ರಾಯಗಡ್ ಮಾಣ್ಗಾಂವ್ ನ ಕನ್ನಡ ಕವಯಿತ್ರಿ ಶೋಭಾ ಪ್ರಮೋದ್ ಇನ್ನು ನೆನಪು ಮಾತ್ರ

ಮಹಾರಾಷ್ಟ್ರದ ಕನ್ನಡ ಲೇಖಕಿಯರಲ್ಲಿ ಸದ್ದಿಲ್ಲದೆ ಬರೆಯುತ್ತಾ ಬಂದು, ತನ್ನ ಬರಹಗಳನ್ಬು ಪತ್ರಿಕೆಗಳಿಗೆ ಮುಟ್ಟಿಸಲು ಕೊನೆಯ ತನಕವೂ ಅಂಚೆ ಕಛೇರಿಯನ್ನೇ ಅವಲಂಬಿಸಿದ್ದ, ತನ್ನ ಹನಿಗವಿತೆಗಳ ಮೂಲಕವೇ ಹೆಚ್ಚುಜನರನ್ನು ತಲುಪಿರುವ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಮಾಣ್ಗಾಂವ್ ನ ಕನ್ನಡ ಕವಯತ್ರಿ ಶೋಭಾ ಪ್ರಮೋದ್ ಅವರ ವಾಟ್ಸಪ್ ನಿಂದ ರವಿವಾರದಂದು ಹೀಗೊಂದು ಮೆಸೇಜ್ ಬಂದಿತ್ತು, ಓದಿದರೆ – “ಹಲೋ ಸರ್, ಮೈ ಮದರ್ ಶ್ರೀಮತಿ ಶೋಭಾ ಪ್ರಮೋದ್ ಈಸ್ ಪಾಸ್ಡ್ ಅವೇ ಆನ್ 23ಸೆಪ್ಟೆಂಬರ್”ಎಂದಿತ್ತು.

ಮೆಸೇಜ್ ಮಾಡಿದ್ದು ಶೋಭಾ ಪ್ರಮೋದ್  ಅವರ ಮಗಳು ಪೂಜಾ.ತಕ್ಷಣ ನಂಬಲು ಸಾಧ್ಯವೇ ಆಗಲಿಲ್ಲ.ಮಗಳಿಗೆ ಕಾಲ್ ಮಾಡಿದೆ . “ಹೌದು,ಹೃದಯಾಘಾತದಿಂದ” ಎಂದಳು.

” ನನ್ನೀ ಕನಸುಗಳು…

ಅವ್ಯಕ್ತ ದಿಗಿಲುಗಳು

ಆಗಸದಿ ಹಾರಲಾಗದ

ಎಳೆ ಬಸವ ಹುಳುವಿನ

ಅತೃಪ್ತ ನಿಷ್ಪಲ ಆಸೆಗಳು…..

( ನನ್ನೀ ಕನಸುಗಳು ಕವನದಲ್ಲಿ)

 ಶೋಭಾ ಪ್ರಮೋದ್(54 ವರ್ಷ,ಜನನ 1967 ಆ.15)  ಅವರ ಕವಿತೆಗಳಲ್ಲಿ ಹೆಚ್ಚಿನವು  ನಿರಾಶೆಯನ್ನೇ ಹೇಳುತ್ತಿತ್ತು.ಅವರ ಬರಹಗಳು ನನಗೆ ಎರಡೂವರೆ ದಶಕಗಳಿಂದಲೂ ಪರಿಚಯ.ಅವರು ಹಿಂದೊಮ್ಮೆ ನನ್ನ ಬಗ್ಗೆಯೂ ಕರ್ನಾಟದ ಒಂದು ಪತ್ರಿಕೆಗೆ ಪರಿಚಯಲೇಖನ  ಬರೆದಿದ್ದರು.(ಅದು ಗೊತ್ತಾಗಿ ಮುಂಬಯಿಯ ಪತ್ರಿಕೆಗಳಿಗೂ ಬರೆದಾಗ ನಾನೇ ಹಾಕೋದು ಬೇಡ ಅಂದದ್ದೂ ಇದೆ). 

ಅವರು ಆಗಾಗ ಕಾಲ್ ಮಾಡಿ ಅವರ ಬರಹಗಳ ಕುರಿತಂತೆ ಸಾಹಿತ್ಯದ ಕುರಿತಂತೆ ಹತ್ತಿಪ್ಪತ್ತು ನಿಮಿಷ ,ಕೆಲವೊಮ್ಮೆ ಅರ್ಧಗಂಟೆ ಕಾಲವೂ ಮಾತಾಡುತ್ತಿದ್ದವರು.

ನಾನು ಮತ್ಸ್ಯಗಂಧ ರೈಲಿನಲ್ಲಿ ಕೊರೊನಾ ಕಾಲಕ್ಕಿಂತ ಮೊದಲು ಊರಿಗೆ ಹೋಗುತ್ತಿದ್ದ ಸಂದರ್ಭಗಳಲ್ಲಿ ಅನೇಕ ಬಾರಿ ಅವರಿಗೆ ಮೊದಲೇ ತಿಳಿಸುತ್ತಿದ್ದೆ. ಅವರು ಗಂಡ-ಹೆಂಡತಿ ಆ ದಿನ ಸಂಜೆ 7 ಗಂಟೆ ಸುಮಾರಿಗೆ ಮಾಣ್ಗಾಂವ್  ಸ್ಟೇಷನ್ನಿಗೆ ಬಂದು ನನ್ನ ಭೋಗಿ ಸಂಖ್ಯೆಯ ಎದುರು ನಿಲ್ಲುತ್ತಿದ್ದರು.

ಬರುವಾಗ ಖಾಲಿ ಕೈಯಲ್ಲಿ ಬರುತ್ತಿರಲಿಲ್ಲ, ಒಂದಷ್ಟು ಹಣ್ಣುಹಂಪಲು ತರುತ್ತಿದ್ದರು.ನಾನು ಅವರಿಗೆ ಕೆಲವು ಪುಸ್ತಕಗಳನ್ನು ಅಲ್ಲಿ ನೀಡುತ್ತಿದ್ದೆ.ಮೊದಲೇ ಯಾವ ಪುಸ್ತಕಗಳು ಬೇಕು ಅಂತ ಕೇಳುತ್ತಿದ್ದೆ.

ಇದೇ ಜುಲೈ ತಿಂಗಳಲ್ಲಿ ಊರಿಗೆ ಹೋಗಿದ್ದಾಗ  ಅವರಿಗೆ ಹೇಳಿದ್ದೆ-ಈಗ ಕೊರೊನಾ ಕಾಲ.ರೇಲ್ವೆ ಸ್ಟೇಷನ್ ಗೆ ಸುಮ್ಮನೆ ಬರಬೇಡಿ.ನಿಯಮ ಬದಲಾಗಿದೆ ಎಂದು. ಆದರೂ ನಿಧನರಾಗುವ ಸ್ವಲ್ಪ ದಿನದ ಮೊದಲು ಎಂದಿನಂತೇ ಖುಷಿಯಿಂದ ಫೋನ್ ಮಾಡಿದ್ದರು. ಮಗಳು ಮನೆಗೆ ಬಂದ ನಂತರ ವಾಟ್ಸಪ್ ಅಪರೂಪಕ್ಕೆ ಮಾಡುತ್ತಿದ್ದರು.ಆದರೆ ಎಲ್ಲವನ್ನು ಮಗಳೇ ಮಾಡಿಕೊಡಬೇಕಿತ್ತು. ಕೆಲವು ದಿನಗಳ ಮೊದಲು ಒಂದು ಪತ್ರಿಕೆಯ ಸಂಪಾದಕರು ಯಾಕೋ ಬೈದಾಗ ನನ್ನಲ್ಲಿ ಆ ಮಾತು ಹೇಳುತ್ತಾ ಮಕ್ಕಳಂತೆ ಅತ್ತಿದ್ದರು.ಅವರನ್ನು ಸಮಾಧಾನ ಮಾಡೋದೇ ಸಾಕಾಯ್ತು.ಮಾತಿನ ನಡುವೆ ಅವರ ಇಷ್ಟದ ಕತೆಗಾರ ವಸುದೇಂದ್ರರ ಸುದ್ದಿಯಂತೂ ಇದ್ದೇ ಇರುತ್ತಿತ್ತು.ಕೊರೊನಾ ಕಾಲದಲ್ಲಿ ಕಾಲ್ ಮಾಡಿದಾಗ ಬಹಳಷ್ಟು ಜಾಗ್ರತೆಗಳನ್ನು ವಹಿಸಲು ಹೇಳುತ್ತಲೇ ಇದ್ದರು. ಯಾವ ಮಾತ್ರೆ ತಿನ್ನಬೇಕು ,ನಮಗೆ ಪಂಚಾಯತ್ ಈ ಮಾತ್ರೆ ಎಲ್ಲರಿಗೂ ನೀಡಿದ್ದರು….ಹೀಗೆ. 

