“ಮೂರು ಹೆಜ್ಜೆ ಭೂಮಿ” ಹಳ್ಳಿಯೊಂದರ ಪ್ರಜ್ಞಾಪ್ರವಾಹ

ಡಾ. ಬಿ.ಜನಾರ್ದನ ಭಟ್ ಕಾದಂಬರಿ, ಕಥೆ, ಅನುವಾದ, ವಿಮರ್ಶೆ, ಕಾವ್ಯಾನುಸಂಧಾನ ಹೀಗೆ ಸಾಹಿತ್ಯದ ಬಹುಮುಖಿ ಪ್ರವಾಹಕ್ಕೆ ತಮ್ಮನ್ನು ಒಡ್ಡಿಕೊಂಡ ಕನ್ನಡದ ಮುಖ್ಯ ಬರಹಗಾರ. ಅವರ ” ಮೂರು ಹೆಜ್ಜೆ ಭೂಮಿ” ಎಂಬ ಕಾದಂಬರಿಯ ಬಗೆಗೆ ಕೆಲವು ಟಿಪ್ಪಣಿಗಳಿವು.

“ಮೂರು ಹೆಜ್ಜೆ ಭೂಮಿ” ಹಳ್ಳಿಯ ಪ್ರಜ್ಞಾಪ್ರವಾಹದ ಕತೆ. ಮಾದಯ ಕುಮೆರಿ ಮತ್ತು ಗಂಪದಬೈಲೆಂಬ ಕಾಲ್ಪನಿಕ ಆದರೆ ಓದಿದಾಗ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಗಳಲ್ಲೇ ಒಂದೆಂಬ ಭಾವ ಬರುವ ಗ್ರಾಮದ ಪ್ರಜ್ಞೆಯೊಂದರ ತಲ್ಲಣ, ಜೀವನ್ಮುಖೀ ತುಡಿತಗಳನ್ನು ಒಳಗೊಂಡ ಕಾದಂಬರಿಯಿದು. ಕರಾವಳಿ ಜಿಲ್ಲೆಯ ಧಾರ್ಮಿಕ ಅಸ್ಮಿತೆ ( ದೇವಸ್ಥಾನ, ಜಾತ್ರೆ, ನಂಬಿಕೆ  ಇತ್ಯಾದಿ), ಜಾನಪದ ( ಭೂತದಕೋಲ, ಯಕ್ಷಗಾನ ಇತ್ಯಾದಿ) ಕೃಷಿ ಇವುಗಳ ಜತೆ ಜತೆಗೇ ಮಾನವ ಸಂಬಂಧಗಳ ಸಂಕೀರ್ಣತೆ ಹಾಗು ಸಾಮಾಜಿಕ ಅಸ್ತವ್ಯಸ್ತತೆಗಳು ಮನುಷ್ಯ ಸಂಬಂಧಕ್ಕೆ ಮಾಡುವ ಪರಿಣಾಮ; ಪಾತ್ರಗಳು ತನ್ನ ಪರಿಮಿತಿಯನ್ನು ಮೀರಿ ಬದುಕಿನೆಡೆಗೆ ತುಡಿಯುವ ಸಂದರ್ಭ ( ಕಥಾನಾಯಕ ರಾಮಕೃಷ್ಣ ಆಚಾರ್ಯ ತನ್ನ ಸ್ನೇಹಿತ ಚುಕುಡನ  ಮೂಲಕ ವೇಶ್ಯೆಯನ್ನು ಸಂಪರ್ಕಿಸಿ ಲೈಂಗಿಕ  ಆಸೆಯನ್ನು ಈಡೇರಿಸಿಕೊಳ್ಳುವ ರೀತಿ ಅದಕ್ಕೆ ಪ್ರತಿಯಾಗಿ ಚುಕುಡನಿಗೆ ಮಾದಯ ಭೂತವೆಂಬ ಹೊಸ ಭೂತದ ಪ್ರತಿಷ್ಠೆಗೆ ನೆರವಾಗಿ ಆತನ ಋಣ ತೀರಿತೆಂದು ಭಾವಿಸುವ ರಾಮಕೃಷ್ಣ) ಇವೆಲ್ಲವನ್ನು ಕಾದಂಬರಿಕಾರರು poetic justice ರೀತಿಯಲ್ಲಿ ಬೆಳೆಸದೆ ಅಂತರವನ್ನು ಕಾಯ್ದುಕೊಂಡು ಓದುಗನನ್ನು ನಿರ್ವೇದದ ಸ್ಥಿತಿಗೆ ಒಯ್ಯುತ್ತಾರೆ.

ಹಳ್ಳಿ  ಸ್ವಾಭಾವಿಕವಾಗಿ ತನ್ನ ಅಭಿವ್ಯಕ್ತಿಯನ್ನು ( ಪಾತ್ರ ಸನ್ನಿವೇಶಗಳ ಮೂಲಕ) ತೋರಿಸಿ ಬದುಕಲು ತೊಡಗುವ ಪ್ರಯತ್ನದಲ್ಲಿರುವಾಗ ಹಠಾತ್ತಾಗಿ ರಾಸಾಯನಿಕ ಕಂಪೆನಿಯೊಂದು ಊರಿಗೆ ಪ್ರತ್ಯಕ್ಷವಾಗಿ ಹಳ್ಳಿಯ ಕನಸನ್ನೇ ಮುರಿವ ಚಿತ್ರ ಇಲ್ಲಿದೆ.

ಬುಡಕಟ್ಟು ಜನರ ಬದುಕು, ಮತಾಂತರದ ಹಿನ್ನೆಲೆ, ಬ್ರಿಟೀಷ್ ಆಡಳಿತೆಯ ಪರಿಣಾಮ, ಸರಿ ಸುಮಾರು ಮುನ್ನೂರೈವತ್ತು ವರುಷಗಳ ಇತಿಹಾಸದ ಹಿನ್ನೆಲೆಯಲ್ಲಿ ಸಾಗುವ ಕಥೆ   ಮಹಾನದಿಯ ಹರಿವಿನಂತೆ ಮೂಡಿಬಂದಿದೆ.

ಅನೇಕ ವೈನೋದಿಕ ಸನ್ನಿವೇಷಗಳೂ ( ಯಕ್ಷಗಾನ ಮೂರಾಟ ಅಲ್ಲಿನ ರಸಮಯ ಸನ್ನಿವೇಷಗಳು, ಭೂತದಕೋಲ, ಜಾತ್ರೆ ಇತ್ಯಾದಿ) ಅಲ್ಲಿನ ಸೂಕ್ಷ್ಮ ವಿವರಗಳೂ ಮನಸೆಳೆಯುತ್ತವೆ.

ಶ್ರೀ ಜನಾರ್ದನ ಭಟ್ಟರ ಉತ್ತರಾಧಿಕಾರ, ಹಸ್ತಾಂತರ ಮತ್ತು ಅನಿಕೇತನದ  ಕಾದಂಬರಿಗಳ ಮನೋಲಹರಿಯ ಮುಂದುವರಿದ ಭಾಗದಂತೆಯೇ ” ಮೂರು ಹೆಜ್ಜೆ ಭೂಮಿ” ಯೂ ಹೌದು.

ಔಚಿತ್ಯ ಮೀರದ ಪಾತ್ರಚಿತ್ರಣ, ಅತಿರೇಕದ ಪಾತ್ರವೈಭವೀಕರಣವಿಲ್ಲದಿರುವಿಕೆ, ರಸಸಂದರ್ಭಗಳಲ್ಲಿ ಕಾದಂಬರಿಗಾರ ತೋರುವ ಸಂಯಮ ( ವೃಶ್ಯೆ ಗುಲ್ಲಿಯ ಇತಿವೃತ್ತಗಳು,   ಆಕೆಯ ಮಗಳು ಜಲಜಳ ಸನ್ನಿವೇಶ, ಹೀಗೆ) ಒಟ್ಟಿನಲ್ಲಿ ಪಾತ್ರ,ಸನ್ನಿವೇಶ, ಭಣಿತಿಗಳು ಓದುಗನಲ್ಲಿ  ನಿರ್ವೇದವನ್ನುಂಟುಮಾಡಿ ನಿರ್ವೃತಿಯನ್ನು ತಂದೊಡ್ಡುವ ಸುಭಗತನ ಈ ಕಾದಂಬರಿಯಲ್ಲಿದೆ.

ಮನೋಹರ ಗ್ರಂಥಮಾಲಾ ಪ್ರಕಾಶನದ ೨೬೭ ಪುಟಗಳ ಕಾದಂಬರಿ ಇದು. ಬೆಲೆ ರೂಪಾಯಿ 250/-

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter