ಮನುಷ್ಯ-ರಾಕ್ಷಸ

ಘನಶ್ಯಾಮ್ ಅಗ್ರವಾಲ್‍ರ ಹಿಂದಿ ಮಿನಿ ಕತೆಗಳು

ಅನುವಾದ: ಡಾ. ಮಾಧವಿ ಎಸ್. ಭಂಡಾರಿ

ಈ ಬಡಾವಣೆಯಿಂದ ಆ ಬಡಾವಣೆ ವರೆಗೆ, ಆ ಬಡಾವಣೆಯಿಂದ ಈ ಬಡಾವಣೆ ವರೆಗೆ, ಮೊದಲು ಹಬ್ಬಿದ್ದು ಗಾಳಿಮಾತು…ಮತ್ತೆ ಹಬ್ಬಿದ್ದು ಸುದ್ದಿ…ಅನಂತರ ಆದದ್ದು ದಂಗೆ. ಗಾಳಿಮಾತು ಹರಡುತ್ತಿದ್ದಂತೆ ಶಾಲೆಗೆ ರಜೆ ಘೋಷಿಸಲಾಯಿತು. ಸುದ್ದಿ ಹಬ್ಬುವಷ್ಟರಲ್ಲಿ ಮಕ್ಕಳು ಮನೆಯ ಕಡೆಗೆ ಮುಖ ಮಾಡಿದರು. ದೊಡ್ಡ ಮಕ್ಕಳು ತಾವೇ ಹೋದರು. ಚಿಕ್ಕ ಮಕ್ಕಳನ್ನು ಪಾಲಕರು ಕರೆದುಕೊಂಡು ಹೋದರು. ಈ ಓಡಾಟದ ನಡುವೆ ನಾಲ್ಕು ವರ್ಷದ ಬಾಲಕನೊಬ್ಬ ಅಲ್ಲಿಯೇ ಉಳಿದುಬಿಟ್ಟ. ಅವನನ್ನು ಕರೆದುಕೊಂಡು ಹೋಗಲು ಯಾರೂ ಬಂದಿರಲಿಲ್ಲ. ರಜೆಯ ಮಜಾ ಬೇಸರಕ್ಕೆ ಹೊರಳಿತು. ಬಾಲಕ ಸುತ್ತೆಲ್ಲ ಕಣ್ಣು ಹಾಯಿಸಿದ. ನರಪಿಳ್ಳೆಯೂ ಕಾಣಲಿಲ್ಲ. ಅಳುತ್ತ ಮನೆಯತ್ತ ಹೆಜ್ಜೆ ಹಾಕತೊಡಗಿದ. ಈ ಹಿಂದೆ ಚಿಕ್ಕಪ್ಪನ ಸ್ಕೂಟರಲ್ಲೋ, ಅಮ್ಮನ ಜೊತೆ ಆಟೋದಲ್ಲೋ ಬಂದಿರುವ ದಾರಿಯನ್ನು ನೆನಪಿಸಿಕೊಳ್ಳುತ್ತ ನಡೆಯತೊಡಗಿದ.

ದಂಗೆ ಆರಂಭವಾಗಿತ್ತು. ಊರಿಗೆ ಊರೇ ಮೌನದ ಕಂಬಳಿ ಹೊದ್ದು ಮಲಗಿತ್ತು. ನಾಲ್ಕು ರಸ್ತೆಗಳು ಸೇರುವಲ್ಲಂತೂ ಎಲ್ಲ ದಾರಿಗಳು ಒಂದೇ ತೆರನಾಗಿ ಕಂಡವು. ಅವನು ಹಾದಿ ತಪ್ಪಿ ದಂಗೆ ನಡೆವಲ್ಲಿಗೆ ನಡೆದುಬಿಟ್ಟ. ಅಲ್ಲಂತೂ ದಂಗೆ ತನ್ನ ತುರಿಯಾವಸ್ಥೆ ತಲುಪಿತ್ತು. ಒಂದು ಗುಂಪಂತೂ ಘೋಷಣೆ ಕೂಗುತ್ತ ಮನ ಬಂದಂತೆ ಓಡಾಡುತ್ತಿತ್ತು. ಬಾಲಕನೂ ಒಂದೆಡೆ ಓಡಲಾರಂಭಿಸಿದ. ಅಷ್ಟರಲ್ಲಿ ದಂಗೆಕೋರರ ಗುಂಪು ಅವನನ್ನು ಹಿಂಬಾಲಿಸಿತು. ಗುಂಪಿನಲ್ಲಿದ್ದವನೊಬ್ಬ ಅರಚಿದ, “ಅಲ್ಲೊಂದು ಹಾವಿನಮರಿ ಹೋಗ್ತಾ ಇದೆ… ಬಿಡಬೇಡಿ, ಹಿಡಿದು ಅಲ್ಲೇ ನೆಲಕ್ಕೆ ಅಪ್ಪಳಿಸಿ…ಹಿಡಿಯಿರಿ…ಹೊಡೆಯಿರಿ…ತಪ್ಪಿಸಿಕೊಂಡು ಹೋಗಲು ಬಿಡಬೇಡಿ.” ಸ್ವರ ಕೇಳಿ ಬಾಲಕ ನಡುಗಲಾರಂಭಿಸಿದ. ದಂಗೆಕೋರರು ಸುತ್ತುಗಟ್ಟಿದಾಗಂತೂ ಆಗಸವೇ ಕಳಚಿಬಿದ್ದಂತಾಯ್ತು. “ಅ…ಅಂಕಲ್” ಎನ್ನುತ್ತ ಒಬ್ಬ ದಾಳಿಕೋರನೆಡೆಗೆ ಕೈಚಾಚಿದ. ಆದರೆ ಅವನು ತನ್ನ ಶರೀರದಲ್ಲಿ ರಾಕ್ಷಸನನ್ನೇ ಆಹ್ವಾನಿಸಿಕೊಂಡಿದ್ದ. ಬಾಲಕನನ್ನು ಮೇಲಕ್ಕೆ ಎತ್ತಿದ. ಘೋಷಣೆ ಕೂಗುತ್ತ, ಹೈ-ವೇಯಲ್ಲಿ ವೇಗವಾಗಿ ಬರುತ್ತಿದ್ದ ಟ್ರಕ್ ಎದುರು ಬಿಸಾಡಿದ. ಕಿರುಚಾಟವನ್ನು ಬೇಧಿಸುತ್ತ ಟ್ರಕ್ ಅದೇ ವೇಗದಲ್ಲಿ ಸಾಗಿತು.

‘ರಕ್ತಕ್ಕೆ ರಕ್ತ’, ‘ನೀವು ಒಬ್ಬನನ್ನು ಕೊಂದರೆ ನಾವು ಹತ್ತು ಹೆಣ ಬೀಳಿಸುತ್ತೇವೆ’…ಇತ್ಯಾದಿ ಘೋಷಣೆ ಕೂಗುತ್ತ ದಂಗೆ ಎಂಬ ಮ್ಯಾಚ್‍ಲ್ಲಿ ಆರಂಭದಲ್ಲೇ ಒಂದು ಗೋಲ್ ಮಾಡಿ ತನ್ನ ಟೀಮ್‍ನ ವಿಜಯಕ್ಕೆ ನಾಂದಿ ಹಾಡಿದ ಬಹುದೊಡ್ಡ ಸಾಧಕನಂತೆ ಅವನು ಗುಂಪಿನೊಡನೆ ಮುಂದೆ ಸಾಗಿದ. ನಿಧಾನವಾಗಿ ಗುಂಪು ಚದುರಿತು. ಮೈಯೆಲ್ಲ ಆವರಿಸಿಕೊಂಡಿದ್ದ ರಾಕ್ಷಸನ ಪೊರೆ ಕಳಚಿ ಅವನಲ್ಲಿಯ ಮನುಷ್ಯ ಇಣುಕತೊಡಗಿದ. ತನ್ನ ಮನೆಯತ್ತ ಬರುತ್ತಿದ್ದಂತೆ ಒಂಟಿಯಾದ. ನಡೆದ ಘಟನೆ ಚಿತ್ರಪಟದಂತೆ ಅವನ ಕಣ್ಮುಂದೆ ಹಾದುಹೋಯಿತು. ಬಾಲಕ ಅವನತ್ತ ಕೈ ಚಾಚುವುದು… “ಅ…ಅಂಕಲ್” ಎಂದು ಕರೆಯುತ್ತ ಅವನೆಡೆಗೆ ಬರುವುದು…ಕಾಲ್ಚೆಂಡಿನಂತೆ ಆ ಬಾಲಕನನ್ನು ಎತ್ತಿ ಟ್ರಕ್ ಎದುರು ಬಿಸಾಡುವುದು…ಇಷ್ಟೆಲ್ಲ ಅವನೊಬ್ಬನಿಂದ ಹೇಗೆ ಸಾಧ್ಯವಾಯಿತು? ಬಾಲಕ ಅವನನ್ನೇ ‘ಅಂಕಲ್’ ಎಂದೇಕೆ ಕರೆದ?…ಹಾಗಾದರೆ ಆ ಬಾಲಕನಿಗೆ ಇವನ ಪರಿಚಯವಿತ್ತೆ?

ಅಕಸ್ಮತ್ತಾಗಿ ಹಿಂದೆ ನಡೆದ ಘಟನೆಯೊಂದು ನೆನಪಿಗೆ ಬಂದು ಮೈ ಬೆವರಲಾರಂಭಿಸಿತು. ಇಂದಿಗೆ ಸುಮಾರು ಎರಡು-ಎರಡೂವರೆ ವರ್ಷಗಳ ಹಿಂದೆ ಇದೇ ರಸ್ತೆಯಲ್ಲಿ ಅಡ್ಡಾಡುತ್ತಿರುವಾಗ ಒಂದೂವರೆ-ಎರಡು ವರ್ಷದ ಮಗುವೊಂದು ಆಟವಾಡುತ್ತ ಮುಖ್ಯ ರಸ್ತೆಗೆ ಬಂದುಬಿಟ್ಟಿತ್ತು. ಮಗು ಇನ್ನೇನು, ವೇಗವಾಗಿ ಬರುತ್ತಿರುವ ಟ್ರಕ್ ಅಡಿಗೆ ಬೀಳುವುದರಲ್ಲಿತ್ತು. ಆಗ ಇವನೇ ಜೀವದ ಹಂಗು ತೊರೆದು ಮಗುವನ್ನು ಹೈ-ವೇಯಿಂದ ಎಳೆದು ತಂದಿದ್ದ. ತಾನು ಸಾಕಷ್ಟು ಗಾಯಗಳನ್ನೂ ಮಾಡಿಕೊಂಡಿದ್ದ. ಒಂದು ಕ್ಷಣ ತಡ ಮಾಡಿದ್ದರೂ… ಈ ಸಾಹಸಕ್ಕಾಗಿ ಜಿಲ್ಲಾಧಿಕಾರಿಯವರು ಒಂದು ಸಾವಿರ ರೂಪಾಯಿಗಳ ಬಹುಮಾನ ಕೊಟ್ಟು ಸತ್ಕರಿಸಿದ್ದರಲ್ಲದೆ, ‘ಹಿಂದೂ-ಮುಸ್ಲಿಂ ಐಕ್ಯತೆಗೊಂದು ಮಾದರಿ’ ಎಂಬ ಶಿರೋನಾಮೆಯೊಂದಿಗೆ ಪತ್ರಿಕೆಗಳ ಸ್ಥಾನೀಯ ಪುಟಗಳಲ್ಲಿ ಇವನ ಫೋಟೋ ಕೂಡ ಪ್ರಕಟಿಸಿದ್ದರು. ಎಲ್ಲ ನೆನಪಾಗುತ್ತಿದ್ದಂತೆ ಮರಳಿ ಅದೇ ಸ್ಥಳಕ್ಕೆ ಧಾವಿಸಿದ. ರಕ್ತದ ಮಡುವಿನಲ್ಲಿ ತೇಲುತ್ತಿರುವ ಬಾಲಕನ ಹೆಣ ಇನ್ನೂ ಅಲ್ಲಿಯೇ ಬಿದ್ದುಕೊಂಡಿತ್ತು. ಹತ್ತಿರ ಹೋಗಿ ಬಾಲಕನ ಮುಖವನ್ನು ದಿಟ್ಟಿಸಿ ನೋಡಿದವನು ಜೋರಾಗಿ ಚೀರಿಕೊಂಡ.

ಹೌದು, ಎರಡು-ಎರಡೂವರೆ ವರ್ಷಗಳ ಹಿಂದೆ ಟ್ರಕ್ ಅಡಿಗೆ ಬೀಳುವ ಇದೇ ಮಗುವನ್ನು ಅವನು ರಕ್ಷಿಸಿದ್ದ ನೆನಪು ಹಸಿಯಾಗುತ್ತಿದ್ದಂತೆ ಬಾಲಕನ ಹೆಣವನ್ನು ಬಾಚಿ ಮನುಷ್ಯನಂತೆ ಬಿಕ್ಕಿ-ಬಿಕ್ಕಿ ಅಳಲಾರಂಭಿಸಿದ.

******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮನುಷ್ಯ-ರಾಕ್ಷಸ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter