ಬಾಳೇಕಾಯಿ ತತ್ತ್ವ

”ಇಷ್ಟು ದೊರಕಿದರೆ ಅಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಿಷ್ಟರಾಸೆ, ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ ನಷ್ಟಜೀವನದಾಸೆ……”


ಹೊರದೇಶದಲ್ಲಿರುವ ನಮಗೆ ನಮ್ಮ ದೇಶದ ತೋಟದ ತರಕಾರಿಗಳು ಸಿಕ್ಕುವುದು ಅಪರೂಪ. ಇತ್ತೀಚೆಗೆ ಪ್ರಪಂಚದ ಮೂಲೆಮೂಲೆಗಳಿಂದ ಎಲ್ಲ ಸರಬರಾಜಾಗುತ್ತಿದೆ ಎನ್ನುವುದು ಸಂತೋಷದ ಸಂಗತಿ. ಒಮ್ಮೆ ಹೀಗೆ ತರಕಾರಿಗಳನ್ನು ತರಲು ಹೋದ ನನಗೆ ಅಲ್ಲಿ ಬಾಳೇಕಾಯಿ ಇದ್ದದ್ದು ಕಂಡುಬಂತು. ಎಷ್ಟೋ ವರ್ಷಗಳ ನಂತರ ಬಾಳೆಕಾಯಿಯನ್ನು ನೋಡಿದ ಸಂಭ್ರಮದಲ್ಲಿ ನಲ್ಕಾರು ಕಾಯಿಗಳನ್ನು ಹೊತ್ತು ತಂದೆ. ಅದರಲ್ಲಿ ಪಲ್ಯ ಮಾಡಿದರೆ ಬಹಳ ಚೆನ್ನಾಗಿರುತ್ತದೆ. ನಾವು ಚಿಕ್ಕವರಿರುವಾಗ ನಮ್ಮ ಮನೆಯಲ್ಲಿ ಅಮ್ಮ ಬಾಳೆಕಾಯಿ ಪಲ್ಯ ಆಗಾಗ ಮಾಡುತ್ತಿದ್ದರು. ನಾವು ಇದ್ದದು ಹಳ್ಳಿ , ಜೊತೆಗೆ ನಮ್ಮದೇ ತೋಟ. ಕೇಳಬೇಕೆ ಬೇಕೆಂದಾಗ ಬಾಳೆಕಾಯಿ ಮನೆಗೆ ಬರುತ್ತಿರ್ರು. ಶ್ರಾದ್ಧ ಮಾಡಿದಾಗಲಂತೂ ಆಗೆಲ್ಲ ಬರೇ ತೋಟದ ತರಕಾರಿಗಳನ್ನೇ ಉಪಯೋಗಿಸುತ್ತಿದ್ದರು. ಆಗಿನ ಕಾಲದಲ್ಲಿ ಆ ತರಕಾರಿಗಳು ಸುಲಭವಾಗಿ ದೊರಕುತ್ತಿದ್ದವೆಂಬ ಕಾರಣಕ್ಕೆ ಉಪಯೋಗಿಸುತ್ತಿದ್ದರೋ ಏನೋ ತಿಳಿಯದು. ಅದು  ಕ್ರಮೇಣ ಆ ತರಕಾರಿಗಳನ್ನೇ ಶ್ರಾದ್ಧದ ದಿನ ಮಾಡಬೇಕು ಎನ್ನುವ ಮಟ್ಟಕ್ಕೆ ನಂಬಿಕೆ ಬೆಳೆದಿದೆ. ಅದು ಬೇರೆ ವಿಚಾರ.


ಈಗ ನಾನು ಹೇಳಹೊರಟದ್ದು ಅದಲ್ಲ. ಬಾಳೇಕಾಯಿಯನ್ನು ಪಲ್ಯಮಾಡುವ ಯೋಚನೆಯಿಂದ ಅದರ ಸಿಪ್ಪೆಯನ್ನು ತೆಗೆಯ ಹೊರಟೆ. ತಕ್ಷಣ ನನಗೆ ಅದರಲ್ಲಿ ಏನೋ ಒಂದು ಮಹತ್ವದ ಅಂಶ ಕಾಣಿಸಿತು. ಅದನ್ನೇ ನಿಮ್ಮೊಡನೆ ಹಂಚಿಕೊ ಳ್ಳುವ ಮನಸ್ಸಾಯಿತು. ಅದರ ಪ್ರೇರಣೆಯೇ ಈ ಲೇಖನ.   

ನಾನೇನು ಹೇಳುತ್ತಿದ್ದೆ? ಹಾಂ ಹೌದು . ಅಂಗಡಿಯಿಂದ ತಂದ ಬಾಳೇಕಾಯಿಯನ್ನು ಹೆಚ್ಚಲು ಕೈಗೆ ತೆಗೆದುಕೊಂಡೆ. ನೀವು ಏನೇ ಹೇಳಿ ಬಾಳೆಕಾಯಿ ಸಿಪ್ಪೆ ಬಿಡಿಸುವುದು ಬಹಳ ಕಷ್ಟದ ಕೆಲಸ. ಹಿಂದಿನ ಕಾಲದಲ್ಲಾದರೆ ಯಾವುದೇ ಆಧುನಿಕ ’ಸ್ಕ್ರೇಪರ್’ ಇರಲಿಲ್ಲ. ಹಾಗಾಗಿ ಅದನ್ನು ಕತ್ತಿಯಿಂದ ಹೆರೆದು ತೆಗೆದು ಬಿಡುತ್ತಿದ್ದರು. ಅದರೊಡನೆ ಕಾಯಿಯ ಕೊಂಚ ಭಾಗವೂ ಹೋಗಿರುತ್ತಿತ್ತು.ಇಲ್ಲ ಕಾಯಿಯ ಜೊತೆಗೆ ಸಿಪ್ಪೆಯೂ ಅಗಿಯಲು ಸಿಗುತ್ತಿತ್ತು ಎನ್ನುವುದೂ ನಿಜ. ಆದರೆ ಈಗ ನಮಗೆ ನಯವಾಗಿ ಹೆರೆದು ತೆಗೆಯಲು ಸ್ಕ್ರೇಪರ್ ಇದೆ. ಅದನ್ನೇ ಕೈಗೆತ್ತಿಕೊಂಡೆ. ಸಿಪ್ಪೆ ತೆಗೆಯಲು ಹೊರಟಂತೆ ನನಗೆ ಇದರಲ್ಲಿ ಇಡೀ ಜೀವನದ

ಬೋಧನೆಯ ಸಾರವೇ  ಅಡಗಿರುವಂತೆ ತೋರಿತು.  ಒಮ್ಮೆ ಯೋಚಿಸಿ ನೋಡಿದೆ. ನಿಜ ಬಾಳೆಕಾಯಿ ನಮಗೊಂದು ಜೀವನ ತತ್ವವನ್ನೇ ಬೋಧಿಸುತ್ತಿದೆ. ಬಾಳೆಕಾಯಿಯಿಂದ ಸಿಪ್ಪೆಯನ್ನು ಬಿಡಿಸುವ ಪ್ರಯತ್ನ ಮಾಡಿನೋಡಿ! ಎಷ್ಟು ಕಠಿನ ಕಾರ್ಯ. ಎಷ್ಟೇ ನಯವಾಗುವಂತೆ ಹೆರೆದು ತೆಗೆದಿದ್ದೇನೆ ಎಂದುಕೊಂಡರೂ ಅತ್ಯಾಧುನಿಕ ಸ್ಕ್ರೇಪರ್ ಉಪಯೋಗಿಸಿದ್ದರೂ ,ಕಾಯಿಗೆ ಸಿಪ್ಪೆ ಇನ್ನೂ ಅಂಟಿಕೊಂಡೇ ಇರುತ್ತದೆ. ಬೇಯಿಸಿದ ಪಲ್ಯ ತಿನ್ನುವಾಗಲೂ ಬಾಯಿಗೆ ಸಿಪ್ಪೆ ಸಿಗುತ್ತದೆ, ರುಚಿಯನ್ನು ಅಪೂರ್ಣಗೊಳಿಸುತ್ತದೆ. ಇಲ್ಲ ಸಿಪ್ಪೆಯೊಂದಿಗೆ ಒಂದಿಷ್ಟು ಕಾಯಿಯನ್ನೂ  ಹೆರೆದು ತೆಗೆಯಬೇಕಾಗುತ್ತದೆ.


ಕಾಲಕ್ರಮೇಣ ಹಸಿರು ಸಿಪ್ಪೆ ಹಳದಿಯ ಬಣ್ಣಕ್ಕೆ ತಿರುಗ ತೊಡಗಿದಾಗ ಕಾಯಿ ಹಣ್ಣಾಗಿ , ಅಚ್ಚ ಹಸಿರು  ಹೋಗಿ  ಹಳದಿಯಾಗಿ ಹಣ್ಣು ಮಾಗಿದಾಗ, ಸಿಪ್ಪೆಯನ್ನು ಬಿಡಿಸಲು ನೋಡಿ! ಕ್ಷಣಮಾತ್ರದಲ್ಲಿ ಸಿಪ್ಪೆ ನಿರಾಯಾಸವಾಗಿ ಬಿಡಿಸಿಕೊಂಡು ಬರುತ್ತದೆ.ಹಣ್ಣಿಗೆ ಪಕ್ವತೆ ಬಂದಿದೆ. ಮಾಗಿದೆ, ಹಾಗಾಗಿ ಸಿಪ್ಪೆಗೆ ಅಂಟಿಕೊಂಡಿರಬೇಕಾಗಿಲ್ಲ. ಬಹಳ ಸುಲಭವಾಗಿ ಕಳಚಿಕೊಂಡು ಬರುತ್ತದೆ. ಈಗ ಬಾಳೇಹಣ್ಣು ತನ್ನ ಕವಚವೆಂದು ಭಾವಿಸಿದ್ದ ಸಿಪ್ಪೆ ಯಿಂದ ಬಿಡುಗಡೆಯಾಗಲು ಸಿದ್ಧವಾಗಿರುತ್ತದೆ. ಆತ್ಮವೂ ಹಾಗೆಯೇ. ಹುಟ್ಟಿನಿಂದಲೇ ಅರಿಷಡ್ವರ್ಗಗಳೆಂಬ ಕವಚಕ್ಕೆ  ಅಂಟಿಕೊಂಡೇ ಬರುತ್ತದೆ. ಕರ್ಣನಿಗೆ ಕವಚಕುಂಡಲಗಳು ಬಂದಹಾಗೆ. ಅದುಬೇಕು, ಇದುಬೇಕು ಎಂಬ’ಬೇಕು’ಗಳ ಸಂತೆಯಲ್ಲಿ ’ನಾನು. ನನ್ನದು’ ಎಂಬ ಮೋಹ ಜಾಲದಲ್ಲಿ ಮುಳುಗಿ ಒದ್ದಾಡುತ್ತದೆ. ಪ್ರಪಂಚದಲ್ಲಿರುವ ಎಲ್ಲವೂ ನನಗೇ ಬೇಕು ಎಂಬ ಹಂಬಲದಲ್ಲಿದ್ದು ,ಅದು ಸಿಗದಾಗ ಕೊರಗುತ್ತದೆ. ಯಾವುದನ್ನೂ ಬಿಡಲುಸಿದ್ಧವಿರುವುದಿಲ್ಲ.ಕಳೆದುಕೊಳ್ಳುವುದಕ್ಕೂ ಇಷ್ಟಪಡುವುದಿಲ್ಲ.


ಕಾಮ , ಕ್ರೋಧ, ಲೋಭ, ಮೋಹ , ಮದ , ಮಾತ್ಸರ್ಯ ಗಳಲ್ಲಿ ಸಿಲುಕಿ , ಆಗಾಗ ನಿರಾಸೆಯ ಉರುಲಲ್ಲಿ ಹಲುಬುತ್ತದೆ.ಇಡೀ ಜೀವನವೇ ’ನಾನು, ನನ್ನದು’ ಗಳ ಮೇಲೆ ನಿಂತಿರುತ್ತದೆ.  ಬಾಯಲ್ಲಿ ಎಷ್ಟೇ ವೇದಾಂತ ಹೇಳಿದರೂ ಪ್ರತ್ಯಕ್ಷವಾಗಿ ಅನುಸರಿಸಬೇಕಾಗಿ ಬಂದಾಗ “ಆಚಾರ ಹೇಳೋಕ್ಕೆ ಬದನೆ ಕಾಯಿ ತಿನ್ನೋಕೆ” ಎಂಬ ಆಚರಣೆಗೆ ಸಿಕ್ಕಿಹಾಕಿಕೊಳ್ಳುತ್ತದೆ. ಪುರಂದರ ದಾಸರ”ಇಷ್ಟು ದೊರಕಿದರೆ ಅಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಿಷ್ಟರಾಸೆ, ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ ನಷ್ಟಜೀವನದಾಸೆ’ ಎಂಬ ಮಾತು ದಾಸರನ್ನೂ ಸೇರಿದಂತೆ ಎಲ್ಲರನ್ನೂ ಆವರಿಸಿಕೊಂಡಿರುತ್ತದೆ.


ಕ್ರಮೇಣ ಕಾಲ ಕಳೆದಂತೆ, ಬಾಲ್ಯ , ಯೌವ್ವನವಾಗಿ ಜೀವನದ ಉತ್ಸಾಹವನ್ನು ಹೆಚ್ಚಿಸಿ ಹೆಚ್ಚು ಹೆಚ್ಚು ಮೇಲೇರಲು, ಹೆಚ್ಚು ಗಳಿಸಲು , ಕೂಡಿಡಲು ಅಲೋಚಿಸ ತೊಡಗುತ್ತದೆ . ಎಲ್ಲದಕ್ಕಿಂತ ಮೇಲೇರುವ, ಎಲ್ಲರಿಗಿಂತ ಹೆಚ್ಚು ಗಳಿಸುವ,  ಅತಿಹೆಚ್ಚು ಬೆಲೆಯ ವಸ್ತುಗಳನ್ನು ತನ್ನವಾಗಿಸಿಕೊಳ್ಳುವ, ತನ್ಮೂಲಕ ತಾನೇ ಕಟ್ಟಿಕೊಂಡ  ಸಮಾಜದಲ್ಲಿ ತನ್ನ ಪ್ರತಿಷ್ಠೆಯನ್ನು ಬೆಳೆಸಿಕೊಳ್ಳುವ ಆಲೋಚನೆ ಮಾಡುತ್ತದೆ.ಒಂದೇ ಎರಡೇ ತನ್ನ ಸೌಂದರ್ಯ, ತನ್ನ ಶಕ್ತಿ, ತನ್ನ ಪ್ರತಿಷ್ಠೆ ಎಲ್ಲವೂ ಎಲ್ಲರ ಕಣ್ಣು ಕುಕ್ಕುವಂತಿರಬೇಕು ಎಂದು ಬಯಸತೊಡಗುತ್ತದೆ. ಯೌವ್ವನ ಮುಪ್ಪಿಗೆ ತಿರುಗಿ, ದೇಹದ ಶಕ್ತಿಯ ಜೊತೆಗೆ ಉತ್ಸಾಹವೂ ಕುಂದುತ್ತಾ ಬಂದಂತೆ, ಜೀವನದ ನಶ್ವರತೆಯ ಅರಿವಾಗಲು ತೊಡಗುತ್ತದೆ. ಯೌವನದಲ್ಲಿ ಅಂಗಡಿಗಳಲ್ಲಿ ಜೋಡಿಸಿಟ್ಟ ವಸ್ತುಗಳನ್ನು ನೋಡಿದಾಗ ಈ ಮೊದಲು ಕೊಳ್ಳುವುದರಲ್ಲಿ ಕೊಂಡದ್ದನ್ನು ಪ್ರದರ್ಶಿಸುವುದರಲ್ಲಿ ಇದ್ದ  ಉತ್ಸಾಹ ಮಾಯವಾಗಿರುತ್ತದೆ. ಇವಾವುವೂ ತನ್ನ ಜೀವನಕ್ಕೆ ಸಂಬಂಧವೇ ಇಲ್ಲವೇನೋ ಎನಿಸುವ ವೈರಾಗ್ಯ ಕಾಣತೊಡಗುತ್ತದೆ.


ಈ ಹಿಂದೆ ನೋಡಿಯೂ, ಓದಲು ಅಪೇಕ್ಷಿಸದ ಭಗವದ್ಗೀತೆಯ ಪುಟಗಳು ಬಹಳ ಸುಂದರವಾಗಿ ಕಾಣುತ್ತವೆ. ಶ್ಲೋಕಗಳ ಅರ್ಥ  ಬಹಳ ರುಚಿ ಎನಿಸುತ್ತದೆ. ಈ ಮೊದಲು ಯಾವ ಗ್ರಂಥವನ್ನೋದಿದರೂ ಒಂದೇ ಹೆಣ್ಣಿನ ಕಣ್ಣೀರು ಇಲ್ಲ ಗಂಡಿನ ನೆತ್ತರು, ಇಲ್ಲ ಯವುದೋ ಹೊಡೆದಾಟ ಬಡಿದಾಟ ಎಂತೆಲ್ಲ ದೂಷಿಸುತ್ತ  ದೂರಮಾಡಿದ್ದ ಮಹಾ ಗ್ರಂಥಗಳು ವೈರಾಗ್ಯವನ್ನು ಉಪದೇಶಿಸುವ ಗ್ರಂಥಗಳಾಗುತ್ತವೆ.   ದೈವಬಲಕ್ಕಿಂತ ತನ್ನ ತೋಳ್ಬಲವೇ ಬಲ ಎಂದೆಲ್ಲ  ನಂಬಿದ್ದ ಜೀವನದಲ್ಲಿ  ಇದೀಗ ತನ್ನನ್ನೂ ಮೀರಿದ ಒಂದು ಶಕ್ತಿಯ ಅಸ್ಥಿತ್ವದ ಅರಿವಾಗತೊಡಗುತ್ತದೆ. ಜೀವನದಲ್ಲಿ ಯಾವುದಕ್ಕೂ ಅಂಟಿಕೊಳ್ಳಬಾರದೆಂಬ ಸೂತ್ರವನ್ನು ಈಮೊದಲು ಎಷ್ಟೋ ಬಾರಿ ಓದಿದ್ದರೂ, ಹಿರಿಯರಿಂದ ಕೇಳಿದ್ದರೂ ಅದಕ್ಕೆ ಕಿವಿಗೊಡದ ಮನಸ್ಸು ಈಗ ಅದರಲ್ಲಿ ಅತ್ಯಂತ ಕುತೂಹಲವನ್ನು ತೋರುತ್ತದೆ. ಅದನ್ನು ಮನನ ಮಾಡಿಕೊಳ್ಳತೊಡಗುತ್ತದೆ. ಕಡೆಗೊಮ್ಮೆ ಪಕ್ವತೆಯಮಾರ್ಗವನ್ನು ಕಂಡುಕೊಳ್ಳುತ್ತದೆ. ತಾನು ಹೊದ್ದಿರುವ ಹೊದಿಕೆಯಲ್ಲಡಗಿರುವ ಢೋಂಗಿತನವನ್ನು ಎದುರಿಸುತ್ತದೆ, ಅದನ್ನು ನಿರಾಕರಿಸುತ್ತದೆ,


ಆತ್ಮಕ್ಕೆ ಅಂಟಿಕೊಂಡಿರುವ ಕಾಮ ಕ್ರೋಧಗಳ ಸಿಪ್ಪೆಯನ್ನು, ಲೋಭ ಮೋಹಗಳ ಹೊದಿಕೆಯನ್ನೂ ಗುರುತಿಸುತ್ತದೆ.   ತನ್ನಷ್ಟಕ್ಕೆ ತಾನೇ ಪಕ್ವವಾಗಿ “ತ್ರ್ಯಂಬಕಂ ಯಜಾಮಹೆ” ಮಂತ್ರದ  ಅರ್ಥವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸತೊಡಗುತ್ತದೆ. ತನ್ನ ಸ್ವಾರ್ಥಕ್ಕಿಂತ ಬೇರೆಯವರ ಬಗೆಗೆ  ಯೋಚಿಸಲು ಪ್ರಾರಂಭಿಸುತ್ತದೆ. ಜೀವನದ ಸಾರ್ಥಕತೆಯನ್ನು ಕಂಡು ಕೊಳ್ಳಲು ಪ್ರಯತ್ನಿಸುತ್ತದೆ.ಹಣ್ಣಾದ ಕುಂಬಳಕಾಯಿ ತೊಟ್ಟಿನಿಂದ ಸುಲಭವಾಗಿ ಕಳಚಿಕೊಳ್ಳುವಂತೆ ಈ ಜೀವನದಿಂದ ಮುಕ್ತಿ ಪಡೆಯಲು ಹಾತೊರೆಯುತ್ತದೆ.


ಅಂದಮಾತ್ರಕ್ಕೇ ಪ್ರತಿಯೊಬ್ಬರೂ ಜಿವನದ ಆಂತರ್ಯವನ್ನರಿಯುವ ಶಕ್ತಿಯನ್ನು ಪಡೆದಿರುತ್ತಾರೆಂದು ಹೇಳಲು ಬರುವುದಿಲ್ಲ.  ಬಾಯಲ್ಲಿ ಹೇಳಿದರೂ ಅದನ್ನು ನಿಜವಾಗಿ ಅರಿತವರು ಬಹಳ ಕಡಿಮೆ ಮಂದಿಯಾಗಿರುತ್ತಾರೆ. ಪಕ್ವತೆಯನ್ನು ಪಡೆದು ಜೀವನದ ಕ್ಷಣಿಕತೆಯನ್ನು ಅರಿತು ತಾವಿರುವುದು ಬಾಡಿಗೆಯ ಮನೆ ಅದಕ್ಕೆ ರೆತಬೇಕಾದ ಆಯಸ್ಸೆಂಬ ಹಣ ಮುಗಿದ ಕೂಡಲೆ  ಇಲ್ಲಿಂದ ಹೋಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ, ಅ ಕ್ಷಣದಿಂದಲೇ  ತಾವು ಬೇರೊಂದು ಲೋಕಕ್ಕೆ ಸೇರಿದವರಾಗುತ್ತೇವೆ. ವರ್ತಮಾನದಿಂದ ಭೂತಕಾಲಕ್ಕೆ ಹೊರಟುಹೋಗುತ್ತೇವೆ ಎಂಬ ಕಟುಸತ್ಯವನ್ನು ಅರಿತುಕೊಳ್ಳುತ್ತಾರೆ ಎಂದು ಹೇಳಲು ಬರುವುದಿಲ್ಲ. ಹಲವಾರು ಸಾವುಗಳನ್ನು ನೋಡಿದಾಗ, ನರಳುವವರನ್ನು ನೋಡಿದಾಗ ’ ಅಯ್ಯೋ ಇಷ್ಟೇಯೇ ಜೀವನ? ಎಂದು ಉದ್ಗಾರ ತೆಗೆದರೂ  ಆ ನೆನಪು ಹೋದ ಮರುಕ್ಷಣದಲ್ಲಿ ಮತ್ತೆ ಮೊದಲಿನಂತೇ ಆಗುತ್ತಾರೆ.”ನರಿ ಕಕ್ಕೆಕಾಯಿ ತಿಂದಂತೆ ’ ಪಕ್ವತೆಯ ಹಾದಿಗೆ ಬಂದಿದ್ದರೂ ಅದನ್ನು ಗುರುತಿಸಲಾಗದೆ ಜೀವನದ  ಸುಳಿಯಲ್ಲೇ ಮುಳುಗಿ ಅಂತ್ಯಕಾಣುವವರೂ ಬಹಳಷ್ಟು ಮಂದಿ ಇದ್ದಾರೆ. ನನ್ನಂತೆ?

******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter