ಚಿತ್ರ ಲೇಖನ: ಶ್ರೀನಿವಾಸ ಜೋಕಟ್ಟೆ
ಮುಂಬಯಿಯ ಪ್ರಸಿದ್ಧ ಗೇಟ್ ವೇ ಆಫ್ ಇಂಡಿಯಾ ವೀಕ್ಷಿಸುತ್ತಿದ್ದಾಗಲೇ ನಿಧಾನವಾಗಿ ಸೂರ್ಯ ಮುಳುಗಲಾರಂ ಭಿಸುತ್ತಿದ್ದ. ಕತ್ತಲೆ ಆವರಿಸಿಕೊಳ್ಳುತ್ತಿತ್ತು. ಈ ಕತ್ತಲೆಯಲ್ಲಿ ಅಗತ್ಯವಾಗಿ ಮುಂಬಯಿಯ ಲ್ಲಿ ವೀಕ್ಷಿಸಬೇಕಾದ ಮತ್ತೊಂದು ಪ್ರಸಿದ್ದ ಪ್ರವಾಸ ತಾಣವಿದೆ. ಡ್ರೈವರ್ ಗೆ ಕಾರು ಅತ್ತ ತಿರುಗಿಸಲು ಹೇಳಿದೆವು.ನಾವು ಹತ್ತಿದ್ದ ಇನೋವಾ ಕಾರು ಚರ್ಚ್ ಗೇಟ್ ಸ್ಟೇಷನ್ ಹಾದು ಮರೀನ್ ಡ್ರೈವ್ ನತ್ತ ಓಡುತ್ತಿತ್ತು.
ಮುಂಬಯಿಗೆ ಬಂದು ಹೋಗುವ ಆತ್ಮೀಯರು, ಬಂಧು ಬಳಗದವರನ್ನು ನಾನು ತಪ್ಪದೆ ಕರೆದೊಯ್ಯುವ ಒಂದು ಪ್ರವಾಸಿ ಸ್ಥಳ ಎಂದರೆ ಅದು ದಕ್ಷಿಣ ಮುಂಬಯಿಯ ಮರೀನ್ ಡ್ರೈವ್.
ಕಭೀ ಸೋತೀ ನಹೀ…. ಎನ್ನುವ ಮುಂಬಯಿ ಮಹಾನಗರದಲ್ಲಿ (ಕೊರೊನಾ ಲಾಕ್ಡೌನ್ ಹೊರತುಪಡಿಸಿ !) ಹತ್ತಾರು ಜನಪ್ರಿಯ ಪ್ರವಾಸಿ ತಾಣಗಳಿವೆ . ಅದರಲ್ಲೂ ಮುಂಬಯಿ ಮಹಾನಗರ ಎಂದರೆ ಸಮುದ್ರ ತೀರಗಳ ಆಕರ್ಷಣೆ. ಜುಹು ಬೀಚ್, ಬ್ಯಾಂಡ್ ಸ್ಟ್ಯಾಂಡ್ ಬೀಚ್, ಗೇಟ್ ವೇ ಆಫ್ ಇಂಡಿಯಾ, ದಾದರ್ ಚೌಪಾಟಿ ,ಮರೀನ್ ಡ್ರೈವ್... ಇವೆಲ್ಲ ಸಮುದ್ರತೀರಗಳ ಸೌಂದರ್ಯವನ್ನು ವೀಕ್ಷಿಸುವವರಿಗೆ ಹೇಳಿಮಾಡಿಸಿದ ಪ್ರವಾಸ ತಾಣಗಳು. ಅವುಗಳಲ್ಲಿ 1920 ರಲ್ಲಿ ನಿರ್ಮಾಣವಾದ “ಕ್ವೀನ್ಸ್ ನೆಕ್ಲೆಸ್” ಎಂಬ ಖ್ಯಾತಿಯ ಮರೀನ್ ಡ್ರೈವ್ ಗೆ ವರ್ಷ 2020ರಲ್ಲಿ ಶತಮಾನದ ಸಂಭ್ರಮ .
ದಕ್ಷಿಣಮುಂಬಯಿಯ ಪ್ರಮುಖ ಆರ್ಥಿಕ ಕ್ಷೇತ್ರ ನರೀಮನ್ ಪಾಯಿಂಟ್ ನಿಂದ ಹಿಡಿದು ಗಿರ್ಗಾಂವ್ ಚೌಪಾಟಿ, ಬಾಬುಲ್ ನಾಥ ಮಂದಿರ ,ಮಲ್ ಬಾರ್ ಹಿಲ್ , ವಾಲ್ಕೇಶ್ವರ… ತನಕ ಮರೀನ್ ಡ್ರೈವ್( ಕ್ವೀನ್ಸ್ ನೆಕ್ಲೆಸ್) ವ್ಯಾಪಿಸಿದೆ.
ಮರೀನ್ ಡ್ರೈವ್ ನ 4.3 ( ಅಂದಾಜು ನಾಲ್ಕೂವರೆ)ಕಿಲೋಮೀಟರ್ ಉದ್ದದ ರಸ್ತೆಯನ್ನು ಮುಂಬಯಿಯ ಅತ್ಯಂತ ಸುಂದರ ರಸ್ತೆ ಎನ್ನಲಾಗುತ್ತದೆ .ನೂರು ವರ್ಷಗಳ ಇತಿಹಾಸ ಹೊಂದಿದ ಈ ಮರೀನ್ ಡ್ರೈವ್ ಗೆ ಯುನೆಸ್ಕೋ ವಿಶ್ವ ವಿರಾಸತ್ ಗೌರವ ಸಿಗುವಂತಹ ಸಿದ್ಧತೆಗಳು ನಡೆಯುತ್ತಿದೆ.
‘ಕ್ವೀನ್ಸ್ ನೆಕ್ಲೆಸ್’ ಹೆಸರು ಹೇಗೆ ಬಂತು? :
ರಸ್ತೆಯುದ್ದಕ್ಕೂ ಝಗಝಗಿಸುವ ಬೀದಿದೀಪಗಳು ಮರೀನ್ ಡ್ರೈವ್ ಸೌಂದರ್ಯವನ್ನು ವೃದ್ಧಿಸಿದ್ದು ರಾತ್ರಿ ಕಾಲಕ್ಕೆ “ಕ್ವೀನ್ಸ್ ನೆಕ್ಲೆಸ್” ತರಹ ಕಾಣುವುದರಿಂದ ಈ ಗೌರವವನ್ನು ಪ್ರಾಪ್ತಿಯಾಗಿಸಿದೆ. ಇಂಗ್ಲಿಷ್ ವರ್ಣಮಾಲೆಯ ‘ಸಿ’ ಆಕಾರದ ವಿರುದ್ಧ ರೂಪದಲ್ಲಿ ಕಂಡುಬರುವ ಈ ರಸ್ತೆ ಮರೀನ್ ಡ್ರೈವ್. ಸಂಜೆಯಾಗುತ್ತಲೇ ಬೀದಿ ದೀಪಗಳು, ಹಾಗೂ ರಸ್ತೆಯ ಆ ಬದಿಯ ಕಟ್ಟಡಗಳ ವಿದ್ಯುತ್ ಬೆಳಕು ಒಟ್ಟುಸೇರಿ ನೆಕ್ಲೆಸ್ ಆಕಾರ ದಲ್ಲಿ ಹೊಳೆಯುತ್ತದೆ. ಆಚೆಗೆ ಅರಬ್ಬೀ ಸಮುದ್ರದ ಪ್ರಾಕೃತಿಕ ಸೌಂದರ್ಯ.
ಬ್ರಿಟೀಷ್ ಕಾಲದಲ್ಲಿ ಒಂದೊಮ್ಮೆ ಬ್ಯಾಕ್ ಬೇ ರಿಕ್ಲಮೇಶನ್ ಪ್ರೊಜೆಕ್ಟ್ ನಂತೆ ನರೀಮನ್ ಪಾಯಿಂಟ್ ಮತ್ತು ಮಲ್ ಬಾರ್ ಹಿಲ್ ರಸ್ತೆಯನ್ನು ಜೋಡಿಸುವುದಕ್ಕೆ 1860 ರಲ್ಲಿ ಒಂದು ಪ್ರೊಜೆಕ್ಟ್ ಕೈಗೊಂಡಿದ್ದರು .ಆದರೆ ಇದರ ಕೆಲಸ ಆರಂಭವಾದದ್ದು ಮಾತ್ರ 1915ರಲ್ಲಿ. ಮೂಲ ಯೋಜನೆಯಂತೆ ಆವಾಗ ಒಂದೂವರೆ ಸಾವಿರದಷ್ಷು ಎಕರೆ ಜಮೀನಿನ ವಿಕಾಸ ಮಾಡುವುದಿತ್ತು. ಆದರೆ ಕೆಲವು ಕಾರಣಗಳಿಂದ ತಡ ಆದ ದ್ದರಿಂದ ಕೇವಲ 440 ಎಕರೆ ಜಮೀನು ಮಾತ್ರ ಉಳಿದಿತ್ತು. ಅದರಲ್ಲೂ ಆಗಿನ ಸೇನೆ 235 ಎಕರೆ ಜಮೀನನ್ನು ತಾನು ಪಡೆಯಿತು.
ಅಂತೂ ಕೊನೆಗೆ ಉಳಿದದ್ದು 17 ಎಕರೆ ಜಮೀನು ಮಾತ್ರ .ಅದೇ ಇಂದಿನ ಮರೀನ್ ಡ್ರೈವ್ . 2020 ಕ್ಕೆ ನೂರು ವರ್ಷಗಳ ಸಂಭ್ರಮ.
ಅಂದು ಬ್ಯಾಕ್ ಬೇ ರಿಕ್ಲಮೇಷನ್ ನಂತರ ಮುಂಬಯಿಗೆ ಹೊಸರೂಪ ಕಾಣಿಸಿದ್ದು ಮರೀನ್ ಡ್ರೈವ್ .ಅದಕ್ಕೆ ಈ ಹೆಸರು ಬರಲು ಕಾರಣ ಮರೀನ್ ಬಟಾಲಿಯನ್ ಈ ಹೆಸರಿನಿಂದಲೇ ದೊರೆತಿತ್ತು .ಆವಾಗ ಇದರ ಮೂಲ ಹೆಸರು ಸೋನಾಪುರ ಎಂದಿತ್ತು .ಇಂದಿನ ಹೊಸ ಹೆಸರು ನೇತಾಜಿ ಸುಭಾಷ್ ರೋಡ್.
ಸಂಜೆಯ ಹೊತ್ತು ಈ ರಸ್ತೆಯ ಉದ್ದಕ್ಕೂ ಸಮುದ್ರ ತೀರದಲ್ಲಿ ನಿರ್ಮಿಸಿರುವ ದಂಡೆಯಲ್ಲಿ ಕಿಕ್ಕಿರಿದ ಪ್ರವಾಸಿಗರು ಕೂತಿರುತ್ತಾರೆ. ಯಾರೇ ಖಾಸಗಿ ವಾಹನದಲ್ಲಿ ಬಂದರೂ ಇಳಿದು ಸ್ವಲ್ಪ ಹೊತ್ತಾದರೂ ಇಲ್ಲಿ ದಂಡೆಯಲ್ಲಿ ಕೂರದಿದ್ದರೆ ಸಮುದ್ರ ತೀರದ ಸೌಂದರ್ಯ ದಕ್ಕುವುದಿಲ್ಲ. ಅಥವಾ ಮರೀನ್ ಡ್ರೈವ್ ಸುತ್ತಾಡಿದ ಆನಂದ ಸಿಗದು.
ಮರೀನ್ ಡ್ರೈವ್ ಸಮುದ್ರತೀರದ ಉದ್ದಕ್ಕೂ ಪ್ರವಾಸಿಗರು ಕೂರುವ ದಂಡೆ ಯ ಕೆಳಗಡೆ ತ್ರಿಕೋನಾಕಾರದ ಸಿಮೆಂಟು ಕಲ್ಲುಗಳನ್ನು (ಟೆಟ್ರಾಪಾಡ್) ಹಾಕಲಾಗಿದ್ದು ಸಮುದ್ರ ಕೊರೆತ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಇದು ದಟ್ಟ ತೆರೆಗಳಿಂದ ರಸ್ತೆಯನ್ನು ರಕ್ಷಿಸುತ್ತದೆ. ಮಳೆಗಾಲದಲ್ಲಂತೂ ಆ ಸಿಮೆಂಟು ಕಲ್ಲುಗಳಿಗೆ ತೆರೆಗಳು ಅಪ್ಪಳಿಸುವಾಗ ಸಮುದ್ರದ ನೀರು ಮೇಲಕ್ಕೆ ಚಿಮ್ಮಿ ರಸ್ತೆ ಮೇಲೆ ಬೀಳುವುದೂ ಇದೆ. ಇಲ್ಲಿನ ಸೌಂದರ್ಯವನ್ನು ಮಳೆಗಾಲದಲ್ಲಿ ಹೆಚ್ಚು ಸವಿಯಬಹುದು.
ಮರೀನ್ ಡ್ರೈವ್ ನಲ್ಲಿ ಎಲ್ಲರಿಗೂ ಚಿರಪರಿಚಿತ ಕಟ್ಟಡ ಅಂದರೆ ಏರ್ ಇಂಡಿಯಾ ಬಿಲ್ಡಿಂಗ್. ಇಲ್ಲಿಂದ ಕಾಣುವ ಸೌಂದರ್ಯವೇ ಬೇರೆ.ಏರ್ ಇಂಡಿಯಾದ ಈ ಮಹಾರಾಜಾ ಕ್ವೀನ್ಸ್ ನೆಕ್ಲೆಸ್ ನ ಮಹಾರಾಜಾ. ಈ ಕಟ್ಟಡದಲ್ಲಿ ಅನೇಕ ಕಛೇರಿಗಳಿವೆ.
ಮರೀನ್ ಡ್ರೈವ್ ನ ಸಮುದ್ರತೀರವನ್ನು ಕಂಡ ನಂತರ ವಿದೇಶಿ ಪ್ರವಾಸಿಗರು ಭವ್ಯ ಅಂತಾರಾಷ್ಟ್ರೀಯ ಸಮುದ್ರತೀರ ಮಿಯಾಮಿಯನ್ನು ನೆನಪಿಸುವುದಿದೆ. ಹಾಗಾಗಿ ಇದನ್ನು ಮುಂಬಯಿಯ ಮಿಯಾಮಿ ಎನ್ನುವವರು ಇದ್ದಾರೆ.
ಮುಂಬಯಿ ಪೊಲೀಸ್ ಮತ್ತು ಮುಂಬಯಿ ಮಹಾನಗರ ಪಾಲಿಕೆಯವರು ಮರೀನ್ ಡ್ರೈವ್ ಅನ್ನು ಆಕರ್ಷಕ ಪ್ರವಾಸ ಸ್ಥಳದ ರೂಪದಲ್ಲಿ ವಿಕಸಿತಗೊಳಿಸಿದ್ದಾರೆ. 2005ರಲ್ಲಿ ಮರೀನ್ ಡ್ರೈವ್ ನ ಪೊಲೀಸ್ ಚೌಕಿಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಜೊತೆ ಬಲಾತ್ಕಾರದ ಘಟನೆ ನಡೆದಿತ್ತು. ಅನಂತರ ಆಡಳಿತ ಎಚ್ಚೆತ್ತುಕೊಂಡಿತು.ಈ ಪರಿಸರವನ್ನು ವಿಕಸಿತ ಗೊಳಿಸಲು 2006ರಲ್ಲಿ 30 ಕೋಟಿ ರೂಪಾಯಿಯ ಬಜೆಟ್ ಘೋಷಿಸಿತು. ಅನಂತರ ಈ ರಸ್ತೆಯ ಸೌಂದರ್ಯೀಕರಣ ವೃದ್ಧಿ ಸಲಾಯಿತು.
ಇಲ್ಲಿನ ಸಮುದ್ರ ತೀರದ ರಸ್ತೆಯ ಮತ್ತೊಂ ದು ಬದಿ ಉದ್ದಕ್ಕೂ ಅಪೂರ್ವ ವಾಸ್ತುಕಲೆಯ ಅನೇಕ ಕಟ್ಟಡಗಳಿವೆ. ಒಂದೊಮ್ಮೆ ಇಲ್ಲಿಯ ಚೈತ್ಯ ಮರೀನ್ ಹೆಸರಿನ ಕಟ್ಟಡದಲ್ಲಿ ಪ್ರಖ್ಯಾತ ನಟಿ ನರ್ಗೀಸ್ ವಾಸಮಾಡುತ್ತಿದ್ದರು. ಪರಿಸರದ ರಕ್ಷಣೆಗಾಗಿ ತೀರದಲ್ಲಿ ತ್ರಿಕೋನಾಕಾರದ ಸಿಮೆಂಟು ಕಲ್ಲುಗಳು, ಪ್ರವಾಸಿಗರಿಗಾಗಿ ಅಗಲವಾದ ಫುಟ್ಪಾತ್ ಅನ್ನು ನಿರ್ಮಿಸಿದ್ದು ರಸ್ತೆ ಮತ್ತು ಪುಟ್ಬಾಥ್ ನಡುವೆ ಅಲ್ಲಲ್ಲಿ ವೃಕ್ಷಗಳಿವೆ .ಪ್ರವಾಸಿಗರಿಗೆ ಕೂರಲು ಬೆಂಚುಗಳೂ ಇವೆ. ರಾತ್ರಿಗೆ ಖಾಸಗಿ ವಾಹನಗಳಲ್ಲಿ ಮರೀನ್ ಡ್ರೈವ್ ನ ಸೌಂದರ್ಯ ವೀಕ್ಷಿಸಲು ಬರುವವರಿಗೆ ತೊಂದರೆಯಾಗದಂತೆ ಸುರಕ್ಷಿತ ವ್ಯವಸ್ಥೆಗಳಿವೆ .ಬೆಳಿಗ್ಗೆ ಆಗಲಿ ಸಂಜೆ ಆಗಲಿ
ಇಲ್ಲಿನ ವಾಕಿಂಗ್ ಗೆ ತನ್ನದೇ ಆದ ವಿಶೇಷತೆಗಳಿವೆ .ಲಾಫಿಂಗ್ ಕ್ಲಬ್ಬಿನ ಸದಸ್ಯರು ಅಲ್ಲಲ್ಲಿ ನಗುತ್ತಾ ನಡೆಯುತ್ತಿರುತ್ತಾರೆ.
ನರೀಮನ್ ಪಾಯಿಂಟ್ ನಲ್ಲಿ ಪ್ರಖ್ಯಾತ ಕಂಪನಿಗಳ ಆಫೀಸ್ ಗಳಿವೆ. ಮುಂಬಯಿ ವೀಕ್ಷಿಸಲು ಬರುವ ವಿದೇಶಿ ಪ್ರವಾಸಿಗರಿಗೆ ಟೂರ್ ಆಪರೇಟರ್ ಗಳು ಈ ಕ್ಷೇತ್ರವನ್ನು ತಪ್ಪದೆ ತೋರಿಸುತ್ತಾರೆ. ಮರೀನ್ ಡ್ರೈವ್ ರಸ್ತೆಯಲ್ಲಿ ಅನೇಕ ಫಿಲಂಗಳ ಶೂಟಿಂಗ್ ನಡೆದಿದೆ. ಮರೀನ್ ಡ್ರೈವ್ ಪರಿಸರವು ಫಿಲಂ ಶೂಟಿಂಗ್ ಗಳ ಹಾಟ್ ಸ್ಪಾಟ್ ಆಗಿದೆ. ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್… ಎಲ್ಲರೂ ಈ ರಸ್ತೆಯಲ್ಲಿ ಶೂಟಿಂಗ್ ನಡೆಸಿದ್ದಾರೆ . ಫಿಲಂಗಳ ಹೊರತು ಅನೇಕ ಧಾರಾವಾಹಿಗಳ ಶೂಟಿಂಗ್ ಗಳು ಕೂಡ ನಡೆದಿವೆ.
ಮರೀನ್ ಡ್ರೈವ್ ವೀಕ್ಷಿಸ ಬೇಕಾದರೆ ಸಂಜೆಯ ನಂತರ ಹೆಚ್ಚು ಆಕರ್ಷಣೆ. ನರೀಮನ್ ಪಾಯಿಂಟ್ ಚರ್ಚ್ ಗೇಟ್ ಸ್ಟೇಷನ್ ಗೆ ಹತ್ತಿರವಿದೆ. ಪಶ್ಚಿಮ ರೈಲ್ವೆಯ ಚರ್ನಿರೋಡ್,ಮರೀನ್ ಲೈನ್ಸ್, ಚರ್ಚ್ ಗೇಟ್ ಎಲ್ಲೂ ಇಳಿದು ಮರೀನ್ ಡ್ರೈವ್ ಸಮುದ್ರ ತೀರ ವೀಕ್ಷಿಸಲು ಬರಬಹುದು.
ಮಳೆಗಾಲ ಬಂತೆಂದರೆ ಒಂದು ಸಲ ಮುಂಬಯಿಯವರೂ ಮರೀನ್ ಡ್ರೈವ್ ವೀಕ್ಷಿಸಲು ಬರುತ್ತಾರೆ. ತನ್ನ ಚಮತ್ಕಾರಿಕ ತೆರೆಗಳು ಅಪ್ಪಳಿಸುವ ದೃಶ್ಯಗಳಿಂದ ಇದು ಪ್ರವಾಸಿಗರನ್ನು ಸದಾಕಾಲ ಆಕರ್ಷಿಸುತ್ತಲೇ ಇದೆ. ಇಲ್ಲಿಗೆ ಬಂದವರು ಒಂದಷ್ಟು ಹೊತ್ತು ತೀರದ ದಂಡೆಯ ಮೇಲೆ ಕೂತು ಅರಬೀ ಸಮುದ್ರದ ತೆರೆಗಳನ್ನು ವೀಕ್ಷಿಸುತ್ತಾ ಶಾಂತ ಮನಸ್ಸಿನಿಂದ ಪ್ರಕೃತಿಯ ಆನಂದವನ್ನು ಕೆಲವು ಕ್ಷಣವಾದರೂ ಸವಿಯುತ್ತಾರೆ.
ತೊಂಭತ್ತರ ದಶಕದಲ್ಲಿ ಪ್ರಥಮ ಅಂತಾರಾಷ್ಟ್ರೀಯ ‘ಮಾಮಿ’ ಫಿಲ್ಮ್ ಫೆಸ್ಟಿವಲ್ ಜರಗಿದಾಗ ‘ಮುಂಬಯಿವಾಣಿ’ ಪತ್ರಿಕೆಯ ಪ್ರತಿನಿಧಿಯಾಗಿ ನಾನು ನರಿಮನ್ ಪಾಯಿಂಟ್ ನ ಟಾಟಾ ಥಿಯೇಟರ್ ನಲ್ಲಿ ಒಂದು ವಾರ ಕಾಲ ದೇಶ ವಿದೇಶಗಳ ಸಿನಿಮಾಗಳನ್ನು ವೀಕ್ಷಿಸುತ್ತಿದ್ದಾಗ ಪ್ರತೀದಿನ ಇಲ್ಲಿ ಒಂದಷ್ಟು ಸಮಯ ಕೂತು ಮರೀನ್ ಡ್ರೈವ್ ನ ಸೌಂದರ್ಯವನ್ನು ನಾನು ಆಸ್ವಾದಿಸುತ್ತಿದ್ದುದು ಯಾವತ್ತೂ ಮರೆಯುವಂತಿಲ್ಲ.
————–