ಮೊಗಸಾಲೆಯವರ ಎರಡು ಕಾದಂಬರಿಗಳು

ನಾ. ಮೊಗಸಾಲೆ ಕನ್ನಡದ ಮಹತ್ವದ ಲೇಖಕರಲ್ಲೊಬ್ಬರು. ಮೊಗಸಾಲೆಯವರು ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಸಾಹಿತಿಗಳು. ಮೊಗಸಾಲೆಯವರು ಕಳೆದ ಐದು ದಶಕಗಳಿಂದ ಕಾವ್ಯ, ಕಥೆ, ಕಾದಂಬರಿ ಮತ್ತು ವೈದ್ಯಕೀಯ ಸಾಹಿತ್ಯ ಸೇರಿದಂತೆ ಹಲವು ಪ್ರಕಾರಗಳಲ್ಲಿ ಸಮೃದ್ಧ ಕೃಷಿ ಮಾಡಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮೊಗಸಾಲೆಯವರು ಸಾಕಷ್ಟು ಕೃತಿಗಳನ್ನು ರಚಿಸಿದ್ದರೂ ಸಹ ಅವರ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮ ಕಾವ್ಯ ಮತ್ತು ಕಾದಂಬರಿ. ಹೀಗೆ ಕಾವ್ಯ ಮತ್ತು ಕಾದಂಬರಿ ಎರಡೂ ಪ್ರಕಾರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಹಿತಿಗಳು ತೀರ ಕಡಿಮೆ.

ನಾ. ಮೊಗಸಾಲೆಯವರು ಸಾಹಿತಿಯಾಗಿ ಎಷ್ಟು ಖ್ಯಾತರೋ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಸಂಘಟಕರಾಗಿಯೂ ಅಷ್ಟೇ ಪ್ರಸಿದ್ಧರು. ರಾಜ್ಯದ ಇತರ ಅನೇಕ ಹಳ್ಳಿಗಳಂತೆಯೇ ಒಂದು ಸಾಮಾನ್ಯ ಕುಗ್ರಾಮವಾಗಿದ್ದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರ ಎಂಬ ಪುಟ್ಟ ಹಳ್ಳಿ ಮೊಗಸಾಲೆಯವರ ಸತತ ಪರಿಶ್ರಮದಿಂದಾಗಿ ಇಂದು ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ಮಹತ್ವದ ಸ್ಥಾನ ಗಳಿಸಿದೆ.

“ಮಣ್ಣಿನ ಮಕ್ಕಳು”ವಿನಿಂದ “ಧರ್ಮ ಯುದ್ಧ”ದವರೆಗೆ ಮೊಗಸಾಲೆಯವರು ಈತನಕ ಒಟ್ಟು ಹದಿನೇಳು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅವರ ಒಟ್ಟು ಹದಿನಾಲ್ಕು ಕಾದಂಬರಿಗಳು ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿವೆ. ಬಂಗಾಳದ ಸಂತಕವಿ ಶ್ರೀ ಚೈತನ್ಯ ಮಹಾಪ್ರಭುಗಳ ಕುರಿತು ಬರೆದ ಬೃಹತ್ ಕಾದಂಬರಿ “ವಿಶ್ವಂಭರ”ವನ್ನು ಇಸ್ಕಾನ್ ಸಂಸ್ಥೆ ಸದ್ಯದಲ್ಲೇ ಪ್ರಕಟಿಸಲಿದೆ. “ವಿಶ್ವಂಭರ” ಕಾದಂಬರಿಯ ಅನುವಾದ ಕೂಡ ಇತರೆ ಭಾರತೀಯ ಭಾಷೆಗಳಲ್ಲಿ ಪ್ರಕಟವಾಗಲಿದೆ.

ಮೊಗಸಾಲೆಯವರ “ನನ್ನದಲ್ಲದ್ದು”, “ಉಲ್ಲಂಘನೆ”, “ಮುಖಾಂತರ” ಮತ್ತು “ಧಾತು” ಕಾದಂಬರಿಗಳು ಓದುಗ ಮತ್ತು ವಿಮರ್ಶಕರ ಮೆಚ್ಚುಗೆ ಪಡೆದ ಕಾದಂಬರಿಗಳು. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ “ನನ್ನದಲ್ಲದ್ದು” ಕಾದಂಬರಿ ಮಲಯಾಳಂ ಭಾಷೆಗೆ ಅನುವಾದವಾಗಿದೆ.

ಮೊಗಸಾಲೆಯವರ “ಉಲ್ಲಂಘನೆ” ಕಾದಂಬರಿಯನ್ನು”Defiance” ಎಂಬ ಹೆಸರಿನಲ್ಲಿ ಎಸ್.ಎಂ.ಪೆಜತ್ತಾಯ ಮತ್ತು “ಮುಖಾಂತರ” ಕಾದಂಬರಿಯನ್ನು “The Other Face” ಎಂಬ ಹೆಸರಿನಲ್ಲಿ ಎನ್. ತಿರುಮಲೇಶ್ವರ ಭಟ್ಟರು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. ಈ ಎರಡೂ ಕಾದಂಬರಿಗಳ ಇಂಗ್ಲಿಷ್ ಅನುವಾದವನ್ನು ಮಣಿಪಾಲ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದೆ. ಕಳೆದ ಒಂದು ದಶಕದಲ್ಲಿ ಪ್ರಕಟವಾದ ಕಾದಂಬರಿಗಳಲ್ಲಿ “ಮುಖಾಂತರ” ಮತ್ತು “ಧಾತು” ಗಮನಿಸಲೇಬೇಕಾದ ಕಾದಂಬರಿಗಳು.

ಮೊಗಸಾಲೆಯವರು ಮೊದಲಿನಿಂದಲೂ ವಿಭಿನ್ನ ಮತ್ತು ವಿಶಿಷ್ಟ ಕಥಾವಸ್ತುವಿನ ಹುಡಾಕಟದಲ್ಲಿರುವ ಲೇಖಕರು. ವೈವಿಧ್ಯಮಯ ಕಥಾವಸ್ತು ಹೊಂದಿದ ಕಾದಂಬರಿಗಳನ್ನು ನೀಡಿದ್ದರಿಂದಲೇ ಮೊಗಸಾಲೆಯವರ ಕಾದಂಬರಿಗಳಿಗೆ ಓದುಗರಿಂದ ಇನ್ನೂ ಸಾಕಷ್ಟು ಬೇಡಿಕೆಯಿದೆ. ಅವರ ಅನೇಕ ಕಾದಂಬರಿಗಳು ಮತ್ತೆ ಮತ್ತೆ ಮರು ಮುದ್ರಣಗೊಳ್ಳುತ್ತಿರುವುದೇ ಕಾದಂಬರಿಕಾರರಾಗಿ ಅವರ ಜನಪ್ರಿಯತೆಗೆ ಸಾಕ್ಷಿ. ಪ್ರಸ್ತುತ ಲೇಖನದಲ್ಲಿ ಇತ್ತೀಚೆಗೆ ಪ್ರಕಟವಾದ ಮೊಗಸಾಲೆಯವರ “ಧಾತು” ಮತ್ತು “ಧರ್ಮ ಯುದ್ಧ” ಕಾದಂಬರಿಗಳ ಕುರಿತು ಚರ್ಚಿಸಿದ್ದೇನೆ. ಧಾರವಾಡದ ಮನೋಹರ ಗ್ರಂಥ ಮಾಲೆಯವರು ಈ ಎರಡೂ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.

ಧಾತು

ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಕಾಮ ಈಗಾಗಲೇ ಕನ್ನಡದ ಸಾಹಿತ್ಯದಲ್ಲಿ ಅನೇಕ ಕಥೆ, ಕಾದಂಬರಿಗಳಿಗೆ ವಸ್ತುವಾಗಿದೆ. ಖ್ಯಾತ ಕಾದಂಬರಿಕಾರರಾದ ಶಿವರಾಂ ಕಾರಂತರ “ಮೈ ಮನಗಳ ಸುಳಿಯಲ್ಲಿ”, ಭೈರಪ್ಪನವರ “ಸಾಕ್ಷಿ”* ಮತ್ತು ಶಾಂತಿನಾಥ ದೇಸಾಯಿಯವರ “ಅಂತರಾಳ” ಕಾದಂಬರಿಗಳಲ್ಲಿ ಕಾಮವೇ ಕೇಂದ್ರ ವೃತ್ತಾಂತವಾಗಿದೆ.

ಕಾಮದ ಕುರಿತು ಈಗಲೂ ಸಹ ಲೇಖಕರು ನಿರ್ಭಿಡೆಯಿಂದ ಬರೆಯಲು ಹಿಂಜರಿಯುತ್ತಾರೆ. ಕಾಮವೆಂಬುದು ಅಶ್ಲೀಲವೆಂಬ ಭಾವನೆ ಇನ್ನೂ ನಮ್ಮ ಸಮಾಜದಲ್ಲಿದೆ. ಇಷ್ಟೆಲ್ಲ ಮಡಿವಂತಿಕೆ ಮೀರಿ ಬರೆಯುವ ಧೈರ್ಯ ಮಾಡಿದರೂ ಸಹ ಸಾಹಿತ್ಯ ಕೃತಿಯೊಂದರಲ್ಲಿ ಲೇಖಕನ ಆತ್ಮಕಥಾನಕದ ಅಂಶಗಳಿವೆಯೇನೋ ಎಂಬ ಕುತೂಹಲ ಸಹಜವಾಗಿಯೇ ಓದುಗರಲ್ಲಿ ಉಂಟಾಗುವ ಸಂಭವವಿರುವುದರಿಂದ ಈ ಬಗೆಯ ಕೃತಿಗಳ ರಚನೆಗೆ ಲೇಖಕರು ಹಿಂದೇಟು ಹಾಕುವುದು ಸಹಜ.

ಕಾಮ ಮೊಗಸಾಲೆಯವರ ಕಾದಂಬರಿಗಳಲ್ಲಿ ಬಹು ಹಿಂದಿನಿಂದಲೂ ಕಥನದ ಒಂದು ಮುಖ್ಯಾಂಶವಾಗಿ ಬಂದಿದೆ. “ಪಲ್ಲಟ”, “ಹದ್ದು”, “ಪ್ರಕೃತಿ” ಮತ್ತು “ನನ್ನದಲ್ಲದ್ದು” ಕೃತಿಗಳಲ್ಲಿ ಕಾಮ ಮನುಷ್ಯನ ಜೀವನದಲ್ಲಿ ವಹಿಸಿದ ಪಾತ್ರ ಎಂತಹುದು ಎಂಬುದರ ಕುರಿತ ವಿಶ್ಲೇಷಣೆಯಿದೆ. ಇಲ್ಲೆಲ್ಲ ಗಂಡು-ಹೆಣ್ಣಿನ ನಡುವಿನ ತೀವ್ರ ಸಂಬಂಧವನ್ನು ಅಶ್ಲೀಲವೆನಿಸದೇ ಸಹಜವೆಂಬಂತೆ ಚಿತ್ರಿಸಿರುವುದು ಗಮನಾರ್ಹ.

ಮಧ್ಯ ವಯಸ್ಕ ಮತ್ತು ವೃದ್ಧಾಪ್ಯದ ಪ್ರೇಮ-ಕಾಮವನ್ನು ಚಿತ್ರಿಸಿರುವ ಕಾದಂಬರಿಗಳು ಕನ್ನಡ ಸಾಹಿತ್ಯದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಲಭ್ಯ. ಶಾಂತಿನಾಥ ದೇಸಾಯಿಯವರ “ಅಂತರಾಳ”** ಮತ್ತು ಮೊಗಸಾಲೆಯವರ “ಧಾತು” ಈ ಬಗೆಯ ಕಾದಂಬರಿಗಳಲ್ಲಿ ಗಮನಾರ್ಹ ಕೃತಿಗಳು.

ಮೊಗಸಾಲೆಯವರ ಕಾಲ್ಪನಿಕ ಸೃಷ್ಟಿಯಾದ ಸೀತಾಪುರದ ವೃದ್ಧ ನಾರಾಯಣರಾಯರು “ಧಾತು” ಕಾದಂಬರಿಯ ಕಥಾನಾಯಕ. ವೃತ್ತಿಯಿಂದ ವಕೀಲ ಮತ್ತು ಪ್ರವೃತ್ತಿಯಿಂದ ಸಾಹಿತಿಯಾದ ನಾರಾಯಣರಾಯರು ತಮ್ಮ ವೃದ್ಧಾಪ್ಯದಲ್ಲಿ ಹೆಂಡತಿಯನ್ನು ಕಳೆದುಕೊಳ್ಳುತ್ತಾರೆ. ಅವರಿಗೆ ಮರು ಮದುವೆಯಾಗುವ ಯೋಚನೆಯಿದ್ದರೂ ಅದರ ಬಗ್ಗೆ ಸ್ಪಷ್ಟತೆಯಿಲ್ಲ. ಮದುವೆ ಕೇವಲ ದೈಹಿಕ ಕಾಮನೆಗಳನ್ನು ಪೂರೈಸಿಕೊಳ್ಳುವುದಕ್ಕೋ ಅಥವಾ ಅದಕ್ಕೂ ಮಿಗಿಲಾದ ಆತ್ಮ ಸಂಗಾತಕ್ಕೋ ಎಂಬ ಕುರಿತು ಗೊಂದಲವಿರುವ ನಾರಾಯಣರಾಯರು ಈ ಪ್ರಶ್ನೆಗೆ ಪರಿಹಾರ ಪಡೆಯಲು ಮನಶಾಸ್ತ್ರಜ್ಞ ಡಾ.ಪ್ರದೀಪನ ಮೊರೆ ಹೋಗುತ್ತಾರೆ. ಅಲ್ಲೂ ಸಹ ನಾರಾಯಣರಾಯರಿಗೆ ಸಮಾಧಾನಕರ ಉತ್ತರ ಸಿಗುವುದಿಲ್ಲ.

ನಾರಾಯಣರಾಯರಿಗೆ “ಮನದ ಮುಂದಿನ ಮಾಯೆ” ಎಂಬ ಕಥೆ ತಂದುಕೊಟ್ಟ ಖ್ಯಾತಿ ರಾಧಾ ಎಂಬ ಪ್ರೌಢ ಮತ್ತು ಪ್ರಬುದ್ಧ ಹೆಣ್ಣಿನ ಸ್ನೇಹ ದೊರಕಿಸಿ ಕೊಡುತ್ತದೆ. ರಾಧಾಳ ಸಾಂಗತ್ಯ ತೀರ ಆಪ್ಯಾಯಮಾನವಾಗಿದ್ದು ಅವರು ಮದುವೆ ಮತ್ತು ಗಂಡು-ಹೆಣ್ಣಿನ ಸಂಬಂಧದ ಕುರಿತು ಹೊಸ ದೃಷ್ಟಿಕೋನದಿಂದ ಯೋಚಿಸುವಂತೆ ಮಾಡುತ್ತದೆ. ಇಲ್ಲಿ ಕಾಮ ಗೌಣವಾಗಿ ಜೀವನದ ಕುರಿತು, ಹೆಣ್ಣಿನ ಕುರಿತು ತೀವ್ರವಾಗಿ ಆಲೋಚಿಸುವ ನಾರಾಯಣರಾಯರು ಮದುವೆಯಾಗದಿರಲು ನಿರ್ಧರಿಸುತ್ತಾರೆ.

ಕಥೆಯೊಳಗೊಂದು ಕಥೆಯಾಗಿ ಬರುವ “ಮನದ ಮುಂದಿನ ಮಾಯೆ” ಕಾದಂಬರಿಗೆ ಪೋಷಕವಾಗಿ ಬಂದಿದೆ. ಇಲ್ಲೂ ಸಹ ವೃದ್ಧ ಕಥಾನಾಯಕನಿದ್ದಾನೆ. ಹದಿ ಹರೆಯದ ಯುವತಿಯೊಬ್ಬಳ ಬಳಿ ಅವಳ ಕುರಿತು ಉಂಟಾಗಿರುವ ದೈಹಿಕ ಆಕರ್ಷಣೆಯ ಬಗ್ಗೆ ತನ್ನ ಮನದಾಸೆಯನ್ನು ಹೇಳಿಕೊಳ್ಳುವ ವೃದ್ಧರು, ಆ ಯುವತಿ ಅವರ ಆಸೆಯನ್ನು ಪೂರೈಸಲು ಒಪ್ಪಿಗೆ ಕೊಡುವ ವೇಳೆಗೆ ಸಾವನ್ನಪ್ಪುವುದು ಪರಿಣಾಮಕಾರಿಯಾಗಿ ಮೂಡಿಬಂದಿದೆ.

ಕಾದಂಬರಿಯನ್ನು ಬಹಳ ಚೆನ್ನಾಗಿ ಗ್ರಹಿಸಿರುವ ಆಶಾದೇವಿಯವರು ಸ್ತ್ರೀವಾದಿ ಹಿನ್ನೆಲೆಯಲ್ಲಿ ಕಾದಂಬರಿಯನ್ನು ಅರ್ಥೈಸಿ ಬೆಲೆಯುಳ್ಳ ಮುನ್ನುಡಿ ಬರೆದಿದ್ದಾರೆ. ಮದುವೆ ಬೇಕೋ? ಬೇಡವೋ? ಎಂಬ ದ್ವಂದ್ವ ಆರಂಭದಲ್ಲಿ ನಾರಾಯಣರಾಯರನ್ನು ಕಾಡಿದರೂ ಕ್ರಮೇಣ ರಾಧಾಳ ಸಾಂಗತ್ಯದಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳುತ್ತಾ ಮದುವೆ ಬೇಡವೆಂಬ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಧಾರವಾಡ ಸಾಹಿತ್ಯ ಸಂಭ್ರಮ ಮತ್ತು ಕಾರವಾರ ಭೇಟಿಯ ವಿವರಗಳು ಕಥೆಯ ಓಟಕ್ಕೆ ಪೂರಕವಾಗಿವೆ.

ಕಾಮ ಜೀವನದ ಅವಶ್ಯಕತೆಗಳಲ್ಲೊಂದು. ಆದರೆ ಅದೇ ಜೀವನದ ಪರಮಾರ್ಥವಲ್ಲ. ವೃದ್ಧಾಪ್ಯದಲ್ಲಿ ಬೇಕಾದದ್ದು ಮದುವೆ ಅಥವಾ ದೈಹಿಕ ಸಾಂಗತ್ಯವಲ್ಲ, ಬದಲಾಗಿ ಇದೆಲ್ಲವನ್ನೂ ಮೀರಿದ ಆತ್ಮಸಾಂಗತ್ಯ. ಇಂತಹ ಆತ್ಮಸಂಗಾತಿಯ ಅಗತ್ಯವನ್ನು ಬಹಳ ಸುಂದರವಾಗಿ ಮನಮುಟ್ಟುವಂತೆ ಹೇಳಿರುವ “ಧಾತು” ಕಾದಂಬರಿ ಕನ್ನಡದ ಮಟ್ಟಿಗಂತೂ ಹೊಸದು. ಕಥೆ ಹೇಳುವಲ್ಲಿ ಮೊಗಸಾಲೆಯವರು ಅಪಾರ ಸಂಯಮ ತೋರಿದ್ದಾರೆ. ವಿವರಗಳು ಎಲ್ಲೂ ಅತಿಯೆನಿಸದಂತೆ, ಕಥೆಯ ಓಟ ಕಾದಂಬರಿಯುದ್ದಕ್ಕೂ ಒಂದೇ ರೀತಿಯಿರುವಂತೆ ಬರವಣಿಗೆಯ ಹದ ಕಾಯ್ದುಕೊಂಡಿದ್ದಾರೆ.

“ಧಾತು” ಕಾದಂಬರಿ ಓದುವಾಗ ಪದೇ ಪದೇ ನೆನಪಾಗುವ ಮತ್ತೊಬ್ಬ ಲೇಖಕರೆಂದರೆ ಖುಷ್ವಂತ್ ಸಿಂಗ್. ವೃದ್ಧಾಪ್ಯದ ಪ್ರೇಮ-ಕಾಮದ ಕುರಿತು ಹಲವು ಕಥೆ-ಕಾದಂಬರಿ ಬರೆದಿರುವ ಖುಷ್ವಂತ್ ಸಿಂಗ್ ಅವರ ಸಾಹಿತ್ಯದಲ್ಲಿ ಲಿಬಿಡೋ ಅಥವಾ ಲಂಪಟತನ ಎದ್ದು ಕಾಣುತ್ತದೆ.*** ಇಂತಹ ಸಂದರ್ಭದಲ್ಲಿ ಗಂಡು-ಹೆಣ್ಣಿನ ನಡುವಿನ ದೈಹಿಕ ಸಂಬಂಧವನ್ನು ತೀವ್ರವಾಗಿ ಚಿತ್ರಿಸುವ ಖುಷ್ವಂತ್ ಸಿಂಗ್ ಮನೋವಿಶ್ಲೇಷಣೆಯಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸುವುದಿಲ್ಲ. ಆದರೆ ಮೊಗಸಾಲೆಯವರು ಗಂಡು-ಹೆಣ್ಣಿನ ನಡುವಿನ ಸಂಕೀರ್ಣ ಸಂಬಂಧಗಳ ಸ್ವರೂಪವನ್ನು ವಿವಿಧ ಆಯಾಮಗಳಲ್ಲಿ ಮನೋವಿಶ್ಲೇಷಣೆಗೊಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ವಿಷಯಗಳಲ್ಲಿ ಖುಷ್ವಂತ್ ಸಿಂಗ್ ಲೇಖಕರಾಗಿ ಎಲ್ಲಿ ಸೋಲುತ್ತಾರೋ ಅಲ್ಲಿ ಲೇಖಕರಾಗಿ ಮೊಗಸಾಲೆಯವರು ಗೆಲ್ಲುತ್ತಾರೆ. ಇದು ಖಂಡಿತವಾಗಿಯೂ ಮೊಗಸಾಲೆಯವರ ಕಥನದ ಶಕ್ತಿ.

ಧರ್ಮ ಯುದ್ಧ

“ಧರ್ಮ ಯುದ್ಧ” ಮೊಗಸಾಲೆಯವರ ಇತ್ತೀಚಿನ ಕಾದಂಬರಿ. “ಧಾತು”ವಿನ ನಂತರ ಪ್ರಕಟವಾಗುತ್ತಿರುವ “ಧರ್ಮ ಯುದ್ಧ” ಒಂದು ಕುತೂಹಲಕರ ಕಥಾವಸ್ತು ಹೊಂದಿರುವ ಕಾದಂಬರಿ. ‘ದೇವರು ಮನುಷ್ಯನನ್ನು ಸೃಷ್ಟಿಸಿದನೋ? ಅಥವಾ ಮನುಷ್ಯ ದೇವರನ್ನು ಸೃಷ್ಟಿಸಿದನೋ?’ ಎಂಬುದು ತುಂಬ ಜಟಿಲವಾದ ಸಮಸ್ಯೆಯಾಗಿದೆ. ‘ಧರ್ಮ’ ಎಂಬ ಪದವನ್ನು ಹಲವು ಜನ ಹಲವು ಅರ್ಥಗಳಲ್ಲಿ ಬಳಸುತ್ತಾರೆ. ‘ಧರ್ಮ’ ಎಂಬ ಪದ ಕೆಲವು ಸಲ ತುಂಬ ಸಂಕುಚಿತವಾಗಿ ಕೇವಲ ಒಂದು ಜಾತಿಯನ್ನು ಸೂಚಿಸುವಂತೆ ಬಳಕೆಯಾಗುವುದೂ ಉಂಟು. ಆದರೆ ‘ಧರ್ಮ’ ಎಂಬುದು ಇಂದು ರಾಜಕೀಯದಷ್ಟೇ ವಿಶಾಲ ಅರ್ಥದಲ್ಲಿ ಬಳಕೆಯಾಗುತ್ತಿರುವ ಪದ. ಪ್ರಸ್ತುತ ಸಂದರ್ಭದಲ್ಲಿ ರಾಜಕಾರಣದಂತೆಯೇ ಧರ್ಮವೂ ಸಹ ಧರ್ಮಕಾರಣವೆಂದು ಕರೆಯಬಹುದಾದಷ್ಟು ತೀವ್ರವಾಗಿ ನಮ್ಮ ಜನಮನವನ್ನು ಆವರಿಸಿಕೊಂಡು ಬಿಟ್ಟಿದೆ.

“ಧರ್ಮ ಯುದ್ಧ”ದ ಕಥೆ ಮೊಗಸಾಲೆಯವರ ಕಾಲ್ಪನಿಕ ಸೃಷ್ಟಿಯಾದ ಸೀತಾಪುರದಲ್ಲಿ ನಡೆಯುತ್ತದೆ. ಸೀತಾಪುರದ ಗ್ರಾಮ ಪಂಚಾಯತ್ ನೌಕರನಾದ ಸೂರಪ್ಪನ ಮನೆಯ ಬಾವಿಗೆ ಮೂರು ಕರಿಬೆಕ್ಕುಗಳು ಸತ್ತು ಬೀಳುವುದರೊಂದಿಗೆ ಕಥೆ ಆರಂಭವಾಗುತ್ತದೆ. ತನ್ನ ಮನೆಯ ಬಾವಿಗೆ ಬಿದ್ದು ಸತ್ತ ಕರಿಬೆಕ್ಕುಗಳ ಸಾವಿನಿಂದ ಭಯಭೀತನಾದ ಸೂರಪ್ಪ ಹೆಂಡತಿಯ ಸಲಹೆಯಂತೆ ಅದರ ಪರಿಹಾರಕ್ಕಾಗಿ ಊರ ಜ್ಯೋತಿಷಿ ಕೇಳು ಪಂಡಿತರ ಮೊರೆ ಹೋಗುತ್ತಾನೆ.

ಕೇವಲ ಸೂರಪ್ಪನ ಮನೆಯ ಸಮಸ್ಯೆಯಾಗಿದ್ದ ಕರಿಬೆಕ್ಕುಗಳ ಸಾವಿನ ಘಟನೆ ಕೇಳು ಪಂಡಿತರ ಬುದ್ಧಿವಂತಿಕೆಯಿಂದ ಊರಿನ ಸಮಸ್ಯೆಯಾಗಿ ಬದಲಾಗುತ್ತದೆ. ಪಂಜುರ್ಲಿ ಭೂತದ ಗುಡಿಯ ಜೀರ್ಣೋದ್ಧಾರ, ಅಷ್ಟಮಂಗಲ ಪ್ರಶ್ನೆ, ಬ್ರಹ್ಮಕಲಶೋತ್ಸವ ಎಂದು ಕೇಳು ಪಂಡಿತರು ಕಡ್ಡಿಯನ್ನು ಗುಡ್ಡವನ್ನಾಗಿ ಮಾಡುತ್ತಾರೆ.

ಯಾವಾಗ ಪಂಜುರ್ಲಿ ಭೂತದ ಗುಡಿಯ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಊರವರೆಲ್ಲ ಸೇರಿ ಮಾಡಬೇಕಾದ ಕಾರ್ಯವೆಂದು ನಿರ್ಧಾರವಾಯಿತೋ ಆಗ ಸಂಬಂಧವಿರಲಿ ಬಿಡಲಿ ಊರಿನ ಎಲ್ಲರನ್ನೂ ಒಳಗೊಳ್ಳುತ್ತಾ ಸಾಗುತ್ತದೆ. ಊರಿನ ರಾಜಕೀಯ ಮುಖಂಡರು ಮತ್ತು ಸಾಮಾನ್ಯ ಜನರೊಂದಿಗೆ ಸ್ವಭಾವತಃ ವಿಚಾರವಾದಿಗಳಾದ ಊರ ಮುಖಂಡ ಜಯರಾಂ ಹೆಗಡೆ ಮತ್ತು ಜನಪ್ರಿಯ ಶಿಕ್ಷಕ ವೆಂಕಪ್ಪ ಮಾಸ್ಟ್ರು ಸಹ ನಂಬಿಕೆಯಿಲ್ಲದಿದ್ದರೂ ಸಹ ಒಲ್ಲದ ಮನಸ್ಸಿನಿಂದ ಇದರಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.

ಮತ್ತೊಂದೆಡೆ ಜಯರಾಂ ಹೆಗಡೆಯವರ ವಿರೋಧಿಗಳಾದ ನರಸಿಂಹ ಕೋಟೆ ಮತ್ತು ಅವರ ಬಲಗೈ ಬಂಟ ಸುಕ್ಕಣ್ಣ ಈ ಅವಕಾಶವನ್ನು ಹೆಗಡೆಯವರ ಗುಂಪನ್ನು ಹತ್ತಿಕ್ಕಿ ತಾವು ಮೇಲುಗೈ ಸಾಧಿಸಲು ಬಳಸಿಕೊಳ್ಳುತ್ತಾರೆ. ಹೆಗಡೆಯವರ ಬಂಟನಾದ ಸೇಸಪ್ಪ ಅವರ ಕೃಪೆಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷನಾದರೂ ಸಹ ಬ್ರಹ್ಮಕಲಶೋತ್ಸವದ ವಿಚಾರದಲ್ಲಿ ಕೋಟೆಯವರ ಬೆಂಬಲಕ್ಕೆ ನಿಲ್ಲುತ್ತಾನೆ. ಪಂಜುರ್ಲಿ ದೈವದ ಬ್ರಹ್ಮಕಲಶೋತ್ಸವ ಊರಿನ ಎರಡು ಬಣಗಳ ರಾಜಕೀಯ ಮೇಲಾಟಕ್ಕೆ ವೇದಿಕೆಯಾಗುವುದು ವಿಪರ್ಯಾಸ.

ಮೂಲತಃ ಜಾನಪದ ದೈವವಾದ ಪಂಜುರ್ಲಿಗೆ ಬ್ರಹ್ಮಕಲಶೋತ್ಸವ ಮಾಡುವುದು ಉಚಿತವೇ? ಎಂಬ ಪ್ರಶ್ನೆ ಎದುರಾದರೂ ಸಹ ಚಾಣಾಕ್ಷ ಮಲಯಾಳಿಗಳಾದ ಸುಕ್ಕಣ್ಣ ಮತ್ತು ಕೇಳು ಪಂಡಿತರ ಬುದ್ಧಿಮತ್ತೆಯ ಮುಂದೆ ಆ ಪ್ರಶ್ನೆ ಗೌಣವಾಗುತ್ತದೆ. ಸಾಮಾನ್ಯ ಜನರಲ್ಲಿ ದೈವದ ಕುರಿತಾಗಿರುವ ಭಯ ಭಕ್ತಿಯನ್ನು ತಮ್ಮ ಉದ್ದೇಶ ಸಾಧನೆಗಾಗಿ ಬಳಸಿಕೊಳ್ಳುವಲ್ಲಿ ಸುಕ್ಕಣ್ಣನ ಗುಂಪು ಯಶಸ್ವಿಯಾಗುತ್ತದೆ. ಪಂಜುರ್ಲಿಯ ಬ್ರಹ್ಮಕಲಶೋತ್ಸವದ ನೆವದಲ್ಲಿ ಸುಕ್ಕಣ್ಣನಂತಹ ಧೂರ್ತರು ಊರಲ್ಲಿ ಮುನ್ನಲೆಗೆ ಬರುತ್ತಾರೆ.

ಒಂದು ಕಾಲದಲ್ಲಿ ಸುಕ್ಕಣ್ಣನ ಚೇಲಾ ಆಗಿದ್ದ ರಾಗಣ್ಣನಿಗೆ ಮಾತ್ರ ಇದರ ರಹಸ್ಯ ಗೊತ್ತಿದೆ. ಏಕೆಂದರೆ ಸೂರಪ್ಪನ ಬಾವಿಗೆ ಮೂರು ಕರಿಬೆಕ್ಕುಗಳನ್ನು ಕೊಂದು ಎಸೆದವನೇ ಅವನು. ಆದರೆ ಈಗ ರಾಗಣ್ಣ ಅದನ್ನು ಹೇಳಿದರೂ ಊರ ಜನ  ನಂಬುವ ಸ್ಥಿತಿಯಲ್ಲಿಲ್ಲ.

ಊರ ಜನರೆಲ್ಲರ ತನು-ಮನ-ಧನ ಸಹಾಯದಿಂದ ಕೊನೆಗೂ ಪಂಜುರ್ಲಿಯ ಗುಡಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆಯುತ್ತದೆ. ಬ್ರಹ್ಮಕಲಶೋತ್ಸವದ ದಿನದಂದು ಯಜಮಾನಿಕೆಯ ವಿಷಯವಾಗಿ ಸೇಸಪ್ಪ ಮತ್ತು ಸುಕ್ಕಣ್ಣನ ನಡುವೆ ಜಟಾಪಟಿ ನಡೆದು ಕಲಶ ಉರುಳಿ ಬೀಳುವ ಸಮಯಕ್ಕೆ ಸರಿಯಾಗಿ ರಾಗಣ್ಣ ಪಂಜುರ್ಲಿ ಗುಡಿಯ ಹಿಂದಿದ್ದ ಹೆಜ್ಜೇನಿನ ಗೂಡಿಗೆ ನಾಲ್ಕಾರು ಕಲ್ಲೆಸೆಯುತ್ತಾನೆ. ಹೆಜ್ಜೇನಿನ ದಾಳಿಯಿಂದ ಕಂಗೆಟ್ಟ ಜನರು ತಮ್ಮನ್ನು ತಾವು ಜೇನುಹುಳುಗಳ ಕಡಿತದಿಂದ ರಕ್ಷಿಸಿಕೊಳ್ಳಲು ಪಂಜುರ್ಲಿ ಗುಡಿ ಮತ್ತು ಬ್ರಹ್ಮಕಲಶೋತ್ಸವವನ್ನು ಮರೆತು ಓಟ ಕೀಳುವುದರೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.

ಮೊಗಸಾಲೆಯವರ “ಧರ್ಮ ಯುದ್ಧ” ಕಾದಂಬರಿಯ ವಸ್ತು ನಮ್ಮ ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ನಡೆಯಬಹುದಾದಂತಹ ಕಥೆ. ಪಂಜುರ್ಲಿ ಭೂತ, ಬ್ರಹ್ಮಕಲಶೋತ್ಸವ ಮುಂತಾದವು ಕರಾವಳಿ ಜನಕ್ಕೆ ಪರಿಚಿತವಾದರೂ ಸಹ ಇತರ ಭಾಗದ ಓದುಗರಿಗೆ ಅಷ್ಟು ಪರಿಚಿತವಲ್ಲ. ಪಂಜುರ್ಲಿ ಭೂತ ಮೂಲತಃ ಜಾನಪದ ದೈವ. ಜಾನಪದ ದೈವವಾದ ಪಂಜುರ್ಲಿ ಭೂತಕ್ಕೆ ಬ್ರಹ್ಮಕಲಶೋತ್ಸವ ನಡೆಸುವುದೇ ಕುತೂಹಲಕಾರಿಯಾಗಿದೆ.

ಬ್ರಹ್ಮಕಲಶೋತ್ಸವದ ನೆವದಲ್ಲಿ ಹಳ್ಳಿಯ ರಾಜಕೀಯ ಗರಿಗೆದರುವುದು, ಬದ್ಧ ವಿರೋಧಿಗಳಾದ ಹೆಗಡೆ ಮತ್ತು ಕೋಟೆಯವರ ಗುಂಪುಗಳು ತಮ್ಮ ಪ್ರತಿಷ್ಠೆ ಮೆರೆಸಲು ಹವಣಿಸುವುದು ಚೆನ್ನಾಗಿ ಮೂಡಿಬಂದಿದೆ. ಜಯರಾಂ ಹೆಗಡೆ ಮತ್ತು ವೆಂಕಪ್ಪ ಮಾಸ್ಟ್ರುವಿನಂತಹ ಸಾತ್ವಿಕ ಪಾತ್ರಗಳು ಧರ್ಮದ ರಾಜಕೀಯದಲ್ಲಿ ಏನೂ ಮಾಡಲಾಗದೆ ಅಸಹಾಯಕರಾಗಿ ಕೈ ಚೆಲ್ಲಿ ಕೂರುವುದನ್ನು ಕಾಣಬಹುದು.

ಕೇರಳದಿಂದ ಬಂದು ಸೀತಾಪುರದಲ್ಲಿ ಬದುಕು ಕಟ್ಟಿಕೊಂಡ ಚಾಣಾಕ್ಷ ಸುಕುಮಾರ್ ಅಥವಾ ಸುಕ್ಕಣ್ಣ ಮತ್ತು ಶ್ರೀರಮಣ ಪಂಡಿತ ಅಥವಾ ಕೇಳು ಪಂಡಿತನ ಪಾತ್ರಗಳು ಗಮನ ಸೆಳೆಯುವಂತಿವೆ. ದೇಶದ ಯಾವುದೇ ಮೂಲೆಯಲ್ಲಾದರೂ ಹೋಗಿ ಬದುಕು ಕಟ್ಟಿಕೊಳ್ಳುವ ಚಾಣಾಕ್ಷತನ ಮಲಯಾಳಿಗಳಿಗಿದೆ. ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮೇಲೆ ಬರುವಲ್ಲಿ ಮತ್ತು ರಾಜಕೀಯ ಮಾಡುವುದರಲ್ಲಿ ಮಲಯಾಳಿಗಳು ಯಾವತ್ತೂ ಮುಂದು. ಇಂತಹ ಬುದ್ಧಿವಂತ ಮಲಯಾಳಿಗಳಾದ ಸುಕ್ಕಣ್ಣ ಮತ್ತು ಕೇಳು ಪಂಡಿತ ಬ್ರಹ್ಮಕಲಶೋತ್ಸವದ ನೆವದಲ್ಲಿ ಸೀತಾಪುರದಲ್ಲಿ ಪ್ರಾಮುಖ್ಯತೆ ಪಡೆಯುತ್ತಾರೆ.

ವೈಚಾರಿಕ ದೃಷ್ಟಿಕೋನ ಹೊಂದಿದ್ದರೂ ಸಹ ಏನೂ ಮಾಡಲಾಗದೆ ಚಡಪಡಿಸುವ ವೆಂಕಪ್ಪ ಮಾಸ್ಟ್ರು, ನಿಸ್ವಾರ್ಥ ಮನೋಭಾವದ ರಾಜಕಾರಣಿ ಜಯರಾಂ ಹೆಗಡೆ, ಸ್ವಾರ್ಥ ರಾಜಕಾರಣಿಯೂ  ಜಯರಾಂ ಹೆಗಡೆಯವರ ಬದ್ಧ ವೈರಿಯೂ ಆದ ನರಸಿಂಹ ಕೋಟೆ, ಹೆಗಡೆಯವರ ಗುಂಪಿನವನಾದರೂ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಕೋಟೆಯವರ ಪರ ನಿಲ್ಲುವ ಗ್ರಾಮ ಪಂಚಾಯತ್ ಅಧ್ಯಕ್ಷ ಸೇಸಪ್ಪ, ಕೇಳು ಪಂಡಿತರಿಗೆ ಊರಲ್ಲಿ ನೆಲೆ-ಬೆಲೆ ಸಿಗುವಂತೆ ಮಾಡಿದ ಪುರೋಹಿತ ಶ್ರೀಕಾಂತ ಭಟ್ಟರು ಮತ್ತು ಒಂದು ಕಾಲದಲ್ಲಿ ಸುಕ್ಕಣ್ಣನ ಚೇಲಾ ಆಗಿದ್ದು ಬ್ರಹ್ಮಕಲಶೋತ್ಸವ ಹಾಳಾಗುವಂತೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುವ ಕೋಳಿ ಅಂಕದ ರಾಗಣ್ಣನ ಪಾತ್ರಗಳು ಗಮನಾರ್ಹವಾಗಿವೆ.

ರಾಗಣ್ಣ ಸೂರಪ್ಪನ ಬಾವಿಗೆ ಮೂರು ಕರಿಬೆಕ್ಕುಗಳನ್ನು ಕೊಂದು ಎಸೆದದ್ದಕ್ಕಾಗಲೀ, ಬ್ರಹ್ಮಕಲಶೋತ್ಸವದ ದಿನ ಜೇನುಗೂಡಿಗೆ ಕಲ್ಲೆಸೆದದ್ದಕ್ಕಾಗಲೀ ಕಾದಂಬರಿಯಲ್ಲಿ ಬಲವಾದ ಸಮರ್ಥನೆ ಸಿಗುವುದಿಲ್ಲ. ಉಳಿದಂತೆ ಕಾದಂಬರಿ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಎಂದಿನಂತೆ ಮೊಗಸಾಲೆಯವರು ಭಿನ್ನ ಕಥಾವಸ್ತುವನ್ನು ಆಯ್ದುಕೊಂಡು ಸೊಗಸಾದ ಕಾದಂಬರಿ ಕೊಟ್ಟಿದ್ದಾರೆ. ಇಂತಹ ಗಹನವಾದ ಧರ್ಮಸೂಕ್ಷ್ಮ ವಿಷಯದ ಕಥಾವಸ್ತುವನ್ನು ಜನಪ್ರಿಯ ಶೈಲಿಯಲ್ಲಿ ನಿರೂಪಿಸಿರುವ ಮೊಗಸಾಲೆಯವರ ಕಲೆಗಾರಿಕೆಯನ್ನು ಮೆಚ್ಚಲೇಬೇಕು.

ಅಡಿಟಿಪ್ಪಣಿಗಳು

* ಶಿವರಾಂ ಕಾರಂತರ “ಮೈ ಮನಗಳ ಸುಳಿಯಲ್ಲಿ” ಮತ್ತು ಭೈರಪ್ಪನವರ “ಸಾಕ್ಷಿ” ಕಾದಂಬರಿಗಳು ಕಾಮವನ್ನೇ ಕೇಂದ್ರ ವಸ್ತುವಾಗಿ ಹೊಂದಿರುವ ಕಾದಂಬರಿಗಳು. “ಮೈ ಮನಗಳ ಸುಳಿಯಲ್ಲಿ” ಕಾದಂಬರಿ ಬಸ್ರೂರಿನ ವಾರಾಂಗನೆ ಮಂಜುಳೆಯ ಆತ್ಮಕಥಾನಕದಂತಿದೆ. “ಸಾಕ್ಷಿ” ಕಾದಂಬರಿ ಮಂಜಯ್ಯನೆಂಬ ಲಂಪಟನ ಕಥಾನಕ. ಒಂದರಲ್ಲಿ ಹೆಣ್ಣು ಮತ್ತು ಇನ್ನೊಂದರಲ್ಲಿ ಗಂಡು ಕೇಂದ್ರ ಪಾತ್ರಗಳು.

** ಶಾಂತಿನಾಥ ದೇಸಾಯಿಯವರ “ಅಂತರಾಳ” ಕಾದಂಬರಿ ವಿಕ್ರಮ್ ಎಂಬ ಮೇಲ್ಮಧ್ಯಮ ವರ್ಗದ ಮಧ್ಯವಯಸ್ಕನ ವಿವಾಹೇತರ ಸಂಬಂಧ ಮತ್ತು ಅದು ಆತನ ದಾಂಪತ್ಯದಲ್ಲಿ ಉಂಟುಮಾಡುವ ಬಿರುಕಿನ ಕುರಿತ ಕಥಾನಕ.

*** ರವಿ ಬೆಳಗೆರೆ ಕನ್ನಡಕ್ಕೆ ಅನುವಾದಿಸಿದ ಖುಷ್ವಂತ್ ಸಿಂಗ್ ಅವರ “ದಿ ಕಂಪನಿ ಅಫ್ ವುಮೆನ್” ಮತ್ತು “ವೃದ್ಧ ಚಪಲದ ಸಂಜೆ” ಕಾದಂಬರಿಗಳನ್ನು ಓದಿದರೆ ಅದರಲ್ಲಿ ಲಿಬಿಡೋ ಅಥವಾ ಲಂಪಟತನ ಎದ್ದು ಕಾಣುತ್ತದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter