣೆಗಳು. ಅಂದರೆ ಒಂದು ಇಡೀ ಹಾಸ್ಯ ಪ್ರಸಂಗವನ್ನು ಈ ಸಣ್ಣ ಗಾತ್ರದಲ್ಲಿ ಹೇಳಿದ ಹಾಗಾಯಿತು.

ಐದನೆಯ ಸಾಲಿನ ಪರಿಣಾಮ ಬಹಳ ಮುಖ್ಯವಾಗುತ್ತದೆ. ಡುಂಡಿರಾಜ್ ಅವರ ‘ಪಂಚ್’ ಕೊನೆಯ ಸಾಲಿನಲ್ಲಿರುತ್ತದೆ ಎಂದು,  ಡುಂಡಿರಾಜರ ಪಂಚ್ ಬಗ್ಗೆ ರಾಮನಾಥರು ಒಂದು ಲಿಮರಿಕ್ಕನ್ನೇ ಬರೆದಿದ್ದಾರೆ! (ಅದು ಇದೇ ಸಂಕಲನದಲ್ಲಿದೆ). ಲಿಮರಿಕ್‍ಗಳ ಪಂಚ್ ಯಾವಾಗಲೂ ಐದನೆಯ ಸಾಲಿನಲ್ಲಿ ಇರುತ್ತದೆ. ಒಂದೋ ಅಸಂಗತವಾಗಿ ಇಲ್ಲವೇ ಆಶ್ಚರ್ಯಹುಟ್ಟಿಸುವ ರೀತಿಯಲ್ಲಿದ್ದು ಮನಸೆಳೆಯುತ್ತದೆ. ಕನ್ನಡದಲ್ಲಿ ಈ ಅಂಶವನ್ನು ಪರಿಗಣಿಸಿ ರಚಿತವಾಗಿರುವ ಪಂಚಪದಿಗಳು ಇವೆ. ಉದಾಹರಣೆಗೆ, ಕೆಳಗೆ ರಸಿಕತೆಯುಳ್ಳ ಕನ್ನಡ ಲಿಮರಿಕ್‍ಗಳಿಗೆ ಮಾದರಿಯೆಂದು ಕೊಟ್ಟಿರುವ ವೈಎನ್‍ಕೆಯವರ ಲಿಮರಿಕ್ ನೋಡಬಹುದು. ಪ್ರಸ್ತುತ ಸಂಕಲನದ ಕವಿಗಳು ಕೆಲವಂಶಗಳಲ್ಲಿ ಲಿಮರಿಕ್‍ನ ಸಾಧ್ಯತೆಗಳನ್ನು ವಿಸ್ತರಿಸಿದ್ದರೂ, ಕೆಲವು ಲಿಮರಿಕ್‍ಗಳಲ್ಲಿ ಮೂಲದ ಈ ಲಕ್ಷಣವನ್ನು ಉಳಿಸಿಕೊಳ್ಳುತ್ತಾರೆ. ಉದಾಹರಣೆಗೆ, ಡುಂಡಿರಾಜರ ಒಂದು ಲಿಮರಿಕ್ ಹೀಗಿದೆ:

ಸುಂದ್ರಿ

ನೆರೆಮನೆ ಹುಡುಗಿ ಚಂದ್ರಿ

ನೋಡಲು ತುಂಬಾ ಸುಂದ್ರಿ

ಎರಡೂ ಕಿವಿಗಳಿಗೆ

ಇಯರ್ ಫೋನ್ನಳಿಗೆ

ಕರೆದರೆ – ಆಂ ಏನಂದ್ರಿ?

ರಾಮನಾಥರ ಒಂದು ಲಿಮರಿಕ್ ಹೀಗಿದೆ.

ಕಪಾಳಮೋಕ್ಷ

ಸಿಕ್ಸ್ ಹಂಡ್ರೆಡ್ ಪರ್ ಹಲ್ಲು ಅಂದ್ರೆ ದುಬಾರಿ ಆಯ್ತು ಬಿಲ್ಲು

ಸರಿಯಾದ್ ಟೈಮ್ಗೆ ರೌಡಿ ರಂಗನ್ ಗರ್ಲ್‍ಫ್ರೆಂಡ್ ಕಾಣಿಸ್ಕೊಂಡ್ಳು

ರೌಡಿ ರಂಗನ ಮುಂದೇ

ಹಲ್ಲೋ ಬ್ಯೂಟಿ ಅಂದೆ

ಒಂದೇ ಏಟಿಗೆ ಮೋಕ್ಷವ ಪಡೆದವು ಎಲ್ಲ ಹುಳುಕಿನ ಹಲ್ಲು.

ಇದರಲ್ಲಿ ಮೊದಲೆರಡು ಸಾಲಿನಲ್ಲಿ ಯಾರು, ಏನು, ಹೇಗೆ ಎನ್ನುವುದನ್ನು ಪರಿಚಯಿಸಿ, ಮೂರು-ನಾಲ್ಕನೆಯ ಸಾಲುಗಳಲ್ಲಿ ಏನಾಯಿತು ಎನ್ನುವುದನ್ನು ಹೇಳಿ, ಐದನೆಯ ಸಾಲಿನಲ್ಲಿ ಪರಿಣಾಮವನ್ನು ಹೇಳುವ ಮೂಲದ ಸಂವಿಧಾನವನ್ನು ಅನುಸರಿಸಿದ್ದಾರೆ. (ರಾಮನಾಥರ ವೈಶಿಷ್ಟ್ಯವಾದ ದೀರ್ಘ ಸಾಲುಗಳಿಗೆ ಕೂಡ ಇಲ್ಲಿ ಉದಾಹರಣೆಯಿದೆ. ಅದರ ಬಗ್ಗೆ ಮುಂದೆ ನೋಡೋಣ. ಡುಂಡಿರಾಜರು ಮತ್ತು ರಾಮನಾಥರು ಮಾತ್ರೆ ಮತ್ತು ಗಣಗಳನ್ನು ಇಟ್ಟುಕೊಳ್ಳುವುದಿಲ್ಲ).

ಹಾಗೆಯೇ, ಕನ್ನಡದಲ್ಲಿ ವಸ್ತುವಿನ ಬೆಳವಣಿಗೆಯ ಕಡೆಗೆ ಗಮನ ಹರಿಸದೆ ಮತ್ತು ಯಾವ ಮಾದರಿಗೂ ಸೇರದೆ ಪ್ರಾಸವನ್ನು ಮಾತ್ರ ಇಟ್ಟುಕೊಂಡಿರುವ ರಚನೆಗಳೂ ಇವೆ. ಪ್ರಸ್ತುತ ಸಂಕಲನÀದಲ್ಲಿಯೇ ಅಂತಹ ಹಲವು ರಚನೆಗಳಿವೆ.

ಲಿಮರಿಕುಗಳಲ್ಲಿ ಅಸಂಗತ ಸನ್ನಿವೇಶಗಳ ರಚನೆಗಳಿಗೂ, ಅಶ್ಲೀಲತೆಯ ಅಂಚಿನಲ್ಲಿದ್ದು (ಅಥವಾ ಒಳಗೇ ಇದ್ದು!) ಮುಚ್ಚಿ ಹೇಳುವುದನ್ನು ಧ್ವನ್ಯರ್ಥದ ಸೋಗಿನಲ್ಲಿ ಬಿಚ್ಚಿಯೇ ಹೇಳುವ ರಚನೆಗಳಿಗೂ ಸ್ವಾರಸ್ಯ ಮತ್ತು ಜನಪ್ರಿಯತೆ ಹೆಚ್ಚು.

ನವೋದಯದ ಹಿರಿಯರು ಲಿಮರಿಕ್ ಪ್ರಕಾರದ ಈ ಅಂಶವನ್ನು ಹೆಚ್ಚಾಗಿ ಅನುಸರಿಸದೆ ಇದರ ಪಾದಗಳನ್ನು, ಪ್ರಾಸಕ್ರಮವನ್ನು ಮತ್ತು ಛಂದಸ್ಸನ್ನು ಅನುಸರಿಸಿ ಬದುಕಿನ ಕಟು ವಾಸ್ತವಗಳನ್ನು ಹೇಳಲು ಮತ್ತು ಸಮಾಜ ವಿಡಂಬನೆಗೆ (ಮೇಲಿನ ಉದಾಹರಣೆಗಳನ್ನು ನೋಡಿ) ಲಿಮರಿಕ್ ಗಳನ್ನು ಬರೆದರು. ಬಿಳಿಗಿರಿ, ವೈ.ಎನ್.ಕೆ. ಮುಂತಾದ ನಂತರದ ತಲೆಮಾರಿನವರು ಲಿಮರಿಕ್‍ನ ರಸಿಕತೆಯ ಅಂಶವನ್ನು ಅಲ್ಪಸ್ವಲ್ಪ ಅನುಸರಿಸಿದರು.   

ವೈಎನ್‍ಕೆ ಅವರ ಒಂದು ಲಿಮರಿಕ್ –

ನಮ್ಮೂರ್ಲ್ ಒಬ್ಬಳು ಮಡ್ಡಮ್ಮ

ಅವಳಾ ಹೆಸರು ಗಿಡ್ಡಮ್ಮ

ಹಾಕಿಕೊಳ್ಳದೆ ಚಡ್ಡಿ

ಸಂತೇಗ್ ಹೋದಳು ಗಿಡ್ಡಿ

ಈಗ್ ಅವಳ ಅಕ್ಕ ದೊಡ್ಡಮ್ಮ!

ಇಂಗ್ಲಿಷಿನಲ್ಲಿ ಅಶ್ಲೀಲ ಅಥವಾ ರಸಿಕತನದ ಲಿಮರಿಕ್‍ಗಳನ್ನು ರಚಿಸುವವರು ಹೆಚ್ಚಾಗಿ ಹೆಸರನ್ನು ಬಳಸುತ್ತಿರಲಿಲ್ಲ! ಅದಕ್ಕಾಗಿಯೇ ಹುಟ್ಟಿಕೊಂಡ ಈ ಕೆಳಗಿನ ಲಿಮರಿಕ್ ನೋಡಿ:

Anon, Idem, Ibid. and Trad.

Wrote much that is morally bad:

Some ballads, some chanties,

All poems on panties –

And limericks, too, one must add.

ಇದರರ್ಥ – ಹೆಚ್ಚಿನ ಅಶ್ಲೀಲ ಪದ್ಯಗಳನ್ನೂ, ಪಂಚಪದಿಗಳನ್ನೂ ಬರೆದವರು ಅಜ್ಞಾತ ಕವಿ, ಜಾನಪದ ಕವಿ ಮತ್ತು ಯಾರೋ ಎಂಬ ಹೀರೋ, ಇವರು! ‘ಎನನ್’ ಅಂದರೆ ‘ಅಜ್ಞಾತಕವಿ’ ((Anon – Anonymous ಶಬ್ದದ ಸಂಕ್ಷಿಪ್ತ ರೂಪ), ‘ಐಡೆಮ್’ ಅಂದರೆ ‘ಈಗಲೇ ಹೇಳಿದಂತೆ’, ಇಬಿಡ್ (ಇಬಿಡೆಮ್ ಎಂಬ ಲ್ಯಾಟಿನ್ ಶಬ್ದದ ಸಂಕ್ಷಿಪ್ತ ರೂಪ) ಅಂದರೆ ಅದೇ  ‘ಟ್ರ್ಯಾಡ್’ ಅಂದರೆ ‘ಜಾನಪದ’(Trad -Traditional) . ಇದು ಲಿಮರಿಕ್ ರೂಪದಲ್ಲಿಯೇ ಇರುವ ಪ್ರಕಾರ ವಿಮರ್ಶೆಯ ಒಂದು ಪದ್ಯ, ಬಹುಮಟ್ಟಿಗೆ ವಾಸ್ತವವೂ ಹೌದು.

ಬಿಳಿಗಿರಿಯವರ ‘ನಾಯಿಕೊಡೆ’ ಕವನ ಸಂಕಲನದಲ್ಲಿ (1973) ಆರು ಲಿಮರಿಕ್‍ಗಳಿವೆ. ಅವುಗಳನ್ನು ಅವರು ಕರೆದುದು ಹೀಗೆ: ‘ಐದುಕಾಲಿನ ಮೊಂಡು ಕೊಂಡಿಯ ಆರು ಚೇಳುಗಳು’. ಲಿಮರಿಕ್ ಗಳು ಮುದ್ರಿತ ರೂಪದಲ್ಲಿ ಮೊಂಡು ಕೊಂಡಿಯ ಚೇಳುಗಳ ಹಾಗೆ ಕಾಣುತ್ತವೆ! ಇನ್ನೊಂದು ಅರ್ಥ – ಕುಟುಕುವುದು ಲಿಮರಿಕ್‍ಗಳ ಗುಣ, ಆದರೆ ಅಪಾಯಕಾರಿಯಲ್ಲ, ಯಾಕೆಂದರೆ ಕೊಂಡಿ ಮೊಂಡಾಗಿದೆ. 

ನಮ್ಮೂರಿನಲ್ಲೊಬ್ಬನಿರುವನು ಕಿಲಾಡಿ

ಪ್ರಾಣಿಗಳ ತಲೆಗಳಿಗೆ ಸಿಗಿಸುವನು ಜಾಡಿ!

                ಅವನ ಮಾನವನೊಮ್ಮೆ

                ಜಾಡಿ ಕಾದಿತು, ಎಮ್ಮೆ

ಕಚ್ಚಿ ಎಳೆಯಲು ಅವನ ಲಿಕ್ಕರಿನ ಲಾಡಿ.

ಬಿಳಿಗಿರಿಯವರು ಕೂಡ ಹೆಚ್ಚು ಗಣಗಳನ್ನೂ, ಮಾತ್ರೆಗಳನ್ನೂ ಬಳಸಿಕೊಂಡು ಪಂಚಪದಿಗಳನ್ನು ಕಟ್ಟಿದ್ದರಎ; ಆದರೆ ಲಯವನ್ನು ಬಿಟ್ಟಿಲ್ಲ. ಓದುವಿಕೆಯಲ್ಲಿ ಮೂರು ಮತ್ತು ನಾಲ್ಕನೆಯ ಸಾಲುಗಳಲ್ಲಿ ಗಣಗಳನ್ನೂ, ಗಣಗಳಲ್ಲಿ ಮಾತ್ರೆಗಳನ್ನೂ ಕಡಿಮೆ ಮಾಡಿ, ವೇಗವಾಗಿ ಓಡುವಂತೆ ಬರೆದಿದ್ದಾರೆ.

ಮುಖ್ಯವಾಗಿ ಲಿಮರಿಕ್ ಅಂದರೆ ಒಂದು ರಸವತ್ತಾಗಿ, ಛಂದೋಬದ್ಧವಾಗಿ ಹೇಳಿದ ಒಂದು ‘ಹಾಸ್ಯ ಪ್ರಸಂಗ’ ಎನ್ನಬಹುದು. ಯಾಕೆಂದರೆ ಎಲ್ಲ ಒಳ್ಳೆಯ ಲಿಮರಿಕ್‍ಗಳಲ್ಲಿ ಒಂದು ಪ್ರಸಂಗ ಇದ್ದೇ ಇರಬೇಕು. ಕನ್ನಡದಲ್ಲಿ ಡುಂಡಿರಾಜ್ ಮತ್ತು ರಾಮನಾಥ್ ಅವರ ಜೋಡಿ ಈ ಅಂಶವನ್ನು ಕೂಡ ಬದಲಾಯಿಸಿ ಸಮಾಜ ವಿಮರ್ಶೆಗೆ ಒಗ್ಗಿಸಿಕೊಂಡಿರುವುದು ಅವರ ಪ್ರಯೋಗಶೀಲತೆಗೆ ಸಾಕ್ಷಿ. ಅಂದರೆ ಮನರಂಜನೆಯಲ್ಲದೆ ಬೇರೆ ಉದ್ದೇಶ ಇಲ್ಲದ ಬಗೆಯ ಲಿಮರಿಕ್‍ಗಳು ಇರುವಂತೆಯೆ, ಅದನ್ನು ಸ್ವಲ್ಪ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸುವಂತೆ ಒಗ್ಗಿಸಿಕೊಳ್ಳುವುದು ಒಂದು ಹೊಸ ಚಿಂತನೆಯ ಫಲ ಎನ್ನಬೇಕಾಗುತ್ತದೆ.

ಪಂಚಪದಿಗಳಲ್ಲಿ ಪ್ರಕಾರ ವಿಮರ್ಶೆ

ಡುಂಡಿರಾಜ್ ಅವರು ಇಲ್ಲಿನ ಪಂಚಪದಿಗಳಲ್ಲಿ ಲಿಮರಿಕ್ ಪ್ರಕಾರದ ಬಗ್ಗೆ ಬರೆದಿರುವ ಈ ಪಂಚಪದಿಗಳನ್ನು ಗಮನಿಸಿ.

ಪ್ರಾಸವಿನ್ಯಾಸ

ಮೊದಲೆರಡು ಸಾಲಲ್ಲಿ ಇದ್ದರೆ ‘ಸ’

ಐದನೇ ಸಾಲಲ್ಲೂ ಅದೇ ಪ್ರಾಸ

ಮೂರು ನಾಕನೆ ಸಾಲಿಗೆ

ಬೇರೆ ಪ್ರಾಸದ ಬೆಸುಗೆ

ಇದೇ ನೋಡಿ ಲಿಮರಿಕ್ ವಿನ್ಯಾಸ

ಕಾರಣ

ಲಿಮರಿಕ್ ಐದು ಸಾಲಿನ ಕವಿತೆ

ಓದಲಿಕ್ಕೆ ಬಹಳ ಮಜಾ ಇರುತ್ತೆ

ಪಾರ್ಟಿಗಳಲ್ಲಿ ಹೇಳಿದರೆ

ಉಕ್ಕುವುದು ನಗೆಯ ನೊರೆ

ಕಾರಣ ಅದರಲ್ಲಿರುವ ಅಶ್ಲೀಲತೆ

ರಾಮನಾಥ್ ಹೀಗೆ ಹೇಳುತ್ತಾರೆ:

ಲಿಮರಿಕ್ಕು

ಕುಂತಿಯ ಮಕ್ಕಳ ಖ್ಯಾತಿಯ ಹಾಗೆ ಮೂರು ಸಾಲ್ಗಳು ಉದ್ದನೆ

ಮಾದ್ರಿಯ ಮಕ್ಕಳ ಕೀರ್ತಿಯ ಹಾಗೆ ಎರಡು ಸಾಲ್ಗಳು ಗಿಡ್ಡನೆ

ಪಾಂಡವರಿದ್ದರು ಪಂಚ

ಅಂತೆಯೆ ಲಿಮರಿಕ್ ಪ್ರಪಂಚ

ದೊಡ್ಡ ಸಾಲಿಗೂ ಚಿಕ್ಕ ಸಾಲಿಗೂ ವಿವಿಧ ಪ್ರಾಸದ ಜೋಡಣೆ

ಈ ಸಂಕಲನದ ಲಿಮರಿಕ್‍ಗಳಲ್ಲಿ ಗಮನಿಸಬಹುದಾದಂತೆ ಇವು ಗಣ ವಿನ್ಯಾಸವನ್ನು ಬಿಟ್ಟುಕೊಟ್ಟು ಮುಕ್ತ ಛಂದಸ್ಸಿನ ಕಡೆಗೆ ಚಲಿಸಿರುವ ಕನ್ನಡದ ಲಿಮರಿಕ್ ರಚನೆಗಳು. ಇವು ಪ್ರಾಸದ ಮೂಲಕವೂ, ವಸ್ತುವಿನ ಆಕರ್ಷಣೆಯಿಂದಲೂ ಗಮನಸೆಳೆಯುತ್ತವೆ. ಪ್ರಸ್ತುತ ಸಂಕಲನ ಈ ಕಾವ್ಯ ಮಾದರಿಯನ್ನು ನಮ್ಮ ಕಾಲಕ್ಕೆ ಮತ್ತು ಭಾಷೆಗೆ, ಕನ್ನಡದ ಕಾಲದ ಲಯಾಧಾರಿತ ಕಾವ್ಯರಚನೆಯ ಶೈಲಿಗೆ ಒಗ್ಗಿಸಿಕೊಂಡು, ವರ್ತಮಾನ ಕಾಲದ ಸಾಮಾಜಿಕ ಸ್ಪಂದನೆಯನ್ನು ಹೇಳಿರುವ ಕಾರಣ ಮುಖ್ಯವಾಗಿದೆ. ಈ ಕವಿಗಳಿಗೆ ಪ್ರಸ್ತುತ ಸಮಾಜದ ವಿಮರ್ಶೆಯನ್ನೂ ಹಾಸ್ಯವಾಗಿ ಮಾಡುವುದಿದೆ, ಜತೆ ಜತೆಗೆ ಚಿರಂತನವೆನಿಸುವ ಮಾನವ ಸ್ವಭಾವದ ವಿಮರ್ಶೆಯನ್ನೂ ಮಾಡುವುದಿದೆ. ಅದಕ್ಕೆ ‘ವಿದ್ಯಮಾನ – ಪ್ರತಿಕ್ರಿಯೆ’ಯ; ಸಮಾಜ ವಿಮರ್ಶೆಯ ಪರಂಪರೆಯನ್ನುಳ್ಳ ಲಿಮರಿಕ್ಕಿನಂತಹ ಒಂದು ಪ್ರಕಾರವನ್ನು ಆರಿಸಿಕೊಂಡಿರುವುದು ಅವರ ಅನ್ವೇಷಕ ಪ್ರವೃತ್ತಿಗೆ ಸಾಕ್ಷಿ.   

                ಈಗ ಈ ಇಬ್ಬರ ಪಂಚಪದಿಗಳ ಬಗ್ಗೆ ಪ್ರತ್ಯೇಕವಾಗಿ ಕೆಲವು ಮಾತುಗಳನ್ನು ಹೇಳಬಹುದು.

ಡುಂಡಿರಾಜರ ಪಂಚಪದಿಗಳು

ಡುಂಡಿರಾಜರ ಅರುವತ್ತು ಪಂಚಪದಿಗಳನ್ನು ಓದುವಾಗ ಅವರ ಅಭಿಜಾತ ವಕ್ರ ದೃಷ್ಟಿ, ಸಹಜ ವಿದ್ಯಮಾನಗಳಲ್ಲಿ ಅಡಗಿದ ಹಾಸ್ಯವನ್ನು ಗುರುತಿಸುವ ಅವರ ಸೂಕ್ಷ್ಮ ದೃಷ್ಟಿ ಮತ್ತು ಪ್ರಾಸ ರಚನೆಯಲ್ಲಿ ಅವರಿಗಿರುವ ಹಿಡಿತ ನಮ್ಮನ್ನು ಸೆಳೆಯುತ್ತವೆ.

ಡುಂಡಿರಾಜರು ಮುಖ್ಯವಾಗಿ ಕೆಲವು ವಸ್ತುಗಳ ಬಗ್ಗೆ ಹೆಚ್ಚು ಆಸಕ್ತರಾಗಿದ್ದಾರೆ. ಅವುಗಳಲ್ಲಿ ಸಾಂಸಾರಿಕ ಕಷ್ಟ-ಸುಖಗಳ ಚಿತ್ರಣ ಮೊದಲನೆಯದು. 1.ಕಷ್ಟದಿಂದ ಪಡೆಯುವ ಸುಖ, 2. ಕಷ್ಟಮಿಶ್ರಿತ ಸುಖ ಮತ್ತು 3. ಬೇರೆ ಬೇರೆಯಾಗಿ ಬರುವ ಕಷ್ಟಗಳು ಮತ್ತು ಸುಖಗಳು ಎಂಬ ಮೂರೂ ಅರ್ಥಗಳಲ್ಲಿ ‘ಕಷ್ಟ-ಸುಖ’ ಎಂಬ ಶಬ್ದ ಪ್ರಸ್ತುತವಾಗಿದೆ. ಇವುಗಳನ್ನೆಲ್ಲ ಬಹಳ ಆಪ್ತವಾಗಿ ಚಿತ್ರಿಸಿದ್ದಾರೆ.

24 X 7

ಇಪ್ಪತ್ನಾಲ್ಕು ಗುಣಿಸು ಅದೇ ಗೋಳು

ಹೇಳಿದ್ದನ್ನೆ ಹೇಳು ಕೇಳಿದ್ದನ್ನೆ ಕೇಳು

ಫೋನಲ್ಲಿ ಮಿತ್ರನ ಬಳಿ ಹೀಗೆ

ಬಯ್ಯುತ್ತಿದ್ದೆ ಟಿವಿ ಚಾನಲ್ಲಿಗೆ

ಕದ್ದು ಕೇಳಿದ ಪತ್ನಿ ಕೋಪಗೊಂಡಳು.

ಇದೊಂದು ಸುಂದರ ಸಾಂಸಾರಿಕ ಚಿತ್ರಣ ಮತ್ತು ಸಂಸಾರ ವಿಮರ್ಶೆ. ಟಿ.ವಿ. ನ್ಯೂಸ್ ಚಾನೆಲುಗಳ ವಿಮರ್ಶೆಯೂ ಆನುಷಂಗಿಕವಾಗಿ ನಡೆದಿದೆ. ಇದು ಸೂಚ್ಯವಾಗಿ ಹೇಳುವುದೇನೆಂದರೆ ಮನೆಯಲ್ಲಿ ಹೆಂಡತಿಯದೇ ಆಧಿಪತ್ಯ ಎನ್ನುವುದನ್ನು. ಗಂಡ ಟಿ.ವಿ. ಚಾನೆಲಿಗೆ ಬಯ್ಯುತ್ತಿದ್ದುದನ್ನು ಕದ್ದು ಕೇಳಿದ ಪತ್ನಿ, ಅವನು ಬಯ್ಯುತ್ತಿದ್ದದ್ದು ತನಗೆ ಎಂದು ತಿಳಿದು ಕೋಪಗೊಳ್ಳುತ್ತಾಳೆ. ಇದು ಧ್ವನ್ಯರ್ಥ. ಮತ್ತು ಆಕೆ ಹಾಗೆ ಹೇಳಿದ್ದನ್ನೆ ಹೇಳಿ, ಕೇಳಿದ್ದನ್ನೆ ಕೇಳುವ ಸ್ವಭಾವದವಳು ಹೌದೆನ್ನುವ ಕಾರಣದಿಂದಾಗಿಯೇ ಅವಳಿಗೆ ಸಿಟ್ಟು ಬಂದದ್ದೆನ್ನುವುದು ಧ್ವನ್ಯರ್ಥದ ವಿಸ್ತರಣೆ!

ಅದೇ ಸುಂದರ ಸಂಸಾರದ ಇನ್ನೊಂದು ವಿವರಣೆ ಈ ಕೆಳಗಿನ ಪಂಚಪದಿಯಲ್ಲಿದೆ:

ಭೂಷಣ

ಹಕ್ಕಿಗಳ ಚಿಲಿಪಿಲಿ ಮಧುರ

ಮಕ್ಕಳು ನಕ್ಕರೆ ಸುಂದರ

ಮಡದಿಗೆ ಮಣಮಣ

ಗೊಣಗುವುದೆ ಭೂಷಣ

ಪತಿಗೆ ಮೌನವೇ ಅಲಂಕಾರ!

ಮನೆಯೊಳಗಿನ ನೆಮ್ಮದಿಗೆ ಹೀಗಿರುವುದೇ ಭೂಷಣವಾದರೂ, ಹೆಂಡತಿಯ ಹತೋಟಿ ಅತಿಯಾದರೆ ಪಕ್ಕದ ಮನೆಯವರಿಗೂ ಅದು ಮಾತಿಗೆ ಔತಣ! ಅದು ಪಕ್ಕದ ಮನೆಯ ಕಥೆ ಎನ್ನುವುದರಲ್ಲೇ ಡುಂಡಿರಾಜರ ಸೂಕ್ಷ್ಮಜ್ಞತೆ ಇದೆ. ಆ ಹಂತಕ್ಕೆ ಹೋದರೆ ಅದು ಸಂಸಾರದ ಸಾಮರಸ್ಯ ಅನಿಸಿಕೊಳ್ಳದೆ ಸಮಾಜಕ್ಕೂ ಚೆಲ್ಲುವ ಸಮಸ್ಯೆಯಾದೀತು. ಕೆಳಗಿನ ಲಿಮರಿಕ್ ಅದರ ಮೊದಲನೆಯ ಹಂತವನ್ನಷ್ಟೆ ಹೇಳುತ್ತದೆ. ‘ಪೀಡಿಸುವ’ ಮತ್ತು ‘ಪ್ರಾಣಿ’ ಎಂಬ ಶಬ್ದಗಳ ಬಳಕೆಯ ಮೂಲಕ ಲಿಮರಿಕ್ ಪತ್ನಿಯನ್ನು ಟೀಕಿಸಿ, ಪತಿಯ ಪರವಾಗಿ ಅನುಕಂಪವನ್ನು ಹೇಳುತ್ತದೆ.

ವಾಣಿ

ನಮ್ಮ ನೆರೆಮನೆ ಗೃಹಿಣಿ ವಾಣಿ

ಪತಿಯನ್ನು ಪೀಡಿಸುವ ಪ್ರಾಣಿ

ತವರಿಗೆ ಹೋದಾಗಲೂ

ಗಂಡನನು ದೂರಲು

ದಿವಸಕ್ಕೆ ಹತ್ತು ಸಲ ದೂರವಾಣಿ

ಡುಂಡಿರಾಜರು ದ್ರೌಪದಿಯ ಕುರಿತಾದ ಪಂಚಪದಿಯಲ್ಲಿಯೂ ಆಕೆ ಐದೂ ಗಂಡಂದಿರಿಗೆ ಸಮಾನವಾಗಿ ಬೈಯುತ್ತಾಳೆ ಎನ್ನುತ್ತಾರೆ. ‘ಜಗಳ’ ಎಂಬ ಲಿಮರಿಕ್ಕಿನಲ್ಲಿ ಮಾತ್ರ, ಈಗ ಆನ್‍ಲೈನ್ ಫುಡ್ ತರಿಸಿ ತಿಂದು ಮನೆಯಲ್ಲಿಯೇ ಇರುವ ಗಂಡ ಹೆಂಡತಿ ಇಬ್ಬರೂ ಜಗಳಾಸಕ್ತರು. ಯಾರೂ ಹೆಚ್ಚಿಲ್ಲ, ಯಾರೂ ಕಮ್ಮಿಯಿಲ್ಲ. ಇನ್ನು ಗಂಡನೇ ಹೆಂಡತಿಯನ್ನು ಶೋಷಿಸುವ ಪಂಚಪದಿಯೊಂದನ್ನು ಇಲ್ಲಿ ಸೇರಿಸಿದ್ದರೆ ಸಮಾನತೆಗೆ ಜಯವಾಗುತ್ತಿತ್ತು!

ಎರಡನೆಯ ಬಗೆಯ ಲಿಮರಿಕ್‍ಗಳು ರಾಜಕೀಯವನ್ನು ವಿಮರ್ಶಾತ್ಮಕವಾಗಿ ವಿಡಂಬಿಸುವ ಪದ್ಯಗಳು. ಡುಂಡಿರಾಜರಿಗೆ ಇಂತಹ ಹನಿಗವನಗಳು, ಹಾಸ್ಯ ಪದ್ಯಗಳು ಈಗಾಗಲೇ ಕೀರ್ತಿ ತಂದಿವೆ. ಇಲ್ಲಿ ಪಂಚಪದಿಗಳಲ್ಲಿ ಕೆಲವು ಅದ್ಭುತ ಚುಟುಕಗಳು ಮೈದಾಳಿವೆ. ನೋಡಿ –

ಅನುಮಾನ

ನಮ್ಮ ಜನತಂತ್ರಕ್ಕೆ ಆಧಾರ

ಶಾಸಕ ಎಂಬ ಈ ಸರದಾರ

ಮೂರು ಕೊಟ್ರೆ ಕಮಲ

ಆರು ಕೊಟ್ರೆ ರಾಹುಲ

ಸಾಧ್ಯವೆ ದೇಶದ ಉದ್ಧಾರ?

ಇಲ್ಲಿ ಶಾಸಕರ ಪಕ್ಷಾಂತರ ಎಂಬ ಅಸಹ್ಯ ವಿದ್ಯಮಾನವನ್ನು ಕುರಿತು ಕವಿ ಹೇಳುತ್ತಿದ್ದಾರೆ. ಮೊದಲನೆಯ ಸಾಲಿನಲ್ಲಿರುವ ‘ಜನತಂತ್ರಕ್ಕೆ ಆಧಾರ’ ಎನ್ನುವ ಪದಪ್ರಯೋಗ ಈ ಸಮಸ್ಯೆಯನ್ನು ಅದರ ಮೂಲದಲ್ಲಿ, ತಾತ್ವಿಕವಾಗಿ ನೋಡುತ್ತದೆ. ‘ದೇಶದ ಉದ್ಧಾರ’ ಎನ್ನುವುದು ಅದರ ಪರಿಣಾಮದಲ್ಲಿ ನೋಡುತ್ತದೆ. ಹಾಗಾಗಿ ಈ ಪಂಚಪದಿಯನ್ನು ಓದುವವರು ಇದನ್ನು ಓದಿ ನಗುವುದರ ಜತೆಗೆ ಇದು ಆಳವಾಗಿ ಒಂದು ವಿಷಾದವನ್ನೂ ಹುಟ್ಟಿಸುತ್ತದೆ; ಒಂದು ಪ್ರಶ್ನೆಯನ್ನು ಎತ್ತುತ್ತದೆ. ಸಾಹಿತ್ಯ ಮಾಡಬೇಕಾದ ಕೆಲಸ ಇದು. ದೊಡ್ಡದೊಂದು ಲೇಖನ ಮಾಡಬಹುದಾದ ಕೆಲಸವನ್ನು ಸಣ್ಣದೊಂದು ಲಿಮರಿಕ್ಕಿನಲ್ಲಿ ಸಾಧಿಸಿರುವುದು ಡುಂಡಿರಾಜರ ಶ್ರೇಷ್ಠತೆಗೊಂದು ಉದಾಹರಣೆ. ಇನ್ನೊಂದು ನೋಡಿ –

ಅನೂಹ್ಯ

ಪರಿಷತ್ತಲ್ಲಿ ಮುಡಿದಳು ಕಮಲ

ಮೈಸೂರಲ್ಲಿ ಕೈಹಿಡಿದು ಕಿಲಕಿಲ

ತೆನೆಹೊತ್ತ ಹೆಣ್ಣಿನ ಚಿತ್ತ

ಯಾವಾಗ ಹೇಗೆ? ಎತ್ತ?

ಊಹಿಸಲು ಅಸದಳ ಚಂಚಲ!

ಕರ್ನಾಟಕದ ಒಂದು ನೈಜ ರಾಜಕೀಯ ಚದುರಂಗದಾಟದ ಚಿತ್ರಣ ಇಲ್ಲಿದೆ. ಈ ಪ್ರಸ್ತಾವನೆಯ ಪ್ರಾರಂಭದಲ್ಲಿ ಹೇಳಿದಂತೆ, ಮುಂದೆ ವಿವರಣೆ ಬೇಡಬಹುದಾದ ಸುಂದರ ಲಿಮರಿಕ್ ಇದು.

                ಇನ್ನೊಂದು ಬಹಳ ಧ್ವನಿಪೂರ್ಣವಾದ ಲಿಮರಿಕ್ ಹೀಗಿದೆ:

ಸಂಪುಟ

ಬಹಳಷ್ಟು ಭ್ರಷ್ಟರು ಇದ್ದರೂ

ಒಬ್ಬರಷ್ಟೆ  ಬಲೆಗೆ ಬಿದ್ದರು

ಸಿಕ್ಕಿಬೀಳುವ ತನಕ

ಭ್ರಷ್ಟನೂ ಪ್ರಾಮಾಣಿಕ

ಕಳ್ಳ ಅನ್ನುವಂತಿಲ್ಲ ಕದ್ದರೂ!

