ಡಾ.ಜಿ.ಎಂ.ಹೆಗ್ಡೆ , ಡಾ. ಜ್ಯೋತಿ ಶಂಕರ್ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಘೋಷಣೆ

ಮೂಡುಬಿದಿರೆ: ಕಳೆದ ನಲುವತ್ತು ವರುಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವ ಮೂಡಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು 2020ರ ಸಾಲಿಗೆ  ಧಾರವಾಡದ ಡಾ.ಜಿ.ಎಂ.ಹೆಗ್ಡೆ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಮತ್ತು ಮೈಸೂರಿನ ಡಾ. ಜ್ಯೋತಿ ಶಂಕರ್ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಿದೆ.  ಕಾಂತಾವರದ ಕನ್ನಡ ಭವನದಲ್ಲಿ ಪ್ರಶಸ್ತಿ ಪೀಠದ ಕಾರ್ಯಾಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ  ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ನಾಡಿನೆಲ್ಲೆಡೆಯಿಂದ ಬಂದ ಶಿಫಾರಸುಗಳು ಹಾಗೂ ಸಾಹಿತಿಗಳ ಜೀವಮಾನದ ಸಾಧನೆಯ ಆಧಾರದಲ್ಲಿ   ಡಾ.ಬಿ.ಜನಾರ್ದನ ಭಟ್, ಬೆಳಗೋಡು ರಮೇಶ ಭಟ್ ಮತ್ತು ಡಾ.ಎಸ್.ಪಿ.ಸಂಪತ್ ಕುಮಾರ್ ಅವರನ್ನೊಳಗೊಂಡ ತೀರ್ಪುಗಾರರ ಬಳಗ  ಈ ಪ್ರಶಸ್ತಿಗಳನ್ನು ನಿರ್ಣಯಿಸಿದೆ  ಎಂದು ಪೀಠದ ಪ್ರಧಾನ  ನಿರ್ದೇಶಕ ಡಾ.ನಾ.ಮೊಗಸಾಲೆ ತಿಳಿಸಿದ್ದಾರೆ.
ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ರೂ, ಇಪ್ಪತ್ತೈದು  ಸಾವಿರ ಮತ್ತು ವರ್ಧಮಾನ ಉದಯೋನ್ಮುಖ ಪ್ರಶಸ್ತಿಗೆ ರೂ. ಹದಿನೈದು ಸಾವಿರಗಳ ಗೌರವ ಸಂಭಾವನೆಯಿದ್ದು, ತಾಮ್ರ ಪತ್ರದ ಜೊತೆ ಸನ್ಮಾನವನ್ನೂ ಇವು ಒಳಗೊಂಡಿವೆ. ಪ್ರಶಸ್ತಿ ಪ್ರದಾನ ಸಮಾರಂಭ ದಸರಾ ಉತ್ಸವ ಸಂದರ್ಭದಲ್ಲಿ ಮೂಡುಬಿದಿರೆಯಲ್ಲಿ ನಡೆಯಲಿದ್ದು ದಿನಾಂಕವನ್ನು ಮುಂದೆ ಪ್ರಕಟಿಸಲಾಗುತ್ತದೆ
ವಿಶ್ರಾಂತ ಪ್ರಾಧ್ಯಾಪಕ , ಹಿರಿಯ ವಿಮರ್ಶಕ ಡಾ. ಜಿ.ಎಂ. ಹೆಗ್ಡೆ ಕಳೆದ ಮೂರು ನಾಲ್ಕು ದಶಕಗಳಿಂದ ಧಾರವಾಡದ ಸಾಹಿತ್ಯ ಚಟುವಟಿಕಗಳಲ್ಲಿ ಮುಂಚೂಣಿಯಲ್ಲಿದ್ದು  ಸಂಶೋಧನೆ ಅಧ್ಯಯನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. 20ಕ್ಕೂ ಅಧಿಕ ವಿಮರ್ಶಾ ಕೃತಿಗಳು, 40 ಸಂಪಾದಿತ ಗ್ರಂಥಗಳು, 400ಕ್ಕೂ ಅಧಿಕ ಪುಸ್ತಕ ವಿಮರ್ಶೆ ನಡೆಸಿರುವ ಹೆಗ್ಡೆ ಸಂಶೋಧನಾ ಮಾರ್ಗದರ್ಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ತಮ್ಮ ಸಾಹಿತ್ಯ ಮತ್ತು ಸಹೃದಯತೆ ಕೃತಿಗಾಗಿ ಸ. ಸ ಮಾಳವಾಡ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಅನೇಕ ಗೌರವಗಳಿಗೂ ಅವರು ಪಾತ್ರರಾಗಿದ್ದಾರೆ.
ಪ್ರಸಕ್ತ ಮೈಸೂರಿನ ಕರ್ನಾಟಕ  ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಜ್ಯೋತಿ ಶಂಕರ್ ಪ್ರಾಚೀನ ಕಾವ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಗಮಕ ವಾಚನವ್ಯಾಖ್ಯಾನ, ತೌಲನಿಕ ಅಧ್ಯಯನ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರಗಳಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿರುವ ಡಾ.ಜ್ಯೋತಿ ಶಂಕರ್ರವರು ಅವರು ಕಳೆದ ಹದಿನೆಂಟು ವರ್ಷಗಳಿಂದ ಕರ್ನಾಟಕದಾದ್ಯಂತ ಶಾಲಾ, ಕಾಲೇಜು, ವಿಶ್ವವಿದ್ಯಾನಿಲಯ ಹಾಗೂ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾವ್ಯ, ಶರಣ ಸಾಹಿತ್ಯ, ಹರಿದಾಸ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಆಧರಿಸಿದ ಉಪನ್ಯಾಸಗಳನ್ನು ಆಕಾಶವಾಣಿ ಮತ್ತು ದೂರದರ್ಶನಗಳಲ್ಲೂ ಪ್ರಸ್ತುತಪಡಿಸುತ್ತಿದ್ದಾರೆ.
ಹರಿದಾಸ ಸಾಹಿತ್ಯದ ಷಟ್ಪದಿ, ದಾಸಸಾಹಿತ್ಯ ಪ್ರಾಚೀನ ಕಾವ್ಯಗಳಲ್ಲಿ ಅಲಂಕಾರ, ಪ್ರವಾಸ ಸಾಹಿತ್ಯ ಇತ್ಯಾದಿ ಒಟ್ಟು ಹದಿನೆಂಟು ಕೃತಿಗಳು ಪ್ರಕಟಗೊಂಡಿದ್ದು ಮೂವತ್ತಕ್ಕೂ ಮಿಕ್ಕಿದ ಸಂಶೋಧನಾ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. . ಸಾಹಿತ್ಯ, ಸಂಗೀತ, ಗಮಕ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಮಹತ್ವದ ಕೊಡುಗೆಗಳಿಗಾಗಿ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ.

ಚಿತ್ರ: ಡಾ.ಜಿ.ಎಂ.ಹೆಗ್ಡೆ , ಡಾ. ಜ್ಯೋತಿ ಶಂಕರ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಡಾ.ಜಿ.ಎಂ.ಹೆಗ್ಡೆ , ಡಾ. ಜ್ಯೋತಿ ಶಂಕರ್ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಘೋಷಣೆ”

  1. ಶ್ವೇತಾ ನರಗುಂದ

    ಯೋಗ್ಯರಿಗೆ ಸಂದ ಗೌರವ. ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter