ಇನ್ನೊಂದು ರಿ-ಟೇಕ್ ಪ್ಲೀಸ್…

ಘನಶ್ಯಾಮ್ ಅಗ್ರವಾಲ್‍ರ ಹಿಂದಿ ಮಿನಿ ಕತೆಗಳು

ಅನುವಾದ: ಡಾ. ಮಾಧವಿ ಎಸ್. ಭಂಡಾರಿ

“ನೋಡಿ ಮಿಸ್ಟರ್‌ ರಿತೇಶ್‌, ನೀವು ಈ ಮುದುಕನಿಗೆ ಕೆನ್ನೆಗೊಂದು ಬೀಸಿ ಬಾರಿಸ್ತೀರಿ. ಬಾರಿಸಿದಾಗ ಆಗುವ ಧ್ವನಿ-ಪ್ರತಿಧ್ವನಿ ನಾಲ್ಕು ಸೆಕೆಂಡ್‌ ತನಕ ಕೇಳಿಸುವಂತಿರಬೇಕು. ಆಮೇಲೆ ನಿಮ್ಮ ಡೈಲಾಗ್‌ ಹೇಳ್ತೀರಾ. ಕೆನ್ನೆಗೆ ಬಾರಿಸುವ ಈ ದೃಶ್ಯ ಇಡೀ ಸಿನೇಮಾದ ಜೀವಾಳ.” ಹೀರೋಗೆ ಅರ್ಥವಾಗುವಂತೆ ನಿರ್ದೇಶಕರು ವಿವರಿಸಿದರು.

“ಹಾಗಿದ್ದರೆ ಇವತ್ತು ಹೀರೋ ತಾನೇ ಸ್ಟಂಟ್‌ ಮಾಡ್ತಾನೆ. ಕೇವಲ ಕೆನ್ನೆಗೆ ಬಾರಿಸುವ ಎಕ್ಟಿಂಗ್‌ ಅಲ್ಲ, ನಿಜಕ್ಕೂ ನಾನು ಕಪಾಳಕ್ಕೊಂದು ಬಾರಿಸ್ತೇನೆ. ಹಾಗೆ ಮಾಡಿದಾಗಲೇ ಸೀನ್‌ನಲ್ಲಿ ರಿಯಾಲಿಟಿ ಬರೋದು.” ಹೀರೋನ ಈ ರೀತಿಯ ಸಹಯೋಗವನ್ನು ಕಂಡು ಯುನಿಟ್‌ನಲ್ಲಿದ್ದ ಎಲ್ಲರೂ ಖುಷಿಯಿಂದ ಕುಣಿದು ಕುಪ್ಪಳಿಸಿದರು. ಪೆಟ್ಟು ತಿನ್ನಬೇಕಾಗಿದ್ದ ಮುದುಕ ಮೊದಲೇ ತನ್ನ ಗಲ್ಲವನ್ನೊಮ್ಮೆ ನೇವರಿಸಿಕೊಂಡ. ನಿರ್ಮಾಪಕ ನಗುತ್ತ ಅವನಿಗೆ ಹೇಳಿದ, “ಯಾಕಯ್ಯಾ ಹೆದರತಾ ಇದ್ದೀಯಾ? ಹೀರೋ ಕೈಯಿಂದ ಕಪಾಳ ಮೋಕ್ಷಮಾಡಿ ಕೊಂಡರೆ ನಿನ್ನ ಲಕ್ಕುಖುಲಾಯಿಸ ಬಹುದು.ಹೆದರಬೇಡ. ಕೆಪ್ಪೆಗೆ ಬಾರಿಸಿಕೊಳ್ಳೋ ಪ್ರತಿಶಾಟ್‌ಗೂ ನೂರು ರೂಪಾಯಿ ಜಾಸ್ತಿ ಕೊಡ್ತೇನೆ.”

ಚಿತ್ರೀಕರಣದ ಸಿದ್ಧತೆಯೆಲ್ಲ ಪೂರ್ಣಗೊಂಡಿತ್ತು. ಲೈಟ್‌, ಕೆಮರಾ, ಸಾಯಲೆನ್ಸ್‌, ಯಸ್‌, ಎಕ್ಶನ್…‌ ಹೀರೋ ತನ್ನ ಕೈ ಸಾಕಷ್ಟು ಮೇಲೆತ್ತಿ ಬೀಸಿ ಮುದುಕನ ಕೆನ್ನೆಗೊಂದು ಬಾರಿಸಿ, ತನ್ನ ಡೈಲಾಗ್‌ ಹೇಳಿದ.

