ಈ ಮುಖ ಎಲ್ಲೋ ನೋಡಿದ ಹಾಗಿದೆಯಲ್ಲ ಅನ್ನಿಸಿತು.ದೇವಸ್ಥಾನವೊಂದರ ರಥೋತ್ಸವ. ಕರಪತ್ರದಲ್ಲಿ ಆ ಹೆಸರು ನೋಡಿದಾಗಲೇ ಯಾಕೋ ಕುತೂಹಲ ಮೂಡಿತ್ತು. ಖ್ಯಾತ ಗಮಕಿ ಅಬ್ದುಲ್ ಕರೀಂಖಾನ್‍ರಿಂದ ಗಮಕ ವಾಚನವೆನ್ನುವ ಒಕ್ಕಣೆ ಮೊದಲ ನೋಟಕ್ಕೇ ವಿಚಿತ್ರವೆನಿಸಿ ಆ ಕಾರ್ಯಕ್ರಮ ತಪ್ಪಿಸಿಕೊಳ್ಳಬಾರದೆನ್ನುವ ಇಚ್ಚೆಯೊಂದು ಮನದ ಮೂಲೆಯಲ್ಲೆಲ್ಲೋ ಮನೆ ಮಾಡಿ ಮರೆಯಾಗಿತ್ತು. ಮರೆತೇ ಬಿಟ್ಟಿದ್ದ ಕಾರ್ಯಕ್ರಮ ಮತ್ತೆ ನೆನಪಾದದ್ದು ಮೈಕಿನಲ್ಲಿ ಪ್ರಚಾರದ ಘೋಷಣೆ ತೇಲಿ ಬಂದಾಗಲೇ.
ನಿರರ್ಗಳವಾಗಿ ಸಂಸ್ಕೃತ ಶ್ಲೋಕಗಳನ್ನು ಉಧ್ಧರಿಸಿ ಅದರ ಜೊತೆಗೆ ಕುರಾನ್ ಬೈಬಲ್‍ಗಳಿಂದಲೂ ಸಲೀಸಾಗಿ ವಾಕ್ಯಗಳನ್ನು ಎತ್ತಿ ಎಲ್ಲಾ ಧರ್ಮಗಳೂ ಸಾಗುವುದು ಒಂದೇ ಗುರಿಯೆಡೆಗೆ ದಾರಿ ಮಾತ್ರ ಬೇರೆ ಅಷ್ಟೇ ಎನ್ನುತ್ತಾ ದೇವಸ್ಥಾನದೋಳಗೆ ಪುರೋಹಿತರು ಹೇಳುವ ಮಂತ್ರ ಮಸೀದಿಯಲ್ಲಿ ಮುಖ್ರಿಗಳು ಕೊಡುವ‘ಕುತ್‍ಬಾ’ವನ್ನು ಆಲಿಸಿ ನೋಡಿ ಅದು ಒಂದೇ ರೀತಿ ಕೇಳುತ್ತದೆ ಅಲ್ವಾ? ಅಂದ.
ಒಂದು ಬಾರಿ ನಿಟ್ಟುಸಿರುಬಿಟ್ಟು ಮೌನವಾದ. ಎಲ್ಲೋ ಈ ಮಾತುಗಳನ್ನು ಕೇಳಿದ್ದೇನಲ್ಲಾ ಅನ್ನಿಸಿತು . ಭಾವಕೋಶದೊಳಗೆ ಪಾತಾಳಗರಡಿ ಹಾಕಿ ಹುಡುಕಿದರೂ ಎಳೆ ಸಿಗಲೊಲ್ಲದು.ಅವನು ಇರಲಿಕ್ಕಿಲ್ಲ ಅನ್ನಿಸಿತು ಈತ ದೊಡ್ಡ ಹೆಸರಿರುವ ಗಮಕ ಕಲಾವಿದ, ತತ್ತ್ವಜ್ಞಾನಿ. ಬಿಳಿಪಂಚೆ ,ಅದಕ್ಕೊಪ್ಪುವ ಪೈರಾನು, ಹೆಗಲ ಮೇಲೆ ಕೇಸರಿಯ ಶಾಲು, ಕುತ್ತಿಗೆಯಲ್ಲಿ ಚಿನ್ನ ಹೊದಿಸಿದ ರುದ್ರಾಕ್ಷಿಯ ದೊಡ್ಡ ಮಾಲೆ, ಹಣೆಗೆ ಡಾಳಾಗಿ ಬಳಿದಿರುವ ನಾಮ. ಹೆಸರೊಂದನ್ನು ಬಿಟ್ಟು ಆತ ಮುಸ್ಲಿಂ ಎನ್ನುವುದಕ್ಕೆ ಅಲ್ಲಿ ಯಾವ ಕುರುಹೂ ಇಲ್ಲ.
ಕುಮಾರವ್ಯಾಸನ ಗಧಾಯುದ್ಧದ ಭಾಗವನ್ನುಆಯ್ದುಕೊಂಡು ಯುದ್ದದ ನಿರರ್ಥಕತೆ,ದ್ವೇಷದ ಆತ್ಯಂತಿಕ ವಿಷಾದವನ್ನು ಬಹಳ ಚೆನ್ನಾಗಿ ಮಂಡಿಸುತ್ತಿದ್ದ. ಉಳಿದ ಗಮಕಿಗಳಂತೆ ಒಬ್ಬರು ಹಾಡಿ ಇನ್ನೊಬ್ಬರು ನಿರೂಪಣೆ ಹೇಳದೆ ಒಬ್ಬನೇ ಎರಡನ್ನೂ ನಿಭಾಯಿಸುತ್ತಿದ್ದ. ಆದರೆಅದು ಹರಿಕತೆಯಾಗದ ಹಾಗೆ ಎಚ್ಚರ ವಹಿಸಿದ್ದ.
ಯಾಕೋ ಅವನೇ ಇರಬಹುದೇಎನ್ನುವ ಗುಮಾನಿ ಮತ್ತೆ ಕಾಡಲಾರಂಭಿಸಿತು.ಮಾತನಾಡಿಸಿಯೇ ಬಿಡೋಣ ಅನ್ನಿಸಿತು.ಅದಕ್ಕೆ ಮುಖ್ಯಕಾರಣ ಆ ಹೆಸರನಲ್ಲಿದ್ದ ಸಾಮ್ಯತೆ ಮಾತ್ರವಾಗಿರಲಿಲ್ಲ ಅಂತ ಈಗಲೂ ನನಗನ್ನಿಸುತ್ತಿದೆ. ತಡವಾಗಿ ಬಂದು ಪರಿಚಯ ಭಾಷವನ್ನು ತಪ್ಪಿಸಿಕೊಳ್ಳದೇ ಇರುತ್ತಿದ್ದರೆ ಯಾರು ಎನ್ನುವುದು ಸರಿಯಾಗಿ ತಿಳಿಯುತ್ತಿತ್ತು ಅನ್ನಿಸಿತು.ಮೂರು ಗಂಟೆಗಳ ಕಾಲ ನಿರರ್ಗಳವಾಗಿ ಹಾಡಿ ವಿವರಿಸಿ ಆತರಂಗವನ್ನು ಭರತನಾಟ್ಯದವರಿಗೆ ಬಿಟ್ಟುಕೊಟ್ಟಾಗ ನಾನು ರಂಗದ ಹಿಂದೆ ಬಂದಿದ್ದೆ.
ಅಬ್ದುಲ್‍ಕರೀಂ .ಆ ಹೆಸರು ಬಾಲ್ಯದ ಆಟಗಳ ಜೊತೆಗೆ ಬೆಸೆದುಕೊಂಡ ಒಂದು ಭಾವಬಿಂದು.ಕರಿಅಬ್ದುಲ್ಲಾಎಂದುತಮಾಷೆ ಮಾಡುತ್ತಿದ್ದ ಕರಿಕಪ್ಪು ಮೈಬಣ್ಣದ ಗುಂಗುರು ಕೂದಲಿನ ಕಡ್ಡಿಯ ಹಾಗಿದ್ದ ಸಣ್ಣನೆಯ ಹುಡುಗ.ಅವನಪ್ಪ ಗಫೂರ್ ಸಾಹೇಬರು ಕೇರಳದ ಕಾಸರಗೋಡು ಕಡೆಯಿಂದ ಬಂದು ಇಲ್ಲಿ ಬೇಸಗೆಯಲ್ಲಿ ಮೀನು, ಅಡಿಕೆ, ಗೇರುಬೀಜ , ಇತ್ಯಾದಿ ವ್ಯಾಪಾರ ಮಾಡುತ್ತಿದ್ದವರು. ಪ್ರಾಯದ ಅಮ್ಮ ಹೆಂಡಂದಿರು ಮಕ್ಕಳು ಮತ್ತು ತಮ್ಮನ ಸಂಸಾರದೊಂದಿಗೆ ಬಂದು ಇದೇ ಊರಲ್ಲಿ ನೆಲೆ ನಿಂತದ್ದು ಅಕ್ಕಿಗೆ ಕಂಟ್ರೋಲ್‍ಆ ದ ವರ್ಷಅಂತ ಅಮ್ಮ ಹೇಳುತ್ತಿದ್ದ ನೆನಪು.
ಇಲ್ಲಿ ಬಂದು ನೆಲೆಯಾದ ನಂತರ ಸಣ್ಣಗುಡಿಸಲಿನ ಪಕ್ಕದಲ್ಲೇ ಪಾತ್ರೆಗಳಿಗೆ ಕಲಾಯಿ ಹಾಕುವ ಕೆಲಸ ಹಿಡಿದರಂತೆ. ಹಾಗಾಗಿ ಊರಿಗೆಲ್ಲಾ ಅವರು ಕಲಾಯಿ ಬ್ಯಾರಿ. ಅವರದ್ದು ತಾಮ್ರ , ಹಿತ್ತಾಳೆಯ ಪಾತ್ರೆಗಳಿಗೆ ಕಲಾಯಿ ಹಾಕುವ ಕೆಲಸ. ಆಗಿನ್ನೂ ಸ್ಟೀಲ್ ಪಾತ್ರೆಗಳು ಊರಿಗೆ ಕಾಲಿಡದಿದ್ದ ಕಾಲ ಬಡವರು ಹೆಚ್ಚಾಗಿ ಮಣ್ಣು ಅಥವಾ ಸಿಲಾವರ್ ಎಂದುಕರೆಯುತ್ತಿದ್ದ ಅಲ್ಯೂಮೀನಿಯಂ ಪಾತ್ರೆಗಳು ಅಥವಾ ಕಬ್ಬಿಣದ ಮೇಲೆ ಅದೇನೋ ಬಿಳಿ ಕೋಟಿಂಗ್‍ಇದ್ದ ಪಾತ್ರೆಗಳನ್ನು ಬಳಸುತ್ತಿದ್ದರು. ಮಧ್ಯಮ ವರ್ಗದವರು, ಶ್ರೀಮಂತರು ಉಪಯೋಗಿಸುತ್ತಿದ್ದುದು ಕಂಚು ಹಿತ್ತಾಳೆಯ ಪಾತ್ರೆಗಳನ್ನೇ.ಆದ್ದರಿಂದ ಗಫೂರ್ ಸಾಹೇಬರಿಗೆ ಬಿಡುವಿಲ್ಲದ ಕೆಲಸ. ಚಟಪಟ ಬೆಂಕಿ ಕಿಡಿ ಹಾರಿಸುತ್ತಿದ್ದ ತಿದಿಯಲ್ಲಿ ಪಾತ್ರೆಗಳನ್ನು ಕಾಯಿಸಿ ಕರಗಿದತವರವನ್ನು ಪಾತ್ರೆಗಳ ಒಳಗಡೆ ಬಳಿದು ಹೊರಗಡೆ ಸಣ್ಣ ಸುತ್ತಿಗೆಯಿಂದ ಹೊಡೆದು ಫಳ ಫಳ ಹೊಳೆಯುವ ಪಾತ್ರೆಯಾಗಿಸುವ ಕೌಶಲ ಅವರಿಗೆ ಪರಂಪರೆಯಿಂದ ಬಂದದ್ದು. ಅವರ ತಮ್ಮ ಕಟ್ಟಿಗೆ ಹೊಡೆಯುವ ಕೆಲಸ ಮಾಡುತ್ತಿದ್ದುದರಿಂದ ಅವರ ಹೆಸರು ಕಟ್ಟಿಗೆಬ್ಯಾರಿ ಎಂದೇ ಜನಜನಿತ. ಅವರ ನಿಜವಾದ ಹೆಸರು ಏನೆಂದು ಇವತ್ತಿಗೂ ಯಾರಿಗೂ ಗೊತ್ತಿಲ್ಲ. ಇಡೀ ಊರಿಗೆ ಇದ್ದುದೇ ಎರಡು ಮುಸ್ಲಿಂ ಕುಟುಂಬಗಳಾದ್ದರಿಂದ ಅಲ್ಲಿ ಮಸೀದಿಯೂ ಇರಲಿಲ್ಲ. ಹಾಗಾಗಿ ಅವರ್ಯಾರೂ ಮಸೀದಿಗೆ ಹೋದದ್ದೂ ಕಂಡವರಿಲ್ಲ. ತಮ್ಮಷ್ಟಕ್ಕೆತಾವು ಬದುಕುತ್ತಿದ್ದ ಅವರು ರಂಜಾನ್ ಮುಂತಾದ ಹಬ್ಬಗಳನ್ನು ಆಚರಿಸುವಷ್ಟು ಸ್ಥ್ಥಿತಿವಂತರೂ ಆಗಿರಲಿಲ್ಲ. ಉಳಿದವರ ದೀಪಾವಳಿಯೇ ಅವರ ಹಬ್ಬವೂ ಆಗಿ ಜನರ ನಡುವೆ ಒಂದಾಗಿ ಬಿಡುತ್ತಿದ್ದರು.
ಕರೀಮನ ಅಪ್ಪನಿಗೆಎರಡು ಹೆಂಡಂದಿರು. ಅವನ ಚಿಕ್ಕಪ್ಪನಿಗೂಎರಡು ಹೆಂಡಂದಿರಿದ್ದರೂಒಬ್ಬರು ಜೊತೆಯಲ್ಲಿರಲಿಲ್ಲ. ಅವರು ಸತ್ತಿದ್ದಾರೆಂದೋ , ಬಿಟ್ಟುಹೋಗಿದ್ದಾರೆಂದೋ ಕರೀಮ ಹೇಳಿದ ನೆನಪು.ಎರಡು ಮನೆಯ ಮಕ್ಕಳೂ ಸೇರಿ ಶಾಲೆಗೆ ಏಳೆಂಟು ಜನ ಬರುತ್ತಿದ್ದರು. ಕರೀಮ ಅಣ್ಣಂದಿರಾದ ಖಾಸಿಮ ,ರಹೀಮ ಅಕ್ಕ ಮೈಮುನಾ, ರಜಿಯಾ ಹೀಗೆ ಏನೇನೋ ಹೆಸರುಗಳು.ಎಲ್ಲಾ ಹೆಸರು ಮತ್ತು ಮುಖಗಳು ನೆನಪಿನಾಚೆ ನುಗ್ಗುವುದೇ ಇಲ್ಲ.ಆದರೆ ಕರೀಮ ಮತ್ತು ಅವನಕ್ಕ ಮೈಮುನಾ ನನ್ನ ಜೊತೆಗಾರರು. ಶಾಲೆಯ ಪಕ್ಕದಲ್ಲೇ ಇದ್ದ ಅವರ ಮನೆ ನಮಗೆ ಹೊಕ್ಕು ಬಳಕೆಯಾಗಿತ್ತು. ನಮ್ಮ ಮನೆಗಳಲ್ಲೂ ಅಲ್ಲಿ ಹೋಗುವುದಕ್ಕೆಯಾವುದೇ ನಿರ್ಬಂಧಗಳಿರಲಿಲ್ಲ. ಮನೆ ಬಿಟ್ಟ ನಂತರ ನಾವೆಲ್ಲಿ ಹೋಗಿದ್ದೇವೆ ಅನ್ನುವುದನ್ನು ತಿಳಿದುಕೊಳ್ಳವ ವ್ಯವಧಾನವೂ ನಮ್ಮ ಮನೆಯವರಿಗಿರಲಿಲ್ಲ. ಸಂಜೆ ಸೂರ್ಯ ಬೆಟ್ಟದಾಚೆ ಜಾರುವ ಮೊದಲು ಮನೆ ಸೇರಿಕೊಂಡರೆ ಉಳಿದ ಪ್ರಶ್ನೆಗಳು ನಮ್ಮನ್ನು ತಾಕುತ್ತಲೇ ಇರಲಿಲ್ಲ. ಅಲ್ಲದೇ ಅವರ ಮನೆಗಳಲ್ಲಿ ನಾವು ತಿನ್ನುವ ಕೋಳಿ ಮೀನು ಅಲ್ಲದೇ ಬೇರೆಯಾವ ಮಾಂಸದ ಅಡುಗೆಯೂ ಮಾಡುವುದಿಲ್ಲ ಎನ್ನುವುದೂ ನಮಗೆ ಅವರ ಮನೆಗಳಲ್ಲಿ ಊಟಮಾಡುವುದಕ್ಕೆ ಅಡ್ಡಿಯಾಗದೇ ಇರಲು ಕಾರಣವಿರಬಹುದು ಅಂತ ಈಗ ಅನ್ನಿಸುತ್ತಿದೆ. ರಜೆಯ ದಿನಗಳಲ್ಲಂತೂ ಬೆಳಗ್ಗಿನಿಂದ ಸಂಜೆಯವರೆಗೆಅವರ ಮನೆಯೇ ನಮಗೆ ಮನೆಯಾಗಿರುತ್ತಿತ್ತು. ಅವನಮ್ಮ ಹಲಸಿನಬೀಜ ಗಾಂಧಾರಿ ಮೆಣಸು ಹಾಕಿ ಮಾಡಿದ ಒಣಮೀನಿನ ಸಾರು ಈಗಲೂ ಬಾಯಲ್ಲಿ ನೀರೂರಿಸುತ್ತದೆ.
ಅವರ ಮನೆಯ ಎದುರು ಶ್ರೀಧರ ಭಟ್ಟರ ಖಾಲಿ ಜಾಗ . ಸುತ್ತ ಮುಳ್ಳು ಬೇಲಿ ಹಾಕಿ ಮುಳಿ ಹುಲ್ಲಿಗೆಂದು ಬಿಟ್ಟ ಮೈದಾನ. ಅಲ್ಲಲ್ಲಿ ಸಹಜವಾಗಿ ಬೆಳೆದ ನೆಲ್ಲಿಮರ , ಸೀಬೆಗಿಡಗಳು ,ಮಾವು, ಹಲಸಿನ ಮರಗಳು. ಭಟ್ಟರು ನೆಟ್ಟು ಬೆಳೆಸಿದ , ಅತ್ತ ಸಾಯದೆಯೂ ಇತ್ತ ಬದುಕದೆಯೂ ಇರುವ ಸೀತಾಫಲ, ಸಪೋಟದ ಗಿಡಗಳು. ಭಟ್ಟರಿಗೆ ಕೆಳಗಿನ ಬೈಲಿನಲ್ಲಿ ದೊಡ್ಡ ತೋಟ ಇದ್ದುದರಿಂದ ಇದನ್ನು ಮುಳಿಹುಲ್ಲಿಗಷ್ಟೇ ಸೀಮಿತಗೊಳಿಸಿದ್ದರು. ಹಾಗಾಗಿ ಅಲ್ಲಿ ಆದ ಹಣ್ಣುಹಂಪಲು ಮಂಗಗಳು, ಹಕ್ಕಿಗಳಿಗೆ ಪಾಲಾಗಿ ಉಳಿದರೆ ಅದು ನಮ್ಮ ಪಾಲು. ಸುತ್ತ ಮುಳ್ಳಿನ ಬೇಲಿಯಿದ್ದರೂ ದಾಟುವುದಕ್ಕೆ ಕಾಡು ಮರದ ದಣಪೆ ಹಾಕಿದ್ದರು. ದಣಪೆಯ ಎರಡೂ ಕಡೆ ಮರದ ಬೊಡ್ಡೆಗಳನ್ನು ನೆಟ್ಟಿದ್ದರಿಂದ ಆರಾಮವಾಗಿ ದಣಪೆ ಹತ್ತಿ ಇಳಿದು ಹೋಗಿ ಬರಬಹುದಿತ್ತು .ತುಡುಗು ದನಗಳಿಂದ ಹುಲ್ಲನ್ನು ರಕ್ಷಿಸುವುದು ಬಿಟ್ಟರೆ ಬೇಲಿಗೆ ಅಲ್ಲಿ ಬೇರೇನೂ ಕೆಲಸವಿರಲಿಲ್ಲ. ಹಾಗಾಗಿ ನಾವು ಅಲ್ಲಿದ್ದ ಸೀಬೆಹಣ್ಣು ಬೇಸಿಗೆಯಲ್ಲಿ ಬಿಡುತ್ತಿದ್ದ ಸಪೋಟ, ಸೀತಾಫಲ, ಪೊದೆಗಳಲ್ಲಿ ಸಿಗುತ್ತಿದ್ದ ಕೇಪುಳದಹಣ್ಣು ಕೊಟ್ಟೆಹಣ್ಣು, ಕಾರೆಹಣ್ಣು ಹೀಗೆ ತರೇವಾರಿ ಹಣ್ಣುಗಳನ್ನು ಮಂಗಗಳೊಂದಿಗೆ ಹಂಚಿಕೊಂಡು ತಿನ್ನುತ್ತಿದ್ದೆವು.ಮೈದಾನದ ಬದಿಯಲ್ಲಿ ಹರಿದು ಹೋಗುತ್ತಿದ್ದ ತೋಡು ಅದರಲ್ಲಿರುತ್ತಿದ್ದ ಸಣ್ಣಪುಟ್ಟ ಮೀನುಗಳು, ಗಟ್ಟಿದಾಡೆಯ ಏಡಿಗಳು, ಏಡಿಮರಿಗಳು, ಕಪ್ಪೆಮರಿಗಳು.ಮಳೆಗಾಲದಲ್ಲಿ ನೀರಿಳಿದು ಹೊಂಡ ಬಿದ್ದಗುರುಂಪುಗುಂಡಿಯಲ್ಲಿ ಕೆಡ್ಡಸ ಸಮಯದಲ್ಲಿ ಮೊರಂಟೆ, ಮುಗುಡು ಮೀನುಗಳಿಗೆ ಗಾಳ ಹಾಕುವುದು,ಕಾರೆಕಾಯಿಕೊಯ್ದು ಪುಡಿಮಡಿ ಬೂದಿಯಲ್ಲಿ ಮಿಶ್ರಮಾಡಿ‘ಕಡು’ ಹಾಕಿ ಮೀನು ಹಿಡಿಯುವುದು, ಹೀಗೆ ಎಲ್ಲಾ ಸಾಹಸಗಳಿಗೂ ಕರೀಮ ನಾಯಕನಾಗಿರುತ್ತಿದ್ದ. ಒಮ್ಮೊಮ್ಮೆ ಯಾಕೋ ಮೌನವಾಗಿ ಕೂತಿರುತ್ತಿದ್ದ. ಮನೆಯಲ್ಲಿ ಅವನಮ್ಮ ಮತ್ತು ಚಿಕ್ಕಮ್ಮನಿಗೆ ಜಗಳವಾಗಿ ಅವರಿಬ್ಬರಿಗೂ ಅವನಪ್ಪ ದಬದಬ ಒದ್ದು ಮೈಮುಖ ಬಾಸುಂಡೆಗಳಿಂದ ಊದಿಕೊಂಡಾಗ ಕರೀಮ ಮಂಕಾಗಿರುತ್ತಿದ್ದ. ಉಳಿದ ಹಾಗೆ ಅವನು ಚೈತನ್ಯದ ಚಿಲುಮೆ. ಸದಾ ಪಾಠದಲ್ಲಿ ಹಿಂದಿರುತ್ತಿದ್ದ ಅವನು ಆಟದಲ್ಲಿ ಯಾವಾಗಲೂ ಮುಂದು.ಚಟಪಟ ಮಾತನಾಡುತ್ತಿದ್ದ ಅವನಿಗೆ ಸಭಾಕಂಪನವೆಂಬುದು ಆಗಲೂ ಅವನಿಗೆ ಗೊತ್ತಿರಲಿಲ್ಲ.ತಕ್ಕ ಮಟ್ಟಿಗೆ ಚೆನ್ನಾಗಿ ಹಾಡುತ್ತಿದ್ದ ಅವನಿಗೆ ಭಾಷಣ ಸ್ಪರ್ಧೆಗಳಲ್ಲೂ ಬಹುಮಾನ ಗ್ಯಾರಂಟಿ. ವಾರ್ಷಿಕೋತ್ಸವಗಳಲ್ಲಿ ಮುಖ್ಯಪಾತ್ರಗಳೆಲ್ಲಾ ಅವನಿಗೇ. ಆಗಿದ್ದ ಮೇಸ್ಟ್ರುಗಳು ಇನ್ನೂ ಜಾತಿಯ ವಿಷಕ್ಕೆ ಬಲಿಯಾಗದಿದ್ದುದಕ್ಕೋ ಏನೋ ಅವನು ಎಲ್ಲಾಕಡೆ ಮಿಂಚುತ್ತಿದ್ದ. ಒಂದು ಸಾರಿ ಅವನು ನಾಟಕದಲ್ಲಿ ನಮಾಜು ಮಾಡಿದ್ದಕ್ಕೆ ಪಕ್ಕದ ಊರಿನ ಮುಸ್ಲಿಮರು ಅವನಪ್ಪನಲ್ಲಿ ಗಲಾಟೆ ಮಾಡಿದ್ದರಂತೆ. ತಲೆಯ ಮೇಲೆ ಬಿಳಿಯ ದೋಸೆಯಂಥ ತೂತಿದ್ದ ಟೋಪಿ ಹಾಕಿಕೊಂಡು ಕರೀಮ ನಾಟಕದಲ್ಲಿ ನಮಾಜು ಮಾಡಿದ್ದ. ನಾಟಕದ ಮಾಸ್ಟ್ರಲ್ಲೂ ವಿಚಾರಿಸಿದ್ದರಂತೆ. ಕರೀಮನ ಅಪ್ಪನನ್ನು ಶಾಲೆಗೆ ಕರಿಸಿದಾಗ ಅದಕ್ಕೆಲ್ಲ ನೀವು ತಲೆಕೆಡಿಸಸಿಕೊಳ್ಳಬೇಡಿ ಮೇಸ್ಟ್ರೇ. ಅವರು ನನಗೆ ಬದುಕಲಿಕ್ಕೆ ಹಣ ಕೊಡ್ತಾರಾ? ಅದೆಲ್ಲಾ ನಾನು ನೋಡಿ ಕೊಳ್ತೇನೆ ಅಂದಿದ್ದು ನನಗಿನ್ನೂ ನೆನಪಿದೆ. ನಾಟಕ ಮುಗಿದ ನಂತರವೂ ಒಂದೆರಡು ದಿನ ಆ ಟೊಪ್ಪಿ ಹಾಕಿಕೊಂಡು ಕರೀಮ ಶಾಲೆಗೆ ಬಂದಾಗ ಉಳಿದವರೆಲ್ಲಾ ತಮಾಷೆ ಮಾಡಿದ್ದರು.ಅವನು‘ನಮ್ಮ ನೆಂಟರ ಮಕ್ಕಳೆಲ್ಲಾ ದಿನಾ ಬೆಳಿಗ್ಗೆ ಮದರಸಕ್ಕೆ ಇಂಥ ಟೊಪ್ಪಿ ಹಾಕಿಕೊಂಡು ಹೋಗುತ್ತಾರೆ. ಕೆಲವರು ಶಾಲೆಗೂ ಟೊಪ್ಪಿ ಹಾಕಿಕೊಂಡು ಹೋಗುತ್ತಾರೆ ಅಂದಿದ್ದ. ’ಇಲ್ಲ ಕಣೋ ಕರೀಮಾ ನಿನಗೆ ಇದು ಅಂಥ ಚಂದ ಕಾಣುವುದಿಲ್ಲ. ಟೊಪ್ಪಿ ಹಾಕಿದರೆ ನೀನು ನಮ್ಮ ಕರೀಮ ಅಂತ ಅನ್ನಿಸುವುದೇ ಇಲ್ಲ ಯಾರೋ ಬೇರೆ ಊರಿಂದ ಬಂದವರು ಅನ್ನಿಸುತ್ತದೆ ಅಂದಿದ್ದೆ . ಮರುದಿನದಿಂದ ಅವನು ಶಾಲೆಗೆ ಟೋಪಿ ಹಾಕಿಕೊಂಡು ಬಂದಿರಲಿಲ್ಲ.
ದೀಪಾವಳಿಯ ದಿನಗಳಲ್ಲಿ, ‘ಅಲ್ವೋ ಶ್ರೀ ನಿಮಗೆ ಎಷ್ಟು ಹಬ್ಬಗಳು ಅಲ್ವೇನೋಎಷ್ಟು ಒಳ್ಳೇದಲ್ವಾ? ನಮ್ಮಲ್ಲಿ ಹಬ್ಬ ಮಾಡುವುದೇ ಇಲ್ಲ ಅಂದಿದ್ದ.ನಮಗಿದ್ದುದೂ ಒಂದೇ ಹಬ್ಬ ದೀಪಾವಳಿ ಮಾತ್ರ. ಆಗೆಲ್ಲಾ ಕರೀಮ ಮನೆಗೆ ಬರುತ್ತಿದ್ದ. ಜತೆಯಲ್ಲೇ ಪಟಾಕಿ ಸಿಡಿಸುತ್ತಿದ್ದೆವು.ಆಗೇನೋ ಒಂಬತ್ತನೇ ತರಗತಿಯಲ್ಲಿದ್ದಿರಬೇಕು. ಕರೀಮ ಅಂದಿದ್ದ ,“ಮೊನ್ನೆ ಮಂಗಳೂರಿನ ಅತ್ತೆ ಮನೆಗೆ ಹೋಗಿದ್ದಾಗ ಮಸೀದಿಗೆ ನಮಾಜಿಗೆ ಹೋಗಿದ್ದೆ ಕಣೋ. ಅಲ್ಲಿ ಮಾಡುವ‘ಕುತ್‍ಬಾ” ನಮ್ಮ ಸೀತಾರಾಮನ ಅಪ್ಪ ಹೇಳುವ ಮಂತ್ರ ಎರಡೂ ಒಂದೇತರ ಕೇಳಿಸುತ್ತೆ ಕಣೋ”ಅಂತ. ನಮ್ಮೂರಿನಲ್ಲಿ ಮಸೀದಿ ಇಲ್ಲದ್ದರಿಂದ ನನಗದು ಅಷ್ಟು ಮುಖ್ಯ ವಿಷಯ ಅನ್ನಿಸಲಿಲ್ಲ. ಆದರೆ ಅರಿವು ಬೆಳೆದ ಹಾಗೆ ಹೌದಲ್ಲಾ ಅನ್ನಿಸಲಾರಂಭಿಸಿತು.
ನಾವು ಆಗಷ್ಟೇ ಹತ್ತನೇ ತರಗತಿ ದಾಟಿದ್ದೆವು. ಹಿತ್ತಾಳೆ ತಾಮ್ರದ ಪಾತ್ರೆಗಳ ಸ್ಥಾನವನ್ನು ಹೊಳೆಯುವ ಸ್ಟೀಲಿನ ಪಾತ್ರೆಗಳು ಆಕ್ರಮಿಸಿದ್ದವು. ಬಡವರ ಮನೆಗೂ ಅಲ್ಯೂಮೀನಿಯಂ ,ಇಂಡಾಲಿಯಂ ಪಾತ್ರೆಗಳು ಕಾಲಿಟ್ಟವು. ಕರೀಮನ ಅಪ್ಪನ ಆದಾಯ ದೊಡ್ಡ ಕುಟುಂಬಕ್ಕೆ ಸಾಲುತ್ತಿರಲಿಲ್ಲ .ಊರಲ್ಲಿ ಹಿಂದಿನ ವಿಶ್ವಾಸ ಉಳಿದಿರಲಿಲ್ಲ. ಆಗಲೇ ಮಂಗಳೂರಿನಿಂದ ಬಂದವರ್ಯಾರೋ ಶ್ರೀಧರ ಭಟ್ಟರ ಜಾಗ ತೆಗೆದು ಕೊಂಡರು.ಅದೇನೋ ರೆಸಾರ್ಟ್ ಮಾಡುತ್ತಾರೆ ಅನ್ನುತ್ತಿದ್ದರು. ಆ ಜಾಗ ತೆಗೆದುಕೊಂಡವರೇ ಇವರ ಜಾಗವನ್ನೂ ತೆಗೆದು ಕೊಂಡರಂತೆ.ರಜೆ ಮುಗಿಸಿ ಅಜ್ಜಿಮನೆಯಿಂದ ಬರುವಷ್ಟರಲ್ಲಿ ಕರೀಮನ ಕುಟುಂಬ ಹೊರಟುಹೋಗಿತ್ತು ಎಲ್ಲಿಗೆಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಎಲ್ಲೋ ಕಾಸರಗೋಡು ಕಡೆಗೆ ಹೋದರಂತೆ ಅಂತ ಯಾರೋ ಹೇಳೀದರು. ಯಾರಿಗೂ ಅದು ದೊಡ್ಡ ವಿಷಯವಾಗಿರಲಿಲ್ಲ.
ಮತ್ತೆ ನಾನು ಕರೀಮನನ್ನು ಕಂಡದ್ದು ಸುಮಾರು ಐದು ವರ್ಷಗಳ ನಂತರ.ಬಹುಶ: ಡಿಗ್ರಿಯ ಕೊನೆಯ ವರ್ಷ. ಅಂತರಕಾಲೇಜು ಚರ್ಚಾ ಸ್ಪರ್ಧೆಯಲ್ಲಿ, ಮಂಗಳೂರಿನ ಕಾಲೇಜೊಂದರಲ್ಲಿ. ಅವನೇ ಗುರುತು ಹಿಡಿದು ಮಾತನಾಡಿದ್ದ . ಇಲ್ಲೇ ಸುರತ್ಕಲ್ ಹತ್ತಿರ ಐದು ಸೆಂಟ್ಸ್ ಮನೆ ಮಾಡಿದ್ದನ್ನು ,ಅವನಪ್ಪ ಗೂಡಂಗಡಿಇಟ್ಟದ್ದನ್ನು, ಅಣ್ಣ ಮಾವನ ಮಗನೊಂದಿಗೆ ದುಬಾಯಿಗೆ ಹೋಗಿರುವುದನ್ನು,ಅಕ್ಕಂದಿರಿಗೆ ಮದುವೆಯಾಗಿರುವುದನ್ನು ಹೇಳಿದ್ದ. ಡಿಗ್ರಿ ಮುಗಿಸಿ ಏನು ಮಾಡುತ್ತೀ? ಅಂದ.‘ ಗೊತ್ತಿಲ್ಲ’ ನಾನಂದೆ. ನೀನೇನು ಮಾಡುತ್ತಿ ಅಂದದ್ದಕ್ಕೆ ,“ನಾನು ಸಂಸ್ಕೃತ ಎಂ. ಎ ಮಾಡಬೇಕು.ಈವರೆಗೆ ಯಾವ ಬ್ಯಾರಿಯೂ ಮಾಡಿಲ್ಲ ನಾನು ಮಾಡಬೇಕು ಅಂದಿದ್ದ. ಅವನಿಗೆ ಭವಿಷ್ಯದ ಬಗ್ಗೆ ಸ್ಪಷ್ಟ ಕಲ್ಪನೆಯಿತ್ತು. ರಂಗದ ಹಿಂದೆ ಭರತನಾಟ್ಯದವರು ತಯಾರಾಗುತ್ತಿದ್ದರು. ಮಂದಬೆಳಕು ಹರಡಿತ್ತು; “ನಮಸ್ಕಾರ”ಅಂದೆ.“ಏ ನೀನು ಶ್ರೀ ಅಲ್ವೇನೋ?” ಅಂದ. ಹೌದುನೀವು?ನನ್ನಅನುಮಾನ ನಿಜ ಅನ್ನಿಸಲಾರಂಭಿಸಿತು.“ಏ ನಾನು ಕಣೋ ಕರೀಮಾ ಆದೇ ಬೇಲಿ ಹಾಕಿದ ಪುರೋಹಿತರ ಮೈದಾನ, ಪೇರಲೆ ಹಣ್ಣು, ಅಷ್ಟು ಬೇಗ ಮರೆತು ಬಿಟ್ಟಿಯಾ”ಅಂತ ಆಲಂಗಿಸಿದ. ಇಲ್ಲೇ ಪಕ್ಕದ ಲಾಡ್ಜ್‍ನಲ್ಲಿ ವ್ಯವಸ್ಥೆ ಮಾಡಿದ್ದಾರೆ. ಬಾ ನಿನ್ನಲ್ಲಿ ತುಂಬ ಮಾತನಾಡಲಿಕ್ಕಿದೆ .ಅಂದ.ಏನೇನೋ ಹಳೆಯ ನೆನಪುಗಳು.ಮಾತುಗಳೇ ಸಿಗುತ್ತಿಲ್ಲ. ಸÀರೀ ನೀನು ಎಲ್ಲಿದ್ದೀಯಾ?“ಇಲ್ಲೇ ಲೆಕ್ಚರರ್ ಆಗಿದ್ದೀನಿ ನೀನೇನು ಮಾಡ್ತಿದ್ದೀಯಾ?”ಅಂದೆ.ಏನೂಇಲ್ಲ. ಈಗ ಫುಲ್‍ಟೈಮ್ ಇದೇ ಮಾಡ್ತಾ ಇದೀನಿ. ಮುಂದಿನ ತಿಂಗಳು ಅಮೇರಿಕಾಕ್ಕೆ ಹೋಗ್ತಾ ಇದೀನಿ. ಒಂದು ಸೆಮಿನಾರ್ ಇದೆ.ಹಾಗೇ ಒಂದೆರಡು ತಿಂಗಳು ಅಲ್ಲೇ ಕಾರ್ಯಕ್ರಮ ಇದೆ. ತತ್ವಜ್ಷಾನದಲ್ಲಿ ಎಂ.ಎ. ಪಿ ಎಚ್ ಡಿ ಮಾಡಿದೆ .ಒಂದೆರಡು ವರ್ಷ ಟೀಚ್ ಮಾಡಿದೆ. ಖುಷಿ ಕೊಡಲಿಲ್ಲ ಬಿಟ್ಟೆ. “ಮದುವೆ ,ಮಕ್ಕಳು?” “ಓ ನಿಂಗೆ ಗೊತ್ತಿಲ್ಲ ಅಲ್ವಾ? ನಾನವತ್ತು ಪರಿಚಯ ಮಾಡಿಸಿದ್ದೆ, ನೆನಪಿದೆಯಾ ಮಂಗಳೂರಿನಲ್ಲಿ , ನಾಗರತ್ನ ಅಂತ ನನ್ನ ಜ್ಯೂನಿಯರ್ . ಚರ್ಚಾಸ್ಪರ್ಧೆಗೆ ನಮ್ಮ ಕಾಲೇಜಿ ಬಂದಿದ್ದಳಲ್ಲಾ? ಅವಳನ್ನೇ ಮದುವೆಯಾದೆ. ಎರಡೂ ಕಡೆಯಿಂದ ವಿರೋಧ ಬಂತು. ಈಗಲೂ ನಮಗೆ ನಾವು ಮಾತ್ರ ಅವರ ಕಡೆಯವರೂ ಇಲ್ಲ , ನಮ್ಮಕಡೆಯವರೂ ಇಲ್ಲ. ನಿನ್ನಂಥ ಒಂದಷ್ಟು ಜನಜತೆಗಿದ್ದಾರೆ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕೂ ಸಮಯವಿಲ್ಲ. ಅವಳು ಮಂಗಳೂರಿನಲ್ಲೇ ಲೆಕ್ಚರರ್. ನಾನಂತೂ ಊರಿನ ಮೇಲೆ. ಮಗಳು ಸೌಹಾರ್ದ, ಕಾಲೇಜಿಗೆ ಹೋಗುತ್ತಿದ್ದಾಳೆ, ಅಂದ. ಆಂ ಅಂದಹಾಗೆ ನಮ್ಮದು ಮನುಜ ಮತ .ಮತಾಂತರಗಿತಾಂತರ ಏನೂ ಇಲ್ಲ. ಅಂತ ನಕ್ಕ. ಅಲ್ಲೆಲ್ಲೋ ನೋವಿನ ಸೆಲೆ ಹುಡುಕಲು ಪ್ರಯತ್ನಿಸಿ ಸೋತೆ. ”ಊರಿಗೆ ಹೋಗಿದ್ಯಾ?”ಅಂದ. “ಊಂ, ಹೋಗಿದ್ದೆ ಕಳೆದ ದೀಪಾವಳಿಗೆ”.“ಆ ಮೈದಾನ ಬೇಲಿ ದಣಪೆ ಹಾಗೇ ಇದಿಯಾ?”ಅಂದ.ಇಲ್ಲ ಕಣೋ ಆ ಜಾಗ ತೆಗೆದು ಕೊಂಡವರು ಪೂರ್ತಿ ಆಳೆತ್ತರದ ಕಾಂಪೌಂಡ್ ವಾಲ್ ಮಾಡಿದ್ದಾರೆ ಒಳಗೆ ಕಾಣಿಸದ ಹಾಗೆ. ದೊಡ್ಡ ಕಬ್ಬಿಣದ ಗೇಟು ಇದೆ ಒಳಗೆ ರೆಸಾರ್ಟ್ ಇದೆ ಅಂದರು . ನಾನೂ ನೋಡಿಲ್ಲ. ಇಲ್ಲೇ ಎಲ್ಲೋ ಪಂಡಿತ ಮಾಸ್ಟ್ರಿದ್ರು. ಆಮೇಲೆ ಸಿಗುತ್ತೇನೆ ಅಂದಿದ್ದೆ.
“ಸರಿಕಣೋ, ನಾಳೆ ಬೆಳಿಗ್ಗೆ ಡೆಲ್ಲಿಯಲ್ಲಿರಬೇಕು ಬೆಂಗಳೂರಿಂದ ಬೆಳಿಗ್ಗೆ ನಾಲ್ಕು ಗಂಟೆಗೆ ಪ್ಲೈಟು. ಇನ್ನೊಮ್ಮೆಸಿಗುತ್ತೇನೆ ನಿನ್ನಲ್ಲಿ ತುಂಬಾ ಮಾತನಾಡಬೇಕು ಅಂದ. ದೂರದಲ್ಲಿ ಪಂಡಿತ್ ಮೇಸ್ಟ್ರು ದಾಪುಗಾಲು ಹಾಕುತ್ತಾ ಬರುವುದುಕಂಡಿತು.ಕಾರು ಹೊರಟು ಹೋಯಿತು. “ಹೊರಟು ಹೋದ್ನೇನೋ”ಅಂದರು.‘ಅದ್ಭುತ ಪ್ರತಿಭೆ ಕಣೋ.ಆದ್ರೆ ಏನು ಮಾಡೋಣ ಜಾತಿಯ ಕಾರಣಕ್ಕೆ ಇಷ್ಟ ಪಡೋಕೆ ಆಗ್ತಾ ಇಲ್ಲ’ಅಂದರು. ಮೇಸ್ಟ್ರು ಯಾಕೋ ತೀರಾ ಸಣ್ಣವರಾಗುತ್ತಿದ್ದಾರೆ ಅನ್ನ್ನಿಸಿತು. ಕೇಳಿಸಿಕೊಳ್ಳುವುದಕ್ಕೆ ಅವನಿಲ್ಲ ಅಂತ ಸಮಾಧಾನವಾಯಿತು. ಯಾಕೋ ಟೋಪಿ ಹಾಕದ , ನಾಮ ಬಳಿದುಕೊಳ್ಳದ ಅದೇ ಕರಿ ಮೈಯ ಕರೀಮ ನನಗಿಷ್ಟ ಅಂತ ಹೇಳ ಬೇಕೆಂದುಕೊಂಡೆ.ಆಗಲಿಲ್ಲ. ಬೇಡವೆಂದರೂ ಬಯಲ ಬೇಲಿಯ ದಣಪೆ ನೆನಪಾಯಿತು.
************