ನಾದಾ@70

ಶುಭಾಶಯಗಳು ಗೆಳೆಯ ನಾದಾಗೆ
ಎಪ್ಪತ್ತು ತುಂಬಿದ ಕುಡ್ಲದ ದಾದಾಗೆ
ಎಪ್ಪತ್ತು ತುಂಬಿದರೂ ಇಪ್ಪತ್ತರ ನಗೆ
ಜೀವನೋತ್ಸಾಹ ಉಕ್ಕುವ ಪರಿಗೆ

ಅಭಿನಂದನೆ, ಗಡಿನಾಡ ಮಲಯಾಳಿಗೆ
ಆ ಭಾಷೆಯ ನಾದ ಈ ಭಾಷೆಗೆ ತಂದ
ಕನ್ನಡಮ್ಮನ ಪ್ರೀತಿಯ ಮನೆಯಾಳಿಗೆ
ಮಾಡಿರುವ ಸಾಧನೆಯ ಸರಮಾಲೆಗೆ

ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕ
ರಂಗಭೂಮಿಯ ನುರಿತ ನಟ, ನಿರ್ದೇಶಕ
ಕಿರುತೆರೆ, ಹಿರಿತೆರೆಗಳಲ್ಲೂ ಹಾಕಿ ಹಾಜರಿ
ತೋರಿದಿರಿ ಪ್ರತಿಭೆಯ ವಿವಿಧ ಮಾದರಿ

ಅನುವಾದಗಳ ಜತೆ ಬರೆದಿದ್ದೀರಿ ಕತೆ
ಕಾದಂಬರಿ, ನಾಟಕ, ಅಂಕಣ, ಕವಿತೆ
ಭೂಮಿಕಾ, ದಾಸಜನ, ಹತ್ತಾರು ಸಮಿತಿ
ಕೇಳಲಿಲ್ಲ ಸಾಕೆಂದರೂ ಸತಿ ಸುಮತಿ

ಮಾಡುತ್ತಲೇ ಇದ್ದಿರಿ ಕರೆಗಳ ಮೇಲೆ ಕರೆ
ಗೆಳೆಯರಿಗೆ, ಎಳೆಯರಿಗೆ ನೆರವಾಗಲು
ಕರೆದ ಕಡೆಗೆಲ್ಲ ಹೋದಿರಿ ನಿಮ್ಮದೆ ಕಾರಲ್ಲಿ
ಲೆಕ್ಕ ಹಾಕದೆ ಕಿಲೊಮೀಟರು, ಪೆಟ್ರೋಲು

ನಾ ಎನ್ನದ ನಾ ದಾಮೋದರ ಮಿತ್ರರಿಗೆ ಸದಾ
ತೆರೆದ ಬಾಗಿಲು, ಸರಳ, ಸೀದಾ ಸಾದಾ
ಎಲ್ಲರಿಗೂ ಹಂಚುತ್ತ ಸ್ನೇಹದಾಮೋದ
ನೂರ್ಕಾಲ ಹೀಗೆಯೇ ಇರಲಿ ಈ ನಾದಾ
-ಎಚ್. ಡುಂಡಿರಾಜ್

* ಎಪ್ಪತ್ತರ ಸಂಭ್ರಮದಲ್ಲಿರುವ ಡಾ.ನಾ.ದಾ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು: ‘ವಿಶ್ವಧ್ವನಿ’ ಬಳಗ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

11 thoughts on “ನಾದಾ@70”

  1. ಕವಿತೆ ಚೆನ್ನಾಗಿದೆ. ಡುಂಡಿರಾಜರು ಹನಿಗವನದ ಬದಲು ಇಷ್ಟುದ್ದ ಕವಿತೆ ಬರೆದಿದ್ದಾರೆ!.. ವಿಶೇಷವೆನಿಸಿತು.

    1. ನಾ.ದಾಮೋದರ ಶೆಟ್ಟಿ

      ಹೌದು. ವಿಷಯ ನಾನಲ್ವೆ! ಅಷ್ಟು ಬರೆಯದಿದ್ದರೆ ಹೇಗೆ?

  2. Dr.poornima Shetty

    ಸಮಯೋಚಿತ ಹಾಗೂ ಅರ್ಥಪೂರ್ಣ ಕವಿತೆ ಸರ್. ಅಭಿನಂದನೆಗಳು
    ನಾ.ದಾಮೋದರ ಸರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

  3. Dr Madhavi S Bhandary

    ನಾದಾರನ್ನು ಇಡಿಯಾಗಿ ಹಿಡಿದಿಟ್ಟ ಅದ್ಭುತ ಕವನ.
    ಕವಿತೆಯ ಜೊತೆಗೆ ನಾದಾರಿಗೆ ಹುಟ್ಟುಹಬ್ಬದ ಶುಭಾಶಯಗಳು.

  4. ಚೆಂದದ ನುಡಿ ಚಿತ್ರ . ನಾದದ ಲಯದಿಂದ ಮಿಂಚುವ ಕವನ ಸರ್ ಜೀ….

  5. ಗೋವಿಂದ ಗೌಡ

    ತುಂಬಾ ತುಂಬಾ ಚೆನ್ನಾಗಿದೆ.
    ಒಂದಕ್ಷರವೂ ಅತಿಶಯವಲ್ಲದ ನೈಜ ಕವಿತೆ.

  6. Raghavendra Mangalore

    ನಾದಾ ಕವಿತೆ ಹಿತವಾದ ನಾದ ಸಂಗೀತದಂತೆ ಇದೆ. ಅಭಿನಂದನೆಗಳು ಕವಿ ಮಹನೀಯರಿಗೆ

  7. ನಾ.ದಾಮೋದರ ಶೆಟ್ಟಿ

    ಪ್ರಿಯ ಡುಂಡಿ,
    ಪ್ರೀತಿಗೆ ಎಲ್ಲೆಯೆಲ್ಲಿ?
    ನೀವು ಎಷ್ಟು ಮೊಗೆದರೂ ಮತ್ತಷ್ಟು ಬಾಕಿಯಿದೆ ಎಂಬುದು ಗೊತ್ತು. ಇನ್ನೇನೆನ್ನಲಿ?

  8. ಕೌಡೂರು ನಾರಾಯಣ ಶೆಟ್ಟಿ

    ದುಂಡಿರಾಜರು ಹನಿ ಹನಿಯಾಗಿ ನೀವು ಹೇಗೆ ಹಳ್ಳವಾದಿರಿ ಎಂದು ಚೆನ್ನಾಗಿ ಕವಿತೆಯ ರೂಪದಲ್ಲಿ ಬರೆದಿದ್ದಾರೆ. ಇಬ್ಬರೂ ಅಸಮ ಬಲರು ತಮ್ಮ ತಮ್ಮ ಸಾಹಿತ್ಯ ರಂಗದಲ್ಲಿ. ಹುಟ್ಟು ಹಬ್ಬದ ಶುಭಾಶಯಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter