(ಹಾಸ್ಯ ಬರಹ) ಚಿತ್ರ: ಕಾರ್ತಿಕ್ ವೇಂಕಿ
ಬೆಳ್ಳಂಬೆಳಿಗ್ಗೆ ಯಾರೋ ಫೋನ್ ಮಾಡಿದರು ತಮ್ಮದು ಬೆಂಗಳೂರಂತೆ,ನನ್ನ ಜೊತೆ ಮಾತಾಡುವದಿದೆ ಯಾವಾಗ ಅಪಾಯಿಂಟ್ಮೆಂಟ್ ಕೊಡುತ್ತೀರಿ ಎಂದು ಕೇಳಿದರು. ಈಗ ಸವಕಲು ನಾಣ್ಯದಂತಹ ನಾನು ಅವರಿಗೆ ಸಮಯ ನಿಗದಿ ಮಾಡಿ ಬಾ ಎಂದು ಕರೆಯುವದೆ?…… ಯಾವಾಗಲಾದರೂ ಬನ್ನಿ ಎಂದೆ. ಕೂಡಲೇ ಅವರಿಂದ ಉತ್ತರ… ಸಾರ್ ತಾವು ಮನೆಯಲ್ಲಿದ್ದರೆ ಈಗಲೇ ಬರುತ್ತೇವೆ ಎಂದು.. “ಆಯ್ತು ಬನ್ನಿ” ಎಂದೆ. ಇಷ್ಟು ಕೇಳುತ್ತಾರೆಂದರೆ ಯಾರೋ ಸಾಹಿತ್ಯ ಪ್ರೇಮಿಗಳು ಆಗಿರುತ್ತಾರೆಂದು ಊಹಿಸಿದೆ. ಅಡುಗೆ ಮನೆಗೆ ಹೋಗಿ ಒಂದಾಲ್ಕು ಕಾಫಿ ಹತ್ತು ನಿಮಿಷದಲ್ಲಿ ರೆಡಿ ಮಾಡು ಎಂದು ಹೆಂಡತಿಗೆ ಆರ್ಡರ್ ಮಾಡಿ ಹಾಲಿಗೆ ಬಂದೆ. ಅಂದುಕೊಂಡಂತೆ ಸರಿಯಾಗಿ ಹತ್ತೇ ನಿಮಿಷದಲ್ಲಿ ಮನೆಯ ಮುಂದೆ ಟ್ಯಾಕ್ಸಿ ನಿಂತ ಶಬ್ದವಾಯಿತು. ಅದರಿಂದ ಕನ್ನಡದ ಕಟ್ಟಾಳುಗಳಂತಹ ಪಂಚ ಪಾಂಡವರು ಕೆಳಗಿಳಿದರು. ಅವರನ್ನು ಮನೆಯೊಳಗೆ ಆಹ್ವಾನಿಸಿ ಸೋಫಾದತ್ತ ಕೈ ಮಾಡಿದೆ. ಸೋಫಾದಲ್ಲಿ ಆಸೀನರಾದ ಬಳಿಕ ತಮ್ಮನ್ನು ತಾವು ಪರಿಚಯಸಿಕೊಂಡರು. ಒಬ್ಬರು ರಾಜೇಗೌಡ. ಎರಡನೆಯವರು ಶ್ರೀನಿವಾಸ ಮೂರ್ತಿ. ಮೂರನೆಯ ವ್ಯಕ್ತಿ ಕೃಷ್ಣಪ್ಪ. ನಾಲ್ಕನೆಯವರು ಅಬ್ರಹಾಂ ಮತ್ತು ಐದನೇ ವ್ಯಕ್ತಿ ನಬಿ ಸಾಬ್. ” ಸಾರ್, ನಮ್ಮದು ಅಖಿಲ ಕರ್ನಾಟಕ ಭುವನೇಶ್ವರಿ ಸೇವಾ ಸಂಘ. ನಮ್ಮ ಸಂಘದ ಘನ ಉದ್ದೇಶವೇನೆಂದರೆ ಪ್ರತಿಭಾನ್ವಿತ ಹಿರಿಯ ಸಾಹಿತಿಗಳು, ಶಿಕ್ಷಣ ಪ್ರೇಮಿ, ಸಮಾಜ ಸೇವಕರನ್ನು ಗುರುತಿಸಿ ಅವರಿಗೆ ಸನ್ಮಾನ ಸಭೆ ಏರ್ಪಡಿಸುವದು ” ಎಂದ ರಾಜೇಗೌಡ ಖಾದಿ ಕುರ್ತಾದಿಂದ ಬಂಗಾರದ ಕಟ್ಟಿನ ಚಾಳೀಸು ಹೊರತೆಗೆಯುತ್ತ. ಅಂದರೆ ಇವರು ನಿಜವಾದ ಸಾಹಿತ್ಯ ಪ್ರೇಮಿಗಳಲ್ಲ!…..ಬದಲಾಗಿ ಚಂದಾ ವಸೂಲಾತಿ ವೀರರೆ?.. ನನ್ನ ಮುಖದಲ್ಲಿನ ಕಾಂತಿ ಕೊಂಚ ಕುಂದಿತು. ಅವರ ಸಂಸ್ಥೆಯ ಲೆಟರ್ ಹೆಡ್ ಕೈಗಿತ್ತು ಒಮ್ಮೆ ನೋಡಲು ಹೇಳಿದರು. ಅದರಲ್ಲಿ ಪದಾಧಿಕಾರಿಗಳ ಪಟ್ಟಿಯನ್ನು ಒಂದೇ ಪುಟದಲ್ಲಿ ಅಚ್ಚು ಹಾಕಲು ಸಾಕಾಗದೆ ಎರಡನೆಯ ಪುಟದಲ್ಲೂ ಮುದ್ರಿಸಿದ್ದರು. ಹನುಮನ ಬಾಲದಂತಹ ಪಟ್ಟಿಯತ್ತ ಕಣ್ಣಾಡಿಸಿದೆ. ಅದರಲ್ಲಿ ರಾಜ್ಯದ ಗೌರವಾಧ್ಯಕ್ಷರು, ಒಬ್ಬರು ಅಧ್ಯಕ್ಷರು, ಒಬ್ಬ ಖಜಾಂಚಿಗಳು, ಆರು ಜನ ಉಪಾಧ್ಯಕ್ಷರು, ಒಂದು ಡಜನ್ ಪ್ರಧಾನ ಕಾರ್ಯದರ್ಶಿಗಳು, ಸಹಾಯಕ ಕಾರ್ಯದರ್ಶಿಗಳು ಇತ್ಯಾದಿ. ಅಷ್ಟೇ ಅಲ್ಲದೇ ಕಲ್ಯಾಣ ಕರ್ನಾಟಕ, ಮೈಸೂರು, ಮುಂಬೈ ಕರ್ನಾಟಕ, ಕರಾವಳಿ ಪ್ರಾಂತ್ಯದ ಗೌರವ ಪ್ರತಿನಿಧಿಗಳು ಬೇರೆ…ಇಷ್ಟು ಸಾಲದೆ ಕಾನೂನು ಸಲಹೆಗಾರರಾಗಿ ಅರ್ಧ ಡಜನ್ ವಕೀಲರ ಪಟ್ಟಿ ನೋಡುತ್ತಿದ್ದರೆ ನಮ್ಮ ಕರ್ನಾಟಕದ ಬಿ ಜೆ ಪಿ ಅಥವಾ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ಸಮಿತಿ ಸದಸ್ಯರ ಪಟ್ಟಿಯಂತಿದೆ ಎನಿಸಿತು. ಪಟ್ಟಿಯಲ್ಲಿ ಇರುವ ಎಲ್ಲರೂ ಗೌರವಾನ್ವಿತ ಮಂತ್ರಿಗಳು, ಶಾಸಕರು, ನಿರ್ವತ್ತ ನ್ಯಾಯ ಮೂರ್ತಿಗಳು, ಪೊಲೀಸ್ ಅಧಿಕಾರಿಗಳು ಅಲ್ಲದೇ ಇತ್ತೀಚಿಗೆ ನಾಯಿಕೊಡೆಗಳಂತೆ ಎದ್ದಿರುವ ತಾಲೂಕು – ಜಿಲ್ಲಾ ಮಟ್ಟದ ದಿನ ಪತ್ರಿಕೆಗಳ ಸಂಪಾದಕರು, ಕವಿ ಪುಂಗವರು, ಸಾಹಿತಿಗಳು…. “ನಮ್ಮ ಸಂಸ್ಥೆಯಿಂದ ಇತ್ತೀಚಿಗೆ ಸನ್ಮಾನಗೊಂಡವರ ವೀಡಿಯೊಗಳೆಲ್ಲ ಈ ಪೆನ್ ಡ್ರೈವ್ ನಲ್ಲಿವೆ. ಬೇಕಾದರೆ ನಿಮ್ಮ ಲ್ಯಾಪ್ ಟ್ಯಾಪ್ ನಲ್ಲಿ ಹಾಕಿ ಸುಮಾರು ಎರಡು ಘಂಟೆ ಆರಾಮವಾಗಿ ನೋಡಬಹುದು ಸಾರ್..” ಎಂದ ವಾಮನ ರೂಪದ ಶ್ರೀನಿವಾಸ ಮೂರ್ತಿ. ನಾನು ವಿಡಿಯೋಗಳನ್ನು ನೋಡಲು ಸಾಹಸಿಸದೆ ” ಸಿಂಪಲ್ ಆಗಿ ಫೋಟೋ ಆಲ್ಬಮ್ ಇದ್ದರೆ ಕೊಡಿ ಸಾಕು ” ಎಂದು ಮನವಿ ಮಾಡಿದೆ. ಅವರಲ್ಲೊಬ್ಬ ಕರುಣೆ ತೋರಿ ಆಲ್ಬಮ್ ನನ್ನ ಮುಂದೆ ಹಿಡಿದ. “ಅಬ್ಬಬ್ಬಾ…. ಎಲ್ಲವೂ ವೈಭವಯುತ ಸನ್ಮಾನಗಳೇ… ಸನ್ಮಾನಗೊಂಡವರೆಲ್ಲರದೂ ದೊಡ್ಡ ದೊಡ್ಡ ತಲೆಗಳೇ… ಪ್ರತಿಯೊಂದು ಸನ್ಮಾನದಲ್ಲೂ ಮಂತ್ರಿಗಳು, ಶಾಸಕರು, ನಿರ್ವತ್ತ ನ್ಯಾಯಧೀಶರು, ಪತ್ರಕರ್ತರು,ಸಾಹಿತಿಗಳು, ಶಿಕ್ಷಣ ಪ್ರೇಮಿಗಳು ಇತ್ಯಾದಿಗಳೆಲ್ಲ ಪಾಲ್ಗೊಂಡಿದ್ದರು. ಕಣ್ಣು ಹೆಸರಿಗೆ ಆಲ್ಬಮ್ ನೋಡುತ್ತಿದ್ದರೂ ಮನಸಿನಲ್ಲಿ ಒಂದೇ ಆಲೋಚನೆ… ಚೆಂದದ ಮಕ್ಮಲ್ ಟೋಪಿ ಎಷ್ಟಕ್ಕೆ ಈ ಕನ್ನಡ ಕಲಿಗಳು ನನಗೆ ಹಾಕಬಹುದು ಅಂತ…” ಇಷ್ಟಕ್ಕೂ ಸನ್ಮಾನ ಯಾರಿಗೆ ಮಾಡಬೇಕೆಂದು ಅಂದುಕೊಂಡಿದ್ದೀರಿ? ” ಎಂದು ಕೇಳಿದೆ. “ಅವರಿವರಿಗೆ ಯಾಕೆ ಸಾರ್.. ನಿಮಗೇ!” ಎಂದ ಅಬ್ರಹಾಂ. ಅರೆಕ್ಷಣ ಎದೆ ಬಡಿತ ನಿಂತತಾಯಿತು.ಆದರೆ ಮನಸಿನ ಮೂಲೆಯೊಳಗೆ ಎಲ್ಲೋ ಸಂತೋಷ. ಪಂಚ ಪಾಂಡವರತ್ತ ದೃಷ್ಟಿ ಹಾಯಿಸಿದೆ. ತಾಯಿ ಭುವನೇಶ್ವರಿಯ ನಿಸ್ವಾರ್ಥ ಸೇವೆಗಾಗಿಯೇ ಜನ್ಮವೆತ್ತಿದ್ದಾರೆನಿಸುವಷ್ಟು ಸಾರ್ಥಕ ಭಾವ ಅವರ ಮುಖವಿಂದಾರಗಳಲ್ಲಿ! ಮನಸಿನೊಳಗಿನ ಸಂತಸ ಮುಖದಲ್ಲಿ ತೋರಿಸದೆ ಔಪಚಾರಿಕವಾಗಿ ” ನನಗ್ಯಾಕರಿ ಸನ್ಮಾನ… ನಾನೇನು ಅಂತಹ ಮಹಾ ಸಾಧನೆ ಮಾಡಿದ್ದೇನೆ….. ” ಎಂದೆ ಶಾಂತ ಸ್ವರದಲ್ಲಿ. ಮರುಕ್ಷಣದಲ್ಲಿ ಒಂದು ನಿಮಿಷ ಅಂತ ಹೇಳಿ ಒಳಗೆ ಹೋಗಿ “ಬರೀ ಕಾಫಿ ಅಷ್ಟೇ ಅಲ್ಲ ಜೊತೆಗೆ ಆರು ಪ್ಲೇಟ್ ಬಿಸಿ ಬಿಸಿ ಚೌ ಚೌ ಭಾತ್ ಕೂಡ ಮಾಡು ” ಎಂದು ಹೆಂಡತಿಗೆ ಸಮಜಾಯಿಷಿ ಮತ್ತೆ ಹಾಲ್ ಗೆ ಮರಳಿ ಬಂದೆ. ” ನೀವು ಸಾಹಿತ್ಯ ಲೋಕಕ್ಕೆ ಅದೇ ಕಾವ್ಯ ಲೋಕಕ್ಕೆ ಪ್ರವೇಶಿಸಿ ಬರೋ ನವೆಂಬರ್ ತಿಂಗಳಿಗೆ ಇಪ್ಪತ್ತೈದು ವರ್ಷಗಳಾಗುತ್ತವೆ… ಹೌದಲ್ವೇ ಸಾರ್ ” ಎಂದ ನಬಿ ಸಾಬ್. ಅಚ್ಚರಿಯಿಂದ ನಾನು “ಹೌದೌದು” ಎಂದೆ. ” ನೀವು ಕಾವ್ಯ ಲೋಕಕ್ಕೆ ಕಾಲಿಟ್ಟು ಈಗ ಇಪ್ಪತ್ತೈದು ವರ್ಷಗಳಾಗುತ್ತಿವೆ. ಅದಕ್ಕಾಗಿಯೇ ನಿಮ್ಮ ಸಾರ್ಥಕ ಸಾಹಿತ್ಯ ಸೇವೆಯ ಸಿಲ್ವರ್ ಜುಬಿಲಿಗಾಗಿಯೇ ನಿಮ್ಮನ್ನು ಸನ್ಮಾನಿಸಬೇಕೆಂದು ನಮ್ಮ ಉದ್ದೇಶ…. ಆ ಕಾರಣದಿಂದಲೇ ಈ ಯೋಜನೆ ರೂಪಿಸಿದ್ದು ಸಾರ್… ” ಎಂದ ರಾಜೇಗೌಡ ಮತ್ತೆ ಮಾತು ಮುಂದುವರೆಸಿದ. “ನಿಮ್ಮ ಮೊದಲ ಕವನ ಸಂಕಲನ ‘ಹಗಲಲ್ಲಿ ಚಂದಿರ’ ಬಿಡುಗಡೆ ಆಗಿದ್ದು 1995 ರಲ್ಲಿ. ನಂತರ ಸುಮಾರು ಒಂದು ಅಥವಾ ಎರಡು ವರ್ಷಕ್ಕೊಮ್ಮೆ ನಿಮ್ಮ ಕಾವ್ಯಧಾರೆಗೆ ಆಗಾಗ್ಗೆ ಆಣೆಕಟ್ಟು ಕಟ್ಟುತ್ತಾ ‘ಬೀದಿ ದೀಪ’ ‘ ಚಂದ್ರ ಚಿಕೋರಿ’ ‘ ಕನ್ನಡ ಎನ್ನಡ ‘ ‘ ಮಾವನ ಸೊಸೆ’ ‘ನಾಲ್ಕು ವೀಣೆ – ಎಂಟು ತಂತಿ’ ಇತ್ಯಾದಿ ಸುಮಾರು ಹದಿನೈದು ಕಾವ್ಯ ಸಂಕಲನಗಳನ್ನು ತಾಯಿ ಭುವನೇಶ್ವರಿಯ ಮಡಿಲಿಗೆ ಹಾಕಿ ಆರು ಕೋಟಿ ಕನ್ನಡಿಗರಿಗೆ ಸಮರ್ಪಣೆ ಮಾಡಿರುವಿರಿ. ಈ ಎಲ್ಲ ಕವನ ಸಂಕಲನಗಳಿಗೆ ನೀವೇ ಸ್ವಂತ ಹಣ ಹಾಕಿ ನಿಮ್ಮ ಶ್ರೀಮತಿಯ ಒಡೆತನದ ಪ್ರಕಾಶನದ ಹೆಸರಲ್ಲಿ ಪ್ರಕಟಿಸಿ ಕನ್ನಡಮ್ಮನ ನಿಜ ಸೇವೆ ಮಾಡಿರುವಿರಿ. ನಾನು ಹೇಳಿದ್ದು ನಿಜ ತಾನೇ…” ಎಂದು ಮಾತು ಮುಗಿಸಿದ ರಾಜೇಗೌಡ. ಆ ಮಾತು ಕೇಳಿ ಮತ್ತೊಮ್ಮೆ ಬೆಚ್ಚಿ ಬಿದ್ದೆ. “ನನ್ನ ಬಗ್ಗೆ ನನಗಿಂತಲೂ ತಮಗೇ ಹೆಚ್ಚು ಗೊತ್ತಿದ್ದ ಹಾಗಿದೆ.. ” ಎಂದೆ ರಾಜೇಗೌಡನನ್ನು ಮೆಚ್ಚಿಕೊಳ್ಳುತ್ತ… “ನಿಮ್ಮೊಬ್ಬರದೇ ಅಲ್ಲ…. ತಾಯಿ ಭುವನೇಶ್ವರಿಯ ನಿರಂತರ ಸೇವೆಯಲ್ಲಿ ನಿರತರಾದ ಸಾಹಿತ್ಯ ರಂಗದ ಎಲ್ಲಾ ಪ್ರಖ್ಯಾತರ ಜಾತಕಗಳನ್ನೆಲ್ಲ ಕಲೆ ಹಾಕಿದ್ದೇವೆ ಸಾರ್…” ಎಂದು ಹೆಮ್ಮೆಯಿಂದ ನುಡಿದ ಕೃಷ್ಣಪ್ಪ. ಅವರ ಸಂಘದ ಕಾರ್ಯವೈಖರಿಗೆ, ವಿಷಯ ಸಂಗ್ರಹ ಮಾಡಿದ ಪರಿಗೆ ನಾನು ಮನದಲ್ಲೇ ಮೆಚ್ಚುಗೆ ಸೂಚಿಸಿದೆ. “ನೀವು ಕಾವ್ಯ ರಂಗಕ್ಕೆ ಕಾಲಿಟ್ಟ ಮೇಲೆ ತಾವು ಬರೆದು ಬಿಸಾಡಿದ ಕಾವ್ಯ ಸಂಕಲನಗಳು ನಾಡಿನ ಎಲ್ಲ ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ. ನೀವು ನಮ್ಮ ನಾಡಿನ ಅತ್ಯಂತ ಜನಪ್ರಿಯ ಕವಿಗಳಲ್ಲಿ ಒಬ್ಬರು ಎಂದು ನಮ್ಮ ಸಂಘದ ಸದಸ್ಯರ ಒಮ್ಮತದ ಅಭಿಪ್ರಾಯ ಸಾರ್…… ಅಲ್ಲದೇ ನಿಮ್ಮನ್ನು ಈ 21ನೇ ಶತಮಾನದ ‘ಯುಗ ಕವಿ’ ಎಂದರೂ ತಪ್ಪಿಲ್ಲ. ನಿಮ್ಮ ಸಾಧನೆಗಳನ್ನೆಲ್ಲ ಒಂದೊಂದೇ ಹೆಸರಿಸಿ ವಿವರಿಸುತ್ತಾ ಹೋದರೆ ಸಂಜೆಯಾದರೂ ಮುಗಿಯುವದು ಅನುಮಾನ….” ಎಂದ ಶ್ರೀನಿವಾಸ ಮೂರ್ತಿ. ಅ ಕ್ಷಣಕ್ಕೆ ಅವರ ಹೊಗಳಿಕೆಯಿಂದ ನನಗೆ ಭೂಮಿಯಿಂದ ನಾಲ್ಕಡಿ ಎತ್ತರಕ್ಕೆ ಏರಿ ಹಿತವಾಗಿ ತೇಲಾಡಿದ ಮಧುರ ಅನುಭವ…. “ಯಾವುದಕ್ಕೂ ಇರಲಿ ಸಾರ್… ನಿಮ್ಮ ಜೀವನದಲ್ಲಿನ ವಿಶೇಷ ಘಟ್ಟಗಳನ್ನು ನೀವೇ ಬರೆದು ಕೊಡಿ. ನಾವು ನಿಮ್ಮ ಕಲರ್ ಫೋಟೋದೊಂದಿಗೆ ಪುಟ್ಟ ಪುಸ್ತಕವನನ್ನಾಗಿಸಿ ಬಿಡುಗಡೆ ಮಾಡುತ್ತೇವೆ ” ಎಂದ ರಾಜೇಗೌಡ. “ಅದೆಲ್ಲಾ ಯಾಕೆ?….. ಸನ್ಮಾನ ಸ್ವೀಕರಿಸಲು ನನಗ್ಯಾಕೋ ಮುಜುಗರ ಅನಿಸ್ತಿದೆ.. ಅಷ್ಟು ಇಷ್ಟಾನೂ ಆಗುತ್ತಿಲ್ಲ….” ಎಂದೆ ಉಗುಳು ನುಂಗುತ್ತ. “ನಿಮಗೆ ಇದು ಇಷ್ಟವಿಲ್ಲ ಅಂತ ನಮಗೂ ಗೊತ್ತು ಸಾರ್… ಅದಕ್ಕಾಗಿಯೇ ನಿಮ್ಮ ಬಳಿ ಬಂದಿರೋದು… ಸನ್ಮಾನವನ್ನು ಯಾರು ಕೇಳಿದರೆ ಅವರಿಗೆ ಮಾಡುತ್ತೇವೆಯೇ?.. ಅದಕ್ಕೂ ಅರ್ಹತೆ, ಮಾನದಂಡ ಬೇಡವೇ?… ನಾವು ಒಮ್ಮೆ ನಿರ್ಧರಿಸಿದರೆ ಆಯಿತು… ಇಷ್ಟಕ್ಕೂ ಸನ್ಮಾನ ನಿಮಗಲ್ಲ… ಒಂದು ಅರ್ಥದಲ್ಲಿ ನಮ್ಮನ್ನು ನಾವು ಸನ್ಮಾನಿಸಿಕೊಂಡು ಕೃತಾರ್ಥರಾಗುವದು… ಈಗ ನೀವು ಗೋಗರೆದರೂ ಬಿಡೋದಿಲ್ಲ… ಸನ್ಮಾನ ಮಾಡೋದು ನಮ್ಮ ಜನ್ಮಸಿದ್ಧ ಹಕ್ಕು. ಅಷ್ಟೇ…” ಎಂದು ಕಪ್ಪು ಕೂಲಿಂಗ್ ಗ್ಲಾಸನ್ನು ಮೇಲೆ ಕೆಳಗೆ ಮಾಡುತ್ತಾ ಥೇಟ್ ವಾಟಾಳ್ ನಾಗರಾಜ್ ಶೈಲಿಯಲ್ಲಿ ಗುಡುಗಿದ ಕೃಷ್ಣಪ್ಪ. ಆತನ ಮುಖದಲ್ಲಿ ಯಾವೊಂದು ನಾಟಕೀಯತೆ ಕಾಣಲಿಲ್ಲ… ಬದಲಾಗಿ ಸಹಜತೆ ಎತ್ತಿ ಕಾಣುತ್ತಿತ್ತು. ಸುಮ್ಮನೆ ಏನೋ ಮಾತನಾಡಿ ಅವನ ಮನಸ್ಸನ್ನು ನೋಯಿಸಿದನೇನೋ ಎಂಬ ಪಾಪ ಪ್ರಜ್ಞೆ ಕಾಡತೊಡಗಿತು. ತಾಯಿ ಭುವನೇಶ್ವರಿ ಸೇವೆಯಲ್ಲಿ ತಮ್ಮ ಇಡೀ ಜೀವವನ್ನು ಮೂಡುಪಾಗಿಸಿಕೊಂಡ ಕನ್ನಡ ಕಟ್ಟಾಳುಗಳನ್ನು ಅನುಮಾನಿಸುವದೇ… ಛೇ.. ಛೇ.. ಅಷ್ಟರಲ್ಲಿ ನಬಿ ಸಾಬ್ ಮಾತಿಗಾರಂಭಿಸಿ ನುಡಿದ ” ಸನ್ಮಾನ ಸಭೆಯ ಆರಂಭದ ಮುನ್ನ ಸಾರ್ವಜನಿಕ ಮೆರವಣಿಗೆ ಇರುತ್ತದೆ ಸಾರ್… ” “ಈ ಮೆರವಣಿಗೆ ಎಲ್ಲಾ ಯಾಕೆ?…” ಎಂದು ನಾನು ಪ್ರಶ್ನಿಸುವ ಮೊದಲೇ… “ನಿಮಗೆ ಇಷ್ಟವಾಗುತ್ತೋ ಕಷ್ಟವಾಗುತ್ತೋ ಗೊತ್ತಿಲ್ಲ ಸಾರ್… ನಮ್ಮ ಸಂಪ್ರದಾಯದಂತೆ ಮೊದಲು ಮೆರವಣಿಗೆ ಕಾರ್ಯಕ್ರಮ ಇರುತ್ತೆ ಅಷ್ಟೇ…” ಎಂದು ಕೊಂಚ ಕೋಪಮಿಶ್ರಿತ ಗಡಸು ಧ್ವನಿಯಲ್ಲಿ ನುಡಿದ ನಬಿ ಸಾಬ್. ತೋರಿಕೆಗೆ ಗದರಿದಂತಿದ್ದರೂ ಅದರ ಹಿಂದೆ ನನ್ನ ಮೇಲೆ ಎಷ್ಟು ಅಭಿಮಾನವೋ… “ಮೆರವಣಿಗೆಗೆ ಓಪನ್ ಜೀಪ್ ಏರ್ಪಾಟು ಮಾಡೋಣವೆ ಸಾರ್..” “ಜೀಪಾ… ಅದರ ಬದಲು ಹೊಸ ಐಡಿಯಾ ಏನಾದರೂ ಇದೆಯಾ?…” ಎಂದೆ ಸ್ವಲ್ಪ ಸಂದೇಹದಿಂದ. ” ಕುದುರೆ ಸಾರೋಟ… ಓಕೆನಾ ಸಾರ್…” ಎಂದ ಶ್ರೀನಿವಾಸ ಮೂರ್ತಿ. ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಸುಮ್ಮನಿದ್ದೆ. “ಹೌದೌದು..ಕುದುರೆ ಸಾರೋಟ ಐಡಿಯಾ ಹೊಸತು ಅಂತ ನನಗೂ ಅನಿಸ್ತಿದೆ..” ಎಂದ ರಾಜೇಗೌಡ. “ನಿಮ್ಮಿಷ್ಟ ” ಎಂದು ಉತ್ತರಿಸಿದೆ ಕ್ಲುಪ್ತವಾಗಿ. “ನಿಮ್ಮ ಸಮಾರಂಭದ ಅಧ್ಯಕ್ಷತೆಯನ್ನು ವಹಿಸೋದಿಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಮಂತ್ರಿಗಳಲ್ಲಿ ಯಾರನ್ನು ಆಹ್ವಾನಿಸೋಣ ಸಾರ್…” ಎಂದ ಅಬ್ರಹಾಂ. “ಅವರಾರು ನನ್ನ ವಿರೋಧಿಗಳಲ್ಲ… ಯಾರಾದರೂ ಸರಿ.” ಎಂದೆ ಅಜಾತಶತ್ರುವಿನಂತೆ. “ಆಯ್ತು.. ಆ ವಿಷಯ ನಮಗೆ ಬಿಟ್ಟು ಬಿಡಿ ಸಾರ್.. ಕನಿಷ್ಠ ಒಬ್ಬರು ಮಂತ್ರಿಗಳು, ಶಾಸಕರು, ನಿರ್ವತ್ತ ನ್ಯಾಯಾಧೀಶರು ಹಾಗೂ ನಾಲ್ಕಾರು ಕವಿಗಳು, ಪತ್ರಕರ್ತರು ಸಭೆಯಲ್ಲಿ ಪಾಲ್ಗೊಳ್ಳುವಂತೆ ನೊಡಿಕೊಳ್ತೇವೆ ” ಎಂದ ಟೀಂ ಲೀಡರ್ ರಾಜೇಗೌಡ. “ಅರೆ… ಒಂದು ಮುಖ್ಯ ವಿಷಯ ಮರೆತಿದ್ದೆ ಸಾರ್… ನಮ್ಮ ಸನ್ಮಾನಿತರಿಗೆ ಸಂಪ್ರದಾಯದಂತೆ ಮೈಸೂರು ಪೇಟ, ಶಾಲು ಜೊತೆಗೆ ಬಿರುದು ದಯಪಾಲಿಸುತ್ತೇವೆ…” ಎಂದ ಕೃಷ್ಣಪ್ಪ. “ನಿಮ್ಮಿಷ್ಟ…” ಎಂದೆ ವಿನಯವಾಗಿ ಮೆತ್ತನೆ ಸ್ವರದಲ್ಲಿ. “ನೀವು ನಾಡಿನ ಪ್ರಖ್ಯಾತ ಕವಿಗಳು… ಅದಕ್ಕಾಗಿ ಈ ಕಪಿ ಶ್ರೇಷ್ಠ.. ಅಲ್ಲಲ್ಲ… ಕವಿ ಶ್ರೇಷ್ಠ ಎಂದು ಬಿರುದು ಕೊಟ್ಟರೆ ಹೇಗೆ ಸಾರ್…” ಎಂದ ಶ್ರೀನಿವಾಸ ಮೂರ್ತಿ. ಅದನ್ನು ಕೇಳಿ ಮನಸಿಗೆ ಆನಂದವಾಯಿತು. ಆದರೂ ಅದನ್ನು ಹೊರಗೆ ವ್ಯಕ್ತಪಡಿಸಲಿಲ್ಲ. ” ಏನೇ ಆಗಲಿ ನಾಲ್ಕಾರು ಹಿರಿಯರೊಂದಿಗೆ ಮಾತನಾಡಿ ನಿರ್ಧಾರ ಕೈಗೊಂಡರೆ ಚೆನ್ನಾಗಿರುತ್ತೆ ಅಂತ ನನ್ನ ವೈಯುಕ್ತಿಕ ಅಭಿಪ್ರಾಯ ” ಎಂದೆ. “ನಿಮ್ಮ ಸೂಚನೆ ಸೂಕ್ತವಾಗಿದೆ ಸಾರ್ ” ಎಂದರು ಎಲ್ಲರೂ ಕೊರಸ್ ಧ್ವನಿಯಿಂದ. ನನ್ನ ಮನಸು ಈಗ ಕೊಂಚ ಹೊಯ್ದದಾಡತೊದಾಗಿತು ಈ ಸನ್ಮಾನ ಹೇಗಾಗುತ್ತೋ ಅಂತ.. ಸ್ವಲ್ಪ ಹೆಚ್ಚು ಕಡಿಮೆಯಾಗಿ ಅಸಹ್ಯವಾದರೆ ಗತಿ ಏನು?… ಹಾಗಂತ ಬೇಡ ಅಂತ ಹೇಳೋಕು ಸಂಕೋಚ… ಅದರಲ್ಲೂ ಮನೆ ಬಾಗಿಲಿಗೆ ಬಂದು ಸನ್ಮಾನ ಮಾಡ್ತೀವಿ ಅಂತ ಅನುಮತಿ ಕೋರುವ ಕನ್ನಡಾಂಬೆಯ ಹೆಮ್ಮೆಯ ಪುತ್ರರ ಹಕ್ಕೋತ್ತಾಯದ ಆಮಂತ್ರಣವನ್ನು ನಿರಾಕರಿಸೋದು ಹೇಗೆ?… ಸ್ವಲ್ಪ ಧೈರ್ಯ ತೆಗೆದುಕೊಂಡು ನುಡಿದೆ. “ತಾಯಿ ಭುವನೇಶ್ವರಿ ಸೇವೆಗೆ ಟೊಂಕ ಕಟ್ಟಿ ನಿಂತಿರೋ ನಿಮ್ಮ ಅಭಿಮಾನಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಆದರೆ ನನ್ನದೊಂದು ಪುಟ್ಟ ಮನವಿ… ನನ್ನ ಕುರಿತು ಮಾತನಾಡುವವರಿಗೆ ಸಾಹಿತ್ಯ ಸಾಂಗತ್ಯದ ಮತ್ತು ನಾನು ಬರೆದ ಕವನಗಳ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆ ಇದ್ದರೆ ಸಾಕು ” ಉತ್ತರವಾಗಿ ರಾಜೇಗೌಡ ತುಸು ನಕ್ಕು ನುಡಿದ ” ನೀವು ಯಾವುದಕ್ಕೂ ಭಯ ಪಡುವ ಅವಶ್ಯಕತೆ ಇಲ್ಲ ಸಾರ್… ಸರಿಯಾಗಿ ವಾರಕ್ಕೊಂದರಂತೆ ನಾಲ್ಕು ಸನ್ಮಾನಗಳನ್ನು ಕಳೆದ ಹತ್ತು ವರ್ಷಗಳಿಂದ ಆಯೋಜಿಸಿ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿರುವೆವು…. ಸನ್ಮಾನಿತರ ಎಲ್ಲ ವಿಷಯಗಳನ್ನು ಕ್ರೋಢಿಕರಿಸಿದ ಬಳಿಕವಷ್ಟೇ ನಾವು ಹೆಜ್ಜೆ ಇಡುತ್ತೇವೆ. ” ನಿಜಕ್ಕೂ ಇವರು ಸನ್ಮಾನ ವೀರರೇ ಹೌದು!… ಎಷ್ಟೊಂದು ನುರಿತ ಅನುಭವಿಗಳು!!… ಒಂದೆರಡು ನಿಮಿಷದ ಮೌನ ನಮ್ಮ ನಡುವೆ… ” ಒಂದಿಪ್ಪತ್ತೈದು ಸಾವಿರ ರೂಪಾಯಿಗಳು ಇದ್ರೆ ಕೊಡಿ ಸಾರ್… ” ಎಂದು ಧಿಡೀರ್ ಆಗಿ ಕೇಳಿದ ರಾಜೇಗೌಡ ಏನನ್ನೋ ನೆನೆಸಿಕೊಂಡಂತೆ. ನೆತ್ತಿಯ ಮೇಲೆ ಬರ ಸಿಡಿಲು ಬಿದ್ದಂತಾಯಿತು. ಇದ್ದಕ್ಕಿದ್ದಂತೆ ಒಣ ಕೆಮ್ಮು ಶುರುವಾಯಿತು ನನಗೆ. “ಏನು… ಇಪ್ಪತ್ತೈದು ಸಾವಿರವೇ?”…. ನನ್ನ ಬಾಯಿಂದ ಆಘಾತದ ಉದ್ಘಾರ ಹೊರ ಬಂತು… “ಸನ್ಮಾನ ಸಮಾರಂಭ ಅಂದರೆ ಸುಮ್ಮನೆ ಅಲ್ಲಾ ನೋಡಿ ಸಾರ್… ನೂರೆಂಟು ಚಿಲ್ಲರೆ ಖರ್ಚು ಇರುತ್ತವೆ. ಸಾವನೀರ್ ಅಂತ ಹೊರ ತರುವ ಸಲುವಾಗಿ ಹಣ ಸಂಗ್ರಹ ಮಾಡ್ತೇವೆ. ಅದರಲ್ಲಿ ನೀವು ಕೈಗಡವಾಗಿ ಈಗ ಕೊಡುವ ಹಣವನ್ನು ವಾಪಾಸು ಮಾಡುತ್ತೇವೆ…” ಎಂದು ಸಮಾಧಾನಿಸಿದ ಶ್ರೀನಿವಾಸ ಮೂರ್ತಿ. ನನ್ನ ಒಣ ಕೆಮ್ಮು ಜಾಸ್ತಿ ಆಯ್ತು… ಒಂದು ನಿಮಿಷ ನೀರು ಕುಡಿದು ಬರುತ್ತೇನೆ ಎಂದು ಹೇಳಿ ಅಡುಗೆ ಮನೆ ಹೊಕ್ಕೆ.. “ಚೌ ಚೌ ಭಾತ್ – ಬಿಸಿ ಬಿಸಿ ಕಾಫಿ ರೆಡಿ ಆಗಿದೆ. ತೆಗೆದುಕೊಂಡು ಹೋಗ್ತೀರಾ…”ಎಂದು ಕೇಳಿದಳು ಮಡದಿ. “ಸದ್ಯಕ್ಕೇನೂ ಬೇಡ… ಅರ್ಜೆಂಟ್ ಆಗಿ ಕುಡಿಯೋದಿಕ್ಕೆ ನೀರು ಕೊಡು ಸಾಕು ” ಎಂದು ಹೇಳಿ ಗಟ ಗಟ ನೀರಿನ ಬಾಟೆಲ್ ಖಾಲಿ ಮಾಡಿದೆ. “ಅಂದ ಹಾಗೆ.. ನನ್ನ ಚೆಕ್ ಬುಕ್ ಎಲ್ಲಿದೆ?” ಎಂದು ಕೇಳಿದೆ. “ನಿಮ್ಮ ಟೇಬಲ್ ಡ್ರಾದಲ್ಲೇ ಇರುತ್ತೆ.. ಈಗ ಯಾಕೆ?” ಪ್ರಶ್ನಿಸಿದಳು ಮಡದಿ. “ಬಂದ ಅತಿಥಿಗಳಿಗೆ ಇಪ್ಪತ್ತೈದು ಸಾವಿರಕ್ಕೆ ಚೆಕ್ ಕೊಡಬೇಕಿತ್ತು ಅದಕ್ಕೆ…” ಡ್ರಾದಿಂದ ಚೆಕ್ ಬುಕ್ ತೆಗೆದು ಒಂದು ಚೆಕ್ಕಿನ ಮೇಲೆ ಇಪ್ಪತ್ತೈದು ಸಾವಿರ ಅಂತ ಬರೆದು ನಡುಗುವ ಕೈಯಿಂದ ಅದನ್ನು ರಾಜೇಗೌಡನಿಗೆ ಕೊಟ್ಟೆ. “ಚೆಕ್ ಬದಲು ಹಣ ಕೊಟ್ಟಿದ್ರೆ ತುಂಬಾ ಚೆನ್ನಾಗಿರೋದು… ಆಗಲಿ. ಬಂದ ದಾರಿಗೆ ಸುಂಕವಿಲ್ಲದಂತೆ ವಾಪಾಸು ಹೋಗಬಾರದಲ್ಲ… ಚೆಕ್ಕೇ ಇರಲಿ ಬಿಡಿ ಸಾರ್ ” ಶ್ರೀನಿವಾಸ ಮೂರ್ತಿ. ಬಳಿಕ ಒಬ್ಬೊಬ್ಬರಾಗಿ ನನಗೆ ಕರಚಾಲನೆ ಮಾಡಿ ಮನೆಯಿಂದ ಹೊರ ಹೋದರು ಪಂಚ ಪಾಂಡವರು. ನಾನು ಅವರು ಹೋದ ದಾರಿಯನ್ನೇ ನೋಡುತ್ತಾ ನಿಂತೆ. ಅಷ್ಟರಲ್ಲಿ ಹಾಲ್ ಗೆ ಬಂದ ನನ್ನ ಹೆಂಡತಿ “ಎಷ್ಟು ಹಣಕ್ಕೆ ಚೆಕ್ ಬರೆದು ಕೊಟ್ರಿ..” ಎಂದು ಕೇಳಿದಳು. “ಇಪ್ಪತ್ತೈದು ಸಾವಿರಕ್ಕೆ” “ಇಪ್ಪತ್ತೈದು ಸಾವಿರವೇ!… ಹಣ ಕೊಟ್ಟು ಸನ್ಮಾನ ಮಾಡಿಸಿಕೊಳ್ಳೋದಕ್ಕೆ ನಾಚಿಕೆಯಾಗಲ್ವೆ…” ಎಂದು ಆರತಿ ಎತ್ತಿದಳು. “ಬಂದ ಕನ್ನಡ ಕಲಿಗಳು ಮೊದಲು ಹಣದ ಬಗ್ಗೆ ಚಕಾರವೆತ್ತಲಿಲ್ಲ.. ಸನ್ಮಾನ ಭಾಗ್ಯಕ್ಕೆ ನಾನು ಒಪ್ಪಿಕೊಂಡ ನಂತರ ಹಣದ ವಿಷಯ ಬಂದಾಗ ಬೇಡ ಅಂದರೆ ಚೆನ್ನಾಗಿರೋದಿಲ್ಲ… ಅಲ್ಲವೆ?” ” ಹಾಗಂತ ಹಣ ಕೊಟ್ಟು ಸನ್ಮಾನ ಮಾಡಿಸಿಕೊಳ್ತೀರಾ?… ನಿಮ್ಮ ಸ್ವಾಭಿಮಾನ ಸತ್ತು ಹೋಯಿತೆ? ” ಎಂದಳು ಹೆಂಡತಿ ಬುಸುಗುಡುತ್ತ. ಈಗ ಮುಖದಲ್ಲಿ ಅಮಾಯಕ ನಗೆ ತಂದುಕೊಂಡೆ. “ಸರಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಯಾರು ಓದಿದರೇನು ಬಿಟ್ಟರೇನು ಎನ್ನುವ ಮನೋಭಾವದಿಂದ ಕವಿತೆಗಳನ್ನು ಬರೆಯುತ್ತ ಬಂದಿರುವೆ. ಅದರಲ್ಲೂ ರಿಟೈರ್ಡ್ ಶಾಲಾ ಶಿಕ್ಷಕ ನಾನು… ನನ್ನನ್ನೇನು ಮೂರ್ಖ ಅಂದುಕೊಂಡೆಯೇನು….” “ಅಂದರೆ?” “ನನ್ನ ತಿಂಗಳ ಪೆನ್ಷನ್ ಇವತ್ತಿಗೂ ಇಪ್ಪತ್ತೈದು ಸಾವಿರ ದಾಟಿಲ್ಲ. ಅದು ನಿನಗೂ ಗೊತ್ತು. ನನ್ನ ಬ್ಯಾಂಕ್ ಖಾತೆಯಲ್ಲಿ ಆ ಚೆಕ್ ಪಾಸಾಗುವಷ್ಟು ಬ್ಯಾಲೆನ್ಸ್ ಎಲ್ಲಿದೆ?.. ಆದ್ದರಿಂದ ನೀನು ವರಿ ಆಗೋದು ಬೇಡ. ಈ ಸನ್ಮಾನ ನಡೆಯೋದಿಲ್ಲ. ಓಕೆ…. ಮೊದಲು ನೀನು ಮಾಡಿದ ಬಿಸಿ ಬಿಸಿ ಚೌ ಚೌ ಬಾತ್ ತೆಗೆದುಕೊಂಡು ಬಾ ಅದನ್ನು ನಿಧಾನವಾಗಿ ತಿಂದು ಬಳಿಕ ಬೆಚ್ಚನೆಯ ಕಾಫಿ ಹೀರೋಣ ಒಟ್ಟಿಗೆ ಕೂತು….” ಎಂದು ನಾನು ನಗುತ್ತಾ ನುಡಿದೆ. ಅದಕ್ಕೆ ಪ್ರತಿಯಾಗಿ ನನ್ನ ಮಡದಿ ಕೂಡ ಮನಸಾರೆ ನಕ್ಕಳು. ****** |
4 thoughts on “ಹೀಗೊಂದು ಸನ್ಮಾನದ ಸುತ್ತು….”
ತುಂಬಾ ಚೆನ್ನಾಗಿದೆ. !
ಬರಹ ಚೆನ್ನಾಗಿದೆ.
ಬಹಳ ಚೆನ್ನಾಗಿದೆ
ಶ್ರೀ ರಾಘವೇಂದ್ರ ಅವರ ಈ ಬರಹ ನನಗೆ ಸುಮಾರು ೩೫ ವರ್ಷಗಳ ಹಿಂದಿನ ಅನುಭವವನ್ನು ನೆನಪಿಗೆ ತಂದಿತು.
” ನಿಮ್ಮಲ್ಲಿ ಬಹಳ ಪ್ರತಿಭೆಯಿದೆ. ನಿಮ್ಮ ಶಬ್ದಗಳ ಟ್ವಿಸ್ಟ್ ಹ್ಯೂಮರ್ ಬಹಳ ಸೊಗಸು. ನಿಮ್ಮಲ್ಲಿರುವ ಈ ಪ್ರತಿಭೆಯನ್ನು ಹೆಚ್ಚಿನ ಮಟ್ಟಕ್ಕೆ ಕೊಂಡುಹೋಗುವಲ್ಲಿ, ಪುರಸ್ಕಾರಗಳು ಸಿಗುವಲ್ಲಿ ನೆರವಾಗುತ್ತೇವೆ, ಆದರೆ ಅದಕ್ಕೆ ನಿಮ್ಮ ಸಹಕಾರ ಅಗತ್ಯ ಎಂದಿದ್ದರು.” ಅದಕ್ಕೆ ನಾನು ಈ ಲೇಖಕರು ಹೇಳಿರುವಂತೆಯೇ ಜಾಣತನದಿಂದ ಕಳಚಿಕೊಂಡಿದ್ದು ನೆನಪಿಗೆ ಬಂತು.
ಲೇಖನ ಬಹಳ ಸರಳವಾಗಿ , ನೈಜವಾಗಿ ಮೂಡಿಬಂದಿದೆ. ಅಭಿನಂದನೆಗಳು
ಡಾ ಸತ್ಯವತಿ ಮೂರ್ತಿ