ಜೀವ – ಅಜೀವ ಸ್ವಭಾವ ನಿರೀಕ್ಷಣ ಪಟುತ್ವದ ಅಪೂರ್ವ ಲೇಖನಗಳ ಸಂಗ್ರಹ.

(“ಒಂದೊಂದು ನೆನಪಿಗೂ ಒಂದೊಂದು ವಾಸನೆ”)

ಸರ್ವಜನ ಕುತೂಹಲಿ ಪೂರ್ವಗ್ರಹವಿಲ್ಲದ ಸ್ವಸ್ಥ ವಿಶ್ವಜನೀಯ ಚಿಂತಕ ಮತ್ತು ಸಾಹಿತಿ ಶ್ರೀ ಎಸ್ ದಿವಾಕರ್ ಅವರ ಪುಸ್ತಕದ ಒಳಹೊಗುವುದೆಂದರೆ ವೈಶ್ವಿಕ ಅನುಭವಗಳ ವಸ್ತುಸಂಗ್ರಹಾಲಯವನ್ನು ಹೊಕ್ಕಂತೆ. ಜಗತ್ತಿನ ವೈವಿಧ್ಯಮಯ ಸಾಹಿತ್ಯ ಮತ್ತು ಸಂಗತಿಗಳ ಸದಾ ಕುತೂಹಲಿ ಮನಸ್ಸಿನವರಾದ ಇವರ ಓದು ಹೊಸಗಾಳಿಯನ್ನು ಉಸಿರಾಡಿದಂತೆ. ಪ್ರಜ್ಞೆಯ ವಿಸ್ತರದ ಫಲ ಜಗತ್ತಿನ ಯಾವುದೇ ಭಾಗದ ಅನುಭವವು ತಮ್ಮದೇ  ಎಂಬಂತೆ ಭಾವಿಸುವುದು; ಅದಕ್ಕೆ ಪ್ರತಿಸ್ಪಂದಿಸುವುದು. ಅಕ್ಷರಗಳಲ್ಲಿ ಇಳಿಸುವಾಗ ಸಹಜವಾಗಿ ಅನುದ್ವೇಗ ರಹಿತವಾಗಿರುವುದು. ಇದು ದಿವಾಕರ್ ಅವರ ಪ್ರಬಂಧಗಳಲ್ಲಿ ಕಂಡು ಬರುವ ಶೀಲ. ” ಒಂದೊಂದು ನೆನಪಿಗೂ ಒಂದೊಂದು ವಾಸನೆ” ಇವರ 2016 ನೇಯ ವರುಷ ಪ್ರಕಟವಾದ ಪ್ರಬಂಧಗಳ ಸಂಕಲನ. ಇಲ್ಲಿ ಚಿತ್ರಕಲೆ, ಸಾಹಿತ್ಯ, ಸಂಗೀತಕಲೆ, ಕಾವ್ಯ, ಪತ್ರಿಕೋದ್ಯಮ ಹೀಗೆ ವೈವಿಧ್ಯಮಯ ವಿಷಯಗಳು ಅಡಕವಾಗಿದೆ.