ಶೋಭಾ ಪ್ರಮೋದ್ ಅವರು ರಾಘವೇಂದ್ರ ಸ್ವಾಮಿಗಳ ಅಪ್ಪಟ ಭಕ್ತರು. ಮರಾಠಿಯಲ್ಲಿ ರಾಘವೇಂದ್ರ ಸ್ವಾಮಿಗಳ ಕುರಿತಂತೆ ಕಿರುಪುಸ್ತಕವನ್ನು ಬರೆದಿದ್ದರು. ಶೋಭಾ  ಅವರು ಮುಟ್ಟದ ಪತ್ರಿಕೆಗಳೇ ಇಲ್ಲವೇನೋ. ಕೊನೆಯವರೆಗೂ ಕವನ,ಹನಿ, ಹಾಸ್ಯ ಬರಹಗಳು, ಕಥೆ …ಇತ್ಯಾದಿಗಳನ್ನು ಕೈಯಲ್ಲೇ ಬರೆದು ಅಂಚೆಗೆ ಹಾಕಿ ಬರುತ್ತಿದ್ದರು. ಕನ್ನಡದ ಹೆಚ್ಚಿನ ಪತ್ರಿಕೆಗಳಲ್ಲಿ ಅವರ ಕಿರುಗವನವೋ ಹಾಸ್ಯ ಬರಹವೋ ಇದ್ದೇ ಇರುತ್ತಿತ್ತು. 

ಕರ್ನಾಟಕ ಸಂಘ ಮುಂಬಯಿ ಇದರ ಮುಖವಾಣಿ ಸ್ನೇಹ ಸಂಬಂಧಕ್ಕೆ ವಾರವಾರವೂ ಒಂದಷ್ಟು ಅವರ ಹನಿಗವಿತೆಗಳ ಗುಚ್ಛವೋ,ಹಾಸ್ಯವೋ ಅಂಚೆಕವರಲ್ಲಿ ಬರುತ್ತಿತ್ತು.ಒಂದು ಸಲ ಹೇಳಿದ್ದೆ- “ನಮ್ಮದು ಮಾಸಿಕ. ನೀವು ಇಷ್ಟು ಸಂಖ್ಯೆಯಲ್ಲಿ ಬರಹ ಕಳಿಸಿದರೆ ಯಾವಾಗ ಹಾಕೋದು?”.