ಇಲ್ಲಿ ವಿಶೇಷವಾಗಿ ಗಮನ ಸೆಳೆಯುವುದು ‘ಸಂಪುಟ’ ಎನ್ನುವ ಶೀರ್ಷಿಕೆ. ಇಲ್ಲಿ ರಾಜಕೀಯ, ಮಂತ್ರಿ, ಶಾಸಕ ಎಂಬ ರಾಜಕೀಯ ಸೂಚಕೆ ಶಬ್ದಗಳು ಎಲ್ಲಿಯೂ ಬಳಕೆಯಾಗಿಲ್ಲ. ಆದರೆ ‘ಸಂಪುಟ’ ಎನ್ನುವ ಶಬ್ದವೇ ಅವೆಲ್ಲವನ್ನೂ ಸೂಚಿಸುತ್ತದೆ. ನಮ್ಮ ದೇಶದ ರಾಜಕೀಯ ಎಷ್ಟು ಕುಲಗೆಟ್ಟಿದೆ, ಹೇಗೆ ಭ್ರಷ್ಟಾಚಾರಿಗಳಿಗೆ ಮಣೆ ಹಾಕುವಂತಿದೆ ಎಂದರೆ ಸಂಪುಟಗಳಲ್ಲಿ ಅಂತಹವರನ್ನು ಬಿಡುವಂತಿಲ್ಲ, ಅಷ್ಟು ಪ್ರಭಾವಶಾಲಿಗಳಾಗಿರುತ್ತಾರೆ. ಅವರನ್ನು ಬಿಡದಿರುವುದಕ್ಕೆ ಎಲ್ಲರೂ ಹೇಳುವ ನೆವನ, ‘ಭ್ರಷ್ಟಾಚಾರ ಸಾಬೀತಾಗಿಲ್ಲವಲ್ಲ, ಆಗಲಿ’ ಎನ್ನುವುದು. ಅದು ಸಾಬೀತಾಗುವುದಿಲ್ಲ ಎನ್ನುವುದು ಸ್ವಯಂವೇದ್ಯ. ಆದರೆ ‘ಅವನು ಕಳ್ಳ’ ಎನ್ನುವುದನ್ನು ಎಲ್ಲರೂ ಬಲ್ಲವರಾಗಿರುತ್ತಾರೆ! “ಕಳ್ಳ ಅನ್ನುವಂತಿಲ್ಲ ಕದ್ದರೂ” ಎಂಬ ಕೊನೆಯ ಸಾಲು (ಪಂಚ್ ಲೈನ್) ಇನ್ನೂ ವಿಶೇಷವಾಗಿದೆ ಅದುವರೆಗೆ ‘ಭ್ರಷ್ಟ’ ಎನ್ನುವ ಗಂಭೀರ ಪದವನ್ನು ಬಳಸುವ ಕವಿತೆ ಇದ್ದಕ್ಕಿದ್ದಂತೆ ‘ಕಳ್ಳ’ ಎನ್ನುವ ಸತ್ಯವಾದ ಪದವನ್ನು ಬಳಸುತ್ತದೆ. ಬಳಸಿ, ತಕ್ಷಣ ಅಲ್ಲಗಳೆಯುತ್ತದೆ. ಆದರೆ ಆಗಬೇಕಾದ ಹಾನಿ ಆಗಿದೆ; ಸೂಚಿಸಬೇಕಾದ ಅರ್ಥವನ್ನು ಸೂಚಿಸಿ ಆಗಿದೆ!

ಈ ಸಂಕಲನದಲ್ಲಿರುವ ಮೂರನೆಯ ಬಗೆ, ಮತಾಚರಣೆಗಳ ವಿಮರ್ಶೆ. ಉದಾಹರಣೆಗೆ ನೋಡಿ –

1.ಹೋಮ-ಕವನ

ಆಸ್ತಿಕರು ಮಾಡಿದರು ಹೋಮ ಹವನ

ಕವಿಗಳು ರಚಿಸಿದರು ಚುಟುಕುP Àವನ

ಹೋಮದಿಂದ ಹೊಗೆ

ಕವನದಿಂದ ನಗೆ

ಇಬ್ಬರಿಗೂ ಕೊರೊನಾ ಒಂದು ನೆವನ!

2.ಎμÉ್ಟೂಂದು

ನಾಮ ಹಲವಾದರೂ ದೇವರು ಒಬ್ಬ

ಪ್ರತಿಯೊಬ್ಬ ದೇವಗೂ ಪ್ರತ್ಯೇಕ ಹಬ್ಬ

ಮಂದಿರದ ಪೌಳಿಯಲ್ಲಿ

ನಿಂತಾಗ ಸಾಲಿನಲ್ಲಿ

ಅಡಿಗಡಿಗೆ ಕಾಣುವುದು ಕಾಣಿಕೆ ಡಬ್ಬ

ಇವುಗಳಿಗೆ ವಿಮರ್ಶೆಯಾಗಲಿ, ವಿವರಣೆಯಾಗಲಿ ಅಗತ್ಯವಿಲ್ಲ. ಅಷ್ಟು ಅರ್ಥವತ್ತಾಗಿ ವಿಮರ್ಶಿಸಿ, ಎಲ್ಲಿ ವಿಮರ್ಶೆಗೆ ಎಡೆಯಿದೆ, ತಿದ್ದಿಕೊಳ್ಳಲು ಅವಕಾಶವಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಲಿಮರಿಕುಗಳು ಮೂಲದಲ್ಲಿ ರಸಿಕತೆಗೆ ಪ್ರಸಿದ್ಧವಾಗಿದ್ದವು. ಡುಂಡಿರಾಜರೂ ಅದನ್ನು ಮರೆಯದೆ ಕೆಲವು ರಸಿಕತನದ ಪಂಚಪದಿಗಳನ್ನು ಕೊಟ್ಟಿದ್ದಾರೆ:

ಅವನು

ಒಮ್ಮೆಲೆ ಬರಸೆಳೆದು ತಬ್ಬಿಕೊಂಡ

ಬಳ್ಳಿಯಂತೆ ಮೈತುಂಬ ಹಬ್ಬಿಕೊಂಡ

ಚುಮುಚುಮು ಚಳಿಯ

ಓಡಿಸಿದ ಗೆಳೆಯ

ಅವನಲ್ಲ ಗಂಡ, ನಿಗಿನಿಗಿ ಕೆಂಡ!

ಲಿಮರಿಕ್‍ಗಳ ಇನ್ನೊಂದು ಮಾದರಿ, ಹಳ್ಳಿಗಳಲ್ಲಿ ತಮಗೆ ಪರಿಚಯವಿರುವ ಗಂಡು ಹೆಣ್ಣುಗಳ ವರ್ತನೆಗಳನ್ನು, ಸ್ವಾರಸ್ಯಕರ ಪ್ರಸಂಗಗಳನ್ನು ಪದ್ಯ ಕಟ್ಟಿ ಪ್ರಚಾರ ಮಾಡುವುದು. ಡುಂಡಿರಾಜರು ಆ ಮಾದರಿಯಲ್ಲಿಯೂ ಪಂಚಪದಿಗಳನ್ನು ರಚಿಸಿದ್ದಾರೆ. ನೋಡಿ –

ಪ್ರೀತಿಗೆ ಕಾರಣ

ಸೀನುವಿನ ಪ್ರೇಯಸಿ ಭಾನು

ಸುಂದರಿಯಲ್ಲ ಆದರೇನು?

ಪ್ರೀತಿಗೆ ಕಾರಣ

ರೂಪವಲ್ಲ ಹಣ

ಮಾವನು ಕೊಡುವ ಜಮೀನು

ಪ್ರಾಸಕ್ಕಾಗಿ ಇದ್ದಕ್ಕಿದ್ದಂತೆ ಒಂದು ಇಂಗ್ಲಿಷ್ ಪದವನ್ನು ಕನ್ನಡದಲ್ಲಿ ಬರೆಯುವ ಡುಂಡಿರಾಜರ ಜಾಣ್ಮೆ ವಿಶಿಷ್ಟವಾದುದು. ನೋಡಿ –

ಸಲಹೆ

ಏರಿಸಬೇಡಿ ಸ್ಪೀಕರಿನ ವಾಯ್ಸನ್ನು

ಕೊಂಚ ಕಡಿಮೆ ಮಾಡಿ ನಾಯ್ಸನ್ನು

ಹಿತವಾಗಿ ಮಾತಾಡಿ

ಮಿತವಾಗಿ ಮಾತಾಡಿ

ಅತಿಯಾದ್ರೆ ಪಾಯ್ಸಾನೂ ಪಾಯ್ಸನ್ನು

ಇಲ್ಲಿ ಅವರಿಗೆ ಕನ್ನಡದ್ದೇ ಆದ ಶಬ್ದವೊಂದನ್ನು ಸೃಷ್ಟಿಸಿಕೊಳ್ಳುವುದು ಕಷ್ಟವಾಗಿರಲಿಲ್ಲ. ಇಲ್ಲಿಯೇ ಅವರು ಬಳಸಿರುವ ‘ಪಾಯ್ಸಾನೂ’ ಅನ್ನುವುದನ್ನೇ ಬಳಸಿದ್ದರೂ ನಡೆಯುತ್ತಿತ್ತು. (“ಅತಿಯಾದರೆ ವಿಷ ಪಾಯ್ಸಾನೂ” ಅಂತ ಹೇಳಿದ್ದರೂ ಪ್ರಾಸಕ್ಕೆ ದೊಡ್ಡ ಹಾನಿಯೇನೂ ಆಗುತ್ತಿರಲಿಲ್ಲ). ಆದರೆ ‘ವಾಯ್ಸನ್ನು’, ‘ನಾಯ್ಸನ್ನು’ ಇಂಗ್ಲಿಷ್ ಪದಗಳಾಗಿರುವುದರಿಂದ ‘ಪಾಯ್ಸನ್ನು’ ಎನ್ನುವುದನ್ನು ಅವರು ತಂದುಕೊಂಡಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ ಡುಂಡಿರಾಜರು ಇಲ್ಲಿ ನಮ್ಮ ಕಾಲದ ಕನ್ನಡಿಗರು ಬಳಸುವ ಕನ್ನಡಾಂಗ್ಲ ಭಾಷೆಯನ್ನೂ ವಿಡಂಬಿಸುತ್ತಿದ್ದಾರೆ. ಆದ ಕಾರಣ ಈ ಪಂಚಪದಿಗೆ ಮಹತ್ವವಿದೆ.

ಹೀಗೆ ಹಾಸ್ಯದ ವಸ್ತು ಮತ್ತು ಸ್ವರೂಪ ಎರಡರಲ್ಲಿಯೂ ಹಿಡಿತ ಇರುವ ಡುಂಡಿರಾಜರ ಪಂಚಪದಿಗಳು ಅವರ ಬಹಳ ಮುಖ್ಯ ಹಾಸ್ಯ ಸಂಕಲನಗಳ ಸಾಲಿಗೆ ಸೇರುವ ರಚನೆಗಳು.

ರಾಮನಾಥರ ಪಂಚಪದಿಗಳು

ರಾಮನಾಥ್ ಅವರ ಲಿಮರಿಕ್‍ಗಳು ತಮ್ಮ ವೈವಿಧ್ಯದಿಂದ ಮತ್ತು ಬದುಕಿನ ಕುರಿತಾದ ಒಳನೋಟಗಳಿಂದ ಗಮನ ಸೆಳೆಯುತ್ತವೆ. ಅಲ್ಲದೆ ಅವರ ಭಾಷೆ ಕನ್ನಡದ ವಿಶಿಷ್ಟವಾದ ಕೈಲಾಸಂ ಅವರ ‘ಮಕ್ಕಳಿಸ್ಕೂಲ್ ಮನೇಲಲ್ವೆ’ ಮಾದರಿಯ ಭಾಷೆ. ಈ ಮೂರು ವಿಷಯಗಳು ರಾಮನಾಥ್ ಅವರ ಲಿಮರಿಕ್‍ಗಳನ್ನು ಸ್ಮರಣೀಯಗೊಳಿಸುತ್ತವೆ.

ಕೈಲಾಸಂ ಮಾದರಿ ಅಂದರೆ ಮಧ್ಯೆ ಮಧ್ಯೆ ಇಂಗ್ಲಿಷ್ ಪದಗಳನ್ನು ಬಳಸುವುದು ಮತ್ತು ಬೆಂಗಳೂರು ಕಡೆಯ ಆಡುಮಾತಿನಲ್ಲಿ ಯಥೇಷ್ಟವಾಗಿರುವ ವ್ಯಂಜನಾಂತಗಳ ಬಳಕೆ. ಇದಕ್ಕೆ ಒಂದು ಉದಾಹರಣೆಯನ್ನು ನೋಡಿ –  ‘ಐ ಲವ್ ಯೂ’ಅಂದವ್ರ್ ಮೂವ್ರಲ್ ಯಾರು?’ ಇಲ್ಲಿ, ‘ಲವ್’ ಅನ್ನುವುದು ಇಂಗ್ಲಿಷ್ ಪದ. (ಐ ಲವ್ ಯೂ – ಎನ್ನುವ ವಾಕ್ಯವೇ ಇದೆ ಇಲ್ಲಿ). ಉಳಿದೆರಡು ವ್ಯಂಜನಾಂತಗಳು – ರ್ ಮತ್ತು ಲ್ – ಕನ್ನಡದ ಶಿಷ್ಟ ಭಾಷೆಯಲ್ಲಿಲ್ಲ. ‘ಅಂದವರು’ – ಉಕಾರಾಂತ, ಮತ್ತು ‘ಮೂವರಲ್ಲಿ’ – ಇಕಾರಾಂತ ಹೀಗೆ ಸ್ವರಾಂತಗಳಾಗಿರುವುದು ಕನ್ನಡದ ಬರವಣಿಗೆಯ ಭಾಷೆಯ ಕ್ರಮ. ಅಲ್ಲದೆ ‘ಮನೇಲಲ್ವೆ?’ ಎಂಬ ಮಾದರಿಯಂತೆ, ‘ಮೂವರಲ್ಲಿ’ ಎಂದು ಹೇಳಬೇಕಾದಲ್ಲಿ, ‘ಮೂವ್ರಲ್’ ಎಂದು ಬರೆಯುತ್ತಾರೆ. ಇದು ಸಹಜವಾದ ಆಡುಮಾತು. ಬರವಣಿಗೆಯಲ್ಲಿ ಬಂದಾಗ (ಮತ್ತು ವಾಚನದಲ್ಲಿ – ಅಭಿನಯದಲ್ಲಿ) ಇದಕ್ಕೆ ಒಂದು ಸೊಗಸು ಬರುತ್ತದೆ. ಹಿಂದೆಯೂ ಹಲವರು, ಉದಾಹರಣೆಗೆ – ರಾಜರತ್ನಂ ಈ ಸುತ್ತಿನ ಆಡುಮಾತನ್ನೂ, ಬೇಂದ್ರೆಯವರು ಧಾರವಾಡದ ಜಾನಪದ ಭಾಷೆಯನ್ನೂ (‘ಮೋರೆ’ ಎನ್ನುವಲ್ಲಿ ‘ಮಾರಿ’ ಇತ್ಯಾದಿ) ಬಳಸಿರುವುದಿದೆ. ರಾಮನಾಥ್ ಅವರ ಲಿಮರಿಕ್‍ಗಳಲ್ಲಿ ಈ ಭಾಷೆಯ ಬಳಕೆ ಖುಷಿ ಕೊಡುತ್ತದೆ.  

                ಇನ್ನೂ ಒಂದು ಅಂಶವನ್ನು ರಾಮನಾಥ್ ಅವರ ಲಿಮರಿಕ್‍ಗಳ ಬಗ್ಗೆ ಮೊದಲಿಗೇ ಹೇಳಿಬಿಡಬಹುದು. ಅವರ ಹಲವು ಲಿಮರಿಕ್‍ಗಳು ಸಾಮಾನ್ಯ ಲಿಮರಿಗಳಿಗಿಂತ ಎರಡುಪಟ್ಟು ಗಾತ್ರದ ಸಾಲುಗಳ ಲಿಮರಿಕ್‍ಗಳು. ಇದಕ್ಕೆ ಕಾರಣ, ಇವು ಸ್ವಲ್ಪ ಸಂಕೀರ್ಣವಾಗಿ ಇರುವುದು ಇರಬಹುದು. ಅವರ ಲಿಮರಿಕ್‍ಗಳ ಕೆಲವು ಸಾಲುಗಳು ಹೀಗಿವೆ:

1. ಟೀನೇಜಿಂದ ಓಲ್ಡೇಜ್‍ವರೆಗೂ ಹೆಣ್ಣಿನ ಮುಂದಿವ ಡಲ್ಲು.

2. ಚಿನ್ವಾರ್ನಂದ ಮಿಕ್ಕೋವ್ನಕಲಿ ಇಟ್ಟವ್ಳ್ ಕಿವಿಗ್ಹೂ ಚೆಂಡು

3. ವ್ಯಾಲೆಂಟೈನ್ಸ್‍ಡೇ ಪಾರ್ಟಿಯಲ್ಲಿ ಫುಲ್‍ಟೈಟ್ ಆದನು ಮರುಳು

4.ರೋಸಿ ಮೀನಾ ಜ್ಯೋತಿಯ ಜೊತೆಗೆ ಕುಣಿÀದನು ತಬ್ಬುತ ಕೊರಳು

5. ಹೊಳ್ಳೆಯ ಮೂಲಕ ಸಿಗರೇಟಿನ ಹೊಗೆ ಥೇಟ್ ಅಂದಿನ ಹೊಗೆಗೂಡೆ

6. ಮಣ್ಣೆಷ್ಟ್ ಬೇಕೋ ತಿನ್ಕೋ ಮೀಡಿಯಾ ಕ್ಯಾಮ್ರಾದಿಂದ ದೂರ

ಇವುಗಳೆಲ್ಲ ಅವರ ಕೆಲವು ಲಿಮರಿಕ್‍ಗಳ ಒಂದೊಂದು ಸಾಲುಗಳು. ಸಾಮಾನ್ಯ ಗಾತ್ರಕ್ಕಿಂತ ದುಪ್ಪಟ್ಟು ಗಾತ್ರದ ಈ ಸಾಲುಗಳಲ್ಲಿ ಎರಡೆರಡು ಸಾಲುಗಳು ಅಡಕವಾಗಿರುವಂತೆ ಕಾಣುತ್ತವೆ. ಇಷ್ಟು ದೊಡ್ಡ ಸಾಲುಗಳನ್ನು ರಾಮನಾಥ್ ಅವರು ನಿಭಾಯಿಸುವ ರೀತಿ ಶ್ಲಾಘನೀಯವಾಗಿದೆ. ಉದಾಹರಣೆಗೆ ನೋಡಿ – 

ಮಾಡ್ರನ್ ಸಾವಿತ್ರಿ

ಬೇಡ ಯಮನೆ ಕರುಣೆ ಇರಲಿ ಒಯ್ಯಬೇಡ ಈಗಲೆ

ಕೊಂಚ ಕೆಲಸ ಮುಗಿಸಿ ನಾನೆ ಕಳುಹೆನವನ ಬೇಗಲೆ

ಎಂದು ಅವನನೊಪ್ಪಿಸಿ

ವಿಮೆಯ ಕಂತ ಪಾವತಿಸಿ

ನುಡಿದಳಿನ್ನು ನಿನ್ನವನವ ಹೊತ್ತು ಸಾಗು ತ್ವರೆಯಲೆ.

ರಾಮನಾಥ್ ಅವರು ದೀರ್ಘವಾದ ಮೂರು ಸಾಲುಗಳನ್ನು ಎರಡೆರಡು ಸಾಲುಗಳೆಂಬಂತೆ, ನಡುವೆ ಸ್ವಲ್ಪ ವಿರಾಮ ಕೊಟ್ಟು ಓದುವಂತೆ ರಚಿಸಿದ್ದಾರೆ. ಮೇಲಿನ ಲಿಮರಿಕನ್ನು ಹೀಗೆ ಓದಬಹುದು: 

ಬೇಡ ಯಮನೆ ಕರುಣೆ ಇರಲಿ

ಒಯ್ಯಬೇಡ ಈಗಲೆ

ಕೊಂಚ ಕೆಲಸ ಮುಗಿಸಿ ನಾನೆ

ಕಳುಹೆನವನ ಬೇಗಲೆ

ಎಂದು ಅವನನೊಪ್ಪಿಸಿ

ವಿಮೆಯ ಕಂತ ಪಾವತಿಸಿ

ನುಡಿದಳಿನ್ನು ನಿನ್ನವನವ

ಹೊತ್ತು ಸಾಗು ತ್ವರೆಯಲೆ.

ಹೀಗೆ ರಾಮನಾಥ್ ಅವರು ಪಂಚಪದಿಗಳಿಗೆ ಕೊಟ್ಟಿರುವ ಹೊಸ ಆಯಾಮವನ್ನು ಕನ್ನಡಿಗರು ಸ್ವಾಗತಿಸುವರೆಂದು ನನಗೆ ನಂಬಿಕೆಯಿದೆ. ಈ ಕ್ರಮದಿಂದ ಸ್ವಲ್ಪ ದೊಡ್ಡ ವಸ್ತುಗಳನ್ನು ಲಿಮರಿಕ್ ರೂಪದಲ್ಲಿ ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆ.

ಮೇಲಿನ ಪಂಚಪದಿಯಲ್ಲಿ ಕಾಣುವ ಹಾಗೆ ರಾಮನಾಥ್ ಅವರು ಪೌರಾಣಿಕ ಪಾತ್ರಗಳನ್ನು ತಮ್ಮ ರಚನೆಗಳಲ್ಲಿ ಯಥೇಷ್ಟವಾಗಿ ಬಳಸಿಕೊಳ್ಳುತ್ತಾರೆ. ಪೌರಾಣಿಕ ಪಾತ್ರಗಳನ್ನು ಈ ಕಾಲಕ್ಕೆ ತಂದು ಇಂದಿನ ವಿದ್ಯಮಾನವನ್ನು, ಇಂದಿನ ಜನರ ಮನೋಭಾವವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಅವರ ವೈಶಿಷ್ಟ್ಯ. ಮೇಲಿನ ಪಂಚಪದಿಯನ್ನೇ ಗಮನಿಸುವುದಾದರೆ, ಅಲ್ಲಿ ಸಾವಿತ್ರಿ ಒಬ್ಬಳು ಚಿರಂತನ ಪ್ರತೀಕ ಆಗಿರುತ್ತಲೇ ಇಂದಿನ ಪತ್ನಿಯರು ಆ ಮಾದರಿಯ ಜತೆಗೆ ಹೋಲಿಸಿದರೆ ಎಲ್ಲಿ ನಿಲ್ಲುತ್ತಾರೆ ಎಂದು ಪರಿಶೀಲಿಸಲು ಒದಗಿ ಬರುತ್ತಾಳೆ. ಆಧುನಿಕ ಪತ್ನಿಯೊಬ್ಬಳು (ಸಾವಿತ್ರಿ ಅನ್ನುವುದು ವ್ಯಂಗ್ಯ, ಅಷ್ಟೆ. ಅದು ಅವಳ ಹೆಸರಲ್ಲ ಎನ್ನುವುದು ಸ್ಪಷ್ಟ) ತನ್ನ ಗಂಡನ ಪ್ರಾಣವನ್ನು ಸ್ವಲ್ಪದಿನಗಳ ಮಟ್ಟಿಗೆ ಉಳಿಸಿಕೊಳ್ಳಲು ಹೆಣಗಾಡುತ್ತಾಳೆ. ಅವಳು ಯಮನನ್ನೇ ಬೇಡಿದಳು ಎನ್ನುವುದನ್ನು ಒಪ್ಪಲಾಗದ ಆಧುನಿಕ ಮನಸ್ಸಿಗೆ ವೈದ್ಯರನ್ನು ಬೇಡಿದಳು ಎಂದು ಸ್ವೀಕರಿಸಲು ಕಷ್ಟವಾಗಲಾರದು. ಗಂಡನ ಸಾವನ್ನು ಸ್ವಲ್ಪ ದಿನ ವಿಳಂಬಿಸಬೇಕು ಯಾಕೆಂದರೆ ಅವಳು ಗಂಡನ ವಿಮಾ ಕಂತುಗಳನ್ನು ಪಾವತಿಸಬೇಕಾಗಿದೆ. ಯಾವುದೇ ವಿಮಾ ಕಂತು ಪಾವತಿಸದೆ ಬಾಕಿಯಾಗಿದ್ದರೆ ಗಂಡ ಸತ್ತ ಬಳಿಕ ವಿಮೆಯ ಹಣವು ಅವಳಿಗೆ ಸಿಗುವುದಿಲ್ಲ! ಕಂತು ಪಾವತಿಸಿದ ಮೇಲೆ ಅವಳು, ಇನ್ನು ಗಂಡ ಸತ್ತರೆ ಪರವಾಗಿಲ್ಲ; ಮಾತ್ರವಲ್ಲ ಅವನ ಪ್ರಾಣ ಬೇಗನೆ ಹೋಗಲಿ ಎಂದು ಹೇಳುತ್ತಾಳಂತೆ! ಯಾಕೆಂದರೆ ಅವಳಿಗೆ ಬೇಕಾಗಿರುವುದು ಗಂಡನ ವಿಮಾ ಹಣ ಎನ್ನುವುದು ಧ್ವನಿತಾರ್ಥ.

ಇಂತಹದೇ ಇನ್ನೊಂದು, (ಆಧುನಿಕ ಮಹಿಳೆಯರ ಸ್ಥಿತಿಯನ್ನು ಧ್ವನಿಸುವಂತಹ ಪುರಾಣಪ್ರಧಾನ ಪಂಚಪದಿ) –

ವನ ವಾಸಿ

ಕಾಡುಮೇಡು ಸೀತೆ ಪಾಡು ಊರ್ಮಿಳೆ ಪಾಡೇ ವಾಸಿ

ಅಂತೇನಾದ್ರ ಹೇಳ್ಗೀಳೀರಿ ಸೀತೆಯ ಲೈಫೇ ಕ್ಲ್ಯಾಸಿ

ರಕ್ಷಣೆಗಿದ್ದ ರಾಮ

ಚಾಕರಿಗವನ ತಮ್ಮ

ಮೂರತ್ತೆಯರ ಅರಮನೆಗಿಂತ ವನವಾಸಾನೇ ವಾಸಿ

ಇಲ್ಲಿ ‘ವನ ವಾಸಿ’ ಪದದ ಮೇಲೆ ರಾಮನಾಥರ ಪನ್ (ಠಿuಟಿ) ಅನ್ನು ಗಮನಿಸಬಹುದು. ‘ಪರ ವಶ’ ಎನ್ನುವ ಇನ್ನೊಂದು ಪಂಚಪದಿಯ ಶೀರ್ಷಿಕೆಯಲ್ಲಿಯೂ ಇಂತಹ ಪನ್ ಇದೆ. ರಾಮನಾಥರು ಠಿuಟಿ-ಡಿತರೆಂದೇ ಖ್ಯಾತಿವೆತ್ತವರು. 

ರಾಮನಾಥ್ ಅವರು ಹೆಚ್ಚಿನ ಸಂಖ್ಯೆಯಲ್ಲಿ ಪೌರಾಣಿಕ ಸನ್ನಿವೇಶಗಳನ್ನು ವಿಮರ್ಶಿಸಿ, ಆಧುನಿಕ ಜನತೆಗೆ ಜೀವನದ ತತ್ವಗಳನ್ನು ಹೇಳುವ ಗಂಭೀರ ಉದ್ದೇಶದ ಹಾಸ್ಯ ಪಂಚಪದಿಗಳನ್ನು ಬರೆದಿದ್ದಾರೆ. ಉದಾಹರಣೆಗೆ,

ವೈಪರೀತ್ಯ

ಬಿಲ್ಲು ಮುರಿದನೊಬ್ಬ ಯಂತ್ರ ಮುರಿದನೊಬ್ಬ

ತಲೆಗೆ ರಕ್ತಶಾಂಪುವನ್ನು ತಂದುಕೊಟ್ಟನೊಬ್ಬ

ಎಂಥ ವೈಪರೀತ್ಯ

ಏಕೆ ಇಂಥ ಪೈತ್ಯ

ಹೀಗೆ ಪುರುಷರಾಡಬೇಕು ಅಂಗನೆಗದೆ ಹಬ್ಬ

ದ್ರೌಪದಿ ವಸ್ತ್ರಾಪಹರಣದಂತಹ ಪ್ರಸಂಗಗಳು, ಏಕಲವ್ಯ – ಅರ್ಜುನ – ದ್ರೋಣರನ್ನುಳ್ಳ ಪ್ರಸಂಗ (ಈ ಎರಡು ಪ್ರಸಂಗಗಳನ್ನೂ ರಾಮನಾಥ್ ವಿಮರ್ಶಾತ್ಮಕವಾಗಿ ಚಿತ್ರಿಸಿದ್ದಾರೆ); ಸೀತೆ, ಸೈರಂಧ್ರಿ, ಕರ್ಣ, ಬುದ್ಧ ಮುಂತಾದವರ ವ್ಯಕ್ತಿತ್ವಗಳು ರಾಮನಾಥರ ಲಿಮರಿಕ್‍ಗಳಾಗಿ ಪರಿಶೀಲನೆಗೆ ಒಳಪಟ್ಟಿವೆ. ನಿಮ್ಮ ಕೈಯಲ್ಲಿ ಪುಸ್ತಕವೇ ಇರುವುದರಿಂದ ಇಲ್ಲಿ ಮತ್ತೊಮ್ಮೆ ಉದ್ಧರಿಸುವುದು ಅನಗತ್ಯ. 

ರಾಮನಾಥ್ ಅವರು ದೀರ್ಘ ಸಾಲುಗಳುಳ್ಳ ಲಿಮರಿಕ್‍ಗಳ ಸಾಧ್ಯತೆಗಳನ್ನು ಪರಿಚಯಿಸಿದ್ದಾರೆ ಎಂದು ಹೇಳಿದೆ. ಅದೇ ವೇಳೆಗೆ ಅವರು ಸಾಂಪ್ರದಾಯಿಕವಾದ, (ಅಂದರೆ ಸಣ್ಣ ಗಾತ್ರದ) ಪಂಚಪದಿಗಳನ್ನು ಸಾಕಷ್ಟು ಬರೆದಿದ್ದಾರೆ. ಈ ಉದಾಹರಣೆ ನೋಡಿ – 

ಪರಿಹಾರ

ನಂಬಿದ ಪಾರ್ಟಿಗೆ ಕೈಕೊಟ್ಟು

ಸೇರಿದರೆಲ್ಲರು ರೆಸಾರ್ಟು

ಕೊಟ್ಟರೆ ಕಂತೆ

ಕರಗಿತು ಸಂತೆ

ಸಾಲ್ವ್ ಆಗ್ಹೋಯ್ತು ಬಿಕ್ಕಟ್ಟು

ಸಾಂಪ್ರದಾಯಿಕ ಲಿಮರಿಕ್‍ಗಳಲ್ಲಿ, ತಮ್ಮ ಊರಿನ ಯಾರೋ ಒಬ್ಬನನ್ನು ಅಥವಾ ಒಬ್ಬಳನ್ನು ತಮಾಷೆ ಮಾಡಲು ಹುಟ್ಟಿಕೊಂಡ ಲಿಮರಿಕ್‍ಗಳದು ಒಂದು ದೊಡ್ಡ ಪಾಲು ಇದೆ. ಆ ಬಗೆಯ ಪಂಚಪದಿಗಳನ್ನು ರಾಮನಾಥ್ ಅವರೂ ಬರೆದಿದ್ದಾರೆ:

ಬೆಂಡು

ವ್ಹೀಲಿಂಗ್‍ನಲ್ಲಿ ಎತ್ತಿದ್ಕೈಯ್ಯಿ ನಮ್ಮೇರಿಯಾದ ಗೋಪು

ಭರ್ರಂತೋಡ್ಸಿ ಸಂಪಾದ್ಸ್‍ತಿದ್ದ ಹುಡ್ಗೀರ್ಮುಂದೆ ಸ್ಕೋಪು

ಬೈಕು ಆಯ್ತು ಸ್ಕಿಡ್ಡು

ಬೆನ್ಮೂಳೇನೇ ಬೆಂಡು

ಹುಚ್ಚಾಟಕ್ಕೂ ಮಿತಿಯಿರದಿದ್ರೆ ಭವಿಷ್ಯವೆಲ್ಲ ತೋಪು

ರಾಮನಾಥ್ ಅವರ ಲಿಮರಿಕ್‍ಗಳ ವೈಶಿಷ್ಟ್ಯ ಅಂದರೆ ಅವರು ಎತ್ತಿಕೊಳ್ಳುವ ವೈವಿಧ್ಯಮಯ ವಿಷಯಗಳು. ಕೋವಿಡ್, ಐಪಿಎಲ್, ಮ್ಯಾಚ್ ಫಿಕ್ಸಿಂಗ್, ಗಾಂಧಿ ಜಯಂತಿಗೆ ಹೆಂಡದಂಗಡಿ ಮುಚ್ಚುವುದು, ಬಿಗ್ ಬಾಸ್, ಕರ್ನಾಟಕದಲ್ಲಿ ಪರಭಾಷಿಗರಿಗೆ ಮಣೆ, ಟಿ.ವಿ. ಧಾರಾವಾಹಿಗಳಿಗೆ ಕಥೆ ಹೆಣೆಯುವ ರೀತಿ, ರಾಜಕಾರಣಿ ಕಾಮದಾಟವಾಡಿ ಸಿಕ್ಕಿಬಿದ್ದಾಗ ಉಳಿದವರ ಬುದ್ಧಿವಾದ, ಪುರುಷಾರ್ಥಕ್ಕೆ ಹಾಸ್ಯಮಯ ವಿವರಣೆ ಇತ್ಯಾದಿ ಹಲವು ವಿಷಯಗಳ ಕುರಿತು ಅವರ ಲಿಮರಿಕ್‍ಗಳಿವೆ. ಇದರ ನಡುವೆ ಗಮನ ಸೆಳೆಯುವ, ಮತ್ತು ಸೂಚ್ಯವಾಗಿರುವ ಜೀವನಧರ್ಮ ಬೋಧನೆಗಳೂ ಇವೆ. ಉಲ್ಲೇಖಿಸಬೇಕಾದ ಒಂದು ಹೀಗಿದೆ:

ನಿಜ ಅರ್ಥ

ಧರ್ಮ ಮೋಕ್ಷ ಕಾಮ ಅರ್ಥ

ನಾಲ್ಕು ವಿಧದ ಪುರುಷಾರ್ಥ

ಮೋಕ್ಷವಿತ್ತು ಧರ್ಮಕೆ

ಕಾಮಿಸಿರಲು ಅರ್ಥಕೆ

ಬದುಕ ಪಥವೆ ನಿಜಕು ವ್ಯರ್ಥ

***

ಹೀಗೆ ಕನ್ನಡದ ಇಬ್ಬರು ಮುಖ್ಯ ಹಾಸ್ಯ ಸಾಹಿತಿಗಳಾದ ಡುಂಡಿರಾಜ್ ಮತ್ತ್ತು ರಾಮನಾಥ್ ಅವರು ಜತೆಗೂಡಿ ಕನ್ನಡಿಗರಿಗೆ ಕೊಡುತ್ತಿರುವ, ತಲಾ ಅರುವತ್ತು ಲಿಮರಿಕ್‍ಗಳ ಈ ಸಂಕಲನ ಕನ್ನಡಿಗರಲ್ಲಿ ಹೊಸ ಉತ್ಸಾಹವನ್ನು ಹುಟ್ಟಿಸಲಿ ಎಂದು ಹಾರೈಸುವೆ. ಈ ಕವಿಗಳ ನಡುವೆಯೂ ಇಂತಹ ಮ್ಯಾಚ್ ಫಿಕ್ಸಿಂಗ್ ಇನ್ನಷ್ಟು ನಡೆಯಲಿ. 

*

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಡುಂಡಿ ರಾಮ್ಸ್ ಲಿಮರಿಕ್ಸ್ (ಪಂಚ್ ಪದಿಗಳು)”

  1. Dr.poornima Shetty

    ಲಿಮರಿಕ್ ಸಂಕಲನಗಳ ಕುರಿತು ಅನೇಕ ಒಳನೋಟಗಳನ್ನು ನೀಡುವ ಲೇಖನ. ಸದಾ ಕಾಲ ಸಾಹಿತ್ಯದ ಒಂದಲ್ಲ ಒಂದು ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಓದುಗರಿಗೆ ರಸದೂಟವನ್ನು ನೀಡುತ್ತಿರುವ.ಬಿ.ಜನಾರ್ದನ ಭಟ್ ಅವರಿಗೆ ಅಭಿನಂದನೆಗಳು.

  2. ಧರ್ಮಾನಂದ ಶಿರ್ವ

    ದುಂಡಿ ರಾಮ್ಸ್ ಲಿಮರಿಕ್ಸ್ ಪಂಚಪದಿಗಳ ಸುದೀರ್ಘವಾದ ಪರಿಚಯ ಚೇತೋಹಾರಿಯಾಗಿದೆ. ಲಿಮರಿಕ್ಸ್ ನ ಇತಿಹಾಸ, ಹಿನ್ನೆಲೆ, ವ್ಯಾಪ್ತಿಗಳ ಮುನ್ನುಡಿಯ ಜೊತೆಗೆ ಹಾಸ್ಯದ ಕಣಕದೊಳಗೆ ಹೂರಣವಾಗಿ ಒದಗುವ ಸಾಮಾಜಿಕ ವಿದ್ಯಮಾನಗಳು, ಸಂಸಾರ ತಾಪತ್ರಯ, ಗಂಡು ಹೆಣ್ಣಿನ ಸಂಬಂಧ, ರಾಜಕೀಯ… ಎಲ್ಲವನ್ನೂ ಸಾಂದರ್ಭಿಕವಾಗಿ ವಿವರಿಸಿದ ಬಿ. ಜನಾರ್ದನ್ ಭಟ್ ಅವರಿಗೆ ಅಭಿನಂದನೆಗಳು. ಲೇಖನವಿಡೀ ವಿವರಿಸಬಹುದಾದ ವಿಷಯವೊಂದನ್ನು ಐದು ಸಾಲಿನಲ್ಲಿ ಬಹಳ ಪರಿಣಾಮಕಾರಿಯಾಗಿ ಹಾಸ್ಯದ ರೂಪದಲ್ಲಿ ಪ್ರಸ್ತುತಪಡಿಸುವ ಲಿಮರಿಕ್ಸ್ ನ ಚಮತ್ಕಾರಕ್ಕೆ ದೊಡ್ಡದೊಂದು ಸಲಾಮ್…..

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter