ಅನುಭವ ವಿಸ್ತರಿಸುವ, ಚಿಂತನೆಗೆ ಹಚ್ಚುವ ಅನುಭಾವ ಸಾಹಿತ್ಯ ವಿಹಾರ

– ಪೂರ್ಣಿಮಾ ಸುಧಾಕರ ಶೆಟ್ಟಿ

ಕೃತಿ:- ಅನುಭಾವ ಸಾಹಿತ್ಯ ವಿಹಾರ(ಸಂಶೋಧನ ಬರಹಗಳು)

ಲೇಖಕರು:- ಡಾ.ಜಿ.ಎನ್.ಉಪಾಧ್ಯ

ಪ್ರಕಟಣೆ:- ಜಾಗೃತಿ ಪ್ರಿಂಟರ್ಸ್, ಬೆಂಗಳೂರು

ಬೆಲೆ:-ರೂ 300

ಕನ್ನಡ ಸಾಹಿತ್ಯದ ತವನಿಧಿಗಳಲ್ಲಿ ದಾಸ ಸಾಹಿತ್ಯ ಹಾಗೂ ವಚನ ಸಾಹಿತ್ಯ ಬಹುಮುಖ್ಯವಾದುದು. ಕರ್ನಾಟಕದಲ್ಲಿ ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯದ ಕೊಡುಗೆ ಮಹತ್ವದ್ದು. ನಾನು, ನನ್ನದು ಎಂಬ ಭಾವದಿಂದ ಹೊರಬಂದು, ಸರ್ವರೂ ಒಂದು ಎಂಬ ಭಾವನೆ ಮೂಡಿಸಿ, ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಹುಟ್ಟಿಕೊಂಡ ಸಾಹಿತ್ಯ ವಚನ ಸಾಹಿತ್ಯ. ಬಸವಣ್ಣನ ನಾಯಕತ್ವದಲ್ಲಿ ಅನುಭವ, ಅನುಭಾವಗಳಲ್ಲಿ ಅಭಿವ್ಯಕ್ತಿಯನ್ನು ಮೂಡಿಸಿ ಪ್ರಾಮಾಣಿಕತೆಯನ್ನು ಮೆರೆದು ಜನರನ್ನು ಮುಟ್ಟಿದ, ತಟ್ಟಿದ ಅನುಭಾವ ಸಾಹಿತ್ಯದ ಸಾರವೇ ಈ ಕೃತಿ. ಅದೇ ರೀತಿ ಭಗವಂತ ಮತ್ತು ಭಕ್ತರ ನಡುವೆ ಕೊಂಡಿಯಂತೆ ಭಕ್ತಿ ಮಾರ್ಗದ ಮೂಲಕ ದಾಸರು ದೇವರನ್ನು ಕಾಣುವ ಸರಳ ಮಾರ್ಗ ತೋರಿದರು. ಇದು ಜನರ ಮೇಲೆ ಬಲು ಬೇಗನೇ ಪ್ರಭಾವ ಬೀರಿತು. ಭಕ್ತಿ ಸಾಹಿತ್ಯ ಹಾಗೂ ಅನುಭಾವ ಸಾಹಿತ್ಯಗಳ ಸತ್ವಭರಿತ ಲೇಖನಗಳ ಸಂಗ್ರಹ ಡಾ.ಜಿ.ಎನ್.ಉಪಾಧ್ಯ ಅವರ ‘ಅನುಭಾವ ಸಾಹಿತ್ಯ ವಿಹಾರ’ ಸಂಶೋಧನ ಬರಹಗಳ ಸಂಗ್ರಹ. ಈ ಕೃತಿಯಲ್ಲಿ ಹದಿನೇಳು ಮೌಲಿಕವಾದ ಲೇಖನಗಳಿವೆ. ಹಾಗೂ ಏಲೇಶ್ವರ ಕೇತಯ್ಯನ ಕುರಿತ ವಿಶೇಷ ಲೇಖನವೂ ಇದೆ.

ಡಾ.ಜಿ.ಎನ್.ಉಪಾಧ್ಯ ಅವರು ಮುಂಬಯಿ, ವಿಶ್ವವಿದ್ಯಾಲಯ, ಕನ್ನಡ ವಿಭಾಗದಲ್ಲಿ ಅನೇಕ ವರ್ಷದಿಂದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಧ್ಯಯನ, ಅಧ್ಯಾಪನ, ಸಂಶೋಧನೆ ಎಂದರೆ ಇವರಿಗೆ ಪಂಚಪ್ರಾಣ. ಇದರ ಜೊತೆಜೊತೆಯಲ್ಲಿಯೇ ಕೃತಿ ರಚನೆಗಳಲ್ಲಿ ಅವರಿಗೆ ವಿಶೇಷ ಆಸಕ್ತಿ. ಸದಾ ಕ್ರಿಯಾಶೀಲರಾಗಿರುವ ಅವರದ್ದು ಓದು, ಬರಹಗಳಲ್ಲಿಯೇ ತಲ್ಲೀನರಾಗುವ ಪ್ರವೃತ್ತಿ. ತಮ್ಮ ವಿದ್ಯಾರ್ಥಿಗಳೂ ಲೇಖಕರಾಗಿ ಬೆಳೆಯಬೇಕೆಂಬ ಅದಮ್ಯ ಬಯಕೆ ಅವರದ್ದು. ಅವರು ತಪಸ್ಸಿನಂತೆ ಅಧ್ಯಯನ, ಅಧ್ಯಾಪನ, ಬರವಣಿಗೆ ಎಲ್ಲದಕ್ಕೂ ಆದ್ಯತೆ ನೀಡುತ್ತಾ ಬಂದದ್ದರಿಂದಲೇ ಇದುವರೆಗೆ 70 ಕೃತಿಗಳನ್ನು ರಚಿಸುವುದು ಸಾಧ್ಯವಾಯಿತು ಎನ್ನಬಹುದು. ತಾವು ಓದಿದ ಅನೇಕ ಒಳ್ಳೆಯ ವಿಷಯಗಳನ್ನು ಕಲೆಹಾಕಿ ಅದನ್ನು ಲೇಖನ ರೂಪದಲ್ಲಿ ತಂದು ಅದರ ಸಾರ, ಸತ್ವವನ್ನು ಇತರರಿಗೂ ಉಣಬಡಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ಹೀಗೆ ಭಕ್ತಿ ಸಾಹಿತ್ಯಕ್ಕೆ ಸಂಬಂಧಿಸಿದ ತಮ್ಮ ಸಂಶೋಧನೆಯ ಕೆಲವು ಮೌಲಿಕವಾದ ಲೇಖನಗಳನ್ನು ಸಂಗ್ರಹವೇ ಈ ‘ಅನುಭಾವ ಸಾಹಿತ್ಯ ವಿಹಾರ’.

ಈ ಕೃತಿಯಲ್ಲಿ ಮುಖ್ಯವಾಗಿ ಭಕ್ತಿ ಸಾಹಿತ್ಯದ ವಿವಿಧ ಆಯಾಮಗಳನ್ನು ತೆರೆದಿಡಲಾಗಿದೆ. ಮುಖ್ಯವಾಗಿ ವಚನ ಸಾಹಿತ್ಯ ಹಾಗೂ ದಾಸಸಾಹಿತ್ಯ, ಸಿದ್ಧರಾಮನ ಜೀವನದ ವಿವಿಧ ಮುಖಗಳು, ಕನಕದಾಸ, ಷರೀಫ, ಸಮರ್ಥ ರಾಮದಾಸ ಇವರೆಲ್ಲರ ಭಕ್ತಿ ಮತ್ತು ಸಾಹಿತ್ಯದ ಪರಾಮರ್ಶೆಯ ಜೊತೆಯಲ್ಲಿ ಉಪೇಕ್ಷಿತ ವಚನಕಾರ ಏಲೇಶ್ವರ ಕೇತಯ್ಯನ ಜೀವನ ವೃತ್ತಾಂತವನ್ನೂ ನೋಡಬಹುದು. ಭಕ್ತಿ ಸಾಹಿತ್ಯಕ್ಕೆ ಶರಣರ, ದಾಸರ ಕೊಡುಗೆಯನ್ನು ಸರಳ, ಸುಂದರವಾಗಿ ವಿವರಿಸಲಾಗಿದೆ.

ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದಾಗಿರುವ ವಚನ ಸಾಹಿತ್ಯದ ಮಹತ್ವವನ್ನು ಸಾರುವ ಲೇಖನ ‘ವಚನ ಸಾಹಿತ್ಯದ ಅನನ್ಯತೆ’ ಗಮನಸೆಳೆಯುವ ಲೇಖನ. ಅತ್ಯಂತ ಸರಳ ಹಾಗೂ ದೇಸಿಯ ಸೊಗಡಿನಿಂದ ಕೂಡಿರುವ ವಚನಗಳು ಜನರಲ್ಲಿ ಆತ್ಮವಿಮರ್ಶೆಯನ್ನು ಮೂಡಿಸಿದ, ಅವರಲ್ಲಿದ್ದ ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಬದುಕಿಗೆ ಬೆಳಕನ್ನು ನೀಡಿದ ನುಡಿ ಮುತ್ತುಗಳು ಎಂದರೆ ತಪ್ಪಾಗಲಾರದು. ಈ ಲೇಖನದಲ್ಲಿ ವಚನ ಸಾಹಿತ್ಯದ ಮೌಲ್ಯ, ಸಮಾಜವ್ಯವಸ್ಥೆಗೆ ಉಗ್ರವಾದ ಪ್ರತಿಕ್ರಿಯೆ ತೋರಿದ ರೀತಿ, ಮಾತಿನಿಂದಲೇ ಜನರ ಮನಪರಿವರ್ತನೆ ಮಾಡಿದ ಸಾಧನೆ, ವಚನದೊಳಗಿರುವ ಸೊಗಸಾದ ಗಾದೆಗಳು, ಎಲ್ಲವನ್ನೂ ಕೆಲವು ಸುಂದರವಾದ ವಚನಗಳ ಮೂಲಕ ಓದುಗರಿಗೆ ರಸದೌತಣವನ್ನೇ ಉಣಬಡಿಸಿದ್ದಾರೆ ಎನ್ನಬಹುದು. ಇದರ ಮುಂದುವರಿದ ಭಾಗದಂತೆ ‘ಭಾರತೀಯ ಭಕ್ತಿ ಪರಂಪರೆಯ ಭಿನ್ನ ಧ್ವನಿ; ವಚನ ಚಳುವಳಿ ಲೇಖನದಲ್ಲಿ ಭಕ್ತಿ ಪರಂಪರೆಯ ಕುರಿತು ಮಹತ್ತರವಾದ ವಿವರಣೆಗಳಿವೆ. ಮುಂದೆ ಅದೇ ಭಕ್ತಿ ಭಾವ ಬದಲಾದ ಕುರಿತು ಲೇಖಕರ ಈ ಮಾತು ತುಂಬಾ ಇಷ್ಟವಾಗುತ್ತದೆ. “ಬಸವಣ್ಣನ ದೆಸೆಯಿಂದ ಶಿವಾನುಭವ ಮಂಟಪದಲ್ಲಿ ಆತ್ಮ ಮಥಿಸಿ ಅನುಭಾವ ಹುಟ್ಟಿತು. ವಚನಧರ್ಮ ಪ್ರಕಾಶಿಸಿತು. ಯಾರು ಯಾರಲ್ಲಿ ವಚನಧರ್ಮ ಪ್ರೇಮ ಗುಪ್ತವಾಗಿ ಸುಪ್ತವಾಗಿ ಇದ್ದಿತೋ ಅದೆಲ್ಲವೂ ಚೇತನಗೊಂಡು ಹರಿಯತೊಡಗಿತು. ಈ ಪ್ರಕಾಶ, ಪ್ರವಾಹ ಕನ್ನಡ ನಾಡಿನಲ್ಲಿ ತಲೆದೋರಿದುವು. ಕನ್ನಡ ಭಾಷೆಯ ಕಿರಣಗಳಿಂದ ಕನ್ನಡ ಭಾಷಾ ವಾಹಿನಿಯಿಂದ ಬೆಳಕು ಹರಡಿತು, ಬೆಳೆ ಎದ್ದಿತು” ಎನ್ನುವ ಮಾತು ಭಕ್ತಿ ಚಳುವಳಿಯಿಂದ ಕನ್ನಡ ನಾಡಿನಲ್ಲಾದ ಅಮೂಲಾಗ್ರ ಬದಲಾವಣೆಯ ಕುರಿತು ಕ್ಷಕಿರಣ ಬೀರುತ್ತದೆ. 

ಮಹಾರಾಷ್ಟ್ರದ ಪ್ರಸಿದ್ಧ ಸಾಂಸ್ಕೃತಿಕ ತಾಣಗಳಲ್ಲಿ ಒಂದಾಗಿರುವ ಸೊಲ್ಲಾಪುರದ ಕುರಿತು ಲೇಖಕರು ವಿಶೇಷ ಅಧ್ಯಯನವನ್ನು ಮಾಡಿ ಕೃತಿಯನ್ನು ಕೂಡಾ ರಚಿಸಿದ್ದಾರೆ. ಇಲ್ಲಿಯೂ ಸೊಲ್ಲಾಪುರದ ಕುರಿತು, ಸಿದ್ಧರಾಮನ ಸಾಧನೆಯ ಬಗ್ಗೆ ಆಯ್ದ ಲೇಖನಗಳಿದ್ದು ‘ ಸಿದ್ಧರಾಮನ ವ್ಯಕ್ತಿತ್ವ ಮತ್ತು ಶಾಸನಗಳ ಹಿನ್ನೆಲೆ’ ಕುತೂಹಲವನ್ನು ಮೂಡಿಸುತ್ತದೆ. ಒಬ್ಬ ಶರಣನ ಶ್ರಮದಿಂದ ಕಿರುವಳ್ಳಿಯೊಂದು ಪಟ್ಟಣವಾಗಿ ಮುಂದೆ ಅದು ಸಾಂಸ್ಕೃತಿಕ ನಗರವಾಗಿ ಬೆಳೆದ ಬಗೆಯನ್ನು ಈ ಲೇಖನದಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ.

 ‘ದಾಸ ಸಾಹಿತ್ಯದ ವೈಶಿಷ್ಟ್ಯ ಮತ್ತು ಪರಂಪರೆ’ ಲೇಖನವೂ ಅನೇಕ ಅಪರೂಪದ ಸಂಗತಿಗಳಿಂದ ಕೂಡಿದ್ದು ಮೋಕ್ಷ ಸಾಧನೆಗೆ ಭಕ್ತಿ ಮಾರ್ಗವೇ ಸರಳ ಮಾರ್ಗವೆಂದು ಸಾರಿ ಹೇಳಿದ ದಾಸ ಸಾಹಿತ್ಯದ ಕುರಿತು ಮನೋಜ್ಞವಾಗಿ ನಿರೂಪಿಸಿದ್ದಾರೆ. ಇಲ್ಲಿ ದಾಸ ಸಾಹಿತ್ಯದ ಆರಂಭ, ದಾಸ ಸಾಹಿತ್ಯವನ್ನು ಕಟ್ಟಿ ಬೆಳೆಸಿದ ಶ್ರೀಪಾದರಾಯರು,  ಉದ್ಧಾಮ ಪಂಡಿತರಾದ ವ್ಯಾಸರಾಯರು, ದಾಸರೆಂದರೆ ಪುರಂದರದಾಸರಯ್ಯಾ ಎಂದು ಗುರುಗಳಿಂದಲೇ ಕೊಂಡಾಟಕ್ಕೆ ಪಾತ್ರರಾಗಿರುವ ಪುರಂದರದಾಸರು, ಕೆಳವರ್ಗದಿಂದ ಬಂದು ಸಂತಶ್ರೇಷ್ಠನಾಗಿ ಬೆಳಗಿದ ಕನಕದಾಸರು ಇವರೆಲ್ಲರ ಜೀವನ, ಸಾಹಿತ್ಯ ಸಾಧನೆ, ಭಕ್ತಿ ಚಳುವಳಿಯ ಪ್ರಚಾರಕ್ಕೆ ಕೊಡುಗೆ ಎಲ್ಲವೂ ಅಧ್ಯಯನದ ಸಾರವಾಗಿ ಹುರಿಗೊಂಡು, ಓದುಗನಲ್ಲಿ ಕುತೂಹವನ್ನು ಸೃಷ್ಟಿಸುತ್ತದೆ. ಲೇಖಕರ ಓದಿನ ಆಳ, ಸೂಕ್ಷ್ಮತೆ, ಪರಿಪಕ್ವತೆಯ ಪರಿಪಾಕ ‘ದಾಸ ಸಾಹಿತ್ಯದಲ್ಲಿ ಮಾನವೀಯತೆ’ ಲೇಖನ. ಇಲ್ಲಿ ಮಾನವೀಯತೆಯ ಕುರಿತಾಗಿಯೇ ಮನಮುಟ್ಟುವಂತೆ ಚಿತ್ರಿಸಿರುವ ಪರಿ ಚಿಂತನೆಗೆ ಹಚ್ಚುತ್ತದೆ.

‘ಸೋರುತಿಹುದು ಮನೆಯ ಮಾಳಿಗೆ’, ‘ಗುಡಿಯ ನೋಡಿರಣ್ಣಾ’ ಮೊದಲಾದ ಗೀತೆಗಳಿಗೆ ಮಾರು ಹೋಗದವರು ಯಾರು? ‘ಅನುಭಾವದ ಅವಧೂತ ಷರೀಫ’ ಕರ್ನಾಟಕದ ಷರೀಫ ಎಂದೇ ಪ್ರಸಿದ್ಧರಾಗಿರುವ ಶಿಶುನಾಳ ಜೀವನ ಯಾನ, ಹಾಡು, ವ್ಯಾಖ್ಯಾನ ಓದುಗರಿಗೆ ಮುದ ನೀಡುತ್ತದೆ.

ಹನ್ನೆರಡನೆಯ ಶತಮಾನದಲ್ಲಿ ಶರಣ ಸಾಹಿತ್ಯದ ಮೂಲಕ ಸಮಾಜದ ಉದ್ಧಾರ, ಧಾರ್ಮಿಕ ಆಂದೋಲನ ನಡೆದು ಹೊಸ ಮನ್ವಂತರಕ್ಕೆ ನಾಂದಿ ಹಾಡಿತು. ವಚನಕಾರರ ದೊಡ್ಡ ಪಟ್ಟಿಯಲ್ಲಿ ಉಪೇಕ್ಷೆಗೆ ಒಳಗಾದ ವಚನಕಾರ ಏಲೇಶ್ವರ ಕೇತಯ್ಯ. “ಭಕ್ತನಾದವನಲ್ಲಿ ಅಹಂಭಾವ ಮೂಡಬಾರದು(ಸೋಹಂಭಾವ). ನಾನು ಪರಶಿವನ ಅಂಗ ಎಂದು ಭಾವಿಸಿಕೊಳ್ಳಬೇಕು. ಆತ ಅರಿವನ್ನು ಅರಿತವನಾಗಿರಬೇಕು” ಎಂದು ಭೋಧಿಸಿದ ಭಕ್ತಿ ಹಾಗೂ ಭಕ್ತರ ಸರಳತೆಯ ಬಗ್ಗೆ ತಿಳಿವನ್ನು ಮೂಡಿಸಿದ.

ಆತ ವೃತ್ತಿಯಿಂದ ಕೃಷಿಕನಾಗಿದ್ದು, ಬಸವಣ್ಣನ ಸಮಕಾಲೀನನಾಗಿದ್ದ. ಕಾಯಕವೇ ಸತ್ಯ ಶುದ್ಧ ಪೂಜೆ ಸಾಧ್ಯವೆಂದು ನುಡಿದ ಕೇತಯ್ಯನ ಬಗ್ಗೆ ವಿದ್ವಾಂಸರು ಹೆಚ್ಚು ಆಸಕ್ತಿ ತೋರಲಿಲ್ಲವೋ ಅಥವಾ ಗಮನ ಹರಿಸಲಿಲ್ಲವೋ. ಅಂತೂ ಅವನ ಬಗ್ಗೆ ಹೆಚ್ಚು ಚರ್ಚೆ ನಡೆದಿಲ್ಲ. ಈ.ಎನ್.ಉಪಾಧ್ಯ ಅವರು ಏಲೇಶ್ವರನ ಭಕ್ತಿ ಪರಾಮರ್ಶೆಯ ಕುರಿತು ಅನೇಕ ವಿದ್ವಾಂಸರ ಅಭಿಪ್ರಾಯಗಳನ್ನು ಕಲೆ ಹಾಕಿದ್ದಾರೆ. ಅಧ್ಯಯನ, ಸಂಶೋಧನೆಯ ಫಲವಾಗಿ ಅವರು ಹುಡುಕಿ ತೆಗೆದು  ಕೇತಯ್ಯನ ಅಪರೂಪದ ವಚನಗಳನ್ನೂ ಆಯ್ದು ನೀಡಿರುವುದು ಈ ಕೃತಿಗೆ ಮತ್ತಷ್ಟು ಮೆರುಗನ್ನು ನೀಡಿದೆ.

ಡಾ. ಜಿ.ಎನ್.ಉಪಾಧ್ಯ ಅವರ ಅನುಭಾವ ಸಾಹಿತ್ಯ ವಿಹಾರ ಅನುಭವ ಮತ್ತು ಅಭಿವ್ಯಕ್ತಿಯ ದೃಷ್ಟಿಯಿಂದ, ಅನುಭಾವದ ಸಾರಸತ್ವದಿಂದ ಓದುಗರ ಮೆದುಳಿಗೆ ಆಹಾರವನ್ನು ಒದಗಿಸುವ ಕೃತಿ ಇದು. ಅದೆಷ್ಟೋ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ. ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಮಾತ್ರವಲ್ಲ ಒಟ್ಟು ಭಕ್ತಿ ಚಳುವಳಿಯ ಮೂಲಕ ಸಾಮಾನ್ಯ ಜನರ ಮೇಲೆ ಮಾಡಿದ ಪರಿಣಾಮದ ಸೊಬಗಿದೆ. ಜಾಗ್ರತಿ ಪ್ರಿಂಟರ್ಸ್ ಅವರು ಪ್ರಕಟಿಸಿರುವ ಈ ಕೃತಿಗೆ ಖ್ಯಾತ ವಿದ್ವಾಂಸರಾದ ಪೆÇ್ರ.ಎ.ವಿ.ನಾವಡ ಹಾಗೂ ಡಾ.ಜಿ.ಎಂ.ಹೆಗಡೆ ಅವರು ಬರೆದಿರುವ ಬೆನ್ನುಡಿಯೂ ಕೃತಿಯ ಸೊಗಸನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ ನಮ್ಮ ಅನುಭವವನ್ನು ವಿಸ್ತರಿಸಬಲ್ಲ, ಚಿಂತನೆಗೆ ಹಚ್ಚಬಲ್ಲ ಅಪೂರ್ವವಾದ ಕೃತಿ ಎಂದರೆ ಅತಿಶಯೋಕ್ತಿಯಾಗಲಾರದು.

******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

13 thoughts on “ಅನುಭವ ವಿಸ್ತರಿಸುವ, ಚಿಂತನೆಗೆ ಹಚ್ಚುವ ಅನುಭಾವ ಸಾಹಿತ್ಯ ವಿಹಾರ”

  1. ನಾ.ದಾಮೋದರ ಶೆಟ್ಟಿ

    ಕೃತಿಪರಿಚಯ ಅಚ್ಚುಕಟ್ಟಾಗಿದೆ.

  2. ಬಹಳ ಚೆನ್ನಾಗಿ ಕೃತಿಯ ಬಗ್ಗೆ ಬರೆದಿದ್ದೀರಿ. ನಮ್ಮ ಗುರುಗಳು ಎನ್ನುವ ಹೆಮ್ಮೆ ಇದೆ. ಅಭಿನಂದನೆಗಳು ಸರ್

  3. Dr+K+GOVINDA+BHAT

    ಪುಸ್ತಕ ಓದುವ ಅಭಿವೃದ್ಧಿ ಮೂಡಿಸಿದ ನಿಮಗೆ ಕೃತಜ್ಞತೆಗಳು. ಕೃತಿಕಾರಾದ ಡಾಕ್ಟರ್ ಜಿ ಎನ್ ಉಪಾಧ್ಯ ಅವರಿಗೆ ನಮನಗಳು.

  4. Sandhya Kaushik

    ಬಹಳ ಚೆನ್ನಾಗಿ ಪರಿಚಯ ಮಾಡಿಕೊಟ್ಟಿದ್ದೀರಿ. ಪುಸ್ತಕ ಖರೀದಿಸಲು, ಮಾರಾಟಗಾರರ phone numb erಇದ್ದರೆ ಕಳಿಸಿ

    1. Bangalore,Laggare main road, parvathinagar ,M E I colony,B F W LAYOUT PARVATHI SUDHAKAR POOJARI

      ನೀವು ಬರೆದ ಯಾವುದೇ ವಿಷಯಗಳನ್ನಾಗಲಿ ಓದುವುದೇ ನಮ್ಮ ಭಾಗ್ಯ.ನಮ್ಮ ಗುರುಗಳು ನಮ್ಮ ಹೆಮ್ಮೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter