ಮಹಾನಗರದ ಈ ಬದುಕಿನಲ್ಲಿ
ಮುಳುಗೇಳುತ್ತಿದ್ದವನಿಗೆ ಅರಿವಾಯಿತು
ನಗರವಾಸವೆಂಬುದು ಒಂದು ಚಕ್ರವ್ಯೂಹ
ಅನಂತ ಅಭೇದ್ಯ
ಹೊಗುವುದು ಸುಲಭ ಯುದ್ಧ ಮಾಡುತ್ತ ಮಾಡುತ್ತ
ಈಸುತ್ತ ಮುನ್ನುಗ್ಗುತ್ತ
ಕಾದುತ್ತ ಶಸ್ತ್ರಗಳ ಬೀಸುತ್ತ
ವ್ಯೂಹಗಳನ್ನೆಲ್ಲ ಒಂದೊಂದಾಗಿ ಭೇದಿಸುತ್ತ
ಮೈಯೆಲ್ಲ ಗಾಯವಾಗಿ ರಕ್ತ ಬಸಿಯುತ್ತಿದ್ದರೂ
ಹಿಂದೆ ಸರಿವಂತಿಲ್ಲ
ಮಾಡಬೇಕು ಅಥವಾ ಮಡಿಯಬೇಕು
ಏದುಸಿರು ಬಿಡುತ್ತ
ಶಸ್ತ್ರಾಸ್ತ್ರಗಳ ಪೂರೈಕೆ ಪೂರ್ತಿ-
ಯಾಗಿದ್ದರೂ ಗೆಲ್ಲಲಾಗದು ಈ ಸೈನ್ಯದ ತುರುಸ
ಬ್ರಹ್ಮಾಂಡ ಗಾತ್ರದ ಈ ರಾಕ್ಷಸನಿಗೆ
ಯಾರು ಕೊಡುವರು ಸೂಜಿಗೆ ನೂಲು
ಹಾಕುವ ಕೆಲಸ
ಹಾಕುತ್ತ ತೆಗೆಯುತ್ತ ತೆಗೆಯುತ್ತ ಹಾಕುತ್ತ
ಕೂರುವ ಕಸುಬ
ಇಲ್ಲವಾದರೆ ಅದು ಧಾವಂತ ಬೆಳೆದು
ನಮ್ಮನ್ನೇ ತಿಂದು ಹಾಕುವ ದಿನ
ದೂರ ಇಲ್ಲ.
*****
1 thought on “ಬ್ರಹ್ಮರಾಕ್ಷಸ”
ಕವಿತೆ ಸೊಗಸಾಗಿದೆ. ಅಭಿನಂದನೆಗಳು ಕವಿಗಳಿಗೆ