“ಲೇ ಸರೂ ಈ ಶರ್ಟಿನ ಗುಂಡಿ ಒಂದು ಬಿಟ್ ಹೋಗಿದೆ ಕಣೆ ಸ್ವಲ್ಪ ಹಾಕಿಕೊಡ್ತೀಯಾ?” “ಹಾಕೊಡ್ತೀನಿ ರೀ . ಆದ್ರೆ ಈಗಲ್ಲ . ವೀಕ್ ಎಂಡ್ ಬರಲಿ . ಖಂಡಿತ ಹಾಕ್ಕೊಡ್ತೀನಿ.” ಒಂದು ಗುಂಡಿ ಹಾಕ್ಕೊಡೋಕ್ಕೂ ವೀಕ್ ಎಂಡ್ ಬರ್ಬೇಕಾ? ಹೌದೂರಿ , ಆತುರದಲ್ಲಿ ಅದನ್ನು ತಪ್ಪುತಪ್ಪಾಗಿ ಹಾಕಿ ಮತ್ತೆ ಬಿಚ್ಚೋ ಕೆಲ್ಸ ಯಾರು ಮಾಡ್ಕೊಳ್ಳೋರು? ಇನ್ನೇನು ಬಂತಲ್ಲ ಶನಿವಾರ , ಭಾನುವಾರ ಒಂದಿನ ಹಾಕೊಡ್ತೀನಿ ಬಿಡಿ.”ಆಯ್ತು ಕಣೆ. ಮರೀಬೇಡ ಅಷ್ಟೆ” “ಹೂಂ ರೀ” ಜೊತೆಗೆ ಈ ವಾರವೆಲ್ಲ ತುಂಬಿದ ಕೆಲಸ. ಕ್ಲಿನಿಕ್ಕಿನ ಕೆಲಸ , ಮನೆಕೆಲಸ ಎರಡನ್ನೂ ಮೇಳೈಸಿಕೊಂಡು ಹೋಗ್ಬೇಕಲ್ವೆ? ನೀವು ನನ್ನ ಸಮ ಸಮಕ್ಕೆ ಸಹಾಯ ಮಾಡ್ತೀರಿ. ಅದೂ ನೀವು ಈಗ ಸದ್ಯಕ್ಕೆ ಮನೆಯಿಂದ ಕೆಲಸ ಮಾಡ್ತ ಇರೋದರಿಂದ. ಆದ್ರೂ ಒಮ್ಮೊಮ್ಮೆ ಕಷ್ಟ ಅನ್ನಿಸುತ್ತೆ. ರೀ ಅಂದಹಾಗೆ ಈ ಭಾನುವಾರ ಬಿಡುವು ಮಾಡಿಕೊಂಡು ಹೋಗಿ ಒಂದಿಷ್ಟು ಗಿಡಗಳನ್ನು ತರಬೇಕು ರೀ . ಬೇಸಗೆಯಲ್ಲಿ ಗಿಡಗಳು ಚೆನ್ನಾಗಿ ಚಿಗುರುತ್ತವೆ, ಅವಗಳಲ್ಲಿ ಅರಳುವ ಹೂಗಳನ್ನು ನೋಡೋದಕ್ಕೇ ಒಂದು ಸಂತೋಷ. ನೀನ್ಹೇಳೋದು ನಿಜ. ಆಯ್ತು ನೋಡೋಣ .
ಅಂತೂ ಬಹಳ ನಿರೀಕ್ಷೆಗಳಿಂದ ಬಯಸುತ್ತಿದ್ದ ವಾರದ ಕೊನೆ ಬಂತು. ಶನಿವಾರವೆಲ್ಲ ವಾರದ ಬಟ್ಟೆಗಳನ್ನೊಗೆದು ,ಇಸ್ತ್ರಿ ಬೇಕಾದಲ್ಲಿ ಮಾಡಿ ಎಲ್ಲರ ಬಟ್ಟೆಗಳನ್ನೂ ಮುಂದಿನ ವಾರಕ್ಕೆ ಸಿದ್ಧಮಾಡಿ ಇಡುವುದರಲ್ಲೇ ಕಳೆದು ಹೋಯಿತು. ನನ್ನ ಸ್ಥಿತಿ ಇದಾದರೆ ನನ್ನ ಪತಿದೇವರು ಮನೆಯನ್ನೆಲ್ಲ ಹೂವರ್ ಮಾಡಿ , ಕುಳಿತುಕೊಳ್ಳುವ ಸೋಫ ವನ್ನು ಶುದ್ಧಿಮಾಡಿ , ಇಡೀ ಮನೆಯನ್ನು ಶುದ್ಧ ಮಾಡುವುದರಲ್ಲಿ ನಿರತರಾಗಿದ್ದರು. ಮನೆಯ ಶುದ್ಧೀಕರಣದ ಕೆಲಸವಿದ್ದದ್ದರಿಂದ ಅಡಿಗೆ ಕೆಲಸವನ್ನೂ ಹಚ್ಚಿಕೊಳ್ಳಲು ಕಷ್ಟವಾಗಿ ಬೆಳಗಿನ ತಿಂಡಿಗೆ ಬರೇ ಕಾರ್ನ್ ಫ಼್ಲೇಕ್ಸ್ ಮತ್ತೆ ಮಧ್ಯಾಹ್ನಕ್ಕೆ ಹೊರಗಿನಿಂದಲೇ ಊಟತರಿಸಿ ತಿಂದದ್ದಾಗಿತ್ತು. ಇನ್ನು ರಾತ್ರೆಗೂ ಸರಿಯಾಗಿ ಊಟವಿಲ್ಲದಿರಲು ಸಾಧ್ಯವಿರಲಿಲ್ಲ. ಬಹಳ ಸುಲಭವಾಗಿ ಮಾಡಬಹುದಾದ ಪೊಂಗಲ್ ಮಾಡಿ ಬಿಸಿಬಿಸಿಯಾಗಿ ತಿಂದು ವಾರದಲ್ಲೊಮ್ಮೆ ಸಿಗುವ “ಫ಼್ಯಾಮಿಲಿ ಟೈಮ್” ನ್ನು ಎಲ್ಲರಿಗೂ ಇಷ್ಟವಾಗುವ ಟೀ ವಿ ಸಿನೆಮಾವೊಂದನ್ನು ಪ್ರಿಯವಾದ “ಐಸ್ ಕ್ರೀಂ’ ಸವಿಯುತ್ತಾ ನೋಡಿ ನಂತರ ಮಲಗಿದೆವು.
ಸದ್ಯ ನಾಳೆ ಭಾನುವಾರ. ವಾರದಲ್ಲಿ ಸಿಗುವ ಅಮೂಲ್ಯ ರಜದ ದಿನ. ಬೇಕಾದಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇನೆ.ಅರ್ಧ ಬರೆದ ಕತೆಯನ್ನು ಪೂರ್ಣಗೊಳಿಸಿ ಕಳುಹಿಸಬೇಕು. ಸತೀಶ, ಶಂಕರ್ ಪುಟಾಣಿ ಪಾರ್ವತಿ ಎಲ್ಲರಿಗೂ ಇಷ್ಟವಾದ ಪಾನಿ ಪೂರಿ, ಮಸಾಲ ಪೂರಿ ಮಾಡಬೇಕು. ಹೂಂ ಹೌದು ಮರೆತೇ ಹೋಗಿದ್ದೆ, ಮುಂದಿನ ತಿಂಗಳು ಪ್ರಭಾಳ ಮಗಳ ಹುಟ್ಟುಹಬ್ಬ. ಆ ಮಗುವಿಗೆ ಕೊಡಲು ಏನಾದರು ಬರ್ತ್ಡೇ ಗಿಫ಼್ಟ್ ತರಬೇಕು. ಸಾಧ್ಯವಾದರೆ ಎಲ್ಲ ಒಟ್ಟಿಗೆ ಹೊರಗೆ ಸುತ್ತಾಡಿ ಬರಬೇಕು.