ಕರೆಂಟ್ ಹೋಗಿತ್ತು.ಅಮಾವಾಸ್ಯೆಯ ಕಡುಗತ್ತಲಿನಲ್ಲಿ ಮಿನುಗುವ ನಕ್ಷತ್ರಗಳ ಚೆಲುವನ್ನು ಆಸ್ವಾದಿಸುತ್ತಾ ತಾರಸಿಯಲ್ಲಿ ಕುಳಿತಿದ್ದೆವು.ತಣ್ಣಗೆ ಕೊರೆಯುತ್ತಿದ್ದ ಗಾಳಿ ಹಿತವೆನಿಸುತ್ತಿತ್ತು ಅಲ್ಲೊಲ್ಲೋ ಕೂಗುತ್ತಿದ್ದ ನಾಯಿಯ ಕೂಗೊಂದನ್ನು ಹೊರತುಪಡಿಸಿ ನಿಶ್ಯಬ್ದ ಹಾಸಿ ಹೊಡೆಯುವಷ್ಟಿತ್ತು. ‘ಅಗಣಿತ ತಾರಾಗಣಗಳ ನಡುವೆ ನಿನ್ನನೆ ಮೆಚ್ಚಿದೆ ನಾನು’..ಎಂದು ಹಾಡು ಗುನುಗಿ ಪಕ್ಕದಲ್ಲಿ ಕುಳಿತಿದ್ದ ರವಿಯ ಕೈಹಿಡಿದು ಮುದ್ದಿಸಿದೆ.
‘ಮದುವೆಯಾಗಿ ಇಪ್ಪತ್ತು ವರ್ಷಗಳ ನಂತರವೂ ಇಷ್ಟು ರೊಮ್ಯಾಂಟಿಕ್ ಆಗಿ ನಡೆದುಕೊಳ್ಳುವ ಹೆಂಡತಿ ಇರುವುದೂ ಕೂಡಾ ನನ್ನ ಪುಣ್ಯವೇ’ ಎಂದು ಹೇಳುತ್ತಾ ರವಿತನ್ನ ಉದ್ದ ಮೂಗಿನ ತುದಿಯಿಂದ ನನ್ನ ಕೆನ್ನೆಗೊಮ್ಮೆ ಉಜ್ಜಿ ಜೋರಾಗಿ ನಕ್ಕ.ಅಷ್ಟರಲ್ಲಿ ಮೊಬೈಲ್ ರಿಂಗಣಿಸಿತು.ರವಿ ರಸಭಂಗವಾದಂತೆ ‘ನೋಡು ನಿನ್ನ ತವರು ಮನೆಯವರ್ಯಾರೋ ಪೋನ್ ಮಾಡಿರಬೇಕು ಎಂದ. ಇನ್ನರ್ಧ ಗಂಟೆ ನಿನಗೆ ನನ್ನ ಅಗತ್ಯವಿಲ್ಲ’ ಎಂದ ಅವನ ಕಮೆಂಟ್ ಕಿವಿಗೆ ಬಿದ್ದರೂ ಬೀಳದಂತೆ ಕಾಲ್ ರಿಸೀವ್ ಮಾಡಿದೆ.
ಅಕ್ಕನ ಮಗ ಸುಮಂತನ ದ್ವನಿ…’ಚಿಕ್ಕಮ್ಮಾ ಬೆಂಗಳೂರಿನಲ್ಲಿಯೇ ಇದ್ದೀರಾ?ಮದುವೆ ನಂತರ ನಿನ್ನ ಹೆಂಡತಿಯನ್ನು ಕರೆದುಕೊಂಡು ಆದಷ್ಟು ಬೇಗ ಬೆಂಗಳೂರಿಗೆ ಬನ್ನಿ ಎಂದು ಹೇಳಿದ್ದೆಯಲ್ಲಾ. ನಾಳೆ ರಾತ್ರಿ ಹೊರಟು ಬರೋಣ ಎಂದು ಪ್ಲಾನ್ ಮಾಡಿದ್ದೇವೆ’..ಒಂದೇ ಉಸಿರಿಗೆ ಎಲ್ಲ ಕೇಳಿ ಮುಗಿಸಿದ.
‘ಬೆಂಗಳೂರಿನಲ್ಲಿಯೇ ಇರುತ್ತೇವೆ. ಬನ್ನಿ ಬನ್ನಿ’ ಎಂದು ಸಂಭ್ರಮದಿಂದ ಆಹ್ವಾನವಿತ್ತೆ. ‘ಮತ್ತೆ ನೀವು ಹನಿಮೂನಿಗೆ ಹೋಗುತ್ತೀರಿ ಎಂದಿದ್ರಲ್ಲಾ ಆ ಪ್ಲಾನ್ ಏನಾಯಿತು?ಶಿಮ್ಲಾದವರು ಬಂದು ನಮ್ಮೂರಿಗೆ ಬರುವವರನ್ನು ನಿಮ್ಮೂರಿಗೆ ಕರೆಸಿಕೊಂಡಿರಲ್ಲಾ ಅಂತ ಜಗಳ ಮಾಡುತ್ತಾರೇನೋ’ ಎಂದು ಕೀಟಲೆ ದನಿಯಲ್ಲಿ ಕೇಳಿದೆ.
‘ಇಲ್ಲ ಅಂತದ್ದೇನೂ ಆಗಲ್ಲ ಚಿಕ್ಕಮ್ಮಾ, ಅಲ್ಲಿಗೆ ಹೋಗುವುದಕ್ಕೆ ಸಧ್ಯಕ್ಕೆ ಆಗಲ್ಲ’ ಎಂದು ಹೇಳಿದ ಸುಮಂತನ ದ್ವನಿಯಲ್ಲಿ ಯಾಕೋ ಗಾಂಭೀರ್ಯ ತುಂಬಿತ್ತು.
‘ಭಲೇ ತರ್ಲೆ ಹುಡುಗನಿಗೆ ಮದುವೆ ಆದ ಮೇಲೆ ಸೀರಿಯಸ್ನೆಸ್ಸ ಬಂದಿದೆ’ ಎಂದು ಮನದಲ್ಲೆಂದುಕೊಳ್ಳುತ್ತಾ ರೇಲ್ವೆಸ್ಟೇಷನ್ನಿಗೆ ನಾಡಿದ್ದು ಬೆಳಿಗ್ಗೆ ನಿನ್ನ ಚಿಕ್ಕಪ್ಪ ಕಾರು ತೆಗೆದುಕೊಂಡು ಬರುತ್ತಾರೆ.ಬನ್ನಿ’ ಎಂದು ಫೋನಿಟ್ಟೆ.
‘ನೋಡ್ರೀ ಐದೇ ಐದು ನಿಮಿಷ ಸುಮಂತನೊಂದಿಗೆ ಮಾತಾಡಿದ್ದು ಸುಮ್ಮಸುಮ್ನೆ ನನಗೆ ಕಮೆಂಟ್ ಹಾಕ್ತಿರಿ. ನೀವು ನಿಮ್ಮ ಗೆಳೆಯರ ಜೊತೆ ಒಂದೊಂದು ಸೆಷನ್ ಕ್ಲಾಸ್ ತೆಗೆದುಕೊಂಡವರಂತೆ ಹರಟೆ ಹೊಡೆಯುತ್ತಿರಿ’..ಎನ್ನುತ್ತ ರವಿಯ ಕ್ರಾಪ್ ಕೆದರಿ, ವಾದ ಮುಂದುವರಿಸದಂತೆ ಅವನÀ ತುಟಿಗಳ ಮೇಲೆ ಬೆರಳಿಟ್ಟು‘ಹೊಸಾ ಜೋಡಿ ಬರ್ತಾರಂತ್ರಿ ನಾಡಿದ್ದು’ ಎಂದೆ.
ಇಂಜನಿಯರಿಂಗ್ ಓದುವಾಗ ನಮ್ಮೊಂದಿಗೆ ನಾಲ್ಕು ವರ್ಷವಿದ್ದ ಸುಮಂತನೆಂದರೆ ಇವರಿಗೂ ಇಷ್ಟವೇ. ‘ಓ ಹೌದಾ ನಾಳೆ ಅವನಿಗಿಷ್ಟವಾದ ಮೈಸೂರುಪಾಕು ತರುತ್ತೇನೆ É. ಆಫೀಸಿಂದ ಬರುವಾಗ ಫೋನ್ ಮಾಡಿ ನೆನಪಿಸು ಮತ್ತೆ’ ಎಂದ ಸಡಗರದಿಂದ.
‘ಮೊದಲೇ ಇವರು ಬರುವುದು ಗೊತ್ತಿದ್ದರೆ ನಮ್ಮ ಸೌಮ್ಯಾನೂ ಬರುತ್ತಿದ್ದಳೇನೋ..ನೋಡೋಣ ಅವರು ಬರುವುದು ಗುರುವಾರ.ರವಿವಾರದವರೆಗಿದ್ದರೆ ಬಾ ಎಂದು ಫೋನ್ ಮಾಡೋಣ. ಮಂಗಳೂರೆಷ್ಟು ದೂರವಿದೆ.ಒಮ್ಮೆ ಬಂದು ಹೋಗುತ್ತಾಳೆ’ ಎನ್ನತ್ತಾಜರ್ನಲಿಸಂ ಓದುತ್ತಿರುವ ಮಗಳನ್ನು ನೆನಪಿಸಿಕೊಂಡರು.ತಡರಾತ್ರಿಯವರೆಗೂ ಸುಮಂತ, ಸೌಮ್ಯಾ ಇಬ್ಬರ ಹುಸಿ ಜಗಳ, ಕಾದಾಟವನ್ನು ನೆನಪಿಸಿಕೊಂಡೆವು.
****
‘ರೀ ಏಳ್ರೀ ಅಲಾರಾಮ್ ಹೊಡೆದುಕೊಂಡರೂ ಏಳದ ಕುಂಭಕರ್ಣ ನಿದ್ದೆ ನಿಮ್ಮದು’ ಎಂದು ರವಿಯನ್ನು ಅಲುಗಾಡಿಸಿ ಎಬ್ಬಿಸಿದೆ.
ದಡಬಡಿಸಿ ಎದ್ದ ರವಿ ‘ಬೇಗ ರೆಡಿ ಆಗಿ ಸ್ಟೇಷನ್ನಿಗೆ ಹೋಗಬೇಕು ಎಂದಲ್ಲವೇನೆ ಹೆಂಡ್ತಿ?’ ಎನ್ನುತ್ತಲೇ ಬ್ರಶ್ ಮಾಡಿ ಬಂದ.ಲಗುಬಗೆಯಿಂದ ಬಿಸಿ ಬಿಸಿ ಕಾಫಿ ಹೀರಿ ಕಾgನ್ನೇರಿದ.‘ಮೇಡಮ್ ಮುಖ ಊರಗಲ ಆಗಿದೆ ಇವತ್ತು’ ಎಂದು ನಗುತ್ತಾ ಕಾರನ್ನು ಗೇಟಿನಿಂದ ಹೊರ ಹಾಕಿದ.ನಾನು ಮನೆಯೊಳಕ್ಕೆ ನಡೆದೆ.
‘ಈ ಮಕ್ಕಳೇ ಹೀಗೆ ಜೊತೆಗಿದ್ದಾಗ ಅದು ಬೇಕು, ಇದು ಸರಿಯಾಗಿಲ್ಲ’ ಎಂದು ನೂರೆಂಟು ಗದ್ದಲ ಎಬ್ಬಿಸುತ್ತಾರೆ.ದೂರವಿದ್ದಾಗ ಒಂದು ಖಾಲಿತನವನ್ನು ಸೃಷ್ಟಿಸುತ್ತಾರೆ. ಆಗೀಗ ಬರುತ್ತಾರೆಂದರೆ ಹಬ್ಬದ ವಾತಾವರಣವೇ ನಿರ್ಮಾಣವಾಗುತ್ತದೆ.ಇಷ್ಟು ದಿನ ಬಂದಂತಲ್ಲ ಸುಮಂತ.ಈ ಸಲ ಅವನ ಹೆಂಡತಿ ದೀಪ್ತಿಯ ಜೊತೆಯಲ್ಲಿ ಬರುತ್ತಿದ್ದಾನೆ. ಮದುವೆಯಲ್ಲಿ ನೋಡಿದಾಗ ಮೃದು ಸ್ವಭಾವದ ದೀಪ್ತಿ ಬಲು ಇಷ್ಟವಾಗಿದ್ದಳು. ಕೊಂಚ ಮಿತ ಭಾಷಿಯೇನೋ ಎನಿಸಿತ್ತು….. ಹೀಗೆ ತಲೆಯಲ್ಲಿ ಏನೇನೋ ವಿಚಾರಗಳು ಬಂದು ಹೋಗುತ್ತಿತ್ತು.ಕೈ ರೂಢಿಯ ಬಲದಿಂದ ಇಡ್ಲಿ ಚಟ್ನಿ ತಯಾರಿಸುತ್ತಿತ್ತು.
ಸುಮಂತನಿಗೆ ಇಡ್ಲಿ ವಡಾ ಎಂದರೆ ಬಲು ಇಷ್ಟ.‘ಎರಡು ಇಡ್ಲಿ ತಿನ್ನಲು ಅಳುತ್ತೀಯಾ ನಾನು ಎಂಟು ವಡಾ ಎಂಟು ಇಡ್ಲಿ ತಿನ್ನುತ್ತೇನೆ’ ಎಂದು ತಂಗಿಯ ಜಡೆ ಜಗ್ಗಿ ಕೀಟಲೆ ಮಾಡುತ್ತಿದ್ದ ಎಂದು ನೆನಪಿಸಿಕೊಳ್ಳುತ್ತಲೇ ವಡೆಯ ಹಿಟ್ಟಿಗೆ ತೆಂಗಿನಕಾಯಿ ಚೂರುಗಳನ್ನು ಹೆಚ್ಚಿ ಹಾಕಿದೆ.ಕಾರ್ ಹಾರ್ನ ಕೇಳಿ ‘ಅರೇ ಎಷ್ಟು ಬೇಗ ಬಂದರಲಾ’್ಲ ಎಂದು ಹೊರಗೋಡಿದೆ.
ಸುಮಂತ ಕಾರಿನಿಂದಿಳಿದವನೇ ‘ಚಿಕ್ಕಮ್ಮಾ’ ಎಂದು ಕೊರಳು ತಬ್ಬಿದ ಚಿಕ್ಕ ಮಗುವಂತೆ.ದೀಪ್ತಿ ಬ್ಯಾಗ್ ಹಿಡಿದು ಸಂಕೋಚದ ನೋಟಬೀರುತ್ತ ನಿಂತಿದ್ದಳು.ಅವಳು ತೊಟ್ಟ ಹಸಿರು ಉಡುಪು ಪ್ರಯಾಣದ ಕಾರಣದಿಂದ ಮುದುರಿದಂತಿತ್ತು.ಆದರೆ ಮೇಲ್ನೋಟಕ್ಕೇ ಸುಂದರಿ ಎನ್ನುವಂತಿದ್ದಳು.ಬಾಬಾ ಎನ್ನುತ್ತ ಅವಳ ತೋಳು ಹಿಡಿದು ಆದರದಿಂದ ಮನೆಯೊಳಗೆ ಬರಮಾಡಿಕೊಂಡೆ.
‘ಮಗಾ ಸೊಸೆ ಬಂದ್ರು ಅಂತ ಅವರನ್ನು ಮಾತ್ರ ಒಳಗೆಕರೆದೆ. ಬಡಪಾಯಿ ನನ್ನ ಮರೆತೇ ಬಿಟ್ಟೆ’ ಎಂದ ರವಿಯತ್ತ ಹುಸಿ ಮುನಿಸಿನ ನೋಟ ಬೀರಿ ‘ಬರ್ರೀ ಯಜಮಾನರೇ ನಿಮ್ಮದೇ ಮನೆಗೆ ನಿಮಗೆ ಆದರದ ಸ್ವಾಗತ’ ಎಂದೆ.
ತಿಂಡಿ ಕಾಫೀ ಸಮಾರಾಧನೆಯೂ ಆಯ್ತು. ಯಾಕೋ ಇಡ್ಲಿ ವಡೆಯನ್ನು ಮೊದಲಿನಂತೆ ಬಾಯ್ತುಂಬಾ ಹೊಗಳುತ್ತ ಸುಮಂತ ತಿಂದಿಲ್ಲ ಇವತ್ತು ಎನಿಸಿದರೂ ಪ್ರಯಣದ ಆಯಾಸವಿರಬೇಕು ಎನಿಸಿ ಸುಮ್ಮನಾದೆ. ದೀಪ್ತಿ ಸೌಮ್ಯಾನಂತೆ ಎರಡೇ ಇಡ್ಲಿ ವಡೆ ತಿಂದಳು.‘ತಂಗಿಯಂತೆ ಹೆಂಡತಿಗೇನೂ ಸುಮಂತ ಕಾಡಿಸುತ್ತಿಲ್ಲ ಸಧ್ಯ’ ಎಂದು ಮನದಲ್ಲೇ ನಕ್ಕೆ.
‘ಅತ್ತೆ ನನಗೆ ತಲೆ ನೋಯ್ತಾ ಇದೆ.ನಾನೊಂದು ಸ್ವಲ್ಪ ಹೊತ್ತು ಮಲಗಿ ಆಮೇಲೇ ಸ್ನಾನ ಮಾಡಲೇ?’ಎಂದ ದೀಪ್ತಿಗೆ ‘ಹಾಗೇ ಮಾಡು’ ಎಂದೆ.
‘ಮೇಲ್ಗಡೆ ರೂಮಿನಲ್ಲಿ ಹಾಸಿಗೆ ರೆಡಿ ಮಾಡಿಟ್ಟಿದ್ದೀನಿ ನಿನ್ನ ಹೆಂಡತಿಗೆ ತೋರಿಸಪ್ಪಾ ಅವಳಿಗೆ ಈ ಮನೆ ಹೊಸದು’ಎಂದು ಸುಮಂತನಿಗೆಂದೆ.ಬ್ಯಾಗುಗಳ ಸಮೇತ ಸುಮಂತಹೆಂಡತಿಯನ್ನು ಕರೆದುಕೊಂಡು ರೂಮ್ ಸೇರಿದ.
ಒಂದೈದು ನಿಮಿಷದಲ್ಲಿ ಸುಮಂತ ಕೆಳಗಿಳಿದು ಬಂದ. ‘ನೀನು ಸ್ವಲ್ಪ ಹೊತ್ತು ನಿದ್ದೆ ಮಾಡಬಹುದಿತ್ತಲ್ಲೋ’ ಎಂದೆ ಅಕ್ಕರೆಯಿಂದ.‘ಇಲ್ಲ ನನಗೆ ನಿದ್ದೆ ಬರುತ್ತಿಲ್ಲ ಚಿಕ್ಕಮ್ಮಾ ನಿನ್ನ ಬಳಿ ಮಾತನಾಡುತ್ತಾ ಅಡುಗೆಗೆ ಮಾಡಲು ಹೆಲ್ಪ ಮಾಡ್ತೀನಿ’ ಎನ್ನುತ್ತಾ ಅವರೇಕಾಯಿ ಸುಲಿಯಲು ನನ್ನೊಂದಿಗೆ ಕುಳಿತ.
‘ಅಕ್ಕ ಭಾವ ಹೇಗಿದ್ದಾರೋ?’ ಕೇಳಿದೆ. “ಅಮ್ಮ ಮದುವೆ ಎಂದು ಸಿಕ್ಕಪಟ್ಟೆ ಕೆಲಸ ಮಾಡಿ ಸುಸ್ತು ಹೊಡೆದಿದ್ದಾಳೆ ಮಂಡಿನೋವು ಕಾಡ್ತಾ ಇದೆ.ಅಪ್ಪನಿಗೆ ಬ್ಯಾಂಕಿನಲ್ಲಿ ತುಂಬಾ ಕೆಲಸ. ನನಗೆ ಬೆಂಗಳೂರಿನ ಒಂದು ಕಂಪನಿ ಒಂದು ಕಾಂಪ್ಲೆಕ್ಸನ ಡಿಸೈನಿಂಗ್ ಮಾಡಿಕೊಡು ಎಂದು ಕೇಳಿದೆ.ನಾವು ಒಂದು ವಾರ ಇರುತ್ತೇವೆ. ಕೆಲಸವನ್ನು ಸೆಟ್ಲ ಮಾಡಿಕೊಂಡು ಹೋಗುತ್ತೇವೆ ನಿಮಗೆ ತೊಂದ್ರೆ ಇಲ್ಲಾ ತಾನೆ” ಎಂದ.
‘ಏನೋ ಹೀಗೆ ಹೊರಗಿನವರಂತೆ ಆಡ್ತೀಯಾ.ಇದು ನಿನಗೂ ಮನೆನೆ. ನನಗೆ ಅಕ್ಕಂಗೆ ಸೇರಿ ಸೌಮ್ಯಾ ನೀನು ಇಬ್ರು ಮಕ್ಕಳು.ಇನ್ನೊಮ್ಮೆ ಇಂvಹ ಮಾತುಗಳು ಬರಬಾರದು’ಎಂದು ತಲೆಗೊಂದು ಮೊಟಕಿದೆ.‘ಈಗ ಹೇಳು ನೀನು ಹೇಗಿದ್ದೀಯಾ?ಸಂಸಾರ ಸುಖವಾಗಿದೆಯಾ?’ಸುಮಂತ ಉತ್ತರ ಕೊಡಲಿಲ್ಲ. ‘
‘ನಾನು ಚೆನ್ನಾಗಿಲ್ವಾ ಚಿಕ್ಕಮ್ಮಾ?’ಎಂದು ಮರು ಪ್ರಶ್ನೆ ಹಾಕಿದ.ಯಾಕೋ ಅಪಸ್ವರ ಕೇಳಿದಂತಾಯ್ತು.ಎತ್ತರದ ನಿಲುವು, ಗೋಧಿವರ್ಣ, ದೃಢಕಾಯ, ಚುರುಕು ಬುದ್ದಿಮತ್ತೆ ಹೊಂದಿದ ಸುಮಂತ ಬಲು ಸಹೃದಯಿ. ‘ನಮ್ಮ ಕುಟುಂಬದ ಹೆಮ್ಮೆ ಕಣೋ ನೀನು.ದೊರೆಯಂತಿದ್ದೀಯಾ ಈ ಪ್ರಶ್ನೆ ಯಾಕೋ ಇವತ್ತು?’ಕೇಳಿದೆ ಆತಂಕದಿಂದ.
‘ನೀನು ಕೌನ್ಸಲಿಂಗ ಮಾಡುತ್ತೀಯಲ್ಲಾ ನನಗೂ ಒಂದು ಸಹಾಯ ಮಾಡು ನಿನ್ನ ಮೊಬೈಲಿಗೆ ಒಂದು ಕೇಸ್ ಹಿಸ್ಟರಿಯನ್ನು ಬರೆದು ಹಾಕಿದ್ದೇನೆ. ಊಟ ಮುಗಿದ ಮೇಲೆ ಓದು. ಅದನ್ನು ಬಗೆಹರಿಸಿಕೊಡು ಚಿಕ್ಕಮ್ಮಾ ….ಪ್ಲೀಸ್ ಇನ್ನೇನೂ ಕೇಳಬೇಡಾ’ ಎಂದು ನನ್ನ ಹೆಗಲಿಗೆ ತಲೆಯೊರಗಿಸಿದ.ಮನಸ್ಸು ಕರಗಿ ಹೋಯಿತು.ಮಾತೇ ಆಡದೇ ಸುಮ್ಮನೇ ಅವನ ತಲೆ ನೇವರಿಸಿದೆ.
***
ಸುಮಂತ ಮಧ್ಯಾಹ್ನದ ಊಟ ಮುಗಿಸಿದವನೇ ನಾನು ಕಂಪನಿಯವರನ್ನು ಭೇಟಿ ಮಾಡಿ ಬರುತ್ತೇನೆ ಎಂದು ಚಿಕ್ಕಪ್ಪನ ಜೊತೆ ನಡೆದ.ನನ್ನೊಂದಿಗೆ ಅಡುಗೇ ಮನೆಯ ಸ್ವಚ್ಛತಾ ಕಾರ್ಯಗಳಿಗೆ ಕೈ ಜೋಡಿಸಿದ ದೀಪ್ತಿಯ ಕೆಲಸಗಳನ್ನು ಕಡೆಗಣ್ಣಿನಲ್ಲಿ ನೋಡಿದೆ.ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದಳು.ಪರವಾಗಿಲ್ಲ ಓದಿದ ಹುಡುಗಿಯಾದರೂ ಗೃಹಕೃತ್ಯವನ್ನೂ ಕಲಿತಿದ್ದಾಳೆ ಎಂದು ಮನದಲ್ಲೇ ಮೆಚ್ಚಿಕೊಳ್ಳುತ್ತಾ ‘ನೀನು ಸ್ವಲ್ಪ ಸಮಯ ಮತ್ತೊಂದು ನಿದ್ದೆ ಮಾಡು ದೀಪ್ತಿ. ನಾನೂ ಅರ್ಧಗಂಟೆ ಮಲಗುತ್ತೇನೆ. ಸುಮಂತ ಅಷ್ಟರಲ್ಲಿ ಬರಬಹುದು.ಇಲ್ಲವಾದರೆ ನಾವಿಬ್ಬರೂ ಸಂಜೆ ಇಲ್ಲೇ ಸಮೀಪದಲ್ಲಿರುವ ಪಾರ್ಕು, ದೇವಸ್ಥಾನಗಳಿಗೆ ಭೇಟಿ ನೀಡಿ ಬರೋಣ’ ಎಂದೆ.
ದೀಪ್ತಿ ಮಹಡಿಯನ್ನೇರಿದಳು.ಕೆಲಸದ ಒತ್ತಡದಲ್ಲಿ ಅದುವರೆಗೂ ಕುತೂಹಲವನ್ನು ತಡೆ ಹಿಡಿದಿದ್ದೆ. ರೂಮು ಸೇರಿದೊಡನೆ ಮೊಬೈಲಿನಲ್ಲಿ ಸುಮಂತನ ಬರಹವನ್ನು ಓದಿದೆ…
ಚಿಕ್ಕಮ್ಮಾ, ಮೆಚ್ಚಿ ಮದುವೆಯಾದ ದೀಪ್ತಿ ನಾನು ಕಾಣುವವರ ಕಣ್ಣಿಗೆ ಗಂಡ ಹೆಂಡತಿ.ಅವಳಿಗೆ ದೈಹಿಕ ಸುಖವೆಂದರೆ ತಿರಸ್ಕಾರವೂ ಭಯವೋ ಏನೋ ಒಂದು.ಅದೇನೆಂದು ನನಗರ್ಥವಾಗುತ್ತಿಲ್ಲ. ಗಂಡನೆಂ¨ ಅಧಿಕಾರದಿಂದ ಅವಳನ್ನು ನಾನು ಒತ್ತಾಯಿಸಲಾರೆ.ಆದರೆ ಮೃಷ್ಟಾನ್ನದೆದುರು ಕುಳಿತ ಹಸಿದವನಂತೆ ಸಂಯಮವೂ ನನಗೆ ಸುಲಭವಲ್ಲ. ಮುಂದೇನು?ದಿಕ್ಕೇ ತೋಚುತ್ತಿಲ್ಲ. ಯಾರೊಂದಿಗೂ ಈ ವಿಷಯ ಹೇಳಿಲ್ಲ. ಅಪ್ಪ ಅಮ್ಮನಿಗೆ ಗೊತ್ತಾದರೆ ಆಘಾತ ತಡೆದುಕೊಳ್ಳಲಾರರು.ಅವಳ ಅಮ್ಮನೂ ಮೃದು ಸ್ವಭಾವದವರು.ಅಪ್ಪನಿಲ್ಲ ಎಂಬ ಕೊರತೆ ಕಾಡದಂತೆ ಮುದ್ದಾಗಿ ಬೆಳೆಸಿದ್ದಾರೆ. ದೀಪ್ತಿಯ ಮನದಲ್ಲೇನಿದೆ ಎಂಬ ಒಗಟು ಬಿಡಿಸಿ ಚಿಕ್ಕಮ್ಮಾ..
‘ನಮ್ಮ ಸುಮಂತನ ಬದುಕು ಹೀಗಾಯ್ತೇ?’ಎಂದು ಕಣ್ತುಂಬಿ ಬಂತು.ಮದುವೆ ನಿಶ್ಚಯವಾದಾಗ ಸುಮಂತನ ಸಂಭ್ರಮ ಇಡೀ ಕುಟುಂಬದ ಸಂಭ್ರಮವಾಗಿ ಮಾರ್ಪಟ್ಟಿತ್ತು.ಈ ಹುಡುಗಿಗೆ ಇಷ್ಟವಿಲ್ಲದಿದ್ದರೆ ಮದುವೆ ಬೇಡವೆನ್ನಬಹುದಿತ್ತು.ಮದುವೆಯಾಗಿ ನಮ್ಮ ಮಗನ ಮನ ನೋಯಿಸುತ್ತಿರುವಳಲ್ಲ ಎಂದು ಜೋರಾಗಿ ಸಿಟ್ಟೂ ಬಂತು.ಆದರೆ ಅದರ ಹಿಂದೆಯೇ ಯಾಕೆ ಹೀಗೆ ಎಂದು ಒಗಟು ಬಿಡಿಸುವ ವಿವೇಕವೂ ಬಂತು…
***
ನನ್ನ ಸೂಚನೆಯ ಮೇರೆಗೆ ಅಂದಿನಿಂದ ಸುಮಂತ ಕೆಲಸದ ನೆವ ಹೇಳಿ ಮನೆಯಿಂದಾಚೆಯೇ ಹೆಚ್ಚು ಸಮಯ ಕಳೆಯುತ್ತಿದ್ದ.ನಾನು ದೀಪ್ತಿಯ ವಿಶ್ವಾಸ ಗೆಲ್ಲಲು ಯತ್ನವನ್ನಾರಂಭಿಸಿದೆ.ಅವಳಿಗಿಷ್ಟವಾದ ತಿಂಡಿ ತಿನಿಸುಗಳನ್ನು ಕೇಳಿ ಅರಿತು ಮಾಡಿ ಬಡಿಸಿದೆ.ಮನೆಯಿಂದ ಆಚೆ ಸುತ್ತುವ ಸಮಯದಲ್ಲಿ ಅವಳು ಆಸೆ ಪಟ್ಟ ವಸ್ತುಗಳನ್ನು ಕೊಡಿಸಿದೆ.ಅವಳ ನೀಳ್ಗೂದಲಿಗೆ ಎಣ್ಣೆ ಹಾಕಿ ಮಾಲಿಶ್ ಮಾಡಿ ಸ್ನಾನ ಮಾಡಿಸಿದೆ. ಮೊದ ಮೊದಲು ಎಲ್ಲ ವಿಷಯಗಳಿಗೂ ಸಂಕೋಚ ಪಡುತ್ತಿದ್ದ ದೀಪ್ತಿ ನಿಧಾನವಾಗಿ ನನ್ನ ಆಪ್ತತೆಗೆ ಮನಸೋತಳು. ಅವಳನ್ನು ಯಾವುದೇ ವಿಷಯದಲ್ಲಿ ಬಲವಂತ ಮಾಡಬಾರದು ಎಂದು ಸುಮಂತನಿಗೂ, ರವಿಗೂ ತಾಕೀತು ಮಾಡಿದ್ದರಿಂದ ಅವರೂ ಸಹಕಾರ ನೀಡುತ್ತಿದ್ದರು.ಅವರು ಬಂದು ಐದು ದಿನ ಕಳೆದುಹೋಗಿತ್ತು….
ಒಂದು ದಿನ ಸಂಜೆ ಸೌಮ್ಯಾನ ಬೀರು ಸ್ವಚ್ಛಗೊಳಿಸುವಾಗ ದೀಪ್ತಿಯೂ ಸಹಾಯ ಮಾಡುತ್ತಿದ್ದಳು.ಸೌಮ್ಯಾಳ ನೀಲಿ ರೇಷ್ಮೆ ಸೀರೆಯನ್ನು ನೀಟಾಗಿ ಮಡಚಿಡುತ್ತಾ ‘ಇದು ತುಂಬಾ ಚೆನ್ನಾಗಿದೆ’ ಎಂದಳು.‘ಹೌದಾ ಇದನ್ನೊಮ್ಮೆ ನೀನು ಉಟ್ಗೋ ಸೌಮ್ಯಾನ ಒಡವೆಗಳನ್ನು ಹಾಕಿಕೋ. ಫೋಟೋ ಹೊಡೆಯುತ್ತೇನೆ, ಸೌಮ್ಯಾನಿಗೆ ಕಳಿಸೋಣ ಸಂತೋಷಪಡುತ್ತಾಳೆ’ ಎಂದೆ. ಸಂಕೋಚದಿಂದ ‘ಬೇಡ ಬೇಡ ಎಂದ ದೀಪ್ತಿಯ ಕೈಗೆ ಸೀರೆ ಒಡವೆಗಳನ್ನು ಕೊಟ್ಟು ನೀನು ನನ್ನ ಮಗಳಂತೆಯೇ..ಉಟ್ಗೋ’ ಎಂದೆ.ಇಲ್ಲವೆನ್ನಲಾಗಲಿಲ್ಲ ಅವಳಿಗೆ, ರೂಮು ಸೇರಿ ಒಂದರ್ಧ ಗಂಟೆಯ ನಂತರ ಸೀರೆಯುಟ್ಟು ಒಡವೆ ಧರಿಸಿ ತಯಾರಾಗಿ ಬಂದಳು.
ಹಾಲ್ಬಿಳುಪಿನ ದೀಪ್ತಿಗೆ ನೀಲಿ ಸೀರೆ ಚೆನ್ನಾಗಿ ಒಪ್ಪಿತ್ತು. ‘ವಾವ್ ಸುಂದರಿಪ್ಪಾ ನಮ್ಮ ದೀಪ್ತಿ ..ಅದಕ್ಕೆ ನಿನ್ನ ನೋಡಿದ ಕೂಡ್ಲೇ ಮದುವೆ ಬೇಡಾ ಬೇಡಾ ಅಂತಾ ಇದ್ದ ನಮ್ಮ ಸುಮಂತ ಮರು ಮಾತಿಲ್ಲದೇ ಒಪ್ಪಿಕೊಂಡ ಎನ್ನುತ್ತಾ ಮೆಲ್ಲಗೆ ಮೆಚ್ಚುಗೆಯಿಂದವಳ ಕೈ ಹಿಡಿದೆ.ತನ್ನಸೌಂದರ್ಯಕ್ಕೆ ತಾನೇ ಮರುಳಾದಂತೆ ನಿಲುವುಗನ್ನಡಿಯಲ್ಲಿ ಪ್ರತಿಬಿಂಬವನ್ನು ನೋಡುತ್ತಿದ್ದ ದೀಪ್ತಿ ನನ್ನ ಕಂಗಳನ್ನು ನೇರವಾಗಿ ನೋಡಲಿಲ್ಲ. ಹತ್ತಾರು ಪೋಟೋ ಹೊಡೆದೆ. ಡ್ರೆಸ್ಸ್ ಬದಲಾಯಿಸಿ ಬರುತ್ತೇನೆ ಅತ್ತೆ ಎಂದವಳನ್ನು ತಡೆದು ‘ಇರು ಸುಮಂತ ಬರುವ ಸಮಯವಾಯ್ತು.ಅವನೂ ನೋಡಲಿ ನಿನ್ನನ್ನು ಈ ಡ್ರೆಸ್ಸಿನಲ್ಲಿ’ ಎಂದೆ.ಅವಳು ಮೌನವಾಗಿ ನಿಂತಳು.ನೀನು ತಾಯಿಯಾಗುವ ಸಂದರ್ಭದಲ್ಲಿ ನಿನಗೆ ಇದೇ ಬಣ್ಣದ ಸೀರೆಯನ್ನು ನಾನು ತರುತ್ತೇನೆ ಎಂದೆ.ಮಂಚದ ಮೇಲೆ ಕುಸಿದಂತೆ ಕುಳಿತ ದೀಪ್ತಿ ‘ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೆ ನಾನು ಅರ್ಹಳಿಲ’್ಲ ಎಂದಳು.ಒಂದೇ ಸಮನೆ ಬಿಕ್ಕಿ ಬಿಕ್ಕಿ ಅಳುತ್ತಳುತ್ತಾ ನನ್ನನ್ನು ಸುಮಂತ ಮದುವೆಯಾಗಬಾರದಿತ್ತು ಅತ್ತೆ..ಎಂದವಳ ಬಳಿ ಹೋಗಿ ತಬ್ಬಿ ಅಳು ಹತೋಟಿಗೆ ಬರುವವರೆಗೂ ಕಾದು ನಿಂತೆ.
ಮೆಲ್ಲಗೆ ‘ಯಾಕಮ್ಮಾ ನನ್ನ ಮಗ ಒಳ್ಳೆಯವನಲ್ವಾ? ಕೇಳಿದೆ.
‘ಅವ್ರು ತುಂಬಾ ಒಳ್ಳೆವ್ರು.ನಾನೇ ಸರಿಯಾಗಿಲ್ಲ. ನಾನು ನೋಡಬಾರ್ದ ವಯಸ್ಸಿನಲ್ಲಿ ನೋಡಬಾರದ್ದನ್ನೆಲ್ಲ ನೋಡಿಬಿಟ್ಟಿದ್ದೀನಿ. ಅದಕ್ಕೇ ನಾನು ನಿಮ್ಮ ಮಗನಿಂದ ದೂರವೇ ಇದ್ದೀನಿ’..ಎನ್ನುತ್ತಾ ಮತ್ತೆ ಜೋರಾಗಿ ಅಳಲಾರಂಭಿಸಿದಳು. ಆಗಾಗ ‘ಪಾಪಿ ಅವ್ನು ನಮ್ಮ ನಂಬಿಕೆನ ದುರುಪಯೋಗ ಪಡಿಸಿಕೊಂಡು ಬಿಟ್ಟ’ಎಂದು ನಡು ನಡುವೆ ಶಾಪ ಹಾಕಿದಳು..
ಹಳೆಯ ಕಹಿ ನೆನಪಿನಲ್ಲಿ ಮುಖ ಕಂದಿ ಹೋದ ದೀಪ್ತಿಯನ್ನು ನೋಡಿ ಇನ್ಯಾವ ನೋವು ಇವಳೊಂದಿಗಿದೆಯೋ ಆತಂಕ ಕಾಡಿದರೂ ಅದ್ಯಾವುದನ್ನೂ ತೋರಿಸಿಕೊಳ್ಳದೇ ‘ದೀಪ್ತಿ, ಈ ಕ್ಷಣ ನಾನೇ ನಿನ್ನ ಅಮ್ಮನೆಂದುಕೋ.ಯಾರಲ್ಲಿಯೂ ಹಂಚಿಕೊಳ್ಳಲಾರದ ಯಾವುದೋ ದುಃಖ ನಿನ್ನೊಳಗೆ ಮನೆ ಮಾಡಿದಂತಿದೆ. ಆ ಕಷ್ಟವೇನೆಂದು ನನ್ನ ಬಳಿ ಹೇಳು’..ಎಂದೆ.
ದೀಪ್ತಿ ಮೆಲ್ಲಗೆ ನನ್ನ ಮಡಿಲಿನಲ್ಲಿ ತಲೆ ಇಟ್ಟು ಎಷ್ಟೋ ಹೊತ್ತು ಸುಮ್ಮನೇ ಮಲಗಿದಳು. ನಂತರ ಮಾತನಾಡಲಾರಂಭಿಸಿದಳು..‘ಹೌದು ನಾನೀ ನೋವನ್ನು ಯಾರಲ್ಲಿಯಾದರೂ ಹೇಳಲೇ ಬೇಕು.ಇಲ್ಲವಾದರೆ ನಾನು ಚೂರು ಚೂರಾಗಿ ಬಿಡುತ್ತೇನೆ. ನೀವು ಕೌನ್ಸಲಿಂಗ ಮಾಡುತ್ತೀರೆಂದು ಸುಮಂತ ಯಾರ ಬಳಿಯೋ ಹೇಳುತ್ತಿದ್ದುದನ್ನು ಕೇಳಿಸಿಕೊಂಡಿದ್ದೇನೆ. ನಿಮ್ಮ ಬಳಿ ಹೇಳಿದರೆ ಅದನ್ನು ಗುಟ್ಟಾಗಿಡುವುದು ನಿಮ್ಮ ವೃತ್ತಿಧರ್ಮವಾದರಿಂದ ನೀವು ಇನ್ಯಾರಲ್ಲಿಯೂ ಹೇಳಲಾರಿರಿ ಎನಿಸುತ್ತಿದೆ . ಎಂದು ನಿಲ್ಲಿಸಿದಳು.
ನಾನು ಅವಳ ತಲೆ ಸವರಿ ಎಲ್ಲ ಕಹಿಯನ್ನು ನನ್ನ ಮಡಿಲಿಗೆ ಹಾಕು..ನಂತರ ನೀನೇ ನಿನ್ನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನೆರವಾಗುತ್ತೇನೆ. ಅದು ಆಗದಿದ್ದರೂ ನೀನು ಹೇಳಿದ ವಿಷಯ ಗುಟ್ಟಾಗಿರುತ್ತದೆ ಎಂದು ನಿಲ್ಲಿಸಿದೆ. ದೀಪ್ತಿ ತನ್ನ ಗತದೊಂದಿಗೆ ನನ್ನನ್ನೂ ಕರೆದೊಯ್ದಳು…..
ಅತ್ತೆ ,ನನಗೆ ಎಂಟು ವರ್ಷವಾದಾಗ ಅಪ್ಪ ತೀರಿಕೊಂಡರು.. ಅಮ್ಮ ಹೆಚ್ಚು ಓದಿದವಳಲ್ಲ. ಅಪ್ಪ ಶಿರಸಿಯ ಅಂಗಡಿಗಳಿಗೆ ಓಡಾಡಿ ಪಿಗ್ಮಿ ಕಲೆಕ್ಟ ಮಾಡುತ್ತಿದ್ದ.ದೊಡ್ಡಪ್ಪ- ದೊಡ್ಡಮ್ಮ, ಅಜ್ಜ ಅಜ್ಜಿ ಹಳ್ಳಿಯಲ್ಲಿದ್ದರು. ಅಲ್ಲಿಯೂ ಇದ್ದಿದ್ದು ಒಂದೆಕರೆ ತೋಟವಷ್ಟೇ. ಅಪ್ಪ ಹಾರ್ಟ ಫೇಲ್ಯೂರ್ ಆಗಿ ಸತ್ತಾಗ ಅಮ್ಮ ನಾನು ತಮ್ಮ ಮೂವರ ಬದುಕು ಬೀದಿಗೇ ಬಂದಿತ್ತು. ಬರುವ ಕಡಿಮೆ ಆದಾಯದಲ್ಲಿ ಅಂದಿನ ದುಡಿಮೆ ಅಂದಿಗೆ ಸಾಕು ಎನ್ನು ಸ್ಥಿತಿಯಲ್ಲಿದ್ದ ನಮಗೆ ದುಡಿಯುತ್ತಿದ್ದ ಅಪ್ಪ ಸತ್ತಾಗ ಏನು ಮಾಡಬೇಕೋ ತೋಚದಂತಾಯ್ತು.ಅಮ್ಮನ ತವರು ಮನೆಯಲ್ಲಿಯೂ ಸ್ಥಿತಿಗತಿ ಅಷ್ಟಕಷ್ಟೇ.ಆದರೂ ಹತ್ತನೆಯ ತರಗತಿಯವರೆಗೆ ನಿನ್ನ ಮಗನನ್ನು ನಮ್ಮೂರ ಶಾಲೆಗೆ ಕಳಿಸಿ ಓದಿಸುತ್ತೇವೆ ಎಂದು ನನ್ನ ತಮ್ಮನನ್ನು ಅಮ್ಮನ ತವರು ಮನೆಯವರು ಕರೆದುಕೊಂಡು ಹೋದರು.ಅಮ್ಮ ಅಪ್ಪನ ಉದ್ಯೋಗವನ್ನು ಮುಂದುವರೆಸಿದಳು.ಇಡೀ ದಿನ ಊರು ಸುತ್ತುವ ಅವಳ ಕೆಲಸ ಸುಧಾರಿಸಿಕೊಂಡು ನನ್ನನ್ನು ಸಮಯಕ್ಕೆ ಸರಿಯಾಗಿ ಶಾಲೆಗೆ ಕಳಿಸುವುದು ಅವಳಿಗೆ ಕಷ್ಟವಾಗುತ್ತಿತ್ತು.ಸಂಜೆ ಶಾಲೆಯಿಂದ ಮನೆಗೆ ಬಂದರೆ ಒಬ್ಬಳೇ ಇರಲು ನನಗೆ ಭಯವೆನಿಸುತ್ತಿತ್ತು.ಅಮ್ಮನಿಗೆ ಆ ಸಮಯದಲ್ಲಿಯೂ ಓಡಾಟವಿರುತ್ತಿತ್ತು.ನಮ್ಮ ಮನೆಯ ಸಮೀಪದಲ್ಲಿಯೇ ಬಾರ್ ಇತ್ತು ಕುಡುಕರು ಸದಾ ಓಡಾಡುವ ಸ್ಥಳದಲ್ಲಿರುವ ಮನೆಯಲ್ಲಿ ನನ್ನನ್ನು ಇಡುವುದು ಕ್ಷೇಮವಲ್ಲ ಎಂದು ನನ್ನನ್ನು ಅಪ್ಪನ ಮನೆಯಲ್ಲಿ ಅಜ್ಜ ಅಜ್ಜಿಯರೊಂದಿಗೆ ಬಿಟ್ಟು ತಾನು ದುಡಿಯುವ ಮಹಿಳೆಯರ ಹಾಸ್ಟೆಲ್ಲಿನಲ್ಲಿ ಉಳಿದುಕೊಂಡಳು.ನಾನು ಅಲ್ಲಿಯವರೆಗೆ ಪಟ್ಟಣದ ಶಾಲೆಯಲ್ಲಿದ್ದು ಓದಿದವಳು ಹಳ್ಳಿಯ ಶಾಲೆಗೆ ಹೊಂದಿಕೊಳ್ಳಲು ಕಷ್ಟಪಟ್ಟೆ.ಅಮ್ಮ ಹದಿನೈದು ದಿನಗಳಿಗೊಂದು ಸಲ ನನ್ನು ಭೇಟಿಯಾಗಿ ನನಗಗತ್ಯವಾದ ಸಂಗತಿಗಳನ್ನು ಕೊಡಿಸುತ್ತಿದ್ದಳು.
ಅಪ್ಪನ ಅಣ್ಣ ಅಂದರೆ ನನ್ನ ದೊಡ್ಡಪ್ಪ ಸದಾ ತನ್ನ ಮಗ್ಗುಲಲ್ಲೇ ನನಗೆ ಕುಳಿತು ಊಟ ಮಾಡಲು ಒತ್ತಾಯಿಸುತ್ತಿದ್ದ.ಸ್ನಾನ ಮಾಡಿಸುತ್ತಿದ್ದ.ತನ್ನಜೊತೆಯಲ್ಲೇ ಮಲಗಿಸಿಕೊಳ್ಳುತ್ತಿದ್ದ. ದೊಡ್ಡಮ್ಮ ‘ನಮ್ಮ ಮಗಳನ್ನು ಪ್ರೀತಿಸಿದ್ದಕ್ಕಿಂತಲೂ ಹೆಚ್ಚು ನಿನ್ನನ್ನು ಪ್ರೀತಿಸುತ್ತಾನೆ’ ಎನ್ನುತ್ತಿದ್ದಳು. ಬಂದವರ ಮುಂದೆಯೂ ಹಾಗೇ ಹೇಳುತ್ತಿದ್ದಳು. ನನಗೂ ಹಾಗೇ ಎನಿಸುತ್ತಿತ್ತು.ಸುಮಾರು ಒಂದು ವರ್ಷ ಹೀಗೆಯೆ ನಡೆಯಿತು.ಕ್ರಮೇಣ ಆ ದೊಡ್ಡಪ್ಪ ಸ್ನಾನ ಮಾಡಿಸುವಾಗ ಎಲ್ಲೆಲ್ಲಿಯೋ ಮುಟ್ಟಲಾರಂಭಿಸಿದ.ನನಗೇನೂ ಅರ್ಥವಾಗುತ್ತಿರಲಿಲ್ಲ, ಆದರೆ ತುಂ¨ ಕಿರಿ ಕಿರಿಯಾಗುತ್ತಿತ್ತು.
ಒಂದು ದಿನ ದೊಡ್ಡಮ್ಮ ಅಜ್ಜ ಅಜ್ಜಿ ಊರಿನ ಪಕ್ಕದ ಮನೆಯ ಗೃಹಪ್ರವೇಶಕ್ಕೆ ಹೋಗಿದ್ದರು.ಮನೆಯಲ್ಲಿ ನಾನು ದೊಡ್ಡಪ್ಪ ಇಬ್ಬರೇ ಇದ್ದೆವು.ನಾನು ಕೊಣೆಯೊಳಗೆ ನನ್ನ ಪುಸ್ತಕಗಳನ್ನು ಜೋಡಿಸಿಡುತ್ತಿದ್ದೆ.ದೊಡ್ಡಪ್ಪ ರೂಮಿನೊಳಗೆ ಬಂದು ಬಟ್ಟೆಯನ್ನೆಲ್ಲ ಕಳಚಿಕೊಂಡು ನಿಂತ. ಹತ್ತಿರ ಬಂದು ಕೆನ್ನೆಯ ಮೇಲೆ ಪಚ ಪಚನೇ ಮುದ್ದಿಕ್ಕಿದ. ನನಗೆ ವಿಪರೀತ ಹೆದರಿಕೆಯಾಗಿ ಅವನನ್ನು ನೂಕಿ ಓಡಿ ಹೋಗಿ ಅಡುಗೆ ಮನೆಯಲ್ಲಿ ಕದ ಹಾಕಿಕೊಂಡು ಅಳುತ್ತಾ ಕುಳಿತೆ.ದೊಡ್ಡಮ್ಮ ಅಜ್ಜ ಅಜ್ಜಿ ಬಂದ ಮೇಲೆಯೇ ಹೊರಗೆ ಬಂದೆ. ‘ನನ್ನ ವಿಷಯ ಯಾರ ಬಳಿಯಾದರೂ ಹೇಳಿದರೆ ಸಾಯಿಸಿಬಿಡುವೆ’ ಎನ್ನುತ್ತಿದ್ದ.ನನಗೆ ಸದಾ ಭಯವಾಗುತ್ತಿತ್ತು.ನಂತರ ಅವನೆಷ್ಟೇ ಒತ್ತಾಯಿಸಿದರೂ ಅವನಿಗೆ ಸ್ನಾನ ಮಾಡಿಸಲು ಕೊಡಲಿಲ್ಲ. ಸದಾ ಅಜ್ಜಿಯ ಮಗ್ಗುಲಲ್ಲೇ ಮಲಗಿದೆ. ನಾಲ್ಕನೇ ಕ್ಲಾಸ್ ಪರೀಕ್ಷೆ ಮುಗಿಯದ ಮೇಲೆ ಅಮ್ಮನೊಂದಿಗೆ ಹಠ ಮಾಡಿ ಬೆಂಗಳೂರಿನ ಗುರುಕುಲ ಸೇರಿದೆ.ಬರೀ ಹುಡುಗಿಯರೇ ಇರುವ ಹಾಸ್ಟೆಲ್ಲಿನಲ್ಲಿ ಬೆಳೆದೆ. ನನಗೆ ಗಂಡಸರನ್ನು ಕಂಡರೆ ಒಂದು ರೀತಿಯ ಭಯ..
ಆದರೆ ಯಾಕೋ ಏನೋ ಸುಮಂತ ನನ್ನನ್ನು ನೋಡಲು ಬಂದಾಗ ‘ಇವನೊಂದಿಗೆ ಬದುಕಿದರೆ ಬದುಕಬಹುದು’ ಎನಿಸಿತು.ಅಮ್ಮನೂ ತನ್ನ ಜವಾಬ್ದಾರಿಯನ್ನು ಮುಗಿಸಲು ಆತುರ ತೋರಿದಳು.ಮದುವೆಗೇನೋ ಒಪ್ಪಿದೆ.ಆದರೆ ಮದುವೆಯಾದ ಮೇಲೆ ಮತ್ತದೇ ಭಯ. ಸುಮಂತ ಹತ್ತಿರ ಬಂದರೂ ಎದೆಬಡಿತ ಹೆಚ್ಚಾಗಿ ಕಾಲು ಕೈಗಳು ತರ ತರನೇ ನಡುಗುತ್ತವೆ.ದೊಡ್ಡಪ್ಪನ ಹೇಸಿ ವರ್ತನೆ ನೆನಪಿಗೆ ಬಂದು ನಾನೇಮೈಲಿಗೆ ಎನಿಸುತ್ತದೆ. ನಾನಿವನಿಗೆ ತಕ್ಕ ಹುಡುಗಿಯಲ್ಲ. ಮದುವೆಯಾಗಿ ಇವನ ಜೀವನ ಹಾಳು ಮಾಡಿದೆ ಎನಿಸುತ್ತದೆ. ಅವನನ್ನು ಬಿಟ್ಟು ಹೋಗಬೇಕು ಎಂತಲೂ ವಿಚಾರ ಮಾಡುತ್ತೇನೆ. ಆದರೆ ಹೋಗುವುದಾದರೂ ಎಲ್ಲಿಗೆ? ತವರು ಮನೆಗೆ ಹೋಗಿ ಸುಮಂತನನ್ನು ಬಿಟ್ಟು ಬಂದೆ ಎಂದರೆ ಎಲ್ಲರೂ ಕೇಳುವ ಕಾರಣಕ್ಕೆ ಏನು ಉತ್ತರ ಕೊಡಲಿ?ಹೇಳಿ ಅತ್ತೆ. ಆ ಚಂಡಾಲ ನನ್ನ ಜೀವನವನ್ನೇ ಹಾಳು ಮಾಡಿದ ಎಂದು ಆಕ್ರೋಶದಿಂದ ಹೇಳುತ್ತಾ ಮತ್ತೆ ಅಳಲಾರಂಭಿಸಿದಳು.’.
‘ಛೇ ಗಂಡಸು ಜನ್ಮವೇ.. ಇದೆಂತಹ ಅನ್ಯಾಯ ಈ ಹುಡುಗಿಗೆ ಎಂದು ಮರುಗುತ್ತ ಎಲ್ಲ ಸರಿ ಹೋಗುತ್ತದೆ.ಮಲಗು’ ಎಂದು ನಿಧಾನವಾಗಿ ಅವಳ ತಲೆ ನೇವರಿಸುತ್ತಾ ಕುಳಿತೆ.ಅತ್ತು ಅತ್ತು ಸಾಕಾಗಿ ಅವಳು ನಿದ್ದೆ ಹೋದಳು.
***
ಮರು ದಿನ ಮಂಕಾಗಿ ಕಂಡ ದೀಪ್ತಿಯನ್ನು ನೋಡಿ ಸುಮಂತ ಹುಬ್ಬೇರಿಸಿದರೂ ಏನನ್ನೂ ಪ್ರಶ್ನಿಸಲಿಲ್ಲ. ರವಿಗೂ, ಸುಮಂತನಿಗೂ ಹೊರಗಡೆ ಹೋಗಿಬಿಡಿ ಎಂದು ಸೂಚನೆ ನೀಡಿದೆ.ಎಳೆ ಬಿಸಿಲಿಗೆ ಮೈಯೊಡ್ಡುತ್ತಾ ತಾರಸಿಯಲ್ಲಿಟ್ಟಿದ್ದ ಕುಂಡಗಳಲ್ಲಿ ಬೆಳೆದ ಕಳೆಯನ್ನು ಕೀಳಲಾರಂಭಿಸಿದೆ.ನನ್ನೊಂದಿಗೆ ದೀಪ್ತಿಯೂ ಕಳೆ ತೆಗೆಯಲಾರಂಭಿಸಿದಳು.“ದೀಪ್ತಿ ಈ ಕುಂಡಗಳಲ್ಲಿ ಬೆಳೆದ ಕಳೆಯನ್ನು ತೆಗೆದು ಸ್ವಲ್ಪ ಗೊಬ್ಬರ ನೀರು ಕೊಟ್ಟು ಚೆನ್ನಾಗಿ ಬಿಸಿಲು ಬೀಳುವ ಸ್ಥಳದಲ್ಲಿಟ್ಟರೆ ಒಂದು ವಾರದೊಳಗೆ ಗಿಡಗಳು ನಳನಳಿಸುತ್ತವೆ. ನೀನೂ ಹಾಗಾಗಬೇಕು.ನೀನು ಹೇಳಿದ ವಿಷಯವನ್ನೆಲ್ಲ ರಾತ್ರಿ ವಿಚಾರ ಮಾಡಿದೆ.ನಿನ್ನ ದೊಡ್ಡಪ್ಪನೆಂಬ ಕಿರಾತಕ ಹುಚ್ಚುಚ್ಚಾಗಿ ನಡೆದುಕೊಂಡಿದ್ದರಲ್ಲಿ ನಿನ್ನ ತಪ್ಪೇನಾದ್ರೂ ಇತ್ತಾ?’ ಕೇಳಿದೆ. ಅವಳು ಇಲ್ಲ ಎಂದು ತಲೆಯಾಡಿಸಿದಳು.
“ಇರಲಿಲ್ಲ ಅಲ್ವೇ ಮಗೂ.ಮತ್ತೆ ನೀನ್ಯಾಕೆ ತಪ್ಪಿತಸ್ಥಳಂತೆ ವರ್ತಿಸಿ ನಿನ್ನ ಜೀವನ ಹಾಳು ಮಾಡಿಕೊಳ್ಳುತ್ತೀಯಾ?ಈ ಕಳೆ ಕಿತ್ತಂತೆಯೇ ಆಮನುಷ್ಯನ ನೆನಪನ್ನು ಕಿತ್ತು ಬಿಸಾಡಿಬಿಡು.ನೀನು ಮುಂದೆ ಓದುವುದಾದರೆ ಓದು.ಉದ್ಯೋಗ ಮಾಡುವುದಾದರೆ ಮಾಡು. ನೀನು ಏನೇ ಮಾಡುತ್ತೀಯೆಂದರೂ ನಾವೆಲ್ಲರೂ ನಿನಗೆ ಸಪೋರ್ಟ ಮಾಡುತ್ತೇವೆ. ಇನ್ನಾದರೂ ನಿಜವಾದ ಅರ್ಥದಲ್ಲಿ ನಮ್ಮ ಸುಮಂತನ ಪತ್ನಿಯಾಗು”..ಎಂದು ಮಾತು ನಿಲ್ಲಿಸಿದೆ. ದೀಪ್ತಿಯ ಕಂಗಳು ತುಂಬಿದ ಕೊಳದಂತಾಗಿದ್ದವು ನನ್ನದು ಕೂಡಾ..ಆದರೆ ಗೊಂದಲ ಕಳೆದ ಧೃಢತೆಯೊಂದು ಅವಳ ಮೊಗದಲ್ಲಿ ಮೂಡಿತ್ತು.
‘ಆಗಲಿ ಅತ್ತೆ ಆ ಕಳೆಯನ್ನು ಕಿತ್ತು ಬಿಸುಟುತ್ತೇನೆ. ನನ್ನದಲ್ಲದ ತಪ್ಪಿನ ಹೊರೆ ನಾನೇಕೆ ಹೊತ್ತು ಬಾಳು ಹಾಳುಮಾಡಿಕೊಳ್ಳಲಿ.ನನಗಿರುವ ಮಾನಸಿಕ ತೊಳಲಾಟವೀಗ ಬಗೆಹರಿಯಿತು.ಥಾಂಕ್ಸ ಅತ್ತೆ’ ಎನ್ನುತ್ತ ಮೆಲ್ಲಗೆ ನನ್ನ ಕಾಲಿಗೆ ಬಾಗಿದಳು.‘ಹುಚ್ಚು ಹುಡುಗಿ’ ಎಂದು ಮಮತೆಯಲ್ಲಿ ತಬ್ಬಿದೆ.. ಅಷ್ಟರಲ್ಲಿ ‘ಇದೇನಿದು ಅತ್ತೆ ಸೊಸೆ ಎಷ್ಟು ಬೇಗ ಇಷ್ಟೊಂದು ಆಪ್ತರಾಗಿದ್ದೀರಿ’..ಎನ್ನುತ್ತಾ ಬಂದ ರವಿ.
‘ಏನಿಲ್ಲಾ ನಾಳೆ ಶಿಮ್ಲಾಕ್ಕೆ ಹನಿಮೂನಿಗೆ ಅಂತ ನಿನ್ನನ್ನೂ ಸುಮಂತನನ್ನೂ ಕಳಿಸುತ್ತೇವೆ ಎಂದಿದ್ದೇ ತಡ ಖುಷಿಯಾಗಿದೇರಿ ನಮ್ಮ ಹುಡುಗಿಗೆ’ ಎಂದೆ.‘ಛೀ ಹೋಗಿ ಅತ್ತೆ’ ಎನ್ನುತ್ತಾ ನಾಚಿ ದೀಪ್ತಿ ತಾರಸಿಯಿಂದಿಳಿದು ನಡೆದಳು. ನಾನು ಸುಮಂತನ ಮೆಸೇಜಿಗೆ ಉತ್ತರ ಟೈಪ್ ಮಾಡಲಾರಂಭಿಸಿದೆ…
******
1 thought on “ತರಹರಿಕೆ”
ಗಂಡಸರ ಕಾಮಭರಿತ ನಡವಳಿಕೆ ಎಳೆವಯಸ್ಸಿನ ಹುಡುಗಿಯರ ಮನಸ್ಸಿನ ಮೇಲಾಗುವ ಪರಿಣಾಮವನ್ನು ಸಮರ್ಥವಾಗಿ ಕಥೆ ತೆರೆದಿಟ್ಟಿದೆ. ಮನದಾಳದಲ್ಲಿ ಬೇರೂರಿದ ಅಂತಹ ನೋವನ್ನು, ಭಯವನ್ನು ಪ್ರೀತಿಯ ಸಾಂತ್ವನದ ಮಾತುಗಳಷ್ಟೇ ತೊಡೆದುಹಾಕಬಲ್ಲವು. ಅದನ್ನು ಅರ್ಥಮಾಡಿಕೊಂಡು ನಡೆಯುವ ಮನಸ್ಸುಗಳೂ ಮನೆಯೊಳಗಿರಬೇಕು ಅಷ್ಟೆ. ಮುಕ್ತ ಮಾತಿನಿಂದ ಹಳಿಗೆ ಬಂದ ನವದಂಪತಿಗಳ ಬದುಕು ಸುಖಾಂತ್ಯವಾದುದು ನೆಮ್ಮದಿ ತಂದಿತು.
ಒಳ್ಳೆಯ ಕಥೆಯನ್ನು ಕೊಟ್ಟ ಕಥೆಗಾರ್ತಿಗೆ ಅಭಿನಂದನೆಗಳು.