ಒಡೆದ ಬಳೆಚೂರಿನ ಒದ್ದಾಟದ ಕೆಂಪು
ಗೆರೆಗಳು ಚಲ್ಲಾಪಿಲ್ಲಿ ಹಾದಿತುಂಬ
ಕಾಲ ಸರಪಳಿಯ ಕಳಚಿದ ಗೆಜ್ಜೆಯ
ಆಕ್ರಂದನ ಊರುಕೇರಿಯ ತುಂಬ
ಕುಪ್ಪುಸದ ಕಿತ್ತ ಗುಂಡಿಗಳ ಗಾಲಿ
ಅಚ್ಚುಗಳ ಹಾಸು ಅಂಗಳದ ತುಂಬ
ಎಗರಿದ ಸೆರಗು ಒರಲಿದ ಶೋಕ
ಗೀತೆಗಳ ಅಪಸ್ವರ ಗಾಳಿತುಂಬ
ಸೆಳ್ಳುಗುರ ದಾಳಿಗೆ ನೀಲಿಗಟ್ಟಿದ
ಕೆನ್ನೆಯ ಛಾಯೆ ಆಗಸದ ತುಂಬ
ಹರಿದ ತುಟಿಪಕಳೆಯಲಿ ಕೈದಾದ
ಬಿಕ್ಕುಗಳು ಕಡಲ ತುಂಬ
ಕಣ್ಣನೀರಿನಲಿ ನೆಂದ ಸಿರಿಮುಡಿಯ
ವಿಲವಿಲ ಒದ್ದಾಟ ಧೂಳಿನ ತುಂಬ
ತೆರೆದ ಬೆತ್ತಲೆಯ ನೋವಿನ ಬಟ್ಟೆ
ಮುಸುಕು ಜಗದ ತುಂಬ
ಕಾಣಲಿಲ್ಲವೆ ಮೊಳಕೆಗೆ ಮಣ್ಣಾದ ಗರ್ಭ
ಉಸಿರಿಗೆ ದಾರಿಯಾದ ಯೋನಿ
ಹಾಲೂಡಿಸಿದ ಮೊಲೆಗಳು
ಗುರಾಣಿಯಾಗಿದ್ದ ತೋಳುಗಳು?
ಬಗೆದು ಮುರಿದೊಡಲ ಯಾತನೆ
ಹಿಮದ ಕಲ್ಲಾಗಿ ಎದೆಯ ಮೇಲೆ
ಹೊಸಕಿದ ಹೂವಿನ ರಕ್ತ ಸಿಡಿಗುಂಡಾಗಿ
ನಾಟಲಿಲ್ಲವೆ ನಿನ್ನ ಆತ್ಮದ ತುಂಬ?
ಎಷ್ಟು ನಿರ್ಭಯಾರೊ
ಎಷ್ಟು ಮನೀಷಾರೊ
ಅಂದಿನಿಂದಿನ ವರೆಗೆ ಲೆಕ್ಕವಿದೆಯೆ?
ಮೋಜು ಮಸ್ತಿ ಕಾಮ ಪಿಪಾಸೆಗೆ
ಧಿಕ್ಕಾರ ನಿನ್ನ ರತಿಗೆ
ಆತ್ಮರತಿಗೆ.
9 thoughts on “ನಿರ್ಭಯಾ ಮೊದಲಲ್ಲ, ಮನೀಷಾ ಕೊನೆಯಲ್ಲ.”
ಅತ್ಯಾಚಾರದ ವಿರುದ್ಧ ಅಕ್ಷರಗಳು ನೋವು ತುಂಬಿ ಹನಿಹನಿಯಾಗಿ ತೊಟ್ಟಿಕ್ಕುತ್ತಿರುವ ಭಾವಪೂರ್ಣ ಕವನ…
ಧನ್ಯವಾದಗಳು ಸರ್
ಪರಿಸ್ಥಿತಿಯ ಭೀಕರತೆಯನ್ನು ಕವಿತೆ ಮರುರೂಪಿಸಿದೆ.
ಮತ್ತೆ ಮತ್ತೆ ಇಂಥ ಘಟನೆ ಗಳು ಜರುಗುತ್ತಲೇ ಇರುವುದು ಶೋಚನೀಯ.
ರೋಗಗ್ರಸ್ತ ಮನಸ್ಸುಗಳಿಗೆ ಯಾವ ಮದ್ದು?
ಬಹಳ ಮನಸಿಗೆ ನಾಟಿದ ವಾಸ್ತವವಾದ ಕವಿತೆ….
ನಿಜ. ಅಸಹಾಯಕತೆಯಿಂದ ಮನಸ್ಸು ಪಾತಾಳಕ್ಕಿಳಿಯುತ್ತದೆ.
ತುಂಬಾ ಅರ್ಥಬರಿತ ಸಾಲುಗಳು ಮನ ಮಿಡಿಯಿತು ಅಭಿನಂದನೆಗಳು ಮೇಡಂ
ವಿಕೃತ ಮನಸ್ಸಿನ ಈ ಅಪರಾಧಿಗಳಿಂದ ಸಾಮಾಜಿಕ ಸ್ವಾಸ್ಥ್ಯವೇ ಹದಗೆಟ್ಟು ಹೋಗಿದೆ.