ಬಹಳಷ್ಟು ವಾರಗಳೇ ಉರುಳಿ ಹೋಗಿವೆ. ಪ್ರವಾಸ ಎಂಬ ಶಬ್ದ ನಮ್ಮ ಶಬ್ದಕೋಶದಿಂದಲೇ ಮಾಯವಾಗಿ ಹೋಗಿದೆ ಈ ಕರೋನ ಬಂದ ದಿನದಿಂದ. ಮನೆಯಿಂದಲೆ ಕೆಲಸ, ಮನೆಯಿಂದಲೇ ಮಕ್ಕಳ ಸ್ಕೂಲು, ಅಂತೂ ಎಲ್ಲರೂ ಮನೆಗೇ ಅಂಟಿಕೊಂಡು ಕುಳಿತಿದ್ದಾಗಿದೆ. ಆದರೂ ಸ್ವಾತಂತ್ರವಿಲ್ಲ. ಎಲ್ಲರೂ ಅವರವರದೇ ಕೆಲಸದಲ್ಲಿ ನಿರತರು. ಕರೋನದ ಹೆದರಿಕೆಗೆ ಹೊರಗಡೆಹೋಗುವ ಅಲೋಚನೆಯನ್ನೇ ಬಿಟ್ಟುಬಿಟ್ಟಿದ್ದೇವೆ. ತೀರ ಅಗತ್ಯವಾದದ್ದಕ್ಕೆ ಮಾತ್ರ ಹೋಗುವುದು. ಅದೂ ನಾನೋ ಇಲ್ಲ ಸತೀಶನೋ ಅಷ್ಟೆ.”ಕೇಳಿನೋಡ್ತೀನಿ ಹೊರಗೆ ಹೋಗುವ ವಿಚಾರದಲ್ಲಿ ಸತೀಶ್ ಏನನ್ನುತ್ತಾರೆ ಅಂತ”.
*********
ಆಲೋಚಿಸುತ್ತಲೇ ದಿಂಬಿಗೆ ತಲೆಕೊಟ್ಟಿದ್ದೆ. ಆಯಾಸವಾದ ದೇಹಕ್ಕೆ ದಿಂಬಿಗೆ ತಲೆಯಾನಿಸಿದೊಡನೆ ನಿದ್ದೆ ಬಂದಿತು. ಬೆಳಗಾದ ಕೂಡಲೆ ಮಾಮುಲಿನಂತೆ 6 ಗಂಟೆಗೆ ಅಲಾರಂ ಹೊಡೆಯಿತು. ಮತ್ತಷ್ಟು ಹೊತ್ತು ಮಲಗುವ ಇಚ್ಛೆಯಾದರೂ ಮತ್ತೆ ತಡವಾದೀತು ಎಂದು ಆಲಸ್ಯವನ್ನು ಬಿಟ್ಟು ಮೇಲೆದ್ದೆ. ಮನೆಯ ಮುಂದಿನ ಅಂಗಳಕ್ಕೆ ( ಅಂಗಳವೆಂದೇ ಕರೆದಿದ್ದೇನೆ- ಇಲ್ಲಿ ಅಂಗಳವೆಲ್ಲಿ ಬಂತು? ಒಂದಿಷ್ಟು ಬಿಡಿ ಆವರಣ!) ಮರೆತೇ ಬಿಟ್ಟೆ ನಾವಿರುವುದು ಇಂಗ್ಲೆಂಡಿನಲ್ಲಿ. ನೀರು ಹಾಕಿ ರಂಗೋಲಿ ಇಟ್ಟು ಒಳಗೆ ಬಂದು ಒಂದು ಬಿಸಿ ಬಿಸಿ ಸ್ಟ್ರಾಂಗ್ ಕಾಫಿ ಮಾಡಿ ಕುಡಿದೆ.ಪೇಪರ್ ಬಂದಿತ್ತು.ಅದರ ಹೆಡ್ಲೈನ್ಸ್ ಕಡೆಗೊಮ್ಮೆ ಕಣ್ಣಾಡಿಸಿ , ದೇವರಿಗೆ ದೀಪ ಹಚ್ಚಿ ನನಗೆ ತಿಳಿದ ದೇವರ ಶ್ಲೋಕಗಳನ್ನು ಗುನುಗುನಿಸಿ, ಬೆಳಗಿನ ತಿಂಡಿಯ ತಯಾರಿಗೆ ತೊಡಗಿದೆ.
ತಟ್ಟೆ ಇಡ್ಲಿ ಮಾಡುವ ಅಲೋಚನೆ ಮೊದಲೇ ಇದ್ದದ್ದರಿಂದ ಅದಕ್ಕೆ ಬೇಕಾದ ತೆಂಗಿನ ಕಾಯಿಯ ಚಟ್ನಿಯನ್ನು ರುಬ್ಬಿಟ್ಟು ಗಂಟೆ ನೋಡಲು ಎಂಟಾಗಿತ್ತು. ಇನ್ನೂ ಹಾಸಿಗೆ ಬಿಟ್ಟೇಳದ ಗಂಡನನ್ನೂ ಮಕ್ಕಳನ್ನೂ ಏಳಿಸುವ ಪ್ರಯತ್ನ ಮಾಡಿದೆ. “ಇರೇ ಇನ್ನೊಂದ್ ಹತ್ನಿಮಿಷ , ಎದ್ಬಿಡ್ತೀನಿ. ಸಂಡೆ ಅಲವ?” ಅಂತ ಸತೀಶ್ ಮುಸುಕನ್ನು ಮೇಲೆಳೆದುಕೊಂಡರೆ, “ಅಯ್ಯೋ ಇರಮ್ಮ ನೀನು ಯಾವಾಗ್ಲೂ ಹೀಗೇನೆ. ಸಂಡೇನೂ ಬಿಡೋಲ್ಲ. ಇನ್ನೊಂದ್ ಸ್ವಲ್ಪ ಹೊತ್ತುಕೊಡು “ಅಂತ ಇಬ್ಬರೂ ಮಕ್ಕಳ ರಾಗ. ಸರಿ ಹಿಂತಿರುಗಿ ಬಂದು ಇಡ್ಲಿ ಹಿಟ್ಟನ್ನು ರೆಡಿ ಮಾಡಿಟ್ಟು , ಮಧ್ಯಾನ್ನ್ಹದ ಅಡಿಗೆಗೆ ತಯಾರಿ ನಡೆಸಲು ಪ್ರಾರಂಭಿಸಿದೆ. ಆದರೆ ಏನು ಅಡಿಗೆ ಮಾಡುವುದು? ಹೂಂ ಅವರೂ ಏಳಲಿ ಕೇಳಿಯೇ ಮಾಡಿದರಾಯಿತು. ಹಾಗೆಯೇ ಸುಮ್ಮನೆ ಕುಳಿತಿರುವ ಬದಲು ಹೊಸ ಅಡುಗೆಯ ವಿಧಾನ ಸಿಕ್ಕೀತೇನೋ ಅಂತ ಯು ಟ್ಯೂಬ್ ನಲ್ಲಿ ನೋಡುತ್ತಕುಳಿತೆ.
ಇದ್ದಕ್ಕಿದ್ದಂತೆ ಗಡಿಯಾರದ ಕಡೆಗೆ ಕಣ್ಣು ಹೊರಳಿತು. ಆಗಲೇ ಒಂಬತ್ತು ಗಂಟೆ. ಇನ್ನೂ ಎದ್ದು ಬಾರದಿರುವ ಗಂಡ ,ಮಕ್ಕಳ ಮೇಳೆ ಕೋಪ ಬಂದಿತು. ನನಗೋ ಬೇಗ ಎದ್ದಿದ್ದರಿಂದ ಹೊಟ್ಟೆ ಹಸಿಯಲು ಪ್ರಾರಂಭಿಸಿತ್ತು. “ಅತ್ತೆಯ ಮೇಲಿನ ಕೋಪ ಕೊತ್ತಿಯ ಮೇಲೆ.” ಇನ್ನೂ ಮಲಗಿರುವ ಗಂಡನ ಮೇಲೆ ನನ್ನ ಮಾತಿನ ಪ್ರಹಾರ ಶುರು ಮಾಡಿದೆ’ ಅಲ್ಲಾ ರೀ ಭಾನುವಾರ ಅಂದ್ಬಿಟ್ರೆ ಹಾಸಿಗೆ ಬಿಟ್ಟು ಏಳೋದೆ ಬೇಡ್ವ? ಕುಂಭಕರ್ಣನ ಹಾಗೆ ಮಲಕ್ಕೊಂಡಿರ್ತೀರಿ . ನನಗೇನು ಅನ್ನಿಸೋಲ್ಲವ? ಬೇಳಗ್ಗೆ ಬೇಗನೆ ಎದ್ದಾಗಿದೆ ನನಗೋ ಹಸಿವು ! ಇನ್ನೂ ನೀವುಗಳೆಲ್ಲ ಬಂದಮೇಲೆ ತಾನೆ ತಿನ್ನುವುದು. ರಜಾದಿನ ಸ್ವಲ್ಪ ಹೊತ್ತು ಹೊರಗೆ ಸುತ್ತಾಡಿಬರೋಣ ಅಂದ್ರೂ ಆಗೋಲ್ಲ. ನೀವು ಬೇಗ ಎದ್ದರೆ ತಾನೆ? ನನಗೆ ಗಿಡಗಳನ್ನು ತರುವುದಿತ್ತು. ವಾರಕೆ ಬರೋದು ಒಂದೇ ಭಾನುವಾರ ಅಲ್ಲವೇ? ನಾಳೆಯಿಂದ ಮತ್ತೆ ಕೆಲಸ , ಮಕ್ಕಳ ಓದು ಎಲ್ಲ ಆರಂಭ. ನಾನು ಅಂದುಕೊಂಡ ಹಾಗೆ ಯಾವುದೂ ಆಗುವುದಿಲ್ಲ” ಅಂತ ಎಡೆಬಿಡದೆ ಗೊಣಗುತ್ತ ಹೊರಕ್ಕೆ ಬಂದೆ. ನನಗೆ ಸಿಟ್ಟು ಬಂದಿರುವುದನ್ನು ತಿಳಿದ ಯಜಮಾನರು ತಕ್ಷಣವೇ ಹಾಸಿಗೆ ಬಿಟ್ಟೆದ್ದು “ಇದೋ ಎದ್ದೆ ಸರೂ , ನೀನೆ ಹೇಳಿದ ಹಾಗೇ ವಾರಕ್ಕೆ ಒಂದೇ ಸಂಡೇ ಅಲ್ವ? ಹೋಗಲಿ ಬೇಗ ಶೇವ್ ಮಾಡಿ ,ಹಲ್ಲುಜ್ಜಿ ಸ್ನಾನ ಮಾಡಿ ಬಂಡ್ಬಿಡ್ತೀನಿ” ಎಂದು ನನ್ನ ಉತ್ತರಕ್ಕೂ ಕಾಯದೆ ಬಚ್ಚಲುಮನೆಗೆ ಹೋಗಿ ಬಾಗಿಲು ಹಾಕಿಕೊಂಡರು. ಶಾಂತಮೂರ್ತಿ ಕೋಪವೆನ್ನುವು ಬಹಳ ಕಡಿಮೆ. ಬರುವುದಿಲ್ಲ ಎಂದರೂ ನಡೆದೀತು.ಸಮಾಧಾನದ ನಿಟ್ಟುಸಿರು ಬಿಟ್ಟು ಮಕ್ಕಳನ್ನು ಮತ್ತೊಮ್ಮೆ ಎಬ್ಬಿಸಿದ್ದಾಯಿತು. ಒಂದೇ ಬಚ್ಚಲು ಮನೆ ಅಲ್ಲವಲ್ಲ. ಹಾಗಾಗಿ ಮಕ್ಕಳೂ ಅವರವರ ರೂಮಿಗೇ ಸೇರಿದ ಬಾತ್ ರೂಮಿನಲ್ಲಿ ಪ್ರಾತ್ಃ ಕರ್ಮಗಳನ್ನು ಮುಗಿಸಿ ಸ್ನಾನಕ್ಕಿಳಿದರು. ಮೂವರೂ ಸಿದ್ಧರಾಗಿ ಬರುವ ವೇಳೇಗೆ ನಾನೂ ಇಡ್ಲಿಯನ್ನು ಬೇಯಿಸಿ ಹಾಟ್ಕೇಸಿನಲ್ಲಿ ಹಾಕಿಟ್ಟಿದ್ದೆ. ಬಂದವರೇ ಎಲ್ಲರೂ ಇಡ್ಲಿಯ ಮೇಲೆ ಧಾಳಿಮಾಡಿದೆವು. ಗಂಟೆ ಆಗಲೇ 11:30 ಹಸಿವೆಯಾಗದೆ ಇದ್ದೀತೆ? ಚೆನ್ನಾಗಿಯೇ ತಿಂದೆವು ಎಲ್ಲರೂ .
“ಅಡಿಗೆ ಏನು ಮಾಡಲಿ ರೀ?” ಹೆಂಗಸರಿಗೆ ಇನ್ನೇನು ಯೊಚನೆ ಇದ್ದೀತು ? “ಅಯ್ಯೋ ಈಗಿನ್ನೂ ಹೊಟ್ಟೆಬಿರಿಯ ಇಡ್ಲಿ ತಿಂದಿದೀವಿ.ಅದು ಗಂಟೆ ಬೇರೆ ಹನ್ನೆರಡರ ಹತ್ತಿರ ಆಯ್ತು. ಒಂದು ಕೆಲಸ ಮಾಡು ಬಹಳ ಸಿಂಪಲ್ ಆಗಿ ಸಾರು , ಪಲ್ಯ , ಹಪ್ಪಳ ಸಂಡಿಗೆ ಮಾಡಿಬಿಡು. ಜೊತೆಗೆ ಬೇಕೆನಿಸಿದರೆ ಒಂದೆರಡು ಆಂಬೊಡೆ ಕರಿದು , ಬೂದುಗುಂಬಳಕಾಯಿ ಹೇಗೂ ಕಳೆದವಾರ ತಂದಿದ್ದೇ ಇದೆಯಲ್ಲ ,ಮಜ್ಜಿಗೆಹುಳಿ ಮಾಡಿಬಿಡು “. ’ಇದು ಸಿಂಪಲ್ಲಾ? ಹೂಂ ಆಯ್ತು ಬಿಡಿ ಮಾಡ್ತೀನಿ. ನಿಮಗೆಲ್ಲ ಇಷ್ಟ ಅಂದ್ರೆ ಯಾಕಾಗಬಾರದು? ಹೇಗೂ ಭಾನುವಾರ ಅಲ್ಲವೇ?” ಆದ್ರೆ ಅವರ ಈ ಸಿಂಪಲ್ ಅಡಿಗೆ ವ್ಯಾಖ್ಯಾನ ಮಾತ್ರ ನನಗೆ ಹಿಡಿಸಲಿಲ್ಲ. ಆದರೂ ಭಾನುವಾರ ಆಸೆ ಪಡುತ್ತಾರೆ ಎಂದಾಗ ಬೇಡ ಎಂದು ಹೇಳಿ ಉತ್ಸಾಹ ಕುಗ್ಗಿಸಲು ಇಷ್ಟವಾಗಲಿಲ್ಲ.
ಅಂತೂ ಅಡಿಗೆ ಮಾಡಿ ಮುಗಿಸುವ ವೇಳೆಗೆ 3 ಗಂಟೆ ಹೊಡೆದಿತ್ತು. ಎಲ್ಲಾರೂ ಊಟ ಮಾಡಿ ಮುಗಿಸುವ ವೇಳೆಗೆ ಗಂಟೆ 4: 30 . ಪಾತ್ರೆಗಳನ್ನು ತೊಳೆಯ ಹಾಕಲು ಸತೀಶ್ ನೆರವಾದರು. ಸ್ವಲ್ಪ ಹೊತ್ತು ಟೀವಿ ಯ ಮುಂದೆ ಕೂತು ಎದ್ದು ಸಂಜೆಯ ಕಾಫಿ ಕುಡಿದು ಇನ್ನು ನಾಳೇ ಕೊಂಡುಹೋಗುವುದಕ್ಕೆ ಏನಾದರೂ ತಾಯಾರು ಮಾಡಿಡಬೇಕು ಎಂದು ಫ್ರಿಜ಼್ ತೆಗೆದು ತರಕಾರಿಗಾಗಿ ಹುಡುಕತೊಡಗಿದೆ. ಮಧ್ಯಾಹ್ನ ಮಾಡಿದ ಅಡುಗೆಯೇ ರಾತ್ರಿಗೂ ಆಗುವಂತೆ ಇದ್ದದ್ದರಿಂದ ಮತ್ತೆ ರಾತ್ರಿಗಾಗಿ ಏನೂ ಮಾಡಬೇಕಾಗಿರಲಿಲ್ಲ. ಮತ್ತೆ ಮರಳಿ ಬರುವ ಸೋಮವಾರಕ್ಕಾಗಿ ಒಂದಿಷ್ಟು ಪಲ್ಯ ಚಪಾತಿಗಳನ್ನು ಸಿದ್ಧಪಡಿಸಿ ದೆ. ಬೆಳಗ್ಗೆ ಎದ್ದು ಎಲ್ಲರಿಗೂ ತರಾತುರಿ, ಮಧ್ಯಾಹ್ನದ ಅಡಿಗೆಯನ್ನೇ ಮತ್ತೆ ಊಟಮಾಡಿ ಮಲಗಲಿಕ್ಕೆ ಹೋಗುವಾಗ ಆಗಲೇ ಗಂಟೆ 9 ಹೊಡೆದಿತ್ತು. ಬೇಗ ಮಲಗದೇ ಇದ್ದರೆ ಬೇಗ ಏಳಲೂ ಸಾಧ್ಯವಾಗುವುದಿಲ್ಲ.ಹೌದು ಈ ಎಲ್ಲದರ ನಡುವೆ ನನ್ನ ಯಜಮಾನರು ಏನು ಮಾಡುತ್ತಿದ್ದರೆಂದು ಯೋಚಿಸುತ್ತಿದ್ದೀರ? ನಾನು ಮಧ್ಯಾಹ್ನದ ಅಡುಗೆಯಲ್ಲಿ ನಿರತಳಾಗಿರುವಾಗ ಅವರು ಶಂಕರನನ್ನು ಅವನ ಅರ್.ಎಸ್ ಎಮ್ ಕ್ಲಾಸ್ಗೆ ಕರೆದುಕೋಡು ಹೋಗಿಬಂದರು. ಈಗ ಪಾರ್ವತಿಯನ್ನು ಸ್ವಿಮ್ಮಿಂಗ್ ಗೆ ಕರೆದೊಯ್ದಿದ್ದಾರೆ. ಅಂತೆಯೇ ಅವರು ಬರುವುದರೊಳಗೆ ನನ್ನ ಅಡುಗೆ ಕೆಲಸ ಮುಗಿಸಬೇಕು . ಅವರುಗಳು ಬಂದಕೂಡಲೆ ಬೇಗ ಊಟ ಮಾಡಿ ಮಲಗಬಹುದಲ್ಲವೇ?
ಭಾನುವಾರ ಬಂದರೆ ಅದು ಮಾಡುತ್ತೇನೆ, ಇದು ಮಾಡುತ್ತೇನೆ ಎಂದೆಲ್ಲ ಲೆಕ್ಕ ಹಾಕಿದ್ದೆ ನಾನು. ಗಿಡಗಳನ್ನು ತಂದು ತೋಟದ ಕೆಲಸ ಮಾಡುವುದಿರಲಿ , ಸತೀಶನ ಷರಟಿನ ಗುಂಡಿಯನ್ನು ಸಹ ಹಾಕಿಕೊಡಲು ಸಮಯ ಸಿಗಲಿಲ್ಲ. ವಾರದ ಇಡೀ ಕೆಲಸ ಮಾಡುತ್ತ ವಾರದ ಕೊನೆಗಾಗಿ ಅದರಲ್ಲೂ ಭಾನುವಾರಕ್ಕಾಗಿ ಕಾಯ್ದು ಮೀಸಲಿಟ್ಟ ಯಾವ ಕೆಲಸವನ್ನೂ ಮಾಡದೆ ಮತ್ತೆ ಸೋಮವಾರಕೆ ಕಾಲಿಡುತ್ತೇವೆ ನಾವು. ಹೀಗೆಯೇ ಎಷ್ಟು ವಾರಗಳು ಉರುಳಿಹೋಗುತ್ತವೋ ನಾವು ಅಂದುಕೊಂಡ ಕೆಲಸಗಳನ್ನು ಪೂರೈಸಲು! (ಇವೆಲ್ಲದರ ನಡುವೆ ಉಳಿದ ಆಸೆಗಳನ್ನೂ, ಕೆಲಸ ಕಾರ್ಯಗಳನ್ನೂ ಹೇಗೋ ಪೂರೈಸಿಕೊಳ್ಳುತ್ತೇವೆ ಅಂತ ಇಟ್ಕೊಳ್ಳಿ.)
ಆದರೆ ಎಲ್ಲರೂ ಮಲಗುವವರೆಗೆ ಕಾದಿದ್ದು ಈ ಲೇಖನವನ್ನು ಬರೆದು ಮುಗಿಸಿದೆ. ಪತ್ರಿಕೆಗೆ ಕಳುಹಿಸಬೇಕಿತ್ತಲ್ಲ. ಅವರಿಗೂ ತಿಳಿಯಲಿ ಉದ್ಯೋಗಸ್ಥ ಮಹಿಳೆಯರಿರುವ ಸಂಸಾರದ ಭಾನುವಾರ! ಬರೆಯದೇ ಬಿಟ್ಟರೆ ಹೀಗೆ ಎಷ್ಟು ವಾರಗಳು ಕಾಯಬೇಕಾಗುತ್ತೋ ಆ ಶಿವನೇ ಬಲ್ಲ!!
*******
2 thoughts on “ಬಂತು ಭಾನುವಾರ”
ತುಂಬಾ ಚೆನ್ನಾಗಿದೆ.
ವಂದನೆಗಳು ಪೂರ್ಣಿಮಾ ಅವರಿಗೆ
ಸತ್ಯವತಿ ಮೂರ್ತಿ