“ಕಟ್”‌ ಡೈರೆಕ್ಟರ್‌ ಅರ್ಧಕ್ಕೆ ನಿಲ್ಲಿಸಿ ಬಿಟ್ಟರು. “ನೋಡಿ ಹೀರೋ ಸಾಹೇಬರೆ, ನಿಮಗೆ ನಾಲ್ಕು ನಿಮಿಷ ಗ್ಯಾಪ್‌ ತೆಗೆದುಕೊಂಡು ಆ ಮೇಲೆ ಡೈಲಾಗ್‌  ಹೇಳಬೇಕು…ಇದೇ ದೃಶ್ಯವನ್ನು ಮತ್ತೊಮ್ಮೆ ತೆಗೆದುಕೊಳ್ಳೋಣ.”

ಇಷ್ಟು ಚಿಕ್ಕ ದೃಶ್ಯವನ್ನು ರಿ-ಟೇಕ್‌ ಮಾಡುವುದು ಹೀರೋನ ಪಾಲಿಗೆ ಅವಮಾನಕರವೆಂದು ಅನ್ನಿಸಿತಾದರೂ ತಲೆ ಅಲ್ಲಾಡಿಸಿ ಒಪ್ಪಿಕೊಂಡ. ಮತ್ತದೇ ಆರಂಭ, ಹಾಗೆಯೇ “ಕಟ್”… “ನೋಡಿ ಹೀರೋ ಸಾಹೇಬರೆ, ನೀವು ಈ ಬಾರಿ ಗ್ಯಾಪ್‌ ತೆಗೆದು ಕೊಂಡಿದ್ದು ಸ್ವಲ್ಪ ಜಾಸ್ತಿ ಆಯ್ತು… ಪ್ಲೀಸ್‌, ಇನ್ನೊಂದು ಬಾರಿ.” ಡೈರೆಕ್ಟರ್‌  ಹೀರೋಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟರು.

“ಸಾಧ್ಯವಿಲ್ಲ…ಸಾಧ್ಯವೇ ಇಲ್ಲ…ಪ್ಯಾಕ್‌ಅಪ್ಮಾಡಿ. ನನ್ನ ಕೈಸೋತು ಹೋಗಿದೆ. ನನ್ನ ಮೂಡ್‌ಆಫ್‌ ಆಗಿದೆ. ನನಗೆ ಮೂಡ್‌ ಇಲ್ಲವೇ ಇಲ್ಲ.” ಹೀರೋನ ಮಾತುಗಳನ್ನು ಕೇಳಿ ಯುನಿಟ್‌ನಲ್ಲಿದ್ದವರೆಲ್ಲ ನಿರಾಶರಾದರು.

ಒಬ್ಬರಾದ ಮೇಲೊಬ್ಬರು ಬಂದು ಹೀರೋನ ಜೊತೆ ಮಾತಾಡಿದರು. ಊಹೂಂ ಹೀರೋ ಜಪ್ಪಯ್ಯವೆಂದರೂ ಜಗ್ಗಲಿಲ್ಲ. ನಿಧಾನವಾಗಿ ನಿರ್ಮಾಪಕರು ಬಳಿಬಂದರು. “ಪ್ಲೀಸ್‌ ಒಪ್ಪಿಕೊಂಡುಬಿಡಿ. ಇವತ್ತು ಈ ಶಾಟ್‌ ಆಗಲೇ ಬೇಕು.ಇದು ಅನಿವಾರ್ಯವಾದ ದೃಶ್ಯ. ಸಿನೇಮಾದ ಜೀವಾಳ. ನಿಮ್ಮ ಶಾಟ್‌ ತುಂಬಾ ಚೆನ್ನಾಗಿ ಬಂದಿದೆ. ಸ್ವಲ್ಪ ಟೈಮಿಂಗ್‌  ಸರಿಯಾಗಿ ಬಿಟ್ಟರೆ ಈ ಸೀನ್‌ ಸೂಪರ್‌ ಆಗಿಬಿಡ್ತದೆ. ಕೇವಲ ಒಂದೇಒಂದುರಿ-ಟೇಕ್‌ ಪ್ಲೀಸ್.”‌ ನಿರ್ಮಾಪಕರುಹನುಮನ್ ಭಂಗಿಯಲ್ಲಿ ಕೈ ಜೋಡಿಸಿ ನಿಂತರು, ಕಾಲಿಗೆ ಬೀಳುವುದೊಂದು ಬಾಕಿ. ಒಬ್ಬ ಅಸಿಸ್ಟೆಂಟ್‌ ಆಯೋಡೆಕ್ಸ್‌ ಖರೀದಿಸಿ ತಂದು ಹೀರೋನ ಕೈಗೆ ಹಚ್ಚಿ ತಿಕ್ಕಲಾರಂಭಿಸಿದ. ಕೊಂಯ್-ಕೊಸ್‌ ಮಾಡುತ್ತ ಅಂತೂ ಹೀರೋ ಒಪ್ಪಿಕೊಂಡ. ಹೊಸ ಹುಮ್ಮಸಿನೊಂದಿಗೆ ಚಿತ್ರೀಕರಣದ ತಯಾರಿ ನಡೆಯಿತು. “ನೋಡಿ, ಈಗ ಯಾವುದೇ ರೀತಿಯ ಗೊಂದಲ ಆಗಬಾರದು…ಓ.ಕೇ…ಯಸ್…ರೆಡಿ…ಎಕ್ಶನ್…ಕಟ್.”‌ ಈ ಬಾರಿ ದೃಶ್ಯ ತುಂಬಾ ಚೆನ್ನಾಗಿ ಬಂತುಎನ್ನುವಷ್ಟರಲ್ಲಿ ಮುದುಕ ಕೆಡಿಸಿಬಿಟ್ಟ. ಯುನಿಟ್‌ನವರೆಲ್ಲ ಸೇರಿ ಅವನ ಮೇಲೆ ಹರಿಹಾಯಲಾರಂಭಿಸಿದರು. “ಯಾರು ಈ ಮುದುಕ? ಇವನನ್ನು ಕರೆದುಕೊಂಡು ಬಂದವರು ಯಾರು? ಇಷ್ಟು ಸಣ್ಣ ದೃಶ್ಯವನ್ನು ಸರಿಯಾಗಿ ಮಾಡೋದಕ್ಕೆ ಬರೋದಿಲ್ಲ. ಹೊರಗೆ ಕಳಿಸಿ ಇವನನ್ನು. ನಾಳೆಯಿಂದ ಮತ್ತೊಬ್ಬ ಮುದುಕ ಬರ್ತಾನೆ. ಒತ್ತಾಯ ಮಾಡಿ ಅಂತೂ-ಇಂತೂ ಹೀರೋನ ಒಪ್ಪಿಸಿದ್ದಾಗಿತ್ತು. ಇನ್ನು ಅವರ ಮುಂದೆ ಹೇಗಪ್ಪಾ ಹೋಗೋದು?”

ಇದೀಗ ಹೀರೋನನ್ನು ಒಪ್ಪಿಸುವ ಕೈಂಕರ್ಯವನ್ನು ಮುದುಕ ಕೈಗೆತ್ತಿಕೊಂಡ. ಅಳುತ್ತ ಹೋಗಿ ಹೀರೋನ ಕಾಲ ಮೇಲೆ ಬಿದ್ದುಗೋಗರೆದ, “ಪ್ಲೀಸ್‌ ಸಾಹೇಬರೇ, ಇನ್ನೊಂದು ಬಾರಿ ಮಾಡಿಬಿಡಿ. ನನ್ನ ದುಡಿಮೆಯ ಪ್ರಶ್ನೆ. ಇನ್ನು ತಪ್ಪುಆಗೋದಿಲ್ಲ.”  ಪೆಟ್ಟು ತಿಂದೂ-ತಿಂದೂ ಕೆಂಪಾದ ಗಲ್ಲದ ಮೇಲಿಂದ ಕಣ್ಣೀರಿನ ಕೋಡಿಯೇ ಹರಿಯುತ್ತಿತ್ತು. ಹೀರೋ ದ್ರವಿತನಾದ. ಹೀರೋ ಒಪ್ಪಿಕೊಂಡಿದ್ದ ಕಂಡು ಯುನಿಟ್‌ನವರಿಗೆ ಮುದುಕನ ಮೇಲಿನ ಕೋಪತಹಬಂದಿಗೆ ಬರತೊಡಗಿತು.

ಈ ಬಾರಿಶಾಟ್‌ ಓ.ಕೆ ಆಯ್ತು. ಅತ್ಯುತ್ತಮ ಅಭಿನಯಕ್ಕಾಗಿ ಎಲ್ಲರೂ ಹೀರೋನನ್ನು ಹೊಗಳಿದ್ದೇ ಹೊಗಳಿದ್ದು. ಏಟುಕೊಟ್ಟ ಕೈಯನ್ನು ಆಯೋಡೆಕ್ಸ್‌ ಹಚ್ಚಿ ತಿಕ್ಕಿದ್ದೇತಿಕ್ಕಿದ್ದು. ಆ ದಿನದ ಕೆಲಸ ಸಕಾಲದಲ್ಲಿ ಮುಗಿದದ್ದರಿಂದ ಯುನಿಟ್‌ಗೆ ಯುನಿಟೇ ಸಂತಸದ ಅಲೆಯಲ್ಲಿ ತೇಲಾಡುತ್ತಿತ್ತು.

ಸಹಕಲಾವಿದರ ಪೇಮೆಂಟ್‌ ಸರದಿ ಬಂತು. ನಾಲ್ಕು ಬಾರಿ ತಪರಾಕಿತಿಂದದ್ದರಿಂದ ಮುದುಕನಿಗೆ ಹೆಚ್ಚುವರಿಯಾಗಿ ನಾಲ್ಕುನೂರು ರೂಪಾಯಿ ಸಿಕ್ಕಿತು. ಮೂಲೆಯಲ್ಲಿ ನಿಂತು ಕೊಂಡು ನೋಟುಗಳನ್ನು ಎಣಿಸುತ್ತಿದ್ದ ಮುದುಕನ ಬಳಿಹೋಗಿ ಲೈಟ್‌ಬಾಯ್‌ ಕೇಳಿದ, “ಮೂವತ್ತು ವರ್ಷಗಳಿಂದ  ನೀನು ಸಹಕಲಾವಿದನಾಗಿ ಕೆಲಸ ಮಾಡ್ತಾ ಬಂದಿದ್ದೀಯಾ. ಹಾಗಿರುವಾಗ ನಿನ್ನಿಂದ ಅದ್ಹೇಗೆ ತಪ್ಪಾಯ್ತು?”

ಅದಕ್ಕೆ ಮುದುಕ ಮೆಲುದನಿಯಲ್ಲಿ ಉತ್ತರಿಸಿದ, “ನಿಜಹೇಳಬೇಕು ಅಂದರೆ, ನಾನು ಆಸೆಬುರುಕ ನಾಗಿಬಿಟ್ಟಿದ್ದೆ.  ಪ್ರತಿ   ರಿ-ಟೇಕ್‌ಗೂ ನೂರು ರೂಪಾಯಿ ಎಕ್ಸ್ಟ್ರಾಕೊಡ್ತೇನೆ ಅಂತ ಪ್ರೊಡ್ಯೂಸರ್‌ ಹೇಳಿದ್ದರು. ಎರಡು ಬಾರಿ ಹೀರೋ ಅವರಿಂದಾಗಿ      ರಿ-ಟೇಕ್‌ ಆಯ್ತಲ್ವಾ. ನಾನೂ ಒಂದು ರಿ-ಟೇಕ್‌ ಮಾಡಿದರೆ ನಾಲ್ಕನೇ ಶಾಟ್‌ ತೆಗೆದು ಕೊಳ್ತಾರೆ. ನನಗೆ ಇವತ್ತೇ ಮಗಳ ಶಾಲೆಯ ಫೀಸ್‌ ಕಟ್ಟಬೇಕಾಗಿತ್ತು.” ಇಷ್ಟು ಹೇಳಿದವನು ಅತ್ಯಂತ ಸಂತೋಷದಿಂದ ಕೆಂಪಾದ ತನ್ನಗಲ್ಲವನ್ನುನೇವರಿಸಿ ಕೊಳ್ಳತೊಡಗಿದ.

ಈ  ರಿ-ಟೇಕ್‌ನಲ್ಲಿ ಅವನು ತನ್ನಬದುಕಿನ ಅತ್ಯಂತ ಅದ್ಭುತವಾದ ಅಭಿನಯ ನೀಡಿದ್ದ. *

ಮುಂದಿನಬುಧವಾರಇನ್ನೊಂದುಕಿರುಕಥೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter