ಕೆಲಸಕ್ಕೆ ಬಾರದ ಅನಾಮಧೇಯ ವೇಸ್ಟ್ ಫೆಲೋ ಕೂಡ ಸೆಲೆಬ್ರಿಟಿ ಆಗುವ ಅವಕಾಶ ಕಲಿಯುಗದ ಇಪ್ಪತ್ತೊಂದನೆಯ ಶತಮಾನದಲ್ಲಿ ಅಲ್ಲದೇ ಇನ್ಯಾವಾಗ ಆಗಬೇಕು ನೀವೇ ಹೇಳಿ… ರಾತ್ರಿ ಕಳೆದು ಬೆಳಕು ಹರೆಯುವದರೊಳಗೆ ಕೋಟಿಶ್ವರರು ಆಗುವ ಸಮಯದಲ್ಲಿ ಇವನ್ಯಾರಪ್ಪ ಪುಟುಗೋಸಿ ಎನ್ನುವದರೊಳಗೆ ಮಾಧ್ಯಮಗಳು ಎಲ್ಲ ಸೇರಿ ಅವನಿಗೆ ಸೆಲೆಬ್ರಿಟಿ ಪಟ್ಟ ಕಟ್ಟುವ ಕಾಲವಿದು.
ಜನಪ್ರಿಯತೆಯ ಹೂವಿನ ಹಾರ ಕೊರಳಲ್ಲಿ ಹಾಕಿಸಿಕೊಳ್ಳಲು ನೀವು ಸಿಂಹದ ಬಾಯಿಯಲ್ಲಿ ಕೈ ಹಾಕುವುದೋ ಅಥವಾ ಹುಲಿಯ ಬೆನ್ನ ಸವರುವದೋ ಮಾಡಬೇಕಾಗಿಲ್ಲ ಅದಕ್ಕೆ ಬೇಕಾಗಿರುವುದು ಬಾಯಿಗೆ ಬಂದಂತೆ ಜೋರಾಗಿ ಒದರುವ, ಚೀರುವ, ಅವಾಚ್ಯ ಶಬ್ದಗಳಿಂದ ಬಯ್ಯುವ ಕಲೆ ಗೊತ್ತಿದ್ದರೆ ಸಾಕು.. ದೇವರು ಕೊಟ್ಟ ಪಂಚ ಇಂದ್ರಿಯಗಳಲ್ಲಿ ಬಾಯಿನೇ ಶ್ರೇಷ್ಠ… ಬರಿ ಬಾಯಿಯಿಂದಲೇ ಎಷ್ಟೋ ಜನರು ಅನೇಕ ರಂಗಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಅದರಲ್ಲೂ ಮುಖ್ಯವಾಗಿ ದೃಶ್ಯ ಮಾಧ್ಯಮದವರು. ಬಾಯಿ ಇಲ್ಲದವನು ಅದರೊಳಗೆ ಇದ್ದೂ ಸತ್ತಂತಿರುವ ನಾಲಿಗೆಯಿಂದ ಯಾರಿಗೂ ಪ್ರಯೋಜನವಿಲ್ಲ ಅವನಿಗೂ ಸೇರಿ…. ಕಾಲ ಕೂಡಿ ಬಂದರೆ ನಾಯಿ ಕೂಡ ಸಿಂಹಾಸನವೇರುತ್ತದಂತೆ. ಇಲ್ಲ ಅಂದರೆ ದಂಡ ಪಿಂಡದಂತಹ ಗುಂಡ ಇದ್ದಕ್ಕಿದ್ದಂತೆ ಜನಪ್ರಿಯನಾಗಲು ಕಾರಣವೇನು?
ಒಂದು ದಿನ ಮಟ ಮಟ ಮಧ್ಯಾಹ್ನ ಬಳ್ಳಾರಿಯ ಉರಿಬಿಸಿಲಿನಲ್ಲಿ ಬಸ್ ಸ್ಟಾಂಡ್ ಬಳಿ ಸುಯೋಗ ಕೂಡಿ ಬಂತು ಗುಂಡನಿಗೆ. ಅಲ್ಲಿ ಕಾಲೇಜ್ ಡ್ರಾಪ್ ಔಟ್ ಹುಡುಗಪಿ ಜಿ ಹುಡುಗಿಯನ್ನು ಚುಡಾಯಿಸುತ್ತಿದ್ದ. ಅದನ್ನು ನೋಡಿದ ಗುಂಡನಿಗೆ ಏಕೋ ಏನೋ ಬಿಸಿಲಿನ ಬವಣೆಗೆ ಸಿಡು ಕೋಪ ನೆತ್ತಿಗೆ ಹತ್ತಿತು . ಅಷ್ಟೇ ಆ ಸಿಟ್ಟಿನಲ್ಲಿ ಬಾಯಿ ತೆಗೆದ… ಬಾಯಿಂದ ಬಂದ ಒಂದೊಂದೇ ಅಶ್ಲೀಲ ಮತ್ತು ಅವಾಚ್ಯ ಬೈಗಳ ಶಬ್ದಗಳು 2000 ಸರದ ಪಟಾಕಿಗಳ ಶಬ್ದಕ್ಕಿಂತ ಹೆಚ್ಚು ಸೌಂಡ್ ಮಾಡಿದವು. ಬಯ್ಯುವದರಲ್ಲೂ ಡಿಫರೆಂಟ್ ಗುಂಡ. ಉದಾಹರಣೆಗೆ ಸ್ಯಾಂಪಲ್ ಆಗಿ ಒಂದು ಹೇಳೋದಾದರೆ ನೀನು ಹೊಟ್ಟೆಗೇನು ಫಿಜ್ಜಾ ತಿಂತೀಯಾ ಅಥವಾ ಗೋಬಿ ಮಂಚೂರಿ ತಿನ್ನುತ್ತೀಯಾ ಎಂದು ಜೋರಾಗಿ ಗಟ್ಟಿ ಧ್ವನಿಯಲ್ಲಿ ವಾಚಾಮಗೋಚರವಾಗಿ ಬಯ್ಯಲು ಶುರು ಮಾಡಿದಾಗ ಆ ಹುಡುಗ ಗುಂಡನ ವಾಕ್ ಸಂಪತ್ತಿಗೆ ಹೆದರಿ ದೂರ ಓಡಿ ಹೋದ. ಇದೇ ಒಳ್ಳೆಯ ಸಮಯ ಎಂದು ಆ ಹುಡುಗಿ ಸಿಕ್ಕ ಸಿಟಿ ಬಸ್ ಹತ್ತಿ ಪಾರಾದಳು.
ಗುಂಡನ ಬೊಂಬಾಯಿಯಂತಹ ಬಾಯಿಗೆ ಹೆದರಿ ಓಡಿ ಹೋದ ಆ ಹುಡುಗನ ಸಂಬಂಧಿಗಳು ಸಂಜೆ ಗುಂಡನನ್ನು ಎತ್ತಿಕೊಂಡು ಹೋಗಿ ಹುಡುಗನ ತಂದೆ ರೌಡಿ ರಂಗಣ್ಣನ ಮುಂದೆ ತಗಲಾಕಿದರು….
ಏನೋ ತಪರಾಕಿ… ನನ್ನಂಥ ರೌಡಿ ಮಗನನ್ನು ಬಾಯಿಗೆ ಬಂದಂತೆ ಸೂ…..ಮಗನೇ (ಇದು ರಂಗಣ್ಣನ ವಿಷಯದಲ್ಲಿ ಸತ್ಯವಾದದ್ದು)…. ಕಳ್ಳ ಸೂ….ಮಗನೇ ಅಂತ ಬಯ್ತಿಯೇನು… ಎಷ್ಟೋ ಧೈರ್ಯ ನಿನಗೆ.. ಈಗ ಬೊಗಳು ನೋಡೋಣ ಎಂದು ಮೀಸೆ ತಿರುವುತ್ತ ಹಳೆಯ ಸಿನಿಮಾಗಳ ವಜ್ರಮುನಿಯಂತೆ ಕೆಂಗಣ್ಣು ಬಿಟ್ಟು ನೋಡಿದ ರೌಡಿ ರಂಗಣ್ಣ.
ಸುತ್ತೂ ನೆರೆದ ಜನರು ತನ್ನನ್ನು ಯಕಶ್ಚಿತ್ ಹುಳುವಿನಂತೆ ನೋಡುತ್ತಿರುವದನ್ನು ಕಂಡು ಸಿಟ್ಟು ಬಂತು ಗುಂಡನಿಗೆ .. ಬಾಯಿಯನ್ನೇ ನಂಬಿಕೊಂಡು ಜೀವನ ಸಾಗಿಸಬೇಕೆಂದು ಆಗಲೇ ಪಣ ತೊಟ್ಟಿದ್ದ ಗುಂಡ ಮತ್ತೆ ಬಾಯಿ ತೆಗೆದ….
ಬಸ್ ಸ್ಟಾಂಡ್ ನಲ್ಲಿ ನಿನ್ನ ಮಗ ಮಾಡಿದ ಹಲ್ಕಟ್ ಗಿರಿ ಕೆಲಸಕ್ಕೆ ನೀನು ಬುದ್ಧಿವಾದ ಹೇಳೋದು ಬಿಟ್ಟು ನನ್ನ ಮೇಲೆಯೇ ಕೈ ಮಾಡೋಕೆ ಗುಂಡಾಗಳನ್ನು ಕಳಿಸ್ತೀಯೇನಲೆ ಬೋ…. ಡಿ ಮಗನೇ, ಸೂ… ಮಗನೇ ಎಂದು ಅಶ್ಲೀಲ ಬೈಗುಳ ಪರ್ವ ಆರಂಭಿಸಿದ ಗುಂಡ.
ನನ್ನಂಥ ಸೀನಿಯರ್ ರೌಡಿ ಅಂತ ಗೌರವ ಕೂಡ ಕೊಡದೇ ಹೆದರಿಕೆಯೇ ಇಲ್ಲದಂತೆ ಇವನು ಬಾಯಿಗೆ ಬಂದಂತೆ ಒದರುತ್ತಿದ್ದಾನೆ ಅಂದರೆ ಇವನಿಗೆ ಮತ್ತೊಬ್ಬ ರೌಡಿ ತಂಡದ ಸಪೋರ್ಟ್ ಇದ್ದೇ ಇರುತ್ತದೆ ಎಂದು ಮನಗಂಡ ರಂಗಣ್ಣ ಒಂದು ಹೆಜ್ಜೆ ಹಿಂದೆ ಹಾಕಿದ.. ಅದಕ್ಕಾಗಿಯೇ ಕಾಯುತ್ತಿದ್ದ ಗುಂಡ ಒಂದೆರಡು ಹೆಜ್ಜೆ ಮುಂದೆ ಇಟ್ಟ…ನಂತರ ಇಬ್ಬರೂ ಒಂದು ಗೌರವಯುತ ಒಪ್ಪಂದಕ್ಕೆ ಬಂದರು…
ಈ ಬಯಸದೇ ಬಂದ ಭಾಗ್ಯ ಗುಂಡನಿಗೆ ಸೆಲೆಬ್ರಿಟಿ ಆಗಲು ಉತ್ತಮ ಅವಕಾಶ ನೀಡಿತು..ಊರಿನಲ್ಲಿ ಎಲ್ಲರೂ ಗುಂಡನನ್ನು ಹೊಗಳಲು ಶುರು ಮಾಡಿದರು. ಬಜಾರು ರೌಡಿ ರಂಗಣ್ಣನಂಥ ರಂಗಣ್ಣನಿಗೇ ತನ್ನ ಬಾಯಿಯಿಂದ ಬೇಕಾಬಿಟ್ಟಿ ಬಯ್ದು ಆತನ ಬಿ ಪಿ, ಶುಗರ್ ಮತ್ತು ಥೈರಾಡ್ ಹೆಚ್ಚಾಗಲು ಕಾರಣವಾಗಿದ್ದು ಮತ್ತಷ್ಟು ಜನಪ್ರಿಯತೆ ಕೊಟ್ಟಿತು ಗುಂಡನಿಗೆ.
ಗುಂಡನಿಗೆ ಈಗ ತನ್ನ ಪವರ್ ಏನು ಅಂತ ಅರ್ಥವಾಯಿತು. ಹೆಸರು ಗಳಿಸುವದಕ್ಕೆ ಮಲ್ಲ ಯುದ್ಧನೋ ಅಥವಾ ಸಮಾಜ ಸೇವಕನೋ ಆಗಬೇಕಿಲ್ಲ.. ತನ್ನ ನಾಲಿಗಿಗೆ ಸಾಣೆ ಹಿಡಿದು ಬೇಕಾ ಬಿಟ್ಟಿ ಜೋರಾಗಿ ಅವಾಚ್ಯ – ಅಶ್ಲೀಲ ಶಬ್ದಗಳಲ್ಲಿ ಬಯ್ಯುವದನ್ನು ಆರಂಭಿಸಿದರೆ ಸಾಕು ಎಂದು ಜ್ಞಾನೋದಯವಾಯಿತು…ಆಮೇಲಿಂದ ಸ್ವಲ್ಪ ಮಂಡೆ ಬಿಸಿ ಆದರೆ ಸಾಕು ಯಾರನ್ನೋ ಬಯ್ಯಲು ಅಭ್ಯಾಸ ಶುರುವಿಟ್ಟುಕೊಂಡ…
ಊರಲ್ಲಿ ಒಂದು ದಿನ ದೊಡ್ಡ ಸಭೆ ಏರ್ಪಾಟು ಮಾಡಿತು ರಾಜಕೀಯ ಪಕ್ಷವೊಂದು.. ಹೆಸರಾಂತ ನಾಯಕನ ಭಾಷಣ ಕೇಳಲು ಸಾವಿರಾರು ಜನ ನೆರೆದಿದ್ದರು. ಅವರ ಭಾಷಣ ಕೇಳುತ್ತಾ ಜನ ಚಪ್ಪಾಳೆ ತಟ್ಟುತ್ತಿರುವಾಗ ಸರಕ್ಕನೆ ಮೇಲೆದ್ದ ನಿಂತುಕೊಂಡ ಗುಂಡ….ಏನು ಬೇಕು ಎಂದು ನಾಯಕ ಗತ್ತಿನಿಂದ ಪ್ರಶ್ನಿಸಿದ.
ಗುಂಡ ಕೂಡಲೇ ನೀನೊಬ್ಬ ದಗುಲ್ಬಾಜಿ ನಿನ್ನದೊಂದು ರಾಜಕೀಯ ಪಕ್ಷವಲ್ಲ…ಜನಗಳನ್ನು ದೋಚುವದಕ್ಕಾಗಿ ಕಟ್ಟಿಕೊಂಡ ಗುಂಪು ಅಷ್ಟೇ.. ನೀನು ಚುನಾವಣೆಗಳು ಬಂದಾಗ ಎಷ್ಟು ಪಕ್ಷಗಳಿಂದ ಹಣ ಕಿತ್ತುಕೊಂಡಿಯಾ…ಯಾವ ಯಾವ ಹಲಾಲುಕೋರನ ಹಿಂದೆ ಓಡಾಡಿದ್ದೀಯಾ….
ನಿನ್ನ ಕೆಲಸವಾಗಬೇಕಾದರೆ ಎಂಥವರ ಕಾಲು ಹಿಡಿದಿದ್ದಿಯಾ ಅಂತ ನನಗೆಲ್ಲಾ ಗೊತ್ತು… ಒಟ್ಟಿನಲ್ಲಿ ನಿನ್ನ ಜಾತಕ ಎಲ್ಲರಿಗೂ ಕೇಳಿಸುವಂತೆ ಗಟ್ಟಿಯಾಗಿ ಈಗಲೇ ಹೇಳುವುದಕ್ಕೇ ನಾನು ನಿಂತಿರುವೆ….
ಗುಂಡನ ಮಾತು ಕೇಳಿ ಇದ್ದಕ್ಕಿದ್ದಂತೆ ಬಿ. ಪಿ ಹೆಚ್ಚಾಗಿ ತಲೆ ಸುತ್ತಿದಂತಾಯಿತು ಆ ನಾಯಕನಿಗೆ….ನೆರೆದ ಜನರೆಲ್ಲಾ ತನ್ನ ಮಾತು ಕೇಳುವದಕ್ಕಿಂತ ಗುಂಡನ ಮಾತು ಕೇಳಲು ಉತ್ಸಾಹ ತೋರುತ್ತಿದ್ದಾರೆ ಎಂದು ಕ್ಷಣಮಾತ್ರದಲ್ಲಿ ಅರ್ಥ ಮಾಡಿಕೊಂಡ ಆ ಹಿರಿಯ ರಾಜಕಾರಣಿ….ಇವನಿಗೆ ಇಷ್ಟು ಧೈರ್ಯ ಹೇಗೆ ಬಂತು…. ಖಂಡಿತ ಯಾವುದೋ ಗಟ್ಟಿಯಾದ ‘ಬ್ಯಾಕ್ ಗ್ರೌಂಡ್’ ಇವನ ಹಿಂದೆ ಇರಬೇಕು ಎಂದುಕೊಂಡು ಮಾತು ಮುಗಿಸಿ ವೇದಿಕೆಯಿಂದ ಕೆಳಗಿಳಿದ. ಅದನ್ನು ನೋಡಿದ ಗುಂಡ ಮೀಸೆ ಅಡಿಯಲ್ಲಿಯೇ ನಕ್ಕ… ಈಗ ಗುಂಡನ ಹೆಸರು ಮತ್ತಷ್ಟು ಜನಪ್ರಿಯತೆ ಪಡೆಯಿತು.. ರಾಜಕೀಯ ನಾಯಕನನ್ನು ದೊಡ್ಡ ಸಭೆಯಲ್ಲಿ ಪ್ರಶ್ನಿಸಿದ ಗುಂಡ ಸಾಮಾನ್ಯ ಜನಗಳ ಕಣ್ಣಿಗೆ ‘ಹೀರೊ’ ಆಗಿಬಿಟ್ಟ.
ಗುಂಡ ಇನ್ನು ಹಿಂದೆ ನೋಡುವ ಅವಕಾಶ ಮತ್ತೆ ಬರಲಿಲ್ಲ. ಒಬ್ಬ ದೊಡ್ಡ ವ್ಯಕ್ತಿ ಎದುರಲ್ಲಿ ಇರದಿದ್ದರೂ ಅವನ ಮರ್ಯಾದೆ ತೆಗೆಯಲು ತನ್ನ ಹಲ್ಕಟ್ಟು ಬಾಯಿ ಸಾಕು ಎಂದು ಅರ್ಥ ಮಾಡಿಕೊಂಡ. ಇನ್ನು ತಾನು ‘ಸೆಲೆಬ್ರಿಟಿ’ ಆಗಬೇಕೆಂದರೆ ಈಗಾಗಲೇ ‘ಸೆಲೆಬ್ರಿಟಿ’ ಆಗಿರುವವರನ್ನು ಬಾಯಿಗೆ ಬಂದಂತೆ ‘ಪಾರ್ಲಿಮೆಂಟರಿ’ ಶಬ್ದಗಳಿಂದ ನಿಂದಿಸಿ ‘ರಿನ್’ ಪೌಡರಿನಿಂದ ತೊಳೆದು ಬಿಸಿಲಲ್ಲಿ ಒಣಗಲು ಬಿಟ್ಟರೆ ಸಾಕು ಎಂದು ಮನಗಂಡ. ಅಲ್ಲದೇ ಬೇರೆ ಭಾಷೆಗಳ ಬೈಗುಳ ಶಬ್ದ ಭಂಡಾರವನ್ನು ಕೂಡಲೇ ಕಲಿಯಲು ಆರಂಭಿಸಿದ ತನ್ನ ಉದ್ಯಮವನ್ನು ವಿಸ್ತರಿಸಲು….
ಈಗ ಗುಂಡನ ವಾಗ್ಝರಿಗೆ ಬಹಳ ಬೇಡಿಕೆ ಬಂತು. ಟೀ. ವಿ ಚಾನೆಲ್ ನವರು ಗುಂಡನನ್ನು ಸ್ಟುಡಿಯೋಗೆ ಕರೆಸಿಕೊಂಡು ಅವರಿವರನ್ನೆಲ್ಲ ‘ಪ್ಯಾನೆಲ್ ಡಿಸ್ಕಶನ್’ ನೆಪದಲ್ಲಿ ಬಯ್ಯಿಸಿ ತಮ್ಮ ಟೀ. ಪಿ ರೇಟಿಂಗ್ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಆರಂಭಿಸಿದರು. ಒಬ್ಬ ಅನಾಮಧೇಯನನ್ನು, ಬರಿ ಆಧಾರ್ ಕಾರ್ಡ್ ಹೊಂದಿದ ಶ್ರೀ ಸಾಮಾನ್ಯ – ಆನ್ ನೋನ್ ಸಿಟಿಜನ್ ನ್ನು ಮನಸು ಮಾಡಿದರೆ ಸೆಲೆಬ್ರಿಟಿ ಮಾಡುವ ತಾಕತ್ತು ಮಾಧ್ಯಮ ತಂಡಕ್ಕೆ ಅದರಲ್ಲೂ ಮುಖ್ಯವಾಗಿ ಟೀ. ವಿ ತಂಡದವರಿಗೆ ಮಾತ್ರ ಇದೇ ಎಂಬುದಕ್ಕೆ ಗುಂಡನೇ ಸಾಕ್ಷಿ……
ಈಗ ಯಾರು ಬೇಕಾದರೂ ಧಿಡೀರ್ ಸೆಲೆಬ್ರಿಟಿ ಆಗಬೇಕೆನ್ನುವರು ನಮ್ಮ ಗುಂಡನನ್ನು ಒಂದು ಸಲ ಸಂಪರ್ಕಿಸುವದು ಉತ್ತಮ….
2 thoughts on “ಸೆಲೆಬ್ರಿಟಿ ಗುಂಡ…..”
ಚನ್ನಾಗಿ ಮೂಡಿ ಬಂದಿದೆ, ಹೀಗೆ ತಮ್ಮ ಬರವಣಿಗೆ ಮುಂದುವರೆಯಲಿ. ಹೊಸ ಹೊಸ ವಿಚಾರಗಳು ಲೇಖನದ ರೂಪದಲ್ಲಿ ಹೊರ ಬರಲಿ.
Good article. congrats