(ಹಾಸ್ಯ ಬರಹ) ಚಿತ್ರ: ಕಾರ್ತಿಕ್ ವೇಂಕಿ
ಬೆಳ್ಳಿರೇಖೆಯಂತೆ ಉದ್ದಕ್ಕೆ ತಲೆತುಂಬ ಬೇಕಾಬಿಟ್ಟಿ ಬೆಳೆದುನಿಂತ ಬೆಳ್ಳನೆಯ ಕೂದಲನ್ನು ಕೈಯಿಂದ ಸವರುವಾಗೆಲ್ಲ ನನಗೆ ಕೊರೊನಾ ಸಂಕಷ್ಟ ನೆನಪಾಗುತ್ತಿತ್ತು. ಅದಿಲ್ಲವಾದರೂ ನಮ್ಮ ದೈನಂದಿನ ಆಗುಹೋಗುಗಳ ಮಧ್ಯೆ ವೈರಿಯಂತೆ ವಕ್ಕರಿಸಿದ ಈ ಮಹಾಮಾರಿ ಎಲ್ಲ ಕ್ಷೇತ್ರಗಳಲ್ಲಿ ತನ್ನ ಪ್ರಭಾವ ಬೀರಿದ್ದನ್ನು ಯಾರೂ ಮರೆಯುವಂತಿಲ್ಲ ಬಿಡಿ. ತಲೆತುಂಬ ಕೂದಲು ಅನ್ನುವ ಕಲ್ಪನೆಯಲ್ಲಿ ನೀವಿಳಿದು ನನ್ನನ್ನು ಮುಖಾಮುಖಿ ಕಂಡರೆ ಬೇಸ್ತುಬಿದ್ದೀರಿ. ಯಾಕೆಂದರೆ ನನ್ನ ನೆತ್ತಿಯ ನಡುಭಾಗ ಪೂರ್ತಿ ಚದುರಿದ ಹುಲ್ಲುಗಾವಲನ್ನು ನೆನಪಿಗೆ ತಂದರೆ ನೆತ್ತಿಯ ಹಿಂಭಾಗ ವೃತ್ತಾಕಾರದಲ್ಲಿ ಬೆಳ್ಳಗೆ ನುಣ್ಣನೆ ಕನ್ನಡಿಯಂತೆ ಹೊಳೆಯುತ್ತದೆ. ಕೆಲವೊಂದು ಸಮಾರಂಭಗಳಲ್ಲಿ ವೇದಿಕೆಯ ಮೇಲೆ ಗುಂಪಿನ ಮಧ್ಯೆ ಇದ್ದ ನನ್ನ ನೆತ್ತಿಯ ಭಾಗ ಛಾಯಾಗ್ರಾಹಕನ ಅಪ್ಪಿತಪ್ಪಿನಿಂದ ಸೆರೆಹಿಡಿಯಲ್ಪಟ್ಟು ನಾನದನ್ನು ನಂತರ ನೋಡಿದ ಸಂದರ್ಭಗಳಲ್ಲಿ ಅದು ನಾನಲ್ಲ ಎಂದು ಬಹಳಷ್ಟು ಸಲ ವಾದಿಸಿದ್ದಿದೆ. ಕಾರಣ ನನ್ನ ನೆತ್ತಿಯನ್ನು ನಾನು ಯಾವತ್ತೂ ಅಷ್ಟೊಂದು ಬಟಾಬಯಲಾಗಿ ಕಂಡದ್ದಿಲ್ಲ. ಅದುಬಿಟ್ಟರೆ ಸುತ್ತಲೂ ಕೂದಲಿನ ಸಮೃದ್ಧ ಬೆಳೆ. ಹೀಗಾಗಿ ಬೆಳೆದ ಕೂದಲು ಕುತ್ತಿಗೆಯ ಹಿಂಭಾಗ ಮತ್ತು ಕಿವಿಗಳನ್ನು ಮನಸೋಇಚ್ಛೆಮುಚ್ಚಿ ತನ್ನ ಪ್ರತಾಪ ತೋರಿಸಿತ್ತು. ಇಂತಹ ಸಂದರ್ಭದಲ್ಲಿ ಕೂದಲಿಗೆ ಎಣ್ಣೆ ಜಡಿದು ಶಿಸ್ತಾಗಿ ಬಾಚಿದಾಗ ಕಿವಿಗಳ ಮೇಲಿಂದ ಎರಡೂ ಕಡೆ ಇಳಿಬಿದ್ದ ಕೇಶವಿನ್ಯಾಸದಲ್ಲಿ ಖ್ಯಾತ ಸಾಹಿತಿ ಹಾಮಾನ ಹಾದುಹೋದ ಸಂಗತಿಗೆ ನಾನು ಒಳಗೊಳಗೆ ಖುಷಿ ಪಟ್ಟಿದ್ದೆ. ಹಾಗಂತ ಯಾವತ್ತೂ ಅಷ್ಟು ಕೂದಲಿನೊಂದಿಗೆ ಏಗದ ನನಗದು ನಿತ್ಯ ಕಿರಿಕಿರಿ ಅನಿಸತೊಡಗಿತ್ತು.ಯಾವಾಗ ಇದರಿಂದ ಮುಕ್ತಿ ಸಿಕ್ಕೀತು ಅನ್ನುವ ಹವಣಿಕೆಯಲ್ಲೇ ತಿಂಗಳುಗಳು ಸದ್ದಿಲ್ಲದೆ ಗತಿಸಿದ್ದವು.
ಈ ಮಧ್ಯೆ ಕೆಲವೊಂದು ಚಿತ್ರವಿಚಿತ್ರ ಸಂಗತಿಗಳು ವರದಿಯಾಗಿದ್ದವು. ಸೆಲೆಬ್ರಿಟಿಗಳೆನಿಸಿಕೊಂಡವರು ತಮ್ಮ ಮೆಚ್ಚಿನ ಮಡದಿಯರಿಂದ ತಲೆಗೆ ಕತ್ತರಿ ಪ್ರಯೋಗ ಮಾಡಿಸಿದ ಚಿತ್ರಗಳು ದಿನಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ರಂಜನೀಯವಾಗಿ ಹರಿದು ಬಂದಾಗ ನೋಡಿದ ನನ್ನವಳು ಉತ್ತೇಜಿತಳಾಗಿ ‘ನಾನೂ ನಿಮ್ಮ ಹೇರ್ ಕಟ್ ಮಾಡಲೇ..’ ಎಂದು ಪ್ರೀತಿಯಿಂದ ಉಲಿದಿದ್ದಳು. ಹಾಲಿನ ಪ್ಯಾಕೆಟ್‍ಗಳನ್ನು ಕತ್ತರಿಸಲು ಇಟ್ಟ ಚೋಟುದ್ದದ ಕತ್ತರಿಯಿಂದ ನನ್ನ ಭೀಮಗಾತ್ರದ ಕೂದಲನ್ನು ಕತ್ತರಿಸುವ ಪರಿಯನ್ನು ಕಲ್ಪಿಸುತ್ತಲೇ ನಾನು ನಯವಾಗಿ ನಿರಾಕರಿಸಿದ್ದೆ. ‘ಯಾಕೆ ನನ್ನ ಮೇಲೆ ಅಷ್ಟೂ ನಂಬಿಕೆಯಿಲ್ವ…’ ಎನ್ನುವ ಅವಳ ಪ್ರತಿಮಾತಿಗೆ ಇರುವ ಇಷ್ಟು ನಂಬಿಕೆಯನ್ನು ಪರೀಕ್ಷೆಗೆ ಒಡ್ಡುವುದು ಬೇಡ ಎಂದರಿತ ನಾನು ಜಾಣಮೌನಕ್ಕೆ ಶರಣಾಗಿದ್ದೆ. ಬರಹಗಾರ್ತಿಯೊಬ್ಬರು ತಮ್ಮ ಕೇಶಾಲಂಕಾರವನ್ನು ತಾವೇ ಮಾಡಲು ಹೋಗಿ ಸೋತು ಕೊನೆಗೆ ಗಂಡನಿಗೆ ತಲೆಕೊಟ್ಟ ವಿಚಾರವನ್ನು ಬರಹದ ಮೂಲಕ ಹೊರಹಾಕಿದಾಗ ಓದಿದ ನಾನು ತಪ್ಪಿಯೂ ಅದನ್ನು ಹೆಂಡತಿಗೆ ಹೇಳಲಿಲ್ಲ. ಅವಳು ನನಗೆ ಈ ವಿಷಯದಲ್ಲಿ ದುಂಬಾಲು ಬಿದ್ದಾಳು ಅನ್ನುವ ಅಂಜಿಕೆಯಲ್ಲ; ಬದಲು ಸುಮ್ಮನೆ ರಗಳೆ ಯಾಕೆ ಎನ್ನುವ ಸಮಜಾಯಿಷಿ.
ನಾನು ಸಣ್ಣವನಿದ್ದಾಗ ನಮ್ಮ ಹಳ್ಳಿಪೇಟೆಯಲ್ಲಿ ದೇವು ಎಂಬ ಒಬ್ಬ ಬಡ ಕ್ಷೌರಿಕನಿದ್ದ. ಫ್ಯಾಷನ್ ಎನ್ನುವ ವಿಷಯ ಅಷ್ಟಾಗಿ ಪ್ರಚಲಿತವಿರದ ಆ ಕಾಲಘಟ್ಟದಲ್ಲಿ ನನ್ನಂತಹ ಸಣ್ಣ ಮಕ್ಕಳನ್ನು ಕೇಶಮುಂಡನಕ್ಕೆ ಅವನಲ್ಲಿ ದಬ್ಬುತ್ತಿದ್ದರು. ಮೂರು ಗೋಡೆಗಳ, ಮುಂಭಾಗದಲ್ಲಿ ಮರದ ಹಲಗೆಗಳಿಂದ ಮುಚ್ಚುವ ಏರ್ಪಾಟಿದ್ದ, ಹುಲ್ಲಿನ ಮಾಡಿನ ಸಣ್ಣ ಕೋಣೆಯೇ ಅವನ ಸಲೂನು. ಆ ಕೋಣೆ ನನ್ನ ಪಾಲಿಗಂತೂ ನರಕತಾಣವಾಗಿತ್ತು. ನನ್ನ ತಲೆಕೂದಲು ಆಗ ಒಂದಿಷ್ಟು ಬಿರುಸಾಗಿ, ನಿಬಿಡವಾಗಿ ಬೆಳೆಯುತ್ತಿತ್ತು. ತಿಂಗಳೊಂದಾವರ್ತಿ ಕಟ್ಟಿಂಗಿಗೆ ದುಡ್ಡು ದಂಡ ಎಂದರಿತ ಹಿರಿಯರು ಆಗೆಲ್ಲ ಮಕ್ಕಳಿಗೆ ಮೆಷಿನ್ ಹಾಕಿಸಿ ಸಣ್ಣಗೆ ಬೋಳಿಸಲಿಕ್ಕೆ ಹೇಳುತ್ತಿದ್ದರು. ಕ್ಷೌರಿಕನಿಗೆ ತಲೆಕೊಟ್ಟ ನಮಗೆ ಅದು ಗೊತ್ತಾಗುತ್ತಿದ್ದದ್ದು ತಲೆ ಮೇಲೆ ಕೈಯಾಡಿಸಿದಾಗಲೇ. ಹಾಗೆಂದು ನಾವದಕ್ಕೆ ಪ್ರತಿರೋಧಿಸುವುದಕ್ಕೆ ಹೋಗುತ್ತಿದ್ದಿಲ್ಲ. ಕಾರಣ ಎಲ್ಲರ ಅವತಾರವೂ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತಿತ್ತು. ಯಾವತ್ತೋ ಸಾಣೆಹಿಡಿದ ಬಡ್ಡು ಕತ್ತರಿಯಿಂದ ಅವನು ಕೂದಲು ಕತ್ತರಿಸುವಾಗ ಇಲ್ಲಾ ತಲೆಯ ಮೇಲೆ ಮೆಷಿನ್ ಓಡಿಸುವಾಗೆಲ್ಲ ನನಗೆ ಯಮಯಾತನೆಯಾಗುತ್ತಿತ್ತು. ಆಗೆಲ್ಲ ಅವನು ತನ್ನ ಸಲಕರಣೆಗಳ ದೋಷವನ್ನು ನಿರಾಯಾಸವಾಗಿ ನಮ್ಮ ಕೂದಲಿಗೆ ವರ್ಗಾಯಿಸುತ್ತಿದ್ದ. ಎಂಥ ದಟ್ಟ ಕೂದಲು ಮಾರಾಯ ನಿನ್ನದು ಎನ್ನುವ ಭಾವದಲ್ಲಿ ಒಂದಿಷ್ಟು ಹೆಚ್ಚಿಗೆ ಹಣವನ್ನೂ ಪೀಕುತ್ತಿದ್ದ. ಇದು ಒಂದೆಡೆಯಾದರೆ ಅವನ ಸಲೂನಿನಲ್ಲಿರುವ ಓಬಿರಾಯನ ಕಾಲದ ಮರದ ಕುರ್ಚಿ ತಿಗಣೆಗಳ ಆವಾಸಸ್ಥಾನವಾಗಿತ್ತು. ನಾವು ಕೂತರೆ ಸಾಕು ಮನುಷ್ಯರ ವಾಸನೆಯನ್ನು ಹಿಡಿದು ಬರುವ ರಾಕ್ಷಸರಂತೆ ಅವು ಹೊರಬಂದು ಸಿಕ್ಕಲ್ಲೆಲ್ಲ ಕಚ್ಚುತ್ತಿದ್ದವು. ನವೆಯಿಂದ ತುರಿಸಲು ನಾವೊಂದಿಷ್ಟು ಅಲುಗಾಡಿದರೂ ಸಾಕು ಅವನು ತಲೆಯನ್ನು ಅಮುಕಿ ಸ್ವಸ್ಥಾನಕ್ಕೆ ತಿರುವುತ್ತಿದ್ದ. ಒಟ್ಟಿನಲ್ಲಿ ‘ಕಷ್ಟ’ವೆನ್ನುವ ಕ್ರಿಯೆ ನಮಗೆ ಆಗ ನಿಜಕ್ಕೂ ಕಷ್ಟದಾಯಕವಾಗಿತ್ತು.
ಅಪರಕರ್ಮದಲ್ಲಿ ತಲೆಯನ್ನು ನುಣ್ಣಗೆ ಬೋಳಿಸುವುದು ಒಂದು ಧರ್ಮದವರ ಸಂಪ್ರದಾಯ. ಇದು ದುಃಖದ ಸಂಕೇತವಿರಲೂಬಹುದು ಅಥವಾ ನಮ್ಮ ಮನೆಯಲ್ಲಿ ಸಾವು ಸಂಭವಿಸಿದೆ ಎಂದು ಸಾರುವ ಜಾಹೀರಾತು ಇರಬಹುದು. ಇಂತಹ ಪರಿಸ್ಥಿತಿಗೆತಲೆಯೊಡ್ಡಿದ ನಾನು ನನ್ನ ಮುಖವನ್ನು ಕನ್ನಡಿಯಲ್ಲಿ ಕಂಡಾಗ ವಿಚಿತ್ರ ಅನುಭವವಾಗಿತ್ತು. ಎಲ್ಲವನ್ನೂ ತ್ಯಜಿಸಿದ ವೈರಾಗ್ಯಭಾವ ತಲೆಯೇರಿ ಕೂತಂತೆ ಭಾಸವಾಗಿತ್ತು. ಆದರೆ ನಾನು ಯಾವತ್ತೂ ದೇವರಿಗೆ ಕೇಶಮುಂಡನದ ಹರಕೆ ಹೊತ್ತಿಲ್ಲ. ಬಹಳಷ್ಟು ದೇವಸ್ಥಾನಗಳಲ್ಲಿ ಜಾರಿಯಲ್ಲಿರುವ ಈ ಪದ್ಧತಿ ಈಗಲೂ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ. ಅದು ಭಕ್ತರ ನಂಬಿಕೆಯೋ, ಭಕ್ತಿಯ ಪರಾಕಾಷ್ಠೆಯೋ ನನಗಿನ್ನೂ ಅರ್ಥವಾಗಿಲ್ಲ.
ಬಗೆಬಗೆಯ ಕೇಶವಿನ್ಯಾಸಗಳು ಈಗಂತೂ ನವಯುವಕರಲ್ಲಿ ಒಂದುರೀತಿಯ ಟ್ರೆಂಡ್ ಆಗಿಬಿಟ್ಟಿದೆ. ಸುತ್ತಲೂ ಸಣ್ಣಗೆ ಬೋಳಿಸಿ ನೆತ್ತಿಯ ಮೇಲೆ ನಿಮಿರಿನಿಲ್ಲುವಂತೆ ಇಲ್ಲಾ ಉದ್ದಕ್ಕೆ ಬಿಟ್ಟ ಕೂದಲವಿನ್ಯಾಸ, ಸುತ್ತಲೂ ಕೂದಲಲ್ಲೇ ಸಣ್ಣಗೆ ಮಡಿಗಳನ್ನು ಕೊರೆದ ರೀತಿ, ಒಂದುಭಾಗದಲ್ಲಿ ಕಟ್ಟಿಂಗ್ ಮಾಡಿ ಇನ್ನೊಂದುಭಾಗದಲ್ಲಿ ಮರೆತಂತೆ ಬಿಟ್ಟ ಕೂದಲು, ಚಿತ್ರವಿಚಿತ್ರ ಆಕಾರಗಳನ್ನು ತಲೆಯ ಕೂದಲಲ್ಲಿ ಸೃಷ್ಟಿಸುವ ಜಾಣ್ಮೆ ….ಒಂದೆರಡಲ್ಲ ಸಾಕಷ್ಟು ವಿನ್ಯಾಸಗಳು ದಿನಬೆಳಗಾದಂತೆ ನಮ್ಮೆದುರು ತೆರೆದುಕೊಳ್ಳುತ್ತಲೇ ಇವೆ. ಕಂಡ ನಾವು ಸಣ್ಣಗೆ ನಕ್ಕು ಅನುಮೋದಿಸುವ ಪರಿಯೂ ಮಾಮೂಲಿಯಾಗಿಬಿಟ್ಟಿದೆ. ನಾಯಕ ನಟರ ಕೇಶವಿನ್ಯಾಸ ಒಂದು ಕಾಲದಲ್ಲಿ ಮಾದರಿಯಾಗಿತ್ತು. ಆ ಮಧ್ಯೆ ಹಿಪ್ಪಿಯೆಂಬ ಅವತಾರವೂ ಬಂದುಹೋಯಿತು. ಇವೆಲ್ಲದರ ನಡುವೆ ನಾನು ಮಾತ್ರ ಯಾವತ್ತೂ ಕೇಶವಿನ್ಯಾಸಗಳಿಗೆ ಸೋಲದೆ ಸಾಮಾನ್ಯ ಕ್ಷೌರಕ್ಕೆ ತಲೆಬಾಗಿದ್ದೇನೆ. ಈಗಂತೂ ಸಾಮಾನ್ಯ ಕ್ಷೌರಕ್ಕೂ ಸಿಗದಷ್ಟು ಬೋಳಾಗಿದ್ದೇನೆ ಅನ್ನಿ. ತಲೆ ಬೋಳಾಗುವುದು ಸಿರಿವಂತಿಕೆಯ ಲಕ್ಷಣವಂತೆ. ಆ ಲಕ್ಷಣದಲ್ಲಿ ಸುತ್ತಲೂ ಬೆಳೆಯುವ ಕೂದಲ ಮಧ್ಯೆ ನನ್ನ ಹಣೆ ಮೇಲ್ಮುಖವಾಗಿ ವಿಸ್ತರಿಸುತ್ತಲೇ ಸಾಗಿದೆ.
ಕಟ್ಟಿಂಗ್ ಸಲುವಾಗಿ ನಾನು ಲಾಕ್‍ಡೌನ್ ಸಡಿಲಿಕೆಯ ಹಾದಿಯನ್ನು ಕಾಯುತ್ತಲೇ ಇದ್ದೆ. ಲಾಕ್‍ಡೌನ್ ಸಡಿಲಿಕೆಯಾದರೂ ನಾಪಿತರಿಗೆ ತಮ್ಮ ವೃತ್ತಿಯನ್ನು ಆರಂಭಿಸಲು ಅನುಮತಿ ದೊರೆತಿರಲಿಲ್ಲ. ಒಂದಿಷ್ಟು ದಿನ ಸರಿದಂತೆ ನಿಧಾನಕ್ಕೆ ಕ್ಷೌರಿಕರ ಅಂಗಡಿಗಳು ಒಂದೊಂದಾಗಿ ತೆರೆದುಕೊಳ್ಳತೊಡಗಿದವು. ಆದರೆ ಗಿರಾಕಿಗಳಿಲ್ಲದೆ ಅವು ಬಿಕೋ ಅನ್ನುತ್ತಿದ್ದವು. ಎಲ್ಲರಿಗೂ ಕೊರೊನಾ ಸೋಂಕಿನ ಭಯ. ಆ ತಾಣವಂತೂ ಸಲೀಸಾಗಿ ಸೋಂಕನ್ನು ಹರಡಬಹುದೆಂಬ ಶಂಕೆ ಬೇರೆ. ಹೀಗಾಗಿ ಯಾರಾದರೂ ಕಟ್ಟಿಂಗ್ ಮಾಡಿಸಿಕೊಳ್ಳುತ್ತಿದ್ದಾರೋ ಎನ್ನುವುದನ್ನು ದೃಢಪಡಿಸಿಕೊಂಡು ಜನ ಮೆಲ್ಲನೆ ಆ ಕಡೆ ಹೆಜ್ಜೆ ಇಡುತ್ತಿದ್ದರು. ನಾನೂ ಒಂದಿಷ್ಟು ದಿನ ಇಂತಹ ಗೂಢಚರ್ಯೆ ಮಾಡಿ ಒಂದೊಳ್ಳೆಯ ದಿನ ಪರಿಚಿತ ಸಲೂನಿಗೆ ಕಾಲಿರಿಸಿದೆ. ಬಾಗಿಲಲ್ಲೇ ನನ್ನನ್ನು ಎದುರುಗೊಂಡ ಸಲೂನು ಮಾಲೀಕ ಮಾಮೂಲಿನಂತೆ ತುಂಬು ನಗುವಿನಿಂದ ಸ್ವಾಗತಿಸಿದ. ಆದರೆ ನನ್ನ ಮುಖಕ್ಕೆ ಅಮರಿಕೊಂಡ ಮಾಸ್ಕ್‌ನಿಂದಾಗಿ ಅವನು ನನ್ನನ್ನು ಗುರುತಿಸಲಿಲ್ಲ ಅನ್ನುವುದು ಗೊತ್ತಾಯಿತು. ನಾನೊಂದು ಮಾಮೂಲಿನ ನಮಸ್ಕಾರ ಎಸೆದಾಗ ಫಕ್ಕನೆ ಎಚ್ಚೆತ್ತವನಂತೆ ‘ಅರೆ ನೀವಾ ಸಾರ್…. ಗೊತ್ತೇ ಆಗಲಿಲ್ಲ. ಬಹಳ ಅಪ್ರೂಪ ಆಗಿಬಿಟ್ರಿ. ನಿಮ್ಮ ತಲೆ ಮೇಲೆ ಇಷ್ಟು ಕೂದಲನ್ನ ನಾನು ಕಂಡೇ ಇಲ್ಲ ಬಿಡಿ ಸಾರ್..’ ಅಂದ. ಎಂದೂ ಅತಿಯಾಗಿ ಮಾತನಾಡುವ ಪುಣ್ಯಾತ್ಮ ಸಲೂನು ತೆರೆದದ್ದೇ ವಾರದ ಹಿಂದೆ ಅಂತ ಮಾತಿನ ಭರದಲ್ಲಿ ಮರೆತೇ ಬಿಟ್ಟಿದ್ದ. ಮುಂದೆ ಮಾತಿಗೆ ಅವಕಾಶ ಕೊಡದಂತೆ ‘ಒಳಗೆ ನಡೀರಿ ಸಾರ್’ ಅಂದ. ಅಷ್ಟರಲ್ಲಿ ಒಳಕೋಣೆಯ ಬಾಗಿಲಲ್ಲಿ ವ್ಯಕ್ತಿಯೊಬ್ಬ ಪ್ರತ್ಯಕ್ಷ್ಯನಾದ.
ಅವನು ನನ್ನನ್ನು ಕಂಡವನೇ ಒಂದು ಮಿಕ ಸಿಕ್ಕ ಖುಷಿಯಲ್ಲಿ ಪರಿಚಿತರಂತೆ ‘ಬನ್ನಿ ಬನ್ನಿ ಸಾರ್..’ ಅಂತ ಕೆಂಪುಹಾಸಿನ ಸ್ವಾಗತ ಕೋರಿದ. ನಾನು ನನ್ನ ಕಟ್ಟಿಂಗ್ ಬಗ್ಗೆ ವಿವರ ಕೊಡಲು ಮುಂದಾದಾಗ ತಡೆದ ಅವನು ‘ಎಲ್ಲ ಕ್ಲೀನಾಗಿ ಮಾಡ್ತೀನಿ ಸಾರ್.. ನೀವು ಸುಮ್ನೆ ಬಂದು ಕೂತ್ಕೊಳ್ಳಿ ಅಷ್ಟೆ…’ ಅಂತ ಹುಕುಮಿಸಿದ. ಬೇರೆ ದಾರಿ ಕಾಣದೆ ಮಾಸ್ಕ್ ಕಿಸೆಯೊಳಗಿಟ್ಟು ಕಷ್ಟದ ಕುರ್ಚಿಯಲ್ಲಿ ಆಸೀನನಾದೆ. ಬೇರೆ ಸಮಯದಲ್ಲಾದರೆ ಹಾಗೆ ಕೂತ ತಕ್ಷಣ ನಾನು ನನ್ನ ಸರ್ವಸ್ವವನ್ನೂ ಮರೆತು ಅವನ ಕೈಚಳಕದಲ್ಲಿ ಕಣ್ಣುಮುಚ್ಚಿ ಯಾವುದೋ ಲೋಕದಲ್ಲಿ ವಿಹರಿಸುತ್ತಿದ್ದೆ. ಆದರೆ ಈಗ ಕೂತಲ್ಲಿ ನಿಂತಲ್ಲಿ ಕೊರೊನಾದ್ದೆ ಧ್ಯಾನವಾದ ಕಾರಣ ಮೈಯೆಲ್ಲ ಕಣ್ಣಾಗಿ ಎವೆಯಿಕ್ಕದೆ ಎಚ್ಚರವಾಗಿದ್ದೆ. ಒಳಗಿಂದ ಶುಭ್ರವಾದ ಮೇಲುಹೊದಿಕೆಯನ್ನು ತೆಗೆದು ಎರಡೆರಡು ಬಾರಿ ಕೊಡವಿ ನನ್ನ ಮೈಮುಚ್ಚಿದ ಅವನು ಮಾಸ್ಕ್ ಒಳಗಿಂದ ಮಾತನಾಡಲು ಶುರುವಿಟ್ಟ. ಮಾತು ಬೇಡವೆನಿಸಿದ ನನಗೆ ಅವನ ಮಾತಿನ ಮೋಡಿ ಮರುಳು ಮಾಡಿತೋ ಏನೋ ಅವನು ಮಾತನಾಡುವುದನ್ನು ತಡೆಯಬೇಕೆಂದವನು ಸುಮ್ಮನಾಗಿಬಿಟ್ಟೆ. ಸಲೂನಿನಲ್ಲಿ ಸಿಗುವಷ್ಟು ತಾಜಾ ಸುದ್ದಿಗಳು, ಯರ್ಯಾರದ್ದೋ ಕಥೆಗಳು ನಿಮಗೆ ಬೇರೆಲ್ಲೂ ಸಿಗೊಲ್ಲ. ಅದೊಂದು ಸುದ್ದಿ ಕೇಂದ್ರ. ಸುದ್ದಿಗಳಿಗೆ ರೆಕ್ಕೆ ಮೂಡಿ ಅಲ್ಲಿ ಅವು ಹಾರಾಡುತ್ತಿರುತ್ತವೆ. ಅವಕ್ಕೆಲ್ಲ ನೀವು ಕಿವಿಯಾಗಬೇಕು ಅಷ್ಟೆ.
ತಾನು ಸುತ್ತಾಡಿದ ಸ್ಥಳಗಳು, ಯಾವೆಲ್ಲ ದೊಡ್ಡ ದೊಡ್ಡ ಸಲೂನು, ಸ್ಪಾಗಳಲ್ಲಿ ಪಡೆದ ಅನುಭವ, ಅವೆಲ್ಲವನ್ನೂ ಬಿಟ್ಟು ಸ್ವಂತ ಕ್ಷೌರದಂಗಡಿ ತೆಗೆದು ಸಾಕಾಗಿ ಮುಚ್ಚಿದ ಕಥೆ…. ಒಂದೆರಡಲ್ಲ ನನ್ನ ತಲೆಗೆ ಮೆಷಿನ್ ಇಟ್ಟು ಸಣ್ಣಗೆ ಬೋಳಿಸುತ್ತಾ ಹೇಳತೊಡಗಿದ. ಗಳಿಗೆಗೊಮ್ಮೆ ನಾನು ಕನ್ನಡಿಯಲ್ಲಿ ನನ್ನ ತಲೆಯನ್ನು ನೋಡುತ್ತಲೇ ಇದ್ದೆ. ಯಾಕೆಂದರೆ ಅವನ ಮಾತಿನ ಭರದಲ್ಲಿ ನನ್ನ ತಲೆಯ ಕೂದಲು ಪೂರಾ ಶಿಕಾರಿಯಾಗಬಹುದು ಅನ್ನುವ ಅಂಜಿಕೆಯಿತ್ತು. ಸುತ್ತ ಮೆಷಿನ್ ಎಳೆದ ಅವನು ಗುಡ್ಡದ ತುದಿಯಲ್ಲಿ ವಿರಳವಾಗಿ ಎತ್ತರಕ್ಕೆ ಬೆಳೆದ ಹುಲ್ಲಿನಂತೆ ಒಂದಷ್ಟು ಕೂದಲನ್ನು ಹಾಗೆಯೇ ಬಿಟ್ಟಿದ್ದ. ಅದನ್ನು ಪ್ರಶ್ನಿಸಿದಾಗ ‘ಸಾರ್… ಚಂದ ಕಾಣ್ತಿದೆ. ಹೀಗೇ ಇರ್ಲಿ’ ಅಂತ ಕತ್ತರಿಯೊಂದಿಗೆ ಮುಂದಿನ ಟ್ರಿಮ್ ಕಾರ್ಯಕ್ಕೆ ಅಣಿಯಾದ. ಸವರಿದ ಕೂದಲನ್ನು ಮತ್ತೆ ಕೂಡಿಸಲಾಗುತ್ತದೆಯೇ? ಎಂಥ ಅಸಾಮಿ ಸಿಕ್ಕಿದ ಅಂತ ಮನಸ್ಸಿನಲ್ಲಿಯೇ ನಾನವನನ್ನು ಶಪಿಸತೊಡಗಿದೆ. ಇದ್ಯಾವುದನ್ನೂ ಗಮನಿಸದ ಅವನ ಮಾತಿನ ರೈಲು ನಿಲ್ದಾಣವಿಲ್ಲದೆ ಓಡುತ್ತಲೇ ಇತ್ತು.
ಅವನ ಮಾತಿನ ಮಧ್ಯೆ ಕನ್ನಡದ ಕಣ್ಮಣಿ, ನಟಸಾರ್ವಭೌಮ ಡಾI ರಾಜ್‍ಕುಮಾರ್ ವಿಷಯ ನುಸುಳಿದ್ದರಿಂದ ನನ್ನ ಕಿವಿ ಚುರುಕಾದವು.
‘ಸಾರ್.. ನಾನು ಡಾI ರಾಜ್‍ಕುಮಾರ್ ಅವ್ರ ಕಟ್ಟಿಂಗ್ ಮಾಡಿದ್ದೀನಿ ಗೊತ್ತ… ಸದಾಶಿವನಗರದ ಅವ್ರ ಮನಿಗೆ ಹೋಗಿ ಮಾಡಿದ್ದೆ ಸಾರ್. ಎಂಥ ಒಳ್ಳೆ ಜನ ಸಾರ್ ಅವ್ರು. ನನ್ನ ಕಟ್ಟಿಂಗ್ ಮೆಚ್ಚಿ ಕೈಗೆಮುತ್ತಿಟ್ಟರು ಸಾರ್…’ ಅಂತ ರಾಜ್ ಮುತ್ತಿಕ್ಕಿದ ಬಲಗೈಯಹಿಂಗೈ ಜಾಗವನ್ನು ಒತ್ತಿ ಒತ್ತಿ ತೋರಿಸಿದ. ಅವನ ಮಾತಿನಲ್ಲಿ ಎಷ್ಟು ನಿಜವಿತ್ತೋ ಗೊತ್ತಿಲ್ಲ. ಆದರೆ ಅವನ ನುಡಿಯುವ ಮಾತಿನಲ್ಲಿ, ಕಾಣುವ ಕಣ್ಣಲ್ಲಿ ಮಹಸ್ಸಾಧನೆ ಗೈದ ಸಂಭ್ರಮವಿತ್ತು. ಕೇಳಿದ ನಾನೂ ಪುಳಕಿತನಾದೆ.
‘ಅಂದ ಹಾಗೆ ನಿನ್ನ ಹೆಸರೇನಪ್ಪ…’ ಕೇಳಿದೆ.
‘ರಾಜ್’ ಅಂದ.
ಮುಂದೆ ನನ್ನ ಮಾತೇ ನಿಂತುಹೋಯಿತು.
ತಲೆಯ ಮೇಲೆ ಒಂದಿಷ್ಟು ಕೂದಲು ಉಳಿಸಿ ಹಣಿಗೆಗೆ ಸಿಗದ ಅವುಗಳನ್ನು ಒಪ್ಪವಾಗಿ ಬಾಚಿ
‘ಆಯಿತು ಸಾರ್. ಒಂದು ಹತ್ತು ದಿನ… ನೀಟಾಗಿ ಎಲ್ಲ ಬಂದು ಬಿಡುತ್ತೆ’ ಅಂದ. ಅವನ ಮಾತಿನಲ್ಲಿ ವಿಡಂಬನೆ ಇದ್ದಂತೆ ಅನಿಸಿತು. ಅವನು ಆ ಮಾತು ಹೇಳುವ ಮುಂಚೆಯೇ ನಾನು ನನ್ನ ಈ ನವೀನ ಶೈಲಿಯ ಕ್ಷೌರದೊಂದಿಗೆ ಹತ್ತು ದಿನ ಕಟ್ಟಿಂಗ್ ಕ್ವಾರಂಟೈನ್‍ನಲ್ಲಿರಬೇಕೆಂದು ಆಗಲೇ ತೀರ್ಮಾನಿಸಿಯಾಗಿತ್ತು.
ಮನೆಗೆ ಬಂದು ಕನ್ನಡಿ ಮುಂದೆ ನಿಂತಾಗ ಕಂಡದ್ದೇನು!
ತಲೆಯ ಪಕ್ಕದಿಂದ ಕಿವಿಯವರೆಗೆ ಕತ್ತರಿಗೆ ಸಿಗದೆ ಇಳಿಬಿದ್ದ ಉದ್ದನೆಯ ಹತ್ತಿಪ್ಪತ್ತು ಕೂದಲುಗಳು ನನ್ನ ಕಂಡು ಅಣಕಿಸತೊಡಗಿದವು. ಮೀಸೆ ಕತ್ತರಿಸುವ ನನ್ನ ಕತ್ತರಿಯಿಂದ ಅವನ್ನೆಲ್ಲ ನಾಜೂಕಾಗಿ ಒಂದು ಮಟ್ಟಕ್ಕೆ ಕತ್ತರಿಸುವಲ್ಲಿ ಸುಸ್ತಾಗಿಬಿಟ್ಟೆ. ಆದರೆ ಯಾಕೋ ತಲೆಯ ಮೇಲೆ ಟೋಪಿ ಇಟ್ಟಂತೆ ಅವನು ಕೂದಲು ಉಳಿಸಿದ ಪರಿ ನನಗೆ ಸರಿಕಾಣಲಿಲ್ಲ. ಮುಂದೊಮ್ಮೆ ಅಲ್ಲಿಗೆ ಹೋದಾಗ ಅವನು ಸಿಗದಿರಲಿ ಅಂತ ಕಾಣದ ದೇವರಿಗೆ ಕೈಮುಗಿದೆ.
*************************
1 thought on “ಕಟ್ಟಿಂಗ್ ಪ್ರಹಸನ”
ಹಿರಿಯ ಮಿತ್ರರಾದ ಶ್ರೀ ಧರ್ಮಾನಂದ್ ಶಿರ್ವ ಅವರ ಕಟಿಂಗ್ ಪ್ರಹಸನ ತುಂಬಾ ಹಾಸ್ಯವಾಗಿದೆ.