ನಾವು ಸಣ್ಣ ಚುಕ್ಕೋಳಿದ್ದಾಗ ಸ್ವಾತಂತ್ರ್ಯ ದಿನಾಚರಣೆ ದಿನಕ್ಕೆ ಸಿದ್ಧಗೊಳ್ಳುವುದೇ ದೊಡ್ಡ ಸಂಭ್ರಮ ಆಗಿರ್ತಿತ್ತು. ಯಡ್ರಾಮಿ ಸಾಲಿಗುಡಿಯಂಗಳದಲ್ಲಿ ಆಚರಿಸುವ ಝಂಡಾ ಮೆರವಣಿಗೆಯ ಸ್ವಾತಂತ್ರ್ಯೋತ್ಸವ ಸಡಗರಕ್ಕೆ ಹಿಂದಿನ ದಿನದಿಂದಲೇ ಭರಪೂರ ತಯಾರಿ.
ಸಣ್ಣಹರಳುಪ್ಪಿನಂತಹ ಸವುಳು ಪುಡಿಯಿಂದ ಶುಭ್ರವಾಗಿ ಒಗೆದ ಬಿಳಿಅಂಗಿ ಖಾಕಿಚಣ್ಣಗಳು. ಒಣಗಿದ ಅಂಗಿ ಚಣ್ಣ ಇಸ್ತ್ರಿ ಮಾಡುವುದೇ ದಿನಪೂರ್ತಿಯ ಕಾರ್ಯಕ್ರಮ.
ಇದ್ದಲಿಯ ಕೆಂಡದುಂಡೆಗಳನ್ನು ತಾಮ್ರದ ತಂಬಿಗೆಯಲ್ಲಿ ತುಂಬಿ ದಪ್ಪನೆಯ ಬಟ್ಟೆಯಿಂದ ಗಟ್ಟಿಯಾಗಿ ಹಿಡಕೊಂಡು ಅಂಗಿ, ಚಣ್ಣಗಳಿಗೆ ರಾತ್ರಿಯ ತಾಸೊಪ್ಪತ್ತು ಒತ್ತಿ ಒತ್ತಿ ಶ್ರದ್ಧೆಯಿಂದ ಇಸ್ತ್ರಿ ಮಾಡ್ತಿದ್ದೆ. ಮಡಿಕೆಗಳು ಹಾಳಾಗದಂತೆ ಅಂಗಿ ಚಣ್ಣ ತಲೆದಿಂಬಿನಡಿ ಇಟ್ಟುಕೊಂಡು ನಾನು ರಾತ್ರಿಯಿಡೀ ಮಲಗುತ್ತಿದ್ದೆ. ಅವಕ್ಕೆ ಬರೋಬ್ಬರಿ ಇಸ್ತ್ರಿ ಮಡಕೆ.
ಬೆಳಗಿನ ಜಾವದ ಕಲ್ಲುಸಕ್ಕರೆಯಂತಹ ನಿದ್ರೆಯ ಭಂಗ. ನಸುಕಿನ ನಾಲ್ಕು ಗಂಟೆಗೇ ಅವ್ವ ನನ್ನನ್ನು ಎಚ್ಚರಗೊಳಿಸುತ್ತಿದ್ದಳು. ಬೆಚ್ಚಗೆ ಹಿತವೆನಿಸುವ ಬಿಸಿನೀರಿನ ಜಳಕ. ನಾನೇ ಮಾಡಿಟ್ಟ ಇಸ್ತ್ರಿ ಉಡುಪು ಧಾರಣೆ. ಅದರಲ್ಲಿ ನಾನು ಕಂಡುಕೊಳ್ಳುವ ಆನಂದಕ್ಕೆ ಎಣೆಯೇ ಇರ್ತಿರಲಿಲ್ಲ.
ದೀಡು ಹರದಾರಿ ದೂರದ ಯಡ್ರಾಮಿಗೆ ದೀಡು ತಾಸಿನ ಕಾಲ್ನಡಿಗೆ ಪಯಣ. ರಸ್ತೆಯುದ್ದಕ್ಕು ನಡಕೊಂಡು ಹೋಗುವಾಗ ಇಸ್ತ್ರಿ ಮಾಡಿದ ಶುಭ್ರವಸ್ತ್ರದ ಮಡಿಕೆ ಕೆಡದಂತಹ ಕಟ್ಟೆಚ್ಚರ. ಯಡ್ರಾಮಿಯ ಗಲ್ಲಿ ಗಲ್ಲಿಗಳಲ್ಲಿ ಪ್ರಭಾತಫೇರಿ.
ಬೋಲೋ ಭಾರತ್ ಮಾತಾಕಿ ಜೈಕಾರ. ಮಹಾತ್ಮಾ ಗಾಂಧಿತಾತ ಸೇರಿದಂತೆ ಇನ್ನೂ ಅನೇಕ ನಾಯಕರಿಗೆ ಜೈಕಾರ. ಗಾಂಧಿ ಫೋಟೋ ಪೂಜೆ. ಊದುಕಡ್ಡಿ, ಕಾಯಿಕರ್ಪೂರ ಅರ್ಪಣೆ. ತಿನ್ನಲು ನಿಂಬೆಹುಳಿ ಪೆಪ್ಪರ್ಮೆಂಟ್, ಬೊಗಸೆ ತುಂಬಾ ಚುರುಮುರಿ ಮಂಡಾಳ, ತೆಂಗಿನಕಾಯಿ ಹೋಳುಗಳು.
ಅವು ನಮಗೆಲ್ಲ ಆ ಕಾಲದ ಖುಷಿ ಖುಷಿಯ ಖಾದ್ಯವೇ ಹೌದು. ಯಾಕೆಂದರೆ ಯಾರಾದರೂ ದೂರದ ಊರಿಂದ ಮನೆಗೆ ಬೀಗರು ಬಂದಾಗ ಮಾತ್ರ ಚುರುಮುರಿ ಸೂಸ್ಲಾ, ಅಂದ್ರೇ ಮಂಡಕ್ಕಿ ಉಸುಳಿ ತಿಂಡಿಯ ರುಚಿ ಕಾಣುತ್ತಿದ್ದೆವು. ಹೀಗಾಗಿ ಕರಂಕುರುಂ ಘಾಟದ ಮಂಡಾಳ ತಿನ್ನುವ ಬಲುದೊಡ್ಡ ಅವಕಾಶವೆಂದರೆ ನಮಗೆ ಸ್ವಾತಂತ್ರ್ಯೋತ್ಸವ.
*ಮಲ್ಲಿಕಾರ್ಜುನ ಕಡಕೋಳ*
