ಗುರುವಿನ ಗುಲಾಮನಾಗುವ ತನಕ

(ಸಂಗ್ರಹ: ಪುರಂದರದಾಸರ ಜನಪ್ರಿಯ ಕೀರ್ತನೆಗಳು- ಸಂಪಾದಕರು: ಡಾ. ಶ್ರೀನಿವಾಸ ಹಾವನೂರು, ಹೋ.ರಾ. ಸತ್ಯನಾರಾಯಣರಾವ್)

ರಾಗ: ನಾದನಾಮಕ್ರಿಯ   ತಾಳ: ಆದಿ

ಗುರುವಿನ ಗುಲಾಮನಾಗುವ ತನಕ

ದೊರೆಯದಣ್ಣ ಮುಕುತಿ                      ಪ

ಪರಿಪರಿಶಾಸ್ತ್ರವನೇಕವನೋದಿ

ವ್ಯರ್ಥವಾಯಿತು ಭಕುತಿ                   ಅ.ಪ.

ಆರು ಶಾಸ್ತ್ರವನೋದಿದರಿಲ್ಲ ಮೂ-

ರಾರು ಪುರಾಣವ ಮುಗಿಸಿದರಿಲ್ಲ

ಸಾರಿ ಸಜ್ಜನರ ಸಂಗವ ಮಾಡದೆ

ಧೀರನಾಗಿ ತಾ ಮೆರೆದರೆ ಇಲ್ಲ            ೧

ಕೊರಳೊಳು ಮಾಲೆಯ ಧರಿಸಿದರಿಲ್ಲ

ಬೆರಳೊಳು ಜಪಮಣೆ ಎಣಿಸಿದರಿಲ್ಲ

ಮರುಳನಂತೆ ಶರೀರಕೆ ಬೂದಿಯ

ಒರಸಿಕೊಂಡು ತಾ ತಿರುಗಿದರಿಲ್ಲ          ೨

ನಾರಿಯ ಭೋಗ ಅಳಿಸಿದರಿಲ್ಲ

ಶರೀರಕೆ ಸುಖವ ಬಿಡಿಸಿದರಿಲ್ಲ

ನಾರದ ವರದ ಶ್ರೀ ಪುರಂದರವಿಠಲನ

ಮರೆಯದೆ ಮನದೊಳು ಬೆರೆಯುವ ತನಕ   ೩

———

ಗಾದೆಮಾತಿನಂತೆ ಬಳಕೆಯಲ್ಲಿದೆ ’ಗುರುವಿನ ಗುಲಾಮನಾಗುವ ತನಕ’…  ಆರು ಶಾಸ್ತ್ರಗಳಿವು: ಸಾಂಖ್ಯ, ಯೋಗ, ನ್ಯಾಯ ವೈಶೇಷಿಕ, ಮೀಮಾಂಸಾ ಮತ್ತು ವೇದಾಂತ. ಮೂರಾರು- ಎಂದರೆ ಹದಿನೆಂಟು ಪುರಾಣಗಳು ಪ್ರಸಿದ್ಧವಾಗಿವೆ. ಉಪ ಪುರಾಣಗಳೂ ಇವೆ. ಶರೀರ ಸುಖ ಬಿಡಿಸಿದರೆ- ಎಂದರೆ ವ್ರತ, ಉಪವಾಸಾದಿಗಳನ್ನು ಕೈಕೊಂಡು ಶರೀರಕ್ಕೆ ಕಷ್ಟಕೊಟ್ಟರೆ.

********

“ಗುರು ಪೂರ್ಣೆಮೆಯ ಶುಭಾಶಯಗಳು.”

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಗುರುವಿನ ಗುಲಾಮನಾಗುವ ತನಕ”

  1. Raghavendra Mangalore

    ಗುರು ಪೂರ್ಣಿಮೆ ಸಂಬಂಧ ಪುರಂದರ ದಾಸರು ಎನ್ನುವ ಮಹಾ ಗುರುವಿನ ಬಹಳ ಜನಪ್ರಿಯ ಗೀತೆ “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಇಂದಿನ ವಿಶ್ವಧ್ವನಿಯಲ್ಲಿ ಪ್ರಕಟಿಸಿದ್ದಕ್ಕೆ ಧನ್ಯವಾದಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter