(ಅನಿತಾ ಪಿ.ತಾಕೊಡೆ ಅವರು ರಚಿಸಿದ ‘ಮೋಹನ ತರಂಗ’ಕೃತಿಗೆ 2019-20ನೇ ಸಾಲಿನ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ರೂ. 25,000 ನಗದು ಪುರಸ್ಕಾರ ಲಭಿಸಿದೆ. ಅವರಿಗೆ ಅಭಿನಂದನೆಗಳು)
ಪುಸ್ತಕ: ಮಹಾಕಾಳಿ ಕೇವ್ಸ್ ನ ಮಹಾನುಭಾವ
ಲೇಖಕರು: ಅಶೋಕ್ ಸುವರ್ಣ
ಪ್ರಕಾಶಕರು: ಅಭಿಜಿತ್ ಪ್ರಕಾಶನ
ಪುಟ: 52. ಬೆಲೆ: ರೂ 100/-
ಯಾವುದೇ ರೀತಿಯ ಶೋಧಕಾರ್ಯಕ್ಕಿಳಿದ ಮೇಲೆ ಅದು ಯಶಸ್ವಿಯಾಗಬೇಕಾದರೆ ಅದಕ್ಕೆ ಬೇಕಾದ ಪುರಾವೆ ಮತ್ತು ಇನ್ನಿತರ ಬರೆಹದ ಅನುಕೂಲತೆಯೂ ಮುಖ್ಯವಾಗುತ್ತದೆ. ಅದರಲ್ಲಿ ಒಳಗೊಳ್ಳುವ ಆಕರಗಳು ಆಯಾ ವಸ್ತು-ವಿಷಯಕ್ಕನುಗುಣವಾಗಿ ಮುಖ್ಯವಾದ ದಾಖಲೆಗಳೊಂದಿಗೆ ರೂಪಿತವಾದರೆ ಮಾತ್ರ ಶೋಧ ಕಾರ್ಯ ಸಫಲಗೊಳ್ಳಲು ಸಾಧ್ಯ. ಸಂಶೋಧನೆಗೆ ಒಳಪಡುವ ವ್ಯಕ್ತಿ ಅಥವಾ ಸಂಗತಿಯ ಜೊತೆಗೆ ಅಲ್ಲಿನ ಸಮಾಜ, ಸಮುದಾಯ, ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ಆ ಸ್ಥಳದ ಹಿನ್ನೆಲೆಯ ಕುರಿತು ಪೂರಕ ಮಾಹಿತಿಗಳನ್ನು ದಾಖಲಿಸುವುದು ಸಂಶೋಧಕನ ಮುಖ್ಯ ಕರ್ತವ್ಯ. ಯಾವುದೇ ಕ್ಷೇತ್ರಕಾರ್ಯದಲ್ಲಿ ಸಂಶೋಧನಾ ವಿಧಾನಕ್ಕೆ ಸಂಬಂಧಿಸಿದ ತಾತ್ತ್ವಿಕ ಹಿನ್ನೆಲೆಯ ಜೊತೆಗೆ ಅವುಗಳನ್ನು ಹೊರತುಪಡಿಸಿದ ಸಂಗತಿಗಳೂ ಪ್ರಭಾವಿಸುತ್ತದೆ. ಈ ನಿಟ್ಟಿನಲ್ಲಿ ಮೊಗವೀರ ಮಾಸಪತ್ರಿಕೆಯ ಸಂಪಾದಕ ಹಾಗೂ ಪತ್ರಕರ್ತರಾದ ಅಶೋಕ್ ಸುವರ್ಣ ಅವರು ಬರೆದಿರುವ ‘ಮಹಾಕಾಳಿ ಕೇವ್ಸ್ ನ ಮಹಾನುಭಾವ’ ಕೃತಿಯನ್ನು ನಾವು ಗಮನಿಸಬಹುದಾಗಿದೆ.
ಅಭಿಜಿತ್ ಪ್ರಕಾಶನದ ಮೂಲಕ ಬೆಳಕು ಕಂಡ ಈ ಕೃತಿಯಲ್ಲಿ ಅಶೋಕ್ ಸುವರ್ಣ ಅವರು ಕಂಡುಕೊಂಡ ಶೋಧನೆಯ ಸಾರವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ. “ಉಭಯ ಸಾಧಕರ ಜೀವನ ಸಾಧನೆಯನ್ನು ಇದೇ ಮೊದಲ ಬಾರಿಗೆ ಇತಿಹಾಸಕ್ಕೆ ಸೇರ್ಪಡೆಗೊಳಿಸಿದ ಕೀರ್ತಿ ಅಶೋಕ್ ಸುವರ್ಣ ಅವರಿಗೆ ಸಲ್ಲುತ್ತದೆ. ಹೀಗಾಗಿ ಈ ಕೃತಿಗೆ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಐತಿಹಾಸಿಕ ಅಯಾಮವೂ ಸಿಕ್ಕಂತಾಗಿದೆ” ಎಂದು ಡಾ. ಜಿ. ಎನ್. ಉಪಾಧ್ಯ ಅವರು ಮುನ್ನುಡಿಯಲ್ಲಿ ಬರೆದಿರುವುದು ಸೂಕ್ತವಾಗಿದೆ.
ಮುಂಬೈ ನಗರ ಯಾವೆಲ್ಲ ರಾಜವಂಶದ ಪರಂಪರೆಗೆ ಒಳಪಟ್ಟಿತ್ತು? ಆ ಕಾಲದಲ್ಲಿ ಪ್ರಭಾವ ಬೀರಿದ ಧರ್ಮಗಳಾವುವು? ಬೌದ್ಧ ಧರ್ಮ ಯಾವ ರೀತಿ ಪ್ರಾಮುಖ್ಯತೆ ಪಡೆದಿತ್ತು? ಮುಂಬೈಯಲ್ಲಿರುವ ಐದು ಆಕರ್ಷಕ ಗುಹೆಗಳಾದ ಎಲಿಫೆಂಟಾ ಕೇವ್ಸ್, ಜೋಗೇಶ್ವರಿ ಕೇವ್ಸ್, ಮಂಡಪೇಶ್ವರ ಕೇವ್ಸ್, ಕನ್ಹೇರಿ ಕೇವ್ಸ್, ಮಹಾಕಾಳಿ ಕೇವ್ಸ್ ಎಂದೇ ಪ್ರಸಿದ್ದಿ ಹೊಂದಿರುವ ಕೊಂಡವಿಟ ಕೇವ್ಸ್ಗಳ ಇತಿಹಾಸವನ್ನು ಶೋಧಿಸಿ ದಾಖಲಿಸುವುದರ ಜೊತೆಗೆ ಮುಂಬೈ ನಗರದ ಭವ್ಯ ಇತಿಹಾಸದ ಮಹತ್ವವನ್ನು ಆರಂಭದಲ್ಲಿಯೇ ಲೇಖಕರ ಮಾತಿನಲ್ಲಿ ತಿಳಿಯಪಡಿಸಿರುವುದು ಓದುಗನ ಕುತೂಹಲವನ್ನು ಕೆರಳಿಸುತ್ತದೆ.
‘ವಿವಿಧತೆಯ ಸರ್ವ ಸಂಘಟನೆಗಳು ನೆಲೆಯೂರಿದ ವಿಶ್ವದ ಏಕೈಕ ನಗರವೇ ಬ್ರಹನ್ಮುಂಬಯಿ’ ಎನ್ನುವ ಲೇಖಕರು ಬ್ರಿಟಿಷರ ಕಾಲದಲ್ಲಿ ನಡೆದಿರುವ ಮುಂಬೈಯ ಕೆಲವು ಐತಿಹಾಸಿಕ ಘಟನೆಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ‘ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ನಗರಕ್ಕೆ ಮೊದಲಿಗೆ ಬಂದವರೇ ಮೊಗವೀರರು. ಮುಂಬೈ ಎಂಬ ನಗದು ವ್ಯವಹಾರದ ನಗರಕ್ಕೆ ‘ನಗ’ದ ಮೂಲಕ ಹೋಗುವ ದಾರಿಯನ್ನು ಅವರು ಹೇಗೆ ಕಂಡುಕೊಂಡರು…!’ ಎಂಬುದು ಮಾತ್ರವಲ್ಲದೆ ಅಲ್ಲೇ ಏನಾದರೊಂದು ಕಾಯಕವನ್ನು ಮಾಡಿ ತನ್ನ ತಾಯ್ನಾಡನ್ನು ಉದ್ಧರಿಸುವ ಕನಸನ್ನು ಸಾಕಾರಗೊಳಿಸುವಲ್ಲಿ ಅವರು ಪಟ್ಟಿರುವ ಶ್ರಮ ಇಲ್ಲಿ ಧ್ವನಿತವಾಗುತ್ತದೆ. ಮೊಗವೀರರು ಮಾತ್ರವಲ್ಲದೆ ಅವರ ಮೂರು ಉಪ ಪಂಗಡಗಳೂ ಮುಂಬೈ ಸೇರಿ ಅನೇಕ ಸಂಘಟನೆಯನ್ನು ಕಟ್ಟಿಕೊಂಡು ನೆಲೆ ನಿಂತ ವಿವರಗಳು ಈ ಕೃತಿಯಲ್ಲಿ ಕಾಣಸಿಗುತ್ತವೆ.
ಆದಿಯಲ್ಲಿ ‘ಕೊಂಡವಿಟ ಕೇವ್ಸ್’ ಎಂದು ಕರೆಯಲ್ಪಡುತ್ತಿರುವ ಗುಹೆಯು, ನಂತರದಲ್ಲಿ ಮಹಾಕಾಳಿ ಕೇವ್ಸ್ ಎಂದು ಪ್ರಸಿದ್ಧಿ ಪಡೆಯಲು ಮುಖ್ಯ ಕಾರಣಕರ್ತರಾದ ಶ್ರೀ ಮುಕ್ತಾನಂದ ತೀರ್ಥರ ಜೀವನಗಾಥೆ ಈ ಕೃತಿಯಲ್ಲಿ ಪ್ರಾಧಾನ್ಯತೆಯನ್ನು ಪಡೆದಿದೆ. ಮಹಾಕಾಳಿ ಕೇವ್ಸ್ನ ಮೂಲ ಶೋಧನೆಗಾಗಿ ಲೇಖಕರು ಆ ಗುಹೆಯಿರುವ ಆವರಣದಲ್ಲಿ ಅಲೆದಾಡಿದ್ದಾರೆ. ಮುಕ್ತಾನಂದರ ಆಶ್ರಮ ಮತ್ತು ಮಹಾಕಾಳಿ ಮಂದಿರಕ್ಕೆ ಭೇಟಿ ನೀಡಿ ಅವರ ಅಧ್ಯಾತ್ಮಿಕ ಸಾಧನೆ, ಕೌಟುಂಬಿಕ ಹಿನ್ನೆಲೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕ್ರೋಡೀಕರಿಸಲು ಪ್ರಯತ್ನಿಸಿದ್ದಾರೆ.
ಮುಕ್ತಾನಂದರು 1933ರಲ್ಲಿಯೇ ಕಾಲವಾಗಿರುವುದರಿಂದ ಅವರ ಬಾಲ್ಯದ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವುದಿಲ್ಲ. ಆದರೆ ಗ್ರಾಮದ ನಿಯಮದಂತೆ ಅಂದು ಪ್ರತಿಯೊಂದು ಮನೆಯಿಂದ ಒಬ್ಬ ಯುವಕನನ್ನು ಗ್ರಾಮದ ರಂಪೋಣಿಗೆ ಕಡ್ಡಾಯವಾಗಿ ಸೇರಿಸುವ ಕ್ರಮದಂತೆ ಮುದರ(ಅವರ ಮೂಲ ಹೆಸರು) ಮುಕ್ತಾನಂದರು ಊರು ಬಿಟ್ಟು ಮುಂಬೈ ಸೇರುತ್ತಾರೆ. ನಗರದ ಆರಂಭದ ಬದುಕು, ನೌಕರಿ ಮತ್ತು ಅವರ ಸಂಸಾರದ ಕುರಿತಾದ ಕೆಲವೊಂದು ಮಾಹಿತಿಗಳು ಈ ಕೃತಿಯಲ್ಲಿವೆ.
ಹಲವಾರು ಅಡೆತಡೆಗಳ ನಡುವೆಯೂ ಮುಕ್ತಾನಂದರು ಹುಟ್ಟೂರಿನಲ್ಲಿ ತಮ್ಮ ಆರಾಧ್ಯ ದೇವಿ ಮಹಾಕಾಳಿ ದೇವಸ್ಥಾನ ನಿರ್ಮಿಸಲು ಪ್ರಯತ್ನಿಸಿದ್ದನ್ನು ಗಮನಿಸಿದಾಗ ಅವರು ದೃಢವಾದ ಆತ್ಮಸ್ಥೈರ್ಯವುಳ್ಳವರು ಎಂಬುದು ತಿಳಿದುಬರುತ್ತದೆ. ಆದರೆ ದೇವಸ್ಥಾನ ಪೂರ್ಣಗೊಂಡು ಮೂರ್ತಿ ಪ್ರತಿಷ್ಠಾಪನೆಯ ಹಂತದಲ್ಲಿರುವಾಗಲೇ ಅದು ಕುಸಿದು ಬಿತ್ತು ಅನ್ನುವುದರ ಹಿಂದೆ ಕೆಲವೊಂದು ಸಂದೇಹಗಳು ನಮ್ಮನ್ನು ಕಾಡುತ್ತವೆ. ಇಡೀ ಕುಟುಂಬ, ಬಂಧು ಬಳಗ ಮಾತ್ರವಲ್ಲದೆ ತಾನು ನಿರ್ವಹಿಸುತ್ತಿದ್ದ ಹುದ್ದೆಯನ್ನು ತ್ಯಜಿಸಿ ದೇಶಾಂತರ ಹೊರಟು ಹೋಗಬೇಕಾದರೆ ಆ ಘಟನೆಯಿಂದ ಅವರಿಗಾದ ಆಘಾತ ಎಷ್ಟಿರಬಹುದು…! ಎಂದೆನಿಸಿದರೂ ಅದೇ ಅವರ ಬದುಕಿನಲ್ಲಿ ಹೊಸದೊಂದು ತಿರುವಿಗೆ ಮೂಲ ಪ್ರೇರಣೆಯಾಯಿತು. ಆ ಕಾರಣದಿಂದಲೇ ಅಸಾಧಾರಣ ಸಾಧನೆಯನ್ನು ಮಾಡಿ ಇಂದು ಇತಿಹಾಸದ ಪುಟಗಳಲ್ಲಿ ಅವರ ಹೆಸರು ಅಜರಾಮರವಾಗಿ ಉಳಿಯುವಂತಾಯಿತು ಎಂಬುದು ಸ್ಪಷ್ಟವಾಗುತ್ತದೆ.
ದೇಶಾಂತರ ಹೋದವರು ಹಲವಾರು ವರ್ಷಗಳ ನಂತರ ಮುಂಬೈಗೆ ಬಂದು ಕೊಂಡವಿಟ ಗುಹೆಯ ಬಳಿ ಯೋಗಿಯಾಗಿ ವಾಸಿಸಲಾರಂಭಿಸಿದಾಗ ಸಕಲ ವಿದ್ಯೆಯಲ್ಲಿ ಪಾರಂಗತರಾಗಿದ್ದರು. ‘ಅದನ್ನೆಲ್ಲ ಅವರು ಹೇಗೆ ಸಾಧಿಸಿರಬಹುದು…! ಎಂಥ ಸಂಕಷ್ಟದ ಸಂದರ್ಭಗಳನ್ನು ಎದುರಿಸಿರಬಹುದು…!’ ಹೀಗೆ ಓರ್ವ ಸಾಧಕನ ಸಾಧನೆಯ ಹಿಂದಿನ ನಡೆಯನ್ನು ಇನ್ನಷ್ಟು ತಿಳಿಯಬೇಕೆನ್ನುವ ಕುತೂಹಲ ಓದುಗನಿಗೆ ಸಹಜವಾಗಿ ಕಾಡುತ್ತದೆ.
ಕಾಡುಪ್ರಾಣಿಗಳಷ್ಟೇ ವಾಸಿಸುತ್ತಿದ್ದ ಗುಹೆಯ ಬಳಿ ಮುಕ್ತಾನಂದರು ನೆಲೆಸಲಾರಂಭಿಸಿದ ಮೇಲೆ ಜನ ಸಂಚಾರ ಆರಂಭವಾಗುತ್ತದೆ. ಆಶ್ರಮ ಮತ್ತು ಮಹಾಕಾಳಿ ಮಂದಿರ ನಿರ್ಮಿಸಿ ತಮ್ಮ ಆರಾಧ್ಯ ದೇವಿ ಮಹಾಕಾಳಿಯ ಪ್ರತಿಷ್ಠಾಪನೆಯಾದ ಮೇಲೆ ಅವರು ಇನ್ನಷ್ಟು ಪರಿಚಿತರಾಗುತ್ತಾರೆ. ಗಣ್ಯಾತಿಗಣ್ಯರು ಅವರ ಅನುಯಾಯಿಗಳಾಗುತ್ತಾರೆ. ಆನಂತರದಲ್ಲಿ ಮುಕ್ತಾನಂದರನ್ನು ಅವರ ಕುಟುಂಬದವರು ಸಂಪರ್ಕಿಸಿದರೇ? ಆಗ ಅವರ ಪ್ರತಿಕ್ರಿಯೆ ಹೇಗಿತ್ತು? ಮುಕ್ತಾನಂದರು ಮೊಗವೀರ ವ್ಯವಸ್ಥಾಪಕ ಮಂಡಳಿಯ ಸಂಪರ್ಕದಲ್ಲಿ ಇದ್ದರೇ? ಅವರ ಸಮುದಾಯಕ್ಕೆ ನೀಡಿರುವ ಕೊಡುಗೆ ಏನು? ಅವರ ಕುಟುಂಬದವರು ಮುಂಬೈಯ ಯಾವ ಪ್ರದೇಶದಲ್ಲಿ ಇದ್ದಾರೆ…? ಎಂಬುದರ ಕುರಿತು ಲೇಖಕರು ಮಾಹಿತಿಯನ್ನು ಕಲೆ ಹಾಕಿ ಕೃತಿಯಲ್ಲಿ ದಾಖಲಿಸಿದ್ದಾರೆ.
ಮುಕ್ತಾನಂದ ಸ್ವಾಮೀಜಿಯವರ ಮೂಲನಿವಾಸ, ಹಿನ್ನೆಲೆ, ಕಾಂತಪ್ಪ ಭಟ್ಟರ ಹೆಸರಿನಿಂದ ಖ್ಯಾತವಾದ ಮನೆತನದಲ್ಲಿ ಕಾಂತಪ್ಪ ಭಟ್ಟರೆಂಬ ಪುರೋಹಿತ ಶಾಸ್ತ್ರಜ್ಞ ದೇವಿಯ ಉಪಾಸಕರನ್ನು, ಶ್ರೀ ಮುಕ್ತಾನಂದ ತೀರ್ಥ ಎಂಬ ಆಧ್ಯಾತ್ಮಿಕ ಚಿಂತಕರನ್ನು, ಚಂದು ಮಾಸ್ತರರಂತಹ ಸಮಾಜ ಸುಧಾರಕರನ್ನು ನೀಡಿದ ಶ್ರೇಷ್ಠ ಮನೆತನದ ಹಿನ್ನೆಲೆ ಈ ಕೃತಿಯಲ್ಲಿದೆ. ಮೊಗವೀರ ವ್ಯವಸ್ಥಾಪಕ ಮಂಡಳಿಯನ್ನು ಸ್ಥಾಪಿಸಿದ ಕಾಡಿಪಟ್ಲ ಚಂದು ಮಾಸ್ತರ್, ಅವರ ಮಾವ ಕಾಂತಪ್ಪ ಭಟ್ಟರ ಖ್ಯಾತಿಯ ವಿವರಗಳು, ಮೊಗವೀರ ವ್ಯವಸ್ಥಾಪಕ ಮಂಡಳಿಯ ನಡಾವಳಿಗಳು, ಯಶಸ್ಸಿನ ಹೆಜ್ಜೆಗಳು, ಸಮಾಜಸೇವಾ ಕಾರ್ಯಗಳು, ಸಂಸ್ಥೆಯ ಧ್ಯೇಯೋದ್ದೇಶಗಳು ಹಾಗೂ ಮಂಡಳಿಗೆ ಭೇಟಿ ನೀಡಿದ ಪ್ರಮುಖರ ಉಲ್ಲೇಖಗಳನ್ನು ಲೇಖಕರು ಕೂಲಂಕಷವಾಗಿ ವಿವರಿಸಿದ್ದಾರೆ.
“ಬೌದ್ಧ ಕೊಂಡವಿಟ ಗುಹೆ ಹಿಂದೂ ದೇವಿಯ ನಾಮದಿಂದ ಖ್ಯಾತವಾಗಲು ಕಾರಣೀಪುರುಷರಾದ ಮಹಾನುಭಾವ ಮುಕ್ತಾನಂದರು ಪ್ರಥಮತೆಯ ಸರದಾರರಾದ ಮೊಗವೀರ ಸಮಾಜಕ್ಕೆ ಅಭಿಮಾನದ ಸಂಗತಿ” ಎಂದು ಲೇಖಕರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಶೋಧ ಕೃತಿಯ ಉದ್ದೇಶವ್ಯಾಪ್ತಿಯಲ್ಲಿ ‘ನಮ್ಮ ಸಮುದಾಯದವರು’ ಎಂಬ ಪರಿಕಲ್ಪನೆ ಬಹುದೊಡ್ಡ ಪಾತ್ರವಹಿಸಿದೆ.
ಇಂಥ ಒಂದು ಕೃತಿಯನ್ನು ರಚಿಸುವಾಗ ಸಾಮಾಜಿಕ ಪರಿಸರದಲ್ಲಿ ಒಳ್ಳೆಯ ಸಮಾಜದ ಕಲ್ಪನೆಗಳನ್ನು ಕಟ್ಟಿಕೊಡುವ ಹಲವಾರು ತಾತ್ವಿಕ ನಿಲುವುಗಳು, ಸಾಮಾಜಿಕ ಏಣಿಶ್ರೇಣಿಗಳು, ಅಧಿಕಾರ ಸಂಬಂಧಗಳು, ಆರ್ಥಿಕ ಸ್ಥಾನಮಾನಗಳೆಲ್ಲ ಸಹಜವಾಗಿ ಸೇರಿಕೊಳ್ಳುತ್ತವೆ ಎಂಬುದಕ್ಕೆ ‘ಮಹಾಕಾಳಿ ಕೇವ್ಸ್ನ ಮಹಾನುಭಾವ ಕೃತಿ’ ಒಂದು ಒಳ್ಳೆಯ ಉದಾಹರಣೆ. ಗತಪುಟಗಳಿಗೆ ಸೇರಿ ಹೋದ ವಸ್ತು ವಿಷಯಗಳ ಶೋಧನೆ ಕಷ್ಟಸಾಧ್ಯವಾದರೂ, ಆ ಕಾರ್ಯವನ್ನು ಪೂರ್ಣಗೊಳಿಸಿದ ಹಿರಿಮೆ ಅಶೋಕ್ ಸುವರ್ಣ ಅವರಿಗೆ ಸಲ್ಲುತ್ತದೆ. ಈ ಮೂಲಕ ಮುಕ್ತಾನಂದ ತೀರ್ಥರ ಜೀವನ ಸಾಧನೆ ಸಾಹಿತ್ಯ ಲೋಕದಲ್ಲಿಯೂ ಸೇರ್ಪಡೆಗೊಂಡಂತಾಯಿತು. ಅಶೋಕ್ ಸುವರ್ಣ ಅವರಿಂದ ಇನ್ನಷ್ಟು ಶೋಧ ಕೃತಿಗಳು ಬೆಳಕಿಗೆ ಬರಲಿ ಎಂಬ ಹಾರೈಕೆ.
*******
6 thoughts on “ಬೌದ್ಧ ಗುಹೆಯೊಂದರ ನಾಮ ಪರಿವರ್ತನೆಯ ನಿಗೂಢ”
ಹೊಸವಿಚಾರ ಬೆಳಕಿಗೆ ತಂದಿದ್ದೀರಿ. ಶುಭಾಶಯಗಳು.
ಧನ್ಯವಾದ ಸರ್ 😊🙏
ಶಿಷ್ಟ, ಸ್ನೇಹಮಯ ವ್ಯಕ್ತಿತ್ವದ ಶ್ರೀ ಅಶೋಕ್ ಸುವರ್ಣ ಅವರ ಕೃತಿಯ ವಿಮರ್ಶೆ ಬಹಳ ಉತ್ತಮವಾಗಿ ಮೂಡಿ ಬಂದಿದೆ. ಅನಿತಾ ಅವರಿಗೆ ಅಭಿನಂದನೆ💖
ಪ್ರತಿಕ್ರಿಯೆಗೆ ಧನ್ಯವಾದ ಸರ್ 😊🙏
ಉತ್ತಮ ವಿಮರ್ಶೆ 👍
ಧನ್ಯವಾದ