“ನಾವ್ ಸಾಯವೇ ಸ್ವರ್ಗ ಕಾಣವೇ. ಮಜ್ಗೆ ಇಲ್ದೇ ಊಟ ಮಾಡ ಕಷ್ಟ ಸರಸಿ ಕೇಳವು” ಎಂದು ತನಗೊಬ್ಬಳಿಗೇ ಕೇಳಿಸುವಂತೆ ಮಾತಾಡಿಕೊಳ್ಳುತ್ತ ಲಲಿತಕ್ಕ ಹಾಲಿಗೆ ನೆರವು ಹಾಕಿ ಮಲಗಲು ಅಣಿಯಾದಳು. ದಣಪೆಯಾಚೆ ಸರಸಿಯ ಗಂಡ ದಿವಾಕರ ಕಂಠಮಟ್ಟ ಕುಡಿದು ಕೂಗುತ್ತಿದ್ದ ಸದ್ದು ಬೇಲಿಯುದ್ದಕ್ಕೂ ಹಬ್ಬಿದ್ದ ರಾತ್ರಿರಾಣಿಯ ಗಿಡಗಳ ಸಂದಿಯಿಂದ ಹೊರಬಂದು ಲಲಿತಕ್ಕ ಮಲಗುವ ಮಾಳಿಗೆಯವರೆಗೂ ತಲುಪಿತ್ತು. ನಾಳೆ ಸೋಮವಾರ, ಹೇಗೂ ಮಜ್ಜಿಗೆ ಕಡೆಯುವ ಕೆಲಸವಿಲ್ಲ, ಒಂದು ಲೀಟರಾಗುವಷ್ಟು ಮೊಸರನ್ನೇ ಸರಸಿಗೆ ಕೊಟ್ಟರೆ ಮಕ್ಕಳು ಖುಷಿಯಿಂದ ತಿಂತವೆ ಎಂದು ಯೋಚಿಸುತ್ತ ಲಲಿತಕ್ಕ ಹಾಸಿಗೆ ಬಿಡಿಸಿದಳು. ಅಷ್ಟೂ ಹೊತ್ತು ಸರಸಿಯ ಮಕ್ಕಳೊಂದಿಗೆ ಆಟವಾಡುತ್ತಿದ್ದ ಬೆಕ್ಕು ಸದ್ದಿಲ್ಲದೆ ಕಿಟಕಿಯ ಸರಳುಗಳ ನಡುವೆ ನುಸುಳಿ ಒಳಬಂದು ಲಲಿತಕ್ಕನ ಕಾಲಿನ ಹತ್ತಿರ ಮಲಗಿ ನಿದ್ರೆಹೋಯಿತು.
ಘಟ್ಟದ ಕೆಳಗಿನ ಸರಸಿ ಮದುವೆಯಾಗಿ ಮಾರಿಮಕ್ಕಿಗೆ ಬರುವವರೆಗೂ ಲಲಿತಕ್ಕನ ಮನೆಯ ಬೆಕ್ಕಿಗೆ ಹೆಸರು ಎನ್ನುವುದೊಂದು ಇರಲಿಲ್ಲ. ಗಂಡನ ಮನೆಗೆ ಬಂದ ಮಾರನೇ ದಿನವೇ, ಆಚಾರಿ ಕೆಲಸಕ್ಕೆ ಹೋಗುತ್ತಿದ್ದ ಗಂಡ ಸೈಕಲ್ಲು ಹತ್ತಿದ್ದೇ ತಡ ಒಂದು ಹಳೆಯ ಸ್ಟೀಲ್ ಉಗ್ಗ ಹಿಡಿದು “ಚೂರು ಮಜ್ಗೆ ಇದ್ರೆ ಕೊಡ್ರಾ. ನಂಗೆ ಮಜ್ಗೆ ಇಲ್ದೇ ಎರಡು ತುತ್ತು ಅನ್ನನೂ ಹೊಟ್ಟೆಗೆ ಇಳಿಯೂದಿಲ್ಲ” ಎನ್ನುತ್ತ ಲಲಿತಕ್ಕನ ಮನೆಗೆ ಬಂದಿದ್ದಳು ಸರಸಿ. ಅವಳ ಅತ್ತೆ-ಮಾವ ದಿವಾಕರನ ಮದುವೆಯಾಗುವುದನ್ನೇ ಕಾಯುತ್ತಿದ್ದವರಂತೆ ಇವನ ಕಾಟ ತಪ್ಪಿದರೆ ಸಾಕು ಎಂದು ಇನ್ನೊಬ್ಬ ಮಗನ ಮನೆಗೆ ಹೊರಟುಹೋಗಿದ್ದರು. ಮದುವೆಯಾಗಿ ಎರಡೇ ದಿನಕ್ಕೆ ಗಂಡನ ಕುಡಿತದ ಚಟ ಅರಿವಾಗಿಹೋಗಿತ್ತು ಸರಸಿಗೆ. ಮಾತುಮಾತಿಗೂ ಹ್ಹೇ ಹ್ಹೇ ಎಂದು ನಗುತ್ತಿದ್ದ ಮುಗ್ಧೆ ಸರಸಿಗೂ, ಸಂಜೆಯಾಗುವುದನ್ನೇ ಕಾಯುತ್ತಿರುವವನಂತೆ ಸಿಕ್ಕಿದ್ದು ಕುಡಿದು ಸೈಕಲ್ಲು ತುಳಿಯುವ ತ್ರಾಣವೂ ಇಲ್ಲದೇ ತಳ್ಳಿಕೊಂಡೇ ಮನೆ ತಲುಪುತ್ತಿದ್ದ ದಿವಾಕರನಿಗೂ ಹೊಂದಾಣಿಕೆಯೆನ್ನುವುದು ಹೇಗೂ ಸಾಧ್ಯವಾಗದ ಮಾತಾಗಿತ್ತು; ಉಳಿದಿದ್ದೆಂದರೆ ಮದುವೆಯೊಂದಿಗೆ ಹೊಂದಾಣಿಕೆ ಮಾತ್ರ!
ಮಜ್ಜಿಗೆ ಕೇಳಲು ಬಂದಿದ್ದ ಸರಸಿಗೆ ಮೊದಲು ಸ್ನೇಹ ಬೆಳೆದಿದ್ದು ಲಲಿತಕ್ಕನ ಬೆಕ್ಕಿನಮರಿಯೊಂದಿಗೆ. ಲಲಿತಕ್ಕ ಶಿವರಾತ್ರಿಯ ಪೂಜೆ ಮುಗಿಸಿ ಶಿವಸ್ಥಾನದಿಂದ ಮನೆಗೆ ಬರುವ ಒಳದಾರಿಯಲ್ಲಿ ಹೊಟ್ಟೆಗಿಲ್ಲದೇ ಸಾಯುವ ಸ್ಥಿತಿಯಲ್ಲಿದ್ದ ಬೆಕ್ಕಿನಮರಿಯನ್ನು ಎತ್ತಿಕೊಂಡು ಬಂದಿದ್ದಳು. ಅದಕ್ಕೊಂದು ಹೆಸರಿಡಬೇಕೆನ್ನುವ ಯೋಚನೆ ಅವಳಿಗೆ ಬಂದಿದ್ದೇ “ಇದ್ರ ಹೆಸ್ರು ಎಂತದ್ರಾ?” ಎನ್ನುವ ಸರಸಿಯ ಪ್ರಶ್ನೆಯಿಂದಾಗಿ. ಲಲಿತಕ್ಕ ಸರಸಿಯ ಉಗ್ಗಕ್ಕೆ ಮಜ್ಜಿಗೆ ಎರೆಸುತ್ತ ಬೆಕ್ಕಿಗೆ ಯಾವ ಹೆಸರನ್ನಿಡಬಹುದು ಎಂದು ಯೋಚಿಸುತ್ತಿರುವಾಗ ಸರಸಿಯೇ “ಇದಕ್ಕೆ ಕಾಜುಗಣ್ಣಲ್ರಾ, ಕಾಜಿ ಅಂತ ಹೆಸರಿಡುವ” ಎಂದು ಲಲಿತಕ್ಕನ ಸಮಸ್ಯೆಯನ್ನು ಪರಿಹರಿಸಿದ್ದಳು. ಮೊದಮೊದಲು ಸರಸಿ ಕಾಜಿಯನ್ನು ಹುಡುಕಿದರೆ, ದಿನಗಳು ಕಳೆದಂತೆ ಸರಸಿ ಬರುವುದನ್ನೇ ಕಾಯುತ್ತ ಕುಳಿತಿರುತ್ತಿತ್ತು ಕಾಜಿ. ಕ್ರಮೇಣ ಸರಸಿಯ ಹಿಂದೆಯೇ ಅವರ ಮನೆಗೂ ಬರಲಾರಂಭಿಸಿತು. ತನ್ನ ಒಂಟಿತನಕ್ಕೆ ಹೀಗೊಂದು ಜೊತೆ ಸಿಕ್ಕಿದ್ದಕ್ಕೆ ಸರಸಿ ಅದೆಷ್ಟು ಖುಷಿಪಟ್ಟಳೆಂದರೆ ಕಾಜಿಯನ್ನು ಬಗಲಲ್ಲಿಟ್ಟುಕೊಂಡೇ ತಿರುಗಲಾರಂಭಿಸಿದಳು.
ದಿವಾಕರನಿಗೂ ಸರಸಿಯಲ್ಲಾದ ಬದಲಾವಣೆ ಕಾಣಿಸದೇ ಇರಲಿಲ್ಲ. ಮದುವೆಯಾಗಿ ಬಂದಾಗಿನಿಂದ ಏನನ್ನೋ ಕಳೆದುಕೊಂಡವಳಂತೆ ಬದುಕುತ್ತಿದ್ದವಳು ಇದ್ದಕ್ಕಿದ್ದಂತೆ ಪ್ರಪಂಚದ ಸಕಲ ಸಂತೋಷವನ್ನೂ ಸೆರಗಿನಲ್ಲಿ ಕಟ್ಟಿಕೊಂಡಿರುವಂತೆ ಚುರುಕಾಗಿದ್ದಕ್ಕೆ ಕಾರಣ ಹುಡುಕುವಷ್ಟು ಸಮಯವಾಗಲೀ, ಸಹನೆಯಾಗಲೀ ಅವನಿಗೆ ಇರಲಿಲ್ಲ. ಸರಸಿ ಬಸುರಾದಾಗಲೂ ಸಂತೋಷವನ್ನೇನೂ ವ್ಯಕ್ತಪಡಿಸದೇ, “ಗಂಡು ಹಡೀಲಿಲ್ಲ ಅಂದ್ರೆ ಅಪ್ಪನಮನೆಲ್ಲೇ ಇದ್ಬುಡು. ಹೆಣ್ಣು ಹೊತ್ಕೊಂಡು ಬಂದ್ರೆ ಬಡದು ಸಾಯಿಸ್ಬಿಡ್ತೇನೆ” ಎಂದು ಕುಡಿದು ಕೂಗಾಡಿದ್ದ. ಹೆಣ್ಣು ಹೆತ್ತರೆ ಗತಿಯೇನು ಎನ್ನುವ ಭಯದಲ್ಲೇ ರಾತ್ರಿ ಕಳೆದಿದ್ದ ಸರಸಿ ಬೆಳಗಾಗುತ್ತಿದ್ದಂತೆಯೇ ಲಲಿತಕ್ಕನನ್ನು ಹುಡುಕಿಕೊಂಡು ಬಂದಿದ್ದಳು. “ಗಂಡು ಹಡೀಲಿಕ್ಕೆ ಏನಾದ್ರೂ ಔಷಧಿ ಇದ್ರೆ ಹೇಳ್ರಾ. ಹೆಣ್ಣು ಹಡದ್ರೆ ಗಂಡನೂ ಇಲ್ಲ, ಕಾಜಿಯೂ ಇಲ್ಲ” ಎಂದವಳ ಮುಗ್ಧತೆಗೆ ಲಲಿತಕ್ಕನ ಹತ್ತಿರ ಉತ್ತರವಿರಲಿಲ್ಲ. ಕಾಜಿ ಮಾತ್ರ ಯಾವತ್ತಿನಂತೆ ಸರಸಿಯ ಮಡಿಲಲ್ಲಿ ಮಲಗಿ ಸುಖವಾಗಿ ನಿದ್ರಿಸುತ್ತಿತ್ತು.
ಸರಸಿಗೆ ಹೆಣ್ಣುಮಗು ಹುಟ್ಟಿದೆ ಎನ್ನುವ ಸುದ್ದಿಯನ್ನು ದಿವಾಕರನೇ ಬಂದು ಲಲಿತಕ್ಕನಿಗೆ ಹೇಳಿದ್ದ. “ಆ ಹಡಬೆ ಮನೆಗೆ ಬಂದ್ರೆ ಹುಟ್ಟಲಿಲ್ಲ ಅನ್ನಿಸಿಬಿಡ್ತೇನೆ. ಅಪ್ಪನಿಗೆ ಹುಟ್ಟಿದ ಮಗಾ ನಾನು” ಎಂದು ಕೂಗುತ್ತ ತೂರಾಡುತ್ತಲೇ ಮನೆಗೆ ಹೋದವ ಮತ್ತೆ ಮುಖ ತೋರಿಸಿರಲಿಲ್ಲ; ಬಾಣಂತನ ಮುಗಿಸಿ ಸರಸಿಯ ಅಪ್ಪ ಮಗಳನ್ನು ಗಂಡನ ಮನೆಗೆ ಬಿಡಲೆಂದು ಬಂದಾಗಲೂ ನಾಲ್ಕು ದಿನ ಮನೆಯ ಕಡೆ ತಲೆಹಾಕಿರಲಿಲ್ಲ. ಸರಸಿ ಮಾತ್ರ ಮನೆಗೆ ಬಂದವಳೇ ಮಗಳನ್ನು ಲಲಿತಕ್ಕನ ಮಡಿಲಲ್ಲಿಟ್ಟು ನಮಸ್ಕಾರ ಮಾಡಿ, ಕಾಜಿಯನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು “ನಮ್ಮ ಕಾಜಿಗೆ ಯಾವಾಗ ಮಗಳು ಹುಟ್ಟೂದು?” ಎನ್ನುತ್ತ ಹ್ಹೇ ಹ್ಹೇ ಎಂದು ನಕ್ಕಿದ್ದಳು.
ಒಂದಾದ ಮೇಲೊಂದರಂತೆ ಮೂರು ಹೆಣ್ಣುಮಕ್ಕಳನ್ನು ಹಡೆದ ಸರಸಿ, ಮದುವೆಯಾಗಿ ಹತ್ತನೇ ವರ್ಷಕ್ಕೆ ರವೀಶನನ್ನು ಹೆತ್ತು ಮತ್ತೆ ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಂಡಳು. ಕಾಜಿಯ ಮರಿಗಳನ್ನು ಮಾತ್ರ ಒಂದೋ ಮಾಳಬೆಕ್ಕು ಎತ್ತಿಕೊಂಡು ಹೋಗುತ್ತಿತ್ತು, ಉಳಿದವು ಮತ್ತಿಗಾರ ಕೇರಿಯ ನಾಯಿಗಳ ಪಾಲಾಗುತ್ತಿದ್ದವು. “ನೋಡ್ರಾ, ನನ್ನ ಮನೆ ತುಂಬಾ ಮಕ್ಕಳು. ಕಾಜಿಗೆ ಮಾತ್ರ ಒಂದೂ ಉಳಿಯೂದಿಲ್ಲಲ್ರಾ” ಎಂದು ಸರಸಿ ಕೊರಗುತ್ತಿದ್ದ ದಿನಗಳಲ್ಲೇ ಕಾಜಿಯೂ ಇದ್ದಕ್ಕಿದ್ದಂತೆ ಕಾಣೆಯಾಯಿತು. ಮಗ ಹುಟ್ಟಿದ ಸಂಭ್ರಮದಲ್ಲಿ ದಿವಾಕರ ಕುಡಿಯುವುದನ್ನು ಕಡಿಮೆ ಮಾಡಿದರೆ ಸರಸಿ ಮಾತ್ರ ಕಾಜಿಯಿಲ್ಲದೇ ಕಂಗಾಲಾಗಿದ್ದಳು. ಮಗನಿಗೆ ಹಾಲು ಕುಡಿಸಿದರೆ ಕುಡಿಸಿದಳು, ಇಲ್ಲವಾದರೆ ಇಡೀ ದಿನ ಕಾಜಿ ಆಟವಾಡುತ್ತಿದ್ದ ಅಂಗಳದ ಮಣ್ಣಿನ ಮಂಚದ ಮೇಲೆ ಕುಳಿತು ಉಗುರಿನಿಂದ ಮಣ್ಣು ಕೆರೆಯುತ್ತ ಕುಳಿತರೂ ಕುಳಿತಳೇ! ಹೆಣ್ಣುಮಕ್ಕಳ ಮೇಲಿನ ಕಾಳಜಿಗೆ ಲಲಿತಕ್ಕನೇ ಮಜ್ಜಿಗೆ ತಂದುಕೊಡುವ ರೂಢಿಯನ್ನೂ ಮಾಡಿಕೊಂಡಳು. ಲಲಿತಕ್ಕ ಮನೆಗೆ ಬಂದಾಗಲೆಲ್ಲ “ಕಾಜಿ ಕೂದಲು ಎಷ್ಟು ಚಂದ ಇತ್ತು ಅಲ್ಲನ್ರಾ!” ಎಂದೋ, “ಕಾಜಿ ಇದ್ದಿದ್ರೆ ಇಷ್ಟೊತ್ತಿಗೆ ನಮ್ಮನೆಲ್ಲೇ ಇರ್ತಾ ಇತ್ತು!” ಎನ್ನುತ್ತಲೋ ಪೆದ್ದುಪೆದ್ದಾಗಿ ನಗುತ್ತ ಮಕ್ಕಳ ಸಿಂಬಳ ಒರೆಸುತ್ತಿದ್ದಳು ಸರಸಿ. ಅವಳ ಆ ಪೆದ್ದುನಗೆಗಾಗಿಯೇ ಕಾದಿರುತ್ತಿರುವವಳಂತೆ “ಕೆಲಸ ಉಂಟೇ ಮಾರಾಯ್ತಿ” ಎನ್ನುತ್ತ ಲಲಿತಕ್ಕ ಉಗ್ಗದೊಂದಿಗೆ ವಾಪಸ್ಸಾಗುತ್ತಿದ್ದಳು. ದಿನಗಳು ಕಳೆದಂತೆ ಕಾಜಿಯ ಮಂಚವನ್ನು ಸಾರಿಸುವವರಿಲ್ಲದೇ ಕೆರೆದ ಕಲೆಗಳೆಲ್ಲ ಹಾಗೆಯೇ ಉಳಿದುಹೋದವು. ಕಾಜಿಗೆಂದು ಎರೆದಿಟ್ಟ ದೋಸೆ ಇರುವೆಗಳ ಪಾಲಾಯಿತು. ಸರಸಿ ನೆನಪುಗಳಲ್ಲಿಯೇ ಕಳೆದುಹೋದಳು.
ರವೀಶ ಹುಟ್ಟಿ ಒಂದು ವರ್ಷವಾಗಿತ್ತಷ್ಟೇ. ಆಗಷ್ಟೇ ನಡೆಯಲು ಕಲಿತಿದ್ದವ ಅಕ್ಕಂದಿರ ಹಿಂದೆ ಓಡಲು ಹೋಗಿ ಬಿದ್ದು ಪೆಟ್ಟುಮಾಡಿಕೊಂಡಿದ್ದ. ದಿವಾಕರನಿಗೆ ಗೊತ್ತಾದರೆ ತನಗೂ ನಾಲ್ಕು ಪೆಟ್ಟು ಬೀಳುವುದು ಖಚಿತ ಎನ್ನುವ ಭಯದಲ್ಲಿ ಸರಸಿ ಲಲಿತಕ್ಕನ ಹತ್ತಿರ ಇನ್ನೂರು ರೂಪಾಯಿ ಕೇಳಿ ಪಡೆದುಕೊಂಡು ಸುಡುವ ಬಿಸಿಲಿನಲ್ಲಿಯೇ ರವೀಶನನ್ನು ಎತ್ತಿಕೊಂಡು ಬಸ್ ಸ್ಟಾಪಿಗೆ ಓಡಿದ್ದಳು. ಬಸ್ಸು ಬರುವ ಯಾವ ಲಕ್ಷಣವೂ ಕಾಣಿಸದೇ, ಅಡುಗೆ ಕಾಂಟ್ರಾಕ್ಟರ್ ಸುರೇಶಣ್ಣನ ಓಮ್ನಿಗೆ ಕೈಮಾಡಿ ಮಗನೊಂದಿಗೆ ಹತ್ತಿ ಕುಳಿತು ಹತ್ತು ನಿಮಿಷವೂ ಆಗಿರಲಿಲ್ಲ. ಅಡುಗೆ ಸಾಮಾನುಗಳೊಂದಿಗೆ ಗಡಗಡ ಸದ್ದುಮಾಡುತ್ತ ಕುಳಿತಿದ್ದ ಗ್ಯಾಸ್ ಸಿಲಿಂಡರಿಗೆ ಬೆಂಕಿ ಹೊತ್ತಿಕೊಂಡಿದ್ದು ಸರಸಿಯ ಗ್ರಹಚಾರವೇ ಇರಬೇಕು! ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದ್ದೇ ಸುರೇಶಣ್ಣ ಓಮ್ನಿಯನ್ನು ನಿಲ್ಲಿಸಿ ರವೀಶನನ್ನು ಹೊರಗೆ ಎಳೆದುಕೊಳ್ಳುವಷ್ಟರಲ್ಲಿ ಸರಸಿಯ ನೈಲಾನ್ ಸೀರೆಗೆ ಬೆಂಕಿ ತಾಗಿ ಕರಗಿದ ಸೀರೆ ಅವಳ ಮೈಗೆಲ್ಲ ಅಂಟಿಕೊಂಡಾಗಿತ್ತು. ಅಲ್ಲೇ ಇದ್ದ ಮತ್ತಿಮರದಿಂದ ಹಸಿಸೊಪ್ಪು ತಂದು ಸರಸಿಯ ಮೈಗೆ ಅಂಟಿಕೊಂಡಿದ್ದ ಬೆಂಕಿ ಆರಿಸಿದ ಸುರೇಶಣ್ಣ ಹಾಲಿನ ವ್ಯಾನೊಂದರಲ್ಲಿ ಸರಸಿಯನ್ನೂ, ರವೀಶನನ್ನೂ ಒಟ್ಟಿಗೇ ಆಸ್ಪತ್ರೆಗೆ ಕರೆದುಕೊಂಡು ಹೋದ.
