ಮಿಂಚಿನ ಬಳ್ಳಿಯ ಬುರ್ಲಿ ಬಿಂದುಮಾಧವರಾಯರು ಸಂಪಾದಿಸಿ, ಪ್ರಕಟಿಸಿರುವ “ಕಂನಾಡ ಸಾಹಿತ್ಯಜ್ಞರ ಆತ್ಮಕಥನ” ಕೃತಿ ಅಂದಿನ ದಿನಗಳಲ್ಲಿ ಒಂದು ವಿಶಿಷ್ಟ ಪ್ರಯೋಗ. “ಕಂನಾಡ ಸಾಹಿತ್ಯಜ್ಞರ ಆತ್ಮಕಥನ” ಹನ್ನೊಂದು ಜನ ಪ್ರಸಿದ್ಧ ನವೋದಯ ಲೇಖಕರ ಆತ್ಮಕಥನದ ಅಧ್ಯಾಯಗಳನ್ನೊಳಗೊಂಡಿದೆ. ಬಿಂದುಮಾಧವರಾಯರು ಆ ಕಾಲದ ಸುಮಾರು 50-60 ಜನ ಹಿರಿಯ ಕಿರಿಯ ಲೇಖಕರನ್ನು ಆತ್ಮಕಥನ ಬರೆದು ಕೊಡುವಂತೆ ಇನ್ನಿಲ್ಲದಂತೆ ಕಾಡಿ ಬೇಡಿದರೂ ಅವರ ಬೇಡಿಕೆಗೆ ಸ್ಪಂದಿಸಿ ಬರೆದುಕೊಟ್ಟವರು ಹನ್ನೊಂದು ಜನ ಲೇಖಕರು ಮಾತ್ರ. ಯಾವುದೇ ಕೃತಿಯೊಂದರ ಸಂಪಾದಕನಾಗಿ ಕಾರ್ಯ ನಿರ್ವಹಿಸುವುದು ಇಂದಿನಂತೆ ಅಂದೂ ಸಹ ತುಂಬ ಕಷ್ಟದ ಕೆಲಸವಾಗಿತ್ತೆಂಬುದು ಇದರಿಂದ ವೇದ್ಯವಾಗುತ್ತದೆ.
1946ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಈ ಕೃತಿಯಲ್ಲಿ ಮಂಜೇಶ್ವರ ಗೋವಿಂದ ಪೈ, ಎ.ಆರ್.ಕೃಷ್ಣಶಾಸ್ತ್ರೀ, ದ.ರಾ.ಬೇಂದ್ರೆ, ರಂ.ಶ್ರೀ.ಮುಗಳಿ, ಶ್ರೀರಂಗ, ದೇವುಡು, ಬೆಟಗೇರಿ ಕೃಷ್ಣಶರ್ಮ ಮತ್ತು ವಿ.ಕೃ.ಗೋಕಾಕ್ ಸೇರಿ ಒಟ್ಟು ಹನ್ನೊಂದು ಜನ ಲೇಖಕರ ಆತ್ಮಕಥನಾತ್ಮಕ ಬರಹಗಳಿವೆ. ಆ ಕಾಲಘಟ್ಟದ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿತ್ರವೊಂದರ ಪಾರ್ಶ್ವ ನೋಟವೊಂದನ್ನು ಕಟ್ಟಿ ಕೊಡುವಲ್ಲಿ ಇಲ್ಲಿನ ಆತ್ಮಕಥನಾತ್ಮಕ ಬರಹಗಳು ಯಶಸ್ವಿಯಾಗಿವೆ.
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆ ಪಡೆದಿರುವ ಎಂ.ಗೋವಿಂದ ಪೈ ಕವಿ ಮತ್ತು ಸಂಶೋಧಕರು. ಪ್ರಸ್ತುತ ಬರಹದಲ್ಲಿ ತಾವು ಲೇಖಕರಾಗಿ ಬೆಳೆದು ಬಂದ ಬಗೆಯನ್ನು ವಿವರಿಸಿದ್ದಾರೆ. ನಾಟಕವೊಂದನ್ನು ಬರೆಯುವ ಮೂಲಕ ಲೇಖನ ವ್ಯವಸಾಯಕ್ಕೆ ಮೊದಲು ಮಾಡಿದ್ದರ ಕುರಿತು ಬರೆವ ಪೈಗಳು ಆ ಕಾಲದಲ್ಲಿಯೇ ಪ್ರಾಸ, ಛಂದಸ್ಸು ಎಂಬೆಲ್ಲ ಕಟ್ಟಳೆಗಳನ್ನು ಮೀರಿ ಹೊಸ ರೀತಿಯಲ್ಲಿ ಕವಿತೆ ಬರೆದು ಟೀಕೆಗೊಳಗಾಗಿದ್ದರು. ಪಂಜೆ ಮಂಗೇಶರಾಯರೊಂದಿಗಿನ ಸ್ನೇಹ ಮತ್ತು ತಮ್ಮ ಪತ್ನಿಯ ಮರಣದಿಂದುಂಟಾದ ದುಃಖದ ಬಗ್ಗೆಯೂ ಗೋವಿಂದ ಪೈಗಳು ಪ್ರಸ್ತಾಪಿಸಿದ್ದಾರೆ. ಕಾವ್ಯ ಮತ್ತು ಸಂಶೋಧನೆಗಳೆರಡನ್ನೂ ಸರಿದೂಗಿಸಿಕೊಂಡು ಹೋಗುವುದು ಎಷ್ಟು ಕಠಿಣವೆಂಬುದರ ಬಗ್ಗೆ ಪೈಗಳ ಸ್ವಾನುಭವದ ಮಾತುಗಳಿವೆ. ಸಾಹಿತ್ಯದ ಕುರಿತ ಗೋವಿಂದ ಪೈಗಳ ಅಭಿಪ್ರಾಯ ತುಂಬ ಮನೋಜ್ಞವಾಗಿದೆ.
“ಈ ಸಂಸಾರದಲ್ಲಿ ಸಾಹಿತ್ಯವು ಕಪ್ಪನೆ ನಿಕಷದಲ್ಲಿ ತೊಳಗುತ್ತಿರುವ ಚಿನ್ನದ ಬರೆಯಿಂತರಬೇಕು, ದಪ್ಪನೆ ಮುಗಿಲಲ್ಲಿ ಬೆಳಗುತ್ತಿರುವ ಮಿಂಚಿನ ಗೆರೆಯಂತಿರಬೇಕು. ಆ ಸಾಹಿತ್ಯವು ‘ಸತ್ಯಂ ಶಿವಂ ಸುಂದರಂ’ ಆಗಿರಬೇಕು. ಇಲ್ಲಿ ಮಧುರವೂ ಲಲಿತವೂ ಶಾಂತವೂ ಶೃಂಗಾರವೂ ಹಾಸ್ಯವೂ ವೀರವೂ ರುದ್ರವೂ ಮೊದಲಾದ ಗುಣಗಳೆಲ್ಲವೂ ಅಡಕವಾಗಿವೆ. ಮಳೆಬಿಲ್ಲಿನ ಏಳು ಬಣ್ಣಗಳ ಬಯಕೆಯಿಂದ ನೇಸರಿನ ಬೆಳಕಾಗುವಂತೆ, ಇವೆಲ್ಲವೂ ಕೂಡಿದಲ್ಲೇ ಸಾಹಿತ್ಯ. ಸಾಹಿತ್ಯದಲ್ಲಿ ಮಾನುಷಕವಾದ ಎಲ್ಲವಕ್ಕೂ ಎಡೆ ಇರಬೇಕು, ಕೊನೆಗೆ ಅಶ್ಲೀಲಕ್ಕೂ ಸ್ಥಾನವೀರಬೇಕು. ಮನುಷ್ಯನ ಹುಟ್ಟೇ ಅಶ್ಲೀಲದಿಂದ ಆಗಿರುವಲ್ಲಿ, ಪ್ರಕೃತಿಗೆತ್ತಿದ ಛಾಯಾಗ್ರಹದಂತಿರುವ ಸಾಹಿತ್ಯದಿಂದ ಅಶ್ಲೀಲವನ್ನು ತೊಡೆದು ಬಿಡುವುದಾದರೂ ಹೇಗೆ? ಆದರೆ ಅಶ್ಲೀಲದ ಸೊಗಡು ಹದ ಮೀರಬಾರದು, ಅದಕ್ಕೆ ಆ ತಕ್ಕ ಮರ್ಯಾದೆ ಇರಬೇಕು, ಕಾಡಾಡಿಯಾದರೂ ಸೊಪ್ಪಿನ ಕಚ್ಚೆ ಕಟ್ಟಿಕೊಳ್ಳುವಂತೆ. ಅದನ್ನೆಲ್ಲ ಒಳಕೊಂಡು ಸಾಹಿತ್ಯವು ಸರ್ವತೋಮುಖವಾಗಿ ಸರ್ವತೋ ಭದ್ರವಾಗಿ ಸಾಗಬೇಕು. ಇದೇ ನನ್ನ ಎಚ್ಚರದ ಕನಸು”.
(ಪುಟ 14)
ಕನ್ನಡದ ಬಹುದೊಡ್ಡ ನಾಟಕಕಾರರಾದ ಶ್ರೀರಂಗರು ಅಂದಿನ ಕಾಲದ ಕನ್ನಡ ನಾಡಿನ ಸಾಮಾಜಿಕ, ಸಾಂಸ್ಕೃತಿಕ ಚರಿತ್ರೆಯ ಜೊತೆ ಜೊತೆಯಲ್ಲೇ ತಾವು ಸಾಹಿತಿಯಾಗಿ ಬೆಳೆದು ಬಂದ ಬಗೆಯನ್ನು ವಿವರಿಸಿದ್ದಾರೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಬಂದರೂ ನಿರುದ್ಯೋಗದಿಂದ ಬಳಲಿದ ಶ್ರೀರಂಗರನ್ನು ಭಾರತದ ಸ್ವಾತಂತ್ರ್ಯ ಹೋರಾಟ ತೀವ್ರವಾಗಿ ಪ್ರಭಾವಿಸಿದೆ. ಕರ್ನಾಟಕದ ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಶ್ರೀರಂಗರು ಧಾರವಾಡದ ವಿದ್ಯಾವರ್ಧಕ ಸಂಘದ ಏಳಿಗೆಗಾಗಿ ಶ್ರಮಿಸಿದ್ದನ್ನು ಮರೆಯುವಂತಿಲ್ಲ. ವ್ಯಾಸ ಮಹರ್ಷಿಗಳ “ಮಹಾಭಾರತ”ದಿಂದ ಪ್ರೇರಿತರಾಗಿ “ಧರ್ಮ ವಿಜಯ” ಎಂಬ ಮೊದಲ ನಾಟಕ ಬರೆದ ಶ್ರೀರಂಗರು ತಮ್ಮನ್ನು ನಾಟಕಕಾರ ಬರ್ನಾಡ್ ಶಾನೊಂದಿಗೆ ಹೋಲಿಸುವುದನ್ನು ಬಿಲ್ ಕುಲ್ ಒಪ್ಪುವುದಿಲ್ಲ. ಅಂದಿನ ಕಾಲದ ಕನ್ನಡ ರಂಗಭೂಮಿಯ ನಿರಾಶಾದಾಯಕ ಸ್ಥಿತಿಗತಿಯ ಬಗ್ಗೆ ಮರುಗುವ ಶ್ರೀರಂಗರು ಇಂದಲ್ಲ ನಾಳೆ ಕನ್ನಡ ಸಾಹಿತ್ಯ ಮತ್ತು ರಂಗಭೂಮಿಗೆ ಒಳ್ಳೆಯ ದಿನಗಳು ಬಂದೇ ಬರುತ್ತವೆಂಬ ಆಶಾವಾದವನ್ನೂ ವ್ಯಕ್ತಪಡಿಸಿದ್ದಾರೆ. ಅಂದು ಶ್ರೀರಂಗರು ಹೇಳಿದ ಮಾತುಗಳು ಅಂದಿನ ಕನ್ನಡ ನಾಡಿನ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುತ್ತವೆ.
“ಸದ್ಯದ ಕನ್ನಡ ಸಾಹಿತ್ಯದ ಇತಿಸ್ಥಿತಿಗಳಿಗಾಗಿ ನನಗೆ ಅಸಮಾಧಾನವಿದೆ ಎಂಬುದನ್ನು ನಾನು ಅನೇಕ ಸಲ ಪ್ರಕಟವಾಗಿ ಹೇಳಿದ್ದೇನೆ. ತನ್ನದರ ಅಭಿಮಾನ, ವಿವಿಧ-ವಿಶಾಲವಾದ ಅನುಭವ, ಮುನ್ನೋಟದ ಸಾಹಸ, ತಪ್ಪನ್ನೊಪ್ಪಿಕೊಳ್ಳುವ ತಿಳುವಳಿಕೆ – ಇವು ಮಿಕ್ಕ ಪ್ರಾಂತದವರಿಗಿಂತ ಕನ್ನಡಿಗರಿಗೆ ಕಡಿಮೆ ಎಂದು ನನ್ನ ಅನುಭವ. ಪ್ರಾಂತಕ್ಕೊಂದು ಸಾರ್ವಜನಿಕ ಜೀವನ, ಆ ಜೀವನಕ್ಕೊಂದು ಧ್ಯೇಯ, ಆ ಧ್ಯೇಯ ಸಾಧನೆಗೆ ಮುಂದಾಳುತನ ಇವುಗಳಿಲ್ಲ. ಸದ್ಯಕಿದ್ದ ಅಜ್ಞಾನ, ಸಂಕುಚಿತತೆ, ಸ್ವಾರ್ಥ, ಜಾತೀಯತೆ ಇವುಗಳಿಗಾಗಿ ಪರಿಸ್ಥಿತಿ ಸುಧಾರಿಸಲು ವಿಘ್ನವಿದೆ. ಇವೆಲ್ಲವನ್ನು ಅರಿತೂ ನಾನು ಆಶಾವಾದಿಯಾಗಿದ್ದೇನೆ. ಕರ್ನಾಟಕದ ಪರಂಪರೆಯಲ್ಲಿ ನನಗೆ ಅಚಲ ಶ್ರದ್ಧೆಯಿದೆ, ಕನ್ನಡಿಗರ ಜ್ಞಾನ-ಸಾಹಸಗಳಲ್ಲಿ ನನಗೆ ಭರವಸೆಯಿದೆ, ನೂರಾರು ವರ್ಷಗಳಿಂದ ಬುದ್ಧಿ-ಹೃದಯಗಳ ಮೇಲೆ ಕೆನೆಗಟ್ಟಿದ ಧೂಳು ಜಾಡಿಸಿ ಕಳೆದ ಮೇಲೆ ಸ್ವಾರ್ಥ-ಜಾತೀಯತೆಗಳ ತ್ವಚೆರೋಗ ವಾಸಿಯಾಗುವುದಲ್ಲದೆ, ಪರಿಸ್ಥಿತಿಯನ್ನು ಮೈಗೂಡಿಸಿಕೊಳ್ಳುವಷ್ಟು ಆರೋಗ್ಯವೂ ಬಲಗೊಳ್ಳುವುದು ಎಂದು ನನ್ನ ಆತ್ಮವಿಶ್ವಾಸ. ಪ್ರಾಂತ ಒಂದಾಗಿ, ದೇಶ ಸ್ವತಂತ್ರವಾಗುವುದಕ್ಕೆ ಕನ್ನಡಿಗರಲ್ಲಿ ಶಂಕರ-ಬಸವೇಶ್ವರರಂತಹ ಕ್ರಾಂತಿಕಾರರು ಮತ್ತೆ ಜನಿಸಿ ಕರ್ನಾಟಕದ ಮುಂದಾಳುತನವನ್ನು ಭಾರತಕ್ಕೆ ಒದಗಿಸಿಕೊಡುವರು. ಆ ಯುಗ ಪರಿವರ್ತನಕ್ಕೆ ಕನ್ನಡ ಸಾಹಿತಿಗಳು ಸಾಕಷ್ಟು ಸ್ಫೂರ್ತಿಯನ್ನು ತಂದು ಕೊಡುವರು ಎಂಬುದು ನನ್ನ ಆಶಾವಾದದ ಚಿತ್ರವಾಗಿದೆ. ಸಾಹಿತ್ಯ ಯಜ್ಞದಿಂದ ನಾನು ದೊರಕಿಸ ಬಯಸಿದ ಸ್ವರ್ಗವಾಗಿದೆ”.
(ಪುಟ 27-28)
“ಮಹಾ ಕ್ಷತ್ರೀಯ” ಮತ್ತು “ಮಹಾ ದರ್ಶನ”ದಂತಹ ಪೌರಾಣಿಕ ಕಾದಂಬರಿಗಳಿಂದ ಖ್ಯಾತರಾದ ದೇವುಡು ತಮ್ಮ ಬದುಕಿನಲ್ಲಿ ನಡೆದ ಹಲವು ಘಟನೆಗಳ ಕುರಿತು ಪ್ರಾಮಾಣಿಕವಾಗಿ ಬರೆದಿದ್ದಾರೆ. ಶಿಕ್ಷಣ, ಸಾಹಿತ್ಯ, ನಾಟಕ, ಸಿನಿಮಾ ಮತ್ತು ಪತ್ರಿಕೋದ್ಯಮ ಸೇರಿದಂತೆ ಅನೇಕ ಕಡೆಗಳಲ್ಲಿ ಅದೃಷ್ಟ ಪರೀಕ್ಷೆ ನಡೆಸಿದರೂ ದೇವುಡು ಅವರಿಗೆ ದೊರೆತದ್ದು ಅನುಭವವೇ ಹೊರತು ಹಣವಲ್ಲ. ಯಾವೊಂದು ಉದ್ಯೋಗವನ್ನು ಸಹ ಪೂರ್ಣವಾಗಿ ಮಾಡಲಾಗದೆ ಕೊನೆಯವರೆಗೂ ದೇವುಡು ಆರ್ಥಿಕ ಸಂಕಷ್ಟ ಅನುಭವಿಸಬೇಕಾಯಿತು. ಕನ್ನಡ ಪುಸ್ತಕವೊಂದರ 1000 ಪ್ರತಿಗಳು ಮಾರಾಟವಾಗಲು ಐದು ವರ್ಷಗಳು ಕಾಯಬೇಕಾಗಿತ್ತು. ಆಗಲೂ ಲೇಖಕರು ಕನ್ನಡದಲ್ಲಿ ಬರೆದು ಬದುಕುವ ಸ್ಥಿತಿಯಿರಲಿಲ್ಲ ಈಗಲೂ ಅದೇ ಸ್ಥಿತಿ ಮುಂದುವರೆದಿದೆ.
ಬದುಕು ಕಲಿಸಿದ ಇಂತಹ ನಿಷ್ಠುರ ಪಾಠಗಳಿಂದ ದೇವುಡು ಅವರಿಗೆ ಬರೆದರೆ ಇಂಗ್ಲಿಷಿನಲ್ಲೇ ಬರೆಯಬೇಕು ಎಂದೆನಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಇಷ್ಟೆಲ್ಲ ಕಷ್ಟಗಳನ್ನು ಅನುಭವಿಸಿದರೂ ದೇವುಡು ಅವರ ಹೃದಯ ಮಿಡಿದದ್ದು ಕನ್ನಡಕ್ಕಾಗಿ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ದೇವುಡು ಅವರು ಅಲ್ಪತೃಪ್ತರು, ತಮ್ಮ ಒಟ್ಟಾರೆ ಸಾಹಿತ್ಯಿಕ ಜೀವನದ ಬಗೆಗೆ ಅವರಾಡಿದ ಮಾತುಗಳು ಮನಮುಟ್ಟುವಂತಿವೆ.
“ಇಂದು ನಾನು ತೃಪ್ತ. ಅದು ನನ್ನ ಸುಪೀರಿಯಾರಿಟಿ ಕಾಂಪ್ಲೆಕ್ಸಿನಿಂದ ಹುಟ್ಟಿದ ಭ್ರಾಂತಿಯಿರಬಹುದು, ನಿಜವಿರಬಹುದು. ನನ್ನ ಸಾಹಿತ್ಯ ಸೇವೆ ನಡೆದಿರುವುದು ರಂಗಭೂಮಿ, ಶಾಲೆ, ಪತ್ರಿಕೆ, ಭಾಷಣ, ಲೇಖನ, ಗ್ರಂಥ ರಚನೆಗಳಲ್ಲಿ. ಒಂದೊಂದು ಕಡೆಯೂ ಒಂದೊಂದು ವೈಶಿಷ್ಟ್ಯವಿರುವ ಕೆಲಸ ನಡೆದಿದೆ. ನನಗೆ ಬಿರುದಾವಳಿಗಳು ಬಂದಿಲ್ಲ. ಆದರೂ ನನ್ನ ಕೆಲಸದಿಂದ ಕನ್ನಡ ದೇವಿಗೆ ಸೇವೆ ಸಂದಿದೆಯೆಂಬುದು ನನಗೆ ಗೊತ್ತಿದೆ ಸಾಕು, ಆಗಲೇ ಹೇಳಿದಂತೆ ಕೀರ್ತಿ, ಹಣ, ಮೊದಲಾದವು ಬರುವುದು ಒಂದು ವಿಶಿಷ್ಟ ವರ್ಗಕ್ಕೆ. ನಾನು ಯಾವ ವರ್ಗಕ್ಕೂ ಸೇರದೆ ಸ್ವತಂತ್ರವಾಗಿರುವುದೇ ನನಗೆಷ್ಟೋ ಆನಂದ”.
(ಪುಟ 37)
ಕನ್ನಡದ ಘನ ವಿದ್ವಾಂಸರಾದ ರಂ.ಶ್ರೀ.ಮುಗಳಿ “ಕನ್ನಡ ಸಾಹಿತ್ಯ ಚರಿತ್ರೆ”ಯಂತಹ ಅಪೂರ್ವ ಕೃತಿ ರಚಿಸಿದವರು. ‘ರಸಿಕ ರಂಗ’ ಎಂಬ ಕಾವ್ಯನಾಮದಿಂದ ಕವಿತೆ, ಕಥೆ, ನಾಟಕ ಮತ್ತು ಕಾದಂಬರಿ ಪ್ರಕಾರಗಳಲ್ಲೂ ಕೃತಿಗಳನ್ನು ರಚಿಸಿದ್ದಾರೆ. ‘ಸ್ವ – ದರ್ಶನ’ ಎಂಬ ಈ ಬರಹದಲ್ಲಿ ಮುಗಳಿಯವರು ತಮ್ಮ ಸಾಹಿತ್ಯಿಕ ಜೀವನ ರೂಪುಗೊಂಡ ಬಗೆಯನ್ನು ವಿವರಿಸಿದ್ದಾರೆ. ಮುಗಳಿಯವರ ಜೀವನದಲ್ಲಿ ಧಾರವಾಡ ಮತ್ತು ವರಕವಿ ಬೇಂದ್ರೆಯವರಿಗೆ ವಿಶೇಷ ಸ್ಥಾನವಿದೆ. ಬಯಲುಸೀಮೆಯಿಂದ ಮಲೆನಾಡ ಸೆರಗಾದ ಧಾರವಾಡಕ್ಕೆ ಬಂದ ಮುಗಳಿಯವರಿಗೆ ವರಕವಿ ಬೇಂದ್ರೆಯವರ ಸ್ನೇಹ ಲಭಿಸಿದ್ದು ಆ ಮೂಲಕ ಅವರು ಲೇಖಕರಾಗಿ ಬೆಳೆದ ಸಂಗತಿಗಳು ಕುತೂಹಲಕರವಾಗಿವೆ.
ತಮ್ಮ ಕೆಲವು ಆರಂಭದ ಬರಹಗಳು ಮತ್ತು ಕವಿತೆಗಳು ಹುಟ್ಟಿದ ಬಗ್ಗೆ ಹೇಳಿಕೊಂಡಿರುವ ಮುಗಳಿಯವರಿಗೆ ಧಾರವಾಡದಿಂದ ದೂರವಾಗಿ ಸಾಂಗ್ಲಿಯಲ್ಲಿರಬೇಕಾದ ಕುರಿತು ಸ್ವಲ್ಪ ಬೇಸರವಿದ್ದರೂ ಸಹ, ನಿಡುಗಾಲದ ಮಿತ್ರ ಗೋಕಾಕರೊಂದಿಗೆ ಸೇರಿ ‘ಕರ್ನಾಟಕ ಸಂಘ’ ಮತ್ತು ‘ವರುಣ ಕುಂಜ’ದ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗೆಗೆ ಗಡಿನಾಡಿನಲ್ಲಿ ಮಾಡಿದ ಕೆಲಸಗಳ ಕುರಿತು ಸಮಾಧಾನವಿದೆ. ತಮ್ಮ ಸಾಹಿತ್ಯ ಸಾಧನೆ ಮತ್ತು ಮಿತಿಗಳ ಕುರಿತು ಮುಗಳಿಯವರಿಗೆ ಸ್ಪಷ್ಟವಾದ ಅಭಿಪ್ರಾಯವಿರುವುದು ಗಮನಾರ್ಹ.
ಖ್ಯಾತ ಕವಿ ವಿ.ಕೃ.ಗೋಕಾಕರು ‘ಪತ್ರ – ಪುಷ್ಪ’ ಎಂಬ ಅಧ್ಯಾಯದಲ್ಲಿ ತಮ್ಮ ಸಾಹಿತ್ಯಿಕ ಧೋರಣೆಗಳ ಕುರಿತು ತುಂಬ ಸ್ಪಷ್ಟವಾಗಿ ಹೇಳಿದ್ದಾರೆ. ಸಾಹಿತ್ಯದ ವಿಕಸನಕ್ಕೆ ಸ್ಫೂರ್ತಿ ನೀಡುವ ಸಂಗತಿಗಳಿರುವಂತೆ ಸಾಹಿತ್ಯವು ಮುರುಟಿ ಹೋಗುವಂತೆ ಮಾಡುವ ಸಂಗತಿಗಳೂ ಇರುವುದರ ಕುರಿತು ಗಮನ ಸೆಳೆಯುವ ಗೋಕಾಕರು ಹದಗೆಟ್ಟ ವಿಮರ್ಶೆಯ ಕುರಿತು ತುಂಬ ಬೇಸರ ವ್ಯಕ್ತಪಡಿಸಿದ್ದಾರೆ. ಇಂದಿನಂತೆಯೇ ಅಂದೂ ವಿಮರ್ಶೆಯ ರಾಜಕೀಯ ಇದ್ದದ್ದು ಕುತೂಹಲಕ ಕೆರಳಿಸುವಂತಿದೆ. ನಿಜವಾದ ಲೇಖಕ ವಿಮರ್ಶೆಯನ್ನು ಅಲಕ್ಷಿಸಿ ಮುನ್ನಡೆಯಬೇಕೆಂಬ ಗೋಕಾಕರ ಮಾತಿನಲ್ಲಿ ಅರ್ಥವಿದೆ. ತಮ್ಮ ಸಾಹಿತ್ಯ ಸಿದ್ಧಿಯಲ್ಲಿ ಪ್ರಯತ್ನಕ್ಕಿಂತ ದೈವ ಕಾರುಣ್ಯವೇ ಹೆಚ್ಚು ಎಂಬ ಅವರ ಮಾತಿನಲ್ಲಿ ಸಾಕಷ್ಟು ವಿನಯವಿದೆ.
‘ಆನಂದಕಂದ’ ಕಾವ್ಯನಾಮದಿಂದ ಖ್ಯಾತರಾದ ಬೆಟಗೇರಿ ಕೃಷ್ಣಶರ್ಮರು ಕನ್ನಡಕ್ಕೆ ಸಾಕಷ್ಟು ಕವಿತೆ, ಕಥೆ ಮತ್ತು ಕಾದಂಬರಿಗಳನ್ನು ಕೊಟ್ಟಿದ್ದಾರೆ. ‘ಜಯಂತಿ’ ಪತ್ರಿಕೆಯ ಮೂಲಕ ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಅವರು ಸಲ್ಲಿಸಿದ ಸೇವೆ ಸ್ಮರಣೀಯ. ‘ಜಯಂತಿ’ ಪತ್ರಿಕೆಯ ಮೂಲಕ ಅನೇಕ ಜನ ಹೊಸ ಲೇಖಕರನ್ನು ಬೆಳೆಸಿದ ಶ್ರೇಯಸ್ಸು ಆನಂದಕಂರಿಗೆ ಸಲ್ಲುತ್ತದೆ.
‘ಮಾನವತೆಯ ಅರಳಿಕೆ’ ಎಂಬ ಬರಹದಲ್ಲಿ ಆನಂದಕಂದರ ಜೀವನದ ಸಂಕ್ಷಿಪ್ತ ಪರಿಚಯವಿದೆ. ಅಂದಿನ ಕಾಲದ ಹಳ್ಳಿಯ ಜನಜೀವನದ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುವ ಆನಂದಕಂದರು ತಮ್ಮ ತಂದೆ-ತಾಯಿ, ಬಂಧು – ಬಳಗ, ಊರ ಜನ ಮತ್ತು ಬೆಟಗೇರಿಯ ಬಗೆಗೆ ವಿವರವಾಗಿ ಬರೆದಿದ್ದಾರೆ. ಬಾಲ್ಯದಲ್ಲೇ ತಮ್ಮ ಅಣ್ಣನೊಂದಿಗೆ ಸೇರಿ ಕವಿತೆ ಕಟ್ಟಿ ಊರ ಜನರ ಮೆಚ್ಚುಗೆ ಗಳಿಸಿದ್ದ ಆನಂದಕಂದರಿಗೆ ಸಾಹಿತ್ಯದ ಕುರಿತು ತಮಗೆ ಆಸಕ್ತಿ ಮೂಡಿದ್ದೇ ತಾಯಿಯಿಂದ ಎಂದು ತುಂಬ ಅಭಿಮಾನದಿಂದ ಹೇಳಿದ್ದಾರೆ.
ಭಾರತದ ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಏಕೀಕರಣ ಚಳುವಳಿ, ಅಂದಿನ ಕನ್ನಡ ಸಾಹಿತ್ಯ, ತಮ್ಮ ಮೇಲೆ ಪ್ರಭಾವ ಬೀರಿದ ಹಿರಿಯರು, ಧಾರವಾಡದಲ್ಲಿ ‘ಜಯಂತಿ’ ಪತ್ರಿಕೆ ಆರಂಭಿಸಿದ್ದು ಮತ್ತು ತಾವು ರಚಿಸಿದ ಕೃತಿಗಳ ಕುರಿತು ಬರೆದಿರುವ ಆನಂದಕಂದರು ಅಂದಿನ ಕಾಲದ ಕನ್ನಡ ನಾಡಿನ ಸ್ಥಿತಿಗತಿಗಳ ಬಗೆಗೆ ವಿವರವಾದ ಚಿತ್ರಣ ನೀಡಿದ್ದಾರೆ. ಮಾನವತೆಯ ಬಗೆಗೆ ಅಪಾರ ನಂಬುಗೆ ಇಟ್ಟುಕೊಂಡಿದ್ದ ಆನಂದಕಂದರ ಮಾತುಗಳು ಯಾವ ಕಾಲಕ್ಕೂ ಸಲ್ಲುತ್ತವೆ.
“ಇಂದಿನ ನನ್ನ ಹಂಬಲವು ದೇವನನ್ನು ಕಾಣಬೇಕೆಂಬುದಲ್ಲ, ರಾಜಕೀಯ ಸ್ವಾತಂತ್ರ್ಯ ಬೇಕೆಂಬುದು ಅಲ್ಲ, ಸುಖಮಯವಾದ ಬಾಳು ಸಿಕ್ಕಬೇಕೆಂದು ಅಲ್ಲ. ಜಗತ್ತಿನಲ್ಲಿ ಮಾನವತೆ ತಲೆದೋರಬೇಕು ಎಂದು. ಪ್ರತಿಯೊಬ್ಬ ಮಾನವನ ಜೀವನ ಯೌಗಿಕ ಜೀವನವಾಗಬೇಕು ಎಂದು. ಆಧ್ಯಾತ್ಮ – ಆದಿಭೂತಗಳ ಸಮನ್ವಯದ ಸಂಪೂರ್ಣ ಜ್ಞಾನ ಲೋಕದಲ್ಲಿ ನೆಲೆಗೊಳ್ಳಬೇಕು ಎಂದು. ಹಾಗಾದರೆ ಲೋಕದಲ್ಲಿ ಎಲ್ಲರಿಗೂ ದೇವನ ದರ್ಶನವಾಗುವುದು. ಎಲ್ಲರಿಗೂ ಸ್ವಾತಂತ್ರ್ಯ ಸಿಕ್ಕುವುದು, ಎಲ್ಲರ ಬಾಳು ಸುಖಮಯವಾಗುವುದು. ಎಲ್ಲರೂ ಹಾರೈಸುವ ಶಾಂತಿ ಎಲ್ಲರಿಗೂ ಸಿಕ್ಕುವುದು. ಮಾನವನು ನಿಜವಾದ ಮಾನವನಾದರೆ ಮರ್ತ್ಯಲೋಕವನ್ನೇ ಸ್ವರ್ಗವನ್ನಾಗಿ ಮಾರ್ಪಡಿಸಬಹುದೆಂಬ ಆಶಾವಾದಿ ನಾನು. ಈ ಆಶಾವಾದಿತ್ವವೇ ಇಂದಿನ ನನ್ನ ಸಾಹಿತ್ಯ ನಿರ್ಮಿತಿಯ ಜೀವಾಳವಾಗಿದೆ. ಎಂದೂ ಇದೇ ಜೀವಾಳವಾಗಿರಬೇಕೆಂಬ ಖಂಡಿತವಾದ ನಂಬುಗೆ ನನ್ನನ್ನು ಎಚ್ಚರಿಸುತ್ತದೆ”.
(ಪುಟ 100)
ನವೋದಯದ ಬಹುದೊಡ್ಡ ಲೇಖಕರೂ, ಕನ್ನಡದ ಅಶ್ವಿನಿ ದೇವತೆಗಳಲ್ಲೊಬ್ಬರೂ ಎಂದು ಖ್ಯಾತರಾದ ಎ.ಆರ್.ಕೃಷ್ಣಶಾಸ್ತ್ರಿಗಳು ‘ಅಹಂ ಕರೋಮೀತಿ ವೃಥಾಭಿಮಾನಃ’ ಎಂಬ ಲೇಖನದಲ್ಲಿ ಕನ್ನಡದ ಸ್ಥಿತಿಗತಿಗಳು ಶೋಚನೀಯ ಅವಸ್ಥೆಯಲ್ಲಿದ್ದ ದಿನಗಳಲ್ಲಿ ಕನ್ನಡವನ್ನು ಮೇಲಕ್ಕೆತ್ತಿ ಹಿಡಿಯಲು ಅಂದಿನ ಹಿರಿಯರು ಪಟ್ಟ ಪಾಡಿನ ಬಗ್ಗೆ ಹೃದಯಂಗಮವಾಗಿ ಬರೆದಿದ್ದಾರೆ. ಕನ್ನಡವೆಂದರೆ ಕನ್ನಡ ಜನರೇ ಮೂಗು ಮುರಿಯುತ್ತಿದ್ದ ದಿನಗಳಲ್ಲಿ ಕೃಷ್ಣಶಾಸ್ತ್ರಿಗಳು ವೆಂಕಣ್ಣಯ್ಯನವರೊಂದಿಗೆ ಹರಸಾಹಸ ಪಟ್ಟು ‘ಕರ್ನಾಟಕ ಸಂಘ’ ಮತ್ತು ‘ಪ್ರಬುದ್ಧ ಕರ್ನಾಟಕ’ ಪತ್ರಿಕೆಯನ್ನು ಆರಂಭಿಸಿದರು.
ಕನ್ನಡದ ಬಗೆಗೆ ಅಭಿಮಾನ ಬೆಳೆಸಲು, ಕನ್ನಡದಲ್ಲಿ ಉತ್ತಮ ಸಾಹಿತ್ಯ ದೊರೆಯುವಂತೆ ಮಾಡಲು ‘ಕರ್ನಾಟಕ ಸಂಘ’ ಮತ್ತು ‘ಪ್ರಬುದ್ಧ ಕರ್ನಾಟಕ’ದ ಮೂಲಕ ಹಗಲಿರುಳು ಶ್ರಮಿಸಿದರು. ‘ಪ್ರಬುದ್ಧ ಕರ್ನಾಟಕ’ದ ಸಂಪಾದಕರಾಗಿ ಅನೇಕ ಹಿರಿಯ ಕಿರಿಯ ಲೇಖಕರ ಕಥೆ, ಕವನ, ಲೇಖನಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದರು. ಪತ್ರಿಕೆಗೆ ಚಂದಾದಾರನ್ನು ದೊರಕಿಸಲು ಮನೆ ಮನೆ ತಿರುಗಿ ಅನೇಕರಿಂದ ‘ನಕ್ಷತ್ರಿಕ’, ‘ಮಾರ್ವಾಡಿ’ ಅನಿಸಿಕೊಂಡು ವರ್ಷಗಟ್ಟಲೇ ಕಾದು ಚಂದಾ ವಸೂಲಿ ಮಾಡಿ ಪತ್ರಿಕೆ ನಡೆಸಿದರು. ಪತ್ರಿಕೆಯ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಅನೇಕ ಲೇಖನಗಳನ್ನು ತಿರಸ್ಕರಿಸಿ ಆ ಲೇಖಕರ ಕೋಪಕ್ಕೂ ಗುರಿಯಾಗಬೇಕಾಯಿತು.
ಅಂದಿನ ದಿನಗಳಲ್ಲಿ ಕನ್ನಡಕ್ಕೆ ಪ್ರೋತ್ಸಾಹ ಸಿಗುತ್ತಿರಲಿಲ್ಲ ಬದಲಾಗಿ ಕನ್ನಡಿಗರೇ ನಿರುತ್ಸಾಹದ ಮಾತುಗಳನ್ನಾಡಿ ಕನ್ನಡದ ಕೆಲಸ ಮಾಡುವವರನ್ನು ಅಧೈರ್ಯಗೊಳಿಸುತ್ತಿದ್ದರು. ಇಷ್ಟೆಲ್ಲ ಪ್ರತಿಕೂಲ ಪರಿಸ್ಥಿತಿಗಳಿದ್ದರೂ ಅವನ್ನೆಲ್ಲ ಎದುರಿಸಿ ಕನ್ನಡಕ್ಕಾಗಿ ಹೋರಾಡಿದ ಬಗ್ಗೆ ಬರೆದಿರುವ ಕೃಷ್ಣಶಾಸ್ತ್ರಿಗಳ ಮಾತಿನಲ್ಲಿ ಕಿಂಚಿತ್ತಾದರೂ ಅಹಂಕಾರ ಕಾಣುವುದಿಲ್ಲ. ಬದಲಾಗಿ ಕೃಷ್ಣಶಾಸ್ತ್ರಿಗಳಿಗೆ ಕನ್ನಡಿಗರ ನಿಷ್ಕ್ರಿಯತೆ, ನಿರಭಿಮಾನದ ಕುರಿತು ನೋವಿದೆ. ಅಲ್ಪ ಸ್ವಲ್ಪವಾದರೂ ಕನ್ನಡದ ಕೆಲಸಗಳು ನಡೆದು ಕನ್ನಡ ಬೆಳೆಯುತ್ತಿರುವುದಕ್ಕೆ ಸಮಾಧಾನವಿದೆ. ಅಂದಿನ ಕನ್ನಡ ಲೇಖಕರು ಮತ್ತು ಸಾಹಿತ್ಯದ ಬಗ್ಗೆ ಕೃಷ್ಣಶಾಸ್ತ್ರಿಗಳು ಆಡಿದ ಮಾತುಗಳು ಮನೋಜ್ಞವಾಗಿವೆ.
“ಬರವಣಿಗೆ ಬರಿಯಬಲ್ಲ ಕೀರ್ತಿಕಾಮಿಗಳಾದ ಕೆಲವರು ಕನ್ನಡದಲ್ಲಿ ಏಕೆ ಬರೆಯಬೇಕು! ಬರೆದರೆ ಯಾರು ನೋಡುತ್ತಾರೆ! ನಮಗೆ ಏನು ಬರುತ್ತದೆ! ಎಂದು ಇಂದಿಗೂ ಮೂಗು ಮುರಿಯುತ್ತಾರೆ. ಇದು ‘ನಮ್ಮ ಬಡ ತಾಯಿ ತಂದೆಗಳ, ಮಕ್ಕಳು – ಮರಿಗಳ ಹೊಟ್ಟೆ ತುಂಬಿಸುವುದರಲ್ಲಿಯೇ ನಮ್ಮ ಐಶ್ವರ್ಯವನ್ನು ಕಳೆದರೆ ಹೇಗೆ? ನಮಗೆ ಬಿರುದು ಬಾವಲಿಗಳು ಬರುವುದು ಹೇಗೆ?’ ಎಂದು ಕೇಳಿದಂತಾಗುತ್ತದೆ. ಅಂಥವರ ಮಾತು ಬೇಡ, ಬಂಗಾಳಿ, ಮರಾಠಿ ಮುಂತಾದ ಭಾಷೆಗಳು ಇಂಥವರಿಂದಲ್ಲ ಮುಂದೆ ಬಂದಿರುವದು”.
(ಪುಟ 109)
ವರಕವಿ ಬೇಂದ್ರೆಯವರು ಆತ್ಮಕಥನ ಬರೆದಿಲ್ಲ. ಮಿಂಚಿನಬಳ್ಳಿಯ ಬಿಂದುಮಾಧವರಾಯರ ಕೋರಿಕೆಯಂತೆ ಬರೆದ ಕೆಲವೇ ಪುಟಗಳ ‘ಸಾಹಿತ್ಯ ಮತ್ತು ಸಾರ್ಥಕತೆ’ ಎಂಬ ಲೇಖನದಲ್ಲಿ ಬೇಂದ್ರೆಯವರು ತಮ್ಮ ಜೀವನದತ್ತ ಹಿನ್ನೋಟ ಬೀರಿದ್ದಾರೆ. ಸಾಹಿತ್ಯವನ್ನು ಒಂದು ತಪಸ್ಸಿನಂತೆ ಆಚರಿಸಿ ಅದರಿಂದ ಶ್ರೇಷ್ಠ ಫಲ ಪಡೆದವರು ವರಕವಿ ಬೇಂದ್ರೆ. ತಮ್ಮ ಲೇಖನದಲ್ಲಿ ಸಾಹಿತ್ಯದ ಸಾಫಲ್ಯದ ಕುರಿತು ಚರ್ಚಿಸಿರುವ ಬೇಂದ್ರೆಯವರು ಕನ್ನಡ ನಾಡಿನ ಜನರ ಪ್ರೀತಿಯಿಂದ ತಮ್ಮ ಸಾಹಿತ್ಯ ಸಫಲವಾಗಿದೆ ಎಂದು ತುಂಬ ವಿನಯದಿಂದ ಹೇಳಿಕೊಂಡಿದ್ದಾರೆ.
ಧಾರವಾಡದ ಪ್ರಕೃತಿ ಸೌಂದರ್ಯ ಮತ್ತು ಧಾರವಾಡದ ಜನಜೀವನ ಯಾವತ್ತೂ ಬೇಂದ್ರೆಯವರ ಕಾವ್ಯಕ್ಕೆ ಸ್ಫೂರ್ತಿಯಾಗಿವೆ. ರಾಷ್ಟ್ರೀಯ ಚಳುವಳಿ, ಗಾಂಧಿ ತತ್ವ ಮತ್ತು ನಾಡು – ನುಡಿಯ ಕುರಿತ ಚಿಂತನೆಯೂ ಬೇಂದ್ರೆಯವರ ಕಾವ್ಯಕ್ಕೆ ವಸ್ತುವನ್ನೋದಗಿಸಿವೆ. ಬೇಂದ್ರೆಯವರು ತಮಗೆ ದೊರೆತ ಸ್ನೇಹವನ್ನು, ಸಮವಯಸ್ಕ ಮತ್ತು ಕಿರಿಯ ಮಿತ್ರರನ್ನು ತುಂಬ ಪ್ರೀತಿಯಿಂದ ನೆನೆದಿದ್ದಾರೆ.
ಬೇಂದ್ರೆಯವರು ಕಾಳಿದಾಸ, ಶಂಕರಾಚಾರ್ಯ, ಲಕ್ಷ್ಮೀಶ, ಸರ್ವಜ್ಞ, ಜಯದೇವ, ಶ್ರೀ ಅರವಿಂದ, ಜಗನ್ನಾಥ ಪಂಡಿತ, ಶೆಲ್ಲಿ, ಕೀಟ್ಸ್ ಮತ್ತು ರವೀಂದ್ರನಾಥ ಟ್ಯಾಗೋರರ ಕಾವ್ಯ ತಮ್ಮ ಮೇಲೆ ಪ್ರಭಾವ ಬೀರಿದ ಕುರಿತು ಹೇಳಿಕೊಂಡಿದ್ದಾರೆ. ವರಕವಿ ಎಂದೇ ಖ್ಯಾತರಾದ ಬೇಂದ್ರೆಯವರು ಕಾವ್ಯಮೀಮಾಂಸಕರೂ ಹೌದು. ಕಾವ್ಯಸೃಷ್ಟಿಯ ಕುರಿತು ಸ್ಪಷ್ಟ ಅಭಿಪ್ರಾಯ ಹೊಂದಿದ್ದ ಬೇಂದ್ರೆಯವರ ಕಾವ್ಯ-ತತ್ವ-ಚಿಂತನೆಗಳು ಯಾವ ಕಾಲಕ್ಕಾದರೂ ಪ್ರಸ್ತುತವೆಂಬಷ್ಟು ಮಹತ್ವ ಪಡೆದಿವೆ.
“ಯಾವ ಸೃಷ್ಟಿಯೂ ಹೃದಯಸ್ಥವಾಗಿ ನಿಲ್ಲಲು ಅದರಲ್ಲಿ ಆಕರ್ಷತೆ ಬೇಕು. ಆಕರ್ಷಣವಾದ ಮೇಲೂ ಅದು ಬಹಳ ದಿನ ತಡೆದು ಬಾಳಲು ಅದರಲ್ಲಿ ಅಂಥ ಮಹಾಸತ್ವ ಬೇಕು. ಅದೂ ನಿರಂತರವಾಗಿ ರಮ್ಯವಾಗಬೇಕಾದರೆ ಆ ಸತ್ವದಲ್ಲಿ ವಿವಿಧ ಮುಖವಾದ ಸೌಂದರ್ಯ ಬೇಕು. ಅಂತು, ನಿಜವಾದ ಕಾವ್ಯವು ಆಕರ್ಷಕತೆಯಿಂದ ಹೃದಯವನ್ನು ಸೇರಿ, ತನ್ನ ಸತ್ವದಿಂದ ಬಾಳಿ, ತನ್ನ ಸೌಂದರ್ಯದಿಂದ ಬೆಳೆದು, ದೃಶ್ಯವಾಗಿ ಬಂದು, ದರ್ಶನವಾಗಿ ಬೆಳೆದು, ದೃಷ್ಟಿಯಲ್ಲಿ ಲೀನವಾಗಿ ಕವಿಯಂತೆ ರಸಿಕನನ್ನೂ ಒಬ್ಬ ದರ್ಶನಕಾರನನ್ನಾಗಿ ಮಾಡದಿದ್ದರೆ ಆ ಕಾವ್ಯಕ್ಕೆ ಸಂಪೂರ್ಣ ಸಾಫಲ್ಯವಿಲ್ಲ”.
(ಪುಟ 119)
“ನಾಡಿಗಾಗಿ ಏನಾದರೂ ಮಾಡಬೇಕು, ನಿಜವರಿತು ಬಾಳಬೇಕು ಎಂಬುದೇ ನನ್ನ ಜೀವನದ ಮೂಲ ಸಂಕಲ್ಪ”. ಇದು ಕನ್ನಡದ ಆದ್ಯ ಸಂಶೋಧಕ ಶಂಬಾ ಜೋಶಿಯವರ ಜೀವನದ ಧ್ಯೇಯ ವಾಕ್ಯ. ಸತ್ಯ ಸಂಶೋಧಕರಾದ ಶಂಬಾ ಜೋಶಿಯವರು ನುಡಿದಂತೆ ನಡೆದ ಹಿರಿಯರು. ‘ಎರಡಿಲ್ಲದ ಬಾಳೇ ಪೂರ್ಣ ಕೃತಿ’ ಎಂಬ ಲೇಖನದಲ್ಲಿ ತಾವು ನಡೆದು ಬಂದ ದಾರಿಯ ಬಗೆಗೆ ಪ್ರಾಮಾಣಿಕವಾಗಿ ಬರೆದಿದ್ದಾರೆ. ಕಡು ಬಡತನದಲ್ಲಿ ಹುಟ್ಟಿ ಬೆಳೆದ ಜೋಶಿಯವರು ಇಂಗ್ಲಿಷ್ ಕಲಿಯಲು ಆರಂಭಿಸಿದ್ದು ಇಪ್ಪತ್ತನೆಯ ವಯಸ್ಸಿನಲ್ಲಿ! ಬಡತನದಿಂದ ಕಂಗೆಟ್ಟರೂ ದಿಟ್ಟವಾಗಿ ಅದನ್ನೆದುರಿಸಿ ನಿಂತವರು ಶಂಬಾ ಜೋಶಿ. ದೇಶದಲ್ಲೆಲ್ಲ ಭುಗಿಲೆದ್ದ ಸ್ವಾತಂತ್ರ್ಯ ಹೋರಾಟದ ಕಿಚ್ಚಿನಲ್ಲಿ ತಾವೂ ಭಾಗವಹಿಸಿ ಸೆರೆಮನೆಯ ಹೊಸಿಲವರೆಗೂ ಹೋಗಿ ಬಂದರು.
ಕಂನಾಡು, ಕಂನುಡಿ ಮತ್ತು ಕಂನಾಡ ಸಂಸ್ಕೃತಿಯ ಅಭ್ಯಾಸಿಗಳಾದ ಶಂಬಾ ಅವರು ‘ಕರ್ಮವೀರ’ ಪತ್ರಿಕೆಯಲ್ಲಿ ಆ ಕುರಿತು ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. 1924ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಸಮ್ಮೇಳನದ ಹೊತ್ತಿನಲ್ಲೇ ಕರ್ನಾಟಕದ ಏಕೀಕರಣವಾಗದೇ ಕನ್ನಡದ ಉದ್ಧಾರ ಸಾಧ್ಯವಿಲ್ಲವೆಂದು ತಿಳಿದ ಆಲೂರು ವೆಂಕಟರಾಯರು, ಕಡಪಾ ರಾಘವೇಂದ್ರರಾಯರು, ನರಗುಂದ ರಾಮರಾಯರು, ಮಂಗಳವೀಡು ಶ್ರೀನಿವಾಸರಾಯರು ಮತ್ತು ಶಂಬಾ ಜೋಶಿಯವರೂ ಸೇರಿದಂತೆ ಆಗಿನ ಹಿರಿಯರು ಕಾಂಗ್ರೆಸ್ ಸಮ್ಮೇಳನದ ಜೊತೆಗೆ ಕರ್ನಾಟಕ ಏಕೀಕರಣ ಸಮ್ಮೇಳವನ್ನೂ ನಡೆಸಿದ್ದು ಚರಿತ್ರಾರ್ಹ ಸಂಗತಿ.
ಕನ್ನಡದ ವರಕವಿ ಬೇಂದ್ರೆಯವರ ಸ್ನೇಹದ ಕುರಿತು ಶಂಬಾ ಜೋಶಿ ಪ್ರೀತಿಯ ಮಾತುಗಳನ್ನಾಡಿದ್ದಾರೆ. ಬಡತನದಲ್ಲೂ ಅರಿತು ನಡೆಯುವ, ಎಲ್ಲ ವಿಷಯದಲ್ಲೂ ತಮಗೆ ಸರಿಜೋಡಿಯಾಗಿ ನಿಂತಿರುವ ಸಹಧರ್ಮಿಣಿಯ ಬಗೆಗೆ ಶಂಬಾ ಜೋಶಿಯವರಿಗೆ ಅಪಾರ ಮೆಚ್ಚುಗೆಯಿದೆ.
ಸಂಸ್ಕೃತಿ ಸಂಶೋಧಕರಾದ ಶಂಬಾ ಜೋಶಿ ಲೇಖನದ ಆರಂಭದಲ್ಲೇ ಮಹಾರಾಷ್ಟ್ರದ ಮೂಲದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕನ್ನಡ, ಕರ್ನಾಟಕದ ಇತಿಹಾಸದ ಬಗೆಗೆ ಅಪಾರ ಒಲವಿದ್ದದ್ದರಿಂದ ಆ ದಿಸೆಯಲ್ಲಿ ಮುಂದುವರೆದು ಕನ್ನಡಕ್ಕೆ ಅನೇಕ ಮಹತ್ವದ ಸಂಶೋಧನಾ ಕೃತಿಗಳನ್ನು ನೀಡಿದ್ದಾರೆ. ತಾವು ಗಳಿಸಲು ಬಯಸಿದ್ದು ಅನುಭವ ಮತ್ತು ಅನುಭವದ ಮೂಲಕ ಪಡೆವ ಜ್ಞಾನ ಎನ್ನುವ ಶಂಬಾ ಜೋಶಿಯವರಿಗೆ ಸಂಶೋಧಕನೊಬ್ಬನಿಗಿರಬೇಕಾದ ಅಪಾರ ವಿದ್ವತ್ತಿನಂತೆಯೇ ಸಾಕಷ್ಟು ವಿನಯವೂ ಇತ್ತು. ಸತ್ಯದ ಕುರಿತು ಅಂದು ಶಂಬಾ ಜೋಶಿಯವರು ಆಡಿದ ಮಾತುಗಳು ಎಂದಿಗೂ ಪ್ರಸ್ತುತವಾಗುವಂತಿವೆ.
“ಸತ್ಯವು ಅವ್ಯಕ್ತ, ಅಲಂಕಾರ, ಸೂಕ್ಷ್ಮ ಮತ್ತು ಗಹನವಾದ ಮಹತ್ತತ್ವ. ಅಲೌಕಿಕ ಸತ್ಯವು ಲೌಕಿಕ ರೂಪವನ್ನು ತಾಳಿದಾಗ ಅದು ನಿಜವೆನಿಸುವುದು. ನಿಜವಾದುದೇ ವಾಸ್ತವ. ವಾಸ್ತವವು ವಸ್ತುಗತ, ವ್ಯಕ್ತ. ಸತ್ಯವು ದೇಶ-ಕಾಲ-ಪರಿಸ್ಥಿತಿಗಳ ಮೇರೆಯಲ್ಲಿ ವ್ಯಕ್ತವಾದಾಗ ಅದು ವ್ಯವಹಾರವಾಗುವುದು. ಇತಿಹಾಸದ ಜ್ಞಾನವಿಲ್ಲದೆ ಯಾವ ನಿಜದ ವ್ಯವಹಾರದ ಜ್ಞಾನವೂ ಆಗಲಾರದು. ಏಕೆಂದರೆ ದೇಶ-ಕಾಲ-ಪರಿಸ್ಥಿತಿಯ ಭೂಮಿಕೆಯಲ್ಲಿ ಅವತರಿಸಿದ ಸತ್ಯವೇ ಇತಿಹಾಸ. ಇತಿಹಾಸವೆಂದರೆ ನಡೆ. ‘ನಡೆ’ಗೇ ‘ಜಗತ್’ ಎಂಬ ಸಂಸ್ಕೃತದ ಹೆಸರು. ಆದಕಾರಣ ನಡೆಯ ನಿಜವನ್ನರಿಯಲು ಇತಿಹಾಸದ ಅಭ್ಯಾಸವು ಬೇಕು. ಸಂಸ್ಕೃತಿಯೆಂಬುದು ನಡೆವಳಿಯ ಫಲ”.
(ಪುಟ 136)
ಬುರ್ಲಿ ಬಿಂದುಮಾಧವರಾಯರು ಸಂಪಾದಿಸಿರುವ “ಕಂನಾಡ ಸಾಹಿತ್ಯಜ್ಞರ ಆತ್ಮಕಥನ” ಒಂದು ವಿಶಿಷ್ಟ ಕೃತಿ. ಕೃತಿಯ ಆರಂಭದಲ್ಲಿ ಬಿಂದುಮಾಧವರಾಯ್ರು ಈ ಕೃತಿಯ ಮುಂದುವರೆದ ಭಾಗವಾಗಿ ಇನ್ನಷ್ಟು ಲೇಖಕರ ಆತ್ಮಕಥನದ ಅಧ್ಯಾಯಗಳನ್ನೊಳಗೊಂಡ ಮತ್ತೊಂದು ಕೃತಿ ಬರಲಿದೆಯೆಂದು ಹೇಳಿದ್ದರೂ ಅಂತಹದೊಂದು ಕೃತಿ ಬರಲೇ ಇಲ್ಲ. ಸುಮಾರು 75 ವರ್ಷಗಳ ಹಿಂದೆ 1946ರ ಗಾಂಧಿ ಜಯಂತಿಯಂದು ಪ್ರಕಟವಾದ ಈ ಪುಸ್ತಕಕ್ಕೆ ಚಾರಿತ್ರಿಕ ಮಹತ್ವವಿದೆ. ಈ ಕೃತಿಗಾಗಿ ಲೇಖನ ಬರೆದವರೆಲ್ಲ ನವೋದಯ ಕಾಲಘಟ್ಟದ ದಿಗ್ಗಜರು. ದ.ರಾ.ಬೇಂದ್ರೆ, ಶಂಬಾ ಜೋಶಿ, ರಂ.ಶ್ರೀ.ಮುಗಳಿ, ಎ.ಆರ್.ಕೃಷ್ಣಶಾಸ್ತ್ರಿ, ದೇವುಡು ಮತ್ತು ಗೋಕಾಕರು ಸೇರಿದಂತೆ ಅನೇಕ ಹಿರಿಯರು ಆತ್ಮಕಥನ ಬರೆದೇ ಇಲ್ಲ. ಇಲ್ಲಿ ಲಭ್ಯವಿರುವ ಕೆಲವು ಪುಟಗಳಷ್ಟು ಬರವಣಿಗೆಗೇ ಇಲ್ಲಿನ ಅನೇಕ ಹಿರಿಯರ ಆತ್ಮಕಥನದ ಬರವಣಿಗೆ ಮುಕ್ತಾಯವಾಗಿದ್ದು ತುಂಬ ಬೇಸರದ ಸಂಗತಿ.
ಈ ಮಹತ್ವದ ಪುಸ್ತಕದಲ್ಲಿ ಕಂಡುಬರುವ ಲೇಖನಗಳಲ್ಲಿ ಕೆಲವು ಸಮಾನ ಅಂಶಗಳಿವೆ. ಕನ್ನಡ ನಾಡು – ನುಡಿ ಮತ್ತು ರಾಷ್ಟ್ರದ ಬಗೆಗೆ ನವೋದಯದ ಸಾಹಿತಿಗಳಿಗೆ ನಿಜವಾದ ಕಾಳಜಿಯಿದ್ದು ಅದಕ್ಕಾಗಿ ಅವರು ಸಾಕಷ್ಟು ಹೋರಾಟ ಮಾಡಿದ್ದಾರೆ. ಭಾರತಕ್ಕೇ ಇನ್ನೂ ಸ್ವಾತಂತ್ರ್ಯ ಸಿಕ್ಕಿರದ ಸಂದರ್ಭದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಕರ್ನಾಟಕದ ಏಕೀಕರಣವಾಗಲೇಬೇಕೆಂದು ಸಂಕಲ್ಪಿಸಿ ಅದಕ್ಕಾಗಿ ತುಂಬ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ನವೋದಯದ ಹಿರಿಯರು ನಾಡು – ನುಡಿಯ ಏಳಿಗೆಗಾಗಿ ಹಗಲಿರುಳು ಶ್ರಮಿಸಿದರು. ಇಂತಹ ಹಿರಿಯರ ನಿಸ್ವಾರ್ಥ ಸೇವೆಯಿಂದಲೇ ಇಂದು ಕನ್ನಡ – ಕರ್ನಾಟಕ ಒಳ್ಳೆಯ ಸ್ಥಿತಿಯಲ್ಲಿದೆಯೆಂದರೆ ಅದು ಅತಿಶಯೋಕ್ತಿಯಲ್ಲ.
ನವೋದಯದ ಹಿರಿಯ ಲೇಖಕರಲ್ಲಿ ಕಂಡು ಬರುವ ಮತ್ತೊಂದು ದೊಡ್ಡ ಗುಣವೆಂದರೆ ‘ವಿನಯ’. ‘ತುಂಬಿದ ಕೊಡ ತುಳುಕುವುದಿಲ್ಲ’ವೆಂಬ ಗಾದೆಮಾತಿಗೆ ಅನ್ವರ್ಥದಂತಿದ್ದ ಈ ಹಿರಿಯರ ಬಾಳು ಎಂತಹವರಿಗಾದರೂ ಆದರ್ಶವಾಗಬಲ್ಲದು. ನಾಡಿನ, ರಾಷ್ಟ್ರದ ಹಿತದಲ್ಲೇ ತಮ್ಮೆಲ್ಲರ ಹಿತವೂ ಅಡಗಿದೆಯೆಂದು ತಿಳಿದಿದ್ದ ಇವರೆಲ್ಲ ಶಂಬಾ ಜೋಶಿಯವರು ನುಡಿದಂತೆ ‘ಎರಡಿಲ್ಲದ ಬಾಳೇ ಪೂರ್ಣ ಕೃತಿ’ಯೆಂಬಂತೆ ಬದುಕಿ ಒಳ್ಳೆಯ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. “ಕಂನಾಡ ಸಾಹಿತ್ಯಜ್ಞರ ಆತ್ಮಕಥನ” ಕೃತಿಯ ಓದು ನಮ್ಮ ಅನೇಕ ಹಿರಿಯ ಲೇಖಕರ ಬಗೆಗೆ ಗೌರವ ಹೆಚ್ಚಾಗುವಂತೆ ಮಾಡುತ್ತದೆ.
ಇಂತಹುದೊಂದು ಮಹತ್ವದ ಕೃತಿ ಮತ್ತೆ ಮರುಮುದ್ರಣವಾಗಿ ಓದುಗರಿಗೆ ದೊರೆಯುವಂತಾಗಬೇಕು. ‘ಕರ್ನಾಟಕ ಸಾಹಿತ್ಯ ಅಕಾಡೆಮಿ’, ‘ಕೇಂದ್ರ ಸಾಹಿತ್ಯ ಅಕಾಡೆಮಿ’, ‘ಎನ್.ಬಿ.ಟಿ.’, ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’, ‘ಕನ್ನಡ ಪುಸ್ತಕ ಪ್ರಾಧಿಕಾರ’ ಮತ್ತು ವಿಶ್ವವಿದ್ಯಾಲಯದ ಪ್ರಸಾರಾಂಗಗಳಂತಹ ಸರ್ಕಾರಿ ಸಂಸ್ಥೆಗಳು ಜನರ ದುಡ್ಡಲ್ಲಿ ದ್ವಿತೀಯ ದರ್ಜೆಯ ಲೇಖಕರ ಕಳಪೆ ಕೃತಿಗಳನ್ನು ಪ್ರಕಟಿಸುವ ಬದಲು ಇಂತಹ ಒಳ್ಳೆಯ ಕೃತಿಗಳನ್ನು ಮರುಮುದ್ರಣ ಮಾಡಿದರೆ ಅಷ್ಟರ ಮಟ್ಟಿಗಾದರೂ ಜನರ ದುಡ್ಡಿನ ಸಾರ್ಥಕ ಬಳಕೆಯಾದಂತಾಗುತ್ತದೆ. ಯಾವಾಗಲಾದರೊಮ್ಮೆ ಇಂತಹ ಸಂಸ್ಥೆಗಳಿಂದ ಒಳ್ಳೆಯ ಕೃತಿಗಳೂ ಬರುತ್ತಿವೆಯೆಂಬ ಸಮಾಧಾನವಾದರೂ ನನ್ನಂತಹ ಓದುಗರಿಗಿರುತ್ತದೆ. ಇದು ಕಷ್ಟಸಾಧ್ಯವೆಂದು ತಿಳಿದೂ ನಾನು ಆಶಾವಾದಿಯಾಗಿದ್ದೇನೆ.
*******
2 thoughts on “ಕಂನಾಡ ಸಾಹಿತ್ಯಜ್ಞರ ಆತ್ಮಕಥನ”
ಬಹಳ ಉಪಯುಕ್ತ ಲೇಖನ. ಹಿಂದೆ ಓದಿದ್ದೆನಾದರೂ ಈಗ ಮರೆತುಬಿಟ್ಟಿದ್ದೆ. ಪುಸ್ತಕ ಬೇಗ ಮರುಮುದ್ರಣವಾಗಲಿ.
ಕನ್ನಡದ ಪ್ರಥಮ ದಿಗ್ಗಜರ ಸಾಹಿತ್ಯವನ್ನು ಮತ್ತೊಮ್ಮೆ ಉಣಬಡಿಸಿದ್ದಕ್ಕೆ ಥ್ಯಾಂಕ್ಸ್.