ಯಾರೊಪ್ಪುವರೋ ಬಿಡುವರೋ
ಮೌನ ಭಾವಗಳಿಗೆ
ಸಮ್ಮತಿಯಿಲ್ಲ ಅಡುಗೆ ಮನೆಯೊಳಗೆ
ಅವರವರ ಇಷ್ಟ ಅನಿಷ್ಟಗಳ ವ್ಯಾಖ್ಯೆಯನು
ಜಪಿಸಿಕೊಳ್ಳುತ್ತಲೇ
ಹಸಿಬಿಸಿ ಹೊಗೆಯೇಳಬೇಕು
ಮೂರ್ಹೊತ್ತು ಅಡುಗೆಮನೆ ಘಮ್ಮೆನಿಸಬೇಕು
ಮೌನದಾಲಯದೊಳು ಸರಿದೆನೆಂದರೆ ಸಾಕು
ಎಣ್ಣೆಗೆ ಇಳಿಬಿಟ್ಟ ಸಾಸಿವೆಯೂ ಸಿಡಿದೇಳುವುದುಂಟು
ಬೇವಿನೆಲೆ ಬೇಸತ್ತು ಮೈಮೇಲೆ ಹಾರುವುದುಂಟು
ಬೆಳ್ಳುಳ್ಳಿ ಚಟಪಟಿಸಿ ಗದರಿಸುವುದುಂಟು.
ಇಷ್ಟಾದರೂ…
ತಹಬಂದಿಯ ಗಂಟು ಬಿಡಿಸದಿದ್ದರೆ
ಆಚೀಚೆ ನೋಡುವಷ್ಟರಲ್ಲಿಯೇ
ಒಗ್ಗರಣೆ ಸೀದು ಕಪ್ಪು ನಗು ಬೀರುವುದುಂಟು
ಕೆಲವೊಮ್ಮೆ ಒಲೆ ಮೇಲಿಟ್ಟ ಅನ್ನ ತಳ ಹಿಡಿದಾಗ
ಹಾಲುಕ್ಕಿ ಹರಿದು ಪಾತ್ರೆ ಬರಿದಾದಾಗ
ಬಿಸಿ ಗೀರು ಮೈಗೊತ್ತಿಕೊಂಡಾಗ
ಎಲ್ಲೋ ಕಳೆದು ಹೋಗಿರುವ
ಅರಿವನ್ನು ಎಳೆತಂದು ಜಗ್ಗುವುದುಂಟು
ಆಗ…
ಮೌನ ಹೇಳದೆಯೇ ಎದ್ದು ಹೋಗುವುದುಂಟು
ಹೀಗೆ ಅದೆಷ್ಟೋ ಬಾರಿ ಹಿಗ್ಗಾ ಮುಗ್ಗ
ಥಳಿಸಿಕೊಂಡ ಮೌನ
ಈಗೀಗ ಅಡುಗೆಮನೆಯೊಳಗೆ ನುಸುಳುವುದಿಲ್ಲ
ಅಡುಗೆಮನೆಯೂ ಬದಲಾಗಿದೆ
ನನ್ನರಮನೆಯಾಗಿ
ಮಾತಿಲ್ಲದೆಯೇ ಬೆರೆತು ರುಚಿಗೊಲಿಯುವ
ಬಗೆಬಗೆಯ ಬಿಂಕ ಬಿನ್ನಾಣದಿ
ವಾಸ್ತವದ ಅರಿವು ಮೂಡಿಸುವ
ಇವೆಲ್ಲವುಗಳ ಜೊತೆಯಲಿ ಮಾತಾಗುತ್ತೇನೆ
ಯಾವುದೋ ರಾಗದ ಗುನುಗಿನಲಿ ಹಾಡಾಗುತ್ತೇನೆ
ಹೊಸಹುರುಪಿನಲಿ ರಸಕಾವ್ಯ ಚಿತ್ರಿಸಲು
ಅಣಿಯಾಗುತ್ತೇನೆ ಅನುದಿನವೂ
ಹೊಂಬೆಳಕಿನ ನಸುನಗುವಿನೊಂದಿಗೆ
14 thoughts on “ಅಡುಗೆ ಮನೆಯೂ ಬದಲಾಗಿದೆ”
ಆಧುನಿಕ ಮಹಿಳೆಯ ಬದುಕಿನ ಸಂಕೀರ್ಣತೆಯನ್ನು ಅರ್ಥಗರ್ಭಿತವಾಗಿ ಅನಾವರಣಗೊಳಿಸುವ ಸುಂದರ ಕವನ. ಶುಭಾಶಯ ಅನಿತಾ ಅವರಿಗೆ…
ಅನಿತಾರರವರೆ ನಿಮ್ಮ ಕವಿತೆ ನಿಜ್ವಾಗ್ಲೂ ತುಂಬಾ ಅರ್ಥಗರ್ಭಿತವಾಗಿದೆ ಹಾಗೂ ಸಮಾಯೋಚಿತವಾಗಿದೆ.


ಧನ್ಯವಾದ ಸರ್
ಧನ್ಯವಾದ ಸರ್
ಅಡುಗೆ ಮನೆಯ ಒಗ್ಗರಣೆ ಘಮ ಘಮಿಸುತ್ತಿದೆ. ಅಭಿನಂದನೆಗಳು


ಧನ್ಯವಾದ
ಅಡುಗೆ ಕೋಣೆಯ ಮೌನದ ದುರವಸ್ಥೆಯನ್ನು ಬಲು ಚಂದವಾಗಿ ನಿರೂಪಿಸಿದ್ದೀರಿ. ಅಡುಗೆ ಕೊನೆಗೂ ಮೌನವನ್ನು ಓಡಿಸಿ ಅಡುಗೆ ಕಲೆಯನ್ನು ತನ್ನದಾಗಿಸಿಕೊಂಡು, ಉಣ್ಣುವವರ ಅಭಿರುಚಿಗೆ ತಕ್ಕಂತೆ ಅಟ್ಟು ಉಣಬಡಿಸಿದರೆ ಸಿಗದೆ ಒಂದು ಧನ್ಯವಾದ ಕೃತಜ್ಞತೆಯ ಮುಗುಳ್ನಗೆ?
ನಿಜ. ಧನ್ಯವಾದ ಸರ್
ನಾವೂ ಬದಲಾಗಿದ್ದೇವೆ ಎಂದೂ ಅರ್ಥ. ಅಲ್ಲವೆ?
good one
Thank you
ನಿಜ. ಧನ್ಯವಾದ ಸರ್
Thank you