ಗದ್ಯ, ಪದ್ಯ, ಚಿತ್ರ, ಕಾವ್ಯವೇ ಮೊದಲಾದವುಗಳಿರಬಹುದು ಇವೆಲ್ಲವೂ ” ಆಗುವ” ಕ್ರಿಯೆ. ಈ ” ಆಗುವುದು” ಎಂಬುದು ಕಲಾವಿದ/ ಬರಹಗಾರನ ಇಲ್ಲಿವರೆಗಿನ ಜೀವನಾನುಭವದಿಂದ ಸಿದ್ಧಗೊಂಡ ಅನುಭವ ದ್ರವ್ಯ ಆತನ ಮೂಲಕ ಹೊರಬರುವುದೇ ಆಗಿದೆ- ಮಾತಿನ ಮೂಲಕ, ಕೃತಿಯ ಮೂಲಕ ಹೀಗೆ ಅಭಿವ್ಯಕ್ತಗೊಂಡ ಕಲಾಕೃತಿ( ಬರಹ, ಹಾಡು, ನಾಟ್ಯ ಯಾವುದೂ ಇರಬಹುದು) ತೋರುವುದಕ್ಕಿಂತಲೂ ಹೇಳುವುದು ಸಾಕಷ್ಟಿರುತ್ತದೆ. ಅದಕ್ಕೆ ಬೇಕಾದದ್ದು ಆಳವಾದ ದೃಷ್ಟಿ; ಜೀವಾಜೀವ ವಸ್ತುಗಳ ಸ್ವಭಾವ ನಿರೀಕ್ಷಣ ಪಟುತ್ವ. ಇಂಥಹಾ ಸ್ವಭಾವ ನಿರೀಕ್ಷಣ ಪಟುತ್ವವನ್ನು ಶ್ರೀ ದಿವಾಕರ್ ಅವರ  ಪ್ರಬಂಧಗಳಲ್ಲಿ, ಕಾವ್ಯಗಳಲ್ಲಿ ಕಾಣಬಹುದು. ಬರೆಹದಿಂದ  ಬರೆಹಕ್ಕೆ ಮೂಲಧಾತುವಾದ ಕಾಲ- ದೇಶಗಳ ಸ್ವಭಾವ ಪರೀಕ್ಷೆಯ ಜತೆಗೆ ಬರೆದ ಕವಿಯ ಸ್ವಭಾವ ಪರೀಕ್ಷೆಯೂ ಇಲ್ಲಿ ಪರಿಶೀಲನೆಗೆ ಬರುತ್ತದೆ. ಅಂದರೆ ಗ್ರಹಿಕೆ ಎಂಬುದು ಕಾಲಾತೀತವಾಗಿ ದೇಶಾತೀತವಾಗಿ ಸಾಗುತ್ತದೆ. ಜಾಕ್ಸನ್ ಪೊಲಾಕನ ವರ್ಣಚಿತ್ರಗಳನ್ನು ಕಂಡಾಗ ದಿವಾಕರರಿಗೆ ಬಾಲಮುರಳಿಕೃಷ್ಣರ ವಿನಿಕೆಯ ಸ್ವರಗಳ ನಡುವಿನ ಸೂಕ್ಷ್ಮಾತಿಸೂಕ್ಷ್ಮ ಪಲಕುಗಳೂ ಗುಂಫನಗಳೂ ನೆನಪಾಗುತ್ತದೆ. ಇದು ಬಹಳ ದೊಡ್ಡದು. ಬರಹಗಾರ ಮತ್ತಷ್ಟೂ ಇನ್ನಷ್ಟೂ ಸಂವೇದನಾಶೀಲನಾಗುತ್ತಾ ಸಾಗುವಾಗ ತನಗೊದಗುವ ಭಾವವಿಸ್ತರವನ್ನು ಸ್ವೋಪಜ್ಞವಾಗಿ ಇಂಥ ಬರಹಗಳ ಮೂಲಕ ಅಭಿವ್ಯಕ್ತಗೊಳಿಸಿಕೊಳ್ಳುತ್ತಾನೆ. 

ಪುಸ್ತಕದ ಆರಂಭ ಕಲೆ ಮತ್ತು ಸಾಹಿತ್ಯದ ಮೂಲ ಅನ್ವೇಷಣೆಯ ಕುತೂಹಲ ದೃಷ್ಟಿಯಿಂದ  ” ಖಾಲಿ ಕ್ಯಾನ್ವಾಸ್ ತುಂಬೀತು ಹೇಗೆ” ಎಂಬ ಲೇಖನದೊಂದಿಗೆ ತೊಡಗುತ್ತದೆ. ಕಲಾವಿದ ತನ್ನ ಕಲಾಕೃತಿಯು ಹುಟ್ಟುವುದು  ಒಂದು ಬಗೆಯ ಗೊಂದಲ ಅಥವಾ “…ಏನೂ ಹೊಳೆಯದಿದ್ದರೆ ಅವನಿಗೆ ದಿಗ್ಭ್ರಮೆಯಾಗುವುದು ಸಹಜ..” ಎಂಬ ಚಿಂತನೆಯೊಂದಿಗೆ ಆರಂಭಿಸುತ್ತಾರೆ. ಕಲೆ ಅಭಿವ್ಯಕ್ತಿಗೊಳ್ಳುವ ಮೊದಲಿಗೆ ಕಲಾವಿದನ ಮನದಲ್ಲಿ ಮೂಡುವ ಶೂನ್ಯವನ್ನೇ ” ಖಾಲಿ ಕಾನ್ವಾಸ್ ತುಂಬೀತು ಹೇಗೆ?” ಎಂದಿದ್ದಾರೆ ಶ್ರೀ ದಿವಾಕರ್. ” ಕಲೆಯಲ್ಲಿ ಗತಕಾಲವೆನ್ನುವುದು ಮುಗಿದ ಅಧ್ಯಾಯವಲ್ಲ. ಅದು ವರ್ತಮಾನ ಕಾಲಕ್ಕೂ ಪ್ರಸ್ತುತವಾಗುವಂಥದ್ದು.” ಇಲ್ಲಿ ಕಲಾಭಿವ್ಯಕ್ತಿಗೆ ಅದರ ಇತಿಹಾಸದಿಂದ ಸಿಗುವ ಪ್ರೇರಣೆಯನ್ನು ಧ್ವನಿಸಿದ್ದಾರೆ. 

ಸೃಜನಶೀಲ ಮನಸ್ಸು ಒಂದೇ ವಸ್ತುವನ್ನು ಬಗೆಬಗೆಯಾಗಿ ಕಂಡು ಅಭಿವ್ಯಕ್ತಗೊಳಿಸಬಲ್ಲದು ಎಂಬುದನ್ನು,  ಒಂದು ರಾಗದ ಸ್ವರಗಳನ್ನು ಭಿನ್ನನೇಯ್ಗೆಯಿಂದ ಭಾವಾಂಕುರಕ್ಕೆ ಕಾರಣವಾಗಬಲ್ಲ ಹಾಡಿಕೆಯಂತೆ; ಒಂದು ವಸ್ತುವನ್ನು ಬೇರೆ ಬೇರೆ ರೀತಿಯಿಂದ ಶೈಲಿಗಳಲ್ಲಿ ಕಟ್ಟಿಕೊಡುವ ಪ್ರೆಂಚ್ ಲೇಖಕ ರೇಮಂಡ್ ಕ್ವೆನೋನ ” ಎಕ್ಸರ್ಸೈಸಸ್ ಇನ್ ದ ಸ್ಟೈಲ್” ಎಂಬ ಕಾದಂಬರಿಯ ಬಗ್ಗೆ ” ಒಂದು ಕತೆಯ ತೊಂಬತ್ತೊಂಬತ್ತು ಅವತಾರಗಳು” ಬರೆಹದಲ್ಲಿ ಹೇಳುತ್ತಾರೆ. 

“ನಗರಗಳ ಮರಗಳು” ನಾವೆಂದೂ ಸೂಕ್ಷ್ಮವಾಗಿ ಯೋಚಿಸದ ನಗರದ ಮರಗಳ ಕುರಿತಾದ ಹೃದ್ಯ ಲೇಖನ. ಮರಗಳ ಅಂತರ್ಯವನ್ನು ಹೊಕ್ಕು ಬರೆದ ಮಾನವೀಯ ಅಂತಃಕರಣವುಳ್ಳ ಪ್ರಬಂಧ.ಇಲ್ಲೊಂದು ಸಾಲು: ” ಇನ್ನು ಬೆಂಗಳೂರಿನಂಥ ನಗರದಲ್ಲಿ ಮರವೊಂದು ಹಸಿರಾಗಿರುವುದೇನೂ ಸುಲಭವಲ್ಲ. ಯಾಕೆಂದರೆ ಮರದ ಎಲೆಯೆಲೆಯೂ ಬೀದಿಯ ದೂಳಿನಿಂದ ತುಂಬಿಕೊಂಡು ಕೆಂಪುಬಣ್ಣಕ್ಕೆ ತಿರುಗುವುದಲ್ಲದೆ ಎಲೆಗಳ ಕೂಪಗಳನ್ನೂ ಮುಚ್ಚಿಹಾಕುತ್ತದೆ ಸಾಲದ್ದಕ್ಕೆ ಮೈತುಂಬಾ ಇರುವೆಗಳ ಸರಸರ ಪರಾವಲಂಬಿ ಕೀಟಗಳ ಕಾಟ…..” ಇದು ವಿಶಿಷ್ಟವಾದ ಅನುಭವಕ್ಕೆ ಕಾರಣವಾಗುವ ಬರಹ.

ಸಂಗೀತದ ಯಾವುದೇ ರಾಗದ ಸ್ವರಗಳು ಕೇಳುಗನ ಮನದಲ್ಲಿ ಭಾವತರಂಗಗಳನ್ನು ( ಮನದ ಬಣ್ಣ) ಎಬ್ಬಿಸುತ್ತವಷ್ಟೆ. ಇದು ಅಮೂರ್ತ. ವರ್ಣಚಿತ್ರಗಳು ಮೂರ್ತವಾದ ವರ್ಣರೇಖೆಗಳಿಂದ ಅನೂಹ್ಯವಾದ ರೀತಿಯಲ್ಲಿ ಭಾವತಂತುವನ್ನು ಮೀಟುತ್ತದೆ. ಇವೆರಡರ ಮೂಲೋದ್ದೇಶ ಒಂದೇ. ರಸಿಕನ ಭಾವಸ್ಪಂದನೆಗೆ ಎಡೆಯೀಯುವುದು. ಅದರಲ್ಲೂ ಸ್ವೋಪಜ್ಞ ಸಂಗೀತಜ್ಞ ಮತ್ತು ಚಿತ್ರಕಲಾವಿದರ ರಾಗದ ಸ್ವರಗತಿ ಮತ್ತು ವರ್ಣರೇಖಾಗತಿ ಉಂಟುಮಾಡುವ ಭಾವಸಂಪನ್ನತೆ ಯಾವ ಪ್ರಮೇಯದಡಿಯೂ ಅಡಕವಾಗುವಂಥದ್ದಲ್ಲ. ಅಂಥ ಗಾಯಕಿಪರಿಣಾಮ ಮತ್ತು ಚಿತ್ರಕಪರಿಣಾಮವನ್ನು ಕುರಿತಾಗಿ ಬರೆಯುತ್ತಾ ಬಾಲಮುರಳಿಕೃಷ್ಣ ಮತ್ತು ಜಾಕ್ಸನ್ ಪೊಲಾಕ್ ಅವರ ” ಆಕ್ಷನ್ ಪೇಂಟಿಂಗ್” ಕುರಿತಾಗಿ ಬೆರಗಾಗುವಂತೆ ” ಬಾಲಮುರಳಿಕೃಷ್ಣ ಮತ್ತು ಜಾಕ್ಸನ್ ಪೊಲಾಕ್” ಪ್ರಬಂಧದಲ್ಲಿ ವಿವರಿಸಿದ್ದಾರೆ. 

ಬರಹಗಾರನ ಚಿತ್ತದಲ್ಲಿ ಹುತ್ತಗಟ್ಟುವ ಅಮೂರ್ತ ಭಾವಗಳಿಗೆ ಕಾರಣವಾದ ಬದುಕಿನ ಸಣ್ಣ ಸಣ್ಣ ಅನುಭವಗಳು ಹೇಗೆ ಆತನಿಗೆ ಪ್ರಭಾವ ಬೀರಿ ಒಂದು ಬರಹರೂಪದ ಅಥವಾ ಚಿತ್ರಕಲಾಕೃತಿಯನ್ನೋ ಉಂಟುಮಾಡುತ್ತದೆಂಬುದನ್ನು “ಸಂಬಂಧಗಳು” ಎಂಬ ಬರಹದಲ್ಲಿ ಧ್ವನಿಸಿದ್ದಾರೆ. ಪತ್ರಿಕೆಯೊಂದರಿಂದ ತೊಡಗಿ ದೇಶಾತೀತವಾಗಿ ಸಾಗುವ ಕವಿಯ ಪ್ರಜ್ಞೆ ಕೇವಲ ಪತ್ರಿಕೆಯ ಹೊರರೂಪವೇ ಆತನನ್ನು ಅತೀತದೆಡೆಗೆ ಚಿಮ್ಮಿಸಿ ಬಿಡಿಬಿಡಿಯಾಗಿ ತನ್ನ ಸುತ್ತಲಿನ‌ ವಸ್ತುವಿನ ಸಂವೇದನೆಗೆ ತನ್ನನ್ನು ತಾನು ತೆರೆದುಕೊಳ್ಳುವಂತೆ ಮಾಡುವ ಈ ಲೇಖದಲ್ಲಿನ ಭಿತ್ತಿಯ “ತಂತು” ವಿಸ್ಮಯಾವಹ.

ಒಟ್ಟು ಮೂವತ್ತಾರು ಬರಹಗಳ ಈ ಹೊತ್ತಗೆ ಓದುಗನ್ನು ವಿಶ್ವವಿಹಾರಿಯನ್ನಾಗಿಸುತ್ತದೆ. ಬಗೆಬಗೆಯ ಜೀವನದರ್ಶನದ ಸೊಗಸನ್ನು ನಮಗೆ ಕಾಣಿಸುತ್ತದೆ. ಹಾಗಾಗಿ ಈ ಬರಹಗಳ ಪ್ರತಿಯೊಂದು ನೆನಪೂ ಅದರದೇ ಆದ ವಾಸನೆ ಅಥವಾ ಋಣ, ಅನುಭವ ದ್ರವ್ಯವನ್ನು ಹೊಂದಿದೆಯೇನೋ ಎಂಬಷ್ಟು ಗಾಢವಾಗಿ ಮೂಡಿಬಂದಿದೆ.

ವಿವೇಕ ಶಾನಭಾಗರು ಪುಸ್ತಕದ ಬೆನ್ನುಡಿಯಲ್ಲಿ ಹೇಳಿದ ಮಾತು ಸತ್ಯವೇ ಸರಿ: ” …ನಾವು ಜಗತ್ತನ್ನು ಎಂದೂ ನೋಡಿರದ ರೀತಿಯಲ್ಲಿ ಕಾಣಿಸುವ ಪ್ರತಿಭೆ ಇಲ್ಲಿಯ ಯಾವ ಲೇಖನವನ್ನು ನೋಡಿದರೂ ಎದ್ದು ಕಾಣುತ್ತದೆ.

ಅಂಕಿತ ಪುಸ್ತಕ ಪ್ರಕಟಿಸಿದ ಈ ಹೊತ್ತಗೆಯ ಬೆಲೆ ರೂಪಾಯಿ ನೂರೈವತ್ತು. ನೂರಾಎಂಬತ್ತನಾಲ್ಕು ಪುಟಗಳು.

ಕೃಷ್ಣಪ್ರಕಾಶ ಉಳಿತ್ತಾಯ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter