‘ಬಣ್ಣಗಳ ಮಾಂತ್ರಿಕ ದೇವುದಾಸ ಶೆಟ್ಟಿ’ ಕೃತಿ ಬಿಡುಗಡೆ

ಮುಂಬಯಿ: ಕಲಾವಿದ ಶ್ರದ್ಧೆಯಿಂದ ಕೆಲಸ ಮಾಡಬೇಕು. ಕಲಾತ್ಮಕ ಚಿತ್ರಗಳನ್ನು ಬಿಡಿಸಿದಷ್ಟೇ ತನ್ನ ಮನೋಗತವನ್ನು ಬರೆದು ಹಂಚಿಕೊಳ್ಳುವುದು ಒಳಿತು. ಬಣ್ಣಗಳ ಮೂಲಕ ಎಲ್ಲವನ್ನು ಕಲಾವಿದನಿಗೆ ಹೇಳಲು ಆಗದು. ಇದಕ್ಕಾಗಿ ನಾನು ಕೃತಿ ರಚನೆಯ ಮೊರೆ ಹೋದೆ ಎಂಬುದಾಗಿ ಖ್ಯಾತ ಕಲಾವಿದ  ದೇವುದಾಸ ಶೆಟ್ಟಿ ಅವರು ಅಭಿಪ್ರಾಯ ಪಟ್ಟರು.

ದೇವುದಾಸ ಶೆಟ್ಟಿ ಅವರು ಇತ್ತೀಚೆಗೆ ಪೇಜಾವರ ಮಠ ಇಲ್ಲಿ ಆಯೋಜಿಸಿದ್ದ ಕೃತಿ ಬಿಡುಗಡೆ,  ಚಿತ್ರಕಲಾ ಪ್ರದರ್ಶನದಲ್ಲಿ ಮಾತನಾಡುತ್ತಾ ನಾನು ಕಾರ್ಮಿಕ ಕಲಾವಿದ. ಬದುಕಿನಲ್ಲಿ ಎಲ್ಲ ಏರಿಳಿತವನ್ನು ನೋಡಿದ್ದೇನೆ.  ಕಲಾವಿದ ವ್ಯಾಪಾರಿಯಲ್ಲ, ಅವನು ಕಲೋಪಾಸಕ. ಪ್ರಕೃತಿಯನ್ನು ನೋಡಿ ಅದನ್ನು ಅರ್ಥಮಾಡಿಕೊಳ್ಳಲು ನಾನು ಕಲೆಯನ್ನು ನೆಚ್ಚಿಕೊಂಡೆ. ನನ್ನ ಚಿತ್ರಗಳು ನನ್ನ ಕೈಹಿಡಿದು ನಡೆಸಿವೆ ಎಂಬುದಾಗಿ ಅವರು ನುಡಿದರಲ್ಲದೆ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ನನ್ನ ಕುರಿತು ಕೃತಿಯೊಂದನ್ನು ತಂದಿರುವುದು ತುಂಬ ಸಂತೋಷವನ್ನು ನೀಡಿದೆ. ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಹಾಗೂ ಡಾ. ಪೂರ್ಣಿಮಾ ಶೆಟ್ಟಿ ಅವರ ಪ್ರೀತಿ, ಸಹಕಾರಕ್ಕೆ ಕೃತಜ್ಞನಾಗಿರುವೆ ಎಂದು ನುಡಿದರು.

`ಬಣ್ಣಗಳ ಮಾಂತ್ರಿಕ ದೇವುದಾಸ ಶೆಟ್ಟಿ’ ಕೃತಿಯನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ. ಎನ್. ಉಪಾಧ್ಯ ಅವರು ಬಿಡುಗಡೆಗೊಳಿಸಿ ಮಾತನಾಡುತ್ತಾ `ದೇವುದಾಸ ಶೆಟ್ಟಿ ಅವರು ನಾಡಿನ ಹೆಸರಾಂತ ಅಪರೂಪದ ಪ್ರತಿಭಾ ಸಂಪನ್ನ ಕಲಾವಿದ. ಕಳೆದ ಐದು ದಶಕಗಳಿಂದ ಬದುಕನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದ್ದಾರೆ. ದೇವುದಾಸ ಶೆಟ್ಟಿ ಅವರದು ಪ್ರಯೋಗಶೀಲ ಮನಸ್ಸು. ಜಲವರ್ಣ, ತೈಲವರ್ಣ, ಮ್ಯೂರಲ್ಸ್‍ಗಳಲ್ಲಿ ಸಿದ್ಧಹಸ್ತರು. ಚಿತ್ರಕಲೆಯ ಬಗೆಗೆ ಅಪಾರ ಗೌರವ ಶ್ರದ್ಧೆಯಿರುವ ಅವರು ಕರಾವಳಿ ಕರ್ನಾಟಕದ ವಿಭಿನ್ನ ಚಹರೆಗಳನ್ನು ತಮ್ಮ ಚಿತ್ರಗಳಲ್ಲಿ ಸೊಗಸಾಗಿ ಪಡಿಮೂಡಿಸಿದ್ದಾರೆ’ ಎಂದು ದೇವುದಾಸ ಶೆಟ್ಟಿ ಅವರ ಚಿತ್ರಕಲಾಯಾನವನ್ನು ಕೊಂಡಾಡಿದರು. ಕನ್ನಡ ವಿಭಾಗ ಬರೇ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾಷೆ, ಸಂಗೀತ, ಕಲೆ, ರಂಗಭೂಮಿ ಹೀಗೆ ವಿವಿಧ ಕ್ಷೇತ್ರಗಳ ಸಾಧಕರ ಸಾಧನೆಯನ್ನು ದಾಖಲಿಸುತ್ತಾ ಬಂದಿದೆ. ಈ ಕೃತಿ ರಚನೆಯಲ್ಲಿ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಶೆಟ್ಟಿ ಅವರ ಪಾತ್ರ ಗಮನಾರ್ಹವಾದುದು ಎಂದು ನುಡಿದರು.

ಕನ್ನಡ ವಿಭಾಗದ ಸುರೇಖಾ ದೇವಾಡಿಗ ಅವರು ಡಾ. ಜಿ. ಎನ್. ಉಪಾಧ್ಯ ಮತ್ತು ಡಾ. ಪೂರ್ಣಿಮಾ ಶೆಟ್ಟಿಯವರು ರಚಿಸಿದಂತಹ `ಬಣ್ಣಗಳ ಮಾಂತ್ರಿಕ ದೇವುದಾಸ ಶೆಟ್ಟಿ’ ಕೃತಿಯ ಪರಿಚಯವನ್ನು ಮಾಡಿಕೊಡುತ್ತಾ ಇದೊಂದು ಮಹತ್ವದ ಕೃತಿ ಎಂದು ಅಭಿಪ್ರಾಯ ಪಟ್ಟರು.  ಈ ಕೃತಿಯು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ 76ನೇ ಕೃತಿಯಾಗಿದೆ.

ಕರ್ನಾಟಕ ಮಲ್ಲದ ಹಿರಿಯ ಉಪಸಂಪಾದಕ, ಸಾಹಿತಿ, ಲೇಖಕ ಶ್ರೀನಿವಾಸ ಜೋಕಟ್ಟೆ ಅವರು ಈ ಸಂದರ್ಭದಲ್ಲಿ ಹಾಜರಿದ್ದು ಶುಭ ಹಾರೈಸಿದರು. ಕಲಾವಿದ, ವಿಭಾಗದ ಸಹ ಸಂಶೋಧಕ ಜಯ ಸಾಲ್ಯಾನ್ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter