ಮೂಲ: ಡಾ. ಪ್ರತಿಭಾ ರೇ
ಕನ್ನಡ: ಡಾ. ವಿಶ್ವನಾಥ ಕಾರ್ನಾಡ್
ಪುಟ: 370
ಬೆಲೆ: ರೂ.200
ದೂರವಾಣಿ: 8108491647
ವೇದಕ್ಕಿಂತಲೂ ಸರಳ ಶೈಲಿ ಹಾಗೂ ಮಹತ್ತಿನಲ್ಲೂ, ತೂಕದಲ್ಲೂ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟ ಮಹಾಭಾರತವು ಜಗತ್ತಿನಾದ್ಯಂತ ಅನೇಕ ಭಾಷೆಗಳಿಗೆ ಅನುವಾದಗೊಂಡ ಏಕೈಕ ಗ್ರಂಥ. ಈ ಕಥನ ಭಂಡಾರವು ಭಾರತದ ಅಪೂರ್ವ ಹಿಂದೂ ನಾಗರೀಕತೆ, ಪರಂಪರೆ, ಶಾಸ್ತ್ರ, ಸಂಪ್ರದಾಯ, ಸಂಸ್ಕೃತಿ , ಜ್ಞಾನ, ವಿಜ್ಞಾನಗಳನ್ನೊಳಗೊಂಡು ಆಧ್ಯಾತ್ಮಿಕ ಜೀವನಶೈಲಿಯನ್ನೂ ಭಾರತಕ್ಕೆ ಕರುಣಿಸಿದ ಮೇರುಗ್ರಂಥವೆಂದರೂ ಸರಿಯೆ! ಇಂತಹ ಬೃಹತ್ ಧಾರ್ಮಿಕ ಸಂಹಿತೆ ವಿಶ್ವದಲ್ಲೇ ಬೇರೊಂದಿಲ್ಲ ಎನ್ನುವುದು ನಮ್ಮ ಹೆಗ್ಗಳಿಕೆ! ಅದರದೊಂದು ಪ್ರಮುಖ ಎಳೆಯಾದ ದ್ರೌಪದಿಯ ಪಾತ್ರಕ್ಕೆ ಒರಿಸ್ಸಾದ ಸಂವೇದನಾಶೀಲ ಲೇಖಕಿ ಎಂದೇ ಪ್ರಸಿದ್ಧರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಪ್ರತಿಭಾ ರೇ ಅವರು ಹೃದಯಸ್ಪರ್ಶಿಯಾಗಿ, ಮನೋವಿಶ್ಲೇಷಣಾತ್ಮವಾಗಿ, ‘‘ಯಾಜ್ಞಸೇನಿ”’ ಎಂಬ ಕಾದಂಬರಿಯ ರೂಪ ಕೊಟ್ಟಿರುವರು, ಈ ಕೃತಿಗೆ ‘ ಮೂರ್ತಿದೇವಿ ಪ್ರಶಸ್ತಿ’ ಯು ದೊರಕಿದೆ . ಈ ಕೃತಿಯನ್ನು ಶ್ರೀ ಶಂಕರಲಾಲ್ ಪುರೋಹಿತ್ ಅವರು ಹಿಂದಿಗೆ ಭಾಷಾಂತರಿಸಿದ್ದಾರೆ. ಮುಂಬೈಯ ಮನೋಜ್ಞ ಕಥೆಗಾರ, ವಿಮರ್ಶಕರಾದ ಡಾ. ವಿಶ್ವನಾಥ ಕಾರ್ನಾಡ್ ಅವರು ಈ ಕೃತಿಯನ್ನು 2012ರಲ್ಲಿ ಕನ್ನಡಕ್ಕೆ ಅನುವಾದಿಸಿರುವರು. ಒಂದೇ ವರ್ಷದಲ್ಲಿ ಅದು ದ್ವಿತೀಯ ಮುದ್ರಣವನ್ನು ಕಂಡಿರುವುದು ಹಾಗೂ ಮುಂಬೈಯ ಪ್ರಸಿದ್ಧ ಪತ್ರಿಕೆ, ‘ಕರ್ನಾಟಕ ಮಲ್ಲ’ದಲ್ಲಿ ಧಾರವಾಹಿಯಾಗಿಯೂ ಪ್ರಕಟಗೊಂಡು ಜನಮೆಚ್ಚುಗೆ ಗಳಿಸಿರುವುದು ಕನ್ನಡ ಸಾರಸ್ವತ ಲೋಕಕ್ಕೆ ಡಾ. ಕಾರ್ನಾಡರಿಂದ ಸಂದ ಬಹುದೊಡ್ಡ ಕೊಡುಗೆಯೆಂದೇ ಹೇಳಬೇಕು!
“ಇತೀ
ನಿನ್ನ ಪ್ರಿಯ ಸಖಿ,
ಇತೀ ಹೇಳಿಯಾದ ನಂತರ ಏನೂ ಬರೆಯಲಾಗಲಿಲ್ಲ ವೆಂದೆನಿಸುತ್ತದೆ. ಮಹಾಜೀವನದ ಸುಖ-ದುಃಖಗಳಿಂದ ತುಂಬಿದ ದೀರ್ಘ ಕಥೆ ಮಹಾಕಾಲದ ವೃಕ್ಷದ ಮೇಲೆ ಬರಿದು ಪುಟಗಳಂತೆ ಬಿದ್ದಿದೆ. ಮೃತ್ಯು ಪಥದಯಾತ್ರಿ ಈ ಸಂಸಾರದ ಎಲ್ಲವನ್ನೂ ಬಿಟ್ಟು ಹೋಗುವಂತೆ.ಇದು ಮನುಷ್ಯನ ಯೋಚನೆ ಮಾತ್ರ.ಯಾರು ಏನನ್ನೂ ಬಿಟ್ಟು ಹೋಗುವುದಿಲ್ಲ. ಈ ಭಂಗುರಕಾಯ ಬಿಟ್ಟು ಹೋಗುತ್ತದೆ. ಅದರ ಮೇಲೆ ಯಾರದೂ ನಿಯಂತ್ರಣವಿರುವುದಿಲ್ಲ. ಎಂದೂ ಅವನದಲ್ಲದ ಆತ್ಮಶರೀರವನ್ನು ಬಿಟ್ಟು ಹೋಗುತ್ತದೆ” ಎಂಬ ದ್ರೌಪದಿಯ ಸ್ವಗತದಿಂದ ನಶ್ವರತೆಯ ಕಟು ಸಂದೇಶವನ್ನು ಬಿತ್ತುತ್ತ ನವುರಾಗಿ ಬಿಚ್ಚಿಕೊಳ್ಳುವ, ‘ಯಾಜ್ಞಸೇನಿ’ಯು ಮಹಾಭಾರತ ಕಥನದ ಪೂರ್ಣತೆಯನ್ನು ಕೆಲವೆಡೆ ಸ್ಥೂಲವಾಗಿಯೂ ಅಲ್ಲಲ್ಲಿ ಸೂಕ್ಷ್ಮವಾಗಿಯೂ ಕಟ್ಟಿಕೊಡುತ್ತದೆ. ಪ್ರಧಾನತಃ ಪಾಂಡವರು ಮತ್ತು ಕೌರವರು ರಾಜ್ಯಕ್ಕಾಗಿ ಛಲ ಮಾತ್ಸರ್ಯದಿಂದ ಧರ್ಮ, ಅಧರ್ಮಗಳೆಂಬ ಸಿದ್ಧಾಂತಗಳ ರೂಪದಲ್ಲಿ ದ್ರೌಪದಿ ಎಂಬ ಶ್ರೇಷ್ಠ ಸ್ತ್ರೀಯೊಬ್ಬಳ ಮೇಲೆ ನಡೆಸುವ ನಾನಾ ಬಗೆಯ ಅಪಮಾನ, ಕ್ರೌರ್ಯ, ಅತ್ಯಾಚಾರ ಪ್ರಯತ್ನಗಳು ಹಾಗೂ ಅವಕ್ಕೆಲ್ಲ ಬಲಿಯಾಗುವ ಅವಳು ಆ ಹಿಂಸೆಗಳನ್ನೆಲ್ಲ ಸ್ತ್ರೀಕುಲದ ಉದ್ಧಾತಧೇಯೋದ್ದೇಶಕ್ಕಾಗಿ ಸಹಿಸಿ, ಸಂಭಾಳಿಸಿಕೊಂಡು ಸಾಗುವ ಸಂದರ್ಭಗಳಲ್ಲಿನ ಅವಳ ಯಾತನೆ, ತುಮುಲಗಳನ್ನು ಮಾರ್ಮಿಕವಾಗಿ ಚಿತ್ರಿಸಿರುವ ಅಪೂರ್ವ ಗದ್ಯವಿದು.
ಮೂಲ ಶ್ರೀ ಮನ್ಮಹಾಭಾರತವು ಅತಿಮಾನುಷ ಕಥಾ ಹಂದರ. ಆದರೆ ಲೇಖಕಿಯ ಆಳವಾದ ಮಹಾಭಾರತ ಅಧ್ಯಯನ, ಅದಕ್ಕೆ ತಕ್ಕಂಥ ಅವರ ತೌಲನಿಕ ಚಿಂತನಾ ಕ್ರಮವು ಇಲ್ಲಿ ದ್ರೌಪದಿಯ ಕಾಲ್ಪನಿಕ ಒಳತೋಟಿಯನ್ನು ಪ್ರವೇಶಿಸಿ ಅವಳ ಜೀವನದುದ್ದಗಲಕ್ಕೂ ಸಂಚರಿಸುತ್ತ ಇಂದಿನ ಆಧುನೀಕ ಸ್ತ್ರೀಯರ ಮನೋಭೂಮಿಕೆಗೂ ಕನ್ನಡಿ ಹಿಡಿವಂತೆ ಅಕ್ಷರರೂಪಕ್ಕಿಳಿದಿರುವುದು ಹಾಗೂ ಅಂದಿನ ಸ್ತ್ರೀಯರ ಜೀವನ ಶೈಲಿ,ಆಚಾರ,ವಿಚಾರ, ಸಂಸ್ಕೃತಿ , ಸಂಪ್ರದಾಯಗಳು, ಇಂದಿನ ಸ್ತ್ರೀಯರ ವಿಚಾರಕ್ಕೆ ಹೋಲಿಸಿದರೆ ಅಜಗಜಾಂತರವೆಂಬ ಸತ್ಯವನ್ನೂ ತೆರೆದಿಟ್ಟಿರುವುದು ಈ ಕೃತಿ ವಿಶೇಷತೆಯ ಪ್ರಮುಖ ಅಂಶ. ಸ್ತ್ರೀ ಪ್ರಾಧಾನ್ಯವೇ ಈ ಬರಹದ ಮೂಲ ಆಶಯ. ಆದರೆ ಮಹಾಭಾರತದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯೇ ಢಾಳಾಗಿ ವಿಜೃಂಭಿಸುತ್ತ ಹೆಣ್ಣೊಬ್ಬಳು ಯಾವತ್ತಿಗೂ ಪುರುಷನ ನಾನಾ ರೂಪದ ಅಗತ್ಯ, ಆವಶ್ಯಕತೆಗಳನ್ನು ನಿವಾರಿಸುವ ಭೋಗದ ವಸ್ತು ಮಾತ್ರ! ಅವಳನ್ನು ಸದಾ ಹತೋಟಿಯಲ್ಲಿಟ್ಟುಕೊಳ್ಳಬೇಕು; ಪ್ರತಿಯೊಬ್ಬ ಪುರುಷನ ಏಳಿಗೆ ಮತ್ತು ಅವನತಿಗೆ ಸ್ತ್ರೀಯೇ ಮುಖ್ಯಕಾರಣ ಎಂಬಂಥ ಮನೋಧರ್ಮದಿಂದ ಅಮಾಯಕ ಸ್ತ್ರೀಯರ ಮೇಲೆ ನಡೆಸಲ್ಪಡುವ ಅಧಿಕಾರ, ದಬ್ಬಾಳಿಕೆಯಂಥ ಪ್ರಮಾದಗಳನ್ನು ಲೇಖಕಿಯು ಎಲ್ಲೂ ಒಂದು ಕಟುಮಾತು, ವ್ಯಂಗ್ಯ ಚಿತ್ರಣದ ಮೂಲಕ ಉಲ್ಲೇಖಿಸದೆ ದ್ರೌಪದಿ ಹಾಗೂ ಉಳಿದ ಸ್ತ್ರೀ ಪಾತ್ರಗಳ ಮೂಲಕವೇ ಅನಾವರಣಗೊಳಿಸಿರುವುದು ಸ್ತ್ರೀಕುಲದ ಮೇಲೆ ಅಪಾರ ಗೌರವ, ಪ್ರೀತಿಯನ್ನು ಸೃಷ್ಟಿಸುತ್ತದೆ. ಜೊತೆಗೆ ಹುಸಿ ಗಂಡಸುತನದ ಪುರುಷರಲ್ಲಿ ಅದು ಅಳುಕು, ಗೊಂದಲವನ್ನು ಮೂಡಿಸುವಲ್ಲೂ ಸಫಲವಾಗಿರ ಬಹುದು.
“ಅರ್ಥಾತ್ ಜೀವನದಲ್ಲಿ ಕಣ್ಣೀರಿಗೂ ಬೆಲೆಯಿದೆ. ಕಂಬನಿ ನೇತ್ರಗಳಿಂದ ವಿಮೋಚನೆಗೊಳ್ಳುವುದೂ ಒಂದು ಸೌಂದರ್ಯ. ಅದರಂತೆಯೇ ಅದು ದುಃಖದ ಮೌಲ್ಯವೂಆಗಿದೆ.ದುಃಖದ ಹಿಂದೆ ಸುಖ ನಿಗದಿತವಾಗಿರುತ್ತದೆ” ಎಂದು ದ್ರೌಪದಿಯ ಕಣ್ಣೀರನ್ನು ಕಂಡು ಶ್ರೀಕೃಷ್ಣನು ಒಂದುಕಡೆ ಆಡುವ ಮಾತು, ಸೃಷ್ಟಿಯ ಅರ್ಥವನ್ನೂ ಅದರ ಭಂಗುರತೆಯನ್ನೂ ವಿಶದೀಕರಿಸುತ್ತದೆ. ಇಂಥ ನೂರಾರು ಉಕ್ತಿಗಳು ಕಥೆಯುದ್ದಕ್ಕೂ ಉಲ್ಲೇಖಗೊಳ್ಳುತ್ತ ಓದುಗನಲ್ಲಿ ಆಧ್ಯಾತ್ಮಿಕ ಎಚ್ಚರವನ್ನು ಉದ್ದೀಪಿಸುತ್ತವೆ. “ನಿಜವಾಗಿ ಈ ಭೂಮಿಯ ಮೇಲೆ ಗಂಡಿನಲ್ಲಿ ಪಾಪ ಮಾಡುವ ಇಚ್ಛೆ ತುಂಬಿಕೊಂಡಿದೆ. ಹೆಜ್ಜೆಹೆಜ್ಜೆಗೆ ಧರ್ಮ, ಸತ್ಯ, ನ್ಯಾಯದ ಮಾನಹಾನಿಯಾಗುತ್ತಿರುತ್ತದೆ. ಸರಿಯೇ ಇದೆ. ಪ್ರತಿಪಾಪದ ಶಿಕ್ಷೆ ಮೃತ್ಯುದಂಡವೇ ಆಗಿದ್ದರೆ ಭೂಮಿಯ ಮೇಲೆ ಗಂಡೇ ಉಳಿಯುತ್ತಿರಲಿಲ್ಲ! ನಮ್ಮ ಸಮಾಜದ ಚಲನೆಯೇ ಹೀಗಿದೆ.. .ಪಾಪಕ್ಕಾಗಿ ನಾರಿಗೆ ಜೀವನವಿಡೀ ದುಃಖ ಸಹಿಸಬೇಕಾಗುತ್ತದೆ!” ಎಂಬ ಯಾಜ್ಞಸೇನಿಯ ಮಾತು, ಇಂದಿನ ವಾಸ್ತವತೆಯೂ ಹೌದಲ್ಲವೇ? ಎಂದೆನಿಸುತ್ತದೆ.
ವಿಶೇಷ ಶಸ್ತ್ರಾಸ್ತ್ರಗಳನ್ನು ಗಳಿಸಲು, ನೃತ್ಯ ಸಂಗೀತಕಲೆಗಳನ್ನು ಕಲಿಯಲು ಐದು ವರ್ಷ ಸ್ವರ್ಗಕ್ಕೆ ಹೋದ ಅರ್ಜುನ ಅಲ್ಲಿ ಊರ್ವಶಿಯೊಂದಿಗಿನ ವಿಲಾಸಕ್ಕೆ ಒಪ್ಪದೆ ಅವಳಿಂದ ಶಪಿತನಾಗಿ ಒಂದು ವರ್ಷ ನಪುಂಸಕತ್ವಕ್ಕೆ ತುತ್ತಾಗಿ ಹಿಂದಿರುಗುತ್ತಾನೆ. ಆದರೆ ಅಷ್ಟು ದೀರ್ಘಕಾಲ ತನ್ನ ಪ್ರೇಮದ ಪತಿಯ ಸಾಂಗತ್ಯವನ್ನು ಬಯಸುತ್ತ ಕಾದು ಕುಳಿತ ದ್ರೌಪದಿಗೆ ಅವನಿಂದ ವಿಷಯ ತಿಳಿದು ಆಗುವ ಆಘಾತ, ಆನಂತರ ಅವಳು ಪಡುವ ಪಾಡುಹಾಗೂ ಅಜ್ಞಾತವಾಸದ ಸಲುವಾಗಿ ಪಾಂಡವರು ಒಂದು ವರ್ಷ ವಿರಾಟರಾಜನ ಆಶ್ರಯಲ್ಲಿದ್ದಾಗ ತನ್ನ ಪತಿಯು ಬೃಹನ್ನಳನಾಗಿ ಸ್ತ್ರೀಯಂತೆ ಸಿಂಗರಿಸಿಕೊಂಡು ನೃತ್ಯ, ಸಂಗೀತದ ಮೂಲಕ ಆಸ್ಥಾನದ ಸ್ತ್ರೀಯರನ್ನು ಮನರಂಜಿಸುವುದನ್ನು ಕಾಣುವ ದ್ರೌಪದಿಯ ಮನಸ್ಥಿತಿಯನ್ನು ಲೇಖಕಿಯು ವರ್ಣಿಸಿರುವುದನ್ನು ಯೋಚಿಸಿದರೆ ಸ್ತ್ರೀಯರ ಅಸಹಾಯಕತೆಯ ಕರಾಳ ದರ್ಶನ ಕಣ್ಣೆದುರು ಸುಳಿಯುತ್ತದೆ.
ಕೃಷ್ಣನ ಪಟ್ಟದರಾಣಿ ಸತ್ಯಭಾಮೆಗೂ, ಪಂಚಪತಿಯರೊಂದಿಗಿನ ದ್ರೌಪದಿಯ ದಾಂಪತ್ಯವೇ ಆದರ್ಶವೆನಿದಾಗ‘ತನ್ನ ಗಂಡನಿಗೆ ಎಂಟು ಜನ ಪಟ್ಟದರಾಣಿಯರು ಮತ್ತು ಅಸಂಖ್ಯಾತ ಉಪಪತ್ನಿಯರಿದ್ದರೂ ಅವರು ಯಾರೂ ಶ್ರೀಕೃಷ್ಣನ ಮನಸ್ಸನ್ನು ಗೆಲ್ಲಲಾಗದಿದ್ದಾಗ ನೀನು ಹೇಗೆ ಆ ಮಹಾ ಪುರುಷನನ್ನು ಸಖಿಯಾಗಿ ಗೆದ್ದೆ?’ ಎಂಬ ಅವಳ ಪ್ರಶ್ನೆ ಮತ್ತು ಆದರ್ಶ ಪತ್ನಿಯಾಗುವುದರ ಕುರಿತು ದ್ರೌಪದಿಯು ಅವಳಿಗೆ ನೀಡುವ ಸಲಹೆಯು ಸರ್ವಕಾಲಕ್ಕೂ ಆದರ್ಶಮಯ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರದ ಮಹತ್ವವನ್ನು ಸೂಚಿಸುತ್ತದೆ.
ಕಾದಂಬರಿಯು ಆದಿಯಿಂದ ಅಂತ್ಯದವರೆಗೆ ಶುದ್ಧ ಲೌಕಿಕ ನೆಲೆಯಲ್ಲಿ ಸಾಗುತ್ತದೆ.ಆದರೆ ಸಾರದಲ್ಲಿ ಪಾರಮಾರ್ಥಿಕ ಸತ್ಯದ ಮಿಂಚು ಹೊಳೆಯುತ್ತ ಓದುಗನನ್ನು ಅಲ್ಲಲ್ಲಿ ಚಿಂತನೆಗೆ ಹಚ್ಚುತ್ತ, ಉದ್ವೇಗಿಸುತ್ತ, ಆಗಾಗ ಸಾಂತ್ವನಿಸುತ್ತ ಮರಳಿ ಸಂಘರ್ಷ, ತಳಮಳ, ಕರುಣೆ, ಪ್ರೀತಿ, ಪಶ್ಚಾತ್ತಾಪಗಳಂಥ ನವರಸಭಾವಗಳನ್ನು ಉದ್ದೀಪಿಸುತ್ತ ಕೊನೆಯಲ್ಲಿ ಇಡೀ ಕಥಾನಕದ ಸೂತ್ರಧಾರಿಯಾಗಿ, ದ್ರೌಪದಿಯ ಆತ್ಮ ಸಖನಾಗಿ, ಪಾಂಡವರ ಆಪತ್ಭಾಂದವನಾದ ಶ್ರೀಕೃಷ್ಣ ಪರಮಾತ್ಮನ ಲೀಲೆಯೇ ಇದಕ್ಕೆಲ್ಲ ಕಾರಣ ಎಂಬ ಸತ್ಯದ ಮೂಲಕ ನಮ್ಮನ್ನು ಸಮಾಧಾನಕ್ಕೆ ತಲುಪಿಸುವ ತಂತ್ರವೇ ಕೃತಿಯ ಯಶಸ್ಸು.
ಪ್ರಸ್ತುತ ಸಮಾಜದಲ್ಲಿ ಒಂದು ಸಾಮಾನ್ಯ ಹೇಳಿಕೆಯಿದೆ.‘ಸಾಗರದ ಆಳವನ್ನಾದರೂ ಅಥವಾ ಮೀನಿನ ಹೆಜ್ಜೆಯನ್ನಾದರೂ ತಿಳಿಯಬಹುದು. ಹೆಣ್ಣಿನ ಮನಸ್ಸನ್ನು ಅರಿಯುವುದು ಅಸಂಭವ!’ ಎಂದು. ಆದರೆ ಈ ಮಾತು ಅಷ್ಟೊಂದು ಅನುಭವ ಜನ್ಯವಲ್ಲವೆಂದೇ ಹೇಳಬೇಕು. ಏಕೆಂದರೆ ನಮ್ಮ ಪುರುಷ ಪ್ರಧಾನ ಮನೋಧರ್ಮವು ಅನಾದಿಕಾಲದಿಂದಲೂ ಹೆಣ್ಣನ್ನು ಒಬ್ಬಳು ಮಮತೆಯ ಮಾತೆಯಾಗಿ, ಅಕ್ಕರೆಯ ಸಹೋದರಿಯಾಗಿ, ಮುದ್ದಿನ ಮಡದಿಯಾಗಿ ಹಾಗೂ ಪ್ರೇಮದ ಸಂಗಾತಿಯಾಗಿಯೇ ಪರಿಭಾವಿಸುತ್ತ ಅವಳ ಹತ್ತಾರು ಪಾತ್ರಗಳನ್ನು ತಮ್ಮ ಸೀಮಿತ ದೃಷ್ಟಿಕೋನದಿಂದಲೇ ಅರಿಯಲು ಪ್ರಯತ್ನಿಸುತ್ತ ದೊರೆತ ಒಂದಿಷ್ಟು ಜ್ಞಾನದಿಂದಲೇ ಮತ್ತೆಮತ್ತೆ ಅವಳನ್ನು ತೂಗಿ, ಅಳೆದು ನೋಡಿ,‘ಇಡಿಯಾಗಿ ಗ್ರಹಿಸಿಬಿಟ್ಟೆವು!’ ಎಂಬ ಕಲ್ಪನೆಯಿಂದ ಈ ಮೇಲಿನ ಗಾದೆ ಹುಟ್ಟಿಕೊಂಡಿರಬಹುದೇ ಹೊರತು ಸಮರ್ಥ ಸ್ತ್ರೀಯೊಬ್ಬಳನ್ನು ಗಂಡು ಸಹಜ ಅಹಂಕಾರ, ಪೂರ್ವಾಗ್ರಹಗಳಿಂದ ತುಸು ಹೊರಗೆ ನಿಂತು ಅವಳನ್ನು ಗೌರವದ ಸ್ತ್ರೀಯಾಗಿ, ಆತ್ಮೀಯ ಗೆಳತಿಯಾಗಿ ಸ್ವೀಕರಿಸಿ ಅವಳ ಆಂತರ್ಯವನ್ನು ತಿಳಿಯಲು ಹೊರಟರೆ ಬಹುಶಃ ಆಗ ಅವಳು ಜಗತ್ತಿನ ಶ್ರೇಷ್ಠ ಸೃಷ್ಟಿಗಳಲ್ಲಿ ಪ್ರಥಮಳು ಎಂಬುದನ್ನು ಈ ಕೃತಿಯು ದೃಢೀಕರಿಸುತ್ತ ಸಾಗುತ್ತದೆ.
ಸಾಮಾಜಿಕ ಆರೋಗ್ಯವನ್ನು ಕಾಪಾಡುವ ಶಕ್ತಿಯು ಉಳಿದೆಲ್ಲ ಕಲೆಗಳಿಗಿಂತಲೂ ಸಾಹಿತ್ಯಕ್ಕೆ ಅಧಿಕವಿದೆಯಾದ್ದರಿಂದ ಅಂಥ ಸಾಹಿತ್ಯವೇ ಬರಹಗಾರರ ಗುರಿಯಾಗಬೇಕು ಎಂಬುದಕ್ಕೆ ಈ ಕಾದಂಬರಿಯು ನ್ಯಾಯ ಒದಗಿಸುತ್ತದೆ. ಈ ಕೃತಿಯು ಅಲ್ಲಲ್ಲಿ ತಿದ್ದುಪಡಿಯ ತೊಡಕು ಮತ್ತು ಕೆಲವೆಡೆ ಹೆಚ್ಚು ಚಾಲ್ತಿಯಲ್ಲಿಲ್ಲದ ಕ್ಲಿಷ್ಟಪದಗಳು ನಿಘಂಟಿನ ಅಗತ್ಯವನ್ನು ಕೋರುತ್ತವೆಯಾದರೂ ಕಾದಂಬರಿಯು ತೀವ್ರ ಕುತೂಹಲವನ್ನು ಕೆರಳಿಸುತ್ತ ಸಾಗುವುದರಿಂದಾಗಿ ಅಂಥ ಪದಗಳ ಅರ್ಥವನ್ನು ಮುಂದಿನ ಪದವೋ, ವಾಕ್ಯವೋ ತಟ್ಟನೆ ತಿಳಿಸುತ್ತ ಓದುವ ಸುಖಕ್ಕೆಅಡಚಣೆಯಾಗದಂತೆ ಮಾಡುತ್ತದೆ. ಆರಂಭದಿಂದ ಅಂತ್ಯದವರೆಗೆ ಓದುಗನ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರುವ ಕಥೆಯ ಕೊನೆಯಲ್ಲಿ ದ್ರೌಪದಿಯುತನ್ನ ಪಂಚಪತಿಯರೊಡನೆ ಸ್ವರ್ಗದೆಡೆಗೆ ಸಾಗುವ ಹಿಮಾಲಯದ ಹಾದಿಯ ಮಧ್ಯೆ ಕುಸಿದು ಬೀಳುವ ದೃಶ್ಯವು, ‘ಯಾಜ್ಞಸೇನಿಯಂಥ ಮೇರು ಸ್ತ್ರೀಯು ಕೂಡ ಸ್ವರ್ಗ ಸೇರಲಾಗಲಿಲ್ಲವಲ್ಲ!’ ಎಂಬ ನಿರಾಶೆಯು ಕಾಡಬಹುದಾದರೂ ಮರುಕ್ಷಣ ಅವಳು ತನ್ನ ಆತ್ಮಸಖ, ಅನವರತರಕ್ಷಕ ಶ್ರೀ ಕೃಷ್ಣ ಪ್ರಜ್ಞೆಯಲ್ಲಿ ಲೀನಳಾಗಿ ನಮ್ಮೆಲ್ಲ ತಳಮಳಗಳಿಗೂ ತೆರೆಬೀಳುವುದು ಕಾದಂಬರಿಯ ಗೆಲುವು.
ಡಾ. ಕಾರ್ನಾಡರ ಭಾಷೆಯು ಪುರಾಣ ಕಥನ ಶೈಲಿಗೆ ಎರಕವಾಗಿ ಹೊಸ ಮೆರುಗು ನೀಡಿದೆ. ಸ್ವತಂತ್ರ ಬರಹದಂತೆ ಅನುವಾದ ಸಾಹಿತ್ಯವೂ ಸೃಜನಶೀಲತೆ ಮತ್ತು ಪರಿಶ್ರಮವನ್ನು ಬೇಡುವಂಥದ್ದು. ಮೂಲ ಭಾಷೆಯ ಸೂಕ್ತ ತಿಳುವಳಿಕೆ ಅದಕ್ಕೆಅತ್ಯಗತ್ಯ.ಅಂಥ ಸಾಹಿತ್ಯಕೃಷಿಗೆ ಒಲವು ತೋರಿ ಮೂಲ ಬರಹದ ಆಶಯಕ್ಕೆ ಎಲ್ಲೂ ಚ್ಯುತಿ ಬಾರದಂತೆ, ಇಡೀ ಕಾದಂಬರಿಗೆ ಕಾವ್ಯಾತ್ಮಕ ರೂಪ ನೀಡಿದ ಡಾ.ಕಾರ್ನಾಡರ ಪ್ರತಿಭಾ ನೈಪುಣ್ಯತೆಯು ಇಲ್ಲಿ ಹೊಳಪಾಗಿ ಕಾಣಿಸುತ್ತದೆ. ಇಂಥದ್ದೊಂದು ಗ್ರಂಥದ ಮೂಲಕ ಓದುಗರಿಗೆ ರಸದೌತಣ ಉಣಬಡಿಸಿದ ಅವರಿಗೆ ಓದುಗ ಬಳಗವು ಋಣಿಯಾಗಬೇಕಿದೆ.
*****
5 thoughts on “‘ಯಾಜ್ಞಸೇನಿ’- ಒಂದು ಅವಲೋಕನ”
“ಜೀವನದಲ್ಲಿ ಕಣ್ಣೀರಿಗೂ ಬೆಲೆ ಇದೆ. ಕಂಬನಿ ನೇತ್ರಗಳಿಂದ ವಿಮೋಚನೆಗೊಳ್ಳುವದೂ ಒಂದು ಸೌಂದರ್ಯ. ಅದರಂತೆ ಅದು ದುಃಖದ ಮೌಲ್ಯವೂ ಆಗಿದೆ. ದುಃಖದ ಹಿಂದೆ ಸುಖ ನಿಗದಿತವಾಗಿರುತ್ತದೆ.”
ಎಂತಹ ಅದ್ಭುತ ಸಾಲುಗಳು. ಓದಿದಾಗ ಮನಸಿಗೆ ಮುದ ನೀಡಿತು. ಸಂತೋಷವಾಯಿತು
“ಯಾಜ್ಞಸೇನಿ” ಇಂತಹ ನೂರಾರು ಹೃದಯಸ್ಪರ್ಶಿ ಮಾತುಗಳಿಂದ ಸಮೃದ್ಧವಾದ ಕಾದಂಬರಿ. ಪ್ರತಿಕ್ರಿಯೆಗೆ ಧನ್ಯವಾದ ಸರ್…
ಯಾಜ್ಞಸೇನಿ ಒಂದು ಮಹತ್ವಪೂರ್ಣ ಅನುವಾದಿತ ಕೃತಿ. ಈ ಗ್ರಂಥವನ್ನು ಓದಿ ಮುಗಿಸಿದ ಮೇಲೂ ಅದು ನಮ್ಮನ್ನು ಬಹುವಾಗಿ ಕಾಡುತ್ತದೆ. ಸಾಹಿತಿ ಗುರುರಾಜ್ ಸನಿಲ್ ಅವರು ಈ ಕೃತಿಗೆ ವಸ್ತುನಿಷ್ಟ ವಿಮರ್ಶೆಯನ್ನು ಬರೆದಿದ್ದಾರೆ. ಸನಿಲ್ ಅವರಿಗೆ ಅಭಿನಂದನೆ
ಅನಿತಾ ಅವರೇ ನೀವು ಕವಿ, ಸಾಹಿತಿ, ವಿಮರ್ಶಕರಾಗಿ ಪ್ರಸಿದ್ಧರು. ನೀವು ಮೆಚ್ಚಿರುವುದು ನನ್ನ ಬರಹಕ್ಕೆ ಸ್ಫೂರ್ತಿ. ಧನ್ಯವಾದ.
Good Criticism