ಸುಟ್ಟ ಸೀರೆ ಅಂಟಿಕೊಂಡ ಜಾಗಗಳ ಮಾಂಸವೇ ಕರಗಿಹೋದಂತೆ ಸರಸಿಯ ಮೈಮೇಲೆ ಅಲ್ಲಲ್ಲಿ ಹೊಂಡಗಳಾಗಿಹೋಗಿದ್ದವು. ಆಸ್ಪತ್ರೆಯಿಂದ ಮನೆಗೆ ಬಂದಳಾದರೂ ಅವಳು ಮತ್ತೆ ಮೊದಲಿನಂತಾಗುತ್ತಾಳೆ ಎನ್ನುವ ಖಾತ್ರಿ ಡಾಕ್ಟರುಗಳಿಗೂ ಇರಲಿಲ್ಲ. ಲಲಿತಕ್ಕ ಪ್ರತಿದಿನವೂ ಮಜ್ಜಿಗೆಯ ಉಗ್ಗದೊಂದಿಗೆ ರವೀಶನಿಗೆಂದು ಹಾಲನ್ನೂ ತಂದುಕೊಡಲಾರಂಭಿಸಿದಳು. “ನಮ್ಮ ಕಾಜಿ ಪಾಲಿನ ಹಾಲು ರವೀಶ ಕುಡಿಯೋ ಹಂಗಾಯ್ತು ನೋಡ್ರಾ” ಎಂದು ಪದೆಪದೆ ಹೇಳುತ್ತಿದ್ದ ಸರಸಿಯ ನೆನಪಿಗೆ ಕಾಜಿ ಮತ್ತಷ್ಟು ಬಲವಾಗಿ ಅಂಟಿಕೊಂಡಿತು. ದಿವಾಕರ ಸಾವಕಾಶವಾಗಿ ಮತ್ತೆ ಹಳೆ ಚಾಳಿಗೆ ಅಂಟಿಕೊಂಡ. ತಿಂಗಳಾದರೂ ಸರಸಿಯ ಸುಟ್ಟ ಗಾಯಗಳು ಒಣಗದೇ ಇದ್ದಾಗ ಲಲಿತಕ್ಕನೇ ಅವಳನ್ನು ನಾಟಿವೈದ್ಯರಲ್ಲಿಗೆ, ಹಳ್ಳಿಔಷಧಿ ಕೊಡುವವರ ಹತ್ತಿರ ಕರೆದುಕೊಂಡು ಹೋಗಲಾರಂಭಿಸಿದಳು. ಗಾಯ ಒಣಗುವವರೆಗೂ ವಿಶ್ರಾಂತಿಯ ಅಗತ್ಯವಿದೆಯೆಂದು ವೈದ್ಯರು ಹೇಳಿದರೂ, ನಾಲ್ಕು ಮಕ್ಕಳನ್ನು ಕಟ್ಟಿಕೊಂಡು ಕುಡುಕ ಗಂಡನೊಂದಿಗೆ ಏಗುತ್ತಿದ್ದ ಸರಸಿಗೆ ವಿಶ್ರಾಂತಿಯೆನ್ನುವುದೆಲ್ಲ ಯೋಚನೆಗೂ ಮೀರಿದ ಸಂಗತಿಯಾಗಿತ್ತು. ಹಸಿಗಾಯದಿಂದ ಸುರಿದ ರಸಿಕೆ ಸೀರೆಯನ್ನೂ ಒದ್ದೆಮಾಡುವಷ್ಟು ವಿಪರೀತಕ್ಕೆ ಹೋಯಿತು. ದಿನ ಬೆಳಗಾದರೆ ಅವಳ ಪರಿಸ್ಥಿತಿಗೆ ಮರುಗುತ್ತಿದ್ದ ಲಲಿತಕ್ಕ ಮಕ್ಕಳಿಗೆ ಊಟವನ್ನೂ ತಾನೇ ತಂದುಕೊಡಲಾರಂಭಿಸಿದಳು.
ಆವತ್ತು ದೀಪಾವಳಿಯ ಸಂಜೆ ಲಲಿತಕ್ಕನ ಮನೆಯ ತುಳಸಿಪೂಜೆ ಮುಗಿಸಿ ಸರಸಿ ಮನೆಗೆ ಬರುವಷ್ಟರಲ್ಲಿ, ಅಕ್ಕಂದಿರೊಂದಿಗೆ ಪಟಾಕಿ ಹೊಡೆಯಲು ಮತ್ತಿಗಾರ ಕೇರಿಗೆ ಹೋಗಿದ್ದ ರವೀಶ ಪುಟ್ಟದೊಂದು ಬೆಕ್ಕಿನಮರಿಯೊಂದಿಗೆ ವಾಪಸ್ಸಾಗಿದ್ದ. ಒಂದು ಕೈಯಿಂದ ಜಾರಿಬೀಳುತ್ತಿದ್ದ ಚಡ್ಡಿಯನ್ನು ಮೇಲಕ್ಕೆಳೆದುಕೊಳ್ಳುತ್ತ ಇನ್ನೊಂದು ಕೈಯಲ್ಲಿ ಬೆಕ್ಕಿನಮರಿಯನ್ನು ಎತ್ತಿಕೊಂಡು ದಣಪೆ ದಾಟಿ ಮಣ್ಣಿನ ಮಂಚದ ಮೇಲೆ ಕೂರಿಸಿ ಅದರ ಪುಟ್ಟ ಬಾಲದೊಂದಿಗೆ ಆಟವಾಡತೊಡಗಿದ. ಲಲಿತಕ್ಕನ ಮನೆಯಿಂದ ತಂದಿದ್ದ ತೆಂಗಿನ ಕರಟಗಳನ್ನು ಕಟ್ಟಿಗೆಮನೆಯಲ್ಲಿ ಜೋಡಿಸಿಡುತ್ತಿದ್ದ ಸರಸಿ ಮಕ್ಕಳ ಗಲಾಟೆಗೆ ಅಂಗಳಕ್ಕೆ ಬಂದರೆ ಅವಳ ಕಣ್ಣಿಗೆ ಬಿದ್ದಿದ್ದು ಬೆಕ್ಕಿನಮರಿ. ಬೆಳಗ್ಗೆ ಲಲಿತಕ್ಕ ಕೊಟ್ಟಿದ್ದರಲ್ಲೇ ಸ್ವಲ್ಪ ಹಾಲನ್ನು ಲೋಟಕ್ಕೆ ಸುರಿದು ಅದಕ್ಕೆ ಕುಡಿಸಿದವಳು ಕುಂಟುತ್ತಲೇ ಲಲಿತಕ್ಕನ ಮನೆಗೆ ಓಡಿದಳು. ಆಗಷ್ಟೇ ಹಬ್ಬ ಮುಗಿಸಿ ಜಗಲಿಯ ಮಂಚದ ಮೇಲೆ ಅಡ್ಡಾಗಿದ್ದ ಲಲಿತಕ್ಕನ ಹತ್ತಿರ “ಲಗೂ ಬನ್ರಾ. ನಮ್ಮನೆಗೆ ಮರಿಕಾಜಿ ಬಂದದೆ. ನೀವು ನಂಬೂದಿಲ್ಲ. ಕಾಜಿ ಹಂಗೇ ಅದೆ” ಎನ್ನುತ್ತ ಅವಳ ಕೈಹಿಡಿದು ಎಳೆಯುತ್ತಲೇ ದಣಪೆ ದಾಟಿದಳು. ಹಾಲು ಕುಡಿದು ರವೀಶನ ಮಡಿಲಲ್ಲಿ ಮಲಗಿದ್ದ ಮರಿಯನ್ನು ಲಲಿತಕ್ಕನ ಕೈಗೆ ಕೊಟ್ಟು, “ನಮ್ಮ ಕಾಜಿನೇ ಮತ್ತೆ ಹುಟ್ಟಿಬಂದದೆ. ಇದಕ್ಕೆ ತುಳಸಿ ಹೇಳಿ ಹೆಸರಿಡುವ. ತುಳಸಿ ಸಾಯೂದಿಲ್ರಾ. ಮೈತುಂಬ ಬೀಜ ಆಗ್ತದೆ. ಹೊಸಹೊಸ ಗಿಡ ಹುಟ್ತದೆ” ಎಂದವಳೇ ತುಳಸಿಕಟ್ಟೆಗೆ ಆತುಕುಳಿತು ಸೆರಗಿನಿಂದ ಬೆವರು ಒರೆಸಿಕೊಳ್ಳಲಾರಂಭಿಸಿದಳು.
ತುಳಸಿಯೇ ಕಾಜಿಯಾಗಿ, ಕಾಜಿಯೇ ತುಳಸಿಯ ರೂಪದಲ್ಲಿ ಸರಸಿಯ ನೆರಳಾಗಿ ಓಡಾಡಲಾರಂಭಿಸಿದ ಮೇಲೆ ಸರಸಿಯ ಕಾಲುಗಳಿಗೆ ಬಲ ಬರಲಾರಂಭಿಸಿತು. ಅಡುಗೆಕಟ್ಟೆಯ ಮೇಲೆ, ಜಗಲಿಯ ಕಿಟಕಿಗಳ ಮೇಲೆ ಧೂಳು ಹಿಡಿಯುತ್ತಿದ್ದ ಔಷಧಿಯ ಪೊಟ್ಟಣಗಳಿಗೆ ಹೊಸಜೀವ ಬಂದಂತೆ ಗುಳಿಗೆಗಳೆಲ್ಲ ಒಂದೊಂದಾಗಿ ಸರಸಿಯ ಹೊಟ್ಟೆ ಸೇರಿದವು. ವರ್ಷಗಳಿಂದ ಹಸಿಯಾಗಿದ್ದ ಸುಟ್ಟಗಾಯಗಳು ಒಣಗಿದ ಚರ್ಮ ಉದುರಿ ಹೊಸಚರ್ಮ ಹುಟ್ಟುತ್ತಿದ್ದ ಹಾಗೆ ಸರಸಿ ಲಲಿತಕ್ಕನ ಹತ್ತಿರ, “ನಮ್ಮ ಕಾಜಿ ವಾಪಸ್ ಬಂದ್ರೆ ಮಾರಿಗುಡಿಗೆ ಹಣ್ಣು-ಕಾಯಿ ಮಾಡಸ್ತೆ ಅಂತ ಹರಕೆ ಹೇಳ್ಕಂಡಿದ್ದೆ. ನೀವೂ ಬನ್ರಾ. ನಾಳೆ ಫಸ್ಟ್ ಬಸ್ಸಿಗೆ ಹೋಗಿ ಒಂಬತ್ತು ಗಂಟೆ ಬಸ್ಸಿಗೆ ವಾಪಸ್ ಬಂದುಬಿಡುವ” ಎಂದು ಗಂಡನಿಗೆ ಕೇಳಿಸದಂತೆ ಪಿಸುಗುಟ್ಟಿದ್ದಳು. ತಾನು ಸರಸಿಯ ಗಾಯ ಒಣಗಿದರೆ ಮಾರಿಗುಡಿಗೆ ಹಣ್ಣು-ಕಾಯಿ ಮಾಡಿಸುವುದಾಗಿ ಹೇಳಿಕೊಂಡಿದ್ದನ್ನು ಲಲಿತಕ್ಕ ಬಾಯಿಬಿಡದೇ, “ಒಳ್ಳೇದಾಯ್ತು. ಹೋಗ್ಬರುವ” ಎನ್ನುತ್ತ ಸರಸಿಯಂತೆಯೇ ಪೆದ್ದುಪೆದ್ದಾಗಿ ನಕ್ಕಿದ್ದಳು. ಲಲಿತಕ್ಕನಿಗೆ ಸರಸಿಯ ಮೇಲಿರುವ ಕಾಳಜಿ, ಸರಸಿಗೆ ತನ್ನ ಮೇಲಿರುವ ಪ್ರೀತಿಯ ಆಳ ಯಾವುದನ್ನೂ ಅರಿಯದ ತುಳಸಿ ಮಾತ್ರ ರಾತ್ರಿರಾಣಿಯ ಗಿಡದ ಬುಡವನ್ನು ಪರಪರ ಕೆರೆಯುತ್ತ ಆಟವಾಡಿಕೊಂಡಿತ್ತು. ರವೀಶ ಅತ್ತಿತ್ತ ಅಲ್ಲಾಡುತ್ತಿದ್ದ ಅದರ ಬಾಲವನ್ನು ಹಿಡಿಯಲು ಯತ್ನಿಸುತ್ತ ಕೊನೆ-ಮೊದಲಿಲ್ಲದ ಕನಸೊಂದನ್ನು ಹಿಡಿಯಲು ಹೆಣಗಾಡುತ್ತಿರುವವನಂತೆ ಕಾಣಿಸುತ್ತಿದ್ದ.
ತುಳಸಿಗೆ ಐದು ವರ್ಷ ತುಂಬಿತ್ತು. ಸರಸಿಯ ದೊಡ್ಡಮಗಳು ರಜನಿ ಮನೆಗೆಲಸವನ್ನೆಲ್ಲ ಒಬ್ಬಳೇ ನಿಭಾಯಿಸುವಷ್ಟು ದೊಡ್ಡವಳಾಗಿದ್ದಳು. ರವೀಶ ಅಕ್ಕಂದಿರೊಂದಿಗೆ ತಾನೂ ಪಾಟಿಚೀಲ ಹಾಕಿಕೊಂಡು ಶಾಲೆಗೆ ಹೋಗಲು ಶುರುಮಾಡಿದ್ದ. ಸರಸಿ ಲಲಿತಕ್ಕನ ಮನೆಯಲ್ಲಿ ಅಡಿಕೆ ಸುಲಿಯುತ್ತ, ತೋಟದ ಕಳೆ ಕೀಳುತ್ತ ಅಷ್ಟಿಷ್ಟು ಕಾಸು ಸಂಪಾದಿಸಿಕೊಳ್ಳುತ್ತಿದ್ದಳು. ತುಳಸಿ ಸರಸಿಯ ಹಿಂದೆಮುಂದೆ ಸುತ್ತುತ್ತ ಕಾಜಿಯಿಲ್ಲದ ನೋವು ಅವಳನ್ನು ಬಾಧಿಸದಂತೆ, ಪ್ರೀತಿ-ಸ್ನೇಹಗಳಿಗೇ ಜೀವಬಂದಂತೆ ದಣಪೆಯಿಂದಾಚೆಗೂ ಈಚೆಗೂ ಓಡಾಡುತ್ತಿತ್ತು; ಮಕ್ಕಳಿಲ್ಲದ ಲಲಿತಕ್ಕ, ಮನೆತುಂಬ ಮಕ್ಕಳಿರುವ ಸರಸಿ ಇಬ್ಬರನ್ನೂ ಬೆಸೆಯುವ ಕೊಂಡಿಯಾಗಿತ್ತು. ಪೆದ್ದಿಯೆಂದೇ ಎಲ್ಲರಿಂದಲೂ ಕರೆಸಿಕೊಳ್ಳುವ ಸರಸಿ ತುಳಸಿಯೊಂದಿಗೆ ಪೆದ್ದುಪೆದ್ದಾಗಿ ಮಾತಾಡುತ್ತಾ ನಗುವಾಗಲೆಲ್ಲ ಸೃಷ್ಟಿಯೇ ಸಹನೆಯಾಗಿ, ಪ್ರೇಮವಾಗಿ, ಸರಸಿಯಾಗಿ ತನ್ನೆದುರು ನಿಂತಂತೆ ಭಾಸವಾಗುತ್ತಿತ್ತು ಲಲಿತಕ್ಕನಿಗೆ. ದಿವಾಕರ ಮಾತ್ರ ತುಳಸಿ ಕಣ್ಣಿಗೆ ಬಿದ್ದರೆ ಸಾಕು ಕಾಲಿನಿಂದ ತಳ್ಳುತ್ತ, “ಬೆಕ್ಕಿಗೆ ಯಾರಾದ್ರೂ ತುಳಸಿ ಅಂತ ಹೆಸರಿಡ್ತ್ರ, ತುಳಸಿ ಅಂತೆ ತುಳಸಿ, ಹುಚ್ಚು” ಎಂದು ಗೊಣಗುತ್ತ ಬದುಕಿನೆಡೆಗಿನ ತನ್ನ ಅಸಹನೆಯನ್ನೆಲ್ಲ ತುಳಸಿಯ ಮೇಲೆಯೂ, ಸರಸಿಯೆಡೆಗೂ ಒಟ್ಟಿಗೇ ತೋರಿಸುತ್ತಿದ್ದ. ಪ್ರೀತಿ-ಮಮಕಾರಗಳ ಲವಲೇಶವೂ ಇಲ್ಲದ ಗಂಡನೊಂದಿಗೆ ಸರಸಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದ್ದಕ್ಕೆ ಕಾಜಿಯೇ ಕಾರಣ ಎನ್ನುವುದು ಸರಸಿ ಹಾಗೂ ಲಲಿತಕ್ಕ ಇಬ್ಬರಿಗೇ ಗೊತ್ತಿರುವ, ಜಗತ್ತಿನ ಕಣ್ಣಿಗೆ ವಿಲಕ್ಷಣವೆನ್ನಿಸಬಹುದಾದ ಸತ್ಯವಾಗಿತ್ತು.
ಆಷಾಢದ ಮಳೆ ಒಂದು ವಾರದಿಂದ ಬಿಡುವಿಲ್ಲದೇ ಸುರಿಯುತ್ತಿತ್ತು. ಮಳೆನೀರು ಸಿಡಿದು ಒದ್ದೆಯಾಗಿದ್ದ ಕಟ್ಟಿಗೆಯಿಂದ ಬಚ್ಚಲೊಲೆಗೆ ಬೆಂಕಿ ಹೊತ್ತಿಸುವಷ್ಟರಲ್ಲಿ ಸರಸಿಗೆ ಸಾಕುಸಾಕಾಗಿತ್ತು. ಸ್ನಾನಕ್ಕೆ ನೀರು ಇನ್ನೂ ಬಿಸಿಯಾಗಿಲ್ಲ, ಕೆಲಸಕ್ಕೆ ಹೋಗಲು ತಡವಾಯಿತೆಂದು ಕೂಗಾಡುತ್ತಲೇ ಬಚ್ಚಲುಮನೆಗೆ ಬಂದಿದ್ದ ದಿವಾಕರ. ಒಲೆಯೆದುರು ಕುಳಿತು ಒದ್ದೆಯಾಗಿದ್ದ ಪಾಟಿಚೀಲವನ್ನು ಒಣಗಿಸುತ್ತಿದ್ದ ರಜನಿಯನ್ನು ಕಂಡವನೇ, “ಅಜ್ಜಿಗೆ ಅರಿವೆ ಚಿಂತೆ ಆದರೆ ಮೊಮ್ಮಗಳಿಗೆ ಮಿಂಡನ ಚಿಂತೆ ಅಂಬಂಗಾಯ್ತು. ಹೆಣ್ಣು ಹೆತ್ತುಹೆತ್ತು ಜೀವ ತಿಂದಿದ್ದಲ್ದೇ ಈಗ ಶಾಲೆ ಸಂಭ್ರಮ ಬೇರೆ. ಇವರ ಸಾಕೂದ್ರಲ್ಲೇ ನನ್ನ ಜೀವ್ನ ಮುಗೀತು” ಎನ್ನುತ್ತ ಕಾಲಿನಿಂದ ಅವಳನ್ನು ತಳ್ಳಿದ. ದೋಸೆಬಂಡಿಗೆ ಎಣ್ಣೆ ಹಚ್ಚುತ್ತಿದ್ದ ಸರಸಿ ಅದನ್ನು ಕಂಡವಳೇ ಧಡಕ್ಕನೆ ಎದ್ದು ಒಲೆಯಲ್ಲಿ ಉರಿಯುತ್ತಿದ್ದ ಸೌದೆಯೊಂದನ್ನು ಎತ್ತಿಕೊಂಡು ಗಂಡನೆಡೆಗೆ ಧಾವಿಸಿದಳು. “ಇನ್ನೊಂದ್ಸಲ ನನ್ನ ಮಕ್ಕಳ ಸುದ್ದಿಗಾಗಲೀ, ತುಳಸಿ ತಂಟೆಗಾಗಲೀ ಬಂದ್ರೆ ಸುಟ್ಟು ಸಾಯಿಸ್ಬಿಡ್ತೆ. ನಂಗೆ ಬೇಕಾದ್ ಹೆಸರಿಡ್ತೆ. ನನ್ನ ಮನಸಿಗೆ ಬಂದಿದ್ ಪ್ರೀತಿ ಮಾಡ್ತೆ. ಪ್ರಾಣಿ, ಪ್ರಾಣಿಗಿರೋ ಯೋಗ್ಯತೆ ಇಲ್ಲದ ಗಂಡಸು ನೀನು” ಎಂದು ಕೂಗುತ್ತ ಬಚ್ಚಲುಕಟ್ಟೆಗೆ ರಪರಪ ಎಂದು ಬಾರಿಸಲಾರಂಭಿಸಿದಳು. ಮದುವೆಯಾದ ಇಷ್ಟೂ ವರ್ಷಗಳಲ್ಲಿ ತಲೆಯೆತ್ತಿ ಮಾತನ್ನೂ ಆಡಿರದೇ ಇದ್ದ ಅವಳ ಆ ಅವತಾರ ನೋಡಿ ದಿವಾಕರ ದಿಗ್ಭ್ರಮೆಗೊಂಡ. ಅವಳು ಮೈ ಸುಟ್ಟುಕೊಂಡಿದ್ದಾಗ ಅನುಭವಿಸಿರಬಹುದಾದ ನೋವೆಲ್ಲವೂ ತನ್ನನ್ನು ಸುಡುತ್ತಿರುವಂತೆ ಚಡಪಡಿಸಲಾರಂಭಿಸಿದ. ಹಂಡೆಯ ನೀರು ಒಮ್ಮೆಲೆ ಕುದಿಯಲಾರಂಭಿಸಿದಂತೆ, ಕುದಿಯುತ್ತಿರುವ ನೀರು ತನ್ನ ಮೈಮೇಲೆ ಸುರಿಯುತ್ತಿರುವಂತೆ ಭಾಸವಾಗಿ ಕಂಪಿಸುತ್ತ ಬಚ್ಚಲುಕಲ್ಲಿನ ಮೂಲೆಯಲ್ಲಿ ಕುಸಿದುಕುಳಿತ. ಕಲ್ಲಿನ ಇನ್ನೊಂದು ಮೂಲೆಯಲ್ಲಿದ್ದ ಮಜ್ಜಿಗೆಯ ಉಗ್ಗಕ್ಕೆ ಕಾಲು ತಾಗಿದ್ದು ಅರಿವಾಗಿ ಸರಕ್ಕನೆ ಕಾಲನ್ನು ಹಿಂದಕ್ಕೆಳೆದುಕೊಂಡು ಮುದುರಿಕೊಂಡ. ಅರೆಬರೆ ಒಣಗಿದ್ದ ಪಾಟಿಚೀಲವನ್ನು ಮಡಿಲಲ್ಲಿಟ್ಟುಕೊಂಡು ಕಂಗಾಲಾಗಿ ಕುಳಿತಿದ್ದ ರಜನಿಯ ಪಕ್ಕ ಸದ್ದಿಲ್ಲದೆ ಬಂದು ಮಲಗಿದ ತುಳಸಿಯ ಕಣ್ಣುಗಳಲ್ಲಿ ಉರಿಯುತ್ತಿರುವ ಬೆಂಕಿ ಪ್ರತಿಫಲಿಸುತ್ತಿತ್ತು.
– ಅಂಜನಾ ಹೆಗಡೆ
ಪೆದ್ದಿ
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಅಂಜನಾ ಹೆಗಡೆ
ಅಂಜನಾ ಹೆಗಡೆ: ಹುಟ್ಟಿ ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ. ಮದುವೆಯಾಗಿ ಬೆಂಗಳೂರಿನಲ್ಲಿ ವಾಸ. ಹತ್ತು ವರ್ಷಗಳ ಕಾಲ ಬಿಪಿಓ ಒಂದರಲ್ಲಿ ಕೆಲಸ ಮಾಡಿದ ಅನುಭವ. "ಕಾಡ ಕತ್ತಲೆಯ ಮೌನಮಾತುಗಳು" ಕವನ ಸಂಕಲನ ಹಾಗೂ "ಬೊಗಸೆಯಲ್ಲೊಂದು ಹೂನಗೆ" ಪ್ರಬಂಧಗಳ ಸಂಕಲನ ಪ್ರಕಟವಾಗಿವೆ. ಓದು-ಬರೆಹದ ಜೊತೆಗೆ ಗಾರ್ಡನಿಂಗ್ ನೆಚ್ಚಿನ ಹವ್ಯಾಸ.
All Posts
4 thoughts on “ಪೆದ್ದಿ”
ಕಥೆ ತುಂಬಾ ಚೆನ್ನಾಗಿದೆ. ಅಭಿನಂದನೆಗಳು ಲೇಖಕರಿಗೆ
ಧನ್ಯವಾದಗಳು ರಾಘವೇಂದ್ರ ಅವರಿಗೆ
nice
Thank u Mr Kashyap