“ಸೆಕ್ಯುಲರಿಸಂ ಎಂಬ ಪದ ರಾಜಕೀಯವಾಗಿ ಎಷ್ಟು ದುರ್ಬಳಕೆಯಾಗಿದೆಯೋ ಅದಕ್ಕಿಂತ ಹೆಚ್ಚು ಸಾಹಿತ್ಯದಲ್ಲಿ ಆಗುತ್ತಿರುವುದು ವಿಷಾದದ ಸಂಗತಿ”
ರಾಘವೇಂದ್ರ ಪಾಟೀಲರು ಕನ್ನಡದ ಮಹತ್ವದ ಕಥೆಗಾರರು. “ಒಡಪುಗಳು”, “ಪ್ರತಿಮೆಗಳು”, “ದೇಸಗತಿ”, “ಮಾಯಿಯ ಮುಖಗಳು”, “ಎಷ್ಟು ಕಾಡತಾವ ಕಬ್ಬಕ್ಕಿ…” ಮತ್ತು “ತುದಿಯೆಂಬೋ ತುದಿಯಿಲ್ಲ…” ಅವರ ಕಥಾಸಂಕಲನಗಳು. “ಬಾಳವ್ವನ ಕನಸುಗಳು” ಮತ್ತು “ಅಮೃತ ವಾಹಿನಿ” ನೀಳ್ಗತೆಗಳು. 2005ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ “ತೇರು” ಅವರ ಮೊದಲ ಪೂರ್ಣ ಪ್ರಮಾಣದ ಕಾದಂಬರಿಯಾಗಿದ್ದು ಈಗಾಗಲೇ ಕನ್ನಡದ ಮಹತ್ವದ ಕಾದಂಬರಿಗಳ ಸಾಲಿಗೆ ಸೇರಿದೆ.
“ಒಡಪುಗಳು”, “ಪ್ರತಿಮೆಗಳು”, “ಕಾಡಜ್ಜ”, “ಬಸತ್ತಿ”, “ದೇಸಗತಿ”, “ಕಥಿಯ ಹುಚ್ಚಿನ ಕರಿ ಟೋಪಿಗಿಯ ರಾಯ”, “ಒಂದು ಸೊಲಗಿ ಗೋದಿ…”, “ಬೆಳ್ಳಕ್ಕಿಗಳ ಲೋಕದಲ್ಲಿ”, “ಉರುಳುವ ಗಾಲಿ… ಗುಡು ಗುಡು ಮುಗಿಲು…”, “ಲಯ”, “ಮಾಯಿಯ ಮುಖಗಳು”, “ತುದಿಯೆಂಬೋ ತುದಿಯಿಲ್ಲ”, “ಎಷ್ಟು ಕಾಡತಾವ ಕಬ್ಬಕ್ಕೀ…” ಮತ್ತು “ಮತ್ತೊಬ್ಬ ಮಾಯಿ” ಕಥೆಗಳ ಯಶಸ್ಸು ಅವರನ್ನು ಕನ್ನಡದ ಪ್ರಥಮ ದರ್ಜೆಯ ಕಥೆಗಾರರನ್ನಾಗಿಸಿವೆ.
“ದೇಸಗತಿ” ಕಥೆಯ ಮುಂದುವರಿಕೆಯಂತಿರುವ “ತೇರು” ಕಾದಂಬರಿ ಜಾನಪದ ಮತ್ತು ಶಿಷ್ಟ ಸಂಸ್ಕೃತಿಗಳೆರಡೂ ಮೇಳೈಸಿದಂತಿರುವ ವಿಶಿಷ್ಟ ಬಗೆಯ ಕಥನ. ಈಗಾಗಲೇ ಹಲವು ಮುದ್ರಣ ಕಂಡು ಸಾಕಷ್ಟು ಚರ್ಚೆಗೊಳಗಾದ “ತೇರು” ಕಾದಂಬರಿ ಓದುಗ ಮತ್ತು ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿದೆ. “ತೇರು” ಕಾದಂಬರಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಮೂಲಕ ಭಾರತದ ಎಲ್ಲ ಭಾಷೆಗಳಿಗೆ ಅನುವಾದವಾಗಲಿದೆ.
“ಗೈರ ಸಮಜೂತಿ” ಪಾಟೀಲರ ಮಹತ್ವಾಕಾಂಕ್ಷೆಯ ಕೃತಿ. ಕಾದಂಬರಿಗಳೇ ವಿರಳವಾಗಿ ಬರುತ್ತಿರುವ ಇಂದಿನ ದಿನಗಳಲ್ಲಿ ಪಾಟೀಲರು 456 ಪುಟಗಳಷ್ಟು ದೀರ್ಘ ಕಾದಂಬರಿಯನ್ನು ಕೊಟ್ಟಿದ್ದಾರೆ. “ಗೈರ ಸಮಜೂತಿ” ಎಂಬ ಕೃತಿಯ ಶೀರ್ಷಿಕೆಯೇ ಗಮನ ಸೆಳೆಯುವಂತಿದೆ. “ಗೈರ ಸಮಜೂತಿ” ಎಂದರೆ “ತಪ್ಪು ತಿಳುವಳಿಕೆ” ಅಥವಾ “ಅಪಾರ್ಥ” ಎಂದರ್ಥ. ಅಪಾರ್ಥದಿಂದ ಆಕ್ರಮಣಕ್ಕೊಳಗಾದ ಜೀವಗಳ ನೋವಿನ ಕಥೆಯೇ ಈ ಕಾದಂಬರಿಯ ಜೀವಾಳ.
ಮಹಾಕಾವ್ಯದ ಸ್ವರೂಪ ಹೊಂದಿರುವ ಈ ಕಾದಂಬರಿಗೆ “ಗೈರ ಸಮಜೂತಿ” ಎಂಬ ಶೀರ್ಷಿಕೆಯ ಜೊತೆಗೆ “ಒಂದು ಆಧುನಿಕ ಪುರಾಣ” ಎಂಬ ಉಪಶೀರ್ಷಿಕೆ ಸಹ ನೀಡಲಾಗಿದ್ದು, ವಿಶಾಲ ಭಿತ್ತಿಯ ಕಥಾವಸ್ತು, ಹಲವು ಉಪಕಥೆಗಳು, ಕಥೆಯಿಂದ ಎದ್ದು ಬರುವಂತಿರುವ ಸಜೀವ ಪಾತ್ರಗಳು, ಕಾವ್ಯಮಯ ಭಾಷೆ ಮತ್ತು ಅದ್ಭುತ ನಿರೂಪಣೆ ಈ ಕಾದಂಬರಿಯನ್ನು ನಿಜಕ್ಕೂ ಒಂದು ಆಧುನಿಕ ಪುರಾಣವನ್ನಾಗಿಸಿವೆ.
“ಗೈರ ಸಮಜೂತಿ” ಕಾದಂಬರಿ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ನಡೆಯುವ ಕಥನ. ಬೆಟಗೇರಿಯ ಶಾಮರಾಯರು ಮತ್ತು ಐನಾಪುರದ ಸತ್ಯಬೋಧಾಚಾರ್ಯರ ಮನೆತನದ ಕಥೆಯ ಜೊತೆ ಜೊತೆಗೆ ಆ ಕಾಲದಲ್ಲಿ ಉಂಟಾದ ಅನೇಕ ಸಾಮಾಜಿಕ ಮತ್ತು ರಾಜಕೀಯ ಪಲ್ಲಟಗಳನ್ನು ಸಹ ಕಾದಂಬರಿ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಬೆಟಗೇರಿಯ ಗೌಡರಾದ ಶಾಮರಾಯರ ತಮ್ಮ ಕೃಷ್ಣಾಜಿಯ ಆಂಗ್ಲವಿರೋಧಿ ಹೋರಾಟದ ಉಲ್ಲೇಖದೊಂದಿಗೆ ಆರಂಭವಾಗುವ ಕಾದಂಬರಿ ಅಂದಿನ ರಾಜಕೀಯ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತಾ ಸಾಗುತ್ತದೆ. ಶಾಮರಾಯರ ಮಗ ಅಚ್ಯುತನನ್ನು ಆತನ ಚಿಕ್ಕಪ್ಪ ಸ್ವಾತಂತ್ರ್ಯ ಹೋರಾಟಗಾರ ಕೃಷ್ಣಾಜಿ ಎಂಬ ಗೈರ ಸಮಜೂತಿಯಿಂದಾಗಿ ಪುಣೆಯ ರೈಲ್ವೆ ನಿಲ್ದಾಣದಲ್ಲಿ ಬ್ರಿಟಿಷರು ಕೊಂದು ಹಾಕುತ್ತಾರೆ. ಅಚ್ಯುತನ ದಾರುಣ ಸಾವಿನೊಂದಿಗೆ ದುರಂತಗಳ ಸರಮಾಲೆ ಆರಂಭವಾಗುತ್ತದೆ.
ಹೊಸ ಬಾಳಿನ ಕನಸು ಕಾಣುತ್ತ ಊರಿಗೆ ಹೊರಟಿದ್ದ ಅಚ್ಯುತ ಬ್ರಿಟಿಷರ ಕ್ರೌರ್ಯಕ್ಕೆ ಬಲಿಯಾಗಿ ನವವಧು ವಚ್ಚಕ್ಕ ಅಕಾಲ ವೈಧವ್ಯಕ್ಕೆ ತುತ್ತಾಗುತ್ತಾಳೆ. ಇದು ಕಾದಂಬರಿಯ ಎರಡು ಬಹುಮುಖ್ಯ ಗೈರ ಸಮಜೂತಿಗಳಲ್ಲಿ ಮೊದಲನೆಯದು. ಪ್ರಸ್ತಕ್ಕಾಗಿ ಊರಿಗೆ ತೆರಳುತ್ತಿರುವ ಅಚ್ಯುತನಲ್ಲುಂಟಾಗುವ ಸಂಭ್ರಮ, ಸಡಗರ ಮತ್ತು ಅಚ್ಯುತನೇ ಕೃಷ್ಣಾಜಿ ಎಂಬ ಗೈರ ಸಮಜೂತಿಯಿಂದಾಗಿ ನಿರಂತರವಾಗಿ ಅವನನ್ನು ಹಿಂಬಾಲಿಸುವ ಸಿ.ಐ.ಡಿ.ಯ ಕುರಿತ ಅಚ್ಯುತನ ದುಗುಡವನ್ನು ಪಾಟೀಲರು ಮಳೆಯ ಪ್ರತಿಮೆಯ ಮೂಲಕ ಸೆರೆ ಹಿಡಿದಿದ್ದಾರೆ.
“ಅದು ಸೆಪ್ಟೆಂಬರ್ ತಿಂಗಳು… ಮಧ್ಯಾಹ್ನದ ತನಕಾ ಬಿಸಲ ಕಾದು ಸಂಜಿ ಆಗತಿದ್ದಂಗನ ಮುಗಲ ತುಂಬ ಕರ್ರಗಿನ ಮಾಡಗೋಳು ನಿಬ್ಬರ ಹಾಕಿ… ಸೂರ್ಯಾಸ್ತಕಿಂತ ಇನ್ನೂ ಮುಂಚೆನ ಮಬ್ಬಗತ್ತಲಿ ಕವಧಂಗ ಆಗಿತ್ತು… ಅಳಲಿಕ್ಕೆ ಸುರೂ ಮಾಡಿ ಭಾಳೋತ್ತನಕಾ ಅತ್ತು ಅತ್ತು… ಅಳೂದನ್ನ ಮರೆತಿದ್ದ ಸಣ್ಣ ಹುಡುಗ್ಗ… ಒಮ್ಮೆಒಮ್ಮಗಲೇ ತಾ ಅಳಲಿಕ್ಕತ್ತಿದ್ದೇ ಅನ್ನೋದು ನೆನಪಾಗಿ… ಅಂವ ಮತ್ತ ಮತ್ತ ಆಗೊಮ್ಮೆ ಈಗೊಮ್ಮೆ ಬಿಟ್ಟ ಬಿಟ್ಟ ಅಳತಾನಲಾ ಹಂಗ… ಮಳೀ ಹಂಗ ಮಾಡಲಿಕ್ಕತ್ತಿತ್ತು! ಮುಗಲಿನ್ಯಾಗ ಆಗೊಮ್ಮೆ ಈಗೊಮ್ಮೆ… ಸಿಟೀ ಸಿಟೀ ಅಂತ ನಾಕ ಹನೀ ಸುರಿಸಿ ಸುರಿಸಿ… ಮತ್ತ ನಿಂದರತಿತ್ತು…! ಮತ್ತ ಎಲ್ಲ್ಯೋ ದೂರದಾಗ ಗುಡು… ಗುಡೂ… ಅಂತ ಗುಡುಗಿನ ಸಪ್ಪಳ ಕೇಳಸತ್ತಿತ್ತು…”
(ಪುಟ 105)
ಶಾಮರಾಯರ ಅಣ್ಣ ಬೆಟಗೇರಿಯ ರಾಘಪ್ಪನದು ತುಂಬ ವಿಕ್ಷಿಪ್ತ ಪಾತ್ರ. ರತ್ನಾಗಿರಿ ಜಿಲ್ಲೆಯ ತಾಲ್ಲೂಕೊಂದರಲ್ಲಿ ಶಿರಸ್ತೇದಾರನಾಗಿದ್ದಾಗ ಮುದುಕಿಯೊಬ್ಬಳಿಂದ ಲಂಚದ ರೂಪದಲ್ಲಿ ಮಂಗಲಸೂತ್ರ ಪಡೆವ ಆತ ಅವಳಿಗೆ ಮೋಸ ಮಾಡುತ್ತಾನೆ. ರಾಘಪ್ಪನಿಂದ ಮೋಸ ಹೋದ ಮುದುಕಿ ಅವನ ವಿರುದ್ಧ ಪ್ರತಿಭಟನೆ ನಡೆಸಿ ಆತನ ಮನೆಬಾಗಿಲಲ್ಲಿ ಸಾಯುತ್ತಾಳೆ. ಈ ಸಾವಿನ ಆಘಾತ ರಾಘಪ್ಪನನ್ನು ಹುಚ್ಚನನ್ನಾಗಿ ಮಾಡುತ್ತದೆ. ಸತತವಾಗಿ ಕಂಡದ್ದನ್ನೆಲ್ಲ ತಿನ್ನುವುದರ ಮೂಲಕ ಆತನ ಚೇಷ್ಟೆ ವ್ಯಕ್ತವಾಗುತ್ತದೆ. ರಾಘಪ್ಪನ ಹುಚ್ಚು ಎಲ್ಲಿಯವರೆಗೆ ಹೋಗುತ್ತದೆಂದರೆ ರಾಘಪ್ಪ ಖಾರದ ಪುಡಿ ತುಂಬಿದ ಡಬ್ಬಿಯನ್ನು ಸಹ ಬಿಡಲಾರ. ಇಂತಹ ವಿಕ್ಷಿಪ್ತ ಸ್ವಭಾವದ ರಾಘಪ್ಪ ಅಚ್ಯುತನ ಸಾವಿನ ನಂತರ ಇದಕ್ಕೆ ತಾನು ಮಾಡಿದ ಪಾಪವೇ ಕಾರಣವೆಂದು ಬಗೆದು ತದ್ವಿರುದ್ಧವಾದ ನಡವಳಿಕೆ ತೋರುತ್ತಾ ಹಸಿವಿಲ್ಲದವನಂತೆ ವರ್ತಿಸಿ ಕೃಶನಾಗುತ್ತಾ ಪಶ್ಚಾತ್ತಾಪ ಪಡುತ್ತಾನೆ. ರಾಘಪ್ಪನ ಚೇಷ್ಟೆಗಳನ್ನು ಪಾಟೀಲರು ತುಂಬಾ ಚೆನ್ನಾಗಿ ನಿರೂಪಿಸಿದ್ದಾರೆ.
“…ಅಲ್ಲಾ… ರಾಧಾಬಾಯವರ… ಈ ಜಗತ್ತಿನ್ಯಾಗ ಅಗದೀ ಆಲಸಿಗಳೂ ಅಂದರ ನೀವ ನೋಡ್ರಿ… ಹಾಂ… ಅಲ್ಲ! ಇಲ್ಲಿ ನನ್ನ ಮುಂದಿನ ಪ್ಲೇಟಿನ್ಯಾಗ ಅವಲಕ್ಕಿ ಅವನೋ… ಇಲ್ಲಾ ತೀರ್ಯಾವೋ ಅಂತ ಗೊತ್ತದ ಏನ್ರೀ…? ಹಾಂ… ಮೂರ ಮಿನಿಟಿನ ಮ್ಯಾಲ ಆತು… ನಾನೂ ನಿಮ್ಮ ನಿರ್ಲಕ್ಷತನಾ ನೋಡಲಿಕ್ಕತ್ತೀನು… ಹೇಳ್ರಿ… ಹಿಂಗ ಗಂಡನ ಬಗ್ಗೆ ನಿಷ್ಕಾಳಜೀ ಮಾಡೋದು ಬರೋಬರೀ ಅಂತಿರೇನ ನೀವೂ…!”
(ಪುಟ 14)
ಅಚ್ಯುತನನ್ನು ಕಳೆದುಕೊಂಡು ಅಕಾಲ ವೈಧವ್ಯಕ್ಕೆ ತುತ್ತಾಗುವ ವಚ್ಚಕ್ಕಳ ಜೀವನ ದುಃಖದಿಂದ ಮುರುಟಿ ಹೋಗಬಾರದೆಂಬ ಕಳಕಳಿಯಿಂದ ಆಕೆಯನ್ನು ಐನಾಪುರಕ್ಕೆ ಕರೆದುಕೊಂಡು ಬರುವ ಆಕೆಯ ಚಿಕ್ಕಪ್ಪ ಸತ್ಯಬೋಧಾಚಾರ್ಯರು ಈ ಕಾದಂಬರಿಯ ಅತ್ಯಂತ ಮಹತ್ವದ ಪಾತ್ರ. ಸಾತ್ವಿಕ ಸ್ವಭಾವದ ಸತ್ಯಬೋಧಾಚಾರ್ಯರು ವಚ್ಚಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ವಿದ್ಯಾವಂತಳನ್ನಾಗಿ ಮಾಡಲು ಬಯಸುವುದು ಅರ್ಥಪೂರ್ಣವಾಗಿದೆ.
ವಚ್ಚಕ್ಕಳಿಗಾಗಿ ಪುಸ್ತಕ ಖರೀದಿಸಲು ಧಾರವಾಡಕ್ಕೆ ಹೋಗುವ ಸತ್ಯಭೋದಾಚಾರ್ಯರು ಧಾರವಾಡದ “ಜಯಂತಿ” ಪತ್ರಿಕೆಯ ಕಛೇರಿಯಲ್ಲಿ ಹಿರಿಯ ಸಾಹಿತಿಗಳಾದ ಬೆಟಗೇರಿ ಕೃಷ್ಣಶರ್ಮ, ಗೌರೀಶ ಕಾಯ್ಕಿಣಿ ಮತ್ತು ವಾಡಪ್ಪಿಯವರೊಂದಿಗೆ ಚರ್ಚಿಸಿ ಅಕಾಲ ವೈಧವ್ಯದಿಂದ ನೊಂದಿದ್ದ ವಚ್ಚಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವ ತಮ್ಮ ನಿರ್ಧಾರವನ್ನು ಗಟ್ಟಿ ಮಾಡಿಕೊಳ್ಳುವ ಪ್ರಸಂಗ ತುಂಬ ಸ್ವಾರಸ್ಯಕರವಾಗಿದೆ. ಈ ಕಾಕಾ-ಮಗಳ ಅಂತಃಕರಣದ ಸಂಬಂಧ ಗುರು ಶಿಷ್ಯೆಯರ ಸಂಬಂಧವಾಗಿ ಮಾರ್ಪಟ್ಟು ವಚ್ಚಕ್ಕಳಿಗೆ ಜೀವನವನ್ನು ಹೊಸ ದೃಷ್ಟಿಯಿಂದ ನೋಡುವಂತಾಗುತ್ತದೆ.
ಬೆಟಗೇರಿಯ ಶಾಮರಾಯರಿಂದ ಹಳ್ಳಿಯ ವೈದ್ಯೆಯಾಗಿದ್ದ ರಾಧಾಕಾಕೂಳ ಬಗ್ಗೆ ತಿಳಿದ ವಚ್ಚಕ್ಕಳು ತಾನೂ ವೈದ್ಯಕೀಯ ವಿದ್ಯೆ ಕಲಿತು ರಾಧಾಕಾಕೂಳಂತೆ ಊರ ಜನರ ಸೇವೆ ಮಾಡಬಯಸುತ್ತಾಳೆ. ಸೂಲಗಿತ್ತಿಯಾಗುವ ತನ್ನ ಬಯಕೆಯನ್ನು ವಚ್ಚಕ್ಕ ಸತ್ಯಬೋಧಾಚಾರ್ಯರಲ್ಲಿ ವ್ಯಕ್ತಪಡಿಸಿದಾಗ ಪ್ರಗತಿಪರ ಮನೋಭಾವದ ಸತ್ಯಬೋಧಾಚಾರ್ಯರು ಅದಕ್ಕೆ ಸಮ್ಮತಿಸಿ ಸಂಪ್ರದಾಯವನ್ನೂ ಮೀರಿ ಬೆಂಬಲಿಸುತ್ತಾರೆ.
ಹರೆಯದ ತಳಮಳಗಳಿಂದ ಕುದಿವ ವಚ್ಚಕ್ಕಳ ಹಳವಂಡಗಳನ್ನು ಪಾಟೀಲರು ಕನಸುಗಳಲ್ಲಿ ಉಳ್ಳಾಗಡ್ಡಿಯ ಪ್ರತಿಮೆಯ ಮೂಲಕ ವ್ಯಕ್ತಪಡಿಸಿರುವುದು ಹೊಸದು. ನೇರಾನೇರ ಸಂಬಂಧವಿರದ “ಹಾವು” ಈಗಾಗಲೇ ಕಾಮದ ಸಂಕೇತವಾಗಿ ನವ್ಯ ಸಾಹಿತ್ಯದ ಸಂದರ್ಭದಲ್ಲಿ ಸಾಕಷ್ಟು ಬಳಕೆಯಾಗಿದೆ. ಆದರೆ ಮೊದಲ ಬಾರಿಗೆ ಕಾರ್ಯಕಾರಣ ಸಂಬಂಧವಿರುವ “ಉಳ್ಳಾಗಡ್ಡಿ” ಕಾಮದ ಸಂಕೇತವಾಗಿ ಬಳಕೆಯಾಗಿರುವುದು ಸ್ವಾರಸ್ಯಕರವಾಗಿದೆ.
“ವಚ್ಚಕ್ಕ ಈಳಿಗೀ ಮುಂದ ಕೂತು ಆ ಪಲ್ಯಾದ ಬುಟ್ಟೀ ಮಗ್ಗಲಕ ಎಳಕೊಂಡ ನೋಡತಾಳ…! ‘ಅರೇ…!’ ಇದೇನಿದೂ… ಆ ಬುಟ್ಟೀ ತುಂಬ ಇರೂದು ಉಳ್ಳಾಗಡ್ಡಿ! ನಿತ್ಯ ದೇವರ ಪೂಜೀ… ವೈಶ್ವದೇವಾ ಆಗುವ ಈ ಮನ್ಯಾಗ ಮಧ್ಯಾಹ್ನದ ಅಡಿಗಿಗೆ ಉಳ್ಳಾಗಡ್ಡಿ ಹೆಚ್ಚಲಿಕ್ಕೆ ಇಟ್ಟಾರಲ್ಲಾ…! ಅಕಸ್ಮಾತ್ ಸಣ್ಣ ಹುಡಗೋರಿಗೆ ತಿನಸು ಮಾಡಬೇಕೆಂದರೂ… ಅಲ್ಲಿ ಸಣ್ಣ ಅಡಿಗೀ ಮನ್ಯಾಗ ಮಾಡಿದರೂ… ಸತ್ಯಬೋಧರಿಗೆ ಗೊತ್ತ ಆಗಧಂಗ ಉಳ್ಳಾಗಡ್ಡಿ ಬಳಸತಿದ್ದರು…! ಹಂತಾದ್ದರಾಗ ಇಲ್ಲಿ ಈಗ ಮಧ್ಯಾಹ್ನದ ಅಡಿಗೆಗೇ ಈ ಉಳ್ಳಾಗಡ್ಡಿ ಹೆಚ್ಚಲಿಕ್ಕೆ ಇಟ್ಟಾರಲಾ… ಅಂತ ವಚ್ಚಕ್ಕ ಗೂಢಕ್ಕ ಬಿದ್ದು… ಏನ ಮಾಡೂದು ಅಂತ ಅಂತರ್ಮುಖಿ ಆಗಿದ್ದರ…”
(ಪುಟ 221-222)
ವಚ್ಚಕ್ಕಳ ಹರೆಯದ ತಳಮಳವನ್ನು ಸೂಕ್ಷ್ಮವಾಗಿ ಗ್ರಹಿಸುವ ಸತ್ಯಭೋದಾಚಾರ್ಯರು ಆಕೆಗೆ ಇದರಿಂದ ಹೊರಬರಲು ಕಠೋಪನಿಷತ್ತನ್ನು ಬೋಧಿಸುತ್ತಾರೆ. ಕಥೆಗಳ ಮೂಲಕ ಸಾಗುವ ಕಠೋಪನಿಷತ್ತಿನ ಅಧ್ಯಯನದಲ್ಲಿ ಮತ್ತೊಂದು ಕುತೂಹಲಕಾರಿ ಪಾತ್ರದ ಪ್ರವೇಶವಾಗುತ್ತದೆ ಅದೇ ಶ್ರೀನಿವಾಸಾಚಾರ್ಯ ಮತ್ತು ಸತ್ಯಬೋಧಾಚಾರ್ಯರ ಗುರು ಕುಮಾರಿಲನಾಥರು. ವಿಕ್ಷಿಪ್ತ ಮತ್ತು ವಿಲಕ್ಷಣವಾಗಿ ಕಾಣುವ ಕುಮಾರಿಲನಾಥರ ಕಥೆ ಸೊಗಸಾಗಿದೆ.
ಕುಮಾರಿಲನಾಥರು ಕಾಶಿಯ ಗುಲಾಬಿ ಎಂಬ ವಾರಾಂಗನೆಗೆ ಜಬಾಲಾ ಎಂದು ನಾಮಕರಣ ಮಾಡಿ ಆಕೆಯ ಆತ್ಮೋದ್ಧಾರ ಮಾಡಲು ಹೋಗಿ ಸತ್ಯಕಾಮನೆಂಬ ಬುದ್ಧಿಮಾಂದ್ಯ ಮಗನನ್ನು ಪಡೆಯುತ್ತಾರೆ. ಗೈರ ಸಮಜೂತಿಯಿಂದಾಗಿ ಸತ್ಯಕಾಮನ ಸಾವಾದರೂ ಅದು ಕುಮಾರಿಲನಾಥರಿಗೆ ಬಿಡುಗಡೆ ನೀಡಿ ತಾವು ಗುರುವಿಗಿತ್ತ ವಚನ ಉಳಿಸಿಕೊಳ್ಳುವಂತಾಗುತ್ತದೆ. ಇದು ಎಷ್ಟೊಂದು ಕುತೂಹಲಕಾರಿಯಾಗಿದೆಯೆಂದರೆ ಇದೊಂದು ಪ್ರತ್ಯೇಕ ಕಥೆಯಂದೇ ಭಾಸವಾಗುತ್ತದೆ.
ಈ ಸುದೀರ್ಘ ಕಥನದ ಎರಡನೆಯ ಮತ್ತು ಬಹುಮುಖ್ಯ ಗೈರ ಸಮಜೂತಿಯಿಂದರೆ ಸಾತ್ವಿಕ ಸ್ವಭಾವದ ಅಪೂರ್ವ ವ್ಯಕ್ತಿಯಾದ ಸತ್ಯಬೋಧಾಚಾರ್ಯರ ದಾರುಣ ಸಾವು. ಸತ್ಯಬೋಧಾಚಾರ್ಯರು ಪೂಜೆ ಮಾಡುತ್ತಿದ್ದಾಗ ಮಹಾತ್ಮ ಗಾಂಧೀಜಿಯವರ ಸಾವಿನ ಸುದ್ದಿ ತಿಳಿಯುತ್ತದೆ. ಇದು ತಿಳಿದ ತಕ್ಷಣ ಸೂತಕ ಬಂದಿತೆಂದು ಸತ್ಯಬೋಧಾಚಾರ್ಯರು ಪೂಜೆ ಬಿಟ್ಟು ಎದ್ದೇಳುತ್ತಾರೆ. ಅವರ ಪತ್ನಿ ರುಕ್ಮಿಣಿ ಇದು ಮೂರು ದಿನದ ಸೂತಕವೋ? ಹತ್ತು ದಿನದ ಸೂತಕವೋ? ಎಂದು ಕೇಳಿದಾಗ ಇದು ಭಾರತೀಯರಿಗೆ ಜನ್ಮಪೂರ್ತಿ ಅಂಟುವ ಸೂತಕವೆಂದು ಉತ್ತರಿಸುವ ಸತ್ಯಬೋಧಾಚಾರ್ಯರು ಗಾಂಧೀಜಿಯವರ ಸಾವಿನಿಂದ ತೀವ್ರವಾಗಿ ನೊಂದುಕೊಳ್ಳುತ್ತಾರೆ. ಇದನ್ನು ಸತ್ಯಬೋಧಾಚಾರ್ಯರ ಮಾತುಗಳು ಪರಿಣಾಮಕಾರಿಯಾಗಿ ವ್ಯಕ್ತಪಡಿಸಿವೆ.
“ರುಕ್ಮೀಣಿ… ಇವರು ಬರೇ ಮೂರು ಹತ್ತು ದಿನದವರು ಅಂತ ಅಲ್ಲಾ…! ಇವರ ಸೂತಕ ಅನ್ನೂದು ನಮಗ ಜನ್ಮೇಪಿ ಅಂಟಿಕೊಳ್ಳೊ ಹಂತದ್ದು… ಶಾಶ್ವತವಾದದ್ದು… ಭಾರತದ ಆತ್ಮಕ್ಕಂತೂ ಇದೂ… ಶತ ಶತಮಾನಗಳ ಕಾಲ… ನಿರಂತರ ಅಂಟಿಕೊಂಡಿರೂ ಹಂತಾ ಸೂತಕ…”
(ಪುಟ 335)
ಸ್ವಾತಂತ್ರ್ಯ ಹೋರಾಟಗಾರರೂ ಆದ ಗಾಂಧಿಭಕ್ತ ಸತ್ಯಬೋಧಾಚಾರ್ಯರು ಬ್ರಾಹ್ಮಣರೆಂಬ ಒಂದೇ ಕಾರಣಕ್ಕೆ ಕೊಲ್ಹಾಪುರದ ಪೈಲ್ವಾನರ ಕೈಯಲ್ಲಿ ದಾರುಣವಾಗಿ ಕೊಲೆಯಾಗುವುದು ನಿಜಕ್ಕೂ ದುರಂತದ ಸಂಗತಿ. ಸತ್ಯಬೋಧಾಚಾರ್ಯರ ಸಾವಿನಿಂದ ಐನಾಪುರದ ಮನೆಯ ವಾತಾವರಣ ಹದಗೆಟ್ಟು ಹೋಗಿದ್ದರೂ ಸಹ ಬಕುಲಾಳಿಗಾಗಿ ವಚ್ಚಕ್ಕ ಎಲ್ಲವನ್ನೂ ಸಹಿಸುತ್ತಾಳೆ. ಈ ನಡುವೆ ಬರುವ ಧೂರ್ತನೂ, ವಿಷಯಾಸಕ್ತನೂ ಆದ ಮದನಮಟ್ಟಿಯ ಶೇಷನ ದುಷ್ಟತನದಿಂದ ವಚ್ಚಕ್ಕ ಐನಾಪುರವನ್ನು ಬಿಟ್ಟು ಬಂದು ಶಾಶ್ವತವಾಗಿ ಬೆಟಗೇರಿಯಲ್ಲಿ ನೆಲೆಸುವಂತಾಗುತ್ತದೆ.
ಸತ್ಯಬೋಧಾಚಾರ್ಯರ ಸಾವು ವಚ್ಚಕ್ಕಳ ಸ್ಥೈರ್ಯವನ್ನೇ ಕುಸಿಯುವಂತೆ ಮಾಡುತ್ತದೆ ಆದರೆ ಸಾತ್ವಿಕರಾದ ಚಿಕ್ಕಪ್ಪ ಸತ್ಯಬೋಧಾಚಾರ್ಯರು ನೀಡಿದ ಜ್ಞಾನ ಮತ್ತು ಆತ್ಮವಿಶ್ವಾಸ ಅವಳು ಕುಸಿಯದೇ ಧೈರ್ಯವಾಗಿ ಮುನ್ನಗ್ಗಲು ಸಹಾಯ ಮಾಡುತ್ತದೆ. ಓದಿನ ಮೂಲಕ ಪಡೆದ ವೈದ್ಯಕೀಯ ಜ್ಞಾನ ಮತ್ತು ಸೂಲಗಿತ್ತಿಯಾಗಿ ಪಡೆದ ಅನುಭವ ಅವಳು ಹಳ್ಳಿಯ ವೈದ್ಯೆಯಾಗಿ ಸೇವೆ ಸಲ್ಲಿಸಲು ನೆರವಾಗುತ್ತದೆ.
ಐನಾಪುರದಿಂದ ಬೆಟಗೇರಿಗೆ ಬರುವ ವಚ್ಚಕ್ಕ ಹಳ್ಳಿಯ ವೈದ್ಯೆಯಾಗಿ ತನ್ನನ್ನು ತಾನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅರ್ಥಪೂರ್ಣವಾಗಿದೆ. ತನ್ನ ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವಾ ಮನೋಭಾವದಿಂದ ವಚ್ಚಕ್ಕ ಓಂಕಾರದ ವಚ್ಚಕ್ಕ ಎಂದು ಖ್ಯಾತಿ ಪಡೆಯುತ್ತಾಳೆ. ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಹಿಂದೂ ಮುಸ್ಲಿಮರ ನಡುವೆ ಉಂಟಾಗುವ ಗೈರ ಸಮಜೂತಿಯಿಂದಾಗಿ ವಚ್ಚಕ್ಕ ತನ್ನ ಸಮಾಜಸೇವೆಗೆ ಉಗ್ರ ಹಿಂದೂವಾದಿಯಂತೆ ವರ್ತಿಸುವ ಮೈದುನ ಮಾಧವಗೌಡನ ವೀರೋಧ ಎದುರಿಸಬೇಕಾಗುತ್ತದೆ.
ಹುಸೇನಬಿಯ ಮನೆಗೆ ಹೆರಿಗೆ ಮಾಡಿಸಲು ಹೊರಡುವಾಗ ತೀವ್ರವಾಗಿ ವಿರೋಧಿಸುವ ಮಾಧವಗೌಡ ಶತಾಯಗತಾಯ ವಚ್ಚಕ್ಕ ಹುಸೇನಬಿಯ ಮನೆಗೆ ಹೋಗದಂತೆ ತಡೆಯಲು ಯತ್ನಿಸಿ ವಿಫಲನಾಗುತ್ತಾನೆ. ಮಾನವೀಯತೆಯೇ ಬಹುದೊಡ್ಡ ಧರ್ಮವೆಂದು ನಂಬಿರುವ ವಚ್ಚಕ್ಕ ಮಾಧವಗೌಡನ ಎಲ್ಲ ಬಗೆಯ ವಿರೋಧವನ್ನೂ ಎದುರಿಸಿ ಹುಸೇನಬಿಯ ಜೊತೆ ಹೊರಡುತ್ತಾಳೆ. ಕಾದಂಬರಿಯ ಅಂತ್ಯ ತುಂಬ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಪಾಟೀಲರು ಕಾದಂಬರಿಯ ಅಂತ್ಯ ಭಾಗದಲ್ಲಿ ಬಳಸಿರುವ ಭಾಷೆ ತುಂಬ ಕಾವ್ಯಮಯವಾಗಿದೆ.
“…ಉಚ್ಚ ಸ್ವರದೊಳಗ ಓಂ…ಓಂ…ಓಂ… ಅಂತ ಓಂಕಾರದ ಉದ್ಘೋಷ ಮಾಡುತ್ತ ಸಾಗಿದ್ದ ವಚ್ಚಕ್ಕ… ಒಂದು ಬೃಹತ್ ಗಾತ್ರದ ನೀಲಾಂಜನದ ಜ್ಯೋತಿಯ ಹಂಗ… ಸ್ಫಟಿಕದ ಶಲಾಕಧಂಗ ಕಾಣಸತಿದ್ದಳು… ಅಲ್ಲಿ ಮ್ಯಾಲ್ಗಡೆ ಹಾರಾಡುತ್ತ ಸಾಗಿದ ಹಕ್ಕಿಗಳ ಗುಂಪು ಆಕಾಶದಲ್ಲಿ ಒಂದು ಮೆರವಣಿಗೆಯನ್ನು ಏರ್ಪಡಿಸಿದಂತಿದ್ದರೆ… ಇಲ್ಲಿ ಕೆಳಗಡೆ… ವಚ್ಚಕ್ಕನನ್ನು ಎದುರುಗೊಂಡು ತಡೆಯಲು ಧೈರ್ಯ ಸಾಲದೇ ಆಕಿಯ ಹಿಂದೆ ಹಿಂದೆ ಸಾಗುತ್ತಿದ್ದ ಮಾಧವಗೌಡನ ಬಂಟರು… ಇಲ್ಲಿ ನೆಲದ ಮ್ಯಾಲೂ ಒಂದು ಮೆರವಣಿಗಿಯೊಳಗ ಹೊಂಟಂಗ… ಬಿಳಿಯ ಸೀರೆಯನ್ನು ಉಟ್ಟಿದ್ದ… ಸ್ವಚ್ಛವಾದ ಸ್ಫಟಿಕದ ಜ್ಯೋತಿಯಂತಿದ್ದ ವಚ್ಚಕ್ಕನ ಹಿಂದೆ ಹಿಂದೆ… ಎರಡು ಮಾರು ಅಂತರವಿಟ್ಟುಕೊಂಡು ಹಿಂಬಾಲಿಸಿದ್ದರು… ಆ ಹುಡುಗೋರಿಗೆ ಆಕಿ… ದಿಟ್ಟಿಸಿ ನೋಡಲಾಗದಂಥಾ… ಕಣ್ಣು ಕುಕ್ಕುವ ಪ್ರಖರವಾದ ಬೆಳಕಿನ ಶಲಾಕದ ಹಂಗೆ ಕಾಣಸಿಲಿಕ್ಕತ್ತಿದ್ದಳು… ವಚ್ಚಕ್ಕ ಅಲ್ಲಿ ಈಶ್ವರ ದೇವರ ಗುಡೀ ದಾಟತಿದ್ದರ ಆಕಿಗೇ… ಮುಗುಳುನಗೀ ನಕ್ಕೋತ ಕೂತ ಈಶ್ವರ ದೇವರು ಕೈ ಎತ್ತಿ ಆಶೀರ್ವಾದ ಮಾಡಿಧಂಗ ಅನಿಸಿತು… ಅಲ್ಲೇ ಮುಂದ ಹಣಮಂತ ದೇವರ ಗುಡೀ ದಾಟಬೇಕಾದರ… ಶಭಾಷ್… ಅಂಜಬ್ಯಾಡ ಮಗಳ… ಅಂತಂದು ಆಂಜನೇಯ ಬೆನ್ನ ಚಪ್ಪರಿಸಿಧಂಗ ಅನಿಸಿತೂ… ಬಿಳಿಯ ಸೀರೆಯನ್ನುಟ್ಟಿದ್ದ ನೀಳಕಾಯದ ವಚ್ಚಕ್ಕ ತನ್ನ ಎರಡೂ ಹೆಗಲಮ್ಯಾಲ ಎರಡು ಪಾರಿವಾಳಗಳನ್ನು ಕೂಡಿಸಿಕೊಂಡು… ಸುತ್ತೆಲ್ಲಕ್ಕೂ ತಂಪು ನೀಡುವ ಒಂದು ಬೆಳದಿಂಗಳ ಖಂಬಧಂಗ… ಆಕೀ… ಎರಡು ಜೀವಗಳನ್ನು ಬದುಕಿಸಿ ಉಳಿಸಬೇಕಾದ ತನ್ನ ಗಂತವ್ಯದಕಡೆಗೆ… ಗಂಭೀರವಾಗಿ ಹೆಜ್ಜೇಯಿಟಗೋತ ಹೆಜ್ಜೇಯಿಟಗೋತ ಸಾಗತಿದ್ದಳೂ…”
(ಪುಟ 422)
“ಗೈರ ಸಮಜೂತಿ” ಕಾದಂಬರಿಯಲ್ಲಿ ಬರುವ ಹಲವು ಸಾವುಗಳು ಮನಕಲಕುವಂತಿವೆ. ಬೆಟಗೇರಿಯ ರಾಘಪ್ಪನಿಂದ ಮೋಸ ಹೋದ ಪಾಪದ ಮುದುಕಿಯ ಸಾವು, ಕೃಷ್ಣಾಜಿ ಎಂಬ ಗೈರ ಸಮಜೂತಿಯಿಂದಾಗಿ ಬ್ರಿಟಿಷರಿಂದ ದಾರುಣವಾಗಿ ಸಾವಿಗೀಡಾಗುವ ನವವಿವಾಹಿತ ಅಚ್ಯುತ ಮತ್ತು ಮಹಾತ್ಮ ಗಾಂಧೀಜಿಯವರ ಕೊಲೆಗೆ ಪ್ರತಿಯಾಗಿ ನಡೆಯುವ ಗಾಂಧಿಭಕ್ತ ಸತ್ಯಬೋಧಾಚಾರ್ಯರ ಹತ್ಯೆ ಹಾಗೂ ಸಾವಿನಲ್ಲೂ ಒಂದಾಗುವ ರಾಘಪ್ಪ-ರಾಧಾಕಾಕೂರ ಮರಣ ದುರಂತಗಳ ಸರಮಾಲೆಯಂತಿವೆ.
ಪಾತ್ರಪ್ರಧಾನವಾದ ಈ ಕಾದಂಬರಿಯಲ್ಲಿ ವಚ್ಚಕ್ಕ, ರಾಧಾಕಾಕೂ, ಸತ್ಯಬೋಧಾಚಾರ್ಯರು, ರಾಘಪ್ಪ ಮತ್ತು ಕುಮಾರಿಲನಾಥರಂತಹ ವಿಶಿಷ್ಟ ಪಾತ್ರಗಳಿವೆ. ವಚ್ಚಕ್ಕ, ಸತ್ಯಬೋಧಾಚಾರ್ಯರ ಪಾತ್ರಗಳಂತೂ ಕನ್ನಡ ಸಾಹಿತ್ಯಲೋಕದಲ್ಲಿ ಶಾಶ್ವತವಾಗಿ ನಿಲ್ಲಬಲ್ಲ ಸಶಕ್ತ ಪಾತ್ರಗಳು. ವಚ್ಚಕ್ಕ “ಗಂಗವ್ವ ಗಂಗಾಮಾಯಿ”ಯ ಗಂಗವ್ವ , “ಗೃಹಭಂಗ”ದ ನಂಜಮ್ಮ ಮತ್ತು “ವೈಶಾಖ”ದ ರುಕ್ಮಿಣಿಯರ ಸಾಲಿನಲ್ಲಿ ನಿಲ್ಲಬಲ್ಲ ವಜನುಕಟ್ಟಾದ ಪಾತ್ರ.
“ಗೈರ ಸಮಜೂತಿ”ಯ ಇನ್ನೊಂದು ವಿಶೇಷವೆಂದರೆ ಇಲ್ಲಿ ಬರುವ ಹಲವು ಉಪಕಥೆಗಳು. ರಾಧಾಕಾಕೂ, ರಾಘಪ್ಪ ಮತ್ತು ಕುಮಾರಿಲನಾಥರ ಉಪಕಥೆಗಳು ಎಷ್ಟು ಚೆನ್ನಾಗಿವೆಯೆಂದರೆ ಇವುಗಳೇ ಪ್ರತ್ಯೇಕ ಕಥೆಗಳಿಗೆ ವಸ್ತುವಾಗುವಂತಿವೆ.
ಕಾದಂಬರಿಯಲ್ಲಿ ಬರುವ ಹಿಂದೂ ಮುಸ್ಲಿಂ ಸೌಹಾರ್ದದ ಕುರಿತ ವಿಶ್ಲೇಷಣೆ ನಿಷ್ಠುರ ಸತ್ಯವಾಗಿದೆ. ಗೈರ ಸಮಜೂತಿಯಿಂದಾಗಿ ಅಸಂಖ್ಯಾತ ಹಿಂದೂ ಮುಸ್ಲಿಮರು ಪ್ರಾಣ ಕಳೆದುಕೊಂಡಿದ್ದಾರೆ. ಗಾಂಧೀಜಿ ಹತ್ಯೆಯಾದಾಗ ಅದಕ್ಕೆ ಪ್ರತಿಯಾಗಿ ಅನೇಕ ಅಮಾಯಕ ಬ್ರಾಹ್ಮಣರ ದಾರುಣ ಹತ್ಯೆಯಾದದ್ದು ದುರಂತದ ಸಂಗತಿ.* ಇದೇ ರೀತಿಯ ಘಟನೆ ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ಪುನರಾವರ್ತನೆಯಾಯಿತು ಆದರೆ ಇಲ್ಲಿ ಬ್ರಾಹ್ಮಣರ ಬದಲಾಗಿ ಅಮಾಯಕ ಸಿಖ್ಖರ ಕಗ್ಗೊಲೆಯಾಯಿತು.**
ಕಾದಂಬರಿಗೆ ಪ್ರತಿಕ್ರಿಯೆಯ ರೂಪದಲ್ಲಿರುವ ಓ.ಎಲ್.ಎನ್.ರ ಬರಹದಲ್ಲಿ ಅವರು ಎತ್ತಿರುವ “ಸೆಕ್ಯುಲರಿಸಂ” ಕುರಿತ ಪ್ರಶ್ನೆ ಬಹುತೇಕ ಅವರ ಗೈರ ಸಮಜೂತಿಯಿಂದಾಗಿ ಉಂಟಾಗಿದೆ. ಸೆಕ್ಯುಲರಿಸಂನ್ನು ಕಾದಂಬರಿ ಎಲ್ಲೂ ನಿರಾಕರಿಸುವುದಿಲ್ಲ ಮತ್ತು ಸೆಕ್ಯುಲರಿಸಂ ಈ ದೇಶಕ್ಕೆ ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳಿದೆ. ಕಾದಂಬರಿಯ ಕೊನೆಯ ಭಾಗದಲ್ಲಿ ಬರುವ ಹಿಂದೂ – ಮುಸ್ಲಿಮರ ನಡುವಿನ ದ್ವೇಷದ ಕಥೆ ಕಪೋಲಕಲ್ಪಿತವಲ್ಲ ಇವೆಲ್ಲ ಆ ಕಾಲಘಟ್ಟದಲ್ಲಿ ನಡೆದ ಸತ್ಯ ಘಟನೆಗಳೇ ಆಗಿವೆ. ಇಂತಹ ಕೋಮುದ್ವೇಷದಲ್ಲಿ ತಮ್ಮದಲ್ಲದ ತಪ್ಪಿಗಾಗಿ ಎರಡೂ ಕಡೆಯ ಜನ ಅಪಾರ ಕಷ್ಟ ನಷ್ಟ ಅನುಭವಿಸಿದ್ದಾರೆ.
ಮಾಧವನ ಪಾತ್ರ ವಿಜೃಂಭಿಸಿದೆಯೆಂಬ ಓ.ಎಲ್.ಎನ್.ರ ಮಾತು ಆಧಾರವಿಲ್ಲದ್ದು. ಮಾಧವನಿಗೆ ಶಾಮರಾಯರು ಅವನ ತಪ್ಪನ್ನು ಸ್ಪಷ್ಟವಾಗಿ ತಿಳಿಸುತ್ತಾರೆ. ವಚ್ಚಕ್ಕ ಎತ್ತುವ ಪ್ರಶ್ನೆಗಳಿಗೆ ಉತ್ತರಿಸಲಾಗದ ಮಾಧವ ಮೈ ಪರಚಿಕೊಂಡು ಊಟ ಬಿಟ್ಟು ಎದ್ದು ಹೋಗುತ್ತಾನೆ. ಹೀಗೆ ಶಾಮರಾಯರು, ವಚ್ಚಕ್ಕಳೊಂದಿಗಿನ ವಾದದಲ್ಲಿ ಮಾಧವನ ಪೊಳ್ಳುತನ ಬಯಲಾಗುತ್ತದೆ. ಇನ್ನು ಇದೆಲ್ಲಕ್ಕಿಂತಲೂ ಮುಖ್ಯವಾಗಿ ವಚ್ಚಕ್ಕ ಮಾಧವನ ನಿರ್ಬಂಧವನ್ನು ತಿರಸ್ಕರಿಸಿ, ಹೆರಿಗೆ ಮಾಡಿಸಲು ಹುಸೇನಬಿಯ ಜೊತೆ ಹೊರಡುತ್ತಾಳೆ. ಇಲ್ಲೆಲ್ಲ ಮಾಧವನ ಟೊಳ್ಳುತನ ಮತ್ತು ನಿರರ್ಥಕತೆಗಳು ಸಾಬೀತಾಗುವಂತೆ ಚಿತ್ರಣಗೊಂಡಿವೆ. ಆದ್ದರಿಂದ ಇಲ್ಲಿ ವಚ್ಚಕ್ಕಳ ಸಾತ್ವಿಕ ಛಲ ಗೆಲ್ಲುತ್ತದೆಯೇ ಹೊರತು ಮಾಧವನ ಕೆಟ್ಟ ಹಠವಲ್ಲ. ವಚ್ಚಕ್ಕಳ ಮಾನವೀಯತೆಯ ಮುಂದೆ ಮಾಧವ ಸೋತು ಹತಾಶನಾಗುತ್ತಾನೆ. ಇಲ್ಲಿ ನಿಜಕ್ಕೂ ವಚ್ಚಕ್ಕಳ ಪಾತ್ರ ವಿಜೃಂಭಿಸಿದೆಯೇ ಹೊರತು ಮಾಧವನ ಪಾತ್ರವಲ್ಲ.
ಸೆಕ್ಯುಲರಿಸಂ ಎಂಬ ಪದ ರಾಜಕೀಯವಾಗಿ ಎಷ್ಟು ದುರ್ಬಳಕೆಯಾಗಿದೆಯೋ ಅದಕ್ಕಿಂತ ಹೆಚ್ಚು ಸಾಹಿತ್ಯದಲ್ಲಿ ಆಗುತ್ತಿರುವುದು ವಿಷಾದದ ಸಂಗತಿ. ಓ.ಎಲ್.ಎನ್. ಇಲ್ಲಿ ಪಾಮುಕನ ರಾಜಕೀಯ ಕಾದಂಬರಿಯ ಬಗ್ಗೆ ಉಲ್ಲೇಖಿಸಿರುವುದು ಅಪ್ರಸ್ತುತ. ಇದನ್ನೆಲ್ಲ ನೋಡಿದರೆ ಓ.ಎಲ್.ಎನ್. ಈ ಕಾದಂಬರಿಯನ್ನು ಒಂದು ರಾಜಕೀಯ ಕಾದಂಬರಿಯೆನ್ನುವಂತೆ ಮಿಸ್ ರೀಡ್ ಮಾಡಿರಬೇಕೆನಿಸುತ್ತದೆ. ಸೆಕ್ಯುಲರಿಸಂ ಹೆಸರಿನಲ್ಲಿ ಚೌಕಟ್ಟು ಹಾಕಿಕೊಂಡು ತನ್ನ ಐಡಿಯಾಲಜಿಗಳಿಗೆ ಹೊರತಾದ ಕೃತಿಗಳನ್ನು ನಿರಾಕರಿಸುವ ಸಂಕುಚಿತ ಮನೋಭಾವ ಓ.ಎಲ್.ಎನ್. ಅವರಲ್ಲಿ ಕಂಡುಬರುತ್ತದೆ.
“ಮಹಾಕಾವ್ಯ ಎಂಬುದೇ ಇಲ್ಲ, ಹಲವು ಭಾವಗೀತೆಗಳು ಸೇರಿ ಮಹಾಕಾವ್ಯವಾಗಿದೆ ಎಂಬ ಮಾತಿದೆ” ಎನ್ನುವ ಓ.ಎಲ್.ಎನ್.ರ ಹೇಳಿಕೆ ತೀರಾ ಹಾಸ್ಯಾಸ್ಪದವಾಗಿದೆ. ಈ ಮಾತು ನಿಜವೇ ಆಗಿದ್ದಲ್ಲಿ “ಸಮಗ್ರ ಕಾವ್ಯ” ತಂದ ಕವಿಗಳೆಲ್ಲ “ಮಹಾಕವಿ”ಗಳಾಗಿಬಿಡುವ ಅಪಾಯವಿದೆ.
ಸೆಕ್ಯುಲರಿಸಂ ಹೆಸರಿನಲ್ಲಿ ಕಾದಂಬರಿಯ ದೋಷಗಳನ್ನು ಪಟ್ಟಿ ಮಾಡಲು ಹೊರಡುವ ಓ.ಎಲ್.ಎನ್. ಅದನ್ನು ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದಾರೆ. ನಾಲ್ಕು ದಶಕಗಳಿಂದ ವಿಮರ್ಶೆ ಮಾಡುತ್ತಾ ಬಂದಿರುವ ಹಿರಿಯರಾದ ಓ.ಎಲ್.ಎನ್. ಹೀಗೆ ಬಿಡುಬೀಸಾಗಿ ಹೇಳಿಕೆ ನೀಡಬಾರದಾಗಿತ್ತು. ಒಟ್ಟಿನಲ್ಲಿ ಈ ಕಾದಂಬರಿ ಓ.ಎಲ್.ಎನ್.ರ ಐಡಿಯಾಲಜಿಗಳಿಗೆ ಹೊರತಾದ್ದರಿಂದ ಅವರಿಗೆ ಇಷ್ಟವಾಗಿಲ್ಲ. ಇದು ಓದುಗನಾಗಿ ಓ.ಎಲ್.ಎನ್.ರ ವೈಯಕ್ತಿಕ ಅಭಿಪ್ರಾಯ ಮಾತ್ರ. ಓ.ಎಲ್.ಎನ್.ರ ಇಂತಹ ಅವಸರದ ಹೇಳಿಕೆಯಿಂದ “ಗೈರ ಸಮಜೂತಿ”ಯ ಮಹತ್ವ ಕಡಿಮೆಯಾಗುವುದಿಲ್ಲ.***
ಒಟ್ಟಿನಲ್ಲಿ ಹಲವು ಉಪಕಥೆಗಳ ತೊರೆಗಳು ಸೇರಿ ಮಹಾನದಿಯಂತೆ ಪ್ರವಹಿಸುವ ಈ ದೀರ್ಘ ಕಥನದ ಓದು ಯಾವುದೇ ಮಹಾಕಾವ್ಯದ ಓದು ನೀಡಬಹುದಾದ ರಸಾನುಭವವನ್ನು ನೀಡುತ್ತದೆ. ಓದು ಭಾರವಾದಂತೆ ಭಾಸವಾಗುತ್ತಿರುವ ಇಂದಿನ ದಿನಗಳಲ್ಲಿ “ಗೈರ ಸಮಜೂತಿ” ಅಕ್ಷರಶಃ ವಾಚನಸುಖ ನೀಡುತ್ತದೆ.
ಸಾಹಿತ್ಯ ಕೃತಿಗಳು ಮಾತನಾಡಬೇಕೇ ವಿನಃ ಸಾಹಿತಿಗಳಲ್ಲ ಆದರೆ ಇತ್ತೀಚೆಗೆ ಕೃತಿಗಳು ಹಿನ್ನೆಲೆಗೆ ಸರಿದು ಸಾಹಿತಿಗಳು ಮಾತನಾಡುವಂತಾಗಿದೆ. ರಾಘವೇಂದ್ರ ಪಾಟೀಲರ “ಗೈರ ಸಮಜೂತಿ” ಕಾದಂಬರಿ ಒಂದು ಉತ್ಕೃಷ್ಟ ಕೃತಿಯಾಗಿದ್ದು ಮತ್ತೊಮ್ಮೆ ಕೃತಿ ಮುನ್ನೆಲೆಗೆ ಬಂದು ಮಾತನಾಡುವಂತಾಗಿದೆ ಇದು ನಿಜಕ್ಕೂ ಶ್ಲಾಘನೀಯ ಮತ್ತು ಸ್ವಾಗತಾರ್ಹ.
ಅಡಿ ಟಿಪ್ಪಣಿಗಳು:
* ರಂ.ಶಾ.ಲೋಕಾಪುರರ “ತಾಯಿಸಾಹೇಬ” ಕಾದಂಬರಿಯಲ್ಲಿ ಗಾಂಧೀಜಿಯವರ ಹತ್ಯೆಗೆ ಪ್ರತಿಯಾಗಿ ಯಾವುದೇ ತಪ್ಪೆಸಗದ ಅಮಾಯಕ ಬ್ರಾಹ್ಮಣರನ್ನು ಕೊಲ್ಲುವ ದೃಶ್ಯ ಕಾದಂಬರಿಯ ಆರಂಭದಲ್ಲೇ ಬರುತ್ತದೆ.
** ಮಲಯಾಳಂ ಲೇಖಕ ಉನ್ನಿಕೃಷ್ಣನ್ (ಅನು : ಕೆ.ಕೆ.ನಾಯರ್) ಅವರ “ಇಂದಿರಾ ಗಾಂಧಿ ಹತ್ಯೆಯ ಬಳಿಕ” ಕಾದಂಬರಿಯಲ್ಲಿ ಇಂದಿರಾ ಗಾಂಧಿ ಕೊಲೆಗೆ ಪ್ರತಿಯಾಗಿ ಅಮಾಯಕ ಸಿಖ್ಖರ ಮೇಲೆ ನಡೆದ ಅತ್ಯಾಚಾರ, ಕೊಲೆ ಮತ್ತು ದೌರ್ಜನ್ಯದ ಚಿತ್ರಣವಿದೆ.
*** ಬೆಂಗಳೂರಿನಿಂದ ಪ್ರಕಟಗೊಳ್ಳುವ ದೈನಿಕ ಒಂದರಲ್ಲಿ, ಮತ್ತೊಂದು ಮಾಸಿಕ ಪತ್ರಿಕೆಯಲ್ಲಿ ಬಂದಿರುವ ಪುಸ್ತಕ ವಿಮರ್ಶೆ ತೀರ ಪೂರ್ವಗ್ರಹ ಪೀಡಿತ ಓದಿನಿಂದ ಕೂಡಿವೆ. ತಮ್ಮ ವಿಚಾರಧಾರೆಗೆ ಹೊರತಾದ ಕೃತಿಗಳನ್ನು ಆಕ್ರಮಣಕಾರಿಯಾಗಿ ವಿರೋಧಿಸಿದಂತಿದೆ. “ಬೆಂಗಳೂರಿನಿಂದ ಪ್ರಕಟಗೊಳ್ಳುವ ದೈನಿಕ ಒಂದರಲ್ಲಿ “ ಬಳಸುವ ಪದಗಳಾದ “ಪೊಲಿಟಿಕಲಿ ಕರಪ್ಟ್” ಮತ್ತು “ಸೃಜನಶೀಲವಾಗಿ ಕರಪ್ಟ್” ಎಂಬ ಪದಗಳ ಬಳಕೆ ಬಹಳ ಕ್ರೂರವಾಗಿದೆ. ಬರೆಯಲು ಬಾರದವರೆಲ್ಲಾ ವಿಮರ್ಶೆ ಮಾಡಲು ಹೊರಟರೆ ಆಗುವ ಅವಾಂತರವಿದು. “ಪೊಲಿಟಿಕಲಿ ಮತ್ತು ಸೃಜನಶೀಲವಾಗಿ ಕರಪ್ಟ್” ಯಾರು ಎಂಬುದು ಸಾಹಿತ್ಯ ಮತ್ತು ಓದುಗ ವಲಯಕ್ಕೆ ಗೊತ್ತಿದೆ. ಸರಕು ಮುಗಿದ ದ್ವಿತೀಯ ದರ್ಜೆಯ ಲೇಖಕರು ಮತ್ತು ಬರೆಯಲು ಬಾರದ ಬುದ್ಧಿ ಜೀವಿಗಳು ಪೊಲಿಟಿಕಲಿ ಮತ್ತು ಸೃಜನಶೀಲವಾಗಿ ಕರಪ್ಟಾಗಿ ರಾಜಕೀಯ ಪಕ್ಷಗಳ ಹಿಂಬಾಲಕರಂತೆ ವರ್ತಿಸುತ್ತಾ ಅಸಹ್ಯ ಹುಟ್ಟಿಸಿದ್ದಾರೆ.
*******
5 thoughts on “ಗೈರ ಸಮಜೂತಿ – ಒಂದು ವಿಶ್ಲೇಷಣೆ”
ಸ್ವಾತಂತ್ರ್ಯ ಸಮಯದಲ್ಲಿ ಉತ್ತರ ಕರ್ನಾಟಕದ ಬ್ರಾಹ್ಮಣ ಮನೆತನದ ಸಂಕಷ್ಟಗಳನ್ನು ಚಿತ್ರಿಸಿದ ರೀತಿ ಅನನ್ಯ. ಗೈರ ಸಮುಜಾತಿ ಬೃಹತ್ ಕಾದಂಬರಿ ಬರೆದ ರಾಘವೇಂದ್ರ ಪಾಟೀಲ್ ಅವರಿಗೆ ಅಭಿನಂದನೆಗಳು ಅಂತೆಯೇ ಅದನ್ನು ಅರ್ಥವತ್ತಾಗಿ ವಿಮರ್ಶಿಸಿದ ವಿಕಾಸ ಹೊಸಮನಿ ಅವರಿಗೆ ಕೂಡ ಅಭಿನಂದನೆ ಸಲ್ಲಬೇಕು.
‘ಗೈರ ಸಮಜೂತಿ’ – ಕಾದಂಬರಿಯ ಹೆಸರೇ ಹೊಸತು. ಉತ್ತರ ಕರ್ನಾಟಕದ ಬ್ರಾಹ್ಮಣ ಸಮುದಾಯದ ಸ್ವಾತಂತ್ರ್ಯ ಸಮಯದ ತಲ್ಲಣವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕ ರಾಘವೇಂದ್ರ ಪಾಟೀಲರು. ಕಾದಂಬರಿಯನ್ನು ಎಳೆ ಎಳೆಯಾಗಿ ಬಿಡಿಸಿ ಉತ್ತಮ ವಿಮರ್ಶೆ ಮಾಡಿದ್ದಾರೆ ವಿಕಾಸ ಹೊಸಮನಿ. ಇಬ್ಬರಿಗೂ ಅಭಿನಂದನೆಗಳು.
ವಿಸ್ತೃತ ಅಧ್ಯಯನದಿಂದ ಕೃತಿಯ ಒಳಹೊರಗನ್ನು ವಿಶ್ಲೇಷಿಸಿದ ಪರಿ ನಿಜಕ್ಕೂ ಶ್ಲಾಘನೀಯ! ನಿಮ್ಮ ಓದು ಬರಹ ನಿರಂತರ ಸಾಗುತ್ತಿರಲಿ ವಿಕಾಸ.
ಸರ್,
ಗೈರಸಮಜೂತಿ ಕಾದಂಬರಿಯ ಬಗೆಗಿನ ತಮ್ಮ ಗ್ರಹಿಕೆ ನೈಜ ಸ್ವರೂಪದ್ದಾಗಿದೆ. ಸಮಗ್ರ ಕಾದಂಬರಿಯ ಬಗೆಗಿನ ತಮ್ಮ ವಿಶ್ಲೇಷಣೆ ಶ್ಲಾಘನೀಯ.
ಚೆನ್ನಾಗಿ ಮೂಡಿಬಂದಿದೆ