ಶೋಭಾ ಪ್ರಮೋದ್ ಅವರ ‘ಕಾಡಿನಲ್ಲಿ ಕುಹೂ ಕುಹೂ’ ಚೊಚ್ಚಲ ಕವನ ಸಂಕಲನವನ್ನು ಬಿ.ಎಸ್ ಕುರ್ಕಾಲ್ ಅವರ ಸಂಪಾದಕತ್ವದಲ್ಲಿ 2016 ರಲ್ಲಿ ಅಭಿಜಿತ್ ಪ್ರಕಾಶನ ಪ್ರಕಟಿಸಿತ್ತು .ಬಿ ಎಸ್ ಕುರ್ಕಾಲ್ ಗೌರವಗ್ರಂಥ ನಿಧಿಯಿಂದ ಇದರ ವೆಚ್ಚವನ್ನು ನಿರ್ವಹಿಸಲಾಗಿತ್ತು. ಈ ಸಂದರ್ಭದಲ್ಲಿ ಕೂಡ ಪುಸ್ತಕ ಬಿಡುಗಡೆಗೆ ಶೋಭಾ ಪ್ರಮೋದ್ ಬಂದಿರಲಿಲ್ಲ. ಅನಂತರ ಒಂದು ದಿನ ಸಮಿತಿಯ ಕೆಲವರ ಜೊತೆ ಮಾಣ್ಗಾಂವ್ ಗೆ ಮುಂಬಯಿಯಿಂದ ಕಾರಲ್ಲಿ ಹೋಗಿ ಶೋಭಾ ಪ್ರಮೋದ್ ಅವರನ್ನು ಅವರ ಮನೆಯಲ್ಲಿಯೇ ಕುರ್ಕಾಲ್ ಬಳಗ ಸನ್ಮಾನಿಸಿದ್ದರು ಹಾಗೂ 25 ಸಾವಿರ ರೂಪಾಯಿಯನ್ನು ನೀಡಿ ಶುಭ ಹಾರೈಸಿ ಬಂದಿದ್ದರು.

ಶೋಭಾ ಪ್ರಮೋದ್ ಅವರನ್ನು ಮುಂಬಯಿಯ  ಕವಿಗೋಷ್ಠಿಗೆ ಎಷ್ಟೇ ಕರೆದರೂ ಬರಲೇ ಇಲ್ಲ. ಕಾರಣ ಅವರಿಗೊಬ್ಬ ಮಂದಬುದ್ಧಿಯ ಮಗನಿದ್ದುದು. ಹಾಗಾಗಿ ಅವನ ಆರೈಕೆಯಲ್ಲಿ ಅವರು ಹೊರಪ್ರಪಂಚಕ್ಕೆ ಬರುತ್ತಿದ್ದುದೇ ಬಹಳ ಅಪರೂಪ. ಒಬ್ಬಳು ಮಗಳು ಪೂಜಾ ಕಂಪ್ಯೂಟರ್ ಇಂಜಿನಿಯರ್. ಪುಣೆಯಲ್ಲಿ ಕೆಲಸಕ್ಕಿದ್ದವಳು ಇತ್ತೀಚೆಗೆ ಲಾಕ್ಡೌನ್ ನಂತರ ವರ್ಕ್ ಫ್ರಮ್ ಹೋಮ್ ಎಂದು ಮಾಣ್ಗಾಂವ್ ನ ಅವರ ಮನೆಯಲ್ಲೇ ಇದ್ದಾಳೆ .

ಶೋಭಾ  ಅವರ ಯಾವುದೇ ಹಾಸ್ಯ ಬರಹ, ಕಥೆ,ಹನಿಗಳ ಗುಚ್ಛ… ಆಗಿರಲಿ ಅದು ಹಸ್ತಪ್ರತಿಯ ಮೂರು ಪುಟ ಅಥವಾ ನಾಲ್ಕು ಪುಟದ ಒಳಗೆ ಮಾತ್ರ ಇರುತ್ತಿತ್ತು.ತಮ್ಮ ಪತಿ ಮಗ ಸಂಬಂಧಿಕರು ನೆರೆಮನೆಯವರು ಇವರಷ್ಟೇ ಅವರ ಬರಹಗಳಲ್ಲಿ ಸುತ್ತುಬರುತ್ತಿದ್ದರು. ತಮ್ಮ ಬಾಲ್ಯದ ದಿನಗಳ ಬಹಳಷ್ಟು ಘಟನೆಗಳನ್ನೂ ಅವರು ಬರೆದಿದ್ದಾರೆ .ಶೋಭಾ ತಮ್ಮ ಕವನ ಸಂಕಲನದಲ್ಲಿ ಹೀಗೆ ಹೇಳಿಕೊಂಡಿದ್ದರು- “ನಾನು ನನ್ನ ಹದಿನೆಂಟನೆಯ ವಯಸ್ಸಿನಲ್ಲಿ ಕವಿತೆಗಳನ್ನು ಬರೆಯಲು ಆರಂಭಿಸಿದೆ. ಕಾಲೇಜಿನಲ್ಲಿ ಪ್ರೊಫೆಸರ್ ಜಿ ಟಿ ಭಟ್ಟ ಹಾಸಣಗಿ ಎಂಬ ಪ್ರಾಧ್ಯಾಪಕರಿದ್ದರು. ಅವರು ನನ್ನ ಸಾಹಿತ್ಯಾಸಕ್ತಿಯನ್ನು ಮೆಚ್ಚಿಕೊಂಡು ತುಂಬಾ ಪ್ರೋತ್ಸಾಹಿಸಿದ್ದರು. ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಪ್ರೊಫೆಸರ್ ಎಸ್ ಆರ್ ನಾರಾಯಣರಾವ್ ಅವರು, ನನ್ನ ಬಿಎಡ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಡಾ. ಕೆ ಎನ್ ಬೈಲಕೇರಿ ಅವರೂ ನನ್ನ ಸಾಹಿತ್ಯಾಭಿರುಚಿಗೆ ಪ್ರೋತ್ಸಾಹ ನೀಡಿದವರು. ವಿವಾಹವಾಗಿ ಮಹಾರಾಷ್ಟ್ರಕ್ಕೆ ಬಂದನಂತರ ಹೊಸದಿಗಂತ ಪತ್ರಿಕೆಯ ಸಂಪಾದಕ ದು ಗು ಲಕ್ಷ್ಮಣ ,ಮಲ್ಲಿಗೆ ಮಾಸಿಕದ ಸಂಪಾದಕ ಎನ್ ಎಸ್ ಶ್ರೀಧರಮೂರ್ತಿ, ಮುಂಬೈ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಇಂತಹ ಮಹನೀಯರ ಪ್ರೋತ್ಸಾಹವನ್ನು ನಾನೆಂದಿಗೂ ಮರೆಯಲಾರೆ. ನನ್ನ ಚೊಚ್ಚಲ ಕೃತಿ ಬೆಳಕಿಗೆ ಬರಲು ಬಿಎಸ್ ಕುರ್ಕಾಲ್ ಅವರೇ ಕಾರಣ ಆಗಿದ್ದಾರೆ”ಎಂದು.

ಶೋಭಾ ಪ್ರಮೋದ್ ಅವರು ಕೆಲವು ಸಮಯ ಮರಾಠಿ ಮಾಧ್ಯಮದಲ್ಲಿ ಶಿಕ್ಷಕಿಯಾಗಿಯೂ  ದುಡಿದಿದ್ದರು .ಆದರೆ ತನ್ನನ್ನು ಪರ್ಮನೆಂಟ್ ಮಾಡಲು ಆಡಳಿತ ಮಂಡಳಿಯವರು ಕೆಲವು ಲಕ್ಷ ರೂಪಾಯಿ ಬೇಡಿಕೆ ಇರಿಸಿದ ಘಟನೆಯನ್ನು ಮುಂದಿಟ್ಟು ರಾಜೀನಾಮೆ ನೀಡಿದ್ದರು .

ಶೋಭಾ ಅವರು ತಿಂಗಳಿಗೆ ಬಹಳಷ್ಟು ಹಣವನ್ನು ಅಂಚೆಗೆ ಖರ್ಚು ಮಾಡುತ್ತಿದ್ದರು. ಅವರ ಪರಿಸರದಲ್ಲಿ ಕನ್ನಡ ಪತ್ರಿಕೆಗಳು ಸಿಗುತ್ತಿರಲಿಲ್ಲ.ಅಂಚೆಯಲ್ಲಿ ಬರುತ್ತಿದ್ದ ಕನ್ನಡ ಪತ್ರಿಕೆಗಳನ್ನು ಬಹಳ ಪ್ರೀತಿಯಿಂದ ಓದಿ ಪ್ರತಿಕ್ರಿಯಿಸುತ್ತಿದ್ದರು. ಯಾರೇ ಪುಸ್ತಕ ಕಳುಹಿಸಿದರೂ ಅದಕ್ಕೆ ಕಿರು ಅನಿಸಿಕೆ ಪ್ರೀತಿಯಿಂದ ಬರೆಯುತ್ತಿದ್ದರು .

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ದವರಾದ ಶೋಭಾ ಪ್ರಮೋದ್ ಅವರ ಬದುಕಿನಲ್ಲಿ ನೋವೇ ಜಾಸ್ತಿ .ಮದುವೆಯಾಗಿ ರಾಯಗಡ್ ಗೆ ಬಂದವರಿಗೆ ಮರಾಠಿ ಪರಿಸರ. ಕೊಂಕಣಿ ಗೊತ್ತಿದ್ದುದರಿಂದ ಮರಾಠಿ ಕಷ್ಟವಾಗಲಿಲ್ಲ. ಮರಾಠಿ ಉಚ್ಚಾರಕ್ಕೆ ಹಾಸ್ಯ ಮಾಡುತ್ತಿದ್ದರಂತೆ. ಅದಕ್ಕೆ ಚಾಲೆಂಜ್ ಆಗಿ ಇವರು ಮುಂದೊಂದು ದಿನ ಮರಾಠಿ ಶಿಕ್ಷಕಿಯೂ ಆದದ್ದು ಉತ್ತಮ ಉದಾಹರಣೆ. ಈತನಕ ಇವರ ಬರವಣಿಗೆಯಲ್ಲಿ ಕಿರುಗವನ ಗಳಿಗೆ ಸಿಂಹಪಾಲು ಇದ್ದು ಸುಮಾರು 5000ಕ್ಕೂ ಹೆಚ್ಚು ಬರಹಗಳನ್ನು ಶೋಭಾ ಪ್ರಮೋದ್ ಬರೆದಿದ್ದಾರೆ. ಪ್ರಾಫಿಟ್ ಪ್ಲಸ್ ಪತ್ರಿಕೆಗೆ ಸುಧಾ ಶರ್ಮಾ ಚವತ್ತಿ ಅವರಿಗೆ ನೀಡಿದ ಸಂದರ್ಶನದಲ್ಲಿ ಕವಿತೆ ನನ್ನನ್ನು ಬದುಕಿಸುತ್ತದೆ ಎಂದು ಹೇಳಿದ್ದರು.

ಇವರ ತಂದೆ ತಾಯಿಗೆ ಇವರು ಮೂವರು ಹೆಣ್ಣುಮಕ್ಕಳು. ಇವರೇ ದೊಡ್ಡವರು.ಶೋಭಾ ಪ್ರಮೋದ್ ಬಿ ಎ ಯಲ್ಲಿ ಸಂಸ್ಕೃತ ಮೇಜರ್ ಆಗಿ ತೆಗೆದುಕೊಂಡಿದ್ದರು. ಕಾಲೇಜು ಬದುಕಿನಲ್ಲೇ ಅವರು ಸಾಹಿತ್ಯಾಸಕ್ತರಾಗಿದ್ದರು. ಅವರಿಗೆ ವಸುಧೇಂದ್ರರ ಕಾದಂಬರಿಗಳೆಂದರೆ ಬಹಳ ಇಷ್ಟ. 

ಕುಮಟಾದಲ್ಲಿ ಅಜ್ಜ-ಅಜ್ಜಿಯ ಮನೆಯಲ್ಲಿದ್ದು ಕಾಲೇಜಿಗೆ ಹೋದವರು. ಯಾಕೆಂದರೆ ಅವರ ಅಪ್ಪ ಅಮ್ಮ ಪುಣೆಯಲ್ಲಿ ಇದ್ದರು. ನಂತರ ಅವರು ಪುಣೆಗೆ ಬಂದರು. ಅಲ್ಲೇ ವಿವಾಹದ ಪ್ರಯತ್ನ, ವರನ ಹುಡುಕಾಟ ಆರಂಭವಾಯಿತು. ರಾಯಗಡ್ ನ ಮರಾಠಿ ಹುಡುಗ ಪ್ರಮೋದ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು . ಮೊದಲ ಹೆಣ್ಣು ಮಗಳು ಪೂಜಾ. ಎರಡನೇ ಮಗು ಗಂಡು. ಆದರೆ ಹೊಟ್ಟೆಯಲ್ಲಿರುವಾಗಲೇ ತೊಂದರೆ. ಸಹಜ ಹೆರಿಗೆ ಆಗಿರಲಿಲ್ಲ .ಮಗು ಹೊರಗೆ ಬರುವಾಗ ಪ್ರಜ್ಞಾಹೀನ ಸ್ಥಿತಿ. ಮಗುವಿಗೆ ನಂತರ ಮೆದುಳಿನ ಬೆಳವಣಿಗೆ ಆಗಲೇ ಇಲ್ಲ. ಈಗ ಆತನಿಗೆ 25 ವರ್ಷ ದಾಟಿದೆ.

ಅವರು ತಮ್ಮ ಬದುಕಿನ ದೊಡ್ಡ ದುರಂತವನ್ನು ಹೀಗೆ ನೆನಪಿಸಿದ್ದರು- 2005 ರಲ್ಲಿ ಮಹಾರಾಷ್ಟ್ರದಲ್ಲಿ ಮಹಾಮಳೆ ಬಂದಿತ್ತು. ಇವರ ಇಡೀ ಕುಟುಂಬ ಆ ದಿನಗಳಲ್ಲಿ ತತ್ತರಿಸಿತ್ತು. ಇವರ ಗಂಡ ಪ್ರಮೋದ್ ಅವರು ಹೋಲ್ಸೇಲ್ ವಿತರಕರು ಆಗಿದ್ದರು. ಗೋಡಾನ್ ನಲ್ಲಿ ಅವರ ಎಲ್ಲ ಸಂಗ್ರಹ ಇದ್ದುದು ನೀರು ಪಾಲಾಯ್ತು.ಅದರಲ್ಲಿ ಬಿಸ್ಕೆಟ್ ಪ್ಯಾಕೆಟ್ ಗಳು ಇತ್ಯಾದಿಗಳೆಲ್ಲಾ ಮಹಾಮಳೆಗೆ ಕೊಚ್ಚಿ ಹೋಯಿತು .ಆ ಕಾಲಕ್ಕೆ ಏಳು ಲಕ್ಷ ರೂಪಾಯಿ ನಷ್ಟವಾಗಿತ್ತು .ಬ್ಯಾಂಕಿನ ಸಾಲ ಬೇರೆ ಇತ್ತು. ಸಾಲ ವಸೂಲಾತಿಗೆ ಬ್ಯಾಂಕಿನವರು ಕೊಟ್ಟ ಕಷ್ಟಗಳೇ ಒಂದು ಕಾದಂಬರಿ ಆಗಬಹುದು ಎಂದಿದ್ದರು ಶೋಭಾ. ಒಂದೆಡೆ ಮಗನ ಆರೋಗ್ಯ ಸಮಸ್ಯೆ ಮತ್ತೊಂದೆಡೆ ಉದ್ಯೋಗದ ನಷ್ಟ …..ಆದಿನಗಳಲ್ಲಿ ಶೋಭಾ ಪ್ರಮೋದ್ ಡಿಪ್ರೆಶನ್ನಿಗೆ ಒಳಗಾಗಿದ್ದರು .ಆದರೆ ಮಗಳು ಪೂಜಾ ಇಂಜಿನಿಯರಿಂಗ್ ಓದು ಮುಗಿಸಿ ಎಂಬಿಎ ಯಲ್ಲಿ ಚಿನ್ನದ ಪದಕ ಪಡೆದ ಸಂದರ್ಭದಲ್ಲಿ ಮತ್ತೆ ಲವಲವಿಕೆ ಪಡೆದಿದ್ದರು.

ಅವರ ಒಂದು ‘ಸ್ವಗತ’ ಅನ್ನುವ ಕವಿತೆಯಲ್ಲಿ-

” ನನ್ನ ಕವಿತೆಯ

ಒಂದೊಂದು ಅಕ್ಷರಕೂ

ಅದರದೇ ಆದ ಕಥೆಯಿದೆ

ಹೇಳಲಾಗದ ವ್ಯಥೆಯಿದೆ…..”

ಎಂದದ್ದು ಅವರ ಬದುಕೇ ಆಗಿದೆ

ಶೋಭಾ  ಅವರು ಇನ್ನು ನೆನಪು ಮಾತ್ರ.

—————-

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

9 thoughts on “ರಾಯಗಡ್ ಮಾಣ್ಗಾಂವ್ ನ ಕನ್ನಡ ಕವಯಿತ್ರಿ ಶೋಭಾ ಪ್ರಮೋದ್ ಇನ್ನು ನೆನಪು ಮಾತ್ರ”

    1. ಡಾ || ಪ್ರೀತಿ ಭಂಡಾರಕರ.

      She was my college mate….. It’s very very sad news….. Che Che!!….. Om Shanti 🙏🙏

    2. ನರೇಶ್ ಕುಮಾರ್ ರೈ

      ಒಬ್ಬ ಸಜ್ಜನ ಕನ್ನಡ ಬರಹ ಗರ್ತಿ ಯನ್ನೂ ಕಳೆದು ಕೊಂಡಿದ್ದೇವೆ. ಅವರ ದಿವ್ಯ ಚೇತನಕ್ಕೆ ಚಿರಶಾಂತಿ ಸಿಗಲಿ.

  1. ಧರ್ಮಾನಂದ ಶಿರ್ವ

    ಕನ್ನಡ ಕವಯಿತ್ರಿ ಶೋಭಾ ಪ್ರಮೋದ್ ಅವರ ಬದುಕಿನ ಸಮಗ್ರ ಚಿತ್ರಣದ ಹೂರಣವಾಗಿ ಬಂದ ಈ ನುಡಿನಮನ ನಿಜಕ್ಕೂ ಕಂಬನಿ ಮಿಡಿಯುವಂತೆ ಮಾಡಿದೆ.
    ಅಗಲಿದ ಆತ್ಮಕ್ಕೆ ಸದ್ಗತಿ ದೊರೆಯಲಿ.

    ಶ್ರೀನಿವಾಸ ಜೋಕಟ್ಟೆಯವರಿಗೆ ಅಭಿನಂದನೆಗಳು.

  2. Managala+Prakash+Shetty

    ಓಂ ಶಾಂತಿ
    ಸರಳ ಹೃದಯದ ಕವಯತ್ರಿಯನ್ನು ಪರಿಚಯಿಸಿದುದು ಖುಷಿ ಕೊಟ್ಟರೆ ಇನ್ನಿಲ್ಲವೆಂದು ತಿಳಿದು ಖೇದವೆನಿಸಿದೆ.

  3. ಬಹಳ ಬೇಸರದ ಸಂಗತಿ….ಅವರ ಕವಿತೆಗಳು ಪತ್ರಿಕೆಗಳಿಂದ ಚಿರಪರಿಚಿತ…. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ 🙏🙏

  4. ಲೇಖನ ಚೆನ್ನಾಗಿದೆ ಶೋಭರ ಆತ್ಮಕ್ಕೆ ಶಾಂತಿ ಸಿಗಲಿ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter