ಸ್ತ್ರೀ ಶಾಪ

‘ನಿದ್ದೆ ಬಂತೇನೋ?’ ಕನಸೂ ಅಲ್ಲದ, ವಾಸ್ತವವೂ ಅಲ್ಲದ ಒಂದು ಭ್ರಮಾಧೀನ ಸ್ಥಿತಿಯಲ್ಲಿ ಈ ಪ್ರಶ್ನೆ ಕಿವಿಗೆ ಬಿದ್ದಂತೆನಿಸಿ ವೆಂಕಟಪ್ಪ ಧಡ್ಡನೆ ಹಾಸಿಗೆಯ ಮೇಲೆ ಎದ್ದು ಕೂತ. ಕಂಬಳಿಯ ಮುಸುಕು ಹಾಕಿದಂತೆ ಸುತ್ತ ಕವುಚಿಕೊಂಡಿದೆ ಕಗ್ಗತ್ತಲು. ಯಾವೊಂದು ಸದ್ದೂ ಕಿವಿಗೆ ಬೀಳದ ಹೆಪ್ಪುಗಟ್ಟಿದಂತೆನಿಸುವ ಮೌನ. ಮೊದಲೇ ಹೊಸ ಜಾಗ. ಎಷ್ಟೋ ಹೊತ್ತು ನಿದ್ದೆ ಹತ್ತದೆ ಹೊಗಚಾಡುತ್ತಿದ್ದವನಿಗೆ ಆಗಷ್ಟೇ ಕಣ್ಣು ಬಾಡಿತ್ತು. ಇದ್ದಕ್ಕಿದ್ದಂತೆ ಯಾರೋ ಮಾತಾಡಿದಂತೆನಿಸಿದ್ದು ನಿಜಕ್ಕೂ ತನ್ನ ಕನವರಿಕೆ ಅನ್ನಿಸಿ ಎದ್ದು ಕೂತವನು ಮತ್ತೆ ಮಲಗಿ, ಕಾಲ ಬಳಿ ಮುದುರಿ ಬಿದ್ದಿದ್ದ ಬೆಡ್‍ಶೀಟನ್ನು ಮೈ ತುಂಬಾ ಎಳೆದುಕೊಂಡ. ಹಾಸುವುದಕ್ಕೆ ಸಣ್ಣಗೆ ಕಮಟು ವಾಸನೆ ಹೊಡೆಯುತ್ತಿರುವ ಒಂದು ಹಳೆಯ ಜಮಖಾನ. ಹೊದೆಯಲು ಜೂಲು ಎದ್ದಿರುವ ಹಳೆಯ ಬೆಡ್‍ಶೀಟು. ತಲೆಯಡಿಗೆ ಸುರುಳಿ ಸುತ್ತಿ ಇಟ್ಟುಕೊಂಡ ಎರಡು ಗೋಣೀಚೀಲಗಳ ದಿಂಬು. ‘ಆಯ್ತು ಹಂಗಾರೆ, ಮಲಗು..’ ಎನ್ನುತ್ತಾ ಯಜಮಾನರು ನಡುಮನೆಯ ಬಾಗಿಲು ಹಾಕಿಕೊಂಡು ಅಗುಳಿ ಎಳೆದುಕೊಂಡ ಮೇಲೆ ಮುಂಚೇಕಡೆ ಜಗುಲಿಯಲ್ಲಿ ಇವನು ಒಬ್ಬಂಟಿ. ಯಜಮಾಂತಿ ಚೌಕಾಶಿ ಮಾಡದೆ ಹೊಟ್ಟೆ ತುಂಬಾ ಬಡಿಸಿದ್ದರು. ಇವನು ಮುಲಾಜು ಇಟ್ಟುಕೊಳ್ಳದೆ ಚೆನ್ನಾಗಿಯೇ ಉಂಡಿದ್ದ. ಎಷ್ಟೋ ದಿನಗಳ ಮೇಲೆ ಹೊಟ್ಟೆಗೆ ಸಂತೃಪ್ತಿಯಾಗಿತ್ತು. ಉಂಡಾದ ಮೇಲೆ ಯಜಮಾಂತಿ ಹೇಳಿದಂತೆ ಬಾಳೆಲೆ ಮಡಿಸಿ ಗೊಬ್ಬರದ ಗುಂಡಿಗೆ ಬಿಸಾಕಿ, ಉಂಡ ಜಾಗಕ್ಕೆ ಗೋಮಯದ ನೀರು ಹಾಕಿ ಕೈಯಿಂದಲೇ ಗುಂಡಗೆ ಸಾರಿಸಿ, ಹಿತ್ತಲ ಕಲ್ಲಿನ ಮೇಲೆ ಧಬಧಬ ಸುರಿಯುವ ಒಗದೆ ನೀರಿನಲ್ಲಿ ಕೈ ತೊಳೆದುಕೊಂಡು ಬಂದಿದ್ದ. ಜಗುಲಿಯ ಮೂಲೆಯಲ್ಲಿ ಜಮಖಾನ ಕೊಡವಿ ಹಾಸಿಕೊಳ್ಳುವಾಗ ‘ಇನ್ನು ಇದು ತನ್ನ ಖಾಯಂ ಜಾಗ’ ಅನ್ನಿಸಿ ಅಂತೂ ಒಂದು ನೆಲೆ ಕಂಡುಕೊಂಡ ನೆಮ್ಮದಿ. ಕೆಟ್ಟು ಪಟ್ಟಣ ಸೇರದಿದ್ದರೂ ಹೊಸ ಬದುಕು ಕಟ್ಟಿಕೊಳ್ಳುವ ಉಮೇದಿನಲ್ಲಿ ಪಟ್ಟಣ ಸೇರಿಕೊಂಡಿದ್ದವನು ಗಾರೆ ಕೆಲಸದ ಮೇಸ್ತ್ರಿಯ ಶಿಷ್ಯತ್ವ ಸ್ವೀಕರಿಸಿ ಆ ಕೆಲಸದಲ್ಲಿ ಪಳಗತೊಡಗಿದ್ದ. ಕೈ ತುಂಬಾ ಕೆಲಸ ಸಿಗುತ್ತಿತ್ತು. ಕೂಲಿಯೂ ಸಿಗುತ್ತಿತ್ತು. ಇಲ್ಲಿ ಕಟ್ಟಡದ ಕಾಮಗಾರಿ ಮುಗಿದರೆ ಅಲ್ಲಿ, ಅಲ್ಲಿ ಮುಗಿದರೆ ಮತ್ತೆಲ್ಲೋ. ಕಳೆದ ಮೂರು ವರ್ಷಗಳಲ್ಲಿ ದುಡಿಮೆಗೆ ಯಾವತ್ತೂ ಬರ ಬಂದಿರಲಿಲ್ಲ. ಖಾಲಿ ಕೂತಿದ್ದಿರಲಿಲ್ಲ. ಎಲ್ಲಿಂದ ವಕ್ಕರಿಸಿಕೊಂಡಿತೋ ಹಾಳು ಕೊರೊನಾ ಖಾಯಿಲೆ, ಸರಾಗವಾಗಿ ತಿರುಗುತ್ತಿದ್ದ ಚಕ್ರ ಗಕ್ಕನೆ ನಿಂತುಬಿಟ್ಟಿತ್ತು. ದುಡಿಯುವ ಕೈಗಳಿಗೆ ಕೆಲಸ ಇಲ್ಲದೆ, ಹೊಟ್ಟೆಗೆ ಕೂಳಿಲ್ಲದೆ ಅನೇಕರಂತೆ ಇವನೂ ಹಳ್ಳಿ ಕಡೆ ಮುಖ ಮಾಡಿದ್ದ. ಆದರೆ ತನ್ನ ಸ್ವಂತ ಊರಿನ ಕಡೆಗಲ್ಲ. ಅಲ್ಲಿ ಅವರದ್ದು ಎನ್ನಲು ಗೇಣಗಲ ಜಾಗ ಇರಲಿಲ್ಲ. ತನ್ನಪ್ಪನಂತೆ, ಅಣ್ಣನಂತೆ ಇದ್ದುಳ್ಳವರ ಮನೆಯ ಜಮೀನಿನಲ್ಲಿ ದುಡಿಯುತ್ತಿದ್ದವನಿಗೆ ಅಲ್ಲಿದ್ದರೂ ಒಂದೇ, ಎಲ್ಲಿದ್ದರೂ ಒಂದೇ. ಬದಲಿಗೆ ಕೆಟ್ಟು ತನ್ನೂರು ಸೇರಿದರೆ ನಾಲಿಗೆ ತುರಿಕೆಯ ಜನ ಚಾಳಿಸುವ ಮಾತಾಡುತ್ತಾರೆ ಎಂದು ವೆಂಕಟಪ್ಪನ ಅನಿಸಿಕೆ. ‘ಅದೇ ಉಂಡೇನು, ಕದಾ ತೆಗಿ ಅಂತ ಮತ್ತೆ ಹಳ್ಳೀನೇ ಬೇಕಾಯ್ತೇನೋ ಅಂದರೆ ಸಾಕಲ್ಲ ಮರ್ಯಾದೆಗೆ? ‘ಹುಟ್ಟೂರಿನ ಸಾವಾಸ ಮಾತ್ರಾ ಬೇಡ’ ಅಂದುಕೊಂಡೇ ಸಿಟಿ ತೊರೆದಿದ್ದ ವೆಂಕಟಪ್ಪ. ಹೊಸ ಉದ್ಯೋಗ ಕಂಡುಕೊಳ್ಳುವುದು ಹುಡುಗಾಟಿಕೆಯ ವಿಷಯ ಆಗಿರಲಿಲ್ಲ. ಹೊಸಬರನ್ನು, ಅದರಲ್ಲೂ ಪಟ್ಟಣದಿಂದ ಬಂದವರನ್ನು, ಊರಿಗೆ ಬಿಟ್ಟುಕೊಳ್ಳಲು ಜನ ಸುತರಾಂ ಸಿದ್ಧರಿರಲಿಲ್ಲ. ಯಾರದ್ದೋ ಮೂಲಕ ಕಂಡುಕೇಳರಿಯದ ಖಾಯಿಲೆಯ ಬೀಜ ತಮ್ಮೂರಿಗೂ ತಲುಪಿಬಿಟ್ಟರೆ ಗತಿ ಏನು ಎಂದು ಜನ ಸಹಜವಾಗಿ ದಿಗಿಲು ಬಿದ್ದಿದ್ದರು. ಅಂತೂ ಇಂತೂ ‘ಕಗ್ಗಾನು ಕೊಂಪೆ’ ಎನ್ನುವಂತಿದ್ದ ಈ ಹಳ್ಳಿಮೂಲೆಗೆ ವೆಂಕಟಪ್ಪನನ್ನು ತಂದು ಒಗೆದಿತ್ತು ವಿಧಿ. ಯಜಮಾನರಿಗೂ ಕೂಲಿಯ ಆಳುಗಳ ಆವಶ್ಯಕತೆ ‘ಕುತ್ತಿಗೆಯವರೆಗೆ’ ಎಂಬಷ್ಟು ಇತ್ತು. ಕೃಷಿಕೆಲಸದ ಅವನ ತಿಳಿವಳಿಕೆಯ ಕುರಿತು ಮಾಹಿತಿ ಒಟ್ಟು ಮಾಡಿದ ಮೇಲೆ ಯಜಮಾನರು ತೋರಿಕೆಯ ಗಾಂಭೀರ್ಯದಿಂದ ಖಡಕ್ಕಾಗಿ ಹೇಳಿದ್ದರು,

“ದುಡ್ಡು, ಕಾಸು ಅಂತ ರಾಗ ತೆಗೆಯೋದಾದ್ರೆ ಈಗ್ಲೇ ಗಾಡಿ ಬಿಟ್ಬಿಡು. ಯಾರ್ಯಾರನ್ನೋ ನಂಬಿ ಕೈ ಸುಟ್ಗಂಡು ಸಾಕಾಗಿ ಹೋಗಿದೆ ನಂಗೆ. ಏನಿದ್ರೂ ಕೆಲಸ ಮಾಡ್ಬೇಕು, ದುಡ್ಡು ಎಣಿಸ್ಕಂಬೇಕು”

ಹೂಂಗುಟ್ಟಿದ್ದ ವೆಂಕಟಪ್ಪ.

                                            *****

‘ನಿದ್ದೆ ಬಂತೇನೋ?’ ಮತ್ತೆ ಸ್ಪಷ್ಟವಾಗಿ ಕಿವಿಗೆ ಬಿತ್ತು ಅದೇ ದನಿ. ಮಂಪರಿನ ಆಳಕ್ಕೆ ಮುಳುಗುತ್ತಿದ್ದ ವೆಂಕಟಪ್ಪನಿಗೆ ಎದ್ದೇಳಬೇಕೆಂದರೂ ಸಾಧ್ಯವಾಗದಂತೆ ಕಣ್ಣು ಮುಚ್ಚಿಕೊಂಡು ಹೋಗುತ್ತಿತ್ತು. ಸ್ಥಿರವಾದ ಒಂದು ನೆಲೆ ಹುಡುಕಿಕೊಂಡು ಮೈಲುಗಟ್ಟಲೆ ನಡೆದುಕೊಂಡು ಬಂದಿದ್ದ ಅವನು ಕಾಲುಗಳು ಪದ ಹೇಳುವಷ್ಟು ಬಳಲಿ ಹೋಗಿದ್ದ. ಈ ಬಾರಿಯ ಪ್ರಶ್ನೆಗೆ ಮುಚ್ಚಿದ ಕಣ್ಣುಗಳನ್ನು ತೆರೆಯದೆ ಪ್ರತಿಪ್ರಶ್ನೆ ಹಾಕಿದ ವೆಂಕಟಪ್ಪ,

“ಯಾರು ಮಾರ್ರೆ ಅದು, ಅರ್ಧರಾತ್ರಿ ಹೊತ್ತಿಗೆ ‘ನಿದ್ದೆ ಬಂತಾ?’ ಅಂತ ಕೇಳ್ತಿರೋದು?”

“ಏ ಪೆದ್ದಾ, ದನೀನೂ ಗೊತ್ತಾಗಲ್ವಾ ನಿಂಗೆ? ಮಾರ್ರೆ ಅಲ್ಲ, ಮಾರಾಯ್ತಿ, ಈ ಮನೆ ಯಜಮಾಂತಿ ಕಣೋ ನಾನು..”

“ಹೊಟ್ಟೆ ಬಿರಿ ಊಟ ಹಾಕಿದೀರಿ. ದೇವ್ರು ಒಳ್ಳೇದು ಮಾಡ್ಲಿ ನಿಮ್ಗೆ..” ವೆಂಕಟಪ್ಪ ಹೃತ್ಪೂರ್ವಕವಾಗಿ ಒಂದು ಹೊಗಳಿಕೆ ಹಾಕಿದ.

“ಏಯ್, ನಿಂಗೆ ಊಟ ಹಾಕಿದ್ದು ನಾನಲ್ಲ, ನಮ್ಮ ಅತ್ತಿಗೆ..”

“ಮತ್ತೆ? ನೀವ್ಯಾರು? ಕಣ್ಣಿಗೆ ಕಂಡೇ ಇರ್ಲಿಲ್ಲ?”

“ಹೇಳ್ಲಿಲ್ವಾ ಯಜಮಾಂತಿ ಅಂತ? ಈ ಮನೆ ಯಜಮಾನ ನನ್ನ ಅಣ್ಣ. ಖಾಸಾ ಅಣ್ಣ. ಇಬ್ರೂ ಒಂದೇ ತಾಯಿ ಹೊಟ್ಟೇಲಿ ಹುಟ್ಟಿದೋರು..”

“ಗೊತ್ತಾತು, ಗೊತ್ತಾತು. ಈ ಕತ್ಲೇಲಿ ಯಾಕೆ ಬಂದು ಕೂತ್ಗಂಡಿದೀರಿ? ನಂಗೆ ಕಣ್ಣು ಬಿಡೋಕಾಗ್ತಿಲ್ಲ, ಆ ನಮೂನಿ ನಿದ್ದೆ..”

“ಅಲ್ವೋ, ನಿಂಗೆ ಬೇರೆ ಎಲ್ಲೂ ಕೆಲಸ ಸಿಕ್ಲಿಲ್ವಾ? ಇಲ್ಲಿಗೆ ಹುಡುಕ್ಕೊಂಡು ಬಂದು ಸೇರ್ಕಂತಿದೀಯಲ್ಲ? ಅಯ್ಯೋ ಅನ್ಸುತ್ತೆ ನಂಗೆ..”

“ರಟ್ಟೆಮುರಿ ಗೆಯ್ಯೋರಿಗೆ ಎಲ್ಲಾದ್ರೇನು ಅಮ್ಮಾ? ಇದನ್ನ ಹೇಳೋಕೆ ಅರ್ಧರಾತ್ರೀಲಿ ಬಂದು ಎಬ್ಬಿಸ್ತಿದೀರಾ?”

“ಹಗಲು ಹೊತ್ತಲ್ಲಿ ಬಂದು ಹೇಳಿದ್ರೆ ಬಿಟ್ಬಿಡ್ತಾನಾ ಅಣ್ಣ? ಹೆಡೆಮುರಿ ಕಟ್ತಾನೆ..”

“ಇದೊಳ್ಳೇ ಪಂಚಾತ್ಕೆ. ಹೆಂಗೋ ಒಂದು ಜಾಗ ಕಂಡ್ಕಂಡೆ ಅಂತ ನಾನು ಅಂದ್ಕಂತಿದ್ರೆ ನೀವು ಮತ್ತೆಂತದೋ ಹೇಳ್ತಿದೀರಿ..”

“ಈ ಮನೇಗೆ ಸ್ತ್ರೀಶಾಪ ಉಂಟು ಕಣೋ. ಈ ಮನೆ ಅನ್ನ ಉಂಡೋರು ಯಾವತ್ತೂ ಉದ್ಧಾರಾಗಲ್ಲ..”

ವೆಂಕಟಪ್ಪನಿಗೆ ನಗು ಬಂತು.

“ಶಾಪ, ಗೀಪ ಎಲ್ಲಾ ಹಳೇಕಾಲದ ಪುರಾಣ ಅಮ್ಮಾ. ಎಂತೆಂತೋ ಹೇಳಿ ನನ್ನ ಓಡಿಸೋಕೆ ನೋಡ್ತಿದೀರಿ. ಅಣ್ಣನ ಮೇಲೆ ಹೊಟ್ಟೆಕಿಚ್ಚಾ?”

“ಹೊಟ್ಟೆಕಿಚ್ಚು ಪಡೋಕೂ ಆ ಮನುಷ್ಯಂಗೆ ಒಂದು ಯೋಗ್ತಿ ಇರ್ಬೇಕು. ಒಂದೇ ಸಲ ಎಲ್ಲಾ ಸರ್ವನಾಶ ಮಾಡೋಕೆ ನಂಗೆ ಬರಲ್ಲ ಅಂತಲ್ಲ. ಹಂಗೆ ಮಾಡಿದ್ರೆ ಏನು ಬಂದ ಹಾಗಾಯ್ತು? ನಬೆದು ನಬೆದು ಸಾಯ್ಬೇಕು ಅವ್ನು..”

ಬೆಚ್ಚಿ ಬಿದ್ದ ವೆಂಕಟಪ್ಪ. ಅಣ್ಣನ ಮೇಲೆ ಈ ಪರಿ ಹಗೆ ಕಾರುತ್ತಿರುವ ಈ ಹೆಂಗಸಿಗೆ ಒಂದೋ ಮಂಡೆ ಸಮ ಇಲ್ಲ, ಅಥವಾ ಅಣ್ಣನ ಮೇಲೆ ತಡೆಯಲಾಗದಷ್ಟು ಯಾವುದೋ ಹಗೆತನ ಇದೆ ಎಂದು ಅನ್ನಿಸಿಯೇ ಅನ್ನಿಸಿತು. ಈ ಹುಚ್ಚು ಹೆಂಗಸಿನ ಮಾತು ಕೇಳಿ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಮಾಡಿಕೊಂಡರೆ ನನ್ನಷ್ಟು ಪೆದ್ದ ಇನ್ನ್ಯಾರಿಲ್ಲ. ಊದೋ ಶಂಖ ಊದುತ್ತಿರಲಿ. ನನ್ನ ಪಾಡಿಗೆ ನಾನು ಇದ್ದುಬಿಟ್ಟರಾಯ್ತು ಎನ್ನುವ ಅವನ ಮನಸ್ಸಿನ ಭಾವನೆಯನ್ನು ಅರ್ಥೈಸಿಕೊಂಡಂತೆ ಹೆಂಗಸು ಹೇಳಿತು,

“ನಂಗೆ ಹುಚ್ಚೂ ಇಲ್ಲ, ಬೆಪ್ಪೂ ಇಲ್ಲ. ನನ್ನ ಕತೆ ಕೇಳಿದ್ರೆ ಒಳಗುಟ್ಟು ಏನು ಅಂತ ನಿಂಗೇ ಗೊತ್ತಾಗುತ್ತೆ. ಮೊದ್ಲು ಕತೆ ಕೇಳು. ಆಮೇಲೆ ನಿನ್ನ ತೀರ್ಮಾನ ನಿಂದು”

ಸದ್ದಾಗುವಂತೆ ಆಕಳಿಸಿದ ವೆಂಕಟಪ್ಪ, ಸುಳು ಗೊತ್ತಾಗಿ ಈಯಮ್ಮ ಇಲ್ಲಿಂದ ಜಾಗ ಖಾಲಿ ಮಾಡಲಿ ಎನ್ನುವಂತೆ. ಹೆಂಗಸು ಎದ್ದು ಹೋಗುವ ಲಕ್ಷಣ ಕಾಣಿಸಲಿಲ್ಲ. ‘ಯಾರು ಈ ಅರೆ ಪಿರ್ಕಿ? ಅರ್ಧರಾತ್ರೀಲಿ ಬಂದು ತಲೆ ತಿಂತಿರೋದು?’ ಎಂದು ನೋಡಬೇಕೆಂದು ಕಣ್ಣು ಬಿಟ್ಟರೆ ಮತ್ತದೇ ಕಗ್ಗತ್ತಲು. ಜಗುಲಿಯ ಒಂದು ಬದಿಯಲ್ಲಿ ಸಾಲಾಗಿ ಕುರ್ಚಿ ಜೋಡಿಸಿಟ್ಟಿದ್ದಾರೆ. ಅಲ್ಲೆಲ್ಲೋ ಬಂದು ಕೂತಿರಬೇಕು, ಕಿವಿ ಕಚ್ಚಲು. ವೆಂಕಟಪ್ಪ ಮಗ್ಗುಲು ಬದಲಿಸಿ ಗೋಡೆ ಕಡೆ ಮುಖ ಮಾಡಿಕೊಂಡು ಮಲಗಿ ಹೊದಿಕೆಯನ್ನು ಕಿವಿಯ ಮೇಲೆ ಎಳೆದುಕೊಂಡ. ಒದ್ದುಕೊಂಡು ಬರುತ್ತಿದೆ ನಿದ್ದೆ. ಕಣ್ಣು ತೆಗೆಯಲಾಗದಷ್ಟು ಮುಚ್ಚಿ ಮುಚ್ಚಿ ಹೋಗುತ್ತಿದೆ, ಅವನ ನಿಯಂತ್ರಣವನ್ನೂ ಮೀರಿದಂತೆ. ಈ ಪರಿಸ್ಥಿತಿಯಲ್ಲೂ ಕಿವಿಯ ಮೇಲೆ ಬೀಳುತ್ತಿತ್ತು ಕತೆ. ಮನಸ್ಸು ಅದನ್ನು ಗ್ರಹಿಸಿಕೊಳ್ಳತೊಡಗಿತ್ತು. ಕತೆಯ ಪಾತ್ರಗಳು ಕಣ್ಣ ಮುಂದೆ ತನ್ನಷ್ಟಕ್ಕೆ ಸಾಕ್ಷಾತ್ಕಾರವಾಗುತ್ತಿದ್ದುವು. ವೆಂಕಟಪ್ಪ ತನ್ನ ಇರವನ್ನೂ ಮೀರಿ ಕತೆಗೆ ಕಿವಿಯಾದ.

                                           *****

ಒಂದು ಕಾಲದಲ್ಲಿ ನಂದಗೋಕುಲದಂತಿತ್ತು ಈ ಮನೆ. ಯಜಮಾನ ಶಂಭುಭಟ್ಟರು, ಹೆಂಡತಿ ಅಂಬುಜಾಕ್ಷಿ. ಮುಚ್ಚಟೆಯಾಗಿ ಇಬ್ಬರು ಮಕ್ಕಳು. ದೊಡ್ಡವನು ಸಾಂಬಶಿವ, ಮಗಳು ಸಾಧ್ವಿ. ಮಕ್ಕಳು ದೊಡ್ಡವರಾಗುತ್ತಾ ಬಂದಂತೆ ಈ ಜಾಗದಲ್ಲಿದ್ದ ಹಳೆ ಮನೆ ಕೆಡವಿ ಹೊಸ ಮನೆ ಕಟ್ಟಿಸಿದ್ದರು ಶಂಭುಭಟ್ಟರು. ‘ಒಂದು ಮನೆಗೆ ನೂರು ವರ್ಷ ಆಯುಸ್ಸು. ಆಮೇಲೂ ಆ ಮನೆಯಲ್ಲಿದ್ದರೆ ಏಳಿಗೆ ಆಗಲ್ಲ’ ಅನ್ನುವುದು ಹೇಳಿಕೆ ಮಾತು. ಹಾಳು ಖರ್ಚು ಏನಿಲ್ಲದೆ ಕೈಯಲ್ಲಿ ಸಾಕಷ್ಟು ದುಡ್ಡು ಉಳಿತಾಯವಾಗಿತ್ತು. ಪೆಟ್ಟಿಗೆಯಲ್ಲಿ ಹಳೆಗಾಲದಿಂದ ಬಂದ ಒಂದಿಷ್ಟು ನಗನಾಣ್ಯ ಇತ್ತು. ಶೀಮಂತ ಕುಳವಾರುಗಳ ಪಟ್ಟಿಗೆ ಸೇರದಿದ್ದರೂ ಮೇಲ್ಮಧ್ಯಮವರ್ಗದ ಜಮೀನ್ದಾರೀ ಮನೆತನ. ಹೊಸಮನೆ ಸಿದ್ಧವಾಗಿ, ಗೃಹಪ್ರವೇಶ ಸಮಾರಂಭ ಕೂಡಾ ಅದ್ಧೂರಿಯಾಗಿ ನಡೆದಿತ್ತು. ಹೊಸ ಮನೆ, ನಮ್ಮ ಮನೆ ಅಂದರೆ ನನಗೆ ಎಷ್ಟು ಉಮೇದು ಗೊತ್ತಾ? ಕೆಂಬಣ್ಣ ಬಳಿದ ಪ್ರತಿ ಹೊಸಿಲಿಗೂ ಬಿಳಿ ಪೈಂಟಿನಲ್ಲಿ ಚಂದದ ರಂಗೋಲಿ ಬಿಡಿಸಿ, ವಾಸ್ತುಬಾಗಿಲಿಗೆ ವಿಶೇಷ ಮುತುವರ್ಜಿ. ಆಚೀಚೆಯ ಬಾಗಿಲುವಾಡದುದ್ದಕ್ಕೂ ಚಿತ್ರಗಳೇ ಚಿತ್ರಗಳು. ಗೃಹಪ್ರವೇಶಕ್ಕೆ ಬಂದ ಹೆಮ್ಮಕ್ಕಳಿರಲಿ, ಗಂಡಸರೂ ಅರೆಗಳಿಗೆ ಕಣ್ಣು ಹಾಯಿಸದೆ ಹೋಗಿರಲಿಲ್ಲ. ‘ಲಾಯ್ಖಿದೆ ಕಣೇ. ನಮ್ಮನೇಲಿ ಏನಾರೂ ವಿಶೇಷಕಟ್ಲೆ ಎದ್ದರೆ ನೀನೇ ಬಂದು ಎಳೆ ತೆಗೀಬೇಕು’ ಎಂದು ಯಾರಾದರೂ ತಾರೀಫು ಮಾಡಿದರೆ ತಲೆಯ ಮೇಲೆ ಕೋಡು. ಆ ವಯಸ್ಸೇ ಅಂತಾದ್ದು. ಜಂಭ ಮಾಡುವುದಕ್ಕೆ, ನಮ್ಮನ್ನು ನಾವು ಹೆಚ್ಚುಗಟ್ಟಿಸಿಕೊಳ್ಳಲಿಕ್ಕೆ, ದೊಡ್ಡ ಕಾರಣಗಳೇನೂ ಬೇಕಾಗಿರಲಿಲ್ಲ. ಏಯ್, ಬೆಳಿಗ್ಗೆ ಎದ್ದ ಮೇಲೆ ಇನ್ನೊಂದು ಸಲ ಸರಿಯಾಗಿ ನೋಡು. ಮನೆ ಕಟ್ಟಿ ನಲವತ್ತು ವರ್ಷ ಕಳೆದರೂ ಕೆಂಪು ಗಾರೆಯ ನೆಲ ಹೇಗೆ ಲಕಲಕ ಹೊಳೆಯುತ್ತಿದೆ ಅನ್ನುವುದು ನಿನಗೇ ಗೊತ್ತಾಗುತ್ತೆ. ಆ ಹೊಳಪು ಪುಗಸಟ್ಟೆ ಬಂದಿದ್ದಲ್ಲ. ನನ್ನ ಈ ಕೈಗಳಿಂದ ರಟ್ಟೆ ನೋಯುವವರೆಗೆ ನೆಲ ಉಜ್ಜಿ ಉಜ್ಜಿ, ತಿಕ್ಕಿ ತಿಕ್ಕಿ, ನಯಸ್ಸು ಮಾಡಿದೀನಿ, ಗೊತ್ತಾ? ನನಗಿಂತಾ ಆರೇಳು ವರ್ಷ ದೊಡ್ಡವನು ಸಾಂಬಣ್ಣ. ಚಿಕ್ಕವಳು ಎಂದು ಮನೆಯವರಿಗೆಲ್ಲಾ ನನ್ನ ಮೇಲೆ ಒಂದು ತೂಕ ಜಾಸ್ತಿ ಪ್ರೀತಿ. ಹದಿನೆಂಟು ವರ್ಷ ತುಂಬಿ, ಒಂದು ಒಳ್ಳೇ ದಿನ ನೋಡಿ ಜಾತಕ ಹೊರಡಿಸಿದ್ದರು ನನ್ನಪ್ಪ. ಯಾರ್ಯಾರ ಕೈಲಿ ಎಲ್ಲೆಲ್ಲಿಗೆ ನನ್ನ ಜಾತಕದ ಪ್ರತಿ ರವಾನೆಯಾಗಿತ್ತೋ ಪರಮಾತ್ಮ ಬಲ್ಲ. ಸಂಭಾವನೆಭಟ್ಟರು ಬಂದರೆ ಅವರ ಕೈಲಿ, ಸಂತರ್ಪಣೆ ಮನೆಗೆ ಹೋದರೆ ಪರಿಚಿತರಲ್ಲಿ, ದೇವಸ್ಥಾನಗಳಲ್ಲಿ ಚರ್ಪು ಹಂಚುವ ಹಾಗೆ ಹಂಚಿದ್ದೇ ಹಂಚಿದ್ದು. ನಾನು ನೋಡಲು ತಕ್ಕಮಟ್ಟಿಗೆ ಚೆನ್ನಾಗೇ ಇದ್ದೆ. ಈ ಮನೆಯ ಸಂಬಂಧ ಬಯಸಿ ಹಲವರು ಈ ಮನೆಯ ಮೆಟ್ಟಿಲು ಹತ್ತಿಳಿದಿದ್ದು ಹೌದು. ಆದರೆ ಅಪ್ಪನ ದೃಷ್ಟಿಯಲ್ಲಿ, ನನ್ನ ದೃಷ್ಟಿಯಲ್ಲಿ, ಯಾವುದೂ ಉತ್ಕಷ್ಟ ಅನಿಸಲಿಲ್ಲ.  ನಾನು ಬಿಡು, ಇನ್ನೂ ಹುಡುಗಾಟಿಕೆಯ ವಯಸ್ಸು. ನನ್ನಪ್ಪ ಕೂಡಾ ವ್ಯವಹಾರಪ್ರಪಂಚದಲ್ಲಿ ನನ್ನಷ್ಟೇ ದಡ್ಡ ಎಂದು ನನಗೆ ಅರ್ಥವಾಗಿದ್ದು ಎಷ್ಟೋ ವರ್ಷಗಳ ನಂತರ. ನಮ್ಮ ಕಾಲದಲ್ಲಿ ನಾವು ಹೆಂಗಸರು, ಗಂಡಸರು ಎಂದರೆ ಭಾರೀ ಬುದ್ಧಿವಂತರು ಎನ್ನುವ ಭ್ರಮೆಯಲ್ಲಿ ಬದುಕು ಮುಗಿಸಿ ಬಿಡುತ್ತಿದ್ದೆವು. ಹಳ್ಳಿಯಲ್ಲಿದ್ದವರಿಗೆ ಹೊರಗಿನ ಪ್ರಪಂಚ ಗೊತ್ತೇ ಇರಲಿಲ್ಲ. ಊರಿಂದೂರಿಗೆ ಓಡಾಡಿ, ಸಾಮಾನುಸರಂಜಾಮು ತಂದು ಹಾಕಿ, ಮನೆವಾರ್ತೆ ನಡೆಸುತ್ತಿದ್ದ ಗಂಡಸರು ಅಂದರೆ ನಮ್ಮ ದೃಷ್ಟಿಯಲ್ಲಿ ಬೃಹಸ್ಪತಿಯ ತುಣುಕುಗಳು. ‘ಈ ಲೋಕದಲ್ಲಿ ನೂರಕ್ಕೆ ನೂರು ಸರಿಯಾದದ್ದು ಅನ್ನುವಂತಾ ಸಂಬಂಧ ಸಿಗುವುದಿಲ್ಲ. ಅಷ್ಟಿಷ್ಟಾದರೂ ಹೊಂದಾಣಿಕೆ ಅನಿವಾರ್ಯ’ ಎಂದು ನಮಗೆ ಅರ್ಥವಾಗುವಷ್ಟರಲ್ಲಿ ಕಾಲ ಮಿಂಚಿತ್ತು. ನನ್ನ ವಯಸ್ಸೂ ಹೆಚ್ಚತೊಡಗಿತ್ತು ಅನ್ನುವುದು ಅರ್ಥವಾಗುತ್ತದೆ ತಾನೇ? ಅಪ್ಪನ ಕಾಲ ಮುಗಿಯಿತು. ಅವನು ಪೆಟ್ಟಿಗೆ ಕಟ್ಟಿದ. ಯಜಮಾನಿಕೆ ಅಣ್ಣನಿಗೆ ಬಂತು. ‘ನಿನ್ನ ಮದುವೆಯಾಗುವವರೆಗೆ ನನ್ನ ಮದುವೆಯಿಲ್ಲ’ ಅನ್ನುತ್ತಿದ್ದವನು ಗೋಸುಂಬೆಯಂತೆ ಬಣ್ಣ ಬದಲಿಸಿದ. ‘ಕಾಯುತ್ತಾ ಕೂತರೆ ನನ್ನ ಗಡ್ಡ ಹಣ್ಣಾಗುತ್ತೆ’ ಎಂದು ಕಟು ಸತ್ಯವನ್ನೇ ನುಡಿದ. ಅವನನ್ನು ತಡೆಯುವವರು ಯಾರಿದ್ದರು?  ಮೂವತ್ತೆರಡರಲ್ಲಿ ಅಣ್ಣನಿಗೆ ಕಂಕಣಬಲ ಕೂಡಿ ಬಂತು. ನಾನು ಇಪ್ಪತ್ತೈದರಲ್ಲಿದ್ದೆ. ಈ ಕಾಲ ಅಲ್ಲ ಅದು. ಹಳೆಗಾಲ. ಹುಡುಗ, ಹುಡುಗಿಗೆ ಹತ್ತು, ಹನ್ನೆರಡು ವರ್ಷ ವ್ಯತ್ಯಾಸವಿದ್ದರೂ ಕಣ್ಣು ಮುಚ್ಚಿಕೊಂಡು ಧಾರೆ ಎರೆದು ಕೊಡುತ್ತಿದ್ದ ಕಾಲ. ಅಪ್ಪ, ನಾನು ಇಂತಾ ವಿಷಯಗಳಲ್ಲಿ ಚೌಕಾಶಿ ಮಾಡಿದ್ದರಿಂದ ನಾನು ಕನ್ಯಾಕುಮಾರಿಯಾಗಿ ಉಳಿಯಬೇಕಾಯ್ತು ಎಂದು ಎಷ್ಟೋ ಸಲ ನನಗೆ ಅನಿಸಿದ್ದಿತ್ತು. ಬಿಡು, ಆಗಿದ್ದು ಆಗಿ ಹೋಗಿತ್ತಲ್ಲ?

ಯಾರ ಮನೆ ಇದು? ಯಾರು ಕಟ್ಟಿಸಿದ್ದು? ಯಾರು ತಿದ್ದಿ ತೀಡಿ ಚಂದವಾಗಿರಿಸಿದ್ದು? ಈ ಮನೆಯ ಮಗಳಾದ ನನಗೆ ಇಲ್ಲಿ ಯಾವ ಹಕ್ಕೂ ಇಲ್ಲ ಅಂದರೆ ಏನರ್ಥ? ನಿನ್ನೆ, ಮೊನ್ನೆ ಬಂದವಳು ಯಜಮಾನಿಕೆಯ ಪಟ್ಟಕ್ಕೇರಿದಳು. ನಿಧನಿಧಾನವಾಗಿ ನಾನು, ಅಮ್ಮ ಹೊರಗಿನವರಾಗುತ್ತಾ ಹೋದೆವು. ಅತ್ತಿಗೆಯ ನೆಂಟರಿಷ್ಟರು ಮನೆಗೆ ಬಂದರೆ ಅದೇನು ಸಂಭ್ರಮ, ಅದೇನು ಉತ್ಸಾಹ. ಅವರ ಗುಂಪಿನಲ್ಲಿ ನಾವು ಪರಕೀಯರು. ಅನ್ಯರು. ತಡವಾಗಿ ಮದುವೆಯಾಗಿದ್ದ ಅಣ್ಣ ಹೆಂಡತಿಯನ್ನು ತಲೆಯ ಮೇಲೆ ಏರಿಸಿಕೊಂಡಿದ್ದ. ಮದುವೆಯಾಗದ ತಂಗಿ ಮನೆಯಲ್ಲಿದ್ದಾಳೆ ಎನ್ನುವ ಯಾವ ಎಗ್ಗೂ ಇಲ್ಲದೆ ಅವರ ಸರಸ ಸಲ್ಲಾಪಕ್ಕೆ ಸಾಕ್ಷಿಯಾಗುವ ಸಂದರ್ಭಗಳು ಬಂದಾಗ ನನ್ನ ಮನಸ್ಸು ಮುದುಡಿ ಹೋಗುತ್ತಿತ್ತು. ಮಧ್ಯಾಹ್ನ ಉಂಡ ಮೇಲೆ ಗಂಟೆಗಟ್ಟಲೆ ಕೋಣೆಯ ಬಾಗಿಲು ಮುಚ್ಚಿಕೊಂಡು ಗಡದ್ದಾಗಿ ಮಲಗುವ ಅವರ ಚಾಳಿ ಅಮ್ಮನಿಗೆ ಇಷ್ಟವಾಗುತ್ತಿರಲಿಲ್ಲ. ಅವಳ ಗೊಣಗಾಟದ ಹಿಂದಿದ್ದಿದ್ದು ನನ್ನ ಕಾಳಜಿ. ನನ್ನ ಚಿಂತೆ..

ಅತ್ತಿಗೆಗೆ ಇಬ್ಬರು ಮಕ್ಕಳಾದರು. ಅವರನ್ನೂ ಕೂಡಾ ತನ್ನ ಸ್ವಂತ ಆಸ್ತಿ ಅನ್ನುವಂತೆ ನಮ್ಮೆಡೆಗೆ ಬರಗೊಡದೆ ಹೇಗೆ ಬೆಳೆಸುತ್ತಿದ್ದಳು ಗೊತ್ತಾ? ನಾನಾಗಲೀ, ಅಮ್ಮನಾಗಲೀ ಆಸೆಪಟ್ಟು ಎತ್ತಿಕೊಳ್ಳುವಂತಿಲ್ಲ. ಮುದ್ದಾಡುವಂತಿಲ್ಲ. ಎಷ್ಟು ಸಾಧ್ಯವೋ ಅಷ್ಟು ನಮ್ಮ ಮನಸ್ಸನ್ನು ಗೀರುವುದು ಅವಳ ದಿನಚರಿಯಲ್ಲಿ ಸೇರಿಕೊಂಡುಬಿಟ್ಟಿತ್ತು. ‘ಆ ಪುರಾಣ ಬೇಡ’ ಅಂದುಕೊಳ್ಳುತ್ತಲೇ ಮತ್ತೆ ಅದನ್ನು ಉರು ಹಾಕುತ್ತಿದ್ದೇನೆ, ನನ್ನ ಬುದ್ಧಿಗಿಷ್ಟು..

ನನ್ನಮ್ಮ ಇನ್ನೂ ನನ್ನ ಮದುವೆಯ ಕನವರಿಕೆಯಲ್ಲಿದ್ದಳು. ಅಣ್ಣ ಮುಲಾಜಿಲ್ಲದೆ ಹೇಳುತ್ತಿದ್ದ,

“ನಿಂಗೊಂದು ಭ್ರಾಂತು. ಇನ್ನೂ ಅವಳನ್ನ ಹುಡುಗಿ ಅಂದ್ಕಂಡಿದ್ದಿ. ಈಗ ಹುಡುಕ್ಕೊಂಡ್ಹೋದ್ರೆ ಯಾರೋ ಗತಿಗೆಟ್ಟೋರು ಸಿಕ್ಬೇಕು, ಅಷ್ಟೇ..” ‘ಆಗಲಿ.., ಆಗಲಿ.., ಆಗಲಿ.. ಗತಿಗೆಟ್ಟೋರಾದ್ರೂ ಅಡ್ಡಿಲ್ಲ’ ಅನ್ನುತ್ತಿತ್ತು ಸೋತು ಹೋದ ನನ್ನ ಜೀವ. ‘ಮದುವೆ’ ಅನ್ನುವುದು ಜೀವನದ ಪರಮೋದ್ದೇಶ ಆಗಿದ್ದ ಕಾಲದಲ್ಲಿ ಹೀಗೆ ಯೋಚಿಸದೆ ಮತ್ತೆ ಹ್ಯಾಗೆ ಯೋಚಿಸಬಲ್ಲವಳಾಗಿದ್ದೆ ನಾನು? ಹೀಗಿರುವಾಗ..

                                          *****

‘ನೋಡಿದ್ಯಾ? ನೋಡಿದ್ಯಾ? ಕತೆ ಈ ಹಂತಕ್ಕೆ ಬಂದ ಕೂಡ್ಲೆ ನಿನ್ನ ನಿದ್ದೆ ಪರಾರಿ ಆಗ್ತಿದೆ. ಕಿವಿ ನೆಟ್ಟಗಾಗ್ತಿದೆ, ಅಲ್ವಾ?’ ಸಾಧ್ವಿ ಎನ್ನುವ ಹೆಂಗಸಿನ ಬಾಯಿಂದ ಈ ಪ್ರಶ್ನೆ ತೂರಿ ಬಂದು ವೆಂಕಟಪ್ಪನನ್ನು ತಾಗಿತು. ಅವನಿಗೆ ಕೊಂಚ ನಾಚಿಕೆಯೂ ಆಯ್ತು. ಹೀಗಿರುವಾಗ ಅನ್ನುವ ಪದ ಬಂದ ಕೂಡಲೆ ಕತೆಗೊಂದು ತಿರುವು ಬರುತ್ತದೆ ಎನ್ನುವುದು ಅವನಿಗೆ ಗೊತ್ತಿದೆ. ಕತೆ ಹೇಳುವವರಿಗೂ ತಾವು ಎದುರಿನವರ ಕುತೂಹಲ ಕೆರಳಿಸುತ್ತಿದ್ದೇವೆ ಎನ್ನುವ ಅರಿವಿರುತ್ತದೆ. ಮುಂದುವರಿಯಿತು ಕತೆ..

ನಿನ್ನಂತವನೇ ಒಬ್ಬ ಈ ಮನೆಗೆ ಕೆಲಸಕ್ಕೆ ಬಂದು ಸೇರಿಕೊಂಡ. ನೀನು ಇವತ್ತು ಮಲಗಿದ್ದೀಯಲ್ಲ, ಇದೇ ಅವನೂ ಮಲಗುತ್ತಿದ್ದ ಖಾಯಂ ಜಾಗ. ಅವನ ಹೆಸರು, ಬೇಡ ಬಿಡು. ಹೆಸರು ಕಟ್ಟಿಕೊಂಡೇನು? ಜಾತಿ, ನೀತಿ, ಆಸ್ತಿ, ಅಂತಸ್ತು ಎಲ್ಲಾ ಮರೆತು ಅವನೆಡೆಗೆ ನಾನು ಆಕರ್ಷಿತಳಾದೆ. ‘ವಯೋಸಹಜ’ ಅನ್ನಲು ನಾನು ಹದಿಹರೆಯದ ಹುಡುಗಿಯಲ್ಲ. ಆಗಲೇ ವಯಸ್ಸು ಮೂವತ್ತು ದಾಟಿ ಹೋಗಿತ್ತು. ‘ಈ ಅಣ್ಣ ಈ ಜನ್ಮದಲ್ಲಿ ನನ್ನ ಮದುವೆ ಮಾಡುವುದು ಸುಳ್ಳು’ ಎನ್ನುವ ಹತಾಶೆಯಿಂದಲೋ, ದಿನವೂ ಮನೆಯಲ್ಲಿ ನೋಡುತ್ತಿದ್ದ ಅಣ್ಣ, ಅತ್ತಿಗೆಯರ ಸರಸ ದಾಂಪತ್ಯದಿಂದಲೋ, ಸಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಂಡು ಹೊಸ ಅನುಭವವನ್ನು ದಕ್ಕಿಸಿಕೊಳ್ಳಬೇಕೆಂಬ ತವಕದಿಂದಲೋ, ಏನೋ ಒಂದು, ನಮ್ಮಿಬ್ಬರ ನಡುವೆ ಸೆಳೆತ ಶುರುವಾಗಿದ್ದು ನಿಜ. ಅವನು ಕೆಟ್ಟವನೇನಲ್ಲ. ಓಡಿ ಹೋಗಿ ಹೊಸ ಬದುಕು ಕಟ್ಟಿಕೊಳ್ಳುವ ಮಾತಾಡುತ್ತಾ ನನ್ನನ್ನು ಉತ್ತೇಜಿಸುತ್ತಿದ್ದ. ‘ಈ ರಟ್ಟೆ ಹೆಂಗಿದೆ ನೋಡಿ ಸಣ್ಣಮ್ಮಾ’ ಎನ್ನುತ್ತಾ ಅವನು ಮೊಣಕೈ ಬಗ್ಗಿಸಿ ರಟ್ಟೆ ಉಬ್ಬಿಸಿದರೆ, ಅಲ್ಲಿ ಮತ್ತ್ಯಾರಿರದಿದ್ದರೆ, ಉಕ್ಕಿನಂತಾ ಅವನ ರಟ್ಟೆ ಮುಟ್ಟಿ ನೋಡಿ ನಾನು ಉನ್ಮತ್ತಳಾಗುತ್ತಿದ್ದೆ. ‘ನನ್ನ ರಟ್ಟೆ ಗಟ್ಟಿ ಇದೆ. ನಿಮ್ಮ ಕೂದಲು ಕೊಂಕದಂತೆ ನಿಮ್ಮನ್ನು ಸಾಕುವುದು ನನ್ನ ಜವಾಬ್ದಾರಿ’ ಎನ್ನುವುದು ಅವನ ಶಕ್ತಿ ಪ್ರದರ್ಶನದ ಒಳ ಇಂಗಿತ. ಸಂದರ್ಭ ದೊರಕಿದಾಗ, ಅಥವಾ ಸಂದರ್ಭ ಸೃಷ್ಟಿಸಿಕೊಂಡು, ಕೇವಲ ಸ್ಪರ್ಶಸುಖ ಪಡೆಯುವಷ್ಟಕ್ಕೆ ಸೀಮಿತಗೊಂಡಿದ್ದ ಮಧುರ ಸಂಬಂಧ ಸಂಪರ್ಕಕ್ಕೆಳಸುವವರೆಗೆ ಮುಂದುವರಿದಿದ್ದರೆ ಅದಕ್ಕೆ ಕಾರಣ ಉಪ್ಪು, ಹುಳಿ, ಖಾರ ತಿನ್ನುವ ಈ ದೇಹ ಎಂದು ಆಹಾರ ಪದ್ಧತಿಯ ಮೇಲೆ ಗೂಬೆ ಕೂರಿಸುವುದು ಸಲೀಸು.  ಶಾರೀರಿಕ ಬಯಕೆಯ ಹಪಹಪಿಯೇ ಅಂತಾದ್ದು. ಎಲ್ಲಿಂದ ಶುರುವಾದರೂ ಅದು ಅಂತ್ಯಗೊಳ್ಳುವುದು ಪರಸ್ಪರ ಮಿಲನದಲ್ಲಿ. ಅಲ್ಲಿಯವರೆಗೆ ಅದಕ್ಕೆ ಪೂರ್ಣವಿರಾಮ ಬೀಳುವುದಿಲ್ಲ. ತೃಪ್ತಿ ದೊರೆಯುವುದಿಲ್ಲ. ನಾಚಿಕೆ ಬಿಟ್ಟು ಮಾತಾಡುತ್ತಿದ್ದೇನೆ ಅನಿಸುತ್ತಿದೆಯಾ? ಎಂತೆಂತಾ ಋಷಿ, ಮುನಿಗಳೇ ಕಾಮನ ಬಾಣಕ್ಕೆ ಸಿಲುಕಿ ಪಥಭ್ರಷ್ಟರಾಗಿರುವ ನಿದರ್ಶನಗಳು ಪುರಾಣಕತೆಗಳಲ್ಲಿ ಹೇರಳವಾಗಿ ದೊರಕುವಾಗ ನನ್ನಂತಾ ಅಲ್ಪಳು ಎಷ್ಟರವಳು? ಮಗ್ಗುಲಲ್ಲಿ ಮಲಗಿರುತ್ತಿದ್ದ ಅಮ್ಮನಿಗೂ ಅರಿವಾಗದಂತೆ ನಡುರಾತ್ರಿಯಲ್ಲಿ ನಾನು ಅವನನ್ನರಸಿ ಧಾವಿಸುತ್ತಿದ್ದೆ. ‘ಓಡಿ ಹೋಗುವ ಮಾತು’ ಚಲಾವಣೆಯಲ್ಲಿ ಇತ್ತಾದರೂ ಅಲ್ಲಿಯವರೆಗೆ ತಾಳ್ಮೆಯಿಂದಿರಲು ದೇಹ ಸಹಕರಿಸಿರಲಿಲ್ಲ. ‘ಓಡಿ ಹೋಗಬೇಕು’ ಎನ್ನುವ ತೀರ್ಮಾನ ಗಟ್ಟಿಯಾಗಬೇಕಾದರೆ ಅದಕ್ಕೂ ಬೇಕು ಮನೋಬಲ. “ಏನನ್ನುತ್ತೀರಿ ಸಣ್ಣಮ್ಮಾ?” ಎನ್ನುತ್ತಾ ತೀರ್ಮಾನವನ್ನು ಅವನು ನನಗೇ ಬಿಟ್ಟಿದ್ದ. ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ನನಗಿದ್ದ ಅಡ್ಡಿ ಒಂದೇ, ನನ್ನಮ್ಮ. ಜಗತ್ತಿನ ಯಾವ ಕಪಟ, ವಂಚನೆಗಳನ್ನೂ ಅರಿಯದ ಹಳ್ಳಿಗಾಡಿನ ಮುಗ್ಧೆ. ನಾನು ಓಡಿ ಹೋದರೆ ಎದೆ ಒಡೆದುಕೊಳ್ಳುತ್ತಾಳೆ ಅವಳು. ಆದರೆ ಇಲ್ಲೇ ಇದ್ದುಕೊಂಡು ಈ ಸಂಬಂಧದ ನಿಭಾವಣೆಯೂ ಅಸಾದ್ಯ. ಸಮೃದ್ಧವಾದ ಸುಖವನ್ನುಂಡು ತಿರುಗಿ ಬಂದು ಮಲಗಿದಾಗ ಕೆಲವೊಮ್ಮೆ ನನ್ನಮ್ಮನಿಗೆ ಎಚ್ಚರವಾದದ್ದಿತ್ತು. ‘ಬಚ್ಚಲಿಗೆ ಹೋಗಿದ್ಯಾ?’ ಎಂದು ಅವಳೇ ಕೇಳುವಷ್ಟು ಅಮಾಯಕಿ ನನ್ನಮ್ಮ. ಅವಳ ಮಮತೆಯ ಪಾಶ ನನ್ನನ್ನು ಬಂಧಿಸಿಟ್ಟಿತ್ತು. ‘ನಡೆದಷ್ಟು ದಿನ ನಾಣ್ಯ’ ಅನ್ನುವ ಹಾಗೆ ಸಾಧ್ಯವಾದಷ್ಟು ಕಾಲ ಈ ರಹಸ್ಯ ಸಂಬಂಧವನ್ನು ಕಾಪಾಡಿಕೊಂಡು ಬರಬೇಕೆನ್ನುವ ನನ್ನ ಎಡಬಿಡಂಗಿತನವೇ ನನ್ನ ದುರ್ವಿಧಿಗೂ ಕಾರಣವಾಯ್ತು. ಏಕಾಂತದ ಕ್ಷಣ ಲೋಕಾಂತವಾಗುವ ಸಂದರ್ಭ ಬಂದೇಬಿಟ್ಟಿತು. ವಿಧಿ ಹೇಗಿರುತ್ತದೆ ನೋಡು. ಯಾವುದೇ ತೀರ್ಮಾನ ಚೂರು ಹಿಂಚುಮುಂಚಾದರೂ ಪರಿಣಾಮ ಅನೂಹ್ಯವಾಗಿಬಿಡುತ್ತದೆ. ‘ಪಿತ್ಥ ಕೆರಳಿದ’ ಕಾರಣ ಕಲ್ಪಿಸಿಕೊಂಡು ಅಮ್ಮ ನನಗೆ ಮನೆಮದ್ದು ಮಾಡಿಕೊಡುತ್ತಿದ್ದರೆ ಚಾಣಾಕ್ಷೆ ಅತ್ತಿಗೆ ವಾಸನೆ ಹಿಡಿದಿದ್ದಳು ಮತ್ತು ಹೊಂಚು ಹಾಕಿ ಕೂತು ನನ್ನನ್ನು ಹಿಡಿದೂಬಿಟ್ಟಳು. ಆ ಅರ್ಧರಾತ್ರಿಯಲ್ಲಿ ಮನೆಯೊಳಗೆ ದೊಡ್ಡ ರಂಪ, ರಾದ್ಧಾಂತ. ಅಮ್ಮ ಈ ಸತ್ಯವನ್ನು ಜೀರ್ಣಿಸಿಕೊಳ್ಳಲಾಗದೆ ಮರವಟ್ಟು ಹೋಗಿದ್ದಳು. ಮೈಯಲ್ಲಿ ಚಳಿ ಹೊಕ್ಕವಳಂತೆ ನಡುಗುತ್ತಿದ್ದಳು. ಅವನನ್ನು, ನನ್ನ ಕಲ್ಪನೆಗೆ ಮೀರಿದ ದೇಹಸುಖ ಉಣಿಸಿ ತಣಿಸಿದವನನ್ನು, ನನ್ನನ್ನು ಕಾಪಾಡುವ ವಚನವಿತ್ತವನನ್ನು ನಟ್ಟನಡುರಾತ್ರಿಯಲ್ಲಿ ಮನೆಯಿಂದ ಆಚೆಗೆ ಅಟ್ಟಲಾಯ್ತು. “ನಾನು ಸಣ್ಣಮ್ಮನ್ನ ಮದುವೆ ಮಾಡ್ಕೋತೀನಿ” ಎಂದು ಅವನು ಸೆಟೆದು ನಿಂತಿದ್ದ. ಅಣ್ಣ ಒಳಗಿನಿಂದ ಕುಡುಗೋಲು ತಂದಿದ್ದ.

ಅವನ ರೋಷಾವೇಶ ಕಂಡು ಇವತ್ತು ಈ ಮನೆಯಲ್ಲಿ ಒಂದು ಹೆಣ ಬಿತ್ತೆಂದೇ ಲೆಕ್ಕ ಎಂದು ನಾನು ಅಂದುಕೊಂಡಿದ್ದೆ. ಮೈಮೇಲಿನ ಪ್ರಜ್ಞೆ ಕಳೆದುಕೊಳ್ಳದಿದ್ದ ಅತ್ತಿಗೆ ಅಣ್ಣನನ್ನು ತಡೆದಿದ್ದಳು. ನನ್ನವನನ್ನು ಹೆದರಿಸುವ ಮಾತಾಡಿದ್ದಳು,

“ನಮ್ಮನೆ ಹೆಣ್ಣನ್ನ ಅತ್ಯಾಚಾರ ಮಾಡಿ ಕೆಡಿಸಿಬಿಟ್ಟ ಅಂತ ನಾವೇನಾದ್ರೂ ದೂರು ಕೊಟ್ರೆ ನಿನ್ನ ಜೈಲಿಗೆ ಹಾಕಿ ಅರೀತಾರೆ. ಎಷ್ಟೊರ್ಷ ಜೈಲಾಗುತ್ತೋ ಯಾರಿಗೆ ಗೊತ್ತು?”

ನಾನು ಧೈರ್ಯ ಮಾಡಿ ಬಾಯ್ಬಿಟ್ಟಿದ್ದೆ,

“ಸತ್ಯ ಹೇಳ್ತೀನಿ ನಾನು. ಅವನನ್ನ ಮದುವೆ ಮಾಡ್ಕಂತೀನಿ ಅಂತೀನಿ..”

“ಅಷ್ಟು ನಿಶ್ಚೈಸಿಬಿಟ್ಟಿದ್ಯಾ? ನಿಂಗೆ ತಿಂದಿದ್ದು ಕಣ್ಣಿಗೆ ಬಂದಿದೆ..” ಅಣ್ಣ ವಿಕಾರವಾಗಿ ನಕ್ಕಿದ್ದ.

“ ನಡಿಯೋ, ತಮಾಷಿ ನೋಡ್ತಾ ನಿಂತ್ಕಂಡಿದೀಯಾ?” ಅಣ್ಣ ಅವನ ಕುತ್ತಿಗೆ ಚೆಂಡಿನ ಮೇಲೆ ಕೈ ಇಟ್ಟು ಮುಗ್ಗರಿಸಿ ಬೀಳುವಂತೆ ಹೊರಗೆ ದಬ್ಬಿದ್ದ. ಹೊರಡುವ ಮುನ್ನ ಆ ನನ್ನ ಪ್ರಿಯತಮ ನನ್ನ ಕಡೆ ನೋಡಿದ ಅದೊಂದೇ ನೋಟದಲ್ಲಿ ನಾನಾರ್ಥಗಳಿದ್ದುವು. ‘ಹೆದರಬೇಡಿ ಸಣ್ಣಮ್ಮಾ, ನಾನಿದೀನಿ. ನಿಮ್ಮ ಕೈ ಬಿಡಲ್ಲ..’ ಇದು ನಾನು ಅರ್ಥ ಮಾಡಿಕೊಂಡ ಭಾಷೆ.

                                             *****

ಮರುದಿನ ಯಥಾಪ್ರಕಾರ ಬೆಳಗಾಯ್ತು, ಹಿಂದಿನ ರಾತ್ರಿ ನಡೆದ ಯಾವ ರಣಾಂಗಣದ ಕುರುಹೂ ಇಲ್ಲದಂತೆ. ಅಮ್ಮ ನನ್ನ ಜೊತೆ ಮುಖ ಕೊಟ್ಟು ಮಾತಾಡಲಿಲ್ಲ ಅನ್ನುವುದೊಂದು ಬಿಟ್ಟರೆ ನಿನ್ನೆಗೂ, ಇಂದಿಗೂ ವ್ಯತ್ಯಾಸವೇನಿರಲಿಲ್ಲ. ಕಾಫಿ ಆಯ್ತು. ತಿಂಡಿ ಆಯ್ತು. ಎಲ್ಲರ ಸ್ನಾನ ಮುಗಿದ ಮೇಲೆ ಮೈಲಿಗೆಬಟ್ಟೆಗಳನ್ನು ಒಟ್ಟು ಮಾಡಿಕೊಂಡು ಯಾವತ್ತಿನಂತೆ ಕೆರೆಗೆ ಹೊರಟೆ. ನನ್ನ ದಿನಚರಿಯನ್ನು ಬಲ್ಲ ಆ ನನ್ನ ನಲ್ಲ ನನಗೋಸ್ಕರ ಅಲ್ಲೆಲ್ಲೋ ಕಾದು ನಿಂತಿರುತ್ತಾನೆ ಅನ್ನುವುದು ನನ್ನ ಮೈ ನವಿರೇಳಿಸುತ್ತಿದ್ದ ಕಲ್ಪನೆ. ನಂಬಿಕೆ. ಒಮ್ಮೆ ಅವನು ಕಣ್ಣಿಗೆ ಬಿದ್ದರೆ ಅವನ ಬೆನ್ನು ಬಿದ್ದು ಹೋಗಲು ತಯಾರಾಗಿಯೇ ಹೊರಟಿದ್ದೆ. ಅತ್ತಿತ್ತ ನೋಡುತ್ತಾ, ನಿಧಾನಕ್ಕೆ ಬಟ್ಟೆಗೆ ಸೋಪು ಹಚ್ಚಿ ಕುಸುಕುತ್ತಾ, ನಿರೀಕ್ಷೆ, ನಿರೀಕ್ಷೆ. ಬಂದಿದ್ದು ಅವನಲ್ಲ ಅಣ್ಣ. ಕೈಲೊಂದು ಉದ್ದನೆಯ ಬೊಂಬು. ‘ಇವನ್ಯಾಕೆ ಇಲ್ಲಿಗೆ ಬಂದ? ಪತ್ತೇದಾರಿಕೆ ಮಾಡುತ್ತಿದ್ದಾನಾ?’ ಎನ್ನುವ ಅಳುಕಿನಿಂದ ನಾನು ಬೆದರಿದೆ. ಬೆವರಿದೆ. ಸಾಂಬಣ್ಣ ಬಂದಿದ್ದು ಯಾಕೆ ಗೊತ್ತಾ? ಮುಂದಾಗುವ ಕಿಂಚಿತ್ ಕಲ್ಪನೆ ಇಲ್ಲದ ಈ ಅಮಾಯಕಿಯನ್ನು, ತನ್ನಷ್ಟಕ್ಕೆ ಮೊಣಕಾಲುದ್ದದ ನೀರಿನಲ್ಲಿ ನಿಂತು ಮೇಲಿದ್ದ ಒಗೆಯುವ ಕಲ್ಲಿನ ಮೇಲೆ ಬಟ್ಟೆ ಒಗೆಯುತ್ತಿದ್ದವಳನ್ನು, ಅನಾಮತ್ತಾಗಿ ಅವನು ಕೆರೆಯೊಳಗೆ ನೂಕಿಬಿಟ್ಟಿದ್ದ. ಅಡಿ ಜಾರಿ ಬಿದ್ದವಳನ್ನು ಮೇಲೇಳದಂತೆ ಬೊಂಬಿನಿಂದ ಒತ್ತಿ ಒತ್ತಿ ನೀರಿನಲ್ಲಿ ಮುಳುಗಿಸಿ..

ಮದುವೆಯಾಗದೆ ಮನ ನೊಂದ ಹೆಣ್ಣೊಬ್ಬಳು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಒಂದಷ್ಟು ಕಾಲ ಜನರ ಬಾಯಲ್ಲಿ ಎಲಡಿಕೆಯಾಗಿ ನಂತರ ಮರವೆಗೂ ಸಂದು ಹೋಯ್ತು.

ಈ ಮನೆಗೆ ಸ್ತ್ರೀಶಾಪ ಇದೆ ಅಂತ ಹೇಳಿದ್ದು ಯಾಕೆ ಅಂತ ಈಗ ಗೊತ್ತಾಯ್ತಲ್ವಾ? ನನ್ನಮ್ಮ ಕೂಡಾ ಆಮೇಲೆ ಹೆಚ್ಚು ವರ್ಷ ಬದುಕಲಿಲ್ಲ. ಇದ್ದಷ್ಟು ಕಾಲ ಇವರು ಸುಖವಾಗಿ ಬದುಕಗೊಡಲಿಲ್ಲ. 

ನನ್ನನ್ನು, ಅಮ್ಮನನ್ನು ಹುರಿದು ಮುಕ್ಕಿದ ಇವರನ್ನು ಸುಮ್ಮನೆ ಬಿಡುತ್ತೇನೆಯೇ ನಾನು? ಬಿಟ್ಟರೆ ನನ್ನ ಸೇಡು ತೀರೀತೇ? ತನ್ನ ಸ್ವಂತ ಸುಖ ಹುಡುಕಿಕೊಂಡ ಅಣ್ಣ ನನ್ನ ಕಡೆಗೂ ಗಮನ ಕೊಟ್ಟಿದ್ದರೆ ನಾನ್ಯಾಕೆ ಯಾರದೋ ತೆಕ್ಕೆಗೆ ಬೀಳುತ್ತಿದ್ದೆ? ಲೋಕ ಗೊತ್ತಿರದ ಒಂದು ಅಬೋಧ ವಯಸ್ಸಿನಲ್ಲಿ ಧೋರಣೆ ಮಾಡಿದ್ದರೂ ನಂತರ ಬುದ್ಧಿ ಕಲಿತಿದ್ದೆನಲ್ಲ ನಾನು? ‘ಹಳ್ಳಿಮನೆಯಲ್ಲಿ ಗೇಯಲು ಒಂದು ಪುಗಸಟ್ಟೆ ಆಳು ಬಿದ್ದಿರಲಿ’ ಎನ್ನುವಷ್ಟು ಕಟುಕನಾದನೇ ಅಣ್ಣ? ಮನುಷ್ಯಮಾತ್ರರ ದೌರ್ಬಲ್ಯವಾದ ದೇಹಸುಖದ ಉತ್ಕಟೇಚ್ಛೆ ನನಗೂ ಉಂಟಾದರೆ ಅದು ನನ್ನ ತಪ್ಪೇ? ‘ಹೋಗು, ಎತ್ಲಾಗಾರೂ ಸಾಯಿ..’ ಎನ್ನುವಷ್ಟು ಔದಾರ್ಯ ಮೆರೆದಿದ್ದರೂ ಸಾಕಾಗಿತ್ತು, ನನ್ನ ಅಣ್ಣನನ್ನು ನಾನು ದೇವರ ಸ್ಥಾನದಲ್ಲಿ ಕೂರಿಸಿ ಪೂಜೆ ಮಾಡುತ್ತಿದ್ದೆ.

ಪ್ರೀತಿಯನ್ನು ಮೆಟ್ಟಿ ಮುರಿದಿದ್ದು, ಮರ್ಯಾದಾಹತ್ಯೆ ನಡೆಸಿಯೂ ಸುಭಗನಂತೆ ಬದುಕುತ್ತಿರುವುದು, ನನ್ನ, ನನ್ನಮ್ಮನ ಒಡವೆವಸ್ತುಗಳನ್ನೆಲ್ಲಾ ಅತ್ತಿಗೆ ಆತುರದಿಂದ, ಅತ್ಯಾಸೆಯಿಂದ ಸ್ವಂತದ್ದಾಗಿಸಿಕೊಂಡು ಬೀಗುತ್ತಿರುವುದು, ಇವನ್ನೆಲ್ಲಾ ನಾನು ಸೈಸಿಕೊಳ್ಳಬೇಕೇ? ಯಾಕೆ? ಕಾನೂನಿನ ಕುಣಿಕೆಗೆ ಸಿಗದ ಶಿಕ್ಷೆಗಳೂ ಇರುತ್ತವೆ ಎಂದು ಇವನಿಗೆ ಗೊತ್ತಾಗಲಿ. ಇವನು, ಇವನ ಹೆಂಡತಿ ಜೀವಂತ ಶವಗಳಾಗಿ ಬದುಕಲಿ. ಇದು ನನ್ನ ಶಾಪ.., ಶಾಪ..

ಸಾಂಬಣ್ಣನ ಒಬ್ಬನೇ ಮಗ, ಒಂದು ನಡು ಮಳೆಗಾಲದ ಸಂಜೆ ಸ್ಕೂಲಿನಿಂದ ಬರುತ್ತಿದ್ದವನು ತೋಟದ ಸಾರ ದಾಟುವಾಗ ಕಾಲು ಜಾರಿ ಕೆಳಗಿನ ಹಳ್ಳಕ್ಕೆ ಬಿದ್ದು ತೇಲಿಕೊಂಡು ಹೋದ. ಸಾಂಬಣ್ಣನ ಮಗಳಿಗೆ ಮದುವೆಯಾಗಿ ಹತ್ತು ವರ್ಷ. ಇದುವರೆಗೆ ಗರ್ಭ ಕಟ್ಟಿಲ್ಲ. ಎರಡು, ಮೂರು ತಿಂಗಳಾಗುವಷ್ಟರಲ್ಲಿ ಬಸುರು ಇಳಿದು, ಅಲ್ಲಿಂದಲ್ಲಿಗೆ ಚುಕ್ತಾ ಆಗಿಬಿಡಬೇಕು ಲೆಕ್ಕ. ‘ವಂಶ ನಿರ್ವಂಶವಾಗಲಿ’ ಎಂದು ಯಾವ ಹೆಣ್ಣೂ ತೌರನ್ನು ಕುರಿತು ನೆಟಿಗೆ ಮುರಿಯಲಿಕ್ಕಿಲ್ಲ. ಆದರೆ ನಾನು? ತೌರು ತೌರಿನ ಹಾಗಿದ್ದರೆ ಮನೆಮಗಳು ಯಾಕೆ ಶಾಪ ಹಾಕುತ್ತಾಳೆ, ಅಲ್ಲವಾ?

ಆಯ್ತು, ಇನ್ನಾದರೂ ಮಲಗು. ಇಷ್ಟು ಹೊತ್ತು ನನ್ನ ಕತೆ ಕೇಳಿದಿಯಲ್ಲ, ನನ್ನ ನಾಲಿಗೆ ತುರಿಕೆ ಒಂದಿಷ್ಟಾದರೂ ತೀರಿತು ಇವತ್ತು. ಇನ್ನು ಇಲ್ಲಿಗೆ ಅಂಟಿಕೊಂಡಿರುವುದು, ಬಿಡುವುದು ನಿನ್ನ ಹಣೇಬರ..

                                           ******

ಯಜಮಾಂತಿ ಬೆಳಿಗ್ಗೆ ಕಾಫಿ ತಂದಾಗ ವೆಂಕಟಪ್ಪ ನಾಪತ್ತೆ. ಅವನ ಕೈಚೀಲವೂ..

                                     *********

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

5 thoughts on “ಸ್ತ್ರೀ ಶಾಪ”

  1. Raghavendra Mangalore

    ವಿಭಿನ್ನವಾದ ಕಥೆ. ಅಷ್ಟೇ ಸುಂದರವಾಗಿ ಹೆಣೆದ ಕಥೆಗಾರ್ತಿಗೆ ಅಭಿನಂದನೆಗಳು.

  2. ಮನಕಲಕುವ ಕಥೆ…. ಕಥೆ ಹೇಳುವ ವಿಶಿಷ್ಟ ಧಾಟಿ ಬಹಳ ಪ್ರಿಯವಾಯ್ತು.

  3. ಶ್ವೇತಾ ನರಗುಂದ

    ವಿಭಿನ್ನ ಕಥಾ ವಸ್ತು, ಬಿಗಿ ನಿರೂಪಣಾ ಶೈಲಿ. ಒಳ್ಳೆಯ ಕಥೆ.

  4. ಧರ್ಮಾನಂದ ಶಿರ್ವ

    ಕುತೂಹಲವನ್ನು ಉಳಿಸಿಕೊಳ್ಳುತ್ತ ಸಾಗುವ ಕಥೆಯ ನಿರೂಪಣೆ, ಶೈಲಿ ಸೊಗಸಾಗಿದೆ. ಹಳ್ಳಿ ಬದುಕಿನ ವಾಸ್ತವಿಕತೆಗೆ ತೀರ ಹತ್ತಿರವಾದ ಮತ್ತು ದೈಹಿಕ ಸುಖವನ್ನು ಪಡೆಯಲು ಸಾಕಷ್ಟು ಅವಕಾಶಗಳಿರುವ ಸಂದರ್ಭವೊಂದನ್ನು ಸಮರ್ಥವಾಗಿ ಕಥೆಯಲ್ಲಿ ಬಳಸಲಾಗಿದೆ.
    ಕಥೆಗಾರ್ತಿಗೆ ಅಭಿನಂದನೆಗಳು.

  5. ಮುಂದಿನ ಭಾಗ ಬರೆಯಬಹುದು. ಬೇಜವಾಬ್ದಾರಿಯ ಹೀನ ಬುದ್ಧಿ ಯ ಅಣ್ಣನಿಗೆ ಕರ್ಮದ ಫಲ ಪೂರ್ತಿ ಸಿಗದೆ ಕಥೆ ಅಪೂರ್ಣ ವಾಗದೆ?

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter